ಎಲ್ಲವೂ ಸರಕಾಗುತ್ತಿರುವ ಸಮಾಜದಲ್ಲಿ ನಾವಿರುವಾಗ ಸಂಪ್ರದಾಯದ ಮೇಲೆ ಅದರ ಪರಿಣಾಮಗಳೇನು? ಸರ್ವವ್ಯಾಪಿಯಾದ ವ್ಯವಸ್ಥೆ ಸಂಪ್ರದಾಯವನ್ನು ಮುಟ್ಟದೇ ಇರುತ್ತದೆಯೇ? ಸಂಪ್ರದಾಯದ ಪ್ರತಿಕ್ರಿಯೆಯ ಸಮಸ್ಯೆಗಳೇನು ಎನ್ನುವುದನ್ನು ನೋಡೋಣ. ಸಂಪ್ರದಾಯವೆನ್ನುವುದು ಸರಳವಾಗಿ ಹೇಳುವುದಾದರೆ ನಮ್ಮ ಹಿರಿಯರಿಂದ ಬಂದಿದ್ದು. ಪೀಳಿಗೆಯಿಂದ ಪೀಳಿಗೆಗೆ ಬರುವಂತದ್ದು. ಹಿರಿಯರು, ಪೀಳಿಗೆ ಅಂದಾಗ ಅದು ಸಮುದಾಯವನ್ನು, ಕುಟುಂಬವನ್ನು ಒಳಗೊಂಡಿದೆ ಎನ್ನುವುದನ್ನು ಸೂಚಿಸುತ್ತದೆ. ಗುರುವಿನಿಂದ ಶಿಷ್ಯಳಿಗೆ, ಕೈಯಿಂದ ಕೈಗೆ, ಬಾಯಿಂದ ಬಾಯಿಗೆ ಬರುವ ಸಂಪ್ರದಾಯದ ಸಾಮೀಪ್ಯವು ಬದಲಾಗುತ್ತಿದ್ದಂತೆ, ಒಂದು ಅರ್ಥದಲ್ಲಿ ತನ್ನ ಪ್ರಾದೇಶಿಕತೆಯನ್ನು ಕಳೆದುಕೊಳ್ಳುತ್ತಿದ್ದಂತೆ, ಕಲೆಗೆ ತನ್ನ ತಂತ್ರ, ಕುಶಲತೆ ಮತ್ತು ವಸ್ತುವಿನೊಂದಿಗಿರುವ ಸಾವಯವ ಸಂಬಂಧವು ಕಳೆದುಹೋಗುತ್ತದೆ.
ಕೃತಿ ಪುರಪ್ಪೇಮನೆ ಬರೆಯುವ “ಯಕ್ಷಾರ್ಥ ಚಿಂತಾಮಣಿ” ಅಂಕಣದಲ್ಲಿ ಹೊಸ ಬರಹ

ಒಂದು ನಗರದಲ್ಲಾದ ಯಕ್ಷಗಾನ ಕಮ್ಮಟವೊಂದರಲ್ಲಿ ಎಲ್ಲಾ ರೀತಿಯ ಕರ್ನಾಟಕ ಯಕ್ಷಗಾನ ಪ್ರಕಾರಗಳ ಪ್ರದರ್ಶನಗಳು ಮತ್ತು ಅವುಗಳ ಮೇಲಿನ ಚಿಂತನ ಮಂಥನ ನಡೆಯಿತು. ಕಮ್ಮಟದ ಹೊರಗೆ ಚಾವಡಿಯಲ್ಲಿ ‘ದೇಶೀ’ ವಸ್ತುಗಳು (ಖಾದಿ ಬಟ್ಟೆಯನ್ನೂ ಒಳಗೊಂಡು) ಮಾರಾಟಕ್ಕೆ ಬಂದಿದ್ದವು. ಅಲ್ಲಿಯೇ ಯಕ್ಷಗಾನದ ಟೀ ಶರ್ಟ್ ಮಾರಲಿಕ್ಕೆ ಬಂದಿದ್ದರು. ಟೀ ಶರ್ಟ್ ಯಕ್ಷಗಾನದ ಭೌತಿಕವಾದ (ಮೆಟಿರಿಯಲ್) ‘ಸರಕಾಗಿತ್ತು’. ಅಂಗಿಯ ಮೇಲೆ ಪ್ರಿಂಟ್ ಮಾಡಿದ ಒಂದು ರಾಕ್ಷಸ ವೇಷದ ಚಿತ್ರ. ನಿರ್ದಿಷ್ಟ ಕಲಾವಿದನ ಚಹರೆ ಇರದ ಚಿತ್ರ. ಇದಕ್ಕೆ ತದ್ವಿರುದ್ಧವಾಗಿ ಸಿದ್ಧಾಪುರದಲ್ಲಿ ಆದ ವೃತ್ತಿ ಮೇಳದ ಆಟದಲ್ಲಿ, ಬಡಗು ತಿಟ್ಟಿನ ಜನಪ್ರಿಯ ಕಲಾವಿದರಾದ ಗಣಪತಿ ಭಟ್ ಕಣ್ಣಿಮನೆಯವರ ಚಿತ್ರವಿರುವ ಟೀ ಶರ್ಟ್ ಹಲವರು ಹಾಕಿಕೊಂಡಿದ್ದರು. ಕಣ್ಣಿಮನೆ ತೀರಿಕೊಂಡು ಹಲವು ತಿಂಗಳಾಗಿತ್ತು, ವಾರಕ್ಕೆ ಮುಂಚೆ ಕಣ್ಣಿಮನೆ ಕುಟುಂಬಕ್ಕೆ ಸಹಾಯಾರ್ಥ ಹೊನ್ನಾವರದಲ್ಲಿ ಆಟವಾಗಿತ್ತು. ಅದರ ಪ್ರಯುಕ್ತ ತಯಾರಾದ ಟೀ ಶರ್ಟ್‍ಗಳು ಅವು. ಇಲ್ಲಿ ಎರಡನ್ನೂ ಹೋಲಿಸಿದರೆ ನಗರದಲ್ಲಿ ಮಾರಾಟಕ್ಕಿದ್ದ ಅಂಗಿ ಯಾರಾದರೂ ಕೊಳ್ಳಬಹುದಾದ (ದೇಶ, ವಿದೇಶದವರೂ ಕೊಳ್ಳಬಹುದಾದ) ‘ಸರಕಾದರೆ’, ಕಣ್ಣಿಮನೆ ಅಂಗಿಯನ್ನು ಯಕ್ಷಗಾನದ ಕಾಯಂ ಪ್ರೇಕ್ಷಕರು, ಕಣ್ಣಿಮನೆ ಅಭಿಮಾನಿಗಳು ಮಾತ್ರ ಹಾಕಿಕೊಳ್ಳುವ ‘ಸರಕಾಗಿದೆ’.

