ನಮ್ಮನ್ನು ನಾವೇ ಅಭಿನಂದಿಸಿಕೊಳ್ಳುತ್ತಿರುವುದು, ಹೊಗಳಿಕೊಳ್ಳುತ್ತಿರುವುದು ಇವೇ ನಮ್ಮ ನಿತ್ಯದ, ಕ್ಷಣಕ್ಷಣದ ದಂದುಗವಾಗಿದೆ. ಅಂದರೆ ನಾವು ನಮ್ಮನ್ನು ಅಭಿನಂದಿಸಿಕೊಂಡು ಬೆಚ್ಚಗೆ ಸುಖಪಡುತ್ತಾ ಮನೆಯೊಳಗೆ ಕುಳಿತಿರುತ್ತೇವೆಂದು ಅರ್ಥವಲ್ಲ. ಇನ್ನೊಬ್ಬರು, ಅಂದರೆ, ನಮ್ಮನ್ನು ಬಲ್ಲವರೆಲ್ಲರೂ ನಮ್ಮನ್ನು ಯಾವಾಗಲೂ ಅಭಿನಂದಿಸುತ್ತಲೇ ಸಾಧ್ಯವಾಗುವಂತಹ ಸುಲಭವಾಗುವಂತಹ ಅವಕಾಶಗಳನ್ನು ನಾವೇ ಸೃಷ್ಟಿಸುತ್ತಾ ಹೋಗುತ್ತೇವೆ. ನೇರವಾಗಲ್ಲ, ಇದೆಲ್ಲ ತನ್ನಿಂದ ತಾನೆ ನಮ್ಮ ಮಹಾಪ್ರತಿಭೆ, ಗಾಢವಾದ ಸಾಮಾಜಿಕ ಸೇವೆಯಿಂದ ಸಹಜವಾಗಿ ಸೃಷ್ಟಿಸಿದ ಅವಕಾಶಗಳೆಂದು ತಕ್ಷಣಕ್ಕೆ, ಮೇಲುನೋಟಕ್ಕಾದರೂ ಕಾಣುವಂತೆ ಸನ್ನಿವೇಶವನ್ನು ಕೂಡ ನಿರ್ಮಾಣ ಮಾಡುತ್ತೇವೆ.
ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಸರಣಿಯ ಐದನೆಯ ಪ್ರಬಂಧ ನಿಮ್ಮ ಓದಿಗೆ

ಈಗ ನಾವೆಲ್ಲ ಬದುಕಿ ಬಾಳುತ್ತಿರುವ ಕಾಲವನ್ನು ಯಾವ ಹೆಸರಿನಿಂದ ಗುರುತಿಸಬಹುದು? ತಂತ್ರಜ್ಞಾನ ಮುನ್ನೆಲೆಗೆ ಬಂದ ಯುಗವೆಂದೇ? ಬದುಕಿನಲ್ಲಿ ಹಣಕಾಸು ಆಯಾಮಗಳೇ ಅಗ್ರಗಣ್ಯವಾದ ಕಾಲವೆಂದೇ? ಮಾಧ್ಯಮ, ಸಾಮಾಜಿಕ ತಾಣಗಳು ಸರ್ವವ್ಯಾಪಿಯಾಗಿ ನಮ್ಮೆಲ್ಲರ ಮನೆ ಮನಸ್ಸನ್ನು ಸದಾ ಹಿಂಡುತ್ತಿರುವ ಕಾಲವೆಂದೇ? ಇದೆಲ್ಲವೂ ನಿಜವೇ. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಇದು ಸದಾ ಸ್ವಾಭಿನಂದನೆಯ ಯುಗ. ನಾವೆಲ್ಲರೂ ಇದರಲ್ಲಿ ಭಾಗಿಗಳು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ಮಧ್ಯವರ್ತಿಗಳು, ಫಲಾನುಭವಿಗಳು, ಎಲ್ಲರೂ, ಎಲ್ಲವೂ, ಏಕಕಾಲದಲ್ಲಿ.

ನಮ್ಮನ್ನು ನಾವೇ ಅಭಿನಂದಿಸಿಕೊಳ್ಳುತ್ತಿರುವುದು, ಹೊಗಳಿಕೊಳ್ಳುತ್ತಿರುವುದು ಇವೇ ನಮ್ಮ ನಿತ್ಯದ, ಕ್ಷಣಕ್ಷಣದ ದಂದುಗವಾಗಿದೆ. ಅಂದರೆ ನಾವು ನಮ್ಮನ್ನು ಅಭಿನಂದಿಸಿಕೊಂಡು ಬೆಚ್ಚಗೆ ಸುಖಪಡುತ್ತಾ ಮನೆಯೊಳಗೆ ಕುಳಿತಿರುತ್ತೇವೆಂದು ಅರ್ಥವಲ್ಲ. ಇನ್ನೊಬ್ಬರು, ಅಂದರೆ, ನಮ್ಮನ್ನು ಬಲ್ಲವರೆಲ್ಲರೂ ನಮ್ಮನ್ನು ಯಾವಾಗಲೂ ಅಭಿನಂದಿಸುತ್ತಲೇ ಸಾಧ್ಯವಾಗುವಂತಹ ಸುಲಭವಾಗುವಂತಹ ಅವಕಾಶಗಳನ್ನು ನಾವೇ ಸೃಷ್ಟಿಸುತ್ತಾ ಹೋಗುತ್ತೇವೆ. ನೇರವಾಗಲ್ಲ, ಇದೆಲ್ಲ ತನ್ನಿಂದ ತಾನೆ ನಮ್ಮ ಮಹಾಪ್ರತಿಭೆ, ಗಾಢವಾದ ಸಾಮಾಜಿಕ ಸೇವೆಯಿಂದ ಸಹಜವಾಗಿ ಸೃಷ್ಟಿಸಿದ ಅವಕಾಶಗಳೆಂದು ತಕ್ಷಣಕ್ಕೆ, ಮೇಲುನೋಟಕ್ಕಾದರೂ ಕಾಣುವಂತೆ ಸನ್ನಿವೇಶವನ್ನು ಕೂಡ ನಿರ್ಮಾಣ ಮಾಡುತ್ತೇವೆ.

