ಆಗ ಪ್ರಗತಿಪರರು ಎನ್ನಿಸಿಕೊಂಡಿದ್ದ ಲೇಖಕರೊಬ್ಬರು ನಮ್ಮ ಹೆಸರುಗಳನ್ನೆಲ್ಲ ಸರಕಾರಕ್ಕೆ ಕೊಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ಗುಂಪಿನ ಉಳಿದವರೆಲ್ಲ ಸ್ವತಂತ್ರವಾಗಿ ಇದ್ದವರು. ನಾನು ಮಾತ್ರ ಸರಕಾರಿ ಕೆಲಸದಲ್ಲಿದ್ದ ಕಾರಣ ನಾನು ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯವಿತ್ತು. ಮನೆಯ ಪರಿಸ್ಥಿತಿಯೂ ಸರಿಯಿಲ್ಲದ ಕಾರಣ ಸರಕಾರಿ ಸಂಬಳ ಬಹಳ ಮುಖ್ಯವಾಗಿತ್ತು.
ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ ಆತ್ಮಕತೆ ‘ಕಾಲದೊಂದೊಂದೇ ಹನಿʼ ಇದೇ ಭಾನುವಾರ ಬಿಡುಗಡೆಯಾಗಲಿದ್ದು, ಅದರ ಆಯ್ದ ಭಾಗ ನಿಮ್ಮ ಓದಿಗೆ

ತುರ್ತು ಪರಿಸ್ಥಿತಿ

1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಆಯ್ಕೆ ಅಸಿಂಧು ಎಂದು ಕೋರ್ಟು ತೀರ್ಪು ಕೊಟ್ಟ ಕೂಡಲೇ ಅವರು ಇಡೀ ದೇಶದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರಿದರು. ನನಗೆ ಆಗ ತುರ್ತು ಪರಿಸ್ಥಿತಿಯ ಬಗ್ಗೆ ಜಾಸ್ತಿ ಮಾಹಿತಿ ಇರಲಿಲ್ಲ. ತುರ್ತು ಪರಿಸ್ಥಿತಿ ಘೋಷಣೆಯಾದ ಮರುದಿನ ಪತ್ರಿಕೆಯವರು ಸಂಪಾದಕೀಯ ಇರುತ್ತಿದ್ದ ಜಾಗಗಳಲ್ಲೆಲ್ಲ ಕಪ್ಪು ಚೌಕಟ್ಟನ್ನು ಹಾಕಿ ಖಾಲಿ ಬಿಟ್ಟಿದ್ದರು. ನಾವೆಲ್ಲ ಗೌರವಿಸುತ್ತಿದ್ದ ಅನೇಕ ನಾಯಕರನ್ನು ಬಂಧಿಸಿ ಜೈಲಿನೊಳಗೆ ಹಾಕಿದ್ದರು. ಆಮೇಲೆ ಅದರ ಬಗ್ಗೆ ವಿಚಾರಿಸಿದಾಗ ಗೊತ್ತಾದ ವಿಷಯವೆಂದರೆ, ಇಂದಿರಾ ಗಾಂಧಿಯವರನ್ನು ಯಾರ್ಯಾರು ವಿರೋಧ ಮಾಡುತ್ತಿದ್ದರೋ ಅವರನ್ನೆಲ್ಲ ಬಂಧಿಸಿ ಜೈಲಿನೊಳಗೆ ಇಟ್ಟಿದ್ದರು. ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಈ ತುರ್ತು ಪರಿಸ್ಥಿತಿ ಎನ್ನುವುದು ನನಗೆ ಮನದಟ್ಟಾಯಿತು.

ಇಂತಹ ಸಂದರ್ಭದಲ್ಲಿ ಬರೆಹಗಾರರಾಗಿ, ಸಮಕಾಲೀನ ಸಮಾಜಕ್ಕೆ ಸ್ಪಂದಿಸುವವರಾಗಿ, ಹೊಸ ಸಮಸ್ಯೆಗಳನ್ನು ವಿಶ್ಲೇಷಿಸಲು ಪ್ರಯತ್ನಪಡುವವರಾಗಿ ಯುವಕರಾಗಿರುವ ನಾವು ದೇಶಕ್ಕೆ ನಮ್ಮದೇ ಆದ ಸೇವೆಯನ್ನು ಮಾಡಬಹುದು ಎನ್ನುವ ಯೋಚನೆ ‘ಸುಮನಸಾ’ ಬಳಗಕ್ಕೆ ಬಂತು. ಶ್ರೀರಾಮ ಲಂಕೆಗೆ ಸೇತುವೆ ಕಟ್ಟುವಾಗ ಒಂದು ಅಳಿಲು ಮರಳಿನಲ್ಲಿ ಹೊರಳಾಡಿ, ಮೈಗೆ ಅಂಟಿಕೊಂಡ ಮರಳನ್ನು ತಂದು ಸೇತುವೆಗೆ ಕೊಡಹುತ್ತಿತ್ತಂತೆ. ಅದೇ ತರಹ ಎಷ್ಟು ಸಾಧ್ಯವೋ ಅಷ್ಟು ನಮ್ಮಿಂದಾದ ಸೇವೆಯನ್ನು ಈ ಸಮಯದಲ್ಲಿ ಮಾಡಬೇಕು ಎಂದು ನಾವು ನಿರ್ಧಾರ ಮಾಡಿದೆವು. ಅದರ ಕುರಿತಾಗಿ ಬಾಲಸುಬ್ರಹ್ಮಣ್ಯ ಕಂಜರ್ಪಣೆಯವರ ಮನೆಯಲ್ಲಿ ನಾವು ವೇದಿಕೆಯ ತಿಂಗಳ ಕಾರ್ಯಕ್ರಮದಂತೆ ಸೇರಿ ಚರ್ಚೆಯನ್ನು ಮಾಡಿ, ತುರ್ತು ಪರಿಸ್ಥಿತಿಯನ್ನು ಪ್ರತಿಭಟಿಸಲಿಕ್ಕೆ ಮೂರು ವಿಭಾಗಗಳನ್ನು ಮಾಡಿಕೊಂಡೆವು.

