ಈ ವಿಚಿತ್ರ ಯಾನದ ತನ್ಮಧ್ಯ ಕಳೆದುಹೋದವರು ಮರಳಿ ಬಾರದವರು ಅದೆಷ್ಟೋ. ವಿನಾಕಾರಣ ಬದುಕು ಕಳೆದುಕೊಂಡವರು ಇನ್ನೆಷ್ಟೋ. ಮತ್ತೆ ಇಂತಹ ಸಂಕಷ್ಟದಲ್ಲೂ ಈ ಕಾಲಕ್ಕೆ ಒಪ್ಪುವ ದಾರಿ ಹಿಡಿದು ಯಶಸ್ಸು ಹಣ ಗಳಿಸಿದ ವ್ಯಕ್ತಿಗಳ ವ್ಯಾಪಾರಗಳ ಕೆಲವು ಉದಾಹರಣೆಗಳೂ ಇವೆ ಬಿಡಿ. ಒಂದು ಕಾಲಕ್ಕೆ ಭಯ ಹಾಗು ನಿರ್ಬಂಧಗಳ ಪಹರೆಯ ಒಳಗೆ ಇದ್ದ ಜೀವ ಜೀವನಗಳು ಈಗ ಜಾಗರೂಕತೆ ಹಾಗು ಅನುಮಾನಗಳಲ್ಲೇ ಇಣುಕಿ ನೋಡುತ್ತಾ ಬಹುತೇಕ ಹೊರಬಂದಿವೆ. ದಿನಸೀ ಅಂಗಡಿ, ಹೋಟೆಲು, ಪ್ರವಾಸಿ ತಾಣ, ವ್ಯಾಪಾರ ವ್ಯವಹಾರ ಕೂಲಿ ದುಡಿಮೆ ಆಟ ಮೋಜು ಹೀಗೆ ದೈನಿಕದ ಹೆಚ್ಚಿನ ಭಾಗಗಳು ಸುರಕ್ಷತಾ ನಿಯಮಗಳಿಗೆ ಒಳಪಟ್ಟು ಕೆಲಸ ಮಾಡಲಾರಂಭಿಸಿವೆ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

ದೀರ್ಘವಾದ ಸಂಚಾರದಲ್ಲಿರುವಾಗ ಕೆಲವು ವಿಶಿಷ್ಟ ವಿಚಿತ್ರ ಅನುಭಗಳು ಆಗುತ್ತವೆ; ಅವು ಹೊಸ ವಸ್ತು ವಿಚಾರ ಹೊಳಹು ಸಂಬಂಧ ಸವಾಲು ಇತ್ಯಾದಿಗಳ ಮೂಲಕ ಇರಬಹುದು. ಪಯಣ ಆರಂಭಗೊಂಡ ಸ್ಥಳ ಹಾಗು ಮುಕ್ತಾಯವಾಗಬೇಕಾದ ತಾಣ ಎರಡೂ ಕಣ್ಣಳತೆಯಲ್ಲಿ ಸಿಗದಿರುವುದರಿಂದಲೂ, ಇದು ಎಂದಿಗೂ ಮುಗಿಯದ್ದೇನೋ ಅಂತ ಕೆಲಕ್ಷಣಗಳ ಮಟ್ಟಿಗಾದರೂ ಅನಿಸುವುದರಿಂದಲೂ ಇರಬಹುದು. ಇನ್ನು ಸುದೀರ್ಘ ಸಮುದ್ರಯಾನದಂತಹ ತಿರುಗಾಟದಲ್ಲಿಯೇ ಖಾಯಂ ನಿರತರಾಗುವವರು ಈ ಅನುಭೂತಿಯನ್ನು ವಿಶದವಾಗಿ ವರ್ಣಿಸಿಯಾರು ಅಥವಾ ವಿಶೇಷಣಗಳಿಲ್ಲದೆ ನಿರ್ಲಿಪ್ತರಾಗಿ ಉಸುರಿಯಾರು.

ಸಾಗರದ ನಡುವಿಗೆ ತೆರಳಿ ಬಲೆಬೀಸಿ ಮೀನು ತರುವ ಕಾಯಕದ ಮರವಂತೆಯ ಪರಿಚಯಸ್ಥರು, “ಎಲ್ಲೆಲ್ಲೂ ಕಣ್ಣು ಹಾಯಿಸಿದಷ್ಟು ದೂರ, ಅವೇ ಎತ್ತರದ ಅಲೆಗಳು ಅದೇ ನೀರ ರಾಶಿ, ದಿನ ವಾರಗಳ ಕಾಲದ ಅವಿರತ ಏರಿಳಿಕೆಯ ದಿಕ್ಕುದೆಸೆಗಳ ಗುರುತು ಹತ್ತದ ಪಯಣ” ಎಂದದ್ದಿದೆ. ಕೊನೆ ಮೊದಲುಗಳ ಅಂದಾಜುಸಿಗದ ಈ ಕಾಲದ ಈ ಪರ್ಯಟನವೂ ಸಮುದ್ರದ ಮೇಲಿನ ಉದ್ದದ ಪಯಣ ಅಥವಾ ಗಾಳಿಯ ಮೇಲಿನ ದೀರ್ಘ ಸವಾರಿಗಳಿಗಿಂತ ಬಹಳ ಏನೂ ಭಿನ್ನ ಇರಲಿಕ್ಕಿಲ್ಲ ಬಿಡಿ.

