“ಕೆಲವು ವಿದ್ವಾಂಸರ ಪ್ರಕಾರ ಉಮರನು ಸೂಫಿ ಸಂತ. ಇನ್ನೊಂದು ಕಡೆ ಅವನು ಒಬ್ಬ ವೈಜ್ಞಾನಿಕ ಮನೋಭಾವದ ಅವನ ಕಾಲ ದೇಶಗಳಿಗಿಂತ ಬಹಳ ಮುಂದಿದ್ದ ತತ್ತ್ವಜ್ಞಾನಿಯಾಗಿದ್ದ ಎನ್ನುವುದನ್ನು ಚಾರಿತ್ರಿಕವಾಗಿ ಸಾಬೀತುಪಡೆಸಲು ಅವಕಾಶಗಳಿವೆ. ಅನೇಕರು ಉಮರ್ ಕುಡಿದಿದ್ದಕ್ಕಿಂತ ಅದರ ಬಗ್ಗೆ ಮಾತಾಡಿದ್ದೇ ಹೆಚ್ಚು ಎಂದು ಅಭಿಪ್ರಾಯ ಪಟ್ಟಿದ್ದಾರೆ”
ಪರ್ಷಿಯಾ ದೇಶದ ಕವಿ, ಗಣಿತಶಾಸ್ತ್ರಜ್ಞ, ತತ್ವಶಾಸ್ತ್ರ ಪಂಡಿತ ಮತ್ತು ಖಗೋಳ ಶಾಸ್ತ್ರಜ್ಞ ಉಮರ್ ಖಯ್ಯಾಮ್‌ನ ರುಬಾಯತ್ ಹೊಸ ಅನುವಾದಕ್ಕೆ ಆರ್. ವಿಜಯರಾಘವನ್ ಬರೆದ ಪ್ರವೇಶಿಕೆ.

 

ಉಮರ್ ಖಯ್ಯಾಮ್ ಕನ್ನಡಿಗರಿಗೆ ಡಿ ವಿ ಗುಂಡಪ್ಪನವರ ಉಮರನ ಒಸಗೆಯಿಂದ ಪರಿಚಿತ. ಡಿವಿಜಿಯವರನ್ನು ಸ್ಮರಿಸದೆ ಖಯ್ಯಾಮನನ್ನು ಕುರಿತು ಕನ್ನಡದಲ್ಲಿ ಮಾತಾಡುವುದು ಕಷ್ಟ ಮಾತ್ರವಲ್ಲ, ಸರಿಯಲ್ಲ ಕೂಡ. ಉಮರನ ಒಸಗೆಯ ಮೊದಲ ಆವೃತ್ತಿ ಪ್ರಕಟವಾದುದು ೧೯೩೦ರಲ್ಲಿ. ಅದನ್ನು ಆಗಾಗ ಪರಿಷ್ಕರಿಸಿ ಐದು ಆವೃತ್ತಿಗಳನ್ನು ಗುಂಡಪ್ಪನವರು ಪ್ರಕಟಿಸಿದರು. ಐದನೆಯದು ಪ್ರಕಟವಾದದ್ದು ೧೯೬೨ರಲ್ಲಿ.

೩೨ ವರ್ಷಗಳ ದೀರ್ಘಕಾಲದಲ್ಲಿ ಒಸಗೆಯ ಅನುವಾದದ ಪರಿಷ್ಕರಣೆಗಳಲ್ಲಿ ಗುಂಡಪ್ಪನವರು ಮೊದಲಿಗೆ ಆಯ್ದುಕೊಂಡ ಮಂಡನೆಯ ಮಾರ್ಗದಲ್ಲಿ ಯಾವ ಗಮನಾರ್ಹ ಬದಲಾವಣೆಗಳೂ ಆಗಲಿಲ್ಲವೆನಿಸುತ್ತದೆ. ಬಹಳ ರುಬಾಯ್‌ಗಳ ಅನುವಾದದಲ್ಲಿ ಅವರು ಮರ್ಮವ ಹಿಡಿವ ಮಾರ್ಗವನ್ನು ಅನುಸರಿಸಿರುವುದು ಕಂಡುಬರುತ್ತದೆ. ಫಿಟ್ಜೆರಾಲ್ಡ್ ೧೦೧ ರುಬಾಯ್‌ಗಳನ್ನು ತನ್ನ ಕೊನೆಯ ಪರಿಷ್ಕರಣೆಯಲ್ಲಿ ಉಳಿಸಿಕೊಂಡಿದ್ದ. ಆದರೆ ಅವುಗಳಲ್ಲಿ ಗುಂಡಪ್ಪನವರು ಅನುವಾದಿಸಿರುವುದು ೮೬ ರುಬಾಯ್‌ಗಳನ್ನು ಮಾತ್ರ. ಅರ್ಥಸಂದಿಗ್ಧತೆಯಿದ್ದ ೧೫ ರುಬಾಯ್‌ಗಳನ್ನು ಅವರು ಬಿಟ್ಟುಬಿಟ್ಟಿದ್ದರು. ಅವುಗಳಲ್ಲಿ ಹಲವು ನಿಜವಾಗಲೂ ಇವು ಫಿಟ್ಜೆರಾಲ್ಡ್‌ನ ಅನುವಾದವೇ ಅನ್ನಿಸುವಷ್ಟು ಭಿನ್ನವಾಗಿದ್ದವು.

ಫಿಟ್ಜೆರಾಲ್ಡ್ ಆಯದೇ ಬಿಟ್ಟಿದ್ದರಲ್ಲಿ ೮೫ ರುಬಾಯಿಗಳನ್ನು ಆಯ್ದು ಅನುವಾದಿಸಿ ಎರಡನೆಯ ಆವೃತ್ತಿಯಲ್ಲಿ ಡಿವಿಜಿ ಸೇರಿಸಿದರು. ಅವೆಲ್ಲ ಖಯ್ಯಾಮನವೇ ಎಂಬುದರ ವಿಚಾರಕ್ಕೆ ಕನ್ನಡ ಹೋಗಿಲ್ಲ. ಏಕೆಂದರೆ ನಮ್ಮಲ್ಲಿ ಕೂಡಾ ಹಲವು ವಚನಕಾರರ, ದಾಸರ ವಿಚಾರದಲ್ಲಿ ಆಗಿರುವಂತೆ ಉಮರ್ ಖಯ್ಯಾಮ್ ಬರೆಯದಿದ್ದ ಹಲವಾರು ರುಬಾಯ್‌ಗಳು ಅವುಗಳಲ್ಲಿ ಕೆಲವು ಕಲ್ಕತ್ತಾ ಆವೃತ್ತಿಯಲ್ಲಿ ಸೇರಿದವೂ ಸೇರಿದಂತೆ, ಅವನ ಹೆಸರಿನಲ್ಲಿ ಸಂಕಲಿತವಾಗಿವೆ.  ಉಮರ್ ಖಯ್ಯಾಮ್‌ನ ರುಬಾಯ್ಗಳ ಹಲವು ಅನುವಾದಗಳು ಬಂದಿವೆ. ಅವುಗಳಲ್ಲಿ ಫಿಟ್ಜೆರಾಲ್ಡ್‌ನದೇ ಅಪ್ರಾಮಾಣಿಕ ಅನುವಾದ ಎನ್ನಲಾಗಿದೆ. ಆದರೂ ಅದೇ ಎಲ್ಲ ಅನುವಾದಗಳಿಗಿಂತ ಕಾವ್ಯಾತ್ಮಕವಾಗಿರುವುದು ಎಂದೂ ಪರಿಗಣಿತವಾಗಿದೆ. ಈ ಕೃತಿಯಷ್ಟು ಓದಲ್ಪಟ್ಟ ಕಾವ್ಯವೇ ಇಂಗ್ಲಿಶ್‌ನಲ್ಲಿ ಇಲ್ಲ ಎನ್ನುವ ಮಾತಿದೆ. ಇದಕ್ಕೆ ಕಾರಣ ಫಿಟ್ಜೆರಾಲ್ಡ್‌ನ ಅಪ್ರಾಮಾಣಿಕವೆನಿಸಿಕೊಂಡ ಅನುವಾದ. ಡಿವಿಜಿಯವರ ಅನುವಾದವೂ ಫಿಟ್ಜೆರಾಲ್ಡ್‌ನ ಅನುವಾದಕ್ಕೆ ನಿಷ್ಠವಾಗಿಲ್ಲ ಎಂದರೆ ಒಟ್ಟು ಅನುವಾದ ಪ್ರಕ್ರಿಯೆಯ ಮೇಲೆಯೇ ಆಗಬೇಕಿರುವ ಚರ್ಚೆಯ ಅಗಾಧತೆಯನ್ನು ಅದು ಸೂಚಿಸುತ್ತದೆ.

