‘ನನ್ ಹೆಸ್ರು ಕಾರ್ಡನ ಕವಿಗೊಷ್ಠಿಯಲ್ಲಿ ಕೊನೆಯದು’ ಅಂತ ಕಾರ್ಡಿನಲ್ಲಿ ಮುದ್ರಣಗೊಂಡಿತ್ತು. ಅದನ್ನು ಓದುತ್ತಾ ನಿರೂಪಣೆ ಮಾಡೊ ನಾಣಿಗೆ ‘ಅಣ್ಣಾ! ಇಲ್ಲಿ ಬಾ’ ಅಂತ ಮೆಲ್ಲಗೆ ಕರೆದು ಪರದಾ ಹಿಂದೆ ಯಾರಿಗೂ ಕಾಣದಂತೆ ಡಕ್ಕನೆ ಕಾಲ್ ಬಿದ್ದು “ಹ್ಯಾಂಗಾದ್ರು ಈ ಗೋಷ್ಠಿಯಿಂದ ನನ್ನ ಹೆಸ್ರು ಬೇಗ ಹೇಳಿ ಪಾರು ಮಾಡು ನಾಣಿ” ಅಂತ ಕೇಳ್ಕೊಂಡೆ. ಪಾಪ್! ಅವಾ, ಒಂದಿಬ್ರು ಆದ ಮ್ಯಾಲೆ ನೇರವಾಗಿ ನನ್ ಹೆಸ್ರೆ ಹೇಳ್ದ ನೋಡು. ನಾನು ಸುಮ್ನೆ ಇರ್ತಿನಾ? ಅವನವ್ವುನ್ ಒಂದ್ ದಂ ‘ಗಾಳಿ ಬಿಟ್ಟಾಗೆ ತೂರಿಕೊ’ ಅಂತಾರಲ್ಲ? ಹಾಂಗೆ ಎಡ್ ಮೂರ್ ಕವಿತಾ ಓದಿದೆ.
ಮಚ್ಚೇಂದ್ರ ಪಿ. ಅಣಕಲ್ ಬರೆದ ಲಲಿತ ಪ್ರಬಂಧ

 

ಬಹುದಿನಗಳಿಂದ ಸಾಹಿತ್ಯ ಕ್ಷೇತ್ರದಿಂದ ದೂರ ಉಳಿದ ನಾನು ಈ ಸಲದ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅಲ್ಲಿ ನಡೆಯುವ ವಿವಿಧ ಸಾಹಿತ್ಯ ಗೋಷ್ಠಿಗಳನ್ನು ಏಕಾಂತವಾಗಿ ಕುಳಿತು ಕೇಳೊಣವೆಂದು ನಿರ್ಧರಿಸಿದೆ. ಆದರೆ ಏಕೋ ಮನಸ್ಸು ಒಪ್ಪಲಿಲ್ಲ. ‘ಯಾರಾದರೂ ಸ್ನೇಹಿತರಿಗೆ ಕರೆಯೋಣ’ ಅಂತ ಹಳೆಯ ಕವಿಮಿತ್ರ ಬೀರನಿಗೆ ಫೋನ್ ಮಾಡಿದೆ. ಆತ ಹಳ್ಳಿಯಲ್ಲಿ ಇರುವುದರಿಂದ ನಾನು ಬರುವ ವಿಷಯ ತಿಳಿದು ಧಾರಾಳವಾಗಿ ಸಾಹಿತ್ಯ ಸಮ್ಮೇಳನಕ್ಕೆ ಬರಲು ಒಪ್ಪಿದ. ಕಾರಣ ಅವನದು ಕವಿಗೊಷ್ಠಿಯಲ್ಲಿ ಹೆಸರು ಇತ್ತು.

ನನ್ನ ಹೆಸರು ಇಲ್ಲದಿದ್ದರೂ ನಾನು 250 ಕಿ.ಮಿ.ದೂರದಿಂದ ಬರುತ್ತಿರುವುದು ನೋಡಿ ಆತ ಕೇಳಿದ “ನೀನು ಯಾಕೆ ಬರ್ತಾ ಇದ್ದಿಯಾ? ನಿನ್ನ ಹೆಸರು ಕವಿಗೊಷ್ಠಿಯಲ್ಲಿ ಇಲ್ಲ” ಅಂತ. ಆದ್ರೆ ನನಗೆ ಅಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಿ, ಕೇಳಿ, ಕಣ್ತುಂಬಿಕೊಳ್ಳಬೇಕೆಂಬ ಬಯಕೆಯಾಗಿದ್ದರಿಂದ, ಆತ ಬೇಡ ಅಂದ್ರೂ “ಇರ್ಲಿ, ಇವತ್ತು ರಜೆ ಬೇರೆ, ಸುಮ್ಮನೆ ಕಾಲ ಹರಟೆ ಮಾಡಿ ಕುಳಿತುಕೊಳ್ಳುವುದಕ್ಕಿಂತ ಅಲ್ಲಿಗೆ ಬಂದ್ರೆ ನಮ್ಮ ಜಿಲ್ಲೆಯ ಸಾಹಿತಿಗಳ ಪರಿಚಯ ಆದ್ರೂ ಆಗ್ತದೆ” ಅಂತ ನಡೆದೆ ಬಿಟ್ಟೆ.

ಮೂರು ಗಂಟೆಯೊಳಗೆ ಬಸ್ಸು ನಗರದ ನಿಲ್ದಾಣ ತಲುಪಿತ್ತು. ಸಮಯ ಒಂದು ಗಂಟೆ ಬೇರೆ ಅರ್ಧ ದಿನದ ಕಾರ್ಯಕ್ರಮ ಮುಗಿದಿರಬಹುದು ಅಂತ ಬಸ್ಸಿಳಿದ ಕೂಡಲೆ ತರಾತುರಿಯಲಿ ಆಟೋ ಹಿಡಿದು ಸಮ್ಮೇಳನ ನಡೆಯುವ ಸ್ಥಳ ತಲುಪಿದೆ. ಅಲ್ಲಿ ಬೀರ ನನಗಿಂತಲೂ ಮೊದಲೇ ಕವಿಗೋಷ್ಠಿಗೆ ಹಾಜರಾಗಿ ತನ್ನ ಕವಿತೆ ಓದಿ ಹೊರಗೆ ಬಂದುಬಿಟ್ಟಿದ್ದ. ನಾನು ಸಮ್ಮೇಳನದೊಳಗೆ ಕಾಲಿಡುತ್ತಿದಂತೆ ಬೀರನೆ ಎದುರಾಗಿ “ಹಲೋ ನಮಸ್ಕಾರ ದೋಸ್ತ್, ಏನ್ ಜರಾ ಜಲ್ದಿ ಬರಬಾರದೆ? ನಾನು ಕವಿತೆ ಓದಿದೆ ಹ್ಹಿ ಹ್ಹಿ ಹ್ಹಿ!” ಅಂತ ಹಲ್ಲು ಕಿರಿದು “ತುಂಬ ಜನ ಚಪ್ಪಾಳೆ ಹಾಕಿದ್ರು” ಅಂತ ಹೇಳತೊಡಗಿದ.

