ಕರಾವಳಿಯಲ್ಲಿ ಖಂಡಕಾವ್ಯಗಳನ್ನು ಬರೆದ ನವೋದಯ ಕವಿಪರಂಪರೆಯ ಕೊನೆಯ ಕೊಂಡಿ ಅಂದರೆ, ಕರಾವಳಿಯ ಮೊದಲನೆಯ ಗಣ್ಯ ದಲಿತ ಕವಿ ಅಚ್ಯುತಗೌಡ ಕಿನ್ನಿಗೋಳಿ.  ಅ.ಗೌ.ಕಿನ್ನಿಗೋಳಿ ಎಂಬ ಹೃಸ್ವ ಹೆಸರೇ ಅವರ ಕಾವ್ಯನಾಮ.  ಸಮಕಾಲೀನ ಕವಿಗಳ ಕಾವ್ಯವಸ್ತುವನ್ನೇ ಮುಂದುವರೆಸಿ, ಅದಕ್ಕೆ ಬೇರೊಂದು ಮುಕ್ತಾಯ ನೀಡುವ ಅವರ ಶೈಲಿ ವಿಭಿನ್ನವಾದುದು.  ಕನ್ನಡ ಮತ್ತು ಸಂಸ್ಕೃತ ಪದವಿ ಪಡೆದಿದ್ದ ಅವರು ಯಕ್ಷಗಾನ ಅರ್ಥಧಾರಿಯಾರಿಯೂ ಆಗಿದ್ದರು. 1921ರ ಅಕ್ಟೋಬರ್ 18ರಂದು ಹುಟ್ಟಿದ ಅವರ ಜನ್ಮಶತಮಾನೋತ್ಸವ ಸಂದರ್ಭದಲ್ಲಿ ಕರಾವಳಿ ಕವಿರಾಜಮಾರ್ಗ ಸರಣಿಯಲ್ಲಿ ಡಾ.ಬಿ.ಜನಾರ್ದನ ಭಟ್ ಅವರು ಬರೆದ ಬರಹ ಇಲ್ಲಿದೆ. 

 

ಕರಾವಳಿಯಲ್ಲಿ ನವೋದಯ ಕಾಲದಲ್ಲಿ ಬರೆಯುತ್ತಿದ್ದ ಸಾಹಿತಿಗಳಲ್ಲಿ ಖಂಡಕಾವ್ಯಗಳನ್ನು ಬರೆದ ಕವಿಗಳ ಒಂದು ಪರಂಪರೆ ಇತ್ತು. ರಗಳೆಯ ಪ್ರಭೇದಗಳನ್ನಿಟ್ಟುಕೊಂಡು ಬರೆದ ಆ ಕವಿಗಳ ಪರಂಪರೆಯ ಕೊನೆಯ ಕೊಂಡಿ ಅಂದರೆ, ಕರಾವಳಿಯ ಮೊದಲನೆಯ ಗಣ್ಯ ದಲಿತ ಕವಿ ಅಚ್ಯುತಗೌಡ ಕಿನ್ನಿಗೋಳಿ (1921-1976). ಕಿನ್ನಿಗೋಳಿ ಎಂಬ ಊರಿನವರಾದ ಅವರು ಅ. ಗೌ. ಕಿನ್ನಿಗೋಳಿ ಎಂಬ ಹ್ರಸ್ವ ಹೆಸರನ್ನೇ ಕಾವ್ಯನಾಮವನ್ನಾಗಿ ಮಾಡಿಕೊಂಡು ಬರೆದವರು.

ಅ.ಗೌ. ಕಿನ್ನಿಗೋಳಿಯವರು ಹುಟ್ಟಿದ್ದು ಹುಟ್ಟಿದ್ದು 18 ಅಕ್ಟೋಬರ್ 1921 ರಂದು. ಮಂಗಳೂರಿನ ಕನ್ನಡ ಸಂಘ ಪ್ರಕಟಿಸಿದ ‘ಕಾವ್ಯಗಂಗೆ’ ಆಂಥಾಲಜಿಯಲ್ಲಿ ಅ.ಗೌ.ಕಿ.ಯವರ ‘ಸಾಂತ್ವನ’ ಎಂಬ ಕವಿತೆಯಿದ್ದು, ಅದರಲ್ಲಿರುವ ಪರಿಚಯದ ಟಿಪ್ಪಣಿಯಲ್ಲಿ ಅ.ಗೌ.ಕಿ.ಯವರು, “ಕಿನ್ನಿಗೋಳಿಯ ಅಚ್ಚುತ ಗೌಡರು ಲಿಟ್ಲ್ ಫ್ಲವರ್ ಗರ್ಲ್ಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದು, ‘ಕ್ಷಾತ್ರದರ್ಶನ’ವೆಂಬ ವೀರಕವನದಿಂದ ಮೊದಲಾಗಿ ಕನ್ನಡ ಕವಿಲೋಕಕ್ಕೆ ಪರಿಚಿತರಾದವರು. ‘ಅವಿನಾಶಿ’ ಎಂಬ ಕಾವ್ಯನಾಮದಿಂದ ಹಲವು ಹರಟೆ–ವಿಡಂಬನಗಳನ್ನೂ, ಏಕಾಂಕ ನಾಟಕಗಳನ್ನೂ ಬರೆದಿರುವರು. ಇವರ ಅನೇಕ ಭಾವಗೀತಗಳು ಸಂಕಲನವಾಗಿ ಪ್ರಕಟವಾಗಬೇಕಾಗಿವೆ” ಎಂದು ಹೇಳಲಾಗಿದೆ. ಈ ಟಿಪ್ಪಣಿಯಲ್ಲಿ ಅವರ ಹೆಸರನ್ನು ‘ಅಚ್ಚುತ’ ಎಂದು ಬರೆಯಲಾಗಿದ್ದರೂ, ಕ.ಸಾ.ಪ.ದ ‘ಕಾವ್ಯ ಲಹರಿ’ಯಲ್ಲಿಯೂ, ಡಾ. ಕೆ. ಚಿನ್ನಪ್ಪ ಗೌಡರ ಕೃತಿಗಳಲ್ಲಿಯೂ ಬಳಸಲಾಗಿರುವ ‘ಅಚ್ಯುತ’ ಎನ್ನುವ ಅಕ್ಷರಿಕೆಯನ್ನು ಈ ಲೇಖನದಲ್ಲಿ ಬಳಸಲಾಗಿದೆ.

ಅ. ಗೌ. ಕಿನ್ನಿಗೋಳಿಯವರು (1921 – 1976) ಕಡೆಂಗೋಡ್ಲು ಅವರ ಖಂಡಕಾವ್ಯ ಪರಂಪರೆಯ ಮುಂದುವರಿಕೆಯಾಗಿ ಕಂಡು ಬರುತ್ತಾರೆ. ಅವರ ಖಂಡಕಾವ್ಯಗಳು 1954 ರಲ್ಲಿ ಪ್ರಕಟವಾದವು. ಮುಳಿಯ ತಿಮ್ಮಪ್ಪಯ್ಯನವರಿಂದ ಪ್ರಾರಂಭವಾದ ಈ ಪರಂಪರೆಯ ಕವಿಗಳು ಆಧುನಿಕ ಸಾಹಿತಿಗಳು ಕಾದಂಬರಿಗಳಲ್ಲಿ ಜೀವನದ ಅರ್ಥ ಶೋಧನೆ ನಡೆಸಿದಂತೆ ಖಂಡಕಾವ್ಯಗಳಲ್ಲಿ ಬದುಕಿನ ಅರ್ಥದ ಶೋಧನೆ ನಡೆಸಿದರು. ಕಡೆಂಗೋಡ್ಲು ಅವರು ಪುರಾಣ ಮತ್ತು ಸಮಕಾಲೀನ ಎರಡೂ ವಸ್ತುಗಳನ್ನಿಟ್ಟುಕೊಂಡರೆ, ಅದೇ ಪರಂಪರೆಯ ಸೇಡಿಯಾಪು ಕೃಷ್ಣ ಭಟ್ಟರು ಸಮಕಾಲೀನ ಆಶಯಗಳನ್ನು, ಸಾಮಾಜಿಕ ಆಯಾಮಗಳನ್ನು ತಮ್ಮ ಸಣ್ಣ ಕಾವ್ಯಗಳಲ್ಲಿ ಪರಿಶೀಲಿಸಿದ್ದಾರೆ. ಈ ಪರಂಪರೆಯ ಮುಂದಿನ ಕವಿ ಅ. ಗೌ. ಕಿನ್ನಿಗೋಳಿಯವರು ಕಡೆಂಗೋಡ್ಲು ಅವರಂತೆ ಪುರಾಣ ಕಥೆಗಳ (ಪುನರ್ಮಿಲನ, ಚಿತಾಗ್ನಿ) ಮೂಲಕ ಸ್ತ್ರೀಯ ತ್ಯಾಗವನ್ನು, ಅವಳ ಮನಸ್ಸಿನ ನೋವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು; ಕ್ಷಾತ್ರ ತೇಜದ ಮಹತ್ವವನ್ನು ಎತ್ತಿಹೇಳಿದರು (ಶಿವಲೇಶ್ಯೆ, ಕ್ಷಾತ್ರ ದರ್ಶನ). ಕಡೆಂಗೋಡ್ಲು ಶಂಕರ ಭಟ್ಟರದೂ ಸ್ತ್ರೀಪರವಾದ ದೃಷ್ಟಿಕೋನ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅ. ಗೌ. ಕಿನ್ನಿಗೋಳಿ ಅವರ ಕಾವ್ಯದ ವೈಶಿಷ್ಟ್ಯ ಎಂದರೆ ತಮ್ಮ ಸಮಕಾಲೀನ ಹಿರಿಯ ಕವಿಗಳ ಕಾವ್ಯಗಳನ್ನೇ ಮುಂದುವರಿಸಿ, ಬೇರೊಂದು ದೃಷ್ಟಿಕೋನದಿಂದ ಆ ವಸ್ತುವನ್ನು ಪರಿಶೀಲಿಸಿ, ಅದಕ್ಕೆ ಇನ್ನೊಂದು ಬಗೆಯ ಮುಕ್ತಾಯವನ್ನು ಕೊಡುವುದರಲ್ಲಿ ಅವರಿಗಿದ್ದ ಆಸಕ್ತಿ. ಕವಿಯೊಬ್ಬ ಪರಂಪರೆಯ ಜತೆಗೆ ಈ ರೀತಿಯ ಸಂಬಂಧವನ್ನು ಸ್ಥಾಪಿಸಿಕೊಳ್ಳುವುದು ಬೇರೆಲ್ಲೂ ಕಾಣದೆ ಇರುವ ಒಂದು ವಿದ್ಯಮಾನವೆನ್ನಬಹುದು. ಈ ಬಗ್ಗೆ ಕೆಲವು ವಿಶ್ಲೇಷಣೆಯ ಮಾತುಗಳನ್ನು ಆಯಾಯ ಕಾವ್ಯಗಳ ಪರಿಚಯ ಮಾಡಿಕೊಡುವಾಗ ಹೇಳಲಾಗಿದೆ.

ಇಲ್ಲಿ ಉದಾಹರಣೆಗಳನ್ನು ಕೊಡುವುದಾದರೆ –
1. ‘ಪುನರ್ಮಿಲನ’: ಕಯ್ಯಾರ ಕಿಞ್ಞಣ್ಣ ರೈಗಳ ‘ಊರ್ಮಿಳಾ’ ಎಂಬ ಸಣ್ಣಕಾವ್ಯದಲ್ಲಿ ಸೂಚಿತವಾಗಿರುವ ಲಕ್ಷ್ಮಣನ ಪತ್ನಿ ಊರ್ಮಿಳೆಯ ಅಳಲನ್ನು ಹೇಳಲು ಅ.ಗೌ.ಕಿ. ‘ಪುನರ್ಮಿಲನ’ ಎಂಬ ಸಣ್ಣಕಾವ್ಯವನ್ನು ಬರೆದರು.
2. ‘ಚಿತಾಗ್ನಿ’: ಕಡೆಂಗೋಡ್ಲು ಶಂಕರ ಭಟ್ಟರ ‘ಮಾದ್ರಿಯ ಚಿತೆ’ ಖಂಡಕಾವ್ಯವನ್ನು ಮುಂದುವರಿಸಲೆಂಬಂತೆ ಅ.ಗೌ.ಕಿನ್ನಿಗೋಳಿ ಅವರು ಮಾದ್ರಿಯ ಚಿತೆಯನ್ನು ನಿಜವಾಗಿಯೂ ವರ್ಣಿಸುವ ‘ಚಿತಾಗ್ನಿ’ ಖಂಡ ಕಾವ್ಯವನ್ನು ಬರೆದರು. ಕಡೆಂಗೋಡ್ಲು ಅವರು ಆ ದೃಶ್ಯವನ್ನು ವರ್ಣಿಸಿಲ್ಲ.
3. ‘ಕ್ಷಾತ್ರದರ್ಶನ’: ಜೈಮಿನಿ ಭಾರತದ ಚಿತ್ರಾಂಗದೆಯ ಕಥೆ, ಬಭ್ರುವಾಹನ – ಅರ್ಜುನರ ಕಥಾನಕವನ್ನು ಬಳಸಿಕೊಂಡು ಅದನ್ನು ಭಿನ್ನಪರಿಯಿಂದ ಚಿತ್ರಿಸುವುದರ ಜತೆಗೆ ತ.ರಾ.ಸು. ಅವರ ‘ಜ್ವಾಲೆ’ ನಾಟಕದ ಜ್ವಾಲೆ ಪಾತ್ರವನ್ನು ಸೇರಿಸಿಕೊಂಡು ‘ಕ್ಷಾತ್ರದರ್ಶನ’ ಕಾವ್ಯವನ್ನು ಬರೆದರು.
4. ‘ಮೊದಲ ಭಿಕ್ಷುಣಿ’: ಮಾಸ್ತಿಯವರ ‘ಯಶೋಧರಾ’ ನಾಟಕದಿಂದ ಪ್ರೇರಿತರಾಗಿ ‘ಮೊದಲ ಭಿಕ್ಷುಣಿ’ ಖಂಡ ಕಾವ್ಯವನ್ನು ಬರೆದರು.
5 ‘ಶಿವಲೇಶ್ಯೆ’: ಜೋಡುಮಠ ವಾಮನ ಭಟ್ಟರ ‘ದೇಶವೀರ ಶಿವಾಜಿ’ ಎಂಬ ಕೃತಿಯ ಪ್ರೇರಣೆಯಿಂದ ರಚಿತವಾದ ಖಂಡಕಾವ್ಯ.
ಹೀಗೆ ಅವರ ಖಂಡ ಕಾವ್ಯಗಳಿಗೆ ಬೇರೆ ಕೃತಿಗಳ ಪ್ರೇರಣೆ ಇದೆ ಎಂದ ಮಾತ್ರಕ್ಕೆ ಅವು ಆ ಮೂಲ ಕೃತಿಗಳ ಛಾಯೆಯಾಗಿದೆ ಎಂದು ಅರ್ಥವಲ್ಲ. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಮರುಸೃಷ್ಟಿಗಳು ಸ್ವತಂತ್ರ ಕೃತಿಗಳೇ ಎಂದು ಮಾನ್ಯವಾಗುತ್ತವೆ. ಅ.ಗೌ.ಕಿ. ಅವರ ಖಂಡಕಾವ್ಯಗಳು ಮರುಸೃಷ್ಟಿಗಳು ಮಾತ್ರವಲ್ಲ, ಅವುಗಳ ಮುಂದುವರಿಕೆಗಳು ಅನ್ನುವುದು ವಿಶೇಷ.

ಅ. ಗೌ. ಕಿನ್ನಿಗೋಳಿಯವರು ಸಕ್ರಿಯರಾಗಿದ್ದಾಗ ಕನ್ನಡದಲ್ಲಿ ನವ್ಯ ಸಾಹಿತ್ಯದ ಕಾಲ ಪ್ರಾರಂಭವಾಗಿತ್ತು. ಆಗ ಕಡೆಂಗೋಡ್ಲು ಮಾದರಿಯ ಹೊಸನೋಟಗಳ ಖಂಡಕಾವ್ಯಗಳನ್ನು ಬರೆದ ಅ. ಗೌ. ಕಿನ್ನಿಗೋಳಿಯವರಿಗೆ ಸಿಗಬೇಕಾಗಿದ್ದಷ್ಟು ಮನ್ನಣೆ ಸಿಗಲಿಲ್ಲ. ಅ. ಗೌ. ಕಿನ್ನಿಗೋಳಿ ಅವರ ಕಾವ್ಯ ಕೃತಿಗಳು ನಾಡಿನಲ್ಲೆಲ್ಲ ಪ್ರಚಾರಕ್ಕೆ ಬರಲಿಲ್ಲ. ದಕ್ಷಿಣ ಕನ್ನಡದ ಕಿನ್ನಿಗೋಳಿಯಲ್ಲಿ ಲಿಟ್ಲ್ ಫ್ಲ್ಲವರ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದ ಅ. ಗೌ. ಕಿನ್ನಿಗೋಳಿ ಅವರನ್ನು ಚೆನ್ನಾಗಿ ಬಲ್ಲವರಾಗಿದ್ದ, ಅ.ಗೌ.ಕಿ.ಯವರು ಕಲಿತಿದ್ದ ಪಾಂಪೆ ಹೈಸ್ಕೂಲಿನಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದ ಕಿನ್ನಿಗೋಳಿ ಸಮೀಪದ ಪುನರೂರಿನವರಾದ ಸಾಹಿತ್ಯ ಪೋಷಕ ಹರಿಕೃಷ್ಣ ಪುನರೂರು ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಅ. ಗೌ. ಕಿನ್ನಿಗೋಳಿ ಅವರ ಎಲ್ಲ ಅಲಭ್ಯ ಖಂಡಕಾವ್ಯಗಳನ್ನು ‘ಕಾವ್ಯ ಲಹರಿ’ (ಕುವೆಂಪು ಶತಮಾನೋತ್ಸವ ಮಾಲಿಕೆ – 2004) ಎಂಬ ಒಂದೇ ಸಂಪುಟದಲ್ಲಿ ಪರಿಷತ್ತಿನ ವತಿಯಿಂದ ಮರುಮುದ್ರಿಸಿದರು.

ಅವರ ಖಂಡಕಾವ್ಯಗಳು ಇತಿಹಾಸ ಮತ್ತು ಪುರಾಣ ಪಾತ್ರಗಳನ್ನು ಹೊಂದಿದ್ದರೆ 1950 ರಿಂದ 1976 ರವರೆಗೆ ಅವರು ಬರೆದಿರುವ ನೂರಾರು ಬಿಡಿ ಕವಿತೆಗಳಲ್ಲಿ ಸಮಕಾಲೀನ ಸಮಾಜ ವಿಮರ್ಶೆ ಪ್ರಧಾನವಾದ ನೆಲೆಯಲ್ಲಿದೆ. ಅವರ ಕವಿತೆಗಳಲ್ಲಿ ಭಾವಗೀತೆಗಳು ಮತ್ತು ಮುಕ್ತಛಂದಸ್ಸಿನ ಸಮಾಜ ವಿಮರ್ಶೆಯ ಕವಿತೆಗಳು ಸೇರಿವೆ.

ಅ. ಗೌ. ಕಿನ್ನಿಗೋಳಿ ಅವರ ಅವರ ಬಗ್ಗೆ ಮದ್ರಾಸ್ ವಿಶ್ವವಿದ್ಯಾಲಯದ ಎಂ.ಎ. ಪದವಿಗಾಗಿ ಸಂಪ್ರಬಂಧವೊಂದನ್ನು ರಚಿಸಿದ್ದ, ಡಾ. ಕೆ. ಚಿನ್ನಪ್ಪ ಗೌಡ ಅವರು 24.5.2021 ರಂದು ಫೇಸ್‌ಬುಕ್‌ನಲ್ಲಿ ಅ.ಗೌ.ಕಿ. ಅವರ ಬಗ್ಗೆ ಬರೆದ ಟಿಪ್ಪಣಿಯೊಂದರಲ್ಲಿ ಅವರ ಕೃತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ: “ಸರಸ ವಿರಸ (ನಾಲ್ಕು ವಿನೋದ ಚಿತ್ರಗಳು), ಯೋಗ ಲಹರಿ (ಮೊದಲ ಭಿಕ್ಷುಣಿ, ಪುನರ್ಮಿಲನ, ಚಿತಾಗ್ನಿ ಎಂಬ ಮೂರು ಖಂಡಕಾವ್ಯಗಳು), ಕ್ಷಾತ್ರದರ್ಶನ (ಖಂಡಕಾವ್ಯ), ಶಿವಲೇಶ್ಯೆ (ಖಂಡಕಾವ್ಯ), ವಧೂ ವಸಂತಸೇನೆ, ಸಂಗ್ರಾಮ ಸಿಂಹ (ಐತಿಹಾಸಿಕ ಕಥನ), ನಾಗವರ್ಮನ ಕಾದಂಬರಿ (ಕಥಾವಸ್ತು ಸಂಗ್ರಹ), ಒಡ್ಡಿದ ಉರುಳು (ಕಾದಂಬರಿ), ವತ್ಸ ವಿಜಯ (ಯಕ್ಷಗಾನ ಕಥೆ), ದಾರಾ (ಐತಿಹಾಸಿಕ ಕಾದಂಬರಿ), ಬಿಡುಗಡೆಯ ನಾಂದಿ (ಐತಿಹಾಸಿಕ ಕಾದಂಬರಿ). ಸುಮಾರು ನಲುವತ್ತರಷ್ಟು ಲೇಖನಗಳು ಮತ್ತು ನೂರರಷ್ಟು ಕವನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ (ಯುಗಾಂತರ, ಸುಬೋಧ, ಮೊಗವೀರ, ಪ್ರಜಾಮತ, ಸತ್ಯಾರ್ಥಿ, ಮಹಾವೀರ, ವೀಣಾ, ವಿಜಯ, ಜೈಹಿಂದ್, ಆದರ್ಶ, ಯುಗಪುರುಷ, ಸಾಹಿತ್ಯ ವಿಹಾರ, ರಾಯಭಾರಿ, ವಿನೋದ ಮೊದಲಾದುವು). ‘ಪರಾಶರ ಸತ್ಯ’, ‘ಪತನ ಪ್ರಾಯಶ್ಚಿತ’, ‘ಮಂತ್ರ ರಹಸ್ಯ’, ‘ಅಜ್ಞಾತ ಸಂಹಾರ’, ‘ಗುಪ್ತ ತೀರ್ಥಾಟನೆ’, ‘ವಿಪರ್ಯಾಸ ಸಂತಾನ’ ಈ ಆರು ದೃಶ್ಯ ಲಹರಿಗಳು, ಕೃತಿವಿಮರ್ಶೆಗಳು ಯುಗಪುರುಷ ಪತ್ರಿಕೆಯ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಅಪ್ರಕಟಿತ ಕೃತಿಗಳೂ ಇವೆ. ಎಲ್ಲ ದೊರೆತರ ಸಾವಿರ ಪುಟಗಳನ್ನು ಮೀರಬಹುದು.”

ಅ.ಗೌ.ಕಿ. ಅವರ ‘ಒಡ್ಡಿದ ಉರುಳು’ (1957) ಎಂಬ ಕಾದಂಬರಿ ಆ ಕಾಲದಲ್ಲಿ ಬಹಳ ಪ್ರಸಿದ್ಧವಾಗಿತ್ತು. ಅದರಲ್ಲಿ ಅವರ ಆತ್ಮಕಥಾನಕದಂತಹ ಸನ್ನಿವೇಶಗಳು, ಬಡತನದ ಚಿತ್ರಣ, ಶೋಷಣೆಯ ಚಿತ್ರಣ ಇವುಗಳು ದಾಖಲಾಗಿವೆ.

ಬದುಕು

ಅಚ್ಯುತ ಗೌಡ ಕಿನ್ನಿಗೋಳಿಯವರ ಹೆಸರಿನಲ್ಲಿರುವ ‘ಗೌಡ’ ಅನ್ನುವುದು ದಕ್ಷಿಣ ಕನ್ನಡದಲ್ಲಿ ಒಕ್ಕಲಿಗ ಸಮುದಾಯದವರಿಗಲ್ಲದೆ ಸಮಗಾರ ಜನಾಂಗದವರಿಗೂ ಇರುವ ಜಾತಿನಾಮ. ಸರಕಾರದ ಅಧಿಸೂಚನೆಯ ಪ್ರಕಾರ ಇದು ಪರಿಶಿಷ್ಟ ಜಾತಿಗೆ ಸೇರುವ ಸಮುದಾಯ. ಅವರ ಆರಾಧ್ಯ ದೇವತೆ ಮಾರಿ ದೇವತೆ. ಅವರಲ್ಲಿ ಮರಾಠಿ ಮತ್ತು ಕನ್ನಡ ಮಾತನಾಡುವ ಕುಟುಂಬಗಳಿವೆ. ಹಾಗಾಗಿ ಈ ಸಮುದಾಯದವರು ಮಹಾರಾಷ್ಟ್ರದಿಂದ ವಲಸೆ ಬಂದಿರಬಹುದೆಂಬ ಅಭಿಪ್ರಾಯವೂ, ವಿಜಯನಗರದಿಂದ ವಲಸೆ ಬಂದಿರಬಹುದೆಂಬ ಇನ್ನೊಂದು ಅಭಿಪ್ರಾಯವೂ ಇದೆ. ಅ.ಗೌ.ಕಿ. ತಮ್ಮ ಸಮುದಾಯವನ್ನು ಪರಿಚಯಿಸುವಂತಹ ಕೃತಿಯೊಂದನ್ನು ಬರೆಯಲು ಅಧ್ಯಯನ ನಡೆಸಿದ್ದರಂತೆ. ಅದು ಪ್ರಕಟವಾಗಿಲ್ಲ; ಹಸ್ತಪ್ರತಿಯೂ ಲಭ್ಯವಿಲ್ಲ. (‘ಹಿರಿಯ ಕವಿ ಅ. ಗೌ. ಕಿನ್ನಿಗೋಳಿ’. ಲೇಖಕರು: ಡಾ. ಕೆ. ಚಿನ್ನಪ್ಪ ಗೌಡ. ಪ್ರಕಾಶಕರು: ಕಾಂತಾವರ ಕನ್ನಡ ಸಂಘ.2009).

ಅ.ಗೌ.ಕಿ.ಯವರ ತಂದೆ ರಂಗನಾಥ ಗೌಡರು ಸಮಗಾರ ವೃತ್ತಿಯನ್ನು ಮಾಡುತ್ತಿದ್ದರು. ಅವರ ತಾಯಿ ಲಿಂಗಮ್ಮ. ಅವರು ಕಿನ್ನಿಗೋಳಿಯ ಪಾಂಪೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೆಯ ತರಗತಿಯವರೆಗೆ ಓದಿ, 1943 ರಲ್ಲಿ ಎಲಿಮೆಂಟರಿ ಟ್ರೈನ್ಡ್‌ ಟೀಚರ್ ಆಗಿ ಶಿಮಂತೂರಿನ ಸೈಂಟ್ ಕ್ಸೇವಿಯರ್ ಎಲಿಮೆಂಟರಿ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದರು. (ಆ ಶಾಲೆಯನ್ನು ನಂತರ ಕ್ರೈಸ್ತ ಆಡಳಿತವರ್ಗದವರು ಬೇರೊಂದು ಆಡಳಿತವರ್ಗಕ್ಕೆ ಬಿಟ್ಟುಕೊಟ್ಟರು; ಆಮೇಲೆ ಅದು ಶಾರದಾ ಪ್ರಾಥಮಿಕ ಶಾಲೆ ಎನಿಸಿಕೊಂಡಿತ್ತು). ಅದೇ ವರ್ಷ ಅಂದರೆ, 1943 ರಲ್ಲಿ ಅಚ್ಯುತ ಗೌಡರು ಲಕ್ಷ್ಮೀ ಎಂಬವರನ್ನು ಮದುವೆಯಾದರು. ಅವರಿಗೆ ನಾಲ್ವರು ಮಕ್ಕಳು: ಇಂದಿರಾ, ವಿನಯಪಾಲ, ಜಯಂತಿ ಮತ್ತು ವಿಜಯ.

