ನೀರಿನ ಮಡಕೆಯನ್ನು ತಾನೇ ಎತ್ತಿಕೊಂಡು ರಾಸ್ಕೋಲ್ನಿಕೋವ್‍ ಗೆ ತಂದುಕೊಡಲು ಪ್ರಯತ್ನಪಟ್ಟಳು. ಭಾರ ತಾಳದೆ ಇನ್ನೇನು ಬಿದ್ದೇಹೋಗುತ್ತಿದ್ದಳು. ಅಷ್ಟು ಹೊತ್ತಿಗೆ ಅವನು ಟವಲನ್ನು ಪತ್ತೆ ಮಾಡಿ, ಅದರಿಂದ ವದ್ದೆಮಾಡಿ, ಮಾರ್ಮೆಲಡೋವ್‌ ನ ರಕ್ತಸಿಕ್ತ ಮುಖವನ್ನು ಒರೆಸುತ್ತಿದ್ದ. 
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಏಳನೆಯ ಅಧ್ಯಾಯ

 

ರಸ್ತೆಯ ಮುಧ್ಯೆ ವೈಭವದ ಸಾರೋಟು ನಿಂತಿತ್ತು. ಉನ್ನತ ವರ್ಗದವರು ಬಳಸುವಂಥದ್ದು. ಅದಕ್ಕೆ ಪೊಗದಸ್ತಾದ, ಮಿರುಗುವ ಕಪ್ಪು ಬಣ್ಣದ ಜೋಡಿ ಕುದುರೆಗಳಿದ್ದವು. ಗಾಡಿಯೊಳಗೆ ಯಾರೂ ಇರಲಿಲ್ಲ. ಗಾಡಿ ಹೊಡೆಯುವವನು ಇಳಿದು, ಕುದುರೆಗಳ ಪಕ್ಕದಲ್ಲಿ ಲಗಾಮು ಹಿಡಿದು ನಿಂತಿದ್ದ. ಬಹಳ ಜನ ಸೇರಿದ್ದರು. ಎಲ್ಲರಿಗಿಂತ ಮುಂದೆ ಪೋಲೀಸರಿದ್ದರು. ಒಬ್ಬಾತ ಲಾಟೀನು ಹಿಡಿದಿದ್ದ, ಇನ್ನೊಬ್ಬ ಸಾರೋಟು ಗಾಡಿಯ ಗಾಲಿಯ ಹತ್ತಿರ ಏನನ್ನೋ ಬಗ್ಗಿ ನೋಡುತ್ತಿದ್ದ. ಎಲ್ಲರೂ ಮಾತಾಡುತ್ತಿದ್ದರು ಕೂಗಾಡುತ್ತಿದ್ದರು, ಗಾಡಿಹೊಡೆಯುವವನು ದಿಕ್ಕುತೋಚದೆ, ಕುತ್ತುಸಿರು ಬಿಡುತ್ತ, ‘ಎಂಥಾ ಕೆಲಸ ಆಗೋಯ್ತು ದೇವರೇ!’ ಎಂದು ಮತ್ತೆ ಮತ್ತೆ ಅನ್ನುತ್ತಾ ನಿಂತಿದ್ದ.

ರಾಸ್ಕೋಲ್ನಿಕೋವ್ ಕೂಡ ದಬ್ಬಿ ದಾರಿ ಮಾಡಿಕೊಂಡು ಮುಂದೆ ಹೋದ. ಇಷ್ಟೆಲ್ಲ ಗಜಿಬಿಜಿ, ಕುತೂಹಲಕ್ಕೆ ಕಾರಣವಾಗಿದ್ದು ಏನೆಂದು ನೋಡಿದ. ಕುದುರೆ ಕಾಲಿಗೆ ಇದೇ ಈಗ ಸಿಕ್ಕಿದ್ದವನೊಬ್ಬ ರಸ್ತೆಯ ಮೇಲೆ ಬಿದ್ದಿದ್ದ. ನೋಡಿದರೆ ಅವನಿಗೆ ಎಚ್ಚರವಿಲ್ಲ ಅನಿಸುತ್ತಿತ್ತು. ಹಳೆಯ ಕೊಳಕು ಬಟ್ಟೆ ತೊಟ್ಟಿದ್ದ. ಆದರೂ ಅವು ಸಭ್ಯಸ್ಥರು ತೊಡುವಂಥ ಬಟ್ಟೆ. ಬಟ್ಟೆಯೆಲ್ಲ ರಕ್ತವಾಗಿತ್ತು. ಮುಖದಿಂದ, ತಲೆಯಿಂದಲೂ ರಕ್ತ ಬಸಿಯುತ್ತಿತ್ತು. ಮುಖ ಕೆತ್ತಿ ಹೋಗಿತ್ತು.

‘ಭೂಮಿತಾಯಾಣೇಗೂ ಹೇಳತೀನಿ, ಬೇಕಂತ ಮಾಡಲಿಲ್ಲ, ಜೋರಾಗಿ ಗಾಡಿ ಓಡಿಸತಿರಲಿಲ್ಲ, ಅವನಿಗೆ ಗುದ್ದಿಸಲಿಲ್ಲ. ಒಂದಲ್ಲ, ಎರಡಲ್ಲ ಮೂರು ಸಲ ಕೂಗಿದೆ, ಕಿರುಚಿದೆ. ನಿಧಾನವಾಗೇ ಬರತಿದ್ದೆ, ಇಗೋ ಇಲ್ಲಿರೋರೆಲ್ಲ ನೋಡಿದಾರೆ. ಕುಡಿದಿರೋರಿಗೆ ಮೈ ಮೇಲೆ ಎಚ್ಚರ ಇರಲ್ಲ. ಇವನು ರಸ್ತೆ ದಾಟತಾ ಇದ್ದ. ವಾಲಾಡಿಕೊಂಡು ಹೆಜ್ಜೆ ಹಾಕತಾ ಇದ್ದ. ಎಡವಿ ಬಿದ್ದೇ ಬಿಟ್ಟ. ಕುದುರೇ ಕಾಲಿಗೇನೇ.. ಲಗಾಮು ಎಳೆದೆ, ಕುದುರೆ ನಿಲ್ಲಲಿಲ್ಲ. ಬೇಕ್‍ ಬೇಕು ಅಂತಲೇ ಬಿದ್ದಿರಬೇಕು, ಇಲ್ಲಾ, ಎಚ್ಚರ ತಪ್ಪೋವಷ್ಟು ಕುಡಿದಿರಬೇಕು. ಕುದುರೆಗಳು ಪ್ರಾಯದವು, ಬೇಗ ಬೆದರತವೆ. ಅವನು ಬಿದ್ದವನೇ ಜೋರಾಗಿ ಕಿರುಚಿದ. ಕುದುರೆಗಳು ಕೆನೆದು ಕಾಲೆತ್ತಿ ಹಾಕಿದವು. ಈ ಪಾಡು ಬಂದು ನನಗೆ…’

‘ಹೌದು, ಹೌದು’ ಎಂದು ಗುಂಪಿನ ಕೆಲವರು ಹೂಂಗುಟ್ಟಿದರು.

‘ಅವನು ಕೂಗಿದ್ದು ನಿಜ, ಮೂರು ಸಾರಿ ಕೂಗ್ದ,’ ಇನ್ನೊಂದು ದನಿ ಹೇಳಿತು.

‘ನಮಗೆಲ್ಲ ಕೇಳಸ್ತು… ಮೂರ್ ಸರ್ತಿ ಕೂಗ್ದ,’ ಇನ್ನೊಬ್ಬ ಅಂದ.

ಗಾಡಿಯವನಿಗೆ ತೀರ ಆತಂಕವಾಗಲೀ ಭಯವಾಗಲೀ ಇರಲಿಲ್ಲ. ಆ ಸಾರೋಟು ನಗರದ ಅತಿ ಶ್ರೀಮಂತನಾದ ಗಣ್ಯನೊಬ್ಬನಿಗೆ ಸೇರಿದ್ದು. ಅವನು ನಗರದ ಮತ್ತೆಲ್ಲೋ ತನ್ನ ಸಾರೋಟಿಗಾಗಿ ಕಾಯುತ್ತಿದ್ದ. ಈ ವಿಚಾರ ಇತ್ಯರ್ಥ ಮಾಡುವುದು ಹೇಗೆ ಎಂಬುದು ಪೋಲೀಸರ ಇನ್ನೊಂದು ತಲೆನೋವು. ಕುದುರೆಯ ಕಾಲಿಗೆ ಸಿಕ್ಕವನನ್ನು ಮೊದಲು ಪೋಲೀಸ್‍ ಸ್ಟೇಶನ್ನಿಗೆ ಕರಕೊಂಡು ಹೋಗಬೇಕು, ಆಮೇಲೆ ಆಸ್ಪತ್ರೆಗೆ. ಗಾಯಗೊಂಡವನ ಹೆಸರೇನು, ಅವನು ಯಾರು, ಈ ವಿವರ ಬಲ್ಲವರು ಯಾರೂ ಅಲ್ಲಿರಲಿಲ್ಲ.

ರಾಸ್ಕೋಲ್ನಿಕೋವ್ ದಾರಿ ಮಾಡಿಕೊಂಡು ಮುಂದೆ ಬಂದಿದ್ದ. ಗಾಯಗೊಂಡವನ ಮೇಲೆ ಲಾಟೀನಿನ ಬೆಳಕು ಅಕಸ್ಮಾತ್ತಾಗಿ ಚೆನ್ನಾಗಿ ಬಿತ್ತು, ರಾಸ್ಕೋಲ್ನಿಕೋವ್‍ ಗೆ ಅವನ ಗುರುತು ಸಿಕ್ಕಿತು.

‘ಇವನು ಗೊತ್ತು ನನಗೆ!’ ಅನ್ನುತ್ತ ಇನ್ನಷ್ಟು ಮುಂದೊತ್ತಿದ.

‘ಗೌರ್ಮೆಂಟ್ ಸರ್ವೆಂಟು ಅವನು. ರಿಟೈರಾಗಿದಾನೆ. ಟಿಟ್ಯುಲರ್ ಕೌನ್ಸಿಲರ್ ಮಾರ್ಮೆಲಡೋವ್! ಅವನ ಮನೆ ಇಲ್ಲೇ, ಹತ್ತಿರ, ಕೋಝೆಲ್ಸ್ ಹೌಸು… ಡಾಕ್ಟರನ್ನ ಕರೆಯಿರಿ, ಬೇಗ. ದುಡ್ಡು ನಾನು ಕೊಡತೇನೆ,’ ಅನ್ನುತ್ತ ರಾಸ್ಕೋಲ್ನಿಕೋವ್ ದುಡ್ಡು ತೆಗೆದು ಪೋಲೀಸರಿಗೆ ತೋರಿಸಿದ. ಆಶ್ಚರ್ಯವಾಗುವಷ್ಟು ಉತ್ಸಾಹಿತನಾಗಿದ್ದ ರಾಸ್ಕೋಲ್ನಿಕೋವ್.

ಗಾಯಗೊಂಡ ಆಸಾಮಿ ಯಾರೆಂಬುದು ಪತ್ತೆಯಾಗಿ ಪೋಲೀಸರಿಗೆ ಸಂತೋಷವಾಗಿತ್ತು. ರಾಸ್ಕೋಲ್ನಿಕೋವ್ ತನ್ನ ಹೆಸರು, ವಿಳಾಸಗಳನ್ನೂ ಕೊಟ್ಟ. ತನ್ನ ಸ್ವಂತ ಅಪ್ಪ ಇವನು ಅನ್ನಿಸುವ ಹಾಗೆ ಮಾರ್ಮೆಲಡೋವ್‍ ನನ್ನು ಬೇಗ ಆಸ್ಪತ್ರೆಗೆ ಸಾಗಿಸಿ ಎಂದು ಪೋಲೀಸರನ್ನ ಗೋಗರೆದ.

‘ಇಲ್ಲೇ, ಮೂರು ಬಿಲ್ಡಿಂಗ್ ಆಚೆ ಇವರ ಮನೆ. ಕೋಝೆಲ್ ಅಂತ ಜರ್ಮನಿಯವನ ಮನೆ. ಸಾಹುಕಾರ. ಇವನು ಮನೆಗೆ ಹೋಗತಾ ಇದ್ದ ಅಂತ ಕಾಣತ್ತೆ. ಕುಡಿದುಬಿಟ್ಟಿದಾನೆ… ನನಗೆ ಗೊತ್ತು ಇವನು… ಕುಡುಕ. ಇವನ ಹೆಂಡತಿ ಇದಾಳೆ, ಮಕ್ಕಳಿದಾರೆ, ಒಬ್ಬಳು ಮಗಳು. ಇವನನ್ನ ಆಸ್ಪತ್ರೆಗೆ ಕರಕೊಂಡು ಹೋಗೋದಕ್ಕೆ ತುಂಬ ಹೊತ್ತಾಗತ್ತೆ. ಆ ಅಪಾರ್ಟ್‍ಮೆಂಟಿನಲ್ಲಿ ಒಬ್ಬರಾದರೂ ಡಾಕ್ಟರು ಇದ್ದೇ ಇರತಾರೆ. ದುಡ್ಡು ಕೊಡತೇನೆ, ನಾನು ಕೊಡತೇನೆ… ಡಾಕ್ಟರು ನೋಡಿಕೊಳ್ಳತಾರೆ, ಮನೆಯವರಿರತಾರೆ. ತಕ್ಷಣ ಟ್ರೀಟ್‍ಮೆಂಟು ಸಿಗತ್ತೆ. ಆಸ್ಪತ್ರೆಗೆ ಹೋಗುವ ಹೊತ್ತಿಗೆ ಸತ್ತೇ ಹೋಗತಾನೆ…’

ಯಾರಿಗೂ ಗೊತ್ತಾಗದ ಹಾಗೆ ಪೋಲೀಸಿನವನ ಕೈಗೆ ರೂಬಲ್ ನೋಟು ಇಡುವುದಕ್ಕೂ ರಾಸ್ಕೋಲ್ನಿಕೋವ್ ಪ್ರಯತ್ನಪಟ್ಟ.

ಸ್ಪಷ್ಟವಾಗಿ ಇದೊಂದು ಅಪಘಾತ ಪ್ರಕರಣವಾದ್ದರಿಂದ, ತೀರ ಸಮೀಪದಲ್ಲೇ ಸಹಾಯ ದೊರೆಯುವ ಸಂಭವವೂ ಇದ್ದುದರಿಂದ ಇಂಥ ಪ್ರಯತ್ನ ಅವಶ್ಯಕವಾಗಿರಲಿಲ್ಲ. ಗಾಯಗೊಂಡವನನ್ನು ಎತ್ತಿಕೊಂಡು ಹೊರಟರು. ಜನರೂ ಕೈ ಜೋಡಿಸಿದರು. ಕೋಝೆಲ್ ಹೌಸು ಬರಿಯ ಮೂವತ್ತು ಹೆಜ್ಜೆ ದೂರದಲ್ಲಿತ್ತು. ಗಾಯಾಳನ್ನು ಹೊತ್ತವರಿಗೆ ಸಹಾಯ ಮಾಡುತ್ತಾ ತಲೆಗೆ ಕೈಯಾಸರೆ ಕೊಟ್ಟ ರಾಸ್ಕೋಲ್ನಿಕೋವ್ ದಾರಿ ಹೇಳುತ್ತ ಹೆಜ್ಜೆ ಹಾಕಿದ.

‘ಹೀಗೆ ಬನ್ನಿ, ಹೀಗೆ. ತಲೆ ಕಡೆ ಇರುವವರು ಮೊದಲು ಹತ್ತಿ. ಹ್ಞಾಂ. ಈಗ ತಿರುಗಿ. ಇಲ್ಲೇ… ಬನ್ನಿ… ದುಡ್ಡುಕೊಡತೇನೆ…’

ಕ್ಯಾತರೀನ ಇವಾನೋವ್ನಳಿಗೆ ಸ್ವಲ್ಪ ಬಿಡುವು ದೊರೆತರೆ ಸಾಕು ತಮ್ಮ ಪುಟ್ಟ ಕೋಣೆಯಲ್ಲಿ ಕಿಟಕಿಯಿಂದ ಒಲೆಯವರೆಗೆ, ಮತ್ತೆ ಅಲ್ಲಿಂದ ಕಿಟಕಿಯವರೆಗೆ ಹೆಜ್ಜೆ ಹಾಕುತ್ತಿದ್ದಳು. ಎದೆಯ ಮೇಲೆ ಕೈ ಬಿಗಿಯಾಗಿ ಕಟ್ಟಿಕೊಂಡು ತನ್ನಷ್ಟಕ್ಕೇ ಮಾತಾಡಿಕೊಂಡು, ಕೆಮ್ಮುತ್ತಾ ಹೆಜ್ಜೆ ಹಾಕುತ್ತಿದ್ದಳು. ಅವಳು ತನಗೆ ತಾನೇ ಮಾತಾಡಿಕೊಳ್ಳುವುದು ಇತ್ತೀಚೆಗೆ ಹೆಚ್ಚಾಗಿತ್ತು. ಹಿರಿಯ ಮಗಳು. ಹತ್ತು ವರ್ಷದ ಪೋಲ್ಯಾ ಜೊತೆಯಲ್ಲಿ ಆಗಾಗ ಏನಾದರೂ ಹೇಳಿಕೊಳ್ಳುತ್ತಿದ್ದಳು. ಏನೂ ಅರ್ಥವಾಗದಷ್ಟು ಚಿಕ್ಕ ಹುಡುಗಿಯಾಗಿದ್ದರೂ ತನ್ನಮ್ಮನಿಗೆ ನಾನು ಬೇಕು ಅನ್ನುವುದು ಪೋಲ್ಯಾಗೆ ಗೊತ್ತಾಗುತ್ತಿತ್ತು. ಹಾಗಾಗಿ ಸದಾ ಅಮ್ಮನ ಹಿಂದು ಹಿಂದೆಯೇ ಹೆಜ್ಜೆ ಹಾಕುತಿದ್ದಳು, ದೊಡ್ಡ ಜಾಣ ಕಣ್ಣನ್ನು ಅಗಲವಾಗಿ ತೆರೆದುಕೊಂಡು ಅಮ್ಮನ ಒಂದೊಂದು ಮಾತೂ ಅರ್ಥವಾಗುತ್ತಿದೆ ಅನ್ನುವ ಹಾಗೆ ನಟಿಸುತ್ತಿದ್ದಳು.

ಪೋಲೆನ್ಕಾ ಈಗ ತನ್ನ ತಮ್ಮನ ಬಟ್ಟೆ ಬದಲಾಯಿಸುತ್ತಿದ್ದಳು. ಅವನಿಗೆ ಬೆಳಗಿನಿಂದ ಹುಷಾರಿರಲಿಲ್ಲ. ಅವನನ್ನು ಮಲಗಿಸುವುದಕ್ಕೆ ತಯಾರಾಗುತ್ತಿದ್ದಳು. ಅಂಗಿ ಬದಲಾಯಿಸಲಿ ಅಕ್ಕ ಎಂದು ಕಾಯುತ್ತಿದ್ದ ಅವನು. ಅವನ ಅಂಗಿಯನ್ನು ಅವಳು ಅವತ್ತು ರಾತ್ರಿಯೇ ಒಗೆದು ಒಣಹಾಕಬೇಕಾಗಿತ್ತು. ಹುಡುಗ ಕುರ್ಚಿಯ ಮೇಲೆ ಗಂಭೀರವಾಗಿ ಬೆನ್ನು ನೆಟ್ಟಗೆ ಮಾಡಿಕೊಂಡು ಅಲ್ಲಾಡದೆ ಸುಮ್ಮನಿದ್ದ. ಪುಟ್ಟ ಕಾಲುಗಳನ್ನೆತ್ತಿ ನೇರವಾಗಿ ಮುಂದೆ ಚಾಚಿ, ಹಿಮ್ಮಡಿಗಳನ್ನು ಒಂದಕ್ಕೊಂದು ಬಲವಾಗಿ ಒತ್ತಿ, ಕಾಲ ಹೆಬ್ಬೆರಳುಗಳನ್ನು ಅಗಲಿಸಿಕೊಂಡು ಕೂತಿದ್ದ. ತುಟಿ ಒತ್ತಿ ಉಬ್ಬಿಸಿಕೊಂಡು, ಕಣ್ಣು ಅಗಲವಾಗಿ ತೆರೆದು, ಅತ್ತಿತ್ತ ಮಿಸುಕದೆ ಕೂತಿದ್ದ—ಮಲಗಲು ಬಟ್ಟೆ ಬದಲಿಸುವಾಗ ಪುಟ್ಟ ಜಾಣ ಹುಡುಗರು ಕೂರುತ್ತಾರಲ್ಲ ಹಾಗೆ. ಅಮ್ಮ ಅಕ್ಕನಿಗೆ ಹೇಳುತಿದ್ದುದನ್ನು ಕೇಳಿಸಿಕೊಳ್ಳುತ್ತಿದ್ದ.