ಉಮರನ ಬಗ್ಗೆ ವಿಶಾಲವಾದ ಮುನ್ನುಡಿಯನ್ನು ಡಿವಿಜಿ ಅವರು ಒಸಗೆಯಲ್ಲಿ ಬರೆದಿದ್ದಾರೆ. ಅದು ಅಚ್ಚಿನಲ್ಲಿ ೪೪ ಪುಟಗಳಷ್ಟಿದೆ. ಅದೊಂದು ಸಾಂಸ್ಕೃತಿಕ ಟಿಪ್ಪಣಿ. ಸಹೃದಯಿಯಾದ ಕನ್ನಡ ಪಾಮರರನ್ನುದ್ದೇಶಿಸಿ ಹಲವು ಮಾಹಿತಿಗಳನ್ನು ಕಲೆಹಾಕಿ, ವಿಶ್ಲೇಷಿಸಿ ಬರೆದ ಲೇಖನವದು. ಆದ್ದರಿಂದ ಮತ್ತೊಮ್ಮೆ ಅವರಾಡಿದ ಮಾತುಗಳನ್ನಾಡುವುದು ವ್ಯರ್ಥವೆಂದು ನನ್ನ ಭಾವನೆ. ಆದರೂ ಈ ಕೃತಿಯನ್ನೆತ್ತಿಕೊಳ್ಳುವವರಿಗೆ ನೆರವಾಗುವ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಉಮರ್ ಖಯ್ಯಾಮ್ (ಉಮರ್ ಇಬ್ನ್ ಇಬ್ರಾಹಿಂ ಅಲ್-ಖಯ್ಯಾಮ್ ನಿಶಾಪುರಿ ೧೮ ಮೇ ೧೦೪೮-೪ ಡಿಸೆಂಬರ್ ೧೧೩೧) ಪರ್ಷಿಯಾ ದೇಶದ ಕವಿ, ಗಣಿತಶಾಸ್ತ್ರಜ್ಞ, ತತ್ವಶಾಸ್ತ್ರ ಪಂಡಿತ ಮತ್ತು ಖಗೋಳ ಶಾಸ್ತ್ರಜ್ಞ. ಅವನು ಹುಟ್ಟಿದ್ದು ಕೊರಾಸಾನ್‌ನ ನಿಷಾಪುರದಲ್ಲಿ. ಹನ್ನೊಂದನೆಯ ಶತಮಾನದ ಪೂರ್ವಾರ್ಧದಲ್ಲಿ ಹುಟ್ಟಿದ ಉಮರ್ ಖಯ್ಯಾಮ್ ಹನ್ನೆರಡನೇ ಶತಮಾನದ ಪೂರ್ವಾರ್ಧದಲ್ಲಿ ಮರಣಿಸಿದ.  ಅವನ ಬದುಕಿನ ಜೊತೆ ಇನ್ನಿಬ್ಬರು ಅಸಾಧಾರಣ ವ್ಯಕ್ತಿಗಳು ತಳುಕು ಹಾಕಿಕೊಂಡಿದ್ದಾರೆ. ಮೊದಲನೆಯವನು ಈ ಮೂವರ ವೃತ್ತಾಂತ ಬರೆದ ನಿಜಾಮ್ ಅಲ್ ಮುಲ್ಕ್ ಮತ್ತು ಪರ್ಷಿಯಾವನ್ನು ಗೆದ್ದು ಸೆಲ್ಜುಕ್ಕರ ಆಡಳಿತ ಸ್ಥಾಪಿಸಿದ ತೊಗ್ರುಲ್ ಬೇಗ್. ಯೂರೋಪಿನ ಕೃಸೇಡ್‌ಗಳನ್ನು ಪ್ರಾರಂಭಿಸಿದವನು ಈ ತೊಗ್ರುಲ್ ಬೇಗ್. ನಿಜಾಮ್ ಉಲ್ ಮುಲ್ಕ್ ನಿಷಾಪುರಕ್ಕೆ ಕಲಿಯಲು ಬಂದವನು. ಅವನು ಅಲ್ಲಿಗೆ ಬಂದಾಗ ಅವನು ಕಂಡಿದ್ದು ಉಮರ್ ಖಯ್ಯಾಮ್‌ನನ್ನು ಮತ್ತು ಹಸನ್ ಬೆನ್ ಸಬ್ಬಾಹ್‌ನನ್ನು. ಇಬ್ಬರೂ ಹಾಸ್ಯಗುಣದ ಉದಾತ್ತ ಮನುಷ್ಯರು.

ಖಯ್ಯಾಮನ ಹಲವು ರುಬಾಯ್‌ಗಳು ಮಹತ್ತಿನ ಅಪಾಯಗಳನ್ನು, ಅದೃಷ್ಟದ ಚಂಚಲತೆಯನ್ನು ಕುರಿತಾಗಿವೆ. ಉದಾರತೆಯು ಇರಬೇಕೆನ್ನುತ್ತಲೇ ಯಾರೊಡನೆಯೂ ಅತಿ ಹತ್ತಿರವಿರಬಾರದೆಂಬ ಎಚ್ಚರಿಕೆಯನ್ನೂ ಖಯ್ಯಾಂ ಕೊಡುತ್ತಾನೆ. ಹಾಗೆಯೇ ಅವನು ವಜೀರನ ಬಳಿ ಕೇಳುವುದಿದು, ‘ನೀನು ನನಗೆ ಕೊಡಬಹುದಾದ ಅತಿ ದೊಡ್ಡ ವರ ಎಂದರೆ ನನಗೆ ನಿನ್ನ ಆಸ್ಥಾನದ ಒಂದು ಮೂಲೆಯ ನೆರಳಿನಲ್ಲಿ ಇರಲು ಅವಕಾಶ ಕೊಡು. ನಾನಲ್ಲಿ ವಿಜ್ಞಾನದ ಪ್ರಯೋಜನಗಳನ್ನು ಜನರಿಗೆ ಪರಿಚಯಿಸುತ್ತಾ, ನಿನ್ನ ಒಳಿತಿಗಾಗಿ ಪ್ರಾರ್ಥಿಸಿಕೊಂಡು ಇರುವೆನು’ ಎಂದು. ವಜೀರ ಹೇಳುತ್ತಾನೆ: ತಾನು ಕೊಡಮಾಡಿದ್ದನ್ನು ನಿರಾಕರಿಸಿದ ಖಯ್ಯಾಂ ನಿಜಕ್ಕೂ ಪ್ರಾಮಾಣಿಕ ಎಂದು. ಅಲ್ಲದೆ ವರ್ಷಕ್ಕೆ ೧೨೦೦ ಚಿನ್ನದ ಮಿತ್ಕಲ್‌ಗಳನ್ನು ತನ್ನ ನಿಷಾಪುರದ ಖಜಾನೆಯಿಂದ ಕೊಡಲು ವ್ಯವಸ್ಥೆ ಮಾಡಿದ. ನಿಷಾಪುರದಲ್ಲಿಯೇ ಖಯ್ಯಾಮ್ ಕೊನೆಯುಸಿರು ಎಳೆದದ್ದು. ಜಮಖಾನಗಳ ಗುಡಾರಗಳನ್ನು – ಟೆಂಟುಗಳು – ಹೊಲಿಯುತ್ತಲಿದ್ದದ್ದರಿಂದ ಖಯ್ಯಾಂ ಎಂಬ ಹೆಸರು ಅವನಿಗೆ ಅಂಟಿತ್ತು. ಅವನ ಬಳಿಕ ತಲೆಮಾರುಗಳಲ್ಲಿ ಈ ಹೆಸರನ್ನಿಟ್ಟುಕೊಂಡವರಿದ್ದರು. ಅವನ ಒಂದು ರುಬಾಯಿ ಗಮನಿಸಿ.