ಪತ್ರಿಕೆಯಲ್ಲಿ ಇಬ್ಬರು ಕಲಾವಿದರ ಒಂದು ಚಿಕ್ಕ ಸಂದರ್ಶನ ಬಂದಿತ್ತು. ಯಕ್ಷಗಾನದ ಬಗ್ಗೆ ಈಗ ಅಲ್ಲಲ್ಲಿ ಕೇಳುವ ಕೆಲವೊಂದು ಅಭಿಪ್ರಾಯಗಳು ಒಟ್ಟಿಗೆ ಇಲ್ಲಿ ಕ್ರೋಢೀಕರಿಸಿ ಬಂದಿದ್ದರಿಂದ ಇದನ್ನು ಪ್ರಾತಿನಿಧಿಕವಾಗಿ ಬಳಸಬಹುದಾಗಿದೆ. ಅದರಲ್ಲಿ ಮೊದಲನೆಯವರು ಹೇಳಿದ ಮುಖ್ಯ ಮೂರು ವಿಷಯಗಳು: ವೃತ್ತಿಪರ ಯಕ್ಷಗಾನವು ಸರಕಾಗಿದೆ; ದೇಶ ವಿದೇಶದವರು ಬಯಸುವುದು ಸಾಂಪ್ರದಾಯಿಕ ಯಕ್ಷಗಾನ ಕಲೆಯೇ ಹೊರತು ವೃತ್ತಿಮೇಳಗಳಲ್ಲಿ ನಡೆಯುತ್ತಿರುವ ಆಟವನ್ನಲ್ಲ; ಶಾಲೆಗಳಲ್ಲಿ ಯಕ್ಷಗಾನ ಕಲಿಸುವುದಕ್ಕೆ ಸರಕಾರ ಸಹಾಯ ಮಾಡಬೇಕು. ಇವು ಮೂರು ಅಭಿಪ್ರಾಯಗಳು. ಯಕ್ಷಗಾನವು ಸರಕಾಗಿ ಮಾರ್ಪಡುವುದು ಎಂದರೆ ಏನು? ಈ ಸಂದರ್ಶನದ ಪ್ರಕಾರ ಬರೀ ಮನೋರಂಜನೆಯಾಗಿ ಬಳಕೆಯಾಗುವುದು, ಆರಾಧನ ಕಲೆಯಾಗಿದ್ದು ಗಂಭೀರವಾದ ಆಖ್ಯಾನವನ್ನು ತೊರೆದು ಜನ ಮೆಚ್ಚುವಂತೆ ಆಟವಾಡುವುದು, ಇದರ ಇತಿಹಾಸವನ್ನು ಮರೆತು ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಳ್ಳುವುದು. ಮುಂದುವರಿದು ‘ಯಕ್ಷಗಾನವನ್ನು ಮನೋರಂಜನೆಗೆ, ಮತ್ತು ವೃತ್ತಿಪರ ಕಲಾವಿದರು ತಮ್ಮ ಹೊಟ್ಟೆಪಾಡಿಗೆ ಬಳಸಿಕೊಳ್ಳುತ್ತಿದ್ದಾರೆ. ಯಾರ ಪಾತ್ರ ಯಾರಾದರೂ ಮಾಡಬಹುದು. ಎಷ್ಟು ಬೇಕಾದರೂ ಕುಣಿಯಬಹುದು, ದ್ರೌಪದಿಯ ಮನೋವೇದನೆ, ಕೃಷ್ಣನ ಕುಟಿಲತೆ ಯಾವುದೂ ಪಾತ್ರದಲ್ಲಿ ಬರಬೇಕೆಂದು ಇಲ್ಲ. ಆದರೆ ಕಲೆ ಬದುಕಿಗೆ ಅಗತ್ಯ. ಬದುಕಿಗಾಗಿ ಕಲೆಯನ್ನು ಉಪಯೋಗಿಸುವುದಲ್ಲ. ಹಾಗೆ ಮಾಡುವುದರಿಂದ ಕಲೆಯ ಮೂಲಸತ್ವಕ್ಕೆ ದಕ್ಕೆ ಬರುತ್ತದೆ’.