ನಾವು ಹಾಕಿಕೊಂಡ ಹೊಸ ಬಟ್ಟೆ ಆಗಬಹುದು, ಕೊಂಡುಕೊಂಡ ಹೊಸ ವಾಹನವಾಗಬಹುದು, ಪ್ರಕಟವಾದ ಹೊಸ ಪುಸ್ತಕ ಆಗಬಹುದು, ಪ್ರವಾಸಕ್ಕೆ ಹೋದಾಗ ತೆಗೆದ ಫೋಟೋ ಆಗಬಹುದು, ಹುಟ್ಟುಹಬ್ಬ, ಕಲ್ಯಾಣ ವರ್ಧಂತಿ ಏನು ಬೇಕಾದರೂ ಆಗಬಹುದು. ಇದನ್ನು ಎಲ್ಲರಿಗೂ ತಿಳಿಸುತ್ತೇವೆ. ಅಲ್ಲಿಗೇ ನಿಲ್ಲಿಸುವುದಿಲ್ಲ. ಪ್ರತಿಯೊಬ್ಬರೂ ಇದನ್ನು ಗಮನಿಸುವಂತೆ ಪ್ರತ್ಯಕ್ಷ, ಪರೋಕ್ಷ ಒತ್ತಾಯಗಳನ್ನು ಹಾಕುತ್ತಾ ಹೋಗುತ್ತೇವೆ. ಇದಾದ ತಕ್ಷಣವೇ ವಿದ್ಯುತ್‌ ಸ್ಪರ್ಶವಾದಂತೆ ಅಭಿನಂದನೆಗಳ ಸುರಿಮಳೆ ಶುರುವಾಗುತ್ತದೆ. ನಾವು ಬದುಕಿರುವುದು ನಮ್ಮ ಉಸಿರಾಟದಿಂದಲೋ ಇಲ್ಲ ಅಭಿನಂದನೆಗಳ ಕಂಪನದಿಂದಲೋ ಎಂಬುದೇ ತಿಳಿಯುವುದಿಲ್ಲ. ತಿಳಿಯುವ ಗೋಜಿಗೆ ಹೋಗಲು ಕೂಡ ಸಮಯವಿರುವುದಿಲ್ಲ. ಸಕಲೆಂಟು ದಿಕ್ಕುಗಳಿಂದಲೂ ಗುಣವಾಚಕಗಳ ಪ್ರವಾಹ ನಮ್ಮ ಮನೆ ಕಡೆ ಹೊರಡುತ್ತದೆ. ಈ ಗಂಗಾ ಪ್ರವಾಹದಲ್ಲಿ ಮಿಂದು ಮಿಂದು ಪುನೀತರಾಗಿ ಬಲವರ್ಧನೆಗೊಂಡು ಮತ್ತೆ ನಾಳೆ ಬೆಳಿಗ್ಗೆ ಕೂಡ ಅಭಿನಂದನೆಗಳ ಗಂಗಾಪ್ರವಾಹ ನಮ್ಮ ಮನೆಯ ಕಡೆಗೆ ಮಾತ್ರವೇ ಹರಿದು ಬರುವಂತೆ ವ್ಯವಸ್ಥೆ ಮಾಡಲು ಯುದ್ಧೋನ್ಮುಖರಾಗುತ್ತೇವೆ.

ಎಲ್ಲವೂ ನಮಗೇ ಸಲ್ಲಬೇಕು ಎನ್ನುವಂತಹ ಸ್ವಾರ್ಥಿಗಳಲ್ಲ ನಾವು. ಪ್ರತಿಕ್ಷಣವೂ ನಾವು ಅಭಿನಂದನೆಯನ್ನು ಬಯಸುವಂತೆ ಇನ್ನೊಬ್ಬರನ್ನು ಕೂಡ ನಾವು ಪ್ರತಿಕ್ಷಣವೂ ಅಭಿನಂದಿಸುತ್ತಲೇ ಇರುತ್ತೇವೆ. ಅವರು ನಮ್ಮ ಬಗ್ಗೆ ಬಳಸುವ ಗುಣವಾಚಕಗಳಿಗಿಂತ ಸುಂದರವಾದ, ಆಕರ್ಷಕವಾದ ಭಿನ್ನವತ್ತಳೆಯ ಭಾಷೆಯನ್ನು ಬಳಸುತ್ತೇವೆ. ಇದೆಲ್ಲವೂ ಸ್ನೇಹಿತರನ್ನು, ಸಹೋದ್ಯೋಗಿಗಳನ್ನು ಅಭಿನಂದಿಸುವುದಕ್ಕೆ ಮಾತ್ರ ಮೀಸಲಾಗಿದೆಯೆಂದು ಯಾರೂ ತಪ್ಪು ತಿಳಿಯಬಾರದು. ನಾಲ್ಕು ಗೋಡೆಯೊಳಗಿನ ಜೀವನದಲ್ಲೂ ಕೂಡ ಇದು ನಡೆಯುತ್ತಲೇ ಇರುತ್ತದೆ. ಕುಳಿತಲ್ಲಿ, ನಿಂತಲ್ಲಿ, ಎಡತಾಕಿದಲ್ಲಿ, ಗಂಡ-ಹೆಂಡತಿ, ಮಕ್ಕಳು-ಮರಿ, ಮನೆಯಲ್ಲಿರುವ ಸಾಕುಪ್ರಾಣಿಗಳು, ಯಂತ್ರೋಪಕರಣಗಳು, ಅತ್ತಿಗೆ-ನಾದಿನಿಯರು, ಎಲ್ಲರೂ ಯಾವಾಗಲೂ ಪರಸ್ಪರ ಅಭಿನಂದಿಸುತ್ತಲೇ ಇರುತ್ತಾರೆ.

ಗೆಳೆಯರೊಬ್ಬರ ಮನೆಗೆ ಹೋಗಿದ್ದಾಗ ಒಬ್ಬರ ಮೇಲೊಬ್ಬರು ಬಿದ್ದು ಎಡಬಿಡದೆ ಅವರ ಬಂಧುವೊಬ್ಬರನ್ನು ಅಭಿನಂದಿಸುತ್ತಿದ್ದರು. ನಾನು ಏನು ವಿಶೇಷವೆಂದು ಕೇಳುವ ಕುತೂಹಲ ತೋರಿದೆ. ಅವರ ಮಧ್ಯ ವಯಸ್ಸಿನ ಮಹಿಳಾ ಬಂಧುವೊಬ್ಬರು ಬೆಳಿಗ್ಗೆ ಬೆಳಿಗ್ಗೆಯೇ ಎದ್ದು Beauty Parlourಗೆ ಹೋಗಿ ಕೇಶವಿನ್ಯಾಸವನ್ನು ಬದಲಾಯಿಸಿಕೊಂಡು ಬಂದು ಹೊಸ ಫೋಟೋ ತೆಗೆದು FaceBookನಲ್ಲಿ ಹಾಕಿದ್ದರಂತೆ. ಅದನ್ನು ನೋಡಿದ ಪ್ರತಿಯೊಬ್ಬರೂ ಅಭಿನಂದಿಸುತ್ತಲೇ ಇದ್ದರು. ನಾನೇಕೆ ಹಿಂದುಳಿಯಬೇಕೆಂದು ನಾನೂ ಕೂಡ ಅಭಿನಂದಿಸಿದೆ.