ಮೊದಲನೆಯದಾಗಿ ಪತ್ರಿಕೆಯ ಪ್ರಕಟಣೆ, ಎರಡನೆಯದು ಬೀದಿಬೀದಿಗಳಲ್ಲಿ ಅದಾಗಲೇ ನಡೆಯುತ್ತಿದ್ದ ಪ್ರತಿಭಟನೆಗೆ ನಮ್ಮನ್ನು ನಾವು ಸೇರಿಸಿಕೊಳ್ಳುವುದು ಹಾಗೂ ಮೂರನೆಯದು ಯಕ್ಷಗಾನದ ಕೆಲವು ಪ್ರಸಂಗಗಳ ಮೂಲಕ ತುರ್ತು ಪರಿಸ್ಥಿತಿಯನ್ನು ವಿರೋಧಿಸುವಂತಹ ಜನಾಭಿಪ್ರಾಯವನ್ನು ರೂಪಿಸುವ ಪ್ರಯತ್ನ ಮಾಡುವುದು. ಇದರಲ್ಲಿ ತುಂಬಾ ಕಠಿಣವಾದ ಕೆಲಸ ಪತ್ರಿಕೆಯನ್ನು ನಡೆಸುವುದಾಗಿತ್ತು. ಆ ಜವಾಬ್ದಾರಿಯನ್ನು ನಾನು ವಹಿಸಿಕೊಂಡೆ. ಬೀದಿಗೆ ಹೋಗಿ ಪ್ರತಿಭಟನೆ ಮಾಡುವ ಜವಾಬ್ದಾರಿಯನ್ನು ಬಿಸಿರಕ್ತದ ಯುವಕನಾಗಿದ್ದ ಸತ್ಯನ್ ದೇರಾಜೆಗೆ ನೀಡಲಾಯಿತು. ಸತ್ಯಮೂರ್ತಿ ದೇರಾಜೆ ಯಕ್ಷಗಾನದ ಆರ್ಥಧಾರಿಯಾಗಿದ್ದ ಕಾರಣ, ಯಕ್ಷಗಾನದ ಜವಾಬ್ದಾರಿಯನ್ನು ಎಂ ಟಿ ಶಾಂತಿಮೂಲೆ, ಶ್ರೀಕೃಷ್ಣ ಚೊಕ್ಕಾಡಿ ಹಾಗೂ ಸತ್ಯಮೂರ್ತಿ ದೇರಾಜೆ ವಹಿಸಿಕೊಂಡರು.

