ಮನುಷ್ಯ ಮಾಗಿದಷ್ಟೂ ಅವನ ಬರಹ ಪಕ್ವವಾಗುತ್ತದೆ ಎಂಬ ಮಾತು ಕೆಲವರಿಗೆ ಅಪವಾದವಾಗುತ್ತದೆ. ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕವಿ ಮತ್ತು ಆತನ ಬರವಣಿಗೆಗಳು ಇಂಥ ದುರಿತ ಕಾಲಕ್ಕೆ ಖಂಡಿತ ಅವಶ್ಯಕತೆ ಇದೆ. ವಿಶಾಲ್ ಅವರ ಬರಹದ ನಡಿಗೆಯೂ ಸಮಸಮಾಜದ ನಿರ್ಮಿತಿಯ ಕಡೆಗೇ ಇದೆ. ಒಂದೊಂದು ಕವಿತೆಯಲ್ಲೂ ಅವರೇ ಕಂಡು, ಅನುಭವಿಸಿದ ನೋವುಗಳನ್ನು ಕಾವ್ಯದ ಮೂಲಕ ಹೊರಹಾಕಿದ್ದಾರೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ವಿಶಾಲ್‌ ಮ್ಯಾಸರ್‌ ಕವನ ಸಂಕಲನ ‘ಬಟ್ಟೆಗಂಟಿದ ಬೆಂಕಿ’ಯ ಕುರಿತ ಬರಹ ಇಲ್ಲಿದೆ

ಬಣ್ಣಕ್ಕೂ ಧರ್ಮದ ನೆತ್ತರು ಮೆತ್ತಿ ಅಟ್ಟಹಾಸಗೈಯುತ್ತಿರುವ ಈ ಕಾಲದಲ್ಲಿ ಎಲ್ಲವೂ ಪ್ರಭುತ್ವದ ಅಡಿಯಾಳುಗಳ ಮುಷ್ಠಿಯಲ್ಲಿ ಉಸಿರುಗಟ್ಟಿ ಸ್ತಬ್ಧವಾಗಿವೆ. ಆರ್ಭಟಿಸಬೇಕಾದ ಕಾವ್ಯ ತಣ್ಣನೆ ಬಂಡಾಯದ ವರ್ಣಾತೀತ ಬಾವುಟವನ್ನು ಹಾರಿಸುತ್ತಿದೆ. ವಿಶಾಲ್ ಮ್ಯಾಸರ್ ನಾನು ಕೇಳೇ ಇರದ ಹೆಸರು. 2022ರಲ್ಲಿ ಪ್ರಕಟವಾದ ಅವರ ಕವನಸಂಕಲನದ ಹೆಸರು “ಬಟ್ಟೆಗಂಟಿದ ಬೆಂಕಿ”. ಕೆಲವು ಸಂಕಲನಗಳ ಹೆಸರೇ ಓದುವಂತೆ ಮಾಡುತ್ತವೆ, ಕುತೂಹಲವನ್ನೂ ಹುಟ್ಟಿಸುತ್ತವೆ. ಸಂಕಲನದಲ್ಲಿ ಒಟ್ಟು 40 ಕವಿತೆಗಳಿವೆ. ಗದ್ಯಗಂಧಿ ಕವಿತೆಗಳು ಮುಕ್ಕಾಲು ಪಾಲು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ. ಇನ್ನುಳಿದ ಹಾಡಬಹದಾದ ಕವಿತೆಗಳು ಇವೆ. ಇನ್ನಷ್ಟು ಕೆಲವೇ ಸಾಲಿನ ಕವಿತೆಗಳು ಇವೆ. ಆಶ್ಚರ್ಯದ ಸಂಗತಿಯೆಂದರೆ ಇದು ಇವರ ಮೊದಲ ಸಂಕಲನ. ಮೊದಲ ಸಂಕಲನದಲ್ಲಿಯೇ ಕಾವ್ಯದ ಕುರಿತು ಇಷ್ಟೊಂದು ಭರವಸೆಗಳನ್ನೂ, ಕುತೂಹಲವನ್ನು ಹುಟ್ಟಿಸಿದ ಕೆಲವರಲ್ಲಿ ವಿಶಾಲ್ ಮ್ಯಾಸರ್ ಒಬ್ಬರು.