ಸಂಸಾರದೊಳಗಿನ ಸಮಸ್ಯೆಗಳು ಅವರನ್ನು ಸಾಕಷ್ಟು ಬಾಧಿಸಿದ್ದವು. ಅ.ಗೌ.ಕಿ. ಅವರು ತಂದೆ ತಾಯಿ ಮತ್ತು ಅಕ್ಕನ ಸಂಸಾರ ಎಲ್ಲರೂ ಒಟ್ಟಿಗೆ ವಾಸಿಸುತ್ತಿದ್ದ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಆದರೆ ಅವರ ತಾಯಿ ಸೊಸೆಗೆ (ಲಕ್ಷ್ಮಿಯವರಿಗೆ) ಮಾನಸಿಕ ಹಿಂಸೆ ಕೊಟ್ಟು ದಬ್ಬಾಳಿಕೆ ಮಾಡಿದಾಗ, ಮನೆಯನ್ನು ಅಕ್ಕನ ಸಂಸಾರಕ್ಕೆ ಕೊಟ್ಟಾಗ ಅ.ಗೌ.ಕಿ.ಯವರು ತಮ್ಮ ಸಂಸಾರದೊಂದಿಗೆ ಮನೆಬಿಟ್ಟುಹೋಗಿ, ಸಣ್ಣ ಬಾಡಿಗೆ ಮನೆಯಲ್ಲಿ ಕಷ್ಟದಿಂದ ಬದುಕಬೇಕಾದ ಪ್ರಸಂಗ ಎದುರಾಯಿತು. ಅ.ಗೌ.ಕಿ. ಅವರಿಗೆ ಆರ್ಥಿಕ ಸಮಸ್ಯೆ, ಸಾಂಸಾರಿಕ ತೊಂದರೆಗಳು ಮತ್ತು ಸಾಮಾಜಿಕ ನೆಲೆಯಲ್ಲಿ ಮೇಲುವರ್ಗದವರ ಅಹಂಕಾರ-ಅಸಹನೆಗಳಿಂದಾಗಿ ಅನುಭವಿಸಿದ ಅವಮಾನಗಳು ‘ತಾಪತ್ರಯ’ಗಳಾಗಿ ಕಾಡಿದವು. ಆ ನಡುವೆಯೂ ಅವರು ಸಾಹಿತ್ಯದಲ್ಲಿ ಸಾಂತ್ವನವನ್ನು ಕಂಡುಕೊಂಡು, ಉಳಿಯುವಂತಹ ಕೃತಿಗಳನ್ನು ರಚಿಸಿರುವುದು ಶ್ಲಾಘನೀಯವಾಗಿದೆ. ಅವರು ಕೊನೆಕೊನೆಗೆ ಹೆಚ್ಚುಹೆಚ್ಚು ಅಂತರ್ಮುಖಿಗಳಾಗಿದ್ದರಂತೆ.

ಮನುಷ್ಯನು ಹುಟ್ಟಿದ ಜಾತಿಯನ್ನು ಕಂಡು ಅವನ ಬೆಲೆಕಟ್ಟುವ ಅನಿಷ್ಟ ಪದ್ಧತಿಯನ್ನು ಅ. ಗೌ. ಕಿನ್ನಿಗೋಳಿ ಅವರು ಖಂಡಿಸಿದ್ದಾರೆ, ಅದಕ್ಕೆ ಗುರಿಯಾಗಿದ್ದಾರೆ ಮತ್ತು ನೊಂದುಕೊಂಡಿದ್ದಾರೆ. ದೊಡ್ಡ ವಿದ್ವಾಂಸರಾಗಿದ್ದ ಅವರು ಮೊದಲು ಯಕ್ಷಗಾನ ತಾಳಮದ್ದಳೆಯಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದರು. ಕೆಲವೊಂದು ಕಹಿ ಅನುಭವಗಳ ನಂತರ ಆ ಹವ್ಯಾಸವನ್ನು ತೊರೆದರು. ದೇವಾಲಯಗಳಲ್ಲಿ ಮತ್ತು ಹೊರಗೆ ಧಾರ್ಮಿಕ ಆಚರಣೆಗಳಲ್ಲಿ ನಡೆಯುತ್ತಿದ್ದ ಕೆಲವೊಂದು ಅಪಸವ್ಯಗಳನ್ನು, ಕುತ್ಸಿತ ಮನೋಭಾವಗಳನ್ನು ಅವರು ಖಂಡಿಸುತ್ತಿದ್ದುದರಿಂದ ಅವರು ‘ನಾಸ್ತಿಕ’ ಎಂಬ ಮಾತನ್ನು ಕೇಳಬೇಕಾಯಿತು.

ಅ.ಗೌ.ಕಿ. ಅವರಿಗೆ ಬಾಲ್ಯದಲ್ಲಿ ನಾರಾಯಣ ರಾವ್ ಎಂಬವರು, ಶಿಕ್ಷಕ ತರಬೇತಿಯ ನಂತರ ಗೆಳೆಯರಾದ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರು (ಯಕ್ಷಗಾನ ಛಂದಸ್ಸಿನ ಖ್ಯಾತಿಯ ವಿದ್ವಾಂಸ) ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ‘ಯುಗಪುರುಷ’ ಪತ್ರಿಕೆ ಮತ್ತು ‘ಯುಗಪುರುಷ’ ಪ್ರಕಾಶನದ ಕೊ. ಅ. ಉಡುಪರು ಆತ್ಮೀಯರಾಗಿದ್ದರು. ನಾರಾಯಣ ರಾಯರ ಪ್ರಭಾವದಿಂದ ಅ.ಗೌ.ಕಿ. ಅವರು ಆರೆಸ್ಸೆಸ್ ಸದಸ್ಯರಾಗಿದ್ದರು. 1948 ರಲ್ಲಿ ಕಿನ್ನಿಗೋಳಿಯ ಸಂಘದ ವತಿಯಿಂದ ಬೆಳಗಾವಿಯಲ್ಲಿ ನಡೆದ ಸಭೆಯೊಂದರಲ್ಲಿ ಗಣವೇಷಧಾರಿಯಾಗಿ ಭಾಗವಹಿಸಿದ್ದರು.

“ಅ.ಗೌ.ಕಿ.ಯವರು ಕೂಡಾ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡದ್ದು ಯುಗಪುರುಷ ಪತ್ರಿಕೆಯ ಮೂಲಕವೇ….. ಯುಗಪುರುಷ ಪತ್ರಿಕೆಗೆ ಕನ್ನಡ ಓದುಗರ ಮನ್ನಣೆಯನ್ನೂ ಸಾಹಿತ್ಯದ ಮೌಲ್ಯವನ್ನೂ ತಂದುಕೊಟ್ಟವರಲ್ಲಿ ಅ.ಗೌ.ಕಿ.ಯವರು ಒಬ್ಬರು”, ಎಂದು ಡಾ. ಕೆ. ಚಿನ್ನಪ್ಪ ಗೌಡರು ದಾಖಲಿಸಿದ್ದಾರೆ (2009)

ಯುಗಪುರುಷ

ಇಂದಿಗೂ ತಪ್ಪದೆ ಪ್ರತಿ ತಿಂಗಳೂ ಮಂಗಳೂರು ತಾಲೂಕಿನ ಕಿನ್ನಿಗೋಳಿಯಿಂದ ಪ್ರಕಟವಾಗುತ್ತಿರುವ ಪ್ರಕಟವಾಗುತ್ತಿರುವ ‘ಯುಗಪುರುಷ’ ಮಾಸಪತ್ರಿಕೆ ಪ್ರಾರಂಭವಾದದ್ದು ಉಡುಪಿಯಲ್ಲಿ : 15 – 10 – 1947 ರಂದು. ಒಂದು ಸಂಚಿಕೆಯನ್ನೂ ತಪ್ಪಿಸದೆ ಎಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಿರುವ ಕನ್ನಡ ಪತ್ರಿಕೆ ‘ಯುಗಪುರುಷ.’ ಈಗಿನ ಇದರ ಪ್ರಕಾಶಕ-ಸಂಪಾದಕರು ಕೊಡತ್ತೂರು ಭುವನಾಭಿರಾಮ ಉಡುಪ. ಈ ಪತ್ರಿಕೆಯನ್ನು ಬೆಳೆಸಿದವರು ಅವರ ತಂದೆ ಕೊ. ಅ. ಉಡುಪ (ಕೊಡತ್ತೂರು ಅನಂತಪದ್ಮನಾಭ ಉಡುಪ:1925-1992). ಅವರು ಕಿನ್ನಿಗೋಳಿಯ ಪಾಂಪೆ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಈ ಪತ್ರಿಕೆಯನ್ನು ಪ್ರಾರಂಭಿಸಿದವರು ಮೂವರು ಸಾಹಿತಿ – ಪತ್ರಕರ್ತರು. ಅವರೆಂದರೆ ಕೊಡತ್ತೂರು ಅನಂತಪದ್ಮನಾಭ ಉಡುಪ, ಬನ್ನಂಜೆ ರಾಮಾಚಾರ್ಯ ಮತ್ತು ಎಸ್. ಎಲ್. ಭಟ್ಟರು. ಬನ್ನಂಜೆ ಮತ್ತು ಭಟ್ಟರು ಬೇರೆ ಪತ್ರಿಕೆ ಹೊರಡಿಸಲು ಉದ್ದೇಶಿಸಿ ‘ಯುಗಪುರುಷ’ದ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೊ. ಅ. ಉಡುಪರಿಗೆ ವಹಿಸಿಕೊಟ್ಟರು. ಎಸ್. ಎಲ್. ನಾರಾಯಣ ಭಟ್ಟರು ಉಡುಪಿಯಿಂದ ‘ರಾಯಭಾರಿ’ ಪತ್ರಿಕೆಯನ್ನು ಹೊರಡಿಸಲಾರಂಭಿಸಿದರು. ಉಡುಪರಿಗೆ ಆಗ (1948) ತಮ್ಮ ಊರಿಗೆ ಸಮೀಪದ ಕಿನ್ನಿಗೋಳಿಯಲ್ಲಿ ಅಧ್ಯಾಪಕ ಹುದ್ದೆ ಸಿಕ್ಕಿದ್ದರಿಂದ ಅವರು ಪತ್ರಿಕೆಯನ್ನು ಕಿನ್ನಿಗೋಳಿಯಿಂದಲೇ ಪ್ರಕಟಿಸಲಾರಂಭಿಸಿದರು. ಉಡುಪರು ತಮ್ಮ ಅಂತ್ಯಕಾಲದವರೆಗೂ (1992) ಅದರ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದರು. ಅವರ ನಂತರ ಅವರ ಪುತ್ರ ಭುವನಾಭಿರಾಮ ಉಡುಪರು ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ. ‘ಸುಧಾ’ ಮತ್ತು ‘ತರಂಗ’ ವಾರಪತ್ರಿಕೆಗಳ ಆಕಾರದಲ್ಲಿ ಇದು ಪ್ರಕಟವಾಗುತ್ತದೆ. ‘ಯುಗಪುರುಷ’ದ ವೈಶಿಷ್ಟ್ಯವೆಂದರೆ ಅದು ಹೊಸ ಲೇಖಕರಿಗೆ ಒಂದು ವೇದಿಕೆ ಒದಗಿಸಿಕೊಡುವುದು. ಸಣ್ಣಕತೆ, ಕವಿತೆ, ಲೇಖನಗಳು, ಜಾನಪದ ಬರಹಗಳು, ಇತಿಹಾಸ ಸಂಶೋಧನೆ ಇತ್ಯಾದಿಗಳು ಈ ಪತ್ರಿಕೆಯಲ್ಲಿ ನಿಯಮಿತವಾಗಿ ಪ್ರಕಟವಾಗುತ್ತವೆ. ‘ಯುಗಪುರುಷ’ದಲ್ಲಿ ಹಿಂದೆ ಪುಸ್ತಕ ಸಮೀಕ್ಷೆಗಳು ಬರುತ್ತಿದ್ದವು. ಎಸ್. ವೆಂಕಟರಾಜರು ಯುಗಪುರುಷಕ್ಕೆ ಪುಸ್ತಕ ವಿಮರ್ಶೆಗಳನ್ನು ಬರೆದುಕೊಡುತ್ತಿದ್ದರು. ಆಮೇಲೆ ವೆಂಕಟರಾಜರು ತಮ್ಮದೇ ಆದ ‘ವೀರಭೂಮಿ’ಯನ್ನು ಪ್ರಾರಂಭಿಸಿದ್ದರಿಂದ ‘ಯುಗಪುರುಷ’ಕ್ಕೆ ಅವರು ಬರೆಯಲು ಸಾಧ್ಯವಾಗಲಿಲ್ಲ. ಆಗ ಅ.ಗೌ.ಕಿನ್ನಿಗೋಳಿ ‘ಯುಗಪುರುಷ’ದಲ್ಲಿ ಪುಸ್ತಕ ವಿಮರ್ಶೆ ಬರೆಯಲು ಪ್ರಾರಂಭಿಸಿದರು. ಈಗ ಪುಸ್ತಕ ವಿಮರ್ಶೆ ಪ್ರಕಟವಾಗುತ್ತಿಲ್ಲ. ಉಳಿದೆಲ್ಲ ಬಗೆಯ ಬರಹಗಳು ಹಿಂದಿನಂತೆಯೆ ಪ್ರಕಟವಾಗುತ್ತಿವೆ. ‘ಯೋಗಕ್ಷೇಮ’ ಎಂಬ ಅಂಕಣದ ಮೂಲಕ ಜಿಲ್ಲೆಯಲ್ಲಿ ನಡೆಯುವ ವಿವಾಹ, ಉಪನಯನ ಮುಂತಾದ ಶುಭಕಾರ್ಯಗಳು ಹಾಗೂ ಗಣ್ಯರ ಮರಣದ ಸುದ್ದಿಗಳನ್ನು ಪ್ರಕಟಿಸುವ ಮೂಲಕ ‘ಯುಗಪುರುಷ’ ಹೊರನಾಡುಗಳಲ್ಲಿರುವ ಜಿಲ್ಲೆಯ ಜನರಿಗೆ ಊರಿನ ಸುದ್ದಿಗಳನ್ನು ತಲುಪಿಸುವ ಮೂಲಕವೂ ಜನಪ್ರಿಯವಾಗಿದೆ. ಪತ್ರಿಕೆಗೆ ಆಮಂತ್ರಣ, ಸೂಚನೆ ನೀಡುವ ಎಲ್ಲ ಕುಟುಂಬಗಳ ಕಾರ್ಯಕ್ರಮಗಳ ಸುದ್ದಿಗಳೂ ಇದರಲ್ಲಿ ಪ್ರಕಟವಾಗುತ್ತವೆ. ಸದಭಿರುಚಿಯ ಕತೆ, ಕವನ, ಮಕ್ಕಳ ಸಾಹಿತ್ಯ, ಜಾನಪದ ವಿಚಾರಗಳು, ಲೇಖನಗಳು ‘ಯುಗಪುರುಷ’ದಲ್ಲಿ ಪ್ರಕಟವಾಗುತ್ತವೆ. ‘ಯುಗಪುರುಷ’ ದೀಪಾವಳಿ ವಿಶೇಷಾಂಕ, ಸ್ವಾತಂತ್ರ್ಯೋತ್ಸವ ಸಂಚಿಕೆ ಇತ್ಯಾದಿ ವಿಶೇಷಾಂಕಗಳನ್ನು ಕೂಡ ಹೊರತರುತ್ತದೆ. ಅ. ಗೌ. ಕಿನ್ನಿಗೋಳಿಯವರ ಹಲವು ಕವಿತೆಗಳು, ಲೇಖನಗಳು, ರೂಪಕಗಳು ‘ಯುಗಪುರುಷ’ದಲ್ಲಿ ಪ್ರಕಟವಾಗಿವೆ. ಅವರು ಉಡುಪರು ಅಧ್ಯಾಪಕರಾಗಿದ್ದ ಸಂಸ್ಥೆಯ ಸಮೀಪದಲ್ಲೇ ಇದ್ದ ಮತ್ತೊಂದು ಹೈಸ್ಕೂಲಿನ ಅಧ್ಯಾಪಕರಾಗಿದ್ದರು; ಜತೆಗೆ ಸಾಹಿತಿಯಾಗಿ ಹೆಸರು ಮಾಡಿದ್ದರು. ಸಮಾನ ಉದ್ಯೋಗ, ಸಮಾನ ಆಸಕ್ತಿಗಳು ಈ ಇಬ್ಬರನ್ನೂ ಮಿತ್ರರನ್ನಾಗಿಸಿತು. ಅಗೌಕಿಯವರು ತಮ್ಮ ಬಿಡುವಿನ ವೇಳೆಯಲ್ಲಿ ‘ಯುಗಪುರುಷ’ದ ಕಛೇರಿಯಲ್ಲಿ ಕುಳಿತು ಪ್ರೂಫ್ ರೀಡಿಂಗ್ ಮಾಡಿಕೊಡುತ್ತಿದ್ದರಲ್ಲದೆ, ಪ್ರಕಟಣೆಗೆ ಬರುತ್ತಿದ್ದ ಬರಹಗಳನ್ನು ತಿದ್ದುತ್ತಿದ್ದರು. ಅ. ಗೌ. ಕಿನ್ನಿಗೋಳಿಯವರ ಬಹುತೇಕ ಬರಹಗಳು ‘ಯುಗಪುರುಷ’ ಪತ್ರಿಕೆಯಲ್ಲಿ ಪ್ರಕಟವಾದವಲ್ಲದೆ, ಅವರ ಕೆಲವು ಪುಸ್ತಕಗಳನ್ನು ‘ಯುಗಪುರುಷ’ವೇ ಪ್ರಕಟಿಸಿದೆ.

ಶಿಕ್ಷಕರಾಗಿ

1943 ರಲ್ಲಿ ಎಲಿಮೆಂಟರಿ ಟ್ರೈನ್ಡ್‌ ಟೀಚರ್ ಆಗಿ ಶಿಮಂತೂರಿನ ಸೈಂಟ್ ಕ್ಸೇವಿಯರ್ ಎಲಿಮೆಂಟರಿ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪ್ರಾರಂಭಿಸಿದ ಅ.ಗೌ.ಕಿ. 1944 ರಲ್ಲಿ ಅದೇ ಆಡಳಿತದ ಕಿನ್ನಿಗೋಳಿಯ ಸೈಂಟ್ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿ ಬಂದರು.
ಖಾಸಗಿಯಾಗಿ ಅಭ್ಯಾಸ ಮಾಡಿ ಮದರಾಸ್ ವಿಶ್ವವಿದ್ಯಾಲಯದ ಕನ್ನಡ ಮತ್ತು ಸಂಸ್ಕೃತ ವಿದ್ವಾನ್ ಪದವಿಯನ್ನು 1949 ರಂದು ಪಡೆದರು. ಹೀಗೆ ಹೈಸ್ಕೂಲು ಅಧ್ಯಾಪಕರಾಗಲು (ಕನ್ನಡ ಪಂಡಿತರು) ಬೇಕಾದ ಅರ್ಹತೆಯನ್ನು ಸಂಪಾದಿಸಿದ ಮೇಲೆ ಅ.ಗೌ.ಕಿ.ಯವರು ಅದೇ ಆಡಳಿತದ ಲಿಟ್ಲ್ ಫ್ಲವರ್ ಗರ್ಲ್ಸ್ ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿ ನೇಮಕಗೊಂಡರು. ಅ.ಗೌ.ಕಿ. 1952 ರಲ್ಲಿ ಖಾಸಗಿಯಾಗಿ ಮೆಟ್ರಿಕ್ಯುಲೇಷನ್ ಪಾಸಾದರು. 1953 ರಲ್ಲಿ ಮತ್ತೊಂದು ಶಿಕ್ಷಕ ತರಬೇತಿಯನ್ನು (ಸೆಕೆಂಡರಿ ಗ್ರೇಡ್ ಟೀಚರ್ ಟ್ರೈನಿಂಗ್) ಪಡೆದು ಬಂದರು.

ಅ.ಗೌ.ಕಿ. ತಮ್ಮ 55 ನೆಯ ವರ್ಷದಲ್ಲಿ ಸೇವೆಯಲ್ಲಿರುವಾಗಲೇ ತೀರಿಕೊಂಡರು. 1976 ರಲ್ಲಿ ಅನಾರೋಗ್ಯದ ಕಾರಣ ಅವರು ದೀರ್ಘ ರಜೆಯಲ್ಲಿದ್ದರು. ಅವರಿಗೆ ರಕ್ತದೊತ್ತಡವಿತ್ತು. 1976 ರಲ್ಲಿ ಸರಕಾರ 58 ವರ್ಷಕ್ಕೆ ನಿವೃತ್ತಿ ಎಂದಿದ್ದುದನ್ನು 55 ಕ್ಕೆ ಇಳಿಸಿತು. ಆಗ ಅಗೌಕಿ ಆಘಾತಕ್ಕೆ ಒಳಗಾದರು. ಮಂಗಳೂರಿಗೆ ಆರೋಗ್ಯ ಪರೀಕ್ಷೆಗೆಂದು ಹೋದವರು ಅಲ್ಲಿಯೇ ಕೊನೆಯುಸಿರೆಳೆದರು.

ಅ.ಗೌ.ಕಿ.ಯವರ ಕಾವ್ಯ

ಅ.ಗೌ. ಕಿನ್ನಿಗೋಳಿಯವರು ಪ್ರಾಥಮಿಕ ಶಾಲೆಯಲ್ಲಿದ್ದಾಗಲೇ ಸಾಹಿತ್ಯಾಸಕ್ತರಾಗಿ ಸಾಕಷ್ಟು ಓದಿಕೊಂಡಿದ್ದರು. ಮತ್ತು ಆಗಲೆ ಬಿಡಿ ಕವಿತೆಗಳನ್ನು ಬರೆದು ಪ್ರಕಟಿಸಿದ್ದರಂತೆ. ಅ.ಗೌ.ಕಿ. ಅವರ ಹೆಚ್ಚಿನ ಬರಹಗಳು ‘ಯುಗಪುರುಷ’ ಪತ್ರಿಕೆಯಲ್ಲಿಯೂ, ಕೃತಿಗಳಾಗಿ ‘ಯುಗಪುರುಷ’ ಪ್ರಕಾಶನದಲ್ಲಿಯೂ ಪ್ರಕಟವಾಗಿವೆ. ಮೇಲೆ ಹೇಳಿದಂತೆ ಅವರ ಕಾವ್ಯ ರಚನೆಯಲ್ಲಿ ಖಂಡಕಾವ್ಯಗಳು ಪ್ರಧಾನವಾಗಿವೆ; ಬಿಡಿ ಕವಿತೆಗಳು ಸಂಕಲನವಾಗದೆ, ಆಸಕ್ತರ ಅಧ್ಯಯನಕ್ಕೆ ಲಭ್ಯವಾಗದೆ ಚರ್ಚೆಗೆ ಒಳಪಟ್ಟಿಲ್ಲ. ಇಲ್ಲಿ ಮೊದಲಿಗೆ ಅವರ ಖಂಡಕಾವ್ಯಗಳ ಪರಿಚಯ ಮಾಡಿಕೊಳ್ಳೋಣ.

ಪುನರ್ಮಿಲನ

1933 ರಲ್ಲಿ ಆಗಿನ ಯುವ ಕವಿ ಕಯ್ಯಾರ ಕಿಞ್ಞಣ್ಣ ರೈಗಳು ಪುತ್ತೂರಿನಲ್ಲಿ ಕಾರಂತರು ನಡೆಸುತ್ತಿದ್ದ ನಾಡಹಬ್ಬದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ‘ಊರ್ಮಿಳಾ’ ಎಂಬ ಕವನವನ್ನು ಓದಿದರು. ಅದನ್ನು ಕೆಳಗೆ ಕೊಡಲಾಗಿದೆ. ಪಂಜೆ, ಕಡೆಂಗೋಡ್ಲು, ಸೇಡಿಯಾಪು, ಉಗ್ರಾಣರಂತಹ ಆಗಲೇ ಹೆಸರು ಮಾಡಿದ್ದ ಕವಿಗಳ ಜತೆಯಲ್ಲಿ ಹದಿಹರೆಯದ ಕವಿ ಕಯ್ಯಾರರ ಕವಿತೆ ಬೇಂದ್ರೆಯವರಿಗೆ ಮೆಚ್ಚಿಗೆಯಾಯಿತು. ಅವರು ಕಯ್ಯಾರ ಅವರಿಂದ ಇನ್ನೊಂದು ಕವಿತೆಯನ್ನು ಓದಿಸಿ, ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಈ ಕವಿತೆಯನ್ನು ಆ ಮೇಲೆ ಕಯ್ಯಾರರ ಕವಿತಾಸಂಕಲನದಲ್ಲಿ ಓದಿದ ಅ. ಗೌ. ಕಿನ್ನಿಗೋಳಿಯವರು ಕಯ್ಯಾರರು ಎತ್ತಿದ ಪ್ರಶ್ನೆಗೆ ಉತ್ತರವೆಂಬಂತೆ ತಮ್ಮ ‘ಪುನರ್ಮಿಲನ’ ಸಣ್ಣಕಾವ್ಯವನ್ನು ಬರೆದರು. ಕಯ್ಯಾರ ಅವರು ತಮ್ಮ ಕವನದಲ್ಲಿ ಆದಿಕವಿ ವಾಲ್ಮೀಕಿಯನ್ನೇ ಪ್ರಶ್ನಿಸಿದ್ದರು – ಊರ್ಮಿಳೆಯ ಅಳಲಿಗೆ ಋಷಿ ಕವಿ ಗಮನ ಕೊಡಲಿಲ್ಲವಲ್ಲ ಎಂದು ಅಸಮಾಧಾನವನ್ನು ಸೂಚಿಸಿದ್ದರು.

ಕರುಳ ಕೊರೆಯುವ ವಿರಹದುರಿಯ ಬರೆದುಬ್ಬಿಸುವ
ಕವಿಯಹುದು ವಾಲ್ಮೀಕಿ! ……….
ಆ ಊರ್ಮಿಳಾದೇವಿಯೊಂದುವೊಂದೇ ಮಾತು!
ಸಹ್ಯವೇದನೆಗಾಗಿ ಸಾಂತ್ವನದ ಸವಿಮಾತು!
ಒಮ್ಮೆ ಕರುಣಾದೃಷ್ಟಿ! ಅಶ್ರುಧಾರಾವೃಷ್ಟಿ!
ಕರೆಸಲಿಲ್ಲಾ? ಕವಿಯು-ಕಠಿನನಲ್ಲಾ?

ಇದು ಕಯ್ಯಾರ ಕಿಞ್ಞಣ್ಣ ರೈಗಳ ಪ್ರಶ್ನೆ (ಕೆಳಗೆ ಕೊಟ್ಟಿರುವ ‘ಊರ್ಮಿಳಾ’ ಕವನದಲ್ಲಿದೆ).

ಬಹುಶಃ ಈ ಘಟನೆಯನ್ನು ಕೇಳಿದ, ಕವನವನ್ನೋದಿದ ಅ. ಗೌ. ಕಿನ್ನಿಗೋಳಿಯವರಿಗೆ ಹಿಂದಿನ ಕಾವ್ಯಗಳಿಗೆ ಹೀಗೆಯೂ ಮುಖಾಮುಖಿಯಾಗಬಹುದು, ಅವುಗಳನ್ನು ಹೊಸ ದೃಷ್ಟಿಕೋನದಿಂದ ನೋಡಬಹುದು ಎಂದು ಹೊಸ ದಾರಿಯೊಂದು ಕಂಡಿರಬಹುದು. ಈ ಕವನದಿಂದ ಪ್ರೇರಿತರಾಗಿ, ‘ಪುನರ್ಮಿಲನ’ ಸಣ್ಣಕಾವ್ಯವನ್ನು ಬರೆದುದಲ್ಲದೆ, ‘ಚಿತಾಗ್ನಿ’ ಎನ್ನುವ ಇನ್ನೊಂದು ಕಾವ್ಯವನ್ನು ಬರೆಯುವಾಗ ತಾವೂ ವ್ಯಾಸರನ್ನು ಪ್ರಶ್ನಿಸುತ್ತಾರೆ:

ವ್ಯಾಸರ್ಷಿ ರಸಋಷಿಯು ಬ್ರಹ್ಮರ್ಷಿಯಾದರೂ
ಮಾದ್ರಿಯಂತ್ಯವನೇಕೊ! ಮರಣವೆಂದೊರೆದರೂ,
ಪ್ರೇಮ ಪುತ್ಥಳಿಗಳನ್ನೊಡೆಯಲೆಳಸಿದ ಮೃತ್ಯು
ಮಡಿಯಿತೆನುವುದು ಯುಕ್ತ!

