ಪ್ರತಿ ಸಾರಿ ಜಗತ್ತಿನಲ್ಲಿ ಬುದ್ದಿವಂತ ಮನುಷ್ಯ ಹುಟ್ಟಿಕೊಂಡಾಗ ಆತನ ಎದುರು ಎಷ್ಟೊಂದು ಆಯ್ಕೆಗಳಿರುತ್ತವೆ. ತನ್ನ ಬುದ್ದಿಮತ್ತೆಯನ್ನು ಬಳಸಿಕೊಂಡು ಆತ ಹಿಟ್ಲರನಂತಹ ಅಧಿಕಾರಿಯಾಗಬಹುದು, ಕಂಪನಿ ಶುರು ಮಾಡಿ ಹೆಚ್ಚೆಚ್ಚು ಲಾಭ ಮಾಡಿ ಶ್ರೀಮಂತರ ಪಟ್ಟಿ ಸೇರಿಕೊಳ್ಳಬಹುದು, ಸ್ವಂತಕ್ಕೆ ದ್ವೀಪಗಳನ್ನು ಕೊಂಡುಕೊಂಡು ಮೋಜು ಮಸ್ತಿ ಮಾಡಬಹುದು. ಹ್ಯಾಕರ್ ಆಗಿ ಬಹುಕೋಟಿ ಅಕೌಂಟುಗಳಿಗೆ ಕನ್ನ ಹಾಕಿ ಹಣವನ್ನು ತಮ್ಮ ಅಕೌಂಟಿಗೆ ವರ್ಗಾಯಿಸಿಕೊಳ್ಳಬಹುದು. ಇನ್ನೊಂದು ಆಯ್ಕೆಯಿದೆ, ಎಡಿಸನ್ನಿನಂತೆ ಬಲ್ಬು ಕಂಡುಹಿಡಿಯಬಹುದು. ಚಾಪ್ಲಿನ್ ನಂತೆ ಜನರನ್ನು ನಗಿಸಬಹುದು, ತಿಮ್ಮಕ್ಕನಂತೆ ಸಾಲುಮರಗಳನ್ನು ಬೆಳೆಸಬಹುದು. ರಿಚರ್ಡ್, ಲಿನಸ್ ರಂತೆ ಪರೋಪಕಾರಿ ಕೆಲಸ..
ಮಧುಸೂದನ್ ವೈ ಎನ್ ಬರೆಯುವ ಅಂಕಣ

 

ಎಪ್ಪತ್ತರ ದಶಕದ ನಂತರ ಸಾಫ್ಟವೇರ್ ನ ಬೆಳವಣಿಗೆ ಮೂರರಿಂದ ಐದನೆ ಗೇರಿಗೆ ಬಿತ್ತು. ಅದಕ್ಕೂ ಮುನ್ನ ಹಾರ್ಡವೇರು ಅಣ್ಣ, ಸಾಫ್ಟವೇರು ತಮ್ಮ, ಸಂಶೋಧನೆಯಲ್ಲೂ, ಲಾಭಾಂಶದಲ್ಲೂ. ಈ ಹೊತ್ತಲ್ಲಿ ಹಲವಾರು ಸಾಫ್ಟವೇರ್ ಕಂಪನಿಗಳು ಆರಂಭಗೊಂಡು ಕೇವಲ ಸಾಫ್ಟವೇರ್ ಮೂಲಕ ದುಡ್ಡು ನೋಡಲಾರಂಭಿಸಿದವು. ಹಾಗಾಗಿ ಅವು ತಮ್ಮ ಸಾಫ್ಟವೇರುಗಳಿಗೆ ಲೈಸೆನ್ಸ್ ಲಗತ್ತಿಸಿ ಲಾಭಾಂಶವನ್ನು ಹೆಚ್ಚಿಸಿಕೊಳ್ಳುತ್ತ ಹೋದವು. ಅದಕ್ಕೂ ಮುನ್ನ ಸಾಫ್ಟವೇರಿನ ಲೈಸೆನ್ಸಿನ ಬಗ್ಗೆ ಯಾರೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ. ಹಾರ್ಡವೇರ್ ಮೇಲೆ ಸಾಫ್ಟವೇರ್ ಇನ್ಸ್ಟಾಲ್ ಮಾಡಿ ಹಾರ್ಡವೇರನ್ನು ಮಾರುತ್ತಿದ್ದವು ಕಂಪನಿಗಳು. ಈ ಲೈಸೆನ್ಸುಗಳು ಬಹುದೊಡ್ಡ ಸಮಸ್ಯೆಯನ್ನು ಹುಟ್ಟುಹಾಕಿದವು. ಅದೇನೆಂದರೆ ಲೈಸೆನ್ಸುಗಳ ಪ್ರಕಾರ ನೀವು ಕೊಂಡುಕೊಂಡ ಸಾಫ್ಟ್ ವೇರನ್ನು ಕಣ್ಮುಚ್ಚಿಕೊಂಡು ಬಳಸಿ ಬಿಸಾಡಬೇಕು. ಉದಾಹರಣೆಗೆ ಕಾರ್ ತಗೋತಿರಿ, ಓಡಿಸ್ತೀರಿ, ಗುಜರಿಗೆ ಹಾಕ್ತೀರಿ. ಕಾರಿಗೆ ಯಾವುದೇ ಬದಲಾವಣೆ ಮಾಡುವಂತಿಲ್ಲ, ಉತ್ತಮ ಹೆಡ್ ಬಲ್ಬ್ ಹಾಕುವಂತಿಲ್ಲ, ಇನ್ನೊಬ್ಬರಿಗೆ ಮಾರುವಂತಿಲ್ಲ, ಮೊದಲಾಗಿ ಇನ್ನೊಬ್ಬರಿಗೆ ಓಡಿಸಲೂ ಸಹ ಕೊಡುವಂತಿಲ್ಲ ಕೂಡ! ಹೇಗಿದೆ ಲೈಸೆನ್ಸು ಗಮ್ಮತ್ತು!