ನನ್ನದೊಂದು ಪುಸ್ತಕಕ್ಕೆ ಪ್ರಶಸ್ತಿ ಬಂತು. ಬಂತು ಎನ್ನುವುದಕ್ಕಿಂತ ಬರುವಂತಾಯಿತು. ಬಂದ ಮೇಲೆ ಮುಗ್ಧತೆ, ಅಮಾಯಕತೆ ನಟಿಸಿದೆ. ಪ್ರಶಸ್ತಿ ಕೊಟ್ಟವರೂ ಕೂಡ ನನ್ನ ವರ್ತನೆಯೇ ಸರಿಯೆನ್ನುವಂತೆ ಅಭಿನಂದಿಸಿದರು. ನನಗೆ ಅಷ್ಟಕ್ಕೇ ಎಲ್ಲಿ ತೃಪ್ತಿಯಾಗಬೇಕು. ಒಂದಿಬ್ಬರು ಗೆಳೆಯರನ್ನು ಕೋರಿಕೊಂಡು ಅವರ ದೂರವಾಣಿ, ಸಾಮಾಜಿಕ ತಾಣಗಳ ಮೂಲಕ ಸುದ್ದಿ ಹರಡಲು ಶ್ರೀ ಕಾರಣೀಭೂತನಾದೆ. ಒಂದೆರಡು ಘಂಟೆ ನನಗೆ ಯಾವ ಸಂದೇಶವೂ ಬರಲಿಲ್ಲ. ನನಗೆ ಭಯವಾಯಿತು. ಪ್ರಶಸ್ತಿ ನನಗೆ ಬಂದಿದೆಯೋ ಇಲ್ಲವೋ ಎಂಬ ಅನುಮಾನ ಶುರುವಾಯಿತು. ಪ್ರಶಸ್ತಿದಾತರಿಗೆ ದೂರವಾಣಿ ಕರೆ ಮಾಡಿ ಖಚಿತಪಡಿಸಿಕೊಂಡೆ. ಆಮೇಲೆ ನಿಧಾನವಾಗಿ ಅಭಿನಂದನಾ-ಪ್ರಶಂಸಾ ಸಂದೇಶಗಳು ಬರಲು ಪ್ರಾರಂಭವಾಯಿತು. ಸ್ವಲ್ಪ ಸಮಾಧಾನವಾಯಿತು. ಆದರೂ ಬರಬೇಕಾದಷ್ಟು ಸಂದೇಶಗಳು ಬರಲಿಲ್ಲವಾದ್ದರಿಂದ ಪ್ರಶಸ್ತಿ ಬಂದ ಸಂತೋಷದಿಂದ ನಾನು ವಂಚಿತನಾದೆ ಎಂದೇ ಹೇಳಬೇಕು. ಪ್ರಶಸ್ತಿ ಕೊಡುವವರೇ ಅಭಿನಂದನಾ ಸಂದೇಶಗಳ ಸ್ವರೂಪ, ಪ್ರಮಾಣ ಮತ್ತು ಪ್ರಯಾಣವನ್ನು ಕೂಡ ಗ್ಯಾರಂಟಿ ನೀಡಬೇಕು. ಮುಂದಿನ ಸಾಂಸ್ಕೃತಿಕ ಕ್ರಾಂತಿ ಈ ದಿಕ್ಕಿನಲ್ಲಿ ಇರಬಹುದು.

ವಯ್ಯಾರ, ಮಾಧ್ಯಮ, ಶೃಂಗಾರ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಗಳಿಗೆ ನನ್ನ ಈ ಪ್ರವೃತ್ತಿ ನನ್ನನ್ನು ನಗೆಪಾಟಲು ಮಾಡಲು ಕಾರಣವಾಗಿದೆ. ಸಣ್ಣಪುಟ್ಟ ಮಾಮೂಲಿ ಕೆಲಸಗಳನ್ನು ಮಾಡಿದಾಗ, ಏನೇನೋ ಪ್ರಕಟವಾದಾಗ ನಾನು ಅದನ್ನೇ ನನ್ನ ಹೆಂಡತಿ-ಮಕ್ಕಳ ಮುಂದೆ ಡಂಗೂರ ಹೊಡೆದು ಕುಣಿದಾಡುತ್ತೇನೆ. ಅವರಿಗೆ ಇದರಿಂದೆಲ್ಲಾ ದಣಿವಾಗಿ, ಅಸಹ್ಯವಾಗಲು ಶುರುವಾಗಿ ದಶಕಗಳೇ ಕಳೆದಿವೆ. Don’t fish for compliments ಎಂದು ನನ್ನ ಮಗಳು ಬೈದಾಡಿದಳು.

ನಮ್ಮ ಈಗಿನ ಕಾಲದ ಶಾಲೆಗಳು ಈ ವಿಷಯದಲ್ಲಿ ಮಕ್ಕಳಿಗೆ ಚೆನ್ನಾಗಿ ತರಬೇತಿ ಕೊಡುತ್ತಿವೆ. ನನ್ನ ಮೊಮ್ಮಗ Baby nurseryಯಿಂದ ಎಲ್‌ಕೆಜಿಗೆ ಬಡ್ತಿ ಪಡೆದ. ಶಾಲೆಯಿಂದ ಅಭಿನಂದನಾ, ಪ್ರಶಂಸಾ ಸಂದೇಶ ಬಂತು. ಮಗು ನಮ್ಮಿಂದ ಅಭಿನಂದನೆ, ಪ್ರಶಸ್ತಿ, ಉಡುಗೊರೆಯನ್ನು ನಿರೀಕ್ಷಿಸಿತು. ಶಾಲೆಯಿಂದ ಬಂದ ಪ್ರಶಂಸಾ ಪತ್ರವನ್ನು ನಮ್ಮ ಕುಟುಂಬದ ತಂಡದ ವೇದಿಕೆಯಲ್ಲಿ ಎಲ್ಲ ವಿದ್ಯುನ್ಮಾನಗಳ ಮೂಲಕ ಹಂಚಿಕೊಂಡೆವು. ಶಾಲೆಯಲ್ಲಿ ಪದವಿ ಪ್ರದಾನ ಸಮಾರಂಭವನ್ನು ವ್ಯವಸ್ಥೆ ಮಾಡಿದರು. ಮೊಮ್ಮಗನನ್ನು ವೇದಿಕೆಯ ಮೇಲೆ ಕರೆದು ಕುಲಾಧಿಪತಿಗಳಿಂದ ಪದವಿ ಪತ್ರ ಕೊಡಿಸಿದರು. ಹಾಗೆ ಮಾಡುವಾಗ ಮಗುವಿನ ತಂದೆ-ತಾಯಿಯ ಫೋಟೋ ಕೂಡ ಪರದೆಯ ಮೇಲೆ ಬಂತಪ್ಪ. ಸಮಾರಂಭದ ಪ್ರತಿ ಕ್ಷಣವನ್ನೂ ವೀಡಿಯೋದಲ್ಲಿ ದಾಖಲಿಸಿ ಕಳಿಸಿಕೊಟ್ಟರು. ಮತ್ತೆ ಅದನ್ನು ಹಂಚಿದ್ದಾಯಿತು. ಮತ್ತೆ ಮಗುವಿಗೆ ಅಭಿನಂದನೆ, ಉಡುಗೊರೆ. ಕೊಂಚ ಸಿನಿಕನಾದ ನಾನು ಪ್ರಶ್ನಿಸಿದೆ, ಈಗಲೇ ಮಗುವನ್ನು ಇಷ್ಟೊಂದು ಹೊಗಳಿ ಅಭಿನಂದಿಸಿದರೆ ಮಗು ನಿಜವಾಗಿಯೂ ಸಾಧನೆ ಮಾಡಿದಾಗ ಅಭಿನಂದಿಸಲು ಏನೂ ಉಳಿದಿರುವುದಿಲ್ಲವಲ್ಲ ಎಂದು ಹೇಳಿದೆ. ನೀವು ವಿದ್ಯಮಾನವನ್ನು ಸರಿಯಾದ ದೃಷ್ಟಿಕೋನದಿಂದ ಗಮನಿಸುತ್ತಿಲ್ಲ. ಇಷ್ಟೆಲ್ಲಾ ಮಾನಸಿಕ ತರಬೇತಿ ಪಡೆದ ಮಗು ಮುಂದೆ ಉದ್ಯೋಗ ಪ್ರಪಂಚಕ್ಕೆ ಕಾಲಿಟ್ಟಾಗ ಎಲ್ಲರನ್ನೂ, ಎಲ್ಲ ಕೆಲಸಕ್ಕೂ, ಎಲ್ಲ ಕಾರಣಕ್ಕೂ ನಿರಂತರವಾಗಿ ಅಭಿನಂದಿಸಲು ಪಾಠ ಕಲಿಯುತ್ತಿಲ್ಲವೆ ಎಂದು ನನ್ನನ್ನು ಮರು ಪ್ರಶ್ನಿಸಿದರು.

