ನ್ಯೂಯಾರ್ಕ್ ಸರ್ಕಾರ ಎ.ಸಿ. ವಿದ್ಯುತ್ ನ ಅಪಾಯದ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿ, ಎಂಜಿನಿಯರುಗಳು ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕಿತು. ವೆಸ್ಟಿಂಗ್‌ಹೌಸ್‌ನ ಪರವಿದ್ದ ಎಂಜಿನಿಯರುಗಳು ಅಪಾಯವನ್ನು ಅಲ್ಲಗೆಳೆದರೆ, ಎಡಿಸನ್ ಪರವಿದ್ದ ತಜ್ಞರು ಎ.ಸಿ. ವಿದ್ಯುತ್ ವ್ಯವಸ್ಥೆಯನ್ನು ಮಾನವರನ್ನು ಅರೆಗಳಿಗೆಯಲ್ಲೇ ಕೊಲ್ಲಬಲ್ಲ ರಕ್ಕಸ ಶಕ್ತಿಯೆಂಬಂತೆ ಬಿಂಬಿಸಿದರು. ವೆಸ್ಟಿಂಗ್‌ಹೌಸ್ ಮತ್ತು ಎಡಿಸನ್ ನಡುವಿನ ಈ ವ್ಯಾವಹಾರಿಕ ಕದನದಲ್ಲಿ, ತಾನು ನಿರ್ಲಿಪ್ತನೆಂದು ಘೋಷಿಸಿಕೊಂಡ ಹೆರಾಲ್ಡ್ ಬ್ರೌನ್, ಎ.ಸಿ. ವಿದ್ಯುತ್ತಿನ ವಿರುದ್ಧ ತನ್ನ ದನಿಯನ್ನೂ ಸೇರಿಸಿದ. ಆದರೆ, ಸರ್ಕಾರ ಈ ನಿಟ್ಟಿನಲ್ಲಿ, ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿಲ್ಲ.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿ

 

“ಮಾನವ ಜನ್ಮ ದೊಡ್ಡದು” – ಇದು ದಾಸವಾಣಿ ಮಾತ್ರವಲ್ಲ. ದೇಶ-ಕಾಲಗಳನ್ನು ಮೀರಿರುವ ಒಂದು ಸಾರ್ವತ್ರಿಕ ನಂಬಿಕೆ. ಧಾರ್ಮಿಕರು, ಮಾನವ ಜನ್ಮದ ದೊಡ್ಡತನವನ್ನು ದೈವದತ್ತವೆಂದು ಕರೆದರೆ, ದೈವದ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದ ಮಾನವತಾವಾದಿಗಳು, “ಮಾನವೀಯತೆ” ಎನ್ನುವುದು ಕೇವಲ ಮನುಷ್ಯರ ಮನದಲ್ಲಷ್ಟೇ ಮೂಡುವಂತಹ ಗುಣವೆಂದು ಭಾವಿಸುತ್ತಾರೆ. ಇಂತಹ ನಂಬಿಕೆಗಳಿಗೆ, ಕಾರಣಗಳನ್ನು ನಾವೇನೂ ಹುಡುಕಬೇಕಿಲ್ಲ. ಎಲ್ಲವೂ ಸುಸ್ಪಷ್ಟ: ಸೃಷ್ಟಿಯ ಇನ್ನಾವುದೇ ಜೀವಿ, ಕಲೆ, ಸಾಹಿತ್ಯಗಳನ್ನು ಸೃಷ್ಟಿಸಿಲ್ಲ; ಏರೋಪ್ಲೇನ್‌-ಸಬ್‌ಮರೀನ್ ಗಳನ್ನು ನಿರ್ಮಿಸಿಲ್ಲ; ಅಣುಬಾಂಬ್‌ಗಳನ್ನು ಸ್ಫೋಟಿಸಿಲ್ಲ; ಕೃತಕ ಬುದ್ಧಿಮತ್ತೆಯನ್ನು ನಿರ್ಮಿಸಲೆತ್ನಿಸುತ್ತಿಲ್ಲ. ಕೊನೆಗೆ, ಇಂತಹ ಲೇಖನಗಳ ಓದು-ಬರಹಗಳನ್ನೂ ಮಾಡುವುದಿಲ್ಲ. ತಮ್ಮ ಭಾವನಾ ಲೋಕದ ಅನುಭವಗಳನ್ನು ಭಾಷೆಯ ಮೂಲಕ ಇತರರೊಂದಿಗೆ ಹಂಚಿಕೊಳ್ಳುವಲ್ಲಿ, ಮನುಷ್ಯರನ್ನು ಮೀರಿಸುವ ಜೀವಿ ಬೇರೊಂದಿಲ್ಲ.

ಭೂಮಿಗೆ ಸುಮಾರು ೪೭೦ ಕೋಟಿ ವರ್ಷಗಳ ಇತಿಹಾಸವಿದ್ದರೆ, ಸುಮಾರು ೩೭೦ ಕೋಟಿ ವರ್ಷಗಳಿಂದ ಈ ಭುವಿಯ ಮೇಲೆ ಒಂದಲ್ಲಾ-ಒಂದು ಜೀವಿ ಇದ್ದೇ ಇದ್ದಂತಿದೆ. ಜೀವದ ಉಗಮದ ನೂರು ಕೋಟಿ ವರ್ಷಗಳ ನಂತರ, ಸೈಯಾನೋಬ್ಯಾಕ್ಟೀರಿಯಾಗಳು ಬದಲಾವಣೆ ಹೊಂದಿ, ಸೂರ್ಯನ ಬೆಳಕಿನಿಂದ ಜೀವದ ಉಳಿವಿಗೆ ಬೇಕಾದ ಚೈತನ್ಯವನ್ನು ಸೃಷ್ಟಿಸಿಕೊಳ್ಳಬಲ್ಲ ಜೀವಿಗಳಾದವು. ಇಂದು ನಾವು ಫೋಟೋ-ಸಿಂಥೆಸಿಸ್ ಎಂದು ಕರೆಯುವ ಅಂದಿನ ಹೊಸತನ ಮುಂದೆ ಸಸ್ಯಲೋಕದ ವೈವಿಧ್ಯತೆಗೆ ನಾಂದಿ ಹಾಡಿತು. ಸುಮಾರು, ಎಂಭತ್ತು ಕೋಟಿ ವರ್ಷಗಳ ಹಿಂದೆ, ಸ್ಪಾಂಜುಗಳ ನಿರ್ಮಿತಿಯೊಂದಿಗೆ, ಪ್ರಾಣಿ ಪ್ರಪಂಚದ ಆದಿಯೂ ಆಯಿತು.

ಕೊನೆಗೆ, ಸುಮಾರು ಎರಡೂವರೆ ಲಕ್ಷ ವರ್ಷಗಳ ಹಿಂದೆ, ಹೋಮೋ ಸೇಪಿಯನ್ಸ್‌ಗಳ ಆಗಮನದೊಂದಿಗೆ, ನಾವೂ ಸಹ ಈ ಜೀವರಾಶಿಗೆ ಸೇರ್ಪಡೆಯಾದೆವು. ನೂರಾರು ಕೋಟಿವರ್ಷಗಳ ಈ ಜೈವಿಕ ವಿಕಸನ (biological evolution), ಜೀವಿಗಳಲ್ಲಿ, ಮಿದುಳೂ ಸೇರಿದಂತೆ ವಿವಿಧ ಅಂಗಾಂಗಗಳ ನಿರ್ಮಾಣ ಮತ್ತು ದೈಹಿಕ ವೈವಿಧ್ಯತೆಗೆ ಕಾರಣವಾಗಿದೆ. ಜೈವಿಕ ವಿಕಸನ ನಮಗಿಂದು ಒದಗಿಸಿರುವ ಈ ದೇಹದ ಮೂಲಕ ನಾವು ಹೊರ ಪ್ರಪಂಚದೊಂದಿಗೆ ಸ್ಪಂದಿಸುತ್ತೇವೆ ಮಾತ್ರವಲ್ಲ, ನಮ್ಮ ಮನದಲ್ಲೇ ಒಂದು ಭಾವನಾ ಪ್ರಪಂಚವನ್ನೂ ನಿರ್ಮಿಸಿಕೊಳ್ಳುತ್ತೇವೆ. ಹೀಗಾಗಿ, ನಮ್ಮ ಭಾವ ಪ್ರಪಂಚವನ್ನು ಇತರರೊಂದಿಗೆ ಹಂಚಿಕೊಳ್ಳಬಲ್ಲ ನಮ್ಮ ವೈಶಿಷ್ಟ್ಯವನ್ನು, ನಮ್ಮ “ಹಿರಿತನ”-“ಕಿರಿತನ”ದ ದೃಷ್ಟಿಯಿಂದ ನೋಡುವುದರ ಬದಲು, ಕೋಟ್ಯಾಂತರ ವರ್ಷಗಳ ಜೈವಿಕ ವಿಕಸನ ನಿರ್ಮಿಸಿರುವ “ಭಿನ್ನತೆ”-“ವೈವಿಧ್ಯತೆ”ಗಳೆಂದೂ ನೋಡಬಹುದು.

ಭಾವನೆಗಳನ್ನು ಹಂಚಿಕೊಳ್ಳುವಲ್ಲಿ, ನಾವು ವೈಶಿಷ್ಟ್ಯತೆ ಹೊಂದಿರುವುದು ನಿಜವಿರಬಹುದಾದರೂ, ಮನುಷ್ಯರನ್ನು ಮೀರಿದ ಜೀವಿಗಳಲ್ಲೂ ಭಾವಪ್ರಪಂಚ ಇರಬಹುದೇ? ಜೀವನವನ್ನು ನಾವು ಅನುಭವಿಸುವಾಗ, ನಮಗೆ ಇರುವ “ನಾನು” ಎನ್ನುವ ಭಾವ ಇತರೆ ಜೀವಿಗಳಲ್ಲೂ ಇರಬಹುದೇ? “ಆತ್ಮ” ಎನ್ನುವುದು ಮಾನವರಿಗಷ್ಟೇ ಸೀಮಿತವಾದ ಒಂದು ದೈಹಿಕ ಗುಣವೇ? (“ಆತ್ಮ” ಎನ್ನುವುದು “ದೇಹ”ವನ್ನು ಮೀರಿದ್ದೆಂಬ ಧಾರ್ಮಿಕ/ಆಧ್ಯಾತ್ಮಿಕ ಪರಿಕಲ್ಪನೆ ಇಲ್ಲಿ ಅಪ್ರಸ್ತುತವಲ್ಲವಾದರೂ, ಸದ್ಯಕ್ಕೆ, ಅದನ್ನು ಪಕ್ಕಕ್ಕಿಡೋಣ.)

ಇಂತಹ ಪ್ರಶ್ನೆಗಳು ಹೊಸವೇನೂ ಅಲ್ಲ. ತನ್ನ “ಎವಲ್ಯೂಷನ್” ಥಿಯರಿಯ ಮೂಲಕ, ಜೀವಲೋಕದ ವೈವಿಧ್ಯಗಳ ಬಗೆಗೆ ವೈಜ್ಞಾನಿಕ ವಿವರಣೆ ನೀಡಿದ ಚಾರ್ಲ್ಸ್ ಡಾರ್ವಿನ್ ಸಹ ಇಂತಹ ಪ್ರಶ್ನೆಗಳ ಕುರಿತು ಆಲೋಚಿಸಿದ್ದಾನೆ. ಕಂಡೂ ಕಾಣದಂತಿದ್ದ, ನೂರಾರು ಕೋಟಿ ವರ್ಷಗಳ ಜೈವಿಕ ವಿಕಸನದ ಇತಿಹಾಸವನ್ನು ಅತ್ಯಂತ ಸುಸ್ಪಷ್ಟವಾಗಿ ತೆರೆದು ತೋರಿಸಿದ ಅವನಿಗೆ ಕೂಡಾ ಈ ಪ್ರಶ್ನೆಗಳು ಬಹುಮಟ್ಟಿಗೆ ಪ್ರಶ್ನೆಗಳೇ! ಆದರೂ, ಅವನು ತನ್ನ The Descent of Man ಪುಸ್ತಕದಲ್ಲಿ ಒಂದು ತೀರ್ಮಾನಕ್ಕೆ ಬರುತ್ತಾನೆ: “ಮನಶ್ಶಕ್ತಿಯ ವಿಚಾರದಲ್ಲಿ ಮನುಷ್ಯನಿಗೂ, ಉನ್ನತ ವರ್ಗದಲ್ಲಿರುವ ಇತರೆ ಸಸ್ತನಿಗಳಿಗೂ ಮೂಲಭೂತವಾದ ವ್ಯತ್ಯಾಸಗಳೇನೂ ಇಲ್ಲ”. ಇಂತಹ ತೀರ್ಮಾನಕ್ಕೆ ಬರಲು, ಅವನು, ತನ್ನ “On the Origin of Species”ನಲ್ಲಿ ತೋರುವ ವೈಜ್ಞಾನಿಕತೆಗಿಂತ, ಕಾಮನ್ ಸೆನ್ಸ್, ಜನಪದ ಜ್ಞಾನ, ಪ್ರಾಣಿಗಳಿಗೂ ನಮ್ಮಂತೆಯೇ ಭಾವಗಳು ಇರಬಹುದೆಂಬ ನಂಬಿಕೆಗಳ ಮೊರೆಹೋಗುತ್ತಾನೆ.

ಆನೆಯೊಂದಕ್ಕೆ “ಆತ್ಮ” ಇರುವುದೇ, ಎಂಬ ಪ್ರಶ್ನೆಗೆ ಉತ್ತರಿಸುವುದು, ಕಷ್ಟವಷ್ಟೇ ಅಲ್ಲ, ಅಸಾಧ್ಯವೂ ಸಹ ಎನ್ನಬಹುದು. ಅಮೆರಿಕನ್ ತತ್ವಶಾಸ್ತ್ರಜ್ಞ ಥಾಮಸ್ ನೇಗಲ್ ತನ್ನ ಸುಪ್ರಸಿದ್ಧ ಪ್ರಬಂಧ “What Is It Like To Be A Bat?”ದಲ್ಲಿ, ಈ ಕುರಿತು ವಿಷದವಾಗಿ ಚರ್ಚಿಸಿ, ಕೊನೆಗೆ “ನಾವು ಬಾವಲಿಯಂತಾದರೆ ಹೇಗಿರಬಹುದೆಂದು ಕಲ್ಪಿಸಿಕೊಳ್ಳಬಹುದಾದರೂ, ಬಾವಲಿಯೇ ಆಗಿರುವ ಬಾವಲಿಯೊಂದರ ಮನದ ಆಲೋಚನೆಗಳನ್ನು ತಿಳಿಯಲು ನಮಗೆ ಸಾಧ್ಯವೇ ಇಲ್ಲ” ಎನ್ನುವ ತೀರ್ಮಾನಕ್ಕೆ ಬರುತ್ತಾನೆ.