ಅವನಿಗಿಂತ ಪುಟ್ಟ ಹುಡುಗಿ ಇನ್ನೊಬ್ಬಳು, ಹರಕಲು ಚಿಂದಿ ತೊಟ್ಟವಳು, ತನ್ನ ಸರದಿಗೆ ಕಾಯುತ್ತ ಪರದೆಯ ಪಕ್ಕದಲ್ಲಿ ನಿಂತಿದ್ದಳು. ಉಳಿದ ಕೋಣೆಗಳಿಂದ ಅಲೆಯಲೆಯಾಗಿ ಬರುತ್ತಿದ್ದ ಸಿಗರೇಟಿನ ಘಾಟು ಹೊಗೆ ಒಂದೇ ಸಮ ಬಿಡದೆ ಕೆಮ್ಮುತ್ತಿದ್ದ ಕ್ಷಯರೋಗಿಯನ್ನು ತೀರ ಕಾಡದಿರಲಿ, ಒಂದಿಷ್ಟು ಗಾಳಿಯಾಡಲಿ ಎಂದು ಮೆಟ್ಟಿಲ ಕಡೆಗಿದ್ದ ಬಾಗಿಲು ದೊಡ್ಡದಾಗಿ ತೆರೆದುಕೊಂಡಿತ್ತು. ಕ್ಯಾತರೀನ ಇವಾನೋವ್ನ ಕಳೆದ ಒಂದು ವಾರದಲ್ಲಿ ಇನ್ನಷ್ಟು ನವೆದು ಹೋಗಿದ್ದಳು, ಅವಳ ಕೆನ್ನೆಯ ಮೇಲಿನ ಕೆಂಪು ಚುಕ್ಕೆಗಳು ಮೊದಲಿಗಿಂತ ಇನ್ನಷ್ಟು ಕೆಂಪಾಗಿದ್ದವು.

ಕ್ಯಾತರೀನ ಇವಾನೋವ್ನ ಕೋಣೆಯಲ್ಲಿ ಅತ್ತ ಇತ್ತ ಹೆಜ್ಜೆ ಹಾಕುತ್ತ ಮಗಳು ಪೋಲ್ಯಾಗೆ ಹೇಳುತ್ತಿದ್ದಳು: ‘ನಿಂಗೊತ್ತಿಲ್ಲ, ಪೋಲ್ಯಾ, ನಾನು ಹೇಳಿದರೂ ನೀನು ನಂಬಲ್ಲ. ನಿಮ್ಮಪ್ಪನ ಮನೆಯಲ್ಲಿ ಎಂಥಾ ಖುಷಿ ಇತ್ತು, ಎಂಥಾ ವೈಭೋಗ ಇತ್ತು, ಅದನ್ನ ನೀನು ಕನಸಲ್ಲೂ ನೋಡಕ್ಕಾಗಲ್ಲ. ಈ ಕುಡುಕ ಬಂದು ಅದನ್ನೆಲ್ಲ ಹಾಳು ಮಾಡಿದ. ನನ್ನೂ ಹಾಳುಮಾಡಿದ, ನಿಮ್ಮನ್ನ ಎಲ್ಲಾರನ್ನೂ ಹಾಳುಮಾಡತಾನೆ. ನಿಮ್ಮ ಪಪ್ಪ ಸ್ಟೇಟ್ ಕೌನ್ಸಿಲರ್ ಆಗಿದ್ದ, ಇನ್ನೊಂದು ಬಡತಿ ಸಿಕ್ಕಿದ್ದರೆ ಗೌರ್ನರ್ ಆಗತಿದ್ದ. ಅದಕ್ಕೇ ಅವನನ್ನ ಕಾಣುವುದಕ್ಕೆ ಬಂದ ಜನ-ಮಿಖಾಲೋವಿಚ್, ನೀವೇ ನಮ್ಮ ಗೌರ್ನರ್ ಅಂತ ತಿಳಿದಿದ್ದೇವೆ- ಅನ್ನುತಿದ್ದರು. ಆಗ ನಾನು… ಖೊಖ್ ಖೊಖ್, ಹ್ಞಮ್‍ಮ್! ಅಯ್ಯಮ್ಮಾ, ದರಿದ್ರ ಜೀವನ!’ ಎಂದು ಉದ್ಗಾರ ತೆಗೆದು, ಕಫ ಉಗುಳಿ, ಎದೆ ಭದ್ರವಾಗಿ ಒತ್ತಿಕೊಂಡಳು. ‘ನಾನು ಕೊನೆಯ ಸರತಿ… ಖೊಖ್ ಖೊಖ್… ಮಾರ್ಷಲ್ ಅವರು ಏರ್ಪಾಟು ಮಾಡಿದ್ದ ಬಾಲ್ ಡಾನ್ಸಿಗೆ ಹೋಗಿದ್ದಾಗ… ಪ್ರಿನ್ಸೆಸ್ ಬೆಝ್ಝೆಮೆಲಿ ನನ್ನ ನೋಡಿದ್ದರು… ನಾನು ನಿಮ್ಮಪ್ಪನ್ನ ಮದುವೆಯಾದಾಗ ಬಂದು ಆಶೀರ್ವಾದ ಮಾಡಿದರು. ಈ ಮುದ್ದಾದ ಹುಡುಗಿ ಗ್ರಾಜುಯೇಶನ್ ದಿನ ಶಾಲು ಹೊದ್ದು ಡಾನ್ಸ್ ಮಾಡಿದ್ದಳು, ಅಲ್ಲವಾ?- ಅಂತ ಕೇಳಿದಳು…(ಅಲ್ಲಿ ಹರಿದಿದೆಯಲ್ಲಾ ಅದನ್ನ ತೇಪೆ ಹಚ್ಚಿ ರಿಪೇರಿ ಮಾಡಬೇಕು… ಸೂಜಿ ದಾರ ತಗೊಂಡು ಈಗಲೇ ಹೊಲಿಗೆ ಹಾಕು… ನಿನಗೆ ಹೇಳಿಕೊಟ್ಟಿದ್ದೆನಲ್ಲಾ ಹಾಗೆ… ಇಲ್ಲದೆ ಇದ್ದರೆ ನಾಳೆ… ಖೊಕ್ ಖೊಕ್ ಖೊಕ್… ಬಟ್ಟೆ ಪೂರಾ ಹರಿದುಹೋಗತ್ತೆ!)’ ಮಾತಾಡಿ ದಣಿಯುತ್ತಿದ್ದಳು. ಆದರೂ ಮಾತು ಬಿಡಲಿಲ್ಲ. ‘ಮಹಾಪ್ರಭುಗಳ ಆಸ್ಥಾನದಲ್ಲಿ ಗೌರವ ಪದವಿ ಪಡೆದಿದ್ದಾನಲ್ಲ ಆ ಪ್ರಿನ್ಸ್ ಶೆಹೆಗ್ಲೋವ್ಸ್ಕಿ ಅವನು ಆಗತಾನೇ ಪೀಟರ್ಸ್‍ಬರ್ಗ್‍ ನಿಂದ ಬಂದಿದ್ದ, ಅವನು ನನ್ನ ಹೊತೆಯಲ್ಲಿ ಮಝುರ್ಕ ಡಾನ್ಸು ಮಾಡಿದ. ಮಾರನೆಯ ದಿನವೇ ನಿಮ್ಮ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡತೇನೆ ಅಂದ. ನಾನು ಅವನನ್ನ ಬಾಯಿ ತುಂಬ ಹೊಗಳಿದೆ, ಬೇರೆ ಹುಡುಗನಿಗೆ ಮನಸ್ಸುಕೊಟ್ಟಿದೇನೆ ಅಂದೆ. ನಿಮ್ಮಪ್ಪಾನೇ ಪೋಲ್ಯಾ ಆ ಬೇರೆ ಹುಡುಗ.

ನಮ್ಮಪ್ಪನಿಗೆ ನನ್ನ ಮೇಲೆ ತುಂಬ ಸಿಟ್ಟು ಬಂತು. (‘ನೀರು ಬಗ್ಗಿಸಿದಾ?… ನಿನ್ನ ಶರ್ಟು, ಸ್ಟಾಕಿಂಗ್ಸ್ ಕೊಡು, ಲೀಡಾ!’ ಎರಡನೆಯ ಮಗಳಿಗೆ ಹೇಳಿದಳು, ‘ಇವತ್ತೊಂದಿನ ಹ್ಯಾಗಾದರೂ ಶರ್ಟು ಇಲ್ಲದೆ ಮಲಕ್ಕೋ… ನಿನ್ನ ಸ್ಟಾಕಿಂಗ್ಸೂ ತೆಗೆದಿಡು… ಎರಡೂ ಒಟ್ಟಿಗೆ ಒಗೀತೇನೆ. ಚಿಂದಿ ಬಟ್ಟೆ ತಿರುಕ ನನ್ಮಗ, ಕುಡುಕ ಯಾಕಿನ್ನೂ ಬರಲಿಲ್ಲ… ಅವನ ಅಂಗಿ ನೆಲ ಒರಸೋಬಟ್ಟೇಗಿಂತ ಅತ್ತತ್ತ ಆಗಿದೆ. ಚಿಂದಿ ಎದ್ದೋಗಿದೆ. ಮಿಕ್ಕ ಬಟ್ಟೆ ಜೊತೆ ಸೇರಿಸಿ ಒಗೆಯೋ ಹಾಗೂ ಇಲ್ಲ. ನಾಳೆ ರಾತ್ರಿಗೂ ಇದೇ ಕೆಲಸ ಮಾಡಬೇಕು, ದೇವರೇ. ಖೊಕ್ ಖೊಕ್ ಖೊಕ್. ಮತ್ತೆ ಕೆಮ್ಮ! ಏನಿದೂ?’)’ ಚಿಟ್ಟನೆ ಚೀರಿದಳು. ಜನರ ಗುಂಪು ಬಾಗಿಲಿನಲ್ಲಿ ನುಸುಳಿ ಒಳಕ್ಕೆ ಬರುತ್ತಿತ್ತು, ಅವರು ಏನೋ ಹೊತ್ತುಕೊಂಡು ಬಂದಿದ್ದರು. ‘ಏನಿದು? ದೇವರೇ, ಯಾರನ್ನ ಹೊತ್ತುಕೊಂಡು ಬರತಿದ್ದಾರೆ? ದೇವರೇ!’

‘ಎಲ್ಲಿ ಮಲಗಿಸೋಣ ಇವನನ್ನ?’ ಸುತ್ತಲೂ ನೋಡುತ್ತ ಪೋಲೀಸಿನವನು ಕೇಳಿದ. ಬಟ್ಟೆಯೆಲ್ಲ ರಕ್ತವಾಗಿರುವ, ಎಚ್ಚರ ತಪ್ಪಿದ್ದ ಮಾರ್ಮೆಲಡೋವ್‍ ನನ್ನು ಆಗಲೇ ರೂಮಿನೊಳಕ್ಕೆ ತಂದಿದ್ದರು.

‘ಸೋಫಾ ಮೇಲೆ ಮಲಗಿಸಿ, ತಲೆ ಆ ಕಡೆಗೆ ಇರಲಿ,’ ರಾಸ್ಕೋಲ್ನಿಕೋವ್ ಸೋಫಾ ತೋರಿಸಿದ.

‘ಕುಡಿದಿದ್ದ, ರಸ್ತೇಲ್ಲಿ ಕುದುರೆ ಕಾಲಿಗೆ ಸಿಕ್ಕ.’ ಯಾರೋ ಒಬ್ಬ ಕೂಗಿ ಹೇಳಿದ. ಕ್ಯಾತರೀನಳ ಮುಖದ ಬಣ್ಣ ಹಾರಿತ್ತು. ಸುಮ್ಮನೆ ನಿಂತು ಕಷ್ಟ ಪಟ್ಟು ಉಸಿರಾಡುತ್ತಿದ್ದಳು. ಮಕ್ಕಳು ಪೂರಾ ಭಯಬಿದ್ದಿದ್ದವು. ಪುಟ್ಟ ಲೀಡಾ ಅಳುತ್ತ ಓಡಿಹೋಗಿ ಪೋಲ್ಯಾಳನ್ನು ತಬ್ಬಿಕೊಂಡು ಗಡಗಡ ನಡುಗುತ್ತಿದ್ದಳು.

ಮಾರ್ಮೆಲಡೋವ್‍ ನನ್ನು ಮಲಗಿಸಿ ರಾಸ್ಕೋಲ್ನಿಕೋವ್ ಕ್ಯಾತರೀನ ಇದ್ದಲ್ಲಿಗೆ ಧಾವಿಸಿದ.

‘ದಮ್ಮಯ್ಯ, ಸಮಾಧಾನ ಮಾಡಿಕೊಳ್ಳಿ, ಹೆದರಬೇಡಿ!’ ಅವನು ತಣ್ಣನೆಯ ಸಮಾಧಾನದ ದನಿಯಲ್ಲಿ ಮಾತಾಡಿದ. ‘ಅವರು ರಸ್ತೆ ದಾಟುತ್ತಿದ್ದರು, ಸಾರೋಟಿಗೆ ಸಿಕ್ಕಿದರು. ಚಿಂತೆ ಮಾಡಬೇಡಿ, ಎಚ್ಚರ ಆಗತ್ತೆ ಅವರಿಗೆ. ಅವರನ್ನ ಇಲ್ಲಿಗೆ ಕರೆದುಕೊಂಡು ಬನ್ನಿ ಅಂತ ನಾನೇ ಹೇಳಿದೆ.… ಅವತ್ತೊಂದಿನ ಬಂದಿದ್ದೆ, ನೆನಪಿರಬಹುದು ನಿಮಗೆ… ಅವರಿಗೆ ಎಚ್ಚರ ಆಗತ್ತೆ, ನಾನು ದುಡ್ಡುಕೊಡತೇನೆ.’

‘ಯಾವತ್ತೋ ಆಗಬೇಕಾಗಿತ್ತು, ಇವತ್ತಾಯಿತು!’ ಅಂದಳು ಕ್ಯಾತರೀನ ಕುಸಿದ ದನಿಯಲ್ಲಿ. ಗಂಡನ ಹತ್ತಿರಕ್ಕೆ ಹೋದಳು. ಆಘಾತದ ಸುದ್ದಿ ಕೇಳಿದ ತಕ್ಷಣ ಎಚ್ಚರ ತಪ್ಪಿ ಬೀಳುವ ಹೆಂಗಸರಂಥವಳಲ್ಲ ಈಕೆ ಅನ್ನುವುದು ರಾಸ್ಕೋಲ್ನಿಕೋವ್‍ ಗೆ ಗೊತ್ತಾಯಿತು. ಗಾಯಾಳುವಿನ ತಲೆಯ ಕೆಳಕ್ಕೆ ತಟ್ಟನೆ ದಿಂಬನ್ನು ತಂದಿಟ್ಟಳು. ಈ ಯೋಚನೆ ಕೂಡ ಇನ್ನೂ ಅಲ್ಲಿ ಯಾರಿಗೂ ಬಂದಿರಲಿಲ್ಲ. ಕ್ಯಾತರೀನ ತನ್ನ ಸ್ಥಿಮಿತ ಕಳಕೊಳ್ಳದೆ ಅವನ ಉಡುಪು ತೆಗೆದು, ಮೈಯನ್ನೆಲ್ಲ ತಡವಿ, ತಡಕಿ ಪರೀಕ್ಷೆ ಮಾಡಿದಳು. ತನ್ನನ್ನೇ ಮರೆತಿದ್ದಳು, ನಡುಗುವ ತುಟಿಯನ್ನು ಬಲವಾಗಿ ಕಚ್ಚಿ ಹಿಡಿದು, ಇನ್ನೇನು ಎದೆಯಾಳದಿಂದ ಉಕ್ಕಿ ಬರುವ ಅಳುವಿನ ಸ್ಫೋಟವನ್ನು ತಡೆದಿಟ್ಟಿದ್ದಳು.

ಇಷ್ಟು ಹೊತ್ತಿಗೆ ರಾಸ್ಕೋಲ್ನಿಕೋವ್ ಯಾರನ್ನೋ ಪುಸಲಾಯಿಸಿ ಡಾಕ್ಟರನ್ನು ಕರೆದುಕೊಂಡು ಬರಲು ಕಳಿಸಿದ್ದ. ಎರಡೇ ಮನೆಗಳಾಚೆ ಡಾಕ್ಟರನೊಬ್ಬನಿದ್ದ. ‘ಡಾಕ್ಟರಿಗೆ ಹೇಳಿಕಳಿಸಿದೇನೆ, ಯೋಚನೆ ಮಾಡಬೇಡಿ’, ಎಂದು ಕ್ಯಾತರೀನ ಇವಾನೋವ್ನಾಗೆ ಮತ್ತೆ ಮತ್ತೆ ಹೇಳುತ್ತಲೇ ಇದ್ದ. ‘ಯೋಚನೆ ಮಾಡಬೇಡಿ, ದುಡ್ಡು ನಾನು ಕೊಡತೇನೆ. ಸ್ವಲ್ಪ ನೀರು ಸಿಗುತ್ತಾ… ಕರ್ಚೀಫೋ ಟವಲೋ ಏನಾದರೂ ಕೊಡಿ. ಬೇಗ. ಇವನಿಗೆ ಎಷ್ಟು ಗಾಯ ಆಗಿದೆಯೊ ಗೊತ್ತಿಲ್ಲ. ಗಾಯ ಆಗಿದೆ ಅಷ್ಟೆ, ಪ್ರಾಣ ಹೋಗಿಲ್ಲ… ಧೈರ್ಯವಾಗಿರಿ, ಡಾಕ್ಟರು ಬಂದು ನೋಡತಾರೆ…’ ಅನ್ನುತ್ತಿದ್ದ.

ಕ್ಯಾತರೀನ ಕಿಟಕಿಯ ಹತ್ತಿರಕ್ಕೆ ಓಡಿದಳು. ಅಲ್ಲಿ, ಮುರುಕಲು ಕುರ್ಚಿಯ ಮೇಲೆ ಮಡಕೆಯಲ್ಲಿ ನೀರಿತ್ತು. ಅದು ಮಕ್ಕಳ ಮಾರ್ಮೆಲಡೋವ್‌ ನ ಬಟ್ಟೆಗಳನ್ನೆಲ್ಲ ರಾತ್ರಿ ಒಗೆಯುವುದಕ್ಕೆ ಬಳಸಲು ಇಟ್ಟಿದ್ದ ನೀರು. ರಾತ್ರಿಯ ಹೊತ್ತಿನಲ್ಲಿ ಬಟ್ಟೆ ಒಗೆಯುವ ಕೆಲಸವನ್ನು ವಾರಕ್ಕೆ ಎರಡು ಸಲ, ಒಮ್ಮೊಮ್ಮೆ ಮೂರು ಸಲ ಕ್ಯಾತರೀನ ಸ್ವತಃ ಕೈಯಾರೆ ಮಾಡುತ್ತಿದ್ದಳು. ಯಾಕೆಂದರೆ ಮನೆಯವರು ಯಾರಿಗೂ ಬದಲಾಯಿಸಲು ಇನ್ನೊಂದು ಜೊತೆ ಬಟ್ಟೆ ಇರದ ಸ್ಥಿತಿ ಎಂದೋ ಬಂದಿತ್ತು. ಮನೆಯ ಒಬ್ಬೊಬ್ಬರ ಹತ್ತಿರವೂ ಇದ್ದದ್ದು ಒಂದೊಂದೇ ಬಟ್ಟೆ. ಕೊಳಕನ್ನು ಸಹಿಸದ ಕ್ಯಾತರೀನ ತನ್ನ ಮೈಯನ್ನೇ ಸವೆಸಿಕೊಂಡು ತನ್ನಲ್ಲಿರುವ ಶಕ್ತಿಯನ್ನೂ ಮೀರಿ ಕೆಲಸಮಾಡುತ್ತ ರಾತ್ರಿಯ ಹೊತ್ತಿನಲ್ಲಿ ಎಲ್ಲರೂ ಮಲಗಿದ ಮೇಲೆ ಮನೆಯವರ ಬಟ್ಟೆ ಒಗೆದು ಒಣಹಾಕುತ್ತಿದ್ದಳು. ಮನೆಯವರು ಬೆಳಗ್ಗೆ ಎದ್ದು ಕೊಳಕು ಬಟ್ಟೆ ತೊಡುವುದಕ್ಕಿಂತ ಒಗೆದ ಬಟ್ಟೆ ತೊಡಬೇಕು ಎಂದು ಬಯಸುತ್ತಿದ್ದಳು.