ನನ್ನ ದಲಿತ ಮಿತ್ರರೊಬ್ಬರು ಇದೆಲ್ಲದರಲ್ಲಿ ಸಮಾಜವು, ಕಾಲವು ಬದಲಾಗಿತ್ತಿರುವ ರೀತಿಯನ್ನು ಗುರುತಿಸಿದರು. ನನ್ನ ಸಹಪಾಠಿ ಅವರು. ನಾವೆಲ್ಲ ಗೌನು ಹಾಕಿಕೊಂಡು ರಾಜ್ಯಪಾಲರಿಂದ ಪದವಿ ಪಡೆಯಬಾರದೆಂದು, ಅದೆಲ್ಲ ಊಳಿಗಮಾನ್ಯ ಮೌಲ್ಯಗಳ ಸಂಕೇತವೆಂದು ಒಂದು ಕಾಲದಲ್ಲಿ ಪ್ರತಿಭಟಿಸಿದ್ದರು, ಧರಣಿ ಹೂಡಿದ್ದರು. ಈಗ ಅವರೂ ಕೂಡ ನನ್ನಂತೆಯೇ ಲೇಖಕರು. ಪ್ರಶಸ್ತಿ, ಪುರಸ್ಕಾರ, ಅಭಿನಂದನೆಗಳನ್ನು ಪಡೆಯುತ್ತಲೇ ಇರುವರು. ಅವರ ಮೊಮ್ಮಗನಿಗೂ ನಮ್ಮ ಮೊಮ್ಮಗನಿಗಾದಂತೆ ಪದವಿ ಪ್ರದಾನ ಅಭಿನಂದನಾ ನೀಡುವಿಕೆಯ ಪರ್ವ. ಗೆಳೆಯರು ಹೇಳಿದರು. ಇದೆಲ್ಲ ನಮ್ಮ ಸಮಾಜದ ಅಡಿಪಾಯದಲ್ಲೇ ಏನೋ ಬಿರುಕಿದೆ, ಸರಿಯಾದ ದಿಕ್ಕಿನಲ್ಲಿ ನಾವು ಹೋಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಒಂದು ದಿನದಲ್ಲಿ ಎಷ್ಟು ಸಮಯ ಈ ಪರಸ್ಪರಾಭಿನಂದನೆ, ಸ್ವಾಭಿನಂದನೆ, ಕುಟುಂಬಾಭಿನಂದನೆಗಳ ದಂದುಗಗಳಲ್ಲಿ ಕಳೆದುಹೋಗಬಹುದು ಎಂದು ನಾನು ಲೆಕ್ಕ ಹಾಕಿದ್ದೇನೆ. ಹೊಟ್ಟೆಪಾಡಿಗೆ ಮಾಡುವ ಕೆಲಸದಷ್ಟೇ ಸಮಯವನ್ನು ಈ ದಂದುಗವೂ ತೆಗೆದುಕೊಳ್ಳುತ್ತದೆ ಎಂದು ಹೇಳಿದರೆ ಪ್ರಬಂಧದ ಧ್ವನಿಯನ್ನು ನಾಶ ಮಾಡಿದ ಪಾಪ ಸುತ್ತುಕೊಳ್ಳುತ್ತದೆ. ಕುಟುಂಬದ ಸದಸ್ಯರೊಡನೆ ಸಂಭಾಷಣೆ ನಡೆಸುವ ಸಮಯಕ್ಕಿಂತ, ಹೆಂಡತಿಯನ್ನು ಪ್ರೀತಿಸುವ ಸಮಯಕ್ಕಿಂತ ಹೆಚ್ಚು ಸಮಯ, ಗಮನವನ್ನು ಈ ಯುಗಧರ್ಮದ ದಂದುಗ ತೆಗೆದುಕೊಳ್ಳುತ್ತದೆ ಎಂದು ಹೇಳುವುದು ಧ್ವನಿಪೂರ್ಣವಾದೀತು. ಇದು ವಾಸ್ತವ ಜಗತ್ತಿನಲ್ಲಿ ಮಾತ್ರ ನಡೆಯುವಂಥದ್ದಲ್ಲ, Mobile, Ipod, Instagramಗಳಲ್ಲಿ ಕೂಡ ದಿನದುದ್ದಕ್ಕೂ ನಡೆಯುತ್ತಾ ಹೋಗುತ್ತದೆ. ಬೆಳಿಗ್ಗೆ ಎದ್ದ ತಕ್ಷಣ Mobile ನೋಡಬೇಕು, Computer ಪರದೆ ನೋಡಬೇಕು! ಎಷ್ಟೊಂದು ರೀತಿಯ ಅಭಿನಂದನೆಗಳು. ನೀವು ಬದುಕಿರುವುದಕ್ಕೆ, ಆರೋಗ್ಯವಾಗಿರುವುದಕ್ಕೆ, ಸಾಲ ಪಡೆಯಲು ಅರ್ಹತೆ ಪಡೆದಿರುವುದಕ್ಕೆ, ನಿರ್ದಿಷ್ಟ ರಾಶಿಯಲ್ಲಿ ಹುಟ್ಟಿರುವುದಕ್ಕೆ, ಬಟ್ಟೆಬರೆ ಕೊಂಡುಕೊಳ್ಳುವುದಕ್ಕೆ, ನಿಮಗೆ ವಯಸ್ಸಾಗುತ್ತಿರುವುದಕ್ಕೆ, ಇತ್ಯಾದಿ. ಈ ಎಲ್ಲ ಅಭಿನಂದನೆಗಳನ್ನು ಸ್ವೀಕರಿಸಿ, ಇದೇ ಕಾರಣಕ್ಕೆ ನಿಮ್ಮ ಬಂಧುಮಿತ್ರರನ್ನೆಲ್ಲ ಅಭಿನಂದಿಸಿ, ನಂತರ ದಿನಚರಿ ಪ್ರಾರಂಭಿಸಬೇಕು. ಕರಾಗ್ರೇ ವಸತೇ ಲಕ್ಷ್ಮಿ, ಕರ ಮಧ್ಯೇ ಸರಸ್ವತಿ ಎಂದು ಹೇಳಿಕೊಳ್ಳುತ್ತಾ ದಿನವನ್ನು ಪ್ರಾರಂಭಿಸುತ್ತಿದ್ದ ಬಾಲಕ ನಾನೇನಾ ಎಂಬ ಅನುಮಾನ ಪ್ರಾರಂಭವಾಗುತ್ತದೆ.

