ರಾತ್ರಿ ಕತ್ತಲಾಗಿದ್ದರೂ ಅಲ್ಲಲ್ಲಿ ಇದ್ದ ಬೀದಿ ಲೈಟಿನ ಕಾರಣವಾಗಿ ನನಗೇನೂ ಭಯ ಅನಿಸಲಿಲ್ಲ. ಅಪ್ಪನ ಎತ್ತಿನ ಗಾಡಿಯಲ್ಲಿ ಸುತ್ತುತ್ತಿದ್ದ ನನಗೆ ಚಿತ್ತಣ್ಣನ ರಿಕ್ಷಾ ದೇವಾನುದೇವತೆಗಳ ರಥದಂತೆ ಕಂಡಿತು. ಚಳ್ಳಕೆರೆ ಪಟ್ಟಣದಲ್ಲಿ ಹರಿಯುವ ದೊಡ್ಡವರ ಕಾರಿನಂತೆ ಕಂಡಿತು. ಇಂಥ ಬಾಲಿಶ ಯೋಚನೆ ಬಿಟ್ಟರೆ ನನ್ನ ತಲೆಯಲ್ಲಿ ಬೇರೇನೂ ಹೊಳೆದಿರಲಿಲ್ಲ. ಚಿತ್ತಣ್ಣನೂ ಅಷ್ಟೆ, ದಿನಾ ನೋಡುತ್ತಿದ್ದವನೇ ತಾನೇ ಎನಿಸಿತು.
ಸಧ್ಯದಲ್ಲೇ ಬಿಡುಗಡೆಯಾಗಲಿರುವ ಡಾ. ಕೃಷ್ಣಮೂರ್ತಿ ಹನೂರ ‘ಸಿದ್ಧಿಯ ಕೈ ಚಂದ್ರನತ್ತ’ ಕಾದಂಬರಿಯ ಕೆಲವು ಪುಟಗಳು.

 

ಚಿತ್ರದುರ್ಗದ ಬಳಿಯ ಚಳ್ಳಕೆರೆಯಲ್ಲಿ ನನ್ನಪ್ಪ ಅಲ್ಲಿಯ ಎಪಿಎಂಸಿ ಮಾರ್ಕೇಟಿನಲ್ಲಿ ಎತ್ತಿನ ಗಾಡಿ ಮಡಗಿ ಬಾಡಿಗೆಗೆ ಹೊಡೆಯುತ್ತಿದ್ದ. ಒಂದು ಸರ್ತಿ ವಾರೆದಾರಿಯಲ್ಲಿ ಗಾಡಿ ಮೊಗುಚಿ ಎತ್ತಿನ ಕೆಳಗೆ ಬಿದ್ದ ಅಪ್ಪನ ಮೇಲೆ ಮೂಟೆಯೂ ಬಿದ್ದಿತು. ಇನ್ನು ಎತ್ತು, ಗಾಡಿ, ಬಾಡಿಗೆಯ ಸಹವಾಸ ಬೇಡವೆಂದು, ಸಂಜೆಯ ಹೊತ್ತು ಬಸ್‌ ಸ್ಟಾಂಡಿನಲ್ಲಿ ಮಂಡಾಳು ಮಾಡಿ, ಮೆಣಿಸಿನಕಾಯಿ ಬೋಂಡ ಬೇಯಿಸುತ್ತಿದ್ದ ಅವ್ವನ ಜತೆ ಸೇರಿಕೊಂಡ. ಅಪ್ಪನಿಗೆ ಮುಸುರೆ ಪದಾರ್ಥದ ವ್ಯವಹಾರ ಬರುತ್ತಿರಲಿಲ್ಲ. ಅದರಿಂದ ಮೆಣಸಿನಕಾಯಿಯೊಳಗಿನ ಬೀಜ ತೆಗೆಯುವುದು, ಈರುಳ್ಳಿ ಹಸನು ಮಾಡುವುದು, ಪಕ್ಕದ ಬೋರ್‌ ವೆಲ್ಲಿನಿಂದ ಗಿರಾಕಿಗಳ ಕೈತೊಳೆಯುವ, ಕುಡಿಯುವ ನೀರು ತರುವುದು, ಜಗ್‌ ಗಳಿಗೆ ನೀರು ತುಂಬಿಡುವುದು ಮಾಡುತ್ತಿದ್ದ.

ಹದವಾಗಿ ಪದಾರ್ಥ ಬೇಯಿಸುವುದು, ಮಂಡಕ್ಕಿ ಕಲೆಸುವುದು, ತಿಂದವರಿಂದ ಕಾಸು ಈಸಿ ಗಲ್ಲಕ್ಕೆ ಹಾಕಿ ಚಿಲ್ಲರೆ ಕೊಡುವುದು ಅವ್ವನ ಕೆಲಸ. ಕಾಸು ಕೈಯ್ಯಲ್ಲಾಡುತ್ತಿದ್ದುದರಿಂದ ಅವ್ವ ಜೋರಾಗಿದ್ದಳು. ಪದಾರ್ಥ ತಿಂದ ಗಿರಾಕಿಗಳು ಅವ್ವನೊಂದಿಗೆ ನಾಳೆ-ನಾಳಿದ್ದು ಅಂದು ಸಾಲ ಹೇಳುವಂತಿಲ್ಲ. ಕಮಾಯಿ ಜಾಸ್ತಿ ಇದ್ದ ಅವ್ವನ ಮುಂದೆ ಅಪ್ಪನೇ ಸುಮ್ಮನಿರುತ್ತಿದ್ದ. ಸಂಜೆಯಿಂದ ತಡರಾತ್ರಿತನಕ ಬಸ್‌ ಸ್ಟಾಂಡಿನಲ್ಲಿ ವ್ಯಾಪಾರವಾದರೆ, ಅವ್ವನ ಹಗಲ ಕೆಲಸ ರಾತ್ರಿ ವ್ಯಾಪಾರಕ್ಕೆ ಬೇಕಾಗುವ ಸಾಮಾನು ಸರಂಜಾಮು, ಲವಾಜಮೆ ಹೊಂದಿಸುವುದು. ಹೈಸ್ಕೂಲಿಗೆ ಹೋಗಿಬರುತ್ತಿದ್ದ ನಾನು ಆಗೀಗ ಅವ್ವನೊಂದಿಗೆ ಪುರಿಭಟ್ಟಿ, ತರಕಾರಿ ಅಂಗಡಿ ಮುಂಗಟ್ಟುಗಳಿಗೆ ಸುತ್ತಿ ತಲೆಯ ಮೇಲೆ ಸಾಮಾನು ಹೊತ್ತು ತರುತ್ತಿದ್ದೆ.