ಮನುಷ್ಯರಲ್ಲಿ ಇರುವಂತೆ, ಇತರೆ ಪ್ರಾಣಿಗಳಲ್ಲಿಯೂ ಒಂದು “ಮನೋಲೋಕ”ವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಹೀಗಾಗಿ, ಸಕಲ ಜೀವಿಗಳಲ್ಲಿ ಮಾನವರ ವೈಶಿಷ್ಟ್ಯತೆಯನ್ನು ಗುರುತಿಸಲು, ಮನೋಲೋಕಗಳ-ಭಾವನೆಗಳ ವ್ಯತ್ಯಾಸಗಳಿಗಿಂತ, ನಡವಳಿಕೆಗಳ ವ್ಯತ್ಯಾಸಗಳೇ ಸೂಕ್ತವೆಂಬ ಅಭಿಪ್ರಾಯವೂ ಇದೆ. “ಮನೋಲೋಕ” ಎನ್ನುವುದು, ನಮ್ಮ ಇಂದ್ರಿಯಗಳಿಗೆ ಸಿಗದಂತಹುದು. ಆದರೆ, “ನಡವಳಿಕೆ”ಗಳನ್ನು ನಾವು ನಮ್ಮ ಇಂದ್ರಿಯಗಳ ಸಹಾಯದಿಂದ ಗ್ರಹಿಸಬಹುದು, ಆದುದರಿಂದ, ಇದು “ವೈಜ್ಞಾನಿಕ”ವೆಂದೂ ಅನಿಸಬಹುದು.

ಅಮೆರಿಕನ್ ತತ್ವಶಾಸ್ತ್ರಜ್ಞ ಹ್ಯಾನ್ಸ್ ಜೋನಾಸ್ ತನ್ನ “Tool, Image, and Grave” ಎಂಬ ತನ್ನ ಪ್ರಬಂಧದಲ್ಲಿ, ಮಾನವರಲ್ಲಷ್ಟೇ ಕಾಣಬರುವಂತಹ ಮೂರು ಚಟುವಟಿಕೆಗಳನ್ನು ಗುರುತಿಸಿ, ಅವುಗಳ ಬಗೆಗೆ ಆಳವಾದ ಚಿಂತನೆ ಮಾಡುತ್ತಾನೆ. ಜೋನಾಸ್, ತನ್ನ ಪ್ರಬಂಧದಲ್ಲಿ, “ಸಲಕರಣೆ, ಸಾಕಾರ ರೂಪ, ಸಮಾಧಿ”ಗಳ ನಿರ್ಮಾಣದ ಈ ಮೂರು ಚಟುವಟಿಕೆಗಳನ್ನಷ್ಟೇ ಮುಖ್ಯವಾಗಿ ಗುರುತಿಸಲು ಕಾರಣವೂ ಇದೆ. ಮಾನವರು ತಮ್ಮ ಉಗಮ ಕಾಲದಿಂದಲೂ ಈ ಮೂರೂ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ.

ಜೋನಾಸ್ ಈ ಪ್ರಬಂಧವನ್ನು ಬರೆದದ್ದು ೧೯೮೫ರಲ್ಲಿ. ಆದರೆ, ಕಳೆದ ೩೫ ವರ್ಷಗಳಲ್ಲಿ, ಈ ಚಟುವಟಿಕೆಗಳು ಕೇವಲ ಮಾನವರಲ್ಲಷ್ಟೇ ಕಾಣಬರುವ ಚಟುವಟಿಕೆಗಳಲ್ಲ ಎಂಬುದೂ ಮನದಟ್ಟಾಗುತ್ತಿದೆ. ಉದಾಹರಣೆಗೆ, ಆನೆಗಳು ಮರದ ಕಡ್ಡಿಯನ್ನು ಸೊಂಡಿಲಲ್ಲಿ ಹಿಡಿದು, ಅದರ ಸಹಾಯದಿಂದ, ತಮ್ಮ ಕಾಲ್ಬೆರಳ ಸಂದಿಗಳಲ್ಲಿ ಹೊಕ್ಕಿ ಒಣಗಿರುವ ಕೆಸರನ್ನು ತೆಗೆಯುವುದನ್ನು ಹಲವರು ಗುರುತಿಸಿದ್ದಾರೆ. ಹಾಗೆಯೇ, ನಾವು ಹತ್ತಿಯತುದಿ ಹೊಂದಿರುವ Q-Tip ಗಳ ಮೂಲಕ ನಮ್ಮ ಕಿವಿಗಳನ್ನು ಸ್ವಚ್ಛಗೊಳಿಸಿಕೊಳ್ಳುವಂತೆ, ಆನೆಗಳು ಹುಲ್ಲಿನ ಗುಪ್ಪೆಗಳಿಂದ ತಮ್ಮ ಕಿವಿಗಳನ್ನು ಸ್ವಚ್ಛ ಮಾಡಿಕೊಳ್ಳುವುದೂ ಇದೆ.

ಆನೆ ಮತ್ತು ಸಲಕರಣೆಗಳ ವಿಚಾರದದ ಬಗೆಗೆ, ಬ್ರಿಟಿಷ್ ಗಜ ತಜ್ಞ ಜೇಮ್ಸ್ ಹೋವರ್ಡ್ ವಿಲಿಯಮ್ಸ್, ತನ್ನ “ಎಲೆಫಂಟ್ ಬಿಲ್” ಪುಸ್ತಕದಲ್ಲಿ ಒಂದು ಕುತೂಹಲಕಾರಿ ವಿಷಯವೊಂದನ್ನು ದಾಖಲಿಸುತ್ತಾನೆ.

ಆನೆಗಳ ಕೊರಳಿಗೆ ಘಂಟೆಯೊಂದನ್ನು ಕಟ್ಟುವುದು ಹೊಸದೇನಲ್ಲ. ಘಂಟೆಯ ಶಬ್ದ ನಮಗೆ ಆನೆಯ ಚಲನವಲನದ ಬಗೆಗೆ ಸೂಚನೆ ನೀಡುತ್ತದೆ. ಉದಾಹರಣೆಗೆ, ನಾವೆಲ್ಲೋ ನೋಡುತ್ತಿದ್ದಾಗ, ಆನೆಯೊಂದು, ನಮಗೆ ತಿಳಿಯದಂತೆ ಉಗ್ರಾಣದ ಬಳಿಗೆ ಬಂದು ಅಲ್ಲಿರುವ ಆಹಾರ ಸಾಮಾಗ್ರಿಯನ್ನು ಕದಿಯಲೆತ್ನಿಸಿದರೆ, ಅದರ ಕೊರಳ ಘಂಟೆಯ ಶಬ್ದ ನಮಗೆ ಕೇಳುತ್ತದೆ. ಆನೆಯ ಕೊರಳ ಘಂಟೆ, ನಮ್ಮ ಉಪಯೋಗಕ್ಕಾಗಿ ನಾವೇ ಸೃಷ್ಟಿಸಿಕೊಂಡಿರುವ ಒಂದು ಸಲಕರಣೆ.

ವಿಲಿಯಮ್ಸ್ ತನ್ನ ಪುಸ್ತಕದಲ್ಲಿ ಹೇಳುವಂತೆ, ಮಾನವ ನಿರ್ಮಿತ ಈ ಸಲಕರಣೆಗಳನ್ನು ನಿರುಪಯುಕ್ತಗೊಳಿಸಲು, ಬರ್ಮಾದ ಕ್ಯಾಂಪ್ ಒಂದರಲ್ಲಿದ್ದ ಆನೆಗಳು ತಮ್ಮದೇ ಆದ ಸಲಕರಣೆಯೊಂದನ್ನು ಕಂಡುಕೊಂಡವಂತೆ. ಕೆಸರು ಮಣ್ಣನ್ನು ಘಂಟೆಯೊಳಗೆ ತುಂಬಿಸುತ್ತಿದ್ದ ಈ ಆನೆಗಳು, ಮಧ್ಯರಾತ್ರಿಯಲ್ಲಿ ಸದ್ದಾಗದಂತೆ ಬಂದು ಬಾಳೆಹಣ್ಣುಗಳನ್ನು ಕದಿಯುತ್ತಿದ್ದವಂತೆ.

*****

ವಿದ್ಯುತ್‌ಶಕ್ತಿಯ ಬಳಕೆ ಮಾನವನ ಸಾಧನೆಗಳಲ್ಲಿಯೇ ಅತ್ಯಂತ ಮಹತ್ವದ್ದೆನ್ನಬಹುದು. “ವಿದ್ಯುತ್” ಎಂಬ ಶಕ್ತಿಯ ಕುರಿತು ಸಹಸ್ರಾರು ವರ್ಷಗಳ ಹಿಂದೆಯೇ ಊಹಾಪೋಹಗಳಿದ್ದವಾದರೂ, ಕಳೆದ ನೂರು-ನೂರೈವತ್ತು ವರ್ಷಗಳಲ್ಲಷ್ಟೇ ನಾವು ಎಲೆಕ್ಟ್ರಿಸಿಟಿ ಮತ್ತು ಮ್ಯಾಗ್ನೆಟಿಸಂ‌ಗಳ ಒಳಗುಟ್ಟುಗಳನ್ನು ಅರ್ಥೈಸಿಕೊಳ್ಳಬಲ್ಲರಾಗಿದ್ದೇವೆ. ಈ ಸಾಧನೆಗೆ, ಮೈಕೇಲ್ ಫ್ಯಾರಡೇ, ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್‌ವೆಲ್‌ರಂತಹ ಅಪ್ರತಿಮ ವಿಜ್ಞಾನಿಗಳು ಕಾರಣರಾಗಿದ್ದಾರೆ. ಎಲೆಕ್ಟ್ರೋ ಮ್ಯಾಗ್ನೆಟಿಸಂನ ವೈಚಿತ್ರ್ಯಗಳನ್ನು ವಿವರಿಸಲೆತ್ನಿಸುತ್ತಲೇ, ಇಡೀ ಅನಂತದ, ಕಾಲದ ರಹಸ್ಯಗಳನ್ನು ಐನ್‌ಸ್ಟೈನ್ ಹೊರಹಾಕಿದ್ದಾನೆ. ಹೀಗಾಗಿ, “ಎಲೆಕ್ಟ್ರೋಮ್ಯಾಗ್ನೆಟಿಸಂ” ವಿಷಯದ ಜ್ಞಾನಾರ್ಜನೆ, ಮಾನವರ ಬುದ್ಧಿಶಕ್ತಿಯ ಉತ್ತುಂಗಗಳಲ್ಲಿ ಒಂದು ಎಂದು ಖಚಿತವಾಗಿ ಹೇಳಬಹುದು.


ವಿದ್ಯುತ್‌ಶಕ್ತಿಯ ಬಳಕೆಯ ಆರಂಭವನ್ನು ಆಧುನಿಕತೆಯ ಆರಂಭವೂ ಎನ್ನಬಹುದು. ಆಧುನಿಕ ಜೀವನದ ಎಷ್ಟೋ ಸಾಧನ-ಸಲಕರಣೆಗಳ ಆವಿಷ್ಕರಣ ಮತ್ತು ಬಳಕೆ, ವಿದ್ಯುತ್ ಶಕ್ತಿ ಇಲ್ಲದೆ ಊಹಿಸಲೂ ಸಾಧ್ಯವಿಲ್ಲ. ಉದಾಹರಣೆಗೆ, ಟಿ.ವಿ. ಟೆಲೆಫೋನ್, ಇಂಟರ್‌ನೆಟ್ ಇತ್ಯಾದಿ. ವಿದ್ಯುತ್ ಶಕ್ತಿಯ ಬಳಕೆಗೆ ಮೊದಲೇ ಬಂದ ಎಷ್ಟೋ ಸಾಧನಗಳೂ ಸಹ ಇಂದು ವಿದ್ಯುತ್ತಿನ ಮೇಲೆಯೇ ಅವಲಂಬಿತವಾಗುತ್ತಿವೆ. ಉದಾಹರಣೆಗೆ, ದೀಪಗಳು, ರೈಲು ಬಂಡಿಗಳು ಇತ್ಯಾದಿ.

ಒಟ್ಟಿನಲ್ಲಿ ಇಂದು ವಿದ್ಯುತ್ ಇಲ್ಲದೇ ಜೀವನವೇ ಸಾಧ್ಯವಿಲ್ಲವೆನ್ನುವಂತಾಗಿದೆ.

ಈ ವಿದ್ಯುತ್ ಶಕ್ತಿಯ ಬಳಕೆಯನ್ನು, ನಾವು ಎರಡು ವಿಧವಾಗಿ ವಿಂಗಡಿಸಬಹುದು: ಒಂದು ಡೈರೆಕ್ಟ್ ಕರೆಂಟ್ (ಡಿ.ಸಿ.) ಇನ್ನೊಂದು ಆಲ್ಟರ್ನೇಟಿಂಗ್ ಕರೆಂಟ್ (ಎ.ಸಿ.)

ಇಂದು, ನಾವು ಬಳಸುವ ಹಲವಾರು ಸಾಧನಗಳು ಆಂತರಿಕವಾಗಿ ಡಿ.ಸಿ.ಯನ್ನೇ ಬಳಸುತ್ತವಾದರೂ, ನಮ್ಮ ಮನೆಗಳ ವೈರುಗಳಲ್ಲಿ, ರಸ್ತೆಗಳ ಎಲೆಕ್ಟ್ರಿಕ್ ಪೋಲ್‌ಗಳ ಮೇಲೆ ತೂಗಾಡುವ ತಂತಿಗಳಲ್ಲಿ ಹರಿಯುವುದು ಎ.ಸಿ.ಯೇ.

ಡಿ.ಸಿ.ಯಲ್ಲಿ, ವಿದ್ಯುತ್ ಪ್ರವಹನದ ದಿಕ್ಕು ಎಂದಿಗೂ ಒಂದೇ ಇರುತ್ತದೆ. ಆದರೆ, ಎ.ಸಿ.ಯಲ್ಲಿ, ಇದು ಬದಲಾಗುತ್ತಿರುತ್ತದೆ. ಉದಾಹರಣೆಗೆ, ಭಾರತದಲ್ಲಿ ಗೃಹ ಬಳಕೆಗೆ ಒದಗಿಸುವ ವಿದ್ಯುತ್ ವ್ಯವಸ್ಥೆಯಲ್ಲಿ ಈ ದಿಕ್ಕಿನ ಬದಲಾವಣೆ ಸೆಕೆಂಡಿಗೆ ೫೦ ಬಾರಿ ಆಗುತ್ತದೆ.

ವಿದ್ಯುತ್ ತನ್ನ ಉತ್ಪಾದನಾ ಕೇಂದ್ರದಿಂದ ತಂತಿಯ ಮೂಲಕ ಹರಿದಷ್ಟೂ, ಅದರ ವೋಲ್ಟೇಜ್‌ನಲ್ಲಿ ಇಳಿತವಾಗುತ್ತಲೇ ಹೋಗುತ್ತದೆ. ಈ ಇಳಿತ, ಎ.ಸಿ. ಮತ್ತು ಡಿ.ಸಿ. ಎರಡರಲ್ಲೂ ಇದ್ದೇ ಇರವಂತಹುದು. ಆದರೆ, ಎ.ಸಿ.ಯಲ್ಲಿ, ಎಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್‌ಗಳ ಮೂಲಕ ವೋಲ್ಟೇಜಿನ ಏರಿಳಿತವನ್ನು ನಿಯಂತ್ರಿಸಬಹುದು. ಡಿ.ಸಿ.ಯಲ್ಲಿ ಅದು ಸುಲಭ ಸಾಧ್ಯವಲ್ಲ. ಹೀಗಾಗಿ, ಇಂದು ವಿಶ್ವಾದ್ಯಂತ, ಎ.ಸಿ. ವ್ಯವಸ್ಥೆಯೇ ಬಹುಮಟ್ಟಿಗೆ ಚಾಲನೆಯಲ್ಲಿದೆ.