(ವಿಶಾಲ್‌ ಮ್ಯಾಸರ್‌)

ಮನುಷ್ಯ ಮಾಗಿದಷ್ಟೂ ಅವನ ಬರಹ ಪಕ್ವವಾಗುತ್ತದೆ ಎಂಬ ಮಾತು ಕೆಲವರಿಗೆ ಅಪವಾದವಾಗುತ್ತದೆ. ಸಮಾಜದ ತಲ್ಲಣಗಳಿಗೆ ಸ್ಪಂದಿಸುವ ಕವಿ ಮತ್ತು ಆತನ ಬರವಣಿಗೆಗಳು ಇಂಥ ದುರಿತ ಕಾಲಕ್ಕೆ ಖಂಡಿತ ಅವಶ್ಯಕತೆ ಇದೆ. ವಿಶಾಲ್ ಅವರ ಬರಹದ ನಡಿಗೆಯೂ ಸಮಸಮಾಜದ ನಿರ್ಮಿತಿಯ ಕಡೆಗೇ ಇದೆ. ಒಂದೊಂದು ಕವಿತೆಯಲ್ಲೂ ಅವರೇ ಕಂಡು, ಅನುಭವಿಸಿದ ನೋವುಗಳನ್ನು ಕಾವ್ಯದ ಮೂಲಕ ಹೊರಹಾಕಿದ್ದಾರೆ. ‘ಕಾಣೆಯಾಗಿದ್ದಾರೆ ಕಂಡರೆ ಹೇಳಿಬಿಡು’ ಕವಿತೆಯಲ್ಲಿ ಜಿ.ಎಸ್.ಎಸ್ ಅವರ ಕವಿತೆಯ ದಟ್ಟ ಛಾಯೆಯಿದೆ. ಧರ್ಮದ ಪ್ರತಿನಿಧಿಗಳು ಎನಿಸಿದ್ದವರು ಒಂದು ಕಾಲದಲ್ಲಿ ತಮ್ಮ ಧರ್ಮದ ಮೇರೆಯನ್ನು ಮೀರಿ ಬಾಳುತ್ತಿದ್ದವರು, ಹೆಗಲಾಗುತ್ತಿದ್ದವರು ಇಂದು ಬದಲಾದ ಪರಿಯನ್ನು ಕಂಡು ವಿಷಾದ ವ್ಯಕ್ತಪಡಿಸುತ್ತಾರೆ. ಈ ಬದಲಾಗುವಿಕೆಗೆ ಕಾರಣವಾದ ಸ್ವಧರ್ಮದ ವ್ಯಾಮೋಹಕ್ಕೆ ಎಲ್ಲರೂ ಬಲಿಯಾಗಿದ್ದಾರೆ. ಇವರ ಈ ನಡೆ ಸಮಾಜದಂತ್ಯಕ್ಕೂ ಎಲ್ಲಿ ಕಾರಣವಾಗಿಬಿಡಬಹುದೆಂಬ ಆತಂಕವೂ ಕವಿಯಲ್ಲಿದೆ. ಮಾನವೀಯತೆಯನ್ನು ಚೂರುಪಾರು ಉಳಿಸಿಕೊಂಡವರನ್ನು ಕಂಡರೆ ಹೇಳು ಎನ್ನುವ ಕವಿಭಾವ ಇಲ್ಲಿ ಹುಡುಕಾಟದಲ್ಲಿಯೇ ಸೊರಗಿದೆ.

‘ಹಿಂದಣ ನದಿಯ ನಾಡಲ್ಲಿ’ಕವಿತೆಯಲ್ಲಿ ದೇಶಭಕ್ತಿಯ ಹೆಸರಲ್ಲಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ಪ್ರಭುತ್ವದ ಸೂತ್ರ ಹಿಡಿದವರ ತಲೆಹಿಡುಕತನವನ್ನು ಕಂಡು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಕವಿತೆ ಮುಗಿಯುವಾಗ “ಎಷ್ಟು ದಿನ ಸಾಗುವುದು ಸುಡುಗಾಡ ಜಾತ್ರೆ, ಕೊನೆಗೊಂದುದಿನ ಮಣ್ಣೆ ಖಾತ್ರಿ” ಎಂದುಬಿಡುತ್ತಾರೆ. ಸಾವಿರುವುದನ್ನು ಧ್ಯಾನಿಸುತ್ತಿದ್ದರೆ ಮನುಷ್ಯ ಮನುಷ್ಯನಾಗಿ ವರ್ತಿಸುತ್ತಾನೆ.