ರಿಚರ್ಡ್ ಸ್ಟಾಲ್ ಮನ್ ಎಂಬ ಅಪ್ರತಿಮ ಸಾಫ್ಟವೇರ್ ಎಂಜಿನಿಯರ್ ಗೆ ಇದರಿಂದ ತಲೆಕೆಟ್ಟುಹೋಯಿತು. ಕಾರನ್ನು ಕೊಂಡುಕೊಂಡವನು ಮೆಕ್ಯಾನಿಕ್ ಆಗಿದ್ದು ಅವನಿಗೆ ತನ್ನ ಕಾರಿನ ಒಂದು ನಟ್ಟು ಬೋಲ್ಟು ಕೂಡ ಬಿಚ್ಚಕೂಡದು ಎಂದು ಕಟ್ಟುನಿಟ್ಟು ಮಾಡಿದರೆ ಹೇಗೆ ಉರಿಯುತ್ತದೋ ಹಾಗೆ. ಗೊತ್ತಿರಲಿ, ಸ್ಟಾಲ್ ಮನ್ ಎಥಿಕಲ್ ಹ್ಯಾಕರ್ (ಕಂಪ್ಯೂಟರ್ಸ್ ಹೊಟ್ಟೆ ಬಗೆವ ಚಾಣಾಕ್ಷ) ಕೂಡ ಆಗಿದ್ದ. ಹೀಗಾಗಿಯೆ ಅವನು ಫ್ರೀ ಸಾಫ್ಟವೇರ್ ಎಂಬ ಚಳುವಳಿ ಹುಟ್ಟು ಹಾಕಿದ. ನಿಘಂಟಿನ ಪ್ರಕಾರ ಫ್ರೀ ಎಂದರೆ ಉಚಿತ ಎಂದರ್ಥ, ಆದರೆ ಈ ಚಳುವಳಿಯ ಅರ್ಥದಲ್ಲಿ ಫ್ರೀ ಎಂದರೆ ಸ್ವಾತಂತ್ರ್ಯ. Free as in Free speech, not as in free beer. ತಾನು ಕೊಂಡುಕೊಂಡ ಸಾಫ್ಟವೇರಿನ ಸೋರ್ಸ್ ಕೋಡ್(ಸಂಗೀತದಲ್ಲಿ ಹಾಡಿನ ಟಿಪ್ಪಣಿಯಿದ್ದಂತೆ) ನೋಡುವ, ಬದಲಾಯಿಸುವ, ಮರು ಮಾರುವ/ಹಂಚುವ ಸ್ವಾತಂತ್ರ್ಯ. ಸಹಜವಾಗಿ ಲಾಭಾಂಶದ ಮೇಲೆ ಕಣ್ಣಿಟ್ಟಿರುವ ಕಂಪನಿಗಳು ಇದಕ್ಕೆ ವಿರುದ್ಧವಾಗಿದ್ದವು. ಪ್ರತಿರೋಧಗಳು ವ್ಯಕ್ತವಾದವು. ಆದರೆ ಇವನಂತೆಯೇ ಯೋಚಿಸುವ ಹಲವಾರು ಎಂಜಿನಿಯರುಗಳು, ದುಬಾರಿ ಬೆಲೆ ತೆತ್ತು ಕೊಳ್ಳುವ ಸಾಫ್ಟವೇರ್ ಬಳಕೆದಾರರು ಇದ್ದರಲ್ಲವೇ. ಆಗ ಚಳುವಳಿಗೆ ಪ್ರಾಮುಖ್ಯತೆ ಬಂತು, ದೊಡ್ಡದಾಗಿ ಬೆಳೆಯಿತು. ಈ ಚಳುವಳಿಯ ಪ್ರಯೋಜನ ಪಡೆದ ಲಿನಕ್ಸ್ ಹುಟ್ಟಿಕೊಂಡಿತು. ಆಮೇಲೆ ಜರುಗಿದ್ದೆಲ್ಲ ಇತಿಹಾಸ.

