‘ಪರ್ವ’ ನಾಟಕ ನನಗೆ ಇಷ್ಟವಾದದ್ದು ‘ಯಮ’ನನ್ನು ಸಹಜ ಮನುಷ್ಯನನ್ನಾಗಿ ಬಿಂಬಿಸುವ ಬಗೆಯಲ್ಲೇ ಇಡೀ ಪ್ರಯೋಗವನ್ನು ಸಿದ್ಧಮಾಡಿದ್ದ ಬಗೆಯಿಂದ. ಯಾವ ಪಾತ್ರವನ್ನೂ ಪುರಾಣ ಚಿತ್ರಿಸಿರುವ ಭಯಂಕರ ಯಮನನ್ನಾಗಿಸಲು ಮುಂದಾಗಿಲ್ಲ. ಎಲ್ಲೋ ಒಂದೆರಡು ಕಡೆ ಸಂಜಯನನ್ನು ಇಂದಿನ ವಾಹಿನಿಗಳ ಸುದ್ದಿ ವಾಚಕನ ರೀತಿಯಲ್ಲಿ ಸಂಗೀತ ಸಮೇತ ಬಿಂಬಿಸಿದ್ದು ಕೊಂಚ ಮಸಾಲೆ ಬೆರೆಸಿದಂತೆ ಅನಿಸಿತು. ಉಳಿದದ್ದು ಸಹಜ.  ಪ್ರಕಾಶ್ ಬೆಳವಾಡಿ ನಿರ್ದೇಶನದ ‘ಪರ್ವ’ ನಾಟಕದ ಸುತ್ತ ತಮ್ಮ ಆಲೋಚನೆಗಳನ್ನು ರಂಗವಠಾರ ಅಂಕಣದಲ್ಲಿ ಎನ್. ಸಿ. ಮಹೇಶ್  ಮಂಡಿಸಿದ್ದಾರೆ. 

 

ಈಚೆಗೆ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮೈಸೂರು ರಂಗಾಯಣದ ಪ್ರಸ್ತುತಿ ‘ಪರ್ವ’ ನಾಟಕ ಪ್ರದರ್ಶನ ನಿಗದಿಯಾಗಿತ್ತು. ನಾನು ಟಿಕೆಟ್ ಕಾಯ್ದಿರಿಸುವಷ್ಟರಲ್ಲಿ ಎರಡೂ ದಿನದ ಪ್ರರ್ದಶನಗಳು ಹೌಸ್‌ಫುಲ್ ಆಗಿದ್ದವು. ನನ್ನ ಸೋಮಾರಿತನಕ್ಕೆ ಕೊಂಚ ಪಶ್ಚಾತ್ತಾಪ ಪಟ್ಟುಕೊಂಡೆ. ಆಮೇಲೆ ಮನಸ್ಸು ಮತ್ತೆ ನಿರ್ಲಿಪ್ತ. ಆದರೆ ಪ್ರದರ್ಶನದ ದಿನ ಬೆಳಗ್ಗೆ ಒಬ್ಬರು ನನಗೆ ಕರೆಮಾಡಿ, ‘ತಾವು ಅನಿವಾರ್ಯ ಕಾರಣಗಳಿಂದ ‘ಪರ್ವ’ ನಾಟಕಕ್ಕೆ ಹೋಗಲಾಗುತ್ತಿಲ್ಲ. ನೀವು ಟಿಕೆಟ್ ಕಾಯ್ದಿರಿಸದಿದ್ದರೆ ಹೋಗ್ಬನ್ನಿ’ ಅಂದರು. ಆ ದಿನ ನನ್ನಲ್ಲಿ ಅಷ್ಟೇನೂ ಹುರುಪು ಇರಲಿಲ್ಲ. ಈ ಮೊದಲು ಮೈಸೂರಿನಲ್ಲಿ ‘ಪರ್ವ’ ನಾಟಕ ಪ್ರದರ್ಶನಗಳನ್ನು ಕಂಡವರು ಮಿಶ್ರ ಪ್ರತಿಕ್ರಿಯೆಗಳನ್ನು ಕೊಟ್ಟಿದ್ದರು. ಯಾವುದನ್ನು ನಂಬುವುದು? ಇದನ್ನೇ ಗೆಳೆಯರೊಂದಿಗೆ ಹರಟುತ್ತ ಮತ್ತು ನಗುತ್ತ ‘ಯಾವುದನ್ರಯ್ಯ ನಂಬೋದು..?’ ಅಂತ ಕೇಳಿದ್ದೆ. ಅಲ್ಲಿ ಶುರುವಾಯಿತು ಮಾತುಕಥೆ. ಪರ್ವ ನಾಟಕದ ಬಗ್ಗೆ ಅಲ್ಲ; ಅದರ ಸುತ್ತ ಇರುವ ಒಂದು ಥಿಯರಿ ಬಗ್ಗೆ.

