ಹೊಸವರ್ಷಕ್ಕೊಂದು, ಸುಂದರ-
ಹೊಸ ಕವನ ‘ಹೊಸೆ’ಯ ಬೇಕೆಂದು
ಲೇಖನಿ ಹಿಡಿದು ಕುಳಿತಾಗ,
ಸಾಲು, ಸಾಲು ಹಳೇ ರೂಪಕಗಳ
ಮೆರವಣಿಗೆ, ಉರವಣಿಗೆ ಕಣ್ಮುಂದೆ.

ನಿನ್ನೆ ತೊಟ್ಟ ಗಲೀಜು, ಗಬ್ಬುನಾರುವ,
ಕೊಳೆಯಾದ ಹಳೆಯಂಗಿ ಕಳಚಿ,
ತೊಳೆದು ಶುಭ್ರವಾಗಿಸಿ, ‘ಇಸ್ತ್ರಿ’ ಮಾಡಿಟ್ಟ,
ಗರಿ ಗರಿ, ಹಳೆಯಂಗಿಯನ್ನೇ…..
ತೊಟ್ಟು ಖುಷಿಪಟ್ಟಂತೆ..!

ಮೂಲೆ ಸೇರಿದ ಮಬ್ಬು,
ಹಳೆ ಪಾತ್ರೆಯೊಂದ ಹುಡುಕಿ,
ಸೋಪಿನಿಂದ ಚನ್ನಾಗಿ ಉಜ್ಜಿ, ತಿಕ್ಕಿ, ತೀಡಿ
ತೊಳೆದು ‘ಲಕ,ಲಕಿಸಿ’,’ ಪಿಲ್ಟರ್’ ಮಾಡಿ,
ಕುದಿಸಿದ ಹಳೇ ನೀರ ತುಂಬಿಸಿ,
ಹೊಸತೆಂದು ಸಂಭ್ರಮಿಸಿದಂತೆ…!

ಅಜ್ಜ ಕಟ್ಟಿದ ಮೂರಂಕಣದ
ಹಳೇ ಮನೆ ರಿಪೇರಿಮಾಡಿಸಿ,
ಬಣ್ಣ ಬಳಿದು ಹೊಸದೆಂದುಕೊಂಡಂತೆ…!

ಹೊಸದಾಗಿ ಬರೆಯಲೇನೂ ಉಳಿದಿಲ್ಲ-
ವೆನ್ನಿಸಿ, ಕೊನೆಗೆ ಹಳೆ ‘ಬಾಲ್ಪೆನ್’–
ಮೊಳೆ ಬದಲಾಯಿಸಿ,
ಎದುರು ಹಳೇಗೋಡೆಗೆ ಹೊಡೆದ-
ಹಳೇ ಮೊಳೆಗೆ ನೇತಾಡುವ,
ಹೊಸವರ್ಷದ ‘ಕ್ಯಾಲೆಂಡರ್’ ಮೇಲೊಂದು
ಕವನ ಬರೆದೆ ಹೊಸವರ್ಷಕ್ಕೆ.

ಸುಬ್ರಹ್ಮಣ್ಯ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು
ನಾನು ವೃತ್ತಿಯಲ್ಲಿ ಕ್ರಷಿಕರಾಗಿರುವ ಇವರು ಸಾಹಿತ್ಯಾಸಕ್ತರು.
ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಈಗಾಗಲೇ ಒಂದು ಕಾದಂಬರಿ ಪ್ರಕಟವಾಗಿದ್ದು, ಕವನ ಸಂಕಲನ ಪ್ರಕಟಣೆಯ ಹಂತದಲ್ಲಿದೆ.