ರೋಗಿ ಹೇಳುವುದನ್ನು ಗಮನವಿಟ್ಟು ಕೇಳಿದಾಗ ಅವರ ಕಾಯಿಲೆಯ ಜೊತೆಗೆ ಮನಸ್ಸಿನ ತೊಂದರೆಗಳು ಇದ್ದರೆ ಅದು ನಮಗೆ ಗೋಚರಿಸುತ್ತದೆ. ಹಾಗಾಗಿ ನಾನಂತೂ ಹೆಚ್ಚಿನ ಸಮಯ ನನ್ನಲ್ಲಿಗೆ ಬರುವ ವ್ಯಕ್ತಿಗಳ ರೋಗ ಲಕ್ಷಣದ ಜೊತೆಯಲ್ಲಿ ಅವರು ಹೇಳುವ ಇನ್ನಿತರ ವಿಷಯದ ಬಗ್ಗೆ ಕೂಡಾ ಕಿವಿ ಕೊಡುತ್ತೇನೆ. ಕೆಲವೊಮ್ಮೆ ಇದು ತೊಂದರೆಯೂ ಕೂಡಾ ಆಗಬಹುದು. ಯಾಕೆಂದರೆ ಹೊರ ರೋಗಿ ವಿಭಾಗದಲ್ಲಿ ಬೇರೆ ರೋಗಿಗಳು ಕಾಯುತ್ತಾ ಇದ್ದಾಗಲೂ ಹಲವರು ಅವರ ಕಷ್ಟ-ಸುಖಗಳನ್ನು ಹೇಳುತ್ತಾ ಹೋಗುತ್ತಿರುತ್ತಾರೆ. ನನ್ನ ಊಟದ ಸಮಯ ಆಗಿ, ಹೊಟ್ಟೆ ಹಸಿಯುತ್ತಾ ಇದ್ದರೂ ಅವರಿಗೆ ಅವರವರ ಕಷ್ಟ ದೊಡ್ಡದು.
ಡಾ.ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯ ಬರಹ:

ನಮ್ಮ ಕೈಗೆ ಒಂದು ಪದವಿ ಸಿಕ್ಕಿತೆಂದ ಮಾತ್ರಕ್ಕೆ ಎಲ್ಲರೂ ಡಾಕ್ಟರ್ ಆಗುವುದಿಲ್ಲ. ಅವರು ರೋಗಿಗಳ ಚಿಕಿತ್ಸೆ ಮಾಡುವ ಒಂದು ಯಂತ್ರ ಅಥವಾ ರೋಬೋ(ಟ್) ಆಗಬಹುದಷ್ಟೆ. ಎಲ್ಲಾ ಡಾಕ್ಟರ್ ನಿಜವಾದ ವೈದ್ಯರೂ ಆಗುವುದಿಲ್ಲ. ರೋಗಿಗಳು ನಮ್ಮಲ್ಲಿಗೆ ಬಂದಾಗ ಅವರು ಹೇಳುವುದನ್ನು ವ್ಯವಧಾನ ಇಟ್ಟು ಕೇಳಿದರೆ ರೋಗಿಯ ಅರ್ಧ ಕಾಯಿಲೆಯು ಗುಣವಾದಂತೆ. ಆದರೆ ಕೆಲವರಿಗೆ ಈ ವ್ಯವಧಾನ ಇರುವುದು ತುಸು ಕಡಿಮೆ. ರೋಗಿಯು ಹೇಳುವ ರೋಗದ ಲಕ್ಷಣಗಳನ್ನು ಕೇಳುವ ಮೊದಲೇ ರಕ್ತ ಪರೀಕ್ಷೆಗೆ, ಸ್ಕ್ಯಾನಿಂಗ್ ಬರೆಯುವ ಕಾಲ ಇದು. ಜನರಿಗೆ ಅವರ ರೋಗದ ಜೊತೆಗೆ ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ಬೇರೆ ಯಾರು ಸಿಕ್ಕದೇ ಇರುವ ಸಮಯದಲ್ಲಿ ವೈದ್ಯ ಅವರಿಗೆ ದೇವರಾಗಿ ಕಾಣುತ್ತಾನೆ. ಈ ವೈದ್ಯರೇ ಕೌಟುಂಬಿಕ ವೈದ್ಯರು ಅಥವಾ ಫ್ಯಾಮಿಲಿ ಡಾಕ್ಟರ್ ಗಳು.