ಅದು ಸೃಷ್ಟಿತ ಥಿಯರಿಯೋ ಅಥವಾ ವಾಸ್ತವ ಹಾಗೇ ನಿರ್ಮಾಣವಾಗಿದೆಯೋ ನನಗೆ ಆ ಹೊತ್ತು ನಿರ್ಧರಿಸಲು ಬರುತ್ತಿರಲಿಲ್ಲ. ‘ಇಲ್ಲ ಗುರುವೇ.. ನೀನೇ ಯೋಚಿಸು.. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕ ರಂಗಕ್ಕೆ ಬಂದಾಗ ಯಾವ ಸರ್ಕಾರ ಇತ್ತು… ಈಗ ‘ಪರ್ವ’ ಬಂದಾಗ ಯಾವ ಸರ್ಕಾರ ಇದೆ; ಕೃತಿಕೇಂದ್ರಿತ ಮತ್ತು ಪ್ರದರ್ಶನ ಕೇಂದ್ರಿತ ವಿಮರ್ಶೆ ಪಕ್ಕಕ್ಕಿಡು. ಎರಡು ಬಣಗಳು ಸೇರಿಕೊಂಡು ಹೇಗೆ ಸ್ಪರ್ಧೆಗೆ ನಿಂತಿವೆ ಯೋಚಿಸು. ಸ್ಪರ್ಧೆ ಅನ್ನೋದಕ್ಕಿಂತ ಇದನ್ನು ಒಂಥರಾ ಓವರ್‍ಟೇಕ್ ಅನ್ನಬೇಕು..’ ಅಂತ ಚರ್ಚೆ ಆರಂಭ ಆಯಿತು. ತಾವು ಹೇಳುತ್ತಿರುವುದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ ಎನ್ನುವ ಹಾಗೆ ಅವರು ವಾದ ಮಂಡಿಸುತ್ತಿದ್ದರು.

ಈ ರಾಜಕೀಯ ಮತ್ತು ಅದರ ತಲೆಬಿಸಿಯಿಂದ ನಾನು ಮೊದಲಿಂದ ದೂರ. ನನ್ನದು ಒಂದು ಬಗೆಯಲ್ಲಿ ನಾನ್ ಪೊಲಿಟಿಕಲ್ ಮೈಂಡ್. ನಾನು ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದಾಗ ಬೇಕೋ ಬೇಡವೋ ರಾಜಕೀಯದ ಸರಕು ನಿತ್ಯ ನನ್ನ ಕಿವಿ ತುಂಬಿಕೊಳ್ಳುತ್ತಿತ್ತು. ರಾಜಕಾರಣವನ್ನು ಎಂಜಾಯ್ ಮಾಡುವ ಗುಂಪಿನ ನಡುವೆ ನಾನು ನಗುತ್ತ ನಿರ್ಲಿಪ್ತನಾಗಿ ನಿಂತಿರುತ್ತಿದ್ದೆ. ‘ಮಲೆಗಳಲ್ಲಿ ಮದುಮಗಳು’ ಸೃಷ್ಟಿಯಾದ ನಂತರ ‘ಪರ್ವ’ ಸೃಷ್ಟಿಯಾದ ಹಿನ್ನೆಲೆಯ ನಿರೂಪಣೆ ಬೇಡಬೇಡವೆಂದರೂ ನನ್ನ ತಲೆ ತುಂಬಿಕೊಂಡಿತು. ಥಿಯೇಟರ್ ಸರ್ಕಲ್‌ನಲ್ಲಿ ಸರಿಯಾಗಿ ನಾಟಕಗಳ ತಾಲೀಮು ನಡೆಯುತ್ತವೆಯೋ ಇಲ್ಲವೋ ಗೊತ್ತಿಲ್ಲ; ಇಂಥ ಚರ್ಚೆಗಳು ಮಾತ್ರ ನಡೆಯುತ್ತಿರುತ್ತವೆ. ಇವುಗಳಲ್ಲಿ ನಿಜಗಳು ಇರುವುದಿಲ್ಲ ಎಂದೇನಿಲ್ಲ. ಹಾಗೇ ಸುಳ್ಳುಗಳೂ ಇರುತ್ತವೆ ಎಂಬುದು ನಿಜ. ಒಟ್ಟಿನಲ್ಲಿ ತೀರಾ ತಾತ್ವಿಕರಾಗದೆ ಕೇಳಿಸಿಕೊಳ್ಳುವವರಿಗೆ ಇವು ಒಂದಿಷ್ಟು ಮನರಂಜನೆಯನ್ನು ನೀಡಬಹುದು.

ನಾನು ಮೊದಲಿನಿಂದಲೂ ಒಂದು ಗುಣ ಬೆಳೆಸಿಕೊಂಡು ಬಂದಿದ್ದೇನೆ. ಯಾರು ಏನು ಹೇಳಿದರೂ ಅದನ್ನು ನಗುನಗುತ್ತ ಕೇಳಿಸಿಕೊಳ್ಳಬೇಕು. ಜೊತೆಗೆ ಮುಖ್ಯವಾಗಿ ಪ್ರಿಜುಡೈಸ್ಡ್ ಆಗಬಾರದು. ‘ಪರ್ವ’ ಕಾದಂಬರಿ ನಾಟಕ ರೂಪಕ್ಕೆ ಒಳಪಟ್ಟಿರುವ ಬಗೆ ಹೇಗೆ ಎಂದು ನೋಡಬೇಕು. ಮಿಕ್ಕ ಬಾಬತ್ತುಗಳೆಲ್ಲ ನಂತರದ್ದು. ಸುತ್ತಲಿನ ಸಂಗತಿಗಳನ್ನು ಕೇಂದ್ರವಾಗಿಟ್ಟುಕೊಂಡು ಕೇಂದ್ರವನ್ನೇ ಮರೆಯಬಾರದು ಎನ್ನುವುದು ನಾನು ತುಂಬ ಹಿಂದಿನಿಂದ ಪ್ರತಿಪಾದಿಸಿಕೊಂಡು ಬಂದಿದ್ದ ಸಿದ್ಧಾಂತ. ಈ ಸಲುವಾಗಿಯೇ ಆ ದಿನ ಅಚಾನಕ್ಕಾಗಿ ಟಿಕೆಟ್ ಸಿಕ್ಕ ಕಾರಣ ಪ್ರರ್ದಶನಕ್ಕೆ ಹೊರಟೆ.

