ಕೈಯಲ್ಲಿ ಯಾವ ಆಟಿಕೆ ಅಥವಾ ಅಂತಹ ವಸ್ತು ಇಲ್ಲದೆಯೂ ಮೈಮರೆತು ಆಡುತ್ತಿದ್ದ ಆ ಕಾಲದ ಎಲ್ಲ ಮಕ್ಕಳಂತೆ ನಾವು ಕೂಡ…. ಯಾರಿಂದಲೋ ಕಲಿತ ಆಟಗಳು ನಾವೇ ಕಲ್ಪಿಸಿದ ನೋಟಗಳು ಎಲ್ಲವೂ ಅಲ್ಲಿ ಪ್ರಯೋಗಕ್ಕೆ ಬರುತ್ತಿದ್ದವು. ಹೆಚ್ಚು ಎತ್ತರ ಬೆಳೆಯದ ಕಸೆ ಮಾವಿನ ಮರದ ಗೆಲ್ಲನ್ನು ಏರಿ ಕುಳಿತು ಕಾಲು ಹಿಂದೆ ಮುಂದೆ ಆಡಿಸುತ್ತಾ ಗಂಟೆಗಟ್ಟಲೆ ಪುರಾಣ ಹರಟೆ ಕೊಚ್ಚುತ್ತಿದ್ದೆವು. ವಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವನೂ ಪೇಟೆ ಊರು ಹೆಚ್ಚು ತಿರುಗಿದವನೂ ಆದ ಸುಧೀರ ಹೇಳುತ್ತಿದ್ದ ಹಸಿಬಿಸಿ ವಾರ್ತೆಗಳನ್ನು ಬಾಯಿತೆರೆದು ಕೇಳುತ್ತಿದ್ದೆವು. ಅವುಗಳಲ್ಲಿ ಸತ್ಯಘಟನೆಗಳೂ ಕಟ್ಟುಕತೆಗಳೂ ಲಂಗು ಲಗಾಮಿಲ್ಲದೆ ಹರಿದು ಬರುತ್ತಿದ್ದವು.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್

 

“ಚೈಲ್ಡ್ ಹುಡ್” (ಬಾಲ್ಯ) ಮತ್ತು “ನೈಬರ್ ಹುಡ್” (ನೆರೆಹೊರೆ) ಎಂಬ ಶಬ್ದಗಳು ಕೆಲವೊಮ್ಮೆ ಜೊತೆಯಾಗಿ ಮತ್ತೆ ಕೆಲವೊಮ್ಮೆ ಬೇರೆಬೇರೆಯಾಗಿ ಇಂಗ್ಲೆಂಡಿನ ದೈನಿಕದಲ್ಲಿ ಎದುರಾಗುತ್ತಲೇ ಇರುತ್ತವೆ. ಮಕ್ಕಳು ಹಾಗು ಬಾಲ್ಯ, ಅವುಗಳ ಇತಿ ಮಿತಿ, ಅಪಾಯ, ಕಾಳಜಿ, ಎಚ್ಚರ ಹೀಗೆ ಹಲವು ಚರ್ಚೆಗಳು ನಡೆಯುವ ಇಲ್ಲಿ “ಚೈಲ್ಡ್ ಹುಡ್”ಎನ್ನುವ ಶಬ್ದ ನಿತ್ಯ ಕಣ್ಣು ಕಿವಿಗಳನ್ನು ಮುಟ್ಟಿದರೆ ಆಶ್ಚರ್ಯ ಇಲ್ಲ ಬಿಡಿ. ಕೆಲವೊಮ್ಮೆ ಬಾಲ್ಯದ ಭಾಗವಾಗಿಯೋ ಅಥವಾ ಸಮುದಾಯ ಜೀವನದ ವಿಷಯದಲ್ಲೋ ಬಂದು ಹೋಗುವ “ನೈಬರ್ ಹುಡ್” ಕೂಡ ಇಲ್ಲಿನ ತೀರ ಪರಿಚಿತ ಒಂದು ಬಳಕೆ.