ವಿಫಲ ಪ್ರೇಮದ ಕನವರಿಕೆಯ ಸ್ವಗತವನ್ನು ‘ನಿಶಾಚರಿಯಾಗಲಾರೆ’ ಎನ್ನುವ ಕವಿತೆಯಲ್ಲಿ ಕಾಣಬಹುದು.
“ಕಾವ್ಯವನ್ನು ಪ್ರೀತಿಸಿದಷ್ಟು ನಿನ್ನೆಂದು ಪ್ರೀತಿಸಲಿಲ್ಲ
ಆದರೂ ನಮ್ಮಿಬ್ಬರ ಕೊನೆಯ ಮಾತು..?
ಇಂದು ಕವಿತೆಯಾಗಿದೆ
ಮೂಸೆಯಲ್ಲಿ ಮೌನ ನಿಗಿಕೆಂಡವಾಗಿದೆ
ಜಳಕ್ಕೆ ನೀರೊಡೆದಿದೆ
ಬೆವರು ಉಪ್ಪುನೀರು
ನಿನ್ನ ನೆನಪಷ್ಟು ಸಿಹಿಯಲ್ಲ
ನನ್ನ ಮಾತಿನಷ್ಟು ಸಪ್ಪೆಯು ಅಲ್ಲ
ಕಣ್ಣ ತುಂಬ ಕಪ್ಪುಮೋಡ”
ತನ್ನತನದ ಬಗ್ಗೆ ಇಷ್ಟು ಪ್ರಾಮಾಣಿಕವಾಗಿ ನಿವೇದಿಸಿಕೊಂಡು ದೈನ್ಯತೆಯಲ್ಲಿಯೇ ದಕ್ಕದ ಪ್ರೇಮಿಯೊಬ್ಬಳನ್ನು ಕನವರಿಸುತ್ತಾರೆ.

‘ಬಟ್ಟೆಗಂಟಿದ ಬೆಂಕಿ’ ಕವನಸಂಕಲನದ ಶೀರ್ಷಿಕೆ ಕವಿತೆ. ಧರ್ಮ ಧರ್ಮಗಳ ನಡುವೆ ಹುಟ್ಟಿಕೊಂಡ ಬಟ್ಟೆಯವಿವಾದ ಕವಿತೆಯ ವಸ್ತು. ವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸುವ, ವಿರೋಧಿಸುವ ಧರ್ಮಾಂಧರ ಕುರಿತು ವಿಶಾಲ್ ವಿಷಾದ ವ್ಯಕ್ತಪಡಿಸುತ್ತಾರೆ.

“ಕೇಳು ಹುಡುಗಿ
ಬಟ್ಟೆಗಂಟಿದೆ ಬೆಂಕಿ
ತೊಟ್ಟರು ಸುಡುವೆ
ತೊಡದಿದ್ದರೂ ಸುಡುವೆ ಈ ಸಭ್ಯರ ಕಣ್ಣಲ್ಲಿ

ಆ ಸಲ್ವಾರು, ಚೂಡಿ
ನಿನ್ನದಾದರೆ
ಈ ಪ್ಯಾಂಟು, ಶರ್ಟು ನನ್ನದು
ಈಗ ಎಲ್ಲವೂ ಬುಡಮೇಲು
ಒಮ್ಮೊಮ್ಮೆ ಈ ಅಂಗಿ ತೊಡುವುದಕ್ಕಿಂತ
ಬಿಚ್ಚುವುದೇ ಲೇಸು ಹುಡುಗಿ
ಜೇಬಿನ ಬಾಯಲ್ಲಿ ನಾನಾ ಬಣ್ಣ
ಅಲ್ಲಿದ್ದರೆ ನಾನು ಒಂದು ಬಣ್ಣ
ಜೇಬಿರದ ಕಡೆ ಒಂದೇ ಬಣ್ಣ
ಬರಿಯ ಗುಲಾಮಿ.. ಅಷ್ಟೆ”

