ಪ್ರಿಯತಮೆ ಇರದ ವಸಂತಕಾಲ

1. ಈ ಜಗತ್ತು ಸಾಯುತ್ತದೆ ಪ್ರಿಯೆ

ಈಗ ಇದ್ದ ಜಗತ್ತು
ನಾಳೆ ಸಾಯುತ್ತದೆ ಗೆಳತಿ
ಬಾ ಒಮ್ಮೆ ಕುಂತು
ಮಾತನಾಡೋಣ!

ಈಗ ಅರಳಿದ ಹೂ
ನಾಳೆ ಬಾಡಿ
ಪರಿಮಳವ ತೊರೆದು
ಸ್ವರ್ಗಸ್ಥವಾಗುತ್ತದೆ ಗೆಳತಿ
ಬಾ, ಒಮ್ಮೆ ಸಿಕ್ಕಿ ಲೋಕಾಂತವ
ಚರ್ಚಿಸೋಣ.

ಈಗ ಮೊಳಕೆ ಒಡೆದ
ಬೀಜ ನಾಳೆ
ವೃಕ್ಷವಾಗಿ ಬೆಳೆದು
ಆಕಾಶಕ್ಕೆ ನೆಗೆಯಲು
ಪ್ರಯತ್ನಿಸುತ್ತದೆ ಗೆಳತಿ
ಬಾ, ಒಮ್ಮೆ ಈ ಜಗತ್ತಿನ ಬಗ್ಗೆ ಮಾತಾಡೋಣ!

ಈಗ ಇದ್ದ ಜನ
ಮನ, ದೇಶ ಎಲ್ಲವೂ
ಮಾಯವಾಗುತ್ತದೆ ಗೆಳತಿ
ಬಾ, ಒಮ್ಮೆ ಈ ಜಗತ್ತು ಸಾಯುವುದನ್ನು ನೋಡೋಣ!

2. ಹೂವಿನ ಪರಿಮಳ

ನಾನು ಕರ್ಪೂರ
ಅವಳು ಮುಟ್ಟಿದ್ದರೆ
ಧಗಧಗಿಸಿ ಉರಿಯುತ್ತೇನೆ,
ನಾನು ಮೊಗ್ಗು
ಅವಳ ಸ್ಪರ್ಶ ಸೇರಿದರೆ
ಹೂವಿನ ಪರಿಮಳ!

ನಾನು ತಣ್ಣನೆಯ ನದಿ
ಅವಳು ಸೋಕಿದರೆ
ಬೆಚ್ಚಗಿನ ಸಮುದ್ರ.
ನಾನು ಬರಿಯ ಮರದ ತುಂಡು
ಅವಳು ತೇದರೆ
ಗಂಧದ ಸುಗಂಧ.

ನಾನು ಮೋಡ
ಅವಳ ನೆನಪುಗಳು
ಸೇರಿದರೆ ಮಳೆಯಾಗಿ
ಸುರಿಯುತ್ತೇನೆ,
ನಾನು ಯಾವುದೋ
ಕಾಣದ ನಕ್ಷತ್ರ
ಅವಳು ಕಂಡರೆ
ಸೂರ್ಯನಂತೆ
ಹೊಳೆಯುವೆ.

ಅವಳು ಹೂ
ನಾನು ಬೆಂಕಿಯ ಕೆನ್ನಾಲಿಗೆ
ಸೇರಿದರೆ ಒಂದು ವೃಕ್ಷದ ಬೀಜ.
ಅವಳು ಸಿಗಲಾರದ ಗಾಳಿ
ನಾನು ಅವಳ ಹುಡುಕುವ
ಬೆರೆಯಲು ಹಪಹಪಿಸುವ
ಒಣಗಿದ ಎಲೆ.

3. ಪ್ರೇಮದ ಫಕೀರ

ಸಾಕಿ, ನಿನ್ನನ್ನು
ಹುಡುಕಲು ಬಂದಿರುವ
ಪ್ರೇಮದ ಫಕೀರ ನಾನು.
ನಿನ್ನ ಹುಡುಕುವ
ಧ್ಯಾನದಲ್ಲಿ ಮುಳುಗಿ ಹೋಗುವ
ಪ್ರೀತಿ ಜೋಳಿಗೆಯ
ಫಕೀರ ನಾನು!