ಇನ್ನು ಮುಂದಿನ ಕಥೆ ಎಂದರೆ ರಾತ್ರಿ ಪಾಳಿಯ ರಿಕ್ಷಾದವರು ಮಂಡಾಳು, ಮೆಣಸಿನಕಾಯಿಗೆ ಬಂದು ಅಪ್ಪ ಅವ್ವನ ಮುಂದೆ ಊರ ಸುದ್ದಿಯೆಲ್ಲ ಮಾತಾಡುತ್ತಿದ್ದರು. ಹಂಗೆ ಕಡೆಯದಾಗಿ ವ್ಯಾಪಾರ ಮುಗಿದು ಅಲ್ಲೇ ತೊಳೆದ ಪಾತ್ರೆ, ಪಡಗ, ಬಾಂಡ್ಲಿ, ಮಿಕ್ಕ ಎಣ್ಣೆ, ತರಕಾರಿ ಪದಾರ್ಥ, ಪುರಿಮೂಟೆ ಎಲ್ಲವನ್ನೂ ಏರಿಸಿ ಮನೆಗೆ ಬಿಡುತ್ತಿದ್ದ ಚಿತ್ತಯ್ಯ ನಿತ್ಯ ಪರಿಚಯವಾಗಿ ಅವನೊಂದಿಗೆ ಅಪ್ಪ ಅವ್ವ ಮತ್ತು ನನ್ನ ಸಲುಗೆ ಆಯಿತು. ಅವನು ತಡರಾತ್ರಿ ಯಾಗಿ ಇನ್ನೂ ವ್ಯಾಪಾರ ಇದ್ದರೆ ನನ್ನ ರಿಕ್ಷಾ ಹತ್ತಿಸಿಕೊಂಡು ಮನೆಗೆ ಬಿಟ್ಟು ಅಲ್ಲಿಂದ ಹತ್ತಿರವೇ ಇದ್ದ ದೊಡ್ಡೇರಿಯ ತನ್ನ ಹಟ್ಟಿಗೆ ಹೋಗುತ್ತಿದ್ದ. ನಾನು ಆಗ ಒಂಬತ್ತು ಪಾಸಾಗಿ ಎಸ್ಸೆಸ್ಸೆಲ್ಸಿಗೆ ಬಂದಿದ್ದೆ. ಹದಿನೈದು ವರ್ಷ ಎಂದೆನಲ್ಲ. ಅಪ್ಪ ಅವ್ವನನ್ನು ಬಿಟ್ಟು, ಕಂಡವರೆಲ್ಲ ಇಷ್ಟ ಆಗುತ್ತಿದ್ದರು. ಮನೆ ಬೇಡವೆನಿಸುತ್ತಿತ್ತು.

ಶಾಲೆಯಲ್ಲಿ ನಾನು ಅತ್ತಿತ್ತ ಹಾಯುವಲ್ಲಿ ಹುಡುಗರು ಈರುಳ್ಳಿ, ಮೆಣಸಿನಕಾಯಿ, ಮಂಡಾಳು ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದರು. ಅದು ನನ್ನನ್ನೇ ಕುರಿತ ಚೇಷ್ಟೆ ಎಂದು ಗೊತ್ತಾಗುತ್ತಿತ್ತು. ನಾನು ನನ್ನವ್ವನೊಡನೆ ಶುಕ್ರವಾರದ ಸಂತೆಗೆ ಹೋಗಿ ಅವಳು ಈರುಳ್ಳಿ ಮೂಟೆ ಹೊತ್ತು ಬಂದರೆ ನಾನು ಮೆಣಸಿನ ಕಾಯಿ ಪುಟ್ಟಿ ತರುತ್ತಿದ್ದೆ. ಶಕ್ತಿ ಕಳೆದುಕೊಂಡಿದ್ದ ಅಪ್ಪ ಸಣ್ಣಪುಟ್ಟ ಲವಾಜಮೆ ಪದಾರ್ಥ ಹಿಡಿದು ಬರುತ್ತಿದ್ದ. ಅದಲ್ಲದೆ ಶನಿವಾರ, ಭಾನುವಾರ ಬಸ್ ಸ್ಟ್ಯಾಂಡಿ ನಲ್ಲಿ ವ್ಯಾಪಾರ ಏರಿರುತ್ತಿದ್ದರಿಂದ ನಾನು ಎಷ್ಟೋ ಹೊತ್ತು ಅಲ್ಲೇ ಇರುತ್ತಿದ್ದೆ.

ಅದರ ಮಾರನೆಯ ದಿನಗಳಲ್ಲಿ ಹುಡುಗರು ನನ್ನತ್ತ “ಈರುಳ್ಳಿ, ಮೆಣಸಿನಕಾಯಿ” ಎಂಬುದು ಮಾತ್ರವಲ್ಲದೆ “ಶುಕ್ರವಾರದ ಸಂತೆಯ ಸುಂದರಿ, “ಶನಿವಾರದ ಬಸ್‌ಸ್ಟ್ಯಾಂಡಿನ ಚೆಂಡು ಮಲ್ಲಿಗೆ ಎನ್ನುತ್ತಿದ್ದರು. ನನಗೆ ಕೀಳರಿಮೆ ಕಾಡುತ್ತಿತ್ತು. ಅದು ಅಪ್ಪ ಅವ್ವನ ಮೇಲೆ ಸಿಟ್ಟಾಗಿಯೂ ರೂಪಗೊಳ್ಳುತ್ತಿತ್ತು. ಇದನ್ನು ಶಾಲೆಯ ಕನ್ನಡ ಮೇಷ್ಟ್ರು ಪಾಲಯ್ಯನವರಿಗೆ ಹೇಳಿದೆ. ಅವರು “ಚಿತ್ರಕ್ಕ ನೀನು ತೆಲೆ ಕೆಡಿಸ್ಕಂಬ್ಯಾಡ ಸುಮ್ಕೆ ಓದು ಎಂದರು. ನನಗೆ ಅವರ ಮಾತಿನಿಂದ ಸಮಾಧಾನವೋ, ಸಂತೋಷವೋ ಆಗುವುದರ ಬದಲು, ನನ್ನ ಬಾಲಿಶ ತಲೆಗೆ ಬರುತ್ತಿದ್ದ ಚೇಷ್ಟೆಯ ಪ್ರಶ್ನೆ ಎಂದರೆ ಮುವತ್ತು ವಯಸ್ಸಿನ ಮೇಷ್ಟ್ರು ಹದಿನೈದು ವಯಸ್ಸಿನ ನನ್ನನ್ನು ಚಿತ್ರಕ್ಕ ಎನ್ನುತ್ತಾರಲ್ಲ ಎನಿಸುತ್ತಿತ್ತು. ಆಗಾಗ ಶಾಲೆಯ ಅಂಗಳದಲ್ಲಿ ನನ್ನ ತಲೆಮುಡಿಗೆ ಕೈಯ್ಯಾಡಿಸಿ “ಚಿತ್ರವ್ವಾ ನೀನೇನು ಹೆದರ್ಕಂಬ್ಯಾಡ ನೋಡು, ಯಾರೇನಾರ ಅಂದ್ಕಳ್ಳಿ ಎನ್ನುವಲ್ಲಿ ಯಲಾ ಮೇಷ್ಟ್ರು ನನಗೀಗ ಅಕ್ಕನ ಜಾಗ ತೆಗೆದು ಅವ್ವನನ್ನಾಗಿ ಮಾಡಿಬಿಟ್ಟರಲ್ಲ ಎಂದು ನಗು ಬರುತ್ತಿತ್ತು.