“ಮತ್ತೆ ನೀನ್ಯಾಕೆ ಹೊರ ಬಂದೆ?” ಅಂತ ನಾನವನನ್ನ ಕೇಳಿದೆ.

“ನನ್ ಕವಿತೆ ಓದೊದು ಮುಗೀತು. ಮತ್ತೇನು ಮಾಡ್ಲಿ? ಅನಾಮತ್ತಾಗಿ ಯಾರಿಗೂ ಗೊತ್ತಾಗದೆ ಹಾಂಗೆs.. ಹಿಂದಿನ ಪರದಾ ಎತ್ತಿ ಹೊರಬಂದೆ ನೋಡು. ಯಾಕೆಂದ್ರೆ ಇನ್ನೂ ಭಾಳ್ ಕವಿಗಳಿದ್ದಾರೆ ದೋಸ್ತ. ಏನಿಲ್ಲಂದ್ರೂ 50-60 ಕವಿಗಳು ತುಂಬ್ಯಾರ್. ಅವರ್ದೆಲ್ಲ ಆಗಬೇಕಾದ್ರೆ ಹೊತ್ತ ಮುಣಗತ್ತದ ಅಂತ ತಿಳ್ದು ಹೆಂಗಾರ ಮಾಡಿ ಈ ‘ಹುಚ್ಚರೊಳಗಿಂದ ತಪ್ಪಿಸಿಕೊಂಡವನೆ ಜಾಣ’ ಅಂತ ತಿಳ್ದು ಮೆಲ್ಲಗೆ ನಿರೂಪಣೆ ಮಾಡ್ತಿದ್ದ ನಾಣಿಗೆ ಕರದು ನನ್ನ ಹೆಸ್ರು ಬೇಗ ಹೇಳು ಅಂದ್ರು ಅವಾ ಕಿವ್ಯಾಗೆ ಹಾಕೊಳಲ್ಲಿಲ್ಲ ನೋಡು. ಆಗ ತುಂಬ ಬೇಜಾರಾಗಿ ಈಗ ಹ್ಯಾಂಗ್ ಮಾಡ್ಬೇಕು ಅಂತ ಯೋಚಿಸ್ತಾ ಒಂದು ವಿಚಾರ ಹೊಳೀತು. ಹ್ಯಾಂಗು ನಂಗೆ ಕವಿಗಳ ಹಿಂದಿನ ಸಾಲಿನಲ್ಲಿ ಕೂಡಿಸಿದ್ದು ನೋಡಿ ಇವರು ನಂಗೆ ಬೇಗ ಬಿಡೋವರಲ್ಲ ಅಂತ ಗೊತ್ತಾತು. ಮತ್ ನನ್ ಹೆಸ್ರು ಕಾರ್ಡನ ಕವಿಗೊಷ್ಠಿಯಲ್ಲಿ ಕೊನೆಯದು” ಅಂತ ಕಾರ್ಡಿನಲ್ಲಿ ಮುದ್ರಣಗೊಂಡಿತ್ತು. ಅದನ್ನು ಓದುತ್ತಾ ನಿರೂಪಣೆ ಮಾಡೊ ನಾಣಿಗೆ ‘ಅಣ್ಣಾ! ಇಲ್ಲಿ ಬಾ’ ಅಂತ ಮೆಲ್ಲಗೆ ಕರೆದು ಪರದಾ ಹಿಂದೆ ಯಾರಿಗೂ ಕಾಣದಂತೆ ಡಕ್ಕನೆ ಕಾಲ್ ಬಿದ್ದು “ಹ್ಯಾಂಗಾದ್ರು ಈ ಗೋಷ್ಠಿಯಿಂದ ನನ್ನ ಹೆಸ್ರು ಬೇಗ ಹೇಳಿ ಪಾರು ಮಾಡು ನಾಣಿ” ಅಂತ ಕೇಳ್ಕೊಂಡೆ. ಪಾಪ್! ಅವಾ, ಒಂದಿಬ್ರು ಆದ ಮ್ಯಾಲೆ ನೇರವಾಗಿ ನನ್ ಹೆಸ್ರೆ ಹೇಳ್ದ ನೋಡು. ನಾನು ಸುಮ್ನೆ ಇರ್ತಿನಾ? ಅವನವ್ವುನ್ ಒಂದ್ ದಂ ‘ಗಾಳಿ ಬಿಟ್ಟಾಗೆ ತೂರಿಕೊ’ ಅಂತಾರಲ್ಲ? ಹಾಂಗೆ ಎಡ್ ಮೂರ್ ಕವಿತಾ ಓದಿದೆ. ನಾನು ತಂದಿದ್ರಲ್ಲಿ ಇನ್ನೂ ಎಡ್ಡು ಭಾಕಿ ಉಳಿದಿದ್ದವು. ಆದ್ರೆ ಆ ಅಧ್ಯಕ್ಷ ಹನಾ ಅದಾನಲ್ಲ ಆ ದರ್ವೇಸಿ… ನನ್ ಮಗಾ ಚೀಟಿ ಕೊಡಬೇಕ? ಆಗ ಜನಾ ನನ್ನ ನೊಡ್ತಾ ಇದ್ರು. ಒಮ್ಮೆ ನನ್ ಕೈ ಕಾಲ್ ‘ಥರ್ ಥರಾ’ ಅಂದ್ವು ಅದ್ಕ ಬೇಗ ಮುಗಿಸಿ ಬಿಟ್ಟೆ. ಹ್ಯಾಂಗು ನಂಗೆ ಚೀಟಿ ಕ್ವಟ್ಟು ಕರಸ್ಕೊಂಡಾರ ಅಂದ ಮ್ಯಾಲ್ ಮತ್ ನಾನ್ಯಾಕ್ ಅಲ್ಲಿ ಕುಂತು ಉಳದವರ ಕವಿತೆ ಕೇಳಬೇಕು? ಅವರೇನು ನಮ್ಮ ಸಮಕಾಲೀನವರೆ? ನಿನ್ನೆ ಮೊನ್ನೆ ಬಂದವರು ಅವ್ರು. ಈಗ ಕಂಡ ಕಂಡದ್ದೆಲ್ಲ ಬರ್ದು “ಕೊರನಾ ಕೊರನಾ” ಅಂತ ‘ಕೊರ ಕೊರಾ’ ಓದಿದ್ರೆ ನಾನು ಒಪ್ಪಬೇಕಲ್ಲ? ಅದ್ಕೆ ಆ ಹರಸಾಹಸ ಮಾಡಿ ಹೊರ ಬಂದೆ.” ಅಂತ ಹೇಳ್ತಾ ಇದ್ದ.