ಒಂದಿಬ್ಬರು ಗೆಳೆಯರನ್ನು ಕೋರಿಕೊಂಡು ಅವರ ದೂರವಾಣಿ, ಸಾಮಾಜಿಕ ತಾಣಗಳ ಮೂಲಕ ಸುದ್ದಿ ಹರಡಲು ಶ್ರೀ ಕಾರಣೀಭೂತನಾದೆ. ಒಂದೆರಡು ಘಂಟೆ ನನಗೆ ಯಾವ ಸಂದೇಶವೂ ಬರಲಿಲ್ಲ. ನನಗೆ ಭಯವಾಯಿತು. ಪ್ರಶಸ್ತಿ ನನಗೆ ಬಂದಿದೆಯೋ ಇಲ್ಲವೋ ಎಂಬ ಅನುಮಾನ ಶುರುವಾಯಿತು. ಪ್ರಶಸ್ತಿದಾತರಿಗೆ ದೂರವಾಣಿ ಕರೆ ಮಾಡಿ ಖಚಿತಪಡಿಸಿಕೊಂಡೆ. ಆಮೇಲೆ ನಿಧಾನವಾಗಿ ಅಭಿನಂದನಾ-ಪ್ರಶಂಸಾ ಸಂದೇಶಗಳು ಬರಲು ಪ್ರಾರಂಭವಾಯಿತು.

ಈ ಸ್ವಾಭಿನಂದನಾ ಪ್ರವಾಹಕ್ಕೆ ಕಾರಣವೇನು? ಜೀವನದಲ್ಲಿ ಸಂತೋಷವಾಗಿರಬೇಕು, ಪ್ರಗತಿ ಸಾಧಿಸಬೇಕು, ನೆಮ್ಮದಿಯಿಂದಿರಬೇಕು ಎಂಬ ಬಯಕೆ ಎಲ್ಲರಿಗೂ ಸಹಜವಾದದ್ದು. ಆದರೆ ಸದಾ ನಮ್ಮನ್ನು ಇನ್ನೊಬ್ಬರು, ಮತ್ತೊಬ್ಬರು ಗಮನಿಸುತ್ತಿರಬೇಕು, ಅಭಿನಂದಿಸುತ್ತಿರಬೇಕು ಎಂದು ಬಯಸುವುದು, ನಮ್ಮ ಪ್ರತಿಭೆ, ಸಾಧನೆ, ಆಸ್ತಿ, ಅಂತಸ್ತು, ಸುಖ ಪಡುವ ರೀತಿ ಎಲ್ಲರಿಗೂ ಗೊತ್ತಾಗುತ್ತಿರಬೇಕು, ನಮ್ಮ ವ್ಯಕ್ತಿತ್ವ, ಸಾಧನೆಯನ್ನು ನಮಗೆ ಗೊತ್ತಿರುವವರೆಲ್ಲರೂ ನಿರಂತರವಾಗಿ ಆದರಿಸುತ್ತಲೇ ಇರಬೇಕು ಎಂಬ ಬಯಕೆ ಏನನ್ನು ಸೂಚಿಸುತ್ತದೆ. ನಮ್ಮಲ್ಲಿ ನಮಗೆ ಆತ್ಮವಿಶ್ವಾಸವಿಲ್ಲವೆಂದೇ? ಇಲ್ಲ ಇನ್ನೊಬ್ಬರು ಗುರುತಿಸಿದಾಗ, ಹೊಗಳಿದಾಗ ಮಾತ್ರ ನಮ್ಮ ವ್ಯಕ್ತಿತ್ವ ನಿಜವಾಗುವುದೆಂದೇ? ಅದೂ ಅಲ್ಲದೆ ನಾವು ಏನಾಗಿದ್ದೇವೆ, ಏನಾಗಬೇಕು ಎಂಬುದು ಯಾವಾಗಲೂ ಲೋಕಕ್ಕೆ ಪ್ರದರ್ಶಿತವಾಗಬೇಕೆಂದೇ? ನಿಜಕ್ಕೂ ನಾವು ಈ ಜಗತ್ತಿಗೆ ಅಷ್ಟು ಪ್ರಸ್ತುತರೇ? ಅಷ್ಟು ಅನಿವಾರ್ಯವೇ?

ನಾವು ಬದುಕುತ್ತಿರುವ ಕಾಲದ ಇನ್ನೊಂದು ಹೆಗ್ಗುರುತಾದ ನಿರಂತರ ಪ್ರಶಸ್ತಿ, ಪುರಸ್ಕಾರಗಳ ಪ್ರವಾಹಕ್ಕೂ, ಸ್ವಾಭಿನಂದನಾ ಪ್ರವೃತ್ತಿಗೂ ಏನಾದರೂ ಸಂಬಂಧವಿದೆಯೇ? ಈ ಪ್ರಶಸ್ತಿ, ಪುರಸ್ಕಾರಗಳ ಪ್ರವಾಹ ಅನಾರೋಗ್ಯಕರವಾದದ್ದು, ನಾಗರಿಕತೆಗೆ, ಸನ್ನಡತೆಗೆ ಮಾರಕವಾದದ್ದು ಎಂದು ನಾವು ಎಷ್ಟೆಲ್ಲಾ ಬಹಿರಂಗವಾಗಿ ವಾದಿಸಿದರೂ, ಇದನ್ನೆಲ್ಲ ನಾವೇ ಸೃಷ್ಟಿಸಿದ್ದು ಎಂಬುದನ್ನು ಮರೆಯಬಾರದು. “ನಾವು” ಎಂದರೆ ಧೀಮಂತರ ರೀತಿ ಕಾಣುವವರು, ಕಲಾವಿದರು, ರಾಜಕಾರಣಿಗಳು, ವರ್ತಕರು, ಪತ್ರಕರ್ತರು. ಪ್ರಶಸ್ತಿ ಪಡೆಯುವುದು ನಮಗೋಸ್ಕರ ಅಲ್ಲವೇ ಅಲ್ಲ, ಇನ್ನೊಬ್ಬರ ಕಣ್ಣಿನಲ್ಲಿ ದೊಡ್ಡವರಾಗುವುದಕ್ಕೆ. ಇನ್ನೊಬ್ಬರ ಕಣ್ಣಿನಲ್ಲಿ ದೊಡ್ಡವರಾಗುವುದು ಎಂದರೆ ಅಭಿನಂದನೆ, ಹೊಗಳಿಕೆಗಳನ್ನು ಬಯಸಿದಂತೆಯೇ. ಈ ಒಳನೋಟಗಳನ್ನೆಲ್ಲ ನನಗೆ ನೀಡಿದ ಹಿರಿಯ ಸಾಹಿತಿಯೊಬ್ಬರು ದಿನದ ಸಮಯವೆಲ್ಲ ಪ್ರಶಸ್ತಿ-ಪುರಸ್ಕಾರಕ್ಕೆ ಸಂಬಂಧಪಟ್ಟ ನಾನಾ ರೀತಿಯ ಚಟುವಟಿಕೆ, ಆಲೋಚನೆಗಳಲ್ಲೆ ಕಳೆದುಹೋಗುತ್ತಿದ್ದರು. ಅವರಿಗೇ ಗೊತ್ತಾಗುತ್ತಿರಲಿಲ್ಲ.

