ಎಲ್ಲರಿಂದಲೂ ಬೇರ್ಪಟ್ಟು ಒಬ್ಬಂಟಿಯಾಗಿ ನಿಂತದ್ದು ಆ ವ್ಯಕ್ತಿ. ಏಕೆಂದರೆ ಅದು ಆ ವ್ಯಕ್ತಿ ಅವನು ಎಂಬ ವ್ಯಕ್ತಿತ್ವನ್ನು, ಅಸ್ಮಿತೆಯನ್ನು ಬಿಟ್ಟು ಅವಳು ಎಂದು ಆಗಲು ಮಾರ್ಪಾಡಾಗುತ್ತಿದ್ದ ಹಂತದ ಕಥೆ. ಆ ಒಂದು ವಿಶಿಷ್ಟ ಹಂತದಲ್ಲಿ ಅವಳು ಸಹಾಯ ಬಯಸಿ ಪ್ರಾಜೆಕ್ಟ್ ಸೇರಿದ್ದಳು. ಇನ್ನೂ ಹರೆಯದ ವಯಸ್ಸು. ಕಾನೂನು ಪ್ರಕಾರ ಇನ್ನೂ ಅವನು ಎಂಬ ಲಿಂಗವೇ ಚಾಲ್ತಿಯಲ್ಲಿತ್ತು. ಹೆಸರನ್ನು ಬದಲಾಯಿಸಿಕೊಂಡಿದ್ದಳು. ವೈದ್ಯಕೀಯ ಪದ್ಧತಿ ಪ್ರಕಾರ ಲಿಂಗ ಬದಲಾವಣೆ ಹೊಂದಲು ಹಾರ್ಮೋನ್ ಔಷಧ ತೆಗೆದುಕೊಳ್ಳುತ್ತಿದ್ದಳು. ಅದರ ಪರಿಣಾಮಗಳಿಂದ ದೈಹಿಕವಾಗಿ, ಮಾನಸಿಕವಾಗಿ ಬಳಲುತ್ತಿದ್ದಳು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ನಲವತ್ತೊಂದನೇ ಸಿಡ್ನಿ ಮಾರ್ಡಿ ಗ್ರಾ – Mardi Gras ಮೆರವಣಿಗೆ ಮೊನ್ನೆ ಶನಿವಾರ ಮಾರ್ಚ್ ಮೂರರಂದು ನಡೆಯಿತು. ತಾವು LGBTQI ಅನ್ನೋ ಲೈಂಗಿಕ ಭಿನ್ನತೆಗಳಿರೋ ವಿವಿಧ ಗುಂಪುಗಳಿಗೆ ಸೇರಿದವರು ಎಂದು ಗುರುತಿಸಿಕೊಂಡ ಸುಮಾರು ಹನ್ನೆರಡು ಸಾವಿರ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಾನು ಮೆರವಣಿಗೆಯನ್ನು ಟೆಲಿವಿಷನ್ ಪರದೆಯ ಮೇಲೆ ಮರುದಿನ ಭಾನುವಾರ ರಾತ್ರಿ ನೋಡಿದ್ದು.

ಬಣ್ಣ ಬಣ್ಣದ, ಚಿತ್ರವಿಚಿತ್ರ ವೇಷಭೂಷಣಗಳನ್ನು ಧರಿಸಿ, ಆಕರ್ಷಕ ಅಲಂಕಾರಗಳನ್ನು ಮಾಡಿಕೊಂಡು ಸಿಡ್ನಿ ನಗರದ ಮುಖ್ಯರಸ್ತೆಯಲ್ಲಿ ನಡೆಯುತ್ತಾ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ ಆ ಸಾವಿರ ಸಾವಿರ ಮಂದಿ ನಲಿದಾಡಿದರು. ಅವರಲ್ಲಿ ಅದೆಷ್ಟು ಸಂಭ್ರಮವಿತ್ತು, ಹೆಮ್ಮೆಯಿತ್ತು! ಒಂಥರಾ ನಶೆಯೇರಿಸುವಂಥಾ ಉತ್ಸಾಹ ಕಾಣಿಸುತಿತ್ತು. ನಮ್ಮ ಮೈಸೂರು ದಸರಾ ಮೆರವಣಿಗೆಯಂದು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನಿಂತು ನೋಡುವ ಜನರಂತೆ ಸಿಡ್ನಿ ನಗರದ ಆ ಉದ್ದ ರಸ್ತೆಯ ಎರಡೂ ಕಡೆ ಜನ ನಿಂತು ನೋಡುತ್ತಾ ಮರೆಯದೆ ತಾವೂ ಕೈ ಬೀಸಿ ಅವರ ಉತ್ಸುಕತೆಯನ್ನೂ ಮೆರೆದರು. ದೇಶವಿದೇಶಗಳಿಂದ ವಲಸೆ ಬಂದು ನೆಲೆಸಿರುವವರನ್ನು ಪ್ರತಿನಿಧಿಸುವ ಗುಂಪುಗಳಲ್ಲಿ ಭಾರತೀಯರು, ಸಿಂಹಳ, ನೇಪಾಳದವರೂ ಇದ್ದರು. ಆಗಾಗ ಕೆಲ ಭಾರತೀಯರ ಕಥೆಗಳನ್ನು ಕೂಡ ತೋರಿಸಿದರು.