“ಅಲ್ಲಾ ಬೀರ ನೀನ್ ಹೇಳೋದೇನೊ ಖರೆ. ಆದ್ರೆ ನಿಂಗೆ ಬೇಜಾರಾದ್ರೆ ಸುಮ್ನೆ ಎದ್ದು ಬರಬೇಕಾಗಿತ್ತು. ಆ ನಾಣಿಗಿ ಯಾಕೆ ಕಾಲ್ ಬಿದ್ದೆ? ಎಂದಾಗ ಆತ

“ಓಹ್! ಅದಾ? ನಾ ಮನೆಯಿಂದ ಬರುವಾಗ ನನ್ಹೆಂಡ್ತಿಗಿ, ಕವಿಗೊಷ್ಠಿಗಿ ಹೋಗ್ತಿದ್ದಿನಿ ಅಂತ ಹೇಳಿ ಬಂದೀನಿ. ಅದಕ್ ನಾನು ಹಾಂಗೆ ಬರಿಗೈಲಿ ಹೊದ್ರೆ ಅವ್ಳು ಸುಮ್ನಿರತ್ತಾಳ?”

“ಅಂದ್ರೆ?”

“ಶಾಲು, ಸನ್ಮಾನ, ನೆನಪಿನ ಕಾಣಿಕೆ ಎಲ್ಲಿ?” ಅಂತ ಕೇಳ್ತಾಳ, ಏನ್ ಮಾಡ್ಲಿ? ಅದ್ಕೆ ಅವ್ಳು ಬರಿಗೈಲಿ ಹೋದ್ರೆ ನಾಳೆ ನನ್ ಹೆಸ್ರು ಪತ್ರಿಕೇಲಿ ಬರಲ್ಲ. ಸಿಟ್ ಮಾಡ್ಕೊಂಡು ಮನಿ ಹೊರಗ್ ಹಾಕ್ತಾಳ. ಏನ್ ಮಾಡ್ಲಿ? ಅಂತ ಆ ಕೊಳ್ಕ ನನ್ ಮಗ ನಾಣಿ ಕಾಲಿಗಿ ಬಿದ್ದಬಿಟ್ಟೆ. ಇರಲಿ. ಇದು ಮಾತ್ರ ಬ್ಯಾರೆ ಯಾರಿಗೂ ಹೇಳಬೇಡ. ನೀ ನನ್ ಬಾಲ್ಯದ ಸ್ನೇಹಿತ ಅಂತ ಏನೇನು ಹೇಳ್ತಿನಿ.” ಅಂತ ಅವಾ ನಗತೊಡಗಿದ. ನಾನು ಸಮ್ಮೇಳನದ ಒಳಗೆ ಹೋಗಲು ಇಣುಕಿದೆ. ಆಗ ಬೀರ “ಏ, ನೀನು ಮತ್ ಒಳಗಡೆ ಹೊಗಬೇಡ. ನಾ, ನೀನು ಬರೋ ದಾರಿನೆ ಕಾಯ್ತಾ ನಿಂತ್ತಿದ್ದೆ. ಆಗ ನೀನೆ ಬಂದಿ. ಬಾ. ಬಾ! ಚಹಾ ಕುಡ್ದು ಬರೋಣ ಅಲ್ಲೇನು ಇಲ್ಲ. ಎಲ್ರೂ ‘ಕಾಗಕ್ಕ ಗುಬ್ಬಕ್ಕ’ ಕವಿತೆ ಓದ್ತಿದ್ರು. ಈಗ ಅವರು “ಕೊರನಾ ಕೊರನಾ” ಅಂತ ಕೊರೀತಾ ಇದ್ದಾರ.” ಅಂತ ಚಹಾದ ಹೋಟೆಲ್ ಕಡೆಗೆ ಹೆಜ್ಜೆ ಹಾಕಿದ.

“ಅಲ್ಲೋ! ದೋಸ್ತ್, ಅಷ್ಟು ದೂರದಿಂದ ಬಂದ ನಾನು ಗೋಷ್ಠಿ ಕೇಳ್ದೆ ಹೋದ್ರೆ ಹೆಂಗೆ? ಅಲ್ಲಿಂದ ಬಂದು ಬರಲಾರ್ದಾಂಗ್ ಆಗ್ತದ. ಚಹಾ ಆಮ್ಯಾಲ್ ಕುಡ್ದರಾತು. ನಡಿ ಹೋಗೊಣ ಕವಿಗೋಷ್ಠಿಗೆ” ಅಂದೆ.

“ಏ, ಏನ್ ಕವಿಗೋಷ್ಠಿ ಕೇಳ್ತಿ? ಇಲ್ಲಿ ಊಟ ಸುರು ಆಗ್ಯಾದ, ಮೊದಲು ಊಟ ಮಾಡೋಣ ಬಾ” ಅಂತ ಪಕ್ಕದಲ್ಲಿ ಇರೊ ಊಟದ ವ್ಯವಸ್ಥೆ ಕಡೆಗೆ ಸರಿದು ತಾಟ ತಗೊಂಡು ಊಟ ಮಾಡತೊಡಗಿದ.

“ಹೂಂ. ತಗೋ ತಾಟು” ಅಂತ ನನಗೂ ಒತ್ತಾಯ ಮಾಡಿದ.