ಪತ್ರಿಕೆ ಪ್ರಕಟಣೆಯ ಜವಾಬ್ದಾರಿಯನ್ನು ಹೊತ್ತಿದ್ದ ನನಗೆ ಅದನ್ನು ನಿರ್ವಹಿಸಲಿಕ್ಕೆ ಎರಡು ದಾರಿಗಳು ಕಾಣಿಸಿದವು, ಒಂದು ನಾವೇ ಪತ್ರಿಕೆಯನ್ನು ಮಾಡುವುದು ಹಾಗೂ ಎರಡನೆಯದು ಈಗಾಗಲೇ ಪ್ರಕಟವಾಗುತ್ತಿರುವ ಪತ್ರಿಕೆಗಳನ್ನು ನಾವು ಪಡೆದುಕೊಂಡು ಅವುಗಳನ್ನು ಹಂಚುವ ಕೆಲಸವನ್ನು ಮಾಡುವುದು. ನಾವು ಆರಂಭಿಸಿದ ಪತ್ರಿಕೆಗೆ ‘ಅಜ್ಞಾತ ಪರ್ವ’ ಎನ್ನುವ ಹೆಸರನ್ನಿಟ್ಟೆ. ಪಾಂಡವರ ಅಜ್ಞಾತ ಪರ್ವದ ಕಥೆಯಂತೆ, ಅಜ್ಞಾತವಾಗಿದ್ದರೂ ಆ ಸಮಯದಲ್ಲಿ ಯುದ್ಧದ ತಯಾರಿಯೂ ಆಗುತ್ತಿರಬೇಕು ಎನ್ನುವ ಸೂಚನೆಯನ್ನು ಕೊಡುವ ಹೆಸರು ಅದಾಗಿತ್ತು. ಆ ಸಮಯದಲ್ಲಿ ಪತ್ರಿಕೆಗಳನ್ನು ಮುದ್ರಿಸಲಿಕ್ಕೆ ಯಾವ ಮುದ್ರಣಾಲಯದವರೂ ಒಪ್ಪುತ್ತಿರಲಿಲ್ಲ ಹಾಗೂ ನಮ್ಮ ಹತ್ತಿರ ಅಷ್ಟು ಹಣವೂ ಇರಲಿಲ್ಲ. ಹಾಗಾಗಿ ಈ ಪತ್ರಿಕೆಯನ್ನು ಕೈಬರೆಹದಲ್ಲಿ ಪ್ರಕಟಿಸುವುದು ಎಂದು ನಾವು ತೀರ್ಮಾನಿಸಿದೆವು. 1/4 ಅಳತೆಯ ಕಾಗದದಲ್ಲಿ ಪ್ರತಿಯೊಬ್ಬನೂ ಹತ್ತು ಪ್ರತಿಗಳನ್ನು ಮಾಡುವುದು, ಅವುಗಳನ್ನು ಬೇರೆಬೇರೆ ಸ್ಥಳಗಳಲ್ಲಿ ಅದಾಗಲೇ ಗುರುತಿಸಿಕೊಂಡಿರುವ ಹತ್ತು ಜನರಿಗೆ ಕಳುಹಿಸುವುದು, ಆ ಹತ್ತು ಜನರು ಮತ್ತೆ ಹತ್ತು ಜನರನ್ನು ಗುರುತಿಸಿಕೊಂಡು ಹತ್ತು ಪ್ರತಿಗಳನ್ನು ಮಾಡಿ ಹಂಚುವುದು, ಹೀಗೆ ಹತ್ತರ ಸಂಖ್ಯೆಯಲ್ಲಿ ಪ್ರಸಾರವನ್ನು ಹೆಚ್ಚಿಸುತ್ತ ಹೋಗುವುದು ಎಂದು ತೀರ್ಮಾನಿಸಿದೆವು.

ಈ ಪತ್ರಿಕೆಗೆ ವಿಷಯವನ್ನು ಹುಡುಕುವುದು ನನ್ನ ಜವಾಬ್ದಾರಿಯಾಗಿತ್ತು. ಇದಕ್ಕೆ ಸಂಪಾದಕೀಯವನ್ನು ನಾನು ಬರೆಯುತ್ತಿದ್ದೆ. ಜೊತೆಗೆ ಬೇರೆಬೇರೆ ಕಡೆಯ ಪ್ರತಿಭಟನೆಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದೆವು. ಈ ಸುದ್ದಿಯ ಮೊದಲ ಮೂಲ ನನಗೆ ಕೆ ವಿ ಸುಬ್ಬಣ್ಣ ಅವರಾಗಿದ್ದರು. ಅವರಿಗೆ ಸಿಕ್ಕಿದ ದೇಶ-ವಿದೇಶಗಳ ಅನೇಕ ಸುದ್ದಿಗಳನ್ನು ಅವರು ನನಗೆ ಕಳುಹಿಸುತ್ತಿದ್ದರು. ಆ ಸಮಯದಲ್ಲಿ ಮುಂಬೈನಿಂದ ‘Opinion’ ಎನ್ನುವ ಪತ್ರಿಕೆಯೊಂದು ಬರುತ್ತಿತ್ತು. ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಸತ್ತಿನಲ್ಲಿ ನಡೆಯುವ ಎಲ್ಲ ಚರ್ಚೆಗಳನ್ನು ಅದರಲ್ಲಿ ಪ್ರಕಟಿಸುತ್ತಿದ್ದರು. ಬೇರೆ ಯಾವ ಪತ್ರಿಕೆಗಳಲ್ಲಿಯೂ ಸಂಸತ್ತಿನ ಕಲಾಪಗಳ ಸುದ್ದಿ ಪ್ರಕಟವಾಗದಂತೆ ಸರಕಾರ ನೋಡಿಕೊಂಡಿತ್ತು. ಆದರೆ ‘Opinion’ ಪತ್ರಿಕೆ ಮಾತ್ರ ಅದ್ಯಾವುದೋ ಮೂಲದ ಮೂಲಕ ಸಂಸತ್ತಿನಲ್ಲಿ ನಡೆದ ಎಲ್ಲ ಚರ್ಚೆ, ವಾದ-ವಿವಾದಗಳನ್ನು ಯಥಾವತ್ತಾಗಿ ಪಡೆದುಕೊಂಡು ಪ್ರಕಟಿಸುತ್ತಿತ್ತು. ಆ ಪತ್ರಿಕೆಯನ್ನು ನಾನು ಪೋಸ್ಟ್ ಮೂಲಕ ತರಿಸಿಕೊಂಡು ನನಗೆ ಬೇಕಾದ ಕೆಲವು ವಿಷಯಗಳನ್ನು ಅದರಿಂದ ಪಡೆದುಕೊಳ್ಳುತ್ತಿದ್ದೆ. ಅಷ್ಟೇ ಅಲ್ಲದೆ ಆರ್ ಎಸ್ ಎಸ್ ನವರಿಂದಲೂ ನನಗೆ ಸುದ್ದಿಗಳು ಸಿಗುತ್ತಿದ್ದವು.

