ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆʼಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ’ಯ ತಪ್ಪು ಸ್ಪೆಲಿಂಗ್ ಆಗುತ್ತದೆ. ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ಎರಡು ಮೂರು ಒತ್ತಕ್ಷರ ಬಳಸಬೇಕಾಗುತ್ತದೆ. ಅದು ಓದುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ.  ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆದು ಗೊಂದಲವೇರ್ಪಡುತ್ತದೆ.
‘ಇಂಗ್ಲೆಂಡ್ ಪತ್ರ’ದಲ್ಲಿ ಕೇಶವ ಕುಲಕರ್ಣಿ ಓದುವಿಕೆ ಮತ್ತು ಅಕ್ಷರ ಜೋಡಣೆಯ ಕುರಿತು ಬರೆದಿದ್ದಾರೆ. 

 

ಯಾವುದನ್ನು ಬರೆದರೆ ಓದುಗರನ್ನು ತಲುಪಬಹುದೆಂಬ ಕುತೂಹಲ ಎನ್ನುವ ಬರಹವನ್ನು ಕಳೆದ ಬಾರಿ ಬರೆದಿದ್ದೆ. ಈ ಕುತೂಹಲದ ಜಾಡು ಹಿಡಿದಾಗ ಮತ್ತಷ್ಟು ಸಂಗತಿಗಳು ಸೇರಿಕೊಂಡಿವೆ.  ಉದಾಹರಣೆಗೆ ಹೆಸರುಗಳನ್ನು ಬರೆಯುವ ವಿಚಾರ.

ನಾವು ಚಿಕ್ಕವರಿದ್ದಾಗ ಹೆಂಗಸರ ಹೆಸರನ್ನು ಗೀತಾ, ಸವಿತಾ, ಮಾಲಾ, ಸೀತಾ ಎಂದೂ, ಗಂಡಸರ ಹೆಸರುಗಳನ್ನು ರಮೇಶ, ಗಣೇಶ, ಸಂತೋಷ, ರಾಜೇಶ ಎಂದು ಎಲ್ಲ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ಬರೆಯುತ್ತಿದ್ದರು, ನಮ್ಮ ಪೀಳಿಗೆಯವರೂ ಹಾಗೆಯೇ ಬರೆಯುತ್ತಿದ್ದೆವು. ಇತ್ತೀಚಿನ ಒಂದೆರೆಡು ದಶಕಗಳಿಂದ, ಅದರಲ್ಲೂ ಕನ್ನಡ ಟಿವಿ ವಾಹಿನಿಗಳ ಸಂಖ್ಯೆ ಹೆಚ್ಚಾದ ಮೇಲೆ, ಹೆಂಗಸರ ಹೆಸರುಗಳು ಗೀತ, ಸವಿತ, ಮಾಲ, ಸೀತ ಎಂದೂ, ಗಂಡಸರ ಹೆಸರುಗಳನ್ನು ರಮೇಶ್, ಗಣೇಶ್, ಸಂತೋಷ್, ರಾಜೇಶ್ ಎಂದೂ ಬರೆಯುತ್ತಾರೆ. ಅಂದರೆ ಇಂಗ್ಲೀಷ್ ಭಾಷೆಯಲ್ಲಿ ಮೊದಲು ಹೆಸರುಗಳನ್ನು ಬರೆದುಕೊಂಡು, ನಂತರ ಕನ್ನಡಕ್ಕೆ ಭಾಷಾಂತರ ಮಾಡಿದಂತೆ ಕಾಣಿಸುತ್ತವೆ, ಈ ಹೆಸರುಗಳು. ಇದು ಕನ್ನಡ ಭಾಷೆ ಬೆಳೆಯುತ್ತಿರುವ ಸಂಕೇತವೋ ಅಥವಾ ವಿನಾಶದತ್ತ ಹೊರಟಿರುವ ಸಂಕೇತವೋ ಎನ್ನುವುದನ್ನು ಕನ್ನಡ ಪಂಡಿತರೇ ಉತ್ತರಿಸಬೇಕು.

