ಗೋದಾ ಸಾಯುವ ಹಿಂದಿನ ವರ್ಷ ಮಗ-ಸೊಸೆ ಬಂದಿದ್ದಾಗ ದೊಡ್ಡ ರಾದ್ಧಾಂತವೇ ಆಗಿಹೋಯಿತು. ಒಂದು ದಿನ ಸೊಸೆ ಗೊಲೇಚಾ ಮಧ್ಯಾಹ್ನ ನಾಲ್ಕು- ನಾಲ್ಕೂವರೆ ಘಂಟೆ ಹೊತ್ತಿನಲ್ಲಿ ರೂಮಿಂದ ಈಚೆಗೆ ಬಂದ(ಳು). ಸಾಲಂಕೃತ ವಧು. ನೋಡಿದರೆ ಕಣ್ಣು ತುಂಬಿ ಬರುವ ಹಾಗೆ. ನಮ್ಮ ಶ್ರೀ ವೈಷ್ಣವ ಹುಡುಗಿಯರ ರೀತಿಯೇ. ಕೆಂಪಂಚು ಇರುವ ಹಸಿರು ಸೀರೆ, ಬಿಳಿ ಬಣ್ಣದ ತುಂಬು ತೋಳಿನ ರವಿಕೆ, ಲೋಲಾಕು, ದೊಡ್ಡ ಹೆರಳು, ಹೀಗೆ. ಬಂದೀಗೌಡ ಬಡಾವಣೆ ಕಡೆ ವಾಕಿಂಗ್ ಹೋಗಿ ಬರ್ತೀವಿ ಅಂತ ಮಗ-ಸೊಸೆ ಹೊರಟರು.
ಕೆ.ಸತ್ಯನಾರಾಯಣ ಅವರ ಹೊಸ ಕಾದಂಬರಿ “ಲೈಂಗಿಕ ಜಾತಕ”ದಿಂದ ಆಯ್ದ ಭಾಗ, ನಿಮ್ಮ ಓದಿಗೆ

 

ಸಮ್ಮೇಳನದ ಉದ್ಘಾಟನೆ ನಾಳೆ ಸಂಜೆಯಿದ್ದರೂ ಸ್ಥಳೀಯ ಪತ್ರಿಕೆಗಳಲ್ಲಿ ವಿಪರೀತ ಸುದ್ದಿ ಮಾಡಿತ್ತು. ವಿಶೇಷ ಪುರವಣಿಗಳನ್ನು ಎಲ್ಲ ಪತ್ರಿಕೆಗಳು ಹೊರಡಿಸಿದ್ದವು. ರೈತ ಬಂಧು, ಮಣ್ಣಿನ ಧ್ವನಿ, ರಣಭೇರಿ, ಉದಯಗೀತೆ, ಕೊಳಲು, ಪೌರವಾಣಿ, ಜನತಾ ಮಾಧ್ಯಮ ಎಲ್ಲ ಪತ್ರಿಕೆಗಳಲ್ಲೂ ಪುರವಣಿ, ಹೆಚ್ಚಿನ ಪುಟಗಳು. ಬೆಂಗಳೂರಿನ, ಕೊರಿಯಾದ, ಅಮೆರಿಕದ ಪ್ರಸಿದ್ಧ ಸಾಫ್ಟ್ ವೇರ್ ಕಂಪನಿಗಳು, ಟೆಲಿವಿಶನ್ ಕಂಪನಿಗಳು, ಸ್ಟಾರ್ ಹೊಟೇಲ್ ಗಳು, ಜಾಹಿರಾತು ನೀಡಿದ್ದವು. ಒಂದು ಸೋಪಿನ ಕಂಪೆನಿಯಂತೂ ಚರ್ಮರೋಗ ತಜ್ಞರ ಅಭಿಪ್ರಾಯವನ್ನೂ ಪ್ರಕಟಿಸಿತ್ತು. ಸಲಿಂಗರತಿಯಲ್ಲಿ ಚರ್ಮದ ನುಣುಪಿನ ಆಕರ್ಷಣೆಯೇ ಮುಖ್ಯ ಎಂದು ಸೂಚಿಸಿದ್ದ ತಜ್ಞ ರಾಜೇಂದ್ರ ಕುಮಾರರ ಬರಹದಲ್ಲಿ ಅಂತಹ ನುಣುಪನ್ನು ತಮ್ಮ ಕಂಪೆನಿಯ ಸೋಪಿನ ಬಳಕೆ ಹೇಗೆ ವೃದ್ಧಿಸುತ್ತದೆ, ಸದಾ ಕಾಂತಿಯುಕ್ತವಾಗಿ ಇಡುತ್ತದೆ ಎಂದು ಕೂಡ ವಿವರಿಸಿದ್ದರು. ಸ್ನಾನ ಮಾಡಿ, ತಿಂಡಿ ತಿಂದು, ಎಲ್ಲ ಪತ್ರಿಕೆಗಳನ್ನೂ ಹಾಸಿಗೆಯ ಮೇಲೆ ಹರಡಿಕೊಂಡು, ಒಂದೊಂದಾಗಿ ಓದುತ್ತಾ ಹೋದೆ. ಒಂದು ಬರಹ ಇನ್ನೊಂದರಂತೆ, ಒಂದು ಸಂದರ್ಶನ ಮತ್ತೊಬ್ಬರದಂತೆಯೇ ಇದ್ದುದು ನಿಜವಾದರೂ, ಕೆಲವಾದರೂ ಮನಸ್ಸಿನ ಮೇಲೆ ಪರಿಣಾಮ ಬೀರಿದವು. ಸಲಿಂಗರತಿಯ ಬಗ್ಗೆ ಕುತೂಹಲ, ಗೌರವ ಮೂಡಿಸುವುದರ ಜೊತೆಗೆ ಕೆಲ ಬರಹಗಳಾದರೂ ಬೇರೆ ಸಮಸ್ಯೆಗಳನ್ನು ಚರ್ಚಿಸಿದ್ದವು. ತುಂಬಾ ಜನ ಇದು ಇನ್ನೊಬ್ಬರ ಸಮಸ್ಯೆ, ನೋವು ಎನ್ನುವ ತೃತೀಯ ಪುರುಷ ನಿರೂಪಣೆಯಲ್ಲಿ ಬರೆದಿದ್ದರೆ, ಕೆಲವರದು ಪ್ರಾಂಜಲ ನಿವೇದನೆಯಾಗಿತ್ತು. ಸ್ವಲ್ಪ ವಿವರವಾಗಿ ಗಮನಿಸಬೇಕಾಗಿ ಬಂದು, ಎರಡನೆಯ ಸಲವೂ ಓದಿದ ಕೆಲವು ಬರಹಗಳು ಹೀಗಿದ್ದವು:

ಮೊದಲನೆಯದು ಸಭ್ಯ, ಮೃದುವಾದ ಪ್ರತಿಭಟನೆಯ ಪತ್ರ. ಇದು ವಾಚಕರ ವಾಣಿಗೆ ಬರೆದ ಪತ್ರವಾಗಿದ್ದರೂ, ವಿಶೇಷ ಪುಟಗಳಲ್ಲಿ Box Item ನಂತೆ ಪ್ರಕಟವಾಗಿತ್ತು.