ಈ ಸಂದರ್ಶನದ ಸಾರವನ್ನು ಗಮನಿಸಿದರೆ ಇಲ್ಲಿ ಕಲೆಯೆನ್ನುವುದು ಸಂಪ್ರದಾಯವನ್ನು ಉಳಿಸುವ ಕೆಲಸವನ್ನು ಮೊದಲು ಮಾಡಬೇಕಿದೆ ಮತ್ತು ಸಂಪ್ರದಾಯವೆನ್ನುವುದು ಎಚ್ಚರಿಕೆಯಿಂದ ಕಾಪಿಡಬೇಕಾದದ್ದು. ಅಂತಹ ಕಾಪಿಟ್ಟ ಕಲೆಯನ್ನು ಮೆಚ್ಚುವವರು ದೇಶ ವಿದೇಶದ ಜನರೇ ಹೊರತು ಸ್ಥಳೀಯ ಜನರಿಗೆ ಅದು ಅನಗತ್ಯವಾಗಿದೆ. ಸ್ಥಳೀಯ ಜನರಿಗೆ ಇಷ್ಟೆಲ್ಲಾ ಇತಿಹಾಸ ಮತ್ತು ರಂಗಸಾಧ್ಯತೆಗಳಿರುವ ಕಲೆಯ ಬಗ್ಗೆ ಆರಾಧನಾ ಭಾವವಿಲ್ಲ.

ಅದೇ ಬರಹದಲ್ಲಿ ಇನ್ನೊಂದು ಬದಿಗೆ ವೃತ್ತಿಮೇಳದಲ್ಲಿ ಭಾಗವತರಾಗಿದ್ದವರು, ವೃತ್ತಿಮೇಳಗಳು ಪೌರಾಣಿಕ ಪ್ರಸಂಗಗಳನ್ನು ಮಾತ್ರ ನಂಬುವಂತಿಲ್ಲ. ಪೌರಾಣಿಕ ಪ್ರಸಂಗಳನ್ನು ಮಾತ್ರ ನಡೆಸಿ ಕೆಲವೊಂದು ಮೇಳಗಳು ಮುಚ್ಚಿ ಹೋಗುವ ಪ್ರಸಂಗ ಬಂದಾಗ ಹೊಸ ಪ್ರಸಂಗಗಳನ್ನು ಆಡಿ ಹೊಸ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾಯಿತು ಎನ್ನುತ್ತಾರೆ. ಆ ಸಂದರ್ಭದಲ್ಲಿ ಸೃಷ್ಟಿಯಾದ ಪ್ರೇಕ್ಷಕರಿಗೆ ಯಕ್ಷಗಾನದ ಮೂಲಸತ್ವವೂ ಅಗತ್ಯವಿಲ್ಲ ಮತ್ತು ಸಂಪ್ರದಾಯವೂ ಬೇಕಾಗಿಲ್ಲ ಎಂದು ಅಭಿಪ್ರಾಯಪಡುತ್ತಾರೆ.

ಈ ಮೇಲಿನ ಉದಾಹರಣೆಯಲ್ಲಿ ಸರಕಿನ ಪ್ರಸ್ತಾಪವೇ ನೇರವಾಗಿ ಬಂದಿದ್ದರೆ, ಮೊದಲ ಟೀ ಶರ್ಟ್‍ನ ಉದಾಹರಣೆಯಲ್ಲಿ ಸರಕಾಗಿಯೇ ಯಕ್ಷಗಾನ ಉಪಯೋಗಿಸಲ್ಪಟ್ಟಂತೆ ನಮಗೆ ಕಾಣುತ್ತದೆ. ಸರಕು ಎಂದಾಗ ನಮಗೆ ಥಟ್ಟನೆ ‘ಅರ್ಥ’ವಾಗುವುದು ಇದು ವ್ಯವಹಾರಕ್ಕೆ ಸಂಬಂಧಪಟ್ಟದ್ದು. ಮಾರುವ ಅಥವಾ ಕೊಂಡು ಉಪಯೋಗಿಸುವ ವಸ್ತು. ಈಗ ನಮ್ಮ ಆಡುಭಾಷೆಯಲ್ಲಿ ಸರಕಾಗುವುದು ಅಂದರೆ ‘ಬಳಸಲ್ಪಡುವುದು’ ಎನ್ನುವ ಸ್ವಲ್ಪ ನೇತ್ಯಾತ್ಮಕ ಭಾವವನ್ನೂ ಒಳಗೊಂಡಿದೆ. ಯಾವ ಕೆಲಸಕ್ಕೆಂದು