ಇತಿಹಾಸದ ಅನರ್ಘ್ಯ ರತ್ನಗಳ ಸುತ್ತ ಅಲೆದಾಟ. ಆರ್ಕಿಮಿಡಿಸ್ ತವರೂರಿನಿಂದ ಹಿಡಿದು ದೇವಾಲಯಗಳ ಕಣಿವೆಯವರೆಗೆ ಇತಿಹಾಸದ ರಸದೌತಣ ಬೇಕೆಂದರೆ ಸಿಸಿಲಿಗೆ ಬರಬೇಕು. ಇತಿಹಾಸದ ಕಥೆಗಳಲ್ಲಿ ಕಳೆದುಹೋಗುವ ಹವ್ಯಾಸವಿರುವವರಿಗೆ ಸಿಸಿಲಿ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ತೆರೆದಿಡುತ್ತದೆ. ಕ್ರಿ.ಪೂ. ಆರನೇ ಶತಮಾನದ ದೇವಾಲಯಗಳ ಭೇಟಿ, ನನ್ನ ಈವರೆಗಿನ ಯೂರೋಪಿನ ಪ್ರವಾಸಗಳಲ್ಲೇ ಅನನ್ಯ! ಪ್ರಪಂಚದಾದ್ಯಂತ ಇರುವ ಗ್ರೀಕ್ ದೇವಾಲಯಗಳಲ್ಲಿ ಅತ್ಯಂತ ಸುಸ್ಥಿತಿಯಲ್ಲಿರುವ “Temple of Concordia”ದ ಆಕಾರ, ರಚನೆ – ನೋಡಿ ನಿಬ್ಬೆರಗಾಗಿಬಿಟ್ಟೆ.
“ದೂರದ ಹಸಿರು” ಸರಣಿಯಲ್ಲಿ ಸಿಸಿಲಿಯನ್ ಡೈರೀಸ್‌ನ ಕೊನೆಯ ಪುಟಗಳನ್ನು ಹಂಚಿಕೊಂಡಿದ್ದಾರೆ ಗುರುದತ್ ಅಮೃತಾಪುರ

ನನ್ನ ಬಾಲ್ಯದಲ್ಲಿ ಅಜ್ಜಿ ಮನೆಗೆ ಹಸುವಿನ ಹಾಲು ಕೊಡಲು ಹಳ್ಳಿಯಿಂದ ಹಾಲಿನಣ್ಣ ಬರುತ್ತಿದ್ದರು. ಆಗೆಲ್ಲ ವರ್ತನೆಯ ಕಾಲ. ನನ್ನಜ್ಜಿಗೆ ಹಾಲಿನ ಅಣ್ಣ ಎರಡು ಲೀಟರ್ ಹಾಲನ್ನು ಪಾತ್ರೆಗೆ ಹಾಕಿದಾಗ ಆಗದ ಸಮಾಧಾನ, ಅವನು ಹಾಕುತ್ತಿದ್ದ ಕೊಸರಿನಲ್ಲಿ ಆಗುತ್ತಿತ್ತು. ನಮ್ಮ ಸುತ್ತಲಿನ ಸಮಾಜವನ್ನು ಗಮನಿಸಿ. ನನ್ನನ್ನು, ನಿಮ್ಮನ್ನು ಸೇರಿ ಎಲ್ಲರಿಗೂ ಅಂದುಕೊಂಡಿದ್ದಕ್ಕಿಂತ ಒಂದಿಷ್ಟು ಹೆಚ್ಚಿಗೆ ಸಿಗುವ ಪಾಲಿನಲ್ಲಿ ಅಡಗಿರುವ ಸಂತೋಷ ಅಷ್ಟಿಷ್ಟಲ್ಲ. ಸಿಸಿಲಿಯ ಈ ಕೊನೆಯ ಲೇಖನ ಕೂಡ ನನ್ನ ಪ್ರವಾಸದ “ಕೊಸರು” ಎಂದೇ ಭಾವಿಸಿ. ಸಿಸಿಲಿ ಪ್ರವಾಸದಲ್ಲಿ ಆದ ಪ್ರತ್ಯೇಕ ಅನುಭವಗಳನ್ನು ವಿವಿಧ ಭಾಗಗಳಾಗಿ ನಿಮ್ಮ ಮುಂದಿಡುತ್ತಿದ್ದೇನೆ.

ಅರುಣರಾಗ

ನನಗೆ ಪ್ರವಾಸದ ಸಮಯದಲ್ಲಿ ಯಾವಾಗಲೂ ಒಂದು ಬಯಕೆಯಿದೆ. ಪ್ರಕೃತಿಯನ್ನು ಅಪ್ಪಟವಾಗಿ ಇದ್ದ ಹಾಗೆ ನೋಡಬೇಕು ಎಂದು. ಬಹುತೇಕ ಅದು ಸಾಧ್ಯವಾಗುವುದು ಜನಜಂಗುಳಿ ಇಲ್ಲದ ಮುಂಜಾನೆಯ ಹೊತ್ತಿನಲ್ಲಿ ಮಾತ್ರ. ಎಲ್ಲೆಲ್ಲಿ ಸಾಧ್ಯವಾಗುತ್ತೋ ಅಲ್ಲೆಲ್ಲ ಉಳಿದುಕೊಳ್ಳಲು ಅನುಕೂಲದ ಜಾಗವನ್ನು ಹುಡುಕಿ ಕಾದಿರಿಸುತ್ತೇನೆ. ಈ ಪ್ರವಾಸದಲ್ಲಿ ಸಮುದ್ರದಲ್ಲಿ ಅರುಣೋದಯವನ್ನು ನೋಡಲೇಬೇಕೆಂಬ ಬಯಕೆಯಿಂದ, ಹೆಚ್ಚು ದುಡ್ಡು ತೆತ್ತು ಕಡಲ ದಡದ ಬಳಿಯೇ ಒಂದು ಮನೆಯನ್ನು ಕಾದಿರಿಸಿದ್ದೆ. ಬೆಳಗ್ಗೆ 6:25ಕ್ಕೆ ಸೂರ್ಯೋದಯ. ಮೊಬೈಲಿನಲ್ಲಿ ಅಲಾರಾಂ ಇಟ್ಟು ಮಲಗಿದ್ದೆವು. ಎದ್ದು ತಯಾರಾಗಿ ಹೊರಡುವುದು ಸ್ವಲ್ಪ ತಡವಾಯಿತು. ಸೂರ್ಯೋದಯ ನೋಡುವ ಅವಕಾಶ ಕೈತಪ್ಪಿ ಹೋಯಿತೆಂಬ ದಿಗಿಲಿನಲ್ಲಿ, ಕ್ಯಾಮಾರಾ ಬ್ಯಾಗ್ ಹಿಡಿದು ಓಡಿದ್ದಷ್ಟೇ ನೆನಪು.


ಹತ್ತು ನಿಮಿಷ ಆದಮೇಲೆ ನನ್ನ ಹೆಂಡತಿ ಏದುಸಿರು ಬಿಡುತ್ತಾ ಬಂದವಳು ಸ್ವಲ್ಪ ಸುಧಾರಿಸಿಕೊಂಡ ನಂತರ ತರಾಟೆಗೆ ತೆಗೆದುಕೊಂಡಳು. ಇನ್ನೊಬ್ಬರೆದುರಿಗೆ ಅವಮಾನ ಎಂದುಕೊಳ್ಳಲು ಮೂರನೆಯವರು ಯಾರೂ ಇರಲಿಲ್ಲ. ಸಂಪೂರ್ಣ ಸಮುದ್ರ ತೀರ ನಮ್ಮದಾಗಿತ್ತು. ಎದುರಿಗೆ ಆಗಸಕ್ಕೆಲ್ಲಾ ಹದವಾದ ಕೇಸರಿಯ ಬಣ್ಣವನ್ನು ಲೇಪಿಸಿದ್ದ ಸೂರ್ಯ ನಮ್ಮ ವೈಮನಸ್ಸನ್ನು ಮಾಯಮಾಡಿಬಿಟ್ಟಿದ್ದ. ಗೋಳಾಕಾರದ ಭೂಮಿಯಲ್ಲಿ ಬೇರೆಲ್ಲೋ ಮುಳುಗಿ, ಇಲ್ಲಿ ಇಣುಕಿ ಸೂರ್ಯ ದಿಗಂತದಿಂದೇಳುತ್ತಿದ್ದ. ಕ್ಷಣ ಕ್ಷಣಕ್ಕೂ ಸ್ವಲ್ಪ ಪ್ರಖರವಾಗುತ್ತಿದ್ದ ಸೂರ್ಯ ತನ್ನ ಕಿರಣಗಳಿಂದ ನಮ್ಮ ಹಿಂದಿದ್ದ ಎಟ್ನಾ ಪರ್ವತವನ್ನು ಒಂದು ಪದರ ಚಿನ್ನದ ಲೇಪನದಿಂದ ಮಿಂದೇಳಿಸಿದ್ದ. ಅಲ್ಲಲ್ಲಿ ಕಾಣುತ್ತಿದ್ದ ಸಣ್ಣ ಮೀನುಗಾರರ ದೋಣಿಗಳು. ಒಂದು ದೋಣಿ ಸೂರ್ಯನ ರೇಖೆಯಲ್ಲಿ ನೇರವಾಗಿ ಬರುತ್ತಿರುವುದನ್ನು ಗಮನಿಸಿ, ಫೋಟೋ ತೆಗೆಯಲು ಅಣಿಯಾದೆ. ಆ ಮೀನುಗಾರನನ್ನು ಹಿಂಬಾಲಿಸುತ್ತಿದ್ದ ಒಂದು ಹಕ್ಕಿ ಅವನ ತಲೆಯ ಮೇಲೆಯೇ ಗಿರಕಿ ಹೊಡೆಯುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು. ಬಹುಷಃ ಅವನು ಹಿಡಿದ ಮೀನಿನಲ್ಲಿ ಇದಕ್ಕೂ ಪಾಲು ಸಿಗುತ್ತಿತ್ತು ಎಂದು ಕಾಣುತ್ತದೆ. ಒಂದು ಅರೆ ಕ್ಷಣದಲ್ಲಿ ಆ ಹಕ್ಕಿ, ಮೀನುಗಾರನ ದೋಣಿ, ಸೂರ್ಯ ಎಲ್ಲವೂ ಒಂದು ನೇರ ರೇಖೆಯಲ್ಲಿ ನನ್ನ ಕ್ಯಾಮಾರ ಕಣ್ಣಿನಲ್ಲಿ ಶಾಶ್ವತವಾಗಿ ಸೆರೆಯಾದವು. ಇದನ್ನು “ಅರುಣರಾಗ” ಎನ್ನದೇ ಬೇರೇನೆನ್ನಬೇಕು?

ಒಂದು ಅಸೂಯೆಯ ಕಥೆ

ಅರುಣರಾಗದ ನಂತರ ಭೇಟಿಕೊಟ್ಟಿದ್ದು ಪಲೆರ್ಮೊ ನಗರದ ಒಂದು ವಿಶೇಷ ಸ್ಥಳಕ್ಕೆ. ಯೂರೋಪಿನ ಮೂರನೇ ಹಾಗೂ ಇಟಲಿಯ ಅತೀ ದೊಡ್ಡ “ಒಪೆರಾ ಹೌಸ್” ಸಿಸಿಲಿಯ ರಾಜಧಾನಿಯಾದ ಪಾಲೆರ್ಮೋದಲ್ಲಿದೆ (ಮೊದಲನೆಯದು ಪ್ಯಾರಿಸ್ ನಲ್ಲಿ ಮತ್ತು ಎರಡನೆಯದು ವಿಯನ್ನಾದಲ್ಲಿದೆ). ಇದರ ಹೆಸರು “Teatro Massimo”. ಸುಮಾರು 1400 ಜನ ಒಮ್ಮೆಲೆಗೆ ಕೂತು ಸಂಗೀತ ಸಂಜೆ, ನೃತ್ಯ, ನಾಟಕ ರೂಪಕಗಳನ್ನು ವೀಕ್ಷಿಸಬಹುದು. ಇದರ ವಿಸ್ತೀರ್ಣ ಸುಮಾರು 25,000 ಚದರ ಅಡಿಗಳಷ್ಟು. ಪ್ರತಿಯೊಬ್ಬರಿಗೂ ಐಷಾರಾಮಿ ಆಸನದ ವ್ಯವಸ್ಥೆ. ಹದಿನೆಂಟನೇ ಶತಮಾನದ ಕೊನೆಯಲ್ಲಿ ನಿರ್ಮಾಣಗೊಂಡ ಈ ಕಟ್ಟಡದಲ್ಲಿ ಹಂಪೆಯ ಹವಾ ಮಹಲ್ ನಂತೆ ತಂಪು ಗಾಳಿಯ ವ್ಯವಸ್ಥೆಯಿದೆ. ಇಂದಿಗೂ ಅಲ್ಲಿ ವಿದ್ಯುತ್ ಚಾಲಿತ ಹವಾ ನಿಯಂತ್ರಣದ ಉಪಕರಣಗಳು ಇಲ್ಲದಿದ್ದರೂ ತಂಪಾಗಿರುತ್ತದೆ. ಮೈಕ್ ಸಿಸ್ಟಮ್ ಇಲ್ಲದ ಕಾಲದಲ್ಲಿ ನಿರ್ಮಿಸಲಾದ ಈ ಕಟ್ಟಡದಲ್ಲಿನ ಧ್ವನಿ ವಿಜ್ಞಾನ (ಅಕೋಸ್ಟಿಕ್ಸ್) ಅದ್ಭುತವಾಗಿದೆ. ಈ ಎಲ್ಲ ಮಾಹಿತಿಗಳನ್ನು ವಿವರವಾಗಿ ತಿಳಿಯಲು ಹತ್ತು ಯುರೋ ಕೊಟ್ಟು ಅರ್ಧ ಗಂಟೆ ಗೈಡೆಡ್ ಟೂರ್ ಹೋಗಬೇಕು.

1861 ರಲ್ಲಿ ಇಟಲಿಯ ಏಕೀಕರಣವಾದ ನಂತರ, ಅದರ ಸ್ಮರಣಾರ್ಥವಾಗಿ ಪಲೆರ್ಮೊ ನಗರದ ಮೇಯರ್ ಅಂಟೋನಿಯೋ ಅವರಿಗೆ ಹೊಳೆದದ್ದು “ಇಟಲಿಯಲ್ಲೇ ಅತೀ ದೊಡ್ಡ ಒಪೆರಾ ಹೌಸ್” ನಿರ್ಮಾಣದ ಕನಸು. ಚರ್ಚೆಗಳು ನಡೆದು ವಿನ್ಯಾಸಕಾರರನ್ನು ಕರೆಸಿ ಕೆಲಸ ಪೂರ್ಣಗೊಂಡದ್ದು 1897 ರಲ್ಲಿ. ಗ್ರೀಕ್, ರೋಮನ್ ಇತಿಹಾಸವಿರುವ ಈ ಭಾಗದಲ್ಲಿ, ಅದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಕಂಬಗಳನ್ನು ನಿರ್ಮಿಸಲಾಗಿದೆ. ನವ ವಧುವಂತೆ ಸಜ್ಜುಗೊಂಡ ಒಪೆರಾ ಹೌಸ್ ಉದ್ಘಾಟನೆಗೆ ಇಟಲಿಯ ರಾಜನನ್ನು ಆಹ್ವಾನಿಸಲಾಗಿತ್ತು. ಆಗಿನಿಂದ ಈಗಿನವರೆಗೂ ಸಿಸಿಲಿ ಒಂದು ಹಿಂದುಳಿದ ರಾಜ್ಯ. ಅಲ್ಲಿಯ ಜನಗಳ ಮೇಲೆ ಯಾವುದೇ ನಿರೀಕ್ಷೆ ಇಲ್ಲದೆ ಬಂದ ರಾಜ ಒಪೆರಾ ಹೌಸ್ ನೋಡಿ ನಿಬ್ಬೆರಗಾಗಿದ್ದ. ಇಷ್ಟು ಸುಂದರವಾದ, ಬೃಹತ್ ಗಾತ್ರದ ಕಟ್ಟಡವನ್ನು ನಿರೀಕ್ಷಿಸದ ಅವನಿಗೆ ಒಳಗೊಳಗೇ ಅಸೂಯೆ ಮೂಡಿತ್ತು. ಇಟಲಿಯ ರಾಜಧಾನಿ ರೋಮ್ ನಲ್ಲಿ ಇಲ್ಲದ ವೈಭವ ಈ ಹಿಂದುಳಿದ ರಾಜ್ಯದಲ್ಲಿ ಹುಟ್ಟಿದೆ ಎನ್ನುವ ಕಾರಣಕ್ಕೆ ಅದನ್ನು ಉದ್ಘಾಟಿಸದೇ ಹಿಂದಿರುಗಿದ್ದನಂತೆ. ದೊಡ್ಡ ಸ್ಥಾನದಲ್ಲಿರುವವರಿಗೆ ಅಹಂಕಾರ, ಅಸೂಯೆ ಇದ್ದರೆ ಅಳಿಸಿಹೋಗದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ!

ಅನಿರೀಕ್ಷಿತ ಬೀಳ್ಕೊಡುಗೆ:

ಸಿಸಿಲಿ ಪ್ರಯಾಣದ ಕೊನೆಯ ದಿನದಲ್ಲಾದ ಅನುಭವ ಎಂದಿಗೂ ಅಳಿಸದ ಹಾಗೆ ಅಚ್ಚಳಿಯದಂತೆ ಉಳಿಯುತ್ತದೆ. ಸಿಸಿಲಿಯ ಟಾವೋರ್ಮಿನಾ ಎನ್ನುವ ಕಡಲ ಕಿನಾರೆಯಲ್ಲಿ ಒಂದು ಪುಟ್ಟ ಹಾಗೂ ವಿಶಿಷ್ಟ ದ್ವೀಪವಿದೆ. ಆ ದ್ವೀಪದಲ್ಲಿ ಒಂದು ವಸ್ತು ಸಂಗ್ರಹಾಲಯವಿದೆ. ದ್ವೀಪಕ್ಕೆ ಪ್ರವೇಶ ಇರುವುದೇ ಈ ವಸ್ತು ಸಂಗ್ರಹಾಲಯದ ಮೂಲಕ. ಇಲ್ಲಿನ ವಿಶೇಷ ಎಂದರೆ ದ್ವೀಪಕ್ಕೆ ವರ್ಷ ಪೂರ್ತಿ ಕಾಲ್ನಡಿಗೆಯಲ್ಲಿ ತಲುಪಬಹುದು. ಹೆಚ್ಚೆಂದರೆ ಮಂಡಿಯವರೆಗೆ ಮಾತ್ರ ನೀರು ಬರುತ್ತದೆ. ಇದರ ಹೆಸರು “ಐಸೋಲಾ ಬೆಲ್ಲಾ”. ಇಟಾಲಿಯನ್ ಭಾಷೆಯಲ್ಲಿ ಐಸೋಲಾ ಎಂದರೆ “ದ್ವೀಪ” ಮತ್ತು ಬೆಲ್ಲಾ ಎಂದರೆ “ಸುಂದರವಾದ” (beautiful) ಎನ್ನುವ ಅರ್ಥ ಬರುತ್ತದೆ. ಪದಗಳ ಅರ್ಥಕ್ಕೆ ಒಂದು ಸಾಸಿವೆ ಕಾಳಿನಷ್ಟೂ ವಂಚನೆಯಿಲ್ಲ. ಅತ್ಯಂತ ಸುಂದರವಾದ ಹಸಿರು-ನೀಲ ಮಿಶ್ರಿತ ಸಮುದ್ರ ತಟದಿಂದ ಸುತ್ತುವರೆದ ದ್ವೀಪ.

ನಾವು ಭೇಟಿ ನೀಡಿದ ದಿನ ಆ ವಸ್ತು ಸಂಗ್ರಹಾಲಯವನ್ನು ಯಾವುದೇ ಮುನ್ಸೂಚನೆ ಇಲ್ಲದೆ ಮುಚ್ಚಲಾಗಿತ್ತು. ಈ ವಿಷಯ ತಿಳಿಯದೆ ನಮ್ಮಂತೆಯೇ ಬಹಳಷ್ಟು ಜನ ಬಂದಿದ್ದರು. ಬಂದವರೆಲ್ಲರಿಗೂ ನಿರಾಸೆ! ಇಷ್ಟು ದೂರ ಬಂದಿದ್ದೇವಲ್ಲ ಎನ್ನುವ ಕಾರಣಕ್ಕೆ ಫೋಟೋ ತೆಗೆದುಕೊಳ್ಳುತ್ತಾ ಸಮಯ ಕಳೆಯುತ್ತಿದ್ದೆವು.

ಒಂದು ದೋಣಿ ಸೂರ್ಯನ ರೇಖೆಯಲ್ಲಿ ನೇರವಾಗಿ ಬರುತ್ತಿರುವುದನ್ನು ಗಮನಿಸಿ, ಫೋಟೋ ತೆಗೆಯಲು ಅಣಿಯಾದೆ. ಆ ಮೀನುಗಾರನನ್ನು ಹಿಂಬಾಲಿಸುತ್ತಿದ್ದ ಒಂದು ಹಕ್ಕಿ ಅವನ ತಲೆಯ ಮೇಲೆಯೇ ಗಿರಕಿ ಹೊಡೆಯುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು. ಬಹುಷಃ ಅವನು ಹಿಡಿದ ಮೀನಿನಲ್ಲಿ ಇದಕ್ಕೂ ಪಾಲು ಸಿಗುತ್ತಿತ್ತು ಎಂದು ಕಾಣುತ್ತದೆ. ಒಂದು ಅರೆ ಕ್ಷಣದಲ್ಲಿ ಆ ಹಕ್ಕಿ, ಮೀನುಗಾರನ ದೋಣಿ, ಸೂರ್ಯ ಎಲ್ಲವೂ ಒಂದು ನೇರ ರೇಖೆಯಲ್ಲಿ ನನ್ನ ಕ್ಯಾಮಾರ ಕಣ್ಣಿನಲ್ಲಿ ಶಾಶ್ವತವಾಗಿ ಸೆರೆಯಾದವು.

ಹಕ್ಕಿಗಳನ್ನು ಕ್ಯಾಮಾರಾದಲ್ಲಿ ಸೆರೆಹಿಡಿಯುವುವರಿಗೆ ಅಥವಾ ಪಕ್ಷಿ ವೀಕ್ಷಣೆ ಮಾಡುವವರಿಗೆ ಈ ಅನುಭವ ಖಂಡಿತ ಆಗಿರುತ್ತದೆ. ಸ್ವಲ್ಪ ಹೊತ್ತು ತಟಸ್ಥವಾಗಿ ನಿಂತು ಸುತ್ತಲಿನ ವಾತಾವರಣ ಗಮನಿಸಿದಾಗ ಮಾತ್ರ, ಅಲ್ಲಿರುವ ಅಸಾಧಾರಣ ಪ್ರಪಂಚ ಕಣ್ಣಿನ ಮುಂದೆ ತೆರೆದುಕೊಳ್ಳುತ್ತದೆ. ಅಲ್ಲಿಯವರೆಗೂ ನಮ್ಮ ಹತ್ತಿರದಲ್ಲೇ ಹಕ್ಕಿಗಳಿದ್ದರೂ ನಮ್ಮ ಕಣ್ಣಿಗೆ ಅಷ್ಟಾಗಿ ಬೀಳುವುದಿಲ್ಲ. ಅದೇ ರೀತಿ ಸಮುದ್ರ ತೀರದತ್ತ ನನ್ನ ಗಮನ ಗಾಢವಾಗುತ್ತಾ ಹೋದಂತೆ ಒಂದೊಂದೇ ವಿಶೇಷಗಳು ಕಣ್ಣಿಗೆ ಬಿದ್ದವು. ತಳದವರೆಗೂ ಕಾಣುವ ಶುಭ್ರ, ಸ್ಪಟಿಕದಂತಹ ನೀರು. ಇದೊಂದು “ಪೆಬೆಲ್ ಬೀಚ್”. ಸಮುದ್ರ ತೀರದಲ್ಲಿ ಮರಳಿರಲಿಲ್ಲ. ಸಣ್ಣ ಸಣ್ಣ ಕಲ್ಲುಗಳಿಂದ ಕೂಡಿದ ಕಡಲ ತಡಿ. ತಳದವರೆಗೂ ಕಾಣುವ ಶುಭ್ರ ಸ್ಪಟಿಕದನಂತಹ ನೀರು. ಅಲ್ಲಲ್ಲಿ ಈಜುವ ಮೀನಿನ ಗುಂಪು. ಅಲ್ಲೇನೋ ವಿಚಿತ್ರವಾಗಿ ಹೃದಯದಂತೆ ಮೀಟುತ್ತಿರುವ ಒಂದು ಜೀವಿ. ಇನ್ನಷ್ಟು ಗಮನಿಸಿದಾಗ ಪರಮಾಶ್ಚರ್ಯ! ಅದು ಜೆಲ್ಲಿ ಮೀನಾಗಿತ್ತು. ಸ್ವಲ್ಪ ಕಣ್ಣಾಡಿಸಿದರೆ ಎಲ್ಲೆಲ್ಲೂ ಜೆಲ್ಲಿ ಮೀನುಗಳು. ಅಕ್ವೇರಿಯಂ ನಲ್ಲಿ ಹಾಗೂ ಡಿಸ್ಕವರಿ ಚಾನೆಲ್ ನಲ್ಲಿ ಮಾತ್ರ ನೋಡಿದ್ದ ಸಮುದ್ರ ಜೀವಿಗಳು ಸ್ವಚ್ಚಂದವಾಗಿ ಕಣ್ಮುಂದೆ ಈಜಾಡುತ್ತಿವೆ! ತನ್ನೂರಿಗೆ ಬಂದಿದ್ದ ನಮ್ಮನ್ನು ಕುಟುಂಬ ಸಮೇತರಾಗಿ ಬೀಳ್ಕೊಡಲು ಕಡಲ ದಡದವರೆಗೂ ಬಂದವೇನೋ ಎನ್ನುವ ಅನುಭವ.

ನಂತರ ಇದರ ಬಗ್ಗೆ ಸ್ವಲ್ಪ ವಿಚಾರಿಸಿದಾಗ ತಿಳಿದ ಮಾಹಿತಿ ಇಷ್ಟು: ಜೆಲ್ಲಿ ಮೀನುಗಳು ಸಮುದ್ರ ದಡದಲ್ಲಿ ಕಾಣುವುದು ಅಪರೂಪ. ಆ ಪ್ರದೇಶದಲ್ಲಿ ಎರಡು ವರ್ಷದ ಹಿಂದೆ ಒಮ್ಮೆ ಕಂಡಿತ್ತಂತೆ. ಅವುಗಳಲ್ಲಿ ಕೆಲವು ವಿಷಕಾರಿ ಜಾತಿಯದ್ದಾದ್ದರಿಂದ, ಜೆಲ್ಲಿ ಮೀನುಗಳು ದಡದಲ್ಲಿರುವಾಗ ಸಮುದ್ರ ಸ್ನಾನ ಮಾಡುವ ಧೈರ್ಯವನ್ನು ಯಾರು ಸಹ ಮಾಡುವುದಿಲ್ಲ. ಆದರೂ ಈ ಅತ್ಯಪರೂಪದ ಸಮುದ್ರ ಜೀವಿಯನ್ನು ನೈಜವಾಗಿ ನೋಡಲು ಪುಣ್ಯ ಮಾಡಿರಬೇಕು. ಬಂದಾಗ ನಿರಾಸೆಯಾಗಿದ್ದವರೆಲ್ಲರೂ, ಮಂದಹಾಸದಿಂದ ಹಿಂದಿರುಗಿದರು. ಇದಕ್ಕಿಂತಲೂ ದೊಡ್ಡ ಅಥಿತಿ ಸತ್ಕಾರ, ಬೀಳ್ಕೊಡುಗೆ ಇನ್ನೊಂದಿದೆಯೇ?

ಒಟ್ಟಿನಲ್ಲಿ ಹನ್ನೊಂದು ದಿನದ ಸಿಸಿಲಿ ಪ್ರವಾಸದಲ್ಲಿ ಅನೇಕ ವೈವಿಧ್ಯ ರೀತಿಯ ಅನುಭವಗಳಾದವು. ಅನಿರೀಕ್ಷಿತವಾಗಿ ಎದುರಾದ ಸಸ್ಯಾಹಾರಿ ಖಾದ್ಯಗಳು ಮನಸೂರೆಗೊಂಡವು. ಕನೋಲಿ, ಕಸಾಟಾ ಐಸ್ ಕ್ರೀಮ್, ಪಿಜ್ಜಾ, ಪಾಸ್ತಾ… ಪಟ್ಟಿ ಉದ್ದವಿದೆ. ಸುಮ್ಮನೆ ಈಗ ನೆನಸಿಕೊಂಡರೆ ಮತ್ತೆ ಹೋಗಬೇಕೆನ್ನುವ ಆಸೆಯಾಗುತ್ತದೆ. ಎಂದೂ ನೋಡಿರದ ಕೆಂಪು ಕಿತ್ತಳೆ(ಬ್ಲಡ್ ಆರೆಂಜ್) ಹಣ್ಣಿನ ರಸವನ್ನು ಸವಿದ ನೆನಪು ಬೇಸಿಗೆಯ ಬಹುತೇಕ ದಿನಗಳಲ್ಲಿ ಹಾದು ಹೋಗುತ್ತದೆ.

ಅಂಡಮಾನ್ ಸಮುದ್ರದ ಹವಳ ದಂಡೆಗಳು, ಹಿಮಾಲಯ ಪರ್ವತ ಶ್ರೇಣಿಗಳು, ರಾಜಸ್ಥಾನದ ಮರುಭೂಮಿ, ಯೂರೋಪಿನ ಪರ್ವತ ಪ್ರದೇಶಗಳು, ನಗರಗಳು ಎಲ್ಲವನ್ನು ನೋಡಿದ್ದರೂ ಈ ಪಟ್ಟಿಯಲ್ಲಿ ಸಜೀವ “ಜ್ವಾಲಾಮುಖಿ” ಸೇರಿರಲಿಲ್ಲ. ಸಿಸಿಲಿ ಪ್ರಯಾಣದಲ್ಲಿ ಅದನ್ನೂ ನೋಡಿದಂತಾಯಿತು. “ಎಟ್ನಾ” ಪರ್ವತದ ಸುತ್ತಲಿನ ಚಾರಣದ ಅನುಭವ ಅನನ್ಯ! ನವಜಾತ ಪರ್ವತಗಳ ಮೇಲೆ ಅಲೆದಾಡುವ ಅವಕಾಶ ದೊರೆಯಿತು. ಭೂಗರ್ಭದಲ್ಲಿ ಅಡಗಿರುವ ಕೌತುಕವನ್ನು ಕಣ್ಣಾರೆ ನೋಡಿದ್ದಾಯಿತು.

ಇತಿಹಾಸದ ಅನರ್ಘ್ಯ ರತ್ನಗಳ ಸುತ್ತ ಅಲೆದಾಟ. ಆರ್ಕಿಮಿಡಿಸ್ ತವರೂರಿನಿಂದ ಹಿಡಿದು ದೇವಾಲಯಗಳ ಕಣಿವೆಯವರೆಗೆ ಇತಿಹಾಸದ ರಸದೌತಣ ಬೇಕೆಂದರೆ ಸಿಸಿಲಿಗೆ ಬರಬೇಕು. ಇತಿಹಾಸದ ಕಥೆಗಳಲ್ಲಿ ಕಳೆದುಹೋಗುವ ಹವ್ಯಾಸವಿರುವವರಿಗೆ ಸಿಸಿಲಿ ಲೆಕ್ಕವಿಲ್ಲದಷ್ಟು ಅವಕಾಶಗಳನ್ನು ತೆರೆದಿಡುತ್ತದೆ. ಕ್ರಿ.ಪೂ. ಆರನೇ ಶತಮಾನದ ದೇವಾಲಯಗಳ ಭೇಟಿ, ನನ್ನ ಈವರೆಗಿನ ಯೂರೋಪಿನ ಪ್ರವಾಸಗಳಲ್ಲೇ ಅನನ್ಯ! ಪ್ರಪಂಚದಾದ್ಯಂತ ಇರುವ ಗ್ರೀಕ್ ದೇವಾಲಯಗಳಲ್ಲಿ ಅತ್ಯಂತ ಸುಸ್ಥಿತಿಯಲ್ಲಿರುವ “Temple of Concordia”ದ ಆಕಾರ, ರಚನೆ – ನೋಡಿ ನಿಬ್ಬೆರಗಾಗಿಬಿಟ್ಟೆ. ಮನೆಯೊಳಗೆ ನುಗ್ಗಿದ ಅಪರಿಚಿತ ಸೈನಿಕ, ಮಣ್ಣಿನ ನೆಲದ ಮೇಲೆ ಬರೆದ ತನ್ನ ಗಣಿತದ ಸೂತ್ರಗಳನ್ನು ಹಾಳು ಮಾಡಿದ ಎಂದು ಸಿಟ್ಟು ಮಾಡಿದ್ದಕ್ಕೆ, ಆತ ಯಾರೆಂದು ತಿಳಿಯದ ಹುಂಬರು – “ಆರ್ಕಿಮಿಡಿಸ್” ಎಂಬ ಮೇಧಾವಿಯನ್ನು ಬಲಿ ಕೊಟ್ಟ ಕಥೆ ಈಗಲೂ ಮನಸ್ಸು ಕದಡುತ್ತದೆ.

ನೀಲಿ ದಡದ ಸಮುದ್ರದಲ್ಲಿ ಮಿಂದೆದ್ದ ಅನುಭವ ಮನಸ್ಸಿಗೆ ಮುದನೀಡುತ್ತದೆ. ಪ್ರವಾಸದ ಕೊನೆಯಲ್ಲಿ ಎಲ್ಲಿಂದಲೋ ಬಂದು ನಮ್ಮನ್ನು ಬೀಳ್ಕೊಟ್ಟ ಅಪರೂಪದ ಸಮುದ್ರ ಜೀವಿಗಳಾದ “ಜೆಲ್ಲಿ ಫಿಶ್” ಸಮೂಹಗಳಿಗೆ ನಾನು ಚಿರಋಣಿ. ನನ್ನ ಈವರೆಗಿನ ತಿರುಗಾಟದಲ್ಲಿ, ಒಂದೇ ಪ್ರವಾಸದಲ್ಲಿ ಇಷ್ಟು ವೈಶಿಷ್ಟ್ಯಗಳನ್ನು ನೋಡಿದ, ಅನುಭವಿಸಿದ ಬೇರೊಂದು ಪ್ರದೇಶವಿಲ್ಲ. ಮನಸ್ಸಿನ ಭಾವನೆಗಳನ್ನು ಲೋಲಕದಂತೆ ಅತ್ತಿಂದಿತ್ತ ಆಡಿಸಿದ ಪ್ರವಾಸ ಇದಾಗಿತ್ತು. ಅವಕಾಶ ಸಿಕ್ಕರೆ ಸಿಸಿಲಿಗೆ ಅಗತ್ಯವಾಗಿ ಭೇಟಿ ನೀಡಿ. ಎಲ್ಲ ರೀತಿಯ ಜನಕ್ಕೂ ಒಂದೊಂದು ವಿಸ್ಮಯ ಕಾದಿದೆ.

(ಫೋಟೋಗಳು: ಲೇಖಕರವು)