*****

(ಥಾಮಸ್ ಆಲ್ವಾ ಎಡಿಸನ್)

೧೮೭೮ರಲ್ಲಿ, ಥಾಮಸ್ ಆಲ್ವಾ ಎಡಿಸನ್, ಅಂಗಡಿ, ಆಫೀಸು, ಮನೆಗಳಿಗೆ ವಿದ್ಯುತ್ ದೀಪ ಒದಗಿಸುವುದು ಒಂದು ಲಾಭದಾಯಕ ಉದ್ಯಮವೆಂದು ಮನಗಂಡ. ಆ ಕಾಲದಲ್ಲಿ, ಇಂದಿನಂತೆ, ನೂರಾರು ಮೈಲುಗಳ ದೂರದಲ್ಲಿ ವಿದ್ಯುತ್ ಉತ್ಪಾದಿಸಿ, ಇಡೀ ರಾಜ್ಯ/ದೇಶದ ಮನೆ-ಮನೆಗಳಿಗೆ ಅದನ್ನು ಒದಗಿಸುವ ವ್ಯವಸ್ಥೆ ಇರಲಿಲ್ಲ. ತಂತಿಗಳಲ್ಲಿ, ವಿದ್ಯುತ್ ದೂರ-ದೂರ ಪ್ರವಹಿಸಿದಷ್ಟೂ, ಅದರ ವೋಲ್ಟೇಜ್ ಇಳಿತವಾಗುತ್ತಿದ್ದುದರಿಂದ, ಉತ್ಪಾದನಾ ಕೇಂದ್ರದಿಂದ ಕೇವಲ ಒಂದು ಮೈಲು ವ್ಯಾಪ್ತಿಯೊಳಗೆ ಮಾತ್ರ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಹೀಗಾಗಿ, ದೊಡ್ಡ ನಗರವೊಂದರ ವಿದ್ಯುತ್ ಅವಶ್ಯಕತೆಯನ್ನು ಪೂರೈಸಲು, ಆ ನಗರದಲ್ಲಿಯೇ, ಹಲವಾರು ಜಾಗಗಳಲ್ಲಿ ಸಣ್ಣ-ಸಣ್ಣ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಬೇಕಿತ್ತು.

ಎಡಿಸನ್, ಅದನ್ನೇ ಮಾಡಿದ. ಅವನು ಸ್ಥಾಪಿಸಿದ ಎಡಿಸನ್ ಇಲ್ಯೂಮಿನೇಟಿಂಗ್ ಕಂಪೆನಿ, ೧೮೮೨ರ ಹೊತ್ತಿಗೆ, ನ್ಯೂಯಾರ್ಕ್ ನಗರದ ಹಲವೆಡೆ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿ ಅಲ್ಲಿನ ಮನೆ-ಮುಂಗಟ್ಟುಗಳಿಗೆ ೧೧೦ ವೋಲ್ಟ್ ಡಿ.ಸಿ. ವಿದ್ಯುತ್ ಪೂರೈಕೆ ಮಾಡಲಾರಂಭಿಸಿತು. ಇದು, ಎಡಿಸನ್ ಎಣಿಸಿದಂತೆಯೇ ಅತ್ಯಂತ ಲಾಭದಾಯಕ ಉದ್ಯಮವೂ ಆಯಿತು.

ಆದರೆ, ಎಡಿಸನ್ ತನ್ನ ಡಿ.ಸಿ. ವ್ಯವಸ್ಥೆಯನ್ನು ನ್ಯೂಯಾರ್ಕ್ ನಗರದಲ್ಲಿ ಸ್ಥಾಪಿಸುತ್ತಿರುವ ಸಮಯದಲ್ಲಿಯೇ, ಯೂರೋಪಿನ ಎಂಜಿನಿಯರುಗಳು ಟ್ರಾನ್ಸ್‌ಫಾರ್ಮರ್‌ಗಳ ಮೂಲಕ ವೋಲ್ಟೇಜ್ ಮಟ್ಟವನ್ನು ಮೇಲು-ಕೆಳಗೆ ಮಾಡುವಲ್ಲಿ ತಜ್ಞತೆಯನ್ನು ಬೆಳೆಸಿಕೊಳ್ಳುತ್ತಿದ್ದರು.

ಎಡಿಸನ್‌ಗೆ ಲಾಭದಾಯಕವೆನಿಸಿದ್ದ ವಿದ್ಯುತ್ ಉದ್ಯಮದಲ್ಲಿ, ಅವನಿಗೆ ಪೈಪೋಟಿಯಾಗಿ ಜಾರ್ಜ್ ವೆಸ್ಟಿಂಗ್‌ಹೌಸ್ ಎಂಬ ಉದ್ದಿಮೆದಾರನೂ ಇದ್ದ. ತಾನೇ ಸ್ವತಃ ಎಂಜಿನಿಯರನೂ ಆಗಿದ್ದ ಅವನು, ಯೂರೋಪಿನಲ್ಲಾಗುತ್ತಿದ್ದ ಬೆಳವಣಿಗೆಗಳ ಕುರಿತೂ ಕಣ್ಣಿಟ್ಟಿದ್ದ. ಅವನೂ ಸಹ ಮೊದಲು ಡಿ.ಸಿ. ವ್ಯವಸ್ಥೆಯನ್ನೇ ತನ್ನ ಕಂಪೆನಿಯಲ್ಲಿ ಬಳಸುತ್ತಿದ್ದನಾದರೂ, ಎ.ಸಿ.ವ್ಯವಸ್ಥೆಯ ಅನುಕೂಲ ಅವನಿಗೆ ತಿಳಿದಿತ್ತು. ಮುಖ್ಯವಾಗಿ, ಎ.ಸಿ. ವ್ಯವಸ್ಥೆಯನ್ನು ಬಳಸಿದರೆ, ವಿದ್ಯುತ್ ಉತ್ಪಾದನಾ ಕೇಂದ್ರದಿಂದ ಹತ್ತಾರು-ನೂರಾರು ಮೈಲಿಗಳ ವ್ಯಾಪ್ತಿಯಲ್ಲಿರುವ ಬಳಕೆದಾರರಿಗೆ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿತ್ತು. ಹೀಗಾಗಿ, ಎಡಿಸನ್ ನಿರ್ಮಿಸಿದಂತೆ, ಅಲ್ಲಲ್ಲೇ ಸಣ್ಣ-ಸಣ್ಣ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವ ಅಗತ್ಯವಿರಲಿಲ್ಲ. ಇದು, ಅವನಿಗೆ ಹೂಡಿಕೆಯ ಖರ್ಚನ್ನು ಕಡಿಮೆ ಮಾಡಿ, ಕಡಿಮೆ ವೆಚ್ಚಕ್ಕೆ ಬಳಕೆದಾರರಿಗೆ ವಿದ್ಯುತ್ ಪೂರೈಸಲು ಅನುವು ಮಾಡಿಕೊಡುತ್ತಿತ್ತು.

೧೮೮೦ರ ದಶಕದ ಮಧ್ಯದ ವೇಳೆಗೆ, ವೆಸ್ಟಿಂಗ್‌ಹೌಸ್, ತನ್ನ ಕಂಪೆನಿಯಲ್ಲಿ ಎ.ಸಿ.ಯನ್ನು ಬಳಸಲಾರಂಭಿಸಿದ. ೧೮೮೭ರ ಹೊತ್ತಿಗೆ – ಎಡಿಸನ್ ತನ್ನ ಕಂಪೆನಿಯನ್ನು ಸ್ಥಾಪಿಸಿದ ಐದು ವರ್ಷಗಳ ನಂತರ – ವೆಸ್ಟಿಂಗ್‌ಹೌಸ್ ಮತ್ತು ಎಡಿಸನ್ ನಡುವಿನ ಪೈಪೋಟಿ ಬಿರುಸಾಯಿತು. ಎಡಿಸನ್ ಆ ವೇಳೆಗೆ, ೧೨೧ ಡಿ.ಸಿ. ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿದ್ದರೆ, ವೆಸ್ಟಿಂಗ್‌ಹೌಸ್ ಕೇವಲ ಅದರ ಸುಮಾರು ಅರ್ಧದಷ್ಟು ಸಂಖ್ಯೆಯ ಎ.ಸಿ. ವಿದ್ಯುತ್ ಸ್ಥಾವರಗಳಿಂದಲೇ ತನ್ನ ಬಳಕೆದಾರರಿಗೆ ವಿದ್ಯುತ್ ಸರಬರಾಜು ಮಾಡುತ್ತಿದ್ದ. ಆ ವೇಳೆಗೆ, ಥಾಮ್ಸನ್-ಹ್ಯೂಸ್ಟನ್ ಎಂಬ ಇನ್ನೊಂದು ಕಂಪೆನಿಯೂ ತನ್ನ ಎ.ಸಿ. ಸ್ಥಾವರಗಳ ಮೂಲಕ ವಿದ್ಯುತ್ ಸರಬರಾಜು ಮಾಡಲಾರಂಭಿಸಿತು. ಇವೆಲ್ಲದರ ಮಧ್ಯೆಯೇ, ತಾಮ್ರದ ಬೆಲೆ ಏರಲಾರಂಭಿಸಿ, ತಾಮ್ರದ ತಂತಿಗಳ ಬೆಲೆಯೂ ಹೆಚ್ಚಾಗಿ ಎಡಿಸನ್ ತಲೆ ಬಿಸಿಯಾಗತೊಡಗಿತು. (ಎ.ಸಿ. ವ್ಯವಸ್ಥೆಗೆ ಹೋಲಿಸಿದರೆ, ಎಡಿಸನ್‌ನ ಡಿ.ಸಿ. ವ್ಯವಸ್ಥೆಗೆ ದಪ್ಪನೆಯ ತಂತಿ ಬೇಕಿತ್ತು)

ಎಡಿಸನ್, ತನ್ನ ಲಾಭದಾಯಕ ಉದ್ಯಮವನ್ನು ಉಳಿಸಿಕೊಳ್ಳಬೇಕಿದ್ದರೆ, ಏನಾದರೂ ಮಾಡಲೇ ಬೇಕಿತ್ತು. ಡಿ.ಸಿ.ವ್ಯವಸ್ಥೆ ಅವನ ಕನಸಿನ ಕೂಸಾಗಿತ್ತು. ಅದು, ಎಡಿಸನ್ ಇಲ್ಯೂಮಿನೇಟಿಂಗ್ ಕಂಪೆನಿಯ ಮೂಲಕ ಅವನಿಗೆ ನೇರವಾಗಿ ಲಾಭವನ್ನು ಒದಗಿಸುತ್ತಿತ್ತಲ್ಲದೇ, ಡಿ.ಸಿ. ವ್ಯವಸ್ಥೆಯ ಹಲವಾರು ಪೇಟೆಂಟುಗಳೂ ಅವನ ಹೆಸರಲ್ಲಿದ್ದು, ಅವುಗಳಿಂದ ಅವನಿಗೆ ರಾಯಲ್ಟಿ ಧನವೂ ದೊರಕುತ್ತಿತ್ತು. ಅದೂ ಅಲ್ಲದೆ, ಅವನು ಎ.ಸಿ.ಗಿಂತ ಡಿ.ಸಿ.ಯೇ ಉತ್ತಮವೆಂದು ಪೂರ್ಣವಾಗಿ ನಂಬಿದ್ದ. ಹೀಗಾಗಿ, ತನ್ನ ಕಂಪೆನಿಯನ್ನೂ ಎ.ಸಿ.ವ್ಯವಸ್ಥೆಗೆ ಬದಲಿಸುವ ಆಲೋಚನೆ ಅವನಿಗೆ ಬರಲಿಲ್ಲ. ಅವನದೇ ಸಂಸ್ಥೆಯ ಎಂಜಿನಿಯರುಗಳು ಎ.ಸಿ.ವ್ಯವಸ್ಥೆಗೆ ಬದಲಾಗುವುದೇ ಸೂಕ್ತವೆಂದು ಅವನಿಗೆ ಸಲಹೆ ನೀಡಿದರಾದರೂ, ಅವನ ಯೋಜನೆ ಬೇರೆಯದೇ ಆಗಿತ್ತು: ಎ.ಸಿ. ವಿದ್ಯುತ್ ಅನ್ನು ಪೆಡಂಭೂತವೆಂಬಂತೆ ಬಿಂಬಿಸುವುದು!

*****

೧೯೮೦ರ ದಶಕದ ಕೊನೆಯ ವೇಳೆಗೆ, ನ್ಯೂಯಾರ್ಕ್ ನಗರದ ರಸ್ತೆಗಳ ಇಕ್ಕೆಲಗಳಲ್ಲೂ ವಿದ್ಯುತ್ ಕಂಬಗಳಿಂದ ತಂತಿಗಳು ಯರ್ರಾಬಿರ್ರಿಯಾಗಿ ಎಲ್ಲೆಲ್ಲೂ ಜೋತಾಡುತ್ತಿದ್ದವು. ಕೆಲವೊಮ್ಮೆ ಅವಘಡಗಳೂ ಆಗಿ, ಆಗೊಮ್ಮೆ-ಈಗೊಮ್ಮೆ ಸಾವು-ನೋವುಗಳೂ ಸಂಭವಿಸಲಾರಂಭಿಸಿದವು. ೧೮೮೮ರ ಏಪ್ರಿಲ್-ಮೇ ತಿಂಗಳಲ್ಲಿ ಇಂತಹ ಮೂರು ಅನಾಹುತಗಳು ಸಂಭವಿಸಿ, ಹದಿನೈದು ವರ್ಷದ ಬಾಲಕನೂ ಸೇರಿದಂತೆ ಮೂರು ಮಂದಿ ಮರಣಕ್ಕೀಡಾದರು. ಇದರಿಂದಾಗಿ, ಅಲ್ಲಿಯವರೆಗೆ, ವಿದ್ಯುತ್ ದೀಪಗಳ ಕುರಿತು ಹಾಡಿ ಹೊಗಳುತ್ತಿದ್ದ ನ್ಯೂಯಾರ್ಕಿನ ದಿನಪತ್ರಿಕೆಗಳು, ವಿದ್ಯುತ್ ಶಕ್ತಿಯ ವಿರುದ್ಧ ತಿರುಗಿ ಬಿದ್ದವು. ವಿದ್ಯುತ್ ಶಕ್ತಿಯ ಅಪಾಯಗಳ ಬಗೆಗೆ ಸೆನ್ಸೇಷನಲ್ ಎನ್ನಿಸುವ ಹಲವು ವರದಿಗಳನ್ನು ಅವು ಪ್ರಕಟಿಸಿದವು.