ಕ್ರಿಶ್ಚಿಯನ್ ಧರ್ಮದಲ್ಲಿ ೪೦ ದಿನಗಳ ಉಪವಾಸವೆಂಬ ಪವಿತ್ರ ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಮಾರ್ಡಿ ಗ್ರಾ ಪ್ರಸ್ತಾಪವಿದೆ. ಅದರ ಮೂಲ ಹುಡುಕಲು ಹೋದರೆ ಯೂರೋಪಿನ ರಾಜರ ಕತೆಗಳು, ಅಮೆರಿಕದಲ್ಲಿ ಶುರುವಾದ ಮೆರವಣಿಗೆಯ ಕತೆ ಎಲ್ಲಾ ಬಿಚ್ಚಿಕೊಳ್ಳುತ್ತವೆ. ಇಲ್ಲಿ ಆಸ್ಟ್ರೇಲಿಯಾದಲ್ಲಿ ಮಾರ್ಡಿ ಗ್ರಾ (Gras ಅಂತ ಇದ್ದರೂ ಈ ಪದದಲ್ಲಿ s ಅಕ್ಷರ ನಿಶ್ಯಬ್ದ) ಪ್ರಸಿದ್ಧಿಯಾದದ್ದು ಇಲ್ಲಿನ ಮಟ್ಟಿಗೆ ಒಂದು ಚೆಂದದ ಕತೆ. ೧೯೭೮ ನೇ ಇಸವಿಯ ಸಿಡ್ನಿ ನಗರದಲ್ಲಿ ಮೊಟ್ಟಮೊದಲ ಸಿಡ್ನಿ ಮಾರ್ಡಿ ಗ್ರಾ ಮೆರವಣಿಗೆ ನಡೆದಿದ್ದು. ಅದನ್ನು ಯೋಜಿಸಿದ್ದವರ ಮತ್ತು ಭಾಗವಹಿಸಿದ್ದವರ ಉದ್ದೇಶ ಒಂದೇ ಒಂದು – ಲೈಂಗಿಕ ಭಿನ್ನತೆಗಳನ್ನು (LGBTQI) ಸಮಾಜಕ್ಕೆ ತೋರಿಸಿ ಅದು ತಪ್ಪಲ್ಲ, ಅದನ್ನು ಒಪ್ಪಿಕೊಂಡು ಎಲ್ಲರೂ ಒಮ್ಮತದಿಂದ ಬಾಳೋಣ, ಎಂದು ಹೇಳುವುದು. ಆಗಿನ ಆಸ್ಟ್ರೇಲಿಯಾ ಸಮಾಜ ಲೈಂಗಿಕ ಭಿನ್ನತೆಗಳನ್ನು ಒಪ್ಪಿರಲಿಲ್ಲ. ಸಲಿಂಗ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಿತ್ತು. ಅಂತಹ ಭಿನ್ನತೆಗಳಿದ್ದವರು ಅದನ್ನು ಮುಚ್ಚಿಟ್ಟುಕೊಂಡು ಹೆದರಿಕೆಯಿಂದ, ಆತಂಕದಿಂದ ಬದುಕುತ್ತಿದ್ದರಂತೆ. ಅವರ ಮಾನವ ಹಕ್ಕುಗಳನ್ನು ಎತ್ತಿ ಹಿಡಿದು ೧೯೭೮ರಲ್ಲಿ ಮೆರವಣಿಗೆ ಹೊರಟೇಬಿಟ್ಟರು. ಅಲ್ಲಿ ಹಿಂಸೆ, ನೋವು, ಆಕ್ರೋಶ, ಬೆದರಿಕೆಗಳ ಮಾತಿರಲಿಲ್ಲ. ಪೊಲೀಸರು ಬಂಧಿಸುತ್ತಾರೆ ಎಂಬ ಭಯವನ್ನು