ನಾನು ರವೀಂದ್ರ ಕಲಾಕ್ಷೇತ್ರ ತಲುಪಿದಾಗ ಇನ್ನೂ ಆಗಷ್ಟೇ ಜನ ಬರುತ್ತಿದ್ದರು. ಅಷ್ಟೊಂದು ಕ್ರೌಡ್ ಇರಲಿಲ್ಲ. ಒಂದೆರಡು ಕಡೆ ಪೊಲೀಸರು ನಿಂತು ಮಾತು ಸಾಗಿಸಿದ್ದರು. ನಾನು ಗಾಡಿ ಪಾರ್ಕ್ ಮಾಡುತ್ತಿದ್ದಾಗ ಒಂದು ಆಕೃತಿ ತಣ್ಣಗೆ ನಡೆದುಬರುತ್ತಿರುವುದು ಕಂಡಿತು. ನಾನೂ ಮಾಸ್ಕ್ ಹಾಕಿಕೊಂಡಿದ್ದೆ. ಆ ಆಕೃತಿ ಕೂಡ ಹಾಕಿಕೊಂಡಿತ್ತು. ಅರ್ಧ ಮರೆಮಾಚಿದ ಮುಖದಲ್ಲೂ ನನಗೆ ಒಂದು ಪರಿಚಿತ ಭಾವ ಕಂಡಂತೆ ಅನಿಸಿತು. ಎಲ್ಲೋ ನೋಡಿರುವ ಹಾಗೆ. ಅನಂತರ ಥಟ್ಟನೆ ಹೊಳೆಯಿತು. ಅವರು! ಕಾಣಲು, ಭೇಟಿಮಾಡಲು ದುರ್ಲಭರು! ಆ ಹೊತ್ತು ಅವರು ನನ್ನಿಂದ ಎರಡು ಮಾರು ದೂರದಲ್ಲಿ ತಣ್ಣಗೆ ನಡೆದು ಬರುತ್ತಿದ್ದರು. ಅರೆರೆ ಎನ್ನುತ್ತ ಕೈ ಜೋಡಿಸಿ ಎರಡು ಹೆಜ್ಜೆ ಮುಂದೆ ಧಾವಿಸಿದೆ ಅಷ್ಟೆ; ನನಗೂ ಅವರಿಗೂ ಸುಮಾರು ಅಂತರವಿತ್ತು. ಅಷ್ಟರಲ್ಲೇ ಅವರು ದೂರ್ವಾಸರಂತೆ ಕೈ ಎತ್ತಿ ‘ದೂರ ದೂರ..’ ಎಂದು ಗದರಿಸಿದರು. ನಾನು ನಿಂತೆ. ನಾನು ಅವರ ಮೈಮೇಲೆ ಬೀಳಲು ಧಾವಿಸುತ್ತಿರಲಿಲ್ಲ. ಕೋವಿಡ್ ಇನ್ನೂ ಚಾಲ್ತಿಯಲ್ಲಿದೆ ನಿಜ; ಅದನ್ನು ತಿಳಿಸಿ ಹೇಳಲಿಕ್ಕೆ ಒಂದು ಕ್ರಮ ಬೇಡವೇ? ಎನಿಸಿತು. ನಾಯಿಯನ್ನು ಗದರಿದಂತೆ ಇತ್ತು ಮಾತು. ಮನಸ್ಸಿನಲ್ಲಿ ಕಹಿ ಭಾವದ ಸೆಲೆ ಉಕ್ಕಿದಂತೆ…ಕಿರಿಕಿರಿ..