ಇವತ್ತು ಇಡೀ ಜಗತ್ತು ಫ್ರೀ ಸಾಫ್ಟವೇರ್ ಚಳುವಳಿಯ ಫಲಾನುಭವಿ, ಋಣಿ. ಇದಿಲ್ಲದೇ ಹೋಗಿದ್ದರೆ ನಾವು ಬಳಸುವ ಸಾಫ್ಟವೇರ್ ವಸ್ತುಗಳ ಬೆಲೆ ನೂರ್ಪಟ್ಟು ಹೆಚ್ಚಿರುತ್ತಿತ್ತು. ಮೇಲಾಗಿ ಇದು ಜಗತ್ತಿನ ಮನುಷ್ಯ ಕುಲದ ಅದೆಷ್ಟೋ ನಿರರ್ಥಕ ಸಮಯ ಶ್ರಮವನ್ನು ಇಲ್ಲವಾಗಿಸಿತು. ನಮ್ಮ ನಿಮ್ಮ ಜೇಬಿನ ಹಣ ಉಳಿಸಿದ ಕೀರ್ತಿ ರಿಚರ್ಡ್ ನದ್ದು. ಈಗ ದೊಡ್ಡ ದೊಡ್ಡ ಕಂಪನಿಗಳಾದ ಐಬಿಎಮ್, ಗೂಗಲ್, ಮೈಕ್ರೋಸಾಫ್ಟ್ ಗಳೂ ಸಹ ಫ್ರೀ ಸಾಫ್ಟವೇರ್ ಬರೆಯಲು ತಮ್ಮ ಉದ್ಯೋಗಿಗಳನ್ನು ಪ್ರೇರೇಪಿಸುತ್ತಾರೆ, ತಮ್ಮ ಲಾಂಭಾಂಶದಲ್ಲಿ ಒಂದಷ್ಟು ಮೊತ್ತವನ್ನು ಈ ಚಳುವಳಿಯಲ್ಲಿ ಸಕ್ರಿಯರಾಗಿರುವ ಎಂಜಿನಿಯರುಗಳಿಗೆ ಎತ್ತಿಡುತ್ತಾರೆ. ಕಾರಣ ಅದರಿಂದ ಹೊರಬರುವ ಫ್ರೀ ಸಾಫ್ಟವೇರನ್ನು ಬಳಸಿ ಇವರು ಅದಕ್ಕೆ ಇನ್ನಷ್ಟು ಅನುಕೂಲ ಸೇರಿಸಿ ಮಾರುತ್ತಾರೆ. Not as in free beer ಅಂತ ಹೇಳಿದ್ದನಲ್ಲವೇ, ಹಾಗೆ ನೋಡಿದರೆ ಈ ಚಳುವಳಿ ಕ್ರಮೇಣ ಸ್ವಾತಂತ್ರ್ಯದ ಜೊತೆಗೆ “ಉಚಿತತೆ”ಯನ್ನೂ ಒಳಗೊಂಡು ಲಾಭ ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿದೆ. ರೆಡ್ ಹ್ಯಾಟ್ ನಂತಹ ಪ್ರಮುಖ ಲಿನಕ್ಸ್ ಕಂಪನಿ ಸಾಫ್ಟವೇರನ್ನು ಉಚಿತ ಕೊಟ್ಟು ಅದರ ಸರ್ವೀಸಿಗೆ ದುಡ್ಡು ಚಾರ್ಜು ಮಾಡಿ ಲಾಭದಲ್ಲಿದೆ.

ಉದ್ದ ದಾಡಿ ಬಿಟ್ಟು nerd ಗೆ ಪದಾರ್ಥದಂತಿರುವ ಸ್ಟಾಲ್ ಮನ್ ಹೆಚ್ಚೂ ಕಮ್ಮಿ ಸನ್ಯಾಸಿಯೆ. ನಾಸ್ತಿಕ ಯಹೂದಿ. ಧರ್ಮಗಳ ಕಠು ವಿರೋಧಿ. ಆತ ಮದುವೆಯಾಗಲಿಲ್ಲ. ಮಕ್ಕಳನ್ನು ಮಾಡಿಕೊಳ್ಳಲಿಲ್ಲ. ತಂದೆಯದ್ದು ಪ್ರಿಂಟಿಂಗ್ ಉದ್ಯೋಗ, ತಾಯಿ ಟೀಚರು. ಸ್ಟಾಲ್ ಮನ್ ಒಂದು ಕಡೆ ಹೇಳುತ್ತಾನೆ, ತಾನು ಹತ್ತನೇ ವಯಸ್ಸಿನಲ್ಲಿದ್ದಾಗ ಅಮೇರಿಕಾದಲ್ಲಿ ಕರಿಯರ ಸಿವಿಲ್ ರೈಟ್ಸ್ ಹೋರಾಟ ನಡೆಯುತ್ತಿತ್ತಂತೆ, ಆಗ ಅದು ಏನಂತ ಸರಿಯಾಗಿ ಅರ್ಥ ಆಗದಿದ್ದರೂ ಅದು ತನ್ನ ಮೇಲೆ ಪರಿಣಾಮ ಬೀರಿತೆಂದು. ಮುಂದುವರಿದು ಹೇಳುತ್ತಾನೆ, ತನ್ನದು ಗಾಂಧಿ ಚಳುವಳಿಯ ಸ್ವರೂಪದ್ದು ಅಂತ.