ಈ ಸಾಲುಗಳು ಕೆಳಗೆ ಕೊಟ್ಟಿರುವ ‘ಚಿತಾಗ್ನಿ’ಯ ಆಯ್ದ ಭಾಗಗಳಲ್ಲಿವೆ. (‘ಮೃತ್ಯು ಮಡಿಯಿತು’ ಎನ್ನುವುದು ಕಡೆಂಗೋಡ್ಲು ಅವರಿಂದ ಪ್ರೇರಿತವಾದ ದೃಷ್ಟಿಕೋನ. ಕಡೆಂಗೋಡ್ಲು ಅವರ ಸಾಲುಗಳನ್ನೂ ಕೆಳಗೆ ಉದ್ಧರಿಸಲಾಗಿದೆ).

ಅ. ಗೌ.ಕಿ. ಅವರ ‘ಪುನರ್ಮಿಲನ’ ಕಥನ ಕವನಕ್ಕೆ ಪ್ರೇರಣೆ ನೀಡಿದ ಕಥನ ಕವನ ಕಯ್ಯಾರ ಕಿಞ್ಞಣ್ಣ ರೈಗಳ ‘ಊರ್ಮಿಳಾ’ ಆ ಕವನ ಹೀಗಿದೆ:

ಊರ್ಮಿಳಾ

ಆದಿಕವಿ ವಾಲ್ಮೀಕಿ ರಾಮಾಯಾಣಾಮೃತದಿ
ಸಾಹಿತ್ಯಸುಮನಸರ ಸೊಗ ಬಡಿಸಲಿಲ್ಲವೆ?
ಸವಿಯುಣಿಸಲಿಲ್ಲವೆ? ನಿಜವೆನ್ನಿ, ಶರಣೆನ್ನಿ !
ಹಿಂದಲ್ಲ ಇಂದಲ್ಲ ಮುಂದಿಗೂ ಎಂದಿಗೂ
ಆ ಕವಿಯೆ ಆದಿಕವಿ; ಅದೆ ಚಿರಂತನ ಕಾವ್ಯ.
ಓ ಭವ್ಯ ಕಾವ್ಯರ್ಷಿ! ಕರುಣೆಯಲಿ ಕಳೆಗೊಂಡ
ಸರಸತಿಯು ತಾನರಸಿ, ನಿನ್ನ ನಾಲಿಗೆ ತುದಿಯ
ತಾನೇರಿ ನಲಿಯುತಿರೆ, ಮಂದಹಾಸವ ಬೀರಿ
ಕಾವ್ಯಸೃಷ್ಟಿಯ ತೋರೆ, ತನ್ನನೇ ತಾ ಮರೆತೆ;
ರಾಮನಾಮಾಮೃತವ ಪುಣ್ಯಪಾವನಕಥೆಯ
ಅಪ್ರತಿಮಸಂಪ್ರತಿಯ ಬರೆಬರೆದು ಹರ್ಷಿಸಿದೆ;
ಹಾಡಿಕೊಂಡಾಡಿಸಿದೆ. ಸಂಸ್ಕೃತದ ಕೃತಿರಚನೆ-
ಯಲಿ ನೀನು ಕಾಳಿದಾಸಗೆ ಗಣ್ಯಗುರುವೆಂದು
ರಸಿಕಲೋಕವೆ ನಿನಗೆ ತಲೆವಾಗುತಿಹುದಯ್ಯ !

ಸಾಗರದಿ ಮುಳುಮುಳುಗಿ ರತ್ನಗಳ ತೆಗೆತೆಗೆದು
ತಿಕ್ಕಿ ತೋರಿಸಬೇಕು, ಚೆಲುವ ಚೆಲ್ಲಿಸಬೇಕು;
ರನ್ನಕಂಟಿಯ ಮಾಡಿ, ನಲ್ಮೆನೀತಿಯ ನೋಡಿ
ಪ್ರೀತಿಗೀತಿಯ ಹಾಡಿ ಕೊರಳಿಗರ್ಪಿಸಬೇಕು !
ಜಗದ ಜೀವನದೊಳಿದು ಪುಣ್ಯ ಪೌರುಷದ ಪಥ,
ಪ್ರಕೃತಿದೇವಿಯ ಸತ್ಯ ಪ್ರೇಮಮಯಪೂರ್ಣರಥ!
ಅಹುದಯ್ಯ! ಇಷ್ಟೆಲ್ಲ ರಸಿಕರಾಜ್ಯದ ಮಾತು-
ಈ ನುಡಿಯ ಕನ್ನಡಿಯೊಳೆನ್ನಮುಖ ಕಾಣುವುದೆ?
ನಾನೋರ್ವನ ರಸಿಕನು; ಸಾಗರದಿ ಮುಳುಗಿರಲು
ಕಸಕಡ್ಡಿಯನು ತಿಳಿದು ತೆಗೆದು ನಾ ತೋರಿದೆನು.
ಅಂತಿರಲಿ, ಆ ಕವಿಯ ಆ ಆದಿಕಾವ್ಯವಹ
ರಮ್ಯ ರಾಮಾಯಣವ ನೀವೆಲ್ಲರೋದಿಹಿರಿ,
ಪದದರ್ಥಭಾವನೆಯ ಸವಿಯ ಬಲು ಸವಿದಿಹಿರಿ
ಆದರವನಕ್ಷಮ್ಯದಪರಾಧ ತಿಳಿದಿದೆಯೇ?

ಇರಬಹುದು – ನಿಮಗೆಲ್ಲ ತಿಳಿದು ಮರೆತಿರಬಹುದು;
‘ನಮಗರಿಯದಿಹ ವಸ್ತು- ಇವಗೆಂತು ಹೊಳೆದತ್ತು
ಎಂದೆನ್ನ ಕೆಣಕುವಿರಿ- ಅದಕಾಗಿ ಬೇಡುತಿಹೆ,
ನಿಮಗೆಲ್ಲ ತಿಳಿದಿತ್ತು- ತಿಳಿದು ಮರೆತೇ ಹೋಯ್ತು;
ಎನಗೆಂದು ಮರೆಯದಿದೆ, ಮನವೆಲ್ಲ ಮರುಗುತಿದೆ;
ಕಡು ಕಠಿಣ ಹೃದಯ ನಾ ಕವಿಯೆಂದು ತೋರುತಿದೆ!
“ಭಾವನೆಯ ಬಿಂಬದಲಿ, ಬಣ್ಣನೆಯ ಬೆಡಗಿನಲಿ,
ಪಾತ್ರ ಪೋಷಣೆಯಲ್ಲಿ ಕೃತಿಚಮತ್ಕೃತಿಯಲ್ಲಿ,
ರಂಜನೆಯ ರಾಗರಸ ರಮಣೀಯ ರೀತಿಯಲಿ
ಅದ್ವಿತೀಯನು ಕವಿಯು-ವಲ್ಮೀಕತನುಭವನು;
ಕ್ರೌಂಚಮಿಥುನದ ಮೇಳನವು ಮುರಿಯೆ, ಬಲು ನೊಂದ
ಸದಯಹೃದಯನ-ಋಷಿಯ-ಕಠಿಣಕವಿಯೆನಬಹುದೆ?
ನಿನ್ನ ಮಾತಿದು ಕಠಿಣ; ಅವನ ಕೃತಿಯಲಿ ಕರುಣ-
ರಸವ ರೂಪಾಂತಿಹುದ ಕಾಣಲಾರೆಯ ಮರುಳ……..’

ಪಿತೃವಾಕ್ಯಪಾಲನೆಗೆ ಶ್ರೀರಾಮ ಸತಿಸಹಿತ
ಕಾನನವನೈದಲ್ಕೆ, ಅಗ್ರಜನನುಸರಿಸಿ
ಹಸಿವು ತೃಷೆ ನಿದ್ರೆಯಾಹಾರಗಳ ದೂರಿರಿಸಿ
ಹಗಲಿರುಳು ಸೋದರನ ಸತ್ಯಸೇವೆಗೆ ತನುವ
ಸವೆದ ತರುಣನ, ಯೋಧ ವರ ವೀರಲಕ್ಷ್ಮಣನ
ಅರಿಯದವರಾರುಂಟು? ಧನ್ಯ ರಾಮಾನುಜನೆ!
ನೈಷ್ಠಿಕ ಬ್ರಹ್ಮಚರ್ಯದಿ ಬೆಂದ ನಿನ್ನೊಡಲ
ಬಿಸಿಯುಸುರು- ವೀರವಿರಹದ ಕಹಳೆಯೂದುತ್ತ-
ಅಂತಃಪುರದ ದೃಢಕವಾಟವನ್ನೊಡೆಯುತ್ತ
ಸಾಕೇತ ನಗರದಲಿ ಆ ಸತಿ ವಿಯೋಗಿನಿಯ
ಆ ಚಿರಂತನಸಹ್ಯ ವಿರಹಿಣಿತಪಸ್ವಿನಿಯ
ಬಳಿ ಸೇರಿ, ನೆಲೆಯೂರಿ ಮೌನ ಮಂತ್ರಿಸುವಂದು-
ವಿರಹದುರುವೇದನೆಯು ಹೆಂಗರುಳ ಕೊರೆಯುವುದ
ನೀನಲ್ಲದನ್ಯರಾರ್ ತಿಳಿದಿಹರು? ಬ್ರಹ್ಮಚಾರಿನ್!

ಕರುಳ ಕೊರೆಯುವ ವಿರಹದುರಿಯ ಬರೆದುಬ್ಬಿಸುವ
ಕವಿಯಹುದು ವಾಲ್ಮೀಕಿ! ಜಾನಕಿಯು ಜಾನಿಸುತ
ರಾಮಗುಣನಾಮದಲಿ ಬಲು ಬೆಂದು ಬಡವಾಗಿ
ಬಸವಳಿದ ಬವಣೆಗಳನೆನಿತು ಬಣ್ಣಿಸಲಿಲ್ಲ?
ಹದಿನಾಲ್ಕು ವರುಷಗಳ ಬಲಂದೂರ ಕಾಡಿನಲಿ
ಕಳೆಯಲ್ಕೆ ಹೊರಹೊರಟ ಸಿರಿಮೊಗದ ನೀರನನು,
ಭೋಗಭಾಗ್ಯದ ಬಂಧನವ ಬಿಸುಟ ಬಂಧುವನು,
ತನ್ನ ಪತಿಯನು, ತರುಣಸುಂದರಸ್ವರೂಪನನು-
ಕಾಡಿಗೋಡುವ ಕಾಲದಲಿ ಕಂಡು ಮನನೊಂದ
ಆ ಊರ್ಮಿಳಾದೇವಿಯೊಂದುವೊಂದೇ ಮಾತು!
ಸಹ್ಯವೇದನೆಗಾಗಿ ಸಾಂತ್ವನದ ಸವಿಮಾತು!
ಒಮ್ಮೆ ಕರುಣಾದೃಷ್ಟಿ! ಅಶ್ರುಧಾರಾವೃಷ್ಟಿ!
ಕರೆಸಲಿಲ್ಲಾ? ಕವಿಯು-ಕಠಿನನಲ್ಲಾ?

ಎಣೆವಕ್ಕಿ ಬೇರಾಗೆ ಅದಕಾಗಿ ಮರುಗಿಹನು,
ಪಕ್ಷಿಹೃದಯದ ಬೇನೆಯರಿತು ಬಲು ಬರೆದವನು,
ಮೂಕದೃಷ್ಟಿಯೊಳಾದರನಿತು ಕರುಣಿಪ ಕವಿಯು,
ಪ್ರೇಮಪಿಂಡದೊಳಿಂತು ಪ್ರೀತಿದೋರುವ ಋಷಿಯು,
ಹಾ ಹಂತ! ಇದನಿಂತು ಮರೆಯಬಹುದೆ ಮಹಾಂತ?
ಕವಿಯು ಋಷಿಯಹುದಯ್ಯ! ಬ್ರಹ್ಮರ್ಷಿ ಇರಬಹುದು!
ಒಳಿತಾಯ್ತು ಆ ಸಿದ್ಧಿ- ಕಂಡ ಕಾವ್ಯ ಸಮಾಧಿ!
ಅದರವನಲಿ ಮನುಷ್ಯನ ಹೃದಯವಿಲ್ಲೇನು?
ಮಾನವನೆ ತಾನಾಗಿ, ಮನುಜರೆದೆ ಬಿರಿದೆದ್ದ
ಸ್ವರ್ಣಸುಂದರಪ್ರೇಮದಾ ಪ್ರವಾಹವ ಮರೆತ!
“ಹದಿನಾಲ್ಕು ವರುಷಗಳು ಆ ಊರ್ಮಿಳೆಯ ಮುಖವ,
ದೀನದಿವ್ಯ ಜ್ಯೋತಿ ಜಗಜಗಿಸುತಿಹ ಪರಿಯ
ಕಾಣುವುದೆ ಅಳವಲ್ಲ! ರವಿಯೇನು? ಕವಿಯೇನು?”

ಓ ಮಾತೆ! ಚಿರತಪಸ್ವಿನಿ ಭಾಗ್ಯಭಾರತಿಯೆ!
ನಿನಗಂದು ನೀರನಿಗೆ ಆ ವೀರವರ್ಯನಿಗೆ
ವನವಾಸದಾಯಾಸ ಸಂಪೂರ್ಣ ಪರಿಹರಿಸೆ
ಮಂಗಳಾರತಿಯೆತ್ತಿ ಸುಮಹೋತ್ಸವದಿ ನಲಿಯೆ
ಚೇತನವದೆಲ್ಲಿಂದ ಬಂತವ್ವ? ಆ ಚೆಲುವ
ಚೆನ್ನಿಗನ ಕಂಡೆಯಾ? ವಿದ್ಯುದ್ವಿಲಾಸದಲಿ
ಚೈತನ್ಯವಾಕ್ಷಣದಿ ಚೆಲ್ಲಿ ಚೇತರಿಸಿತೆ?
ಇರಬೇಕು! ಇಂತಲ್ಲದಿನ್ನೆಂತು ಬರಬೇಕು
ಹೇಳಮ್ಮ? ಆಜ್ಞಾತವಾಸದಲಿ ನೀನಿಂತ
ನಿಶ್ಚಲ ನಿರಾತಂಕನಿಷ್ಠೆ ನೆನಪಾಗುತಿದೆ !
ಒಂದೊಂದು ದಿನದಿನವು, ಮುಂದೊಂದು ಕ್ಷಣ ಕ್ಷಣವು,
ನಿನಗೆಷ್ಟು ಕಷ್ಟಯುಗಯುಗವಾಗಿ ಸಾಗಿಲ್ಲ?
ರಸಿಕರಾಜ್ಯದ ರಮಣರಿದಕೆ ಮಂಕಾಗರೆ?
ಅರಸಿಕನು – ನಾನೆಂತು ಬರೆವೆ ಕ್ಷಮಿಸೌ-ತಾಯೆ!
(1933)

ಅ. ಗೌ. ಕಿನ್ನಿಗೋಳಿಯವರ ಸಣ್ಣ ಕಾವ್ಯ ‘ಪುನರ್ಮಿಲನ’ ಹೀಗಿದೆ:

ಪುನರ್ಮಿಲನ

1
ರಾಮಚಂದ್ರನಾಗಮನ ವಾರ್ತೆ ಕೋಸಲದಿ ಹರಡಿಹೋಯ್ತು,
ರಾಮ ರಾಮ ಜಯ ರಾಮನೆಂಬ ಘೋಷಗಳೆ ಸುತ್ತುಮುತ್ತು!
ಮೋದ ವಾರ್ಧಿ ಮೊರೆ ಮೊರೆದು ಕ್ಷೀರ ಸಾಗರದ ಸಮಕೆ ನೊರೆದು,
ನಾಗರಿಕರ ಎದೆ ತುಂಬಿ ಹರಿದು ಕೃತಿ ಧನ್ಯಭಾವ ಬೆರೆದು.

ಮೆಲ್ಲನೆದ್ದು ಕೌಸಲ್ಯೆ ತನ್ನ ಕಣ್ಣೊರಸಿ ತಲೆಯ ಬಾಗಿ,
ಕೈಯ್ಯ ಮುಗಿದು ಕುಲದೈವವನ್ನು ಬೇಡಿದಳು ಕೊನೆಯದಾಗಿ,
ಆ ಸುಮಿತ್ರೆ ಮಂಗಳ ಸುಗಾತ್ರೆ ಲಕ್ಷ್ಮಣನು ಗೈದ ಯಾತ್ರೆ-
ಯನ್ನು ತಾನೆ ಗೈದಂತೆ ಪುಳಕಗೊಂಡೆದ್ದಳಾ ಪವಿತ್ರೆ.

ಕೈಕೆ ತಾನೆಯೋಡೋಡಿ ಮುಗ್ಗರಿಸಿ ನಂದಿಗ್ರಾಮದೆಡೆಗೆ,
ತ್ಯಾಗಯೋಗದಲಿ ರಾಜ್ಯಭೋಗವನು ಕಾಂಬ ಭರತನೆಡೆಗೆ
ಅರುಹಲೆಂದು ಕೊರಳೆತ್ತಿ ಯೆತ್ತಿ ಮಾತಿಲ್ಲವಾಗೆ ಕಡೆಗೆ
ಕೈಯ ಸನ್ನೆಯಲೆ ಅರಿತುಕೊಂಡ ಪರಿವರ್ತನೆಗಳ ಬಗೆಗೆ!

ಮೊದಲು ಬೆಚ್ಚಿ ಮತ್ತೊಮ್ಮೆ ನಾಚಿ ಕೊನೆಗಂತು ತಾನೆ ಮೆಚ್ಚಿ,
ಹೃದಯವಿಂತು ಬದಲಿರುವ ತಾಯ ಕಾಣುತ್ತೆ ಬೊಟ್ಟು ಕಚ್ಚಿ,
‘ರಾಮ ರಾಮ ಜಯ ರಾಮ ರಾಮ ಸಾಕೇತ ರಾಜ್ಯ ರಾಜ”
ಎಂದು ನಲಿದನಾ ಭರತನಂತು ಆ ಬಂಧು ಪ್ರೇಮ-ಬೀಜ.

ನಗರವೀಥಿಯಲಿ ತಳಿರು ತೋರಣಗಳೆದ್ದು ಮುಗಿಲದೆಸೆಗೆ
ತಲೆಯ ನೀಡಿ ಇಣುಕಿದವು, ಕಹಳೆ ಮೊಳಗಿದವು ಗಳಿಗೆ ಗಳಿಗೆ.
ಅಂಗಣಂಗಣದಿ ರಂಗವಲ್ಲಿಗಳು ಕಂಗೊಳುತ್ತಲಿರಲು,
ಮಂಗಳಾಂಗಿಯರು ಕಳಸಗನ್ನಡಿಯ ಹಿಡಿದು ಕಾಯುತಿರಲು,
ಸುಳಿವ ಗಾಳಿಯೋ ಅಳಿಗಳೋಲಿಯೋ ಎಲೆಯ ಮರ್ಮರಗಳೋ
ಸುದ್ದಿಯೊಂದೆ; ಸಾಕೇತವಿಂತು ಸಗ್ಗಕ್ಕೆ ಸಂದಿತೆಲ್ಲೊ!

*****

ಆದರೇನು ಕಂದಿರುವ ಪಾಂಡುರೆಯ ಕಣ್ಣನೀರ ಕೆನ್ನೆ
ಆದಿಯಂತವೇ ಅರಿಯದಂಥ ನಿರ್ಬೋಧದೊಂದು ಚಿಹ್ನೆ!
ಕಂಡು ಕೇಳದಾ ಕೇಳಿ ಕಾಣದಾ ಒಂದೆ ಹೆಣ್ಣು ಜೀವ
ಸಂದಿತೆಲ್ಲಿಗೋ ನೊಂದು ಬೆಂದ ಊರ್ಮಿಳೆಯ ಜೀವ ಭಾವ !

ಕೊಂಬುದನಿಯು, ಬಿರುಭೇರಿನಾದ, ದಾಸಿಯರ ಕಲಕಲಾಟ
ಸಂಭ್ರಮಂಗಳಾ ಸಾಧ್ವಿರತ್ನವನ್ನಲುಗಲಿಲ್ಲ ಕೂಡ!
ನಿನ್ನೆಯಂತೆ ಇಂದೆಲ್ಲವಾಕೆಗೆನೆ ಹೆಚ್ಚು- ಕಡಿಮೆಯಿಲ್ಲ,
ಬದ್ದವಾದ ಹೃದ್ಭಾವವಾಕೆಯನು ಬಿಟ್ಟು ಚಲಿಸಲಿಲ್ಲ.

ಎಲ್ಲರಂತೆ ಹೆಣ್ಣಾಗಿ ಒಂದನೂ ಅರಿಯದಿರುವ ಚೋದ್ಯ
ಹಿಂದೆ ಹಿಂದೆ ಹದಿನಾಲ್ಕು ವರುಷಗಳ ಅಂದಿನಿಂದ ಸಾಧ್ಯ!
ದೇಹವೊಂದೆ ನಿಂತಿರುವುದಂತೆ ಮಾಯೋಗ ಮಾಯೆಯಂತೆ,
ಜೀವ ಭಾವ ಸಂಬದ್ಧವಾಗಿಯೂ ಶಿಲೆಯ ಪುತ್ರಿಯಂತೆ.

ತನ್ನ ಜೀವನೋದ್ಯಾನ ವನದ ಮಧುಮಾಸವನ್ನೇ ಇಂತು
ಶೂನ್ಯಳಾಗಿ ಕಳೆದವಳು ಇಂದು ಸಂಬೋಧಗೊಳುವುದೆಂತು?
ನೋವಿನಲ್ಲಿಯೂ ನೋಯದಿದ್ದ ಹೃದ್ಭಾವವಿರಲಿಕಿಂತು
ಭಾವಜನ್ಮ ಸಂತೋಷವಾರ್ತೆ ಸಲೆ ಸುಖವನೀವುದೆಂತು?

*****

ಅಂದು ರಾಮ ವನವಾಸಕೆಂದು ನಿರ್ಧರಿಸೆ, ತನ್ನ ಪತಿಯು
ಸುಂದರಾಂಗ ಲಕ್ಷ್ಮಣನುಮೊಡನೆ ಹೊರಟೆದ್ದು ನಿಂದ ಸ್ಥಿತಿಯೂ
ನೋವನೀಗ ಬದಲಾಗಿ ಊರ್ಮಿಳೆಗೆ ಭಾವವರಳಿ ನಿಂದು
ತನ್ನ ನೋಯ್ವನೆಂದೆಂಬ ನಂಬುಗೆಯ ಹೂವ ಚೆಲ್ಲಿದತ್ತು.

ಪತಿಯ ಜೊತೆಯ ಸೌಭಾಗ್ಯವರಮನೆಯ ಭೋಗಕಿಂತ ಹಿರಿದು,
ಜೊತೆಗೆ ಜಾನಕಿಯ ಜೋಡಿಯಿರಲು ಮತ್ತಾವ ಭಾಗ್ಯವಿಹುದು?
ರಾಮ ಹೊರಟನೆಂದೆಂಬ ವಾರ್ತೆಯಾ ಶೋಕದೊಡನೆ, ತನ್ನ
ಸ್ವಾಮಿ ವಾರ್ತೆಯಿಂ ತುಂಬಿ ಬಂತು ಆನಂದಬಾಷ್ಪ ಕಣ್ಣ!

ಚೆಲುವೆ ಒಲಿದು ನಲಿನಲಿದು ನಾರುಮಡಿಯುಟ್ಟು ಸಿದ್ಧಳಾಗಿ,
ಗೆಲವಿನೆಳೆಯ ಹೂವಳ್ಳಿಯಂತೆ ಏಕಾಂತದಲ್ಲಿ ಹೋಗಿ-
“ನಲ್ಲ ಲಾಲಿಸೈ ಸೊಲ್ಲ ಪಾಲಿಸೈ, ಬರುವೆ ನಿನ್ನ ಬೆನ್ನ”
ಎನಲು ದೊರೆತ ಉತ್ತರವೊ ‘ಕಿಡಿನುಡೀ’ ಆತನೆಂತ ಚೆನ್ನ?

ಅಂಬುಜಾತ ಪುಟದಲ್ಲಿ ಸಿಡಿಲ ಮರಿ ತುಂಬಿ ಹೊಕ್ಕಿದಂತೆ,
ಕಂಬುಕಂಧರೆಯ ಕರ್ಣಪುಟಕೆ ಕಡು ಕಾದ ಸೀಸದಂತೆ,
“ನಿಲ್ಲು ಬಾರದಿರು, ಸೊಲ್ಲ ಮೀರದಿರು, ನಲ್ಲನಾಜ್ಞೆಯಿಹುದು”
ಎನೆ, ಕಠೋರ ನುಡಿ ಬೆಂಕಿಯಿಂದ ಬಾಳ್ವಳ್ಳಿ ಹೋಯ್ತು ಬೆಂದು.

ಕೇಳಿದೊಡನೆ ಅರೆಗಳಿಗೆ ಹೃದಯ ತಂತಾನೆ ಸ್ತಬ್ಧವಾಯ್ತು;
ಆಲಿ ತಿರುಗಿ ಬಲ್ಬವಳಿ ಒಂದು ಕಣ್ಣಿನಿಸು ಕಾಣದಾಯ್ತು;
ಬೇಡಲಿದ್ದ ಬಾಯ್ ಕಾಡಲಿದ್ದ ಕೈಯಂತೆ ತೆರೆದು ನಿಂದು,
ಬೇಡದಾದಳೈ ಕಾಡದಾದಳೈ ತನ್ನ ತಾನೆ ಮರೆದು!

ಇಂದ್ರಿಯಂಗಳಳಿದಿತ್ತು, ಕರಣ ಚೆಲ್ಲಿತ್ತು, ವಿಧಿಯೆ ಕಷ್ಟ!
ನಿಂದಳಂತೆ; ಲಕ್ಷ್ಮಣನು ಬೆಂದಿರುಹಿ ಮುಂದೆ ನಡೆದೆ ಬಿಟ್ಟ !
ಅಂದಿಗಿಂದು ಹದಿನಾಲ್ಕು ವತ್ಸರವೆ ಕಳೆಯಲೊಲ್ಲವೇಕೆ-
ಯುಗ ಯುಗಂಗಳೇ ಉರುಳಿ ಹೋದರೂ ಅರಿವುದೆಂತು ಆಕೆ?

ನೆಗೆದು ನಿಂದ ನರ, ಯಾಚಿಸಿದ್ದ ಕರ, ಹೆದರಿದಾಗ ಹಿಂಗಿ
ಹಿಂದೆ ಸರಿದು ನಸು ಬಾಗಿ ಬೇಡಿದಾ ದೀನ ಭಾವ ಭಂಗಿ,
ಕೆದರು ಕೇಶ, ಬಲ್ಬೆದರುಗಣ್ಣು, ತಾನುಟ್ಟ ನಾರ ಸೀರೆ,
ಅಂದು-ಇಂದು ಅಂತರವೆ ಇಲ್ಲ ಕಣ್ಣೀರ ಕೋಡಿ ಧಾರೆ.

2

ನಗರದಲ್ಲಿ ‘ಶ್ರೀರಾಮ ಜಾನಕೀ ರಾಮ’ ಎನುತ ಜನರು
ಬಗೆಯ ಬಗೆಯ ಸ್ತೋತ್ರಂಗಳೆಸಗಿ ತಾವಿದಿರುಗೊಳ್ಳುತಿರಲು,
ರಾಮ ನಡೆದ ಹುಡಿಯಲ್ಲಿ ಭರತ ಹೊರಳಾಡಿ ಬರುತಲಿರಲು,
ಬಂಧು ಜನರು, ಪುರಜನರು ಬೇರೆಬೇರಾಗಿ ನಲಿಯುತಿಹರು.