ವಿಜ್ಞಾನದ ಟೆಂಟುಗಳ ಹೊಲಿವ ಖಯ್ಯಾಮ್
ದುಃಖದ ಕುಲುಮೆಯಲ್ಲಿ ಬಿದ್ದು ಥಟ್ಟನೆ ಬೆಂದುಹೋಗಿದ್ದಾನೆ
ವಿಧಿಯ ಕತ್ತರಿಗಳು ಅವನ ಬದುಕ ಟೆಂಟಿನ ಹಗ್ಗಗಳನ್ನು ಕತ್ತರಿಸಿಬಿಟ್ಟಿವೆ
ಭರವಸೆಯ ದಲ್ಲಾಳಿ ಅವನನ್ನು ಸುಮ್ಮನೆ ಮಾರಿಬಿಟ್ಟಿದ್ದಾನೆ

ರುಬಾಯ್‌ಗಳು ಚೌಪದಿಗಳು. ಉಮರ್ ಒಂದು ಸಾವಿರ ರುಬಾಯ್‌ಗಳನ್ನು ಬರೆದನೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಅದರಲ್ಲಿ ಐನೂರು ಮಾತ್ರ ಅವನವು ಎಂದು ನಿರ್ಣಯಿಸಲಾಗಿದೆ ಎಂಬ ಅಭಿಪ್ರಾಯವೂ ಇದೆ. ವ್ಯಂಗ್ಯವೆಂದರೆ ಇರಾನಿಯನ್ನರಿಗೆ ಖಯ್ಯಾಮನನ್ನು ಮರುಪರಿಚಯಿಸಿದ್ದು ಫಿಟ್ಜೆರಾಲ್ಡನ ಅನುವಾದಗಳು. ಅವನ್ನು ಗಮನಿಸಿ ಖಯ್ಯಾಮನನ್ನು ಸೂಫಿ ಎಂದೋ ನಾಸ್ತಿಕನೆಂದೋ ವರ್ಗೀಕರಿಸಲಾಗಿದೆ. ಅವನು ಸೂಫಿ ಎನ್ನುವುದಕ್ಕೆ ಉದಾಹರಣೆಯಾಗಿ ಕೊಡುವ ಒಂದು ರುಬಾಯ್ ಹೀಗಿದೆ:

ಓ, ಪ್ರೀತಿಸುವ, ದ್ವೇಷಿಸುವ ಎಲ್ಲರಿಗೂ ಸಮಾಧಾನವಾಗಲು
ದೇವರು ಸ್ವರ್ಗವನ್ನೆಂತೋ ಅಂತೆಯೇ ನರಕವನ್ನೂ ಸೃಷ್ಟಿಸಿದ್ದಾನೆ
ನೀನು ನಿನ್ನ ಆಸ್ಥಾನವನ್ನು ಸ್ವರ್ಗದಲ್ಲಿ ಮಾಡಿಕೊಂಡಿರುವೆ, ನನಗಾವುದೂ ಇಲ್ಲ
ಅಲ್ಲಿ ನಿನ್ನೊಡನಿರಲು ನನ್ನನ್ನೇಕೆ ಆಸ್ಥಾನಕ್ಕೆ ಸೇರಿಸಿಕೊಳ್ಳಲಾರೆ ಹೇಳು

ಮಿಸ್ಟಿಕಲ್ ದೃಷ್ಟಿಕೋನದಿಂದ ನೋಡಲಾಗದಿದ್ದರೆ ಬಹಳ ರುಬಾಯಿಗಳು ಮೌಲ್ಯವಿರದವುಗಳಂತೆ ತೋರುತ್ತವೆ. ಅವು ಅನುವಾದಕ್ಕೆ ಒಗ್ಗುವುದಿಲ್ಲ. ರುಬಾಯಿಗಳ ಹಾಗೆಯೇ ರೂಮಿ, ಹಫೀಜ್, ಅತ್ತಾರ್ ಅವರುಗಳೂ ಮದಿರೆ ಮತ್ತು ಸೌಂದರ್ಯವನ್ನು ಎದುರಿಗೆ ಇರಿಸಿಕೊಂಡು ಹಾಡಿದ್ದಾರೆ. ಅವರೆಲ್ಲರೂ ಉಮರನ ಕುಡಿಯೋಣ, ಏಕೆಂದರೆ ನಾಳೆ ಸಾಯಲಿದ್ದೇವೆ ಎಂಬ ಮನಸ್ಥಿತಿಯ ಸೂಫಿಗಳು. ಖಯ್ಯಾಮನನ್ನು, ಅತ್ತಾರ್ ಹಫೀಜ್, ರೂಮಿಗಳನ್ನು ಈವರೆಗೆ ಸಂಭ್ರಮಿಸಿದವರೆಲ್ಲ ಆನುಭಾವಿಕರಲ್ಲದವರು ಹಾಗೂ ಆರಾಧಕರಲ್ಲದವರು.

ಕೆಲವು ವಿದ್ವಾಂಸರ ಪ್ರಕಾರ ಉಮರನು ಸೂಫಿ ಸಂತ. ಹಾಗೆ ಭಾವಿಸುವವರು ಅವನನ್ನು, ಅವನ ಬಟ್ಟಲನ್ನು, ಸಾಕಿಯನ್ನು ಆ ಹಿನ್ನೆಲೆಯಲ್ಲಿಯೇ ನೋಡುತ್ತಾರೆ. ಇನ್ನೊಂದು ಕಡೆ ಅವನು ಒಬ್ಬ ವೈಜ್ಞಾನಿಕ ಮನೋಭಾವದ ಅವನ ಕಾಲ ದೇಶಗಳಿಗಿಂತ ಬಹಳ ಮುಂದಿದ್ದ ತತ್ತ್ವಜ್ಞಾನಿಯಾಗಿದ್ದ ಎನ್ನುವುದನ್ನು ಚಾರಿತ್ರಿಕವಾಗಿ ಸಾಬೀತುಪಡೆಸಲು ಅವಕಾಶಗಳಿವೆ. ಅನೇಕರು ಉಮರ್ ಕುಡಿದದ್ದು ದ್ರಾಕ್ಷಿಯ ರಸವನ್ನಷ್ಟೇ, ಅವನು ಕುಡಿದಿದ್ದಕ್ಕಿಂತ ಅದರ ಬಗ್ಗೆ ಮಾತಾಡಿದ್ದೇ ಹೆಚ್ಚು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ರುಬಾಯಿಗಳು ಒಂದು ಅಖಂಡದ ಭಾಗಗಳಲ್ಲ. ಅವು ಒಂದೊಂದೂ ಸ್ವಯಂ ಅಖಂಡ. ಅವುಗಳ ಜೋಡಣೆಯಲ್ಲಿ – ಒಂದೆರಡು ಕಡೆ ಹೊರತು – ಒಂದು ಕ್ರಮವಿಲ್ಲ, ಕಾಕತಾಳೀಯವಲ್ಲದೆಡೆ ಅಂತರ್ ಸಂಬಂಧವಿಲ್ಲ. ಇಲ್ಲಿನ ಮೊದಲ ರುಬಾಯಿ ಹುಟ್ಟಿನೊಂದಿಗೆ ಪ್ರಾರಂಭವಾಗಿ ಕೊನೆಯದು ಬಟ್ಟಲು ಬೋರಲು ಹಾಕುವುದರೊಂದಿಗೆ ನಿಲ್ಲುತ್ತದೆ. ಹುಟ್ಟಿ ಬೆಳೆಯುತ್ತ ಮಧುವನ್ನು ಕುಡಿಯುತ್ತ ಉಮರ್ ದೈವನಿಂದಕನೂ ಅದೇ ಕಾಲದಲ್ಲಿ ಮುಕ್ತ ಭಕ್ತನೂ ಆಗಿಬಿಡುತ್ತಾನೆ.

