ಆ(ಈ)ಗಲೇ(ಆಗ)ಬೇಕಿದೆ

**

ಗೋರಿ ಕಟ್ಟಿಯಾಗಿದೆ
ಅದರಲ್ಲಿ
ಅಲ್ಲೆಲ್ಲೋ ಅಕ್ರಮದ
ಅರಮನೆಯಲ್ಲಿ ಬಾಳುತ್ತಿರುವ
ಅರಸರ ಪೋಷಾಕಿನ ಸೋಗಿನಲಿ
ಸಾಚಾಗಳಂತೆ ಕಾಣುವ
ಅವಿವೇಕಿಗಳಿಗಾಗಿ
ಆಸನವನ್ನು
ಸಿದ್ಧಮಾಡಲಾಗಿದೆ

ಅಪಸ್ವರಗಳ
ಅಂತರಾಳದ ಕುಹಕತೆಯನ್ನು
ಎಷ್ಟೆಂದು ಸಹಿಸುವುದು
ಖಡ್ಗದ ಮೊನೆಯಲ್ಲಿ ನಿಂತಾದರೂ
ಚುಚ್ಚಲೇಬೇಕಿದೆ
ಮೆತ್ತಿಕೊಳ್ಳುವ
ರಕ್ತಕ್ಕೆ ಜನಿಸಿದವರನ್ನೂ ಬಿಡದಂತೆ

ಸರ್ವನಾಶಕ್ಕೆ ಶವದ ವೇಷ ತೊಡಿಸಿ
ಮೆರವಣಿಗೆ ಮಾಡಿಸಿ
ಕಣ್ಣೀರಿಡುವವರ ನೆತ್ತಿಯಮೇಲೆ
ಹರಿತವಾದ ಕೆಂಪು ಕಲ್ಲನೆಟ್ಟು
ವಿಜಯದ ಕಥೆಯನ್ನು
ಕೆತ್ತಬೇಕಿದೆ.

ಉಟ್ಟ ಬಟ್ಟೆಯಲಿ ಗರತಿಯಂತೆ
ಕಾಣುವ ಅವನ ಷಂಡತನಕ್ಕೆ
ಚುಚ್ಚುವುದರ ಗಾಯ
ಮುಳ್ಳಿಗೂ ಅರಿವಾಗುವಂತೆ ಮಾಡಬೇಕಿದೆ
ಅಚ್ಚರಿಯನ್ನೇ ಕೊಂದು
ಆಚರಣೆಗೆ ಸಿದ್ಧವಾಗುವವರ
ಅನಾಚಾರದ ಪೂಜೆಗೆ
ತುಪ್ಪಸುರಿದಾದರೂ
ಹೊಗೆಯುಣಿಸಬೇಕಿದೆ.

ಅಪ್ಪಟ ಆಪ್ತರಂತೆ ಕಾಣುವ
ಕಪಟಿಗಳಿಗೆ
ಅವಕಾಶವಾದಿಗಳಿಗೆ
ಹರಿದರೂ ಅಂಗಾಲನ್ನು ಪೋಷಿಸುವ
ಚಪ್ಪಲಿಯ ಸೇವೆಯೊಮ್ಮೆ
ಆಗಬೇಕಿದೆ.

 

ಸುರೇಶ ಎಲ್.ರಾಜಮಾನೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯವರು.
ಸಧ್ಯ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಪ್ರಾಥಮಿಕಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿತೆ ಕಥೆ ಗಜಲ್ ಬರವಣಿಗೆ ಇವರ ಹವ್ಯಾಸ.
‘ಸುಡುವ ಬೆಂಕಿಯ ನಗು’, ‘ಮೌನ ಯುದ್ಧ ಮಾತಿಗೂ ಮನಸಿಗೂ’ ಎಂಬ ಎರಡು ಕವನಸಂಕಲನಗಳು ಪ್ರಕಟವಾಗಿವೆ.