ನೀರಿನ ಮಡಕೆಯನ್ನು ತಾನೇ ಎತ್ತಿಕೊಂಡು ರಾಸ್ಕೋಲ್ನಿಕೋವ್‍ ಗೆ ತಂದುಕೊಡಲು ಪ್ರಯತ್ನಪಟ್ಟಳು. ಭಾರ ತಾಳದೆ ಇನ್ನೇನು ಬಿದ್ದೇಹೋಗುತ್ತಿದ್ದಳು. ಅಷ್ಟು ಹೊತ್ತಿಗೆ ಅವನು ಟವಲನ್ನು ಪತ್ತೆ ಮಾಡಿ, ಅದರಿಂದ ವದ್ದೆಮಾಡಿ, ಮಾರ್ಮೆಲಡೋವ್‌ ನ ರಕ್ತಸಿಕ್ತ ಮುಖವನ್ನು ಒರೆಸುತ್ತಿದ್ದ. ಕ್ಯಾತರೀನ ಮಡಕೆ ಅಲ್ಲೇ ಇರಿಸಿ ಕೈಯಲ್ಲಿ ಎದೆಯನ್ನು ಒತ್ತಿಕೊಳ್ಳುತ್ತ ನಿಂತಳು. ಅವಳಿಗೇ ಉಪಚಾರ ಮಾಡುವವರು ಯಾರಾದರೂ ಬೇಕಾಗಿತ್ತು. ಗಾಯಗೊಂಡ ಮನುಷ್ಯನನ್ನು ಮನೆಗೆ ಕರಕೊಂಡು ಬನ್ನಿ ಎಂದು ಒತ್ತಾಯ ಮಾಡಿದ್ದು ತಪ್ಪಾಯಿತೇನೋ ಅನಿಸುವುದಕ್ಕೆ ಶುರುವಾಯಿತು ರಾಸ್ಕೋಲ್ನಿಕೋವ್‍ ಗೆ. ಪೋಲೀಸನೂ ಗೊಂದಲಗೊಂಡಿದ್ದ.

‘ಪೋಲ್ಯಾ! ಓಡು, ಬೇಗ ಹೋಗಿ ಸೋನ್ಯಾಗೆ ಹೇಳಿ ಕರಕೊಂಡು ಬಾ. ಅವಳು ಸಿಗದೆ ಇದ್ದರೆ ಚಿಂತೆ ಇಲ್ಲ, ಅಲ್ಲಿರೋರಿಗೆ ಹೇಳು, -ಸೋನ್ಯಾ ಅಪ್ಪನಿಗೆ ಆಕ್ಸಿಡೆಂಟಾಗಿದೆ, ಸಾರೋಟಿಗೆ ಸಿಕ್ಕಿ ಏಟಾಗಿದೆ, ಬೇಗ, ಮನೆಗೆ ಬರಬೇಕಂತೆ- ಅಂತ ಹೇಳು. ಬೇಗ ಹೋಗು, ಪೋಲ್ಯ! ಇಗೋ, ತಲೆಗೆ ಕರ್ಚೀಫು ಕಟ್ಟಿಕೋ!’

‘ಜೋರಾಗಿ ಓಡು!’ ಕುರ್ಚಿಯ ಮೇಲೆ ಕೂತಿದ್ದ ಹುಡುಗ ತಟ್ಟನೆ ಕೂಗಿದ. ಕೂಗಿದವನೇ ಮತ್ತೆ ಮೊದಲಿನ ಹಾಗೆ ಬೆನ್ನು ನೆಟ್ಟಗೆ ಮಾಡಿಕೊಂಡು, ಕಣ್ಣು ಅಗಲವಾಗಿ ಬಿಟ್ಟುಕೊಂಡು, ಹಿಮ್ಮಡಿ ಜೋಡಿಸಿ ಹೆಬ್ಬೆರಳುಗಳನ್ನು ದೂರ ಇರಿಸಿಕೊಂಡು ಸುಮ್ಮನೆ ಕೂತ.

ಅಷ್ಟು ಹೊತ್ತಿಗೆ ರೂಮಿನಲ್ಲಿ ಜನ ಕಿಕ್ಕಿರಿದಿತ್ತು. ಸೇಬು ಹಣ್ಣು ಬೀಳುವಷ್ಟೂ ಜಾಗ ಇರಲಿಲ್ಲ. ಎಲ್ಲ ಪೋಲೀಸರೂ ಹೋಗಿ, ಒಬ್ಬ ಮಾತ್ರ ಸ್ವಲ್ಪ ಹೊತ್ತು ಅಲ್ಲೇ ಇದ್ದು ಜನರ ಗುಂಪನ್ನು ಹತೋಟಿಯಲ್ಲಿಡಲು ಪ್ರಯತ್ನಪಡುತ್ತಿದ್ದ. ಮಹಡಿಯ ಮೆಟ್ಟಿಲೇರಿ ಒಳಕ್ಕೆ ಬರುವವರನ್ನು ‘ಹಿಂದೆ ಹೋಗಿ,’ ಎಂದು ದಬ್ಬುತ್ತಿದ್ದ. ಆ ಜನರ ಬದಲಾಗಿ ಈಗ ಒಳಕೋಣೆಗಳಲ್ಲಿದ್ದ ಮಿಕ್ಕ ಬಾಡಿಗೆದಾರರು ಬಾಗಿಲಲ್ಲಿ ಗುಂಪು ಕೂಡಿದ್ದರು. ನಿಧಾನವಾಗಿ ರೂಮಿನೊಳಕ್ಕೇ ಬಂದು ತುಂಬಿಕೊಂಡರು. ಕ್ಯಾತರೀನ ಕನಲಿದಳು.

‘ಅವನು ತಣ್ಣಗೆ ಸಾಯೋದಕ್ಕಾದರೂ ಬಿಡೀ,’ ಎಂದು ಜೋರಾಗಿ ಕಿರುಚಿದಳು. ‘ನಿಮಗೆಲ್ಲ ಇದು ಬಿಟ್ಟಿ ನಾಟಕ ನೋಡಿದ ಹಾಗೆ! ಸಿಗರೇಟು ಸೇದಿಕೊಂಡು, ತಲೆ ಮೇಲೆ ಹ್ಯಾಟು ಹಾಕಿಕೊಂಡು, ಖೊಕ್, ಖೊಕ್, ಅಗೋ ಅಲ್ಲಿ ಹ್ಯಾಟು ಹಾಕ್ಕೊಂಡು ಒಬ್ಬ ನಿಂತಿದಾನೆ. ಹೋಗೀ! ಸತ್ತವರಿಗೆ ಸ್ವಲ್ಪ ಗೌರವ ಕೊಡೀ!’

ಕೆಮ್ಮು ಅವಳ ಉಸಿರು ಕಟ್ಟಿಸಿತು. ಆದರೂ ಅವಳ ಮಾತಿನ ಪೆಟ್ಟು ಪರಿಣಾಮ ಬೀರಿತ್ತು. ಅವಳ ಕೋಪ ಭಯವನ್ನೂ ಹುಟ್ಟಿಸಿತ್ತು. ಜನ ಒಬ್ಬೊಬ್ಬರಾಗಿ ಬಾಗಿಲಿನಿಂದ ಹಿಂದಕ್ಕೆ ಸರಿದರು. ಆದರೆ ತಾವು ನೆರೆಯವರೊಬ್ಬರಿಗೆ ಅಪಘಾತವಾದಾಗ ಅವರ ಆತ್ಮೀಯರೂ ಸೇರಿದ ಹಾಗೆ ಎಲ್ಲರಲ್ಲೂ ಹುಟ್ಟುವ ಕರುಣೆ ಸಹಾನುಭೂತಿಗಳ ಜೊತೆಗೇ ಒಂದು ಥರ ತೃಪ್ತಿಯೂ ಇರುತ್ತದಲ್ಲ, ಅಂಥ ‘ನಾನೂ ನೋಡಿದೆ, ಅಯ್ಯೋ ಅಂದೆ’ ಎಂಬ ತೃಪ್ತಿಯೂ ಜನರಲ್ಲಿತ್ತು. ಬಾಗಿಲ ಹೊರಗೆ ಆಸ್ಪತ್ರೆಗೆ ಹೋದರೆ ಹೇಗೆ, ಗಾಯಗೊಂಡವರಿಗೆ ಸುಮ್ಮಸುಮ್ಮನೆ ತೊಂದರೆ ಕೊಡಬಾರದು ಅನ್ನುವ ರೀತಿಯ ಮಾತು ಗಟ್ಟಿಯಾಗಿ ಕೇಳಿಸಿದವು.

‘ನೆಮ್ಮದಿಯಾಗಿ ಸಾಯೋಕೆ ಬಿಡೀ!’ ಅನ್ನುತ್ತ ಕ್ಯಾತರೀನ ಬಾಗಿಲ ಹತ್ತಿರಕ್ಕೆ ಧಾವಿಸಿದಳು. ಜನರನ್ನ ಬೈಯುವುದಕ್ಕೆ ಶುರುಮಾಡುವುದರಲ್ಲಿದ್ದಳು. ಅಷ್ಟರಲ್ಲಿ ಮನೆಯ ಓನರನ ಹೆಂಡತಿ ಶ್ರೀಮತಿ ಲಿಪ್ಪರ್‍ ವರ್ಶೆಲ್ ಅಪಘಾತದ ಸುದ್ದಿ ಕೇಳಿ ಓಡಿ ಬಂದವಳು, ಜನರ ಗುಂಪನ್ನು ಹತೋಟಿಗೆ ತರಲು ಪ್ರಯತ್ನಿಸುತಿದ್ದವಳು ಎದುರಾದಳು. ಆಕೆ ಜಗಳಗಂಟಿಯಾದ ಅಸಡ್ಡಾಳ ಜರ್ಮನ್ ಹೆಂಗಸು.

‘ಹಯ್ಯೋ ದೇವರೇ!’ ಅನ್ನುತ್ತ ಜೋರಾಗಿ ಕೈ ತಟ್ಟುತ್ತ, ‘ನಿನ್ನ ಖುಡುಕ ಗಂಡ ಖುದುರೆ ಖಾಲಿಗೆ ಸಿಖ್ಖನಂತೆ. ಹಾಸ್ಪತ್ರೆಗೆ ಓಗು. ನಾನು, ಹೋನರಮ್ಮ ಹೇಳತಾ ಹಿದೀನಿ!…’ ಅಂದಳು.

‘ಅಮಾಲಿಯ ಲುಡ್ವಿಗೋವ್ನ! ಮಾತಿನ ಮೇಲೆ ಗ್ನಾನ ಇರಲಿ!’ ಸಿಟ್ಟಿನಿಂದ ಅಂದಳು ಕ್ಯಾತರೀನ. (ಓನರಮ್ಮನ ಹತ್ತಿರ ಅವಳ ಯಾವಾಗಲೂ ಸಿಡುಕಿಕೊಂಡೇ ಮಾತಾಡುತ್ತಿದ್ದಳು. ಅವಳು ನನ್ನ ಸರಿಸಮಾನಳಲ್ಲ, ಅವಳನ್ನು ಎಲ್ಲಿಡಬೇಕೋ ಅಲ್ಲಿಟ್ಟೆ ಅನ್ನುವ ಖುಷಿ ಅವಳಿಗಾಗುತ್ತಿತ್ತು.) ‘ಅಮಾಲಿಯ ಲುಡ್ವಿಗೋವ್ನಾ….’

‘ಸಾವಿರ ಸಾರಿ ಏಳಿದೀನಿ, ನನ್ನ ಅಮಾಲಿಯ ಲುಡ್ವಿಗೋವ್ನ ಅನ್ನಬೇಡ ಅಂತ. ನಾನು ಅಮಾಲ್ ಇವಾನ್, ಅಮಾಲ್ ಇವಾನ್!’
‘ನೀನು ಅಮಾಲ್ ಇವಾನ್ ಅಲ್ಲ, ಅಮಾಲಿಯ ಇವಾನೋವ್ನಾ ಅಲ್ಲ. ನಿನ್ನ ಹೊಗಳುಭಟ್ಟ ಇದಾನಲ್ಲ, ಇವಾಗ ಬಾಗಿಲ ಹತ್ತಿರ ನಗತಾ ನಿಂತಿದಾನಲ್ಲ, ಆ ಲೆಬೆಝ್ಯತ್ನಿಕೋವ್, ಅವನ ಥರ ಅಲ್ಲ ನಾನು. (ಬಾಗಿಲಾಚೆ ನಿಜವಾಗಲೂ ಯಾರೋ ನಗುತ್ತಿದ್ದರು, ಇನ್ನು ಯಾರೋ ‘ಕೋಳಿಜಗಳ’ ಅನ್ನುತಿದ್ದರು.) ನಾನಂತೂ ನಿನ್ನ ಯಾವಾಗಲೂ ಹಾಗೇ ಕರೆಯೋದು, ಅಮಾಲಿಯ ಲುಡ್ವಿಗೋವ್ನ. ನಿನಗೆ ಯಾಕೆ ಇಷ್ಟ ಆಗಲ್ಲವೋ ಕಾಣೆ. ನಮ್ಮ ಯಜಮಾನರಿಗೆ ಏನಾಗಿದೆಯೋ ನೀನೇ ನೋಡತ ಇದೀಯ. ಯಾರನ್ನೂ ಒಳಕ್ಕೆ ಬಿಡಬೇಡ! ಇಲ್ಲಾಂದರೆ, ಈಗಲೇ ಹೇಳಿರತೇನೆ, ನಾಳೆ ಸೀದಾ ಗೌರ್ನರ್ ಹತ್ತಿರ ಹೋಗಿ ದೂರು ಹೇಳತೇನೆ. ನಾನು ಹುಡುಗಿಯಾಗಿದ್ದಾಗಿನಿಂದ ಪ್ರಿನ್ಸ್ ಅವರಿಗೆ ನನ್ನ ಪರಿಚಯ ಇದೆ. ನನ್ನ ಗಂಡನಿಗೆ ಎಷ್ಟೊಂದು ಸಲ ಸಹಾಯ ಮಾಡಿದಾರೆ. ನನ್ನ ಗಂಡನಿಗೂ ಅವರಿಗೂ ಇರುವ ಸ್ನೇಹ ಇಲ್ಲಿ ಎಲ್ಲಾರಿಗೂ ಗೊತ್ತು. ಕುಡಿಯು ಚಟ ಇದೆ ಅಂತೇಳಿ ಗೌರ್ನರ್ ಕೊಡಿಸಿದ ಕೆಲಸಾನ ನಮ್ಮನೆಯವರೇ ಬಿಟ್ಟರು. ಈಗ (ರಾಸ್ಕೋಲ್ನಿಕೋವ್‍ ನನ್ನು ತೋರಿಸುತ್ತಾ) ಈ ಹುಡುಗ ನಮಗೆ ಸಹಾಯಮಾಡತಾ ಇದಾನೆ. ಇವನಿಗೆ ಒಳ್ಳೆ ಸಂಪಾದನೆ ಇದೆ. ದೊಡ್ಡದೊಡ್ಡವರೆಲ್ಲ ಗೊತ್ತು ಇವನಿಗೆ. ನಮ್ಮ ಯಜಮಾನರು ಇವನನ್ನು ಮಗುವಾಗಿದ್ದಾಗಿನಿಂದ ನೋಡಿದಾರೆ. ನೋಡು, ಅಮಾಲಿಯ ಲುಡ್ವಿಗೋವ್ನಾ…’

ಕ್ಯಾತರೀನ ಇದನ್ನೆಲ್ಲ ವೇಗವಾಗಿ ಬಡಬಡಿಸಿದಳು. ಮಧ್ಯೆ ಮಧ್ಯೆ ಕೆಮ್ಮು ಬಂದು ಅವಳ ವಾಗ್ಝರಿಗೆ ಅಡ್ಡಿಮಾಡುತ್ತಿತ್ತು. ಅಷ್ಟು ಹೊತ್ತಿಗೆ, ಸಾಯುತ್ತ ಬಿದ್ದಿದ್ದವನಿಗೆ ಎಚ್ಚರ ಬಂದಿತ್ತು, ನರಳಿದ. ಕ್ಯಾತರೀನ ಓಡಿಹೋಗಿ ಅವನ ಪಕ್ಕದಲ್ಲಿ ನಿಂತಳು. ಕಣ್ಣು ತೆರೆದ, ಯಾರೂ ಗುರುತು ಸಿಗಲಿಲ್ಲ, ಏನೂ ಅರ್ಥವಾಗಲಿಲ್ಲ. ರಾಸ್ಕೋಲ್ನಿಕೋವ್‍ ನನ್ನು ದಿಟ್ಟಿಸಿದ. ಭಾರವಾಗಿ, ದೀರ್ಘವಾಗಿ ತಡೆತಡೆದು ಉಸಿರೆಳೆದುಕೊಂಡ. ಬಾಯಿಯ ತುದಿಯಲ್ಲಿ ರಕ್ತ ಜಿನುಗುತ್ತಿತ್ತು. ಹಣೆ ಬೆವೆತಿತ್ತು. ರಾಸ್ಕೋಲ್ನಿಕೋವ್‍ ನ ಗುರುತು ಸಿಗಲಿಲ್ಲ. ಆತಂಕಪಡುತ್ತ ಸುತ್ತಲೂ ನೋಡಿದ. ಕ್ಯಾತರೀನ ದುಃಖದ ಜೊತೆಗೆ ಕಾಠಿಣ್ಯವೂ ಬೆರೆತ ದೃಷ್ಟಿಯಿಂದ ಅವನನ್ನು ನೋಡಿದಳು. ಅವಳ ಕಣ್ಣಲ್ಲಿ ನೀರಾಡುತ್ತಿತ್ತು.

‘ದೇವರೇ, ಎದೆಯೆಲ್ಲ ಗಾಯ, ಎಷ್ಟೊಂದು ರಕ್ತ!’ ಅನ್ನುತ್ತ ಉಸಿರುಗರೆದಳು. ‘ಅಂಗಿ ಬಿಚ್ಚಬೇಕು, ಸ್ವಲ್ಪ ಪಕ್ಕಕ್ಕೆ ಹೊರಳಿಕೋ’ ಎಂದಳು ಗಂಡನಿಗೆ.

ಮಾರ್ಮೆಲಡೋವ್‌ ಗೆ ಅವಳ ಗುರುತು ಸಿಗಲಿಲ್ಲ.

‘ಪಾದ್ರೀ!’ ಅಂದ. ದನಿ ಗೊಗ್ಗರಾಗಿತ್ತು.

ಕ್ಯಾತರೀನ ಕಿಟಕಿಯ ಹತ್ತಿರ ಹೋಗಿ, ಕಿಟಕಿಯ ಚೌಕಟ್ಟಿಗೆ ತಲೆ ಆನಿಸಿ, ಹತಾಶಳಾಗಿ ‘ಈ ಹಾಳು ಜೀವನಾನಾ ಬಡಿಯಾ!’ ಅಂದಳು.

ಸಾಯುತ್ತಿರುವ ಮನುಷ್ಯ ಇನ್ನೊಂದು ಕ್ಷಣ ಬಿಟ್ಟು ಮತ್ತೆ, ‘ಪಾದ್ರೀ!’ ಅಂದ.