ನನ್ನಷ್ಟಕ್ಕೆ ನಾನು ತಣ್ಣಗೆ ಹಿಂದಕ್ಕೆ ಸರಿದು ಗಾಡಿ ಲಾಕ್ ಮಾಡಿ ಹೆಲ್ಮೆಟ್ ಎಂಬ ದೊಡ್ಡ ಬಳೆಯನ್ನ ಕೈಗೆ ಏರಿಸಿಕೊಂಡು ಕೌಂಟರ್‌ನತ್ತ ನಡೆಯಲು ಆರಂಭಿಸಿದೆ. ಆದರೆ ಕಣ್ಣುಗಳು ಅದೇ ಆಕೃತಿಯನ್ನ ಗಮನಿಸುತ್ತಿದ್ದವು. ನನ್ನಿಂದ ದೂರ ಕಾಯ್ದುಕೊಂಡ ಆ ಆಕೃತಿ ಪೊಲೀಸರ ಜೊತೆ ಹತ್ತಿರ ನಿಂತು ಮಾತಾಡಲು ಆರಂಭಿಸಿತ್ತು. ಎಲ್ಲರ ಮೇಲೆ ಸಿಡುಕುತ್ತ ದೂರ ಕಾಯ್ದುಕೊಂಡಿದ್ದರೆ ಅದು ಬೇರೆ ಮಾತು. ಒಬ್ಬರ ಸನಿಹಕೆ ಹೋಗಿ ಮಾತಿಗೆ ನಿಲ್ಲುವುದು; ಮತ್ತೊಬ್ಬರನ್ನು ಕಂಡಾಗ ಗದರಿಸುವುದು, ಇದು ನನಗೆ ಸರಿ ಕಾಣಲಿಲ್ಲ. ಅಭಿಮಾನವೆಲ್ಲ ಎಂಥ ಪೊಳ್ಳಿನದು ಅನಿಸಿತು ಆ ಹೊತ್ತು. ಜೊತೆಗೆ ನಾಟಕ ನೋಡುವ ಮನಸ್ಥಿತಿಯೇ ಹಾರಿಹೋಯಿತು. ಹೊರಟು ಬಿಡಲೇ ಎನ್ನುವ ತುಡಿತ.’ಬೇಡ ನಿಧಾನಿಸು’ ಎನ್ನುವ ಮನಸ್ಸು.

ಥಿಯೇಟರ್ ಸರ್ಕಲ್‌ನಲ್ಲಿ ಗೆಳೆಯರು ಮಂಡಿಸಿದ ಥಿಯರಿಗಳ ಸತ್ಯಾಸತ್ಯಾಗಳು ಬಿಚ್ಚಿಕೊಳ್ಳಲು ಆರಂಭಿಸಿದವು. ಟಿಕೆಟ್ಟು ಎಸೆದು ನಡೆದುಬಿಡುವಷ್ಟು ಸಿಟ್ಟು ಸೆಡವು. ಮನಸ್ಸಿನಲ್ಲಿ ಏನೆಲ್ಲಾ ಧ್ವನಿಗಳೇಳುತ್ತಿದ್ದರೂ ಕಾಲುಗಳು ಮಾತ್ರ ಚಲಿಸದೆ ಹಾಗೇ ಇದ್ದವು. ಕಡೆಗೆ ಅಂದುಕೊಂಡೆ- ಪರ್ವ ಕಾದಂಬರಿಯ ತಾತ್ವಿಕತೆ ಬೇಡ.. ಪ್ರಕಾಶ್ ಬೆಳವಾಡಿ ಸರ್ ಹೇಗೆ ಕಟ್ಟಿ ಅಣಿಮಾಡಿದ್ದಾರೆ, ಆ ಕುತೂಹಲಕ್ಕಾದರೂ ನೋಡಬೇಕು ಅಂತ ತೀರ್ಮಾನಿಸಿಕೊಂಡೆ. ಇದೇ ಸಂಕಲ್ಪದಲ್ಲೇ ಹೋಗಿ ಕೂತೆ. ನಾಟಕ ಆರಂಭವಾಯಿತು.

ಕಾದಂಬರಿಯಲ್ಲಿನ ಧ್ವನಿ ನಾಟಕದಲ್ಲಿ ಹೇಗೆ ಒಡಮೂಡಿದೆ ಎಂದು ನೋಡಬೇಕು ಅಂದುಕೊಂಡೇ ಹೋಗಿ ಕೂತೆ. ಆದರೆ ‘ದೂರ…. ದೂರ….’ ಎಂದು ಆ ಆಕೃತಿ ಅಂದದ್ದು ಕಿವಿಯಲ್ಲಿ ಧ್ವನಿತವಾಗುತ್ತಲೇ ಇದ್ದ ಕಾರಣ ನಾಟಕದಲ್ಲಿನ ಪಾತ್ರಗಳ ಒಳತೋಟಿಯ ಮಾತುಗಳು ನನ್ನನ್ನು ತಾಕದಷ್ಟು ನಾನು ಜಡವಾಗಿದ್ದೆ. ಹಂತಹಂತವಾಗಿ ನಾಟಕ ಕಟ್ಟಿರುವ ಬಗೆ ಮತ್ತು ಅದರ ವಿನ್ಯಾಸವನ್ನಷ್ಟೇ ಗಮನಿಸುತ್ತ ಅದು ಹೇಗೆ ಆರೂವರೆ ಗಂಟೆ ಕಾಲ ಕಳೆದೆನೋ ಗೊತ್ತಿಲ್ಲ. ಎಲ್ಲ ಮುಗಿದು ಹೊರಬಂದಾಗ ಒಂದು ಬಗೆಯ ನಿರಾಳ.

ಟಿಕೆಟ್ ಒದಗಿಸಿಕೊಟ್ಟವರಿಗೆ ಒಂದು ಥ್ಯಾಂಕ್ಸ್ ಹೇಳದಿದ್ದರೆ ನಾನು ಕೃತಘ್ನನಾಗುತ್ತೇನೆ ಅಂದುಕೊಂಡು ಅವರಿಗೆ ಕರೆ ಮಾಡಿ ‘ಥ್ಯಾಂಕ್ಸ್’ ಅಂದೆ. ‘ಹೇಗಿತ್ತು.. ಪ್ರಯೋಗ..?’ ಎಂದು ಅವರು ಕೇಳೇ ಕೇಳುತ್ತಾರೆ ಎಂದು ನನಗೆ ಗೊತ್ತಿತ್ತು. ಅದಕ್ಕೆ ನಾನು ಸಿದ್ಧನಾಗಿಯೂ ಇದ್ದೆ.

‘ದೂರ… ದೂರ..’ ಎಂದ ಬಗೆ ನನ್ನ ಮನಸ್ಸಿನಲ್ಲಿ ಸ್ಥಾಯಿಯಾಗಿ ನೆಲೆಯೂರಿ ಬೇರುಬಿಡಲು ಆರಂಭಿಸಿದ್ದ ಕಾರಣ ನಾನು ಕಾದಂಬರಿಯಲ್ಲಿನ ತಾತ್ವಿಕತೆ ನಾಟಕಕ್ಕೆ ವರ್ಗಾವಣೆ ಆಗಿರುವ ಬಗೆಗೆ ಮಾತಾಡಬಾರದು ಎಂದು ನಿಶ್ಚಯಿಸಿದ್ದೆ. ಅದೆಲ್ಲ ಬಿಟ್ಟು ಕೇವಲ ವಿನ್ಯಾಸದ ದೃಷ್ಟಿಯಿಂದಷ್ಟೇ ನಾನು ನೋಡಿದ್ದರಿಂದ ಆ ಬಗ್ಗೆ ಸೌಜನ್ಯಕ್ಕೆ ಕೆಲವು ಮಾತುಗಳನ್ನ ಹೇಳಬಹುದು ಅನಿಸಿತು.

ಥಿಯೇಟರ್ ಸರ್ಕಲ್‌ನಲ್ಲಿ ಸರಿಯಾಗಿ ನಾಟಕಗಳ ತಾಲೀಮು ನಡೆಯುತ್ತವೆಯೋ ಇಲ್ಲವೋ ಗೊತ್ತಿಲ್ಲ….  ಪ್ರದರ್ಶನದ ಹಿಂದಿರುವ ರಾಜಕೀಯಗಳ ಕುರಿತ ಚರ್ಚೆಗಳು ಮಾತ್ರ ನಡೆಯುತ್ತಿರುತ್ತವೆ. ಇವುಗಳಲ್ಲಿ ನಿಜಗಳು ಇರುವುದಿಲ್ಲ ಎಂದೇನಿಲ್ಲ. ಹಾಗೇ ಸುಳ್ಳುಗಳೂ ಇರುತ್ತವೆ ಎಂಬುದು ನಿಜ.

ನಾಟಕ ನೋಡುತ್ತಿದ್ದ ವೇಳೆ ಮತ್ತೆಮತ್ತೆ ನನ್ನ ಮನಸ್ಸಿನಲ್ಲಿ ದೇವುಡು ನರಸಿಂಹಶಾಸ್ತ್ರಿಗಳ ಒಂದು ಪುಟ್ಟ ಬರಹ ನೆನಪಿಗೆ ಬರುತ್ತಲೇ ಇತ್ತು. ಅದು ಯಮನ ಕುರಿತಾಗಿ ಅವರು ನಡೆಸಿರುವ ಜಿಜ್ಞಾಸೆ.

ಸಾಧಾರಣವಾಗಿ ಯಮ ಅಂದಕೂಡಲೇ ನಮ್ಮ ಚಿತ್ತಭಿತ್ತಿಯಲ್ಲಿ ಒಂದು ಚಿತ್ರ ಮೂಡುತ್ತದೆ. ಯಮನನ್ನು ನಾವು ನಾಟಕ ಮತ್ತು ಸಿನಿಮಾಗಳಲ್ಲಿ ಚಿತ್ರಿಸಿಕೊಂಡಿರುವ ಬಗೆಯೇ ಬೇರೆ. ಆತ ದುಂಡಗೆ ಇದ್ದಾನೆ, ಕಪ್ಪಗೆ ಇದ್ದಾನೆ, ಕೋಣದ ಮೇಲೆ ಪಾಶ ಹಿಡಿದು ಬರುತ್ತಾನೆ, ಅವನ ನ್ಯಾಯಸ್ಥಾನವೊಂದಿದೆ, ಅವನ ಪಕ್ಕ ಚಿತ್ರಗುಪ್ತನೆನ್ನುವನಿದ್ದಾನೆ, ಅವನ ಬಳಿ ಎಲ್ಲರ ಪಾಪ ಪುಣ್ಯಗಳ ಲೆಕ್ಕವಿದೆ ಇತ್ಯಾದಿ. ಒಟ್ಟಿನಲ್ಲಿ ಯಮ ಅಂದರೆ ಭಯಂಕರ ಸ್ವರೂಪಿ. ನಾಟಕಗಳಲ್ಲಿ ಅವನನ್ನು ಹೇಗೆ ಬಿಂಬಿಸಲಾಗುತ್ತಿತ್ತು ಅಂದರೆ ಯಮ ಬಂದೊಡನೆ ಒಬ್ಬಳಿಗೆ ಗರ್ಭಾಪಾತವಾಯಿತು ಎಂದೂ, ಮತ್ತೆ ಕೆಲವು ಜನ ಮೂರ್ಛೆ ಹೋದರು ಅಂತಲೂ ಹೇಳುವವರಿದ್ದಾರೆ. ಇವು ಕಟ್ಟುಕತೆಗಳಲ್ಲ. ನಿಜವಾಗಿಯೂ ಘಟಿಸಿರುವ ಸಂಗತಿಗಳು. ಈ ಸಂಬಂಧವಾಗಿ ದೇವುಡು ಅವರು ಹೇಳಿರುವ ಮಾತು – ‘ಈಗಿನ ನಾಟಕ ಪ್ರಪಂಚದಲ್ಲಿ ‘ಯಮ’ನ ಪಾತ್ರವನ್ನ ವಹಿಸುವವರು ಅದನ್ನು ಆದಷ್ಟು ಮಟ್ಟಿಗೆ ಭಯಂಕರವಾಗಿಯೇ ಇರುವಂತೆ ನಿರ್ವಹಿಸಬೇಕೆಂಬುದು ಒಂದು ಮೂಕ ಪದ್ಧತಿಯಾಗಿ ಪರಿಣಮಿಸಿದೆ’