ಬಟ್ಟೆಗೆ ಮಾತ್ರವಲ್ಲ ಬಣ್ಣಕೂ ಬೆಂಕಿ ಹೊತ್ತಿರುವ ಈ ಹೊತ್ತಿನಲ್ಲಿ ಬದುಕುವುದು ಹೇಗೆ ಎಂಬ ಪ್ರಶ್ನೆ ಕವಿಯನ್ನು ಅತಿಯಾಗಿ ಕಾಡಿದೆ. ಎಪ್ಪತ್ತು ಎಂಭತ್ತರ ದಶಕದಲ್ಲಿ ದಲಿತ ಕಾವ್ಯ ಉಚ್ಛ್ರಾಯ ಸ್ಥಿತಿಯಲ್ಲಿರುವಾಗ ಬರೆಯುತ್ತಿದ್ದ ಕವಿತೆಗಳನ್ನು ಹಾಡಬಹುದಾಗಿತ್ತು. ಸಿದ್ದಲಿಂಗಯ್ಯನವರ ಅನೇಕ ಕವಿತೆಗಳೂ ಹಾಡಾಗಿ ಜನರ ಬಾಯಿಂದ ಬಾಯಿಗೆ ತಲುಪಿ ಮನಸಿನಲ್ಲಿ ಅಚ್ಚಳಿಯದೆ ಉಳಿದಿದ್ದವು ಮತ್ತು ಈಗಲೂ ಉಳಿದಿವೆ. ವಿಶಾಲ್ ಅವರು ಬರೆಯುವ ಕವಿತೆಗಳೂ ಹೆಚ್ಚು ಕಡಿಮೆ ಇವೇ ಮಾದರಿಯವು. ಶ್ರಮಿಕರ ಒಡಲ ಗೀತೆಯಂತಿರುವ ‘ನಾಟಿಸುತ್ತೇವೆ ನೇಗಿಲನ್ನು’ ಕವಿತೆಯು ಆಕ್ರೋಶವನ್ನು ಹೊರಹಾಕುವ ಪರಿ ವಿಶೇಷ ಎನಿಸುತ್ತದೆ. ಇಲ್ಲಿ ವಿಷಾದದೊಂದಿಗೆ ಮಾಡಿಯೇ ತೀರುತ್ತೇವೆ ಎಂಬ ಭರವಸೆ ಕವಿಯನ್ನು ಮುನ್ನಡೆಸಿದೆ.

“ರಕ್ತ ಹರಿಸಿಯಾದರು ನಾವು ಸಾಧಿಸುತ್ತೇವೆ
ನಿಮ್ಮ ಹೃದಯ ಕರಗಿಸುತ್ತೇವೆ
ಎದೆಗೆ ನಾಟಿಸುತ್ತೇವೆ
ನಮ್ಮ ನೇಗಿಲನ್ನು
ಬೆಳೆಯುತ್ತೇವೆ ಶಾಂತಿಯನ್ನು”

‘ನೇಗಿಲು’ ಇಲ್ಲಿ ಬಹಳ ಚಂದದ ರೂಪಕ. ಶಾಂತಿಯ ದ್ಯೋತಕದಂತಿರುವ ಈ ಕವಿತೆಯಲ್ಲಿ ಕಾಯುವಿಕೆಗೂ ಬಹುದೊಡ್ಡ ಸ್ಥಾನ ದಕ್ಕಿದೆ.
‘ಕೂಗಿ ಹೇಳಿ’ ಕವಿತೆಯೂ ಹಿಂದಿನ ಕವಿತೆಗಿಂತ ಭಿನ್ನವಾಗಿಲ್ಲ. ಆದರೆ ಕವಿಯ ಆಕ್ರೋಶ, ಸಿಟ್ಟು ಶ್ರಮಿಕರ ದುಡಿಯುವ ಸಾಧನಗಳಿಂದಲೇ ದೇಶ ಒಡೆದವರ, ಒಡೆಯಲು ಪ್ರಯತ್ನಿಸುವವರಿಗೆ ಅಂತ್ಯ ಕಾಣಿಸಲು ಹೊರಟಿವೆ.

“ಎಷ್ಟು ದಿನ ನಾವು ಸಹಿಸಿಕೊಳ್ಳುವ
ಎತ್ತಿರಿ ನಿಮ್ಮದೇ ಗುದ್ದಲಿ ಸಲಾಕೆಯನ್ನು
ಕೊಚ್ಚ ಹಾಕುವ ಬನ್ನಿ ಈ ನೀಚ ನರಿಗಳನ್ನ
ಒಂದಾಗಿ ಬನ್ನಿ ಒಟ್ಟಾಗಿ ಬನ್ನಿ
ದೇಶ ಕಟ್ಟುವ ದುಡಿಮೆಯ ಹಾದಿಯಲ್ಲಿ”

ಹಿಂಸೆ ಕೊಟ್ಟವರನ್ನು ಹಿಂಸೆಯಿಂದಲೇ ಅಂತ್ಯಕಾಣಿಸಲು ಯೋಚಿಸುವ ಕವಿಯನ್ನು ತಾನು ಅನುಭವಿಸಿದ ಸಂಕಟಗಳು ಹೀಗೆ ನುಡಿಸಿವೆ. ಆದರೆ ಈ ಎರಡೂ ಹಿಂಸೆಗಳೂ ಅಪಾಯಕಾರಿಯೇ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.