ಒಂದು ವಸ್ತು ನಿಗದಿಯಾಗಿದೆಯೊ ಅದನ್ನು ಬಿಟ್ಟು ಬೇರೆಯದಕ್ಕೆ ಬಳಸುವುದು. ಬಂಡವಾಳಶಾಹಿ ಸಮಾಜದಲ್ಲಿ ನಮ್ಮೆಲ್ಲಾ ಚಟುವಟಿಕೆಗಳು, ವಸ್ತುಗಳು, ವ್ಯಕ್ತಿಗಳು ಸರಕಾಗಿ ಮಾರ್ಪಾಡಾಗುತ್ತಿರುವುದನ್ನು ನೋಡುತ್ತಿದ್ದೇವೆ. ಪ್ರಿಂಟ್ ಮಿಡಿಯಾ ಜನಪ್ರಿಯವಾಗಿದ್ದಾಗಲೇ ಜಾಹೀರಾತುಗಳಲ್ಲಿ ಹೆಣ್ಣಿಗೆ ಸಂಬಂಧ ಪಡದ ಯಾವುದೋ ವಸ್ತುವನ್ನು ಮಾರಲು ಹೇಗೆ ಹೆಣ್ಣಿನ ದೇಹವನ್ನು ಸಮಾಜ ಬಳಸಿಕೊಳ್ಳುತ್ತದೆ ಎನ್ನುವುದನ್ನು ನಾವು ನೋಡುತ್ತಲೇ ಬೆಳೆದಿದ್ದೇವೆ. ಈಗಿನ ಸೋಶಿಯಲ್ ಮೀಡಿಯಾದ ಕಾಲದಲ್ಲಿ, ಯಾವುದು ಯಾವುದಕ್ಕಾಗಿ ಬಳಸಲ್ಪಡುತ್ತದೆ ಎಂದು ಊಹಿಸುವುದೂ ಕಷ್ಟವಾಗಿದೆ. ಜೊತೆಗೆ ನಾವು ಮಾಡುವ ಎಲ್ಲಾ ಕೆಲಸಗಳೂ ಖಾಸಗೀ, ಸಾರ್ವಜನಿಕ ಎಂಬ ಭೇದವಿಲ್ಲದೆ ಮೀಡಿಯಾದಲ್ಲಿ ಅಪ್‍ಲೋಡ್ ಮಾಡುವುದು, ಅಥವಾ ವೈರಲ್ ಆಗುತ್ತಾ ಇರುವುದು, ನಮ್ಮ ಬದುಕಿನ ಪ್ರತೀ ಕ್ಷಣವನ್ನೂ ಒಂದು ಪ್ರದರ್ಶನವಾಗಿ ಮಾರ್ಪಡಿಸುತ್ತಾ ಇರುವಾಗ, ಒಂದು ಪ್ರದರ್ಶನಕ್ಕಾಗಿಯೆ ಇರುವ ಕಲೆಯ ಮೇಲೆ ಅದರಿಂದಾಗುವ ಪರಿಣಾಮಗಳೇನು ಅನ್ನುವುದನ್ನು ಮೇಲಿನ ಉದಾಹರಣೆಗಳು ಹೇಳುತ್ತಾ ಇರುವಂತೆಯೂ ಕಾಣುತ್ತದೆ. ಸಂಪ್ರದಾಯ ಮತ್ತು ಸರಕನ್ನು ಎದುರು ಬದರಾಗಿ ಇಟ್ಟಿರುವುದು ಹಲವು ಕಾರಣಕ್ಕೆ ಕುತೂಹಲಕರವಾಗಿದೆ ಮತ್ತು ಇಲ್ಲಿ ಸಂಪ್ರದಾಯವೂ ಸರಕಾಗಿರುವುದನ್ನು ಗ್ರಹಿಸಿದಂತೆ ಕಾಣುವುದಿಲ್ಲ. ‘ಅಥೆಂಟಿಕ್’ ಆಗಿ ಒಂದು ಕಲೆಯನ್ನು ಇಟ್ಟುಕೊಳ್ಳುವುದೂ ಇವತ್ತಿನ ಕಾಲಕ್ಕೆ ಒಂದು ರೀತಿಯ ಸರಕೇ ಆಗಿದೆ. ಅಂತಹ ವಿಶೇಷ ವಸ್ತುಗಳನ್ನು ಮಾರುವುದಕ್ಕೆಂದೇ ‘ನೀಶ್ ಮಾರ್ಕೆಟಿಂಗ್’ ಎನ್ನುವ ಒಂದು ಫ್ಯಾನ್ಸಿ ಪದವೂ ಇಂಗ್ಲಿಷ್‍ನಲ್ಲಿದೆ.