ಜೂನ್ ೫, ೧೮೮೮ರಂದು, ನ್ಯೂಯಾರ್ಕ್ ಪೋಸ್ಟ್ ದಿನಪತ್ರಿಕೆ, ಹೆರಾಲ್ಡ್ ಬ್ರೌನ್ ಎಂಬಾತ ಬರೆದಿದ್ದ ಒಂದು ಪತ್ರವನ್ನು ಪ್ರಕಟಿಸಿತು. ಆ ಪತ್ರದಲ್ಲಿ ಅವನು, ಇಷ್ಟೆಲ್ಲಾ ಸಾವು ನೋವುಗಳಿಗೆ ಎ.ಸಿ. ವಿದ್ಯುತ್ ವ್ಯವಸ್ಥೆಯೇ ಕಾರಣವೆಂದೂ, ತನ್ನ ಲಾಭಕ್ಕಾಗಿ, ಇಂತಹ ಅಪಾಯಕಾರಿ ತಂತ್ರಜ್ಞಾನದ ಮೂಲಕ, ವೆಸ್ಟಿಂಗ್‌ಹೌಸ್‌ನಂತಹವರ ಕಂಪೆನಿಗಳು ಜನಸಾಮಾನ್ಯರ ಜೀವಗಳ ಜೊತೆಗೇ ಚೆಲ್ಲಾಟವಾಡುತ್ತಿದೆಯೆಂದೂ ಆರೋಪ ಮಾಡಿದ. ಈ, ಹೆರಾಲ್ಡ್ ಬ್ರೌನ್ ತಾನೇ ಸ್ವತಃ ಒಬ್ಬ ಎಂಜಿನಿಯರ್ ಆಗಿದ್ದರಿಂದ ಅವನ ಆರೋಪಕ್ಕೆ ತಜ್ಞತೆಯ ಒಂದು ಹೊಳಪೂ ಸಿಕ್ಕಿತು.

ಹೆರಾಲ್ಡ್ ಬ್ರೌನ್ ಎ.ಸಿ. ವಿದ್ಯುತ್ ವಿರುದ್ಧದ ಹೋರಾಟವನ್ನು ಕೇವಲ ಪತ್ರಿಕೆಗಳ ವಾಚಕರ ವಾಣಿಗೆ ಪತ್ರ ಬರೆಯುವುದಕ್ಕೇ ಸೀಮಿತಗೊಳಿಸಲಿಲ್ಲ. ನ್ಯೂಯಾರ್ಕ್ ರಾಜ್ಯದ ಸರ್ಕಾರಕ್ಕೂ ಎ.ಸಿ. ವಿದ್ಯುತ್ ಎಂಬ ಮಹಾಮಾರಿಯ ಬಗೆಗೆ ಪತ್ರ ಬರೆದ.

ನ್ಯೂಯಾರ್ಕ್ ಸರ್ಕಾರ ಈ ಅಪಾಯದ ಕುರಿತು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿ, ಎಂಜಿನಿಯರುಗಳು ಮತ್ತು ತಜ್ಞರಿಂದ ಮಾಹಿತಿ ಕಲೆ ಹಾಕಿತು. ವೆಸ್ಟಿಂಗ್‌ಹೌಸ್‌ನ ಪರವಿದ್ದ ಎಂಜಿನಿಯರುಗಳು ಅಪಾಯವನ್ನು ಅಲ್ಲಗೆಳೆದರೆ, ಎಡಿಸನ್ ಪರವಿದ್ದ ತಜ್ಞರು ಎ.ಸಿ. ವಿದ್ಯುತ್ ವ್ಯವಸ್ಥೆಯನ್ನು ಮಾನವರನ್ನು ಅರೆಗಳಿಗೆಯಲ್ಲೇ ಕೊಲ್ಲಬಲ್ಲ ರಕ್ಕಸ ಶಕ್ತಿಯೆಂಬಂತೆ ಬಿಂಬಿಸಿದರು. ವೆಸ್ಟಿಂಗ್‌ಹೌಸ್ ಮತ್ತು ಎಡಿಸನ್ ನಡುವಿನ ಈ ವ್ಯಾವಹಾರಿಕ ಕದನದಲ್ಲಿ, ತಾನು ನಿರ್ಲಿಪ್ತನೆಂದು ಘೋಷಿಸಿಕೊಂಡ ಹೆರಾಲ್ಡ್ ಬ್ರೌನ್, ಎ.ಸಿ. ವಿದ್ಯುತ್ತಿನ ವಿರುದ್ಧ ತನ್ನ ದನಿಯನ್ನೂ ಸೇರಿಸಿದ. ಆದರೆ, ಸರ್ಕಾರ ಈ ನಿಟ್ಟಿನಲ್ಲಿ, ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿಲ್ಲ.

ಎ.ಸಿ. ವಿದ್ಯುತ್ತಿನ ಅಪಾಯವನ್ನು ಹೇಗಾದರೂ ಮಾಡಿ ತೋರಿಯೇ ತೀರಬೇಕೆಂದು ಪಣತೊಟ್ಟಿದ್ದ ಹೆರಾಲ್ಡ್ ಬ್ರೌನ್, ಎ.ಸಿ. ವಿದ್ಯುತ್ತಿನ ಕಟ್ಟಾ ವಿರೋಧಿಯಾಗಿದ್ದ ಎಡಿಸನ್‌ನನ್ನು ರಹಸ್ಯವಾಗಿ ಸಂಪರ್ಕಿಸಿದ. ತನಗೆ, ಎ.ಸಿ. ಜೆನರೇಟರುಗಳನ್ನು ಕೊಟ್ಟರೆ, ಎ.ಸಿ. ವಿದ್ಯುತ್ತಿನ ಅಪಾಯವನ್ನು ಸಾರ್ವಜನಿಕವಾಗಿ ತೋರಿಸಿಕೊಡುವುದಾಗಿ ಅವನು ಎಡಿಸನ್‌ಗೆ ಆಶ್ವಾಸನೆ ನೀಡಿದ.

ಕೆಲವೇ ದಿನಗಳಲ್ಲಿ, ಹೆರಾಲ್ಡ್ ಬ್ರೌನ್‌ಗೆ ತನ್ನ ಪ್ರಯೋಗಗಳನ್ನು ನಡೆಸಲು, ನ್ಯೂ ಜರ್ಸಿಯಲ್ಲಿದ್ದ ಎಡಿಸನ್ನನ ಕಂಪೆನಿಯಲ್ಲಿ ಜಾಗ, ಸಲಕರಣೆ ಮತ್ತು ಸಹಾಯಕರನ್ನು ನೀಡಲಾಯಿತು. ಅವನು, ಕಂಪೆನಿಯ ಸುತ್ತಮುತ್ತ ಪ್ರದೇಶದ ಹುಡುಗರನ್ನು ಕಲೆ ಹಾಕಿ ಅವರಿಗೊಂದು ಕೆಲಸ ನೀಡಿದ. ಅವರ ಕೆಲಸ: ಬೀದಿ ನಾಯಿಗಳನ್ನು ಹಿಡಿದು ಅವನ್ನು ಬ್ರೌನ್‌ನಿಗೆ ಒಪ್ಪಿಸುವುದು.

ಹೀಗೆ ಕಲೆ ಹಾಕಿದ ಬೀದಿ ನಾಯಿಗಳನ್ನು ಬ್ರೌನ್ ಒಂದೊಂದಾಗಿ ವಿವಿಧ ಎಲೆಕ್ಟ್ರಿಕ್ ವೋಲ್ಟೇಜ್‌ಗಳ ಷಾಕ್ ನೀಡಿ ಕೊಂದ. ಕೊನೆಗೆ, ತನ್ನ ಪ್ರಯೋಗಗಳಿಂದ ತೃಪ್ತನಾದ ಅವನು, ೧೮೮೮ರ ಜುಲೈ ಮೂವತ್ತರಂದು, ಪ್ರಾತ್ಯಕ್ಷಿಕೆಯೊಂದರ ಮೂಲಕ, ಎ.ಸಿ. ವಿದ್ಯುತ್ತಿನ ಅಪಾಯವನ್ನು ಸಾರ್ವಜನಿಕರ ಮುಂದೆ ನಿರೂಪಿಸುವುದಾಗಿ ಘೋಷಣೆ ಮಾಡಿದ.

ಆ ದಿನ, ಹಲವರ ವಿರೋಧದ ನಡುವೆಯೂ, ನ್ಯೂಯಾರ್ಕಿನ ಪ್ರತಿಷ್ಠಿತ ಕೊಲಂಬಿಯಾ ಯೂನಿವರ್ಸಿಟಿಯ ಸಭಾಂಗಣವೊಂದರಲ್ಲಿ, ಬೋನಿನಲ್ಲಿದ್ದ ನಾಯಿಯೊಂದಕ್ಕೆ, ಮೊದಲು, ಸಾವಿರ ವೋಲ್ಟ್ ವರೆಗೂ ವಿವಿಧ ವೋಲ್ಟೇಜುಗಳ ಡಿ.ಸಿ. ಕರೆಂಟ್ ಷಾಕ್ ನೀಡಲಾಯಿತು. ಅದು, ಬದುಕುಳಿಯಿತು. ಅನಂತರ ಅದಕ್ಕೆ, ೩೦೦ ವೋಲ್ಟ್‌ಗಳ ಎ.ಸಿ. ಕರೆಂಟ್ ಷಾಕ್ ನೀಡಲಾಯಿತು. ಅದು, ಕೆಲವೇ ಕ್ಷಣಗಳಲ್ಲಿ ಸಾವಿಗೀಡಾಯಿತು. ಎ.ಸಿ., ಡಿ.ಸಿ.ಗಿಂತ ಅಪಾಯಕಾರಿ ಎಂದು ನಿರೂಪಿತವಾಯಿತೆಂದು ಬ್ರೌನ್ ಸಂಭ್ರಮ ಪಟ್ಟ. ಆದರೆ, ಜನರು ತಗಾದೆ ತೆಗೆದರು. ಡಿ.ಸಿ. ಷಾಕ್‌ನಿಂದ ಮೊದಲೇ ಜರ್ಜರಿತವಾಗಿದ್ದರಿಂದಲೇ, ಆ ನಾಯಿ, ನಂತರದಲ್ಲಿ ಎ.ಸಿ. ಷಾಕ್‌ಗೆ ಸುಲಭವಾಗಿ ತುತ್ತಾಯಿತೆಂದು ಅವರ ವಾದವಾಗಿತ್ತು.

ತಾನೇ ಸರಿ ಎಂದು ಹೇಗಾದರೂ ಮಾಡಿ ತೋರಿಸಿಕೊಳ್ಳಬೇಕೆಂದಿದ್ದ ಬ್ರೌನ್, ನಾಲ್ಕು ದಿನಗಳ ನಂತರ ಇನ್ನೊಂದು ಸಾರ್ವಜನಿಕ ಪ್ರದರ್ಶನ ಏರ್ಪಡಿಸಿದ. ಈ ಬಾರಿ, ಮೂರು ನಾಯಿಗಳನ್ನು, ಒಂದಾದ ಮೇಲೆ ಒಂದರಂತೆ, ೩೦೦ ವೋಲ್ಟ್‌ಗಳ ಎ.ಸಿ. ಎಲೆಕ್ಟ್ರಿಕ್ ಷಾಕ್ ನೀಡಿ ಕೊಲ್ಲಲಾಯಿತು.

ಆದರೆ, ಸರ್ಕಾರ ಮಾತ್ರ, ಎ.ಸಿ. ವಿದ್ಯುತ್ ವಿರುದ್ಧ, ಬ್ರೌನ್ ಮತ್ತು ಎಡಿಸನ್ ಬಯಸಿದ್ದ, ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

ಜೀವದ ಉಗಮದ ನೂರು ಕೋಟಿ ವರ್ಷಗಳ ನಂತರ, ಸೈಯಾನೋಬ್ಯಾಕ್ಟೀರಿಯಾಗಳು ಬದಲಾವಣೆ ಹೊಂದಿ, ಸೂರ್ಯನ ಬೆಳಕಿನಿಂದ ಜೀವದ ಉಳಿವಿಗೆ ಬೇಕಾದ ಚೈತನ್ಯವನ್ನು ಸೃಷ್ಟಿಸಿಕೊಳ್ಳಬಲ್ಲ ಜೀವಿಗಳಾದವು.

ಅಮೆರಿಕದ ಸಂವಿಧಾನ, “ಕ್ರೂರ ಮತ್ತು ಅಸಾಮಾನ್ಯ” ಎನ್ನುವಂತಹ ಶಿಕ್ಷೆಗಳನ್ನು ಸಂಪೂರ್ಣವಾಗಿ ನಿಷೇಧಿಸುತ್ತದೆ. ಹೀಗಾಗಿ, ಎಂತಹುದೇ ಘೋರಾಪರಾಧ ಮಾಡಿದವರಿಗೂ “ಹಿಂಸೆ” ಎನ್ನಿಸುವಂತಹ ಶಿಕ್ಷೆಗಳನ್ನು ನೀಡುವಂತಿಲ್ಲ.

ಆದರೆ, ಇಂದು, ಪಾಶ್ಚಾತ್ಯ ಮುಂದುವರೆದ ದೇಶಗಳಲ್ಲಿ, “ಮರಣ ದಂಡನೆ” ಶಿಕ್ಷೆ ಇರುವ ಒಂದೇ ಒಂದು ರಾಷ್ಟ್ರವೆಂದರೆ, ಅದು ಅಮೆರಿಕಾ ಮಾತ್ರ. ಚೈನಾ, ಇರಾನ್, ಇರಾಕ್, ಸೌದಿ ಅರೇಬಿಯಾ, ಈಜಿಪ್ಟ್, ಪಾಕಿಸ್ತಾನ್, ಇತ್ಯಾದಿ ಕೆಲ ರಾಷ್ಟ್ರಗಳನ್ನು ಬಿಟ್ಟರೆ, ಅಮೆರಿಕ ನೀಡುವಷ್ಟು ಮರಣ ದಂಡನೆಗಳನ್ನು ವಿಶ್ವದಲ್ಲಿ ಇನ್ನಾವ ದೇಶವೂ ನೀಡುವುದಿಲ್ಲ. ಉತ್ತರ ಮತ್ತು ದಕ್ಷಿಣ ಅಮೆರಿಕ ಖಂಡಗಳ ಎಲ್ಲ ರಾಷ್ಟ್ರಗಳಲ್ಲಿ, ಇಂದು, ತನ್ನ ಅಪರಾಧಿಗಳನ್ನು ಮರಣಕ್ಕೆ ಗುರಿಯಾಗಿಸುವ ಒಂದೇ ಒಂದು ರಾಷ್ಟ್ರವೆಂದರೆ, ಅದೂ ಸಹ ಅಮೆರಿಕವೇ. (ಕೆಲವು ದೇಶಗಳ ನ್ಯಾಯಾಂಗದ ಪುಸ್ತಕಗಳಲ್ಲಿ, ಮರಣ ದಂಡನೆ ಇನ್ನೂ ಇರಬಹುದಾದರೂ, ಅವುಗಳ ಬಳಕೆ ಎಷ್ಟೋ ಕಾಲದಿಂದ ನಿಂತಿದೆ)

“ಮಾರಣಾಂತಿಕ ಚುಚ್ಚುಮದ್ದು”, “ಎಲೆಕ್ಟ್ರಿಕ್ ಷಾಕ್”, “ನೇಣು”, “ವಿಷಾನಿಲ”, ಮತ್ತು “ಗುಂಡೇಟು”, ಹೀಗೆ ಐದು ವಿಧಾನಗಳಲ್ಲಿ, ಇಂದು ಅಮೆರಿಕದಲ್ಲಿ ಖೈದಿಯೊಬ್ಬನನ್ನು ಕೊಲ್ಲಬಹುದು. (ಅಮೆರಿಕದ ನ್ಯಾಯಾಂಗ ವ್ಯವಸ್ಥೆ, ಭಾರತದ ನ್ಯಾಯಾಂಗ ವ್ಯವಸ್ಥೆಗೆ ಹೋಲಿಸಿದರೆ, ಹೆಚ್ಚು ಸಂಕೀರ್ಣ. ಅಲ್ಲಿನ ರಾಜ್ಯಗಳು ತಮ್ಮದೇ ಆದ ಸಂವಿಧಾನವನ್ನು ಹೊಂದಿದ್ದು, ಹಲವು ರಾಜ್ಯಗಳಲ್ಲಿ ಮರಣ ದಂಡನೆಯ ಶಿಕ್ಷೆಯನ್ನು ನಿಷೇಧಿಸಲಾಗಿದೆ. ಹಾಗೆಯೇ, ಕೆಲವೊಂದು ರಾಜ್ಯಗಳಲ್ಲಿ, ಕೆಲವು ಮರಣ ದಂಡನೆಯ ವಿಧಾನಗಳೂ ಚಾಲ್ತಿಯಲ್ಲಿಲ್ಲ. ಉದಾಹರಣೆಗೆ, “ಗುಂಡೇಟಿನಿಂದ ಮರಣ ದಂಡನೆ”ಯ ಶಿಕ್ಷೆ ಅಮೆರಿಕದ ನಾಲ್ಕು ರಾಜ್ಯಗಳಲ್ಲಿ ಮಾತ್ರ ಲಭ್ಯವಿದ್ದರೆ, “ನೇಣು ಶಿಕ್ಷೆ” ಕೇವಲ ಮೂರು ರಾಜ್ಯಗಳಲ್ಲಿ ಮಾತ್ರ ಇದೆ)

ಇತ್ತೀಚಿನ ವರ್ಷಗಳಲ್ಲಿ, “ಮಾರಣಾಂತಿಕ ಚುಚ್ಚುಮದ್ದಿನ” ವಿಧಾನ ಸಾಮಾನ್ಯವಾಗಿದ್ದರೂ, ಅದನ್ನು ಬಿಟ್ಟರೆ “ಎಲೆಕ್ಟ್ರಿಕ್ ಕುರ್ಚಿ”ಯಲ್ಲಿ ಹೈ ವೋಲ್ಟೇಜ್ ಎಲೆಕ್ಟ್ರಿಕ್ ಷಾಕ್ ನೀಡಿ ಖೈದಿಯನ್ನು ಕೊಲ್ಲುವುದೇ ಹೆಚ್ಚು ಬಳಕೆಯ ವಿಧಾನ.