(ಸುಧೀರ ಪ್ರಸಾದ್)

ಒಂದೇ ಶಾಲೆಗೆ ಹೋಗುವ ಒಂದು ಬೀದಿಯ ಮಕ್ಕಳು ಒಂದು ಕೇರಿಯ ಮಕ್ಕಳು ಜೊತೆಗೆ ನೆರೆಹೊರೆಯಲ್ಲಿ ಆಡುವುದು, ಅಂಗಡಿಯಲ್ಲೊ ಬಯಲಲ್ಲೊ ಎದುರು ಸಿಕ್ಕಿದಾಗ ಮಾತಾಡುವುದು ಕೆಲವೊಮ್ಮೆ ಕಾಣಿಸುತ್ತದೆ. ಅಲ್ಲದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಕಂಪ್ಯೂಟರ್ ಆಧಾರಿತ ಉಪಕರಣಗಳಲ್ಲಿ ಮುಳುಗಿ ಕಳೆದುಹೋದ ಮಕ್ಕಳು ಹೆಚ್ಚಾಗಿ ಕಂಡುಬರುತ್ತಾರೆ. ಒಂದು ಓಣಿಯಲ್ಲಿ ಅಥವಾ ಕೇರಿಯಲ್ಲಿ ವಾಸಿಸುವವರು ತಮ್ಮ ಬೀದಿಯ ಅಗತ್ಯ ಅನಗತ್ಯಗಳನ್ನು ಮುಂದಿಡುವಾಗಲೋ ಅಥವಾ ತಮ್ಮ ಬೀದಿಯನ್ನು ಹೊಕ್ಕು ಕನ್ನ ಹಾಕಬಹುದಾದ ಕಳ್ಳರ ಮೇಲೆ ಕಣ್ಣಿಡಲೋಸುಗವೋ ನೆರೆಹೊರೆಯವರ ಅನೌಪಚಾರಿಕ ಸಂಘಟನೆಯಾಗಿ ವ್ಯವಹರಿಸುವುದಿದೆ. ತಮ್ಮ ಬೀದಿಯನ್ನು ತಾವೇ ನೆರೆಹೊರೆಯವರು ಕೂಡಿ ಗಮನಿಸುವುದಕ್ಕೆ “ನೈಬರ್ ಹುಡ್ ವಾಚ್” ಎಂದು ಇಲ್ಲಿ ಕರೆಯುತ್ತಾರೆ.

ನನ್ನ ಮಟ್ಟಿಗೆ ಇವರು ಬಳಸುವ ಈ ದೇಶದ “ಚೈಲ್ಡ್ ಹುಡ್” ಮತ್ತು “ನೈಬರ್ ಹುಡ್” ಪದಗಳು ದೂರದವೇ. ನಾನಂತೂ ಇಲ್ಲಿ ಬಾಲ್ಯವನ್ನು ಕಳೆದವನಲ್ಲ. ಮತ್ತೆ ಆಂಗ್ಲರೇ ತುಂಬಿರುವ ಬೀದಿಯಲ್ಲಿ ವರ್ಷಾನುಗಟ್ಟಲೆಯಿಂದ ವಾಸಿಸುತ್ತಿದ್ದರೂ ಅಪರಿಚಿತನಾಗಿರುವವನು. ಬಾಲ್ಯ ಹಾಗು ನೆರೆಹೊರೆಯ ವಿಷಯ ಬಂದಾಗಲೆಲ್ಲ ನನ್ನ ಮನಸ್ಸು ಮರವಂತೆಯನ್ನೇ ಹುಡುಕುತ್ತದೆ ನೆನಪುಗಳನ್ನು ಕೆದಕುತ್ತದೆ. ಹದಿನಾಲ್ಕು ವರ್ಷಗಳಿಂದ ವಾಸಿಸುತ್ತಿರುವ ಇಲ್ಲಿನ ಬೀದಿಯಲ್ಲಿರುವವರಿಗೆ “ಇಂತಹವನೊಬ್ಬ ಇಲ್ಲಿದ್ದಾನೆ” ಎನ್ನುವಷ್ಟರ ಮಟ್ಟಿಗೆ ನನ್ನ ಮುಖ ಪರಿಚಿತವಾದರೂ ನಾನು ಇವರಲ್ಲೊಬ್ಬ ನಾನು ಇದೇ ಕೇರಿಯವ ಅಂತ ನನಗನಿಸದೇ ಇರುವುದಕ್ಕೆ ನಾನು ಇಲ್ಲಿ ಕಳೆಯದ ಬಾಲ್ಯ ಒಂದು ಮುಖ್ಯ ಕಾರಣ ಅಂದುಕೊಳ್ಳುತ್ತೇನೆ.