ಹತ್ತಿಕ್ಕಿ ಎಲ್ಲರೂ ಸಂಭ್ರಮಿಸುವ ಬೀದಿಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಅಲ್ಲಿ ಸಾಮಾನ್ಯ ಜನರ ಭಾವನೆಗಳಿಗೆ ಪ್ರಾಮುಖ್ಯತೆ ಇತ್ತು. ಬೀದಿಗಿಳಿದ ಅವರು ಗಲಾಟೆ ಮಾಡಲಿಲ್ಲ, ಬದಲಿಗೆ ಸಮುದಾಯದಲ್ಲಿ ಒಂದು ಹಬ್ಬ ಮಾಡಿದರು. ಮಾರ್ಡಿ ಗ್ರಾ ಹಬ್ಬದ ಪಿತಾಮಹನೆಂದು ಕರೆಸಿಕೊಳ್ಳುವ ರಾನ್ ಆಸ್ಟಿನ್ ಸಿಡ್ನಿ ನಗರದಲ್ಲಿ ಇಂತಹ ಹಬ್ಬವನ್ನು ಆರಂಭಿಸುವುದರ ಹಿಂದೆ ಅಮೆರಿಕೆಯ ಸ್ಯಾನ್ ಫ್ರಾನ್ಸಿಸ್ಕೊ ನಗರದ ಮೆರವಣಿಗೆಯ ಪ್ರಭಾವವಿತ್ತು ಎಂದಿದ್ದಾರೆ.

ಟಿವಿ ಪರದೆಯ ಮೇಲೆ ಮಾರ್ಡಿ ಗ್ರಾ ನಲಿವನ್ನು ನೋಡುತ್ತಿದ್ದಾಗ ನನಗೆ ನನ್ನ ಕೆಲ ಪರಿಚಯಸ್ಥರು ನೆನಪಾದರು. ಅವರಲ್ಲಿ ಇಬ್ಬರು ಇದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇನ್ನಿಬ್ಬರು ದೂರದ ಇಂಗ್ಲೆಂಡ್ ನಿವಾಸಿಗಳು. ಒಬ್ಬರ ಜೊತೆ ಉದ್ಯೋಗ ಸ್ಥಳದಲ್ಲಿ ನಾನು ಕೆಲಸ ಮಾಡಿದ್ದೆ. ಆಗಾಗ ನನ್ನ ಗಮನಕ್ಕೆ ಬರುತ್ತಿದ್ದದ್ದು ಮಾತಿನ ಮೂಲಕ ತಿಳಿಯುತ್ತಿದ್ದ ಅವರ ಜೀವನ ಶೈಲಿ. ತಮ್ಮ ಸಂಗಾತಿಯ ಜೊತೆ ಅವರು ಹೋಗುತ್ತಿದ್ದ ಬೇರೆ ಬೇರೆ ದೇಶಗಳ ಪ್ರವಾಸ ಸ್ಥಳಗಳಲ್ಲಿ ಅವರು ನೋಡುತ್ತಿದ್ದ ಲೈಂಗಿಕ ಶೋಷಣೆ, ಭಿನ್ನತೆಗಳನ್ನು ವಿಕೃತಗೊಳಿಸಿ ಅಪರಾಧೀಕರಿಸಿದ್ದ ಸಮುದಾಯಗಳು, ಅವರನ್ನೇ ಅಪರಾಧಿಗಳು ಎಂದು ದೂಷಿಸಿದ್ದ ಘಟನೆಗಳು. ಒಟ್ಟಿನಲ್ಲಿ ಅವರ ಕಥೆಗಳಿಂದ ಲೈಂಗಿಕ ವಿಭಿನ್ನತೆಗಳ ಬಗ್ಗೆ ನನಗಿದ್ದ ಜ್ಞಾನ ಸ್ವಲ್ಪ ಹೆಚ್ಚಿತ್ತು.