ಖಯ್ಯಾಮನ ಹಲವು ರುಬಾಯ್‌ಗಳು ಮಹತ್ತಿನ ಅಪಾಯಗಳನ್ನು, ಅದೃಷ್ಟದ ಚಂಚಲತೆಯನ್ನು ಕುರಿತಾಗಿವೆ. ಉದಾರತೆಯು ಇರಬೇಕೆನ್ನುತ್ತಲೇ ಯಾರೊಡನೆಯೂ ಅತಿ ಹತ್ತಿರವಿರಬಾರದೆಂಬ ಎಚ್ಚರಿಕೆಯನ್ನೂ ಖಯ್ಯಾಂ ಕೊಡುತ್ತಾನೆ. ಹಾಗೆಯೇ ಅವನು ವಜೀರನ ಬಳಿ ಕೇಳುವುದಿದು, ‘ನೀನು ನನಗೆ ಕೊಡಬಹುದಾದ ಅತಿ ದೊಡ್ಡ ವರ ಎಂದರೆ ನನಗೆ ನಿನ್ನ ಆಸ್ಥಾನದ ಒಂದು ಮೂಲೆಯ ನೆರಳಿನಲ್ಲಿ ಇರಲು ಅವಕಾಶ ಕೊಡು. ನಾನಲ್ಲಿ ವಿಜ್ಞಾನದ ಪ್ರಯೋಜನಗಳನ್ನು ಜನರಿಗೆ ಪರಿಚಯಿಸುತ್ತಾ, ನಿನ್ನ ಒಳಿತಿಗಾಗಿ ಪ್ರಾರ್ಥಿಸಿಕೊಂಡು ಇರುವೆನು’ ಎಂದು. ವಜೀರ ಹೇಳುತ್ತಾನೆ.

ಉಮರನ ಕಾಲದಿಂದಲೇ ಕವಿಯ ಮದಿರೆಯ ವೈಭವೀಕರಿಸಿದ ಗುಣಗಾನವನ್ನು, ಆನಂದದ ಅನುಭೂತಿಯನ್ನು ಆನುಭಾವಿಕ ನೆಲೆಯಿಂದ ಪರಿಶೀಲಿಸುವ ಪ್ರಯತ್ನಗಳು ನಡೆದಿದ್ದವು. ಇದ್ದರೂ ಫಿಟ್ಜೆರಾಲ್ಡ್ ರುಬಾಯತ್‌ಗಳನ್ನು ಅವುಗಳ ಶಾಬ್ದಿಕ ಅರ್ಥಗಳಲ್ಲಿಯೆ ಅರ್ಥಮಾಡಿಕೊಂಡ. ಅವುಗಳ ನೇರ ಗ್ರಹಣದ ಕಾರಣ ಅವನಿಗೆ ರುಬಾಯಿಗಳು ಉಮರನ ಪ್ರಾಮಾಣಿಕ ಅಭಿವ್ಯಕ್ತಿಯಂತೆ ಕಾಣಿಸಿದವು. ಅವನ ಮುಂದಿನ ಪ್ರಶ್ನೆ ಖಚಿತತೆಯಲ್ಲ, ಒತ್ತಾಯವನ್ನು ತಕ್ಕಹಾಗೆ ಗ್ರಹಿಸುವುದು, ಹೇಗೆಂದರೆ, ಒಳಗೆ ಹುಲ್ಲಿಟ್ಟು ಮಾಡಿದ ಹದ್ದಿಗಿಂತ ಮಿಗಿಲಾದ ಬದುಕಿರುವ ಗುಬ್ಬಚ್ಚಿಯನ್ನು ಕಾಣುವಂತೆ.

ಖಯ್ಯಾಮನಿಗೆ ಅರ್ಥವಾಗಿತ್ತು, ಈ ಜಗತ್ತಿನಲ್ಲಿ ಹುಟ್ಟುವುದು ವಿಧಿಬರಹ. ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಸಾವು ಅನಿವಾರ್ಯ. ಈ ದೇಹವನ್ನು ಮಾಡಿದ್ದು ಮಣ್ಣಿನಿಂದ. ಅದು ಸೇರುವುದೂ ಮಣ್ಣಿಗೇ. ನಮಗೆ ಉಳಿದಿರುವುದು ಉರುಳುತ್ತಿರುವ ಕಾಲ ಮಾತ್ರ. ಬದುಕಿನಲ್ಲಿ ಪಡೆಯಬೇಕಿರುವುದು ಆಳದ ಆನಂದ ಮತ್ತು ಅಖಂಡ ಪ್ರೀತಿ. ಉಳಿದ ಎಲ್ಲವೂ ಭ್ರಮೆ ಮತ್ತು ಮಿಥ್ಯೆ.
***
ಪಿಯರೆ ಮಿನಾರ್ಡ್ ಮಿಗುಯೆಲ್ ಸೆರ್ವಾಂಟೆಸ್‌ನ ಡಾನ್ ಕ್ವಿಕ್ಸೋಟ್ ಕೃತಿಯ ಅನುವಾದಕ್ಕೆ ತೆತ್ತುಕೊಂಡ ಎಂಬಂತೆ ಫಿಟ್ಜೆರಾಲ್ಡ್ ತನ್ನ ಪ್ರೀತಿಪಾತ್ರ, ಡಾನ್ ಕ್ವಿಕ್ಸೋಟ್‌ನಂಥದೇ ಚೇತನವುಳ್ಳ ಉಮರ್ ಖಯ್ಯಾಮನ ಅನುವಾದಕ್ಕೆ ತೆತ್ತುಕೊಂಡ. ಬಳಿಕ ಆಶ್ಚರ್ಯಕರ ವಿದ್ಯಮಾನವೊಂದು ಜರುಗಿತು. ಕವಿತೆಗೆ ತೆತ್ತುಕೊಂಡ ಪರ್ಷಿಯನ್ ಜ್ಯೋತಿರ್ವಿಜ್ಞಾನಿ ಮತ್ತು ಆ ಭಾಷೆ, ಸಾಹಿತ್ಯಗಳ ಪೂರ್ಣ ಪರಿಜ್ಞಾನವಿಲ್ಲದಿದ್ದರೂ ಸ್ಪಾನಿಶ್ ಮತ್ತು ಪೌರಾತ್ಯ ಗ್ರಂಥಗಳ ಪರಿಶೀಲನೆಗೆ ತೊಡಗಿಕೊಂಡ ಚಂಚಲ – ತಿಕ್ಕಲ ಇಂಗ್ಲಿಶ್ ಮನುಷ್ಯ ಇವರ ಅಂತರ್‌ಸಂಬಂಧದಿಂದ ಒಬ್ಬ ಅಸಾಮಾನ್ಯ ಕವಿ ಹುಟ್ಟಿಕೊಂಡ; ಅವನು ಇವರಿಬ್ಬರನ್ನೂ ಹೋಲುತ್ತಿರಲಿಲ್ಲ.