ಎಡಿಸನ್ ಮತ್ತು ವೆಸ್ಟಿಂಗ್‌ಹೌಸ್ “ಡಿ.ಸಿ. Vs ಎ.ಸಿ.” ಕದನದಲ್ಲಿ ನಿರತರಾಗಿದ್ದಾಗ, ನ್ಯೂಯಾರ್ಕಿನ ವಿಧಾನ ಮಂಡಲದಲ್ಲಿ, ಕೋರ್ಟ್‌ಗಳಲ್ಲಿ, ಬುದ್ಧಿ ಜೀವಿಗಳ ಮಧ್ಯೆ ಚರ್ಚೆಯೊಂದು ನಡೆಯುತ್ತಿತ್ತು. ಆ ಕಾಲದಲ್ಲಿ ಬಹುಮಟ್ಟಿಗೆ ಚಾಲ್ತಿ ಇದ್ದ ಮರಣ ದಂಡನಾ ವಿಧಾನವೆಂದರೆ, “ನೇಣು”. ಆದರೆ, ನೇಣಿಗೆ ಹಾಕುವಾಗ, ಖೈದಿಗೆ “ಹಿಂಸೆ” ಆಗುವುದಿಲ್ಲವೇ? “ಹಿಂಸೆ”ಯನ್ನು ಸಂವಿಧಾನ ಸ್ಪಷ್ಟವಾಗಿ ನಿಷೇಧಿಸಿರುವಾಗ, ನೇಣಿಗೆ ಹಾಕುವುದು ಕಾನೂನು ಬದ್ಧವೇ? ಇವು ಚರ್ಚಿತವಾಗುತ್ತಿದ್ದ ಪ್ರಶ್ನೆಗಳು. ನೇಣು ಹಾಕುವಾಗ ಕೆಲವೊಮ್ಮೆ ಲೆಕ್ಕಾಚಾರ ಸರಿ ಇಲ್ಲದೆ, ಖೈದಿಗಳು ವಿಲವಿಲನೆ ಒದ್ದಾಡುವುದೂ ಇದೆ. ಇಂತಹ ಸಂದರ್ಭಗಳು, ಈ ಚರ್ಚೆಗೆ ಮತ್ತಷ್ಟು ಕಾವನ್ನೇರಿಸಿದ್ದವು.

೧೮೮೦ರ ದಶಕದಲ್ಲಿ, ಆಲ್ಫ್ರೆಡ್ ಸೌತ್‌ವಿಕ್ ಎಂಬಾತ, ನ್ಯೂಯಾರ್ಕಿನ ರಸ್ತೆಗಳಲ್ಲಿ, ಆಗ್ಗಿಂದಾಗ್ಗೆ ಎಲೆಕ್ಟ್ರಿಕ್ ಅವಘಡಗಳಿಂದ ಸಾವಿಗೀಡಾಗಿದ್ದವರ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವರದಿಗಳನ್ನು ಓದುತ್ತಿದ್ದ. ನೇಣಿನ ಮೂಲಕ ನೀಡುವ ಮರಣದಂಡನೆಯ ಸಾಂವಿಧಾನಿಕ ಬದ್ಧತೆಯ ಚರ್ಚೆಯ ಅರಿವಿದ್ದ ಅವನಿಗೆ, “ನೇಣು ಹಿಂಸೆಯೇ?” ಎಂಬ ಪ್ರಶ್ನೆಗೆ ಉತ್ತರ ದೊರಕಿತು. ನೇಣು ಹಿಂಸೆಯೋ ಅಲ್ಲವೋ, ನೇಣಿನ ಬದಲು ಎಲೆಕ್ಟ್ರಿಕ್ ಷಾಕ್ ನೀಡಿದರೆ, ಈ ಪ್ರಶ್ನೆಯೇ ಉದ್ಭವಿಸುವುದಿಲ್ಲವಲ್ಲ!

ದಂತವೈದ್ಯನಾಗಿದ್ದ ಅವನು, ಮರಣದಂಡನೆಗೆ ಗುರಿಯಾದ ಖೈದಿಗಳಿಗೆ ಸುಲಭವಾಗಿ ಷಾಕ್ ನೀಡಲು ಎಲೆಕ್ಟ್ರಿಕ್ ಚೇರ್ ಒಂದನ್ನು ನಿರ್ಮಿಸಿದ. ಕಾಲು-ಬಂಧಿ, ಕೈ-ಕೋಳ, ತಲೆ ಅಲುಗಾಡದಂತೆ ಹಣೆ-ಪಟ್ಟಿ ಇತ್ಯಾದಿಗಳಿದ್ದ ಅದು, ಕೆಲಮಟ್ಟಿಗೆ ದಂತವೈದ್ಯರ ಕ್ಲಿನಿಕ್‌ಗಳಲ್ಲಿ ಇರುವ ಕುರ್ಚಿಗಳಂತೆ ಕಂಡರೆ, ಅದು ಕೇವಲ ಕಾಕತಾಳೀಯವೇನಲ್ಲ.

ಎಲೆಕ್ಟ್ರಿಕ್ ಚೇರ್ ಒಂದನ್ನು ನಿರ್ಮಿಸಿದ್ದೇನೋ ಆಯಿತು, ಆದರೆ ಅದಕ್ಕೆ ಯಾವ ಕರೆಂಟ್ ಬಳಸಬೇಕು? ಎ.ಸಿ.ಯೋ? ಅಥವಾ ಡಿ.ಸಿ.ಯೋ? ಈ ವಿಚಾರದಲ್ಲಿ ಸಲಹೆ ಮತ್ತು ಸಹಾಯ ನೀಡುವಂತೆ ಸೌತ್‌ವಿಕ್ ಎಡಿಸನ್‌ನನ್ನು ಸಂಪರ್ಕಿಸಿದ. ಆದರೆ, ಎ.ಸಿ. ಅಪಾಯದ ಕುರಿತು ಭಾರೀ ಪ್ರಚಾರದಲ್ಲಿ ತೊಡಗಿದ್ದ ಎಡಿಸನ್ನನಿಗೆ, ತನ್ನ ಡಿ.ಸಿ. ತಂತ್ರಜ್ಞಾನವನ್ನು ಎಲೆಕ್ಟ್ರಿಕ್ ಚೇರಿನ ಮರಣದಂಡನೆಗೆ ಬಳಸುವುದು ಬೇಕಾಗಿರಲಿಲ್ಲ. ಅವನು, ತಾನು ಮರಣದಂಡನೆಯ ಶಿಕ್ಷೆಗೇ ವಿರುದ್ಧವೆಂದೂ, ಹೀಗಾಗೀ ಏನೂ ಸಹಾಯ ಮಾಡುವುದಿಲ್ಲವೆಂದೂ ಸೌತ್‌ವಿಕ್‌ಗೆ ತಿಳಿಸಿದ. ಹಾಗೆಯೇ, ಒಂದು ಸಲಹೆಯನ್ನೂ ಕೊಟ್ಟ: ಮರಣ ದಂಡನೆಗೆ ಎ.ಸಿ. ವಿದ್ಯುತ್ ವ್ಯವಸ್ಥೆಯೇ ಸೂಕ್ತ!

ಈಗಾಗಲೇ, ತನ್ನ “ಪ್ರಯೋಗ”ಗಳಿಂದ ಹಲವಾರು ನಾಯಿಗಳನ್ನು ಕೊಂದಿದ್ದ ಹೆರಾಲ್ಡ್ ಬ್ರೌನ್, ಸೌತ್‌ವಿಕ್‌ನೊಂದಿಗೆ ಕೈ ಜೋಡಿಸಿದ. ಎ.ಸಿ. ವಿದ್ಯುತ್ತಿನ ಅಪಾಯವನ್ನು ನಿರೂಪಿಸಿ ತೋರಿಸಲೇ ಬೇಕೆಂದು ಪಣತೊಟ್ಟಿದ್ದ ಅವನಿಗೆ ಇದು ಹೇಳಿ ಮಾಡಿಸಿದಂತಹ ಅವಕಾಶವಾಗಿತ್ತು.

ಆದರೆ, ಹೆರಾಲ್ಡ್ ಬ್ರೌನ್ ತನ್ನ ಪ್ರಯೋಗಗಳಲ್ಲಿ ಕೊಂದದ್ದು ಕೇವಲ ನಾಯಿಗಳಂತಹ ಸಣ್ಣ ಪ್ರಾಣಿಯನ್ನು. ಈ ಎಲೆಕ್ಟ್ರಿಕ್ ಚೇರ್, ಮನುಷ್ಯನಂತಹ ದೊಡ್ಡ ಜೀವಿಯನ್ನು ಕೊಲ್ಲಬಹುದೇ?! ಅದನ್ನೂ, ಪ್ರಯೋಗಗಳ ಮೂಲಕ ಪರೀಕ್ಷಿಸಬೇಕಲ್ಲವೇ?!

೧೮೮೮ರ ಡಿಸೆಂಬರ್ ಐದರಂದು, ನ್ಯೂಯಾರ್ಕಿನ ಡೆತ್ ಪೆನಾಲ್ಟಿ ಕಮಿಷನ್ನಿನ ಮುಖ್ಯಸ್ತ, ಮೆಡಿಕೋ-ಲೀಗಲ್ ಸೊಸೈಟಿಯ ಸದಸ್ಯರು, ಪ್ರಾಣಿ ದಯಾ ಸಂಘದವರು ಹೀಗೆ ಹಲವು ಗಣ್ಯರು ನ್ಯೂ ಜರ್ಸಿಯಲ್ಲಿದ್ದ ಎಡಿಸನ್ನನ ಲ್ಯಾಬರೇಟರಿಯಲ್ಲಿ ನೆರೆದರು. ಎಡಿಸನ್ ಸ್ವತಃ ತಾನೂ ಅಲ್ಲಿದ್ದ. ಅವರೆಲ್ಲರ ಮುಂದೆ, ಹೆರಾಲ್ಡ್ ಬ್ರೌನ್ ತನ್ನ ಪ್ರಯೋಗವನ್ನು ಪ್ರಾರಂಭಿಸಿದ. ಒಂದೊಂದಾಗಿ ಐದು ಪ್ರಾಣಿಗಳನ್ನು ಎ.ಸಿ. ವಿದ್ಯುತ್ ಷಾಕ್ ನೀಡಿ ಕೊಲ್ಲಲಾಯಿತು. ಎಲ್ಲಾ ಪ್ರಾಣಿಗಳೂ, ಗಾತ್ರ ಅಥವಾ ತೂಕದಲ್ಲಿ ಸಾಧಾರಣ ಮನುಷ್ಯನೊಬ್ಬನಿಗಿಂತ ಹೆಚ್ಚಿದ್ದವು. ಆ ಐದು ಪ್ರಾಣಿಗಳು: ನಾಲ್ಕು ದನದ ಕರುಗಳು. ಮತ್ತು ಒಂದು ಕುದುರೆ.

ಇಂತಹ ಪ್ರಯೋಗಗಳನ್ನು, ಅದರಲ್ಲೂ ತನ್ನ ಎ.ಸಿ. ವಿಧಾನದ ಬಳಕೆಯನ್ನು ವೆಸ್ಟಿಂಗ್‌ಹೌಸ್ ಕಟುವಾಗಿ ಟೀಕಿಸಿದ. ತನ್ನ ಜೆನರೇಟರ್‌ಗಳನ್ನು ಮರಣದಂಡನೆಯಂತಹ ಕೃತ್ಯಗಳಿಗೆ ಬಳಸಲು ನೀಡುವುದಿಲ್ಲವೆಂದೂ ಅವನು ಘೋಷಿಸಿದ.

ಆದರೆ, ಹೆರಾಲ್ಡ್ ಬ್ರೌನ್, ಎಡಿಸನ್ ಕಂಪೆನಿ ಮತ್ತು ಥಾಮ್ಸನ್-ಹ್ಯೂಸ್ಟನ್ ಕಂಪೆನಿಯ ಸಹಾಯದೊಂದಿಗೆ, ವೆಸ್ಟಿಂಗ್‌ಹೌಸ್‌ಗೆ ತಿಳಿಯದಂತೆ ಮೂರು ವೆಸ್ಟಿಂಗ್‌ಹೌಸ್ ಜೆನರೇಟರುಗಳನ್ನು ಪಡೆದುಕೊಂಡ.

ಎಲೆಕ್ಟ್ರಿಕ್ ಚೇರಿನ ಉದ್ಘಾಟನೆಗೆ, ಕೊನೆಗೂ ಕಾಲ ಕೂಡಿ ಬಂದಿತ್ತು.
ಮುಖ್ಯ ಅತಿಥಿ ಯಾರೆಂದಷ್ಟೇ ಘೋಷಣೆಯಾಗಬೇಕಿತ್ತು.