‘ಕರಕೊಂಡು ಬರಕ್ಕೆ ಹೋಗಿದಾರೆ,’ ಕ್ಯಾತರೀನ ಘಟ್ಟಿಸಿ ಹೇಳಿದಳು. ಮಾರ್ಮೆಲಡೋವ್ ಆ ದನಿಗೆ ವಿಧೇಯನಾಗಿ ಸುಮ್ಮನಾಗಿಬಿಟ್ಟ. ಬೇಗುದಿಪಡುತ್ತ ಅತ್ತಿತ್ತ ಕಣ್ಣಾಡಿಸಿ ಅವಳನ್ನು ಹುಡುಕಿದ. ಅವಳು ವಾಪಸು ಹೋಗಿ ಅವನ ತಲೆಯ ಬದಿಯಲ್ಲಿ ನಿಂತಳು. ಅವನಿಗೆ ಸಮಾಧಾನವಾದ ಹಾಗೆ ಕಂಡಿತು, ಸ್ವಲ್ಪ ಹೊತ್ತು, ಅಷ್ಟೇ. ಅವನ ಕಣ್ಣು ಪ್ರೀತಿಯ ಮಗಳು ಲೀಡಾಳನ್ನು ಅರಸಿತು. ಅವಳು ಮೂಲೆಯಲ್ಲಿ ನಿಂತಿದ್ದಳು. ನಡುಗುತ್ತ ಬೆರಗುಪಡುತ್ತ, ಬಾಲಿಶ ಮುಗ್ಧತೆಯಲ್ಲಿ ಅವನನ್ನೇ ಗಮನಿಸುತ್ತ ಇದ್ದಳು.

‘ಆ… ಆ…’ ಅನ್ನುತ್ತ ಅವನು ವ್ಯಾಕುಲನಾಗಿ ಏನೋ ಹೇಳಲು ಪ್ರಯತ್ನಪಡುತ್ತಿದ್ದ.

‘ಈಗಿನ್ನೇನು?’ ಕ್ಯಾತರೀನ ಜೋರಾಗಿ ಕೇಳಿದಳು.

‘ಬರಿಗಾಲು! ಬರಿಗಾಲು! ವಿಕಲವಾದ ನೋಟವನ್ನು ಮಗುವಿನ ಕಾಲಿನತ್ತ ತಿರುಗಿಸಿ ಮಾರ್ಮೆಲಡೋವ್ ಗೊಣಗಿದ.

‘ಸುಮ್ಮನೆ ಬಿದ್ದುಕೋ! ಅವಳು ಯಾಕೆ ಬರಿಗಾಲು ಅನ್ನೋದು ನಿನಗೇ ಗೊತ್ತು,’ ಎಂದು ಕ್ಯಾತರೀನ ಗದರಿದಳು.

‘ಸದ್ಯ, ದೇವರೇ! ಡಾಕ್ಟರು ಬಂದರು!’ ರಾಸ್ಕೋಲ್ನಿಕೋವ್ ಖುಷಿಯಾಗಿ ಅಂದ.

ಒಳಬಂದವನು ಅಚ್ಚುಕಟ್ಟಾಗಿ ಉಡುಪು ತೊಟ್ಟ, ಪುಟ್ಟ ಆಕಾರದ ಜರ್ಮನ್ ಮುದುಕ. ಸಂಶಯದ ನೋಟವನ್ನು ಸುತ್ತಲೂ ಬೀರುತ್ತ ರೋಗಿಯ ಹತ್ತಿರ ಹೋದ. ಅವನ ನಾಡಿ ನೋಡಿದ. ತಲೆಯನ್ನು ಗಮನವಿಟ್ಟು ಪರಿಶೀಲನೆ ಮಾಡಿದ. ಕ್ಯಾತರೀನಳ ಸಹಾಯದಿಂದ ರೋಗಿಯ ಅಂಗಿಯ ಗುಂಡಿ ಬಿಚ್ಚಿದ. ಇಡೀ ಅಂಗಿ ರಕ್ತದಲ್ಲಿ ತೊಯ್ದಿತ್ತು. ಎದೆಗೆ ಗಾಯಗಳಾಗಿ ಜಜ್ಜಿ ಮೂಳೆ ಮುರಿದು ಛಿದ್ರವಾಗಿತ್ತು. ಎಡಭಾಗದ ಕೆಲವು ಪಕ್ಕೆಲುಬು ಮುರಿದಿದ್ದವು. ಎದೆಯಿಂದ ಸ್ವಲ್ಪ ಮೇಲೆ, ಎಡಭಾಗದಲ್ಲಿ ಭಯ ಹುಟ್ಟಿಸುವಂಥ ಹಳದಿಮಿಶ್ರಿತ ಕಪ್ಪು ಕಲೆ ಕಾಣುತ್ತಿತ್ತು. ಕುದುರೆಯ ಗೊರಸಿನ ಗಾಯ ಅದು. ಡಾಕ್ಟರು ಹುಬ್ಬು ಗಂಟಿಕ್ಕಿದ. ಗಾಯಾಳು ಗಾಲಿಗೆ ಸಿಕ್ಕಿದ್ದ, ಗಾಲಿಯೊಡನೆ ಅವನೂ ಸುತ್ತುತ್ತಿರುವ ಹಾಗೆ ಸುಮಾರು ಮೂವತ್ತು ಗಜದಷ್ಟು ದೂರ ರಸ್ತೆಯ ಮೇಲೆ ಗಾಡಿ ಹೋಗಿತ್ತು ಎಂದು ಪೋಲೀಸಿನವನು ಹೇಳಿದ.

‘ಇಷ್ಟು ಬೇಗ ಪ್ರಜ್ಞೆ ಬಂದದ್ದೇ ಆಶ್ಚರ್ಯ,’ ಡಾಕ್ಟರು ಮೆಲುದನಿಯಲ್ಲಿ ರಾಸ್ಕೋಲ್ನಿಕೋವ್‍ ಗೆ ಹೇಳಿದ.

‘ಏನನ್ನಿಸತ್ತೆ, ನಿಮಗೆ?’ ರಾಸ್ಕೋಲ್ನಿಕೋವ್ ಕೇಳಿದ.

‘ಉಳಿಯಲ್ಲ. ಇನ್ನೇನು ಸಾಯತಾನೆ.’

‘ಚಾನ್ಸೇ ಇಲ್ಲವಾ?’

‘ಏನೇನೂ ಇಲ್ಲ. ಕೊನೇ ಉಸಿರು ಎಳೀತಾನೆ, ಈಗ… ತಲೆಗೆ ದೊಡ್ಡ ಗಾಯ ಆಗಿದೆ, ಅದೇ ಅಪಾಯ… ಹಮ್… ಸ್ವಲ್ಪ ಬ್ಲಡ್ ಲೆಟಿಂಗ್ ಮಾಡಿ ನೋಡಬಹುದು… ಆದರೂ… ಏನೂ ಉಪಯೋಗ ಇಲ್ಲ… ಇನ್ನೈದು ನಿಮಿಷ ಬದುಕಿದರೆ ಅದೇ ಹೆಚ್ಚು.’

‘ಬ್ಲಡ್ ಲೆಟಿಂಗ್ ಮಾಡಿ, ಹಾಗಾದರೆ!’

‘ಮಾಡಬಹುದು… ಮೊದಲೇ ಹೇಳಿರತೇನೆ, ಅದರಿಂದ ಏನೂ ಉಪಯೋಗ ಆಗಲ್ಲ.’

ಹೆಜ್ಜೆಗಳ ಸದ್ದು ಕೇಳಿಸಿತು. ಬಾಗಿಲ್ಲಿ ಸೇರಿದ ಜನ ಪಕ್ಕಕ್ಕೆ ಸರಿದು ದಾರಿ ಮಾಡಿಕೊಟ್ಟರು. ಬಿಳಿಗೂದಲಿನ ವೃದ್ಧ ಪಾದ್ರಿ ಬಂದ. ಅಂತ್ಯ ಕರ್ಮದ ವಸ್ತುಗಳನ್ನು ತಂದಿದ್ದ. ಇಬ್ಬರು ಪೋಲಿಸರಲ್ಲಿ ಒಬ್ಬನು ಹೋಗಿ ಕರೆದುಕೊಂಡು ಬಂದಿದ್ದ. ಡಾಕ್ಟರು ತಕ್ಷಣ ಪಕ್ಕಕ್ಕೆ ಸರಿದು ಪಾದ್ರಿಗೆ ಜಾಗಮಾಡಿಕೊಟ್ಟ. ಡಾಕ್ಟರು-ಪಾದ್ರಿ ಇಬ್ಬರೂ ಅರ್ಥಪೂರ್ಣವಾಗಿ ಒಬ್ಬರನ್ನೊಬ್ಬರು ನೋಡಿಕೊಂಡರು. ಇನ್ನೂ ಸ್ವಲ್ಪ ಹೊತ್ತು ಇರಿ ಎಂದು ರಾಸ್ಕೋಲ್ನಿಕೋವ್ ಡಾಕ್ಟರನ್ನು ಬೇಡಿಕೊಂಡ. ಡಾಕ್ಟರು ಭುಜ ಕುಣಿಸಿ, ಅಲ್ಲೇ ಉಳಿದ.

ಎಲ್ಲರೂ ದೂರ ಸರಿದರು. ಪಾಪನಿವೇದನೆಯ ಕ್ರಿಯೆ ಸ್ವಲ್ಪದರಲ್ಲೇ ಮುಗಿಯಿತು. ಸಾಯುತ್ತಿರುವವನಿಗೆ ಏನೊಂದೂ ಅರ್ಥವಾದಂತಿರಲಿಲ್ಲ, ಏನೂ ಮಾತಾಡಲೂ ಆಗುತ್ತಿರಲಿಲ್ಲ, ಸುಮ್ಮನೆ ಗೊರಗೊರ ಸದ್ದು ಮಾಡುತ್ತಿದ್ದ. ಕ್ಯಾತರೀನ ಪುಟ್ಟ ಹುಡುಗಿ ಲಿಡಿಯಾಳನ್ನು ಕರೆದುಕೊಂಡು, ಕುರ್ಚಿಯ ಮೇಲಿದ್ದ ಹುಡುಗನ್ನು ಇಳಿಸಿಕೊಂಡು ಸ್ಟವ್ ಬಳಿಯ ಮೂಲೆಗೆ ಹೋಗಿ, ಮೊಳಕಾಲೂರಿ ಕೂತು, ಮಕ್ಕಳನ್ನೂ ತನ್ನೆದುರಿಗೆ ಹಾಗೇ ಕೂರಿಸಿಕೊಂಡಳು. ಪುಟ್ಟ ಹುಡುಗಿ ಗಡಗಡ ನಡುಗುತ್ತಿದ್ದಳು. ಹುಡುಗ ಪುಟ್ಟ ಮೊಳಕಾಲೂರಿ, ಬೆನ್ನು ನೆಟ್ಟಗೆ ಮಾಡಿಕೊಂಡು ಕೂತು, ಕೈಯಲ್ಲಿ ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಂಡು, ತಲೆಯನ್ನು ನೆಲಕ್ಕೆ ಡಿಕ್ಕಿಹೊಡೆಸುತ್ತಿದ್ದ. ಹೀಗೆ ತಲೆ ಚಚ್ಚಿಕೊಳ್ಳುವುದರಿಂದ ಅವನಿಗೆ ಖುಷಿಯಾದಹಾಗಿತ್ತು. ಕ್ಯಾತರೀನ ತುಟಿ ಕಚ್ಚಿಕೊಳ್ಳುತ್ತ ಅಳು ತಡೆದಿದ್ದಳು. ಅವಳೂ ಪ್ರಾರ್ಥನೆ ಮಾಡುತ್ತಿದ್ದಳು. ಹುಡುಗನ ಭುಜದಿಂದ ಜಾರಿ ಹೋಗುತ್ತಿದ್ದ ಅಂಗಿಯನ್ನು ಆಗಾಗ ಮೇಲೆಳೆದು ಸರಿಮಾಡುತ್ತಿದ್ದಳು. ಕೂತಿದ್ದ ಹಾಗೇ ಪಕ್ಕಕ್ಕೆ ಬಗ್ಗಿ, ಬೀರುವಿನಿಂದ ಕರ್ಚೀಫು ತೆಗೆದು, ಮಗಳ ಬರಿ ಭುಜಗಳ ಮೇಲೆ ಮೇಲೆ ಹೊದಿಸಿದಳು. ಈ ಹೊತ್ತಿಗೆ ಒಳಗಿನ ಮನೆಗಳ ಜನ ಮತ್ತೆ ಇಣುಕಿ ನೋಡುತ್ತಿದ್ದರು, ಕೆಳ ಮಹಡಿಗಳವರು ಮೆಟ್ಟಿಲುಗಳ ಮೇಲೆ ಬಾಗಿಲವರೆಗೂ ದಟ್ಟೈಸಿದ್ದರು. ಯಾರೂ ಹೊಸ್ತಿಲು ದಾಟಿ ಒಳಕ್ಕೆ ಬರಲಿಲ್ಲ. ಇಡೀ ದೃಶ್ಯವನ್ನು ಒಂದು ತುಂಡು ಮೇಣದ ಬತ್ತಿ ಮಾತ್ರ ಬೆಳಗುತ್ತಿತ್ತು.

ಅಕ್ಕನನ್ನು ಕರೆಯಲು ಹೋಗಿದ್ದ ಪೋಲ್ಯಾ ಅಷ್ಟು ಹೊತ್ತಿಗೆ ಜನದ ಗುಂಪಿನಲ್ಲಿ ನುಸುಳಿಕೊಂಡು ತಲೆಬಾಗಿಲಿಗೆ ಬಂದಳು. ಜೋರಾಗಿ ಓಡಿಬಂದ್ದರಿಂದ ಏದುಸಿರು ಬಿಡುತಿದ್ದಳು, ತಲೆಗೆ ಸುತ್ತಿಕೊಂಡಿದ್ದ ಕರ್ಚೀಫು ತೆಗೆದು, ಅಮ್ಮ ಎಲ್ಲಿದ್ದಾಳೆಂದು ಕಣ್ಣಲ್ಲೇ ಹುಡುಕಿ, ಅವಳ ಹತ್ತಿರ ಹೋಗಿ, ‘ಬರತಾ ಇದಾಳೆ! ರಸ್ತೆಯಲ್ಲೇ ಸಿಕ್ಕಳು!’ ಅಂದಳು.. ಅಮ್ಮ ಅವಳನ್ನು ಎಳೆದು ತನ್ನ ಪಕ್ಕದಲ್ಲಿ ಮೊಳಕಾಲೂರಿ ಕೂರುವ ಹಾಗೆ ಮಾಡಿದಳು. ಜನದ ಮಧ್ಯೆ ಮೈಯೆಲ್ಲ ಹಿಂಡಿಕೊಂಡು, ಒಂದಿಷ್ಟೂ ಸಪ್ಪಳವಿಲ್ಲದೆ, ಅಂಜುತ್ತ, ಹುಡುಗಿಯೊಬ್ಬಳು ಒಳ ಬಂದಳು. ಬಡತನ, ಚಿಂದಿ ಬಟ್ಟೆ, ಸಾವು, ಎದೆಗುದಿ ತುಂಬಿದ್ದ ಆ ಕೋಣೆಯಲ್ಲಿ ಈ ಹುಡುಗಿ ತಟ್ಟನೆ ಕಾಣಿಸಿದ್ದು ವಿಲಕ್ಷಣವಾಗಿತ್ತು. ಅವಳೂ ಚಿಂದಿ ತೊಟ್ಟಿದ್ದಳು, ರಸ್ತೆ ಬದಿಯ ಹೆಣ್ಣುಗಳ ವಿಶೇಷ ಲೋಕದ ರೂಢಿ, ಮರ್ಯಾದೆ, ರುಚಿ, ಶೈಲಿ, ನಿಯಮಗಳಿಗೆ ಅನುಗುಣವಾಗಿ, ತನ್ನ ಕಸುಬನ್ನು ಸಿಗ್ಗಿಲ್ಲದೆ ಸ್ಪಷ್ಟವಾಗಿ ತಿಳಿಸುವ ಹಾಗೆ ಅವಳ ಅಗ್ಗದ ಅಲಂಕಾರವಿತ್ತು, ಸೋನ್ಯಾ ಮನೆಯೊಳಕ್ಕೆ ಕಾಲಿಡದೆ ಹೊಸ್ತಿಲಲ್ಲೇ ನಿಂತಳು. ಮೈಮೇಲೆ ಎಚ್ಚರವಿಲ್ಲದವಳ ಹಾಗೆ, ದಿಕ್ಕು ತಪ್ಪಿ ಕಳೆದುಹೋದವಳ ಹಾಗೆ ಕಾಣುತ್ತಿದ್ದಳು.

ರೇಶಿಮೆಯ ಗಾಡಿಯಾದ ಉಡುಪು, ಬೆನ್ನ ಹಿಂದೆ ಜೋಲುತಿದ್ದ ನೆಲಮುಟ್ಟುವಷ್ಟು ಉದ್ದವಾಗಿ ಅಸಂಬದ್ಧವಾಗಿದ್ದ ಸೆರಗು, ಅದನ್ನು ಕೈಯಲ್ಲಿ ಎತ್ತಿ ಹಿಡಿದು ನಿಂತಿದ್ದ ರೀತಿ, ಬಾಗಿಲನ್ನು ಮುಚ್ಚಿಬಿಡುವಷ್ಟು ದೊಡ್ಡದಾದ ಉಬ್ಬು ಲಂಗ, ತೆಳು ಬಣ್ಣದ ಶೂ, ರಾತ್ರಿಯ ಹೊತ್ತು ಅನಗತ್ಯವಾಗಿದ್ದರೂ ಇನ್ನೊಂದು ಕೈಯಲ್ಲಿ ಹಿಡಿದಿದ್ದ ಪುಟ್ಟ ಛತ್ರಿ, ಕಡು ಕೆಂಬಣ್ಣದ ಪುಕ್ಕಗಳನ್ನು ಸಿಕ್ಕಿಸಿಕೊಂಡು ಅಸಡ್ಡಾಳವಾಗಿ ಕಾಣುತಿದ್ದ ಹುಲ್ಲಿನ ಹ್ಯಾಟು, ಹುಡುಗರು ಮಾಡುವ ಹಾಗೆ ತಲೆಯ ಮೇಲೆ ಒಂದು ಪಕ್ಕಕ್ಕೆ ಓರೆಯಾಗಿ ಇಟ್ಟುಕೊಂಡ ಹ್ಯಾಟಿನ ಒಂದು ಕೋನದಿಂದ ಇಣುಕಿ ನೋಡುತ್ತಿದ್ದ, ರಕ್ತಹೀನವಾದ ಪುಟ್ಟ ಭೀತ ಮುಖ, ದೊಡ್ಡದಾಗಿ ತೆರೆದುಕೊಂಡಿದ್ದ ಪುಟ್ಟ ಬಾಯಿ, ಭಯ ನೆಟ್ಟುಕೊಂಡಿದ್ದ ಕಣ್ಣಿನ, ಗಿಡ್ಡ ಆಕಾರದ, ಹದಿನೆಂಟು ವಯಸಿನ, ಬಡಕಲಾದರೂ ಮುದ್ದು ಅನಿಸುವ ಮುಖದ, ಹೊಂಗೂದಲ, ಅದ್ಭುತವಾದ ನೀಲ ಬಣ್ಣದ ಕಣ್ಣಿನ ಸೋನ್ಯಾ ಹಾಸಿಗೆಯನ್ನು ದಿಟ್ಟಿಸಿದಳು, ಪಾದ್ರಿಯನ್ನು ನೋಡಿದಳು. ಬೇಗ ಬೇಗ ಧಾವಿಸಿ ಬಂದು ಅವಳೂ ಏದುಸಿರು ಬಿಡುತ್ತಿದ್ದಳು. ಕೊನೆಗೆ, ಜನದ ಗುಂಪಿನಲ್ಲಿ ಯಾರೋ ಆಡಿದ ಯಾವುದೋ ಮಾತು ಅವಳ ಕಿವಿಗೆ ಮುಟ್ಟಿತೇನೋ. ನೆಲ ನೋಡಿದಳು, ಹೊಸ್ತಿಲು ದಾಟಿ ಒಂದು ಹೆಜ್ಜೆ ಇಟ್ಟಳು, ಅಲ್ಲೇ, ಬಾಗಿಲ ಹತ್ತಿರವೇ ನಿಂತಳು.

ಪಾಪನಿವೇದನೆ, ಕಮ್ಯುನಿಯನ್‍ ಗಳು ಮಗಿದಿದ್ದವು. ಕ್ಯಾತರೀನ ಮತ್ತೆ ಗಂಡನ ಬಳಿ ಹೋಗಿದ್ದಳು. ಪಾದ್ರಿ ಹಿಂದೆ ಸರಿದ. ಹೊರಡುವ ಮುನ್ನ ಒಂದೆರಡು ಎಚ್ಚರಿಕೆಯ ಮಾತು, ಸಮಾಧಾನದ ಮಾತು ಹೇಳಿದ.

‘ಇವನ್ನೇನು ಮಾಡಲಿ ನಾನು?’ ಕ್ಯಾತರೀನ ಸಟಕ್ಕನೆ ಕೇಳಿದಳು, ಪುಟ್ಟ ಮಕ್ಕಳತ್ತ ಕೈ ತೋರಿದಳು.

‘ದೇವರು ಕರುಣಾಮಯಿ. ದೇವರನ್ನು ನಂಬು, ದೇವರು ಸಹಾಯಮಾಡುತ್ತಾನೆ,’ ಪಾದ್ರಿ ಮಾತು ಶುರುಮಾಡಿದ
ಆಹಾ! ಕರುಣಾಮಯ! ನಮ್ಮ ಪಾಲಿಗೆ ಮಾತ್ರ ಅಲ್ಲ!’

‘ಪಾಪ, ಹೀಗೆ ಮಾತಾಡುವುದು ಪಾಪ!’ ಪಾದ್ರಿ ತಲೆ ಆಡಿಸುತ್ತ ಅವಳ ಮಾತನ್ನು ತಡೆದ.

‘ಮತ್ತೆ ಇದು, ಇದು ಪಾಪವಲ್ಲವೋ?’ ಸಾಯುತ್ತಿರುವವನನ್ನು ತೋರಿಸುತ್ತ ಕ್ಯಾತರೀನ ಕೇಳಿದಳು.

‘ತಮಗೇ ಅರಿವಿಲ್ಲದೆ ಈ ಅಪಘಾತಕ್ಕೆ ಕಾರಣರಾದವರು ನಿಮಗೆ ನಷ್ಟವಾದ ಆದಾಯವನ್ನು ತುಂಬಿಕೊಟ್ಟಾರು…’

‘ನಿಮಗೆ ಅರ್ಥ ಆಗಲ್ಲ!’ ಕ್ಯಾತರೀನ ಸುತ್ತಲೂ ಕೈ ತೋರಿಸುತ್ತಾ ರೇಗಿದಳು. ‘ಪರಿಹಾರ ಕೊಡುವುದಕ್ಕೆ ಇಲ್ಲೇನಿದೆ, ಮಣ್ಣು? ಅವನು ಕುಡಿದಿದ್ದ, ಕುದುರೆ ಕಾಲಿಗೆ ತಾನೇ ಹೋಗಿ ಸಿಕ್ಕಿಬಿದ್ದ. ಅವನಿಂದ ಏನು ಸಂಪಾದನೆ ಆಗತಿತ್ತು? ಬರೀ ಹಿಂಸೆ, ಹಿಂಸೆ. ಇದ್ದಬದ್ದದ್ದೆಲ್ಲ ಕುಡಿದು ಹಾಕಿದ. ನಮ್ಮ ಕಾಸು ಕದ್ದುಕೊಂಡು ಹೋಗಿ ಹೆಂಡದಂಗಡಿಗೆ ಸುರಿಯುತ್ತಿದ್ದ. ನಾನು, ನನ್ನ ಮಕ್ಕಳು ಎಲ್ಲಾ ಹೆಂಡದಂಗಡಿಗಾಗಿ ಜೀವ ತೇಯುವ ಹಾಗೆ ಮಾಡಿದ. ದೇವರು ದೊಡ್ಡವನು! ಸದ್ಯ, ಸಾಯತಾನೆ! ಇನ್ನುಮೇಲಾದರೂ ನಮ್ಮ ಕಷ್ಟ, ನಷ್ಟ ಸ್ವಲ್ಪ ಕಡಮೆ ಆಗತ್ತೆ!’

‘ಸಾಯುವ ಹೊತ್ತಿನಲ್ಲಿ ಅವನನ್ನು ಕ್ಷಮಿಸಿಬಿಡಿ. ಇಂಥ ಭಾವನೆ ಇಟ್ಟುಕೊಂಡಿದ್ದರೆ ಅದು ಪಾಪ, ತಾಯೀ, ಮಹಾ ಪಾಪ!’

ಕ್ಯಾತರೀನ ಸಾಯುತ್ತಿರುವವನ ಸುತ್ತ ಸರಬರ ಓಡಾಡುತ್ತ, ನೀರು ಕೊಡುತ್ತ, ಹಣೆಯ ಮೇಲಿದ್ದ ಬೆವರು, ಜಿನುಗುವ ರಕ್ತ ಒರೆಸುತ್ತ, ದಿಂಬು ಸರಿಮಾಡುತ್ತ ಪಾದ್ರಿಯ ಜೊತೆ ಮಾತಾಡುತ್ತಿದ್ದಳು. ಈಗ ಮಾತ್ರ ಉನ್ಮತ್ತಳ ಹಾಗೆ ಅವನ ಮೇಲೆ ಮಾತಿನ ದಾಳಿ ಮಾಡಿದಳು.

ಕ್ಯಾತರೀನ ತನ್ನ ಸ್ಥಿಮಿತ ಕಳಕೊಳ್ಳದೆ ಅವನ ಉಡುಪು ತೆಗೆದು, ಮೈಯನ್ನೆಲ್ಲ ತಡವಿ, ತಡಕಿ ಪರೀಕ್ಷೆ ಮಾಡಿದಳು. ತನ್ನನ್ನೇ ಮರೆತಿದ್ದಳು, ನಡುಗುವ ತುಟಿಯನ್ನು ಬಲವಾಗಿ ಕಚ್ಚಿ ಹಿಡಿದು, ಇನ್ನೇನು ಎದೆಯಾಳದಿಂದ ಉಕ್ಕಿ ಬರುವ ಅಳುವಿನ ಸ್ಫೋಟವನ್ನು ತಡೆದಿಟ್ಟಿದ್ದಳು.

‘ಬರೀ ಮಾತು, ಫಾದರ್, ಬರೀ ಮಾತು! ಕ್ಷಮಿಸಬೇಕಂತೆ ಇವನನ್ನ. ಕ್ಷಮೇ! ಇವನು ಕುದುರೆ ಕಾಲಿಗೆ ಸಿಕ್ಕದಿದ್ದರೆ ಏನಾಗುತ್ತಿತ್ತು ಗೊತ್ತಾ? ಕುಡಿದು ತೂರಾಡಿಕೊಂಡು ಮನೆಗೆ ಬರತಿದ್ದ, ಮೈ ಮೇಲೆ ಚಿಂದಿಯೆದ್ದ ಕೊಳಕು ಅಂಗಿ ಮಾತ್ರ ಇರತಿತ್ತು. ದಬಕ್ ಅಂತ ಹಾಸಿಗೆ ಮೇಲೆ ಬಿದ್ದು ಗೊರಕೆ ಹೊಡಯುತ್ತಿದ್ದ. ಇನ್ನ ನಾನು ಇವನ ಹರಕಲು ಅಂಗಿ, ಮಕ್ಕಳ ಬಟ್ಟೆ ಎಲ್ಲ ರಾಶಿ ಹಾಕಿಕೊಂಡು ಬೆಳಗಿನ ಜಾವದ ತನಕ, ಕುಸುಕಿ, ಕಸಗಿ, ಎತ್ತೆತ್ತಿ ಒಗೀತಾ ಇರತಿದ್ದೆ. ಒಗದು, ಕಿಟಕಿ ಹತ್ತಿರ ಒಣಗಿ ಹಾಕತಿದ್ದೆ. ಬೆಳಕು ಹರಿದ ಮೇಲೆ ತೇಪೆ ಹಾಕತಿದ್ದೆ. ನನ್ನ ರಾತ್ರಿ ಹೀಗೆ ಕಳೆಯುತ್ತಿತ್ತು… ನಾನು ಅವನನ್ನು ಕ್ಷಮಿಸಿಲ್ಲ ಅನ್ನುವ ಥರ ಇದೇನಿದು, ‘ಕ್ಷಮಿಸಿಬಿಡು’ ಅನ್ನುವ ಅರ್ಥವಿಲ್ಲದ ಮಾತು?’

ಒಂದೇ ಸಮ ಒತ್ತೊತ್ತಿ ಬಂದ ಕೆಮ್ಮು ಮಾತನ್ನು ನಿಲ್ಲಿಸಿತು. ಕರ್ಚೀಫಿನಲ್ಲಿ ಕಫ ಉಗುಳಿಕೊಂಡು ಅದನ್ನು ಪಾದ್ರಿಯ ಮುಂದೆ ಚಾಚಿ, ಇನ್ನೊಂದು ಕೈಯಲ್ಲಿ ಎದೆ ಒತ್ತಿಕೊಂಡಳು. ಕರ್ಚೀಫು ರಕ್ತಮಯವಾಗಿತ್ತು.

ಪಾದ್ರಿ ತಲೆ ತಗ್ಗಿಸಿದ, ಏನೂ ಮಾತಾಡಲಿಲ್ಲ.

ಮಾರ್ಮೆಲಡೋವ್ ಕೊನೆಯ ನೋವು ತಿನ್ನುತಿದ್ದ. ಅವನ ನೋಟ ಕ್ಯಾತರೀನಳ ಮುಖದ ಮೇಲಿಂದ ಕದಲಿರಲಿಲ್ಲ. ಅವಳಿಗೆ ಏನೋ ಹೇಳುವುದಕ್ಕೆ ಹೆಣಗುತ್ತಿದ್ದ. ಕಷ್ಟಪಟ್ಟು, ನಾಲಿಗೆ ಕದಲಿಸಿ, ಅರ್ಥವಾಗದ ಸದ್ದು ಹೊರಡಿಸುತ್ತಿದ್ದ. ಅವನು ಕ್ಷಮಿಸು ಅನ್ನುತ್ತಿದ್ದಾನೆ ಅಂದುಕೊಂಡ ಕ್ಯಾತರೀನ ಅವನ ಮಾತು ತಡೆಯುವ ಹಾಗೆ ಸಿಡುಕಿದಳು.

‘ಸುಮ್ಮನೆ ಇರು, ಸಾಕು! ಮಾತಾಡಬೇಡ! ಗೊತ್ತು ನನಗೆ, ಏನು ಹೇಳತೀಯ, ಗೊತ್ತು.’ ಅವನು ಸುಮ್ಮನಾದ. ಸುತ್ತಲೂ ನೋಡುತ್ತಿದ್ದ ಅವನ ಕಣ್ಣು ಆ ಹೊತ್ತಿಗೆ ಬಾಗಿಲಲ್ಲಿ ನಿಂತಿದ್ದ ಸೋನ್ಯಾಳನ್ನು ನೋಡಿದವು…

ಅದುವರೆಗೂ ಅವಳನ್ನು ಗಮನಿಸಿಯೇ ಇರಲಿಲ್ಲ ಅವನು. ಮೂಲೆಯಲ್ಲಿ, ಕತ್ತಲಲ್ಲಿ ನಿಂತಿದ್ದಳು ಅವಳು.

‘ಅಲ್ಲಿ? ಯಾರದು, ಅಲ್ಲಿ? ಯಾರು?’ ಇದ್ದಕಿದ್ದ ಹಾಗೆ ಗೊಗ್ಗರು ದನಿಯಲ್ಲಿ ಕೇಳಿದ. ದನಿಯಲ್ಲಿ ಭಯವಿತ್ತು. ಮಗಳು ನಿಂತಿದ್ದ ಬಾಗಿಲ ಕಡೆಗೇ ನೋಡುತ್ತಿದ್ದವು ಅವನ ಕಣ್ಣು. ಏಳುವುದಕ್ಕೆ ನೋಡಿದ.

‘ಮಲಕ್ಕೋ! ಸುಮ್ಮನೆ ಮಲಕ್ಕೋ!’ ಜೋರಾಗಿ ಅಂದಳು ಕ್ಯಾತರೀನ.

ತೋಳೊಂದನ್ನು ಸೋಫಾದ ಮೇಲೂರಿ, ಅಸಹಜವಾಗಿ ಪ್ರಯತ್ನಪಡುತ್ತ, ಅರ್ಧ ಮೇಲೆದ್ದ. ನೋಟ ಕದಲಿಸದೆ, ಗುರುತೇ ಸಿಗಲಿಲ್ಲವೇನೋ ಅನ್ನುವ ಹಾಗೆ ಉನ್ಮತ್ತನಂತೆ ತನ್ನ ಮಗಳನ್ನೇ ಸ್ವಲ್ಪ ಹೊತ್ತು ನೋಡಿದ. ನಿಜ ಹೇಳಬೇಕೆಂದರೆ ಅವನು ಮಗಳನ್ನು ಅಂಥ ಉಡುಪಿನಲ್ಲಿ ಮೊದಲು ನೋಡಿರಲೇ ಇಲ್ಲ.

ತಟ್ಟನೆ ಗುರುತು ಸಿಕ್ಕಿತು. ಸಿಂಗಾರ ಮಾಡಿಕೊಂಡು ಹೀನಳಂತೆ, ದೀನಳಂತೆ, ವಿಧೇಯಳಾಗಿ ತನ್ನ ಸರದಿಗಾಗಿ ಕಾದು ನಿಂತಿದ್ದಳು—ಅಪ್ಪನನ್ನು ಬೀಳ್ಕೊಡಲೆಂದು. ಕೊನೆಯಿರದ ವೇದನೆ ಅವಳ ಮುಖದಲ್ಲಿತ್ತು.

‘ಸೋನ್ಯಾ! ಮಗಳೇ! ಕ್ಷಮಿಸು ನನ್ನ!’ ಜೋರಾಗಿ ಚೀರಿದ, ಕೈ ಮುಂದೆ ಚಾಚಿದ. ಆಯ ತಪ್ಪಿ ಸೋಫಾದಿಂದ ಜಾರಿ ಮುಖವಡಿಯಾಗಿ ನೆಲದ ಮೇಲೆ ಬಿದ್ದ. ಸಹಾಯಕ್ಕೆ ಧಾವಿಸಿದರು. ಹಿಡಿದು, ಮೇಲೆತ್ತಿ ಸೋಫಾದ ಮೇಲೆ ಮಲಗಿಸಿದರು. ಪ್ರಾಣವಿಲ್ಲ ಅನ್ನುವ ಸ್ಥಿತಿಗೆ ಬಂದಿದ್ದ. ಸೋನ್ಯಾ ಕಸುವಿಲ್ಲದೆ ಅಳುತ್ತಾ ಓಡಿ ಹೋಗಿ ತಬ್ಬಿಕೊಂಡಳು. ಹಾಗೇ ಮಗಳ ತೋಳಿನಲ್ಲಿ ಅವನು ಪ್ರಾಣಬಿಟ್ಟ.

‘ಹೋದಾ, ಅಂತೂ! ಮುಂದಕ್ಕೆ ಏನು ಗತಿ? ಕಾರ್ಯ ಹೇಗೆ ನಡೆಸಲಿ? ನಾಳೆ ಇವರೆಲ್ಲರ ಹೊಟ್ಟೆಗೆ ಏನು ಹಾಕಲಿ?’ ಗಂಡನ ಹೆಣವನ್ನು ನೋಡುತ್ತ ಕ್ಯಾತರೀನ ಅಂದಳು.

ಕ್ಯಾತರೀನಳ ಬಳಿಗೆ ಹೋದ ರಾಸ್ಕೋಲ್ನಿಕೋವ್

‘ಕ್ಯಾತರೀನ ಇವಾನೋವ್ನಾ, ಹೋದ ವಾರವಷ್ಟೇ ನಿಮ್ಮ ದಿವಂಗತ ಪತಿ ತಮ್ಮ ಬದುಕಿನ ಎಲ್ಲ ಕಥೆ ವಿವರವಾಗಿ ಹೇಳಿದ್ದರು… ನಿಮ್ಮ ಬಗ್ಗೆ ತುಂಬ ಗೌರವದಿಂದ ಮಾತಾಡಿದರು ಅಂದರೆ ನಿಮಗೆ ಆಶ್ಚರ್ಯವಾಗಬಹುದು, ಮನೆಯವರ ಬಗ್ಗೆ, ವಿಶೇಷವಾಗಿ ನಿಮ್ಮ ಬಗ್ಗೆ ಅವರಿಗೆ ಎಷ್ಟು ಗೌರವ, ಎಷ್ಟು ಪ್ರೀತಿ ಅವರಿಗೆ ಅನ್ನುವುದು ಅವತ್ತು ಸಾಯಂಕಾಲ ಗೊತ್ತಾಯಿತು. ಅವತ್ತಿನಿಂದ ನಾವು ಸ್ನೇಹಿತರಾದೆವು. ನನ್ನ ಸ್ನೇಹಿತನ ಸಲುವಾಗಿ ನಿಮಗೆ ಕೊಡುವ ಇದನ್ನು ದಯವಿಟ್ಟು ತೆಗೆದುಕೊಳ್ಳಿ. ಇಗೋ… ಇಪ್ಪತ್ತು ರೂಬಲ್ ಇರಬಹುದು. ನಿಮಗೆ ಇದರಿಂದ ಅನುಕೂಲವಾದರೆ ಸಾಕು.. ಆಮೇಲೆ… ಮತ್ತೆ ಬರತೇನೆ ನಾನು… ಖಂಡಿತ… ನಾಳೆಯಾದರೆ ನಾಳೇನೇ ಬರತೇನೆ… ಗುಡ್ ಬೈ!’

ಸಟ್ಟನೆ ಕೋಣೆಯಿಂದ ಹೊರಬಿದ್ದು, ಆತುರಾತುರವಾಗಿ ಜನದ ಗುಂಪಿನಲ್ಲಿ ನುಸುಳಿ, ದಡದಡನೆ ಮೆಟ್ಟಿಲ ಕಡೆ ನಡೆದ. ಜನದ ಗುಂಪಿನಲ್ಲಿ ಅಕಸ್ಮಾತ್ತಾಗಿ ಪೋಲೀಸು ಮುಖ್ಯಸ್ಥ ನಿಕದಿಮ್ ಫೋಮಿಚ್ ಕಾಣಿಸಿದ. ಅಪಘಾತದ ಸುದ್ದಿ ತಿಳಿದವನೇ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಸ್ವತಃ ಬಂದಿದ್ದ. ಅಂದು ಆಫೀಸಿನಲ್ಲಿ ಭೇಟಿಯಾದ ನಂತರ ಇಬ್ಬರೂ ಮತ್ತೆ ಒಬ್ಬರನ್ನೊಬ್ಬರು ಕಂಡಿರಲಿಲ್ಲ. ರಾಸ್ಕೋಲ್ನಿಕೋವ್‍ ನನ್ನು ನೋಡುತ್ತಿದ್ದ ಹಾಗೇ ನಿಕೋದಿಮ್ ಫೋಮಿಚ್ ಗುರುತು ಹಿಡಿದ.

‘ಓಹೋ! ನೀನೋ?’ ಅಂದ.

‘ಸತ್ತುಹೋದ,’ ರಾಸ್ಕೋಲ್ನಿಕೋವ್ ಉತ್ತರಿಸಿದ. ‘ಡಾಕ್ಟರು ಬಂದಿದ್ದರು, ಪಾದರಿಯವರು ಬಂದಿದ್ದರು, ಎಲ್ಲ ನಡೆಯಬೇಕಾದ ಹಾಗೆ ನಡೆಯಿತು. ಆ ಬಡ ಹೆಂಗಸಿಗೆ ತುಂಬ ತೊಂದರೆಕೊಡಬೇಡಿ. ಅವಳಿಗೆ ಕ್ಷಯ ಬೇರೆ ಬಂದಿದೆ. ಏನಾದರೂ ಮಾತಾಡಿ ಅವಳ ಮನಸ್ಸಿಗೆ ಸಮಾಧಾನ ತನ್ನಿ.. ನಿಜವಾಗಲೂ ನೀವು ತುಂಬ ಮೆದು ಮನಸಿನವರು, ನನಗೆ ಗೊತ್ತು…’ ಅವನ ಕಣ್ಣನ್ನೆ ನೋಡುತ್ತ, ತುಟಿಯಂಚಿನಲ್ಲಿ ನಗುವಿಟ್ಟುಕೊಂಡು ಮಾತಾಡಿದ ರಾಸ್ಕೋಲ್ನಿಕೋವ್.