ಸರಿಯಾಗಿ ಗಮನವಿಟ್ಟು ಕೇಳಿದಾಗ ಅವರ ಕಾಯಿಲೆಯ ಜೊತೆಗೆ ಇನ್ನೂ ಯಾವುದಾದರೂ ಮನಸ್ಸಿನ ತೊಂದರೆಗಳು ಇದ್ದರೆ ಅದು ನಮಗೆ ಗೋಚರಿಸುತ್ತದೆ. ಹಾಗಾಗಿ ನಾನಂತೂ ಹೆಚ್ಚಿನ ಸಮಯ ನನ್ನಲ್ಲಿಗೆ ಬರುವ ವ್ಯಕ್ತಿಗಳ ರೋಗ ಲಕ್ಷಣದ ಜೊತೆಯಲ್ಲಿ ಅವರು ಹೇಳುವ ಇನ್ನಿತರ ವಿಷಯದ ಬಗ್ಗೆ ಕೂಡಾ ಕಿವಿ ಕೊಡುತ್ತೇನೆ. ಕೆಲವೊಮ್ಮೆ ಇದು ತೊಂದರೆಯೂ ಕೂಡಾ ಆಗಬಹುದು. ಯಾಕೆಂದರೆ ಹೊರ ರೋಗಿ ವಿಭಾಗದಲ್ಲಿ ಬೇರೆ ರೋಗಿಗಳು ಕಾಯುತ್ತಾ ಇದ್ದಾಗಲೂ ಹಲವರು ಅವರ ಕಷ್ಟ-ಸುಖಗಳನ್ನು ಹೇಳುತ್ತಾ ಹೋಗುತ್ತಿರುತ್ತಾರೆ. ನನ್ನ ಊಟದ ಸಮಯ ಆಗಿ, ಹೊಟ್ಟೆ ಹಸಿಯುತ್ತಾ ಇದ್ದರೂ ಅವರಿಗೆ ಅವರವರ ಕಷ್ಟ ದೊಡ್ಡದು. ಯಾರು ಕಾಯುತ್ತಿದ್ದಾರೆ ಎಂಬುದರ ಪರಿವೆಯೇ ಅವರಿಗೆ ಇರುವುದಿಲ್ಲ. ಹೀಗಾದಾಗ ಅನೇಕ ಬಾರಿ ಹೊರಗಡೆ ಕುಳಿತವರು ದೊಡ್ಡ ಸ್ವರದಲ್ಲಿ ಜಗಳವನ್ನು ತೆಗೆಯುವುದು ಉಂಟು!

ಮನೆಯಲ್ಲಿರುವ ತನ್ನ ಗಂಡನ, ಮಕ್ಕಳ ಬಗ್ಗೆ, ಸೊಸೆಯಂದಿರ ಅಥವಾ ತಮ್ಮ ಅತ್ತೆಯಂದಿರ ಬಗ್ಗೆ ಹೇಳುತ್ತಾ ಇರುವಾಗ ಕೆಲವು ಮಹಿಳೆಯರಿಗೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ನನ್ನಲ್ಲಿ ಅವರ ಕಷ್ಟವನ್ನು ಹೇಳಿಕೊಂಡು ನಾನು ಒಂದೆರಡು ಸಾಂತ್ವನದ ಮಾತುಗಳನ್ನು ಹೇಳಿದರೆ ಅವರಿಗೆ ಬಂದದ್ದು ಸಾರ್ಥಕ ಆಗುತ್ತದೆ ಅಂತೆ. ಹೀಗಾಗಿ ನನ್ನ ಅನೇಕ ರೋಗಿಯ ಮನೆಯಲ್ಲಿನ ಎಲ್ಲಾ ಒಳಿತು-ಕೆಡುಕುಗಳು ನನಗೆ ಗೊತ್ತಿರುತ್ತಿತ್ತು. ನಂತರದ ಕೆಲವು ದಿನಗಳಲ್ಲಿ ಅವರು ಯಾರ ಬಗ್ಗೆ ಹೇಳಿದ್ದರೋ, ಆ ವ್ಯಕ್ತಿ ಬಂದು ಮೊದಲು ಹೇಳಿದ ವಿಷಯದ ಸಂಪೂರ್ಣ ವಿರೋಧದ ವಿಷಯಗಳನ್ನೂ ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡು ನಸು ನಗುತ್ತಿದ್ದ ನಾನು, ಸರಿ ಯಾರು ತಪ್ಪು ಯಾರದ್ದು ಎಂದು ಹೇಳುವ ನ್ಯಾಯಾಧೀಶರ ಕೆಲಸಕ್ಕೆ ಹೋಗುವುದಿಲ್ಲ.