“ಇರಲಿ. ನಂಗೆ ಹೊಟ್ಟೆ ಹಸಿವು ಇಲ್ಲ…” ಅಂತ ಕವಿಗೊಷ್ಠಿಯಲ್ಲಿ ಕವನ ವಾಚಿಸುವವರ ಧ್ವನಿಯ ಕಡೆಗೆ ನಾನು ಗಮನ ಹರಿಸಿದೆ.

“ಏ! ಏನ್ ಮಹಾ ಜ್ಞಾನಶೂರ ಕವಿಗಳು ಇಲ್ಲಿ? ನಿಂಗೆ ಜ್ಞಾನದ ಹಸಿವು ನೀಗಸ್ತಾರನು? ಸುಮ್ನ ಊಟ ಮಾಡೊ! ಬೇಕಾದ್ರೆ ಮುಂದಿನ ಗೋಷ್ಠಿಗೆ ನಾನು ನಿನ್ ಜೊತೆಗೆ ಬರ್ತೀನಿ” ಅಂದ.

“ಇರ್ಲಿ ಬೀರ, ನಿಂಗೆ ಬ್ಯಾರೆಯವ್ರ ಕವಿತೆ ಅಂದ್ರೆ ಯಾಕೆ ಅಷ್ಟೊಂದು ಅಸಡ್ಡೆ?” ಅಂತ ಕೇಳಿದೆ.

“ಎಂಥೆಂಥದೋ! ಎಲ್ಲಿ ಎಲ್ಲಿಂದೋ ಕವಿಗಳು ಬಂದು ವಕ್ಕರಿಸಿದ್ದಾರ. ಕಾಲ ಕೆಟ್ಟೋಯ್ತು ಕಣೋ! ನಮಗ್ಯಾರು ಕೇಳ್ತಾ ಇಲ್ಲ. ಎಲ್ಲ ಹೊಸ ಕವಿಗಳೆ ಬಂದಿದ್ದಾರ. ಅದ್ಕೆ ನಾವ್ ಜಾಸ್ತಿ ಹೇಳಿದ್ರೆ ಚೀಟಿ ಕೊಡ್ತಾರ” ಅಂದ.

“ಚೋಲೊ ಆಯ್ತಲ್ಲಾ? ಹೊಸ ಕವಿಗಳು ಬಂದ್ರೆ ಅವ್ರ ಪರಿಚಯನು ಆಗ್ತದೆ, ಮತ್ತೆ ಅವರ ಕವಿತೆನೂ ಕೇಳಿದರಾತು” ಅಂದೆ.

“ಏ, ಅದೇನು ಕೇಳ್ತಿಯಾ? ಮೊದ್ಲು ಊಟ ಮುಗಿಸಿಕೋ! ಲೇಟಾದ್ರ ತಾಟು ಸಿಗಲ್ಲ. ಊಟಾನು ಸಿಗಲ್ಲ. ಬಾ… ಬಾ… ಇಕಾ ತಗೋ” ಅಂತ ನಂಗೆ ತನ್ ಮನೆಯಲ್ಲಿ ಅಥಿತಿ ಸತ್ಕಾರ ಮಾಡಿದಂತೆ ಮಾಡತೊಡಗಿದ. ಅಷ್ಟರಲ್ಲಿ ಕವಿಗೋಷ್ಠಿಯಿಂದ ಒಬ್ಬೊಬ್ಬರಾಗಿ ಬೀರನಂತೆ ಕಣ್ತಪ್ಪಿಸಿ ಕೊಟ್ಟಿಗೆಯ ಸಾಕುಪ್ರಾಣಿಗಳು ಹಗ್ಗ ಕಡಿದುಕೊಂಡು ತೋಟದ ಕಡೆಗೆ ನುಗ್ಗಿದಂತೆ ಊಟದ ಕೋಣೆಯೊಳಗೆ ನುಗ್ಗಿ ಬರ್ತಾ ಇದ್ರು. ಆಗ ಬೀರ ಅವರನ್ನು ನೋಡಿ “ಹಾ! ಇವ್ರೆ ನೋಡೋ! ಆ ಹೊಸ ಕವಿಗಳು. ಹ್ಞೂ! ಇವ್ರು ಬಂದು ನಮ್ ಕವಿತೆಗಳಿಗೆ ಬೆಲೆ ಇಲ್ಲದಾಂಗ ಆಗ್ಯಾದ” ಅಂತ ಅವನ ಮುಂದೆ ಹಾದುಹೋದ ವ್ಯಕ್ತಿಯ ಕುರಿತು ಮೆಲ್ಲಗೆ ಹೇಳತೊಡಗಿದ.

“ಇರಲಿ. ಅವರು ಹೊಸ ನೀರು ಇದ್ದಂತೆ ಅವರಿಗೆ ಅವಕಾಶ ಸಿಗಬೇಕು” ಅಂದೆ.

ಏ, ಏನ್ ಕವಿಗೋಷ್ಠಿ ಕೇಳ್ತಿ? ಇಲ್ಲಿ ಊಟ ಸುರು ಆಗ್ಯಾದ, ಮೊದಲು ಊಟ ಮಾಡೋಣ ಬಾ” ಅಂತ ಪಕ್ಕದಲ್ಲಿ ಇರೊ ಊಟದ ವ್ಯವಸ್ಥೆ ಕಡೆಗೆ ಸರಿದು ತಾಟ ತಗೊಂಡು ಊಟ ಮಾಡತೊಡಗಿದ.

ಆಗ ಆತ “ಏನು? ಹೊಸ ನೀರು ಬಂದು ಹಳೆ ನೀರು ಕೊಚ್ಕೊಂಡು ಹೋಗ್ಲಿ ಅಂತಾನಾ ನಿನ್ ಮಾತಿನ ಅರ್ಥ?” ಅಂತ ರೇಗಾಡಿದ.

“ಯಾಕಿಷ್ಟು ಹತಾಶೆಗೊಂಡಿ ಬೀರ? ನೀನು ದೊಡ್ಡ ಸಾಹಿತಿ. ನಿನ್ ಹೆಸ್ರು ನಾಡಿನ ತುಂಬೆಲ್ಲ ಮೆರಿಲಾಕ್ ಹತ್ಯಾದ ಕರ್ನಾಟಕ ತುಂಬೆಲ್ಲ ನಿನ್ನ ಗುರ್ತ ಹಿಡಿತಾರ. ಅಂದಮ್ಯಾಗ ಇನ್ನೇನು ಬೇಕು?” ಅಂದೆ.