*****

ವಿಲಿಯಂ ಕೆಮ್ಲರ್, ನ್ಯೂಯಾರ್ಕ್ ನಗರದ ಬೀದಿ ಬದಿಯ ತರಕಾರಿ-ವ್ಯಾಪಾರಿ. ಅವನ ಅಪ್ಪ, ಅಮ್ಮ ಇಬ್ಬರೂ ಆಲ್ಕೋಹಾಲಿನ ದಾಸರಾಗಿದ್ದವರು. ಅತಿ ಸಣ್ಣ ವಯಸ್ಸಿಗೇ ಶಾಲೆಯಿಂದ ಹೊರ ಬಿದ್ದಿದ್ದ ಕೆಮ್ಲರ್‌ಗೆ ಓದು-ಬರಹ ಬರುತ್ತಿರಲಿಲ್ಲ. ವ್ಯಾಪಾರದಲ್ಲಿ ಕೊಂಚ ಯಶ ಪಡೆದುಕೊಳ್ಳುವ ವೇಳೆಗೆ, ಅವನಿಗೂ ಕುಡಿತದ ಚಟ ಮೈಗಂಟಿಕೊಂಡಿತ್ತು. ೧೮೮೦ರ ದಶಕದ ನ್ಯೂಯಾರ್ಕಿನ ಹಲವು ಹೆಂಡದಂಗಡಿಗಳಿಗೆ ಅವನು ಖಾಯಂ ಗಿರಾಕಿಯಾಗಿದ್ದ.

ಮಾರ್ಚ್ ೨೯, ೧೮೮೮ರಂದು ಬೆಳಗ್ಗೆ, ಅವನು, ಹಿಂದಿನ ರಾತ್ರಿಯ ಕುಡಿತದ ಮತ್ತಿನಿಂದ ಇನ್ನೂ ಹೊರ ಬರುತ್ತಿದ್ದ. ಆಗ ಅವನ ಕಣ್ಣಿಗೆ ಕಂಡವಳು ಟಿಲ್ಲೀ ಜ಼ೀಗ್ಲರ್ ಎಂಬಾಕೆ. ಆಕೆ, ಕೆಮ್ಲರ್‌ನ ಹೆಂಡತಿಯೋ ಅಥವಾ ಪ್ರೇಯಸಿಯೋ ತಿಳಿಯದು; ಅವರಿಬ್ಬರೂ ಒಂದೇ ಸೂರಿನಡಿ ಜೀವಿಸುತ್ತಿದ್ದರೆಂಬುದು ಮಾತ್ರ ನಿಜ.

ಅವರಿಬ್ಬರ ನಡುವೆ, ಆ ದಿನ ಜಗಳ ಹತ್ತಿಕೊಂಡಿತು. ಅವನು ಟಿಲ್ಲೀಯ ಮೇಲೆ ತನ್ನ ಹಣ ಕದ್ದ ಆರೋಪ ಮಾಡಿದ. ಅಷ್ಟೇ ಅಲ್ಲ, ಅವಳಿಗೆ ಯಾರೊಂದಿಗೋ ಓಡಿಹೋಗುವ ಸಂಚೂ ಸಹ ಇದೆ ಎಂದ. ಅವಳು ಪ್ರತಿಭಟಿಸಿದಳು. ಅವನು ಮನೆಯಿಂದ ಹೊರ ಹೋಗಿ, ಕಿರುಗೊಡಲಿಯೊಂದಿಗೆ ವಾಪಸು ಬಂದ. ಟಿಲ್ಲೀಯನ್ನು ಅದರಿಂದ ಕೊಚ್ಚಿ ಕೊಂದ. ನಂತರ, ಪಕ್ಕದ ಮನೆಯವರ ಬಳಿಗೆ ಹೋಗಿ ತನ್ನ ಪ್ರೇಯಸಿಯನ್ನು ಕೊಂದಿದ್ದಾಗಿ ಹೇಳಿದ.

ಪೋಲಿಸರು ಬಂದರು. ಅವನನ್ನು ಹಿಡಿದೊಯ್ದರು. ಒಂದೂವರೆ ತಿಂಗಳ ಒಳಗೆಯೇ ಪೂರ್ಣ ವಿಚಾರಣೆ ನಡೆದು, ಮೇ ೧೦ರಂದು, ಅವನಿಗೆ ಮರಣದಂಡನೆಯ ಶಿಕ್ಷೆ ನೀಡಿರುವುದಾಗಿ ನ್ಯಾಯಾಧೀಶರು ತೀರ್ಪು ನೀಡಿದರು.

ಆ ವೇಳೆಗೆ, ಆಗಲೇ, ಎಲೆಕ್ಟ್ರಿಕ್ ಚೇರ್ ಮತ್ತು ಅದಕ್ಕೆ ಬೇಕಿದ್ದ ಎ.ಸಿ. ಜೆನರೇಟರುಗಳು ಸಿದ್ಧವಿದ್ದವು. ವಿಲಿಯಂ ಕೆಮ್ಲರ್‌ನಿಗೆ ಈ ಕುರ್ಚಿಯಲ್ಲೇ ಮರಣದಂಡನೆ ನೀಡುವುದೆಂದು ನಿರ್ಧಾರವಾಯಿತು. ನೇಣು ಶಿಕ್ಷೆ “ಹಿಂಸೆ” ಎನ್ನುವುದಾದರೇ, ಎಲೆಕ್ಟ್ರಿಕ್ ಷಾಕ್ “ಹಿಂಸೆ”ಯಲ್ಲವೇ?! ಈ ಪ್ರಶ್ನೆ ನ್ಯಾಯಾಲಯದ ಮುಂದೆ ಬಂತು. ಆದರೆ, ಇನ್ನೂ ಎಂದೂ ಉಪಯೋಗಿಸದೇ ಇದ್ದ ಮರಣದಂಡನೆಯ ವಿಧಾನವನ್ನು, “ಹಿಂಸಾತ್ಮಕ” ಎನ್ನುವುದಾದರೂ ಹೇಗೆ? ನ್ಯಾಯಾಲಯ, ವಿಲಿಯಂ ಕೆಮ್ಲರ್‌, ಎಲೆಕ್ಟ್ರಿಕ್ ಚೇರ್ ಮೇಲೆ ಕೂರುವುದನ್ನು ಖಚಿತ ಗೊಳಿಸಿತು.

ಇವೆಲ್ಲಾ ನಿರ್ಧಾರ ಆಗುವ ವೇಳೆಗೆ, ಇನ್ನೆರಡು ವರ್ಷ ಆಗಿತ್ತು. ಆಗಸ್ಟ್ ೮, ೧೮೯೦ರಂದು ಬೆಳಗ್ಗೆ ೫ ಗಂಟೆಗೆ ಕೆಮ್ಲರ್‌ ಎದ್ದು ಸಿದ್ಧವಾದ. ಬಿಳಿ ಷರ್ಟ್, ಟೈ, ಸೂಟ್ ಧರಿಸಿದ ಅವನು, ಬ್ರೇಕ್‌ಫಾಸ್ಟ್ ಮಾಡಿ ಮುಗಿಸಿದ. ಬೆಳಗಿನ ೬:೩೮ಕ್ಕೆ ಸರಿಯಾಗಿ, ಎಲೆಕ್ಟ್ರಿಕ್ ಚೇರ್ ಇದ್ದ ಕೊಠಡಿಗೆ ಅವನನ್ನು ಕರೆತರಲಾಯಿತು.

ಅವನು, ಸಮಾಧಾನದಿಂದಲೇ ಇದ್ದ. ಅವನನ್ನು ಕುರ್ಚಿಯ ಮೇಲೆ ಕೂಡಿಸಿ, ಕಾಲ್ಪಟ್ಟಿ, ಕೈ-ಕೋಳ, ಕತ್ತು-ಹಣೆಯ ಸುತ್ತಲ ತಂತಿ ಇತ್ಯಾದಿಗಳನ್ನು ಸನ್ನದ್ಧಗೊಳಿಸುತ್ತಿದ್ದಾಗ ಅವನು, “ನಿಧಾನವಾಗಿ, ಸರಿಯಾಗಿ ಸಿದ್ಧತೆ ಮಾಡಿ. ನನಗೇನೂ ಅವಸರವಿಲ್ಲ” ಎಂಬ ಮಾತನ್ನೂ ಆಡಿದ.

ಅವನಿಗೆ, ಸುಮಾರು ೧೭ ಸೆಕೆಂಡುಗಳ ಕಾಲ ೧೦೦೦ ವೋಲ್ಟ್‌ಗಳ ವಿದ್ಯುತ್ ಷಾಕ್ ನೀಡಲಾಯಿತು. ಅಲ್ಲಿದ್ದ ವೈದ್ಯರು, ಅವನು ಮರಣವನ್ನಪ್ಪಿದನೆಂದು ಸೂಚನೆ ನೀಡಿದರು. ಎಲೆಕ್ಟ್ರಿಕ್ ಸ್ವಿಚ್ ಅನ್ನು ಆಫ್ ಮಾಡಲಾಯಿತು.

ಆದರೆ, ಅವನು ಸತ್ತಿರಲಿಲ್ಲ. ಅವನ ದೇಹ ಇನ್ನೂ ಉಸಿರಾಡುತ್ತಲೇ ಇತ್ತು.

ಮತ್ತೊಮ್ಮೆ, ಸ್ವಿಚ್ ಆನ್ ಮಾಡಿದರು. ಈ ಬಾರಿ, ವೋಲ್ಟೇಜ್ ಅನ್ನು ೨೦೦೦ಕ್ಕೆ ಏರಿಸಲಾಯಿತು. ಅಷ್ಟೇ ಅಲ್ಲ, ಹಲವು ನಿಮಿಷಗಳ ಕಾಲ “ಆನ್”ನಲ್ಲಿಯೇ ಇಡಲಾಯಿತು. ಅವನ ರಕ್ತ ನಾಳಗಳು, ಚರ್ಮದಡಿಯಲ್ಲಿ ಬಿರಿದವು. ದೇಹಕ್ಕೆ ಬೆಂಕಿ ತಾಗಿತು. ಇಡೀ ಕೊಠಡಿಯಲ್ಲೀ ಸುಡುವ ದೇಹದ ಮರಣದ ದುರ್ನಾತ ತುಂಬಿಕೊಂಡಿತು.

ಮನುಷ್ಯರು, “ಕ್ರೂರವೂ” “ಅಸಾಮಾನ್ಯವೂ” ಅಲ್ಲದ ಎಲೆಕ್ಟ್ರಿಕ್ ಚೇರ್ ಎಂಬ ಮರಣದಂಡನೆಯ ಸಲಕರಣೆಯನ್ನು ಕಡೆಗೂ ಕಂಡುಕೊಂಡರು!!

*****

ಒಂದೆಡೆ ಎಡಿಸನ್ ಮತ್ತು ವೆಸ್ಟಿಂಗ್‌ಹೌಸ್ ತಮ್ಮ ಉದ್ದಿಮೆಗಳ ಲಾಭಕ್ಕಾಗಿ “ಡಿ.ಸಿ. Vs ಎ.ಸಿ.” ಯುದ್ಧದಲ್ಲಿ, ನಿರತರಾಗಿದ್ದರೆ, ಅದೇ ಸಮಯಕ್ಕೆ, ಇನ್ನಿಬ್ಬರು ಉದ್ದಿಮೆದಾರರು, ಅದೇ ಅಮೆರಿಕದಲ್ಲೇ ಇನ್ನೊಂದು ಜಟಾಪಟಿಯಲ್ಲಿ ತೊಡಗಿದ್ದರು.

(ಫಿನಿಯಾಸ್ ಟೇಲರ್ ಬಾರ್ನಮ್)

ಫಿನಿಯಾಸ್ ಟೇಲರ್ ಬಾರ್ನಮ್, ಒಬ್ಬ ರಾಜಕಾರಣಿ, ಲೇಖಕ, ಪ್ರಕಾಶಕ, ಉದ್ದಿಮೆದಾರ ಮತ್ತು ದಾನಿ. ೧೮೫೦ರ ದಶಕದಲ್ಲೇ, ಅಮೆರಿಕದಲ್ಲಿದ್ದ ಆಫ್ರಿಕನ್ನರ ಗುಲಾಮಗಿರಿಯನ್ನು ವಿರೋಧಿಸಿದವನು. (ಅಬ್ರಹಾಂ ಲಿಂಕನ್‌ನ ನಾಯಕತ್ವದಲ್ಲಿ, ಅಮೆರಿಕದಲ್ಲಿ ಗುಲಾಮಗಿರಿಯ ನಿಷೇಧವಾಗಿದ್ದು ಹತ್ತು ವರ್ಷಗಳ ನಂತರ, ೧೮೬೦ರ ದಶಕದಲ್ಲಿ). ಆದರೆ, ಇಂದು ಪಿ.ಟಿ.ಬಾರ್ನಮ್ ಬಹುಮಟ್ಟಿಗೆ ಪರಿಚಿತನೆನ್ನಿಸುವುದು ಅವನು ಸ್ಥಾಪಿಸಿದ ಸರ್ಕಸ್ ಮೂಲಕ. ೧೮೭೦ರಲ್ಲಿ ಅವನು ಸ್ಥಾಪಿಸಿದ ಈ ಸರ್ಕಸ್, ಸುಮಾರು ೧೫೦ ವರ್ಷಗಳ ಕಾಲ ಅಮೆರಿಕನ್ನರ ಮನರಂಜಿಸಿ, ಕೊನೆಗೆ, ೨೦೧೭ರಲ್ಲಿ ಕೊನೆಯ ಬಾರಿಗೆ ತನ್ನ ಟೆಂಟ್ ಕೆಳಗಿಳಿಸಿತು.

ಅವನ ಸರ್ಕಸ್ಸಿನಲ್ಲಿ, ದೇಶ ವಿದೇಶಗಳ ಸರ್ಕಸ್ ಕಲಾವಿದರಲ್ಲದೆ, ಜಗತ್ತಿನ ನಾನಾ ದೇಶಗಳ ಪ್ರಾಣಿ ಪಕ್ಷಿಗಳೂ ಇದ್ದವು. ಏಷ್ಯಾ ಮತ್ತು ಆಫ್ರಿಕದ ಕಾಡುಗಳಿಂದ ತಂದಿದ್ದ ಆನೆಗಳ ಹಿಂಡೇ ಅವನ ಸರ್ಕಸ್ಸಿನಲ್ಲಿತ್ತು.

ಅವನ ಸರ್ಕಸ್ ವ್ಯವಹಾರಕ್ಕೆ, ಪೈಪೋಟಿ ನೀಡುತ್ತಿದ್ದವನು ಆಡಮ್ ಫೋರ್‌ಪಾ ಎನ್ನುವ ಇನ್ನೊಬ್ಬ ಉದ್ದಿಮೆದಾರ. ಅವನು ಸ್ಥಾಪಿಸಿದ್ದ ಫೋರ್‌ಪಾ ಸರ್ಕಸ್, ಪಿ.ಟಿ.ಬಾರ್ನಮ್‌ನ ಸರ್ಕಸ್‌ನಷ್ಟು ಯಶಸ್ಸು ಕಂಡಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಫೋರ್‌ಪಾನ ಸರ್ಕಸ್ಸಿನಲ್ಲಿ, ಬಾರ್ನಮ್ ಸರ್ಕಸ್ಸಿನಲ್ಲಿರುವಷ್ಟು ಆನೆಗಳು ಇರಲಿಲ್ಲ.