ಗಂಡನ ಕೆಲವು ಚಟಗಳ ಬಗ್ಗೆ, ಕುಡಿತದ ಬಗ್ಗೆ, ಯಾವುದೋ ಸ್ತ್ರೀಯ ಜೊತೆ ಇರುವ ಸಂಬಂಧದ ಬಗ್ಗೆ, ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ( ಅವರ ಪ್ರಕಾರ ) ಇತ್ಯಾದಿ ವಿಷಯಗಳನ್ನು ಸವಿಸ್ತಾರವಾಗಿ ನನ್ನಲ್ಲಿ ಕೆಲವರು ಇಂದಿಗೂ ಹೇಳುತ್ತಾರೆ. ಇದರ ಜೊತೆಗೆ ಕಣ್ಣಲ್ಲಿ ನೀರಿನ ಧಾರೆ ಹರಿದು ಕೆಲವೊಮ್ಮೆ ಹೊರಗಡೆ ಹೋಗುವಾಗ ಒರೆಸಿಕೊಂಡ ಕಣ್ಣುಗಳು ಕೆಂಪಾಗಿರುತ್ತದೆ. ಇದನ್ನು ನೋಡಿದ ಹೊರಗಡೆ ಇರುವ ಬಾಕಿ ಜನರು ನನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಡಾಕ್ಟರ್ ಇವರಿಗೆ ಯಾಕೋ ಚೆನ್ನಾಗಿ ಬೈದಿದ್ದಾರೆ ಅಥವಾ ಏನೋ ನಡೆದಿರಬಹುದು, ಅದಕ್ಕಾಗಿ ಅವರು ಅಳುತ್ತಿದ್ದಾರೆ ಎಂದು ಕೂಡ ಯೋಚಿಸಬಹುದು ಎಂಬ ಜ್ಞಾನ ಅವರಿಗೆ ಇರುವುದಿಲ್ಲ. ಕಣ್ಣೀರು ಸುರಿದು ತಲೆಯ ಭಾರ ಇಳಿದದ್ದೇ ಅವರಿಗೆ ದೊಡ್ಡದು.

ಇನ್ನೂ ಮಕ್ಕಳ ಮತ್ತು ಸೊಸೆಯಂದಿರ ಬಗ್ಗೆ ಹೇಳಿಕೊಳ್ಳುವ ಜನರ ಸಂಖ್ಯೆಯೇನೂ ಕಡಿಮೆ ಇಲ್ಲ. ನನ್ನ ಮಗ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಆಸ್ತಿಯೆಲ್ಲವನ್ನೂ ಅವರ ಪಾಲಿಗೆ ಬರೆದು ಕೊಟ್ಟಿದ್ದರೂ ಖರ್ಚಿಗೆ ಹಣ ಕೊಡದೆ ತನಗೆ ಸಿಕ್ಕುವ ಪಿಂಚಣಿ ಯಾ ವಿಧವಾ ವೇತನದಲ್ಲಿ ಔಷಧಿ ತೆಗೆದುಕೊಳ್ಳಬೇಕು ಎಂದು ಹೇಳುವವರು ಕೆಲವರು. ಆದರೆ ನನ್ನ ಮನಸ್ಸಿಗೆ ತುಂಬಾ ಬೇಸರವಾಗುವ ಸಂಗತಿ ಒಂದಿದೆ. ಕೆಲವೊಮ್ಮೆ ಈ ಮಕ್ಕಳು ಯಾವ ಸ್ಥಿತಿಗೆ ತಲುಪುತ್ತಾರೆ ಎಂದರೆ ನೀನು ಇನ್ನೂ ಎಷ್ಟು ದಿವಸ ಬದುಕುತ್ತೀಯಾ, ನಿನಗೆ ಖರ್ಚು ಮಾಡಿ ಸಾಕಾಗಿದೆ ಎನ್ನುವವರು ಇದ್ದಾರೆ ಎಂದು, ಅವರ ತಂದೆ ತಾಯಿಗಳು ಹೇಳುವಾಗ ನನಗೆ ಮನುಷ್ಯನು ಇಷ್ಟೊಂದು ಕಠೋರವಾಗಬಹುದೇ ಎಂದು ಅನಿಸುತ್ತದೆ. ಆದರೆ ಇದು ಕೆಲವೊಮ್ಮೆ ಯಾವ ಪರಾಕಾಷ್ಠೆಗೆ ತಲುಪುತ್ತದೆ ಎಂಬುದು ನಾನು ಆಸ್ಪತ್ರೆಯಲ್ಲಿದ್ದಾಗ ಒಮ್ಮೆ ನನ್ನ ಗಮನಕ್ಕೆ ಬಂದಿದೆ.

ಆಗ ಜಿಲ್ಲೆಯಲ್ಲಿ ಪ್ರೈವೇಟ್ ಆಸ್ಪತ್ರೆಗಳ ಸಂಖ್ಯೆ ಬರೀ ಒಂದೆರಡು ಮಾತ್ರ ಇತ್ತು. ಅದು ಅಲ್ಲದೆ ಜಿಲ್ಲಾಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಎಂಬ ನಂಬಿಕೆಯಿಂದ, ಎಲ್ಲಾ ಕಡೆಯಿಂದ ಜನ ಬಂದು ಇಲ್ಲಿ ದಾಖಲಾಗುತ್ತಿದ್ದರು. ಜಿಲ್ಲಾಸ್ಪತ್ರೆಯಲ್ಲಿದ್ದದ್ದು ಹೆಚ್ಚಾಗಿ ಸಾಮಾನ್ಯ, ಸ್ವಲ್ಪ ಅರೆ ಸ್ಪೆಷಲ್, ಕೆಲವು ಸ್ಪೆಷಲ್ ವಾರ್ಡುಗಳು.