ಶಾಲೆಯಲ್ಲಿ ನಾನು ಅತ್ತಿತ್ತ ಹಾಯುವಲ್ಲಿ ಹುಡುಗರು ಈರುಳ್ಳಿ, ಮೆಣಸಿನಕಾಯಿ, ಮಂಡಾಳು ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದರು. ಅದು ನನ್ನನ್ನೇ ಕುರಿತ ಚೇಷ್ಟೆ ಎಂದು ಗೊತ್ತಾಗುತ್ತಿತ್ತು. ನಾನು ನನ್ನವ್ವನೊಡನೆ ಶುಕ್ರವಾರದ ಸಂತೆಗೆ ಹೋಗಿ ಅವಳು ಈರುಳ್ಳಿ ಮೂಟೆ ಹೊತ್ತು ಬಂದರೆ ನಾನು ಮೆಣಸಿನ ಕಾಯಿ ಪುಟ್ಟಿ ತರುತ್ತಿದ್ದೆ.

ಒಂದು ದಿನ ಸಂಜೆ ಸಂತೆಯ ವ್ಯಾಪಾರ ಇನ್ನೂ ತಗ್ಗದಿರಲು ಅವ್ವ ಹೇಳಿದಳೆಂದು ಓದುವ ನಿಮಿತ್ತ ಹಟ್ಟಿಗೆ ಹೋಗುವುದೆಂದರೆ, ಚಿತ್ತಯ್ಯ ತಾನು ಕರೆದುಕೊಂಡು ಹೋಗುವೆನೆಂದು ಬಂದ. ಒಬ್ಬಳೇ ರಿಕ್ಷಾ ಹತ್ತಿ ಮನೆಯ ದಾರಿ ಹಿಡಿದರೆ ಚಿತ್ತಯ್ಯ “ಲೇ ಚಿತ್ರಿ ಇವತ್ತು ನಮ್ಮಟ್ಟಿಗೆ ಹೋಗಾನ ಬಾ” ಎಂದು ದೊಡ್ಡೇರಿ ಕಡೆ ರಿಕ್ಷಾ ಓಡಿಸಿದ.

ರಾತ್ರಿ ಕತ್ತಲಾಗಿದ್ದರೂ ಅಲ್ಲಲ್ಲಿ ಇದ್ದ ಬೀದಿ ಲೈಟಿನ ಕಾರಣವಾಗಿ ನನಗೇನೂ ಭಯ ಅನಿಸಲಿಲ್ಲ. ಅಪ್ಪನ ಎತ್ತಿನ ಗಾಡಿಯಲ್ಲಿ ಸುತ್ತುತ್ತಿದ್ದ ನನಗೆ ಚಿತ್ತಣ್ಣನ ರಿಕ್ಷಾ ದೇವಾನುದೇವತೆಗಳ ರಥದಂತೆ ಕಂಡಿತು. ಚಳ್ಳಕೆರೆ ಪಟ್ಟಣದಲ್ಲಿ ಹರಿಯುವ ದೊಡ್ಡವರ ಕಾರಿನಂತೆ ಕಂಡಿತು. ಇಂಥ ಬಾಲಿಶ ಯೋಚನೆ ಬಿಟ್ಟರೆ ನನ್ನ ತಲೆಯಲ್ಲಿ ಬೇರೇನೂ ಹೊಳೆದಿರಲಿಲ್ಲ. ಚಿತ್ತಣ್ಣನೂ ಅಷ್ಟೆ, ದಿನಾ ನೋಡುತ್ತಿದ್ದವನೇ ತಾನೇ ಎನಿಸಿತು. ದೊಡ್ಡೇರಿಯ ಅವನ ಹಟ್ಟಿಗೆ ಹೋದಾಗ ರಾತ್ರಿ ಒಂಬತ್ತು ಘಂಟೆ. ನನ್ನ ಅಪ್ಪ ಅವ್ವ ಕಟ್ಟಿದ್ದ ಮಟ್ಟಾಳೆ ಗುಡಿಸಲು, ಇವನ ತಗಡು ಷೀಟಿನ ವಪ್ಪಾರೆಯೂ ಒಂದೇ ಅನ್ನಿಸಿತು.

ಚಿತ್ತಯ್ಯನು ಮಂಡಾಳು, ಮೆಣಸಿನಕಾಯಿ ಮೆಲ್ಲುವಾಗೆಲ್ಲ ನನ್ನ ಅಂದಚೆಂದವನ್ನು ಕಂಡು ಆನಂದಪಡುವವನಂತಿದ್ದ. ಅಪ್ಪ-ಅವ್ವನೊಂದಿಗೆ ಅದನ್ನು ಹೇಳುತ್ತ, “ಜಾಸ್ತಿ ದಿನ ಈ ಚಿತ್ರಿನ ಇಲ್ಲಿ ಕುಂಡ್ರಸಬ್ಯಾಡಾ, ಒಂದಲ್ಲಾ ಒಂದು ದಿನ ನಾನೇ ಇವಳ ಎಗರಿಸಿ ಕರಕೊಂಡು ಒಯ್ಯುವೆನು ಅನ್ನುತ್ತಲೂ ಇದ್ದ. ಚಿತ್ತಣ್ಣ ನನ್ನ ಹೊಗಳುವಾಗಲೂ, ಆಮೇಲೂ ಮತ್ತೆ ಮತ್ತೆ ಅವನಾಡಿದ್ದನ್ನು ನೆನೆಯುವಾಗೆಲ್ಲ ಅವನ ರಿಕ್ಷಾದಲ್ಲೇ ಬೇಗ ಹಟ್ಟಿ ಮುಟ್ಟಿ ಕನ್ನಡಿ ನೋಡಿಕೊಳ್ಳಬೇಕೆನಿಸುತ್ತಿತ್ತು. ಬಾಂಡಲೆಯಿಂದ ಎದ್ದ ಎಣ್ಣೆಯ ಹಬೆ, ಮೆಣಸಿನಕಾಯಿ, ಈರುಳ್ಳಿ ಘಾಟಿನಿಂದ ನನ್ನ ಮುಖ ಜಡ್ಡುಗಟ್ಟಿಲ್ಲವಲ್ಲ ಎಂದುಕೊಳ್ಳುತ್ತಿದ್ದೆ.