ನಡೆದಷ್ಟೂ ಪ್ರೀತಿಯ ಚೆಲ್ಲಿ
ಕುಂತಾಷ್ಟು ಪ್ರೇಮದ ಬೀಜ
ಬಿತ್ತಿ,
ಹುಡುಕುತ್ತಿದ್ದೇನೆ ಸಾಕಿ,
ನಿನ್ನ ಪ್ರೇಮದ ವಿಳಾಸ.

ನದಿಯಲ್ಲಿ ನೀರಾಗಿ
ಚಂದ್ರನ ಕಣ್ಣಿಗೆ ಕನ್ನಡಕವಾಗಿ
ತಿರುಗುತಿದ್ದೇನೆ ಸಾಕಿ,
ನಿನ್ನ ಆತ್ಮ ಸಾಂಗತ್ಯವ.

ಕಬ್ಬಿನಲ್ಲಿ ಪ್ರೇಮದ ಸಿಹಿಯಾಗಿ
ಹುಳಿ ಹಿಂಡಿದರು
ಬೆರೆಯದ ಪ್ರೇಮದ ಸನ್ನಿಧಿಯಲ್ಲಿ
ನಿನ್ನ ಸವಿ ಮಾತುಗಳ
ಹುಡುಕುತ್ತಲೇ ಇದ್ದೇನೆ ಸಾಕಿ,
ನಿನ್ನ ಪ್ರೇಮದ ಸನ್ನಿಧಿಯ.

ಬಂದಿದ್ದೇನೆ ಸಾಕಿ,
ನಿನ್ನನ್ನು ನೋಡಲು ಫಕೀರನಾಗಿ
ನೋಡು, ನೋಡು ಸಾಕಿ,
ಬಂದಿದ್ದೇನೆ ಅತ್ಮವ ಬಿಟ್ಟು
ನಿನ್ನ ಆತ್ಮವ ಸೇರಲು.

4. ತಾವರೆಯ ಹೂಗಳು

ಅವಳಿಗಾಗಿ ತಾವರೆಯ
ಹೂಗಳ ತಂದು ಪ್ರೇಮ
ನಿವೇದನೆಯ ಮಾಡಿಕೊಂಡೆ;
ಆಕಾಶವೇ ಮರುಗಿತ್ತು
ಅವಳು ಜಪ್ ಎನ್ನಲಿಲ್ಲ.

ಅವಳಿಗಾಗಿ ಹೆಜ್ಜೇನಿನ
ಮಧುವ ತಂದು
ಪ್ರೇಮದ ನಿವೇದನೆಯ ಮಾಡಿಕೊಂಡೆ;
ಹುಳುಗಳೆ ‘ಥತ್’ ಎಂದುಕೊಂಡವು
ಅವಳು ತಿರುಗಿ ನೋಡಲಿಲ್ಲ .

ಅವಳಿಗಾಗಿ ಮುತ್ತಿನ ಮಳೆ ಕರೆದೆ
ಬಾ ಒಮ್ಮೆಯಾದರೂ
ನೆನೆಯೋಣ ಎಂದು
ಕರೆದೆ;
ಅವಳು ಮಬ್ಬಿನಲ್ಲಿ ಮಂಜಾಗಿ ಹೋದಳು.

ಅವಳಿಗಾಗಿ ತೂಗು ಮಂಚವ
ತಂದು, ಬಾ ಒಮ್ಮೆ ಕೂತು
ಮಾತನಾಡೋಣ
ಎಂದು ಕೇಳಿಕೊಂಡೆ;
ಅವಳು ಆಕಾಶದ
ಗಾಳಿಯಲ್ಲಿ ಕುಳಿತು
ಮಾಯವಾದಳು.

ಅವಳಿಗಾಗಿ ಕಾದೆ ಕಾದೆ
ಮತ್ತೆ ಬರಲಿಲ್ಲ ಅವಳು,
ಪ್ರೇಮದ ಹುಚ್ಚು ಪರಿಧಿಯಲ್ಲಿ
ಪರದಾಡಿದೆ;
ಅವಳ ದಾಸನಾಗಿ
ಭೋರೆದ್ದು ಕುಗಾಡಿದೆ
ಆದರೆ,
ಅವಳು ಸಿಗಲಾರದ
ಹುಡುಕಲಾರದ ಪರಿಮಳ
ಎಂದು ತಿಳಿದಿರಲಿಲ್ಲ.
ಆದರೂ
ಅವಳನ್ನು ಇನ್ನೂ
ಹುಡುಕುತ್ತಲೇ ಇದ್ದೇನೆ
ಈ ತಾವರೆ ಹೂಗಳ ಮಧ್ಯೆ.