ಕನ್ನಡದಲ್ಲಿ ಸ್ಪೆಲ್ಲಿಂಗ್:

ಇಂಗ್ಲೀಷಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಆಗುವಂತೆ ಕನ್ನಡದಲ್ಲಿ ಕಾಗುಣಿತ ದೋಷಗಳು ಆಗುತ್ತವೆ. ಅದನ್ನು ಅಮೇರಿಕದಲ್ಲಿ ನೆಲೆಸಿರುವ ಕನ್ನಡದ ಹೆಸರಾಂತ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ಪ್ರತಿ ವಾರ ತಪ್ಪದೇ ‘ಸ್ವಚ್ಛ ಭಾಷೆ ಅಭಿಯಾನʼದಲ್ಲಿ ಬರೆದು ವಾಟ್ಸ್ಯಾಪ್ ಮಾಡುತ್ತಾರೆ, ಫೇಸ್ಬುಕ್ಕಿನಲ್ಲಿ ಬರೆಯುತ್ತಾರೆ. ನಾನು ಈಗ ಬರೆಯುತ್ತಿರುವುದು ಕಾಗುಣಿತ ದೋಷದ ಬಗ್ಗೆ ಅಲ್ಲ. ಕನ್ನಡದಲ್ಲಿ ಪ್ರತಿ ಶಬ್ದಕ್ಕೂ ಇರುವ ನಿಖರವಾದ ಸ್ಪೆಲಿಂಗ್ ಇರುವ ಬಗ್ಗೆ. ಏನು ಎನ್ನುವುದನ್ನು ಸ್ವಲ್ಪ ವಿವರಿಸುತ್ತೇನೆ.

‘ಅಂಚೆʼಯನ್ನು ‘ಅಞ್ಚೆ’ ಎಂದೂ ಬರೆಯಬಹುದು. ನಿಜವಾಗಿ ನೋಡಿದರೆ ನಾನು ‘ಅಂಚೆʼಯನ್ನು ಉಚ್ಚಾರ ಮಾಡುವುದು ‘ಅಞ್ಚೆ‘ ಎಂದೇ. ‘ಮಂಗʼನನ್ನು ‘ಮಙ್ಗʼ ಎಂದು ಉಚ್ಚಾರ ಮಾಡುತ್ತೇವೆ, ಆದರೆ ‘ಮಂಗʼ ಎಂದು ಬರೆಯುತ್ತೇವೆ. ಆದರೆ ‘ಅಂಚೆʼ, ‘ಮಂಗʼ ಎಂದು ಬರೆದರೆ ಮಾತ್ರ ಓದುವವರಿಗೆ ಅರ್ಥವಾಗುತ್ತದೆ. ‘ಅಞ್ಚೆʼ ಅಥವಾ ‘ಮಙ್ಗʼ ಎಂದು ಬರೆದರೆ ಎಂಥ ಕನ್ನಡ ಓದುಗನೂ ತಬ್ಬಿಬ್ಬಾಗುವುದು ಸಹಜ. ‘ನಿನ್ನನ್ನುʼ ಎನ್ನುವುದನ್ನು ‘ನಿಂನಂನು‘ ಎಂದು ಕೂಡ ಬರೆಯಬಹುದು, ಓದುವುದರಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಅದು ತಪ್ಪು ಸ್ಪೆಲ್ಲಿಂಗ್ ಆಗುತ್ತದೆ. ಏಕೆಂದರೆ ರೂಢಿಯಲ್ಲಿ ಇರುವುದು ‘ನಿನ್ನನ್ನುʼ ಎಂದು. ‘ವಿಪರ್ಯಾಸʼವನ್ನು ‘ವಿಪರ‍್ಯಾಸʼ ಎಂದೂ ಬರೆಯಬಹುದು, ಆದರೆ ಅದು ರೂಢಿಯಲ್ಲಿ ಇಲ್ಲದಿರುವುದರಿಂದ ತಪ್ಪು ಸ್ಪೆಲಿಂಗ್ ಆಗುತ್ತದೆ. ಬೀಚಿಯವರು ‘ತಿಮ್ಮʼನನ್ನು ‘ತಿಂಮ‘ ಎಂದು ಬರೆಯುತ್ತಿದ್ದರು, ಈಗ ‘ತಿಮ್ಮʼ ಅದರ ಸರಿಯಾದ ಸ್ಪೆಲಿಂಗ್ ಆಗಿದೆ..