ಉಮರನ ಕಾಲದಿಂದಲೇ ಕವಿಯ ಮದಿರೆಯ ವೈಭವೀಕರಿಸಿದ ಗುಣಗಾನವನ್ನು, ಆನಂದದ ಅನುಭೂತಿಯನ್ನು ಆನುಭಾವಿಕ ನೆಲೆಯಿಂದ ಪರಿಶೀಲಿಸುವ ಪ್ರಯತ್ನಗಳು ನಡೆದಿದ್ದವು. ಇದ್ದರೂ ಫಿಟ್ಜೆರಾಲ್ಡ್ ರುಬಾಯತ್‌ಗಳನ್ನು ಅವುಗಳ ಶಾಬ್ದಿಕ ಅರ್ಥಗಳಲ್ಲಿಯೆ ಅರ್ಥಮಾಡಿಕೊಂಡ. ಅವುಗಳ ನೇರ ಗ್ರಹಣದ ಕಾರಣ ಅವನಿಗೆ ರುಬಾಯಿಗಳು ಉಮರನ ಪ್ರಾಮಾಣಿಕ ಅಭಿವ್ಯಕ್ತಿಯಂತೆ ಕಾಣಿಸಿದವು. ಅವನ ಮುಂದಿನ ಪ್ರಶ್ನೆ ಖಚಿತತೆಯಲ್ಲ, ಒತ್ತಾಯವನ್ನು ತಕ್ಕಹಾಗೆ ಗ್ರಹಿಸುವುದು, ಹೇಗೆಂದರೆ, ಒಳಗೆ ಹುಲ್ಲಿಟ್ಟು ಮಾಡಿದ ಹದ್ದಿಗಿಂತ ಮಿಗಿಲಾದ ಬದುಕಿರುವ ಗುಬ್ಬಚ್ಚಿಯನ್ನು ಕಾಣುವಂತೆ.

ಫಿಟ್ಜೆರಾಲ್ಡ್‌ನ ರುಬಾಯತ್, ಬೋರ್ಜೆಸ್ ಅವಕ್ಕೆ ಕೊಡುವ ಎಲ್ಲ ಅರೆಮಿಸ್ಟಿಕಲ್ ಭಾಷೆ ಮತ್ತು ಗೌರವಗಳಿಗೆ ಅರ್ಹವಾಗಿದೆ. ಏಕೆಂದರೆ ಅದು ಇಂಗ್ಲಿಶ್‌ನ ಅತ್ಯಂತ ವಿಲಕ್ಷಣ ಹಾಗೂ ಅತ್ಯದ್ಭುತ, ಅಸಾಧಾರಣ ಕವಿತೆಗಳಲ್ಲಿ ಒಂದು. ಹಾಗೆಯೇ ಅದು ವರ್ಗೀಕರಿಸಲು ಸಾಧ್ಯವಾಗದ್ದು. ಅದಕ್ಕೆ ಬೇರೊಬ್ಬನ ಕವಿತೆಯನ್ನು ಬರೆದ ಫಿಟ್ಜೆರಾಲ್ಡ್‌ನ ಮೆನಾರ್ಡಿಯನ್ ಚಾತುರ್ಯವನ್ನು ಮೆಚ್ಚಬೇಕು. ಆ ಕವಿತೆಯನ್ನು ಉಮರನಿಗಾಗಲಿ, ಫಿಟ್ಜೆರಾಲ್ಡ್‌ಗಾಗಲಿ ಅಂಕಿತಗೊಳಿಸಲು ನಿರಾಕರಿಸಿದ್ದು ಬೋರ್ಜೆುಸ್ ಮಾತ್ರ ಅಲ್ಲ. ಅಂದಿನ ಗ್ರಂಥಪಾಲಕರೆಲ್ಲರಿಗೂ ಇದೇ ಗೊಂದಲವಿತ್ತು. ಯಾರಾದರೂ ಆ ಹೆಸರಿನ ಕವಿತೆಯನ್ನು ಹುಡುಕಬೇಕಾದರೆ ಎರಡೂ ಹೆಸರುಗಳ ಅಡಿಯಲ್ಲಿ ಅದನ್ನು ಹುಡುಕಬೇಕಾಗಿತ್ತು.

ಅನುವಾದವು ಫಿಟ್ಜೆರಾಲ್ಡ್ ಸ್ವಯಂ ಒಪ್ಪಿಕೊಂಡಂತೆ ಮೂಲನಿಷ್ಠವಲ್ಲ. ಆದರೆ ಮೆನಾರ್ಡ್ ಸಮಕಾಲೀನ ಡಾನ್ ಕ್ವಿಕ್ಸೋಟ್ ಒಂದನ್ನು ಬರೆದಂತೆ ಫಿಟ್ಜೆರಾಲ್ಡ್ ಸಮಕಾಲೀನ ರುಬಾಯತ್ ಒಂದನ್ನು ಬರೆಯಲಿಲ್ಲ. ಅವನು ಅನುವಾದದಲ್ಲಿ ಎಲ್ಲ ಸ್ವಾತಂತ್ರ್ಯವನ್ನೂ ತೆಗೆದುಕೊಂಡಿದ್ದ, ಅನುವಾದಿತ ಕೃತಿಗೆ ಮೆರುಗು ಕೊಡುವ ಕೆಲಸವನ್ನೂ ಒಳ್ಳೆಯ ನಂಬಿಕೆಯಲ್ಲೇ ಮಾಡಿದ್ದ. ಅದು ಅವನು ಖಯಮನಿಗೆ ಸಲ್ಲಿಸಿದ ಸೇವೆ. ಅದರ ಪರಿಣಾಮವೂ ಯಾವುದೇ ಸ್ವಾರ್ಥವಿಲ್ಲದ್ದು; ಇದರಲ್ಲಿ ಹುಟ್ಟಿದ ಕೃತಿ ಅದೇ ಸಮಯ ಫಿಟ್ಜೆರಾಲ್ಡ್‌ನ ಸ್ವಂತದ್ದು; ಬೇರೆಯೇ ಆದ ಪ್ರವರ್ಗಕ್ಕೆ ಸೇರಿದ್ದು. ಆ ವರ್ಗ ಬೇರೆಯವರ ಕವಿತೆಯನ್ನು ತಾನು ಬರೆಯುವ ಕೆಲಸ. ಇದು ಫಿಟ್ಜೆರಾಲ್ಡ್‌ನಿಗೇ ಅನನ್ಯವಾದ ಶೈಲಿ. ಅವನ ಅಭ್ಯಾಸವಾಗಿದ್ದ ತಂತ್ರವೆಂದರೆ ತನ್ನ ಮಾತುಗಳನ್ನೇ, ತನ್ನ ಪ್ರತಿಮೆಗಳನ್ನೇ ಇನ್ನೊಬ್ಬರ ಮಾತಿನಂತೆ, ಪ್ರತಿಮೆಯಂತೆ ಸಾದರಪಡಿಸಿಬಿಡುವುದು. ಫಿಟ್ಜೆರಾಲ್ಡ್ ಒಬ್ಬ ಮುಕ್ತ ಅನುವಾದಕ, ಆಕ್ರಾಮಕ ಸಂಪಾದಕ, ಅಭ್ಯಾಸಕ್ಕೆ ಬಿದ್ದ ತಪ್ಪು ಉಲ್ಲೇಖಕ. ಆದರೆ ಅವನು ತನ್ನ ಕೊಡುಗೆಗೆ ಯಾವುದೇ ಕೀರ್ತಿಯನ್ನು ಅಪೇಕ್ಷಿಸಲಿಲ್ಲ. ಅವನೆಲ್ಲ ಅನುವಾದಗಳೂ ಮುಖಪುಟದಲ್ಲಿ ಮೂಲ ಲೇಖಕರ ಹೆಸರಿನಲ್ಲಿ ಮಾತ್ರ ಪ್ರಕಟವಾಗುತ್ತಿದ್ದವು.