ಬಹಳ ವರ್ಷಗಳ ಹಿಂದಿನ ದಿನದ ಕಥೆ ಇದು. ಜಿಲ್ಲೆಯ ಒಂದು ಸಾಮಾನ್ಯ ಶ್ರೀಮಂತರ ಮನೆಯ ಮುದುಕಿಗೆ ಲಕ್ವ ಹೊಡೆದು ಅವರನ್ನು ಸ್ಪೆಷಲ್ ವಾರ್ಡಿನಲ್ಲಿ ಸೇರಿಸಿಕೊಂಡಿದ್ದೆ. ಆಗ ಮಂಗಳೂರು, ಮೈಸೂರಿಗೆ ಕರೆದುಕೊಂಡು ಹೋಗಿ ಎಂದು ಹೇಳುವಂತೆ ಇರಲಿಲ್ಲ. ಯಾಕೆಂದರೆ ಆ ದಿನಗಳಲ್ಲಿ ಬೇರೆ ಊರಿಗೆ ಕರೆದುಕೊಂಡು ಹೋಗುವಂತಹವರ ಸಂಖ್ಯೆ ಬಹಳ ಕಡಿಮೆಯಿತ್ತು. ಅಂಬುಲೆನ್ಸ್ ಇದ್ದದ್ದು ಇಡೀ ಜಿಲ್ಲೆಗೆ ಒಂದು ಮಾತ್ರ. ಹಾಗಾಗಿ ಇಲ್ಲಿ ಎಲ್ಲಾ ರೀತಿಯ ರೋಗಿಗಳ ಚಿಕಿತ್ಸೆಯೂ ನಡೆಸಲಾಗುತ್ತಿತ್ತು.

ನಾನು ಈ ಲಕ್ವ ಹೊಡೆದ ಮುದುಕಿಯನ್ನು ಒಂದು ತಿಂಗಳ ಕಾಲದಿಂದ ಚಿಕಿತ್ಸೆ ಮಾಡುತ್ತಾ ಇದ್ದೆ. ಕೊನೆಗೆ ಬೆನ್ನಿನಲ್ಲಿ ಕೆಲವು ಹುಣ್ಣುಗಳು ಕೂಡ ಕಾಣತೊಡಗಿದವು. ನಾನು ಆಗ ಕಂಡಂತಹ ಒಂದು ಅಸಾಧಾರಣ ವಿಶೇಷತೆ ಎಂದರೆ ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿನ ಸಿಸ್ಟರ್, ಆಯಾ ಮತ್ತಿತರರ ಒಂದು ನಿಸ್ವಾರ್ಥ ಸೇವೆ. ಇದನ್ನು ನಾನು ಇಂದಿಗೂ ಎದೆ ತಟ್ಟಿ ಹೇಳಬಲ್ಲೆ. ನಾನು ಅನೇಕ ಸರಕಾರೀ ಆಸ್ಪತ್ರೆಗಳನ್ನು, ಕಾರ್ಪೊರೇಟ್ ಆಸ್ಪತ್ರೆಗಳನ್ನು ಕಂಡಿದ್ದೇನೆ. ನನ್ನ ಸಂಬಂಧಿಕರು, ಪರಿಚಿತರು ವಿಶೇಷವಾದ ಆಸ್ಪತ್ರೆಗಳಲ್ಲಿ ಕೂಡಾ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ ಆ ದಿನಗಳಲ್ಲಿ ನಾನು ಕಂಡಂತಹ ದಾದಿಯರ ನಿಸ್ವಾರ್ಥ ಸೇವೆಗೆ ಸಾಟಿ ಎಲ್ಲಿಯೂ ಇಲ್ಲ.

ಶರೀರದಲ್ಲಿ ಹುಣ್ಣಾಗಿ, ಮಲಗಿದ್ದಲ್ಲಿಂದ ಏಳಲಾಗದ, ಎಷ್ಟೋ ರೋಗಿಗಳನ್ನು ಯಾವುದೇ ಮುಜುಗರವಿಲ್ಲದೆ ಚೆನ್ನಾಗಿ ಚಿಕಿತ್ಸೆ ಮಾಡಿ, ಅವರೊಡನೆ ನಸು ನಗುತ್ತಾ ಮಾತನಾಡಿ, ಅವರ ಕಡೆಯವರು ಯಾರು ಇಲ್ಲದಿದ್ದರೂ ಮೈಯನ್ನು ಒರೆಸುವ (ಸ್ಪಾಂಜ್ ಬಾತ್) ಮಾಡುತ್ತಿದ್ದವರನ್ನು ಹತ್ತಿರದಿಂದ ನೋಡಿದ್ದೇನೆ. ಆಗ ಅವರ ಮನಸ್ಸಿನಲ್ಲಿ ಯಾವುದೇ ಹೇಸಿಗೆಯ ಭಾವನೆಗಳು ಇರುತ್ತಿರಲಿಲ್ಲ.