ಆದರೇನು? ಲಕ್ಷ್ಮಣನ ಹೃದಯಕಿಂತೇಕೆ ಮರುಕ ಶೋಕ?
ವೇದನೆಯನು ತಾಂ ತಾಳದಾದ, ಮಾತಿಲ್ಲವಾಗಿ ಮೂಕ!
ತಾಯಿಯರನು ತಮ್ಮಂದಿರನ್ನು ಇನ್ನುಳಿದ ಬಂಧುಗಳನು
ಕಂಡನಾದರೂ ಅರಸುತೇನನೋ ಸುತ್ತುತಿತ್ತು ಕಣ್ಣು.

ಎಲ್ಲಿ ತನ್ನನಪ್ಪಿದ್ದು ಹರಡಬಂದಿದ್ದ ಬಾಳ ಬಳ್ಳಿ?
ತನ್ನ ನೆಚ್ಚಿಕೆಯ ಪ್ರಾಣಪದಕವಿಂದೆಲ್ಲಿ? ಎಲ್ಲಿ? ಎಲ್ಲಿ?
ಎಣಿಸುತಿಂತು ಹುಚ್ಚೆದ್ದು ಮನವು ಉದ್ವಿಗ್ನವಾಗಿ ಹೋಯ್ತು!
ಕನಸಿನಂತೆ ತಾನಂದು ಕೊಟ್ಟ ಕಟ್ಟಾಜ್ಞೆ ನೆನಪು ಬಂತು.

ಅಂದಿನಾಕೆಯಾ ದೀನ ಯಾಚನೆಯ ಚಿತ್ರ ಕಾಣುತಿತ್ತು.
ಕರುಳ ಕೊರೆವ ಕಡು ಕರುಣೆಯಿಂದು ಕಣ್ಣಲ್ಲಿ ಹರಿದು ಬಂತು.
ನಿಲ್ಲದಾದ ಅರೆಗಳಿಗೆ, ತನ್ನ ತಾನೊಲ್ಲದಾದ, ಕೊನೆಗೆ
ಹಾರಿ ಕೆಳಗೆ ರಥದಿಂದೆ ಓಡಿ ಓಡೋಡಿ ಬಂದ ಮನೆಗೆ.

ಕರೆವ ಕಂಠ ಗದ್ಗದಿತವಾಗಿ ಕರೆಕರೆದು ಕೂಗಿಕೊಂಡ;
ಅರಸಿ ಅರಸಿ ಉಪ್ಪರಿಗೆಯೇರಿ ಕೆಳಗಿಳಿದು ಸುತ್ತಿ ಬಂದ;
ಒಳಗೆ ಒಳಗೆ ಒಳಮನೆಯ ಒಳಗೆ ಮತ್ತೊಮ್ಮೆ ಓಡಿಹೋದ;
ಅಲ್ಲಿ ಆ ಮಹೋನ್ನತಿಯ ಪ್ರೇಮಯೋಗಿನಿಯ ಕಂಡು ನಿಂದ!

ಬಾಚಿ ತಬ್ಬಿ ತಕ್ಕಯಿಸಿ ತಲೆಯ ಸವಸವರಿ, ಕಣ್ಣನೊರಸಿ, `
ಜಾರಿ ಹೋದ ನರುನಾರುಮಡಿಯ ಸಲೆ ತಾನೆ ಪರಿಯಗೊಳಿಸಿ
“ನನ್ನ ಚಿನ್ನ – ಓ, ಪ್ರಾಣಪದಕ, ನೀ ಬನ್ನ ಪಟ್ಟೆಯಲ್ಲ!
ಮುನಿಯಬೇಡ, ಕ್ಷಮಿಸೆನ್ನ, ಮುಂದೆ ನಾನಿಂತು ತೊರೆವುದಿಲ್ಲ.”
-ಎನ್ನುತಿರಲು ಕಣ್ಣೆಂಬುದೊಂದು ಕಾಸಾರವಾಗಿ ಹೋಯ್ತು
ತನ್ನ ತಾನೆ ಸಂತೈಸುವಂತೆ “ಅಳಬೇಡ’” ಎಂದುದಾಯ್ತು.

* * *

ಇತ್ತ ಊರ್ಮಿಳೆಗೆ ಸ್ಪರ್ಶದಿಂದ ಸಂಪ್ರಜ್ಞೆ ಮರಳುತಿತ್ತು.
ಹೋದ ಬೋಧ ತಂತಾನೆ ಮರಳಿ ನಸುವಾಗಿ ಅರಳುತಿತ್ತು.
ನಿಮಿಷ ನಿಮಿಷಕೂ ದೇಹವರಳಿ ಸಂಜ್ಞೆಯನು ತಾಳುತಿತ್ತು.
ಬಿಟ್ಟ ಕಣ್ಣ ಆ ನಟ್ಟ ನೋಟವಿನ್ನೇನೊ ಹೇಳುತಿತ್ತು.

ಗುರುತಿಸಿದಳು ಪ್ರಿಯಕರನ ಮೊದಲು, ಮಗುಳಂತೆ ಇಹವ ಮತ್ತೆ!
ಚಿರದ ಪರಿಚಯದ ಮೇಲೆ ನೂತನದ ಗುರುತು ಹತ್ತಿದಂತೆ.
ನಿರ್ವಿಯೋಗದಲಿ ಮಿಲನವೆಂಬುದಕೆ ನವ್ಯ ಭಾವವುಂಟೆ?
ಆದರೀಕೆ ಅರಿವಿಲ್ಲದಾಕೆ ಅಂತೇಕೆ ಅತ್ತಳಂತೆ?

“ಪ್ರಾಣದೇವ ಬಿಡಬೇಡ ಎನ್ನ ಬಿಟ್ಟೋಡಬೇಡ ಕಾಡ
ನಿನ್ನ ಹೊಂದಿರುವ ಎನ್ನ ನಿಂತು ದೂರ ದೂಡಬೇಡ”
ಹಿಂದಿನಂತೆ ಮತ್ತೊಮ್ಮೆ ಗೋಳ್ಗರೆದು ಬೇಡುತಿರಲು ಕಾಂತೆ,
ಸಂದ ಕಾಲದರಿವಿಲ್ಲವೆಂಬುದಕೆ ಸಾಕ್ಷಿ ಬೇಕೆ ಮತ್ತೆ?

“ಹುಚ್ಚು ಹುಡುಗಿ ವನವಾಸ ಕಳೆದು ಬಂದಿಹೆನು ಕಾಣೆ ನಿನ್ನ
ಬೆಚ್ಚು ಬಗೆಯ ಬಿಡು, ನೆಚ್ಚನುಳಿಯದಿರು, ಮುಂದಕಿಲ್ಲ ಬನ್ನ”-
ಎನ್ನುತಿರಲು ಲಕ್ಷ್ಮಣನ ಕರುಳ ಕೂರಲುಗು ತಿವಿಯುತಿತ್ತು.
ಪುಣ್ಯ ಭಾವ ರಸವಾಗಿ ಕಂಗಳಲಿ ತಾನೆ ಹರಿಯುತಿತ್ತು.

“ಹಾಸವೇಕೆ? ಮರೆಮೋಸವೇಕೆ? ಹುಸಿ ಬಾಸೆಯೇಕೆ ನಲ್ಲ?
ಬರುವೆನೆಂದು ನಾನೆನ್ನನಿಂತು ನೀ ಹುಸಿಯುತಿಹುದು ಸಲ್ಲ”-
ಎಂದು ಕಾಲ ಹಿಡಿದುರುಳಿ ಹೊರಳಿ ಮರಮರಳಿ ಕಾಡಿಬೇಡಿ,
ನಿಂದ ಕಾಂತೆಯನ್ನೆಂತು ಸಾಂತ್ವನಂಗೊಳಿಸಬೇಕು ತೀಡಿ?

ಸರ್ವ ಸಂಗ ತೊರೆಯುತ್ತ ಯೋಗದಲಿ ಸಿದ್ಧಿ ಕಂಡ ಋಷಿಗೆ
ನಿಷ್ಟೆಯಾದಿ ನಿಶ್ಚಲ ಸಮಾಧಿಯಲಿ ಕಡಿಮೆಯೇನು ಈಕೆ?
ಎಂಥ ಭಕ್ತಿ, ಅವಳಾತ್ಮ ಶಕ್ತಿ? ಬೆರಗಾಗಿ ಸನಿಹ ಸಾಗಿ,
ಕೈಯ ಜೋಡಿ ತೋಳೆತ್ತಿ “ದೇವಿಯೇ” ಎಂದ ನಮ್ರವಾಗಿ.

ಹೆಜ್ಜೆ ಹೆಜ್ಜೆಯಲಿ ನೆಲವೆ ಹೂವಿನಂತರಳುತರಳುತಿತ್ತು
ಕಣ್ಣ ಕಾಣ್ಕೆಯೋ – ಜನ್ಮ ಜನ್ಮಗಳ ಜೊತೆಯ ಬೇಡುತಿತ್ತು.
ಧನ್ಯಭಾವ ಸಾಗರದಿ ಚಕ್ರವಾಕಂಗಳೀಜುತಿದ್ದು,
ಲೋಕ ಲೋಕವೇ ಬುದ್ಬುದಂಗಳಂತಾಗಿ ನೊರೆಯುತಿತ್ತು.

*****
(1954 ರಲ್ಲಿ ಪ್ರಕಟವಾದ ‘ಯೋಗಲಹರಿ’ಯಲ್ಲಿದೆ. ಅದಕ್ಕಿಂತ ಮುಂಚೆ, ‘ಯುಗಪುರುಷ’ದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು).

ಮೊದಲ ಭಿಕ್ಷುಣಿ

ಇದು ‘ಯೋಗಲಹರಿ’ ಯಲ್ಲಿರುವ ಮೂರು ಖಂಡಕಾವ್ಯಗಳಲ್ಲಿ ಒಂದು. (‘ಪುನರ್ಮಿಲನ’ ಮತ್ತು ‘ಚಿತಾಗ್ನಿ’ ಇನ್ನೆರಡು).

ಮಾಸ್ತಿಯವರ ‘ಯಶೋಧರಾ’ ನಾಟಕವನ್ನು ಓದಿ ಈ ಕಾವ್ಯವನ್ನು ಬರೆದುದಾಗಿ ಅ.ಗೌ.ಕಿ.ಯವರು ದಾಖಲಿಸಿದ್ದಾರೆ. ಸಿದ್ಧಾರ್ಥನು ಬುದ್ಧನಾದ ಬಳಿಕ ತನ್ನ ಹುಟ್ಟೂರಿಗೆ ಬಂದಿದ್ದಾಗ ಯಶೋಧರಾ ದೇವಿಯ ಅಂತಃಪುರಕ್ಕೆ ಹೋಗಿ ಭಿಕ್ಷೆಯನ್ನು ಸ್ವೀಕರಿಸಿದ್ದನಂತೆ. ಅವಳನ್ನು ಅವನು ಮೊದಲ ಭಿಕ್ಷುಣಿಯಾಗಿ ಸ್ವೀಕರಿಸಿದ್ದನಂತೆ (ಭಿಕ್ಷು – ಪುಲ್ಲಿಂಗ; ಭಿಕ್ಷುಣಿ – ಸ್ತ್ರೀಲಿಂಗ). ಈ ಸನ್ನಿವೇಶವೇ ಈ ಕಾವ್ಯದ ವಸ್ತು. ದೇ. ಜವರೇಗೌಡರು ಈ ಕಾವ್ಯವನ್ನು ವಿಮರ್ಶಿಸುತ್ತಾ ಹೀಗೆ ಹೇಳಿದ್ದಾರೆ: “ಶ್ರೀ ಶ್ರೀನಿವಾಸರು ಈ ವಸ್ತುವನ್ನು ಬಳಸಿಕೊಂಡು ಲಲಿತ ಮನೋಹರವಾದ ನಾಟಕವನ್ನು ರಚಿಸಿದ್ದಾರೆ. ಆ ನಾಟಕವನ್ನು ಬಳಸಿಕೊಂಡಿದ್ದರೂ ಆ ಸಂದರ್ಭವನ್ನು ತಾವು ಕಂಡಂತೆ ಕಿನ್ನಿಗೋಳಿ ಈ ಖಂಡಕಾವ್ಯವನ್ನು ರಚಿಸಿರುವುದರಿಂದ ಹಾಲು ಸಕ್ಕರೆ ಸೇರಿ ಹೊಸ ರುಚಿ ಉಂಟಾಗುವಂತೆ ಇದರಲ್ಲಿ ನೂತನ ಶಕ್ತಿ ಸಂಚಾರವಾಗಿದೆಯೆಂದು ಹೇಳಬಹುದು.” (ನೂರೆಂಟು ಪುಸ್ತಕಗಳು).

ಈ ಕಾವ್ಯದ ಆಯ್ದ ಭಾಗಗಳು ಹೀಗಿವೆ:

ನಾರಿಯರು ನಲಿವಲ್ಲಿ ಸಗ್ಗ ತೆರೆಯುವುದಂತೆ !
ಹೆಣ್ಮನವು ನವನೀತ ನಿಜವಾದರೇನದನು
ತಣ್ಣನಿರಿಸಲುಬೇಕು, ಬಿಸಿಯು ನಸುವಾದರೂ
ಕರಗದೆ? ಬಳ್ಳಿಯೆಂಬರು ಕೋಮಲೆಯರನ್ನು;
ಹೊಂದಿದಾಧಾರ ತಪ್ಪಿಸೆ ಸುಡುವ ಬಿಸಿಲಲ್ಲಿ
ಬಾಡದೇ? ಹೆಣ್ಣ ಎದೆಯಾಳವನು ಲಾವಣ್ಯ
ರಸಗೀತವೆಂದರೂ ಒಡೆದ ಸೋರೆಯ ನಾದ
ಬಿರಿಯದೇ? ತಂತಿಯನು ಬಿಗಿದು ಕಟ್ಟಿದರೇನು?
ತಾಳ ತಪ್ಪಿದ ಮೇಲೆ ಮೇಳ ಹೊಂದುವುದೆಂತು?

ಹತ್ತು ವರುಷವೆ ಅಲ್ಲ- ಚಿರವಿಯೋಗದ ಊರಿಗೆ
ಹೊತ್ತಿ ಸೀಕರಿವೋದ ವಪುವಲ್ಲರಿಯ ದೇವಿ
ಕರ್ಮೋಡದೆಡೆಯ ಕಂದಿರುವ ಕೌಮುದಿಯಂತೆ,
ರವಿಯಸ್ತಮಿಸಲು ಬಾಡಿರುವ ತಾವರೆಯಂತೆ,
ಬಿಸಿಲೊಳರೆಬೆಂದ ಮಾಮರದೆಳೆಯ ಚಿಗುರಂತೆ,
ಬಸವಳಿಯುತಿರ್ಕೆಯಲಿ ಬಿದ್ದ ಲಾವುಗೆಯಂತೆ;
ಸುಪ್ಪತ್ತಿಗೆಯ ಚೆಲ್ಲಿ ಬರಿಯ ಮಂಚದ ಮೇಲೆ
ಉಪ್ಪವಡಿಸಿರಲು, ಆನಂದ- ತನ್ನತ್ತೆಯನು
ನೋಡಿ ಸೈರಣೆಯನೀಡಾಡಿದನು ಎನುವಾಗ
ಹೇಳಲಾಗದು ವೆತೆಯ ಕೇಳಲಾಗದು ವಿಧಿಯ!

ಬಿಳಿಚಿ ಬತ್ತಿದ ಕೆನ್ನೆ- ನಿರಿಯ ಗೆರೆಯಾಂತ ಹಣೆ-
ಬೆಂದ ಚೆಂದುಟಿ- ಅರ್ಧ ಮುಚ್ಚಿದಲಸಿದ ಕಣ್ಣು;
ಕಣ್ಣತಳದಲಿ, ಕಾಡಿಗೆಯೆ ಕದಡಿಯಿಳಿದಂತೆ,
ಕದಪುಗನ್ನಡಿ ಕಿಲುಬುಗೊಂಡು ಕರಿದಾದಂತೆ,
ವಿಧುವನಾವರಿಸಿ ಮುಂಬರುವ ಲಾಂಛನದಂತೆ,
ಬಾಳಿಗೇ ಕವಿದ ಕತ್ತಲೆಯ ಪಡಿನೆಳಲಂತೆ
ಕರಿಯ ಛಾಯೆಯು;- ಹಿರಿಯ ಕುಂಕುಮದ ಹಣೆಬೊಟ್ಟು
ಎಣ್ಣೆಗಾಣದ ಕುರುಳು- ವೇಣಿಗೊಳ್ಳದ ಮುಡಿಯು-
ಮುಂಗೈಗೆ ಸಲುವ ಬಳೆ- ಪುಣ್ಯೋದರಕ್ಕಿಳಿದ.
ಮಾಂಗಲ್ಯ! ಮಂಗಲೆಯಭಾಗಿನಿಯೊ? ಯೋಗಿನಿಯೊ?

“ಅತ್ತೆ, ನಾನಾನಂದ ಬಂದಿಹೆನು, ಗುರುದೇವ-
ರಿತ್ತ ಸಂದೇಶವನು ತಂದಿಹೆನು, ದೇವಿಯರು
ಅತ್ತ ಬರಬಹುದಂತೆ, ನೋಡಬಾರದು ಎನುವ
ಕಟ್ಟವರಿಗಿಲ್ಲಂತೆ, ಕಳವಳವು ಬೇಡಂತೆ”-
ಎಂದು ಆನಂದನೆನೆ ಕೇಳಿ ಚಮಕಿತಳಾಗಿ,
ಒಂದರೆಕ್ಷಣಕೆ ಉತ್ಸಾಹಗೊಂಡವಳಾಗಿ,
ಮ್ಲಾನತೆಯ ಮೊಗದಲ್ಲಿ ಮಂದಹಾಸವು ಮೂಡಿ
ದಿಗ್ಗನೆದ್ದಳು; ದೇವಿ ಚೀನಾಂಬರದ ಸೇಲೆ
ಹೊದ್ದುಕೊಂಡಳು; ಕೊನೆಗೆ ಉದ್ವೇಗದಿಂದಳಲ
ಮುಕ್ಕುಳಿಸಿದಂತೆ ಬಿಕ್ಕಳಿಸಿದಳು ಅಕಟಕಟ!

ಮಾಯಕದ ಮಡಿಲೊಳೊರಗುವ ಉಲ್ಕೆಯಂದದಲಿ
ಮಿಂಚಿದುತ್ಸಾಹ ಒಮ್ಮೆಲೆ ಮರೆಗೆ ಸಂದಿತ್ತು.
ಯಾವ ಸರ್ಜರರ ಕ ಇನ್ನಾವ ಶಂಕೆಯೊ? ಹೊದ್ದ
ಸೇಲೆಯನು ತೆಗೆದಿಟ್ಟು, ಧಾರೆ ಧಾರೆಯೆ ಹರಿವ
ಕಣ್ಣೀರಿನೊಡನೆ ಮೇಲುಬ್ಬಸದ ನಿಟ್ಟುಸಿರ
ಭರವ ತಾಳದೆ ದೇವಿ ಕುಸಿದಳೆಂದೆನುವಂತೆ
ಪಲ್ಲಂಗದಲ್ಲುರುಳಿ, ಮೊಗಮುಚ್ಚಿ ಬಿಕ್ಕಳಿಸಿ–
“ಕಂದ ಆನಂದ, ನೀ ಮುಂದಾಗು, ತಡೆದುಬಹೆ’
ಎಂದೊರೆದು ಕಳುಹಿ ತನ್ನೊಳಗೊಳಗೆ ಹಲುಬಿದಳು.

“ಎನ್ನ ಮನದಮ್ಮಳದ ನೆಲೆಯರಿತ ಮಮನಾಥ!
ಕರುಣಾಳು, ದೇವ ಕೈಮುಗಿವೆನಿಲ್ಲಿಂದಲೇ;
ನೊಂದಿಹೆನು ನಿಜ, ತಡೆಯಲಾರೆನೆಂಬುದು ಸಹಜ!
ಎನ್ನಂತೆ ಈ ವಿಯೋಗದ ಕಾಲ ಮನದೊಳೇ
ನೊಂದಿರೋ ಬೆಂದಿರೋ ಸಮತೆಗೊಂಡಿರೊ ತಿಳಿಯೆ!
ಆದರೂ ಒಂದು ನಿಜ, ನಗರಕ್ಕೆತಂದಿಹಿರಿ;
ಸರ್ವರೂ ಕಂಡು ಸುಖಿಸಲಿಯೆಂದು ಬಂದಿಹಿರಿ;
ಸ್ವಾಮಿಯೇ ಸೆಟೆದು ನಿಂದವಳಲ್ಲ– ಮನಮನದ
ಒಳವರಿತಿಹಿರಿ, ‘ದುರಾಗ್ರಹದ ನೆಲೆಯವಳಲ್ಲ’
ಎಂಬುದನು ಕಾಣಿರೇ? ಬರಲಾರೆ ದೊರೆಯೇ!

ತಮಗೆ ಕಾಣುವ ತವಕವಿಲ್ಲಲೇ? ಇನಿತೊಂದು
ಧೃತಿ ಮತಿಯ ದಾರ್ಢ್ರ್ಯತೆಯ ಕಂಠೀರವನ ಕೈಯ
ಹಿಡಿದಾಕೆ ಬೆಳ್ಳೆರಲೆಯಂತೆ ಸೈರಣೆಗೆಟ್ಟು
ಬರಲೆ? ಬಹೆನೇ? ಮಾನವೇ ಪ್ರಭುವೆ, ಸತಿಯರಿಗೆ?
ಬರಬಹುದು ಎಂದಿಹಿರಿ ನಿಜ; ಸಾವಿರದ ಮಧ್ಯೆ
ಎಲ್ಲಿಯೋ ಒಂದು ಮೂಲೆಯ ಮೂಲೆಯಲಿ ನಿಂದು,
ಸಾಗರದಪಾರತೆಯಲೊಂದು ಜಲಕಣದಂತೆ-
ಕಾಣಲೇತಕೆ? ಕಣ್ಣ ಕೀಳಲೇತಕೆ ಚೆನ್ನ?
“ಎಲ್ಲರಂತಲ್ಲೆನ್ನ ಪೂರ್ವಾಶ್ರಮದ ಸತಿಯು’
ಎಂಬ ಕನಿಕರವಿರಲು ತಾವಾಗಿ ಬಾರಿರೇ?

ಕಾದಿರುವೆನಿಲ್ಲಿ ನಿಮಗಾಗಿ ಹರಣವ ಹೊತ್ತು
ಕೇಳಿ ಪರಿಹರಿಸಬೇಕಾದುದೆನಿತೋ ಉಂಟು.
ಲೋಕಕೇ ಗುರುವಾಗಿ ತಡವಿ ತಕ್ಕೈಪವರು
ಎಡವಿ ಪೋಪಿರೆ? ಎನ್ನ ಭಾಗ್ಯವಿನಿತೇ ಎನುವೆ!”
ಎನುವಾಗ ಮರಳಿ ಕಣ್ದುಂಬಿ ಹರಿಯಿತು, ಹೊನ್ನ
ಪಂಜರದ ಶಾರಿಕೆಯು ಶಾಂತಿ ನುಡಿಯಿತು, ಮುಂದೆ
ತೊಳಗುತಿಹ ಚಿತ್ರ ಫಲಕದ ಬಿಂಬಕಳೆವೆತ್ತು
ಅಭಯವಿತ್ರಂತೆ ಕಂಡಿತು; ದೇವಿ-ಒಡನೆದ್ದು
“ಪ್ರಾಣದೇವಾ ಪಾಪಿಯನ್ನುದ್ಧರಿಸು” ಎಂದು
ದೀನಾರ್ತಳಾಗಿ ಮೊರೆಯಿಟ್ಟು ಹಂಬಲಿಸಿದಳು.

*****

ಊರ್ಮಿಳೆಯ ಬದುಕು ಕೂಡ ಹೀಗೆಯೇ ಇದ್ದುದು ಮತ್ತು ಲಕ್ಷ್ಮಣನ ಪುನರಾಗಮನದಿಂದ ಅವಳ ಯೋಗಿನಿಯ ಬದುಕು ಮುಕ್ತಾಯವಾಗಿ ‘ಪುನರ್ಮಿಲನ’ ಸಂಭವಿಸುತ್ತದೆ. ಇಲ್ಲಿ ಯಶೋಧರೆಯೂ ಪತಿಯನ್ನಗಲಿ ಕಾವಿ ವಸನವನ್ನುಟ್ಟು ಯೋಗಿನಿಯಂತೆ ಕಾದಿದ್ದವಳು ನಂತರವೂ ಯೋಗಿನಿಯೇ (ಭಿಕ್ಷುಣಿ) ಆಗಿ ಪತಿಯ ಪಥದಲ್ಲಿ ನಡೆಯುತ್ತಾಳೆ.

ಚಿತಾಗ್ನಿ

ಅ.ಗೌ.ಕಿ. ಅವರು ಕಡೆಂಗೋಡ್ಲು ಅವರಂತೆ (ಕಡೆಂಗೋಡ್ಲು ಅವರ `ಮುರಲೀನಾದ’, `ಹೊನ್ನಿಯ ಮದುವೆ’ ಮತ್ತು `ಮಾದ್ರಿಯ ಚಿತೆ’ ಮೂರರಲ್ಲಿಯೂ ಹೆಣ್ಣೇ ಪ್ರಧಾನ) ಮೂವರು ಸ್ತ್ರೀಯರ (ಊರ್ಮಿಳೆ, ಯಶೋಧರೆ, ಮಾದ್ರಿ) ಅಂತರಂಗದ ತಾಪ, ತಾಕಲಾಟ ಮತ್ತು ಔನ್ನತ್ಯಗಳನ್ನು ಭಾವಪೂರ್ಣವಾಗಿ ಚಿತ್ರಿಸಿದ್ದಾರೆ.

ಈ ಕಾವ್ಯವನ್ನು ಬರೆಯಲು ತಮಗೆ ಕಡೆಂಗೋಡ್ಲು ಅವರ ‘ಮಾದ್ರಿಯ ಚಿತೆ’ ಹೇಗೆ ಪ್ರೇರಣೆ ನೀಡಿದೆ ಎನ್ನುವುದನ್ನು ಅ.ಗೌ.ಕಿ. ಅವರು ಹೀಗೆ ದಾಖಲಿಸಿದ್ದಾರೆ: “ಶ್ರೀ ಕಡೆಂಗೋಡ್ಲು ಶಂಕರ ಭಟ್ಟರ ‘ಮಾದ್ರಿಯ ಚಿತೆ’ಯನ್ನು ನಾನು ಓದಿದಂದಿನಿಂದ ಅದೇ ವಸ್ತುವನ್ನು ಕೇವಲ ಕಥಾತ್ಮಕವಾಗಿ ಘಟನೆಗಳಿಗೆ ಹೆಚ್ಚಿನ ಮಹತ್ತ್ವಕೊಟ್ಟು ವಿವರವಾಗಿ ಚಿತ್ರಿಸಬೇಕೆಂದು ಎಣಿಸಿದ್ದೆ. ತೊಡಗಿಯೂ ತೊಡಗಿದ್ದೆ. ಅದು ಕೊನೆಗೊಳ್ಳುವಾಗ ಚಿತಾಗ್ನಿಯಾಗಿ ಈ ರೂಪಕ್ಕೆ ಬಂತು. ಕಥನರೀತಿಯಲ್ಲಾಗಲೀ, ಸನ್ನಿವೇಶಗಳ ಹೊಂದಿಕೆಯಲ್ಲಾಗಲೀ ಇದು ಮಾದ್ರಿಯ ಚಿತೆಗಿಂತ ತೀರಾ ಭಿನ್ನವಾಗಿರುವುದಾದರೂ ಇದರ ಒಂದನೆಯ ಭಾಗದ ಪಾಂಡುವಿನ ಸ್ವಗತೋಕ್ತಿಯಲ್ಲಿ ಆ ಮೊದಲ ಭಾವದ ನೆರಳು ಅಲ್ಲಲ್ಲಿ ಹಾಯ್ದಿರುವುದನ್ನು ಅವಶ್ಯವಾಗಿ ಗಮನಿಸಬೇಕೆಂದು ಭಿನ್ನವಿಸುವೆ.”