ಅವ್ವನನ್ನು ಪೀಡಿಸಿ ಮೈಗೆ ಬಣ್ಣ ಬಣ್ಣದ ಬಟ್ಟೆ, ಮುಖಬಣ್ಣ, ತುಟಿ ಬಣ್ಣ, ತಲೆ ಮೈಗೆ ಸುವಾಸನೆಯ ಎಣ್ಣೆ ಕೊಡಿಸಿಕೊಳ್ಳುವುದೆಲ್ಲ ತಡವಾಗಬಹುದು ಅಥವಾ ಕೇಳುವಲ್ಲಿ ಅವ್ವ ಮುಸುಡಿಗೆ ತಿವಿಯಬಹುದು, ಅದರಿಂದ ನಾನೇ ಗಲ್ಲಾದಿಂದ ಕಾಸು ಎಗರಿಸಿ ಬೇಕಾದುದೆಲ್ಲವನ್ನೂ ಕೊಂಡುಕೊಳ್ಳಬೇಕೆನಿಸುತ್ತಿತ್ತು. ಕಾಸು ಕದ್ದುಕೊಂಡು ಕೊಳ್ಳುವುದೇನೋ ಸರಿ. ಅದನ್ನೆಲ್ಲ ಮೈಮೇಲೆ ಪೂಸಿಕೊಂಡರೆ ಅವ್ವನಿಗೆ ಗೊತ್ತಾಗಿಯೇ ಆಗುತ್ತದಲ್ಲ ಆಗೇನು ಮಾಡುವುದು ಎಂದು ಬೇಜಾರಾಗುತ್ತಿತ್ತು. ಕಾಸು ಕದ್ದು ಎಲ್ಲ ಕೊಂಡು, ಸ್ಕೂಲಿನಲ್ಲಿ ನಾನು ಚೆನ್ನಾಗಿ ಓದುತ್ತೇನೆಂದು ಬಾಳ ಬಾಳ ಇಷ್ಟಪಡುತ್ತಿದ್ದ ಪಾಲಯ್ಯ ಮೇಷ್ಟ್ರು ಕೊಡಿಸಿದ್ದೆಂದು, ಸ್ಕೂಲಿಗೆ ದಿನಾ ಇದನ್ನೆಲ್ಲ ಹಾಕಿಕೊಂಡು ಬರದಿದ್ದರೆ ನೀನು ಸ್ಟೂಡೆಂಟೇ ಅಲ್ಲ ಅಂದರೆಂದು ಸುಳ್ಳು ಹೇಳಿಬಿಟ್ಟರೆ ಹೇಗೆ ಎನಿಸಿತು. ಈ ಕನಸುಗಳೆಲ್ಲ ಗರಿಗೆದರಿದ್ದು ಚಿತ್ತಯ್ಯನ ಒಪ್ಪಾರೆಯಲ್ಲಿದ್ದಾಗಲೇ.

ಚಿತ್ತಣ್ಣನ ಮನೆಯಲ್ಲಿ ನಾನು ಒಂದು ವಾರವೇ ಇದ್ದುಬಿಟ್ಟೆ. ಅವನು ಯಾಕೆ ನನ್ನನ್ನು ಕರೆದುಕೊಂಡು ಹೋಗಿ ಮಡಗಿದ, ನಾನು ಯಾಕೆ ಹಾಗೆ ಅವನ ವಪ್ಪಾರೆಯಲ್ಲಿ ಒಂದು ವಾರ ಇದ್ದುಬಿಟ್ಟೆನೆಂದು ನನಗೆ ಗೊತ್ತೇ ಆಗಲಿಲ್ಲ. ಗತಿಯಿಲ್ಲದವರ ಮಕ್ಕಳು ಕಂಡವರ ಕಾಲು ಬುಡದಲ್ಲಿ!

ವಾರವೆಲ್ಲ ಅವನೇ ಚಳ್ಳಕೆರೆಗೆ ಹೋಗುವಾಗ ಸ್ಕೂಲಿಗೆ ಬಿಟ್ಟು ಹೋಗುತ್ತಿದ್ದ. ತಿರುಗಿ ವಾಪಸು ದೊಡ್ಡೇರಿಗೇ ಕರೆದುಕೊಂಡು ಬರುತ್ತಿದ್ದ. “ಚಳ್ಳಕೆರೆಗೆ ಹೋಗಬೇಕಾದರೆ ಹೇಳು ಚಿತ್ರಿ ಕರಕಂಡೋಗಿ ಬಿಡ್ತನಿ” ಅನ್ನುತ್ತಿದ್ದ. ದಿನನಿತ್ಯ ರಿಕ್ಷಾದಲ್ಲಿ ಕೂತು ಸ್ಕೂಲಿಗೆ ಹೋಗುವುದೇ ನನಗೆ ಸಂಭ್ರಮವಾಗಿ ಕಂಡಿತು.