ಈಗ ಲಕ್ವ ಹೊಡೆದು ಮಲಗಿದ್ದ ಪಾರ್ವತಿ ಕಥೆ; ದಾಖಲು ಆಗಿ ಒಂದು ತಿಂಗಳು ಕಳೆದು, ಕಾಯಿಲೆ ಗುಣವಾಗದೇ ಇದ್ದಾಗ, ಮಲಗಿಕೊಂಡೆ ಇದ್ದ ಅಮ್ಮನಿಗೆ ಬೆನ್ನಿನಲ್ಲಿ ಹುಣ್ಣುಗಳು ಶುರುವಾಗಿದೆ. ಅತ್ತಿತ್ತ ಅಲ್ಲಾಡದೆ ಮಲಗಿಕೊಂಡಿರುವ ರೋಗಿಯ ಬೆನ್ನಿನಲ್ಲಿ “ಬೆಡ್ ಸೋರ್ ” ಎಂಬ ಹುಣ್ಣುಗಳು ಆಗುವುದು ಸಾಮಾನ್ಯ. ಸ್ವಲ್ಪ ಮಟ್ಟಿಗೆ ವಾಸನೆಯು ಶುರುವಾಗಿತ್ತು. ಆದರೆ ವಾರ್ಡಿನ ದಾದಿಯರ ಶುಶ್ರೂಷೆಯಲ್ಲಿ ಯಾವುದೇ ತೊಂದರೆ ಇಲ್ಲದೆ ಅವರನ್ನು ನೋಡಿಕೊಳ್ಳಲಾಗುತಿತ್ತು. ಅಂದು ಬೆಳಿಗ್ಗೆ ವಾರ್ಡಿನ ರೋಗಿಗಳನ್ನು ನೋಡಿ ಹೊರಗೆ ಬರುವಾಗ ಅಮ್ಮನ ಇಬ್ಬರು ಗಂಡು ಮಕ್ಕಳು ನನ್ನ ಬಳಿ ಬಂದರು. ತಲೆ ತಗ್ಗಿಸಿಕೊಂಡು ಇದ್ದ ಅವರು ಏನನ್ನೋ ಕೇಳಬೇಕು ಎಂಬಂತಿತ್ತು ಅವರ ನಡತೆ. ಏನು ವಿಶೇಷ ಎಂದಾಗ ಅವರಲ್ಲೊಬ್ಬ ಒಂದು ಪ್ರಶ್ನೆ ಕೇಳಿದ.

ನನ್ನ ಮನಸ್ಸಿಗೆ ತುಂಬಾ ಬೇಸರವಾಗುವ ಸಂಗತಿ ಒಂದಿದೆ. ಕೆಲವೊಮ್ಮೆ ಈ ಮಕ್ಕಳು ಯಾವ ಸ್ಥಿತಿಗೆ ತಲುಪುತ್ತಾರೆ ಎಂದರೆ ನೀನು ಇನ್ನೂ ಎಷ್ಟು ದಿವಸ ಬದುಕುತ್ತೀಯಾ, ನಿನಗೆ ಖರ್ಚು ಮಾಡಿ ಸಾಕಾಗಿದೆ ಎನ್ನುವವರು ಇದ್ದಾರೆ ಎಂದು, ಅವರ ತಂದೆ ತಾಯಿಗಳು ಹೇಳುವಾಗ ನನಗೆ ಮನುಷ್ಯನು ಇಷ್ಟೊಂದು ಕಠೋರವಾಗಬಹುದೇ ಎಂದು ಅನಿಸುತ್ತದೆ.

‘ಸಾರ್, ನಮ್ಮ ಅಮ್ಮ ಇನ್ನೂ ಎಷ್ಟು ದಿವಸ ಬದುಕಬಹುದು.’

ನನ್ನಲ್ಲಿ ಇದಕ್ಕೆ ಉತ್ತರ ಇರಲಿಲ್ಲ

‘ನಾವು, ನಮ್ಮ ಕೈಲಾದ ಚಿಕಿತ್ಸೆಯನ್ನು ಮಾಡುತ್ತಿದ್ದೇವೆ, ಉಳಿದದ್ದು ದೇವರ ಕೈಯಲ್ಲಿ ಇದೆ,’ ಎಂದೆ.