ಕಡೆಂಗೋಡ್ಲು ಶಂಕರ ಭಟ್ಟರ ‘ಮಾದ್ರಿಯ ಚಿತೆ’ಯ ಕೊನೆ ಬಹಳ ಹ್ರಸ್ವವಾಯಿತೆಂಬ ಅಭಿಪ್ರಾಯ ಹೆಚ್ಚಿನ ಓದುಗರಿಗೆ ಉಂಟಾಗುವಂತಿದೆ. ಯಾಕೆಂದರೆ ಪಾಂಡುವಿನ ಮರಣ, ಮಾದ್ರಿಯ ಸಹಗಮನ ಇವುಗಳನ್ನು ಕವಿ ಒಂದೊಂದೇ ಪದ್ಯಗಳಲ್ಲಿ ಹೇಳಿ ಮುಗಿಸುತ್ತಾರೆ. ಅವರ ಗಮನವಿರುವುದು ಕಥೆ ಹೇಳುವುದರಲ್ಲಲ್ಲ, ಪಾಂಡು ಮತ್ತು ಮಾದ್ರಿಯರ ಆತಂಕ, ತುಮುಲ, ಒಳತೋಟಿಗಳನ್ನು ಚಿತ್ರಿಸುವುದರಲ್ಲಿ. ಅವರ ಕಾವ್ಯದ ಹೊಸತನ ಮತ್ತು ಯಶಸ್ಸು ಇದೇ ಆಗಿದೆ.

ಸುಗ್ಗಿಯರಲು ಕುಣಿದು ಬನದಿ
ಚಿಗುರುದುಟಿಯು ನಕ್ಕ ದಿನದಿ
ವಿಶ್ವವೇ ವಸಂತನಡಿಯ ಹಾಸಿನಂತೆ ಹರಡಿತು
ಮರವೆ ಮುಸುಕಿ ದಂಪತಿಗಳು
ಕೂಡೆ-ಜೊಂಪದೊಂದು ಮುಗುಳು
ತೊಟ್ಟು ಕಡಿದು ಜಾರಿದಂತೆ ಗಂಡು ಬಾಳು ಕೆಡೆದುದು
-ಇದು ಪಾಂಡುವಿನ ಮರಣವನ್ನು ಹೇಳುವ ಪದ್ಯ.
ಬಿಗಿದ ಹುಬ್ಬು, ಬಿಟ್ಟ ಕಣ್ಣು,
ತುಟಿಯ ಮಾಸುನಗೆಯ ಚೆನ್ನು,
ಬೊಮ್ಮ ಬರೆದ ರೂಪ ಮೃತ್ಯು ತಿದ್ದಿ ಬರೆದನಾಗಳೆ.
ಅವಳ ತೋಳ ಸೋಂಕಿನಿಂದ
ಅರಸಗಿಂತು ಬಂತು ಚಂದ !
ಆಹ ! ಹೆಣ್ಣ ತೋಳು ಯಮನ ಕಯ್ಯ ಕುಂಚವಾದುದೆ ?
– ಇದು ಅದಕ್ಕೆ ಪೂರಕವಾದ ಇನ್ನೊಂದು ಪದ್ಯ.
ಎಲ್ಲಿ ಕಾಂಬುದಿಂತು ನಲ್ಮೆ?
ಎಲ್ಲಿ ಎದೆಯ ಕೂರ್ಮೆ ಬಲ್ಮೆ?
ಮಾದ್ರಿ ಮಡಿದಳೇನು? ಅವಳ ಕಡಿದ ಮೃತ್ಯು ಮಡಿದುದು.
ಮಡಿಯಲಾರದವಳ ಮೂರ್ತಿ!
ಮಾಸಲಾರದವಳ ಕೀರ್ತಿ!
ಜವನ ಕೈಯ ಸೊಡರ ಬೆಳಗಲವಳ ಚಿತೆಯ ಕೆಂಡವು.

ಇದು ಮಾದ್ರಿಯ ಸಹಗಮನವನ್ನು ಸೂಚಿಸುವ ಪದ್ಯ. ಇದೇ ಆ ಕಾವ್ಯದ ಕೊನೆಯ ಪದ್ಯ. ಅ. ಗೌ. ಕಿನ್ನಿಗೋಳಿಯವರು ಮಾದ್ರಿ ಚಿತೆಯೇರುವುದನ್ನು ವಿಸ್ತಾರವಾಗಿ ಚಿತ್ರಿಸಿದ್ದಾರೆ. ಡಾ. ಚಿನ್ನಪ್ಪ ಗೌಡರು ಈ ಕಾವ್ಯವನ್ನು ಹೀಗೆ ಪರಿಚಯಿಸಿದ್ದಾರೆ: “ ‘ಚಿತಾಗ್ನಿ ಖಂಡಕಾವ್ಯದ ಕೆಲವು ಮುಖ್ಯ ಘಟನೆಗಳು ಇಂತಿವೆ: ವಸಂತಾಗಮನ, ಪಾಂಡುರಾಜನ ಗತಜೀವನದ ಸ್ಮರಣೆ, ಮಾದ್ರಿಯ ಸಿಂಗರದ ಸೊಗಸು, ಅವಳ ಕಿರುದನಿಯ ಮೆಲ್ವಾಡು, ಮೋಹರಾಜ್ಯದ ರಾಣಿ ಮಾದ್ರಿಯು ಪಾಂಡುವಿನ ಪರ್ಣಕುಟೀರದ ಬಳಿಗೆ ಬಂದುದು, ಬೆದರಿ ಬೆವರಿದ ಮಾದ್ರಿಯನ್ನು ಸೆಳೆದು ಎಲೆಮನೆಯೊಳಗೆ ಒಯ್ಯುವುದು, ಪಾಂಡುವಿನ ಉಸಿರಡಗುವುದು, ಮಾದ್ರಿಯ ಗೋಳು, ಕುಂತಿಯು ಮಾದ್ರಿಯನ್ನು ಬೈದು ಭಂಗಿಸುವುದು, ಚಿತೆಯೇರಿ ಸತಿಯಾಗುವ ಮಾದ್ರಿಯ ನಿರ್ಧಾರ, ಪಾಂಡವರ ಸಮ್ಮುಖದಲ್ಲಿ ಮಾದ್ರಿ ಚಿತೆಯೇರುವುದು, ವಸಂತಾಗಮನದ ವರಣನೆ ಮತ್ತು ಮಾದ್ರಿ ಚಿತೆಯೇರುವ ಸನ್ನಿವೇಶ.”

“ಘಟನೆಗಳ ನಿರೂಪಣೆಯ ದೃಷ್ಟಿಯಿಂದ ಇದೊಂದು ಸಮತೂಕದ ಕೃತಿ. ಕೇಂದ್ರ ಉದ್ದೇಶಕ್ಕೆ ಬದ್ಧವಾಗಿ ಘಟನೆಗಳ ನಿರೂಪಣೆ ಮತ್ತು ಸಂಯೋಜನೆಯನ್ನು ಈ ಕೃತಿಯಲ್ಲಿ ಕಾಣಬಹುದು”, ಎಂದು ಡಾ. ಚಿನ್ನಪ್ಪ ಗೌಡರು ಹೇಳಿದ್ದಾರೆ. ಈ ಕಾವ್ಯ ಓದುಗರಿಗೆ ರಸಾನುಭೂತಿ ನೀಡಿ ಯಶಸ್ವಿಯಾಗಿದೆ ಎಂದು ದೇ. ಜವರೇ ಗೌಡರು ಮತ್ತು ಕಯ್ಯಾರ ಕಿಞ್ಞಣ್ಣ ರೈಗಳು ಇದನ್ನು ಶ್ಲಾಘಿಸಿದ್ದಾರೆ.

ಈ ಕಾವ್ಯದ ಕೆಲವು ಆಯ್ದ ಭಾಗಗಳು ಹೀಗಿವೆ:

ಅನಿತರೊಳು ಕುಂತಿ ಸುದ್ದಿಯ ಕೇಳಿ ಬಿದ್ದೆದ್ದು,
ಓಡೋಡುತ ಬಂದು, ನಡೆದುದನು ಮನಗಂಡು,
ಬಾಯ್ಗೊಟ್ಟು ಭೋರೆಂದು ಅತ್ತಲ್ಲಿಯೆ ಕುಳಿತು.
ಕುಂತಿಯನು ಕಂಡೊಡನೆ ಮಾದ್ರಿ ತಾನೆದ್ದೋಡಿ
ಅಕ್ಕನನು ಬಿಗಿದಪ್ಪಿ ಮರಳಿ ಗೋಳಿಟ್ಟುರುಳೆ,
ಮಕ್ಕಳೈವರು ಪಿತನ ಕರೆಕರೆದು ಕೂಗುತಿರೆ,
ಸವತಿತನದಾ ಕಿಚ್ಚು ಭಗಿಲೆಂದು ಹೊತ್ತಿತೆನೆ
ಕುಂತಿ ತಂಗಿಯನಿಂತು ಹಲುಬಿ-ಹೀನೈಸಿದಳು.

“ಎಲೆ ಹೆಣ್ಣೆ, ಶಾಪಸ್ಥನಾದೆನ್ನ ಪತಿಯನ್ನು
ಕಾಡಿ ಕೂಡಲು ಎನಿತು ಕಾಲದಿಂ ಕಾದಿದ್ದೆ?
ಎನ್ನೈದೆತನವ ನಿನ್ನೆದೆಯ ಮೇಲಕ್ಕೊಡೆದೆ!
ಎನಗೆನ್ನ ಕಂದಮ್ಮಗಳಿಗಾರು ಗತಿ, ತಂದೆ?”
ಎಂದು ಮಾತಿನ ಮೊನೆಯ ಮಸೆದಂಬಿನಿಂ ತಿವಿಯೆ
ಮಾದ್ರಿ ಕಣ್ರ್ಣೀರ್ಸುರಿದು ಬಿಕ್ಕಳಿಸಿ ಕೈಜೋಡಿ-
“ಓ ಅಕ್ಕ, ನಡೆದುದರ ಅರಿವಿಲ್ಲದೇ ಬರಿದೆ
ನಿಷ್ಠುರದ ಮಾತಿನಿಂದಿರಿಯದಿರು ಮಾತಾಯೆ!
ಇಲ್ಲಿ ನೀನೇನ ಹೇಳಿದರು ದಕ್ಕುವುದೆಂದು
ಸಲ್ಲದಪವಾದದಿಂ ದೂಷಿಸದಿರೆನ್ನವ್ವ!
ನೀ ವಿಧವೆ ನಿಜವೆನ್ನ ತಾಳಿ ಕಳಚಿಲ್ಲವೇ!
ಎನ್ನ ಕಿರುಗೂಸುಗಳು ತಬ್ಬಲಿಗಳಲ್ಲವೇ?
ಬೇಕೆಂದೆ ಭಾಗ್ಯ ರತ್ನವನೆಸೆಯಬಲ್ಲೆವೇ?
ಹೆತ್ತವ್ವೆಗೆಣೆಯೈಸೆ ನೀನೆನ್ನ ಹಿರಿಯಕ್ಕ,
ನಿನ್ನ ಸನಿಹದೊಳಿದ್ದು ಸೇವೆಗೈಯುವ ಭಾಗ್ಯ
ಕೊನೆಯಾಯ್ತು; ಏಕಾಂಗಿಯಾಗಿಹೆನು, ಪತಿಪಾದ
ಗತಿಯೆ ಸದ್ಗತಿಯೆಂದು ಚಿತೆಯನೇರುವೆನಿಂದು
ಸತಿಹೋಗುವೆನು” ಎಂದು ಕಾಲ ಹಿಡಿದುರುಳಿದಳು.

*****

ಮನವ ಮಥಿಸುವ ಮಹಿಮ ಮೆರೆಗೆ ಸಾರುವೆಯೇಕೆ?
ನನೆಗೋಲ ಕಾಣಿಕೆಯೊಳೆರಗು ಸತಿಯಡಿಗಳಿಗೆ!
ಮಾನ ದಾನವ ಬೇಡಿ ಓಡದಿರೆಲೋ ಹೇಡಿ
ವಿಧಿಯೆ, ಮಸಿ ಲೆಕ್ಕಣಿಕೆಯನು ಪಿಡಿದು ಸಜ್ಜಾಗು,
ಬದಲು ಬರೆಯಿಪಳೀಗ ನಿನ್ನ ಲಿಖಿತವ ತಿದ್ದಿ!
ಮಾಂಗಲ್ಯ ರತ್ನವನು ಕಸಿಯಲೆಳಸಿದ ಮೃತ್ಯು,
ಸತಿಯಾಜ್ಞೆಗೇ ಮಣಿದು ಮತ್ತೊಮ್ಮೆ ಮೈದೋರು,
ಸಂಗಡಿಸಿತೀ ತೊತ್ತು ಗೆಲಸ ಕೊರಳಿಗೆ ಬಿತ್ತು!
ಸೃಷ್ಟಿಯ ಚರಾಚರದ ಸರ್ವಾಂತರಾಳದಲಿ
ಸರಸಾಮೃತದ ರಕ್ತವೆರೆವ ವೈದ್ಯ ವಸಂತ,
ನೋಡ -ಪ್ರೇಮದ ಖಂಡದೊಳಗೆ ಬೆಂಕಿಯ ಕೆಂಡ
ಕತ್ತುತಿದೆ, ಬೆಜ್ಜತನದೀ ಜಂಬ ಬಿಡು, ಹುಂಬ!
ತಪದ ಸಂತಾಪದಗ್ನಿಯ ಸಹಿಸದಲೆ ರೋಸಿ
ಹೆಣ್ಣನಲ್ದೋಳ ಶೈತ್ಯೋಪಚಾರವ ಬಯಸಿ
ಪ್ರಣಯ ವಾರ್ಧಿಯನೀಸಿದಂಥ ಗಿರಿಜಾಕಾಂತ,
ನಿನ್ನ ಧೃತಿಯಲ್ಲಿ ಮಾದ್ರಿಯದೆಲ್ಲಿ? ಮೈಯಾಂತ
ಬೇಟವನೆ-ಕಾಟವೆನೆ ಬಗೆವ, ಕಿಚ್ಚಿಗೆ ನೆಗೆವ
ನೋಟ ನೋಡಲು ನಾಚುತಿರುವೆಯೋ- ಮುಖಮುಚ್ಚು!
ಸೌಂದರ್ಯಸಾರ ಸುಖ ಸಂಪತ್ತಿನಾವಾರ
ನಾಕವೇ? ನಾಕೇಶನಿನ್ನು ಸಾವಿರಕಣ್ಣು
ತೆರೆದು ನೋಡೀ ಸತಿಯ ಧೃತಿಮತಿಯ ಸೌಂದರ್ಯ,
ದಿವ್ಯತೆಯ ಭವ್ಯತೆಯ, ಚಿರಕಾಲ ನವ್ಯತೆಯ!

ಶ್ರೀಗಂಧ ಮೊದಲಾದ ಕಾಷ್ಠಗಳನೊಟ್ಟಿಹರು.
ಬಳಿಯೊಳೇ ನಿಂದಿರ್ದ ಹದಿಬದೆಯ ಮೊಗದಲ್ಲಿ
ಚಲ-ವಿಷಾದದ ರೇಖೆಯಿಲ್ಲ, ನಿರ್ಧರವಿತ್ತು.
ಭಯ-ಉಮ್ಮಳದ ಛಾಯೆಯಿಲ್ಲ, ನೆಮ್ಮದಿಯಿತ್ತು.
ಮಿಂದು ಮಗುಳೊಮ್ಮೆ ಶುಚಿಯಾಗಿ ನಾರ್ಮಡಿಯುಟ್ಟು
ಚಕ್ರವರ್ತಿಗೆ ತುಲಸಿ ನವಮಾಲೆಯನು ತೊಡಿಸಿ,
ಕೈಮುಗಿದು ಬಲವಂದು, ಪಾದಕ್ಕೆ ಪೊಡಮಟ್ಟು,
ಸರ್ವಾಂಗ ಗಂಧ-ಚಂದನದ ಲೆಪ್ಪವ ಪೂಸಿ,
ಕತ್ತುರಿಯ ಬೊಟ್ಟಿಟ್ಟು, ತಾನು ಕುಂಕುಮ ತೊಟ್ಟು,
ಸಿಂಗರಿಸುತವಳು ನೀರಾಜನವ ಬೆಳಗಿದಳು.

ಚಿತೆಯ ಮೇಲಕ್ಕೆ ಹೊಸಕುಶೆಯ ಹಾಸನ ಹಾಸಿ,
ತಳಿರಲರುಗಳ ಚೆಲ್ಲಿ ಸುಖಶಯ್ಯೆಯೆನೆ ಗೈದು;
ತಲೆಯೊತ್ತಿಗೆಂದೆಳೆಯ ಸಿರಿಸದಿಂಬನು ಸಮೆದು;
ಕೆಳಗಿಳಿದು ಮುನಿವಟುಗಳೊಡನೆ ತನ್ನಿನಿಯನನೆ
ಎತ್ತಿ ಒಯ್ದಿರಿಸಿ, ಚಿತೆಹತ್ತಿ ತಾನಣಿಗೊಳಿಸಿ,
ಮತ್ತೊಮ್ಮೆ ಕೆಳಗಿಳಿದು ಅಲರುಗಳ ಸಿಂಪಡಿಸಿ,
ಇಂತು ತನ್ನೆರೆಯಂಗೆ ಅಂತೆ ತನಗೂ ಕೊನೆಯ
ಅಂತ್ಯ ವಿಧಿಗಳ ತಾನೆ ಗೈದು ಪೂರೈಸಿದಳು.

ಕುಂತಿಯೋ-ನಿಬ್ಬೆರಗುಗೊಂಡು, ದಿಙ್ಮೂಢತೆಯ
ಮಂತ್ರಿಸುತ್ತಿರುವಂತೆ ಕಣ್ಮಿಟ್ಟು ಮಿಕಮಿಕನೆ
ನಿಂತು ನೋಡುತ್ತಿಹಳು. ಮಕ್ಕಳೈವರು ಭಯಾ-
ಕ್ರಾಂತರೋ ಭ್ರಾಂತರೋ? ಬಾಯ್ದೆರೆದು ನಿಂದಿಹರು
ಮುನಿವಧುಗಳೆಲ್ಲ ಮಾದ್ರಿಯ ಧೃತಿಗೆ ಮೆಚ್ಚಿದರು.
ಈ ಬಾಳು ಗೋಳೆಂದು ಸುಯ್ಬಿಡುವ ಜೋಗಿಗೂ,
ಮುಪ್ಪೊತ್ತು ಮೀಯುತಾರಾಧಿಪರ್ಚಕನಿಗೂ,
ಅಧಿಕಾರ ಮದಿರೆಯಿಂ ಮತ್ತೇರಿದಾತಂಗು
ಭೀತಿಯೊಂದೇ ಒಂದು; ಮರಣವಾರ್ತೆಗೆ ಬೆದರಿ
ಸಾವ ಮೊದಲೇ ಸತ್ತು ಹುಟ್ಟುತಿರುವರು; ಜವನ
ಕಾಲ ತುಳಿವನಿಂತು ಓಲೈಸುವವರಿಹರೆ?

ಮಾದ್ರಿ ಮತ್ತೊಮ್ಮೆ ಕುಂತಿಯ ಕಾಲಿಗೆರಗಿದಳು.
“ಅಕ್ಕ ನಾನಾಗಿಯೇ ಪತಿಯ ಹತಿಸಿದ ದುಷ್ಟೆ-
ಸೊಕ್ಕಿನಲಿ ಮರುಳು ಮಾಡಿದ ದಿಟ್ಟೆ-ಎನ್ನದೆಯೆ
ಅಕ್ಕರೆಯಿನೆನ್ನ ನೀ ಹರಸಿ ಬೀಳ್ಕೊಡು, ತಾಯೆ!
ನಿನ್ನ ವರಗಳಲೊಂದ ಕರುಣೆಯಿಂದನೆಗಿತ್ತ್ತೆ;
ಬಂಜೆ ಬಸಿರಲ್ಲುಭಯ ಮಕ್ಕಳನು ದಯೆಗೈದೆ;
ನಿನ್ನ ಮಕ್ಕಳ ಹೊರುವ ಪುಣ್ಯವನು ನಾ ಪಡೆದೆ!
ತನುಜರೆನಗಿವರಿಂತು ನಿಜ ನಿಮಿತ್ತಕೆ ಮಾತ್ರ;
ನಿನ್ನವರೆ ಸಾಜದಲಿ, ತಾಯೆ ಕಾಪಾಡಿಕೊಳ್!
ಹೊತ್ತು ಹೆತ್ತುದಕಿನಿತು ಬೇಡಿಕೊಳ್ಳುವೆನಿಂದು,
ಐವರೂ ನಿನ್ನವರು-ನಿನ್ನ ಕರುಳಿನ ತುಂಡು;
ಆವ ಕಾಲಕು ಎನ್ನ ನೆನೆಯುವಂತೆಸಗದಿರು,
ತಬ್ಬಲಿಗಳಾದವರ ತಾಯಾಗಿ ತಕ್ಕೈಸು”
ಎನುತ ಮಕ್ಕಳನೈವರನು ಕರೆದು ಬಿಗಿದಪ್ಪಿ
ಬೇರೆ ಬೇರಾಗಿ ತಬ್ಬಿದಳು! ಮುದ್ದಿಡುವಾಗ
ತಡೆವಿಡಿದ ಶೋಕಪ್ರವಾಹ ತಡಿವೊಡೆದಂತೆ
ಕಣ್ದುಂಬಿ ಹೊನಲಾಗಿ ಹರಿಯುತಿರೆ, ಯಮಳರನು
ತಕ್ಕೈಸೆ ತಾಯ್ತನವು ಪೊರೆಯೇರೆ, ಮೈಬೆವರೆ,
ರುದ್ಧ ಕಂಠದ ಸಿರಗಳೊಗೆಯೆ, ಮಾತನು ಬಿಗಿಯೆ,
ಕುವರರನ್ನೊಪ್ಪಿಸಿದಳೈದೆ ಕುಂತಿಯ ಕೈಗೆ.

ನೋಡಲಾಗದ ನೋಟವಕಟಕಟ! ಎದೆಕರಗಿ
ಮುನಿವಧುಗಳೆಲ್ಲರೂ ಮಲಮಲನೆ ಮರುಗಿದರು.
ಏನು ತೋರಿತೊ! ಕುಂತಿಗೂ- ಅಳ್ಕರುಕ್ಕಿತೋ!
ಭೋರೆಂದು ಗೋಳಿಟ್ಟು ತಂಗಿಯನು ಬಾಚಿದಳು;
ತಬ್ಬಿದಳು; ತಲೆಯ ಮುಂಡಾಡಿ ಕೊಂಡಾಡಿದಳು
“ಬಾ ತಂಗಿ, ಬಾ ಶಾನೆ, ಬಾರೆನ್ನ ಮರಿಯಾನೆ!
ಬಾರೆ ಪುಣ್ಯಶರೀರೆ, ಕರ್ಮನಿಶ್ಚಲೆ ಧೀರೆ!
ದೇವಿ, ಮಾನವಿಯಾದೆ- ನಿಶ್ರೇಯ ಧ್ರುವತಾರೆ.
ಸತಿಯಾಗು, ಮಾಪತಿವ್ರತೆಯಾಗು, ಶಶಿಕುಲದ
ದ್ಯುತಿಯಾಗು ಪುಣ್ಯ ಶೀರ್ಷಿಕೆಯಾಗು, ಭವಭವದ
ಭಾಗ್ಯನಾಯಕಿಯೇ ವರಪ್ರದಾಯಕಿಯಾಗು.

ತಡೆಯಲಾರೆನು ನಿನ್ನ ಬೇಡವೆನಲಾರೆ ನಾ;
ವೈಧವ್ಯವಾಂತು, ಕೊರಡಾದ ಕಾಯವ ಹೊತ್ತು,
ಸತ್ತು ಬಾಳುವ ಎನ್ನ ಜೀವಚ್ಛವಕ್ಕಿಂತು
ಕರ್ತವ್ಯ ಗುರುಭಾರವನು ಹೇರಿದೆಯೆ?-ತಾಯೆ!
ನಿನ್ನ ಸೈಪಿನ ಕವಚ ತಲೆಬೆನ್ನ ಕಾದಿರಲಿ,
ಎನ್ನಾರಯಿಕೆ ಕುವರರಿಗೆ ನೆವದೊಲಾಗಿರಲಿ
ಧನ್ಯೆಯೇ ದಯೆಗೈಯೆ, ಐವರೂ ನಿನ್ನವರೆ;
ಎನ್ನ ಕಠಿನೋಕ್ತಿಯಂ ಕ್ಷಮಿಸಲಾರೆಯ ಮಗಳೆ?
ಕುಂತಿ ಹಲುಬಿದಳಿಂತು ಹರಸಿ ಯಾಚಿಸಿ ನಿಂತು.