“ಅದೇಪ್ಪಾ ಬಂದಿರೋದೀಗ ನಂಗ ದೊಡ್ಡ ಪ್ರಾಬ್ಲಮ್ಮು…ನನ್ ಹೆಸ್ರು ಇರೋರು ಬೇರೆ ಜನ ತುಂಬ ಬರೀತಾ ಇದ್ದಾರ. ಅಂದ್ರೆ ನಂಗೆಷ್ಟು ಸಂಕ್ಟ ಆಗಬೇಡ ಹೇಳು?” ಅಂತ ಏನೇನೋ ಬಡಬಡಿಸತೊಡಗಿದ.

“ಇರ್ಲಿ, ಈಗ ಮತ್ತೊಂದು ಗೋಷ್ಠಿ ಸುರು ಆಗ್ತಾ ಇದೆ. ನಡಿ ಹೋಗೊಣ” ಅಂತ ಇಬ್ರೂ ವೇದಿಕೆಯ ಎದುರಿಗೆ ಹೋಗಿ ಕುಳಿತೆವು. ಆಗ ಕಾರ್ಯಕ್ರಮ ನಿರೂಪಕರು ‘ಕಾವ್ಯ ಕುರಿತು ಉಪನ್ಯಾಸ ಗೋಷ್ಠಿ’ ಉಪನ್ಯಾಸ ನೀಡುವವರು ‘ಅರವಿಂದ ಬುರಡೆ’ ಎಂದು ಹೇಳಿ ಹೋದ್ರು. ಆಗ ಉಪನ್ಯಾಸಸುರುವಾಯ್ತು. ಬೀರನ ಕಿವಿ ನಿಮಿರಿದವು. ಯಾಕೆಂದರೆ ಕಾವ್ಯ ಕ್ಷೇತ್ರದಲ್ಲಿ ಆತ ಸುಮಾರು ಒಂದ ಡಜನ್ ಪುಸ್ತಕ ಬರೆದು ಐದಾರನೂರು ಕವಿತೆ ಗೀಚಿದ್ದರಿಂದ ತನ್ನ ಹೆಸ್ರು ಈ ಗೋಷ್ಠಿಯಲ್ಲಿ ಚರ್ಚೆ ಆಗಬಹುದು ಅಂತ ಬಾಯಿ ಬೆಳ್ಳಗ್ ಮಾಡಿಕೊಂಡು ವೇದಿಕೆ ಕಡೆಗೆ ನೋಡತೊಡಗಿದ. ಅವನ ಮನೋಸ್ಥಿತಿ ಅರಿತ ನಾನು “ನಮ್ ಜಿಲ್ಲಾದ್ ಕಾವ್ಯದ ಕ್ಷೇತ್ರದಾಗ್ ನಿಂದು ತೊಲ್ ಭಾರಿ ಹೆಸ್ರದ ದೊಸ್ತ್. ಕಾವ್ಯದ ಉಪನ್ಯಾಸಕರು ನಿನ್ ಕುರಿತು ಮಾತಾಡಬೊದು. ನಿಂಗೆ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ ಅಲ್ಲನು?” ಎಂದೆ. ಆಗ ಅವಾ “ಹೌದ… ಹೌದು…! ನಾನು ಇಪ್ಪತ್ತು ವರ್ಷದಿಂದ ಬರೀತಾ ಇದಿನಿ ಇವ್ರು ನನ್ ಬಗ್ಗೆ ಏನ್ ಹೇಳ್ತಾರೆ ಕೇಳೊಣ ಬಾ” ಅಂತ ಅವನೆ ಎರಡನೆ ಗೋಷ್ಠಿಗೆ ಕೇಳಲು ಮುಂದಾದ.

ಬೀರ ಆ ಉಪನ್ಯಾಸಕನ ಬಾಯಿಂದ ನನ್ ಬಗ್ಗೆ ಅವರೇನಾದ್ರೂ ಮಾತಾಡುತ್ತಾನೇನೊ ಅಂತ ನೋಡ್ತಾ ಕುಳಿತು ಬಿಟ್ಟ. ಅವನ ಪಕ್ಕದಲ್ಲಿ ಮತ್ತೊಬ್ಬರು ಕವಿಗಳು ಬಂದು ಕುಳಿತರು. ಆ ಕಡೆ ಒಮ್ಮೆ ದೃಷ್ಟಿ ಹಾಯಿಸಿದೆ ಅವರಿಗೂ ಬೀರನ ತರಾಹ ಸಾಹಿತ್ಯದ ಹುಚ್ಚು ಇರುವುದು ಖಚಿತವಾಗಿತ್ತು. ಆಗ ಆ ಗೋಷ್ಠಿಯ ಉಪನ್ಯಾಸಕ ವೇದಿಕೆಗೆ ಬರುತ್ತಿದಂತೆ ಎಲ್ಲರಿಗೂ ಕೈ ಮುಗಿದು ನಮ್ರವಾಗಿ ಮಾತು ಸುರು ಮಾಡಿದ.