ಒಂದು ನೆರೆಹೊರೆ ಆಪ್ತ ಆಗಲು ಅಲ್ಲೊಂದು ಬಾಲ್ಯ ಹುಟ್ಟಿರಬೇಕು ಕಟ್ಟಿಕೊಂಡಿರಬೇಕು ಹಾಗು ಒಂದು ಬಾಲ್ಯ ಮಧುರವಾಗಲು ಅಲ್ಲೊಂದು ಅಂದದ ನೆರೆಹೊರೆಯೂ ಇರಬೇಕು. ಹಾಗಾಗಿ ಆಂಗ್ಲ ಭಾಷೆಯ ಪ್ರಾಸದ ಶಬ್ದಗಳಾದ “ಚೈಲ್ಡ್ ಹುಡ್”, ನೈಬರ್ ಹುಡ್” ಗಳು ಅಥವಾ ಕನ್ನಡದ ಬಾಲ್ಯ, ನೆರೆಮನೆ ಅನ್ನುವ ಪದಗಳು ಒಂದನ್ನೊಂದು ಬಿಟ್ಟಿರಲಾರದ ಜೋಡಿ ಜೀವಗಳಂತೆ ಕಣ್ಣೆದುರು ಬರುತ್ತವೆ.


ಇಲ್ಲಿಂದ ಭೌಗೋಳಿಕವಾಗಿ ಬಹಳ ದೂರದಲ್ಲಿ ಕಾಲದ ಅಗಾಧ ಆಳದಲ್ಲಿ ಅಲ್ಲೆಲ್ಲೋ ಬೆಚ್ಚಗೆ ಹುದುಗಿದೆ ಎಂದು ನಾನು ನಂಬುವ, ಬಾಲ್ಯ ಹಾಗು ನೆರೆಹೊರೆಗಳನ್ನು ಜೊತೆಗೆ ನಂಟು ಹಾಕಿದವನೊಬ್ಬನ ಬಗ್ಗೆ ಈಗ ಯೋಚಿಸುತ್ತಿದ್ದೇನೆ. ಈತನ ಬಗ್ಗೆ ಈಗ ಬರೇ ಯೋಚಿಸುವುದು ಬರೆಯುವುದು ಮಾತ್ರ ಸಾಧ್ಯ ಇರುವುದು ಅವನ ಪರಿಚಿತರೆಲ್ಲರ ದೌರ್ಭಾಗ್ಯವೂ ಹೌದು. ಈತ ಸಾಹಿತಿ ನಟ ರಾಜಕಾರಣಿ ಕಲಾವಿದ ಕ್ರೀಡಾಪಟು ಸಂತ ಅಥವಾ ಹೆಸರಾಂತ… ಇನ್ಯಾರೋ ಅಲ್ಲ. ಇವನ ಪರಿಚಯಸ್ಥರಿಗೆ ಮನೆಯವರಿಗೆ ಸಹೋದ್ಯೋಗಿಗಳಿಗೆ ಕಿರಿಯ ಗೆಳೆಯರಿಗೆ ಬಹುಶಃ ಯಾವ ದೊಡ್ಡ ಹೆಸರಿನ ವ್ಯಕ್ತಿ ವಿಷಯಕ್ಕಿಂತ ಹೆಚ್ಚು ಆಪ್ತ ಆದರಣೀಯ ಮತ್ತು ಆಕರ್ಷಣೀಯ ಇವನು. ದೊಡ್ಡ ಹೆಸರಿನ ಮಣಭಾರ ಅವನ ಮೇಲೆ ಯಾರೋ ಒಂದು ವೇಳೆ ಹೊರಿಸಿದ್ದರೂ ಸಂಕೋಚದಲ್ಲಿ ಆ ಹೊರೆಯನ್ನು ಕೆಳಗಿಳಿಸಿ ತಣ್ಣಗೆ ಸಾಗುತ್ತಿದ್ದನೋ ಏನೋ. ಕಳೆದ ವಾರ ಹೊರಟು ಹೋದನಲ್ಲ, ಹಾಗೆ….

ಈತ ನನ್ನ ಎಳವೆಯ ನೆರೆಮನೆಯವನು. ‘ನೆರೆಮನೆಯ ಗೆಳೆಯ’ ಎಂದು ಪರಿಚಯಿಸುವುದೇ ಇವನಿಗೆ ಇಷ್ಟ ಆಗಬಹುದು. ಇವನ ಸರಳ ಸಾಚಾ ಬದುಕಿಗೆ ಆ ಹೆಸರೇ ಹೆಚ್ಚು ಒಪ್ಪುತ್ತದೇನೋ. ಸುಧೀರ ಪ್ರಸಾದ ಮರವಂತೆ- ಹೆಸರಿನ ಜೊತೆಗೆ ಸೇರಿಕೊಂಡಿರುವ ಮರವಂತೆಯಲ್ಲಿ ಇವನ ಮನೆ ನಾನಿದ್ದ ಕೇರಿಯೊಳಗಿನ ಒಂದು ಮನೆ. ಇವ ಮತ್ತು ತಂಗಿ ಶುಭಲಕ್ಷ್ಮಿ, ಉಡುಪಿಯಲ್ಲಿದ್ದ ಇವರ ಕುಟುಂಬ ತಂದೆಯ ಹುಟ್ಟಿನ ಮೂಲದ ಕಾರಣದಿಂದ, ಒಂದು ದಿನ ಹಠಾತ್ತಾಗಿ ಮರವಂತೆಯ ಬದುಕಿಗೆ ಪ್ರವೇಶವಾದರು ಎನ್ನುವುದು ಒಂದನೆಯ ತರಗತಿಯ ಮಸುಕು ಬಾಲ್ಯದ ಸ್ಪುಟವಾದ ನೆನಪು. ಸ್ವಚ್ಛ ಕುಂದಾಪ್ರ ಕನ್ನಡ ಊರಾದ ಮರವಂತೆ, ಅಲ್ಲಿನ ನಮ್ಮ ಕೇರಿ ಓಣಿ ಮತ್ತು ಊರಿನ ಪ್ರಾಥಮಿಕ ಶಾಲೆಯಲ್ಲಿ ಇವರಿಬ್ಬರ ಪ್ರವೇಶದಿಂದ ಉಡುಪಿ ಮಂಗಳೂರುಗಳ ಶೈಲಿಯ ಕನ್ನಡದ ಪದಗಳು ನುಸುಳಿದ್ದವು. ಖುಷಿ ಅಚ್ಚರಿ ನಗೆ ಬೈಗುಳ ಎಲ್ಲಕ್ಕೂ ದಕ್ಷಿಣ ಕನ್ನಡದ ಪೇಟೆ ಊರಿನವರು ಬಳಸುವ ಶಬ್ದಗಳು ಸದ್ದುಗಳು ಹೇಗಿರುತ್ತವೆ ಎಂದು ನನ್ನಂತಹ ಹಳ್ಳಿಮುಕ್ಕರಿಗೆ ಗುರುತು ಹತ್ತಿದ್ದು ಇವರ ಒಡನಾಟದಲ್ಲೇ.

ನಮ್ಮನೆಯಿಂದ ಹತ್ತು ಹೆಜ್ಜೆ ನಡೆದರೆ ಇವನದು, ಅದೇ ಹಾದಿಯಲ್ಲಿ ಅಷ್ಟೇ ಹೆಜ್ಜೆ ತಿರುಗಿ ಬಂದರೆ ನನ್ನದು. ಒಂದಕ್ಕೊಂದು ಕಾಣದ ಆದರೆ ಬಹಳ ಹತ್ತಿರದ ಎರಡು ಮನೆಗಳು ನಮ್ಮವಾದರೂ ನಾವು ಹೆಚ್ಚು ಕೂಡುತ್ತಿದ್ದುದು ಆಡುತ್ತಿದ್ದುದು ಇವನ ಮನೆಯಲ್ಲೇ. ಅದಕ್ಕೆ ಇವನ ಮನೆಯ ಮುಕ್ತ ವಾತಾವರಣ ವಿಶಾಲ ಜಾಗ ಪುಂಡಾಟಿಕೆಯ ಅವಕಾಶಗಳು ಕಾರಣ ಇರಬಹುದು. ಮಕ್ಕಳು ಬಯಸುವ, ಪ್ರಶಸ್ತ ನೆರೆಮನೆ ಅನಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಇವನ ಮನೆಗಿದ್ದವು. ಈಗೆಲ್ಲ ಸಾಮಾಜಿಕ ಮಾಧ್ಯಮಗಳ ಅತಿಯಾದ ಪ್ರಭಾವದಲ್ಲಿ ದೂರದ್ದು ನೆರೆಮನೆಯಂತೆ ತೋರುವುದು, ನೆರೆಮನೆ ಅನತಿ ದೂರದ್ದು ಅಪರಿಚಿತವಾದದ್ದು ಅಂತ ಭಾಸವಾಗುವುದು ಸಾಮಾನ್ಯವಾಗಿ ಹೋಗಿದೆ.

ನಾನಂತೂ ಇಲ್ಲಿ ಬಾಲ್ಯವನ್ನು ಕಳೆದವನಲ್ಲ. ಮತ್ತೆ ಆಂಗ್ಲರೇ ತುಂಬಿರುವ ಬೀದಿಯಲ್ಲಿ ವರ್ಷಾನುಗಟ್ಟಲೆಯಿಂದ ವಾಸಿಸುತ್ತಿದ್ದರೂ ಅಪರಿಚಿತನಾಗಿರುವವನು. ಬಾಲ್ಯ ಹಾಗು ನೆರೆಹೊರೆಯ ವಿಷಯ ಬಂದಾಗಲೆಲ್ಲ ನನ್ನ ಮನಸ್ಸು ಮರವಂತೆಯನ್ನೇ ಹುಡುಕುತ್ತದೆ ನೆನಪುಗಳನ್ನು ಕೆದಕುತ್ತದೆ.

ಸುಮಾರು ಮೂವತ್ತೈದು ನಲವತ್ತು ವರ್ಷಗಳ ಹಿಂದಿನ ಬಾಲ್ಯ ಕಾಲದ ರಮ್ಯಲೋಕದ ಅದಮ್ಯ ಅನುಭವಗಳಲ್ಲಿ ನೆರೆಮನೆ ನೆರೆಮನೆಯಾಗಿತ್ತು, ಕೆಲವೊಮ್ಮೆ ಅರಮನೆಯೂ ಅಂತ ಅನಿಸುತ್ತಿತ್ತು. ಆಟ ಕುಣಿತ ಊಟ ತುಂಟಾಟ ಕಲೆಯುವುದು ಕೇಕೆ ಹಾಕುವುದು ಬೀಳುವುದು ಉರುಳುವುದು ಏಳುವುದು ಜಗಳಾಡುವುದು ದೋಸ್ತಿ ಬಿಡುವುದು ಮತ್ತೆ ಗೆಳೆಯರಾಗಿ ನಲಿಯುವುದು ಎಲ್ಲ ನೆರೆಮನೆಯಲ್ಲೇ. ಎಲ್ಲರ ಬಾಲ್ಯದಲ್ಲೂ ಅಂತಹ ಒಂದೋ ಎರಡೋ ನೆರೆಮನೆಗಳು ಇರಬಹುದು. ಮತ್ತೆ ಅಂತಹ ಮನೆ ಹಾಗು ಆ ಮನೆಯ ಗೆಳೆಯರು ಜೀವನದುದ್ದಕ್ಕೂ ನೆನಪಾಗುತ್ತಲೇ ಇರಬಹುದು. ಶಾಲೆ ಮುಗಿಸಿ ನಿತ್ಯ ಸಾಯಂಕಾಲ, ಶನಿವಾರ ಮಧ್ಯಾಹ್ನದ ನಂತರ ಆದಿತ್ಯವಾರದ ಯಾವ ಹೊತ್ತಿಗಾದರೂ ಯಾರ ವಿಶೇಷ ಆಮಂತ್ರಣ ಇಲ್ಲದೆಯೂ ಮನಸನ್ನು ಸೆಳೆದಂತಾಗಿ ಕಾಲುಗಳು ಯಾರ ಒಪ್ಪಿಗೆಗೆ ಕಾಯದೆ ಕೇಳದೆ ತಮ್ಮಷ್ಟಕ್ಕೆ ಹೆಜ್ಜೆ ಹಾಕುತ್ತಿದ್ದ ನೆರೆಮನೆ ಅದು.

ಅಗಲವಾದ ಅಂಗಳ ಸುವಿಶಾಲವಾದ ತೋಟ ತೆಂಗು ಅಡಿಕೆ ಮಾವು ಪಪ್ಪಾಯ ಬೇವು ಲಿಂಬೆ ಗುಲಾಬಿ ಅಬ್ಬಲಿಗೆ ಮಲ್ಲಿಗೆ ಜಾಜಿ ಎಲ್ಲವೂ ಇತ್ತು ಸುಧೀರನ ಮನೆಯಲ್ಲಿ. ಅಂದು ಇವನ ಹಿತ್ತಿಲಲ್ಲಿ ಇದ್ದ ಹಲವು ಬಗೆಯ ಗಿಡ ಬಳ್ಳಿ ಮರಗಳು ಇಂದು ಇಲ್ಲವಾದರೂ ಈಗಲೂ ಮರವಂತೆಯ ಕೆಲವು ಸ್ವಚ್ಛ ಸುಂದರ ತೋಟಗಳಲ್ಲಿ ಇವನ ಮನೆಯದೂ ಒಂದು. ಅಲ್ಲಿನ ಮಣ್ಣಿನ ಅಂಗಳ, ಕಾಂಕ್ರೀಟ್ ತಾರಸಿ, ನೀರು ಟ್ಯಾಂಕ್, ಹುಲ್ಲಿನ ಕರಡ, ನಳನಳಿಸುವ ಹಿತ್ತಿಲು ಎಲ್ಲವೂ ನಮ್ಮ ಆಡಂಬೊಲದ ಭಾಗವೇ ಆಗಿದ್ದವು. ಇವರ ಮನೆಯ ಯಾವ ಕೋಣೆಯಲ್ಲಿ ಹಿತ್ತಿಲ ಯಾವ ಮೂಲೆಯಲ್ಲಿ ತೆಂಗು ಅಡಿಕೆ ಬಾಳೆ ಮಾವುಗಳ ನೆರಳಲ್ಲಿ ನಾವು ಆಟ ಆಡಿಲ್ಲ ಎನ್ನುವ ಹಾಗಿಲ್ಲ. ಇವರ ಮನೆಯ ಆವರಣದ ಪ್ರತಿ ಅಂಗುಲವೂ ನಮ್ಮನ್ನು ಆಡಿಸಿ ಪೋಷಿಸಿ ನಲಿಸಿ ಕುಣಿಸಿವೆ.

ಕೈಯಲ್ಲಿ ಯಾವ ಆಟಿಕೆ ಅಥವಾ ಅಂತಹ ವಸ್ತು ಇಲ್ಲದೆಯೂ ಮೈಮರೆತು ಆಡುತ್ತಿದ್ದ ಆ ಕಾಲದ ಎಲ್ಲ ಮಕ್ಕಳಂತೆ ನಾವು ಕೂಡ…. ಯಾರಿಂದಲೋ ಕಲಿತ ಆಟಗಳು ನಾವೇ ಕಲ್ಪಿಸಿದ ನೋಟಗಳು ಎಲ್ಲವೂ ಅಲ್ಲಿ ಪ್ರಯೋಗಕ್ಕೆ ಬರುತ್ತಿದ್ದವು. ಹೆಚ್ಚು ಎತ್ತರ ಬೆಳೆಯದ ಕಸೆ ಮಾವಿನ ಮರದ ಗೆಲ್ಲನ್ನು ಏರಿ ಕುಳಿತು ಕಾಲು ಹಿಂದೆ ಮುಂದೆ ಆಡಿಸುತ್ತಾ ಗಂಟೆಗಟ್ಟಲೆ ಪುರಾಣ ಹರಟೆ ಕೊಚ್ಚುತ್ತಿದ್ದೆವು. ವಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವನೂ ಪೇಟೆ ಊರು ಹೆಚ್ಚು ತಿರುಗಿದವನೂ ಆದ ಸುಧೀರ ಹೇಳುತ್ತಿದ್ದ ಹಸಿಬಿಸಿ ವಾರ್ತೆಗಳನ್ನು ಬಾಯಿತೆರೆದು ಕೇಳುತ್ತಿದ್ದೆವು. ಅವುಗಳಲ್ಲಿ ಸತ್ಯಘಟನೆಗಳೂ ಕಟ್ಟುಕತೆಗಳೂ ಲಂಗು ಲಗಾಮಿಲ್ಲದೆ ಹರಿದು ಬರುತ್ತಿದ್ದವು. ಕನ್ನಡ ಸಿನೆಮಾಗಳಿಂದ ಹಿಡಿದು ಉಡುಪಿಯ ಭೂಗತ ಜಗತ್ತಿನ ವ್ಯಕ್ತಿ ವಿಷಯಗಳ ಚಿತ್ರಣ ರೋಚಕತೆ ಹುಟ್ಟಿಸುತ್ತಿದ್ದವು. ಭಾರತದೊಳಗಿನ “ವಿಶ್ವವ್ಯಾಪಿ” ಕ್ರಿಕೆಟಿನ ಜೊತೆಗೆ ನಮ್ಮ ಮಣ್ಣಿನ ಚಿಣ್ಣಿ ದಾಂಡು, ಗೋಲಿ, ಕಡ್ಡಿ ಆಟ ಹೀಗೆ ಆಟಗಳ ಅಸಂಖ್ಯ ಪ್ರಕಾರಗಳು ನಮ್ಮನ್ನು ರಮಿಸುತ್ತಿದ್ದವು.

ಇವನ ಮನೆಯ ತೋಟದ ಸಮೀಪದ “ಹಾಡಿ”, “ಹಕ್ಲು” ಗಳಲ್ಲಿ ನೆಲಮಟ್ಟದ ಕೆಂಪು ಕಿಸ್ಕಾರು ಹಣ್ಣು ತಿನ್ನುತ್ತಾ ಆಮೇಲೆ ನೇರಳೆ ಮರ ಹತ್ತಿ ಹಣ್ಣುಗಳನ್ನು ಆಯ್ದು ಕೊಯ್ದು ನಾಲಿಗೆ ತುಟಿಗಳ ಬಣ್ಣ ಬದಲಿಸಿಕೊಂಡು ಮನೆಯಲ್ಲಿ ಬೈಯಿಸಿಕೊಳ್ಳುತ್ತಿದ್ದುದೂ ಇದೆ.

ಎಂತಹ ಬಾಲ್ಯವೇ ಆದರೂ ಕಾಲದ ಚಲನೆಯಲ್ಲಿ ಪಲ್ಲಟಗೊಂಡು ಬದುಕಿನ ಗಂಭೀರ ತಿರುವುಗಳಲ್ಲಿ ಮರೆಯಾಗಿ ಮಸುಕಾಗಿ ನೆನಪಿನ ಹರಳುಗಳಾಗಿಯಷ್ಟೇ ಕೊನೆಗೆ ಕೈಗೆ ಸಿಗುತ್ತದೆ. ಬಾಲ್ಯದ ನಗು ಕಿಲಕಿಲಗಳು ಕರಗಿ ವಿದ್ಯಾಭ್ಯಾಸದ ಗಂಭೀರ ಮುಖಮುದ್ರೆ ನಮ್ಮನ್ನು ಆವರಿಸಿದ ಹೊತ್ತಲ್ಲಿ ನಮ್ಮ ಕೇರಿಯ ಕಣ್ಣಳತೆಯಿಂದ ನಾವು ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಮುಖ ಮಾಡಿದೆವು. ಹಾಗೆ ನನ್ನ ಗೆಳೆಯನೂ ಬೆಂಗಳೂರಿನಲ್ಲಿ ಐಟಿ ತಂತ್ರಜ್ಞಾಗಿ ನೆಲೆಯೂರಿದ. ಮರವಂತೆಯಂತಹ ಒಂದು ಹಳ್ಳಿಯೂರಿನಲ್ಲಿ ಬೆಳೆದು ಪೂರ್ಣಪ್ರಮಾಣದ ಐಟಿ ತಂತ್ರಜ್ಞಾಗಿ ವೃತ್ತಿಜೀವನಕ್ಕೆ ಕಾಲಿಟ್ಟ ಮೊದಲ ಒಂದೆರಡು ಹೆಸರುಗಳಲ್ಲಿ ಈ ಗೆಳೆಯನ ಹೆಸರೂ ಬರುತ್ತದೆ.

ಪೂರ್ಣ ಪ್ರಮಾಣದ ತಂತ್ರಜ್ಞ ಯಾಕೆಂದರೆ ಇವನಿಗೆ ಐಟಿಯ ಉದ್ದ ಅಗಲ ಆಳ ನಿಜವಾಗಿಯೂ ತಿಳಿದಿತ್ತು. ಕಂಪ್ಯೂಟರ್ ಗಳ ಬಗ್ಗೆ ಮೇಲಿಂದ ಮೇಲೆ ತಿಳಿದುಕೊಂಡು ಅಥವಾ ಆ ವಿಭಾಗದ ಯಾವುದೊ ಒಂದು ಬಗೆಯ ವಿಷಯ ಮಾತ್ರ ಅರಿತು ಮಾಡಬಹುದಾದ ಕೆಲಸಗಳು ಉದ್ಯೋಗಗಳು ಕೆಲವು ಇವೆ. ಸುಧೀರ ತನ್ನ ಶಾಲಾ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಪಡೆದವ ಅಲ್ಲವಾದರೂ ಬಹುಬೇಡಿಕೆಯ ಬಹುಅಗತ್ಯದ ಐಟಿ ಹಾಗು ಆ ಉದ್ಯಮವನ್ನು ಚೆನ್ನಾಗಿ ತಿಳಿದವನಾಗಿದ್ದ ಮತ್ತು ತಿಳಿಸಬಲ್ಲವನಾಗಿದ್ದ. ತಾನು ಸೇರಿದ ಕಂಪನಿಯನ್ನು ಒಬ್ಬನೇ ನಿಭಾಯಿಸಿ, ಎಳೆಯರನ್ನು ತರಬೇತಿಗೊಳಿಸಿ, ಕೆಲಸ ಹುಡುಕಿ ಬೆಂಗಳೂರು ಸೇರಿದ ಮರವಂತೆ ಮಕ್ಕಳನ್ನು ತನ್ನ ಜೊತೆ ಸೇರಿಸಿಕೊಂಡು ವೃತ್ತಿ ಅನುಭವ ದೊರಕಿಸಿ, ಒಂದು ಆಧಾರ ಸಂಸ್ಥೆಯಾಗಿ ಬೆಳೆದ.

ಇವನ ಜೊತೆ ಕೆಲಸ ಮಾಡಿದವರು ಇವನಿಂದ ತರಬೇತಿ ಪಡೆದವರು ಇವನ ಐಟಿ ಜ್ಞಾನಕ್ಕೆ, ಸಹಾಯ ಮಾಡುವ ಸ್ವಭಾವಕ್ಕೆ ಮಾರುಹೋದವರೇ. ಇವನನ್ನುಆದರ್ಶ ಎಂದು “ಇನ್ಸ್ಪಾಯರಿಂಗ್” ಎಂದು ಕರೆದು ಕೊಂಡಾಡುವ ಇವನ ವೃತ್ತಿ ಸ್ನೇಹಿತರು, ಸಹೋದ್ಯೋಗಿಗಳು ಹಲವರಿದ್ದಾರೆ. ಹಿಂದಿಯ “ತ್ರೀ ಈಡಿಯಟ್ಸ್” ಸಿನೆಮಾದಲ್ಲಿ ಅಮಿರ್ ಖಾನನ ಪಾತ್ರವನ್ನು ಚಿತ್ರಿಸುವ “ಬೆಹತಿ ಹವಾ ಸಾ ಥಾ ವೊ..” (ಹರಿಯುವ ಗಾಳಿಯಂತಿದ್ದ ಅವನು… ) ಎನ್ನುವ ಹಾಡಿದೆ. ಸುಧೀರನನ್ನು ಹತ್ತಿರದಿಂದ ಬಲ್ಲವರೊಬ್ಬರು ಕಳೆದ ವಾರ ಈ ಹಾಡನ್ನು ನೆನಪಿಸಿಕೊಂಡರು. ಇವನ ಜೊತೆಗಿನ ನೆನಪುಗಳನ್ನು ಹೀಗೆ ಪೋಣಿಸುತ್ತಾ ಹೋದರೆ ಉದ್ದದ ಬೆಳೆಯುತ್ತಲೇ ಇರುವ ಸುಗಂಧದ ಮಾಲೆಯಾದೀತು.

ಅನಾರೋಗ್ಯ ಅಕಾಲಿಕವಾಗಿ ಬಾಧಿಸಿ ಕಳೆದ ವಾರ ಹೊರಟು ಹೋದ ಸುಧೀರ ಈಗ ನಿರಂತರ ಬೀಸುವ ನೆನಪಿನಂತೆ; ಮರವಂತೆಯ ಬಾಲ್ಯದಲ್ಲಿ ನೆರೆಹೊರೆಯಲ್ಲಿ ಘಳಿಗೆ ಘಳಿಗೆಗೆ ದಿಕ್ಕು ಬದಲಿಸುವ ತುಂಟ ಗಾಳಿಯಂತೆ ಹರಿದಾಡಿಕೊಂಡಿದ್ದಾನೆ. ಆಟ ಹರಟೆ ತುಂಟತನ ಉಡಾಫೆ ಸ್ನೇಹ ಸಹಾಯ ಪ್ರವೃತ್ತಿ ಸಾಹಸಗಳಿಂದಲೇ ಕೂಡಿದ ಈತ, ಬಾಲ್ಯ ಹಾಗು ನೆರೆಹೊರೆಗಳು ಮಾತಾಡಿಕೊಂಡು ಜೊತೆಯಾಗಿ ಹೊಸೆದ ನೇಯ್ಗೆಯಂತೆ ಕಾಣಿಸುತ್ತಿದ್ದಾನೆ.

ಆಂಗ್ಲರು ದಿನನಿತ್ಯ ಬಳಸುವ ಚಂದದ ಪ್ರಾಸದ “ಚೈಲ್ಡ್ ಹುಡ್” ಹಾಗು “ನೈಬರ್ ಹುಡ್” ಪದಗಳ ಸದ್ದುಗಳು ಇಲ್ಲಿ ಎದುರಾದಾಗಲೆಲ್ಲ ಎಂದಿಗೂ ಕಾಡುತ್ತಿರುತ್ತಾನೆ.