ಮಾದ್ರಿ ವಿಧಿಯಂತೆ ಮಕ್ಕಳ ಕೈಯ ಕೊಳ್ಳಿಯಲಿ
ಕಿಚ್ಚನೊಟ್ಟಿಸಿ ಚಿತೆಗೆ ಕೈಮುಗಿದು ಬಲವಂದು-
“ಸರ್ವರೂ ಹರಸಿ ಬೀಳ್ಕೊಡಿರೆನ್ನ”-ಎನುತೆಂದು
ಉರಿಗೊಳ್ಳುತಿಹ ಚಿತಾಗ್ನಿಯ ಪ್ರಾರ್ಥಿಸಿದಳಿಂತು.
“ಓ ಅಗ್ನಿದೇವ, ದಯದೋರಿ ಸ್ವೀಕರಿಸೆನ್ನ;
ನಿನ್ನ ಮುಖದಿಂ ದೇಹಯಜ್ಞ ಗೈಯುವೆನೀಗ
ಬಸಿರ ದೋಹಳದಿಂದ ಅಶ್ವನಿ ಕುಮಾರರನು
ಕೂಡಿರ್ದೆನೊಮ್ಮೆ ವಿಧಿಯಂತೆ ಪತಿಯಾಜ್ಞೆಯಲಿ;
ಕಾಯ ಜನ್ಯವಿದಾದ ಕಲುಷವನು ಕಳೆದೆನ್ನ
ಜೀವಸಾರವ ಚಿತೆಯ ಕೋವೆಯಲಿ ಪುಟವಿಟ್ಟು,
ಯಾಗದಿಂ ಪರಿಶುದ್ಧ ಹವಿಯನೊಯ್ಯುವ ನೀನು
ಶುದ್ಧ ಹೊನ್ನ ಪತಿಯ ಸಾನ್ನಿಧ್ಯಕರ್ಪಿಸೈ”
ಎಂದೇರಿದಳು ಚಿತೆಗೆ

– ಬೇಸಗೆಯ ಬೇಗೆಯಲಿ
ಯೋಷೆಯರು ತವಕದಿಂ ತಂಗೊಳವ ಹೊಗುವಂತೆ,
ಶೋಭನದ ಸತಿ ಸೊಗದ ಸೆಜ್ಜಾರ ಸೇರ್ವಂತೆ,
ಎಣೆವಕ್ಕಿಗಳು ತಮ್ಮ ದಿನದೂಟವನು ಮುಗಿಸಿ
ಇರ್ಕೆಯಲಿ ಸಮೆದ ಪಳ್ಕೆಯಲಿ ಮಿರಮಿಸುವಂತೆ,
ಅರಳುದಾವರೆಯ ಮಧ್ಯದಿ ತನ್ನ ಕಾಂತನನು
ಕಂಡ ಚಕ್ರಾಂಗನಾ ವಧು ನಲಿದು ಬರುವಂತೆ,
ಮೊದಲ ಮಳೆಹನಿಗೆ- ಚಾದಗೆ ಬಯಸಿ ಪೋಪಂತೆ,
ಬಯಲಲ್ಲಿ ಹರಿವ ನದಿ ಸಂಗಮಕ್ಕೆಳೆವಂತೆ,
ಸತ್ಯವನು ಬಳಿವಿಡಿದು ಬೆಂಬಲಿಪ ಶಿವದಂತೆ,
ಕರ್ತವ್ಯ ಕರ್ಮವನ್ನೊಲಿದು ಬಹ ಫಲದಂತೆ;
ಸಂಮೋದ ಸಾನಂದ ಸಂತೃಪ್ತಿಯಲಿ ಮಾದ್ರಿ
ಸಸ್ಮಿತಾನನೆಯಾಗಿ ಸಜಲಾಕ್ಷಿ ತಾನಾಗಿ,
ಸಾಕಾರ ದೇವನಾಗಿಹ ಪತಿಯ ಸನಿಹದಲಿ
ಸಲುಗೆಯಲಿ ಸರಸ ಸಲ್ಲಾಪವಾಡುವ ತೆರದಿ,
ಶವದ ಶಿರವನ್ನೆತ್ತಿ ತೊಡೆಯನೇರಿಸಿಕೊಂಡು;
ಕೈಮುಗಿದು ಕಣ್ಮುಗಿದು, ಧನ್ಯತೆಯೊಳೇ ಬೆರೆದು,
ಪುಣ್ಯಭಾವವ ಮೆರೆದು, ಮೈಮರೆದು ಕುಳಿತಿರಲು,-
ಗೌರಾಂಗಿಯಾ ಧವಳ ಕೀರ್ತಿ ಸುಕೃತಿಗಳಿಂದ
ಅಗ್ನಿಯೇ ಬೆಳಗಿ ಧವಳಿಸಿದಂತೆ, ಕೆಂಚಳಿದ
ಬೊಂಬಾಳ ದೀವಿಗೆ ವಿಸ್ತಾರ ಬೆಳಗಿತ್ತು.
ಕರ್ಬೊಗೆಯ ನಡುವಲ್ಲಿ ಬಿಳಿಗೆರೆಯು ಎಸಳಾಗಿ
ಹಬ್ಬಿಹಸರಲು ಮತ್ತೆ ಕರ್ಬೊಗೆಯ ಬಿಳಿದಾಗೆ
ಮೇಲೇರಿ ಮೇಲೇರಿ ಕಣ್ಣ ಕಾಣ್ಕೆಯ ಮೀರಿ
ಅಕ್ಷೋಭವಹನಂತ ಅತ್ಯಂತತೆಯನೈದೆ,
ಅಗ್ನಿ ಪಾವನವಾಯ್ತು, ಗಂಧವಾಹಕವಂತೆ-
ಶ್ರೀಮಂತ ಗೌರವದ ಭರದಿಂದ ಬೀಸಿತ್ತು.
ಧವಳ ಧೂಮಸ್ತಂಭ ಚಿತೆಯಿನಾಗಸವೇರೆ,
ಕವಿದ ತೂಲಾಭ್ರಾಳಿಯೊಡೆದು ಸುತ್ತಲು ಚೆದರೆ,
ರವಿಯ ಕಿರಣ ವಿಕಿರಣ ಸಪ್ತವರ್ಣಂ ಕ್ರಮಣ
ದಿವದುತ್ತರದ ದಿಕ್ತಟದಿ ಕೂಡಿ ಪಡಿಮೂಡಿ
ಇಂದ್ರಚಾಪವು ಕಂಗೊಳಿಸಿತು ನಿರ್ಜರ ಕಾಂತೆ-
ಯರ ಕಣ್ಣಿನಿಂ ಜಗುಳ್ವ ಬಾಷ್ಪಾಂಬುವೆನುವಂತೆ
ತಳಿದಿತ್ತು ಸಮವೃಷ್ಟಿಯಾಗಿ ತಂದಲ್ಮಳೆಯು.

ವ್ಯಾಸರ್ಷಿ ರಸಋಷಿಯು ಬ್ರಹ್ಮರ್ಷಿಯಾದರೂ
ಮಾದ್ರಿಯಂತ್ಯವನೇಕೊ! ಮರಣವೆಂದೊರೆದರೂ,
ಪ್ರೇಮ ಪುತ್ಥಳಿಗಳನ್ನೊಡೆಯಲೆಳಸಿದ ಮೃತ್ಯು
ಮಡಿಯಿತೆನುವುದು ಯುಕ್ತ! ಅವಳ ನಲ್ಮೆಯ ಕಡಲು
ಸೃಷ್ಟಿಯಂಗಾಂಗದಲಿ ಇಂದಿಗೂ ಮೊರೆಯುತಿದೆ;
ಒಲವಿನೆದೆ ಭಾಂಡದಲಿ ಹಾಲುಕ್ಕಿ ಹರಿಯುತಿದೆ;
ಎಲ್ಲಿ ಈ ಮೃತ್ಯು ಭೂಮಿಯ ವಿಷಮಕುಂಡದಲಿ
ಕ್ರೋಧ ಕಾರ್ಪಣ್ಯ, ರೋಧನಗಳುರಿಗೊಳುವವೋ,
ಎಲ್ಲಿ ಕಣ್ಣೀರು ದಾರಿದ್ರ್ಯ ದೈನ್ಯತೆಗಳಲಿ
ನೊಂದವರ ಎದೆಯಾಳ ಮಸಣವಾಗಿರುವುದೋ,
ಒಂದು ಗಳಿಗೆಯೊಳಲ್ಲಿಯಾದರೂ ಪ್ರೇಮರಸ
ಬಿಂದು ಹರಿಯಲಿ, ಸರ್ವನೋವ ಮರೆಯಲಿ, ಎಂದು
ನಿಂದಿಹಳು ಜನಜನದ ಮನಮನದ ಮೂಲದಲಿ.

ಪ್ರಕೃತಿಯವತಾರವೆ ರೂಪೊಡೆದು ಸೃಷ್ಟಿಯಲಿ
ಪ್ರೇಮ ಪಾಠವನೊರೆವುದಕ್ಕೆ ಈಕೆಯೆ ಸಾಕ್ಷಿ;
ಮಾದ್ರಿ-ಆಹಾ! ನಿರ್ವಿಯೋಗಾದ್ರಿ ಶೃಂಗದಲಿ
ಹಾದಿತೋರುವ ನಿರ್ವಿಕಾರ ದಿವ್ಯಜ್ಯೋತಿ!!
ಸಾಧ್ವಿಯರ ಸಚ್ಚರಿತದಧ್ಯಾಯವಂ ಬೆಳಗೆ
ಆದಿಯಲಿ ಸ್ವರ್ಣಶೀರ್ಷಿಕೆಯವಳ ಚಿತೆಯಗ್ನಿ

*****

ಕ್ಷಾತ್ರ ದರ್ಶನ

‘ಕ್ಷಾತ್ರ ದರ್ಶನ’ ಖಂಡ ಕಾವ್ಯವು ಅ.ಗೌ.ಕಿ. ಅವರು ಪುರಾಣ ಕಥೆಯನ್ನಾಧರಿಸಿ ಮರುಸೃಷ್ಟಿಸಿದ ಮತ್ತೊಂದು ಕಾವ್ಯ. ಜೈಮಿನಿ ಭಾರತ ಕಾವ್ಯ ಮತ್ತು ಕುವೆಂಪು ಅವರ ‘ಚಿತ್ರಾಂಗದಾ’ ಕಾವ್ಯದ ಚಿತ್ರಾಂಗದಾ ಮತ್ತು ಬಭ್ರುವಾಹನರ ಕಥೆ ಮತ್ತು ತ. ರಾ. ಸು. ಅವರ ‘ಜ್ವಾಲೆ’ ಎಂಬ ನಾಟಕದ ಜ್ವಾಲೆ ಪಾತ್ರದ ಕ್ಷಾತ್ರ ವೈಭವಗಳನ್ನು ತಮ್ಮದೇ ಆದ ರೀತಿಯಲ್ಲಿ ಸಂಯೋಜಿಸಿ ಸೃಷ್ಟಿಸಿದ ಹೊಸಬಗೆಯ ಕಾವ್ಯ. ‘ಕ್ಷಾತ್ರ ದರ್ಶನ’ 1367 ಸಾಲುಗಳ, ಎಂಟು ಭಾಗಗಳ (ಭಾಗಗಳನ್ನು ‘ನೋಟ’ ಎಂದು ಕರೆಯಲಾಗಿದೆ) ಮಧ್ಯಮ ಗಾತ್ರದ ಕಾವ್ಯ.
ಮಿಶ್ರಛಂದದಲ್ಲಿದೆ. ಗೋವಿಂದ ಪೈಗಳು ಇದಕ್ಕೆ ಮುನ್ನುಡಿ ಬರೆದಿದ್ದಾರೆ. ಇದರ ಭಾಗಗಳು ಪಠ್ಯ ಪುಸ್ತಕಗಳಲ್ಲಿ ಸೇರುತ್ತಿದ್ದವು. ಮದ್ರಾಸಿನ ಸ್ಕೂಲ್ ಬುಕ್ ಅಂಡ್ ಲಿಟರೇಚರ್ ಸೊಸೈಟಿಯು ಈ ಕಾವ್ಯಕ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಸ್ವಾತಂತ್ರ್ಯೋತ್ತರವಾಗಿ ಪ್ರಕಟವಾದರೂ, ಇದು ಸ್ವಾತಂತ್ರ್ಯ ಹರಣ, ಕ್ಷಾತ್ರ ತೇಜದ ಅಗತ್ಯ ಇತ್ಯಾದಿಗಳ ಬಗ್ಗೆ ಮಾತಾಡುತ್ತದೆ. ಧರ್ಮರಾಜನು ಕುರುಕ್ಷೇತ್ರ ಯುದ್ಧದ ನಂತರ ಅಶ್ವಮೇಧ ಯಾಗ ಮಾಡಲು ಸಂಕಲ್ಪಿಸಿ, ಅರ್ಜುನನ ನೇತೃತ್ವದಲ್ಲಿ ದಿಗ್ವಿಜಯಕ್ಕೆ ಸೈನ್ಯವನ್ನು ಕಳುಹಿಸಿದಾಗ ಕ್ಷಾತ್ರ ತೇಜಸ್ಸನ್ನು ಕಳೆದುಕೊಂಡು ಪೌರುಷಹೀನರಾದ ರಾಜರೆಲ್ಲ ಧೃತಿಗೆಟ್ಟು ಕಪ ಒಪ್ಪಿಸಿದರಂತೆ. ಇದು ಬ್ರಿಟಿಷರಿಗೆ ಶರಣಾಗತರಾದ ನಮ್ಮ ದೇಶೀಯ ರಾಜರನ್ನುದ್ದೇಶಿಸಿ ಹೇಳಿದ ಮಾತೆನ್ನುವುದು ಸ್ಪಷ್ಟ.

“ವೀರತೆಯ ಬರಗಾಲವೆದ್ದ ಭೀಷಣ ಕಾಲ!
ಭೂಭುಜರ ಭುಜ ಬತ್ತಿಹೋದ ಕಾಲ

***

ಮತ್ತೆಲ್ಲಿ ವೀರತೆಯ ನೀರಧಿಯ ತೆರೆಮೊರೆಯು?
….. ಹರಣ ಹಕ್ಕಿಯನೆದೆಯ ಹಂಜರದಿ ಹುದುಗಿಟ್ಟು
ಬಕುತಿ ಬಾಗಿಲನಿಕ್ಕಿ ಹಾರದಂತೆ
ಪದಕೆ ಮಣಿದರು – ಹೊತ್ತ ಮಕುಟವನು ಮಗುಚಿಟ್ಟು
ಅರಸು ಕುರಿಗಳು ಬಿಕ್ಕೆ ಬೇಡಿದಂತೆ!”

ಈ ಕಾವ್ಯದಲ್ಲಿ ಜ್ವಾಲೆಯನ್ನು, ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಶೌರ್ಯವನ್ನು ಮೆರೆದ ದೇಶದ ರಾಣಿಯರ (ಝಾನ್ಸಿಯ ಲಕ್ಷ್ಮೀ ಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಗೆರುಸೊಪ್ಪೆಯ ಚೆನ್ನಭೈರಾದೇವಿ, ಉಳ್ಳಾಲದ ರಾಣಿ ಅಬ್ಬಕ್ಕ ) ಪ್ರತಿನಿಧಿಯಂತೆ ಅ.ಗೌ.ಕಿ.ಯವರು ಚಿತ್ರಿಸಿದ್ದಾರೆ. ಜ್ವಾಲೆಯ ಕುರಿತಾದ ಕೆಲವು ಸಾಲುಗಳು ಹೀಗಿವೆ:

ನೋಟ: 1
14
ಪಾರತಂತ್ರ್ಯದ ಪಾಶವನು ಪುಷ್ಪ ರಸವೆಂದು
ತೋರಿದರೆ ನಂಬಲ್ಕೆ ಹೂ ಹಕ್ಕಿಯೆ?
ಕ್ಷತ್ರತೇಜದ ತೆನೆಯು, ಕೆಚ್ಚುಗಡಲಿನ ರಮೆಯು,
ಅದ್ವಿತೀಯಳು-ಆಕೆಗೆಣೆ ಆಕೆಯೆ!
ಪತಿಯ ಮುಳುಗಿದ ಬೆದರುಗುಪ್ಪೆಯನು ಚೆಲ್ಲಾಡಿ
ಧೃತಿಯಢಾಯುಧವವನ ಕೈಗೆ ಕೊಟ್ಟು,
ಚೆಲುನುಡಿಯ ಚಂದನವ ಪೂಸಿದರೆ, ನುಣುಚಿದನು-
ಭಕ್ತಿಪಂಕಕೆ ಮರಳಿ ಹಾರಿಬಿಟ್ಟು.
15
ಹರಿಭಕ್ತರನು ವಿರೋಧಿಸಲಾರೆನೆಂದೊರೆದು
ಹಲ್ಗಿರಿಯೆ, ತಾಯ್ನಾಡ ಘನತೆಗೆಂದು-
ಹೆತ್ತ ಕರುಳಿನ ತುಂಡುಗಳನು, ಹಾ! ಮಕ್ಕಳನು
ಅಟ್ಟಿದಳು ಕಡಿಕಡಿದು ಮಡಿಯಿರೆಂದು!
ಕಂದರೋ-ಆ ತಾಯ ಪುಣ್ಯಗರ್ಭದ ಶೌರ್ಯ
ಪಿಂಡಗಳು; ಮಿಂಚುಗಳ ಖಂಡದಂತೆ-
ತಂದೆ ಮೆತ್ತಿಸಿಕೊಂಡ ಮೈಯ ಕರ್ದಮವನ್ನು
ತಮ್ಮ ವೀರತೆಯಿಂದ ತೊಳೆದರಂತೆ.
16
“ಮಣಿಯುವುದೆ ಹೇಡಿತನ, ಮುರಿಯುವುದೆ ಸಹಜಗುಣ
ವೆಮ್ಮ ಹುಟ್ಟಿನ ಬೇರುಬಿಟ್ಟ ತಾಣ!”
ಎಂದೊಬ್ಬರೊಬ್ಬರನು ಹುರಿದುಂಬಿ ಹೋರಾಡಿ
ಸಂದರಾ ರಣಯಜ್ಞಕಾಗಿ ಹವನ!
ಕೇಳಿದವಳೀಸುದ್ದಿ ಕಾಳಿಯಾದಳು, ಚಂಡಿ
ಚಾಮುಂಡಿಯೆನೆ ಕನಲುಕೆಂಡ ಕಾರಿ!
ಜ್ವಾಲೆಯೋಡಿದರೆಲ್ಲಿ?-ನೀಲಕೇತನನಲ್ಲಿ
ಕಲಿಮಾಡಿ ಹುರಿಗೊಳಿಸಲೆಂದು ಮರಳಿ.
17
ಸತಿಪುತ್ರರುರಿಸಿದ್ದ ಧೃತಿಯ ನಂದಾದೀಪ-
ವನ್ನೆಡವಿ ಬಿದ್ದೆದ್ದು ನೀಲಕೇತು
ಮೊಗಮುಚ್ಚುವಂತೆ – ಮರೆಹೊಕ್ಕು ಬಂಡಿಯ ಕಪ್ಪ
ಕಾಣಿಕೆಯನೊಪ್ಪಿಸುತ – ಕೈಯ ಮುಗಿದು
ನರನ ಹಿಂಬಾಲಿಸಿನಕಟ ನಿರ್ಲಜ್ಜತನ
ರೂಪೊಡೆದು ನಡೆಯುತಿಹ ಮರುಳಿನಂತೆ,
ಹೊಲಗಾವ ಹುಲ್ಲೊಡಲ ಬೆರ್ಚೆದ್ದು ಬರುವಂತೆ,
ಕುಲದ ಗೌರದ್ಯುತಿಯ ನೆರಳಿನಂತೆ!
18
ನಾಡರಕ್ಷಣೆಗೆ ಮುಡಿಪೆಂದು ತಲೆಯೊಪ್ಪಿಸಿದ
ಮಕ್ಕಳನು ನೆನೆಯುತಸ್ಖಲನವಾಗಿ
ರೋಮ ರೋಮದ ರಂಧ್ರ ರಂಧ್ರದಲಿ ಸೇಡುಕಿಡಿ
ಜ್ವಾಲೆಯಲಿ ಹೊತ್ತಿತುಜ್ವಲನವಾಗಿ!
“ಸ್ವರ್ಗ ಸೇರಿರಿ’- ಎಂದು ಕಣ್ಣೀರನೆರೆದೆರೆದು
ಚಿತೆಗೇರಿಸಿದಳು ಎದೆ ಭಾರವಾಗಿ!
“ಸೇಡು, ಸೇಡೇ ಸೇಡು, ತಣಿಯೆ ನಾಚಿಕೆಗೇಡು’
ಅದಕಾವ ದಾರಿಯಿದೆ ನೇರವಾಗಿ?
19
ಕರುಳಿನುರಿ ಧಗಧಗಿಸೆ, ಮೆಯ್ಗೊಂಡ ಮುಯ್ಯುರಿಸೆ
ಪೂಣ್ಣು ಪಣಹೊತ್ತು ಸಾಗಿದಳು ತಾನು.
ರಾಜಧರ್ಮದ ನಂಬಿಕೆಯನು ಬೆಂಬಿಡದವಳು
ವಿಘ್ನಗಳ ಕಂಡು ಎದೆಯೊಡೆವಳೇನು?
ಸಾಧನೆಯ ಸಾಹಸಕೆ ಆದರ್ಶಸತಿಯಾಕೆ!
ಸೋಲಿಂಗೆ ಹೆದರಿ ಕಾಲ್ಗೆಡುವಳೇನು?
ಏಕಾಂಗಸಾಹಸದ ವೈಖರಿಯ ಕಣೆಯಾಗಿ
ಕೊರಳಿರಿಯದೇ ನರನ ಬಿಡುವಳೇನು?
20
ಸರ್ವಾರ್ಪಣಕೆ ಸಿದ್ದಳಾದ ಚಾಗದ ಮಹಿಮೆ,
ಸಾವನಕ ಸಾಧನೆಯ ಬಿಡದ ಬಲುಮೆ,
ಅಸಹಾಯಳಾಗಿಯೂ ಧೈರ್ಯವಾರದ ಚಿಲುಮೆ,
ಬಿಸಿಗುಂದದಿಹ ಬಿರುಸಿನುಕ್ಕು ಗೈಮೆ-
ಕಾಣಬೇಕೆಲ್ಲಿ?-ಮತ್ತೆಲ್ಲಿ?- ಆ ಜ್ವಾಲೆಯಲಿ.
ನಿಜನಾಮವನ್ವರ್ಥತೆಯ ಕೊಂಡಿತು.
ಅಭಿಮಾನದರ್ಪದಲಿ ಪೊಟ್ಟಳಿಪ ನರನೆದೆಯ
ಘಟವೊಡೆದು ನುಚ್ಚುನೂರಾಗಿ ಹೋಯ್ತು!
21
ವರ್ಷಗಟ್ಟಲೆಯಲ್ಲ, ಮಾಸಗಳು ಬಹಳಲ್ಲ,
ಆರನೆಯ ತಿಂಗಳಲಿ ಪಾರ್ಥನೆದೆಯ
ಹಮ್ಮುಹದ್ದಿನ ಬಿಂಕರೆಕ್ಕೆಯನೆ ಕಡಿದಿಕ್ಕಿ
ಕೆಡವಿದಳು ವೈರಾಗ್ನಿಯಜ್ಞಬಲಿಯ!
‘ಜ್ವಾಲೆ ಆಹಾ! ಜ್ವಾಲೆ, ಅರಿ ಭಯಂಕರೆ ಧೀರೆ,
ಸ್ವಾತಂತ್ರ್ಯ ದೀಪ್ತಿ, ಚೆಲುನಾಡ ರಾಣಿ!’
ಹೇಳಿಸಿದಳಿಂತು ನರ-ನಾರಾಯಣರ, ಮೇಲೆ
ಕೊಂಡಾಡೆ ಶಚಿಯೊಡನೆ ವಜ್ರಪಾಣಿ.

ಮುಂದೆ ಅರ್ಜುನ ತನ್ನ ಮಗ – ಚಿತ್ರಾಂಗದೆಯಲ್ಲಿ ಜನಿಸಿದ ಬಭ್ರುವಾಹನನ ಜತೆಗೆ ಯುದ್ಧ ಮಾಡುವ ಸನ್ನಿವೇಶ ಬರುತ್ತದೆ. ಬಭ್ರುವಾಹನನ ಬಾಣದ ಹೊಡೆತಕ್ಕೆ ಸಿಕ್ಕಿ ಅರ್ಜುನ ಧರೆಗೆ ಉರುಳುತ್ತಾನೆ. ಅವನ ಪ್ರಾಣ ಉಳಿಸಲು ರಕ್ತದಾನದ ಅಗತ್ಯ ಇದೆಯೆಂದು ವೈದರು ಹೇಳುವುದು ಅ. ಗೌ. ಕಿ.ಯವರ ನವೀನ ಕಲ್ಪನೆಯಾಗಿದೆ. ಚಿತ್ರಾಂಗದೆ ಅವನಿಗೆ ರಕ್ತದಾನ ನೀಡಿ ಅವನ ಪ್ರಾಣ ಉಳಿಸುತ್ತಾಳೆ. ಆ ಭಾಗದ ಕೆಲವು ಸಾಲುಗಳು ಹೀಗಿವೆ:

“ದೇವಿ! ನಿಮ್ಮ ಚಾಗದ ಮೈಮೆ
ಹಿರಿದಹುದು! ಆದರೂ ಕೊಡುವನಿತು ಮೈಯಲ್ಲಿ
ಕಸುವಿಲ್ಲ. ತುಂಬಿದೊಡಲಲ್ಲಮ್ಮ ನಿಮ್ಮದಿದು.
ಒಂದು ಹರಣವನುಳಿಸೆ ಇನ್ನೊಂದ ಕಡೆಗಣಿಸೆ-
ವೈದ್ಶ ನೀತಿಯೊಳಿಲ್ಲ” ಎನಲು, ಭಾವೋತ್ಕರದಿ-
“ಮಿಕ್ಕ ಯೋಚನೆ ಬೇಡ ವೈದ್ಯವರ! ಬಲ್ಲೆ ನಾ
ತ್ಕಾಗಕ್ಕೆ ಸಿದ್ಧವಹ ನಿಷ್ಕಾಮ ಬುದ್ಧಿಯೇ
ಯೋಗವೆಂಬುದನು. ಮತ್ತದರ ಪರಿಣಾಮಕ್ಕೆ
ದೇಹಶಕ್ತಿಯ ನೆರವ ಕೇಳ್ದರಿಯೆ! ಸಾಕಿನ್ನು,
ಹಿಳಿಸೆನ್ನ ನೆತ್ತರನು ಉಳಿಸೆನ್ನ ಭಾಗ್ಯವನು.”
ಎಂದ ಚಿತ್ರಾಂಗದೆಗೆ ವಿನಯದಲಿ ಹೇಳಿದನು.
“ತಾಯೆ, ನೀವೆಂದ ನುಡಿ ತತ್ತ್ವ್ವಕ್ಕೆ ಸರಿಯಹುದು.
ಆದರೆಮ್ಮೀ ವೈದ್ಯಕೀಯದಲಿ ಅದು ಗೌಣ!
ದೇಹ ಪ್ರಮಾಣವೇ ಮುಖ್ಯ! ಆದರು ಇಂದು
ಬೇರೆ ದಾರಿಯೆ ಇಲ್ಲ; ದೈವ ಕಾಯಲಿ ನಿಮ್ಮ
ನುಭಯರನ್ನೂ!’” ಎಂದು ಸಮ್ಮತಿಯ ನೀಡಿದನು.

ಅವಳ ಬಲತೋಳ ನೆತ್ತರ ನಾಳವನು ಕಡಿದು
ನರನ ಗಾಯದ ಬೃಹತ್ತಪಧಮನಿಯನು ತೆರೆದು
ವರ ಮೃಣಾಳದ ನಾಳವನು ಪ್ರಣಾಳಿಕೆ ಗೈದು
ಸಂಧಿಸಿದನಹಹ! ಕೈಚಳಕವೇನಮಮ! ಹನಿ
ಬಿಂದು ಚೆಲ್ಲದ ಹಾಗೆ ಹರಿಸಿದನು ನೆತ್ತರನು
ಶಿರಕೆ ಲೆಪ್ಪವ ಪೂಸಿ ಕೆರಳಿಸಿ ಸುಷುಮ್ನೆಯನು.
ಕ್ಷಣಗಳುರುಳಿದವು ನಾಲ್ಕಾರೆಂಟು; ಚಣಚಣಕೆ
ತಣಿವು ತಗ್ಗಿತು ನರನ ಜಡದೇಹ – ದೇವಿಗೂ
ಬಿಸುಪುಗುಂದಿತು ನಿಮಿಷನಿಮಿಷಕ್ಕೆ ಪುಣ್ಯವಪು.
ಮೊಗೆದು ಬರಿದಹ ಬಾವಿಯಂತೆ, ತೀರ್ಥೋದಕವ
ಸುರಿಸುರಿದು ತೆರವಾದ ವರ ಕಮಂಡಲದಂತೆ,
ತೇದಂತೆ ತಾನಾಗಿ ಸವೆವ ಚಂದನದಂತೆ,
ಮುಂಬೆಳಗಿನಲಿ ಚಂದ್ರಕಲೆಯಂತೆ, ಆವಿಯನು
ಕಳುಹಿ ಆರುವ ಸರೋವರದಂತೆ, ತೊಗಟೆ – ಎಲೆ
ಬೇರುಗಳ ಸಹಿತ ಸರ್ವಾಂಗದಾನವ ಕೊಟ್ಟು
ಬಾಡುತಿಹ ಮೂಲಿಕೆಯ ಗಿಡದಂತೆ, ತೀರುತಿಹ
ಎಣ್ಣೆಯಲಿ ಉರಿವ ದೀವಿಗೆಯಂತೆ, ಕುಂದುತಿಹ
ಉತ್ಸಾಹದಲ್ಲಿ ಚೇತನದಂತೆ, ಚಣಚಣಕೆ
ಕಂದುತಿರೆ ಕುಂದುತಿರೆ, ಬಾಡಿ ಬರಿದಾಗುತಿರೆ,
ಮೊಗದಲ್ಲಿ ಮಂದಹಾಸದ ಮಿನುಗು ಮೀರುತಿದೆ.

ಚಿತ್ರಾಂಗದೆಯು ತನ್ನ ರಕ್ತವನ್ನು ಅರ್ಜುನನಿಗೆ ಕೊಟ್ಟು, ತನ್ನ ಪ್ರಾಣವನ್ನು ತ್ಯಾಗ ಮಾಡುತ್ತಾಳೆ. ಅವಳನ್ನು ಚಿತೆಗೆ ಏರಿಸಲು ಸಿದ್ಧತೆ ನಡೆದಾಗ, ತನ್ನ ದೇಶದ ಸ್ವಾತಂತ್ರ್ಯ ಹರಣವಾದುದಕ್ಕೆ ಸೇಡಿನಿಂದ ಉರಿಯುತ್ತಿದ್ದ ನೀಲಧ್ವಜನ ರಾಣಿ ಜ್ವಾಲೆಯು ಅಲ್ಲಿಗೆ ಬರುತ್ತಾಳೆ. ಅರ್ಜುನನ ಮೇಲಿನ ಸೇಡನ್ನು ಬಿಟ್ಟು ತಾನೂ ಚಿತ್ರಾಂಗದೆಯ ಚಿತೆಯನ್ನು ಏರಿ ಪ್ರಾಣತ್ಯಾಗ ಮಾಡುತ್ತಾಳೆ.