“There was a system that subjugated certain people and a part of the system was buying British cloth. So, Gandhi led people to simply refuse the British cloth and make their own cloth (Khadi). He basically said, ‘We don’t need your cloth so much that we’ll surrender our demand for independence.’ The GNU Project is similar to that. There were companies that offered us proprietary software which we could have only on terms that would take away our freedom. What I said is we’ll do without your non-free software. (Read more at: https://yourstory.com/2017/08/techie-tuesdays-richard-stallman )

ಮೇಲು ಮೇಲೆ ರಿಚರ್ಡ್ ರಾಜಕೀಯ ಸಿದ್ಧಾಂತಗಳ ರಾಯಭಾರಿಯೆನಿಸಿದರೂ ಮೂಲತಃ ಅವನೊಬ್ಬ ಪ್ರಚಂಡ ಪ್ರೋಗ್ರಾಮರ್. ಲಾಭದ ಮೇಲೆ ಕಣ್ಣಿಟ್ಟಿರುವ ಕಂಪನಿಗಳು ತನ್ನ ಚಳುವಳಿಗೆ ಪ್ರತಿರೋಧ ಒಡ್ಡಿದಾಗ ಸ್ಟಾಲ್ ಮನ್ ಚಳುವಳಿಯನ್ನು ಯಾವ ಹಂತಕ್ಕೆ ಒಯ್ಯುತ್ತಾನಂದರೆ ಫ್ರಾಪ್ರಿಯೆಟರಿ ಸಾಫ್ಟವೇರ್(ಫ್ರೀ ಗೆ ವಿರುದ್ಧವಾದುದು) ಇರುವ ಸಿಸ್ಟಂ ಅನ್ನೆ ತಾನು ಬಳಸುವುದಿಲ್ಲವೆಂದು. ಗಾಂಧಿಯ ಅಸಹಕಾರ ಚಳುವಳಿಯಿದ್ದಂತೆ. ಬದಲಾಗಿ GNU project ಎಂಬ ಪ್ರಾಜೆಕ್ಟ್ ಹುಟ್ಟುಹಾಕಿ ಅದರಡಿ ಹಲವಾರು ಮಹತ್ವದ ಫ್ರೀ ಸಾಫ್ಟವೇರ್ ಬರೆಯುತ್ತಾನೆ. ಇವನ GNU ಸಾಫ್ಟವೇರ್ ಬಳಸಿಯೇ ಲಿನಸ್ ಟೋರ್ವಾಲ್ಡ್ ಲಿನಕ್ಸ್ ಬರೆದದ್ದು. ಹೀಗಾಗಿ ರಿಚರ್ಡ್ ಲಿನಕ್ಸನ್ನು GNU/Linux ಎಂದು ಕರೆಯಬೇಕೆಂದು ವಾದ ಮಾಡಿದ್ದಿದೆ. ಇಲ್ಲವಾದರೆ ಒಟ್ಟಾರೆ GNU ಪ್ರಾಜೆಕ್ಟಿಗೆ ಅದರ ಉದ್ದೇಶಕ್ಕೆ ಅವಮಾನ ಮಾಡಿದಂತೆ ಎಂದು ಲಿನಸ್ ಮೇಲೆ ಬೇಸರಿಸಿಕೊಂಡಿದ್ದಿದೆ. ಈತನ GNU compiler and debugger ಈಗಲೂ ಎಲ್ಲ ಸಾಫ್ಟವೇರ್ ಕಂಪನಿಗಳಲ್ಲಿ ಉಪಯೋಗಿಸುವ ಮೂಲ ಹತಾರಗಳು.

(ಲಿನಸ್ ಟೋರ್ವಾಲ್ಡ್)

ಇವತ್ತು ಇಡೀ ಜಗತ್ತು ಫ್ರೀ ಸಾಫ್ಟವೇರ್ ಚಳುವಳಿಯ ಫಲಾನುಭವಿ, ಋಣಿ. ಇದಿಲ್ಲದೇ ಹೋಗಿದ್ದರೆ ನಾವು ಬಳಸುವ ಸಾಫ್ಟವೇರ್ ವಸ್ತುಗಳ ಬೆಲೆ ನೂರ್ಪಟ್ಟು ಹೆಚ್ಚಿರುತ್ತಿತ್ತು. ಮೇಲಾಗಿ ಇದು ಜಗತ್ತಿನ ಮನುಷ್ಯ ಕುಲದ ಅದೆಷ್ಟೋ ನಿರರ್ಥಕ ಸಮಯ ಶ್ರಮವನ್ನು ಇಲ್ಲವಾಗಿಸಿತು. ನಮ್ಮ ನಿಮ್ಮ ಜೇಬಿನ ಹಣ ಉಳಿಸಿದ ಕೀರ್ತಿ ರಿಚರ್ಡ್ ನದ್ದು.