ಇನ್ನೊಬ್ಬರು ನನ್ನ ಪ್ರಾಜೆಕ್ಟ್ ನಲ್ಲಿ ಇಡೀ ಒಂದು ವರ್ಷ ಪಾಲ್ಗೊಂಡು, ಅವರಿಗೆ ನಾನು ಸಲಹೆಗಾರಳು ಮತ್ತು ಕೋಚ್ ಆಗಿದ್ದು, ಹೆಚ್ಚು ಕಡಿಮೆ ಅವರು ಒಂದು ರೀತಿಯ ಅವಲಂಬನೆಯನ್ನು ಬೆಳೆಸಿಕೊಂಡಿದ್ದರು. ಅವರಲ್ಲದೆ ಇನ್ನೂ ಹದಿನೈದು ಜನಕ್ಕೆ ನಾನು ಕೋಚ್ ಆಗಿ ಕೆಲಸ ಮಾಡುತ್ತಾ ಅವರ ಜೀವನಗಾಥೆಯ ದಾರಿಯಲ್ಲಿ ಅವರೊಂದಿಗೆ ಹೆಜ್ಜೆ ಹಾಕಿದ್ದೆ. ಅವರೆಲ್ಲರೂ ಯಾವತ್ತೂ, ಬೇರೆಯೆಲ್ಲೂ ಬೆಳಕಿಗೆ ಬಾರದ ತಮ್ಮ ಕತೆಗಳನ್ನು ನನ್ನ ಬಳಿ ಹೇಳಿಕೊಂಡಿದ್ದರು.

ಎಲ್ಲರಿಂದಲೂ ಬೇರ್ಪಟ್ಟು ಒಬ್ಬಂಟಿಯಾಗಿ ನಿಂತದ್ದು ಆ ವ್ಯಕ್ತಿ. ಏಕೆಂದರೆ ಅದು ಆ ವ್ಯಕ್ತಿ ಅವನು ಎಂಬ ವ್ಯಕ್ತಿತ್ವನ್ನು, ಅಸ್ಮಿತೆಯನ್ನು ಬಿಟ್ಟು ಅವಳು ಎಂದು ಆಗಲು ಮಾರ್ಪಾಡಾಗುತ್ತಿದ್ದ ಹಂತದ ಕಥೆ. ಆ ಒಂದು ವಿಶಿಷ್ಟ ಹಂತದಲ್ಲಿ ಅವಳು ಸಹಾಯ ಬಯಸಿ ಪ್ರಾಜೆಕ್ಟ್ ಸೇರಿದ್ದಳು. ಇನ್ನೂ ಹರೆಯದ ವಯಸ್ಸು. ಕಾನೂನು ಪ್ರಕಾರ ಇನ್ನೂ ಅವನು ಎಂಬ ಲಿಂಗವೇ ಚಾಲ್ತಿಯಲ್ಲಿತ್ತು. ಹೆಸರನ್ನು ಬದಲಾಯಿಸಿಕೊಂಡಿದ್ದಳು. ವೈದ್ಯಕೀಯ ಪದ್ಧತಿ ಪ್ರಕಾರ ಲಿಂಗ ಬದಲಾವಣೆ ಹೊಂದಲು ಹಾರ್ಮೋನ್ ಔಷಧ ತೆಗೆದುಕೊಳ್ಳುತ್ತಿದ್ದಳು. ಅದರ ಪರಿಣಾಮಗಳಿಂದ ದೈಹಿಕವಾಗಿ, ಮಾನಸಿಕವಾಗಿ ಬಳಲುತ್ತಿದ್ದಳು.

ಆಗಿನ ಆಸ್ಟ್ರೇಲಿಯಾ ಸಮಾಜ ಲೈಂಗಿಕ ಭಿನ್ನತೆಗಳನ್ನು ಒಪ್ಪಿರಲಿಲ್ಲ. ಸಲಿಂಗ ಸಂಬಂಧವನ್ನು ಅಪರಾಧ ಎಂದು ಪರಿಗಣಿಸಿತ್ತು. ಅಂತಹ ಭಿನ್ನತೆಗಳಿದ್ದವರು ಅದನ್ನು ಮುಚ್ಚಿಟ್ಟುಕೊಂಡು ಹೆದರಿಕೆಯಿಂದ, ಆತಂಕದಿಂದ ಬದುಕುತ್ತಿದ್ದರಂತೆ. ಅವರ ಮಾನವ ಹಕ್ಕುಗಳನ್ನು ಎತ್ತಿ ಹಿಡಿದು ೧೯೭೮ರಲ್ಲಿ ಮೆರವಣಿಗೆ ಹೊರಟೇಬಿಟ್ಟರು.