ಶಿವಲೇಶ್ಯೆ

ಅ. ಗೌ. ಕಿನ್ನಿಗೋಳಿ ಅವರ ಇನ್ನೊಂದು ಪ್ರಸಿದ್ಧ ಖಂಡಕಾವ್ಯ ‘ಶಿವಲೇಶ್ಯೆ’. ಇದೂ ಮಿಶ್ರಛಂದಸ್ಸಿನಲ್ಲಿದೆ. ಜೋಡುಮಠ ವಾಮನ ಭಟ್ಟರ ‘ದೇಶವೀರ ಶಿವಾಜಿ’ (1948) ಎಂಬ ಕೃತಿಯನ್ನಾಧರಿಸಿ, ಅದರಲ್ಲಿ ನಿರೂಪಿತವಾಗಿರುವ ಶಿವಾಜಿಯ ಹಲವು ಸಾಹಸಗಳಲ್ಲಿ ಒಂದನ್ನು ಆರಿಸಿಕೊಂಡು ಅ.ಗೌ.ಕಿ. ಈ ಖಂಡಕಾವ್ಯವನ್ನು ರಚಿಸಿದ್ದಾರೆ. ಅಫ್ಜಲ್ ಖಾನನು ಶಿವಾಜಿಯನ್ನು ಹಿಡಿದು ತರುವೆನೆಂದು ಪ್ರತಿಜ್ಞೆ ಮಾಡಿ ಬರುತ್ತಾನೆ. ಅಫ್ಜಲ್ ಖಾನನ ಕ್ರೌರ್ಯ, ಶಿವಾಜಿಯ ಉಪಾಯ, ಶಿವಾಜಿಯು ಹೆದರಿದಂತೆ ನಟಿಸಿ, ಖಾನನನ್ನು ಭೇಟಿಯಾದಾಗ ಸೊಂಟದಲ್ಲಿ ಅಡಗಿಸಿಟ್ಟಿದ್ದ ಖಡ್ಗದಲ್ಲಿ ಅವನನ್ನು ಇರಿದು ಸಾಯಿಸುವುದು ಇತ್ಯಾದಿಗಳನ್ನು ಅದ್ಭುತರಮ್ಯವಾಗಿ, ಅಧರ್ಮದ ಮೇಲೆ ಧರ್ಮದ ವಿಜಯವನ್ನಾಗಿ ವರ್ಣಿಸಿದ್ದಾರೆ. ಅ.ಗೌ.ಕಿ.ಯವರ ಶಬ್ದ ಸಂಪತ್ತು, ವರ್ಣನಾ ವೈಖರಿ, ಅನುಪ್ರಾಸಗಳ ಸೊಗಸು, ಉಪಮೆಗಳ ಔಚಿತ್ಯ ಇವುಗಳೆಲ್ಲ ಉನ್ನತ ಮಟ್ಟದಾಗಿವೆ. ಈ ಕಾವ್ಯದ ಒಂದು ಭಾಗ ಹೀಗಿದೆ:

ಕದಿರು: 6
(ಭಾಗ: 2)

ಭೋರ್ಗರೆವ ಸಾಗರದಪಾರ ಜಲರಾಶಿಯಲಿ
ಕಾಣದೆಡೆಯಲ್ಲಿರಲುಬಹುದೆಂದು ಕಲ್ಪಿಸುವ
ದ್ವೀಪವೊಂದನ್ನರಸಿ ತೆಗೆವ ಜೀವನ್ಮರಣ
ಸಾಹಸಾಪಾಯ ಕೋಟಿಯ ಗರ್ಭವನು ಹೊಗುವ
ಭೂಶೋಧಕನು- ಮಿದುಳ ವಿಕೃತಿಯೆನೆ- ನೆಚ್ಚಿಕೆಯ
ನೆಮ್ಮಿನಡೆವನು ಮುಂದೆ ಮುಂದೆ! ಜಸಬೊಬ್ಬುಳಿಗೆ
ಬಾಳ್ವೆಯನೆ ಬೇಳ್ದವಗೆ ಬದಲು ಭಯವಿನ್ನೆಲ್ಲಿ?
ವಿಶ್ವಸಂಪುಟದ ಇತಿಹಾಸದಧ್ಯಾಯದಲಿ
‘ಮಾನವ ಮಹಾತ್ಮೆ’ಯುಪಶೀರ್ಷಿಕೆಯ ಅಡಿಯಲ್ಲಿ
ಏಕೈಕನೆನೆ ತನ್ನ ನಾಮದುಲ್ಲೇಖದಭಿ-
ಮಾನವನು ತಳೆಯುವ ಮಹತ್ವದಾಕಾಂಕ್ಷೆಯಲಿ
ಹುರುಡೊತ್ತಿ, ಹಾಯಿದೋಣಿಯ ಹತ್ತಿ, ಹರಣವನು
ಹುಲ್ಲೆಣಿಸಿ ಜಲಯಾನಕೆಂದು ಮುಂಬರಿಯುವನು!….
ಹರಿಗೋಲು ಕಿರುದೋಣಿಗಳ ಕೊಂಡು ಬೆಂಬಲಕೆ
ಬೆಂತರದ ನೆರಳ ಕಂಡಗಿದ ಬೆಪ್ಪುಗಳಂತೆ,
ಬೆದರೆದೆಯೊಳನುಚರರ ಬಳಗ ಹಿಂಬಾಲಿಪುದು!….
ಆದರೂ ಮುಂದುವರಿದಂತೆ ಕಾಣುವುದೇನು?
ಮೇಲಿಂದ ನೀಲಿಮಾಕಾಶ!…. ಸುತ್ತಲು ಕೆಳಗೆ
ನೀಲ ನೀರಧಿಯ ನಿರವಧಿಯ ವಿಸ್ತಾರದಲಿ

ನಿಸ್ಸೀಮ, ನಿರುಪಮದ ನಿರ್ಫೋಷದಾಭೀಳ
ಹೃದ್ಧೇದನೋತ್ಪಾತ ದೃಶ್ಯಗಳು!…. ಅನುಚರರ,
ಅಂಜಿದೊಡನಾಡಿಗಳ ಬೇಡೆನ್ನುವೊಕ್ಕೊರಲ
ಬೇಡಿಕೆಯ ಕಿವಿಗಿಳಿಸಿ ಶೋಧಕನು ಮುಂಬಯಣ 60
ತಡೆವನೇ? ಸಾಹಸದ ಗರಿಮೆ, ಕೀರ್ತಿಯ ಹಿರಿಮೆ,
ಮನುಜತೆಯ ಮಿಗುವ ಘನಮಹಿಮೆ ಮುಪ್ಪುರಿಯಾಗಿ
ಹೆಣೆದು ಹೆಕ್ಕಳಿಸುತುನ್ಮಾದಭರ ವೀಚಿಯಲಿ
ತೇಲಿಸುವುದಾತನನು!…. ಹಾಯಿದೋಣಿಯ ಗತಿಯು
ನಿಲದೆ ಹಾದೇ ಹೋಗುವುದು ಮುಂದೆ ಮುಂದೆ! ಅನು-
ಚರರು ಬಂದೇ ಬರುವರಲೆ ಹಿಂದೆ ಹಿಂದೆ- ಬಲು
ಬಿರುಗಾಳಿ, ಹೆಬ್ಬಂಡೆ, ಭೀಮ ನಕ್ರಾದಿಗಳ
ಶಂಕೆ, ಸಂದೇಹ, ತತ್ತರಿಕೆಗಳ ಬಡಿಗೋಲು
ಎದುಗುಡಾಣವ ಬಡಿದು ಢಣಢಣಿಸಿದರು, ಹರಣ
ರಣರಣಿಸಿದರು,- ಪಯಣದಲಿ ಅನಿಶ್ಚಿತ ಪಥದಿ! 70

ಭೂಶೋಧಕನು ಖಾನ; ಅವನೇರ್ದ ಪಾಲಕಿಯು
ಹಾಯಂಬಿಗುಪಮಾನ; ಪಯಣ ಪ್ರತಾಪಗಡ
ದೆಸೆವಿಡಿದು ಮೆರವಣಿಗೆಯಲ್ಲಿ ಮುಂಬರಿಯುತಿದೆ!

ವ್ಯಾಘ್ರವೊಂದಿದೆ ನಾಡನಳ್ಕಿಸುತ; ಹೊಂಚಿನಲಿ
ಬಿಯದರಾಣ್ಮನ ಮನೆಯ ಕೊಳ್ಳೆಯನೆ ಕಬಳಿಸಿದೆ!
ಶಬರಾಳಿ ಬೆಚ್ಚಿತ್ತು; ಶೈಥಿಲ್ಯ ಹೆಚ್ಚಿತ್ತು;
ಬಲೆ ಬಿಲ್ಲುಬಾಣ ನಾಚಿತ್ತು! ಹುಲು ಹಕ್ಕಿ ಮಿಗ
ಕೊಲುವ ಬೇಡರ ಬೀರದೆದೆ ಬೆಸುಗೆ ಬಿಚ್ಚಿತ್ತು!
ಭಿಲ್ಲರೊಡೆಯನು ಹೊಂತಕಾರಿಯೊಬ್ಬನ ಬೆಸಸೆ, 80
ಹುಮ್ಮಸಕೆ ಕಳ್ಗುಡಿದು, ಮರುಳನ್ನೆ ಹುರುಳೆಂದು,
ಅಂಕದಲಿ ಕೊಂಕೇರಿ, ಬಿಂಕದಲಿ ಮಂಕೇರಿ,
ಹೊಗಳು ತಮ್ಮಟೆಯ ಸುಸ್ವರಕೆ ಕಿವಿಯಡವಿಟ್ಟು,
ವ್ಯಾಘ್ರವಿಧ್ವಂಸ ಕಾರ್ಯಕೆ ಪೂಣ್ದು ಪಣತೊಟ್ಟು,
ಹೊರಡುವನು ಆ ಹೊಂತಕಾರಿ ಪಡೆಯನು ಕೂಡಿ!…..
ಪಡೆಯ ಪಿರಿಯನ ಪೆಂಗತನಕೆ ನಗುವರು ಕೆಲರು,
ಕಡುಗಲಿತನಕ್ಕೆ ಮನಸೋತು ಸಿಗುವರು ಕೆಲರು,
ಉದ್ದೇಶದೊಳ್ಳಿತಿಗೆ ಹಿಗ್ಗಿ ಮಿಗುವರು ಕೆಲರು,
ಆದರೂ ಆತನನೆ ಮುಮ್ಮಾಡಿ ಬೆಂಬಲಿಸಿ
ಗವಿಗೊಂಡ ಬಗ್ಗವನು ಬಲೆ ಬೀಸಿ ಹಿಡಿಯಲ್ಕೆ 90
ನಕ್ಕವರು ಸಿಕ್ಕವರು ಮಿಕ್ಕವರು ಹೊರಡುವರು!……

ಗವಿ ದುರ್ಗವಾ ಶಿವಾಜಿಯೆ ಬಗ್ಗ, ಬಿಜಪುರದ
ಪಡೆ ಶಬರರೌಘ, ಖಾನನು ಹೊಂತಕಾರಿಯೆನೆ
ಮುಂಬರಿಯಿತಾ ಮೆರವಣಿಗೆಯು ಮಾಂಕರಿಸುತ್ತ

ಈಗಾಗಲೇ ಉಲ್ಲೇಖಿಸಿದಂತೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ರಜಪೂತರ ಮತ್ತು ಮರಾಠರ ಬಲಿದಾನ, ಕ್ಷಾತ್ರ ವೈಭವಗಳನ್ನು ಹೇಳುವ ಐತಿಹಾಸಿಕ, ಅರೆ-ಐತಿಹಾಸಿಕ ಮತ್ತು ಕಾಲ್ಪನಿಕ-ಐತಿಹಾಸಿಕ ಕಥಾನಕಗಳು ಬಹು ಸಂಖ್ಯೆಯಲ್ಲಿ ಅಥವಾ ಅಸಂಖ್ಯವಾಗಿ ಸೃಷ್ಟಿಸಲ್ಪಟ್ಟಿವೆ. ಅಂತಹ ಕಥೆಗಳು (ಉದಾಹರಣೆಗೆ ಪೃಥ್ವೀರಾಜ ಸಂಯುಕ್ತಾ, ಶಿವಾಜಿ, ಕಿತ್ತೂರು ಚೆನ್ನಮ್ಮ, ರಾಣಿ ಅಬ್ಬಕ್ಕ, ಜ್ವಾಲೆ ಇತ್ಯಾದಿ) ನಾಟಕಗಳ ರೂಪದಲ್ಲಿ ಕರಾವಳಿಯ ಶೈಕ್ಷಣಿಕ ಸಂಸ್ಥೆಗಳ ವಾರ್ಷಿಕೋತ್ಸವಗಳಲ್ಲಿ ಇದ್ದೇ ಇರುತ್ತಿದ್ದವು (ಸ್ವಾತಂತ್ರ್ಯ ಬಂದ ನಂತರವೂ ಸುಮಾರು 1975 ರವರೆಗೆ ವಾರ್ಷಿಕೋತ್ಸವಗಳಲ್ಲಿ ಪ್ರದರ್ಶಿಸಲ್ಪಡುತ್ತಾ ಇದ್ದವು). ಅ. ಗೌ. ಕಿನ್ನಿಗೋಳಿಯವರು ಕೂಡ ಇತರ ಶಾಲೆಗಳ ಭಾಷಾ ಅಧ್ಯಾಪಕರಂತೆ ಶಾಲೆಯ ವಾರ್ಷಿಕೋತ್ಸವಗಳಲ್ಲಿ ವಿದ್ಯಾರ್ಥಿನಿಯರಿಂದ ಇಂತಹ ನಾಟಕಗಳನ್ನು ಆಡಿಸುತ್ತಿದ್ದರು. ಅವರು ಸ್ವತಃ ಸಾಕಷ್ಟು ರೂಪಕಗಳನ್ನು ಇಂತಹ ಪ್ರದರ್ಶನಗಳಿಗಾಗಿ ಬರೆದಿದ್ದು, ಅವುಗಳು ಕೆಲವು ‘ಯುಗಪುರುಷ’ ಪತ್ರಿಕೆಯ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ‘ದೃಶ್ಯಲಹರಿಗಳು’ ಎಂಬ ವಿಭಾಗದಲ್ಲಿ ಪ್ರಕಟವಾದ ಅವರ ರೂಪಕಗಳು: ‘ಪರಾಶರ ಸತ್ಯ’, ‘ಪತನ ಪ್ರಾಯಶ್ಚಿತ್ತ’, ‘ಮಂತ್ರ ರಹಸ್ಯ’, ‘ಅಜ್ಞಾತ ಸಂಹಾರ’, ‘ಗುಪ್ತ ತೀರ್ಥಾಟನೆ’, ‘ವಿಪರ್ಯಾಸ ಸಂತಾನ’.

ಐತಿಹಾಸಿಕ ಕಾದಂಬರಿಗಳನ್ನೂ ಅವರು ಬರೆದಿದ್ದು ಅವು ಪ್ರಕಟವಾಗಿವೆ – ‘ದಾರಾ’ (1959. ಯುಗಪುರುಷ, ಕಿನ್ನಿಗೋಳಿ) ಮತ್ತು ‘ಬಿಡುಗಡೆಯ ನಾಂದಿ’ (1965. ವಿವೇಕ ಸಾಹಿತ್ಯ ಮಾಲೆ, ಮಂಗಳೂರು). ‘ಸಂಗ್ರಾಮಸಿಂಹ’ ಎನ್ನುವ ಐತಿಹಾಸಿಕ ಕಥನ 1955 ರಲ್ಲಿ ‘ಪ್ರಭಾತ ಕಾರ್ಯಾಲಯ’ದಿಂದ ಪ್ರಕಟವಾಗಿತ್ತು. ‘ಶ್ರೀರಂಗ ರಾಯ’ ಮತ್ತು ‘ಸತ್ಯಾಶ್ರಯ ಕುಮಾರ’ ಎಂಬ ಎರಡು ಅಪ್ರಕಟಿತ ಐತಿಹಾಸಿಕ ಕಾದಂಬರಿಗಳು ಹಸ್ತಪ್ರತಿಯ ರೂಪದಲ್ಲಿದ್ದವು.

ಬಿಡಿ ಕವಿತೆಗಳು

ಅ.ಗೌ.ಕಿನ್ನಿಗೋಳಿಯವರು ತಮ್ಮ ಬಿಡಿ ಕವಿತೆಗಳಲ್ಲಿ ಸಮಾಜದಲ್ಲಿ ನಡೆಯುತ್ತಿದ್ದ ಶೋಷಣೆ, ಸಾಮಾಜಿಕ ಅಸಮಾನತೆಯಿಂದಾಗಿ ಕೆಳಜಾತಿಗಳೆನಿಸಿಕೊಂಡವರ ಅಸಹಾಯಕತೆ, ಶ್ರೀಮಂತ ವರ್ಗ- ಬಡವರ ನಡುವಿನ ಆರ್ಥಿಕ ಕಂದಕ ಮತ್ತು ಬಡಜನರ ಕಷ್ಟಗಳು ಇವುಗಳನ್ನೆಲ್ಲ ಚಿತ್ರಿಸಿದ್ದಾರೆ. ಆ ರೀತಿ ಸಮಾಜಪರವಾಗಿ ಬರೆಯಲಾರಂಭಿಸಿದ್ದ ಕಯ್ಯಾರ ಕಿಞ್ಞಣ್ಣ ರೈಗಳಿಗಿಂತ ಭಿನ್ನವಾದ ನೆಲೆಯಲ್ಲಿ ನಿಂತು ಅ.ಗೌ.ಕಿ. ಬರೆದರು. ರೈಗಳು ಕೂಡ ಸ್ವಾತಂತ್ರ್ಯೋತ್ತರ ಕಾಲದಲ್ಲಿ ದೇಶದ ಆಂತರಿಕ ಸಮಸ್ಯೆಗಳನ್ನು ಅವಲೋಕಿಸುತ್ತ ಮೇಲುಕೀಳು, ಶೋಷಣೆ ಇತ್ಯಾದಿಗಳನ್ನು ಖಂಡಿಸುವ ಕವಿತೆಗಳನ್ನು ಬರೆದರು. ಅವರು ಉದಾರ ಮಾನವತಾವಾದದ ನೆಲೆಯಿಂದ ಕ್ರಾಂತಿಕಾರಕವಾದ ಬದಲಾವಣೆಗಳಾಗಬೇಕೆಂಬ ಸೂಚನೆಯನ್ನು ಕೊಟ್ಟಿದ್ದರು. ಅ.ಗೌ.ಕಿ. ನೊಂದವರ ಪ್ರತಿನಿಧಿಯಾಗಿ ಕವಿತೆಗಳನ್ನು ಬರೆದರು. ಅವರ ಒಂದು ಕವಿತೆಯ ಸಾಲು ಹೀಗಿದೆ: “ದಿನ ದಿನ ಹುಟ್ಟುತ ಸಾಯುವ ಬಡವರ ಬಾಳಿನ ಭೀಷಣ ಬನ್ನವನ್ನು ಕಂಡುಂಡಲ್ಲದೆ ಅರಿಯದು.”

ಅವರ, ‘ಕರುಳಿನ ಕಿಚ್ಚು’, ‘ಇವಕೆಂದಿಗೆ ಕೊನೆ’, ‘ಅದೋ ಅಲ್ಲಿ ಇದೋ ಇಲ್ಲಿ’, ‘ಇಲ್ಲದ ಬದುಕು’ ಇವು ಇಂತಹ ಕೆಲವು ಕವಿತೆಗಳು. ‘ಕರುಳಿನ ಕಿಚ್ಚು’ ಕವನದ ಸಾಲುಗಳಿವು:

ಕರುಳಿನ ಕಿಚ್ಚೇ ದಳ್ಳಿಸುತಿಹುದೆನೆ
ಏನಚ್ಚರಿಯೋ, ಘನತೆಗಳು
ಧನ ದರ್ಪಂಗಳು ಹಿರಿ ಹೆಮ್ಮೆಗಳು
ಉರಿದವು ಶೋಷಕ ವರ್ಗಗಳು.

ಇಲ್ಲಿ ಕ್ರಾಂತಿಯ ಆಶಯವನ್ನು ಕಾಣಬಹುದು. ‘ಇವಕೆಂದಿಗೆ ಕೊನೆ’ ಕವಿತೆಯ ಸಾಲುಗಳಿವು:

ನೋಡಿರೆ, ಹಿಡಿ ಕೂಳಿಗೆ ದಿಕ್ಕಿಲ್ಲದ
ಜೀವದ ಎಲುಬಿನ ಗೂಡುಗಳ
ಸೀತಾ ಸಾವಿತ್ರಿಯರವತರಿಸಿದ
ನಾಡಿನ ಹೆಂಗಳ ಮಾನಗಳ
ಕಾಮಧೇನುವನು ಕರೆದಿಹ ನಾಡಿಗೆ
ಕವಿದಿದೆ ಹಸಿವೆಯ ಮೂರ್ಛನೆಯು
ಮಹಿಮಾನ್ವಿತವೀ ನಾಡಿನ ಸಾಸಿರ
ಹೆಂಗಳು ಅರೆನಗ್ನ.

ಅವರ ಎರಡು ಬಿಡಿ ಕವಿತೆಗಳನ್ನು ಕೆಳಗೆ ಕೊಡಲಾಗಿದೆ. ಮೊದಲನೆಯ, ‘ಸಾಂತ್ವನ’ ಕವನ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಡವರನ್ನು ಉದ್ಧರಿಸುತ್ತೇವೆ, ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯುತ್ತೇವೆ ಎನ್ನುವ ನಾಯಕರ ಹೇಳಿಕೆಗಳು ವಾಸ್ತವದಲ್ಲಿ ಬಡವರ ಅನುಭವಕ್ಕೆ ದಕ್ಕದೆ ಹೋದಾಗ ವ್ಯಂಗ್ಯವಾಗಿ ಬರೆದ ಕವನ. ಅ. ಗೌ. ಕಿನ್ನಿಗೋಳಿಯವರು ನವ್ಯದ ಮುಕ್ತಛಂದಸ್ಸನ್ನು ಮತ್ತು ವ್ಯಂಗ್ಯವನ್ನು ಬಳಸಿಕೊಂಡು ಬಿಡಿಕವಿತೆಗಳನ್ನು ಬರೆಯುತ್ತಿದ್ದುದನ್ನು ಗಮನಿಸಬಹುದು. ‘ಸಾಂತ್ವನ’ ಕವಿತೆಯಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಭಾರತೀಯ ಕಾವ್ಯ, ಪುರಾಣಗಳ ತಳಸ್ಪರ್ಶೀ ಜ್ಞಾನ ಅವರಿಗಿದ್ದುದರಿಂದ ಅವರಿಗೆ ರೂಪಕಗಳಾಗಿ, ಉಪಮೆಗಳಾಗಿ ಪುರಾಣಪ್ರತಿಮೆಗಳು ಒದಗಿಬರುತ್ತಿದ್ದದ್ದು. ಅವರು ಯಕ್ಷಗಾನ ತಾಳಮದ್ದಳೆಗಳಲ್ಲಿ ಅರ್ಥಧಾರಿಯಾಗಿ ಭಾಗವಹಿಸುತ್ತಿದ್ದವರೂ, ಕನ್ನಡ – ಸಂಸ್ಕೃತ ವಿದ್ವಾನ್ ಪದವಿಯನ್ನು ಪಡೆದಿದ್ದವರೂ ಆಗಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಸಾಂತ್ವನ

ನಿನ್ನ ಹಣೆಯ ಹಾಳು ಬರೆಹವುಜ್ಜಿ ಹೊಸತು ಬರೆಯಲೆಂದು
ಗುದ್ದಲಿಯನು ಹಿಡಿದು ಬರುವ ಸಿದ್ಧರನ್ನು ಕಂಡುಕೊ-
ಹಣೆಯೊಡ್ಡುತ ನಿಂದುಕೊ !
ಕಾಮಧೇನುವೆಳೆದು ತಂದು ನಿನ್ನ ಹಟ್ಟಿಯಲ್ಲಿ ಕಟ್ಟಿ
ಹಾಲು ಕರೆದೆ ಕೊಡುವರೆಂಬ ಮಾತ ನೀನು ನಂಬಿಕೊ,
ನಿನ್ನ ಬತ್ತಿದೆದೆಯ ಮಡಕೆ ಮೊಸರ ಕುಡಿಕೆ ಎಂದುಕೊ.
ಕಡೆದ ಬೆಣ್ಣೆ ತಾವೆ ತಿಂದು ಕೂರ್ಮೆಯಿಂದ ಕೈಯ ನಿನ್ನ
ಮೂತಿಗೊರಸಲೆಂದು ಬರೆ-
ಎಲವೊ ದಡ್ಡ ಮೂರ್ಖನಂತೆ ತಿರುಹಬೇಡ ಮೋರೆ!
ನಿನ್ನ ಪ್ರಾಪ್ತಿಗಷ್ಟೆ ಮೇರೆ-
ಎಂದುಕೊಳ್ಳು; ಬಯಸಬೇಡ ಭಾರೀ ದುಬಾರೆ.

ನಿನ್ನ ಮನೆಯ ಚಿನ್ನ ಚಾರು ಚೂರುಗಳನು ಒಟ್ಟುಗೂಡಿ
ಸ್ವರ್ಣವೃಷ್ಟಿಗರೆವ ಮೈಮೆ ಕಾಣಲೆಂದು ಬದುಕಿಕೊ.
ನಿನ್ನ ತೋಟದೆಳನೀರಿಗೆ ಕಲ್ಪವೃಕ್ಷಫಲದ ಸಾರ
ತನ್ನ ತಾನೆ ಕೂಡಿಕೊಳುವ ತನಕಾದರು ಬಾಳಿಕೊ.
ಆಸೆಯಿಂದ ತಾಳಿಕೊ,
ಸುಖೀ ಎಂದೆ ಹೇಳಿಕೊ.
‘ಬೇಕು-ಅನ್ನ ಬಟ್ಟೆ ವಸತಿ ಬೆಳಕು ವಿದ್ಯೆ ಉದ್ಯೋಗ’
-ಎಂದು ಕಿರಿಚಿ ಕಮ್ಯೂನಿಷ್ಟನಾಗಬೇಡ ತಮ್ಮನೆ.
ಹಣೆಯ ಬರೆಹ ತಿದ್ದ ಬಂದ ಸಿದ್ಧನೇನು ಗುಮ್ಮನೆ?
ಹೆದರಬೇಡ ಸುಮ್ಮನೆ.
ಪುಣ್ಯದಾಯಿ, ಉಪವಾಸವು ನಮ್ಮದಾದ ಶ್ರೇಷ್ಠ ಕಲೆ
ಉಣ್ಣಲಾರದಷ್ಟು ಏರೆ ಕೈಗೆಟಕದ ಬೆಳೆಗಳೇ.
ಕಣ್ಣೆ ಕಾಣದಂತೆ ಕವಿಯೆ ಕಾಳಸಂತೆ ಕತ್ತಲೆ
ಮುಂದೆ ನಿನಗೆ ಬಟ್ಟಬೇಡ ಇರಬಹುದೈ ಬತ್ತಲೆ
ನಿನ್ನ ಮಗಳ ಮದುವೆಗಾಗಿ ಸಿಗದೆ ಹೋಯ್ತೆ ಸಕ್ಕರೆ?
ಆದರೇನು? ನಿನಗಿಲ್ಲವೆ ಅಳಿಯನ ಮೇಲಕ್ಕರೆ?
ಮದ್ದಿಲ್ಲವೋ ಮಧುಮೇಹಕೆ! ಜಾಣನಾಗು ತಮ್ಮನೆ,
ದೂರಬೇಡ ಸುಮ್ಮನೆ.