ನೂರಾರು ಮೈಲು ದೂರದ ಬಸ್ ಪ್ರಯಾಣ ಅಥವಾ ಸಾವಿರ ಮೈಲು ಕ್ರಮಿಸಬೇಕಾದ ರೈಲು ಯಾತ್ರೆಯಲ್ಲಿ ಇಡೀ ವಾಹನದ ಎಲ್ಲರೂ ಅನುಭವಿಸುವ ಒಂದಷ್ಟು ಸಾರ್ವತ್ರಿಕ ಅನುಭವಗಳ ಜೊತೆಗೆ ಅಲ್ಲಿನ ಒಬ್ಬೊಬ್ಬ ಯಾತ್ರಿಕರದ್ದು ಅವರವರ ವ್ಯಕ್ತಿತ್ವ ಹಿನ್ನೆಲೆ ಹಾಗು ಸಂದರ್ಭಗಳನ್ನು ಹೊಂದಿಕೊಂಡ ವೈಯಕ್ತಿಕ ಅನುಭವಗಳೂ ಇರುತ್ತವೆ. ಸಾಗುತ್ತಿರುವ ವಾಹನ ಒಂದೇ ಆದರೂ ಒಬ್ಬ ವ್ಯಕ್ತಿಯ ಅನುಭವದಲ್ಲಿ ಏಕಕಾಲಕ್ಕೆ ಎರಡು ಯಾನಗಳು ಸಮಾನಾಂತರವಾಗಿ ನಡೆಯುತ್ತಿರುತ್ತವೆ. ಊರು ಪ್ರಾಂತ್ಯ ದೇಶ ಜಗತ್ತು ಹೀಗೆ ನಮಗಿರುವ ವಿಭಿನ್ನ ಗುರುತುಗಳಲ್ಲಿ ಗುಂಪುಗುಂಪುಗಳಾಗಿ ಚದುರಿಕೊಂಡು ನಾವು ಮಾಡುತ್ತಿರುವ ಈ ದೀರ್ಘ ಪಯಣದ ಅಡಿಯಲ್ಲಿ ನಮ್ಮ ನಮ್ಮ ವೈಯಕ್ತಿಕ ಒಳಹರಿವಿನ ಯಾನವೂ ಜೊತೆಜೊತೆಗೇ ನಡೆಯುತ್ತಿದೆ.