‘ಹೊತ್ತಿನ ನದಿ’ ಕವಿತೆಯು ಏನನ್ನೂ ಅರಿಯದ ಮುಗ್ಧ ನದಿಯೊಂದರ ಕುರಿತು ಬರೆಯಲಾದ ಕವಿತೆ. ತೇಲಿಸುವುದಷ್ಟೆ ಅದರ ಕಾಯಕ.
ದೊರೆಯನ್ನು ಸಂಭೋದಿಸುತ್ತಾ,
“ದೊರೆ
ಅದು ನಿನ್ನ ಹಾಗೆ ಅಲ್ಲ
ಮತ ನೋಡಿ ಮಣೆ ಹಾಕುವುದಿಲ್ಲ
ಎಲ್ಲ ನಿನ್ನ ದುರಾಸೆಗೆ, ದುರಾಡಳಿತಕ್ಕೆ ಹಿಡಿದ ಕನ್ನಡಿಯೇ”

ಶ್ರಮಿಕರ ಒಡಲ ಗೀತೆಯಂತಿರುವ ‘ನಾಟಿಸುತ್ತೇವೆ ನೇಗಿಲನ್ನು’ ಕವಿತೆಯು ಆಕ್ರೋಶವನ್ನು ಹೊರಹಾಕುವ ಪರಿ ವಿಶೇಷ ಎನಿಸುತ್ತದೆ. ಇಲ್ಲಿ ವಿಷಾದದೊಂದಿಗೆ ಮಾಡಿಯೇ ತೀರುತ್ತೇವೆ ಎಂಬ ಭರವಸೆ ಕವಿಯನ್ನು ಮುನ್ನಡೆಸಿದೆ.

ಆಳುವವವರ ಪಕ್ಷಪಾತ ಧೋರಣೆಯನ್ನು ನದಿಯೊಂದಿಗೆ ಸಮೀಕರಿಸುತ್ತ, ನದಿಯನ್ನು ಔನತ್ಯಕ್ಕೇರಿಸುವ ಕವಿತೆ ವಿಶಿಷ್ಟವಾಗಿದೆ. ‘ಕಿಟಕಿಯ ಹೊರಗೆ ನೋಡಬೇಡ’ ಕವಿತೆ ತನ್ನ ಸಖಿಯೊಂದಿಗಿನ ಸಂಭಷಣೆ ರೂಪದ ಕವಿತೆ. ಊರ ಕಥೆಗಳ ನಮಗೆ ಉಸಾಬರಿ ಬೇಡ, ‘ಹೊಟ್ಟೆ ಹಸಿದಿದೆ ಊಟ ಹಾಕು’ ಎಂದು ಕವಿತೆಯನ್ನು ಮುಗಿಸಿಬಿಡುತ್ತಾರೆ. ಇದು ಬದುಕಿಗೂ ಅನ್ವಯವಾಗುವ ಕವಿತೆ. ‘ಹಸಿವನ್ನು ಮರೆಸುವ ಹೊಟ್ಟೆಯ ಕೂಳೇ ಧರ್ಮಕ್ಕಿಂತ ದೊಡ್ಡದು’ ಎಂಬ ಸಂದೇಶವನ್ನು ಸಾರುತ್ತದೆ. ಜಾಗತೀಕರಣಗೊಂಡ ಬುದ್ಧ ಎಲ್ಲೆಡೆಯೂ ರಾರಾಜಿಸುತ್ತಿರುವುದು ಅಲಂಕಾರಿಕ ಪುತ್ಥಳಿಯಾಗಿಯೇ. ಬುದ್ಧನಿಗೂ ಚೌಕಟ್ಟು ಹಾಕಿರುವ ಈ ಹೊತ್ತಿನಲ್ಲಿ ಬುದ್ಧನ ನಿಶ್ಚಲ ಸ್ಥಿತಿಯನ್ನು ಕಂಡು ಕವಿ ಮನಸ್ಸು ಮರುಗಿದೆ. ಆದರೆ ಕವಿಗೆ ಬುದ್ಧ ನಗುತ್ತಾನೆ ಎಂಬ ಭರವಸೆಯಿದೆ. ‘ಬುದ್ಧ ನಮ್ಮೊಳಗೆ ಹೊಕ್ಕಾಗ, ನಕ್ಕಾಗ ಮಾತ್ರ ಜಗತ್ತು ಶಾಂತಿಯಿಂದಿರುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅದು ಅನಿವಾರ್ಯ’.

