ಬಟ್ಟೆ ಮತ್ತು ಹಸಿವು

ರಾತ್ರಿಗಳಲ್ಲಿ ಬಿಳಿಪಾಚಿ
ಹೀರುವ, ಸ್ರವಿಸುವ ದೇಹವೆ
ಸುರಿದು, ಬಳೆದು ತುಂಬಿಕೊ
ನಾಭಿಯಾಳದ ಬೆವರಿನೊಂದಿಗೆ ಹರಿದು
ಇಕ್ಕೆಲಗಳಲ್ಲಿ ಇಳಿಯಲಿ

ಮೈ ತುಂಬ ಬಟ್ಟೆ ತೊಟ್ಟರು
ಬೆತ್ತಲೆ ಕಾಣುವ
ಜಗದ ಕಣ್ಣಿಗೆ ಪರಿವೆಯಿಲ್ಲ
ಬಟ್ಟೆಗಳಿಗೂ ಹಸಿವು
ಏರಿಳಿತಗಳನ್ನು
ಬಿಡದಂತೆ ತಬ್ಬಿ ಆನಂದಿಸುತ್ತವೆ

ಖಾಲಿ ಡಬ್ಬಿಯೊಳಗೆ
ಕೈಯಾಡಿಸುವಾಗ ಒಂಭತ್ತು ತಿಂಗಳ ಕುರುಹು
ಒಂಭತ್ತು ಅಂಕಿ ತುಂಬಿಕೊಳ್ಳಲು ಬಿಗಿದುಕೊಳ್ಳುತ್ತದೆ
ಉಳಿದವೆಷ್ಟೋ? ಬೆಳೆದವೆಷ್ಟೋ?

ಬೆವರ ಜಳಕಕ್ಕೆ ಬಯಲೊಳಗೆ ಬಟ್ಟೆ
ಬಟ್ಟೆಗೂ ಹಸಿವು ನೋಡೆ ಅಕ್ಕ!

ತುಂಡು ರೊಟ್ಟಿಯ ಕವಿತೆ

ಕೆಂಪು ಸೈರನ್ ಹುಟ್ಟಿಸುವ ಭಯ
ಕಪ್ಪು ನುಂಗುವ ಕುಲುಮೆ
ಹಳದಿ ಕಣ್ಣಿನ ಬಕಾಸುರ
ಎಲ್ಲರೂ ಗಿರಣಿಯ ಗಿರಾಕಿಗಳೆ

ಹಸಿವಿನ ಚೆಲುವು
ತುಂಬಿದ ಹೊಟ್ಟೆಯ ದುರ್ನಾತ
ನೆಲೆಯಿಲ್ಲದ ಚರಿತ್ರೆಗಳ ಕಥೆ ಹೇಳಿದ
ಮುದುಕ; ಹಸಿದು ಸತ್ತಿದಂತೆ

ಹಸಿದಾಗಸದ ಹೊಟ್ಟೆಗೆ
ಬೋಲ್ಟ್ ಬಿಗಿದು
ಸುತ್ತಿಗೆ ಹಿಡಿದ ಎಡಗೈ ಸವೆಯಾಗಿದೆ
ಅಬ್ಬು ಎಂದೂ
ಬಲಗೈಯನ್ನು ದ್ವೇಷಿಸಲಿಲ್ಲ
ಯಂತ್ರದ ನಾಲಿಗೆ ಬಿಗಿದಿದ್ದ

ಹಸಿವು ಯಾರಪ್ಪನ ಮನಿದು
ತುಂಡು ರೊಟ್ಟಿ ಕೊಡು
ಉಸಿರಿನ ಇಂಧನ ತುಂಬಿ
ಶವಪೆಟ್ಟಿಗೆಯ ಅಸ್ಥಿಪಂಜರ ಬಿಗಿಯಬೇಕು

ಬರೆಯಬೇಕೆನಿಸುತ್ತದೆ,
ಆಗಾಗ ನನ್ನೊಂದಿಗೆ ನಾನೇ ಮಾತು ಬಿಟ್ಟಾಗ
ಹಸಿವು ಹುಟ್ಟದೆ ಹೋಗಿದ್ದರೆ,
ಹುಟ್ಟುತ್ತಿತೆ ಕವಿತೆ?

ಸುಮಿತ್ ಮೇತ್ರಿ ವಿಜಯಪುರ ಜಿಲ್ಲೆಯ ಹಲಸಂಗಿಯವರು.
ಕವಿತೆ/ಲಹರಿ/ಕಥೆ/ಪ್ರಬಂಧಗಳು ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ.
ಫೋಟೋಗ್ರಾಫಿ ಅವರ ಮೆಚ್ಚಿನ ಹವ್ಯಾಸ.
ಸದ್ಯ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

 

(ಕಲೆ: ವ್ಯಾನ್ ಗಾಗ್)