ಒಂದು ರಾಜ್ಯವಾಗಿಯೋ ದೇಶವಾಗಿಯೋ ಅಥವಾ ಪ್ರಪಂಚವಾಗಿಯೋ ಜರುಗುತ್ತಿರುವ ಸಾಮೂಹಿಕ ಚಲನೆಯ ಒಳಗೆ ನಮ್ಮ ಒಬ್ಬೊಬ್ಬರದು ನಮನಮಗೇ ಸೀಮಿತವಾದ ಹೆಜ್ಜೆಗತಿ ನಡಿಗೆಯೂ ಇದೆ. ಎಲ್ಲರಿಗೂ ಸಾಮಾನ್ಯವಾದ ಒಂದಷ್ಟು ಸವಾಲುಗಳು ಮತ್ತೆ ಕೆಲವು ಆಯಾ ವ್ಯಕ್ತಿಗಷ್ಟೇ ಸೀಮಿತವಾದ ಪಂಥಗಳು. ಹೇಗೆ ಇದ್ದರೂ, ಪ್ರಬಲವಾದ ಹೊರಪ್ರವಾಹದಲ್ಲಿ ಮತ್ತದರ ಒಳಗಿನ ತೀವ್ರವಾದ ಒಳಸುಳಿಯಲ್ಲಿ ಈಗಾಗಲೇ ಬಹಳ ದೂರ ಗಮಿಸಿದ್ದೆವೋ ಅಥವಾ ಈಗಷ್ಟೇ ದಡ ಬಿಟ್ಟವರೋ ಎನ್ನುವುದು ಇನ್ನೊಂದು ತೀರ ತಲುಪಿದವರೆಲ್ಲ ಸೇರಿ ನಿರಾಳವಾಗಿ ಮುಂದೊಂದು ದಿನ ಕೂತು ತಿರುಗಿ ನೋಡುತ್ತಾ ನಿಟ್ಟುಸಿರು ಬಿಟ್ಟು ಚರ್ಚೆ ವಿಮರ್ಶೆ ಮಾಡಬಹುದು. ಇದು ಸದ್ಯಕ್ಕಂತೂ ಅಂದಾಜಿಗೆ ಸಿಗುವ ವಸ್ತು ವಿಷಯ ಅಲ್ಲ ಅಥವಾ ಸಿಕ್ಕಿದ್ದರೂ ಅದು ಭ್ರಮೆಯೋ ನೈಜವೋ ಎನ್ನುವುದೂ ಖಾತ್ರಿ ಅಲ್ಲ. ಹೀಗೆ ನಿರೀಕ್ಷೆಯಲ್ಲಿ ಇರದ ಮಾಮೂಲಿಯಲ್ಲದ  ಕೊನೆಯೂ ಕಾಣದ  ಇಂತಹ ಅನುಭವಗಳನ್ನು ಬೇರೆ ಯಾರು ಹೇಗೆ ಹೆಸರಿಸಿದರೂ  ಆಂಗ್ಲರು “ಸ್ಟ್ರೆಂಜ್ ” (ವಿಚಿತ್ರ) ಮತ್ತು  “ವಿಯರ್ಡ್ ” (ವಿಲಕ್ಷಣ/ವಿಕಾರ) ಎನ್ನುವ ಪದಗಳನ್ನು ಬಳಸಿ ವಿವರಿಸಬಹುದು.

ಇಲ್ಲಿರುವ ನಾವು ಮಾರ್ಚ್ ತಿಂಗಳಿನಲ್ಲಿ ಶುರು ಮಾಡಿದ ಪ್ರಯಾಣ ಏಪ್ರಿಲ್ ಮೇ ತಿಂಗಳಿನಲ್ಲಿ ಸಂಪೂರ್ಣ ಹತೋಟಿ ಮೀರಿ ಆಮೇಲೆ ನಿಧಾನವಾಗಿ ಮೆಟ್ಟಿಲು ಇಳಿಯುತ್ತ ಒಂದು ಹದಕ್ಕೆ ಬಂದು ಇದೀಗ ಮಂದಗತಿಯಲ್ಲಿ ಮುನ್ನಡೆಯುತ್ತಿದೆ. ಪರಿಣಿತರು ಪಂಡಿತರು ವಿಜ್ಞಾನ ಗಣಿತ ಸಂಖ್ಯಾಶಾಸ್ತ್ರ ಊಹೆಗಳನ್ನು ಸೇರಿಸಿ ಸೂಚಿಸಿದ ಸೋಂಕಿನ ಸಾವಿನ ಅಂಕಿಸಂಖ್ಯೆಗಳ ರೇಖೆಯನ್ನು ಚಾಚೂತಪ್ಪದೆ ಅನುಸರಿಸಿದ ಹಾದಿ ಇದಲ್ಲವಾದರೂ ಏರು ತಗ್ಗುಗಳ ಮಾದರಿಯ ಮಟ್ಟಿಗೆ ಸರಿಸುಮಾರು ಊಹಿಸಿದಂತೆ ಇಲ್ಲಿಯ ತನಕದ ದಾರಿ ಇದೆ. ಎಲ್ಲರನ್ನೂ ಎಲ್ಲವನ್ನೂ ಬಂಧಿಸಿ, ಬಂಧನವೇ ಮುಕ್ತಿಗೆ ಹಾದಿ ಎಂದು ನಂಬಿಸಿ ಕಳೆದ ಇಲ್ಲಿಯ ತನಕದ ಸಮಯದಲ್ಲಿ ಆಗಾಗ ಕಂತುಗಳಲ್ಲಿ ಅಷ್ಟಷ್ಟು ಬಿಡುಗಡೆ ದಕ್ಕಿದೆ.