‘ರಕ್ತದಲ್ಲಿ ಪೂರಾ ನೆನೆದಿದ್ದೀಯಲ್ಲಾ,’ ಅಂದ ನಿಕೊದಿಮ್ ಫೋಮಿಚ್. ಲಾಟೀನಿನ ಬೆಳಕಿನಲ್ಲಿ ರಾಸ್ಕೋಲ್ನಿಕೋವ್‍ ನ ವೇಸ್ಟ್ ಕೋಟಿನ ಮೇಲೆ ಹೊಸ ರಕ್ತದ ಕಲೆಗಳು ಅವನಿಗೆ ಕಂಡಿದ್ದವು.

‘ಹೌದು.. ನನ್ನ ಮೈಗೆಲ್ಲ ರಕ್ತ ಮೆತ್ತಿದೆ!’ ವಿಚಿತ್ರವಾದ ದನಿಯಲ್ಲಿ ಉತ್ತರಿಸಿ, ತಲೆ ತೂಗಿ, ಮೆಟ್ಟಿಲಿಳಿದ.

ಆತುರವಿಲ್ಲದೆ ನಿಧಾನವಾಗಿ ಇಳಿದ. ಜ್ವರ ಬಂದಿತ್ತು. ಹಾಗೆಯೇ ಅವನಿಗೇ ಗೊತ್ತಿರದ ಹಾಗೆ ಅಪರಿಮಿತ ಜೀವ ಚೈತನ್ಯದ ಹೊಸ ಭಾವ ನುಗ್ಗಿ ಬಂದು ಅವನನ್ನು ಆವರಿಸಿತ್ತು. ಮರಣದಂಡನೆಗೆ ಗುರಿಯಾದ ಮನುಷ್ಯನಿಗೆ ಕೊನೆಯ ಕ್ಷಣದಲ್ಲಿ ಅನಿರೀಕ್ಷಿತವಾಗಿ ಕ್ಷಮಾದಾನ ದೊರೆತಾಗ ಹುಟ್ಟುವಂಥ ಭಾವಕ್ಕೆ ಅದನ್ನು ಹೋಲಿಸಬಹುದು. ಮಹಡಿಯನ್ನು ಅರ್ಧದಷ್ಟು ಇಳಿದಿದ್ದಾಗ ಮನೆಗೆ ವಾಪಸಾಗುತ್ತಿದ್ದ ಪಾದ್ರಿ ಅವನನ್ನು ದಾ ಟಿ ಹೋದ. ಇಬ್ಬರೂ ಮಾತಿಲ್ಲದೆ ತಲೆಬಾಗಿಸಿ ಪರಸ್ಪರ ಗೌರವ ಸೂಚಿಸಿಕೊಂಡರು. ಪಾದ್ರಿಗೆ ದಾರಿ ಮಾಡಿಕೊಟ್ಟ ರಾಸ್ಕೋಲ್ನಿಕೋವ್. ಅವನು ಕೊನೆಯ ಕೆಲವು ಮೆಟ್ಟಿಲು ಇಳಿಯುತ್ತಿರುವಾಗ ಬೆನ್ನ ಹಿಂದೆ ಆತುರದ ಹೆಜ್ಜೆ ಸಪ್ಪಳ ಕೇಳಿಸಿತು. ಯಾರೋ ಅವನ ಹಿಂದೆಯೇ ಓಡಿ ಬರುತ್ತಿದ್ದರು. ಓಡಿ ಬಂದದ್ದು ಪೋಲ್ಯಾ. ‘ಒಂದು ನಿಮಿಷ! ಇಲ್ಲಿ ಕೇಳೀ!’ ಅನ್ನುತ್ತ ಅವನನ್ನು ಮಾತಾಡಿಸುವುದಕ್ಕೆಂದೇ ಬರುತ್ತಿದಳು.

ಅವಳತ್ತ ತಿರುಗಿದ. ಧಾವಿಸಿ ಬಂದ ಅವಳು ಅವನ ಸಮೀಪವೇ, ಒಂದೇ ಹೆಜ್ಜೆ ದೂರದಲ್ಲಿ, ನಿಂತಳು. ಅಂಗಳದ ಮಂಕು ಬೆಳಕಿನಲ್ಲಿ ಖುಷಿಯಲ್ಲಿ ನಗುನಗುತ್ತ ತನ್ನನ್ನೇ ನೋಡುತ್ತಿದ್ದ ಬಡಕಲು ಹುಡುಗಿಯ ಮುದ್ದಾದ ಮುಖವನ್ನು ರಾಸ್ಕೋಲ್ನಿಕೋವ್ ಅಸ್ಪಷ್ಟವಾಗಿ ಗುರುತಿಸಿದ. ಅವಳಿಗೆ ಯಾರೋ ಕೆಲಸ ವಹಿಸಿದ್ದರು, ಅದರಿಂದ ಅವಳಿಗೆ ಬಹಳ ಖುಷಿಯಾಗಿದೆ ಅನಿಸುತ್ತಿತ್ತು.

‘ಒಂದ್ನಿಮಿಷ. ನಿಮ್ಮೆಸರೇನು? ಮತ್ತೆ, ಮತ್ತೇ… ನಿಮ್ಮನೇ ಎಲ್ಲೀ?’ ಏದುಸಿರು ಬಿಡುತ್ತ ಆತುರಾತುರವಾಗಿ ಪುಟ್ಟ ದನಿಯಲ್ಲಿ ಕೇಳಿದಳು.

ಅವನು ಎರಡೂ ಕೈಗಳನ್ನು ಅವಳ ಭುಜದ ಮೇಲಿಟ್ಟು ಸಂತೋಷದಂಥ ಭಾವ ತುಂಬಿಕೊಂಡು ಅವಳನ್ನು ನೋಡಿದ. ಅವಳನ್ನು ನೋಡಿದರೆ ಅವನಿಗೆ ತುಂಬ ಸಂತೋಷವಾಗುತ್ತಿತ್ತು, ಯಾಕೆಂದು ಅವನಿಗೆ ಗೊತ್ತಿರಲಿಲ್ಲ.

‘ಯಾರು ಕಳಿಸಿದರು ನಿನ್ನ?’

ಅವಳು ಇನ್ನಷ್ಟು ಖುಷಿಯಾಗಿ, ‘ನಮ್ಮಕ್ಕ, ಸೋನ್ಯ,’ ಅಂದಳು.

‘ನಿಮ್ಮಕ್ಕ ಸೋನ್ಯಾನೇ ಕಳಿಸಿರಬೇಕು ಅಂತ ನಂಗೆ ಗೊತ್ತಿತ್ತು.’

‘ಅಮ್ಮಾನೂ ಹೇಳಿಕಳಿಸಿದಳು. ಸೋನ್ಯಾ ಅಕ್ಕ ನನ್ನ ಕಳಿಸುತಿದ್ದಾಗ ಅಮ್ಮ ಬಂದು, ‘ಓಡು, ಪೋಲ್ಯಾ!’ ಅಂದಳು.

‘ನಿಮ್ಮಕ್ಕ ಸೋನ್ಯಾನ ಕಂಡರೆ ನಿನಗಿಷ್ಟಾನಾ?’

‘ಎಲ್ಲಾರಿಗಿಂತ ಅವಳನ್ನ ಕಂಡರೆ ನಂಗಿಷ್ಟಾ!’ ವಿಶೇಷವಾದ ಒತ್ತು ಕೊಟ್ಟು ಅಂದಳು ಪೋಲ್ಯಾ. ಅವಳ ನಗು ಇದ್ದಕಿದ್ದ ಹಾಗೆ ಗಂಭೀರವಾಗಿತ್ತು.

‘ಮತ್ತೆ, ನನ್ನ ಕಂಡರೆ ಇಷ್ಟಾನಾ?’

ಆ ಪ್ರಶ್ನೆಗೆ ಉತ್ತರ ಹೇಳುವ ಬದಲಾಗಿ ಹುಡುಗಿಯ ಪುಟ್ಟ ಮುಖ ತನ್ನ ಹತ್ತಿರಕ್ಕೆ ಬರುತ್ತಿರುವುದನ್ನು ಕಂಡ, ಅವಳ ಪುಟ್ಟ ತುಂಬು ತುಟಿ ಮುಗ್ಧವಾಗಿ ತನ್ನ ಕೆನ್ನೆಯ ಮೇಲೆ ಮುತ್ತಿಟ್ಟದ್ದಕ್ಕೆ ಸಂತೋಷಪಟ್ಟ. ಬೆಂಕಿಕಡ್ಡಿಯ ಹಾಗಿದ್ದ ಅವಳ ತೋಳುಗಳು ಇದ್ದಕಿದ್ದ ಹಾಗೆ ಅವನನ್ನು ಗಟ್ಟಿಯಾಗಿ ಹಿಡಿದವು. ಅವಳ ತಲೆ ಅವನ ಭುಜದ ಮೇಲೊರಗಿತು, ಸಣ್ಣದನಿಯಲ್ಲಿ ಅಳುತ್ತ ಮುಖವನ್ನು ಇನ್ನಷ್ಟು ಗಟ್ಟಿಯಾಗಿ ಅವನಿಗೊತ್ತಿದಳು.

ಒಂದು ನಿಮಿಷ ಕಳೆಯಿತು. ಕಣ್ಣೀರು ಮೆತ್ತಿದ ಮುಖವನ್ನು ಮೇಲೆತ್ತಿ, ಬರಿಗೈಯಲ್ಲಿ ಕಣ್ಣೀರು ಒರೆಸಿಕೊಳ್ಳುತ್ತ, ‘ಪಾಪ, ಅಪ್ಪಾ!’ ಅಂದಳು. ಅನಿರೀಕ್ಷಿತವಾಗಿ, ‘ನಮಗೆ ತುಂಬ ಕಷ್ಟ ಆಗಿತ್ತು, ಈಚೆಗೆ,’ ಎಂದು ಸೇರಿಸಿದಳು. ‘ದೊಡ್ಡವರ ಹಾಗೆ’ ಮಾತಾಡುವಾಗ ಮಕ್ಕಳು ವಿಶೇಷವಾದ ರೀತಿಯಲ್ಲಿ ಗಂಭೀರವಾಗಿ ಮುಖ ಮಾಡಿಕೊಳ್ಳುತ್ತಾರಲ್ಲಾ ಹಾಗಿತ್ತು ಅವಳ ಮುಖ.

‘ಅಪ್ಪನಿಗೆ ನಿನ್ನ ಕಂಡರೆ ಇಷ್ಟ ಇತ್ತಾ?’

‘ಎಲ್ಲಾರಿಗಿಂತ ಲಿಡಿಯಾನ ಕಂಡರೆ ಅಪ್ಪನಿಗೆ ಜಾಸ್ತಿ ಇಷ್ಟ.’ ದೊಡ್ಡವರು ಮಾತಾಡುವ ಹಾಗೆಯೇ ನಗದೆ ಗಂಭೀರವಾಗಿ ಮಾತು ಮುಂದುವರೆಸಿದಳು. ‘ಅವಳು ಚಿಕ್ಕವಳಲ್ಲವಾ, ಅದಕ್ಕೇ. ಮತ್ತೆ ಅವಳಿಗೆ ಹುಷಾರಿರಲ್ಲ. ಅವಳಿಗೆ ಯಾವಾಗಲೂ ತಿಂಡಿ ತರತಾ ಇದ್ದ. ನಮಗೆ ಓದೋದು ಹೇಳಿಕೊಟ್ಟ ನನಗೆ ವ್ಯಾಕರಣ, ಬೈಬಲಿನ ಪಾಠ ಹೇಳಿಕೊಡತಾ ಇದ್ದ.’ ಹುಡುಗಿ ತೀರ ಗಂಭೀರವಾಗಿ ಹೇಳಿದಳು. ‘ಅಮ್ಮ ಏನೂ ಅನ್ನತಾ ಇರಲಿಲ್ಲ. ಅಪ್ಪನ್ನ ಕಂಡರೆ ಅವಳಿಗೆ ಇಷ್ಟ ಅಂತ ನಮಗೆ ಗೊತ್ತಿತ್ತು. ಅಪ್ಪಂಗೂ ಗೊತ್ತಿತ್ತು. ಅಮ್ಮ ನನಗೆ ಫ್ರೆಂಚು ಹೇಳಿಕೊಡತಾಳಂತೆ. ಯಾಕೆಂದರೆ ಈಗ ನಾನು ಫ್ರೆಂಚ್ ಕಲಿಯೋಷ್ಟು ದೊಡ್ಡವಳಾಗಿದೀನಂತೆ.’

‘ಪ್ರಾರ್ಥನೆ ಮಾಡಕ್ಕೆ ಬರತ್ತಾ ನಿನಗೆ?’

‘ಓಹೋ, ಗೊತ್ತು! ಕಲಿತು ತುಂಬಾ ದಿನ ಆಯ್ತು. ನಾನು ಮನಸ್‍ನಲ್ಲೇ ಪ್ರಾರ್ಥನೆ ಹೇಳಿಕೊಳ್ಳತೇನೆ. ಯಾಕೇಂದರೆ, ನಾನು ದೊಡ್ಡವಳಲ್ಲವಾ! ಕೋಲ್ಯಾ, ಲಿಡಿಯಾ ಇಬ್ಬರೂ ಅಮ್ಮನ ಜೊತೆ ಪ್ರಾರ್ಥನೆ ಮಾಡತಾರೆ. ಮೊದಲು ‘ಜಯ ಜಯ ಮೇರೀ’ ಹೇಳತಾರೆ, ಆಮೇಲೆ ‘ದೇವರೇ ನಮ್ಮನ್ನು ಕ್ಷಮಿಸು, ನಮ್ಮಕ್ಕ ಸೋನ್ಯಾನ ಕಾಪಾಡು,’ ಅಂತಾರೆ. ಆಮೇಲೆ ‘ದೇವರೇ ನಮ್ಮ ಇನ್ನೊಬ್ಬ ಅಪ್ಪನ್ನ ಕ್ಷಮಿಸು,’ ಅಂತಾರೆ. ಯಾಕೇಂದರೆ ನಮ್ಮ ಇನ್ನೊಬ್ಬ ಅಪ್ಪ ಸತ್ತೋಗಿದಾರೆ. ಈಗ ನಮ್ಮ ಜೊತೆ ಈ ಅಪ್ಪ ಇದ್ದರಲ್ಲ ಅವರನ್ನೂ ಕಾಪಾಡು ಅಂತ ಕೇಳಿಕೊಳ್ಳತಿದ್ದೆವು.’

‘ಪೋಲ್ಯಾ, ನನ್ನ ಹೆಸರು ರೋಡಿಯನ್. ಯಾವಾಗಲಾದರೂ ‘ದೇವರ ಸೇವಕ ರೋಡಿಯನ್‍ ಗೆ ಒಳ್ಳೆಯದಾಗಲಿ’ ಅಂತ ಪ್ರಾರ್ಥನೆ ಮಾಡು.’

‘ಖಂಡಿತಾ. ನಾನು ಬದುಕಿರೋವರೆಗೂ ನಿನಗೆ ಒಳ್ಳೇದಾಗಲಿ ಅಂತ ಪ್ರಾರ್ಥನೆ ಮಾಡೇ ಮಾಡತೀನಿ.’ ವಿಶ್ವಾಸ ತುಂಬಿದ ದನಿಯಲ್ಲಿ ಹೇಳಿದ ಹುಡುಗಿ ತಟ್ಟನೆ ಮತ್ತೆ ನಕ್ಕಳು. ಅವನನ್ನು ಮತ್ತೆ ಗಟ್ಟಿಯಾಗಿ ಅಪ್ಪಿಕೊಂಡಳು.

ರಾಸ್ಕೋಲ್ನಿಕೋವ್ ಅವಳಿಗೆ ತನ್ನ ಹೆಸರು ಹೇಳಿದ, ವಿಳಾಸ ಹೇಳಿದ, ನಾಳೆ ಬಂದೇ ಬರುತ್ತೇನೆ, ಖಂಡಿತ ತಪ್ಪಿಸುವುದಿಲ್ಲ ಎಂದು ಮಾತು ಕೊಟ್ಟ. ಹುಡುಗಿ ಸಂತೋಷಪಟ್ಟಳು, ವಾಪಸ್ ಹೋದಳು. ಅವನು ರಸ್ತೆಗೆ ಬಂದಾಗ ಹತ್ತು ದಾಟಿತ್ತು. ಇನ್ನೈದು ನಿಮಿಷದ ನಂತರ ಅವನು ಮತ್ತೆ ಸೇತುವೆಯ ಮೇಲೆ, ಎಷ್ಟೋ ಹೊತ್ತಿನ ಮೊದಲು ಹೆಂಗಸೊಬ್ಬಳು ನದಿಗೆ ಹಾರಿಕೊಂಡ ಅದೇ ಜಾಗದಲ್ಲಿ ಮತ್ತೆ ನಿಂತಿದ್ದ.

‘ಸಾಕು!’ ನಿಶ್ಚಿತ ಮನಸಿನಿಂದ ಗಂಭೀರವಾಗಿ ತನಗೇ ಹೇಳಿಕೊಂಡ. ‘ಬಿಸಿಲ್ಗುದುರೆ ಏರಿದ್ದು ಸಾಕು, ಸುಳ್ಳು ಭಯಗಳು ಸಾಕು, ಭೀತಿ ಪಿಶಾಚಿಗಳ ಕಾಟ ಸಾಕು! ಬದುಕು ಇದೆ! ಇದೇ ಈಗ ನನ್ನಲ್ಲಿ ಜೀವ ಮಿಡಿಯಲಿಲ್ಲವೇ? ಹಾಳು ಮುದುಕಿಯ ಜೊತೆಗೇ ನನ್ನ ಬದುಕೂ ಮುಗಿದು ಹೋಗಿಲ್ಲ. ದೇವರ ರಾಜ್ಯದಲ್ಲಿ ನಿನಗೆ ಶಾಂತಿ ಸಿಗಲಿ, ಮುದುಕೀ! ಸಾಕಯ್ಯಾ, ಇನ್ನು ಹೊರಡು. ಇದು ವಿಚಾರದ ರಾಜ್ಯ, ಬೆಳಕಿನ ರಾಜ್ಯ. ಇಚ್ಛೆ, ಶಕ್ತಿಗಳ ರಾಜ್ಯ. ನೋಡಣ, ನೋಡಣ! ಕತ್ತಿ ಹಿಡಿದು ಹೋರಾಡಣ,’ ಕರಾಳವಾದ ಯಾವುದೋ ಶಕ್ತಿಗೆ ಸವಾಲು ಹಾಕುತಿದ್ದೇನೆ ಅನ್ನುವ ಹಾಗೆ ಮಾತಾಡಿಕೊಳ್ಳುತ್ತಿದ್ದ. ‘ಒಂದೇ ಒಂದು ಚದರಡಿ ಜಾಗದಲ್ಲಿ ಬದುಕುತ್ತೇನೆ ಅಂತ ಆಗಲೇ ಪಣ ತೊಟ್ಟಿದ್ದೇನೆ,’ ಅಂದುಕೊಂಡ.