********

(ಕೆ.ಸತ್ಯನಾರಾಯಣ)

ಈ ಕೋದಂಡರಾಮಪುರವೆಂದರೆ ಸಾಕ್ಷಾತ್ ಶ್ರೀರಾಮಚಂದ್ರನೇ ಬಂದು ಸಂವತ್ಸರದ ಆಶ್ವಯುಜ ಮಾಸದುದ್ದಕ್ಕೂ ಸೀತಾ-ಲಕ್ಷ್ಮಣ-ಹನುಮಾನ್ ಸಮೇತನಾಗಿ ತಂಗಿದ್ದ ಪವಿತ್ರ ಸ್ಥಳ. ಮಾಂಡವ್ಯ ಮಹರ್ಷಿಗಳು ತಪಸ್ಸು ಮಾಡಿದ ಜಾಗವೂ ಹೌದು.

ಈ ಸೀಮೆಯಲ್ಲಿ ಎಷ್ಟೊಂದು ದತ್ತ ಪೀಠಗಳು, ಔದುಂಬರ ವೃಕ್ಷಗಳು. ಇಡೀ ಉತ್ತರ ಭಾರತದ ಮೇಲೆಲ್ಲಾ ಯವನರ ಆಕ್ರಮಣ ನಡೆಯುತ್ತಿದ್ದಾಗ ಇಲ್ಲಿ ಭಕ್ತಿ, ಅಧ್ಯಾತ್ಮ, ಸಂಗೀತದ ಹೊಳೆ. ಕಿಂಚಿತ್ತೂ ಸಂಕರವಾಗದ ಸ್ಥಳ ಮಹಾತ್ಮೆ. ಇಂತಹ ಪವಿತ್ರ ಪರಂಪರೆಯಿರುವ ಸನ್ನಿಧಿಯಲ್ಲಿ ಈ ರೀತಿಯ ಸಮ್ಮೇಳನ ನಡೆಯಬೇಕೇ? ಸಮ್ಮೇಳನಕ್ಕೆ ಬರುತ್ತಿರುವವರೆಲ್ಲ ಬಹುಪಾಲು ಬೆಂಗಳೂರಿನವರು. ಬೆಂಗಳೂರಿಗಿಂತ ನಗರ ಬೇಕೆ ಸಮ್ಮೇಳನ ನಡೆಸಲು? ಸಮ್ಮೇಳನದಲ್ಲಿ ಕೇಂದ್ರವಾಗಿ ಪ್ರಸ್ತಾಪಿಸಲ್ಪಡುವ ಐಟಂ ಕೋದಂಡರಾಮಪುರದ ಸೀಮೆಯ ಗಂಡಸರಲ್ಲೂ ಇರಬಹುದು. ಆದರೆ ಸಭ್ಯರು, ಸುಸಂಸ್ಕೃತರೂ ಆದ ಇಲ್ಲಿಯವರು ಇದನ್ನೆಲ್ಲ ಮನಸ್ಸಿನಲ್ಲೇ ಇಟ್ಟುಕೊಂಡಿರಬಹುದು.

ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗಬಾರದು. ಯೌವ್ವನಕ್ಕೆ ಕಾಲಿಡುತ್ತಿರುವವರಿಗೆ ವಿಕ್ಷಿಪ್ತ ಆಕರ್ಷಣೆಯಾಗಬಾರದು ಎಂಬ ಕಾಳಜಿಯಿಂದ, ರೋಷ, ಒಳಗುದಿಯನ್ನೆಲ್ಲ ಮನಸ್ಸಿನಲ್ಲೇ ಇಟ್ಟುಕೊಂಡು, ಸಂವೇದನಾಶೀಲರಾಗಿ ಬದುಕುತ್ತಿರುವ ಇಲ್ಲಿಯ ಸಮಾಜದ ಬಗ್ಗೆ ನಮಗೆ ಗೌರವವಿದೆ. ಆದರೆ ಸಮ್ಮೇಳನದವರು ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ಆತಿಥ್ಯ, ಗೌರವ ತೋರಬೇಕಾದ್ದು ನಮ್ಮ ಕರ್ತವ್ಯ. ಸಂತೋಷದಿಂದ ಮಾಡೋಣ. ಆದರೆ ಒಂದೇ ಬೇಡಿಕೆ. ಈ ಸಮ್ಮೇಳನ, ಇದರ ಪ್ರಚಾರವೆಲ್ಲ ಅತಿಯಾಗದಿರಲಿ, ಯುವಕರನ್ನು ಆಕರ್ಷಿಸದಿರಲಿ ಎಂಬ ಕಾಳಜಿಯೂ ಅಷ್ಟೇ ಮುಖ್ಯ. ಸಮ್ಮೇಳನ ನಡೆದಮೇಲೆ ಇದೆಲ್ಲ ನಡೆಯಲೇ ಇಲ್ಲ ಎನ್ನುವಂತೆ ಮರೆತುಬಿಡೋಣ.

********

ಇನ್ನೊಂದು ಬರಹ – ಶಾಲಿನಿ-ಮಾಲಿನಿ ದಂಪತಿಯದ್ದು. ದಂಪತಿ ಫೋಟೋ, ವೃತ್ತಿಯ ವಿವರಗಳನ್ನು ಕೂಡ ಜೊತೆಯಲ್ಲಿ ನೀಡಲಾಗಿತ್ತು. ಶಾಲಿನಿ ಸಫಾರಿ ಸೂಟಿನಲ್ಲಿದ್ದರು. ಮಾಲಿನಿ, ಈಗಿನ ಕಾಲದ ಹುಡುಗಿಯರ ತರಹ ಬಾಬ್ ಮಾಡಿಸಿಕೊಂಡ ಕೂದಲನ್ನು ಬೆನ್ನು, ಭುಜದ ಮೇಲೆಲ್ಲಾ ಹರಡಿಕೊಂಡಿದ್ದಳು. ಇಬ್ಬರೂ ಕನ್ನಡಕ ಹಾಕಿಕೊಂಡಿದ್ದರೂ, ಶಾಲಿನಿಯ ಕನ್ನಡಕದ ಫ್ರೇಮ್ ಚೆನ್ನಾಗಿತ್ತು. ಶ್ರೀಗಂಧದ ಬಣ್ಣದ್ದು.