ದೇಹದಲ್ಲಿ ಅಗತ್ಯ ಅಂಗಾಂಗ ಬದಲಾವಣೆ ಮಾಡಿಸಿಕೊಳ್ಳಲು ಸರ್ಜರಿಯ ಅವಶ್ಯಕತೆಯಿತ್ತು. ಅದಕ್ಕೆ ಅವಳ ಬಳಿ ಹಣವಿರಲಿಲ್ಲ. ಸರ್ಕಾರದ ಸಹಾಯಕ್ಕಾಗಿ ವರ್ಷಾನುಗಟ್ಟಲೆ ಕಾಯಬೇಕಿತ್ತು. ತನ್ನನ್ನು ಹೆಣ್ಣು ಎಂದು ಗುರುತಿಸಿಕೊಂಡು ತಕ್ಕಂತಹ ವೇಷಭೂಷಣ, ಅಲಂಕಾರಗಳನ್ನು ಮಾಡಿಕೊಳ್ಳುತ್ತಿದ್ದಳು. ಆ ಕಾರಣಕ್ಕಾಗಿ ಕುಟುಂಬದವರ ಮತ್ತು ಸಮುದಾಯದ ಜನರ ಕೋಪವನ್ನು, ಅಸಡ್ಡೆಯನ್ನು, ಕಿರುಕುಳವನ್ನು ಪ್ರತಿನಿತ್ಯವೂ ಅನುಭವಿಸುತ್ತಾ ನೊಂದಿದ್ದಳು.


ಆ ಎಲ್ಲಾ ಕತೆಗಳನ್ನು ಅವಳು ಹೆಚ್ಚುಕಡಿಮೆ ಪ್ರತಿವಾರವೂ ನನ್ನಲ್ಲಿ ಹೇಳಿಕೊಳ್ಳುತ್ತಿದ್ದಳು. ಕೆಲವೊಂದು ಮುಜುಗರವಾದದ್ದು, ‘ಇದನ್ನು ನಾನು ಕೇಳಬೇಕಿತ್ತೇ’ ಎಂದೆನಿಸಿದ್ದು, ಮರುಕ ಹುಟ್ಟಿದ್ದು, ಕಣ್ಣಲ್ಲಿ ನೀರು ತರಿಸಿದ್ದು, ನಾನು helpless ಎಂದೆನಿಸಿದ್ದು. ಪ್ರತಿ ಭೇಟಿಯಲ್ಲೂ “ನಾನಿವತ್ತು ಹೇಗೆ ಕಾಣುತ್ತಿದ್ದೀನಿ, ನನ್ನ ಡ್ರೆಸ್ಸಿಂಗ್ ಸ್ಟೈಲ್ ನಿನಗೆ ಹಿಡಿಸಿತಾ, ನೋಡು ಎಷ್ಟು ಜೋಪಾನವಾಗಿ ಎಲ್ಲವನ್ನೂ ಮ್ಯಾಚಿಂಗ್ ಆರಿಸಿದ್ದೀನಿ. ಲಿಪ್ ಸ್ಟಿಕ್ ಮರೆತಿಲ್ಲ,” ಅನ್ನುತ್ತಿದ್ದಳು.

ಒಮ್ಮೆ “ನೋಡು, ಇವತ್ತು ನನ್ನ ಮೊಲೆಗಳ ಆಕೃತಿಯನ್ನು ಅಪ್ಪಿಕೊಳ್ಳುವಂಥ ಬ್ರಾ ಹಾಕಿದ್ದೀನಿ. ಓಹ್, ಹೆಣ್ಣು ಎಂಬ ಭಾವನೆ ಎಷ್ಟು ಚೆನ್ನ! ನಾನದನ್ನ ಅನುಭವಿಸುತ್ತಿರುವುದು ನನ್ನ ಅದೃಷ್ಟ” ಅಂದಳು. ಅವಳ ಮಾತುಗಳಿಗೆ ನನ್ನಲ್ಲಿ ಕೆಲವೊಮ್ಮೆ ನಗುವಿತ್ತು, ಆಶ್ಚರ್ಯವಿತ್ತು, ಕುತೂಹಲವಿತ್ತು, ಬೇಸರವಿತ್ತು, ಗೊಂದಲವಿತ್ತು. ಒಮ್ಮೊಮ್ಮೆ ಸರಿಯಾದ ಪದಗಳು ಹೊರಡದೇ ತಬ್ಬಿಬ್ಬಾಗುವುದೂ ಇತ್ತು, ನಾನು ಸಂಯಮದ ಮತ್ತು ಅವಳಿಗೆ ಉಪಯೋಗವಾಗುವಂಥ ಮಾತುಗಳನ್ನು ಹೇಳಿದ್ದೀನಾ ಎನ್ನುವ ಆತಂಕವೂ ಆಗುತಿತ್ತು. ಅವಳಲ್ಲಿ ಅವಳಿಗೆ ಬೇಕಿದ್ದ ಆತ್ಮವಿಶ್ವಾಸವನ್ನು ತುಂಬುವ ಕೌಶಲ್ಯಗಳನ್ನು ಕೂಡ ಪ್ರಯತ್ನಪಟ್ಟು ಹೆಚ್ಚಿಸಿಕೊಂಡೆ. ಅವಳಿಗೆ ತಕ್ಷಣಕ್ಕೆ ಪ್ರಯೋಜನವಾಗುವ ಸಲಹೆಸೂಚನೆಗಳನ್ನು ಅಭಿವೃದ್ಧಿಪಡಿಸಿದೆ.