ಮನುಷ್ಯ ಮನುಷ್ಯರ ನಡುವೆ, ಕೇರಿ ಕೇರಿಗಳ ನಡುವೆ, ಊರು ಊರುಗಳ ನಡುವೆ, ದೇಶದೇಶಗಳ ನಡುವೆ, ಮನಸ್ಸು ಮನಸ್ಸುಗಳ ನಡುವೆ ಎದ್ದು ಬೀಳದ ಗೋಡೆಯ ಬಗ್ಗೆ ‘ಗೋಡೆ’ ಕವಿತೆಯಲ್ಲಿ ವಿಷಾಯ ವ್ಯಕ್ತ ಪಡಿಸುತ್ತಾರೆ. ಬೀಳುವುದೆಂದು ಅಂದುಕೊಂಡರೂ ಪೊರೆಬಿಡುವ ಹಾವಿನಂತೆ ಮತ್ತೆ ಏಳುವ ಗೋಡೆಯ ಬಗ್ಗೆ ಸಶಕ್ತ ಕವಿತೆ ಕಟ್ಟಿದ್ದಾರೆ. ಜಿ.ಎಸ್.ಎಸ್ ಅವರ ಗೋಡೆ ಕವಿತೆಯನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

ಹೊಡೆದಾಡಿ ಸಾಯುವವರೆಲ್ಲರೂ ರಕ್ತ ಹರಿಸುತ್ತಿರುವುದು ತುತ್ತಿಗಾಗಿ ಅಲ್ಲ, ಧರ್ಮಕ್ಕೆಂದು ಎಂದಾಗ ವಿಷಾದವೆನಿಸುತ್ತದೆ. ‘ಕನಸು ಕಾಣುವ ಹೊತ್ತಲ್ಲ’ ಕವಿತೆಯೂ ಸಂವಾದ ರೂಪದ ಕವಿತೆಯಾಗಿದೆ. ದೇಶಭಕ್ತಿಯನ್ನು ಗುತ್ತಿಗೆ ಪಡೆದಿರುವೆವೆಂದು ಅನಭಿಷಿಕ್ತ ದೇಶಭಕ್ತರ ಉಪಟಳವನ್ನು ಖಾರವಾಗಿಯೇ ದಾಖಲಿಸುತ್ತಾರೆ.

“ಮಾತೆ ಮಾತೆ ಎಂದು ಅವಳ ಮೂತಿಗೆ ಗರ್ಭಪಾತ ಮಾಡುವ ತಾಯ್ಗಳ್ಳರು
ತಾನು ತಿಂದದ್ದ ಮೇಕೆ ಮೂತಿ ಸವರುವ ಕೋತಿಯ ಹಿಂಬಾಲಕರು
ಉಣ್ಣುವ ಅನ್ನ , ಕೈ, ಬಿತ್ತುವ ನೇಗಿಲಿಗೆ ,
ದುಡಿಯುವ ಕೈಗಳಿಗೆ ದಾಖಲೆಯ ಕೇಳುವ ದೊರೆ
ಬೆನ್ನೆಲುಬ ಎದೆಯಲ್ಲಿ ಕಿಚ್ಚು ಹತ್ತಿದರೆ ನೀರೆರಚುವ
ಕೇಳದಿರೆ ಬ್ರೆಡ್ಡಲ್ಲಿ ಗಾಳಿಯಲ್ಲಿ ಮನುಷ್ಯನ ಕದಿಯುವ ಖದೀಮರು
ಕೇಳಿದರೆ ಬರೀ ದೇವರ ತೋರಿಸುವವರ
ಕೈಗೆ ದೇಶ ಕೊಟ್ಟು ಕುಂತಿದ್ದೇವೆ ಸಖಿ”

ಎಂದು ತನ್ನ ಸಖಿಯೊಂದಿಗೆ ದೇಶದ ಕಥೆ-ವ್ಯಥೆಯನ್ನು ಹಂಚಿಕೊಳ್ಳುತ್ತಾರೆ. ವಿಶಾಲ್ ಅವರ ಕವಿತೆಗಳು ಗಮನಸೆಳೆಯುವುದು ತಮ್ಮ ಕವಿತೆಗಳ ವಿಷಯ ವೈವಿಧ್ಯತೆಯ ದೃಷ್ಟಿಯಿಂದ. ಧರ್ಮ, ಹೆಣ್ಣು, ಹಸಿವು, ಬಡತನ, ಜಾತಿ, ಶೋಷಣೆ, ಸಂಬಂಧ, ಪ್ರೇಮ, ಯೌವನ, ಯುದ್ಧ, ವೇಶ್ಯಾವಾಟಿಕೆ, ಕಲುಷಿತಗೊಂಡ ರಾಜಕೀಯ ಇತ್ಯಾದಿಗಳು ಇಲ್ಲಿ ಕವಿತೆಯಾಗಿವೆ. ಪ್ರತಿ ಕವಿತೆಯಲ್ಲಿಯೂ ಹೊಸ ರೂಪಕಗಳು ಬಳಕೆಯಾಗಿವೆ. ಕವಿತೆಗಳನ್ನು ಬಹುಮುಖಿ ಆಯಾಯಮಗಳಿಂದ ಓದಲು, ವಿಶ್ಲೇಷಣೆಗೆ ಒಳ ಪಡಿಸಲು ಸಾಧ್ಯವಿದೆ. ವೇಶ್ಯಾವಾಟಿಯನ್ನು ಆಯ್ಕೆ ಮಾಡಿಕೊಂಡ ಹೆಣ್ಣೊಬ್ಬಳ ಆಯ್ಕೆಯನ್ನೂ ಪ್ರಶ್ನಿಸುವ ಸಮಾಜವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