ಎಲ್ಲವೂ ಸರಕಾಗುತ್ತಿರುವ ಸಮಾಜದಲ್ಲಿ ನಾವಿರುವಾಗ ಸಂಪ್ರದಾಯದ ಮೇಲೆ ಅದರ ಪರಿಣಾಮಗಳೇನು? ಸರ್ವವ್ಯಾಪಿಯಾದ ವ್ಯವಸ್ಥೆ ಸಂಪ್ರದಾಯವನ್ನು ಮುಟ್ಟದೇ ಇರುತ್ತದೆಯೇ? ಸಂಪ್ರದಾಯದ ಪ್ರತಿಕ್ರಿಯೆಯ ಸಮಸ್ಯೆಗಳೇನು ಎನ್ನುವುದನ್ನು ನೋಡೋಣ. ಸಂಪ್ರದಾಯವೆನ್ನುವುದು ಸರಳವಾಗಿ ಹೇಳುವುದಾದರೆ ನಮ್ಮ ಹಿರಿಯರಿಂದ ಬಂದಿದ್ದು. ಪೀಳಿಗೆಯಿಂದ ಪೀಳಿಗೆಗೆ ಬರುವಂತದ್ದು. ಹಿರಿಯರು, ಪೀಳಿಗೆ ಅಂದಾಗ ಅದು ಸಮುದಾಯವನ್ನು, ಕುಟುಂಬವನ್ನು ಒಳಗೊಂಡಿದೆ ಎನ್ನುವುದನ್ನು ಸೂಚಿಸುತ್ತದೆ. ಗುರುವಿನಿಂದ ಶಿಷ್ಯಳಿಗೆ, ಕೈಯಿಂದ ಕೈಗೆ, ಬಾಯಿಂದ ಬಾಯಿಗೆ ಬರುವ ಸಂಪ್ರದಾಯದ ಸಾಮೀಪ್ಯವು ಬದಲಾಗುತ್ತಿದ್ದಂತೆ, ಒಂದು ಅರ್ಥದಲ್ಲಿ ತನ್ನ ಪ್ರಾದೇಶಿಕತೆಯನ್ನು ಕಳೆದುಕೊಳ್ಳುತ್ತಿದ್ದಂತೆ, ಕಲೆಗೆ ತನ್ನ ತಂತ್ರ, ಕುಶಲತೆ ಮತ್ತು ವಸ್ತುವಿನೊಂದಿಗಿರುವ ಸಾವಯವ ಸಂಬಂಧವು ಕಳೆದುಹೋಗುತ್ತದೆ. ‘ಕಳೆದು ಹೋಗುವುದು’ ಎಂದು ಇದನ್ನು ಹೆಸರಿಸುತಿದ್ದಂತೆಯೆ, ‘ಉಳಿಸುವʼ, ಹಿಂದಿನದರ ಬಗ್ಗೆ ಇರುವ ನಾಸ್ಟಾಲಿಜಿಕ್ ಆದ ಪ್ರತಿಕ್ರಿಯೆಗಳನ್ನು ಕೊಡುತ್ತಾ ಹೋಗುತ್ತೇವೆ ಮತ್ತು ಆ ನಾಸ್ಟಾಲಿಜಿ ನಮ್ಮನ್ನು ಆ ಕಲೆಯಲ್ಲಿ ಕಳೆದು ಹೋಗಿದ್ದು ಯಾವುದೋ ಅದನ್ನು ಅದರ ಕೇಂದ್ರ ‘ಮೌಲ್ಯ’ವನ್ನಾಗಿ ಗುರುತಿಸಿಕೊಳ್ಳಲು ನಿರ್ದೇಶಿಸುತ್ತದೆ.

 

‘ಯಕ್ಷಗಾನವನ್ನು ಮನೋರಂಜನೆಗೆ, ಮತ್ತು ವೃತ್ತಿಪರ ಕಲಾವಿದರು ತಮ್ಮ ಹೊಟ್ಟೆಪಾಡಿಗೆ ಬಳಸಿಕೊಳ್ಳುತ್ತಿದ್ದಾರೆ. ಯಾರ ಪಾತ್ರ ಯಾರಾದರೂ ಮಾಡಬಹುದು. ಎಷ್ಟು ಬೇಕಾದರೂ ಕುಣಿಯಬಹುದು, ದ್ರೌಪದಿಯ ಮನೋವೇದನೆ, ಕೃಷ್ಣನ ಕುಟಿಲತೆ ಯಾವುದೂ ಪಾತ್ರದಲ್ಲಿ ಬರಬೇಕೆಂದು ಇಲ್ಲ. ಆದರೆ ಕಲೆ ಬದುಕಿಗೆ ಅಗತ್ಯ. ಬದುಕಿಗಾಗಿ ಕಲೆಯನ್ನು ಉಪಯೋಗಿಸುವುದಲ್ಲ. ಹಾಗೆ ಮಾಡುವುದರಿಂದ ಕಲೆಯ ಮೂಲಸತ್ವಕ್ಕೆ ದಕ್ಕೆ ಬರುತ್ತದೆ’.