ಶಾಲಿನಿ ಹೆಲ್ವೆಟ್ ಕಂಪನಿಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥೆಯೆಂದು, ಮಾಲಿನಿ ಡೈನಾಮಿಕ್ ವಿಸ್ಟಾ ಕಂಪನಿಯ ತರಬೇತಿ ವಿಭಾಗದ ಉಪಾಧ್ಯಕ್ಷೆಯೆಂದು ನಮೂದಿಸಲಾಗಿತ್ತು. ಇಬ್ಬರ ಬಣ್ಣವೂ ಕೆಂಪಗಿದ್ದರೂ ಮಾಲಿನಿಯದು ಒಂದು ಸುತ್ತು ಜಾಸ್ತಿ ಎಂದೇ ಹೇಳಬಹುದಾಗಿತ್ತು.

********

ಸಮ್ಮೇಳನದ ಸಂಘಟಕರು, ಸ್ವಾಗತ ಸಮಿತಿಯವರು ಯಾವ ಶತಮಾನದಲ್ಲಿ ಬದುಕುತ್ತಿದ್ದಾರೆ? ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕವೂ ಮುಗಿಯುತ್ತಿದೆ. ಸಲಿಂಗರತಿ ಸಮ್ಮೇಳನ ಅಂತ ಹೇಳಿ ಬರೇ ಗಂಡಸರನ್ನು ಏಕೆ ಕೂಗಿದ್ದೀರಾ? ಸ್ತ್ರೀ ಸಲಿಂಗಿಗಳ ಸಮಸ್ಯೆ ಏಕೆ ಮುಖ್ಯವಲ್ಲ? ನಮಗೆ ಯಾವ ಆಂತರಿಕ ಸಮಸ್ಯೆಗಳೇ ಇಲ್ಲ ಎಂದು ನಂಬಿದ್ದೀರೋ?

ಏನಪ್ಪಾ, ಏನೇ ಮಾಡಲು ಹೊರಟರೂ, ಎಲ್ಲದರಲ್ಲೂ ಪ್ರಾತಿನಿಧ್ಯದ ಪ್ರಶ್ನೆಯನ್ನೇ ಮುಂದೆ ಮಾಡುತ್ತಾರಲ್ಲಾ ಎಂದು ಪ್ರಶ್ನಿಸಬೇಡಿ. ಇದು ಹೊಸ ಕಾಲ. ಹೊಸ ಕಾಲದ ಭಾರತ. ಪ್ರಶ್ನೆ ಇರಲಿ, ಉತ್ತರವಿರಲಿ, ದೃಷ್ಟಿಕೋನವಿರಲಿ, ಎಲ್ಲದಕ್ಕಿಂತ ಮುಂಚೆ ಪ್ರಾತಿನಿಧ್ಯದ ಪ್ರಶ್ನೆಗೆ ಮೊದಲು ಉತ್ತರ ಇರಲೇಬೇಕು. ಇಲ್ಲದಿದ್ದರೆ, ಯಾವ ವಿಚಾರ, ಯಾವ ಘಟನೆಯ ರಥದ ಗಾಲಿಯೂ ಒಂದೇ ಒಂದು ಹೆಜ್ಜೆ ಕೂಡ ಮುಂದೆ ಹೋಗಲು ಬಿಡುವುದಿಲ್ಲ. ಪ್ರಾತಿನಿಧ್ಯದ ಗಡಿಬಿಡಿ ಮುಖ್ಯವೇ ಸಂಗತಿಯ ಮೌಲಿಕತೆ- ಪ್ರಸ್ತುತತೆಗಿಂತ ಎಂದು ಕೇಳಿದರೆ, ಹೌದು ಎಂದು ಇನ್ನಷ್ಟು ಗಟ್ಟಿ ದನಿಯಲ್ಲಿ ಕೂಗುತ್ತೇವೆ. ಗಟ್ಟಿಮೇಳದ ಮಾತೇಕೆ? ಸಂಗತಿಯ ಮಾತುಕತೆಗೇ ಬಂದರೂ ಈಗಾಗಲೇ ಅಧ್ಯಯನಗಳು ಗುರುತಿಸಿರುವ ಹಾಗೆ ಸ್ತ್ರೀಯರಲ್ಲಿ ಸಲಿಂಗರತಿ ಎನ್ನುವುದು ಮಧುರವಾದದ್ದು, ಸಂಗೀತಮಯವಾದದ್ದು, ಕೋಮಲವಾದದ್ದು, ಭಾವಶ್ರೀಮಂತವಾದದ್ದು.

ಇದಕ್ಕೆ ಹೆಂಗಸರ ದೇಹ ಮತ್ತು ಮನಸ್ಸೇ ಕಾರಣ. ಎಲ್ಲವೂ ಮೃದುವಾದದ್ದು, ಸಪೂರವಾದದ್ದು, ಹೂವಿನ ಸ್ವಭಾವದ್ದು. ಇಂತಹ ಸ್ವಭಾವದ ನೆಲೆಯಿಂದ ಕೂಡುವುದಕ್ಕೂ ಚೆಂದ, ಪಡೆಯುವುದಕ್ಕೂ ಚೆಂದ. ನಾವಿಬ್ಬರೂ ಗಂಡ-ಹೆಂಡತಿಯರಾಗಿದ್ದರೂ ನಮ್ಮದು ತಾಯಿ-ಮಕ್ಕಳ ಸಂಬಂಧ. ಸೋದರಿಯಿಬ್ಬರ ಸಂಬಂಧ. ಗೆಳೆತಿಯರ ಒಡನಾಟ. ನಾವು ಪರಸ್ಪರ ಕೂಡಿದಾಗ ಸುಮಧುರವಾದ ಪಿಯಾನೊ ಸಂಗೀತವನ್ನು ಕೇಳಿದ ಅನುಭವವಾಗುತ್ತದೆ. ಸ್ವಲ್ಪ ಊಹಿಸಿಕೊಳ್ಳಿ. ಗಂಡಸೇ ಗಂಡಸಿನ ದೇಹದಲ್ಲಿ ಬಯಸುವಂತಹದ್ದು ಏನಿದೆ. ಎಲ್ಲವೂ ಒರಟುತನವೇ. ಬಲ ಪ್ರದರ್ಶನದ ಹಂಬಲ. ಗಂಡುಗಳ ನಡುವೆ ಸಂಬಂಧ ಏರ್ಪಡಬೇಕಾದರೂ ಒಬ್ಬರು ಸ್ತ್ರೀ ಪಾತ್ರ ವಹಿಸಲೇಬೇಕು. ಆಳವಾದ ಸಂಬಂಧಕ್ಕೆ ಬೇಕಾದ ಭಾವನಾತ್ಮಕತೆ, ಮೃದುತ್ವ ಗಂಡಸಿನ ದೇಹಕ್ಕೆ ಸಾಧ್ಯವೇ ಇಲ್ಲ.