“ನನ್ನ ಆಯ್ಕೆಗೆ ಹಾದರವೆಂಬ ಹೆಸರಿಟ್ಟು
ನಿಮ್ಮ ಆಯ್ಕೆಗೆ ಏಕೆ
ಗಂಡಸ್ತನವೆಂಬ ಗತ್ತಿನ ಬಿರುದು” ಎನ್ನುವ ಸಾಲುಗಳು ಓದುವವರನ್ನು ತಬ್ಬಿಬ್ಬು ಮಾಡುತ್ತವೆ. ಚಿಂತೆಗೀಡು ಮಾಡುತ್ತವೆ. ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ. ‘ಎಲ್ಲವೂ ಬಿಕರಿಗಿಟ್ಟಿದೆ’ ಕವಿತೆಯಲ್ಲಿ ಸ್ವಮರುಕವೂ, ಗತದ ನೆನಪಿನ ವ್ಯಾಖ್ಯಾನವನ್ನೂ ಮಾಡಲಾಗಿದೆ. ‘ಖೀರು-ಶಾವಿಗೆ’ ವಿಶಿಷ್ಟ ರೂಪಕಗಳಿರುವ ಗಂಭೀರ ಕವಿತೆ. ಅನ್ಯ ಧರ್ಮದ ಪ್ರೀತಿಸುವ ಇಬ್ಬರ ನಡುವೆ ನಡೆಯುವ ಸಂವಾದ ಕವಿತೆಯ ಕೊನೆಯವರೆಗೂ ಸಾಗಿದೆ. ಖೀರು-ಶಾವಿಗೆ ಮಾಡುವ ಇಬ್ಬರ ಧರ್ಮವೂ ಬೇರೆಬೇರೆಯಾಗಿರುವಾಗ ಪ್ರೀತಿಯನ್ನು ಒಪ್ಪಲು ನಿರಾಕರಿಸುತ್ತಾರೆ. ಇದು ಸಮಾಜದ ಹೇರುವಿಕೆಯ ಪರಿಣಾಮವಾಗಿಯೇ ಘಟಿಸಿದ್ದು. ಕೊನೆಗೆ ಪ್ರೀತಿಸಿದ ಇಬ್ಬರೂ ಬಂದು ಸೇರುತ್ತಾರೆ.

“ಹಾರಿಹೋಗುವುದು ಬಿಟ್ಟು
ಇನ್ಯಾವ ಆಯ್ಕೆಯಿತ್ತು?
ಪ್ರೀತಿ ಇಲ್ಲದ ಮೇಲೆ ಹೂವು ಅರಳಿದಂತೆ
ಇವರಲ್ಲಿ ಅರಳಿತ್ತು ಅವರನ್ನು ಕೆರಳಿಸಿತ್ತು
ಮತಾಂಧರಿಗೆ ಇದ್ದಷ್ಟು ಕಿವುಡು ಯಾವ ಕಗ್ಗಲ್ಲಿಗಿಲ್ಲ ಎಂಬುದು
ಸತ್ಯವಾಯಿತು
ಆಗ ಬುದ್ಧನ ಶಿಲೆಯಲ್ಲಿ ನಗೆ ಹೊಮ್ಮಿತು”