ರುಬಾಯತ್‌ನ ಅನುವಾದದಲ್ಲಿಯು ಫಿಟ್ಜೆರಾಲ್ಡ್ ಅದೇ ರೀತಿಯಲ್ಲೇ ಸಹಯೋಗಿತ್ವವನ್ನು ಪಡೆದಿದ್ದು. ಅದು ತನ್ನತನವನ್ನು ಮರೆಗೊಳಿಸಿಕೊಳ್ಳುವ ಬಗೆಯದು. ಉಮರ್ ಖಯ್ಯಾಮನಷ್ಟು ಹತ್ತಿರವಾಗಿ ಅವನಿಗೆ ಯಾರೂ ತೋರಿರಲಿಲ್ಲ. ಅವನನ್ನು ಫಿಟ್ಜೆರಾಲ್ಡ್ ತನ್ನ ಆಸ್ತಿಯೆಂದು ಸ್ಥಾಪಿಸಿಕೊಂಡಿದ್ದ. ಉಮರನ ಕವಿತೆಗಳು ಫಿಟ್ಜೆರಾಲ್‌್ೆನಿಗೆ ಪ್ರಿಯವಾಗಿದ್ದು ಅವುಗಳಲ್ಲಿನ ಉನ್ಮಾದ ನಿರ್ಲಕ್ಷ್ಯಗಳಿಂದ ಅಂದರೆ ಹೆಡೋನಿಸ್ಟಿಕ್ ನೆಗ್ಲಿಜೆನ್ಸ್‌ನಿಂಧ. ಆದ್ದರಿಂದ ಮೂಲಕ್ಕಂಟಿದ ಅನುವಾದ ಮಾಡುವುದು ಅವನಿಗೆ ಅಗತ್ಯವೆಂದಾಗಲೀ, ಸರಿಯೆಂದಾಗಲೀ ಅನ್ನಿಸಲಿಲ್ಲ. ಲೇಖಕನ ಜೊತೆ ಸಂಪೂರ್ಣವಾಗಿ ಗುರುತಿಸಿಕೊಳ್ಳುವುದು ಅವನಿಗೆ ಪಠ್ಯದ ಪುನರ್ನಿರ್ಮಾಣಕ್ಕಾಗಿ ಅಲ್ಲವಾಗಿತ್ತು ಮತ್ತು ಅದಕ್ಕೆ ವಿರುದ್ಧವಾಗಿತ್ತು. ಹೀಗಾಗಿ ಫಿಟ್ಜೆರಾಲ್ಡ್ ರುಬಾಯತ್ತಿನ ತನ್ನ ಆವೃತ್ತಿಯನ್ನು ಸಾದರಪಡಿಸಿದಾಗ (ಅನಾಮಧೇಯನಂತೆ) ಅವನು ಕ್ರಮಿಸಬೇಕಾದ ಮಾರ್ಗ ಉಮರನ ಪ್ರತಿಯೊಂದು ಪದವನ್ನೂ ಮರೆತು ಸಾಗುವ ಮಾರ್ಗವಾಗಿತ್ತು.- ಎರಿಕ್ ಗ್ರೇ.

***

ಫಿಟ್ಜೆರಾಲ್ಡ್‌ನ ರುಬಾಯತ್, ಬೋರ್ಜೆಸ್ ಅವಕ್ಕೆ ಕೊಡುವ ಎಲ್ಲ ಅರೆಮಿಸ್ಟಿಕಲ್ ಭಾಷೆ ಮತ್ತು ಗೌರವಗಳಿಗೆ ಅರ್ಹವಾಗಿದೆ. ಏಕೆಂದರೆ ಅದು ಇಂಗ್ಲಿಶ್‌ನ ಅತ್ಯಂತ ವಿಲಕ್ಷಣ ಹಾಗೂ ಅತ್ಯದ್ಭುತ, ಅಸಾಧಾರಣ ಕವಿತೆಗಳಲ್ಲಿ ಒಂದು. ಹಾಗೆಯೇ ಅದು ವರ್ಗೀಕರಿಸಲು ಸಾಧ್ಯವಾಗದ್ದು. ಅದಕ್ಕೆ ಬೇರೊಬ್ಬನ ಕವಿತೆಯನ್ನು ಬರೆದ ಫಿಟ್ಜೆರಾಲ್ಡ್‌ನ ಮೆನಾರ್ಡಿಯನ್ ಚಾತುರ್ಯವನ್ನು ಮೆಚ್ಚಬೇಕು. ಆ ಕವಿತೆಯನ್ನು ಉಮರನಿಗಾಗಲಿ, ಫಿಟ್ಜೆರಾಲ್ಡ್‌ಗಾಗಲಿ ಅಂಕಿತಗೊಳಿಸಲು ನಿರಾಕರಿಸಿದ್ದು ಬೋರ್ಜೆುಸ್ ಮಾತ್ರ ಅಲ್ಲ. ಅಂದಿನ ಗ್ರಂಥಪಾಲಕರೆಲ್ಲರಿಗೂ ಇದೇ ಗೊಂದಲವಿತ್ತು. ಯಾರಾದರೂ ಆ ಹೆಸರಿನ ಕವಿತೆಯನ್ನು ಹುಡುಕಬೇಕಾದರೆ ಎರಡೂ ಹೆಸರುಗಳ ಅಡಿಯಲ್ಲಿ ಅದನ್ನು ಹುಡುಕಬೇಕಾಗಿತ್ತು.

ರುಬಾಯತ್ ಅನ್ನು ಕಂಡುಕೊಳ್ಳುವುದು ಅನುವಾದಕನಾದವನಿಗೆ ಎಷ್ಟು ಸಂಚಲನಕಾರಿಯಾಯಿತು? ಫಿಟ್ಜೆರಾಲ್ಡ್ ಪ್ರಚಾರಕ್ಕೆ ತನ್ನ ಹೆಸರನ್ನೆಲ್ಲೂ ಹೇಳಿಕೊಳ್ಳದವನಾಗಿದ್ದ. ಅಥವಾ ಇದರಿಂಧ ತೋರುವಂತೆ ಅವನು ಸಂಶಯಾತ್ಮನಿದ್ದಿರಬೇಕು. ಹೇಗೋ ಅವನ ರುಬಾಯತ್‌ನ ಹಸ್ತಪ್ರತಿ ರಫಾಲಿಟ್ – ಪೂರ್ವ ಕಲಾವಿದರ ಮೆಂಟರ್ ಆಗಿದ್ದ ಜಾನ್ ರಸ್ಕಿನ್‌ಗೆ ತಲುಪಿತು. ೧೮೬೩ರ ಸೆಪ್ಟೆಂಬರ್ ೨ ರಂದು ಅವನು ಅಜ್ಞಾತನಾಗಿ ಉಳಿದಿದ್ದ ಅದರ ಅನುವಾದಕನಿಗೊಂದು ಪತ್ರ ಬರೆದು ಅದನ್ನು ಬರ್ನ್ ಜೋನ್ಸ್‌ನಿಗೆ ಕೊಟ್ಟು ಅವನಿಗೇನಾದರೂ ಆ ಅನುವಾದಕನ ಸುಳಿವು ಸಿಕ್ಕರೆ ತಲುಪಿಸಲು ಕೇಳಿದ. ಆ ಪತ್ರದಲ್ಲಿ ಅವನು ಬರೆದಿದ್ದು ’ನೀನು ಯಾರೋ ನನಗಂತೂ ಚೂರೂ ತಿಳಿಯದು. ಆದರೆ ನಾನು ಆತ್ಮಪೂರ್ವಕ ನಿನ್ನನ್ನು ಕೋರುವುದೆಂದರೆ, ನೀನು ಇನ್ನಷ್ಟು ಉಮರನ ಅನುವಾದವನ್ನು ನಮಗಾಗಿ ಮಾಡಿಕೊಡಬೇಕು. ನಾನು ಈವರೆಗೆ ಇಷ್ಟು ಉಜ್ವಲವಾದ ಏನನ್ನೂ ಓದಿರಲಿಲ್ಲ’ ಎಂದು.

ತಾತ್ವಿಕತೆಯ ದೃಷ್ಟಿಯಿಂದ ಉಮರನ ರುಬಾಯ್‌ಗಳು ಮುಂದಿನ ಜನ್ಮವನ್ನು ಕುರಿತ ಸಂಶಯಗಳು ಹಾಗೂ ಈ ಜನ್ಮದಲ್ಲಿ ಎಲ್ಲ ಸುಖಗಳನ್ನೂ ಪಡೆಯುವ ಬಯಕೆಯನ್ನು ಹೇಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಅವನಲ್ಲಿ ವಿಡಂಬನೆಯಿದೆ, ಅನ್ಯೋಕ್ತಿ ವಿಧಾನದ ಅಣಕು, ಮುಸುಕು ಹಾಕಿದ ಹಾಸ್ಯ ಎಲ್ಲವೂ ಇವೆ. ಇಂತಹ ಭಿನ್ನ ಮನೋಭಾವಗಳಿಂದಲೇ ಉಮರನು ಪ್ರಸಿದ್ಧನಾಗಿದ್ದು. ಎಲ್ಲ ಓದುಗರಿಗೂ ತಮ್ಮನ್ನು ಉಮರನೊಡನೆ ಗುರುತಿಸಿಕೊಳ್ಳುವ ಏನಾದರೊಂದು ಅಲ್ಲಿ ಸಿಗುತ್ತದೆ ಎನ್ನುವುದು ಬಹು ಮುಖ್ಯವಾದದ್ದು. ಉಮರನು ತೆರೆದಿಡುವ ವಿರೋಧಾಭಾಸಗಳು ಶತಮಾನಗಳ ಕಾಲ ಓದುಗರನ್ನು ಕಾಡಿವೆ. ಸೂಫಿಸಂ ಅವುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದೆ. ಉಮರನ ಕೆಲವು ರುಬಾಯ್‌ಗಳು ಸೂಫಿ ತತ್ವದಲ್ಲಿನ ಅಂಶಗಳನ್ನು ಪ್ರತಿಪಾದಿಸುತ್ತವೆ. ಆದ್ದರಿಂದಲೇ ಉಮರನನ್ನು ಸೂಫಿ ಸಂತನೆಂಬಂತೆ ನೋಡಲಾಗಿದೆ. ಆದರೆ ಇವರು ಸೂಫಿಗಳ ಆಷಾಢಭೂತಿತನವನ್ನು ಕುರಿತು ಉಮರನು ಮಾಡಿದ ವಾಗ್ದಾಳಿಗಳನ್ನು, ಲೇವಡಿಗಳನ್ನು ನಿರ್ಲಕ್ಷಿಸುತ್ತಾರೆ. ಕೆಲವೆಡೆ ಅವನ ಚಿಂತನೆಗಳು ಆನುಭಾವಿಕತೆಯಂತೆ, ಸೂಫಿಸಂನಂತೆ ತೋರಿದರೆ ಅದಕ್ಕೆ ಕಾರಣ ಹಲವು ಸಲ ಆನುಭಾವಿಕತೆ ಸಹ ತರ್ಕಾತೀತ ವಿದ್ಯಮಾನಗಳನ್ನು ಕುರಿತು ಶೋಧನೆಗೆ ತೊಡಗುತ್ತದೆ ಎಂಬ ಕಾರಣಕ್ಕಾಗಿ ಇರಬಹುದು. ಆದರೆ ಹಲವು ಸಲ ಅತಾರ್ಕಿಕ ವಿಸಂಗತಿಗೆ ಎಳೆಸುವ ಅದನ್ನು ಒಪ್ಪಿಕೊಳ್ಳುವುದು ಉಮರನಿಗೆ ಕಷ್ಟ.
ಬದುಕಿನ ಬಗ್ಗೆ ಉಮರನು ಹೊಂದಿದ್ದ ದೃಷ್ಟಿಕೋನ ಅವನಿಗೆ ನಾಸ್ತಿಕ – ಆಜ್ಙೇಯತಾವಾದಿ – ಎಂಬ ಹಣೆಪಟ್ಟಿಯನ್ನು ತಂದುಕೊಟ್ಟಿರಬಹುದು. ಈ ಮಾತನ್ನು ಸಮರ್ಥಿಸುವಂತಿರುವ ಈ ಕೆಳಗಿನ ಚೌಪದಿಯನ್ನು ನೋಡಿ:

ನಾವಿನ್ನು ಬಹಳಷ್ಟನ್ನು ವ್ಯಯಿಸಲಿರುವುದರಿಂದ
ದೂಳಿನೊಳಗಿಳಿವ ಮುನ್ನ ಬೇಕಿರುವಷ್ಟನ್ನು ಮಾಡಿಕೊಳ್ಳೋಣ
ದೂಳು ದೂಳೊಂದಿಗೆ ಬೆರೆತು ದೂಳಿನೊಳಗಡೆ
ಮಲಗುವೆವು ನಾವು, ಮಧುವಿಲ್ಲ, ಹಾಡಿಲ್ಲ, ಅಂತ್ಯವೂ ಇಲ್ಲ

ಆದರೆ ಅವನ ಚಿಂತನೆಯನ್ನು ಹೀಗೆ ಹೇಳಬಹುದು: ಮನುಷ್ಯ ತನ್ನ ಬದುಕನ್ನು ಬಹುಪಾಲು ತಾನೇ ರೂಪಿಸಿಕೊಳ್ಳುತ್ತಾನೆ, ರೂಪಿಸಿಕೊಳ್ಳಬೇಕು. ಋಷಿಮುನಿಗಳು ಏನೇ ಹೇಳಲಿ, ಈ ಲೋಕದಾಚೆಗಿರಬಹುದು ಎನ್ನಲಾದ ಏನನ್ನೂ ಯಾರೂ ಶೋಧಿಸಿಲ್ಲ. ಈ ವಿಶ್ವದ ಎಲ್ಲವನ್ನೂ ದೇವರು ಸೃಷ್ಟಿಸಿದ್ದಾನೆ ಎಂದರೆ ಇಲ್ಲಿನ ಕೆಡುಕುಗಳನ್ನೂ ಅವನೇ ಸೃಷ್ಟಿಸಿರಬೇಕು. ಆದ್ದರಿಂದ ಇಲ್ಲಿನ ಎಲ್ಲ ಕೇಡಿನ ಜವಾಬ್ದಾರಿ ದೇವರ ಮೇಲಿದೆ. ಎಲ್ಲವೂ ದೇವರಿಂದಲೆ ಸೃಷ್ಟಿಯಾಗಿದೆ ಎಂದರೆ ಮದಿರೆಯೂ, ಪಾಪವೂ ಕೆಟ್ಟದ್ದಲ್ಲ.
ಫಿಟ್ಜೆರಾಲ್ಡ್ ಮಾಡಿದ ಇಂಗ್ಲಿಶ್ ಅವತರಣಿಕೆಯಲ್ಲಿ ಉಮರನ ಮೂಲದಲ್ಲಿನ ಹಾಸ್ಯ ಬಹುಪಾಲು ಲುಪ್ತವಾಗಿದೆ. ಬಹುಶಃ ಫಿಟ್ಜೆರಾಲ್ಡ್‌ನಿಗೆ ಅದು ಅರ್ಥವಾಗಿರಲಿಲ್ಲ ಅಥವಾ ತನ್ನ ಇಂಗ್ಲಿಶ್‌ನಲ್ಲಿ ಅದನ್ನು ಹಿಡಿದಿಡುವುದು ಅವನಿಗೆ ಸಾಧ್ಯವಾಗಲಿಲ್ಲ. ಆದ್ದರಿಂದಲೇ ಅಶ್ಲೀಲವೆನಿಸುವ ಮತ್ತು ದೈವಕ್ಕೆ ಅನಾದರ ತೋರಿವೆ ಎನ್ನಿಸುವಂತಿದ್ದ ಹಾಸ್ಯದ ಎಳೆಯಿದ್ದ ರುಬಾಯ್‌ಗಳನ್ನು ಅವನು ಅನುವಾದಿಸದೆ ಬಿಟ್ಟುಬಿಟ್ಟ. ಆನುಭಾವಿಕ ನಂಬಿಕೆಯೊಂದನ್ನು ಪದ್ಯವೊಂದರಲ್ಲಿ ಕ್ರಿಯೆಯ ರೂಪದಲ್ಲಿ ತರುವುದನ್ನು ಫಿಟ್ಜೆರಾಲ್ಡ್ ಚೆನ್ನಾಗಿಯೇ ಮಾಡುತ್ತಾನೆ. ಆದ್ದರಿಂದ ಅವನು ಅನುವಾದದಲ್ಲಿ ಮೊದಲು ತರುವ ಕವಿತೆ ಅವನು ಆಧರಿಸಿದ ಎರಡೂ ಆಕರದ ಮೊದಲಲ್ಲಿಲ್ಲ. ಆ ಕವಿತೆ ಒಬ್ಬಗೆಯ ತುರ್ತನ್ನು ಹೇಳುತ್ತ ಓದುಗನನ್ನು ನಾಟಕೀಯ ಕ್ರಿಯೆಗೆ ಕರೆದೊಯ್ಯುತ್ತದೆ ಎನ್ನುವುದು ಪ್ರಾಯಶಃ ಅವನ ಆ ಆಯ್ಕೆಗೆ ಕಾರಣವಿರಬೇಕು.

ರುಬಾಯತ್‌ನಲ್ಲಿ ಮತ್ತೆ ಮತ್ತೆ ಬರುವ ಚಿತ್ರ ಗುಲಾಬಿಯದು, ನೈಟಿಂಗೇಲ್‌ದು ಮತ್ತು ಹಸಿರುಕ್ಕಿದ ವಸಂತದ್ದು. ಇವೆಲ್ಲವೂ ಪರ್ಷಿಯನ್ ಕಾವ್ಯಕ್ಕೆ ಆಪ್ತವಾದವೇ. ಫಿಟ್ಜೆರಾಲ್ಡ್ ಸಹ ತಕ್ಕ ಮನಸ್ಥಿತಿಯೊಂದನ್ನು ನೇರ್ಪಡಿಸಲು ಉಮರನಂತೆ ಋತುವಿನ ಬಣ್ಣವನ್ನು, ಬೆಳಕನ್ನು ಬಳಸಿಕೊಳ್ಳುತ್ತಾನೆ.

ನಾನಿದನು ಬಲ್ಲೆ, ಆ ಒಂದು ನಿಜ ಬೆಳಕು, ಪ್ರೀತಿಗೆ ಬೆಳಕು ತರಲು
ಹೊತ್ತಿಸಿದ ಒಂದು ಕಿಡಿ ಅಥವಾ ಸಿಟ್ಟಿನ ಬೆಂಕಿ ಆವರಿಸಿಬಿಡಲಿ
ಮಧುಶಾಲೆಯೊಳಗೆ ಕಂಡೊಂದು ಮಿಂಚಿನ ಸೆಳಕು
ಕಳೆದುಹೋದ ಮಂದಿರವೊಂದಕ್ಕಿಂತ ಲೇಸು

 

ಕೋಡುಚಂದಿರ ಮೂಡಿ ಬಂದಿದ್ದಾನೆ. ತೋಟ ಮತ್ತೆ ನಳನಳಿಸುತ್ತದೆ. ಗಾಳಿ ಪರಿಮಳವ ತುಂಬಿಕೊಳ್ಳುತ್ತದೆ. ವಸಂತ ಬಂದಿದೆ. ಪ್ರಕೃತಿ ತನ್ನ ತಾನು ಪುನರ್ನವಗೊಳಿಸಿಕೊಂಡಿದ್ದಾಳೆ. ಆದರೆ ಕವಿಗೆ ಮರಳಿ ಬರಲಾಗುವುದಿಲ್ಲ. ಕವಿ ನಶಿಸಿಹೋಗಿದ್ದಾನೆ. ಆದರೆ ಅವನು ಈ ಪ್ರಕೃತಿಯಲ್ಲಿ ಬದುಕಿದ್ದಾನೆ. ಅದರೊಂದಿಗೆ ಅವನು ಬೆರೆತುಹೋಗಿದ್ದಾನೆ. ಅವನಿಗೆ ವಿದಾಯ ಹೇಳುವುದು ವಿಷಾದಕರ ಆದರೆ ಕಹಿಯಲ್ಲ.

ಹುಗಿದ ನನ್ನ ಬೂದಿಯಿಂದ ಬಳ್ಳಿಗಳು ಬೆಳೆದು
ಸೊಂಪಾಗಿ ಗಾಳಿಗುಯ್ಯಾಲೆ ತೂಗಲಿ ಪರಿಮಳಿಸಿ
ದಾರಿ ನಡೆಯುವ ಯಾವನೇ ನಿಜ ದೈವ-ವಿಶ್ವಾಸಿ
ಫಕ್ಕನೇ ದಿಗ್ಭ್ರಮೆಗೊಳ್ಳದಿರಲಾರ ಅದನು ಅನುಭವಿಸಿ

ಫಿಟ್ಜೆರಾಲ್ಡ್‌ನ ಬದುಕಿನ ಕುರಿತು, ಉಮರನ ಅನುವಾದದ ಕುರಿತು ಹೆಚ್ಚಿನ ವಿವರಗಳಿಗೆ ಹೆರಾಲ್ಡ್ ಬ್ಲೂಮ್ ಸಂಪಾದಿಸಿರುವ ದಿ ರುಬಾಯತ್ ಆಫ್ ಉಮರ್‌ಖಯ್ಯಾಮ್ ಕೃತಿಯನ್ನು ಅದರಲ್ಲೂ ಮುಖ್ಯವಾಗಿ ಇರಾನ್ ಬಿ ಹಸ್ಸಾನಿಯವರ ದಿ ರುಬಾಯತ್ ಆಫ್ ಉಮರ್ ಖಯ್ಯಾಮ್ ಲೇಖನವನ್ನು ನೋಡಬಹುದು.
ಹಾಗೆ ನೋಡಿದರೆ ಖಯ್ಯಾಮ್ ರೂಮಿ, ಅತ್ತಾರ್, ಸನಾಯ್‌ಗಳಿಗಿಂತ ದೊಡ್ಡ ಅನುಭಾವಿಯೇನಲ್ಲ. ಅವನ ಕಾವ್ಯವನ್ನು ಈ ಕಾಲಕ್ಕೂ ಪ್ರಸ್ತುತಗೊಳಿಸುವುದು ಅವನನ್ನು ನಾವು ಅರ್ಥಮಾಡಿಕೊಳ್ಳಬಹುದು ಮತ್ತು ಆ ಅನುಭವವನ್ನು ಗ್ರಹಿಸಬಹುದು ಎನ್ನುವುದರಿಂದ. ಫಿಟ್ಜೆರಾಲ್ಡ್‌ನ ಅನುವಾದ ರುಬಾಯತ್ ಒಳಗೊಂಡಿರುವ ಆಳವಾದ ದೀಕ್ಷೆಯ ಅನುಭವದ ಸಂದೇಶದಿಂದ ಓದುಗರನ್ನು ವಿಮುಖರನ್ನಾಗಿಸಿತು. ರುಬಾಯ್‌ನ ಒಂದೊಂದು ಸಾಲೂ ಸೂಫಿ ಸಾಹಿತ್ಯದಲ್ಲಿ ಓದಬಹುದಾದ ಯಾವುದಕ್ಕಿಂತಲೂ ಹೆಚ್ಚು ಅರ್ಥಗಳನ್ನು ಇಟ್ಟುಕೊಂಡಿದೆ ಎನ್ನಲಾಗಿದೆ.