ಚಿಕ್ಕಂದು ಅಪ್ಪನ ಗಾಡಿಯಲ್ಲಿ ಸುತ್ತುತ್ತಿದ್ದೆನಲ್ಲ, ಈಗ ರಿಕ್ಷಾದಲ್ಲಿ ಕೂತು ಅದೆಷ್ಟು ಸ್ಪೀಡಾಗಿ ಓಡುತ್ತಿರುವೆನೆನಿಸಿತು. ಹಾಗೆ ಚಿತ್ತಣ್ಣನು ನನ್ನನ್ನೂ ಅವನ ಹೆಂಡತಿ ಮಕ್ಕಳನ್ನೂ ಗುಡಿಗೆ ಕರೆದುಕೊಂಡು ಹೋಗುವಾಗ ನನಗೆ ಎತ್ತಿನಗಾಡಿಯ ಅಪ್ಪನಿಗಿಂತ ಬೀದಿಯಲ್ಲಿ ಮಂಡಾಳು, ಬೋಂಡಾ ಮರುವ ಅವ್ವನಿಗಿಂತ ಈ ಚಿತ್ತಣ್ಣನೇ ಭಾರಿ ಸಾಹುಕಾರ ಎನಿಸಿತು. ಎಲ್ಲರಿಗಿಂತ ದೊಡ್ಡವರೆಂದರೆ ಶಾಲೆಗೆ ಬೈಕಿನಲ್ಲಿ ಬರುವ ಪಾಲಯ್ಯ ಮೇಷ್ಟ್ರೇ ಎನಿಸಿ, ಅವರ ಬೈಕಿನ ಹಿಂದೆ ಅವರ ಹೆಂಡತಿ ಸಿರಿಯಕ್ಕನಂತೆ ಕೂತುಕೊಳ್ಳುವ ಭಾಗ್ಯ ನನಗೆ ಜೀವನದಲ್ಲಿ ದೊರಕುವುದಿಲ್ಲವೆನಿಸುತ್ತಿತ್ತು.

ಚಿತ್ತಯ್ಯನ ಹಟ್ಟಿಯಲ್ಲಿರುವಾಗ್ಗೆ ಅವನ ಹೆಂಡತಿ ತಿಪ್ಪವ್ವ ಯಾವಾಗಲೂ ಅಲ್ಲೇ ಮರದಡಿಯಲ್ಲಿ ಕೂತಿರುತ್ತಿದ್ದ ಮುದುಕನಿಗೆ ಹೊತ್ತೊತ್ತಿಗೂ ಆರಕದ ಮುದ್ದೆ, ವುದಕ, ಅನ್ನ ನೀಡುತ್ತಿದ್ದಳು. ಆ ಮುದುಕ ನಾನಿದ್ದ ಐದಾರು ದಿನದಲ್ಲಿ ಒಂದು ದಿನವೂ ಮನೆಯ ಒಳಗೆ ಬಂದದ್ದಿಲ್ಲ. ತಿಪ್ಪವ್ವ ಅವನು ಕೂತಿದ್ದ ಮರದ ಬುಡದತ್ತಲೇ ಹೋಗಿ ಕೈ ತೊಳೆಸಿ ಅನ್ನ ಮುದ್ದೆ ಇಟ್ಟುಬರುತ್ತಿದ್ದಳು. ಅವನಿಗೆ ಮಂದಗಣ್ಣು ಇದ್ದಂತಿತ್ತು. ಮಲಗುವಲ್ಲಿ ಎದ್ದು ಗುಡಿಯ ಕಡೆ ತಡವಿಕೊಂಡು ಹೋಗುತ್ತಿದ್ದ. ಆ ಗುಡಿಯಲ್ಲಿ ಅವನು ರಾತ್ರಿಯೆಲ್ಲ ಸಣ್ಣದನಿಯಲ್ಲಿ ಹಾಡುತ್ತಿದ್ದ. ಕೇಳಿದರೆ ಆಕಾಶದತ್ತ ಕೈ ಮುಗಿಯುತ್ತ ಅವು ದೇವಮಾನವರ ಕಥೆಗಳು ಎನ್ನುತ್ತಿದ್ದ.

ಒಂದು ದಿನ ತಿಪ್ಪವ್ವನನ್ನು ಮುದ್ದೆ ನೀಡುತ್ತಿದ್ದ ಮುದುಕ ಯಾರು ಎಂದು ಕೇಳಿದೆ. ಗೊತ್ತಿಲ್ಲ, “ನಾ ಲಗ್ನಾಗಿ ಬಂದು ಆರು ತಿಂಗ್ಳಾತು ನೋಡು. ಆವಜ್ಜ ಅಲ್ಲೇ ಇದ್ದ. ಈಗಲೂ ಅಲ್ಲೇ ಕುಂತ್ಕಂಡದೆ. ನಿಮ್ಮಣ್ಣ ಅವನ್ನ ಬಿಟ್ಟು ಉಂಬದೆಂಗೆ. ಆವಜ್ಜಂಗೂ ಒಂದೀಟು ಮುದ್ದೆ, ಆಮ್ರ ಕೊಡಲೇ ತಿಪ್ಪೀ ಅಂತಂತನೆ. ತಗೀ ಇನ್ನೇನು ಅದೂ ನಮ್ಮಟ್ಟೀದೆ ಅಂತ ಕೊಡ್ತನಿ ಎಂದಳು. ಹಾಗೆ ಒಂದೆರಡು ಬಾರಿ ನಾನೂ ಅಜ್ಜನಿಗೆ ಉಂಡಾದ ಮೇಲೆ ಕೈತೊಳೆಸಿ ಬಂದಿದ್ದೆ.

ವಾರ ಕಾಲ ನಾನು ಉಳಿದ ಹಟ್ಟಿಯಲ್ಲಿ ಸಂತೆ, ಬಸ್‌ ಸ್ಟ್ಯಾಂಡು, ಬಸ್ಸು, ಕಾರಿನ ಧೂಳು, ಅಂಗಡಿ, ಮುಂಗಟ್ಟು, ಹಾದಿಬೀದಿ, ನಿಂತುಕುಂತು ಮಾತಾಡುವ ಮಂದಿ ಇರಲೇ ಇಲ್ಲ. ಬೆಳಗು, ಬೈಗಾದರೆ ಹಟ್ಟಿ ಹಿಂದುಮುಂದಿದ್ದ ತೋಪಿನಲ್ಲಿ ಹಕ್ಕಿಪಿಕ್ಕಿಗಳ ಕೂಗು. ಅದರ ಕೆಳಗೆ ಮಕ್ಕಳ ಆಟ. ಇನ್ನಷ್ಟು ದಿನ ಚಳ್ಳಕೆರೆಯ ಸ್ಟ್ಯಾಂಡು, ನನ್ನ ಕೇರಿ ನೆನಪಿಗೆ ಬಾರದಂತಾಗಿ ಆ ಹಟ್ಟಿಯಲ್ಲೇ ಮರದ ತೋಪಿನ ಕೆಳಗೆ ಕುಣಿದಾಡಬೇಕೆನಿಸುತ್ತಿತ್ತು.

* * * *
ಒಂದು ದಿನ ಬೆಳಿಗ್ಗೆ ದೊಡ್ಡೇರಿಯ ಚಿತ್ತಯ್ಯನ ಮನೆಯ ಮುಂದೆ ಬಂದು ನಿಂತ ಪೊಲೀಸರು ಚಿತ್ತಯ್ಯನನ್ನು ಹಿಡಿದು “ನಡಿಯಲೇ ಬದ್ಮಾಷ್ ಸ್ಟೇಷನ್ಗೆ ಎಂದರು. “ಯಾಕ್ ಸ್ವಾಮಿ ಏನಾತು ಎಂದರೆ “ಎಲ್ಲ ಸ್ಟೇಷನ್ಲಿ ಗೊತ್ತಾಯ್ತದೆ” ನಡಿ ಎಂದು ಜೀಪಿನಲ್ಲಿ ಏರಿಸಿಕೊಂಡು ಹೋದರು. ನಾನೂ ಇದ್ದೆ. ನಮ್ಮಪ್ಪ ಕೈಕಾಲ ಮೇಲೆ ಸ್ವಾಧೀನ ಕಳೆದುಕೊಂಡವನು, ಮನಸ್ಸಿನ ಮೇಲೂ ಹಿಡಿತ ತಪ್ಪಿ ಚಿತ್ತಯ್ಯನು ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದುದಕ್ಕೆ ಕಂಪ್ಲೇಂಟು ಕೊಟ್ಟುಬಿಟ್ಟಿದ್ದ. ಅವ್ವನೂ ಸ್ಟೇಷನ್ನಿನಲ್ಲಿ ಅಳುತ್ತ ಇನ್ನೂ ವಯಸ್ಸಿಗೆ ಬರದ ಕೂಸನ್ನು ರಿಕ್ಷಾದಲ್ಲಿ ಕೂರಿಸಿಕೊಂಡ ಹಲ್ಲಂಡೆ ಚಿತ್ತನು ಮನೆಗೆ ಕರೆದುಕೊಂಡು ಹೋಗಿ, ರೂಮಿಗೆ ಕೂಡಿಕೊಂಡಿರುವನೆಂದು ಹೇಳಿಬಿಟ್ಟಿದ್ದಳು.

ಅವ್ವನನ್ನು ಪೀಡಿಸಿ ಮೈಗೆ ಬಣ್ಣ ಬಣ್ಣದ ಬಟ್ಟೆ, ಮುಖಬಣ್ಣ, ತುಟಿ ಬಣ್ಣ, ತಲೆ ಮೈಗೆ ಸುವಾಸನೆಯ ಎಣ್ಣೆ ಕೊಡಿಸಿಕೊಳ್ಳುವುದೆಲ್ಲ ತಡವಾಗಬಹುದು ಅಥವಾ ಕೇಳುವಲ್ಲಿ ಅವ್ವ ಮುಸುಡಿಗೆ ತಿವಿಯಬಹುದು, ಅದರಿಂದ ನಾನೇ ಗಲ್ಲಾದಿಂದ ಕಾಸು ಎಗರಿಸಿ ಬೇಕಾದುದೆಲ್ಲವನ್ನೂ ಕೊಂಡುಕೊಳ್ಳಬೇಕೆನಿಸುತ್ತಿತ್ತು. ಕಾಸು ಕದ್ದುಕೊಂಡು ಕೊಳ್ಳುವುದೇನೋ ಸರಿ. ಅದನ್ನೆಲ್ಲ ಮೈಮೇಲೆ ಪೂಸಿಕೊಂಡರೆ ಅವ್ವನಿಗೆ ಗೊತ್ತಾಗಿಯೇ ಆಗುತ್ತದಲ್ಲ ಆಗೇನು ಮಾಡುವುದು ಎಂದು ಬೇಜಾರಾಗುತ್ತಿತ್ತು.

ಪೊಲೀಸರಿಗೆ ನನ್ನ ಮುಖ, ಬಣ್ಣ, ವಯಸ್ಸು ಮೀರಿದ ಮೈಕಟ್ಟು ನೋಡುತ್ತಾ ಚಿತ್ತಯ್ಯನು ಹೊತ್ತುಕೊಂಡು ಹೋಗಿರುವುದರಲ್ಲಿ ಯಾವ ಅನುಮಾನವೂ ಇಲ್ಲವೆಂದು ಖಚಿತಪಡಿಸಿಕೊಂಡರು. ಸ್ಟೇಷನ್ನಿನಲ್ಲಿ ಬೂಟುಗಾಲಲ್ಲಿ ಒದೆಯುವಾಗ “ಗತಿಯಿಲ್ಲದ ಬದ್ಮಾಷ್ ನಿಂಗೆ ಇಬ್ರೆಂಡ್ರು ಬೇಕಾ, ಅದೂ ವಯಸ್ಸಿಗೆ ಬರದ ಹುಡುಗಿ ಬೇಕಾ” ಅಂದು ಒಂದೊಂದು ಒದೆತಕ್ಕೆ ಒಂದೊಂದು ಬೈಗುಳ ಬೆರೆಸುತ್ತಿದ್ದರು. ಏಟಿನ ಮಧ್ಯೆ ನಾನು ಅಂಥದೇನೂ ಆಗಿಲ್ಲ ಅಂದರೆ ಅವರು ಅವನತ್ತ ತಿರುಗಿ “ಯಾವಾಗ ಲಗ್ನವಾಗಬೇಕು ಅಂತ ಮೂರ್ತ ಇಟ್ಕಂಡಿದ್ದೀಯಾ ಹಲಾಲ್‌ ಖೋರ್, ಬಾನ್‌ ಚೋತ್” ಎಂದು ಇನ್ನೂ ಜೋರಾಗಿ ಏಟು ಹಾಕುತ್ತ, “ಉಸಿರು ಬುಟ್ಟರೆ ನಿನ್ನ ಕತೆ ಖತಂ” ಎನ್ನುತ್ತಿದ್ದರು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ನಾಳೆ ಭಾನುವಾರ ಕಳೆದು ಸೋಮವಾರ ಕೋರ್ಟಿಗೆ ಹಾಕುತ್ತೇವೆಂದು ನಮ್ಮಪ್ಪ ಅವ್ವನಿಗೆ ಹೇಳಿ ಅಲ್ಲೇ ಲಾಕಪ್ಪಿಗೆ ತಳ್ಳಿದರು. “ನಿಮ್ಮುಡುಗೀನ ಕರ್ಕೊಂಡೋಗ್ರಯ್ಯ” ಎನ್ನಲು ನಾನು ಹೋಗಿ ಲಾಕಪ್ಪಿನ ಸರಳನ್ನು ಭದ್ರವಾಗಿ ಹಿಡಿದುಕೊಂಡು ಕೂತೆ. ನಮ್ಮವ್ವ “ಅಗಳವ್ವಾ ನನ ಮಗಳ ಮೇಲೆ ಮಾಟಮಂತ್ರ ಮಾಡಸ್ಬುಟ್ಟವನಲ್ಲಪ್ಪಾ” ಎಂದು ತಿರುಗಿ ಬಾಯಿ ಬಡಿಯತೊಡಗಿದಳು.