ಸಾಧನೆಗೆ, ವಿಶಿಷ್ಟತೆಗೆ, ಪ್ರಶಸ್ತಿ, ಪುರಸ್ಕಾರಗಳಿಗೆ ಅಭಿನಂದನೆ ಎಂಬುದು ನಿಯಮ. ಈ ತಿಳುವಳಿಕೆ ಬದಲಾಗಿ, ಈಗ ಎಲ್ಲ ಚಟುವಟಿಕೆಗಳಿಗೂ ಇದು ಬೇಕು ಎಂಬ ಹಂತವನ್ನು ಸಮಾಜ ತಲುಪಿದೆ. ಓದುವುದಕ್ಕೆ, ಆಡುವುದಕ್ಕೆ, ಚಿತ್ರ ಬಿಡಿಸುವುದಕ್ಕೆ, ಸಂಶೋಧನೆಗೆ, ಧೀಮಂತಿಕೆಗೆ ಮನ್ನಣೆ ಸರಿ. ಆದರೆ ವಯಸ್ಸಾಗುವುದಕ್ಕೆ, ವಯಸ್ಸಾದರೂ ಚರ್ಮದಲ್ಲಿ ಸುಕ್ಕು ಮೂಡದಿರುವುದಕ್ಕೆ, ಕೂದಲು ನೇರವಾಗಿರುವುದಕ್ಕೆ, ಅಂಗಾಂಗ ಪ್ರದರ್ಶನಕ್ಕೆ, ಇನ್ನೊಬ್ಬರನ್ನು ಅನುಕರಿಸುವುದಕ್ಕೆ, ಸದಾ ಸುದ್ದಿಯಲ್ಲಿರುವುದಕ್ಕೆ, ಎಲ್ಲದಕ್ಕೂ ಪ್ರಶಸ್ತಿ, ಪುರಸ್ಕಾರ ಸೃಷ್ಟಿಸಿಬಿಟ್ಟಿರುವುದರಿಂದ ಇಷ್ಟವಿರಲಿ, ಇಲ್ಲದಿರಲಿ ನಾವು ಪ್ರಶಸ್ತಿಗಳನ್ನು ನಿರಂತರವಾಗಿ ಪಡೆಯುತ್ತಲೇ ಇರಬೇಕಾಗುತ್ತದೆ. ಈ ಮಾನಸಿಕ ಗೀಳನ್ನು ಅಧ್ಯಯನ ಮಾಡಿದವರು ಹೇಳಿರುವ ಹಾಗೆ, It is getting extremely difficult to avoid winning an award.

ಈ ಗೀಳು ತುಂಬಾ ಸೂಕ್ಷ್ಮವಾದ ಆತ್ಮಸಾಕ್ಷಿಯಿರುವವರನ್ನು ಕೂಡ ಬಿಡುವುದಿಲ್ಲ. ಒಬ್ಬ ಕಲಾವಿದರು ಹಿರಿಯರು, ಸಾಧಕರು ಪ್ರಯೋಗಶೀಲರು. ಆದರೆ ಸಮಕಾಲೀನರೆಲ್ಲ ಬೇಗ ಬೇಗ ತೀರಿಹೋದರು. ಸರಿ, ಆ ಕ್ಷೇತ್ರದ ಎಲ್ಲ ಪ್ರಶಸ್ತಿ, ಪುರಸ್ಕಾರಗಳೂ ಇವರಿಗೇ ನಿರಂತರವಾಗಿ ಲಭ್ಯವಾಗುತ್ತಾ ಹೋದವು. ಬೇರೆಯವರಿಗಿರಲಿ, ಕಲಾವಿದರ ಮಕ್ಕಳಿಗೂ ಇದರಿಂದ ಜಿಗುಪ್ಸೆ ಬಂತು. ಇನ್ನು ಮೇಲೆ ನೀನು ಯಾವ ಪ್ರಶಸ್ತಿಯನ್ನೂ ತೆಗೆದುಕೊಳ್ಳಬಾರದು ಎಂದು ತಂದೆಯವರಿಗೆ ವಿನಂತಿಸಿಕೊಂಡರು. ಆಯ್ತು, ಪ್ರಶಸ್ತಿಯಿಂದ ಬರುವ ಹಣ ನನಗೆ ಬೇಡ ಎಂದು ತಂದೆ ಸೂಚಿಸಿದರು. ಆದರೆ ಪ್ರಶಸ್ತಿ ಇರಲಿ ಎಂಬ ರಾಜಿ ನಿಯಮವನ್ನು ಮಂಡಿಸಿದರು. ಮಕ್ಕಳು ಒಪ್ಪಲಿಲ್ಲ. ಏನೇ ಆದರೂ ನೀವು ಇನ್ನೊಬ್ಬ ತರುಣ ಕಲಾವಿದನಿಗೆ ಸಿಗುವ ಗೌರವಕ್ಕೆ ಅಡ್ಡಿಯಾಗುತ್ತಿದ್ದೀರಿ ಎಂಬುದು ಮಕ್ಕಳ ವಾದ. ಇಲ್ಲ ಹಾಗಲ್ಲ. ಪ್ರಶಸ್ತಿಗಿಂತ ಹೆಚ್ಚಾಗಿ, ಅದು ಬಂದಾಗ ಅಭಿನಂದನೆಗಳ ಮಹಾಪೂರವಿರುತ್ತದೆ. ಅದನ್ನು ತಪ್ಪಿಸಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ತಂದೆಯ ಮರುವಾದ. ಇನ್ನೊಬ್ಬ ಕಲಾವಿದರು ಇದಕ್ಕಿಂತ ಸೂಕ್ಷ್ಮಸ್ಥರು. ಪ್ರಶಸ್ತಿ ಕೊಡಲಿ, ಸ್ವೀಕರಿಸುತ್ತೇನೆ. ನಂತರ ಪ್ರಶಸ್ತಿಯ ಮೊತ್ತವನ್ನು ವಾಪಸ್‌ ಕೊಡುತ್ತೇನೆ. ಪ್ರಶಸ್ತಿ ಬಂದದ್ದಕ್ಕೆ ಅಭಿನಂದನೆ, ಹಣವನ್ನು ಹಿಂತಿರುಗಿಸಿರುವುದಕ್ಕೆ ಅಭಿನಂದನೆ ಎಂದು ತಮ್ಮ ನಿಲುವನ್ನು ಮಂಡಿಸಿದರು.