ಶ್ರೀನಿವಾಸರಿಗೆ ಇದೆಲ್ಲ ಗೊತ್ತಿಲ್ಲವೆಂದಲ್ಲ. ಅವರ ಬರಹಗಳನ್ನೂ, ಕತೆ ಕಾದಂಬರಿಗಳನ್ನೂ ಓದಿದರೆ, ಎಷ್ಟೊಂದು ಆತ್ಮಾನುಕಂಪ ತುಂಬಿದೆ. ತನ್ನ ಲಾವಣ್ಯವನ್ನು ಸದಾ ತಾನೆ ಮೆಚ್ಚುವ ಸ್ವರತಿಯ ಭಾವುಕ ಬರಹದಂತೆ ಕಾಣುತ್ತದೆ. ಬರಹಗಾರರಾಗಿ ಅವರಿಗೆ ನಮ್ಮ ಭಾವನೆಗಳೂ ಅರ್ಥವಾಗಬೇಕಿತ್ತು ಅಥವಾ ಅರ್ಥವಾಗಿಯೂ…

ಸಲಿಂಗರತಿಯ ವಿಷಯಕ್ಕೆ ಬಂದಾಗಲೂ ಮತ್ತೆ ಅದೇ ಪುರುಷ ಪ್ರಾಧಾನ್ಯತೆಯ ಗೋಳು. ನಮಗೆ ಸುಸ್ತಾಗಿದೆ. ಕೋರ್ಟು, ಕಚೇರಿ, ಪಾರ್ಲಿಮೆಂಟ್, ಕಾಲೇಜು, ಸಂಗೀತ ಕಛೇರಿ, ಸಾಹಿತ್ಯ ಸಮ್ಮೇಳನ ಎಲ್ಲ ಕಡೆಯೂ ಯಾವಾಗಲೂ ನಮ್ಮ ಬೇಡಿಕೆಯನ್ನು ದಪ್ಪ ದನಿಯಲ್ಲಿ ಹಿಂಸಾತ್ಮಕವಾಗಿಯೇ ಮಂಡಿಸಬೇಕು. ಇಲ್ಲಿ ಕೂಡ ಹಾಗೇ ಆಯಿತು. ಇದು ದುರಾದೃಷ್ಟಕರ ಸಂಗತಿ.

ಉದಯಗೀತೆ ಪತ್ರಿಕೆ ಕೆಲವು ಪ್ರಸಿದ್ಧ ಸಲಿಂಗ ಕಾಮಿಗಳ ವ್ಯಕ್ತಿಚಿತ್ರ ಪ್ರಕಟಿಸಿತ್ತು. ಆದರೆ ಶಾಲಿನಿ-ಮಾಲಿನಿ ಸರಿಯಾಗಿ ದೂರಿದಂತೆ ಎಲ್ಲ ವ್ಯಕ್ತಿಚಿತ್ರಗಳು ಪುರುಷರದ್ದೇ ಆಗಿದ್ದವು. ಆದರೆ ಇದೇ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವಿಲ್ಲಪುರಂ ರಾಜಗೋಪಾಲ್ ಲೇಖನ ಆರೋಗ್ಯಕರವಾಗಿದ್ದರೂ ಸಂದರ್ಭ, ಔಚಿತ್ಯ ಅರ್ಥವಾಗಲಿಲ್ಲ. ನಲವತ್ತು ವರ್ಷಗಳ ಹಿಂದೆ ಯಾವುದಾದರೂ ಡೈಜೆಸ್ಟ್ ನಲ್ಲಿ ಪ್ರಕಟವಾಗಬಹುದಾಗಿದ್ದ ವಿಪರೀತ ಸಮತೋಲನದ ಲೇಖನ. ಯಾರು ಯಾರ ಪರವೂ ಇಲ್ಲ. ವಿರೋಧವೂ ಇಲ್ಲ.

ಗೆಳೆತಿಯರ ಒಡನಾಟ. ನಾವು ಪರಸ್ಪರ ಕೂಡಿದಾಗ ಸುಮಧುರವಾದ ಪಿಯಾನೊ ಸಂಗೀತವನ್ನು ಕೇಳಿದ ಅನುಭವವಾಗುತ್ತದೆ. ಸ್ವಲ್ಪ ಊಹಿಸಿಕೊಳ್ಳಿ. ಗಂಡಸೇ ಗಂಡಸಿನ ದೇಹದಲ್ಲಿ ಬಯಸುವಂತಹದ್ದು ಏನಿದೆ. ಎಲ್ಲವೂ ಒರಟುತನವೇ. ಬಲ ಪ್ರದರ್ಶನದ ಹಂಬಲ. ಗಂಡುಗಳ ನಡುವೆ ಸಂಬಂಧ ಏರ್ಪಡಬೇಕಾದರೂ ಒಬ್ಬರು ಸ್ತ್ರೀ ಪಾತ್ರ ವಹಿಸಲೇಬೇಕು.

ಸಾರಾಂಶ ಹೀಗಿತ್ತು:

`ನಮಗೆ ಬೇಕಾದದ್ದು ಸಲಿಂಗರತಿ ಸಮ್ಮೇಳನವಲ್ಲ, ಲೈಂಗಿಕ ಜಾಗೃತಿಯ ಸಮ್ಮೇಳನ. ಲೈಂಗಿಕ ಪ್ರವೃತ್ತಿ ಎನ್ನುವುದು ಜಡವೂ ಅಲ್ಲ, ನಿರ್ದಿಷ್ಟವೂ ಅಲ್ಲ. ಒಬ್ಬ ವ್ಯಕ್ತಿಯಲ್ಲೇ ಜೀವನದುದ್ದಕ್ಕೂ ಬದಲಾಗುತ್ತಾ ಹೋಗುತ್ತದೆ. ಉದ್ದೇಶದಲ್ಲಿ, ಸ್ವರೂಪದಲ್ಲಿ. ಕೊನೆಗೆ ಇದು ಪ್ರತಿಯೊಬ್ಬ ಮನುಷ್ಯನಿಗೂ ಸಂಬಂಧಪಟ್ಟ ಆತ್ಮೀಯ ವಿಚಾರ. ಅವರವರೇ ಏಕಾಂತದಲ್ಲಿ ಯೋಚಿಸಿ, ಪರಿಭಾವಿಸಿ ಉತ್ತರ ಕಂಡುಹಿಡಿದುಕೊಳ್ಳಬೇಕು. ಆದರೂ ಸಮ್ಮೇಳನ ಚೆನ್ನಾಗಿ ನಡೆಯಲಿ’ ಎಂದು ಹಾರೈಸಿ. ಹಾರೈಕೆಗೆ ದಿನಚರಿಯ ಭಾಗಗಳಂತೆ ಕಾಣುವ ವಿವರಗಳನ್ನು ಲಗತ್ತಿಸಲಾಗಿತ್ತು.

ಮುಚ್ಚು ಮರೆ ಏಕೆ? ಸ್ವಂತದ್ದನ್ನು ಹೇಳಿಬಿಡ್ತೀನಿ. ಸ್ವಂತದ್ದನ್ನೇ ಹೇಳಬೇಕು. ಈಗ ನನಗೆ ಎಪ್ಪತ್ತು ವರ್ಷ. ನನಗೆ ಅರವತ್ತಾಗಿದ್ದಾಗ ಹೆಂಡತಿ ಗೋದಾಬಾಯಿ ತೀರಿಕೊಂಡಳು. ನನಗೂ ಅವಳಿಗೂ ಹದಿನೇಳು ವರ್ಷ ವಯಸ್ಸಿನ ವ್ಯತ್ಯಾಸ. ಇದರಲ್ಲಿ ನಮ್ಮ ತಪ್ಪೇನಿಲ್ಲ. ನಾವು ಮದುವೆಯಾದ ದಿನಗಳ ಕಾಲಧರ್ಮ ಹಾಗಿತ್ತು. ಗೋದಾಬಾಯಿಯ ತಾಯಿ ಅಲಮೇಲಮ್ಮನಿಗೆ ಹನ್ನೊಂದು ಮಕ್ಕಳು. ಹತ್ತು ಹೆಣ್ಣು, ಕೊನೆಯವ ಗೋಪಾಲಕಣ್ಣನ್-ಗಂಡು. ಇವಳು ಎಂಟನೆಯವಳು. ಅಲಮೇಲಮ್ಮ ಐವತ್ತೊಂದನೆಯ ವರ್ಷಕ್ಕೆ ತೀರಿಕೊಂಡರೆ, ನನ್ನ ಹೆಂಡತಿ ಅದಕ್ಕಿಂತ ಚಿಕ್ಕ ವಯಸ್ಸಿಗೇ ತೀರಿಕೊಂಡಳು. ಅದಕ್ಕೆ ನನ್ನ ಮಗ ವರದರಾಜು ಮಹೇಶ್ ಗೊಲೇಚಾನನ್ನು ಮದುವೆ ಆದದ್ದೇ ಕಾರಣ. ಚೆನ್ನಾಗಿ ಓದಿದ. ಸ್ನಾನ-ಸಂಧ್ಯಾವಂದನೆ, ಜಪ-ತಪ, ಎಲ್ಲವನ್ನೂ ನಿಷ್ಠೆಯಿಂದ ಮಾಡತಾಯಿದ್ದ. ಎಲ್ಲರ ಕೈಲೂ ಒಳ್ಳೆಯ ಹುಡುಗ ಅನಿಸಿಕೊಂಡಿದ್ದ.

ಪ್ರತಿ ತಿಂಗಳೂ ಮನೆಗೆ ಸರಿಯಾಗಿ ದುಡ್ಡು ಕಳಿಸ್ತಾಯಿದ್ದ. ಶ್ರೀರಂಗಂಗೆ ನಾಲ್ಕಾರು ಸಲ ಕರೆದುಕೊಂಡು ಹೋಗಿದ್ದ. ಅಲ್ಲೇ ಸೈಟು ಕೊಂಡು, ಮನೆ ಕಟ್ಟಿಸಿ, ನಮ್ಮನ್ನು ಅಲ್ಲೇ ಇಡುವತನಕ ತನಗೆ ಸಮಾಧಾನವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ. ನಮ್ಮ ಗ್ರಹಚಾರಕ್ಕೆ ಮನಸ್ಸಿನ ಅದು ಯಾವ ಮೂಲೆಯಲ್ಲಿ ಮಗನಿಗೆ ಗಂಡನ್ನೇ ಮದುವೆಯಾಗುವೆ ಆಸೆ ಮೂಡಿತೋ? ಇವನಿಗೇ ಆಸೆ ಮೂಡಿತೋ, ಇಲ್ಲ, ಮಹೇಶ್ ಗೊಲೇಚಾನೆ ಮೂಡಿಸಿದನೋ? ಇಷ್ಟಾಗಿ ನಮ್ಮ ಸೊಸೆಯಾಗಿ ಬಂದ ಗೊಲೇಚಾ ಒಳ್ಳೆಯ ಹುಡುಗನೇ (ಹುಡುಗಿಯೇ) ಎಂದು ಹೇಳಬೇಕು. ಏನು ಒಳ್ಳೆಯತನವಾದರೇನು? ಮನೆಗೆ ಬಂದು, ಇಬ್ಬರೂ ಗಂಡಸರು ರಾತ್ರಿಯಾದ ಮೇಲೆ ಬಾಗಿಲು ಹಾಕಿಕೊಂಡು ರೂಮೊಳಗೆ ಹೋಗ್ತಾರೆ. ಕುಲಕುಲ ನಗು, ಸರಸ ಸಂಭಾಷಣೆ ಎಲ್ಲ ಕೇಳಿಸುತ್ತೆ. ಗೋದಾ ಇದನ್ನೆಲ್ಲ ಕೇಳಿಸಿಕೊಂಡು ನಡುರಾತ್ರಿಯತನಕ ತಲೆ ಚಚ್ಚಿಕೊಳ್ಳುತ್ತಿದ್ದಳು. ನನಗೂ ಇದೆಲ್ಲ ರೋಸಿಹೋಗಿತ್ತು. ಹಾಗಂತ ಇಬ್ಬರೂ ತಲೆ ಚಚ್ಚಿಕೊಳ್ಳಕ್ಕೆ ಆಗುತ್ತದೆಯೆ? ನಾನು ಕೈ ಕೈ ಹಿಸುಕಿಕೊಳ್ಳುತ್ತಿದ್ದೆ.

ಗೋದಾ ಸಾಯುವ ಹಿಂದಿನ ವರ್ಷ ಮಗ-ಸೊಸೆ ಬಂದಿದ್ದಾಗ ದೊಡ್ಡ ರಾದ್ಧಾಂತವೇ ಆಗಿಹೋಯಿತು. ಒಂದು ದಿನ ಸೊಸೆ ಗೊಲೇಚಾ ಮಧ್ಯಾಹ್ನ ನಾಲ್ಕು- ನಾಲ್ಕೂವರೆ ಘಂಟೆ ಹೊತ್ತಿನಲ್ಲಿ ರೂಮಿಂದ ಈಚೆಗೆ ಬಂದ(ಳು). ಸಾಲಂಕೃತ ವಧು. ನೋಡಿದರೆ ಕಣ್ಣು ತುಂಬಿ ಬರುವ ಹಾಗೆ. ನಮ್ಮ ಶ್ರೀ ವೈಷ್ಣವ ಹುಡುಗಿಯರ ರೀತಿಯೇ. ಕೆಂಪಂಚು ಇರುವ ಹಸಿರು ಸೀರೆ, ಬಿಳಿ ಬಣ್ಣದ ತುಂಬು ತೋಳಿನ ರವಿಕೆ, ಲೋಲಾಕು, ದೊಡ್ಡ ಹೆರಳು, ಹೀಗೆ. ಬಂದೀಗೌಡ ಬಡಾವಣೆ ಕಡೆ ವಾಕಿಂಗ್ ಹೋಗಿ ಬರ್ತೀವಿ ಅಂತ ಮಗ-ಸೊಸೆ ಹೊರಟರು. ಗೋದಾ ಬಿದ್ದು ಹೊರಳಾಡಿದಳು.

`ನಿಮ್ಮ ಕೈ ಮುಗಿದು ಕೇಳ್ಕೊಳ್ತೇನೆ – ಹೀಗೆ ಹೊರಗಡೆ ಹೋಗಬೇಡಿ, ಸರೀಕರ ಎದುರಿಗೆ ಮಾನ ಮರ್ಯಾದೆ ತೆಗೀಬೇಡಿ. ನೀವೇನೋ ನಾಲ್ಕು ದಿನ ಇದ್ದು ಹೋಗ್ತೀರಿ. ಆಮೇಲೆ ನಾವು ಕಂಡ ಕಂಡವರ ಟೀಕೆ-ಟಿಪ್ಪಣೆ ಎದುರಿಸಬೇಕಲ್ಲ.’ ಸ್ವಂತ ಮಗನೇ ನಮ್ಮ ಎದೆಯುದ್ದಕ್ಕೂ ನಿಂತು ಏರುದನಿಯಲ್ಲಿ ವಾದಿಸಿದ.

`ಯಾರೂ ಏನೂ ಅಂದ್ಕೊಳೋಲ್ಲ. ಹಾಗೆ ಅಂದುಕೊಂಡರೂ ಅಂದುಕೊಳ್ಳಲಿ, ನಮಗೇನು?’ ವಾಕಿಂಗ್ ಹೊರಟೇಬಿಟ್ಟರು.

ಬರುವಾಗ ಅಕ್ಕರಾಸ್ಥೆಯ ಮಗ-ಸೊಸೆ ತರುವ ಹಾಗೆ ಹಣ್ಣು-ಹಂಪಲು, ತರಕಾರಿ ತಂದರು. ಗೊಲೇಚಾ ತನ್ನ ಬಟ್ಟೆ-ಬರೆ ಬದಲಾಯಿಸಲಿಲ್ಲ. ಈಳಿಗೆ ಮಣೆ ಮುಂದೆ ಕೂತು ತರಕಾರಿ ಹೆಚ್ಚೋಕೆ ಶುರುವಾಯಿತು. ಆಮೇಲೆ ಅಡುಗೆ ಬಿಸಿ ಮಾಡಿ, ಊಟ ಬಡಿಸುವುದಕ್ಕೂ ಮುಂದೆ ಬಂದ(ಳು). ಗೋದಾ ಅಡುಗೆ ಮನೆ ಪಾತ್ರಿ-ಪಗಡಿ, ದೇವರ ಮನೆ ಸಾಮಾನು ಎಲ್ಲವನ್ನೂ ಕಿತ್ತು ಬಿಸಾಡಿ, ರಂಪ ಮಾಡಿ, ರೂಮಿಗೆ ಹೋಗಿ ಮಲಗಿಬಿಟ್ಟಳು.

ಒಂದು ವಾರ ಆದಮೇಲೆ ಗೋದಾನ ಜೀವನದ ಕೊನೆಯ ಅಂಕ ಎನ್ನುವಂತೆ, ನಮ್ಮವರದ ಒಂದು ದಿನ ಸ್ತ್ರೀ ವೇಷ ಹಾಕಿಕೊಂಡು ಸಾಲಂಕೃತವಾಗಿ ಈಚೆಗೆ ಬಂದ(ಳು). ಚಿಕ್ಕವನಾಗಿದ್ದಾಗ ಅವನಿಗೆ ಮೊಗ್ಗಿನ ಜಡೆ ಹಾಕುತ್ತಿದ್ದಳು ಗೋದಾ. ಬಲು ಆಸೆಪಟ್ಟು ಹಾಕಿಸ್ಕೋತಾಯಿದ್ದ. ಬೀದಿ ತುಂಬಾ ಓಡಾಡಿ ತೋರಿಸಿಕೊಂಡು ಬರುತ್ತಿದ್ದ. ಮನೆಗೆ ಬಂದ ಮೇಲೆ ದೃಷ್ಟಿ ತೆಗೆದರೆ, ಭೂಕಂಪ ಆಗುವ ರೀತಿಯಲ್ಲಿ ಹಂಚಿಕಡ್ಡಿ ಸಿಡಿಯುವುದು. `ನೋಡಿ, ನಾನು-ಅವನು ಇಬ್ಬರೂ ಒಂದೇ ರೀತಿಯ ಕಾಡಿಗೆ ಹಾಕ್ಕೊಂಡಿದೀವಿ. ಆದರೂ ನಿಮ್ಮ ಮಗನ ಕಣ್ಣುಗಳು ಸುರಸುಂದರಿಯ ಮಿಂಚಿನ ಕಣ್ಣುಗಳಂತೆ’ ಎಂದು ಗೋದಾ ಬೀಗುತ್ತಿದ್ದಳು. ಮೂಗು, ಕಿವಿ, ಕಣ್ಣು, ಹಣೆ ಎಲ್ಲವೂ ಹಿಂದಿನಂತೆಯೇ ಕಾಣುತ್ತಿದ್ದವು. ನನಗೇ ಒಂದು ತರ ಅಸಹ್ಯವಾಯಿತು.

ಗೋದಾ ಹಿತ್ತಲಿನಲ್ಲಿದ್ದಳು. `ಏನೋ ಇದು ಅವತಾರ’ ಎಂದು ಕೇಳುತ್ತಿರುವಾಗಲೇ ಆರಾಮ ಕುರ್ಚಿಯ ಮೇಲೆ ಕುಳಿತುಕೊಂಡು ನಾನು ಓದುತ್ತಿದ್ದ ದಿನಪತ್ರಿಕೆ ಕೈಯಿಂದ ಬಿದ್ದು ಹೋಯಿತು. `ಏನಿಲ್ಲ ಅಪ್ಪಾ. ಈಗ ನನ್ನ ಸರದಿ. ಕೆಲವು ದಿವಸ ಗೊಲೇಚಾ ಹೆಂಗಸರ ತರ ಇರಬೇಕು. ಇನ್ನು ಕೆಲವು ದಿವಸ ನಾನು ಇರಬೇಕು.’ ಗೊಲೇಚಾ ಟ್ರಿಂ ಆಗಿ ಸೂಟ್ ಹಾಕಿಕೊಂಡು ರೂಮಿಂದ ಈಚೆಗೆ ಬಂದ. ವರದನ ಪಕ್ಕದಲ್ಲಿ ನಿಂತು ` you are looking so stunning’ ಎನ್ನುತ್ತಾ ಮೆಚ್ಚುಗೆ ತುಂಬಿದ ಕಣ್ಣುಗಳಿಂದ ನೋಡಿದ.

ಹಿತ್ತಲಿಂದ ಬಂದು ಈ ವರಸೆಗಳನ್ನು ನೋಡಿದ ಗೋದಾಗೆ ಎಷ್ಟೋ ಹೊತ್ತು ಮಾತೇ ಹೊರಡಲಿಲ್ಲ. ಬಿದ್ದು ಬಿದ್ದು ಬಿಕ್ಕಳಿಸಲು ಶುರುಮಾಡಿದಳು. ಜಡೆ ಬಿಚ್ಚಿ, ಕೂದಲು ಹರಡಿಕೊಂಡು, ಕೂದಲನ್ನೆಲ್ಲ ಬಲವಾಗಿ ಕಿತ್ತು ಹಾಕಲು ಪ್ರಾರಂಭಿಸಿದಳು. ಕೂದಲು ಅಷ್ಟು ಸಲೀಸಾಗಿ ಈಚೆಗೆ ಬರಬೇಕಲ್ಲ. ಹಿಂಸೆಯಿಂದ ಕೂದಲು ಕೀಳಲು ಪ್ರಾರಂಭಿಸಿದಳು. `ನಿನ್ನಂತಹ ಮಗನನ್ನು ಹೆತ್ತದ್ದಕ್ಕೆ ಸಾರ್ಥಕವಾಯಿತು. ಮನೆ ತುಂಬಾ ಮೊಮ್ಮಕ್ಕಳು ಬೇಕು ಅಂತಾ ತುಂಬಾ ಆಸೆಪಟ್ಟಿದ್ದೆ. ಈಗ ನಿನ್ನಂಥವನು ಮಗನಾಗಿ ಏಕೆ ಹುಟ್ಟಿದ ಎಂದು ಕೊರಗಬೇಕು.’ ಮೂರು ನಾಲ್ಕು ದಿನ ದೊಡ್ಡ ರಾಮಾಯಣ. ಆಮೇಲೆ ಇನ್ನೂ ದೊಡ್ಡದಾದ ಮಹಾಭಾರತ.

`ನಾನು ನಿಮಗೆ ಏತಕ್ಕೆ ಕಡಿಮೆ ಮಾಡಿದೀನಿ. ಪ್ರತಿ ತಿಂಗಳೂ ಮೊದಲ ವಾರದಲ್ಲೇ ದುಡ್ಡು ಕಳಿಸ್ತಾಯಿಲ್ಲವಾ? ಎಷ್ಟು ಸಲ ನೀವು ಇಷ್ಟಪಟ್ಟಂತೆಯೇ ತೀರ್ಥಯಾತ್ರೆ ಮಾಡಿಸಿಲ್ಲ? ಬದರಿ-ಕೇದಾರ ಯಾತ್ರೆಗೆ ನಾನು ಜೊತೆಯಲ್ಲೇ ಬಂದಿರಲಿಲ್ಲವಾ? ಏನೋ ನನಗೆ ಹೀಗಿರೋದ್ರಿಂದ್ಲೇ ಸಂತೋಷ. ನನ್ನ ಕೆಲಸ, ಕಾರ್ಯ, ಸಂಬಳ ಎಲ್ಲವನ್ನೂ ಸಂತೋಷದಿಂದ ಒಪ್ಪಿಕೊಂಡ ನೀವು ಇದನ್ನು ಕೂಡ ಒಪ್ಪಿಕೋಬೇಕು’ ಎಂದು ವಿನಯವಾಗಿಯೇ ವಾದಿಸಿದ. `ಇನ್ಮೇಲೆ ನಮ್ಮ ಮನೆಗೆ ಬರಲೇಬೇಡ’ ಎಂದು ಆಣೆ ಪ್ರಮಾಣ ಮಾಡಿಸಿಕೊಂಡು ಮನೆಯಿಂದ ವರದನನ್ನು ಹೊರಗೆ ಅಟ್ಟಿಬಿಟ್ಟಳು.

ಒಂದೊಂದೂವರೆ ತಿಂಗಳು ಕಳೆಯಿತು. ಒಂದು ದಿವಸ ಕೊರಿಯರ್ ನಲ್ಲಿ ದೊಡ್ಡ ಕವರ್ ಬಂತು. ಎರಡು ಮಕ್ಕಳ ಫೋಟೋ. `ಅಮ್ಮ ನೀನು ಬಯಸಿದಂತೆ ಮೊಮ್ಮಕ್ಕಳನ್ನು ದತ್ತು ತೆಗೆದುಕೊಂಡಿದೀವಿ. ವೀರೇಂದ್ರ ಮತ್ತು ದಾಕ್ಷಾಯಿಣಿ ಅಂತಾ. ಇವರೇ ನಿಮ್ಮ ಮೊಮ್ಮಕ್ಕಳು. ಮನಃಪೂರ್ವಕ ಆಶೀರ್ವಾದ ಮಾಡಿ ಸರ್ಕಾರದ ರಿಮ್ಯಾಂಡ್ ಹೋಮಿನಿಂದ, ಕಾನೂನು ಪ್ರಕಾರ, ಮನಃಶಾಸ್ತ್ರಜ್ಞರ ಸಲಹೆ ಪಡೆದು ದತ್ತು ತೆಗೆದುಕೊಂಡ ನಿರ್ಗತಿಕ ಮಕ್ಕಳು ಅವು. ಇಬ್ಬರನ್ನೂ ಚೆನ್ನಾಗಿ ಓದಿಸಿ ಒಳ್ಳೆ ನಾಗರಿಕರನ್ನಾಗಿ ತಯಾರು ಮಾಡಬೇಕು.’

ಗೋದಾ ಕಾಗದವನ್ನೂ ಫೋಟೋಗಳನ್ನೂ ಹರಿದು ಚೂರು ಚೂರು ಮಾಡಿ ಹಂಡೆ ನೀರು ಕಾಯಿಸುವ ಒಲೆಗೆ ಹಾಕಿದಳು. `ವರದನ ದ್ರೋಹಕ್ಕೆ ಮಕ್ಕಳು ಏನು ಮಾಡುತ್ತವೆ’ ಎಂದು ನಾನು ಸಮಾಧಾನ ಹೇಳಿದರೂ ಕೇಳಲಿಲ್ಲ.

ಅಲ್ಲಿಂದ ಶುರುವಾಯಿತು ಕೊನೆಯ ಪ್ರಯಾಣ-ನಾನಾ ರೂಪದಲ್ಲಿ. ಇತಿಹಾಸವೇ ಇಲ್ಲದ ರಕ್ತದೊತ್ತಡ ಹೆಚ್ಚಾಯಿತು. ಸರಿಯಾಗಿ ಊಟ ತಿಂಡಿ ಮಾಡುತ್ತಿರಲಿಲ್ಲ. ವಾಂತಿ ಮಾತ್ರ ನಿತ್ಯ ನಿರಂತರ. ಅದೆಲ್ಲಿತ್ತೋ ಯಾವಾಗಲೂ ಬಿಳಿನೀರು ಹೊಟ್ಟೆಯಿಂದ ಈಚೆಗೆ ಬರೋದು. ಮೈ ನಿಧಾನವಾಗಿ ಹಳದಿಗಟ್ಟುತ್ತಾ ಹೋಯಿತು. ಗೋದಾ ತೀರಿಕೊಂಡಾಗ ಮಗ-ಸೊಸೆ ಇಬ್ಬರೂ ಬಂದು ಹದಿನೈದು ದಿನ ಇದ್ದರು. ಗೊಲೇಚಾ ನಮ್ಮ ಯಾವ ಆಚಾರ-ವಿಚಾರಕ್ಕೂ ಅಡ್ಡಿಯಾಗದೆ, ಮಡಿ, ಮೈಲಿಗೆ ಅನುಸರಿಸಿ ಎಲ್ಲ ಕರ್ಮಾಂತರಗಳಿಗೂ ನೆರವಾದ(ಳು). ಹನ್ನೊಂದು ದಿವಸವೂ ಒಪ್ಪತ್ತು ಊಟ. ಹೊರಗಿನ ಸುತ್ತು ಕೆಲಸವನ್ನೆಲ್ಲ ಚೆನ್ನಾಗಿ ನೋಡಿಕೊಂಡ(ಳು). ನಮ್ಮವರು ಯಾರೂ ವಿಶೇಷವಾಗಿ ಹಚ್ಚಿಕೊಳ್ಳದೆ ಹೋದಾಗ, ನಡುಮನೆಯಲ್ಲಿ ಕೂರಿಸಿಕೊಂಡು ವೀರೇಂದ್ರ-ದಾಕ್ಷಾಣಿಯರಿಗೆ ಕತೆ ಹೇಳುತ್ತಿದ್ದ(ಳು).

ನಾನು ಯಾಕೆ ಈಗ ಇದನ್ನೆಲ್ಲ ಹೇಳುತ್ತಿದ್ದೇನೆಂದರೆ, ನಮ್ಮ ಮನೆ ಒಳಗೆ ಹೀಗೆಲ್ಲ ಆದಾಗ ಇದನ್ನೆಲ್ಲ ಎದುರಿಸೋದು ಹೇಗೆ ಅಂತನೂ ಈ ಸಮ್ಮೇಳನದವರು ಚರ್ಚಿಸಬೇಕು. ಯಾವುದೇ ವಿಚಾರವನ್ನಾದರೂ ಒಂದು ಲೋಕಸಂಗತಿ ಅಂತ ಮಾತನಾಡುವುದು ಸುಲಭ. ಆದರೆ ನಾಲ್ಕು ಗೋಡೆಯೊಳಗೆ ನಿತ್ಯವೂ ಎದುರಿಸುವುದು ಕಷ್ಟ. ನಮ್ಮ ಮನೆಯಲ್ಲಂತೂ ಎದುರಿಸಲಿಲ್ಲ. ಹಾಗೆ ಎದುರಿಸುವುದು ಗೊತ್ತಿದ್ದರೆ ಗೋದಾ ಯಾಕೆ ಹಾಗೆ ತೀರಿಹೋಗುತ್ತಿದ್ದಳು.

ಇಷ್ಟೆಲ್ಲ ರಾಮಾಯಣ ಆದ ಮೇಲೆ, ನನಗೂ ಹೆಂಗಸರೆಲ್ಲ ಹೊಸ ರೀತಿಯಲ್ಲಿ ಕಾಣಿಸಲು ಶುರುವಾದರು. ಯಾರು ಚೆನ್ನಾಗಿದ್ದಾರೆ, ಯಾರು ಚೆನ್ನಾಗಿಲ್ಲ, ಯಾರಿಗೆ ಯಾವ ಬಣ್ಣದ ಸೀರೆ ಒಪ್ಪುತ್ತೆ ಅಂತ ಮನಸ್ಸಿನಲ್ಲಿ ಜಿಜ್ಞಾಸೆ. ಪ್ರತಿಯೊಬ್ಬ ಹೆಂಗಸೂ ಯಾವ ಯಾವ ರೀತಿಯಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಬಹುದು, ಗಂಡಂದಿರ ಜೊತೆ ಯಾವ ಯಾವ ರೀತಿ ಮಲಗಬಹುದು ಎಂಬ ಲೆಕ್ಕಾಚಾರ ಪ್ರಾರಂಭವಾಯಿತು.

ಹೀಗೆಲ್ಲಆಗುತ್ತಿರುವುದು ತುಂಬಾ ತಪ್ಪು ಅಂತ ಗೊತ್ತಾದಮೇಲೂ ಮನಸ್ಸಿಗೆ ಯಾವಾಗಲೂ ಇದೇ ಯೋಚನೆ. ವರದ-ಗೊಲೇಚಾ ಎಷ್ಟೇ ಬಲವಂತ ಮಾಡಿದರೂ ನಾನು ಅವರ ಮನೆಗೆ ಹೋಗಲೇ ಇಲ್ಲ.