ಸರಳು ಹಿಡಿದುಕೊಂಡೇ ನಾನು ‘ನಂಗೆ ಯಾರೂ ಮಾಟ ಮಾಡ್ಸಿಲ್ಲ, ಚಿತ್ತಣ್ಣನ್ನ ಬುಡಿಸೀ’ ಅಂದರೆ ಅವ್ವ ಬಂದು ಕೆನ್ನೆಗೆ ಸರಿಯಾಗಿ ಬಾರಿಸಿ “ನಡಿಯಲೇ ಬೋಸುಡಿ ಮನೆಗೆ” ಎಂದಳು. ‘ನಾನು ಬರಲ್ಲ’ ಎಂದೆ. ಕೆನ್ನೆಯ ಮೇಲೆ ಬಿದ್ದ ಏಟಿಗಿಂತಲೂ ಬಲವಾದ ಹೊಡೆತ ಅವ್ವನ ಕೆನ್ನೆಗೆ ನನ್ನ ಮಾತಿನಿಂದ ಬಿದ್ದಂತಾಯಿತು. ನನ್ನ ಮಾತಿಗೆ ರೋಷವುಕ್ಕಿದ ಅಪ್ಪನೂ ಬಲಗೆನ್ನೆಗೆ ಬಾರಿಸಿ “ಬೀದಿಲಿ ಕುಂತಿರಾ ಅಪ್ಪ ಅವ್ವದೀರು ಯಾಕೆ, ಈ ರಿಕ್ಷಾ ತರುಬೋ ಮಿಂಡ್ಗಾರನೇ ಸಾಕು ಅಂತ ಮನೆ ಬಿಟ್ಟು ಓಡಿ ಬಂದಿದ್ದೀಯಾ ಮಿಂಡ್ರಿ” ಎಂದು ಅಪ್ಪ ಅವ್ವ ಇಬ್ಬರೂ ಸ್ಟೇಷನ್ ಬಿಟ್ಟು ಹೊರಟರು. ಹಾಗೆ ಹೋಗುವಲ್ಲಿ ಅವ್ವ ನನ್ನತ್ತ, “ನೀನು ಮನೆ ಕಡೆ ಮುಖ ಆಕಬೇಕಲ್ಲಾ ಆಗ ಇರದು ಮಾರಮ್ನಬ್ಬ…” ಅಂದು ಹೋದಳು.
ನಾನು ಎಷ್ಟೋ ಹೊತ್ತು ಲಾಕಪ್ಪಿನ ಬಾಗಿಲ ಸರಳು ಹಿಡಿದು ಕೂತಿರಲು ಪೊಲೀಸರು ನನ್ನನ್ನು ಆಚೆ ಎಳೆದುಬಿಟ್ಟರು. ನನಗೆ ಎಲ್ಲಿಗೆ ಹೋಗಬೇಕೆಂದು ಗೊತ್ತಾಗಲಿಲ್ಲ. ತಿರುಗಿ ಚಿತ್ತಯ್ಯನ ಮನೆಗೆ ಹೋದರೆ ಇಷ್ಟು ಹೊತ್ತಿಗೆ ವಿಷಯವೆಲ್ಲ ಗೊತ್ತಾಗಿ ಅವನ ಹೆಂಡತಿ ನನ್ನ ತಲೆಯ ಮೇಲೆ ಕಲ್ಲು ಎತ್ತಿಹಾಕಿಬಿಡಬಹುದೆನಿಸಿತು. ಅವ್ವ ಅಪ್ಪನಲ್ಲಿಗೆ ಹೋದರೆ ತಿರುಗಿ ಏಟು ಬೀಳಬಹುದೆನಿಸಿತು. ಲಾಕಪ್ಪಿನಲ್ಲಿ ಬಿದ್ದಿದ್ದ ಚಿತ್ತಯ್ಯ “ಚಿತ್ರಿ ಇಲ್ಲಿ ನೀನು ಕೂತ್ಕಬ್ಯಾಡ. ಕತ್ಲಾದರೆ ಆಗಬಾರದ್ದು ಆಗಿ ಅದೂ ನನ ತೆಲಿ ಮೇಲೆ ಬತ್ತದೇ ನೋಡು ಎಂದ. ಅರ್ಥವಾಗದೇ ಇರುವಂಥದ್ದು ಏನೋ ಅಷ್ಟಿಷ್ಟು ಗೊತ್ತಾದಂತಾಗಿ ಎದ್ದು ನಾನು ಓದುತ್ತಿದ್ದ ಶಾಲೆಯತ್ತ ಬಂದೆ. ಅಲ್ಲಿಯ ಅಂಗಳದ ಮೂಲೆಯಲ್ಲಿ ಹಕ್ಕಿಪಿಕ್ಕಿಯವರು ಬೀಡು ಬಿಟ್ಟಿದ್ದರು. ರಾತ್ರಿಯೆಲ್ಲ ಅವರೊಂದಿಗೇ ಇದ್ದೆ.