ಇಂದು ಮನರಂಜನೆಗೆ ನಾನಾ ವಿಧಗಳಿವೆ. ಆದರೆ, ಸಿನೆಮಾ, ಟಿ.ವಿ., ಇಂಟರ್‌ನೆಟ್ ಇಲ್ಲದ ಆ ಕಾಲದಲ್ಲಿ, ಸರ್ಕಸ್ ಮಹತ್ವದ ವಿಷಯವಾಗಿತ್ತು. ಯಾವ-ಯಾವ ಸರ್ಕಸ್ಸಿನ ಒಡೆಯರು ಯಾರು-ಯಾರು, ಅದರಲ್ಲಿ ಎಷ್ಟು ಜನ ಕಲಾವಿದರಿದ್ದಾರೆ, ವಿಶಿಷ್ಟವೆನಿಸುವ ಯಾವ ಮೃಗಗಳಿವೆ, ಇವೆಲ್ಲಾ ಜನಸಾಮಾನ್ಯರ ಚರ್ಚೆಯ ವಿಷಯಗಳಾಗಿದ್ದವು. ದಿನ ಪತ್ರಿಕೆಗಳೂ, ಸರ್ಕಸ್‌ಗಳ ಬಗೆಗೆ, ಸೆನ್ಸೇಷಲ್ ಸುದ್ದಿಗಳನ್ನು ಪ್ರಕಟಿಸುತ್ತಿದ್ದವು.

(ಆಡಮ್ ಫೋರ್‌ಪಾ)

ಬಾರ್ನಮ್ ಸರ್ಕಸ್ಸಿನಲ್ಲಿ, ತನ್ನ ಚರ್ಮದ ಕಂದು ಬಣ್ಣವನ್ನು ಅಲ್ಲಲ್ಲಿ ಕಳೆದುಕೊಂಡಿದ್ದ ಆನೆಯೊಂದು ಇತ್ತು. ಬಾರ್ನಮ್, ಅದಕ್ಕೆ “ಜೆಮ್ ಆಫ್ ದ ಸ್ಕೈ” ಎಂಬ ಹೆಸರಿಟ್ಟು, ಅದೊಂದು “ಬಿಳಿ ಆನೆ” ಎಂದು ಪ್ರಚಾರ ಮಾಡಿಕೊಂಡು ಜನರನ್ನು ಸೆಳೆಯುತ್ತಿದ್ದ. ಇದು, ಫೋರ್‌ಪಾಗೆ ಮೈ ಉರಿಸುತ್ತಿತ್ತು. ಅವನು, ತನ್ನ ಸರ್ಕಸ್ಸಿನಲ್ಲಿದ್ದ ಆನೆಯೊಂದಕ್ಕೆ ಬಿಳಿ ಪೇಂಟ್ ಹಚ್ಚಿ, ಅದಕ್ಕೆ “ಲೈಟ್ ಆಫ್ ಏಷ್ಯಾ” ಎಂಬ ಹೆಸರಿಟ್ಟು, ಅದು “ಪವಿತ್ರವಾದ ಶ್ವೇತ ಗಜ”ವೆಂದೂ, ಬಾರ್ನಮ್ ಸರ್ಕಸ್ಸಿನ “ಬಿಳಿ ಆನೆ” ಕೇವಲ ಬಣ್ಣ ಕಳೆದುಕೊಂಡ ಆನೆಯಷ್ಟೇ ಎಂದು ಪೋಸ್ಟರುಗಳನ್ನು ಹಾಕತೊಡಗಿದ. ಇದು ಅವರಿಬ್ಬರ ನಡುವೆ ಬಿಳಿ-ಕರಿಗಳ ಕದನಕ್ಕೆ ಕಾರಣವಾಯಿತು.

ಕೆಲವು ಸಮಯದ ನಂತರ, “ಲೈಟ್ ಆಫ್ ಏಷ್ಯಾ”ದ ಬಿಳಿ ಚರ್ಮದ ಅಸಲೀ ವಿಷಯ ಪತ್ರಕರ್ತನೊಬ್ಬನಿಗೆ ತಿಳಿಯಿತು. ಅಸಲೀ ಸುದ್ದಿ ಬಯಲಿಗೆ ಬರುತ್ತಿದ್ದಂತೆ, ಫೋರ್‌ಪಾ, “ಲೈಟ್ ಆಫ್ ಏಷ್ಯಾ” ಚಳಿಯಿಂದ ಸತ್ತು ಹೋಯಿತೆಂದು ಘೋಷಿಸಿದ. “ಲೈಟ್ ಆಫ್ ಏಷ್ಯಾ”, ಚಳಿಯಿಂದ “ಸತ್ತ” ದಿನವೇ, ಅವನ ಸರ್ಕಸ್ಸಿನಲ್ಲಿ “ಜಾನ್ ಎಲ್. ಸುಲಿವಾನ್” ಎಂಬ ಆನೆ ಪವಾಡ ಸದೃಶವಾಗಿ ಪ್ರತ್ಯಕ್ಷವಾಯಿತು!

“ಬಿಳಿ-ಆನೆ” ಕದನದಲ್ಲಿ ಸೋತಿದ್ದ ಫೋರ್‌ಪಾಗೆ ಹೊಸದೇನಾದರೂ ಬೇಕಿತ್ತು. ಅವನ ಸರ್ಕಸ್ಸಿನಲ್ಲಿ “ಟಾಪ್ಸಿ” ಎಂಬ ಮರಿ ಆನೆಯೊಂದು ಇತ್ತು. ಅವನು, ಅದನ್ನು, ಅಮೆರಿಕಾ ಖಂಡದಲ್ಲಿ ಹುಟ್ಟಿದ ಮೊಟ್ಟ ಮೊದಲ ಆನೆ ಎಂದು ಪ್ರಚಾರ ಮಾಡತೊಡಗಿದ. ಆದರೆ, ವಾಸ್ತವದಲ್ಲಿ, ಅದು ಏಷ್ಯಾದಿಂದ ಕೊಂಡು ತಂದಿದ್ದ ಮರಿಯಾನೆಯಾಗಿತ್ತು.

ಈ ಟಾಪ್ಸಿ ಒಂದು ಹೆಣ್ಣಾನೆ. ಅವಳಿಗೆ ಸರ್ಕಸ್ಸಿನಲ್ಲಿ ಭಾಗವಹಿಸಲು ಯಾವುದೇ ಆಸ್ಥೆ ಇರಲಿಲ್ಲ. ಹೀಗಾಗಿ, ಸಣ್ಣ ವಯಸ್ಸಿನಿಂದಲೇ, ಅವಳಿಗೆ “ಕೆಟ್ಟ ಆನೆ” ಎಂಬ ಹೆಸರು ಬಂದಿತ್ತು. ಫೋರ್‌ಪಾ ಅದನ್ನೇ, ಪ್ರಚಾರದ ಸಾಮಗ್ರಿಯಾಗಿಯೂ ಬಳಸಿಕೊಳ್ಳುತ್ತಿದ್ದ.

೧೯೦೨ರಲ್ಲಿ, ಫೋರ್‌ಪಾ ಸರ್ಕಸ್, ನ್ಯೂಯಾರ್ಕ್ ನಗರದ ಬ್ರೂಕ್‌ಲಿನ್ ಪ್ರದೇಶದಲ್ಲಿ ತನ್ನ ಟೆಂಟ್ ಹಾಕಿತ್ತು. ಈ ಸಮಯಕ್ಕೆ, ಆಡಮ್ ಫೋರ್‌ಪಾ ಸತ್ತು ಹತ್ತು ವರ್ಷಗಳೇ ಸಂದಿತ್ತು. ಟಾಪ್ಸಿ ಬೆಳೆದು ದೊಡ್ಡವಳಾಗಿದ್ದಳು. ಆದರೆ, “ಕೆಟ್ಟ ಆನೆ” ಎಂಬ ಅವಳ ಬಿರುದು ಮಾತ್ರ ಹಾಗೆಯೇ ಉಳಿದಿತ್ತು.

ಆ ವರ್ಷದ ಮೇ ೨೭ರಂದು ಜೇಮ್ಸ್ ಬ್ಲೌಂಟ್ ಎಂಬ ವ್ಯಕ್ತಿ, ಟಾಪ್ಸಿಯನ್ನು ಕಟ್ಟಿದ್ದ ಲಾಯದೊಳಗೆ ತೂರಾಡುತ್ತಾ ಬಂದ. ಅವನ ಒಂದು ಕೈಯಲ್ಲಿ ವಿಸ್ಕಿ ಬಾಟಲು, ಇನ್ನೊಂದರಲ್ಲಿ ಲೈಟ್ ಮಾಡಿದ್ದ ಸಿಗಾರ್. ಅವನು, ಟಾಪ್ಸಿಯನ್ನು ರೇಗಿಸಲು ಪ್ರಾರಂಭಿಸಿದ. ಮೊದಲು, ವಿಸ್ಕಿ ಬಾಟಲನ್ನು ಅವಳೆಡೆಗೆ ತರುತ್ತಾ ಹಿಂದೆ-ಮುಂದೆ ಮಾಡತೊಡಗಿದ. ನಂತರ ಅವಳ ಮುಖಕ್ಕೆ ಮಣ್ಣೆರೆಚಿದ. ಕೊನೆಗೆ, ತನ್ನ ಕೈಯಲ್ಲಿದ್ದ ಸಿಗಾರಿನ ತುದಿಯಿಂದ, ಟಾಪ್ಸಿಯ ಸೊಂಡಿಲಿನ ಅತಿ ಸೂಕ್ಷ್ಮವಾದ ತುದಿಗೆ ಚುಚ್ಚಿದ. ಟಾಪ್ಸಿ, ಅತೀವ ನೋವಿನಿಂದ ಘೀಳಿಡುತ್ತಾ ಅವನನ್ನು ತನ್ನ ಸೊಂಡಿಲಿನಲ್ಲಿ ಸುತ್ತಿ ರೊಪ್ಪೆಂದು ನೆಲಕ್ಕೆ ಬಡಿದು, ತನ್ನ ಕಾಲು, ತಲೆಯಿಂದ ಜಜ್ಜಿ ಕೊಂದಳು.

ಇದು, ಮಾರನೆಯ ದಿನದ ಪತ್ರಿಕೆಗಳಲ್ಲಿ ಬಿಸಿ-ಬಿಸಿ ಸುದ್ದಿಯಾಯಿತು. ಒಂದು ಪತ್ರಿಕೆ, ಟಾಪ್ಸಿ, ಬ್ಲೌಂಟನ ಹತ್ಯೆಗೂ ಮುನ್ನ ಇನ್ನೂ ಮೂವರನ್ನು ಕೊಂದಿದ್ದಳೆಂದರೆ, ಇನ್ನೊಂದು ಪತ್ರಿಕೆ, ಟಾಪ್ಸಿ, ಹನ್ನೆರಡು ಮಂದಿಯನ್ನು ಕೊಂದವಳು ಎಂದಿತು. ಇಂತಹ “ಕೆಟ್ಟ ಆನೆ”ಯನ್ನು ನೋಡಲು ಜನ ಮುಗಿಬಿದ್ದರು. ಸರ್ಕಸ್‌ ಮಾಲೀಕರಿಗೆ, ಬ್ಲೌಂಟ್‌ನ ಹತ್ಯೆಯಿಂದ ಲಾಭವೇ ಆಯಿತು.

ಆದರೆ, ಇದು ಹೆಚ್ಚು ಕಾಲ ನಡೆಯಲಿಲ್ಲ. ಫೋರ್‌ಪಾ ಸರ್ಕಸ್, ಬ್ರೂಕ್‌ಲಿನ್ ನಿಂದ ಕಿಂಗ್‌ಸ್ಟನ್ ಎನ್ನುವ ಇನ್ನೊಂದು ಊರಿಗೆ ಹೊರಟಿತು. ಆ ಊರಿನಲ್ಲಿ, ಟಾಪ್ಸಿಯನ್ನು ಟ್ರೇನ್‌ನಿಂದ ಕೆಳಗಿಳಿಸುವಾಗ, ಯಾರೋ ಒಬ್ಬ ಒಂದು ಕೋಲಿನಿಂದ, ಟಾಪ್ಸಿಯ ಕಿವಿಯ ಹಿಂದೆ ಸಣ್ಣದಾಗಿ ತಿವಿದ. ರೊಚ್ಚಿಗೆದ್ದ ಟಾಪ್ಸಿ, ಅವನನ್ನು ಸೊಂಡಿಲಿಂದ ಸುತ್ತಿ ಎಸೆಯಿತು. ಮತ್ತಷ್ಟು ಅನಾಹುತವಾಗುವ ಮುಂಚೆಯೇ, ಟಾಪ್ಸಿಯ ಮಾವುತ ಅವಳನ್ನು ಸಮಾಧಾನ ಪಡಿಸಿದ.

ಇದು ಆದ ಮೇಲೆ, ಫೋರ್‌ಪಾ ಸರ್ಕಸ್ ಕಂಪೆನಿಯ ಮಾಲೀಕರು, ಅವಳನ್ನು ಸರ್ಕಸ್ಸಿನಲ್ಲಿ ಇಟ್ಟುಕೊಳ್ಳಲು ಬಯಸಿಲಿಲ್ಲ. ಅವಳನ್ನು, ನ್ಯೂಯಾರ್ಕಿನ ಕೋನಿ ಐಲ್ಯಾಂಡಿನಲ್ಲಿದ್ದ ಲೂನಾ ಪಾರ್ಕ್ ಎಂಬ ಥೀಮ್ ಪಾರ್ಕ್ ಒಂದಕ್ಕೆ ಮಾರಿದರು. (ಲೂನಾ ಪಾರ್ಕ್‌ನ ಮೂಲ ಹೆಸರು “ಸೀ ಲಯನ್ ಪಾರ್ಕ್”, ಟಾಪ್ಸಿ ಬಂದ ಕೆಲದಿನಗಳ ನಂತರ ಮಾಲೀಕತ್ವದ ಬದಲಾವಣೆಯಾಗಿ, ಆ ಪಾರ್ಕ್ ಹೆಸರು “ಲೂನಾ ಪಾರ್ಕ್” ಎಂದು ಬದಲಾಯಿತು) “ಕೆಟ್ಟ ಆನೆ”ಯೆಂದು ಬಿರುದಾಂಕಿತಳಾದ ಅವಳನ್ನು ನೋಡಿಕೊಳ್ಳಲು, ಅವಳೊಂದಿಗೇ, ಅವಳ ಮಾವುತನಾಗಿದ್ದ ವಿಲಿಯಂ ಆಲ್ಟ್ ಅನ್ನೂ ಅಲ್ಲಿಗೆ ಸಾಗಹಾಕಲಾಯಿತು.

ವಿಲಿಯಂ ಆಲ್ಟ್, ಟಾಪ್ಸಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ, ಕುಡಿತದ ಅಭ್ಯಾಸ ಹೊಂದಿದ್ದ. ಒಮ್ಮೊಮ್ಮೆ, ಕುಡಿತದ ಮತ್ತಿನಲ್ಲಿ ಟಾಪ್ಸಿಯನ್ನು ತಿವಿಯುವುದು ಇತ್ಯಾದಿಗಳನ್ನೂ ಮಾಡುತ್ತಿದ್ದ. ಒಮ್ಮೆ, ಕುಡಿತದ ಮತ್ತಿನಲ್ಲಿ ಟಾಪ್ಸಿಯನ್ನು ಪೋಲೀಸರ ಮೇಲೆಯೇ ಛೂ ಬಿಟ್ಟ. ಇನ್ನೊಮ್ಮೆ, ಟಾಪ್ಸಿಯ ಮೇಲೆ ಕುಳಿತುಕೊಂಡು ಪೋಲೀಸ್ ಠಾಣೆಯ ಮೇಲೆಯೇ ಆನೆ ದಾಳಿ ಮಾಡಿಸಿದ. ಇಂತಹ ಸಂದರ್ಭಗಳಲ್ಲಿ ಪೋಲೀಸರು ಅವನನ್ನು ಬಂಧಿಸುವುದೂ ನಡೆಯುತ್ತಿತ್ತು. ಇವೆಲ್ಲವುಗಳಿಂದ ರೋಸಿ ಹೋಗಿದ್ದ ಲೂನಾ ಪಾರ್ಕಿನ ಒಡೆಯರು, ವಿಲಿಯಂ ಆಲ್ಟ್‌ನನ್ನು ಕೆಲಸದಿಂದ ತೆಗೆದು ಹಾಕಿದರು.

ಮಾವುತನೇ ಹೋದಮೇಲೆ, ಟಾಪ್ಸಿಯಂತಹ “ಕೆಟ್ಟ ಆನೆ”ಯನ್ನು ನೋಡಿಕೊಳ್ಳುವವರಾರು? ಪಾರ್ಕಿನ ಒಡೆಯರು ಅವಳನ್ನು ಇನ್ನೊಂದು ಸರ್ಕಸ್ಸಿಗೋ, ಮೃಗಾಲಯಕ್ಕೋ ಸಾಗಹಾಕಲು ಯತ್ನಿಸಿದರಾದರೂ, ಅವಳ ಕೀರ್ತಿ ಈಗಾಗಲೇ ಎಲ್ಲರಿಗೂ ತಿಳಿದಿತ್ತಾದುದರಿಂದ, ಯಾರೂ ಅವಳನ್ನು ಕೊಳ್ಳಲು ಮುಂದೆ ಬರಲಿಲ್ಲ.

ಕೊನೆಗೆ, ಲೂನಾ ಪಾರ್ಕ್‌ನ ಒಡೆಯರು ಒಂದು ತೀರ್ಮಾನಕ್ಕೆ ಬಂದರು: ತಮ್ಮ ಪಾರ್ಕಿನಲ್ಲಿ ದೊಡ್ಡ ಪ್ರದರ್ಶನ ಒಂದನ್ನು ಏರ್ಪಡಿಸಿ, “ಕೆಟ್ಟ ಆನೆ”, “ಕೊಲೆಗಡುಕಿ”ಯಾದ ಟಾಪ್ಸಿಗೆ ಮರಣದಂಡನೆ ನೀಡುವುದು! ಮರಣದಂಡನೆಯ ವಿಧಾನ: ಎಲೆಕ್ಟ್ರಿಕ್ ಷಾಕ್!! ಅದಕ್ಕೆ ಬೇಕಿದ್ದ ವಿದ್ಯುತ್ ಶಕ್ತಿ ಒದಗಿಸುವವರು ಬೇರಾರೂ ಅಲ್ಲ, ಎಡಿಸನ್ ಕಂಪೆನಿ!!! (ಆದರೆ, ಎಡಿಸನ್ ಆ ಉದ್ಯಮವನ್ನು ಅಷ್ಟರ ಹೊತ್ತಿಗೆ ಬೇರೊಬ್ಬರಿಗೆ ಮಾರಿದ್ದ. ಹೊಸ ಮಾಲೀಕರು ಹಳೆಯ ಹೆಸರನ್ನೇ ಬಳಸುತ್ತಿದ್ದರಾದರೂ, ಅದರೊಂದಿಗೆ ಎಡಿಸನ್‌ನ ಸಂಬಂಧ ಕಡಿದಿತ್ತು)

ಅವಳು ಎಲೆಕ್ಟ್ರಿಕ್ ಷಾಕ್‌ನಿಂದ ಸಾಯದಿದ್ದರೆ, ಬದಲೀ ವಿಧಾನಗಳೂ ಸಿದ್ಧವಿದ್ದವು. ಸಯನೈಡ್ ಸಿಂಪಡಿಸಿದ ಕ್ಯಾರಟ್‌ಗಳು ಮತ್ತು ನೇಣು ಹಾಕಲು ಎಲೆಕ್ಟ್ರಿಕ್ ಟವರಿನಿಂದ ಇಳಿಬಿಟ್ಟ ಹಗ್ಗಗಳು.

ಲೂನಾ ಪಾರ್ಕಿನ ಮಧ್ಯದಲ್ಲಿ ಒಂದು ಸಣ್ಣ ಸರೋವರವಿತ್ತು. ಆ ಸರೋವರದ ಮಧ್ಯೆ ಸಣ್ಣದೊಂದು ದ್ವೀಪ. ಆ ದ್ವೀಪದಲ್ಲಿ, ಒಂದು ಪ್ಲಾಟ್‌ಫಾರ್ಮ್ ನಿರ್ಮಿಸಲಾಯಿತು. ಆ ಪ್ಲಾಟ್‌ಫಾರ್ಮ್ ಮೇಲೆ ಟಾಪ್ಸಿಯನ್ನು ಎಲ್ಲರಿಗೂ ಕಾಣುವಂತೆ ಎತ್ತರದಲ್ಲಿ ನಿಲ್ಲಿಸಿ, ಅವಳಿಗೆ ೬೬೦೦ ವೋಲ್ಟ್ ಎಲೆಕ್ಟ್ರಿಕ್ ಷಾಕ್ ನೀಡುವುದು ಅವರ ಯೋಜನೆಯಾಗಿತ್ತು. ಆ ದ್ವೀಪವನ್ನು ತಲುಪಲು ಒಂದು ಸಣ್ಣ ಸೇತುವೆಯನ್ನೂ ನಿರ್ಮಿಸಲಾಯಿತು.

ಆನೆಯೊಂದಕ್ಕೆ ಮರಣ ದಂಡನೆ ನೀಡುವ ಈ ಅದ್ಭುತ ಪ್ರದರ್ಶನಕ್ಕೆ ಟಿಕೆಟ್‌ಗಳನ್ನು ಮಾರುವುದಾಗಿ, ಲೂನಾ ಪಾರ್ಕ್ ಒಡೆಯರು ಘೋಷಿಸಿದರು. ಆದರೆ, ಪ್ರಾಣಿ ದಯಾ ಸಂಘದವರ ವಿರೋಧದಿಂದಾಗಿ ಈ ಟಿಕೆಟ್ ಮಾರಾಟವನ್ನು ರದ್ದು ಪಡಿಸಲಾಯಿತು.

ಜನವರಿ ೪, ೧೯೦೩ರ ಭಾನುವಾರ ಮಧ್ಯಾಹ್ನ, ಸುಮಾರು ಸಾವಿರದ ಐದುನೂರು ಜನ ಗಣ್ಯರು, ವಿಶೇಷ ಆಹ್ವಾನಿತರು, ಟಾಪ್ಸಿಯ ಮರಣದಂಡನೆಗೆಂದೇ ನಿರ್ಮಿಸಲಾಗಿದ್ದ ಪ್ಲಾಟ್‌ಫಾರ್ಮ್ ಸುತ್ತ ನೆರೆದರು. ನೂರಕ್ಕೂ ಹೆಚ್ಚು ಮಂದಿ ಫೋಟೋಗ್ರಾಫರುಗಳು, ಎಲೆಕ್ಟ್ರಿಕ್ ಷಾಕ್ ಮೂಲಕ ಆನೆಯೊಂದನ್ನು ಕೊಲ್ಲುವ ಮಹಾನ್ ಕೌತುಕವನ್ನು ತಮ್ಮ ಫಿಲ್ಮ್‌ಗಳಲ್ಲಿ ಸೆರೆ ಹಿಡಿಯಲು ಸಕಲ ಸಿದ್ಧತೆಗಳನ್ನೂ ಮಾಡಿಕೊಂಡರು.

ಟಾಪ್ಸಿಯನ್ನು, ಅವಳ ಲಾಯದಿಂದ, ದ್ವೀಪದ ಮಧ್ಯದಲ್ಲಿದ್ದ ಪ್ಲಾಟ್‌ಫಾರ್ಮ್ ಕಡೆಗೆ ಕರೆತರಲಾಯಿತು. ಆದರೆ, ಆ ದ್ವೀಪವನ್ನು ತಲುಪಿಸುವ ಸೇತುವೆಯ ಮೇಲೆ ಕಾಲಿಡಲು ಅವಳು ಸುತಾರಾಂ ಒಪ್ಪಲಿಲ್ಲ. ಸೇತುವೆ ದಾಟದಿದ್ದರೆ, ದ್ವೀಪದ ಮಧ್ಯದಲ್ಲಿರುವ ಪ್ಲಾಟ್‌ಫಾರ್ಮ್ ತಲುಪುವುದಾದರೂ ಹೇಗೇ?!! ಅವಳಿಗೆ ಅಂಕುಶದಿಂದ ತಿವಿಯಲಾಯಿತು. ಆದರೂ “ಊಹ್ಹೂ!”. ಸೇಬು-ಕ್ಯಾರಟ್‌ಗಳ ಆಮಿಷ ಒಡ್ಡಲಾಯಿತು. ಅವಳು ಅವನ್ನೂ ನಿರಾಕರಿಸಿದಳು.

ಅಲ್ಲಿ ನೆರೆದಿದ್ದ ಆಹ್ವಾನಿತರಲ್ಲಿ, ಟಾಪ್ಸಿಯ ಹಳೆಯ ಮಾವುತ ವಿಲಿಯಂ ಆಲ್ಟ್ ಸಹ ಇದ್ದ. ಲೂನಾ ಪಾರ್ಕ್ ಒಡೆಯರು, ಟಾಪ್ಸಿಯನ್ನು ಸೇತುವೆಯ ಮೇಲೆ ಕರೆದೊಯ್ಯಲು ಆಲ್ಟ್‌ನ ಸಹಾಯವನ್ನು ಕೇಳಿದರು. ಆದರೆ, ಅದಕ್ಕೆ ಅವನು ಒಪ್ಪಲಿಲ್ಲ. ಪಾರ್ಕಿನ ಒಡೆಯರು ಅವನಿಗೆ ೨೫ ಡಾಲರುಗಳನ್ನು (ಇಂದಿನ ಸುಮಾರು ೫೦,೦೦೦ ರೂ!) ನೀಡುವುದಾಗಿ ಹೇಳಿದರು. ಆದರೆ, ಅವನು “ಸಾವಿರ ಡಾಲರ್ ಕೊಟ್ಟರೂ ನಾನು ಈ ಕೆಲಸ ಮಾಡುವುದಿಲ್ಲ” ಎಂದ.

ಟಾಪ್ಸಿ ಮರಣದೆಡೆಗೆ ಕಾಲಿಡಲು ಒಪ್ಪದಿದ್ದರೆ, ಮರಣವನ್ನೇ ಅವಳೆಡೆಗೆ ತರಬಹುದಲ್ಲವೇ?!

(ಟಾಪ್ಸಿಯ ಮರಣದಂಡನೆಯ ದೃಶ್ಯ)

ಮರಣದಂಡನೆಯ ಪ್ಲಾಟ್‌ಫಾರ್ಮ್‌ನಿಂದ, ಎಲೆಕ್ಟ್ರಿಕ್ ತಂತಿಗಳನ್ನು ಟಾಪ್ಸಿ ನಿಂತಿದ್ದ ಸ್ಥಳಕ್ಕೇ ಎಳೆಯಲಾಯಿತು. ತಾಮ್ರದ ಪಟ್ಟಿಗಳಿದ್ದ ಮೆಟ್ಟುಗಳನ್ನು ಅವಳ ಬಲ ಮುಂಗಾಲಿಗೂ, ಎಡ ಹಿಂಗಾಲಿಗೂ, – ವಿದ್ಯುತ್ ಅವಳ ದೇಹದುದ್ದಕ್ಕೂ ಚಲಿಸುವಂತೆ – ತೊಡಿಸಲಾಯಿತು. ಆ ಮೆಟ್ಟುಗಳಿಗೆ, ಎಲೆಕ್ಟ್ರಿಕ್ ತಂತಿಗಳನ್ನು ಅಳವಡಿಸಲಾಯಿತು. ಅವಳ ಕತ್ತಿನ ಸುತ್ತ ಹಗ್ಗವನ್ನು ಬಿಗಿಯಲಾಯಿತು. ಸುಮಾರು ಅರ್ಧ ಕೆ.ಜಿ. ಪೊಟಾಸಿಯಮ್ ಸಯನೈಡ್ ಸಿಂಪಡಿಸಿದ್ದ ಕ್ಯಾರಟ್‌ಗಳನ್ನು ಅವಳಿಗೆ ತಿನ್ನಿಸಲಾಯಿತು.

ಮಧ್ಯಾಹ್ನ ೨:೪೫ಕ್ಕೆ ಸರಿಯಾಗಿ, ಲೂನಾ ಪಾರ್ಕ್‌ನ ಎಲೆಕ್ಟ್ರಿಕ್ ವಿಭಾಗದ ಮುಖ್ಯಸ್ಥ ಹ್ಯೂ ಥಾಮಸ್, ಸ್ವಿಚ್ ಆನ್ ಮಾಡಿದ. ಟಾಪ್ಸಿ, ಒಂದಿಷ್ಟೂ ಸದ್ದು ಮಾಡದೆ ಕುಸಿದು ಬಿದ್ದಳು. ಅವಳ ಸಾವನ್ನು ಮತ್ತಷ್ಟು ಖಚಿತಗೊಳಿಸಲು, ಅವಳ ಕತ್ತಿನ ಸುತ್ತ ಸುತ್ತಿದ್ದ ಹಗ್ಗಗಳನ್ನು ಯಂತ್ರದ ಸಹಾಯದಿಂದ ಬಿಗಿಗೊಳಿಸಲಾಯಿತು. ನಂತರ, ಅವಳ ದೇಹವನ್ನು ಪರೀಕ್ಷಿಸಿದ ಪಶುವೈದ್ಯರು, ಟಾಪ್ಸಿ ೨:೪೭ಕ್ಕೆ ಸರಿಯಾಗಿ ಎಲೆಕ್ಟ್ರಿಕ್ ಷಾಕ್‌ನಿಂದಾಗಿ ಮೃತಪಟ್ಟಳೆಂದು ಘೋಷಿಸಿದರು.‌

ಆನೆಯಂತಹ ದೈತ್ಯಕಾಯವನ್ನೂ, ಕೆಲವೇ ಕ್ಷಣಗಳಲ್ಲಿ ಕೊಲ್ಲಬಲ್ಲ ಮಾನವ ನಿರ್ಮಿತ ಈ ಸಲಕರಣೆಯ ಉತ್ಕೃಷ್ಟತೆಯನ್ನು, ಎಡಿಸನ್‌ನ ಇನ್ನೊಂದು ಅನ್ವೇಷಣೆ ಮೂವಿ ಕ್ಯಾಮೆರಾ (“ಕಿನೆಟೋಗ್ರಾಫ್”)ದಲ್ಲಿ ಸೆರೆ ಹಿಡಿಯಲಾಯಿತು.

*****

ಸದ್ದಿಲ್ಲದೆ, ಬಾಳೆ ಹಣ್ಣನ್ನು ಕದಿಯಲು, ಆನೆಗಳು ಕೆಸರು ಮಣ್ಣನ್ನು ಸಲಕರಣೆಗಳಾಗಿಸಿಕೊಳ್ಳಬಹುದು.
ಆದರೆ, ಸಲಕರಣೆಗಳ ಅನ್ವೇಷಣೆ, ಬಳಕೆಯಲ್ಲಿ ಮಾನವರು ಅದ್ವಿತೀಯರಲ್ಲವೇ!