ಅಷ್ಟೇನೂ ಚೆಲುವೆಯಲ್ಲದಿದ್ದರೂ ತುಂಬು ಹೃದಯದ ವ್ಯಕ್ತಿತ್ವ ಕ್ಯಾರೆನ್‌ಳದು. ಕೆಂಪಕೆಂಪಗೆ ದುಂಡು ದುಂಡಗಿದ್ದಾಳೆ. ಸದಾ ನಗುಮುಖದ ಉತ್ಸಾಹೀ ಆಸ್ಟ್ರೇಲಿಯನ್‌ ಹೆಣ್ಣು. ನನಗೆ ಆಫ್ರಿಕಾದ ಅಲಿ ಫರ್ಕಾ ತೂರೆ, ಬಾಬಾ ಮಾಲ್‌ರ ಸಂಗೀತವನ್ನು ಪರಿಚಯಿಸದವಳು. ಪರ್ವೀನ್ ಸುಲ್ತಾನಾ ಸಂಗೀತದ ಕಛೇರಿಗೆ ಬಂದು ಕೇಳಿ ಮೆಚ್ಚಿ ತಲೆಹಾಕಿದವಳು. ನುಸ್ರತ್ ಫತೇ ಅಲಿ ಖಾನನ ಖವ್ವಾಲಿಗಳನ್ನು ಮನಸಾರೆ ಆನಂದಿಸುವವಳು. ಒಳಗೊಳಗೇ ತುಂಬಾ ನಿಖರವಾದ ನಿಲುವುಗಳನ್ನು ಸಾಧಿಸಿಕೊಂಡವಳು.

ಅಂಥವಳು ಒಂದು ದಿನ ನನ್ನನ್ನು ಅಳುತ್ತಾ ಎದುರುಗೊಂಡಳು. ಒಂದೈದು ನಿಮಿಷ ನನ್ನ ಮನೆಗೆ ಬರುತ್ತೀಯ ಎಂದು ಕರೆದೊಯ್ದಳು. ಏತಕ್ಕೆಂದು ನನಗೆ ಅರ್ಥವಾಗಲಿಲ್ಲ. ಮನೆ ಹೊಕ್ಕವಳೇ, ಇಂಡಿಯಾಕ್ಕೆ ಫೋನ್ ಮಾಡಬೇಕು, ನಿನ್ನ ನೆರವು ಬೇಕು ಅಂದಳು. ನನಗೆ ತಲೆ ಬುಡ ಅರ್ಥವಾಗಲಿಲ್ಲ. ಇಂಡಿಯಾದಲ್ಲಿ ಮೋಬೈಲ್ ಫೋನ್‌ಗಳು ಆಗಿನ್ನೂ ಬಂದಿರಲಿಲ್ಲ. ಅಷ್ಟೇ ಯಾಕೆ, ಬೀದಿ ಬೀದಿಗೆ ಫೋನ್ ಬಂದಿರದ ಕಾಲವದು. ಇಂಡಿಯಾಕ್ಕೆ ಯಾರಿಗೆ ಫೋನ್, ಅದಕ್ಕೆ ನನ್ನ ನೆರವೇಕೆ ಅಂತ ಹೊಳೆಯಲಿಲ್ಲ. ಆದರೆ ಅವಳು ಇಂಡಿಯಾದಲ್ಲಿ ತೆಗೆದ ಒಂದು ಫೋಟೋ ತೋರಿಸಿದ್ದೇ ನನಗೆ ಎಲ್ಲ ನಿಚ್ಚಳವಾಯಿತು.