ಗಂಡಸಾಗಿದ್ದಾಗ ಅವಳು ಇದ್ದ ಉದ್ಯೋಗದಿಂದ ಅವಳನ್ನು ಉಪಾಯವಾಗಿ ಕುತಂತ್ರದಿಂದ ತೆಗೆದುಹಾಕಿದ್ದರು. ಅವರು ಜಾಡಿಸಿ ಹೊರದೂಡಿದ ಬಗ್ಗೆ ಅವಳು ಅಷ್ಟೊಂದು ತೆಲೆಕೆಡಿಸಿಕೊಳ್ಳಲಿಲ್ಲ. ‘ಹೌದು ನಾನು ಈಗ ಹೆಂಗಸು, ನೀವು ನನ್ನನ್ನು ಹೆಂಗಸೆಂದು ಪರಿಗಣಿಸುವುದಿಲ್ಲ ಎಂದಾದರೆ ಅದು ದೊಡ್ಡ ತಪ್ಪು,’ ಎಂದು ಧೈರ್ಯವಾಗಿ ಹೇಳಿಕೊಂಡು ಹೊರಬಂದಿದ್ದಳು. ಅಲ್ಲಿಂದ ಮುಂದೆ ಅವಳಿಗೆ ಎಲ್ಲೂ ಕೆಲಸ ಸಿಕ್ಕಿರಲಿಲ್ಲ. ಸರಕಾರ ಕೊಡುವ ನಿರುದ್ಯೋಗ ಭತ್ಯೆಯಲ್ಲಿ ತನ್ನ ಖಾಸಗಿ ಖರ್ಚುಗಳನ್ನು ನಿರ್ವಹಿಸುತ್ತಾ ಇನ್ನೂ ತಂದೆತಾಯಿಯ ಮನೆಯಲ್ಲೇ ಇದ್ದಳು. ಆಗಲೇ ಬಲು ಇಷ್ಟಪಟ್ಟು, ಗೀಳು ಹಿಡಿಸಿಕೊಂಡು ಒಂದು ಸೌಂದರ್ಯ ಚಿಕಿತ್ಸಾ ವಿಧಾನ ತರಬೇತಿಗೆ ಸೇರಿಕೊಂಡಿದ್ದಳು. ಅಲ್ಲಿನ ಹೆಂಗಸರು ಅವಳನ್ನು ಒಪ್ಪಿಕೊಳ್ಳದೇ ಪರೀಕ್ಷೆಗಳಲ್ಲಿ ಅವಳನ್ನು ಫೇಲ್ ಮಾಡಿದರಂತೆ. ಆಗಲೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳಂತೆ. ಖಿನ್ನತೆಗಾಗಿ ಔಷಧಿ ತೆಗೆದುಕೊಳ್ಳುತ್ತಿದ್ದಳು.

ಅದೇ ದುಃಖದಲ್ಲಿ ಮುಳುಗಿದ್ದಾಗ ಅವಳು ಸಹಾಯ ಕೋರಿ ನನ್ನ ಪ್ರಾಜೆಕ್ಟ್ ಸೇರಿದ್ದಳು. ನಾನು ಪ್ರತಿವಾರ ಆಪ್ತಸಲಹೆ ಕೊಡುವುದರ ಜೊತೆ ಅವಳ ಅಗತ್ಯಗಳಿಗೆ ಮತ್ತು ಅವಳ ಬದುಕಿಗೆ ದಾರಿಯಾಗುವಂಥ ಚಿಕ್ಕಚಿಕ್ಕ ಕೋರ್ಸ್ ಗಳನ್ನ ಸೂಚಿಸಲಾರಂಭಿಸಿದಾಗ, ಕೆಲವೊಂದನ್ನು ಅವಳು ಮಾಡಿದಳು. ಅಪ್ಪಅಮ್ಮನ ಮನೆ ಬಿಟ್ಟು ಸರಕಾರದ ಬಾಡಿಗೆ-ರಹಿತ ನಿವಾಸಕ್ಕೆ ಬಂದು ಹೊಸ ಬದುಕನ್ನ ಆರಂಭಿಸಿದಳು. ಕೆಲಸದ ಬೇಟೆಯನ್ನು ಮುಂದುವರೆಸಿದಳು. ಸರ್ಕಾರದಿಂದ ಸಿಗುತ್ತಿದ್ದ ಅಲ್ಪಸ್ವಲ್ಪ ಹಣ ಖಾಲಿಯಾದಾಗ ನಾವು ಆಫೀಸಿನಿಂದ ಅವಳಿಗೆ ಆಹಾರ ಸಹಾಯವನ್ನು ಏರ್ಪಡಿಸುತ್ತಿದ್ದೆವು. ಹಾರ್ಮೋನ್ ಔಷಧಿಗೆ ಹಣವಿಲ್ಲ ಎಂದಾದಾಗ ಒಂದು ಉದಾರ ಸಂಸ್ಥೆಯಿಂದ ಅವಳಿಗೆ ಆ ನೆರವು ಸಿಕ್ಕುವಂತೆ ಬೆಂಬಲಿಸಿದೆವು.