ಯಾಕೆಂದರೆ ದೇವುಡು ಅವರು ಹೇಳುವಂತೆ ಯಮನ ವಿಚಾರವಾಗಿ ಮೂರು ತೆರನಾದ ಅಭಿಪ್ರಾಯಗಳಿವೆಯಂತೆ. ಅವರು ಹೀಗೆ ಹೇಳುತ್ತಾರೆ: ‘ಮೊದಲನೆಯದು ವೇದದಲ್ಲಿ ಸಿಕ್ಕುವುದು. ಅದರಂತೆ ಯಮನು ಮನುಷ್ಯನು. ತಾನು ಸತ್ತು ಪಿತೃಲೋಕದ ಹಾದಿಯನ್ನು ಕಂಡುಹಿಡಿದು ಮನುಷ್ಯರು ಅಲ್ಲಿಗೆ ಹೋಗಲು ಹಾದಿಯನು ಹಾಕಿಕೊಟ್ಟವನು. ಧರ್ಮಪಾರಾಯಣನು. ವರುಣನಂತೆ ಈತನೂ ರಾಜನು. ಸತ್ತು ತನ್ನಲ್ಲಿಗೆ ಬಂದವರ ಪಾಪ ಪುಣ್ಯಗಳನ್ನು ವಿವೇಚಿಸಿ ಫಲಾಫಲಗಳನ್ನು ಕೊಡತಕ್ಕವನು. ಇಲ್ಲಿ ಭಯಂಕರ ಮೊದಲಾದ ಗುಣಗಳಿದ್ದಂತೆ ತೋರುವುದಿಲ್ಲ…’

ಮುಂದುವರೆದು ಅವರು ಹೇಳುತ್ತಾರೆ; ‘ಎರಡನೆಯದು ಪುರಾಣಗಳಲ್ಲಿ ದೊರಕುವ ಅಭಿಪ್ರಾಯ. ಇದರಂತೆ ಯಮನು ದಕ್ಷಿಣ ಲೋಕಾಧಿಪತಿಯು. ಆತನ ನಗರಿಗೆ ಸಂಯಮಿನೀ ಎಂದು ಹೆಸರು. ಸಜ್ಜನ ಪಾಲಕನೂ, ಪುಣ್ಯ ರಕ್ಷಕನೂ, ಪಾಪಿ ಶಿಕ್ಷಕನೂ, ಧರ್ಮ ಸ್ವರೂಪನೂ, ಕಾಲಾತ್ಮಕನೂ ಆದ ಯಮನು ಚಿತ್ರಗುಪ್ತಾದಿಗಳಿಂದ ಸಂವೃತ್ತನಾಗಿ ಇರುವನು. ಶ್ಯಾಮಳಾದೇವಿಯು ಆತನ ಕಾಂತೆಯು. ದೈವಜ್ಞಾಪರಿಪಾಲಕನಾಗಿ, ಸಮವರ್ತಿಯಾದ, ದುಂಡಧರನು ಮಹಿಷವಾಹನನು..’

ದೇವುಡು ಅವರು ಸೂಚಿಸಿರುವ ಮೂರನೆಯ ಬಗೆ ಹೀಗಿದೆ: ‘ಮೂರನೆಯದು ಸಂಯಮಿಗಳ ಮಾತು. ಅದು ಕಂಡವರಿಗೆ ಮಾತ್ರ ಸಿದ್ಧವಾಗತಕ್ಕದು. ಆದರೂ ನಮ್ಮ ಕಾರ್ಯಕ್ಕೆ ಅಪ್ರಯೋಜನಕಾರಿಯಲ್ಲವಾಗಿ ಅದನ್ನೂ ಹೇಳುವೆನು. ಇದು ಯೋಗಿಗಳು ಕಂಡಂತೆ. ಅದರಂತೆ ಯಮನು ಯಾವಾಗಲೂ ಹಾಲಿನಲ್ಲಿ ಪಿತೃತರ್ಪಣ ಮಾಡುತ್ತ ಕುಳಿತಿರುವನು. ದೇಹದೇಹದಲ್ಲಿಯೂ ಕೋಶಾಂತರದಲ್ಲಿ ಕುಳಿತಿರುವವನು. ದೇಹಪಾತದ ಕಾಲವು ಬಂದಾಗ ತರ್ಪಣದ ಕ್ಷೀರವು ಇತ್ತ ತಿರುಗಿ ಪಾಶವಾಗಿ ಪ್ರಾಣದ ಮೇಲೆ ಬಿದ್ದು ಅದನ್ನು ಹೊತ್ತುಕೊಂಡು ಹೋಗುವುದು..ʼ

ಕಡೆಗೆ ಅವರು ತಲುಪುವ ನಿಲುವು ಹೀಗಿದೆ: “ ಹೀಗೆ ಯಾವ ತರದಿಂದ ನೋಡಿದರೂ ಯಮನು ಭಯಂಕರನೆಂಬುದಕ್ಕೆ ಕಾರಣವು ತೋರುವುದಿಲ್ಲ. ಮೃತ್ಯುವು ಮಾಡುವ ಕಾರ್ಯವು ಮರಣವು, ನೈಜವಾದುದು. ನಿಯತಿಯ ಕಾರ್ಯ ಕಲಾಪಗಳಲ್ಲಿ ಒಂದು ಎಂಬುದನ್ನು ಮರೆತು, ಜನತೆಯಲ್ಲಿ ದೇಹಾತ್ಮವಾದವು ಹೆಚ್ಚಾದುದೂ; ನರಕದ ಭಯದ ಹಿಂಸೆಯ ಭಯವು ಬೆಳೆದು ಆ ಹಿಂಸೆಯನ್ನು ಕೊಡುವವನು ಯಮನು ಎಂಬ ಅಭಿಪ್ರಾಯವು ಹಬ್ಬಿದುದೂ ಯಮನು ಭಯಂಕರನೆಂಬುದಕ್ಕೆ ಕಾರಣವಾಗಿರಬೇಕು.

ಮಹಾಪುರುಷರ ವಿಭೂತಿಯ ದರ್ಶನದಿಂದಲೇ ಉಂಟಾಗುವ ಸಾತ್ವಿಕ ಭಯಭಕ್ತಿಗಳು ಹುಟ್ಟುವಂತೆ ತೋರಿಸುವುದನ್ನು ಬಿಟ್ಟು ದೊಡ್ಡ ಎಮ್ಮೆಯ ಕೋಣವನ್ನೇರಿದ ಮಹದ್ಭೂತದಂತೆ ತೋರಿಸುವುದು ಸರ್ವಥಾಯೋಗ್ಯವಲ್ಲ..’

ಮೇಲೆ ತಿಳಿಸಿರುವ ಹಾಗೆ ‘ಯಮ’ನನ್ನು ಮೂರು ಬಗೆಯಲ್ಲಿ ಚಿತ್ರಿಸಲಾಗಿದೆ. ಅವು ಏನೇ ಇರಲಿ. ನಾನು ಗಮನಿಸಿದ ಹಾಗೆ ಕೆಲವು ಮಹತ್ವಾಕಾಂಕ್ಷಿ ನಾಟಕಗಳೆಂದ ಕೂಡಲೇ ಅದನ್ನು ಕಟ್ಟುವವರಿಗೆ ಹುರುಪು ಹೆಚ್ಚಾಗುತ್ತದೆ. ನಾಟಕದ ವಸ್ತು ‘ಮನುಷ್ಯನಾಗಿದ್ದ ಯಮ’ನ ರೀತಿ ಇದ್ದರೂ ಅವರು ಚಿತ್ರಿಸುವುದು ಮಾತ್ರ ಪುರಾಣದ ವರ್ಣರಂಜಿತ ಯಮನ ರೀತಿಯಲ್ಲಿಯೇ. ಮತ್ತೆ ಕೆಲವು ಅತಿಬುದ್ಧಿಜೀವಿ ಪ್ರಯೋಗಗಳು ಯೋಗಿಗಳು ಕಂಡ ಯಮ- ಹಾಲಿನಲ್ಲಿ ಪಿತೃತರ್ಪಣ ಬಿಡುತ್ತ ಕೂರುವ ರೀತಿಯಲ್ಲಿ ತಾತ್ವಿಕವಾಗಿ ಕಟ್ಟುತ್ತಾರೆ. ಏಳೆಂಟು ಗಂಟೆಯ ಪ್ರಯೋಗ ಎನ್ನುತ್ತಿದ್ದಂತೆ ಅದಕ್ಕೆ ವಿಶೇಷ ಮೆರುಗು ತಂದುಕೊಡಲು ಇನ್ನಿಲ್ಲದ ಕಸರತ್ತು ನಡೆಸುತ್ತಾರೆ. ಪಾತ್ರಗಳು ರಂಗದ ಮೇಲೆ ಲಾಗ ಹಾಕುತ್ತವೆ; ಕಂಬ ಏರುತ್ತವೆ; ಹಗ್ಗದಲ್ಲಿ ಜೋಕಾಲಿ ಆಡುತ್ತವೆ. ಕಾರಣ ಕೇಳಿದರೆ ಅದನ್ನು ಮ್ಯಾನರಿಸಂ ಮತ್ತು ಬಾಡಿ  ಲ್ಯಾಂಗ್ವೇಜ್  ಎಂದು ಹೆಸರಿಸುತ್ತಾರೆ.