ಈ ವಿಚಿತ್ರ ಯಾನದ ತನ್ಮಧ್ಯ ಕಳೆದುಹೋದವರು ಮರಳಿ ಬಾರದವರು ಅದೆಷ್ಟೋ. ವಿನಾಕಾರಣ ಬದುಕು ಕಳೆದುಕೊಂಡವರು ಇನ್ನೆಷ್ಟೋ. ಮತ್ತೆ ಇಂತಹ ಸಂಕಷ್ಟದಲ್ಲೂ ಈ ಕಾಲಕ್ಕೆ ಒಪ್ಪುವ ದಾರಿ ಹಿಡಿದು ಯಶಸ್ಸು ಹಣ ಗಳಿಸಿದ ವ್ಯಕ್ತಿಗಳ ವ್ಯಾಪಾರಗಳ ಕೆಲವು ಉದಾಹರಣೆಗಳೂ ಇವೆ ಬಿಡಿ. ಒಂದು ಕಾಲಕ್ಕೆ ಭಯ ಹಾಗು ನಿರ್ಬಂಧಗಳ ಪಹರೆಯ ಒಳಗೆ ಇದ್ದ ಜೀವ ಜೀವನಗಳು ಈಗ ಜಾಗರೂಕತೆ ಹಾಗು ಅನುಮಾನಗಳಲ್ಲೇ ಇಣುಕಿ ನೋಡುತ್ತಾ ಬಹುತೇಕ ಹೊರಬಂದಿವೆ. ದಿನಸೀ ಅಂಗಡಿ, ಹೋಟೆಲು, ಪ್ರವಾಸಿ ತಾಣ, ವ್ಯಾಪಾರ ವ್ಯವಹಾರ ಕೂಲಿ ದುಡಿಮೆ ಆಟ ಮೋಜು ಹೀಗೆ ದೈನಿಕದ ಹೆಚ್ಚಿನ ಭಾಗಗಳು ಸುರಕ್ಷತಾ ನಿಯಮಗಳಿಗೆ ಒಳಪಟ್ಟು ಕೆಲಸ ಮಾಡಲಾರಂಭಿಸಿವೆ.

ಇದೊಂದು ತಿಂಗಳು ಕಳೆದು ಸಪ್ಟೆಂಬರ್ ಬಂದರೆ ಬ್ರಿಟನ್ನಿನ ಶಾಲೆಗಳು ಕೂಡ ಬೇಸಿಗೆ ರಜೆ ಮುಗಿದು ಹೊಸ ತರಗತಿಗೆ ತೆರೆಯಬೇಕು. ಶಾಲೆ ಕಾಲೇಜುಗಳ ವಿಚಾರ ಇಲ್ಲಿಯ ತನಕದ ಹಂತಹಂತವಾದ ನಿರ್ಬಂಧ ಸಡಿಲಿಕೆಯ ಹಾಗಲ್ಲ. ಈ ದೀರ್ಘ ಯಾನದ ಒಂದು ಮಹತ್ತರ ಪರೀಕ್ಷೆ ಅದು. ಇಷ್ಟರ ತನಕದ ಕೋವಿಡ್ ಕಾಲದ ಪಯಣದಲ್ಲಿ ತುಸು ತಡವಾಗಿಯಾದರೂ ಮಾಡಿದ ತಯಾರಿಗಳು, ಎಡವುತ್ತಲೇ ಕಲಿತ ಹೊಸ ಪಾಠಗಳು ಎಲ್ಲವೂ ಪ್ರಯೋಗಕ್ಕೆ ಒಳಪಡುವ ಸಂದರ್ಭ.

ಹೇಗೆ ಇದ್ದರೂ, ಪ್ರಬಲವಾದ ಹೊರಪ್ರವಾಹದಲ್ಲಿ ಮತ್ತದರ ಒಳಗಿನ ತೀವ್ರವಾದ ಒಳಸುಳಿಯಲ್ಲಿ ಈಗಾಗಲೇ ಬಹಳ ದೂರ ಗಮಿಸಿದ್ದೆವೋ ಅಥವಾ ಈಗಷ್ಟೇ ದಡ ಬಿಟ್ಟವರೋ ಎನ್ನುವುದು ಇನ್ನೊಂದು ತೀರ ತಲುಪಿದವರೆಲ್ಲ ಸೇರಿ ನಿರಾಳವಾಗಿ ಮುಂದೊಂದು ದಿನ ಕೂತು ತಿರುಗಿ ನೋಡುತ್ತಾ ನಿಟ್ಟುಸಿರು ಬಿಟ್ಟು ಚರ್ಚೆ ವಿಮರ್ಶೆ ಮಾಡಬಹುದು.

ಹಲವು ಸಾವಿರ ಶಾಲೆಗಳಲ್ಲಿನ ಚಿಣ್ಣರಿಂದ ಹಿಡಿದು ಪ್ರಬುದ್ಧರ ತನಕ ಹಲವು ಲಕ್ಷ ವಿದ್ಯಾರ್ಥಿಗಳು ಹೆತ್ತವರು ಕಲಿಸುವವರು ಸಿಬ್ಬಂದಿಗಳು ಮತ್ತೆ ಅವರ ಸುತ್ತಲಿನ ವ್ಯವಸ್ಥೆಗಳು ಎಲ್ಲವೂ ಸೇರಿ ನಿತ್ಯ ಆಟ- ಪಾಠ ಓಡಾಟಗಳಲ್ಲಿ ಸುರಕ್ಷತೆಯ ಎಲ್ಲ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಲು ಸಾಧ್ಯವಿರದೇ ನಿರತರಾದಾಗ ಸದ್ಯಕ್ಕೆ ಸ್ಥಿರತೆಯ ಕಡೆಗೆ ಸಾಗುತ್ತಿರುವ, ಇಂತಹದೇ ದಿಕ್ಕಿನಲ್ಲಿ ಇನ್ನು ಸ್ವಲ್ಪ ದೂರ ಕ್ರಮಿಸಿದರೆ ತೀರ ಸಿಗಬಹುದು ಎನಿಸುವ ಕಲ್ಪನೆಗಳನ್ನು ಮೂಡಿಸುತ್ತಿರುವ ಯಾತ್ರೆಯ ಭವಿಷ್ಯದ ವಾಸ್ತವ ಭ್ರಮೆಗಳ ಫಲಿತಾಂಶವೂ ಹೊರಬೀಳುತ್ತದೆ.

ಇತರ ದೇಶಗಳಂತೆಯೇ ಈ ತಿರುಗಾಟದಲ್ಲಿ ಅನಿವಾರ್ಯವಾಗಿ ತೊಡಗಿಕೊಂಡು ಮಾರ್ಗದಲ್ಲಿ ಆ ದೇಶಗಳಿಗಿಂತ ಸ್ವಲ್ಪ ಹಿಂದೋ ಮುಂದೋ ಇರುವ ಬ್ರಿಟನ್ನಿನಲ್ಲಿಯೂ ಆರಂಭ ಅಂತ್ಯಗಳ ಅಳತೆ ಈಗಲೂ ಸರಿಯಾಗಿ ಸಿಗದಿದ್ದರೂ ಪರಿಸ್ಥಿಯನ್ನು ಸುಧಾರಿಸುವ ಸಾಹಸಗಳು ಪ್ರಯತ್ನಗಳು ಚಾಲ್ತಿಯಲ್ಲಿವೆ. ಬದುಕಿಗೆ ಅತ್ಯಗತ್ಯವಾದ ಉದ್ಯಮಗಳು ತೆರೆಯುತ್ತಿದ್ದರೂ ಕೆಲಸ ಕಳೆದುಕೊಂಡವರ, ಇನ್ನು ಕಳೆದುಕೊಳ್ಳಲಿಕ್ಕಿರುವವರ ಸಂಖ್ಯೆ ದೊಡ್ಡದಾಗಿ ಬೆಳೆಯುತ್ತಿದೆ. ಕಿರಾಣಿ ಅಂಗಡಿ, ಹೋಟೆಲು, ಪಬ್, ರೆಸ್ಟೋರೆಂಟ್, ಪ್ರವಾಸ…ಇನ್ನಿತರ ಉದ್ಯಮಗಳು ಬಾಗಿಲು ತೆರೆದಿದ್ದರೂ ಯಾವ ದಿನವೂ ಸೋಂಕು ತುಸು ಹೆಚ್ಚಾಗಿ ತಾತ್ಕಾಲಿಕವಾಗಿ ಮತ್ತೆ ವ್ಯವಹಾರಗಳನ್ನು ಮುಚ್ಚಬೇಕಾಗುವ ಅನಿಶ್ಚಿತತೆಯಲ್ಲೇ ದಿನದೂಡುತ್ತಿವೆ.

ನಿತ್ಯವೂ ಟಿವಿಯ ಮೂಲಕ ಪ್ರಧಾನಿಯಿಂದಲೋ ಆರೋಗ್ಯ ಸಚಿವಾಲಯದಿಂದಲೋ ದೊರೆಯುತ್ತಿದ್ದ ಮಾಹಿತಿ ಸಲಹೆಗಳು ನಿಂತುಹೋಗಿ ಯಾವಾಗ ಬೇಕೋ ಆಗ ವಾರಕ್ಕೋ ಎರಡು ವಾರಕ್ಕೋ ಒಮ್ಮೆ ಮಾರ್ಗದರ್ಶನಗಳು ಬದಲಾದ ನಿಯಮಗಳು ಜನಸಾಮಾನ್ಯರನ್ನು ತಲುಪುತ್ತಿವೆ. ಕೊರೊನ, ಕೋವಿಡ್ ಇತ್ಯಾದಿ ಈ ಕಾಲದ ಅತಿ ಜನಪ್ರಿಯ ಶಬ್ದಗಳ ತರಹವೇ ಪ್ರಸಿದ್ಧಿಗೆ ಬಂದ “ಎಕಾನಮಿ” ಎನ್ನುವ ಪದವೂ ತನ್ನ ಶಕ್ತ್ಯಾನುಸಾರ ಪ್ರಚಾರದಲ್ಲಿ ಓಡಾಡಿಕೊಂಡಿದೆ.

ಆರ್ಥಿಕ ಕುಸಿತ ಹಾಗು ಆರ್ಥಿಕ ಪುನಃಶ್ಚೇತನಗಳು ಜೋಡಿ ಗೆಳೆಯರಂತೆ ಸುದ್ದಿ ಮಾಧ್ಯಮದಿಂದ ಸಂಸತ್ತಿನ ಕಲಾಪಗಳ ತನಕ ಹರಿದಾಡಿಕೊಂಡಿವೆ. “ಆರ್ಥಿಕ” ಎನ್ನುವ ಪದದಿಂದ ಆರಂಭವಾಗುವ ಹೆಚ್ಚು ಕಡಿಮೆ ಎಲ್ಲ ಪದಜೋಡಣೆಯ ಮೇಲೆ ಅಧಿಕಾರ ಚಲಾಯಿಸುವ ಸರಕಾರ ಈ ಒತ್ತಾಯದ ಪ್ರವಾಸದ ನಡುಮಾರ್ಗದಲ್ಲಿ ಯೋಚನೆಯಲ್ಲೂ ತೊಡಗಿದೆ. ಮತ್ತೆ ಆ ಯೋಚನೆಗಳಲ್ಲಿ ಇಲ್ಲಿಯತನಕದ ಖರ್ಚು ವಿನಿಯೋಗ ಆಯವ್ಯಯ ಲೆಕ್ಕಪತ್ರಗಳ ವಿಚಾರಗಳೂ ಬಂದುಹೋಗುತ್ತಿವೆ. ಇಷ್ಟು ದೂರ ಬರಲಿಕ್ಕೆ ಎಷ್ಟು ವೆಚ್ಚವಾಯಿತು ಕೊನೆ ಮುಟ್ಟುವುದರೊಳಗೆ ಇನ್ನೆಷ್ಟು ಕಳೆಯುವುದಿದೆಯೋ ಎನ್ನುವ ಲೆಕ್ಕಾಚಾರಗಳ ಚರ್ಚೆ ಬಲ ಪಡೆಯುತ್ತಿದೆ.

ಹಾದಿ ತಪ್ಪಿಸಿಕೊಂಡ ಹಡಗಿನ ಉಸ್ತುವಾರಿಯವರು ಆಹಾರ ಧಾನ್ಯಗಳ ಸಂಗ್ರಹ ಎಷ್ಟಿದೆ, ಎಂಜಿನ್ ಚಲಾಯಿಸಲು ಬೇಕಾಗುವ ತೈಲದ ಶೇಖರಣೆ ಹೇಗಿದೆ, ಅಕ್ಕಪಕ್ಕದಲ್ಲಿ ಕಾಣಿಸುವ ಹಡಗುಗಳಿಂದ ಏನಾದರೂ ಕತೆಗೆದುಕೊಳ್ಳಬಹುದೇ, ಎಲ್ಲಿಗಾದರೂ ಸಂದೇಶ ಕಳುಹಿಸಿ ಸಹಾಯ ಪಡೆಯಬಹುದೇ ಎಂದೆಲ್ಲ ಆಲೋಚಿಸುವ ಹಾಗೆ ಇದೀಗ ಇಲ್ಲೂ… ವ್ಯಾಪಾರ ವಿನಿಮಯಗಳ ಮೂಲಕ ಆಮದು ರಫ್ತುಗಳ ಮೂಲಕ ದೇಶದೇಶಗಳ ನಡುವಿನ ಪ್ರೀತಿ ದ್ವೇಷಗಳ ನಿವೇದನೆಗಳಲ್ಲೂ ಒದಗಿ ಬರುವ ವಾಣಿಜ್ಯ ವ್ಯಾಪಾರಗಳ ಮೂಲಕ ಜಾಗತಿಕ ಜಗತ್ತನ್ನು ಜೀವಂತವಾಗಿಡುವುದರ ಸುತ್ತ ಪ್ರಯತ್ನಗಳು ಕೇಂದ್ರೀಕೃತವಾಗುತ್ತಿವೆ.

ಲೌಕಿಕದಿಂದ ಪಾರಮಾರ್ಥಿಕದ ಕಡೆಗೂ ಜೀವನದಿಂದ ಮೋಕ್ಷಸಾಧನದ ಬಗೆಗೂ ನಿರಂತರ ಅನ್ವೇಷಣೆಯಲ್ಲಿ ಇರುವ ಖ್ಯಾತಿಯ ಮನುಷ್ಯರು “ಅರ್ಥ ಚಿಂತನೆ” ಯ ಸುಳಿಯಲ್ಲಿ ಅನಿವಾರ್ಯವಾಗಿ ಸಿಕ್ಕಿಕೊಳ್ಳುತ್ತಿದ್ದಾರೆ. ವರ್ಷಾನುಗಟ್ಟಲೆಯಿಂದ ಮಾಡುತ್ತಾ ಬಂದ ಕಸುಬುಗಳಲ್ಲಿ ಹಾದಿ ಇಲ್ಲದಾಗಿ ಬದಲಿ ಉದ್ಯೋಗಗಳ ಚಿಂತನೆ ಪ್ರಯೋಗಗಳು  ನಡೆಯುತ್ತಿವೆ. ಉದ್ಯೋಗ ಸಾಲ ಖರ್ಚು ಹಣಕಾಸು ಇತ್ಯಾದಿ ಹೊಟ್ಟೆಪಾಡಿನ ಪುಸ್ತಕದ ಮೂಲಭೂತ ಶಬ್ದಗಳು ಹಿಂದೆಂದಿಗಿಂತ ಹೆಚ್ಚು ಚಲಾವಣೆಗೆ ಬರುತ್ತಿವೆ.

ಇಲ್ಲಿನ ಕೋವಿಡ್ ನಿಭಾವಣೆ ಸದ್ಯದ ದೈತ್ಯಗಾತ್ರದ ಆರ್ಥಿಕ ವಹಿವಾಟು ಇರಬಹುದು. ಈ ಕಾಲದ ಜಗತ್ತಿನಲ್ಲಿ ಅಥವಾ ನಾವು ನಾವು ವಾಸಿಸುವ ದೇಶಗಳಲ್ಲಿ ಎಂತಹ ಸಂದಿಗ್ಧತೆಯೇ ಇದ್ದರೂ ಹಣಕಾಸು ಬಜೆಟ್ ಆರ್ಥಿಕತೆ ಖರ್ಚು ಇತ್ಯಾದಿ ಸೊಲ್ಲುಗಳ ಬಳಕೆಯಾಗದೆ ಬಗೆಹರಿಯುವುದಿಲ್ಲ. ಮತ್ತೆ “ಬಜೆಟ್ ಎಷ್ಟು” ಎನ್ನುವ ಪ್ರಶ್ನೆ ಸಣ್ಣ ಸಂಸಾರದ ಸಣ್ಣ ಮನೆಯಿಂದ ಹಿಡಿದು ದೊಡ್ಡ ಉದ್ಯಮಗಳವರೆಗೆ ನಗರಾಡಳಿತದ ಕೌನ್ಸಿಲ್ ಗಳಿಂದ ಶುರುವಾಗಿ ದೇಶದ ಪ್ರಶಾಸನದ ತನಕವೂ ಪ್ರಸ್ತುತ. ಸರಕಾರದ ಬೊಕ್ಕಸಕ್ಕೆ  ಮೂವತ್ತು ಬಿಲಿಯನ್ ಪೌಂಡಗಳ ಖರ್ಚಿನಲ್ಲಿ   ಮುಗಿಯಬಹುದೇನೋ ಎಂದುಕೊಂಡ ವಿಲೇವಾರಿಯ ಬಗೆಗೆ ಈಗ ಮೂನ್ನೂರು ಬಿಲಿಯನ್ ಗಳನ್ನು ಮಿಕ್ಕಿದ  ಅಂದಾಜು ಸೂಚಿಸಲಾಗುತ್ತಿದೆ.

ಸರಕಾರದ ಲೆಕ್ಕದಲ್ಲಿ ಮೂವತ್ತು ಬಿಲಿಯನ್ ಪೌಂಡಗಳಲ್ಲಿ ಮುಗಿಯಬಹುದೇನೋ ಎಂದುಕೊಂಡ ವಿಲೇವಾರಿಯ ಬಗೆಗೆ ಈಗ ಮೂನ್ನೂರು ಬಿಲಿಯನ್ ಗಳ ಅಂದಾಜು ಸೂಚಿಸಲಾಗುತ್ತಿದೆ. ಮಹಾಯುದ್ಧಾನಂತರದ ಅಥವಾ ಶಾಂತಿ ಕಾಲದ ಅತಿದೊಡ್ಡ ಆರ್ಥಿಕ ಬಿಕ್ಕಟ್ಟು ಎನ್ನುವ ಅಪಕೀರ್ತಿಯ ನಿರ್ವಹಣೆಗೆ ದೇಶದ ಒಳಗಿನ ಹೂಡಿಕೆದಾರರ, ಉದ್ಯಮಗಳ, ಬೇರೆ ದೇಶದ ಮೂಲಗಳಿಂದ ಸಾಲ ಸಹಾಯ ತರಲಾಗುತ್ತಿದೆ. ಈ ಪ್ರಯಾಸದ ಪ್ರಯಾಣವನ್ನು ಹೇಗೋ ಒಂದು ಪ್ರಕಾರದಲ್ಲಿ ಮುಗಿಸುವ ಪ್ರಯತ್ನ ಸಾಗುತ್ತಿದೆ. ಕಾಯಿಲೆಯನ್ನು ಎದುರಿಸಲು ಬೇಕಾಗುವ ವೈದ್ಯಕೀಯ ತಯಾರಿ ,ಸುರಕ್ಷಾ ಸೌಕರ್ಯಗಳು, ಲಸಿಕೆಯ ಬಗೆಗಿನ ಸಂಶೋಧನೆಯ ಮಾರ್ಗಗಳು ಮತ್ತೆ ಸೋಂಕಿನಿಂದ  ನೇರ ಅಥವಾ ಪರೋಕ್ಷ ಬಾಧಿತರಾದವರ ಬದುಕಿಗೆ ಬೇಕಾಗುವ ಉದ್ಯೋಗ ಬೆಂಬಲ, ಉದ್ಯಮಗಳನ್ನು  ಆಧರಿಸುವ  ಸಾಹಸ ಯೋಜನೆ ಕ್ರಮಗಳು ಮತ್ತೆ ನಾವು ಬದುಕುವ ರೀತಿಗೆ ವ್ಯವಹರಿಸುವ ಬಗೆಗೆ ಪ್ರಾಥಮಿಕ ಬದಲಾವಣೆಗಳನ್ನು ಅಳವಡಿಸುವ ಹೆಜ್ಜೆಗಳು ಚಾಲನೆಯಲ್ಲಿವೆ. ಎಲ್ಲಿಂದಲೋ ಹೇಗೋ ಶುರುವಾದ ದೀರ್ಘ ಯಾನವನ್ನು ಜೀವಂತವಾಗಿಡುವ ಮುಂದೊಂದು ದಿನ  ತಲುಪಬೇಕಾದಲ್ಲಿಗೆ ಅಥವಾ ತಲುಪಬಹುದಾದಲ್ಲಿಗೆ ತಲುಪಿಸುವ ಯತ್ನ ಜಾರಿಯಲ್ಲಿದೆ. ಈ ಪ್ರಯಾಸದ ಪ್ರಯಾಣವನ್ನು ಮುಗಿಸುವ ಪ್ರಯತ್ನ ಸಾಗುತ್ತಿದೆ. ಕಾಯಿಲೆಯನ್ನು ಎದುರಿಸಲು ಬೇಕಾಗುವ ವೈದ್ಯಕೀಯ ತಯಾರಿ, ಸುರಕ್ಷಾ ಸೌಕರ್ಯಗಳು, ಲಸಿಕೆಯ ಬಗೆಗಿನ ಸಂಶೋಧನೆಯ ಮಾರ್ಗಗಳು ಮತ್ತೆ ಸೋಂಕಿನಿಂದ ನೇರ ಅಥವಾ ಪರೋಕ್ಷ ಬಾಧಿತರಾದವರ ಬದುಕಿಗೆ ಬೇಕಾಗುವ ಉದ್ಯೋಗ ಬೆಂಬಲ, ಉದ್ಯಮಗಳನ್ನು ಆಧರಿಸುವ ಸಾಹಸ ಯೋಜನೆ ಕ್ರಮಗಳು ಚಾಲನೆಯಲ್ಲಿವೆ.

ಎಲ್ಲಿಂದಲೋ ಶುರುವಾದ ದೀರ್ಘ ಯಾನವನ್ನು ಜೀವಂತವಾಗಿಡುವ ಮುಂದೊಂದು ದಿನ ತಲುಪಬೇಕಾದಲ್ಲಿಗೆ ಅಥವಾ ತಲುಪಬಹುದಾದಲ್ಲಿಗೆ ತಲುಪಿಸುವ ಯತ್ನ ಜಾರಿಯಲ್ಲಿದೆ. ಆರಂಭ ಹಾಗು ಅಂತ್ಯಗಳ ಅರಿವು ಸ್ಪಷ್ಟ ಇರದ ಸಂಚಾರ ಈಗಲೂ ಮುಂದುವರಿದಿದೆ. ಪ್ರಯಾಣದ ಉದ್ದಕ್ಕೂ ವಿಶಿಷ್ಟ ವಿಲಕ್ಷಣ ಅನುಭಗಳನ್ನು ನೀಡುತ್ತಲಿದೆ.