ಒಂದೇ ಶಬ್ದವನ್ನು ಸರಿಯಾಗಿಯೇ ಬೇರೆ ಬೇರೆ ರೀತಿಯಲ್ಲಿ ಬರೆಯಲು ಸಾಧ್ಯವಿದ್ದರೂ, ನಮಗೆ ಗೊತ್ತಿಲ್ಲದಂತೆಯೇ ಕನ್ನಡದಲ್ಲಿ ಕನ್ನಡ ಶಬ್ದಗಳ ಸ್ಪೆಲಿಂಗ್ ಇದೆ. ‘ತಂದೆʼಯನ್ನು ‘ತನ್ದೆ‘ ಎಂದು ಬರೆದರೆ ಅದು ‘ತಂದೆ’ಯ ತಪ್ಪು ಸ್ಪೆಲಿಂಗ್ ಆಗುತ್ತದೆ.

ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ ಎಂದರೆ, ನಾವು ಇತ್ತೀಚೆಗೆ ಬಹಳಷ್ಟು ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದೇವಷ್ಟೇ. ಆದರೆ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ಎರಡು ಅಥವಾ ಮೂರು ಒತ್ತಕ್ಷರಗಳು ಬರುತ್ತವೆ, ಅದನ್ನು ಹಾಗೆಯೇ ಬರೆದರೆ ಓದುವವರಿಗೆ ಕಷ್ಟವಾಗುತ್ತದೆ, ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಏಕರೂಪವನ್ನು ತರುವ ಅವಶ್ಯಕತೆ ಇದೆ, ಇಲ್ಲದಿದ್ದರೆ ಒಬ್ಬಬ್ಬರೂ ಒಂದೊಂದು ರೀತಿ ಬರೆಯುತ್ತಾರೆ.

ಉದಾಹರಣೆಗೆ, ‘ಸಾಫ್ಟ್ವೇರ್ʼ ಎಂದು ಬರೆಯುವ ಬದಲು ‘ಸಾಫ್ಟ್‌ವೇರ್‘ ಎಂದು ಬರೆದರೆ ಓದುವುದು ಸುಲಭ. “ಹಾರ್ಡ್ವೇರ್‘ ಎಂದು ಬರೆಯುವ ಬದಲು ‘ಹಾರ್ಡ್‌ವೇರ್‘ ಎಂದು ಬರೆದರೆ ಆರ್ಥಮಾಡಿಕೊಳ್ಳುವುದು ಸುಲಭ. ನಾನು ಈಗ ನೆಲೆಸಿರುವ ‘ಬರ್ಮಿಂಗ್ಹ್ಯಾಮ್ʼ ನಗರವನ್ನು ‘ಬರ್ಮಿಂಗ್‍ಹ್ಯಾಮ್ʼ ಎಂದು ಬರೆದರೆ ಓದುವವರಿಗೆ ಸುಲಭ. ಆದ್ದರಿಂದ ಕನ್ನಡದಲ್ಲಿ ಸ್ಪೆಲಿಂಗಿನ ಸ್ಟ್ಯಾಂಡರ್ಡಾಜೇಶನ್ (ಸ್ಟ್ಯಾಂಡರ್ಡೈಜೇಷನ್) ಮಾಡುವ ಅವಶ್ಯಕತೆ ಇದೆ.

ಕನ್ನಡದ ಅಕ್ಷರಗಳು:

ನಾನು ಶಾಲೆಯಲ್ಲಿ ಓದುವಾಗ ಕನ್ನಡದ ಅಕ್ಷರಮಾಲೆಯಲ್ಲಿ ಒಂದು ಅಕ್ಷರವಿತ್ತು (ಈಗಲೂ ಇದೆಯೋ ಇಲ್ಲವೋ ಗೊತ್ತಿಲ್ಲ), ಆದರೆ ಅದನ್ನು ಇದುವರೆಗೂ ಉಪಯೋಗಿಸಿದ ನೆನಪೇ ಇಲ್ಲ. ಆ ಅಕ್ಷರವೇ ‘ೠʼ. ಅನುನಾಸಿಕಗಳಾದ ಙ ಮತ್ತು ಞ ಗಳ ಉಪಯೋಗಗಳೂ ವಿರಳವೇ ಆದರೂ ‘ಅಂಚೆʼ, ‘ಮಂಗʼ ಶಬ್ದಗಳ ಉಚ್ಚಾರವನ್ನು ಹೇಳಿಕೊಡಲು ಉಪಯುಕ್ತವಾಗಿವೆ. ಕೆಲವು ಅಕ್ಷರಗಳು ಕನ್ನಡದಲ್ಲಿ ಇದ್ದವು, ಅವು ಪೂರ್ತಿ ಮರೆಯಾಗಿವೆ. ಉದಾಹರಣೆಗೆ: ಱ ಮತ್ತು ೞ. ಈ ಅಕ್ಷರಗಳನ್ನು ಉಪಯೋಗಿಸಿ ಕನ್ನಡದಲ್ಲಿ ಈಗ ಯಾವ ಶಬ್ದಗಳೂ ಉಳಿದಿಲ್ಲ, ಅವುಗಳನ್ನು ಹೇಗೆ ಉಚ್ಚರಿಸಬೇಕು ಎನ್ನುವುದನ್ನು ಕೂಡ ಕನ್ನಡಿಗರು ಮರೆತಾಗಿದೆ. ಹೀಗೆ ಕೆಲವು ಅಕ್ಷರಗಳು ಮರೆಯಾಗಿವೆ, ಕೆಲವು ಅನುಪಯುಕ್ತವಾಗಿವೆ.

ಈಗಿರುವ ಕನ್ನಡದ ಅಕ್ಷರಗಳಿಂದ ದಿನ ನಿತ್ಯ ಉಪಯೋಗಿಸುವ ಕೆಲವು ಶಬ್ದಗಳ ಉಚ್ಚಾರಗಳನ್ನು ತರುವುದು ಕಷ್ಟವಾಗುತ್ತದೆ. ಅದರಲ್ಲೂ ಇಂಗ್ಲೀಷ್ ಶಬ್ದಗಳನ್ನು ಕನ್ನಡದಲ್ಲಿ ಬಳಸುವಾಗ, ಕನ್ನಡದ ಅಕ್ಷರಗಳನ್ನು ಬಳಸಿ ಆ ಉಚ್ಚಾರಗಳನ್ನು ತರುವುದು ಸಾಧ್ಯವಾಗುವುದಿಲ್ಲ.

ಅಂಚೆʼ, ‘ಮಂಗʼ ಎಂದು ಬರೆದರೆ ಮಾತ್ರ ಓದುವವರಿಗೆ ಅರ್ಥವಾಗುತ್ತದೆ. ‘ಅಞ್ಚೆʼ ಅಥವಾ ‘ಮಙ್ಗʼ ಎಂದು ಬರೆದರೆ ಎಂಥ ಕನ್ನಡ ಓದುಗನೂ ತಬ್ಬಿಬ್ಬಾಗುವುದು ಸಹಜ. ‘ನಿನ್ನನ್ನುʼ ಎನ್ನುವುದನ್ನು ‘ನಿಂನಂನು‘ ಎಂದು ಕೂಡ ಬರೆಯಬಹುದು, ಓದುವುದರಲ್ಲಿ ಯಾವ ವ್ಯತ್ಯಾಸವೂ ಆಗುವುದಿಲ್ಲ, ಆದರೆ ಅದು ತಪ್ಪು ಸ್ಪೆಲ್ಲಿಂಗ್ ಆಗುತ್ತದೆ.