ಆದರೆ ಪರ್ವ ನಾಟಕ ನನಗೆ ಇಷ್ಟವಾದದ್ದು ‘ಯಮ’ನನ್ನು ಸಹಜ ಮನುಷ್ಯನನ್ನಾಗಿ ಬಿಂಬಿಸುವ ಬಗೆಯಲ್ಲೇ ಇಡೀ ಪ್ರಯೋಗವನ್ನು ಸಿದ್ಧಮಾಡಿದ್ದ ಬಗೆಯಿಂದ. ಯಾವ ಪಾತ್ರವನ್ನೂ ಪುರಾಣ ಚಿತ್ರಿಸಿರುವ ಭಯಂಕರ ಯಮನನ್ನಾಗಿಸಲು ಮುಂದಾಗಿಲ್ಲ. ಹಾಗೇ ಹಾಲಿನಿಂದ ಪಿತೃತರ್ಪಣ ಕೊಡುತ್ತ ಕೂತಿರುವ ತಾತ್ವಿಕ ಯಮನ ರೂಪದಲ್ಲೂ ಪ್ರಯೋಗವನ್ನು ಕಟ್ಟಿಲ್ಲ. ಎಲ್ಲೋ ಒಂದೆರಡು ಕಡೆ ಸಂಜಯನನ್ನು ಇಂದಿನ ವಾಹಿನಿಗಳ ಸುದ್ದಿ ವಾಚಕನ ರೀತಿಯಲ್ಲಿ ಸಂಗೀತ ಸಮೇತ ಬಿಂಬಿಸಿದ್ದು ಕೊಂಚ ಮಸಾಲೆ ಬೆರೆಸಿದಂತೆ ಅನಿಸಿತು. ಉಳಿದದ್ದು ಸಹಜ.

ಇಡೀ ನಾಟಕ ಅದರಲ್ಲಿನ ಮಾತುಗಳ ತೀವ್ರತೆಗೆ ಕಿವಿಯಾಗುತ್ತಲೇ ನಾವು ತೀವ್ರವಾಗುವ ಬಗೆಯಲ್ಲಿ ಇದೆ. ಹಾಗಾಗಿ ಮಾತಿಗೆ ಕಿವಿಗೊಟ್ಟು ಕೂರಬೇಕು. ಕಸರತ್ತು, ವ್ಯಾಯಾಮಗಳನ್ನು ಅಳವಡಿಸಿದ್ದರೆ ಪಾತ್ರಗಳ ಮಾತಿನ ಇಂಗಿತ ಸರಿಯಾಗಿ ಧ್ವನಿಸುತ್ತಿರಲಿಲ್ಲ. ಪ್ರಯೋಗವನ್ನು ಅತಿಯಾದ ಸ್ಟೈಲೈಸ್ಡ್ ಮಾದರಿಯಿಂದ ಮುಕ್ತಮಾಡಿಕೊಂಡಿರುವುದು ಮೊದಲ ಪ್ಲಸ್ ಪಾಯಿಂಟ್. ಎರಡನೆಯದು ಕಾದಂಬರಿಯಲ್ಲಿ ಬೃಹತ್ತಾಗಿ ಹರಡಿಕೊಂಡಿರುವ ಸರಕನ್ನು ಅಡಕ ಮಾಡಿ ಹೇಳುವಾಗ ತೋರಿರುವ ಕೌಶಲ ಮೆಚ್ಚುವಂಥದ್ದು. ಆದರೂ ಕಡೆಕಡೆಗೆ ಪಾತ್ರಗಳು ದೃಶ್ಯಗಳನ್ನು ಕಾಣಿಸುವ ಬದಲಿಗೆ ಮಾತಿನ ನಿರೂಪಣೆಗೇ ಹೆಚ್ಚು ಒತ್ತು ಕೊಟ್ಟು ಆತುರಾತುರದಿಂದ ಮುಗಿಸಿದವೇನೋ ಅನಿಸಿತು. ಅಷ್ಟು ಬಿಟ್ಟರೆ ಸರಿಯಾಗಿ ಕಣ್ಣುಕಿವಿ ನೆಟ್ಟು ಕೂತರೆ ಮಾತ್ರ ನಾಟಕದ ಆಶಯ ವ್ಯಕ್ತವಾಗುವ ರೀತಿಯ ಬಿಗಿಬಂಧದಲ್ಲಿ ಪ್ರಯೋಗವನ್ನು ಹೆಣೆಯಲಾಗಿದೆ.


ಇಷ್ಟನ್ನು ಅವರಿಗೆ ಫೋನಿನಲ್ಲಿ ಹೇಳಬೇಕೆನಿಸಿದರೂ ಏನೂ ಹೇಳದೆ ಸುಮ್ಮನೆ ‘ಚೆನ್ನಾಗಿದೆ ಸರ್ ಥ್ಯಾಂಕ್ಸ್’ ಅಂತಂದೆ. ಯಾಕೆಂದರೆ ‘ದೂರ….ದೂರ…’ ಎಂದು ಆ ಆಕೃತಿ ಅಂದದ್ದೇ ನನ್ನ ಕಣ್ಮುಂದೆ ಸುಳಿಯುತ್ತಿತ್ತು.