ಉದಯ್ ನಸುಗಪ್ಪು ಬಣ್ಣದ ಚೆಲುವ. ತನ್ನ ಸುಂದರ ಹಲ್ಲುಗಳನ್ನು ಇಷ್ಟಗಲ ತೆರೆದು ನಕ್ಕರೆ ಎಂಥ ಹೆಣ್ಣೂ ಮರುಳಾಗಬೇಕು. ಆಸ್ಟ್ರೇಲಿಯಾಕ್ಕೆ ಹಣ ಕೊಟ್ಟು ಓದಲು ಬಂದಿದ್ದ. ಓದು ಮುಗಿಸಿ ಇಲ್ಲೇ ನೆಲಸಿದ್ದ. ನಮ್ಮ ಗೆಳೆಯರ ಗುಂಪಿನಲ್ಲಿ ಬಲು ಜಿಪುಣ ಎಂದೇ ಹೆಸರುವಾಸಿ. ಎಲ್ಲರೂ ರೆಸ್ಟೊರೆಂಟಿಗೋ, ಪಬ್‌ಗೋ ಹೋದರೆ ಸುಲಭದಲ್ಲಿ ದುಡ್ಡು ಬಿಚ್ಚುವವನಲ್ಲ. ಚೆನ್ನಾಗಿ ದುಡಿಯುತ್ತಿದ್ದರೂ ನಮಗೆ ಗೊತ್ತಿದ್ದ ಮತ್ತೊಬ್ಬಳ ಹತ್ತಿರ ಆಗಾಗ ದುಡ್ಡು ಕೇಳುತ್ತಿದ್ದನಂತೆ. ಹಿಂದಿರುಗಿಸುವ ಮಾತೇ ಇಲ್ಲ ಎಂದು ಅವಳು ನನ್ನ ಹತ್ತಿರ ಗೊಣಗಿದ್ದಳು. ಒಂದು ದಿನ ಮಾಡುತ್ತೇನೆ ಅವನಿಗೆ ಎಂದು ಕಾಯುತ್ತಿದ್ದಳು. ತನ್ನ ತಂದೆ ಉತ್ತರಭಾರತದಲ್ಲಿ ತುಂಬಾ ಸಿರಿವಂತ ಬಸಿನೆಸ್‌ಮನ್ ಎಂದು ಹೇಳುತ್ತಿದ್ದ ಬೇರೆ. ಆಸ್ಟ್ರೇಲಿಯಾಕ್ಕೆ ಹಣ ಕೊಟ್ಟು ಓದಲು ಬರುವುದು ಆಗಿನ್ನೂ ಬರೇ ಶ್ರೀಮಂತರ ಮಾತಾದ್ದರಿಂದ ಮತ್ತು ಅವನ ಜಿಪುಣಾಸಿ ಬುದ್ಧಿ ನೋಡಿದರೆ ಶ್ರೀಮಂತರಿರಬೇಕು ಅಂತ ನನಗೂ ಅನಿಸಿತ್ತು.

ಕ್ಯಾರೆನ್ ಅಳುತ್ತಾ ಎದುರಾದ ಸಮಯದಲ್ಲಿ ಉದಯ್ ಇಂಡಿಯಾಕ್ಕೆ ಹೋಗಿದ್ದ. ಬೇರೆ ಮನೆ ಮಾಡುವ ಯೋಚನೆಯಲ್ಲಿ ಇದ್ದ ಮನೆಬಿಟ್ಟು ತನ್ನ ಕೆಲವು ಸಾಮಾನು ಡಬ್ಬಗಳನ್ನು ಕ್ಯಾರೆನ್‌ಳ ಮನೆಯಲ್ಲಿ ಇಟ್ಟಿದ್ದ. ಕ್ಯಾರನ್‌ಗೆ ಏನು ಅನುಮಾನ ಬಂತೋ ಆ ಡಬ್ಬವನ್ನು ತೆರೆದು ನೋಡಿದ್ದಳು. ಒಂದು ಫೋಟೋ ಸಿಕ್ಕಿತ್ತು. ಉದಯ್ ಉತ್ತರಭಾರತದ ಮದುವೆ ಗಂಡಿನಂತೆ ಜರಿ ಪೇಟ ಸುತ್ತಿಕೊಂಡಿದ್ದ. ಚೆಂದವಾಗಿ ಅಲಂಕರಿಸಿಕೊಂಡ ಒಬ್ಬ ಹೆಣ್ಣಿನ ಕೈ ಹಿಡಿದು ಕೂತಿದ್ದ. ಮದುವೆಯ ಸಂದರ್ಭವೋ, ನಿಶ್ಚಿತಾರ್ಥದ ಸಂದರ್ಭವೋ ಹೇಳುವುದು ಕಷ್ಟವಾಗಿತ್ತು. ನೋಡು ಉದಯ್ ನನಗೆ ಮೋಸ ಮಾಡಿದ್ದಾನೆ ಅಂದು ದಳದಳ ಕಣ್ಣೀರು ಸುರಿಸುತ್ತಾ ಫೋನ್ ನಂಬರ್‍ ಕೊಟ್ಟಳು. ಅವರು ತನ್ನ ದನಿ ಕೇಳುತ್ತಲೂ ಕಟ್ ಮಾಡುತ್ತಿದ್ದಾರೆ. ದಯವಿಟ್ಟು ನೀನು ಫೋನ್ ಮಾಡು ಅಂತ ದುಂಬಾಲು ಬಿದ್ದಳು. ಅತ್ತು ಅತ್ತು ಕೆಂಪಾದ ಕಣ್ಣು, ಸೊರಸೊರ ಅನ್ನುವ ಮೂಗನ್ನು ಒರೆಸಿಕೊಳ್ಳುತ್ತಲೇ ಇದ್ದಳು. ಕಂಗೆಟ್ಟವಳಂತೆ ನನ್ನ ಕಾಲಿಗೆ ಬೀಳುವುದೊಂದು ಬಾಕಿ.

ಫೋನ್ ಮಾಡಿದೆ. ಉದಯ್ ಸಿಕ್ಕ. ಚಕಿತಗೊಂಡವನಂತೆ ಹಲೋ ಅಂದ. ಕ್ಯಾರೆನ್‌ ಜತೆ ಮಾತಾಡು ಎಂದು ಫೋನ್‌ ಅವಳಿಗೆ ಕೊಟ್ಟೆ. ಇಬ್ಬರೂ ಮಾತಿಗೆ ತೊಡಗಿದೊಡನೆ ನಾನು ಬಾಗಿಲು ಸರಿಸಿ ಹೊರಗೆ ಬಂದು ನಿಂತೆ. ಸಂಜೆಯಾಕಾಶ ಕೆಂಪಗಾಗಿತ್ತು. ಮರದ ನಡುವಿಂದ ದೂರದಲ್ಲಿ ಕಾಣುತ್ತಿದ್ದ ಸಿಡ್ನಿ ಸ್ಕೈಲೈನ್ ಕೆಂಪನೆ ಆಕಾಶವನ್ನು ತಿವಿಯುವಂತೆ ತೋರುತ್ತಿತ್ತು. ಉದಯ್ ಮತ್ತು ಕ್ಯಾರೆನ್ ಮನೆಗಳು ಹತ್ತಿರ ಇದ್ದುದರಿಂದ ಇಬ್ಬರೂ ಒಟ್ಟಿಗೆ ಬರುವುದು ಹೋಗುವುದು ಇತ್ತು. ಆದರೆ ಇಷ್ಟೆಲ್ಲಾ ಹಚ್ಚಿಕೊಂಡಿದ್ದಾರೆ ಎಂದು ಗೊತ್ತಿರಲಿಲ್ಲ. ಅಚ್ಚರಿಯೇ ಆಯಿತು. ಕ್ಯಾರೆನ್‌ಗೂ ಉದಯ್‌ಗೂ ಏನಾದರೂ ಸಮಾನಾಂಶಗಳು ಇವೆಯಾ ಎಂದು ಯೋಚಿಸದೆ. ಒಂದೂ ಹೊಳೆಯಲಿಲ್ಲ. ಮಾತೆತ್ತಿದ್ದರೆ ದುಡ್ಡು ಅನ್ನುವ, ಮಹಾ ಜಿಪುಣ ಲೆಕ್ಕಾಚಾರದ ಉದಯ್‌. ಹಾಡು, ಬಣ್ಣ, ಬಟ್ಟೆ ಎಂದು ಯಾವುದೇ ಹೊಸದು ಕಂಡರೂ ಪಕ್ಕನೆ ಹಚ್ಚಿಕೊಳ್ಳುವ ಕ್ಯಾರೆನ್. ಏನು ಸಮಾನಾಂಶ? ಹೊಳೆಯಲಿಲ್ಲ. ನನಗರ್ಥವಾಗದ, ನಾನು ಕಂಡಿರದ ಮುಖವೊಂದು ಉದಯ್‌ಗೆ ಇದ್ದೀತು ಅಂದುಕೊಂಡೆ. ಹಾಗೆಯೇ ಕ್ಯಾರೆನ್‌ಗೂ. ಅಲ್ಲದೆ ಬೇರೇನೂ ನನ್ನ ಲೆಕ್ಕಾಚಾರಕ್ಕೆ ಸಿಗಲಿಲ್ಲ.

ಒಳಗೆ ಮಾತು ನಡೆದೇ ಇತ್ತು. ನನಗಿನ್ನು ಹೆಚ್ಚು ಕಾಯುವುದು ಅಸಹನೀಯವಾಗುತ್ತಿತ್ತು. ಅಷ್ಟರಲ್ಲಿ ಕ್ಯಾರೆನ್ ನಗುತ್ತಾ ಬಾಗಿಲಿಗೆ ಬಂದಳು. ಹೆತ್ತೊಡನೆ ಹೆರಿಗೆ ನೋವು ಮರೆತುಬಿಟ್ಟ ತಾಯಿಯಂತೆ ಕಂಡಳು. ಫೋಟೋ ಯಾವುದೋ ಕಾಲದ ನಿಶ್ಚಿತಾರ್ಥದ್ದಂತೆ. ಆ ಸಂಬಂಧ ಮುರಿದೇ ಉದಯ್ ಸಿಡ್ನಿಗೆ ಬಂದಿದ್ದಂತೆ ಎಂದು ಕುಲುಕುಲು ನಕ್ಕಳು. ನಾನಿನ್ನು ಹೋಗಬೇಕು ಎಂದು ಹೇಳಿ ಹೊರಟೆ. ನಿನಗೆ ಇವೆಲ್ಲಾ ಹೇಳಿದೆ ಎಂದು ಉದಯ್‌ಗೆ ಹೇಳಬೇಡ ಅಂದಳು. ಅರೆ, ನಾನೇ ಅಲ್ಲವಾಮ್ಮ ಫೋನ್ ಮಾಡಿದ್ದು ಎಂದೆ. ಓ ಅಷ್ಟು ಬೇಗ ಮರೆತುಬಿಟ್ಟೆನಲ್ಲ ಎಂದು ಜೋರಾಗಿ ಬಿದ್ದು ಬಿದ್ದು ನಕ್ಕಳು. ಅವಳು ನಗುತ್ತಿರವಾಗಲೇ ನಾನು ಹೊರಟುಬಿಟ್ಟೆ.

ಉದಯ್‌ಗಿಂತ ವಯಸ್ಸಲ್ಲಿ ದೊಡ್ಡವಳಾದ ಬುದ್ಧಿವಂತ ಕ್ಯಾರೆನ್ ಯಾಕೆ ಅವನ ಹಿಂದೆ ಬಿದ್ದಿದ್ದಳು ಅನ್ನುವುದು ನನಗಿನ್ನೂ ಬಿಡಿಸಲಾಗಿಲ್ಲ. ಬಿಳಿ ಹುಡುಗರು ತುಂಬಾ ಬೋರು. ಎಲ್ಲಾ ಒಂದೇ ರೀತಿ ಆಡ್ತಾವೆ ಎಂದು ಜಾಣ ನಗೆ ನಗುತ್ತಾ ಹೇಳಿದ್ದಳು. ಆದರೆ ಅದೊಂದೆ ಕಾರಣ ಎಂದು ನನಗೆ ಅನಿಸಿರಲಿಲ್ಲ. ಉದಯ್ ಸ್ವಲ್ಪ ಜಿಪುಣ ಅಲ್ಲವ ಎಂದುದಕ್ಕೆ ನನಗೆ ಯಾವಾಗಲೂ ಏನಾದರೂ ಗಿಫ್ಟ್ ಕೊಡುತ್ತಿರುತ್ತಾನೆ ಎಂದು ಹರೆಯದ ಹುಡುಗಿಯಂತೆ ನಕ್ಕಿದ್ದಳು. ಹೆಚ್ಚೇನೂ ಬಿಟ್ಟುಕೊಟ್ಟಿರಲಿಲ್ಲ.

ಇಂಡಿಯಾದಿಂದ ಹಿಂತಿರುಗಿದ ಮೇಲೆ ಉದಯ್ ಜತೆ ಮಾತಾಡಿದ್ದೆ. ಏನಯ್ಯ ಇದೆಲ್ಲಾ ಅಂದರೆ ಅಯ್ಯೋ ಅವಳೊಂದು, ಪ್ರೀತಿ, ಪ್ರೇಮ ಅಂತ ತಲೆಕೆಡಿಸಿಕೊಂಡಿದ್ದಾಳೆ. ನಾನೇನಾದರೂ ಅವಳನ್ನ ಮದುವೆಯಾದರೆ ನನ್ನಪ್ಪ ಇಲ್ಲಿಗೂ ಹುಡುಕಿಕೊಂಡು ಬಂದು ಕೈ ಕಾಲು ಮುರಿದಾರು. ಆಸ್ತೀಲಿ ಬಿಡಿಗಾಸೂ ಸಿಕ್ಕಲ್ಲ ಅಂದ. ಕ್ಯಾರೆನ್‌ಗೆ ಇದನ್ನ ಹೇಳಿದ್ದೀಯ ಅಂತ ಕೇಳಿದೆ. ಹೂಂ, ಆದರೆ ಅವಳೆಲ್ಲಿ ಕೇಳ್ತಾಳೆ ಅಂದು ತನ್ನ ಸುಂದರ ಹಲ್ಲಿನ ಸಾಲು ತೋರಿ ನಕ್ಕ. ನಾನು ಅಷ್ಟಕ್ಕೇ ಎಲ್ಲ ಅರ್ಥಮಾಡಿಕೊಳ್ಳಬೇಕಾಗಿತ್ತು.

ಈಗ ಇವೆಲ್ಲಾ ಕಳೆದು ಎಷ್ಟೋ ವರ್ಷ ಆಗಿವೆ. ಮೊನ್ನೆ ಇದ್ದಕ್ಕಿದ್ದಂತೆ ಉದಯ್ ಫೋನ್ ಮಾಡಿದ್ದ. ಮದುವೆ ಆದ್ಯ ಅಂತ ಕೇಳಿದೆ. ಇಲ್ಲಪ್ಪ ಅಂತ ಜೋರಾಗಿ ನಕ್ಕ. ಕ್ಯಾರೆನ್ ಬಗ್ಗೆ ಕೇಳಬೇಕು ಅಂತ ಅನಿಸಿದರೂ ಕೇಳಲಿಲ್ಲ. ಯಾಕೆಂದು ನನಗೇ ಗೊತ್ತಿಲ್ಲ. ಕೆಲವು ಸಂಗತಿಗಳು ಅರ್ಥವಾಗದೆ ಹಾಗೇ ಉಳಿದರೆ ಸುಂದರ ಅಂತ ಇರಬಹುದೆ? ಅಥವಾ ಅರ್ಥವಾಗಿ ಏನಾಗಬೇಕಿದೆ ಎಂದಿರಬಹುದೆ? ಅಂತೂ ಒಂದು ಫೋನ್ ಕರೆ ಎಷ್ಟೆಲ್ಲಾ ನೆನಪಿಸಿತಲ್ಲ! ಇವೆನ್ನೆಲ್ಲಾ ಎಲ್ಲರಿಗೂ ಹೇಳಬಹುದೋ ಬೇಡವೋ ಎಂಬ ತಾಕಲಾಟದಲ್ಲಿ ಹೆಸರುಗಳನ್ನು ಮಾತ್ರ ಬದಲಿಸಿಬಿಟ್ಟಿದ್ದೇನೆ. ಉಳಿದದ್ದು ನಿಮಗೆ ಬಿಟ್ಟದ್ದು.