“ಆತ್ಮೀಯ ವೇದಿಕೆಯ ಅತಿಥಿ ಮಹೋದಯರೆ! ಸಮ್ಮೇಳನದ ಸರ್ವಾಧ್ಯಕ್ಷರೆ! ಹಾಗೂ ಜಿಲ್ಲಾ, ತಾಲೂಕು, ಹೋಬಳಿ ಅಧ್ಯಕ್ಷರೆ! ಮತ್ತು ಒಂದೆರಡು ಪುಸ್ತಕ ಬರೆದು ವಯಸ್ಸಾದ್ರು ಪರವಾಗಿಲ್ಲ. ಹಿರಿಯ ಸಾಹಿತಿ ಅನಿಸಿಕೊಂಡವರೆ! ವೇದಿಕೆಯಲ್ಲಿ ಪಾಲ್ಗೊಂಡ ಸಾಹಿತ್ಯ ಆಸ್ತಕರೆ! ನಮ್ಮ ಜಿಲ್ಲೆಯಲ್ಲಿ ಸುಮಾರು ಏನಿಲ್ಲಂದ್ರೂ 500 ಗಿಂತಲೂ ಹೆಚ್ಚು ಕವಿ- ಕವಯತ್ರಿಯರು ಇದ್ದಾರೆ.” ಅಂತ ಹೇಳಿ ಮಾತು ಮುಂದುವರೆಸಿದ. ಆತ ಪ್ರಾರಂಭದಲ್ಲಿ ತನ್ನ ಸುತ್ತಮುತ್ತಲಿನ ತನ್ನ ಸ್ನೇಹಿತ ಸಾಹಿತಿಗಳ ಬಗ್ಗೆ ಕೊರೀತಾ ಇದ್ದ. ಆದ್ರೆ ಎದುರಿನ ಕುರ್ಚಿಯ ಮೇಲೆ ಕುಳಿತ ಬೀರನ ನೋಡಿಯು ನೋಡದಂತೆ ಮಾತಾಡತೊಡಗಿದ. ಆದ್ರೆ ಬೀರನಿಗೆ ಆತ ತನ್ನ ಹೆಸ್ರು ಕವಿತೆ ಬಗ್ಗೆ ಏನಾದ್ರು ವಿಮರ್ಶೆ ಮಾಡ್ತಾನೇನೊ ಅಂತ ಆಸೆ ಮೂಡಿತ್ತು. ಅವಾ ಶಬ್ದ ಉಚ್ಚರಿಸುತ್ತಿದ್ದಾಗ ಆತನ ತುಟಿಗಳನ್ನೆ ನೋಡತೊಡಗಿದ. ಕಾವ್ಯ ಕ್ಷೇತ್ರದ ಸಾಧನೆಯಲ್ಲಿ ನನ್ನ ಕುರಿತು ಈ ಬುರಡೆ ಉಪನ್ಯಾಸಕ ಏನು ಹೇಳುತ್ತಾನೋ! ಅನ್ನೊ ಕಾವ್ಯ ಚಪಲ ಜಾಸ್ತಿಯಾಗಿ ತಾನೊಬ್ಬ ಕವಿ ಸಾಹಿತಿ ಅನ್ನೊ ಕಲ್ಪನೆ ಲೋಕದಲ್ಲಿ ತೆಲಾಡಿದ.

ಆದ್ರೆ ಉಪನ್ಯಾಸಕರು ಉದಯೋನ್ಮುಖ ಸಾಹಿತಿಗಳನ್ನೆ ಉದಾಹರಣೆಗೆಯಾಗಿಟ್ಟುಕೊಂಡು ಅವರ ಕಾವ್ಯದ ಬಗ್ಗೆ ಮಾತಾಡತೊಡಗಿದ. “ಚಂಪಕಲಾ, ಅನ್ನೋ ಇತ್ತೀಚಿನ ಲೇಖಕಿ ತನ್ನ ಫೇಸ್ ಬುಕ್ ನಲ್ಲಿ ಒಂದು ಕವಿತೆ ತುಂಬ ಚನ್ನಾಗಿ ಚೌಕರಾರದಲ್ಲಿ ಬರೆದು ಅದಕ್ಕೆ ಅವ್ಳು ‘ಚಂಪು ಕಾವ್ಯ’ ಅಂತ ಹೆಸರಿಟ್ಟು ಪೋಸ್ಟ್ ಮಾಡಿದ್ದಾಳೆ. ತಮಗೆ ಸಮಯಸಿಕ್ಕರೆ ಅವಳ ಫೇಸ್ ಬುಕ್ ಖಾತೆ ತೆರೆದು ಒಮ್ಮೆ ಓದಿ ನೋಡಿ’ ಅಂತ ವರ್ಣನೆ ಮಾಡತೊಡಗಿದ. ಮತ್ತು ಇನ್ನೋರ್ವ ಲೇಖಕಿ ‘ಮಲ್ಲಿಕಾ’ ಅಂತ ಅವಳ ಹೆಸ್ರು ಅವ್ಳು ಫೇಸ್ ಬುಕ್ ಮತ್ತು ವಾಟ್ಸಪ್ ಗಳಲ್ಲಿ ಕವಿತೆ ಓದಿ ವಿಡಿಯೊ ಮಾಡಿ ಕಳಿಸುತ್ತಾಳೆ. ಅವಳು ತುಂಬ ಚನ್ನಾಗಿ ಕನ್ನಡಿ ನೋಡಿ ನೋಡಿ ಕವಿತೆ ಓದುವ ಸ್ಟೈಲು ವಿಡಿಯೊ ಮಾಡಿ ಕಳಿಸುತ್ತಾಳೆ. ಅವಳ ಕಾವ್ಯವು ನೀವು ಗಮನಿಸಬೇಕು. ಮೊನ್ನೆ ಮೊನ್ನೆ ಬರೆದ ಅವಳದೊಂದು ಕವಿತೆ ಜಿಲ್ಲಾ ಸಾಹಿತ್ಯ ಗುಂಪಿನಲ್ಲಿ ಕೇಳಿಬಂದು ತುಂಬಾ ಜನರಿಂದ ಚಪ್ಪಾಳೆ ಚಿಹ್ನೆಯಿಂದ ಹೊಗಳಿಸಿಕೊಂಡು ಸೂಪರ್ ಚಿಹ್ನೆಯಿಂದ ಮೆಚ್ಚುಗೆ ಪಡೆಯುತ್ತಿದ್ದಾಳೆ. ಅವಳು ಒಮ್ಮೊಮ್ಮೆ ಫೇಸ್ ಬುಕ್ ಲೈವ್ನಲ್ಲಿ ಓದಿದ ಕವಿತೆಗೆ ತುಂಟ ಹುಡುಗರಿಂದ ಹೆಚ್ಚು ಲೈಕ್ ಗಳನ್ನು ಪಡೆದುಕೊಂಡಿದ್ದಾಳೆ. ಅವಳ ಕವಿತೆ ಬೇಕಾದ್ರೆ ಆಕೆಯ ಫೇಸ್ ಬುಕ್ ಡಿಪಿಯಲ್ಲಿ ಒಂದು ಸುಂದರವಾದ ಫೋಟೊ ಇದೆ ಗುರುತು ಹಿಡಿದು ಓದಿರಿ.

ನನಗೂ ನಿನ್ನೆ ಮೊನ್ನೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿದ್ದಾಳೆ. ಆಕೆ ಉತ್ತಮ ಬರಹಗಾರ್ತಿ. ಆಕೆ ಮುಂದೆ ಉತ್ತಮ ಕವಯತ್ರಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ.” ಅಂತ ಹೇಳ್ತಿದ್ದಾಗ ಬೀರನ ರಕ್ತ ಕುದಿಯತೊಡಗಿತ್ತು. ಅವಾ ಸಿಟ್ಟಿನಿಂದ “ಇವಾ ಯಾವ್ ಸೀಮೆ ಉಪನ್ಯಾಸಕನೋ! ಪುಸ್ತಕ ಬರೆದವರ ಬಗ್ಗೆ ಮಾತಾಡೊದು ಬಿಟ್ಟು ವಾಟ್ಸಪ್, ಫೇಸ್ ಬುಕ್ ನಲ್ಲಿ ಬರೆದವರ ಬಗ್ಗೆ ಹೇಳ್ತಾನೆ. ಅವು ಕಾಪಿ ಪೇಸ್ಟ್ ಇರ್ತಾವೆ ಅನ್ನೋದು ಸ್ಪಲ್ಪನಾದ್ರೂ ಪರಿಜ್ಞಾನ ಬ್ಯಾಡನು? ಅನಿಷ್ಠ ಮುಂಡೆದು ಒಯ್ದು” ಅಂತ ವಟಗುಟ್ಟತೊಡಗಿದ. ಮತ್ತೆ ಉಪನ್ಯಾಸಕ ತನ್ನ ಮಾತುಗಳನ್ನು ಮುಂದುವರೆದು “ನಮ್ಮ ಜಿಲ್ಲೆಯಲ್ಲಿ ತುಂಬಾ ಜನ ಕವಿ – ಕವಯತ್ರಿಯರು ಕವಿತೆ ಬರೆಯುತ್ತಿದ್ದಾರೆ. ಅಂತಹದ್ರಲ್ಲಿ ನನ್ನ ಹೆಂಡ್ತಿಯು ಒಬ್ಬಳು.” ಅಂತ ಹೇಳಿದ. ಈ ಮಾತು ಕೇಳಿ ಬೀರನಿಗೆ ಕುಡಿಯದೆ ನೀಶೆ ನೆತ್ತಿಗೇರಿತ್ತು.

“ಇಷ್ಟು ಬರೆದ ಸಾಹಿತಿ ನಾ ಎದುರಿಗಿ ಕುಳಿತಿರುವಾಗ ನನ್ ನೋಡಿ ಆದ್ರೂ ನನ್ ಬಗ್ಗೆ ಹೇಳ್ದೆ ತನ್ ಹೆಂಡ್ತಿ ಬಗ್ಗೆ ಹೇಳ್ತಾನಲ್ಲ ಇವ್ನು? ಇವನಿಗೆ ಯಾವನು ಚೀಟಿ ಕೊಡ್ತಾ ಇಲ್ಲವಲ್ಲ ? ಎಲ್ಲವೊದ್ನ್ ಆ ಅಧ್ಯಕ್ಷ?” ಅಂತ ಸುತ್ತಲೆಲ್ಲ ಕಣ್ಣಾಡಿಸಿದ. ಆತ ಮತ್ತೆ ಮುಂದುವರೆದು “ನನ್ ಹೆಂಡ್ತಿ ಕವಿತಾ ತುಂಬ ಚನ್ನಾಗಿ ಬರೆದಿದ್ದಾಳೆ. ಯಾಕೆಂದ್ರೆ ಅವ್ಳ ಹೆಸ್ರು ‘ಕವಿತಾ’ನೆ ಅದಾ. ಅದಕ್ಕೆ ಅವ್ಳಿಗೆ ಕವಿತಾ ಅಂದ್ರೆ ಅಷ್ಟು ಪಂಚಪ್ರಾಣ. ಅವ್ಳು ಬರೆದ ಕವಿತಾ ನೀವು ಓದಬೇಕು. ಆಕೆ ನಮ್ಮ ಜಿಲ್ಲೆಯ ಸಾಹಿತಿ ಡಿ.ಜಿ.ಬಪ್ಸೆಯವರಿಗೆ ರಾಷ್ಟ್ರಕವಿ ಗೋವಿಂದ ಪೈಗೆ ಹೋಲಿಸಿ ಬರೆದಿದ್ದಾಳೆ. ಇನ್ನೋರ್ವ ಸಾಹಿತಿ ಚರಣಪ್ಪಗೆ ಕುವೆಂಪುಗೆ ಹೋಲಿಸಿ ಬರೆದಿದ್ದಾಳೆ. ಮತ್ತೆ ಕುರ್ರಾಕವಿಗೆ ಬೇಂದ್ರೆಗೆ ಹೋಲಿಸಿ ಬರೆದಿದ್ದಾಳೆ. ಮಾಸ್ತಿ, ಕಾರಂತ, ಗೋಕಾಕ್ ಅಬ್ಬಬ್ಬಾ! ಮೊದಲಾದ ಕವಿಗಳಿಗೆ ಇಲ್ಲಿಯ ಕೆಲವು ಕವಿಗಳಿಗೆ ಹೋಲಿಸಿ, ಒಂದು ಸುಂದರ ಕವಿತಾದಲ್ಲಿ ವರ್ಣಿಸಿದ್ದಾಳೆ.

ಅಂತ ಏನೆಲ್ಲ ಹೇಳ್ತಿದ್ದದನ್ನು ಕೇಳ್ತಿದ್ದ ಬೀರ “ಇವಾನಂತು ನನ್ ಹೆಸ್ರು ತಗೋಲಿಲ್ಲ. ಇವ್ನ ಹೆಂಡ್ತಿಯಾದ್ರು ನಂಗೆ ದ್ಯಾವನೂರು, ಸಿದ್ದಲಿಂಗಯ್ಯ ಅಂತ ವರ್ಣಿಸಿ ಕವಿತೆ ಬರೆದಿರಬಹುದು. ಅವಾ ಅದು ಪೂರ್ತಿ ಮಾಡದೆ ಕೆಲವು ಕವಿಗಳಿಗೆ ಕೆಲವರನ್ನು ಹೋಲಿಸಿ ಬರೆದಿದ್ದಾಳೆ ಅಂದ್ರೆ? ನನ್ ಬಗ್ಗೆ ಬರೆದಿರಬೇಕು ಆದ್ರೆ ಮಗಾ ಇವಾ ಪೂರ್ತಿ ಹೇಳಲಿಲ್ಲವಲ್ಲ?’ ಅಂತ ತನ್ನ ಕೈ ಕಿವುಚಿಕೊಂಡಿದ್ದ. ಹಾಗೆ ಅವನು ಮಾತು ಮುಂದುವರೆಸಿದನ್ನು ಕೇಳ್ತಾ ಅವ್ನ ಮುಖ ನೋಡ್ತಾ ನೋಡ್ತಾ ಬೀರನು ಕೋಳಿ, ಗೋಣು ಚಾಚಿದಂತೆ ಉದ್ದಾಕ್ ತನ್ ಗೊಣು ಚಾಚಿ, ಕಿವಿಯೊಡ್ಡಿ, ತನ್ನ ಹೆಸ್ರು ಅವನ್ನ ಹೆಂಡ್ತಿ ಏನಾದ್ರು ಕವಿತೆಯಲ್ಲಿ ವರ್ಣಿಸಿದ್ದಾಳೆ, ಅಂತೇನಾದ್ರು ಮತ್ತೊಮ್ಮೆ ಹೇಳ್ತಾನೇನೊ ಅಂತ ಬಾಯಿ ತೆರದು ನೋಡ್ತಾ ಕುಳಿತ್ತಿದ್ದ. ಆದ್ರೆ, ಆ ಬುರಡೆ ಉಪನ್ಯಾಸಕ ಹೆಸರಿಗೆ ತಕ್ಕಂತೆ ‘ಬುರಡೆ ಬಾಬಾನ ಪುರಾಣದಂತೆ’ ಹಳೆಯ ಕವಿಗಳನ್ನು ಬಿಟ್ಟು ಉದಯೋನ್ಮುಖ ಕವಿಗಳ ಬಗ್ಗೆನೆ ಮತ್ತೆ ಮಾತು ಮುಂದುವರೆಸಿದ.

“ನೋಡಿ ನನ್ನ ಹೆಂಡ್ತಿ ಕರ್ನಾಟಕದಲ್ಲಿ ಹುಟ್ಟದಿದ್ರು ಕನ್ನಡ ಸಾಲಿ ಕಲ್ತು ಏಷ್ಟು ಶ್ಯಾಣೆ ಆಗಿ ನಮ್ ಜಿಲ್ಲೆಯ ಸಾಹಿತಿಗಳಿಗೆ ಹೆಂಗೆಲ್ಲ ವರ್ಣಿಸಿದ್ದಾಳೆ ಅಂದ್ರೆ ಕವಿರತ್ನ ಕಾಳಿದಾಸನಂತೆ ಆಕೆಗೂ ಇದು ದೇವರು ಕೊಟ್ಟ ವರ” ಅಂತ ಹೇಳ್ತಾ ನನ್ನೆರಡು ಮಾತುಗಳನ್ನು ಮುಗಿಸುತ್ತೇನೆ. ಜೈ ಹಿಂದ್. ಜೈ ಕರ್ನಾಟಕ” ಅಂತ ಗೋಷ್ಠಿ ಮೊಟಕುಗೊಳಿಸುತ್ತಿದ್ದಂತೆ ಮತ್ತೆ ಬೀರ ಕೆಂಡಾಮಂಡಲನಾಗಿದ್ದ. ಮತ್ತು ಅವನ ಪಕ್ಕ ಕುಳಿತ ದಲಿತ ಬಂಡಾಯ ಕವಿಗಳು ಕಾವ್ಯ ಗೋಷ್ಠಿಯಿಂದ ಅತೃಪ್ತಿ ಹೊಂದಿ “ಈ ಉಪನ್ಯಾಸಕ ಅರವಿಂದ ಬುರಡೆ, ಬೇಕೂ ಅಂತಲೆ ಹಿಂಗೆ ಮಾಡ್ಯಾನss.. ನಮ್ಮ ಕಾವ್ಯದ ಬಗ್ಗೆ ಉಲ್ಲೇಖ ಮಾಡದೆ ಜಾತಿ ತಾರತಮ್ಯ ಮಾಡ್ಯಾನ” ಅಂತ ಒಬ್ಬರ ಮುಖ ಒಬ್ಬರು ನೋಡಿ ಬೇಸರ ವ್ಯಕ್ತಪಡಿಸಿದರು. ಬೀರ ಸುಮ್ಮನಿರದೆ ಆ ಉಪನ್ಯಾಸ ಮುಗಿದ ನಂತರ ಏನೋ ಒಂದು ವಸ್ತು ಕಳೆದುಕೊಂಡಂತೆ ವರ್ತಿಸತೊಡಗಿದ.

ನಾನು ಒಮ್ಮೆ ಅವನ ಮುಖ ನೋಡಿದೆ. ಆತ “ನಾನು ಮೊದ್ಲೆ ಹೇಳ್ದೆ. ಈ ಹಾಳಾದ ಕವಿಗೋಷ್ಠಿ ಉಪನ್ಯಾಸಗಳು ನಮ್ಮಂಥವರಿಗೆ ಮೂಲೆಗುಂಪು ಮಾಡುತ್ತಿವೆ ಅಂತ. ನಡಿ ಹೋಗೊಣ” ಅಂತ ಅಲ್ಲಿ ಉಚಿತವಾಗಿ ಹಂಚುತ್ತಿದ್ದ ದಿನಪತ್ರಿಕೆಗಳನ್ನೆಲ್ಲ ತಗೊಂಡು ಮುದ್ದಿಮಾಡಿ ಬಗಲಲ್ಲಿ ಹಿಡಿದುಕೊಂಡು, ಕೈಯಲ್ಲಿ ಕವಿಗೋಷ್ಠಿಯಲ್ಲಿ ಹೊಚ್ಚಿದ ಶಾಲು, ಹಾರ, ನೆನಪಿನ ಕಾಣಿಕೆ, ಇಷ್ಟ ಇಲ್ಲದಿದ್ದರೂ ಹೆಂಡ್ತಿಗೆ ಮೆಚ್ಚಿಸೋದಕ್ಕಾಗಿ ಕ್ಯಾರಿಬ್ಯಾಗಿನಲ್ಲಿ ಹಿಡಿದುಕೊಂಡು ಹೆಜ್ಜೆ ಹಾಕಿದ. ನನಗೂ ಬಸ್ ಮಿಸ್ಸಾಗಬಹುದೆಂದು ಅವನೊಂದಿಗೆ ಆಟೋ ಹತ್ತಿ ಬಸ್ ನಿಲ್ದಾಣ ತಲುಪಿದೆ.