ಆದರೂ ಅವಳ ಬಗ್ಗೆ ಪ್ರತಿದಿನವೂ ಸಮುದಾಯದ ಜನರು ತೋರುತ್ತಿದ್ದ ತಿರಸ್ಕಾರ ಮನೋಭಾವ ಮತ್ತು ಕಿರುಕುಳ ತಪ್ಪಲಿಲ್ಲ. ಸ್ಥಳೀಯ ಪೊಲೀಸರಿಗೆ ಹೇಳಿದ್ದಾಯ್ತು, ಸಂಘಸಂಸ್ಥೆಗಳ ನೆರವು ಪಡೆದಿದ್ದಾಯ್ತು. ಹಲವಾರು ಬಾರಿ ನಾನು ಅವಳು ಜೊತೆಯಾಗಿ ಮುಖ್ಯ ರಸ್ತೆಗಳಲ್ಲಿ, ಅವಳ ವಸತಿಯ ಸುತ್ತಮುತ್ತಾ, ಅವಳು ಪ್ರತಿನಿತ್ಯ ಹೋಗುವ ಜಾಗಗಳಲ್ಲಿ ನಡೆದಾಡಿದೆವು. ಜನರಿಗೆ ಕಾಣಿಸುವಂತೆ ನಾನು ಆಫೀಸಿನ ಗುರುತನ್ನೂ ಧರಿಸಿದ್ದೆ. ಏನೇ ಮಾಡಿದರೂ ಜನ ಮಾತ್ರ ಬದಲಾಗಲಿಲ್ಲ. ಅವಳನ್ನು ವಿಕೃತ ಪದಗಳಿಂದ ಹೀಯಾಳಿಸುವುದು, ಕೆಣಕುವುದು, ಅವಳನ್ನು ನೋಡಿ ಗಂಡಸರು ಲೇವಡಿಯಿಂದ ನಗುವುದು ನಡೆದೇಯಿತ್ತು. ಅವಳಿಗೆ ತುಂಬಾ ಬೇಸರ ತರುತ್ತಿದ್ದ ಸಂಗತಿಯೆಂದರೆ ಹೆಂಗಸರು ಅವಳ ಬಗ್ಗೆ ತೋರುತ್ತಿದ್ದ ಕೋಪ ಮತ್ತು ತಿರಸ್ಕಾರ. “ಗಂಡಾಗಿದ್ದು ನೀನು ಹೆಂಗಸಿನ ವೇಷವನ್ನು ಧರಿಸಿ ಸೋಗಲಾಡಿತನವನ್ನು ತೋರಿಸಿ ನಮ್ಮನ್ನು ಮೋಸ ಮಾಡುತ್ತಿದ್ದೀಯ. ನಿನ್ನನ್ನು ನಂಬುವುದಕ್ಕೆ ನಾವೇನೂ ಮರುಳರಲ್ಲ. ಹತ್ತಿರ ಬಂದರೆ ಹುಷಾರ್. ನಾವು ನಿಜವಾಗಿಯೂ ಹೆಂಗಸರು. ನಿನಗೆ ನಾಚಿಕೆಯಾಗಬೇಕು,” ಅನ್ನುತ್ತಿದ್ದರಂತೆ. ಅದನ್ನು ಹೇಳಿಕೊಂಡು ತಾನೇನು ಮಾಡಲಿ, ಆ ದೇಹದೊಳಗೆ ಇರುವ ಹೆಣ್ಣನ್ನು ಅವರಿಗೆ ಹೇಗೆ ತೋರಿಸಲಿ ಎಂದು ತೊಳಲಾಡುತ್ತಿದ್ದಳು.