ರಿಚರ್ಡ್ ಸ್ವಾತಂತ್ರಕ್ಕೆ ಸಂಬಂಧಿಸಿದಂತೆ ಹಲವಾರು ರಾಜಕೀಯ ನಿಲುವುಗಳಿಗೆ ಬೆಂಬಲಿಸಿದ್ದೂ ಇದೆ. ಮಾಹಿತಿ ಸ್ವಂತಂತ್ರತೆಗೆ ಹೋರಾಡಿದ ಜ್ಯೂಲಿಯನ್ ಅಸಾಂಜ್ ಮತ್ತು ಸ್ನೋಡನ್ ಬೆಂಬಲಿಸಿದ್ದನು ರಿಚರ್ಡ್. ನಮ್ಮ ದೇಶದಲ್ಲಿ ಆಧಾರ್ ವ್ಯವಸ್ಥೆ ತಂದಾಗ ಕಠುವಾಗಿ ವಿರೋಧಿಸಿದ್ದನು. ಆಧಾರ್ ಮೂಲತಃ ಸರ್ಕಾರ ತನ್ನ ಪ್ರಜೆಗಳನ್ನು ಗುಪ್ತವಾಗಿ ಹಿಂಬಾಲಿಸಲು ಮತ್ತು ಬೇಹುಗಾರಿಕೆ ನಡೆಸಲು ಹುಟ್ಟುಹಾಕಿರುವ ವ್ಯವಸ್ಥೆಯೆನ್ನುತ್ತಾನೆ. ಅಮೇರಿಕಾದಲ್ಲಿ ಗುಲಾಮರ ಮೇಲೆ ನಿಗಾ ಇಡಲು ಈ ವ್ಯವಸ್ಥೆ ತರಲಾಗಿತ್ತಂತೆ. ಸುಮ್ಮನೆ ಯೋಚಿಸಿ ನೋಡಿ. ನಿಮ್ಮ ಮೊಬೈಲ್ ಕಳುವಾಗಿ ಅಪರಿಚಿತನಿಗೆ ಸಿಕ್ಕಿದರೆ ಆತನು ಏನೇನು ಮಾಡಬಹುದು? ಒಂದು, ಅದರಲ್ಲಿರುವ ಬ್ಯಾಂಕ್ ಪೇಟಿಂ ಇತರೆ ಹಣಕಾಸಿಗೆ ಸಂಬಂಧಿಸಿದಂತೆ ಮಾಹಿತಿ ಕದಿಯುವುದು. ಎರಡು ನಿಮ್ಮ ಫೋಟೋ ವಿಡಿಯೋ ವಾಟ್ಸಾಪುಗಳಿಗೆ ಕನ್ನ ಹಾಕಿ ಅಲ್ಲಿರುವ ಖಾಸಗಿ ವಸ್ತುಗಳನ್ನು ಎತ್ತಿಕೊಂಡು ನಿಮ್ಮನ್ನು ಬ್ಲಾಕ್ ಮೇಲೆ ಮಾಡುವುದು. ಮೂರನೇದು ಅತ್ಯಂತ ಜವಾಬ್ದಾರಿ ನಾಗರೀಕನಂತೆ ಮೊಬೈಲನ್ನು ನಿಮಗೊಪ್ಪಿಸುವುದು. ಮೂರನೇ ಆಯ್ಕೆಯು ಅಸಂಭವವೆಂದು ನಿಮಗೂ ಗೊತ್ತಿದೆ. ಮೊದಲೆರಡನ್ನು ಅಚ್ಚುಕಟ್ಟಾಗಿ ಮಾಡುತ್ತಾನೆ ಆತ. ಸರ್ಕಾರಗಳೂ ಹೀಗೆಯೆ. ತಾನು ಪ್ರಜೆಗಳಿಗೆ ಒದಗಿಸಬೇಕಾದ ಮಾಹಿತಿ ಹಕ್ಕಿಗೆ ಕಡಿವಾಣ ಹಾಕಿ (RTI), ಪ್ರಜೆಗಳು ಕಾಪಾಡಿಕೊಳ್ಳಬೇಕಾದ ಖಾಸಗಿತನಕ್ಕೆ ಲಗ್ಗೆ ಇಡುವ(ಆಧಾರ್) ಸರ್ಕಾರದ ಉದ್ದೇಶವು ಏನಿದ್ದಿರಬಹುದು, ಯೋಚಿಸಿ.

ರಿಚರ್ಡ್ ತನ್ನ ವೈಯುಕ್ತಿಕ ಜಾಲತಾಣದಲ್ಲಿ ಗಾಂಧಿಯ ಒಂದು ಮಾತನ್ನು ಹಂಚಿಕೊಂಡಿದ್ದಾನೆ.
“You assist an evil system most effectively by obeying its orders and decrees. An evil system never deserves such allegiance. Allegiance to it means partaking of the evil. A good person will resist an evil system with his or her whole soul.”
-Mahatma Gandhi