ನನ್ನಂಥವನ ತಂತ್ರಗಳು ಇನ್ನೂ ಆಧುನಿಕವಾಗಿದ್ದವು. ಕೇವಲ ಅಭಿನಂದನೆಗಳಿಂದ ನನಗೆ ತೃಪ್ತಿಯಾಗುತ್ತಿರಲಿಲ್ಲ. ನನಗೆ ಸ್ಮರಣಿಕೆ, ಭಿನ್ನವತ್ತಳೆಗಳ ಹುಚ್ಚು ಇತ್ತು. ಇದನ್ನೆಲ್ಲ ಬಿಡಿಸಿ ಹೇಳುವ ಹಾಗೂ ಇಲ್ಲ, ಮೊಗಮ್ಮಾಗಿ ಸಾಧಿಸುವುದೇ ಬುದ್ಧಿಜೀವಿಯ ಲಕ್ಷಣ. ಒಂದು ಉಪಾಯ ಮಾಡಿದೆ. ಇನ್ನೊಬ್ಬರಿಗೆ ಅಭಿನಂದನೆ ಸಲ್ಲಿಸುವಾಗ ಸ್ಮರಣಿಕೆ, Greeting ಕಾರ್ಡ್‌ಗಳನ್ನು ಕೊಡಲು ಶುರುಮಾಡಿದೆ. ತಿರುಗು ಪ್ರವಾಹ ತಡವಾಗಲಿಲ್ಲ. ಆ ದಿಕ್ಕಿನಿಂದಲೂ ಸ್ಮರಣಿಕೆಗಳು ಬರಲು ಶುರುವಾಯಿತು. ನನ್ನ ಆತ್ಮೀಯ ಮಿತ್ರ ಇನ್ನೂ ಒಂದು ಉಪಾಯ ಹೇಳಿಕೊಟ್ಟ. ಪ್ರಶಸ್ತಿದಾತರನ್ನು ನೇರವಾಗಿ ಹೊಗಳಬಾರದು. ಅವರ ಅಳಿಯಂದಿರಿಗೋ, ಭಾವಮೈದುನರಿಗೋ ನಾವು ಸನ್ಮಾನ ಪ್ರಶಸ್ತಿಗಳನ್ನು ವ್ಯವಸ್ಥೆ ಮಾಡಿದರೆ, ಅದಕ್ಕೆ ನಮಗೆ ಪ್ರತಿಫಲ ಸಿಗುತ್ತದೆ.

ಈ ಯಾವ ಕಿಲಾಡಿತನವೂ ನನ್ನ ಮಗನಿಗೆ ಹೆಣ್ಣು ಹುಡುಕುವಾಗ ನೆರವಿಗೆ ಬರಲಿಲ್ಲ. ಒಂದು ಹುಡುಗಿ ನನ್ನ ಮಗ ಅವಳನ್ನು ಮದುವೆಯಾಗಬೇಕಾದರೆ ಪ್ರತಿದಿನವೂ ಉಡುಗೊರೆ ಕೊಡಬೇಕು, ಫೋಟೋ ತೆಗೆಯಬೇಕು, ಅಭಿನಂದಿಸುತ್ತಿರಬೇಕು ಎಂಬ ಷರತ್ತು ಹಾಕಿದಳು. ಹುಡುಗಿ ಚೆನ್ನಾಗಿದ್ದರೂ, ಮನೆತನ ಸುಸಂಸ್ಕೃತವಾಗಿದ್ದರೂ ನಾನು, ನನ್ನ ಮಗ ಹೆದರಿದೆವು.

ನನ್ನ ಸ್ನೇಹವಲಯದಲ್ಲಿ ಬಲ ಮತ್ತು ಎಡದ ಉಗ್ರರಿದ್ದರು. ಇಬ್ಬರಿಂದಲೂ ತಪ್ಪಿಸಿಕೊಳ್ಳಲು ಮಧ್ಯಮ ಮಾರ್ಗ ಹುಡುಕಲು ಹೋಗಿ ನಾನೊಬ್ಬ ಗೋಸುಂಬೆ ಎಂದು ಇಬ್ಬರಿಂದಲೂ ಬೈಸಿಕೊಂಡೆ. ಪ್ರಜ್ಞಾವಂತರೊಬ್ಬರನ್ನು ಭೇಟಿ ಮಾಡಿದೆ. ಮಾನ್ಯರು ಜ್ಯೋತಿಷಿ ಕೂಡ ಆಗಿದ್ದರು. ಎಲ್ಲ ಪಕ್ಷ, ಪಂಥದವರಿಗೂ ಜ್ಯೋತಿಷ್ಯ ಹೇಳುತ್ತಿದ್ದರು. ಎಲ್ಲರೂ ಮನುಷ್ಯರೇ! ಪ್ರತಿಯೊಬ್ಬರಿಗೂ ಅಭಿನಂದನೆಯ, ಹೊಗಳಿಕೆಯ ಅಗತ್ಯವಿದ್ದೇ ಇರುತ್ತದೆ. ಅವರವರ ವಿಚಾರಗಳಿಗನುಗುಣವಾಗಿ, ಪರಿಭಾಷೆಗಳಿಗನುಗುಣವಾಗಿ ಅಭಿನಂದನಾ ಸಂದೇಶ, ಪ್ರಶಸ್ತಿಯ ಪರಿಭಾಷೆಯನ್ನು ಯೋಜಿಸಬೇಕು. ಈ ಪ್ರಾಜ್ಞರು ಇನ್ನೂ ಒಂದು ತಂತ್ರವನ್ನು ಅನುಸರಿಸುತ್ತಿದ್ದರು. ಯಾರಿಗಾದರೂ ಸರಿಯೇ ಜ್ಯೋತಿಷ್ಯ ಹೇಳುವಾಗ ನಿರ್ದಿಷ್ಟ ರಾಶಿ, ನಕ್ಷತ್ರದಲ್ಲಿ ಅವರು ಹುಟ್ಟಿರುವುದಕ್ಕೆ, ಗ್ರಹಚಲನೆ ಅವರ ಪರವಾಗಿರುವುದಕ್ಕೆ ಗಿರಾಕಿಗಳನ್ನು ವಿಶೇಷವಾಗಿ ಅಭಿನಂದಿಸುತ್ತಿದ್ದರು. ಯಾವುದೋ ದಿನ, ಯಾವುದೋ ತಿಥಿಯಲ್ಲಿ ಹುಟ್ಟಿರುವುದು ಇವರ ವಿಶೇಷ ಸಾಧನೆ ಎಂಬಂತೆ. ಮನುಷ್ಯ ನಮಗೆಲ್ಲರಿಗಿಂತ ಗೋಸುಂಬೆ ಎನಿಸಿದರೂ ಮಾನ್ಯರು ನನಗೆ ನೀಡಿದ ಒಂದು ವಿಶೇಷ ಒಳನೋಟಕ್ಕೆ ಕೃತಜ್ಞನಾಗಿದ್ದೇನೆ. ಮನುಷ್ಯರಿಗಿಂತ ದೇವರಿಗೇ ಹೆಚ್ಚಾಗಿ ಅಭಿನಂದನೆ, ನಿರಂತರ ಪ್ರಶಸ್ತಿ-ಪುರಸ್ಕಾರಗಳ ಅಗತ್ಯವಿದೆ. ಪ್ರತಿಯೊಬ್ಬ ದೇವ-ದೇವಿಯರನ್ನು ಎಷ್ಟು ಸಹಸ್ರನಾಮಾವಳಿಗಳಿಂದ ಹೊಗಳಬೇಕು. ನಾನಾ ರೀತಿಯ ಅಭಿಷೇಕ, ಸೇವೆಗಳನ್ನು ಮಾಡುತ್ತಲೇ ಇರಬೇಕು. ಪ್ರಶಸ್ತಿ, ಸೇವೆ, ಅಭಿನಂದನೆ ಪ್ರತಿವರ್ಷವೂ ದೇವರಿಗೆಲ್ಲ ಲಭ್ಯವಾಗುವಂತೆ ದತ್ತಿನಿಧಿಗಳನ್ನು ಇಡಬೇಕು.

ಇದನ್ನೆಲ್ಲ ಸೇರಿಸಿಕೊಂಡು ಒಂದು ಆಕರ್ಷಕ ಪ್ರಬಂಧ ಬರೆದು, ಓದುಗರಾಗಿ ನಿಮ್ಮನ್ನು ಮೆಚ್ಚಿಸುವುದರಿಂದ ನನ್ನ ಅಥವಾ ನಿಮ್ಮ, ಇಲ್ಲ ಇಲ್ಲ, ಇಬ್ಬರ, ಸಕಲರ ಜವಾಬ್ದಾರಿ ಮುಗಿಯುವುದಿಲ್ಲ. ಇದು ಕೇವಲ ಪ್ರಬಂಧ ರಚನೆಗಾಗುವಷ್ಟು ಮಾತ್ರ ಕಾಳಜಿಯನ್ನು ಬಯಸುವ ಸಂಗತಿಯಲ್ಲ.

ಏಕೆಂದರೆ, ಆಧುನಿಕ ಸಮಾಜದ ಮುಖ್ಯ ಲಕ್ಷಣವೆಂದರೆ, ಪ್ರತಿಯೊಬ್ಬ ಮನುಷ್ಯನನ್ನೂ ಅವನ ವೈಯಕ್ತಿಕತೆಯಲ್ಲಿ, ವಿಶಿಷ್ಟತೆಯಲ್ಲಿ ನೋಡುವುದು, ಹಿಂದಿನ ಕಾಲದ ಎಲ್ಲ ಸಮಾಜಗಳಿಗಿಂತ, ಸಾಮಾಜಿಕ ರಚನೆಗಳಿಗಿಂತ, ಈ ಸಮಾಜದಲ್ಲಿ, ಈ ಕಾಲದಲ್ಲಿ, ಹೆಚ್ಚಿನ ವ್ಯಕ್ತಿ ವಿಶಿಷ್ಟತೆಯ, ಅನನ್ಯತೆಯ, ಶ್ರೇಷ್ಠತೆಯ ಅಗತ್ಯವಿದೆ. ಪ್ರತಿ ಮನುಷ್ಯನಲ್ಲೂ ಅಂತರ್ಗತವಾಗಿರುವ ವಿಶಿಷ್ಟತೆ, ಅನನ್ಯತೆ, ಶ್ರೇಷ್ಠತೆಯ ಬಯಕೆಯ ತುಡಿತಗಳನ್ನು ಒಟ್ಟು ಸಮಾಜದ ಪ್ರಗತಿಗೆ ಹೇಗೆ ಬಳಸಿಕೊಳ್ಳಬೇಕು ಎಂಬುದೇ ಆಧುನಿಕ ಸಮಾಜದ ಮುಖ್ಯ ಕಾಳಜಿ. ಈ ಅನನ್ಯತೆ, ವಿಶಿಷ್ಟತೆಗಳು ಸದಾ ಕಾಲ ಅರಳುತ್ತಿರಲು ಯೋಗ್ಯರಿಗೆ, ಅರ್ಹರಿಗೆ, ನಿಜವಾದ ಅರ್ಥದಲ್ಲಿ ಪುರಸ್ಕಾರ, ಅಭಿನಂದನೆ, ಗುರುತಿಸುವಿಕೆ ಎಲ್ಲವೂ ಬೇಕಾಗುತ್ತದೆ. ಸಮಾಜವು ಈ ದಿಕ್ಕಿನಲ್ಲಿ ಯೋಚಿಸಬೇಕಾದರೆ ಮೊದಲು ನಾವು ವೈಯಕ್ತಿಕ ಸ್ತರದಲ್ಲಿ ಈ ಎಲ್ಲ ತುಡಿತಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ದೇಶಾವರಿಯಾಗಿ ಬದುಕುತ್ತಾ, ಬಂದ ಪ್ರಶಸ್ತಿ, ಅಭಿನಂದನೆಗಳನ್ನೆಲ್ಲ ಸ್ವೀಕರಿಸುತ್ತಾ, ನನ್ನದೇನೂ ತಪ್ಪಿಲ್ಲ, ನಮ್ಮ ಕಾಲದ ಎಲ್ಲರ ಹಾಗೆ ಎಂದು ಹಾಯಾಗಿರುವ ನಾನು ಈ ಪ್ರಬಂಧ ಬರೆದ ಮೇಲೆ, ನೀವು ಈ ಪ್ರಬಂಧ ಓದಿದ ಮೇಲೆ ಏನು ಮಾಡುತ್ತೇವೆ ಎಂಬುದೇ ಒಂದು ನಿಗೂಢ ಪ್ರಶ್ನೆ!

(ಪ್ರೇರಣೆ – Drowning in awards – ಸಂತೋಷ್‌ ದೇಸಾಯಿ ಅವರ ಅಂಕಣ).