ತಿಂಗಳು ಬಿಟ್ಟು ತಿಂಗಳು ಕಳೆದರೆ ಅವಳು ಮಾನಸಿಕವಾಗಿ ಸುಧಾರಿಸಿದಳು. ಆತ್ಮಹತ್ಯೆಯ ಆಲೋಚನೆ ಬಿಟ್ಟಳು. ಖಿನ್ನತೆ ದೂರವಾಯ್ತು. ಅದೆಷ್ಟೆಲ್ಲಾ ಕಷ್ಟ ಪಟ್ಟಮೇಲೆ ಅವಳಿಗೆ ಒಂದು ಉಡುಪು ಮತ್ತು ಅಲಂಕಾರ ವಸ್ತುಗಳ ಅಂಗಡಿಯಲ್ಲಿ ಅವಳಿಗೆ ಚಿಕ್ಕದೊಂದು ಪಾರ್ಟ್ ಟೈಮ್ ಕೆಲಸ ಸಿಕ್ಕಿತು. ಅವಳ ಹಿಗ್ಗನ್ನು ನೋಡಿ ನಾವೆಲ್ಲಾ ಖುಷಿಯಿಂದ ಅವಳನ್ನು ಸಣ್ಣದಾಗಿ ರೇಗಿಸಿ ಅವಳ ಮುಖ ಕೆಂಪಾಯಿತು. ಅವಳು ತನ್ನ ದೇಹವನ್ನು, ಹೆಣ್ತನವನ್ನು ಪ್ರೀತಿಸುವುದು, ಹೆಣ್ಣು ಭಾವನೆಗಳನ್ನು ಧೈರ್ಯವಾಗಿ ವ್ಯಕ್ತಪಡಿಸುವುದು ಜಾಸ್ತಿ ಆಯ್ತು. ಅವಳ ನಿಗದಿತ ಭೇಟಿ ಸಮಯಕ್ಕೆ ಮುಂಚೆಯೇ ಬಂದರೆ ಆಫೀಸಿನ ರಿಸೆಪ್ಶನ್ ಜಾಗದಲ್ಲಿ ಒಮ್ಮೊಮ್ಮೆ ಕಾಯುತ್ತಾ ಕುಳಿತಿರುವಳು. ಅವಳನ್ನು ನೋಡಿ ಮುಖ ತಿರುವುತ್ತಿದ್ದ ಅಲ್ಲಿದ್ದ ಇತರರಿಗೆ “ನಾನು ಲಿಂಗ ಬದಲಾವಣೆಯ ಪರಿಸ್ಥಿತಿಯಲ್ಲಿದ್ದೀನಿ. ದಯವಿಟ್ಟು ಅವಮಾನ ಮಾಡಬೇಡಿ,” ಎನ್ನುತ್ತಿದ್ದಳು. ತಾನು ಹೇಳಿದ್ದರಲ್ಲಿ ತಪ್ಪೇನಿಲ್ಲ ತಾನೇ ಎಂದು ನನ್ನ ಬಳಿ ಆತಂಕ ತೋಡಿಕೊಂಡು ಕಣ್ಣಲ್ಲಿ ನೀರು ಹಾಕುತ್ತಿದ್ದಳು.

‘ನಾನು ಹೇಳುವುದನ್ನು ಕಾಳಜಿಯಿಂದ ಕೇಳಿಸಿಕೊಳ್ಳಲು ನೀನೊಬ್ಬಳಿದ್ದೀಯ. ನನಗೆ ಗೊತ್ತು, ನನ್ನ ಗುಟ್ಟುಗಳು, ಸೂಕ್ಷ್ಮಗಳು ನಿನಗೆ ಮಾತ್ರ ಅರ್ಥವಾಗುತ್ತಿವೆ. ಬಹುಶಃ ನಾನು ಇನ್ನೂ ಬದುಕಿರುವುದು ಅದೇ ಕಾರಣದಿಂದ ಅನಿಸುತ್ತದೆ’, ಎಂದು ಅಲೆಅಲೆಯಾಗಿ ನಗುತ್ತಿದ್ದಳು. ತಾನು ಹೆಣ್ಣಿನಂತೆ ತಾನೇ ನಕ್ಕಿದ್ದು ಎಂದು ಪುನಃ ಕೇಳಿ ಖಾತ್ರಿಪಡಿಸಿಕೊಳ್ಳುತ್ತಿದ್ದಳು. ನನ್ನ ಕಣ್ಣಲ್ಲಿ ಊರುವ ನೀರು ಅವಳಿಗೆ ಕಾಣಿಸದಂತೆ ಕಂಪ್ಯೂಟರ್ ಕಡೆ ತಿರುಗುತ್ತಿದ್ದೆ.