ಸರಳ ಉದಾಹರಣೆಯಾಗಿ (ಮೇಲಿನ ಸಂದರ್ಶನದ ಭಾಗದಲ್ಲಿಯೆ ಬಂದಿದ್ದು) ‘ಪ್ರಯಾಣ ಕುಣಿತ’. ‘ಯುದ್ಧ ಕುಣಿತ’ ಅಥವಾ ‘ಪೂರ್ವರಂಗ’ವನ್ನು ಈಗ ಬಳಸದೇ ಇರುವುದರಿಂದ ಯಕ್ಷಗಾನದ ಮೂಲಸತ್ವ ಕಳೆದು ಹೋಗುತ್ತದೆ ಎಂಬಲ್ಲಿ, ಈಗ ಬಳಸದೇ ಇರುವುದರಿಂದ ಅದು ಯಕ್ಷಗಾನದ ‘ಮೂಲಸತ್ವ’ ಆಗಿದೆ ಎಂದು ಗುರುತಿಸಲು ನಾವು ತೊಡಗುತ್ತೇವೆ. ಅಂದರೆ ಬಳಸದೇ ಇರುವುದರಿಂದ ಅದು ಈಗ ಯಕ್ಷಗಾನ ಸಂಪ್ರದಾಯದ ‘ಮೂಲಸತ್ವ’ವಾಗಿ ನಮಗೆ ಕಾಣತೊಡಗುತ್ತದೆ. ಒಂದು ರೀತಿಯಲ್ಲಿ ಯಾವುದು ಪೀಳಿಗೆಯಿಂದ ಪೀಳಿಗೆಗೆ ಹೋಗುತ್ತಿಲ್ಲವೊ ಅದನ್ನು ಸಂಪ್ರದಾಯವೆಂದು ಕರೆಯುತ್ತಿದ್ದಂತೆನಿಸುತ್ತದೆ. ಬಳಸದೆ ಇದ್ದಿದ್ದು ಯಾಕೆಂದರೆ ನಮ್ಮ ಈಗಿನ ಸಾಮಾಜಿಕ ಸಂಬಂಧಗಳ ವ್ಯವಸ್ಥೆಗೂ ಹಿಂದಿನ ಸಾಮಾಜಿಕ ಸಂಬಂಧಗಳಿಗೂ ಅಂತರವೇರ್ಪಟ್ಟಿದ್ದರಿಂದ. ಮೇಲಿನ ಉದಾಹರಣೆಯಲ್ಲಿಯೆ ಇದನ್ನು ವಿವರಿಸಬೇಕೆಂದರೆ ಇವತ್ತಿನ ನಮ್ಮ ಬದುಕಿನ ಶೈಲಿಗೆ ಎರಡು ಗಂಟೆ ಮುಂಚಿತವಾಗಿ ಬಂದು ಕೂತು ಪೂರ್ವರಂಗ ನೋಡುವ ಸವಲತ್ತು ನಮಗಿಲ್ಲ. ಇದು ಪೂರ್ವರಂಗಕ್ಕೆ ನಿರ್ದಿಷ್ಟವಾದುದಲ್ಲ. ಇಂತಹ ಹಲವು ಅಂಗಗಳು, ಪರಿಕಲ್ಪನೆಗಳು, ಯಾವುದೇ ಕಲಾ ಸಂಪ್ರದಾಯದಲ್ಲಿ ನೋಡಿದರೂ ನಾವು ಕಾಣುತ್ತೇವೆ. ಕಲೆಯ ಹಿಂದಿನ ಮೌಲ್ಯವನ್ನು ಉಳಿಸಬೇಕೆಂಬ ಆಸೆ ಮತ್ತು ಪ್ರಯತ್ನವು ಪ್ರಾಮಾಣಿಕವಾದದ್ದೇ ಆಗಿರುತ್ತದೆ. ಆದರೆ ಅದರೊಟ್ಟಿಗಿನ ಸಾವಯವ ಸಂಬಂಧವು ನಮ್ಮ ಬದುಕಿನ ರೀತಿಗೆ ಸಾಧ್ಯವಿಲ್ಲದಾಗ ಅದನ್ನು ಜಡವಾಗಿಯೂ ಸಂಕುಚಿತವಾಗಿಯೂ ಇಂದು ಗ್ರಹಿಸುವಂತಾಗುತ್ತದೆ.

ವರ್ತಮಾನದಲ್ಲಿ ಬಳಸಲು ಬರದದ್ದನ್ನು ಬಳಸುವಾಗ ಅದರ ‘ಮೌಲ್ಯ’ವು ಇವತ್ತು ನಮಗೆ ಉಳಿಸಬೇಕಾಗಿರುವ ‘ಮೌಲ್ಯ’ ಮಾತ್ರವಾಗಿ ಅದು ಸಿಗುತ್ತದೆ. ಬೇರೆಯಾಗಿದ್ದನ್ನು ಒಳಗೊಳ್ಳುವುದು, ಸಹಿಸುವುದು ಕಷ್ಟವಾಗುವಾಗ ನಾವು ಹೊರಗಡೆಯಿಂದ ಕಾಣುವ ಸಂಪ್ರದಾಯದ ಯಾವುದೋ ‘ಮೌಲ್ಯ’ವನ್ನು ತುರ್ತಾಗಿ ಹೆಕ್ಕಿ ಅದಕ್ಕೆ ಕಲಾ ಸಂಪ್ರದಾಯದ ಇಡೀ ಸಾರವನ್ನು ಆರೋಪಿಸಲು ತೊಡಗುತ್ತೇವೆ. ಕಲೆಯ ಸಂಪ್ರದಾಯದ ಸಾರದಲ್ಲಿ ಮೌಲ್ಯಯುತವಾದದ್ದನ್ನು ಉಳಿಸಬೇಕೆಂದು ಹೊರಡುವ ಮಾರ್ಗವೂ ನಮ್ಮ ಇವತ್ತಿನ ಸಾಮಾಜಿಕ ವ್ಯವಸ್ಥೆಯೊಳಗಿನ ತರ್ಕವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. ಇದು ಕಲಾ ಸಂಪ್ರದಾಯಕ್ಕೆ ಮಾತ್ರವಲ್ಲ ನಮ್ಮ ಜೀವನದ ಹಲವು ಸಂಪ್ರದಾಯದ ವಿಷಯಗಳು ಇಂದು ಹಾಗಾಗಿವೆ. ಸರಕಾಗುವುದನ್ನು ತಪ್ಪಿಸಲು ಅಥವಾ ಅದಕ್ಕೆ ಔಷಧಿಯಾಗಿ ಸಂಪ್ರದಾಯವನ್ನಿಡುವುದು ಅನುಪಯೋಗಿ ಕೆಲಸ ಮಾತ್ರವಲ್ಲ, ಅದು ಸಂಪ್ರದಾಯವನ್ನೆ (ಸಂಪ್ರದಾಯದ ನಮ್ಮ ಗ್ರಹಿಕೆಯನ್ನೆ) ಜಡ ಮತ್ತು ಸಂಕುಚಿತವಾಗಿಸುತ್ತಾ ಹೋಗುತ್ತದೆ.

ಹೀಗಾಗಿರುವುದರಿಂದಲೇ ಇಂತಹ ಸಂಪ್ರದಾಯದ ಗ್ರಹಿಕೆಯೊಂದಿಗೆ ಸೃಜನಶೀಲವಾಗಿ ಮುಖಾಮುಖಿಯಾಗಲು ಸಾಧ್ಯವಾಗುವುದು ಅದರ ಪ್ಯಾರಡಿಯಿಂದ ಮಾತ್ರ ಎಂದನಿಸುತ್ತದೆ. ಇವತ್ತಿನ ಬದುಕಿನ ಶೈಲಿ, ಅದು ಕೊಡುವ ಅನುಭವಗಳಿಗೂ ಮತ್ತು ಪರಿಕಲ್ಪನೆಗಳಿಗೂ ಇರುವ ಅಂತರವನ್ನು ಪರೀಕ್ಷಿಸಿಕೊಳ್ಳುವ ಜಾಗವಾಗಿ ಇದು ಸಹಾಯ ಮಾಡಬಹುದು. ಸಮಸ್ಯೆಗಳಿರುವ ಭಾಗವನ್ನು, ಅದರಲ್ಲಿ ಅಡಕವಾಗಿರುವ ಆಲೋಚನೆಯನ್ನು ಹಿಗ್ಗಿಸುವಷ್ಟು ಹಿಗ್ಗಿಸಿ ನೋಡಿದಾಗ ಸಿಗುವ ಕಾಣ್ಕೆಗಳು, ಇವನ್ನು ಅರ್ಥೈಸಿಕೊಳ್ಳಲು ಮಾತ್ರವಲ್ಲ ಅದನ್ನು ಎದುರಿಸಲು ಮಾರ್ಗಗಳನ್ನೂ ತೋರಿಸಬಹುದು. ಅಂತಹ ಪ್ರಯೋಗಗಳನ್ನು ನಾವೂ ಮಾಡುವುದಕ್ಕೆ ಪ್ರಯತ್ನಿಸಿದ್ದೇವೆ. ಯಕ್ಷಗಾನದ ರೂಪ ಲಕ್ಷಣಗಳ ನಿಯಮಗಳ ಒಳಗೆಯೇ ಇಂತಹ ಪ್ರಯೋಗಗಳನ್ನು ಮಾಡಿದರೆ ಮಾತ್ರ ಯಕ್ಷಗಾನದೊಟ್ಟಿಗೆ ಅರ್ಥವತ್ತಾದ ಒಂದು ಮಾತುಕತೆ ಸಾಧ್ಯವಾಗುತ್ತದೆ.

ಇದಕ್ಕೆ ವಿರುದ್ಧವಾಗಿ, ಇವತ್ತು ಎಲ್ಲಾ ರೀತಿಯ ಕಲಾಪ್ರಕಾರಗಳು, ದೇಶ, ಭಾಷೆಯ ಹಂಗಿಲ್ಲದೆ ಅದರ ಸ್ವರೂಪ, ಲಕ್ಷಣಗಳೂ ನಮ್ಮ ಕೈಯಳತೆಯಲ್ಲೇ ಸಿಗುತ್ತಿರುವಾಗ, ಯಾವುದಕ್ಕೆ ಯಾವುದನ್ನಾದರೂ ಕಸಿ ಮಾಡುವುದಕ್ಕೆ ಎಲ್ಲಾ ಕಲೆಗಳು ತೆರೆದುಕೊಂಡಿರುವ ಹಾಗೆ ಅನ್ನಿಸುತ್ತದೆ. ಪ್ರಪಂಚದ ಯಾವುದೊ ಮೂಲೆಯಲ್ಲಿರುವ ಅತ್ಯಂತ ಪೊಟೆನ್ಶಿಯಲ್ ಆಗಿ ಕಾಣುವ ಕಲೆಯ ತಂತ್ರವೆಲ್ಲವೂ ನಮಗೆ ಸಿಗುತ್ತಿರುವ ಹಾಗೆ ಭಾಸವಾಗುವ ಕಾಲದಲ್ಲಿ ನಾವಿದ್ದೇವೆ. ಆದರೆ ಇದರಿಂದಲೂ ಕಲೆಯು ವರ್ತಮಾನದ ಬದುಕಿನೊಂದಿಗೆ ಸಂಬಂಧ ಕಳೆದುಕೊಳ್ಳುತ್ತದೆ. ಪ್ರಯೋಗಗಳು ಪ್ರೇಕ್ಷಕರಿಗೆ ಸ್ವಲ್ಪವೂ ಪರಿಚಯವೇ ಇಲ್ಲದೆ ದೂರವಾದಂತೆ ಅದರ ಕ್ರಿಟಿಕಲ್ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಪ್ರದರ್ಶನಗಳು ಟೂರಿಸ್ಟ್ ಅಟ್ರಾಕ್ಷನ್ ಮಾತ್ರ ಆಗುತ್ತದೆ. ಮೇಲಿನ ಟೀ ಶರ್ಟ್ ಉದಾಹರಣೆಯಲ್ಲಿಯೆ, ರಾಕ್ಷಸ ವೇಷವಿರುವ, ಯಾರಾದರೂ ಕೊಳ್ಳಬಹುದಾದ ಟೀ ಶರ್ಟ್ ಯಕ್ಷಗಾನವನ್ನು ಒಂದು ಎಕ್ಸಾಟಿಕ್(ಅಪರೂಪದ) ಜನಪದ ಕಲೆಯಾಗಿ ಪ್ರತಿನಿಧಿಸುತ್ತಿರುತ್ತದೆ. ಅದರೆ ಕಣ್ಣಿಮನೆ ಗಣಪತಿ ಭಟ್ ಅವರ ಟೀ ಶರ್ಟ್ ಹಾಕಿಕೊಂಡವರು ಗಣಪತಿ ಭಟ್ ಅವರ ಪಾತ್ರಗಳನ್ನು ನಿರಂತರವಾಗಿ ನೋಡಿ ಮೆಚ್ಚಿದವರು. ಯಕ್ಷಗಾನವು ಇಂತಹ ಪ್ರೇಕ್ಷಕರ ಜೀವನದಲ್ಲಿ ಒಂದು ನಿಶ್ಚಿತವಾದ ಮತ್ತು ನಿರಂತರವಾದ ಸ್ಥಾನವನ್ನು ಹೊಂದಿರುತ್ತದೆ. ಒಂದು ನಿಶ್ಚಿತ ಪ್ರೇಕ್ಷಕ ವರ್ಗಕ್ಕೆ, ಒಂದು ಸಮುದಾಯದೊಟ್ಟಿಗೆ ಕೊಡುಕೊಳುವಿಕೆಯಿಲ್ಲದಿದ್ದರೆ, ಅದು ಹುಟ್ಟಿ ಬೆಳೆಯುತ್ತಿರುವ ಸಮುದಾಯದ ಪ್ರತಿಫಲನವಾಗುತ್ತಾ ಅದರ ಪ್ರತಿಕ್ರಿಯೆಯನ್ನು ಒಳಗೊಳ್ಳುತ್ತಾ ಬದಲಾವಣೆಗಳು, ಪ್ರಯೋಗಗಳು ನಡೆಯದಿದ್ದರೆ ಅವು ಐಡೆಂಟಿಟಿ ರಾಜಕೀಯದ ಭಾಗವಾಗಿ ಪರಿಣಾಮವು ಶೂನ್ಯವಾಗುತ್ತದೆ. ವೃತ್ತಿಮೇಳಗಳ ಉಳಿವಿನ ಪ್ರಯತ್ನಗಳನ್ನು ಕೂಡಿಕಳೆಯುವಿಕೆಯ ಪ್ರಯೋಗದ ಭಾಗವಾಗಿಯೇ ನಾವು ನೋಡಬೇಕು ಮತ್ತು ಸಂದರ್ಶನದಲ್ಲಿ ವೃತ್ತಿಮೇಳದ ಭಾಗವತರು ಇದನ್ನೆ ಸೂಚಿಸುತ್ತಿದ್ದಾರೆಂದೆನಿಸುತ್ತದೆ.

ಪ್ರಯೋಗಗಳಲ್ಲಿ ಕಳೆಯುವುದು ಇರುತ್ತದೆ ಎನ್ನುವುದನ್ನು ಇಲ್ಲಿ ಒತ್ತಿ ಹೇಳಬೇಕು. ಯಾಕೆಂದರೆ ಇವತ್ತಿನ ಯಕ್ಷಗಾನದ ಒಂದು ಆಶ್ರಯತಾಣವಾದ ಸೋಶಿಯಲ್ ಮಿಡಿಯಾದ ‘ವಿಮರ್ಶೆ’ಗಳನ್ನು ಕಡೆಗಣಿಸಲಾಗುವುದಿಲ್ಲ. ಅದರಲ್ಲಿ ಹೆಚ್ಚಾಗಿ ಚರ್ಚಿಸಲ್ಪಡುವ ವಿಷಯವೇ ಕಳೆಯಬೇಕಾದ ಮತ್ತು ಇಂತಹ ಸೀಮಿತ ಅರ್ಥದ ಸಂಪ್ರದಾಯದ ವೈಭವೀಕರಣದ ಉದಾಹರಣೆಗಳು. ಬಿಟ್ಟು ಹೋಗಿದ್ದನ್ನು, ಅಂದರೆ ಪೀಳಿಗೆಯಿಂದ ಪೀಳಿಗೆಗೆ ವೃತ್ತಿಮೇಳಗಳು ದಾಟಿಸದ್ದನ್ನು ಇಂದು ಪ್ರಯೋಗಿಸುವುದು ಹೊಸ ಪ್ರಯೋಗವೆಂದು ನೋಡದೆ ಅದನ್ನು ಸಂಪ್ರದಾಯ ಎಂದು ಕರೆಯುವುದು ಹೇಗೆ ಐಡೆಂಟಿಟಿ ರಾಜಕೀಯದ ಭಾಗವಾಗುತ್ತದೆ ಎನ್ನುವುದನ್ನು ಮುಂದಿನ ಬರಹದಲ್ಲಿ ವಿಸ್ತರಿಸಬಹುದು.