5. ಈ ರಾತ್ರಿಗಳು ಕಾಡುತ್ತವೆ

ಏನೋ! ನಗರಗಳೇ ಸತ್ತ ಹಾಗೇ
ಅಲ್ಲಲ್ಲಿ ಕಂಪನ
ಚಿಟ್ಟೆಗಳ ಆತ್ಮಹತ್ಯೆ
ದಾರಿಯಲ್ಲಿ ಸತ್ತವರ ಹೆಣಗಳು
ಈ ರಾತ್ರಿಗಳು ಕಾಡುತ್ತವೆ ಗೆಳತಿ.

ಅಲ್ಲಿ ಹಸಿದವರ ಚೀರಾಟ
ಇಲ್ಲಿ ಉಂಡವರ ಕೂಗಾಟ
ಈ ನಗರವೇ;
ನರಳುವ ಮಾದಕ ದನಿ
ಈ ರಾತ್ರಿಗಳು ಕಾಡುತ್ತವೆ ಗೆಳತಿ.

ಅಲ್ಲಿ ಸಮುದ್ರ ಅಳುತ್ತದೆ
ಚಂದ್ರ ತೊಟ್ಟಿಲಲ್ಲಿ ರಂಪಾಟ
ಬೀದಿಗೆ ಬಂದು ಕೂಗುವ
ನಾಯಿಗಳು;
ಈ ನಗರಗಳೆ ಸತ್ತ ಹಾಗೇ
ಈ ರಾತ್ರಿಗಳು ಕಾಡುತ್ತವೆ ಗೆಳತಿ.

ಹೂ ಬಿಟ್ಟ ಮರಗಳು
ಗೂಡು ಕಟ್ಟಿದ ಹಕ್ಕಿಗಳು
ನದಿಯಲ್ಲಿದ್ದ ಮೀನುಗಳು
ಕೆಂಗಟ್ಟಿವೆ ಗೆಳತಿ;
ಈ ರಾತ್ರಿಗಳು ಕಾಡುತ್ತವೆ ಗೆಳತಿ, ಕಾಡುತ್ತವೆ.

ಸೂರ್ಯಕೀರ್ತಿ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೊಕಿನ ಬೆಟ್ಟಹಳ್ಳಿ ಗ್ರಾಮದವರು
ಬೆಂಗಳೂರು ವಿಶ್ವವಿದ್ಯಾಲಯದಿಂದ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ( ಎಂ.ಕಾಂ) ಉನ್ನತ ಶ್ರೇಣಿಯಲ್ಲಿ ಮುಗಿಸಿಕೊಂಡು, ಆಸಕ್ತಿಯಿಂದ ಕನ್ನಡ ಸಾಹಿತ್ಯ ಅಧ್ಯಯನ ಮಾಡಿ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇವರ ಕವಿತೆಗಳು ಹಿಂದಿ, ಇಂಗ್ಲೀಷ್, ಚೈನೀಸ್, ಬೆಂಗಾಲಿ ಭಾಷೆಗಳಿಗೆ ಅನುವಾದಗೊಂಡಿವೆ.
ಚೈತ್ರಾಕ್ಷಿ ಮತ್ತು ಮೀನು ಕುಡಿದ ಕಡಲು ಇವರ ಪ್ರಕಟಿತ ಕವನ ಸಂಕಲನಗಳು, ಬಹುತ್ವ ಸಾಹಿತ್ಯ ಮತ್ತು ಭಾಷೆ ಇವರ ಸಂಪಾದನಾ ಕೃತಿ.
ಅಲ್ಲಮ ಕಾವ್ಯ ಪ್ರಶಸ್ತಿ, ಉತ್ತರ ಪ್ರದೇಶದಲ್ಲಿ ನೀಡುವ ‘ತಾಥಗತ ಸೃಜನ್ ಸಮ್ಮಾನ್ʼ ಪ್ರಶಸ್ತಿ ದೊರಕಿವೆ