ಬೆಳಿಗ್ಗೆ ಎದ್ದರೆ ಹಕ್ಕಿಪಿಕ್ಕಿಯ ಹೆಂಗಸರೆಲ್ಲ ಗೂಡು ತೆರೆದು ಕೋಳಿಗಳನ್ನು ಈಚೆ ಬಿಟ್ಟಿದ್ದರು. ಅಲ್ಲಿಯೇ ಅಡ್ಡಾಡುತ್ತಿದ್ದ ಆಡು, ಕುರಿಯ ಬಳಿ ಅವುಗಳ ಮರಿಗಳು. ನಾನು ಕೋಳಿಪಿಳ್ಳೆಗಳ ಹಿಂದಿಂದೆ ಹೋದರೆ ಹುಂಜಗಳು ಅಟ್ಟಿಸಿ ಕೊಂಡುಬರುತ್ತಿದ್ದವು. ತಾಯಿ ಕೋಳಿಯು ಕಾಳು ಕಡ್ಡಿ, ಹುಳು ಹುಪ್ಪಟೆ ಕೆದಕುತ್ತ ಪಿಳ್ಳೆಗಳನ್ನು ಕರೆಯುವುದ ನಿಂತು ನೋಡುವಲ್ಲಿ ಬಿಡಾರದ ಯಜಮಾನ ಬಂದು ಊರುಕೇರಿಯ ಕೂಸೇ ನಿಂಗೊಂದು ಆಟ ತೋರಿಸಲಾ ಅಂದ.
ಏನು ತೋರಿಸಬಹುದೆಂದು ಪ್ರಶ್ನೆಯ ಕಣ್ಣಲ್ಲೇ ನಿಂತೆ. ಅವನು ಸುಮ್ಮನೆ ಬಾಯನ್ನು ಕೈಯ್ಯಿಂದ ಮುಚ್ಚಿ ಹೆಂಟೆಯ ಸದ್ದು ಮಾಡಿದ. ಅಲ್ಲೆಲ್ಲೋ ಇದ್ದ ಹೆಣ್ಣು ಕೋಳಿ ಇತ್ತಲಿತ್ತಲೇ, ಇವನತ್ತಲೇ ಓಡಿ ಬಂದಿತು. ಮತ್ತೆ ಬಾಯಿ ಮರೆ ಮಾಡಿ ಗಂಡು ಗೀಜಗನಂತೆ ಸಿಳ್ಳೆ ಹಾಕಿದ. ಬಿಡಾರದಾಚೆ ಮೇಯುತ್ತಿದ್ದ ಹೆಣ್ಣು ಗೀಜಗ ಗಿಲಿಗಿಲಿ ಸದ್ದು ಮಾಡಿಬಂದುವು. ಅಲ್ಲೇ ಹರಡಿದ್ದ ಬಲೆಗೆ ಸಿಕ್ಕಿ ಒದ್ದಾಡಿ ಏನೂ ಕಾಣದೆ ಮುದುರಿ ಬೀಳುತ್ತಿದ್ದವು. ಅವನು ನಗುತ್ತಿದ್ದ. ನನಗೆ ಆಶ್ಚರ್ಯವೆನಿಸಲು ಯಜಮಾನನು ಈಗ ಹೋರಿಯ ಸದ್ದು ಹಾಕಲಾ ಎಂದು ಜೋರು ದನಿ ಮಾಡಿದ. ಬಿಡಾರದ ಸಾಮಾನು ಹೊತ್ತು ಇವರೊಂದಿಗೆ ಊರೂರು ತಿರುಗುತ್ತಿದ್ದ ಹಸು ನಿಂತಲ್ಲಿಯೇ ಸದ್ದು ಬಂದತ್ತ ಮುಖ ತಿರುಗಿಸಿ ಮೂಗು ಅರಳಿಸಿತು. ಆಮೇಲೊಂದು ಘಳಿಗೆ ಬಿಟ್ಟು ಕೂಸೇ ಬೇಕಾದರೆ ಹುಲಿಯನ್ನೂ ಬರಹೇಳುತ್ತೇನೆ, ನೋಡುತ್ತೀಯಾ ಅಂದ. ನಾನು ಭಯದ ಮುಖದಲ್ಲಿ ನಿಂತೆ.

ಅಷ್ಟರಲ್ಲಿ ಬೆಳಗಿನ ಹೊತ್ತು ವಾಯು ವಿಹಾರಕ್ಕೆ ಬರುತ್ತಿದ್ದ ಪಾಲಯ್ಯ ಮೇಷ್ಟ್ರು ಎಲ್ಲಿದ್ದರೂ ಎದ್ದು ಕಾಣುತ್ತಿದ್ದ ನನ್ನ ಬಳಿ ಬಂದರು. “ಚಿತ್ರಿ ಈಟೊತ್ಗೆ ಬಂದು ಈ ಕೋಳಿಪಿಳ್ಳೆ ಹಿಂದೆ ತಡವ್ಯಾಡತ್ತಿದ್ದಿ, ನಿಂಗೆ ತೆಲೆ ಹೆಂಗೈತೆ” ಎಂದು ನನ್ನ ನೋಡಿದವರು ಅನುಮಾನದ ಮುಖ ಮಾಡಿಕೊಂಡರು. ಕೈಹಿಡಿದು ಬಲವಂತದಿಂದ ಅಂಬುವಂತೆ ಮನೆಗೆ ಕರೆದುಕೊಂಡು ಹೋದರು. “ನೀನು ಸಂತೆಗಿಂತೆ, ಬಸ್‌ಸ್ಟ್ಯಾಂಡು, ಈರುಳ್ಳಿ ಮೆಣಸಿನಕಾಯಿ ಅಂತ ಊರ ತುಂಬ ಅಡ್ಡಾಡಕಂತಿದ್ರೆ ಉದ್ಧಾರ ಆಗಂಗಿಲ್ಲ ನೋಡು” ಎಂದರು.

ಅವರ ಮನೆಯಲ್ಲೇ ಬೆಳಗ್ಗೆ ತಿಂಡಿ ತಿಂದ ಮೇಲೆ ಮೇಷ್ಟ್ರು “ಮನೆಗೋಗಿ ಪುಸ್ತಕದ ಬ್ಯಾಗು ತಗಂಬಾ” ಎನ್ನಲು “ನಾನು ಮನೆಗೋಗಲ್ಲ. ಊರಾಚೆ ಕಪಿಲೆ ಬಾವಿಗೆ ಹೋಗಿ ಬಿದ್ಕಂತೀನಿ” ಎಂದೆ. ಹಾಗೆಂದು ಪಾಲಯ್ಯ ಮೇಷ್ಟ್ರು ಮನೆಯಲ್ಲೇ ಉಳಿದೆ. ಹಿಂದುಮುಂದಿನ ಅರಿವಿಲ್ಲದ ನಾನು ಸೀದ ಅವರ ಮನೆಯಿಂದಲೇ ಹೋಗಿ ಬಾವಿಗೆ ಬಿದ್ದರೆ ಒಂದು ಹೋಗಿ ಇನ್ನೊಂದು ಕಥೆಯಾಗುವುದೆಂದು ನನ್ನನ್ನು ಬೈಕಿನಲ್ಲಿ ಕೂರಿಸಿ ಶಾಲೆಗೆ ಕರೆದುಕೊಂಡು ಹೋದರು. ಮನೆಯಿಂದ ಪುಸ್ತಕ, ಬ್ಯಾಗು ಅವರೇ ತಂದರು.

(‘ಸಿದ್ಧಿಯ ಕೈ ಚಂದ್ರನತ್ತ’: ಡಾ ಕೃಷ್ಣಮೂರ್ತಿ ಹನೂರರ ಕಾದಂಬರಿ ಸದ್ಯದಲ್ಲೇ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಹೊರಬರಲಿದೆ)