ಪಾದಗಳು..

ಪಾದಗಳು
ಸುಮ್ಮನೆ ನಡೆಯುತ್ತವೆ ಎಲ್ಲೆಂದರಲ್ಲಿ
ನಡಿಗೆ ಕಲಿತ ಹೊಸತರಲ್ಲಿ.
ಆಮೇಲಿನದು
ಶಾಲೆ‌ ಮೈದಾನ ತೋಟ ಮನೆಯ ಅಂಗಳ
ಹೆಸರಿಟ್ಟ ಜಾಗದಲ್ಲಿ ಉದ್ದೇಶಿತ ನಡಿಗೆ ಎಲ್ಲರದೂ.

ಪಾದಗಳು ಎರಡಾದರೂ ನಡಿಗೆ ಒಂದೇ.
ಬೆಳೆದಂತೆಲ್ಲಾ..
ಜೀವಗಳು ಹೆಣ್ಣು ಗಂಡು ಎರಡಾದರೇನು
ನಡಿಗೆ ಮಾತ್ರ ಯಾಕಿಲ್ಲಾ ಒಂದೇ.

ಶಾಲೆ ಬಿಟ್ಟೊಡನೆ ಹಿಡಿಯಬೇಕು ಮನೆಯ ದಾರಿ
ಕತ್ತಲಾವರಿಸುವ ಮುನ್ನ ಮನೆ ಸೇರಬೇಕು
ಜಗಲಿಕಟ್ಟೆ ಅರಳಿಕಟ್ಟೆ ಹಿರಿಯರಿರುವ ಎಡೆ
ಪಾದ ಬೆಳೆಸಬಾರದು ಅವಳು.

ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಅಲೆದಾಡಬಹುದು
ಹೊತ್ತು ಗೊತ್ತಿಲ್ಲದೆ ಅವನ ಪಾದ
ರಾಜ್ಯ ವಿಸ್ತರಿಸಿ ಸೈನ್ಯ ಸಂಗ್ರಹಿಸಿ
ದಿಗ್ವಜಯದ ಮೇಲೆ‌ ದಿಗ್ವಿಜಯ ನಡೆಸಿ
ಚಿಕ್ಕ ದೊಡ್ಡ ಬಿಡಾರ ಮನೆಗಳಲ್ಲೂ ಪಾದ ಬೆಳೆಸಿ
ಹೆಜ್ಜೆಯ ಹಚ್ಚೆ ಮೂಡಿಸಿ ತಿರುಗುತ್ತದೆ
ಅವನ ಪಾದ.ತ್ರಿಲೋಕ ಸಂಚಾರಿ.

ಅಡಿಗೆ ಮನೆ, ಮಲಗುವ ಕೋಣೆ
ಬಚ್ಚಲು ಕೊಟ್ಟಿಗೆ ಹಿತ್ತಲು
ಸದಾ ಒಂದಿಲ್ಲೊಂದು ತರಾತುರಿ
ದಾಪುಗಾಲ್ಹಾಕಿ ಮನೆಯಿಡಿ ತಿರುತಿರುಗಿ ನೆಲ ಸವೆದು
ಹಿಮ್ಮಡಿ ಬಿರಿದು ಕಾಲ ಕಾಲುವೆಯಲ್ಲಿ
ಕೆಂಪುಕಪ್ಪು ಮಿಶ್ರಿತ ಹೊಳೆ ಹರಿದು
ಒಲೆಮುಂದೆ ಬೆಚ್ಚಗಾಗುತ್ತದೆ ಅವಳ ಪಾದ.

ಹೆಜ್ಜೆ ಕಳಕೊಂಡ ತಾನು
ಕುಣಿವ ಜಗದ ವೀರರಿಗೆ
ಗೆಜ್ಜೆ ತೊಡಿಸಿ
ಒಳ್ಳೆಯದು ಮಾಡಯ್ಯ ತಂದೆ ಎಂದು
ಹರಸುವ ಅವಳ ಹೆಜ್ಜೆಗಳು
ಗೊತ್ತಿಲ್ಲದೆ
ದೇವರ ಹೆಜ್ಜೆಯೊಳಗೆ ನೆಟ್ಟ ಮುಳ್ಳ ಮೇಲಿರುತ್ತವೆ.