ಇರುವಿಕೆ

ತೆರೆದ ಬಾಗಿಲಿನಿಂದ ಬಂದರೊಬ್ಬೊಬ್ಬರೂ
ಅರಿವಾಗದಂತೆಯೇ ಗುರುತುಳಿಸಿದವರು.

ಕೆರೆಯ ದಂಡೆಯಲಿ ನಿಂತು ಕಲ್ಲನೆಸೆದವರು
ಹೊಳೆಯ ನೀರಿನಲಿ ಮೀನ ಹಿಡಿದವರು
ಪಾರಿಜಾತದ ಹೂವ ಮಡಿಲೊಳಗೆ ಸುರಿದವರು
ಗುಬ್ಬಿ ಎಂಜಲ ಮಾಡಿ ಮಾಡಿ ಚಪ್ಪರಿಸಿದವರು.

ಕಷ್ಟ ಸುಖಗಳ ಕಂತೆ ಜೊತೆಯಾಗಿ ಹೊತ್ತವರು
ನೋವು ನಲಿವಿನ ಬುತ್ತಿ ಹಂಚಿ ಉಂಡವರು
ಬರುವಾಗ ದಾರಿಯಲಿ ಕಾದುನಿಂತವರು
ತೆರಳುವಾ ಸಮಯದಿ ಕೈ ಬೀಸಿದವರು.

ಗದ್ದೆ ಬಯಲಿನ ಜೂಟಾಟದವರು
ಮನೆಯ ಅಂಗಳದ ಕುಂಟಲಿಪಿಯವರು
ಕಂಬ ಕಂಬಗಳನ್ನು ಹಿಡಿದಾಡಿದವರು
ಜುಟ್ಟು ಜುಟ್ಟನೆ ಹಿಡಿದು ಎಳೆದಾಡಿದವರು.

ಸರತಿ ಸಾಲಲಿ ನಿಂತು ಒಟ್ಟಾಗಿ‌ ಕಾದವರು
ದಿಬ್ಬಣದ ಬಸ್ಸಿನಲಿ ಜೊತೆಯಾಗಿ ಹೋದವರು
ಒಂದೊಂದು ಗುಣ ರೂಪ ಭಿನ್ನತೆಗಳಿದ್ದವರು
ಮನದ ಮಾಡಿನ ಕೆಳಗೆ ಒಟ್ಟಾಗಿ ಸೇರಿದರು.

ಸದ್ದಾಗದೇ ಬಂದು ಕ್ಷಣಕಾಲ ನಿಂತಿದ್ದು
ತಮ್ಮ ಪಾಡಿಗೆ ತಾವು ಸರಿದು ಹೋದವರು
ಎಲ್ಲಿಹರೊ ಹೇಗಿಹರೊ ಭುವಿಯ ಬಿಟ್ಟಿಹರೋ?!
ಅವರಿಲ್ಲದಿದ್ದರೂ… ಅವರಿರುವರು….

ಸಮುದ್ಯತಾ ಸಾಗರದ ಸಮೀಪದ ಶೆಡ್ತೀಕೆರೆ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ
ಹವ್ಯಾಸವಾಗಿ ಗಮಕವಾಚನದ ಜೊತೆ ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ
“ಭಾನುಮತಿಯ ಮುತ್ತುಗಳು” ಪ್ರಕಟಿತ ಕವನ ಸಂಕಲನ