ಪಿಂಪ್ರಿಯಲ್ಲಿ ಪೆನ್ಸಿಲೀನು, ಸಿಂಧ್ರಿಯಲ್ಲಿ ಗೊಬ್ಬರ,
ಭಿಲಾಯ್ ಉಕ್ಕು, ಶರಾವತಿಗೆ ಆನೆಕಟ್ಟಿನಬ್ಬರ!
ಬೆಂಗಳೂರ ರಾಜಭವನ, ಪಂಜಾಬಿನ ಮಾರಣ,
ಭಕ್ರಾನಂಗಾಲವೆಲ್ಲ ನಿನಗೆ ಸಿದ್ಧಿ ನಾಳಿನ!
ವರ್ತಮಾನವನ್ನು ಮರೆ;
ಬರುವ ಕಾಲಕೇನು ಕೊರೆ?
ನಿನ್ನ ಕೊನೆಯ ಮಗನ ಮಗನ ಮೊಮ್ಮಗನಿಗೇ ಎಲ್ಲವೂ
ನಿರಾಯಾಸ ಜೀವನಕ್ಕೆ ಕೂಡಿ ಒದಗಬಲ್ಲವು.
ಅಮೇರಿಕದ ಹಾಲು ಕುಡಿದು ತಣ್ಣಗಿರೋ ತಮ್ಮನೆ,
ಸೊರಗಬೇಡ ಸುಮ್ಮನೆ.

ಮಾರೀಚನ ರಾಮ ಧ್ಯಾನದಿಂದ ಶೂರ್ಪನಖೆಯ ಮೂಗು
ಚಿಗುರಲುಬಹುದು.
ಶಕುನಿಯ ಔದಾರ್ಯದಿಂದ ದುಶ್ಶಾಸನ ವಸ್ತ್ರದಾನ
ಗೈಯಲುಬಹುದು.
ಬಕಾಸುರನ ಅಗ್ನಿಮಾಂದ್ಯದಿಂದ ಅನ್ನ ಮಿಗಲುಬಹುದು.
ಇಂದ್ರಾರಿಯ ಮಾರಣಕ್ಕೆ ವಾನರಕುಲ ಬಲಿಯಾದರೆ
ಭೂದಾನದ ಯಜ್ಞರಕ್ಷೆ ತಾಟಕೆಗೇ ಸೇರದೇ?
ಈ ವಿಶ್ವಾಮಿತ್ರಸೃಷ್ಟಿ ಕಲ್ಪನೆಗೂ ಬಾರದೇ
ಹೋದರೇನು? ನಿನ್ನ ಋಷೀಗೋತ್ರವನ್ನೆ ನೆನೆದುಕೊ-
ಭೋಗವಲ್ಲ ಬಾಳ ಗುರಿ; ತ್ಯಾಗಿ ನೀನು ತಮ್ಮನೆ,
ಮರುಗಬೇಡ ಸುಮ್ಮನೆ.

‘ಸಾಂತ್ವನ’ ಕವನದಲ್ಲಿರುವ ಈ ಸಾಲು ಧ್ವನಿಶಕ್ತಿಯುಳ್ಳದ್ದಾಗಿದೆ: “ಕಣ್ಣೆ ಕಾಣದಂತೆ ಕವಿಯೆ ಕಾಳಸಂತೆ ಕತ್ತಲೆ”. ‘ಕಾಳಸಂತೆ’ ಪದದಲ್ಲಿರುವ ‘ಕಾಳ’ ಎನ್ನುವುದನ್ನು ಬಳಸಿಕೊಂಡು, ಅದನ್ನು ಕತ್ತಲು ಎನ್ನುವ ರೂಪಕವನ್ನಾಗಿ ಕಲ್ಪಿಸಿಕೊಂಡು, ಆ ಕತ್ತಲೆಯಲ್ಲಿ ಕಣ್ಣು ಕಾಣದಲೆಯುವ ವ್ಯಕ್ತಿಯನ್ನು ಕವಿತೆಯನ್ನು ಆಲಿಸುತ್ತಿರುವ ಕಾಲ್ಪನಿಕ ವ್ಯಕ್ತಿ ‘ಬಡವರ ಪ್ರತಿನಿಧಿ’ ಎಂದು ಅನ್ವಯಿಸಿರುವುದು ಸೊಗಸಾಗಿದೆ.

ಇನ್ನೊಂದು ಕವನ ‘ಭವರೋಗಿಗೆ’ ಉಳ್ಳವರನ್ನು ಕುರಿತು ಮಾಡಿದ ಉಪದೇಶ. ಈ ಕವಿತೆಯಲ್ಲಿಯೂ ಸಶಕ್ತವಾದ ರೂಪಕಗಳು, ‘ದೀಪಕೀಟ’ ಮುಂತಾದ ಧ್ವನಿ (ನವ್ಯದ ಐರನಿ) ಶಕ್ತಿಯುಳ್ಳ ಕೂಡುನುಡಿಗಳ ಬಳಕೆಯನ್ನು ಗಮನಿಸಬಹುದು. ಅ. ಗೌ. ಕಿನ್ನಿಗೋಳಿಯವರು ಬುದ್ಧನ ‘ಅಪರಿಗ್ರಹ’ ಕಲ್ಪನೆಯನ್ನು ಇಲ್ಲಿ ಬದುಕಿಗೆ ಅಳವಡಿಸಿಕೊಂಡಿರುವುದನ್ನು ಗಮನಿಸಬಹುದು. ಈ ಕವಿತೆಯ ‘ಭವರೋಗಿ – ಭ್ರಾಂತ ಭೋಗಿ’, ಯಯಾತಿಯಂತೆ ‘ಜರೆಯಿರದ ತಾರುಣ್ಯ, ನಿರುತ ವಾಜೀಕರಣ’ದಿಂದ ಅಪರಿಮಿತ ಕಾಮವನ್ನು ಬಯಸುತ್ತಾನೆ ಎನ್ನುವುದನ್ನು ಕವಿ ಹೇಳುವಾಗ ಅದು ವಾಸ್ತವವೂ ಹೌದು, ಸಂಕೇತವೂ ಹೌದು. ಭಗವದ್ಗೀತೆ, ಉಪನಿಷತ್ತುಗಳಲ್ಲಿ ಕಾಮವನ್ನು ಗೆಲ್ಲುವುದು ಅಪರಿಮಿತ ಕಾಮದಿಂದಲ್ಲ; ತ್ಯಾಗದಿಂದ ಮಾತ್ರವೇ ಕಾಮವನ್ನು ಶಮನ ಮಾಡಲು ಸಾಧ್ಯವೆಂಬ ಮಾರ್ಗದರ್ಶನವಿದೆ. ಅ.ಗೌ.ಕಿ.ಯವರ ಮನಸ್ಸಿನಲ್ಲಿ ಅದೂ ಇರುವ ಹಾಗಿದೆ: “ಸಾಕಿನಲ್ಲಡಗಿಹುದು ಮಾರಹಸ್ಯ!” ಸಾಕು ಎನ್ನುವುದರಲ್ಲಿ ‘ಮಾರ – ರಹಸ್ಯ!’ ಮತ್ತು ‘ಮಹಾ ರಹಸ್ಯ’ ಎರಡೂ ಅಡಗಿವೆ ಎನ್ನುವ ಶ್ಲೇಷಾರ್ಥ ಅಡಗಿದೆ.

ಭವ ರೋಗಿಗೆ

ಓ ಭ್ರಾಂತ ಭೋಗಿ,
ಕೇಳ ಭವರೋಗಿ!
ಆದರೆ! ಏನಿಂತೇಕ ಆಸೆನೋಟ?
ಅರಸುತಿಹುದೇನು ಓ, ದೀಪಕೀಟ?

ಸಾಕು ಬಿಡು ನಾನರಿತೆ ಮನದ ಮೂಲದ ಚಿಂತೆ;
ಏಕೆನಿತೊ ಕಾಲದಿಂ ಕಾದು ನಿಂತೆ?
ಲಾಲಸೆಯ ಹೋರಾಟ ಗಾಳಿಗೈಗುದ್ದಾಟ-
ಎಂದ ಹಿರಿಯರ ಮಾತನೇಕೆ ಮರೆತೆ?

ನಿಜದರಿವು ನಿನಗಿನ್ನು ಮೂಡಲಿಲ್ಲ,
ಅದರ ನೆಲೆಯತ್ತ ನೀಂ ನೋಡಲಿಲ್ಲ.
ನಿನ್ನನ್ನೇ ನೀಂ ಕೆದಕು ತೋರುವುದು ಸರಿ ಬದುಕು,
ಈ ದುರಾಶೆಯ ಬೋಗುಣಿಯಲಿ ಬಿರುಕು !
ಬಯಕೆಗಳ ಬಾಗಿಲಲಿ, ಸೋಲುಗಳ ಸೋಗಿಲಲಿ
ನಿಂದಿಹುದ ನೀನೆ ನೋಡಯ್ಯ ನಿಜಕೂ.
ಓ, ಚೆಲುವ ಚೆನ್ನಿಗನೆ ನಾ ಹೇಳಲೇನು?
ನಾಚದಿರು ಕೇಳಯ್ಯ ನಿನ್ನ ಬಯಕೆಯನು-

ವೆಚ್ಚಕ್ಕೆ ಕೊಪ್ಪರಿಗೆ, ವಾಸಕ್ಕೆ ಉಪ್ಪರಿಗೆ,
ತನ್ವಿಯರ ತನು ತಳ್ಕೆ, ಹಂಸತೂಲದ ಪಳ್ಕೆ,
ಆಯುಷ್ಯದಾ ಬಲವು, ಅಚ್ಚಳಿಯದಾ ಚೆಲುವು,
ಜರೆಯಿರದ ತಾರುಣ್ಯ, ನಿರುತ ವಾಜೀಕರಣ
ಮುಗಿಸಲಾರೈ ಇಂತು ಹೇಳಿ ಹರಣದ ತಂತು
ಕಡಿವನಕ ಕಡೆಯನಕ-ಬಲ್ಲೆ ಕೇಳ!

ಸುಖದ ಸುತ್ತಿನ ಮೂಲದಲ್ಲಿಹುದು ಕೂರ್ಗಾಳ
ಮೀನಂತೆ ನೀನಿದನು ಅರಿಯಲಿಲ್ಲ.
ಓ, ಭ್ರಾಂತ ಭೋಗಿ,
ಕೇಳ ಭವರೋಗಿ!
ಬೇಕು – ಎನುವುದೆ ನರಕ, ಸಾಕು- ಎನ್ನಲು ನಾಕ,
ಸಾಕಿನಲ್ಲಡಗಿಹುದು ಮಾರಹಸ್ಯ!
ಮಧುಬಿಂದು ತಾನೊಂದು ಜೀವಹರ ಹನ್ನೊಂದು-
ನೀನಾದೆ ಬೇಕುಗಳಿಗಂತೆ ವಶ್ಯ.
ದೋಹಳದ ಬಲು ಗೀಳು ದೊರೆಯದಾಗಲು ಗೋಳು
ಗೊಳ್ಳುವುದೆ ಬಯಕೆಯೊತ್ತಡದ ಬಾಳು;
ಮಾಗುವುದು ಹೆರರುಣ್ಣುವುದಕೆಂದೆ ತನಿವಣ್ಣು
ಸರಿದಾರಿಯಂತಿಹುದು ತಿಳಿದುಕೊಳ್ಳು.
ತೋರಿಕೆಯ ಗುರಿಗೈಮೆ ಮೆರೆದಾಟದೀ ಮೈಮೆ
ಕೂಪಕೂರ್ಮ ನ್ಯಾಯವಿಲ್ಲ ಧ್ಯೇಯ !
ಬೀಸಲಿಹ ಬಿರುಗಾಳಿಗಿದಿರು ಕೆಡೆಯುವ ಕದಳಿ
ಈ ಬಾಳು; ನೆಚ್ಚಿ ಬಿಡಬೇಡ ಬಾಯ.
ಕೆಸರು ಕುಪ್ಪೆಯ ಮಧ್ಯೆ ಮೊಸರು ಬೆಣ್ಣೆಯ ಮುದ್ದೆ
ಎಂದರಾರೋ ಹಿಂದೆ ಕೇಳೆಯೇನು?
ಹಸುರು ಹಚ್ಚೆಯ ಹೊಲಕೆ ವಶವಾಗದಿರು ಜೋಕೆ !
ಪಶುವಲ್ಲ, ನೀಂ ಮನುಜನಿರುವೆಯಿನ್ನೂ.

‘ಸಾಂತ್ವನ’ ಕವಿತೆಯಲ್ಲಿ ಬಡವನಿಗೆ ನೀಡಿದ ಉಪದೇಶದಲ್ಲಿರುವ ವಿಷಯವು ಮೇಲ್ನೋಟಕ್ಕೆ ಇದೇ ಬಗೆಯದು ಅನಿಸುತ್ತದೆ. “ಭೋಗವಲ್ಲ ಬಾಳ ಗುರಿ; ತ್ಯಾಗಿ ನೀನು ತಮ್ಮನೆ, ಮರುಗಬೇಡ ಸುಮ್ಮನೆ” ಎಂದು ಕವಿ ಆ ಕವಿತೆಯಲ್ಲಿಯೂ ಹೇಳಿದ್ದಾರೆ. ಆದರೆ ಆ ಕವಿತೆಯಲ್ಲಿ ಅದನ್ನು ವ್ಯಂಗ್ಯವಾಗಿ ಹೇಳಿರುವುದು ಎನ್ನುವುದು ಅದರಲ್ಲಿರುವ ಶೋಷಕ ಪ್ರತಿನಿಧಿಗಳನ್ನು ಕಂಡಾಗ ತಿಳಿಯುತ್ತದೆ. ಈ ಶೋಷಕರು ಈ ಕವಿತೆಯ ಮರೆಯಲ್ಲಿ ಖದೀಮರಾಗಿ ಇಣುಕುತ್ತಿದ್ದಾರೆ. ಕವಿತೆಯಲ್ಲಿ ಒಬ್ಬ ‘ಸಿದ್ಧ ಪುರುಷ’ (ದೇವ ಮಾನವ!), ಬೆಣ್ಣೆಯನ್ನು ತಾನೆ ತಿಂದು ಕೈಯನ್ನು ಬಡವನ ಮೂತಿಗೆ ಒರಸಲು ಬರುವ ಒಬ್ಬ ರಾಜಕಾರಣಿ, ಮಹಾಮಹಾ ಯೋಜನೆಗಳನ್ನು ಮತ್ತು ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ದೇಶ ನೇತಾರ ಎಲ್ಲ ಇದ್ದಾರೆ.

ಸಂಕಲನವಾಗಬೇಕಾದ ಅ.ಗೌ.ಕಿ.ಯವರ ಬಿಡಿಕವಿತೆಗಳಿವು: ಕರುಳಿನ ಕಿಚ್ಚು (ಯುಗಾಂತರ, 1950). ಜನನ ಜೀವನ ಮರಣ (ಸುಬೋಧ, ಆಗಸ್ಟ್ 1950). ಬೇಡಿಕೆ (ಸುಬೋಧ, ಸಪ್ಟಂಬರ್ 1950). ಒಸರು (ಮೊಗವೀರ. ಅಕ್ಟೋಬರ್ 1950). ಇವಳಾರು (ಪ್ರಜಾಮತ, 1951), ಸತ್ವ-ಶಾಂತಿ (ಸತ್ಯಾರ್ಥಿ.ಜನವರಿ 1951). ಯುಗ – ಭೋಗ (ಮೊಗವೀರ. ಜನವರಿ 1851). ವೈಮಾನಿಕರು, ಮಹಾವೀರ, ಜನವರಿ, 1951). ಭೋಗಿ ಭೂಷಣನಾಗು (ವೀಣಾ, ಮಾರ್ಚ್ 1951). ಪೌರುಷ (ವಿಜಯ. ಮಾರ್ಚ್ 1951) ಹೊನಲು ತಂದ ನೀರು (ಸತ್ಯಾರ್ಥಿ, ಎಪ್ರಿಲ್ 1951). ಯುಗಾದಿ (ಜಯ್‍ಹಿಂದ್, ಎಪ್ರಿಲ್ 1951). ಬಾಳು-ಸಾವು (ಸುಬೋಧ, ಎಪ್ರಿಲ್ 1951). ಸಾಗರಯಾನ (ವಿಜಯ, ಎಪ್ರಿಲ್ 1951). ಅಂತರಂಗದಾಳ (ಮೊಗವೀರ, ಎಪ್ರಿಲ್ 1951). ದಾರಿದ್ರ (ಸತ್ಯಾರ್ಥಿ, ಮೇ 1951). ಮಿಲನ (ಮಹಾವೀರ, ಮೇ 1951). ಭ್ರಮಣ ಸಮೀರ (ಸುಬೋಧ, ಜೂನ್ 1951). ಅಂತ್ಯ ಪ್ರಣಯ (ಮಹಾವೀರ, ಜೂನ್ 1951). ದಿವ್ಯಾಗಮನ (ವೀಣಾ, ಜೂನ್ 1951).
ಇವಕ್ಕೆಂದಿಗೆ ಕೊನೆ (ವಿಜಯ, ಜೂನ್ 1951). ಸರಸ ಭೇಟಿ (ಆದರ್ಶ, ಜುಲಾಯಿ 1951). ಅವಹೇಳನ (ವೀಣಾ, ಜುಲಾಯಿ 1951). ಹಾಡಿನ ಹಿಗ್ಗು (ಮೊಗವೀರ, ಜುಲಾಯಿ 1951). ಅದೋ ಅಲ್ಲಿ ಇದೋ ಇಲ್ಲಿ (ವಿಜಯ, ಆಗಸ್ಟ್ 1951). ಅನ್ವೇಷಣೆ (ವೀಣಾ, ಆಗಸ್ಟ್ 1951). ಅರ್ಪಣ (ವೀಣಾ, ಸೆಪ್ಟೆಂಬರ್ 1951). ಹಳ್ಳಿಯ ಹಾಡುಗಳು (ವಿಜಯ, ಅಕ್ಟೋಬರ್ 1951). ದೀಪಾವಳಿ (ಜಯ್‍ಹಿಂದ್, ನವೆಂಬರ್ 1951). ಪೌರುಷ (ಆದರ್ಶ, ನವೆಂಬರ್ 1951). ಶಾಪಯಾಚನೆ (ಮಹಾವೀರ, ದಶಂಬರ 1951). ಅಂದು-ಇಂದು. (ವೀಣಾ, ದಶಂಬರ 1951). ಗಗನ ಕುಸುಮ (ವೀಣಾ, 1951). ತಾಯ ಹರಕೆ (ವೀಣಾ, 1951). ಮರಳಿ ನಾಡ ಕಟ್ಟುವೊಡೆ (ಯುಗಪುರುಷ, 1951). ಪಾಶದ ತೊಡವು (ಮೊಗವೀರ, ಜನವರಿ 1952). ಭವರೋಗಿಗೆ (ಯುಗಪುರುಷ. ಜನವರಿ 1952). ಅಣ್ಣನಿಗೆ (ಸುಬೋಧ. 1952). ಸರಸ ಕೂಟ (ಸುಬೋಧ. 1952). ಮರೆಯರಹಸ್ಯ (ವೀಣಾ, 1952) ಮಹಾಪೂರ (ಜಯ್‍ಹಿಂದ್, ಮಾರ್ಚ್ 1952). ಅಹಂ! (ವೀಣಾ, ಮಾರ್ಚ್ 1952). ದೇವಪುತ್ರ. (ಸುಬೋಧ, ಎಪ್ರಿಲ್ 1952). ಮಹಾಪೂರ (ವೀಣಾ, ಮೇ 1952). ದೂರದೂರಿಂದ (ವೀಣಾ, ಮೇ 1952). ನಾಡೋಜನ ನೆನಹು, (ವೀಣಾ, ಆಗಸ್ಟ್ 1952). ಸಾರವಿರೆ ಮಾನದಲಿ ಬದುಕಬೇಕು (ಸಾಹಿತ್ಯವಿಹಾರ, 1952). ಚೋರನ ಬೆಸನ (ವಿನೋದ, ಎಪ್ರಿಲ್ 1954). ಮಥನ (ಯುಗಪುರುಷ, ಮೇ 1954). ಸದಾಶಿವರಾದ ಪೇಜಾವರ ಸದಾಶಿವರಾಯರು (ಯುಗಪುರುಷ, 1954). ಪೂಜಾರಿ (ವಿನೋದ, ಜುಲೈ 1955). ತೊರೆದ ತಾಯಿ (ಯುಗಪುರುಷ, ಜೂನ್ 1956). ಭವರೋಗಿಗೆ (ಹೊಸಗನ್ನಡ ಕಾವ್ಯಶ್ರೀ, 1957). ಹೆಣ್ಣಿನ ಸೌಭಾಗ್ಯ (ವಿನೋದ, ಆಗಸ್ಟ್ 1959) ಮಗನನ್ನು ಒಪ್ಪಿಸಿಕೊಡುವಾಗ (ವಿನೋದ, ಮಾರ್ಚ್ 1962). ಮಹಾತ್ಮರ ಮಹಿಮೆ (ವಿನೋದ, ಆಗಸ್ಟ್ 1963). ಕರೆಯದಿರು ಕಾಂತೆ (ವಿನೋದ, ಆಗಸ್ಟ್ 1963). ವ್ಯವಹಾರ ಗೀತೆ (ರಾಯಭಾರಿ, ಜನವರಿ. 1964). ದೀಪಕಲ್ಪ (ರಾಯಭಾರಿ, ಜೂನ್ 1964) ಶಿವಲೀಲೆ (ವಿನೋದ, ಆಗಸ್ಟ್ 1965). ನಾವೆಂಥವರು (ರಾಯಭಾರಿ 1966). ಮಾರ್ಗಮದನರು (ರಾಯಭಾರಿ). ಕೊರತೆ (ರಾಯಭಾರಿ). ಗಳಿಸುವ ಹೆಣ್ಣು (ವಿನೋದ, 1968) ಪಯಣವೆಲ್ಲ ಪಾವನ (ರಾಯಭಾರಿ, ಜನವರಿ 1970). ಇಂದಿನ ಜೋಗುಳ (ವಿನೋದ, ಆಗಸ್ಟ್ 1971). ಅಕ್ಷಯನಿಧಿ (ರಾಯಭಾರಿ, ಜನವರಿ 1972). ಅಯ್ಯೋ ನಾನೂ ಹಣ್ಣಾಗಿದ್ದರೆ (ವಿನೋದ, ಆಗಸ್ಟ್ 1973). ಸಂಸ್ಕೃತಿಯ ಸುಡುಗಾಡು (ರಾಯಭಾರಿ, 1973) ತಣ್ಣಗಿನ ಬೆಂಕಿ (ಶ್ರೀ ಮಹಾವೀರ ದರ್ಶನ, 1975). ಹೆಣ್ಣು ಒಂದು ವಿಶ್ಲೇಷಣೆ (ವಿನೋದ, ಆಗಸ್ಟ್ 1975). ನನ್ನತನ (ರಾಯಭಾರಿ, ಸಂಚಿಕೆ 23, ಜನವರಿ 1976). ಒಸರು (ಕರ್ಮವೀರ). ಬಿಗಿದೇಳಲೋ ಜೀವ (ಆದರ್ಶ). ತಾಯ್ತನ (ಆದರ್ಶ). ಹನಿಗವನಗಳು (ಸುರಭಿ).

ಅಪ್ರಕಟಿತ ಬಿಡಿಕವಿತೆಗಳು: ಗೀತೋಚ್ಚಿಷ್ಟ. ಸುಗತಿಯೊಂದೇ ಬೇಕು. ದೇವಶೀರ್ಷ. ಹಂಪೆ.

ಅಪ್ರಕಟಿತ ಕಾವ್ಯ ಸಂಗ್ರಹಗಳು: ಉಮರನ ಒಸಗೆ (ಅನುವಾದ), ತಬುರಕೋಡಿ (ಕಥನ ಕವನ).

ಅ. ಗೌ. ಕಿನ್ನಿಗೋಳಿ ಅವರ ಸಾಹಿತ್ಯದ ಬಗ್ಗೆ ನಾಲ್ಕು ದಶಕಗಳಿಗೆ ಹಿಂದೆಯೇ ಅಧ್ಯಯನ ನಡೆಸಿ, ಅವರ ಸಾಹಿತ್ಯದ ಮೌಲ್ಯಮಾಪನ ಮಾಡಿ, ಅವರ ಸಾಧನೆಯನ್ನು ದಾಖಲಿಸಲು ಕಾರಣರಾದವರು ಡಾ. ಕೆ. ಚಿನ್ನಪ್ಪ ಗೌಡರು. ಅವರು 24.5.2021 ರಂದು ಫೇಸ್‌ಬುಕ್‌ಲ್ಲಿ ಅ.ಗೌ. ಕಿನ್ನಿಗೋಳಿಯವರ ಸಾಹಿತ್ಯವನ್ನು ಸಮಗ್ರವಾಗಿ ಪ್ರಕಟಿಸುವ ಅಗತ್ಯದ ಕುರಿತು ಒಂದು ಟಿಪ್ಪಣಿ ಬರೆದಿದ್ದಾರೆ. ಅದರಲ್ಲಿ ಅವರು ಅ.ಗೌ.ಕಿ.ಯವರ ಬಗ್ಗೆ ಹೇಳಿರುವ ಮಾತುಗಳು ಹೀಗಿವೆ: “ಅಧಿಕಾರ ಕೇಂದ್ರಗಳಿಂದ, ಜಾತಿ ಬಡತನಗಳ ಕಾರಣಗಳಿಗಾಗಿ ಸಂಘಟಿತ ಬೆಂಬಲದಿಂದ ದೂರವೇ ಉಳಿದಿದ್ದ ಅಗೌಕಿ ನಿರ್ಲಕ್ಷ್ಯಕ್ಕೆ ಒಳಗಾದರೇನೋ ಅಂತ ನನಗನ್ನಿಸುತ್ತದೆ. ಅವರ ಕಾಲದ ಸ್ಥಳೀಯ ಸಾಮಾಜಿಕ ಸಮಸ್ಯೆಗಳಿಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ವಸಾಹತು ಕಾಲಘಟ್ಟದ ಸಾಂಸ್ಕೃತಿಕ ಸಂಘರ್ಷಗಳಿಗೆ, ರಾಷ್ಟ್ರೀಯತೆಯ ತುಡಿತಗಳಿಗೆ, ಧಾರ್ಮಿಕ ಪಲ್ಲಟಗಳಿಗೆ ಅಗೌಕಿ ಮನಸ್ಸು ಸ್ಪಂದಿಸಿದ ಚಹರೆಗಳನ್ನು ಅವರ ಬರಹಗಳಲ್ಲಿ ಕಾಣಬಹುದು. ತನ್ನ ಬದುಕಿನಲ್ಲಿ ಸಾಕಷ್ಟು ನೋವು ಅವಮಾನಗಳನ್ನು ಉಂಡಿದ್ದ ಅಗೌಕಿಯವರು ಅವುಗಳನ್ನು ಕವನಗಳಲ್ಲಿ ಲೇಖನಗಳಲ್ಲಿ ದಾಖಲಿಸಿದ್ದರು.”

*****

ಗ್ರಂಥಋಣ:
1. ಹಿರಿಯ ಕವಿ ಅ. ಗೌ. ಕಿನ್ನಿಗೋಳಿ. ಡಾ. ಕೆ. ಚಿನ್ನಪ್ಪ ಗೌಡ. ಪ್ರಕಾಶಕರು: ಕನ್ನಡ ಸಂಘ, ಕಾಂತಾವರ.2009
2. ಕಾವ್ಯ ಲಹರಿ. ಅಚ್ಯುತಗೌಡ ಕಿನ್ನಿಗೋಳಿ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು. 2004.
ಕೃತಜ್ಞತೆಗಳು:
1. ಡಾ. ಕೆ. ಚಿನ್ನಪ್ಪ ಗೌಡ
2. ಪು. ಗುರುಪ್ರಸಾದ್ ಭಟ್
3. ಶ್ರೀಮತಿ ಜಯಂತಿ (ಅ.ಗೌ.ಕಿ.ಯವರ ಮಗಳು)
4. ಡಾ. ನಾ. ಮೊಗಸಾಲೆ.