‘ಈಗ ನಿಶ್ಶಕ್ತಿ ಇದೆ, ನಿಜ. ಆದರೂ ಕಾಯಿಲೆ ಪೂರ್ತಿ ವಾಸಿ ಆಗಿದೆ ಅನಿಸತ್ತೆ. ಇವತ್ತು ಮನೆಯಿಂದ ಹೊರಟಾಗಲೇ ಕಾಯಿಲೆ ಹೋಯಿತು ಅನಿಸಿತ್ತು. ಪೋಚಿನ್ಕೋವ್ ಮನೆ ಇಲ್ಲೇ ಹತ್ತಿರ ಇದೆ. ರಾಝುಮಿಖಿನ್ ಮನೆಗೆ ಹೋಗತೇನೆ ಈಗ. ಖಂಡಿತ. ಮನೆ ದೂರ ಇದ್ದರೂ ಸರಿ, ಹೋಗತೇನೆ. ಅವನೇ ಬೆಟ್ ಗೆಲ್ಲಲಿ. ನಗಲಿ, ನನಗೇನು. ಶಕ್ತಿ, ಈಗ ಬೇಕಾಗಿರುವುದು ಶಕ್ತಿ. ಶಕ್ತಿ ಇರದಿದ್ದರೆ ಎಲ್ಲೂ ಹೋಗಕ್ಕೆ ಆಗಲ್ಲ, ಏನೂ ಮಾಡಕ್ಕೆ ಆಗಲ್ಲ. ಶಕ್ತಿಯನ್ನು ಶಕ್ತಿಯಿಂದ ಗೆಲ್ಲಬೇಕು. ಅದು ಗೊತ್ತಿಲ್ಲ ಅವರಿಗೆ.’ ಆತ್ಮವಿಶ್ವಾಸದಿಂದ, ಹೆಮ್ಮೆಯಿಂದ ಹೇಳಿಕೊಂಡು ಸೇತುವೆಯ ಮೇಲೆ ನಡೆದ. ಕಾಲು ಎತ್ತಿಡಲೂ ಶಕ್ತಿ ಇಲ್ಲ ಅನಿಸುತ್ತಿತ್ತು. ಅವನೊಳಗಿನ ಹೆಮ್ಮೆ, ಆತ್ಮವಿಶ್ವಾಸ ಪ್ರತಿ ಕ್ಷಣವೂ ಬೆಳೆಯುತ್ತಿದ್ದವು. ಒಂದೊಂದು ಕ್ಷಣ ಕಳೆದಾಗಲೂ ಅವನು ಹೊಸ ಮನುಷ್ಯನಾಗುತ್ತಿದ್ದ, ಹಿಂದಿನ ಕ್ಷಣದಲ್ಲಿದ್ದವನು ಬೇರೆ ಯಾರೋ ಅನಿಸುತಿತ್ತು. ಇಂಥ ಬದಲಾವಣೆ ಹೇಗಾಯಿತು ಅವನಲ್ಲಿ? ಅದು ಅವನಿಗೇ ಗೊತ್ತಿರಲಿಲ್ಲ. ಮುಳುಗುವವನು ಹುಲ್ಲು ಕಡ್ಡಿ ಹಿಡಿದ ಹಾಗೆ-‘ಬದುಕತೇನೆ, ಬದುಕು ಇನ್ನೂ ಇದೆ, ಮುದುಕಿಯ ಜೊತೆಗೇ ಬದುಕು ಮುಗಿದು ಹೋಗಲಿಲ್ಲ,’ ಎಂದು ತನಗೇ ಹೇಳಿಕೊಂಡ. ದುಡುಕಿ ಹೀಗಂದುಕೊಂಡನೇನೋ? ಅವನು ಮಾತ್ರ ಹಾಗಂದುಕೊಳ್ಳಲಿಲ್ಲ.

‘ಅರೆ! ದೇವರ ಸೇವಕ ರೋಡಿಯನ್‍ ನನ್ನು ಪ್ರಾರ್ಥನೆ ಮಾಡುವಾಗ ನೆನಪು ಮಾಡಿಕೋ ಅಂತ ಅವಳಿಗೆ ಹೇಳಿದೆನಲ್ಲ?’ ತಟಕ್ಕನೆ ನೆನಪು ಮಾಡಿಕೊಂಡ. ‘ಸಂದರ್ಭ ಬಂದರೆ ಇರಲಿ ಅಂತ ಅಷ್ಟೇ,’ ಎಂದು ಶಾಲಾಬಾಲಕನ ಹಾಗೆ ತನ್ನನ್ನೇ ತಮಾಷೆ ಮಾಡಿಕೊಂಡ.

ರಝುಮಿಖಿನ್‍ ನನ್ನು ಹುಡುಕುವುದು ಕಷ್ಟವಾಗಲಿಲ್ಲ. ಪೋಚಿನ್ಕೋವ್ ಮನೆಯ ಹೊಸ ಬಾಡಿಗೆದಾರ ಆಗಲೇ ಎಲ್ಲರಿಗೂ ಪರಿಚಯದವನಾಗಿದ್ದ, ವಾಚ್‍ ಮ್ಯಾನು ಅವನ ಮನೆಗೆ ದಾರಿ ತೋರಿಸಿದ. ಮಹಡಿ ಮೆಟ್ಟಿಲು ಏರುತ್ತಿರುವಾಗಲೇ ಬಹಳ ಜನ ಸೇರಿದಾಗ ಆಗುವಂಥ ದೊಡ್ಡ ಗದ್ದಲ, ಬಿಸಿ ಬಿಸಿ ಚರ್ಚೆಗಳ ಸದ್ದು ಕೇಳುತ್ತಿತ್ತು. ಮೆಟ್ಟಿಲ ಕಡೆಗೆ ಮುಖಮಾಡಿದ್ದ ಬಾಗಿಲು ದೊಡ್ಡದಾಗಿ ತೆರೆದುಕೊಂಡಿತ್ತು. ರಝುಮಿಖಿನ್‍ ನ ರೂಮು ಸಾಕಷ್ಟು ದೊಡ್ಡದಿತ್ತು. ರೂಮಿನಲ್ಲಿ ಸುಮಾರು ಹದಿನೈದು ಜನರಿದ್ದರು. ರಝುಮಿಖಿನ್‍ ನ ರೂಮಿಗೇ ಸೇರಿದ್ದ, ಪರದೆ ಕಟ್ಟಿ ಬೇರೆಯಾಗಿಸಿದ್ದ, ಹೊರಕೋಣೆಗೆ ಕಾಲಿಟ್ಟ ರಾಸ್ಕೋಲ್ನಿಕೋವ್. ಅಲ್ಲಿ ಓನರಮ್ಮನ ಇಬ್ಬರು ಸೇವಕಿಯರು ಎರಡು ದೊಡ್ಡ ಸಮೋವರ್‍, ಬಾಟಲಿ, ಊಟದ ತಟ್ಟೆ, ಪೈ ಜೋಡಿಸಿಟ್ಟ ಪ್ಲೇಟುಗಳ ಗದ್ದಲದಲ್ಲಿ ಸೇರಿ ಹೋಗಿದ್ದರು. ಅವೆಲ್ಲ ಓನರಮ್ಮನ ಅಡುಗೆ ಮನೆಯಿಂದ ಬಂದಿದ್ದವು. ರಝುಮಿಖಿನ್‍ ಬಗ್ಗೆ ವಿಚಾರಿಸಿದ ರಾಸ್ಕೋಲ್ನಿಕೋವ್. ರಝುಮಿಖಿನ್ ಓಡೋಡಿಕೊಂಡು ಬಂದ. ಅವನಿಗೆ ಖುಷಿಯಾಗಿತ್ತು. ಸುಮ್ಮನೆ ನೋಡಿದರೇನೇ ಅವನು ಬಹಳ ಕುಡಿದಿದ್ದಾನೆ ಅನ್ನುವುದು ತಿಳಿಯುತ್ತಿತ್ತು. ಅವನು ಎಂದೂ ಅತಿಯಾಗಿ ಕುಡಿಯುತ್ತಿರಲಿಲ್ಲ, ಹಾಗಾಗಿ ಕುಡಿದದ್ದು ಹೆಚ್ಚಾಗಿದೆ ಅನ್ನುವುದು ಎದ್ದು ಕಾಣುತಿತ್ತು.

ರಾಸ್ಕೋಲ್ನಿಕೋವ್ ಬಡಬಡ ಮಾತಾಡಿದ. ‘ನೋಡಿಲ್ಲಿ, ನೀನು ಬೆಟ್ ಗೆದ್ದಿದೀಯ, ಮುಂದಿನ ನಿಮಿಷ ಏನಾಗತ್ತೆ ಅದು ಯಾರಿಗೂ ಗೊತ್ತಾಗಲ್ಲ ಅಂತ ಹೇಳಿ ಹೋಗೋದಕ್ಕೆ ಬಂದೆ. ಒಳಕ್ಕೆ ಬರಲ್ಲ. ನನಗೆ ಸುಸ್ತು. ಬಿದ್ದೇ ಹೋಗತೇನೆ. ಹಲೋ, ಗುಡ್ ಬೈ. ನಾಳೆ ಬಾ. ಸಿಗತೇನೆ.’

‘ಹೇಳತೇನೆ, ಕೇಳು. ನಾನೇ ಜೊತೆಗೆ ಬಂದು ನಿನ್ನ ಮನೆ ಮುಟ್ಟಿಸತೇನೆ. ಸುಸ್ತಾಗಿದೆ ಅಂತ ನೀನೇ ಅನ್ನುತಿದ್ದೀಯಲ್ಲ,’ ರಝುಮಿಖಿನ್ ಹೇಳಿದ.

‘ಮನೆ ತುಂಬ ಅತಿಥಿಗಳಿದ್ದಾರಲ್ಲ, ಅವರ ಗತಿ? ಈಗ ತಾನೇ ಇಣುಕಿದನಲ್ಲ, ಗುಂಗುರು ಕೂದಲಿನವನು, ಯಾರು ಅವನು?’

‘ಯಾವನಿಗೆ ಗೊತ್ತು! ನಮ್ಮ ಚಿಕ್ಕಪ್ಪನ ಜೊತೆ ಬಂದಿರಬೇಕು, ಹೀಗೇ ಸುಮ್ಮನೆ ಬಂದವನೂ ಇರಬಹುದು. ನಮ್ಮ ಚಿಕ್ಕಪ್ಪ ತುಂಬ ಅಪರೂಪದ ಮನುಷ್ಯ, ಅವನನ್ನ ಈಗ ನೋಡೋದಕ್ಕೆ ಆಗಲ್ಲವಲ್ಲ, ಅದೇ ಬೇಜಾರು. ಅಲ್ಲದೆ, ಎಲ್ಲಾರೂ ಈಗ ನನ್ನ ಮರೆತೇಬಿಟ್ಟಿದಾರೆ! ನಾನೂ ಸ್ವಲ್ಪ ತಣ್ಣಗೆ ಆಚೆ ಓಡಾಡಿಕೊಂಡು ಬರಣ ಅಂತಿದ್ದೆ. ನೀನು ಸರಿಯಾದ ಹೊತ್ತಿಗೆ ಬಂದೆ. ಬ್ರದರ್. ಇನ್ನೆರಡು ನಿಮಿಷ ಇದ್ದಿದ್ದರೆ ಜಗಳ ಶುರುಮಾಡಿರತಿದ್ದೆ! ದೇವರೇ, ಎಷ್ಟು ಅರ್ಥವಿಲ್ಲದ ಮಾತಾಡತಾರೆ. ಎಷ್ಟರಮಟ್ಟಿಗೆ ಮೈಗೆ ಮನಸ್ಸಿಗೆ ಸುಳ್ಳಿನ ಹಚ್ಚಡ ಹೊದ್ದುಕೊಂಡಿರತಾರೆ1 ನಿನಗೆ ಗೊತ್ತಿಲ್ಲ ಬಿಡು. ಅಲ್ಲಾ, ನಿನಗೆ ಯಾಕೆ ಗೊತ್ತಿರಬಾರದು? ನಾವೂ ಸುಳ್ಳು ಹೇಳಿಕೊಳ್ಳತೇವೆ ಅಲ್ಲವಾ ನಮ್ಮ ಬಗ್ಗೆ? ಅವರೂ ಸುಳ್ಳು ಹೇಳಿಕೊಳ್ಳಲಿ ಬಿಡು. ಕೂತಿರು, ಒಂದೇ ನಿಮಿಷ, ಝೋಸ್ಸಿಮೋವ್‍ ನ ಕರಕೊಂಡು ಬರತೇನೆ.’

ಝೋಸ್ಸಿಮೋವ್ ಹಸಿದು ಬರಗೆಟ್ಟವನ ಹಾಗೆ ರಾಸ್ಕೋಲ್ನಿಕೋವ್‍ ನ ಮೇಲೆರಗಿದ. ಎಂಥದೋ ಕುತೂಹಲ ತುಂಬಿದ್ದ ಅವನ ಮುಖ ಬೆಳಗಿತು.

ರೋಗಿಯನ್ನು ಎಷ್ಟು ಸಾಧ್ಯವೋ ಅಷ್ಟು ವಿವರವಾಗಿ ಪರೀಕ್ಷೆಮಾಡಿದ. ತಡಮಾಡಬಾರದು. ತಕ್ಷಣ ಮಲಕ್ಕೋಬೇಕು, ಮಲಗುವ ಮೊದಲು ಇದರಲ್ಲಿ ಒಂದು ತಗೋಬೇಕು, ಇಗೋ ತಯಾರು ಮಾಡಿದೇನೆ,’ ಅನ್ನುತ್ತ ಯಾವುದೋ ಪುಡಿಯ ಪೊಟ್ಟಣಗಳನ್ನು ಕೊಟ್ಟ.

‘ಎರಡು ಬೇಕಾದರೂ ತಗೊಳ್ಳತೇನೆ,’ ಅಂದ ರಾಸ್ಕೋಲ್ನಿಕೋವ್.

ಪೌಡರು ತಕ್ಷಣವೇ ತೆಗೆದುಕೊಂಡ.

‘ನೀನೂ ಇವನ ಜೊತೆ ಹೋಗತಾ ಇರುವುದು ಒಳ್ಳೆಯದೇ ಆಯಿತು. ಇವತ್ತು ಪರವಾಗಿಲ್ಲ, ಬೆಳಿಗ್ಗೆಗಿಂತ ಈಗ ಎಷ್ಟೋ ವಾಸಿ. ನಾಳೆ ಏನಾಗತ್ತೆ ನೋಡಣ. ದಿನಾ ಹೊಸ ಹೊಸದು ಇದ್ದೇ ಇರತ್ತೆ,’ ಎಂದ ಝೋಸ್ಸಿಮೋವ್.

‘ಈಗ, ನಾವು ಹೊರಡುವಾಗ, ಝೋಸ್ಸಿಮೋವ್ ನನ್ನ ಕಿವಿಯಲ್ಲಿ ಏನು ಹೇಳತಾ ಇದ್ದ ಗೊತ್ತಾ?’ ರಸ್ತೆಗಿಳಿಯುತ್ತಿದ್ದ ಹಾಗೆ ರಾಸ್ಕೋಲ್ನಿಕೋವ್‍ ನನ್ನು ಕೇಳಿದ ರಝುಮಿಖಿನ್. ‘ನಿನಗೆ ಎಲ್ಲಾನೂ ಹೇಳಿಬಿಡತೇನೆ, ಬ್ರದರ್, ಯಾಕೇ ಅಂದರೆ ಅವನು ಪೆದ್ದ- ರಾಸ್ಕೋಲ್ನಿಕೋವ್‍ ಮನೆಗೆ ಅವನ ಜೊತೆ ಹೋಗತಾ ಇರೋವಾಗ ಮಾತಾಡಿಸಿ ವಿಷಯ ತಿಳಿದುಕೋ, ಏನು ಹೇಳಿದ ಅಂತ ನನಗೆ ಬಂದು ಹೇಳು- ಅಂದ ಝೋಸ್ಸಿಮೋವ್. ಅವನದೇ ಏನೋ ವಿಚಿತ್ರವಾದ ಯೋಚನೆ… ಅಂದರೆ… ನಿನಗೆ… ಹುಚ್ಚು ಅಥವಾ ಹುಚ್ಚು ಇನ್ನೇನು ಹಿಡಿಯತ್ತೆ ಅಂತ. ಅಲ್ಲಾ, ನೀನು ಅವನಿಗಿಂತ ಮೂರರಷ್ಟು ಜಾಣ, ಎರಡನೆಯದಾಗಿ ಅವನು ಹಾಗಂದುಕೊಂಡಿದಾನೆ ಅಂತ ಗೊತ್ತಾದರೆ ಅವನ ಮುಖದ ಮೇಲೆ ಉಗೀತೀಯ. ಮೂರನೆಯದಾಗಿ, ಈ ಮಾಂಸಪರ್ವತ, ಸುಮ್ಮನೆ ತನಗೆ ಗೊತ್ತಿರುವ ಸರ್ಜನ್ ಕೆಲಸ ಮಾಡುವುದು ಬಿಟ್ಟು ಮನೋರೋಗಗಳ ಬಗ್ಗೆ ತಲೆಕೆಡಿಸಿಕೊಂಡಿದಾನೆ. ಎಲ್ಲಕ್ಕಿಂತ ಮುಖ್ಯ ಏನಪ್ಪಾ ಅಂದರೆ ನೀನು ಝಮತ್ಯೋವ್ ಜೊತೆ ಮಾತಾಡಿದ ವಿಷಯ ಇದೆಯಲ್ಲ ಅದು ಈ ಡಾಕ್ಟರ ತಲೆ ತಿರುಗಿಸಿಬಿಟ್ಟಿದೆ.’

‘ಝಮತ್ಯೋವ್ ನಿನಗೆ ಎಲ್ಲಾ ಹೇಳಿದನಾ?’

‘ಹ್ಞೂಂ. ಎಲ್ಲಾ ಹೇಳಿದ. ಒಳ್ಳೆಯದಾಯಿತು. ಅಲ್ಲಾ, ಏನಪ್ಪಾ ಅಂದರೆ, ರೋದ್ಯಾ… ಏನಪ್ಪಾ ಅಂದರೆ… ಅಲ್ಲಾ, ನಾನು ಸ್ವಲ್ಪ ಕುಡಿದಿದೇನೆ ನಿಜ…. ತೀರ ಎಚ್ಚರ ತಪ್ಪೋಷ್ಟಲ್ಲ…. ವಿಚಾರ ಅದು… ಗೊತ್ತಾಯಿತಲ್ಲಾ? ಮೊಟ್ಟೆಯ ಹಾಗೆ ಈ ವಿಚಾರಕ್ಕೆ ಅವರು ಮನಸ್ಸಲ್ಲೇ ಕಾವು ಕೊಡತಾ ಇದ್ದರು… ಬಾಯಿ ಬಿಟ್ಟು ಹೇಳುವುದಕ್ಕೆ ಅವರಿಗೆ ಧೈರ್ಯ ಇರಲಿಲ್ಲ… ಯಾಕೇ ಅಂದರೆ ಇದು ಶುದ್ಧ ನಾನ್ಸೆನ್ಸ್. ಅದರಲ್ಲೂ ಆ ಬಣ್ಣ ಬಳಿಯುವವನನ್ನ ಹಿಡಿದ ಮೇಲೆ ಅವರು ಅಂದುಕೊಂಡಿದ್ದೆಲ್ಲ ಠುಸ್ ಆಯಿತು. ಇವರು ಯಾಕೆ ಹೀಗೆ ಪೆದ್ದರ ಥರ ಆಡತಾರೆ? ಝಮ್ಯತೋವ್‍ ನ ಚೆನ್ನಾಗಿ ತರಾಟೆಗೆ ತಗೊಂಡೆ. ಈ ವಿಚಾರ ನಮ್ಮಲ್ಲೇ ಇರಲಿ. ನಿನಗೆ ಇದು ಗೊತ್ತು ಅನ್ನುವ ಸುಳಿವೂ ಸಿಗಬಾರದು. ಗೊತ್ತಾದರೆ ಬೇಜಾರು ಮಾಡಿಕೊಳ್ಳತಾನೆ. ಲವೀಝಾ ಮನೆಯಲ್ಲಿ ಇವತ್ತು ಎಲ್ಲ ಸ್ಪಷ್ಟ ಆಯಿತು. ಮುಖ್ಯವಾಗಿ ಸಿಡಿಮದ್ದು ಇಲ್ಯಾ ಪೆಟ್ರೊವಿಚ್! ನೀನು ಆಫೀಸಿನಲ್ಲಿ ಎಚ್ಚರ ತಪ್ಪಿದ್ದನ್ನೆ ಗಮನದಲ್ಲಿಟ್ಟುಕೊಂಡು ಹೀಗೆ ವಾದ ಮಾಡಿದ್ದ. ಆಮೇಲೆ ಅವನಿಗೇ ನಾಚಿಕೆಯಾಯಿತು.…’

ರಾಸ್ಕೋಲ್ನಿಕೋವ್ ಆಸೆಬುರಕನ ಹಾಗೆ ಅವನ ಮಾತು ಕೇಳುತ್ತಿದ್ದ. ರಝುಮಿಖಿನ್ ಕುಡಿದಿದ್ದ, ಎಲ್ಲಾ ಹೇಳುತ್ತಿದ್ದ.

‘ಅಲ್ಲಿ ತುಂಬ ಧಗೆ ಇತ್ತು, ಆಯಿಲ್ ಪೇಂಟಿನ ವಾಸನೆ ಜಾಸ್ತಿ ಇತ್ತು, ಅದಕ್ಕೇ ಎಚ್ಚರ ತಪ್ಪಿದೆ,’ ಅಂದ ರಾಸ್ಕೋಲ್ನಿಕೋವ್.

‘ಹಾಗನ್ನು ಮತ್ತೇ! ಬರೀ ಪೇಂಟಿನ ವಾಸನೆ ಅಲ್ಲ, ನಿನಗೆ ಒಂದು ತಿಂಗಳಿಂದ ಆಗಾಗ ಉದ್ರೇಕವಾಗಿ ಕೆರಳುತ್ತಿದ್ದೆ. ಈ ವಿಚಾರಕ್ಕೆ ಝೋಸ್ಸಿಮೋವ್ ಸಾಕ್ಷಿ. ಆ ಹುಡುಗ ಎಷ್ಟು ಪೆಚ್ಚಾಗಿದಾನೆ ಅಂತ ನೀನು ಕಲ್ಪನೆ ಕೂಡ ಮಾಡಿಕೊಳ್ಳಕೆ ಆಗಲ್ಲ- ನಾನು ಅವನ, (ಅಂದರೆ ನಿನ್ನ) ಕಿರುಬೆರಳಿಗೂ ಸಮ ಅಲ್ಲ- ಅಂತಾನೆ. ಆಗಾಗ ಡೀಸೆಂಟಾಗಿರತಾನೆ. ಇವತ್ತು ನೀನು ಕ್ರಿಸ್ಟಲ್ ಪ್ಯಾಲೇಸಿನಲ್ಲಿ ಅವನಿಗೆ ಕಲಿಸಿದ ಪಾಠ ಇದೆಯಲ್ಲ, ಅದು ಮಾತ್ರ, ಬಿಡು, ಹೇಳಕ್ಕಾಗಲ್ಲ, ಅಷ್ಟು ಒಳ್ಳೆ ಪಾಠಮಾಡಿದೀಯ. ಅವನು ಬೆಚ್ಚಿ ಬಿದ್ದ, ಮೈ ನಡುಗಿ ಮೂರ್ಛೆ ಬೀಳುವುದೊಂದು ಬಾಕಿ! ಅವನಂದುಕೊಂಡದದೆಲ್ಲ ಎಂಥ ನಾನ್ಸೆನ್ ಅಂತ ನೀನು ಕರೆಕ್ಟಾಗಿ ಅವನನ್ನ ನಂಬಿಸಿದೆ. ಆಮೇಲೆ ಅಣಕಿಸುವ ಹಾಗೆ ನಾಲಗೆ ಹೊರಕ್ಕೆ ಚಾಚಿದೆ. ಈಗೇನಂತೀ ಅನ್ನೋ ಹಾಗೆ! ಪರ್ಫೆಕ್ಟ್. ನುಚ್ಚು ನೂರಾಗಿ ನಾಶವಾಗಿ ಹೋದ ಅವನು! ದೇವರೇ! ಎಂಥ ಎಕ್ಸ್ಪರ್ಟ್‍ ನೀನು. ಸರಿಯಾಗಿ ಬುದ್ಧಿ ಕಲಿಸಿದೆ ಅವರಿಗೆ! ನಾನು ಆ ಹೊತ್ತಿಗೆ ಅಲ್ಲಿರಲಿಲ್ಲವಲ್ಲಾ! ನೀನು ಈಗ ಬರತೀಯ ಅಂತ ಕಾಯತಿದ್ದ. ತನಿಖೆ ಆಫೀಸರು ಪೋರ್ಫಿರಿ ಕೂಡ ನಿನ್ನ ಪರಿಚಯ ಮಾಡಿಕೊಳ್ಳಬೇಕು ಅನ್ನುತಿದ್ದ…’

‘ಆಹ್… ಅವನೂ ನೋಡಬೇಕಂತಾ? ಯಾಕೆ ನನ್ನ ಹುಚ್ಚ ಅಂದುಕೊಂಡಿದಾರೆ ಎಲ್ಲಾರೂ?’

‘ಉಹ್ಞೂಂ, ಹಾಗೆ ಹುಚ್ಚ ಅಂತಲೇ ಅಲ್ಲ. ಕುಡಿದದ್ದು ಜಾಸ್ತಿ ಆಗಿ ತುಂಬಾ ಮಾತಾಡತಿದೀನಿ, ಬ್ರದರ್. ನೋಡು, ನಿನಗೆ ಆ ಕೇಸಿನ ಬಗ್ಗೆ ಮಾತ್ರ ಕುತೂಹಲ ಅಂತ ಝೋಸ್ಸಿಮೋವ್‍ ಗೆ ಅನಿಸಿತ್ತು. ಅದು ಯಾಕೆ ಅನ್ನುವುದು ಇವತ್ತು ಸ್ಪಷ್ಟ ಆಯಿತು. ಕೇಸಿನ ವಿವರ ಎಲ್ಲಾ ಗೊತ್ತಿದ್ದ ನೀನು ಅವರನ್ನ ಕಂಡು ರೇಗಿದೆ, ಜೊತೆಗೆ ನಿನ್ನ ಕಾಯಿಲೆ. ನಾನು ಸ್ವಲ್ಪ ತಗೊಂಡಿದೀನಿ ನಿಜ, ಬ್ರದರ್, ಝೋಸ್ಸಿಮೋವ್‍ ಗೆ ಯಾಕೆ ಅಂಥ ಐಡಿಯ ಬಂತೋ ದೆವ್ವಕ್ಕೇ ಗೊತ್ತು… ಮನೋರೋಗಗಳ ಬಗ್ಗೆ ಇತ್ತೀಚೆಗೆ ತಲೆ ಕೆಡಿಸಿಕೊಂಡಿದಾನೆ, ಉಗೀ ಅವನ ಮುಖಕ್ಕೆ…’

ಒಂದು ನಿಮಿಷದಷ್ಟು ಹೊತ್ತು ಇಬ್ಬರೂ ಮೌನವಾಗಿದ್ದರು.

‘ಇಲ್ಲಿ ಕೇಳು, ರಝುಮಿಖಿನ್,’ ರಾಸ್ಕೋಲ್ನಿಕೋವ್ ಮಾತು ಶುರುಮಾಡಿದ. ‘ನಿನಗೆ ನೇರಾ ನೇರಾ ಹೇಳಿಬಿಡತೇನೆ. ಈಗ ನಾನು ಸಾವು ಆದ ಮನೆಯಿಂದ ಬರತಾ ಇದೇನೆ. ಒಬ್ಬ ಅಫಿಶಿಯಲ್ಲು ಸತ್ತು ಹೋದ… ನನ್ನ ಹತ್ತಿರ ಇದ್ದ ದುಡ್ಡೆಲ್ಲಾ ಅವರಿಗೆ ಕೊಟ್ಟುಬಿಟ್ಟೆ… ಮತ್ತೆ ಈಗ ತಾನೇ ಮುದ್ದು ಹುಡುಗಿ ನನಗೆ ಮುತ್ತಿಟ್ಟಳು. ನಾನು ಕೊಲೆ ಮಾಡಿ ಬಂದಿದ್ದರೂ ನನ್ನ ಮೇಲೆ ಹೀಗೇನೇ… ಮತ್ತೆ ಅಲ್ಲಿ ಇನ್ನೊಬ್ಬಳಿದ್ದಳು. ಬೆಂಕಿಯ ಉರಿಯ ಬಣ್ಣದ ಪುಕ್ಕ ಹ್ಯಾಟಿಗೆ ಸಿಕ್ಕಿಸಿಕೊಂಡಿದ್ದಳು… ಎಲ್ಲಾ ಕಲಸಿಕೊಳ್ಳತಾ ಇವೆ. ಸುಸ್ತಾಗತಾ ಇದೆ, ಹಿಡಕೋ ನನ್ನ… ಇಗೋ ಮೆಟ್ಟಿಲು ಬಂತು…’

‘ಏನಾಯಿತು ನಿನಗೆ?’ ರಝುಮಿಖಿನ್ ಆತಂಕದಿಂದ ಕೇಳಿದ.

‘ಸ್ವಲ್ಪ ತಲೆ ತಿರುಗತಿದೆ, ದುಃಖ ಆಗತಿದೆ, ಅಳು ಬರತಿದೆ, ಹೆಂಗಸರ ಥರಾ… ನಿಜವಾಗಲೂ… ನೋಡು, ಏನದು? ಅಲ್ಲಿ? ನೋಡು! ನೋಡು!’

‘ಏನು?’

‘ಕಾಣತಾ ಇಲ್ಲವಾ? ನನ್ನ ರೂಮಿನಲ್ಲಿ ಲೈಟಿದೆ, ನೊಡಿದೆಯಾ? ಬಾಗಿಲ ಸಂದಿಯಿಂದ ಕಾಣತಿದೆ…’

ಅವರು ಕೊನೆಯ ಮಹಡಿ ಹತ್ತಬೇಕಾಗಿತ್ತು. ಓನರಮ್ಮನ ಮನೆಯ ಹತ್ತಿರ ಇದ್ದರು. ತಲೆ ಎತ್ತಿ ನೋಡಿದರೆ ರಾಸ್ಕೋಲ್ನಿಕೋವ್‍ ನ ಬಿಲದಂಥ ರೂಮಿನಲ್ಲಿ ಬೆಳಕು ಇರುವುದು ಕಾಣುತಿತ್ತು.

‘ವಿಚಿತ್ರಾ! ನಸ್ತಾಸ್ಯಾ ಇರಬಹುದು,’ ಅಂದ ರಝುಮಿಖಿನ್.

‘ಇಷ್ಟು ಹೊತ್ತಿನಲ್ಲಿ ಅವಳು ನನ್ನ ರೂಮಿಗೆ ಬರಲ್ಲ. ನಿದ್ದೆ ಹೋಗಿರತಾಳೆ. ಏನಾದರೆ ನನಗೇನು! ಬರತೀನಿ, ಬೈ!’

‘ಏನು ತಮಾಷೆ ಮಾಡತಿದೀಯಾ? ನಾನೂ ನಿನ್ನ ಜೊತೆ ಬರತೀನಿ.ʼ

‘ನೀನು ಬರತೀಯ ಅಂತ ಗೊತ್ತು. ಇಲ್ಲೇ ಶೇಕ್ ಹ್ಯಾಂಡ್ ಮಾಡಿ ಬೈ ಹೇಳಬೇಕು ಅನಿಸತಾ ಇದೆ. ಎಲ್ಲಿ, ಕೈ ತಾ. ಬೈ.’

‘ಯಾಕೆ ಹೀಗಾಡತಾ ಇದೀಯ ರೋದ್ಯಾ?’
‘ಏನಿಲ್ಲ, ಹೋಗಣ, ನೀನೇ ಸಾಕ್ಷಿ ನನಗೆ…’

ಮೆಟ್ಟಿಲು ಹತ್ತಿದರು. ಝೋಸ್ಸಿಮೋವ್‍ ಹೇಳಿದ್ದು ನಿಜ ಇರಬಹುದೇ ಎಂಬ ವಿಚಾರ ರಝುಮಿಖಿನ್ ಮನಸ್ಸಿನಲ್ಲಿ ಮಿಂಚಿ ಹೋಯಿತು.
‘ಬಡಬಡ ಮಾತಾಡಿ ಇವನ ತಲೆ ಇನ್ನೂ ಕೆಡಿಸಿದೆ,’ ಎಂದು ಗೊಣಗಿಕೊಂಡ. ಬಾಗಿಲ ಹತ್ತಿರ ಬರುತಿದ್ದ ಹಾಗೇ ಮಾತು ಕೇಳಿಸಿತು.

‘ಏನು ನಡೀತಿದೆ ಇಲ್ಲೀ?’ ರಾಸ್ಕೋಲ್ನಿಕೋವ್ ಜೋರು ದನಿಯಲ್ಲಿ ಕೇಳಿದ.

ಮುಂದೆ ಇದ್ದ ರಾಸ್ಕೋಲ್ನಿಕೋವ್ ದಡಾರನೆ ಬಾಗಿಲು ತೆರೆದ. ಹೊಸ್ತಿಲ ಮೇಲೆಯೇ ಮರವಟ್ಟು ನಿಂತ.

ಅವನ ತಾಯಿ, ಅವನ ತಂಗಿ ಸೋಫಾದ ಮೇಲೆ ಕೂತಿದ್ದರು. ಸುಮಾರು ಒಂದೂವರೆ ಗಂಟೆಯಷ್ಟು ಹೊತ್ತಿನಿಂದ ಅವನಿಗಾಗಿ ಕಾಯುತ್ತಿದ್ದರು. ಅವರು ಬಂದಾರೆಂಬ ನಿರೀಕ್ಷೆ ಅವನಿಗಿರಲಿಲ್ಲ, ಯಾಕೆ? ಅವರ ಬಗ್ಗೆ ಯೋಚನೇನೆ ಮಾಡಿರಲಿಲ್ಲ, ಯಾಕೆ? ಅವರು ಹೊರಟಿದ್ದಾರೆಂಬ ಸುದ್ದಿ ಮತ್ತೆ ಮತ್ತೆ ಬಂದಿದ್ದರೂ ಅವರು ಇವತ್ತೇ ಬಂದಾರು ಅನ್ನುವ ಯೋಚನೆ ಕೂಡ ಬಂದಿರಲಿಲ್ಲ, ಯಾಕೆ? ನಸ್ತಾಸ್ಯಳನ್ನು ಪ್ರಶ್ನೆ ಕೇಳುವುದರಲ್ಲಿ ಇಬ್ಬರಿಗೂ ಸ್ಪರ್ಧೆಯೇ ನಡೆದಿತ್ತು. ಈಗಲೂ ಅವಳು ಅವರ ಮುಂದೆ ನಿಂತಿದ್ದಳು. ಇಡೀ ಕಥೆಯನ್ನು ನಾಲ್ಕಾರು ಬಾರಿ ಹೇಳಿದ್ದಳು ‘ಅವನು ಇವತ್ತು ಓಡಿಹೋದ,’ ಕಥೆಯಿಂದ ತಿಳಿದುಬಂದ ಹಾಗೆ ಸನ್ನಿಯ ಸ್ಥಿತಿಯಲ್ಲಿದ್ದ ಅನ್ನುವುದು ಕೇಳಿ ಇಬ್ಬರೂ ಹೆದರಿದ್ದರು. ‘ದೇವರೇ, ಏನಾಯಿತಪ್ಪಾ ಅವನಿಗೇ,’ ಅನ್ನುತ್ತ ಅತ್ತಿದ್ದರು. ಒಂದೂವರೆಗಂಟೆಯಷ್ಟು ಕಾಲ ಕಾದು ಕಾದು ಶಿಲುಬೆ ಏರಿದಂಥ ನೋವು ಅನುಭವಿಸಿದ್ದರು.

ಉನ್ಮತ್ತ ಆನಂದದ ಚೀರಾಟ ರಾಸ್ಕೋಲ್ನಿಕೋವ್‍ ನನ್ನು ಸ್ವಾಗತಿಸಿತು. ಇಬ್ಬರೂ ಹೆಂಗಸರು ಓಡಿ ಬಂದರು. ಅವನು ಮಾತ್ರ ಜೀವವಿಲ್ಲದವನ ಹಾಗೆ ಸುಮ್ಮನೆ ನಿಂತಿದ್ದ. ಯಾವುದೋ ಹೊಸ ಎಚ್ಚರ ಸಿಡಿಲಿನ ಹಾಗೆ ತಟ್ಟನೆ ಅವನ ಮೇಲೆ ಎರಗಿ ತಡೆಯಲಾಗದಂಥ ನೋವಾಯಿತು. ಅಮ್ಮನನ್ನೂ ತಂಗಿಯನ್ನೂ ಅಪ್ಪಿಕೊಳ್ಳಬೇಕೆನಿಸಿದರೂ ಅವನ ಕೈ ಮಾತ್ರ ಕದಲಲೇ ಇಲ್ಲ. ಅವರಿಬ್ಬರೂ ಅವನನ್ನು ಬಲವಾಗಿ ಅಪ್ಪಿ, ಮುತ್ತಿಟ್ಟು, ನಕ್ಕರು, ಅತ್ತರು. ಹೆಜ್ಜೆ ಮುಂದಿಟ್ಟ. ಹೊಯ್ದಾಡಿದ, ಧೊಪ್ಪನೆ ನೆಲಕ್ಕೆ ಬಿದ್ದು ಮೂರ್ಛೆ ಹೋದ.

ಹೆದರಿಕೆ, ಭೀತ ಚೀತ್ಕಾರ, ನರಳಾಟ, ಮುಲುಗು… ಹೊಸ್ತಿಲ ಮೇಲೆ ನಿಂತಿದ್ದ ರಝುಮಿಖಿನ್ ರೂಮಿನೊಳಕ್ಕೆ ನುಗ್ಗಿ ಬಂದ. ಮರುಕ್ಷಣವೇ ರೋಗಿಯನ್ನು ತನ್ನ ಬಲಿಷ್ಠ ಕೈಗಳಲ್ಲೆತ್ತಿ ಸೋಫಾದ ಮೇಲೆ ಮಲಗಿಸಿದ.

‘ಏನಿಲ್ಲ, ಏನಿಲ್ಲ! ಹೆದರಬೇಡಿ! ಮೂರ್ಚೆ ಹೋಗಿದಾನೆ ಅಷ್ಟೇ!’ ಅನ್ನುತ್ತ ಹೆಂಗಸರನ್ನು ಸಮಾಧಾನ ಮಾಡಿದ. ‘ಮೊದಲಿಗಿಂತ ಈಗ ವಾಸಿ ಅಂತ ಸ್ವಲ್ಪ ಹೊತ್ತಿಗೆ ಮೊದಲು ಡಾಕ್ಟರು ಹೇಳಿದರು. ಪೂರಾ ವಾಸಿಯಾಗಿದಾನೆ. ನೀರು, ನೀರು ತಗೊಂಡು ಬನ್ನಿ! ಎಚ್ಚರ ಬರತಾ ಇದೆ… ನೋಡಿ, ನೋಡಿ, ಎದ್ದ…’

ದುನ್ಯಾಳ ಕೈ ನೋವಾಗುವಾಷ್ಟು ಜೋರಾಗಿ ಹಿಡಿದು, ಮುಂದೆ ಬಗ್ಗಿಸಿ, ರಾಸ್ಕೋಲ್ನಿಕೋವ್‍ ಗೆ ಎಚ್ಚರ ಬಂದಿರುವುದನ್ನು ತೋರಿಸಿದ. ತಾಯಿ, ಮಗಳು ಇಬ್ಬರೂ ಅವನೇ ಸ್ವತಃ ದೇವರು ಅನ್ನುವ ಹಾಗೆ ‘ಸಮರ್ಥ ಯುವಕ’ ರಝುಮಿಖಿನ್‍ ನನ್ನು ಕೃತಜ್ಞತೆ ತುಂಬಿ ನೋಡಿದರು. ತಮ್ಮ ಮುದ್ದು ರೋದ್ಯಾ ಹುಷಾರಿಲ್ಲದಿರುವಾಗ ರಝುಮಿಖಿನ್ ಎಷ್ಟೆಲ್ಲ ಮುತುವರ್ಜಿಯಿಂದ ನೋಡಿಕೊಂಡಿದ್ದ ಅನ್ನುವುದನ್ನು ನಸ್ತಾಸ್ಯ ಆಗಲೇ ಹೇಳಿದ್ದಳು. ಅವತ್ತು ಸಂಜೆಯಷ್ಟೇ ಆತ್ಮೀಯವಾಗಿ ಮಾತಾಡುತ್ತ ರಾಸ್ಕೋಲ್ನಿಕೋವ್‍ ನ ತಾಯಿ ರಝುಮಿಖಿನ್‍ ನನ್ನು ಸಮರ್ಥ ಯುವಕ ಎಂದು ಕರೆದಿದ್ದಳು.

* ಅಪರಾಧ ಮತ್ತು ಶಿಕ್ಷೆ ಎರಡನೆಯ ಭಾಗ ಮುಗಿಯಿತು