ಇಂಥ ಸಶಕ್ತ ಸಾಲುಗಳು ನಮ್ಮನ್ನು ಬಿಡದೆ ಕಾಡುತ್ತವೆ. ಧರ್ಮಧರ್ಮಗಳ ನಡುವೆ ಸಾಮರಸ್ಯ ಮೂಡುವ ದಿನಗಳಿಗಾಗಿ ಕಾದು ಕುಳಿತಿರುವ ಕವಿಗೆ ಬುದ್ಧ ಮತ್ತೆ ಮತ್ತೆಕಾಡುತ್ತಾನೆ. ಲೋಕದ ಎಲ್ಲ ಶೋಕ, ಸಮಸ್ಯೆಗಳಿಗೆ ಬುದ್ಧನೊಬ್ಬನೇ ಪರಿಹಾರವೆಂಬುದನ್ನು ಬಹಳ ಜಾಗರೂಕತೆಯಿಂದ ಇಲ್ಲಿ ಗ್ರಹಿಸಲಾಗಿದೆ. ತರುಣ ಕವಿಗೆ ಭಗತ್ ಸಿಂಗ್ ಕಾಡಿದ್ದಾರೆ. ಇವರ ಕುರಿತೂ ಕವಿತೆಯಿದೆ. ಅವ್ವನ ಕುರಿತ ಕವಿತೆಯಿದೆ. ಇಲ್ಲಿ ‘ಬಯಲೇ ಅವ್ವ, ಅವ್ವನೇ ಬಯಲು’ ಎಂಬ ಸತ್ಯವನ್ನು ಪ್ರತಿಪಾದಿಸಲಾಗಿದೆ. ಕಣ್ಣುಕುಕ್ಕುವ ಎಲ್ ಇ ಡಿ ಮತ್ತು ಅದರ ತ್ಯಾಜ್ಯದ ಕುರಿತು ಪ್ರಸ್ತಾಪಿಸಲಾಗಿದೆ. ಅಪ್ಪನ ಕುರಿತೂ ವಿಶಿಷ್ಟ ಕವಿತೆಯಿದೆ. ವಿಶಾಲ್ ಅವರ ಈ ಸಂಕಲನ ಭರವಸೆಯನ್ನು ಹುಟ್ಟಿಸಿದೆ. ಸಶಕ್ತ ಬರವಣಿಗೆಯ ಅವರ ಶೈಲಿ, ಭಾಷೆ ಸರಳವಾಗಿದೆ. ಓದುಗರನ್ನು ಬಹುಬೇಗ ತಲುಪಿಬಿಡುತ್ತವೆ. ಕಾವ್ಯ ಕ್ಲಿಷ್ಟವಾಗಿಯೇ ಇರಬೇಕು ಎಂದು ಬಲವಂತವಾಗಿ ಕಾವ್ಯ ಕಟ್ಟುವವರಿಗಿಂತ ಕಾವ್ಯ ತನ್ನೊಳಗೆ ಸಂಭವಿಸಿದಾಗ ಬರೆಯುವ ಸಾಲುಗಳು ಸರಳವಾಗಿದ್ದರೂ ವೇದ್ಯವಾಗುತ್ತವೆ. ವಿಶಾಲ್ ಅವರ ಕಾವ್ಯ ಇಲ್ಲದಿರುವವರನ್ನೇ ಕೇಂದ್ರವಾಗಿರಿಸಿಕೊಂಡಿದೆ. ಅವರ ತಲ್ಲಣಗಳಿಗೆ ದನಿಯಾಗಿರುವ ಕಾವ್ಯ ಗೆದ್ದಂತೆಯೇ. ಕಾವ್ಯವವನ್ನೇ ಉಸಿರಾಗಿಸಿಕೊಂಡಿದ್ದ ಎನ್ಕೆ ಹನುಮಂತಯ್ಯ, ಯು.ಆರ್. ಅನಂತಮೂರ್ತಿ, ಲಂಕೇಶ್, ಜಿ.ಎಸ್.ಎಸ್ , ಸಿದ್ದಲಿಂಗಯ್ಯ ಮುಂತಾದ ಚೇತನಗಳು ಇವರ ಕವನಗಳನ್ನು ಓದುವಾಗ ನೆನಪಿಗೆ ಸಿಗುತ್ತಾರೆ. ಹೇಳಬೇಕೆನ್ನುವ ಇನ್ನೂ ಹೆಚ್ಚಿನ ಅನೇಕ ಸಂಗತಿಗಳಿವೆ. ಎಲ್ಲವನ್ನೂ ಹೇಳಿದರೆ ಸ್ವಾರಸ್ಯವೂ, ರಸಭಂಗವೂ ಆಗುತ್ತದೆ. ಕವನಸಂಕಲನವನ್ನು ಕೊಂಡು ಓದಿದರೆ ಈ ಕೊರತೆಯನ್ನು ಕಾವ್ಯದ ಒರತೆಯ ಮೂಲಕ ನೀಗಿಸಿಕೊಳ್ಳಬಹುದು.