ಬಿಲ್ ಗೇಟ್ಸ್ ತನ್ನ Intellectual property ಲೈಸೆನ್ಸಿನ ಪ್ರಾಕಾರವನ್ನು ಒಪ್ಪದವರು ಅಂದರೆ ಪರೋಕ್ಷವಾಗಿ ರಿಚರ್ಡನ್ನು ಕಮ್ಯೂನಿಸ್ಟ್ ಎಂದು ಜರಿದಿದ್ದನು. ಕಾರಣ ರಿಚರ್ಡ್ ನ ಪ್ರಕಾರ ಈ intellectual property ಎಂಬುದೇ ತಪ್ಪು ಪದ ಬಳಕೆ. ಹಣ ಇಸಕೊಂಡು ವಸ್ತುವನ್ನು ಮಾರಿದ ಮೇಲೂ ಆ ವಸ್ತುವಿನ ಮೇಲೆ ಹಕ್ಕು ಸಾಧಿಸುವುದು ಅದೆಂತಹ ಅರಗಿಸಿಕೊಳ್ಳಲಾಗದ ಕುತರ್ಕ ಅಲ್ಲವೇ? ಒಂದು ಮನೆ ಕೊಂಡುಕೊಳ್ತೀರಿ, ಅದನ್ನು ಸುಂದರಗೊಳಿಸಿ ಇನ್ನೊಬ್ಬರಿಗೆ ಮಾರಲು ಹೋದರೆ ಮೊದಲು ಮಾರಿದವ ಅಡ್ಡ ಬರುವಂತಿದ್ದರೆ ಅಂತಹ ಅಗ್ರೀಮೆಂಟ್ ನೀವು ಒಪ್ಪುತ್ತೀರೋ? ಸಾಫ್ಟವೇರ್ ನಲ್ಲಿ ಇಂತಹ ಅಗ್ರೀಮೆಂಟುಗಳಿವೆ. ಈಗಲೂ ಇವೆ. ಇದೇ ಕಾರಣಕ್ಕೆ ಸಾಫ್ಟವೇರುಗಳು ಈಗಲೂ ಒಂದು ಮಟ್ಟಿಗೆ ದುಬಾರಿ.

ಸಾಮಾನ್ಯವಾಗಿ ಫ್ರೀ ಸಾಫ್ಟವೇರು(ಇದರರ್ಥ ಸ್ವಾತಂತ್ರ್ಯ ಮತ್ತು ಉಚಿತ ಎಂದೇ ಓದಿಕೊಳ್ಳಿ) ಒಬ್ಬನಿಂದಲ್ಲದೆ ಸಮುದಾಯದಿಂದ ಬರೆಯಲ್ಪಡುತ್ತವೆ. ಈ ಪ್ರಪಂಚದಲ್ಲಿ Community ಎಂಬ ಪದವು ಸರ್ವೇ ಸಾಮಾನ್ಯ. Open source community, free software community.. ಭಾಷೆ ಹೀಗಿರುತ್ತದೆ. ಈ ಸಮುದಾಯಗಳು ಜಗತ್ತಿನಾದ್ಯಂತ ಹರಡಿಕೊಂಡಿರುತ್ತವೆ. ಯಾರೂ ಒಬ್ಬರ ಮುಖ ಒಬ್ಬರು ಕಂಡಿರುವುದಿಲ್ಲ. ಪರಸ್ಪರ ಪರಿಚಯ ಸಂಬಂಧ ಇರುವುದಿಲ್ಲ. ಎಲ್ಲಾ ಸಂಪರ್ಕವೂ ಆನ್ ಲೈನ್ ನಲ್ಲೆ. ಸಮಾನ ಮನಸ್ಕರು ಆಯಾ ದೇಶ ನಗರಗಳಲ್ಲಿ ಗುಂಪುಗಳನ್ನು ರಚಿಸಿಕೊಂಡಿರುತ್ತಾರೆ. ಹೀಗೆ ಸಮೀಪದಲ್ಲಿರುವವರು ಭೆಟ್ಟಿಯಾಗುವುದುಂಟು. ಉದಾಹರಣೆಗೆ LUG(linux user group) ಎಂಬ ಹೆಸರಿನಲ್ಲಿ ಆಯಾ ನಗರಗಳ ಹೆಸರು ಸೇರಿಸಿ ಜಗತ್ತಿನಾದ್ಯಂತ ಸಮುದಾಯಗಳಿವೆ. ಬೆಂಗಳೂರಲ್ಲಿ BLUG(Bangalore linux user group) ಎಂಬುದಿದೆ.

ಇವರೆಲ್ಲ ಅತ್ಯಂತ ನಿಸ್ವಾರ್ಥದಿಂದ ಕೇವಲ ಸಾಫ್ಟವೇರ್ ಬಳಕೆದಾರನ ಮೇಲಿನ ಕಾಳಜಿಯಿಂದ ಮತ್ತು ಎಂಜಿನಿಯರಿಂಗ್ ಮಜಕ್ಕೋಸ್ಕರ ಕೆಲಸ ಮಾಡುತ್ತಾರೆ. ಹಲವು ಸಮುದಾಯಗಳಲ್ಲಿ ಡೊನೇಶನ್ ಪಡೆವ ವ್ಯವಸ್ಥೆ ಇರುತ್ತದೆ. ಉದಾಹರಣೆಗೆ ನೀವು ಮೊಜಿಲ್ಲ ಫೈರ್ ಫಾಕ್ಸ್ ಬ್ರೌಸರ್ ಬಳಸುತ್ತಿರುವಿರಾದರೆ, ಇದು ಇಂತಹದೇ ಸಮುದಾಯದಿಂದ ಉತ್ಪತ್ತಿಯಾದದ್ದು. ಬಳಸಿ ನಿಮಗೆ ತೃಪ್ತಿಯೆನಿಸಿದ್ದಲ್ಲಿ ನೀವು ಫೈರ್ ಪಾಕ್ಸ್ ಸಮುದಾಯಕ್ಕೆ ಹಣ ಡೊನೇಟ್ ಮಾಡಬಹುದು. ಒಂದು ಡಾಲರ್(ನನಗೆ ಗೊತ್ತಿರುವ ಹಾಗೆ ಇದಕ್ಕಿಂತ ಕನಿಷ್ಠ ಮೊತ್ತ ಸಾಧ್ಯವಿಲ್ಲ) ಮಾಡಿದರೂ ಸರಿ, ಒತ್ತಾಯವಿರುವುದಿಲ್ಲ. ಅದೇ ನೀವು ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸುತ್ತಿದ್ದರೆ ಮೈಕ್ರೋಸಾಫ್ಟ್ ಗೆ ದುಡ್ಡು ಕೊಟ್ಟು ಅದನ್ನು ಪಡೆದಿರುತ್ತೀರಿ. ಹಲವಾರು ಎಂಜಿನಿಯರುಗಳು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತ ಬಿಡುವಿನ ಸಮಯವನ್ನು ಫ್ರೀ ಸಾಫ್ಟವೇರ್ ಬರೆಯಲು ವ್ಯಯಿಸುತ್ತಾರೆ. ಹಾಗಂತ ಇಲ್ಲಿ ಎಲ್ಲವೂ ಸುಗಮವಾಗಿಯೆ ಜರುಗತ್ತಿದೆ ಅಂತೇನಿಲ್ಲ.

ಹಣದ ಕೊರತೆಯಿಂದಾಗಿ ಇತ್ತೀಚೆಗೆ ಅಮೇರಿಕಾದಿಂದ ಪಬ್ಲಿಷ್ ಆಗುತ್ತಿದ್ದ ಪತ್ರಿಕೆ Linux journal ಎಂಬುದನ್ನು ಸಂಪೂರ್ಣ ನಿಲ್ಲಿಸಲಾಯಿತು. ಭಾರತದಲ್ಲಿ ಇದರ ಸಮಾನ ರೂಪದ್ದು Open Source For You ಎಂಬ ಹೆಸರಿನ ಪತ್ರಿಕೆ ಇದೆ. ಪ್ರತಿ ವರ್ಷ ಬೆಂಗಳೂರಿನ ನಿಮ್ಹಾನ್ಸ್ ಬಳಿ OSI(Open source India) ಹೆಸರಿನಲ್ಲಿ ಮೂರು ದಿನಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ದೊಡ್ಡ ದೊಡ್ಡ ಕಂಪನಿಗಳಿಂದ ಪ್ರೆಸಿಡೆಂಟುಗಳು ಮ್ಯಾನೇಜರು ಎಂಜಿನಿಯರುಗಳು ಸೇರುತ್ತಾರೆ. ಪ್ರತಿ ಸಾರಿ ನವೆಂಬರಿನಲ್ಲಿದ್ದುದು ಈ ವರ್ಷ ಮೊನ್ನೆ ಮೊನ್ನೆ ಅಕ್ಟೋಬರ್ ಹದಿನೇಳು-ಹದಿನೆಂಟರಂದು ಹಮ್ಮಿಕೊಳ್ಳಲಾಗಿತ್ತು.

ರಿಚರ್ಡ್ ನ ವೈಯುಕ್ತಿಕ ಅಭಿರುಚಿಗಳೆಂದರೆ, ಅವನಿಗೆ ಮಂದಿ ಟೈ ಕಟ್ಟುವುದನ್ನು ಒಪ್ಪಲಾಗುವುದಿಲ್ಲ. ಕೇವಲ ಸೌಂದರ್ಯ ವರ್ಧನೆದಾದರೆ ಸರಿ, ಯಾವುದೋ ಕಂಪನಿಯ ರೂಲ್ಸಿಗೋಸ್ಕರ ಕುತ್ತಿಗೆಗೆ ಟೈ ಬಿಗಿದುಕೊಳ್ಳುವುದು ಸರಿಯಲ್ಲ ಎನ್ನುತ್ತಾನೆ. ಅವನಿಗೆ ಕೆಮೆರಾಗಳ ಎದುರು ನಗುವುದೂ ಆಗಿಬರುವುದಿಲ್ಲ. ಹಾಗೆ ನೋಡಿದರೆ ಹಳೇ ಕಾಲದ ಫೋಟೋಗಳಲ್ಲಿ ಮುಖ ಊದಿಸಿಕೊಂಡು ಕೂತಿರುತ್ತಾರಲ್ಲ ನಮ್ಮ ಅಜ್ಜ ಅಜ್ಜಿಯಂದಿರು, ರಿಚರ್ಡ್ ಅಂತಹ ಫೋಟೋಗಳನ್ನು ಮೆಚ್ಚುತ್ತಾನೆ. ಕಾರಣ ಅದೇ ಪ್ರಾಮಾಣಿಕ ಭಾವ ಎಂಬುದು ಅವನ ನಿಲುವು. ಅದು ಫೋಟೋ ತೆಗೆಯುವ ಗಳಿಗೆಯಾಗಿರದಿದ್ದರೆ ಆ ಕ್ಷಣದಲ್ಲಿ ನೀವು ನಗುತ್ತಿದ್ದೀರೋ? ಇಲ್ಲವೆಂದಾದರೆ ಆಗ ನಕ್ಕಿದ್ದು ಸಹಜವಾಗಿಯೆ ತೋರಿದರೂ ಅದು ಕೃತಕ ನಗು ತಾನೆ.

ಪ್ರತಿ ಸಾರಿ ಜಗತ್ತಿನಲ್ಲಿ ಬುದ್ದಿವಂತ ಮನುಷ್ಯ ಹುಟ್ಟಿಕೊಂಡಾಗ ಆತನ ಎದುರು ಎಷ್ಟೊಂದು ಆಯ್ಕೆಗಳಿರುತ್ತವೆ. ತನ್ನ ಬುದ್ದಿಮತ್ತೆಯನ್ನು ಬಳಸಿಕೊಂಡು ಆತ ಹಿಟ್ಲರನಂತಹ ಅಧಿಕಾರಿಯಾಗಬಹುದು, ಕಂಪನಿ ಶುರು ಮಾಡಿ ಹೆಚ್ಚೆಚ್ಚು ಲಾಭ ಮಾಡಿ ಶ್ರೀಮಂತರ ಪಟ್ಟಿ ಸೇರಿಕೊಳ್ಳಬಹುದು, ಸ್ವಂತಕ್ಕೆ ದ್ವೀಪಗಳನ್ನು ಕೊಂಡುಕೊಂಡು ಮೋಜು ಮಸ್ತಿ ಮಾಡಬಹುದು. ಹ್ಯಾಕರ್ ಆಗಿ ಬಹುಕೋಟಿ ಅಕೌಂಟುಗಳಿಗೆ ಕನ್ನ ಹಾಕಿ ಹಣವನ್ನು ತಮ್ಮ ಅಕೌಂಟಿಗೆ ವರ್ಗಾಯಿಸಿಕೊಳ್ಳಬಹುದು. ಇನ್ನೊಂದು ಆಯ್ಕೆಯಿದೆ, ಎಡಿಸನ್ನಿನಂತೆ ಬಲ್ಬು ಕಂಡುಹಿಡಿಯಬಹುದು. ಚಾಪ್ಲಿನ್ ನಂತೆ ಜನರನ್ನು ನಗಿಸಬಹುದು, ತಿಮ್ಮಕ್ಕನಂತೆ ಸಾಲುಮರಗಳನ್ನು ಬೆಳೆಸಬಹುದು. ರಿಚರ್ಡ್, ಲಿನಸ್ ರಂತೆ ಪರೋಪಕಾರಿ ಕೆಲಸ.. ಪರೋಪಕಾರಿ ಅಂದರೆ ಹಣ-ದಾನವಲ್ಲ, ಒಟ್ಟಾರೆ ಜಗತ್ತಿನಲ್ಲಿ ಬಹುಸಂಖ್ಯೆಯ ಜನರ ಬದುಕನ್ನು ಹಗೂರ ಮಾಡುವ ಬಹುಕಾಲ ಬಾಳುವ ಬದಲಾವಣೆ ತರುವಂತದ್ದು, ಮಾಡಬಹುದು. ಗಾಂಧಿ ಯಾಕೆ ಇಂದಿಗೂ ಮಹತ್ವದವನಾಗಿದ್ದಾನೆ? ಒಬ್ಬ ಬರಾಕ್ ಒಬಾಮಾ, ಮಾರ್ಟಿನ್ ಲೂಥರ್ ಕಿಂಗ್, ರಿಚರ್ಡ್ ಸ್ಟಾಲ್ ಮನ್ ಗಾಂಧಿಯಿಂದ ಪ್ರೇರಪಿತರಾಗಿ ಜಗತ್ತನ್ನು ಬದಲಾಯಿಸಬಲ್ಲವರೆಂದಾದರೆ ನಮ್ಮಲ್ಲಿ ಯಾಕೆ ಗಾಂಧಿಯನ್ನು ಈ ಪರಿ ಅನುಮಾನಿಸಿ ಅವಮಾನಿಸಿ ದಿನಾ ದಿನ ಕೊಲ್ಲುತ್ತಿದ್ದೇವೆ? ನೋಬೆಲ್ ಪುರಸ್ಕೃತ ಖ್ಯಾತ ಸಾಹಿತಿ ಪರ್ಲ್ ಎಸ್ ಬಕ್ ಹೇಳುತ್ತಾಳೆ…

He was right, he knew he was right, we all knew he was right. The man who killed him knew he was right. However long the follies of the violent continue, they but prove that Gandhi was right. ‘Resist to the very end’, he said, ‘but without violence’. Of violence the world is sick. Oh, India, dare to be worthy of your Gandhi.

ಓಹ್ ಇಂಡಿಯ, Dare to be worthy of your Gandhi…