ಉದಾಹರಣೆಗೆ: ‘lossʼ ಶಬ್ದವನ್ನು ‘ಲಾಸ್‘ ಎಂದು ಬರೆದರೆ ಅದರ ಮೂಲ ಉಚ್ಚಾರ ಅದರಲ್ಲಿ ಬರುವುದಿಲ್ಲ. ನಾನು ಚಿಕ್ಕವನಿದ್ದಾಗ ‘ಲಾʼ ದ ಮೇಲೆ ‘ಅರ್ಧ ಚಂದ್ರಾಕಾರ (U)‘ ಹಾಕಿ ‘loss’ನಲ್ಲಿರುವ ‘ಆʼ ಉಚ್ಚಾರವನ್ನು ತರುತ್ತಿದ್ದೆವು. ಆದರೆ ಈ ಅರ್ಧಚಂದ್ರಾಕರಾದ ಪ್ರಯೋಗವನ್ನು ನಾನು ಪುಸ್ತಕಗಳಲ್ಲಿ ಅಥವಾ ಪತ್ರಿಕೆಗಳಲ್ಲಿ ನೋಡಿದ ನೆನಪಿಲ್ಲ.

ಹಾಗೆಯೇ ‘Appleʼ ಶಬ್ದವನ್ನು“ಆ್ಯಪಲ್” ಎಂದು ಬರೆದರೆ ಓದಲು ಸುಲಭ, ‘ಆಪಲ್ʼ ಎಂದೋ ‘ಯಾಪಲ್ʼ ಎಂದೋ ಬರೆದರೆ ‘Apple’ ಎಂದು ಉಚ್ಚಾರ ಮಾಡುವುದು ಕಷ್ಟ. ಆದರೆ ಈ ‘ಆ್ಯʼ ಎನ್ನುವ ಶಬ್ದ ಕನ್ನಡದ ವ್ಯಾಕರಣದ ಮಟ್ಟಿಗೆ ನಿಷಿದ್ಧ.

‘ಫʼ ಮತ್ತು ‘ಜʼ ಅಕ್ಷರಗಳನ್ನು ಸ್ವಲ್ಪ ಬದಲಾಯಿಸಿ ‘ಫ಼ʼ ಮತ್ತು ‘ಜ಼ʼ ಎಂದಾಗಿಸಿ ‘foolʼ ಮತ್ತು ‘zoomʼ ಗಳನ್ನು ಸರಿಯಾಗಿ ಕನ್ನಡದಲ್ಲಿ ಬರೆಯಬಹುದು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರುವ ವಿಚಾರವೇ. ಆದರೆ ಈ ಅಕ್ಷರಗಳ ಬಳಕೆಯನ್ನು ಪತ್ರಿಕೆಗಳಲ್ಲಿ ಪುಸ್ತಕಗಳಲ್ಲಿ ನಾನು ನೋಡಿಲ್ಲ.

ಱ ಮತ್ತು ೞ ಅಕ್ಷರಗಳನ್ನು ಕನ್ನಡದ ಅಕ್ಷರಮಾಲೆಯಿಂದ ಅಧೀಕೃತವಾಗಿ ಕೈಬಿಟ್ಟಂತೆ, ಫ಼ ಮತ್ತು ಜ಼ ಅಕ್ಷರಗಳನ್ನು ಅಧೀಕೃತವಾಗಿ ಸೇರಿಸಬೇಕಾದ ಅವಶ್ಯಕತೆ ಇದೆಯೇ ಅನ್ನುವುದನ್ನು ತಜ್ಞರು ನೋಡಬೇಕು. ಹಾಗೆಯೇ ‘ಆ್ಯʼ ಉಪಯೋಗಕ್ಕೆ ಮನ್ನಣೆ ಕೊಡಬೇಕು. ಅಕ್ಷರಗಳ ಮೇಲೆ ಅರ್ಧ ಚಂದ್ರಾಕಾರ(U)ವನ್ನು ಅರೆಸ್ವರವಾಗಿ ಕನ್ನಡದಲ್ಲಿ ಸೇರಿಸಬೇಕು ಎನ್ನುವುದು ನನ್ನ ಅನಿಸಿಕೆ..