ನಾನು ಮೂಲತಃ ಆರ್ ಎಸ್ ಎಸ್ ಜೊತೆಗೆ ಯಾವುದೇ ಸಂಪರ್ಕ ಹೊಂದಿಲ್ಲದೆ ಇದ್ದರೂ, ಶತ್ರುವಿನ ಶತ್ರು ಮಿತ್ರ ಎನ್ನುವ ಗಾದೆಯಂತೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನಗೂ ಆರ್ ಎಸ್ ಎಸ್ ಗೂ ಸ್ನೇಹ ಬೆಳೆಯಿತು. ರವೀಶ ಎನ್ನುವವರು ಹಾಗೂ ಅವರ ಮೇಲಿನ ಕಾರ್ಯಕರ್ತರಾದ ದು ಗು ಲಕ್ಷ್ಮಣ ಈ ವಿಭಾಗದ ಆರ್ ಎಸ್ ಎಸ್ ಪ್ರಚಾರಕರಾಗಿದ್ದರು. ಈ ಲಕ್ಷ್ಮಣರಿಗೆ ಆಗ ಬೇರೆ ಯಾವುದೋ ಹೆಸರಿತ್ತು. ಅವರು ಆಮೇಲೆ ‘ಹೊಸ ದಿಗಂತ’ ಹಾಗೂ ‘ವಿಕ್ರಮ’ ಪತ್ರಿಕೆಗಳ ಸಂಪಾದಕರಾಗಿದ್ದು ಈಗ ನಿವೃತ್ತಿ ಹೊಂದಿದ್ದಾರೆ. ಅವರು ನನಗೆ ಬೇಕಾದ ಕೆಲವು ಸುದ್ದಿಗಳನ್ನು ಕೊಡುತ್ತಿದ್ದರು. ಹೀಗೆ ಸಂಗ್ರಹಿಸಿದ ಸುದ್ದಿಗಳನ್ನು ಸಂಕ್ಷಿಪ್ತಗೊಳಿಸಿ ದೇಶ-ವಿದೇಶಗಳ ಸುದ್ದಿಗಳು ಎನ್ನುವ ತಲೆಬರಹದಡಿಯಲ್ಲಿ ನಮ್ಮ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದೆವು. ಅಷ್ಟೇ ಅಲ್ಲದೆ ಕೆಲವು ಕವಿತೆ ಹಾಗೂ ಚಿಕ್ಕ ಕಥೆಗಳನ್ನೂ ಸೇರಿಸುತ್ತಿದ್ದೆವು.

ಶ್ರೀರಾಮ ಲಂಕೆಗೆ ಸೇತುವೆ ಕಟ್ಟುವಾಗ ಒಂದು ಅಳಿಲು ಮರಳಿನಲ್ಲಿ ಹೊರಳಾಡಿ, ಮೈಗೆ ಅಂಟಿಕೊಂಡ ಮರಳನ್ನು ತಂದು ಸೇತುವೆಗೆ ಕೊಡಹುತ್ತಿತ್ತಂತೆ. ಅದೇ ತರಹ ಎಷ್ಟು ಸಾಧ್ಯವೋ ಅಷ್ಟು ನಮ್ಮಿಂದಾದ ಸೇವೆಯನ್ನು ಈ ಸಮಯದಲ್ಲಿ ಮಾಡಬೇಕು ಎಂದು ನಾವು ನಿರ್ಧಾರ ಮಾಡಿದೆವು.

‘ಅಂಬಿಗರ ಕಥೆ’ ಎಂದು ತುರ್ತು ಪರಿಸ್ಥಿತಿಯ ಕಾಲದಲ್ಲಿ ಅನಂತಮೂರ್ತಿಯವರು ಹೇಳುತ್ತಿದ್ದ ಕಥೆ ಅದರಲ್ಲಿ ಹಾಕಿದ್ದ ಕಥೆಗಳಲ್ಲಿ ಒಂದು. ಬ್ರಿಟಿಷ್ ಕವಿ ಬರ್ನಾರ್ಡ್ ಕಾಪ್ಸ್ ಮೊದಲಾದ ವಿದೇಶಿ ಕವಿಗಳು, ಕನ್ನಡದ ಕವಿಗಳು ಹಾಗೂ ವೇದಿಕೆಯ ಸದಸ್ಯರು ಬರೆದ ಎಮರ್ಜೆನ್ಸಿ ವಿರೋಧಿ ಕವಿತೆಗಳನ್ನು ಅದರಲ್ಲಿ ಹಾಕುತ್ತಿದ್ದೆವು. ಕೆಲವು ಸಲ ಬೇರೆ ಸದಸ್ಯರಿಗೆ ಈ ಕೆಲಸ ಒಪ್ಪಿಸಿದ್ದೂ ಇದೆ. ಹೀಗೆ ನಾಲ್ಕು ಪುಟಗಳ ಆ ಪತ್ರಿಕೆಯ ಹತ್ತು ಪ್ರತಿಗಳನ್ನು ತಯಾರಿಸಲಿಕ್ಕೆ ಕಾರ್ಬನ್ ಪೇಪರ್ ಉಪಯೋಗಿಸಿಯೂ ಮೂರರಿಂದ ನಾಲ್ಕು ಸಲ ಬರೆಯುವ ಅಗತ್ಯ ಬೀಳುತ್ತಿತ್ತು. ಹಾಗೆ ಬರೆದ ಪತ್ರಿಕೆಯನ್ನು ಆ ಕಾಲದ ದೊಡ್ಡದೊಡ್ಡ ಬರೆಹಗಾರರು, ಸಮಾಜಚಿಂತಕರು, ವಿರೋಧ ಪಕ್ಷದ ಮುಖ್ಯಸ್ಥರು ಇವರಿಗೆಲ್ಲ ಪೋಸ್ಟ್ ಮೂಲಕ ಕಳುಹಿಸುತ್ತಿದ್ದೆವು.

ಆ ಸಮಯದಲ್ಲಿ ಆರ್ ಎಸ್ ಎಸ್ ನವರ ‘ಕಹಳೆ’ ಎನ್ನುವ ಪತ್ರಿಕೆ ಪ್ರಕಟವಾಗುತ್ತಿತ್ತು. ನಮ್ಮ ‘ಅಜ್ಞಾತ ಪರ್ವ’ ಪತ್ರಿಕೆಯ ಜೊತೆಗೆ ನಾನು ‘ಕಹಳೆ’ಯನ್ನೂ ಕೂಡಾ ಹಂಚುವ ಕೆಲಸ ಮಾಡುತ್ತಿದ್ದೆ. ಅಷ್ಟೇ ಅಲ್ಲದೇ ಹೊರದೇಶಗಳಲ್ಲಿ ಪ್ರಭುತ್ವದ ವಿರುದ್ಧ ಬಂದಂತಹ ಅನೇಕ ಕವಿತೆಗಳನ್ನು ಅನುವಾದ ಮಾಡಿ ನಮ್ಮ ಪತ್ರಿಕೆಯಲ್ಲಿ ಸೇರಿಸುತ್ತಿದ್ದೆ. ಹೀಗೆ ನಾವು ಸುಮಾರು ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ಈ ಪತ್ರಿಕೆಯ ಕೆಲಸವನ್ನು ಮಾಡಿದೆವು. ಈ ಕೆಲಸ ಎಷ್ಟು ಕಠಿಣ ಹಾಗೂ ಸೂಕ್ಷ್ಮವಾದ ಕೆಲಸವಾಗಿತ್ತೆಂದರೆ, ಒಮ್ಮೆ ಅಡಿಗರು ಪತ್ರ ಬರೆದು ‘ಜಾಗ್ರತೆಯಾಗಿರು, ನಿನ್ನ ಹೆಸರು ಕೂಡಾ ಲಿಸ್ಟ್ ನಲ್ಲಿ ಉಂಟು’ ಎಂದು ಹೇಳಿದ್ದರು.

ಆರ್ ಎಸ್ ಎಸ್ ನವರು ತುರ್ತು ಪರಿಸ್ಥಿತಿಯ ಮೇಲೆ ಹೊರತಂದ ಪುಸ್ತಕದಲ್ಲಿ ನಮ್ಮ ಪ್ರತಿಭಟನೆಯ ವಿಷಯಗಳೆಲ್ಲ ದಾಖಲಾಗಿವೆ. ಅದೇ ಸಮಯದಲ್ಲಿ ಅಡಿಗರು ಹಾಗೂ ಖಾದ್ರಿ ಶಾಮಣ್ಣನವರು ಸೇರಿಕೊಂಡು ಇದೇ ರೀತಿಯ ಪತ್ರಿಕೆಯನ್ನು ಮಾಡುವ ಉದ್ದೇಶವನ್ನು ಇಟ್ಟುಕೊಂಡು, ಅದರ ಸಂಪಾದಕ ಬಳಗದಲ್ಲಿ ನನ್ನನ್ನೂ ಸೇರಿಸಿಕೊಂಡರು. ಅದೇ ಕಾರಣಕ್ಕೆ ಅಡಿಗರ ಮನೆಯಲ್ಲಿ ಒಂದು ಮೀಟಿಂಗ್ ನಿಗದಿ ಮಾಡಿ ನನಗೂ ಆ ಮೀಟಿಂಗ್ ನಲ್ಲಿ ಭಾಗವಹಿಸಲು ಹೇಳಿದರು. ‘ಮಾಧ್ಯಮ’ ಎನ್ನುವ ಹೆಸರಿನ ಪ್ರತಿಭಟನೆಯ ಸ್ವರ ಇರುವಂತಹ ಸಾಹಿತ್ಯಿಕ ಮಾಸಪತ್ರಿಕೆಯನ್ನು ಪ್ರಕಟಿಸುವುದು ಎಂದು ಆ ಮೀಟಿಂಗ್ ನಲ್ಲಿ ತೀರ್ಮಾನವಾಯಿತು. ಅದಾಗಿ ಸ್ವಲ್ಪ ದಿನಗಳಲ್ಲಿಯೇ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ಆ ಪತ್ರಿಕೆಯ ಪ್ರಕಟಣೆಯ ಕಾರ್ಯವನ್ನು ಮುಂದುವರಿಸದೆ ಕೈ ಬಿಡಲಾಯಿತು.

‘ಅಜ್ಞಾತ ಪರ್ವ’ ಪತ್ರಿಕೆಯನ್ನು ಕೈಯಲ್ಲಿ ಬರೆಯುವುದು ಕಷ್ಟದ ಕೆಲಸವಾಗಿದ್ದ ಕಾರಣ ನಾವು ಸೈಕ್ಲೋಸ್ಟೈಲ್ ಮಷಿನ್ ತರಿಸಿಕೊಳ್ಳಬೇಕೆಂದು ಯೋಚನೆ ಮಾಡಿದೆವು. ಮಡಿಕೇರಿಯಲ್ಲಿ ಆ ಮಷಿನ್ ಇರುವುದು ಗೊತ್ತಾಗಿ, ನಾನು ಅವರ ಹತ್ತಿರ ನಮ್ಮ ಪತ್ರಿಕೆಯನ್ನು ಮುದ್ರಿಸಿಕೊಡುವುದರ ಬಗ್ಗೆ ಮಾತನಾಡಲಿಕ್ಕೆ ಅವರಲ್ಲಿಗೆ ಹೋದೆ. ಅವರು ಕನಿಷ್ಠ ಖರ್ಚಿನಲ್ಲಿ ಮುದ್ರಿಸಿಕೊಡುವುದಾಗಿ ಒಪ್ಪಿಕೊಂಡರು. ಆ ಮಷಿನ್ ತುಂಬಾ ದೊಡ್ದದಾಗಿದ್ದು, ಅದನ್ನು ಇಡಲಿಕ್ಕೆ ಹಾಗೂ ಕಾರ್ಯನಿರ್ವಹಣೆಯ ವೆಚ್ಚ ಭರಿಸಲಿಕ್ಕೆ ಕಷ್ಟವಾಗಿದ್ದ ಕಾರಣ ಅದನ್ನು ಖರೀದಿಸುವ ಆಲೋಚನೆಯನ್ನು ಕೈಬಿಟ್ಟೆವು. ಆದರೆ ಅದಾಗಿ ಹದಿನೈದು-ಇಪ್ಪತ್ತು ದಿನಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ಮುದ್ರಿಸಿದ ಪತ್ರಿಕೆಯನ್ನು ಹೊರತರುವುದು ಸಾಧ್ಯವಾಗಲಿಲ್ಲ.

ಪ್ರತಿಭಟನೆಯ ಇನ್ನೊಂದು ಭಾಗವಾಗಿದ್ದ ಮೆರವಣಿಗೆಯ ಭಾಗವನ್ನು ಸತ್ಯನ್ ದೇರಾಜೆ ವಹಿಸಿಕೊಂಡಿದ್ದ ಹಾಗೂ ಬಂಧನಕ್ಕೆ ಕೂಡಾ ಒಳಗಾಗಿದ್ದ. ಆ ಸಮಯದಲ್ಲಿ ದೇವರಾಜ ಅರಸ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಉಳಿದ ರಾಜ್ಯಗಳ ಮುಖ್ಯಮಂತ್ರಿಗಳಷ್ಟು ಕಟುವಾಗಿ ಇವರು ನಡೆದುಕೊಂಡಿರಲಿಲ್ಲ. ಕೆಲವರನ್ನು ಮಾತ್ರ ಬಂಧನದಲ್ಲಿಟ್ಟು, ಉಳಿದವರನ್ನು ಒಮ್ಮೆ ಬಂಧಿಸಿ ಹಾಗೆಯೇ ಬಿಡುಗಡೆಗೊಳಿಸಿದ್ದರು. ಯಕ್ಷಗಾನ ವಿಭಾಗದಲ್ಲಿ ಸತ್ಯಮೂರ್ತಿ ದೇರಾಜೆ ಹಾಗೂ ಎಂ ಟಿ ಶಾಂತಿಮೂಲೆ ಮೊದಲಾದವರು ಸೇರಿಕೊಂಡು ಮೂರ್ನಾಲ್ಕು ಕಡೆಗಳಲ್ಲಿ ಯಕ್ಷಗಾನ ಪ್ರಸಂಗಗಳನ್ನು ಮಾಡಿದರು. ಆ ತಾಳಮದ್ದಳೆಯ ಮುಖ್ಯ ಉದ್ದೇಶ ಪ್ರಜಾಪ್ರಭುತ್ವದ ರಕ್ಷಣೆಯಾಗಿತ್ತು. ನಿರಂಕುಶ ಅಧಿಕಾರ ನಡೆಸುತ್ತಿದ್ದ ರಾಜರ ಕಥೆಗಳ ಮೂಲಕ ಅವರಿಗೆ ಕೊನೆಗೂ ಸೋಲುಂಟಾಗುತ್ತದೆ ಅಥವಾ ಸಾವು ಸಂಭವಿಸುತ್ತದೆ ಹಾಗೂ ಜನರು ಅವರ ಮೇಲೆ ದಂಗೆಯೇಳುತ್ತಾರೆ ಎನ್ನುವ ರೀತಿಯ ಪ್ರಸಂಗಗಳನ್ನು ಮಾಡಿದೆವು. ಹಾಗಾಗಿ ನಮ್ಮ ಮೇಲೆ ಎಲ್ಲರಿಗೂ ಒಂದು ಕಣ್ಣಿತ್ತು.

ಆಗ ಪ್ರಗತಿಪರರು ಎನ್ನಿಸಿಕೊಂಡಿದ್ದ ಲೇಖಕರೊಬ್ಬರು ನಮ್ಮ ಹೆಸರುಗಳನ್ನೆಲ್ಲ ಸರಕಾರಕ್ಕೆ ಕೊಟ್ಟಿದ್ದರು. ಆದರೆ ಅಷ್ಟರಲ್ಲಾಗಲೇ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಂಡ ಕಾರಣ ನಮಗೇನೂ ತೊಂದರೆಯಾಗಲಿಲ್ಲ. ನಮ್ಮ ಗುಂಪಿನ ಉಳಿದವರೆಲ್ಲ ಸ್ವತಂತ್ರವಾಗಿ ಇದ್ದವರು. ನಾನು ಮಾತ್ರ ಸರಕಾರಿ ಕೆಲಸದಲ್ಲಿದ್ದ ಕಾರಣ ನಾನು ನನ್ನನ್ನು ರಕ್ಷಿಸಿಕೊಳ್ಳುವ ಅಗತ್ಯವಿತ್ತು. ಮನೆಯ ಪರಿಸ್ಥಿತಿಯೂ ಸರಿಯಿಲ್ಲದ ಕಾರಣ ಸರಕಾರಿ ಸಂಬಳ ಬಹಳ ಮುಖ್ಯವಾಗಿತ್ತು. ಜೊತೆಗೆ ಪ್ರತಿಭಟನೆಯ ಸ್ವರವನ್ನು ನಾನು ನವ್ಯ ಚಳವಳಿಯಿಂದ ಕಲಿತಿದ್ದ ಕಾರಣ, ಅದನ್ನೂ ಇಟ್ಟುಕೊಂಡು ಇದನ್ನೂ ಬಿಡದೆ ಎರಡು ದೋಣಿಯ ಮೇಲೆ ಕಾಲಿಟ್ಟ ಶೂರನ ಹಾಗೆ ನಾನು ನಡೆದುಕೊಳ್ಳುವ ಅಗತ್ಯವಿತ್ತು.

ಹೀಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಪ್ರತಿಭಟನೆಯನ್ನು ನಾವು ‘ಸುಮನಸಾ’ ವಿಚಾರ ವೇದಿಕೆಯ ಮೂಲಕ ತುರ್ತು ಪರಿಸ್ಥಿತಿಯ ಕಾಲದಲ್ಲಿ ಮಾಡಿದ್ದೆವು ಎನ್ನುವುದು ನನ್ನ ಮನಸ್ಸಿಗೆ ನೆಮ್ಮದಿ ಹಾಗೂ ಸಂತೋಷವನ್ನು ಕೊಟ್ಟಂತಹ ವಿಷಯ.

ಇದರಿಂದ ನನಗೆ ತುಂಬಾ ಜನರ ಪರಿಚಯವಾಯಿತು. ಕೆ ವಿ ಸುಬ್ಬಣ್ಣನಂತಹ ಹಿರಿಯರು ನನಗೆ ಪರಿಚಯ ಆಗಿದ್ದು ಈ ಪ್ರತಿಭಟನೆಯ ಮೂಲಕವಾಗಿಯೇ. ಎಷ್ಟೋ ವಿಷಯಗಳಲ್ಲಿ ಅವರು ನನಗೆ ಸಲಹೆ-ಸೂಚನೆಗಳನ್ನು ಕೊಡುತ್ತಿದ್ದರು. ಅಷ್ಟೇ ಅಲ್ಲದೆ ಆಗ ಜಾರ್ಜ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡುವ ಅವಕಾಶವೂ ನನಗೆ ದೊರಕಿತು. ಇಂದಿರಾ ಗಾಂಧಿಯ ಬಹಳ ದೊಡ್ಡ ವಿಮರ್ಶಕರಾಗಿದ್ದ ಅವರು ಮಂಗಳೂರಿಗೆ ಬಂದಿದ್ದರು. ಅವರು ಬರುವುದು ಗೊತ್ತಾದಾಗ ನನಗೆ ಯಾರೋ ಸೂಚನೆಯನ್ನು ಕೊಟ್ಟು, ಕಂಕನಾಡಿ ಸಮೀಪದಲ್ಲಿ ಅವರು ಉಳಿದುಕೊಂಡಿದ್ದ ಮನೆಗೆ ಹೋಗಿ ಭೇಟಿ ಮಾಡಿ ದೇಶದ ಪರಿಸ್ಥಿತಿ ಹೇಗಿದೆ ಹಾಗೂ ಪ್ರತಿಭಟನೆಯ ಸ್ವರೂಪ ಹೇಗಿದೆ ಎನ್ನುವ ಮಾಹಿತಿಯನ್ನು ಅವರಿಂದ ನಾನು ಪಡೆದುಕೊಂಡಿದ್ದೆ. ಅಷ್ಟೇ ಅಲ್ಲದೆ ನ ಕೃಷ್ಣಪ್ಪ ಎನ್ನುವ ಆರ್ ಎಸ್ ಎಸ್ ನ ಮುಖಂಡರನ್ನೂ ನಾನು ಭೇಟಿಯಾಗಿದ್ದೆ.

ಪುತ್ತೂರಿಗೆ ಬಂದಿದ್ದ ಅವರು ನನ್ನ ಸಂಬಂಧಿಕರೊಬ್ಬರ ಮೂಲಕ ನನಗೆ ಹೇಳಿಕಳುಹಿಸಿದ್ದರು. ಅವರ ಬಗ್ಗೆ ಕೇಳಿ ತಿಳಿದಿದ್ದ ನನಗೆ ಅವರನ್ನು ಭೇಟಿ ಮಾಡಿದ ಮೇಲೆ ಅವರೊಬ್ಬ ಮುತ್ಸದ್ಧಿ ಎನ್ನುವುದು ತಿಳಿಯಿತು. ಅಷ್ಟೇ ಅಲ್ಲದೆ ಅವರು ನನ್ನ ಬಗ್ಗೆ ಎಲ್ಲ ವಿಷಯವನ್ನು ಕೇಳಿ ತಿಳಿದುಕೊಂಡಿದ್ದರು. ಅವರೊಂದಿಗೆ ಮಾತನಾಡಿ ಕೆಲವು ವಿಷಯಗಳನ್ನು ತಿಳಿದುಕೊಂಡು ಅದನ್ನು ಕೂಡಾ ನಮ್ಮ ಪತ್ರಿಕೆಯಲ್ಲಿ ಅಳವಡಿಸಿಕೊಂಡೆ. ಅವರು ‘ಕಹಳೆ’ ಪತ್ರಿಕೆಯ ಸಂಪಾದಕ ವರ್ಗಕ್ಕೆ ನನ್ನನ್ನು ಸೇರಿಸಿಕೊಂಡರು. ಸುಳ್ಯದ ಸಮೀಪ ತೊಡಿಕಾನದಲ್ಲಿದ್ದ ಉರಿಮಜಲು ವಸಂತ ಎನ್ನುವವರು ಅದರ ಮುಖ್ಯಸ್ಥರಾಗಿದ್ದರು. ಕಾಡಿನ ಮಧ್ಯದ ಒಂದು ಜಾಗದ ಮೂಲೆಯಲ್ಲಿ ಒಂದು ಮುದ್ರಣ ಯಂತ್ರವನ್ನು ಇಟ್ಟಿದ್ದರು. ಅಲ್ಲಿ ಒಂದು ಮೀಟಿಂಗ್ ಮಾಡಿ, ಪತ್ರಿಕೆಗೆ ಹೇಗೆ ಹೊಸರೂಪ ಕೊಡಬೇಕು ಹಾಗೂ ಬೌದ್ಧಿಕವಾಗಿ ಪತ್ರಿಕೆಯನ್ನು ಹೇಗೆ ಗಟ್ಟಿಗೊಳಿಸಬೇಕು ಎನ್ನುವ ಸಲಹೆಯನ್ನು ನನ್ನಿಂದ ಪಡೆದುಕೊಂಡರು. ಇದೆಲ್ಲ ನಡೆಯುತ್ತಿದ್ದ ಸಮಯದಲ್ಲಿ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊಳ್ಳಲಾಯಿತು ಹಾಗೂ ನಮ್ಮ ಬಹುತೇಕ ಚಟುವಟಿಕೆಗಳು ಆ ನಿಟ್ಟಿನಲ್ಲಿ ಕೊನೆಯಾದವು. ಆಮೇಲೆ ನಮ್ಮ ಎಂದಿನ ಚಟುವಟಿಕೆಗಳಿಗೆ ಮರಳಿದೆವು.