‘ಸಾರ್ ನಮಗೂ ನೋಡಿ, ನೋಡಿ, ಸಾಕಾಗಿದೆ. ಮನೆಯ ಎಲ್ಲಾ ಕೆಲಸಗಳನ್ನು ಬಿಟ್ಟು ನಾವು ಆಸ್ಪತ್ರೆಯಲ್ಲಿ ದಿವಸಾ ಬಂದು ಕುಳಿತು ಕೊಳ್ಳಬೇಕಾಗುತ್ತದೆ. ನಮ್ಮ ಮನೆಯ, ತೋಟದ ಕೆಲಸಗಳು ಯಾವುದು ಸರಿಯಾಗಿ ನಡೆಯುತ್ತಿಲ್ಲ. ಹಾಗಾಗಿ ಇದಕ್ಕೆ ಏನಾದರೂ ಒಂದು ದಾರಿ ಇದೆಯೇ.’

ಇವರ ಮಾತಿನ ಅರ್ಥ ಆಗದ ನಾನು ಆಗ ಅವರಿಗೆ ಹೇಳಿದೆ.

‘ಸರಿ ನಿಮಗೆ ಇಲ್ಲಿ ಬರಲು ಕಷ್ಟ ಆಗುತ್ತದೆ ಅಂದರೆ ಅವರನ್ನು ಡಿಸ್ಚಾರ್ಜ್ ಮಾಡಿಕೊಡುತ್ತೇನೆ. ಮನೆಗೆ ಕರೆದುಕೊಂಡು ಹೋಗಿ ನೋಡಿಕೊಳ್ಳಿ. ಔಷಧಿಗಳನ್ನು ಬರೆದುಕೊಡುತ್ತೇನೆ.’

“ಅದು ಹಾಗಲ್ಲ ಸಾರ್, ಔಷಧಿಯನ್ನು ಬರೆದು ಕೊಡುವುದು ಬೇಡ. ಇಲ್ಲಿ ನೀವು ಕೊಡುವ ಔಷಧಿಗಳನ್ನು ಕೂಡಾ ನಿಲ್ಲಿಸಲು ಆಗುವುದಿಲ್ಲವೇ” ಎಂದರು.

ಅಲ್ಲಿಗೆ ನನಗೆ ಅವರ ಯೋಚನೆಯ ದಾಟಿ ತಿಳಿಯಿತು. ಅಂದರೆ ಔಷಧಿಗಳನ್ನು ಕೊಡದೇ ತಾಯಿ ಇಲ್ಲಿ ಸತ್ತರೆ ಸಾಯಲಿ ಎಂಬುದು.!

ನಾನು ಮೊದಲೇ ಸ್ವಲ್ಪ ಮುಂಗೋಪಿ. ಇಷ್ಟನ್ನು ಕೇಳಿದ ನಾನು, ಹತ್ತಿರದ ವಾರ್ಡಿನವರೆಲ್ಲರೂ ಹೊರಗೆ ಬಂದು, ನಿಂತು ಕೇಳುವಷ್ಟು ಜೋರಾಗಿ ಅವರನ್ನು ಗದರಿದೆ.

“ನಿಮ್ಮ ಕೈಯಲ್ಲಿ ತಾಯಿಯನ್ನು ನೋಡಿಕೊಳ್ಳಲು ಆಗದಿದ್ದರೆ ದಯವಿಟ್ಟು ಅವರನ್ನು ಇಲ್ಲಿಯೇ ಬಿಟ್ಟು ನೀವುಗಳು ಮನೆಗೆ ಹೋಗಿ. ನಾವು ಆಸ್ಪತ್ರೆಯವರು ಹೇಗಾದರೂ ಅವರು ಇರುವಷ್ಟು ದಿನ ಬದುಕಿಸಿ ಕೊಳ್ಳಲು ಪ್ರಯತ್ನ ಮಾಡುತ್ತೇವೆ. ನಂತರ ನನ್ನ ಕೈಯಿಂದ ಆಗದಿರುವಾಗ ಹೇಳಿ ಕಳುಹಿಸುತ್ತೇನೆ” ಎಂದೆ.

ನಂತರದ ದಿನಗಳಲ್ಲಿ ನಾನು ವಾರ್ಡಿಗೆ ಹೋಗುವಾಗ ಇವರೆಲ್ಲರೂ ತಲೆ ತಪ್ಪಿಸಿಕೊಂಡು ಹೋಗುತ್ತಿದ್ದರು. ಅಂತೂ ಇಂತೂ ಹದಿನೈದು ದಿವಸ ನಮ್ಮ ಆಸ್ಪತ್ರೆಯಲ್ಲಿ ನರಳಿಕೊಂಡು ಇದ್ದ ಪಾರ್ವತಿ, ನಂತರ ಮರಣ ಹೊಂದಿದರು.

ಇಂತಹಾ ಸಂದಿಗ್ಧ ಪರಿಸ್ಥಿತಿಗಳಲ್ಲಿ ವೈದ್ಯರ ಭಾವನೆಗಳು ಬಹಳ ಕ್ಲಿಷ್ಟಕರವಾಗಿರುತ್ತದೆ. ಮಕ್ಕಳು ಹೇಳಿದ್ದರಲ್ಲೀ ಕೂಡಾ ದೊಡ್ಡ ತಪ್ಪು ಏನೂ ಇರಲಾರದು. ಅತ್ತ ಸಾಯುವುದೂ ಇಲ್ಲ, ಇತ್ತ ಬದುಕಿಯೂ ಉಳಿಯುವುದಿಲ್ಲ ಎಂಬ ರೋಗಿಯನ್ನು ಎಷ್ಟು ಸಮಯದವರೆಗೆ ಹೀಗೇ ನೋಡಿಕೊಳ್ಳಬಹುದು ಎಂಬುದು ಅವರವರ ಭಾವಕ್ಕೆ ತಕ್ಕಂತೆ ಇರಬಹುದೇನೋ. ವೈದ್ಯನಾಗಿ ನಾನಂತೂ ಯಾವುದೇ ರೋಗಿಯ ಕೊನೆ ಕ್ಷಣ, ಕೊನೆಯ ಉಸಿರು ಇರುವವರೆಗೆ ಚಿಕಿತ್ಸೆ ಮಾಡಲೇಬೇಕು ಎಂದು ನಿಶ್ಚಯಿಸಿದವನು. ಹೃದಯ ಬಡಿತ ನಿಂತು ಹೋದಾಗಲೂ ಎದೆಯ ಭಾಗವನ್ನು ಒತ್ತುತ್ತಾ ಸಿ.ಪೀ.ಆರ್ ( ಕಾರ್ಡಿಯೋ ಪಲ್ಮನರಿ ರಿಸಾಸಿಟೇಷನ್ ) ಅನ್ನು ನಾವು ಮಾಡುತ್ತಾ ಇದ್ದರೆ ಕೆಲವೊಮ್ಮೆ ಹೃದಯ ಬಡಿತ ಶುರುವಾಗಿ ಆ ವ್ಯಕ್ತಿಯು ಬದುಕಬಹುದು. ರಸ್ತೆ ಅಪಘಾತ, ವಿದ್ಯುತ್ ಆಘಾತ, ನೀರಿನಲ್ಲಿ ಮುಳುಗಿ, ನಾಡಿ ಬಡಿತ ನಿಂತು ಹೋಗಿರುವ ವ್ಯಕ್ತಿಯಲ್ಲಿ ಈ ಸಿ ಪೀ ಆರ್ ಅನ್ನು ಮಾಡಿದರೆ ಜನರು ಬದುಕಿ ಉಳಿಯುವ ಸಾಧ್ಯತೆಯೂ ಇದೆ. ಇದನ್ನು ಜನ ಸಾಮಾನ್ಯರು ಎಲ್ಲರೂ ಕಲಿತುಕೊಳ್ಳುವುದು ಒಳ್ಳೆಯದು. ಯಾಕೆಂದರೆ ನಮ್ಮ ಜೀವನದ ಯಾವುದೊ ಒಂದು ಘಟ್ಟದಲ್ಲಿ ಸಾಯುತ್ತಿರುವ ವ್ಯಕ್ತಿಯನ್ನು ಉಳಿಸುವ ಪರಮ ಭಾಗ್ಯ ನಮ್ಮದಾಗುತ್ತದೆ.

ಇಂತಹ ಒಂದು ಸನ್ನಿವೇಶದಲ್ಲಿ ನನ್ನಿಂದ ಆದ ತಪ್ಪು ಮತ್ತು ಆ ತಪ್ಪಿನಿಂದ ಉಂಟಾದ ಸುಖಾಂತ್ಯ, ನಾನು ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದಾಗ ನಡೆದಿತ್ತು.

ಆಸ್ಪತ್ರೆಯ ವಠಾರದ ಒಳಗಿನ ಮಹಡಿಯಲ್ಲಿ ನನ್ನ ವಾಸ. ಮಧ್ಯರಾತ್ರಿ ಎರಡು ಗಂಟೆಯ ಸಮಯದಲ್ಲಿ ಬಾಗಿಲು ಜೋರಾಗಿ ಬಡಿದು ಕೊಂಡಿತು. ಎದ್ದು ನೋಡಿದರೆ ವಾರ್ಡಿನ ಸಿಸ್ಟರ್ ತುಂಬಾ ಗಾಬರಿಯಲ್ಲಿ ಇದ್ದಾರೆ.

‘ಸಾರ್ ಚೋಂದವ್ವ ಪೇಷಂಟ್ ಉಸಿರಾಡುತ್ತಿಲ್ಲ, ಪಲ್ಸ್ ಇಲ್ಲಾ. ಏನು ಮಾಡುವದು.?’

ಇವರು ಎಪ್ಪತ್ತು ವರ್ಷದ, ತುಂಬಾ ಕೃಷಕಾಯರಾದ, ರಕ್ತದ ಒತ್ತಡದ ರೋಗಿ. ಆಸ್ಪತ್ರೆಯಲ್ಲಿ ದಾಖಲಾಗಿ ನಾಲ್ಕು ದಿನ ಆಗಿತ್ತು.

ಹಾಕಿದ ಬಟ್ಟೆಯಲ್ಲೆ ಕೆಳಗಡೆ ಓಡಿದೆ. ಹೋಗಿ ನೋಡುವಾಗ ರೋಗಿಯಲ್ಲಿ ಜೀವದ ಲಕ್ಷಣಗಳು ಯಾವುದೂ ಕಂಡು ಬರುತ್ತಿಲ್ಲ. ಕೂಡಲೇ ನನ್ನ ಕೈಗಳನ್ನು ಅವರ ಎದೆಯ ಮೇಲೆ ಇಟ್ಟು ನಿಮಿಷಕ್ಕೆ ನೂರರಂತೆ ಒತ್ತ ತೊಡಗಿದೆ. ಕೆಲವು ಕ್ಷಣ ಏನೂ ಇಲ್ಲಾ. ಮತ್ತೂ ಜೋರಾಗಿ ಒತ್ತ ತೊಡಗಿದೆ. ಲಟ್ ಎಂಬ ಶಬ್ದದೊಂದಿಗೆ, ‘ಆಂಂಂಂ’ ಎನ್ನುತ್ತಾ ಚೋಂದವ್ವ ದೊಡ್ಡದಾಗಿ ಆಕಳಿಸಿ, ಬಾಯಿ ತೆರೆದು ಉಸಿರಾಡಲು ತೊಡಗಿದರು. ಆಕ್ಸಿಜನ್ ಕೊಟ್ಟು, ಗ್ಲೂಕೋಸ್ ಡ್ರಿಪ್ ಹಾಕಿದ ಸ್ವಲ್ಪ ಹೊತ್ತಿನ ಬಳಿಕ ಅವರು ಎದ್ದು ಕುಳಿತರು!

ಅಲ್ಲಿ ಆಗಿದ್ದು ಇಷ್ಟು. ನನ್ನ ಎದೆಯ ಒತ್ತುವಿಕೆಯ ರಭಸಕ್ಕೆ, ಮೊದಲೇ ಕೃಶಕಾಯರಾಗಿದ್ದ ಚೊಂದವ್ವನ ಒಂದು ಪಕ್ಕೆಲುಬು ಲಟ್ ಎಂದು ಮುರಿದಿದೆ. ಆ ಶಾಕ್ ಗೆ, ಅವರ ನರ ಮಂಡಲ ಉತ್ತೇಜನೆಯಾಗಿ, ಹೃದಯ ಬಡಿತ ಶುರುವಾಗಿದೆ. ಮತ್ತು ಅರ್ಧ ದಾರಿಯಲ್ಲಿ ಹೋಗುತ್ತಿದ್ದ ಪ್ರಾಣ ವಾಪಸ್ ಬಂದಿದೆ!

ಮರುದಿನ ಅವರ ಎದೆಗೂಡಿಗೆ ಪಟ್ಟಿ ಹಾಕಿ  ಮುರಿದ ಮೂಳೆಯನ್ನು ಕೆಲವು ದಿನಗಳ ಚಿಕಿತ್ಸೆಯಲ್ಲಿ ಸರಿಪಡಿಸಿ, ಅವರನ್ನು ಆರೋಗ್ಯವಾಗಿ ಮನೆಗೆ ಕಳುಹಿಸಿ ಕೊಡಲಾಯಿತು.


ಯಾವುದೇ ರೋಗಿಯನ್ನು ಸಂಪೂರ್ಣವಾಗಿ ಗುಣಪಡಿಸಿ, ಎಲ್ಲರನ್ನೂ ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ನಮ್ಮ ಜೀವನದ ಗುರಿ ಒಂದೇ ಆಗಿರಬೇಕು. ವ್ಯಕ್ತಿಯ ಕೊನೆಯುಸಿರಿರುವ ತನಕ ಅವರಲ್ಲಿ ಬದುಕುವ ಛಲ ಇರುವಂತೆ ಮಾಡಿ, ಸಾವಿನಲ್ಲಿರುವ  ನೋವುಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಶಮನ ಮಾಡುವ ಪ್ರಯತ್ನವನ್ನು ಸದಾ ಮಾಡುತ್ತಿರುವುದೇ ನಮ್ಮ ಕರ್ತವ್ಯವಾಗಿರಬೇಕು. ಅದಕ್ಕೆ ದಾರಿ ಹಲವು ಇರಬಹುದು. ಫಲಾಫಲದ ಬಗ್ಗೆ ಯೋಚಿಸದೆ, ಅವಿರತ ಪ್ರಯತ್ನವನ್ನು ಮಾಡುತ್ತಲೇ ಇರಬೇಕು.