ಕನ್ನಡದ ಅಂಕಿಗಳು:

ಕನ್ನಡದ ಯಾವುದೇ ಪತ್ರಿಕೆ ತೆಗೆದುಕೊಂಡರೂ, ಯಾವುದೇ ಟಿವಿ ಚಾನೆಲ್ ತೆರೆದರೂ ಅಂಕಿಗಳನ್ನು ಕನ್ನಡದಲ್ಲಿ ಬರೆಯದೇ ಹಿಂದೂ-ಅರೇಬಿಕ್‌ನಲ್ಲಿ ಬರೆಯುತ್ತಾರೆ. ನಾನು ಚಿಕ್ಕವನಿದ್ದಾಗ ಎಲ್ಲ ಪತ್ರಿಕೆಗಳೂ ಕನ್ನಡದಲ್ಲೇ ಅಂಕಿಗಳನ್ನು ಪ್ರಕಟಿಸುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಈ ಬದಲಾವಣೆಯಾಗಿದೆ. ಬರೆಯುವಾಗ ಕನ್ನಡದ ಶಬ್ದಗಳಂತೆ ಚಂದವಾಗಿ ಕಾಣುತ್ತಿದ್ದ ಕನ್ನಡದ ಅಂಕಿಗಳು ಶಾಶ್ವತವಾಗಿ ಸತ್ತು ಹೋಗಿರುವುದನ್ನು ನೋಡಿದರೆ ನನ್ನ ಪೀಳಿಗೆಯವರಿಗಾದರೂ ನೋವಾಗದೇ ಇರದು.

ಲ್ಯಾಟಿನ್ (ರೋಮನ್) ಲಿಪಿಯಲ್ಲಿ ಕನ್ನಡ:

ಕನ್ನಡದ ಅಂಕಿಗಳನ್ನು ಹಿಂದೂ-ಅರೇಬಿಕ್ ಅಂಕಿಗಳು ನಿರ್ನಾಮ ಮಾಡಿದಂತೆ, ಕನ್ನಡದ ಲಿಪಿಯನ್ನು ಲ್ಯಾಟಿನ್/ರೋಮನ್ ಲಿಪಿ ನಿರ್ನಾಮ ಮಾಡುವ ನಿಟ್ಟಿನಲ್ಲಿ ಅಂಬೆಗಾಲಿಡುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಯುಟ್ಯೂಬಿನಲ್ಲಿ ಹಾಡುಗಳ ‘ಲಿರಿಕಲ್ ವಿಡಿಯೋ‘ಗಳನ್ನು ಬಿಡುತ್ತಾರೆ. ಹೆಚ್ಚು ಕಡಿಮೆ ಎಲ್ಲ ಕನ್ನಡ ಹಾಡುಗಳ ಬರವಣಿಗೆ ಲ್ಯಾಟಿನ್ ಲಿಪಿಯಲ್ಲಿಯೇ ಇರುತ್ತವೆ. ಇದು ಬರೀ ಕನ್ನಡದಲ್ಲಿ ಆಗಿರುವ ಬದಲಾವಣೆಯಲ್ಲ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಹಾಡಿನ ಸಾಹಿತ್ಯವನ್ನು ಲ್ಯಾಟಿನ್ನಿನಲ್ಲೇ ಬರೆಯುತ್ತಾರೆ. ಹಾಗೆಯೇ ಬಹಳಷ್ಟು ಕನ್ನಡಿಗರು ವಾಟ್ಸ್ಯಾಪ್ ಮಾಡುವಾಗ, ಮೆಸೇಜುಗಳನ್ನು ಕಳಿಸುವಾಗ ಕನ್ನಡವನ್ನು ಕನ್ನಡದಲ್ಲಿ ಬರೆಯದೇ ಲ್ಯಾಟಿನ್ ಲಿಪಿಯಲ್ಲಿ ಬರೆಯುವುದೇ ಹೆಚ್ಚು. ಕನ್ನಡ ಭಾಷೆಯನ್ನು ಲ್ಯಾಟಿನ್ ಲಿಪಿಯಲ್ಲಿ ಬರೆದರೆ ಮಾತ್ರ ಓದಬಲ್ಲ ಕನ್ನಡಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರೆದರೆ ಕನ್ನಡದ ಲಿಪಿಯನ್ನು ಓದುವ ಮತ್ತು ಬರೆಯುವ ಜನರು ಪೀಳಿಗೆಯಿಂದ ಪೀಳಿಗೆಗೆ ಕಡಿಮೆಯಾಗುತ್ತಾರೆ ಅನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ.