ತನ್ನ ಬಾಲ್ಯದ ಧಾರ್ಮಿಕತೆಯ ತತ್ತ್ವವು ವಸ್ತುನಿಷ್ಠವಾಗಿ ಸಂಶೋಧನೆ ನಡೆಸಬೇಕಾದ ವಿಜ್ಞಾನಿಯ ದೃಷ್ಟಿಯನ್ನು ಪ್ರಭಾವಿಸುತ್ತದೆಯೆ? ಅದರಿಂದಾಗಿ ಕೆಲವೊಮ್ಮೆ ಧನಾತ್ಮಕ, ಇನ್ನು ಕೆಲವೊಮ್ಮೆ ಋಣಾತ್ಮಕ ಫಲಿತಾಂಶಗಳಿಗೆ, ವಾಸ್ತವದಿಂದ ದೂರವಾದ ಸಿದ್ಧಾಂತಗಳಿಗೆ ಅದು ಎಡೆಮಾಡಿಕೊಡಬಹುದೆ ಎಂಬ ಪ್ರಶ್ನೆಗಳನ್ನು ಪದರ ಪದರವಾಗಿ ಬಿಡಿಸಿಡುವ ನಾಟಕವಿದು. ನಿರ್ದೇಶನ  ಅತ್ಯಂತ ಪರಿಣಾಮಕಾರಿಯಾದುದು.  ದೇಹಭಾಷೆ ಮತ್ತು ಧ್ವನಿಯ ಏರಿಳಿತಗಳ ಮೂಲಕ ಸಲಾಂ ಅವರ ಹತಾಶೆ, ನೋವುಗಳನ್ನು ಅಭಿವ್ಯಕ್ತಿಸುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ‘ಅಬ್ದುಸ್ ಸಲಾಮ್ ಅವರ ವಿಚಾರಣೆ’ ನಾಟಕದ ಕುರಿತು ಡಾ. ಸುದರ್ಶನ ಪಾಟೀಲಕುಲಕರ್ಣಿ ಬರಹ

ಕಾಕತಾಳೀಯವೋ ಎಂಬಂತೆ  ಇತ್ತೀಚೆಗೆ  ಸಿ. ಎನ್. ಆರ್. ರಾವ್ ಅವರ ‘Climbing the Limitless Ladder: A Life in Chemistry’ ಕೃತಿಯನ್ನು ಓದುತ್ತಿದ್ದೆ. ಅದರಲ್ಲಿ ಅವರು ತಮ್ಮ ಕುಟುಂಬದ (ತಂದೆ-ತಾಯಿ ಎರಡೂ ಕಡೆಯ) ಧಾರ್ಮಿಕ ಹಿನ್ನೆಲೆಯಾದ ಮಧ್ವ ಮತವನ್ನು ಉಲ್ಲೇಖಿಸುತ್ತಾ, ಅದು ಅಧ್ಯಾತ್ಮ ಲೋಕವೆಂಬುದು ಇದ್ದರೂ ಕೂಡ ತಮ್ಮೆದುರಿನ ವಾಸ್ತವ ಪ್ರಪಂಚದಲ್ಲಿ ಹೇಗೆ ಸೂಕ್ತವಾಗಿ ಬದುಕಬೇಕೆಂಬ ತಮ್ಮ ಜೀವನ ದೃಷ್ಟಿಯನ್ನು ನಿರ್ದೇಶಿಸಿತು ಎಂಬುದನ್ನು ನೆನೆಯುತ್ತಾರೆ.

ತನ್ನ ಬಾಲ್ಯದ ಧಾರ್ಮಿಕತೆಯ ತತ್ತ್ವವು ವಸ್ತುನಿಷ್ಠವಾಗಿ ಸಂಶೋಧನೆ ನಡೆಸಬೇಕಾದ ವಿಜ್ಞಾನಿಯ ದೃಷ್ಟಿಯನ್ನು ಪ್ರಭಾವಿಸುತ್ತದೆಯೆ? ಅದರಿಂದಾಗಿ ಕೆಲವೊಮ್ಮೆ ಧನಾತ್ಮಕ, ಇನ್ನು ಕೆಲವೊಮ್ಮೆ ಋಣಾತ್ಮಕ ಫಲಿತಾಂಶಗಳಿಗೆ, ವಾಸ್ತವದಿಂದ ದೂರವಾದ ಸಿದ್ಧಾಂತಗಳಿಗೆ ಎಡೆಮಾಡಿಕೊಡಬಹುದೆ? ದ್ವೈತದ ಹಿನ್ನೆಲೆ ರಾವ್ ಅವರಿಗೆ ವೈವಿಧ್ಯಮಯ ರಾಸಾಯನಿಕ ವಸ್ತು ವಿನ್ಯಾಸಗಳನ್ನು ಕಾಣಲು ಸಹಾಯ ಮಾಡಿರಬಹುದೆ? ಇಂಥದೊಂದು ಮನೋವೈಜ್ಞಾನಿಕ ಪ್ರಶ್ನೆಗಳು ಉದ್ಭವಿಸಿದವು. ಇವೆಲ್ಲವೂ ಒಂದು ಸಂಶೋಧನೆಗೆ ಅರ್ಹವಾದ ಪ್ರಶ್ನೆಗಳು ಹಾಗೂ ಬರೆದರೆ ಇದೊಂದು ಪುಸ್ತಕವೇ ಆಗಬಹುದೇನೋ.

ರಾವ್ ಅವರ ಪುಸ್ತಕವನ್ನು ಓದುತ್ತಿದ್ದ ಅದೇ ಸಂಜೆ (ಜೂನ್ 3, 2022) ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಒಂದು  ನಾಟಕ ನೋಡುವ ಅವಕಾಶ ಸಿಕ್ಕಿತು.  ನೀಲಾಂಜನ್ ಚೌಧರಿಯವರು ಬರೆದ, ಕನ್ನಡಕ್ಕೆ ಅಷ್ಟೇ ಸಮರ್ಥವಾಗಿ ಶಶಿಧರ್ ಡೋಂಗ್ರೆ ಅವರಿಂದ ಅನುವಾದಿಸಲ್ಪಟ್ಟಿರುವ, ಯತೀಶ್ ಕೊಳ್ಳೇಗಾಲ ಅವರಿಂದ  ನಿರ್ದೇಶಿಸಲ್ಪಟ್ಟ ‘ಅಬ್ದುಸ್ ಸಲಾಮ್ ಅವರ ವಿಚಾರಣೆ’ ತನ್ನ ಸಂಕೀರ್ಣತೆ, ಸೂಕ್ಷ್ಮತೆಗಳನ್ನು ಹೊಂದಿದ ನಾಟಕ. ಅದರ ಮುಖ್ಯ ಪಾತ್ರದಲ್ಲಿ ಯತೀಶ್ ಅವರೇ ನಟಿಸಿದ್ದರು ಕೂಡ. ನಾಟಕದ ಕಥಾ ವಸ್ತುವು, ಮೇಲೆ ವಿವರಿಸಿದ ಅನೇಕ ಪ್ರಶ್ನೆಗಳನ್ನು  ಮುನ್ನೆಲೆಗೆ ತರುತ್ತದೆ.  ಜೊತೆಗೆ, ಪ್ರಭುತ್ವ ನಿರ್ಮಿಸಿದ ರಾಜಕೀಯ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಓರ್ವ ಮಾನವತಾವಾದಿ, ಸೃಜನಶೀಲ ವಿಜ್ಞಾನಿಯೂ ಅಸಹಾಯಕ ಬಂದಿಯೆ… ಎಂಬ ಪ್ರಶ್ನೆ ಎದುರಾಯಿತು. ಅಷ್ಟೇ ಅಲ್ಲ,  ಹೀಗೆ ಇನ್ನೂ ಹತ್ತು ಹಲವು ಪ್ರಶ್ನೆಗಳನ್ನು ನಾಟಕವು ಹುಟ್ಟು ಹಾಕಿತು.

ಅಬ್ದುಸ್ ಸಲಾಮ್ ಪಾಕಿಸ್ತಾನ ಮೂಲದ ನೊಬೆಲ್ ಪ್ರಶಸ್ತಿ ಪಡೆದ ಧೀಮಂತ ಅಣುವಿಜ್ಞಾನಿ. ಸೃಷ್ಟಿಕರ್ತನಾಗಿ ‘ಅಲ್ಲಾಹು’ವನ್ನು ನಂಬಿದರೂ, ಮಹಮ್ಮದರನ್ನು ಏಕಮಾತ್ರ ನಿಜ ಪ್ರವಾದಿ ಎಂಬುದನ್ನು ಒಪ್ಪದ ‘ಅಹ್ಮದೀಯ’ ಎಂಬ ಇಸ್ಲಾಮಿನ ಪಂಗಡದಲ್ಲಿ ಜನಿಸಿದವರು.

ಪಾಕಿಸ್ತಾನದ ಸರ್ಕಾರ ಅಣುಬಾಂಬು ಸೇರಿದಂತೆ ತನ್ನ ಇತರ ಹಲವು ಉದ್ದೇಶಗಳಿಗೆ ಅವರ ಸೇವೆಯನ್ನು ಬಳಸಿಕೊಂಡರೂ, ಝುಲ್ಫೀಕರ್ ಅಲಿ ಭುಟ್ಟೋರ ‘ಮಹಮ್ಮದರನ್ನು ಪ್ರವಾದಿ ಎಂಬುದನ್ನು ಒಪ್ಪದವರು ಮುಸ್ಲೀಮರಲ್ಲ’ ಎಂಬ 1974ರ ಕಾನೂನಿನಿಂದಾಗಿ, ಸಲಾಮ್ ಪಾಕಿಸ್ತಾನದಿಂದ ದೂರವಾದವರು; ಆದರೆ ಕೊನೆಯವರೆಗೂ ತನ್ನ ದೇಶದ ಪಾಸ್‌ಪೋರ್ಟನ್ನು ಬಿಟ್ಟುಕೊಡದ ದೇಶಪ್ರೇಮಿ. ಗ್ರ್ಯಾಂಡ್ ಯುನಿಫೈಡ್ ಥಿಯರಿ, ಸುಪರ್ ಸಿಮೆಟ್ರಿ, ವೀಕ್ ನ್ಯೂಕ್ಲಿಯರ್ ಫೋರ್ಸ್ ಇತ್ಯಾದಿ ಪ್ರಮುಖ ಭೌತವಿಜ್ಞಾನದ ಸಿದ್ಧಾಂತಗಳನ್ನು ನಮಗೆ ಕೊಟ್ಟವರು. ಗುರುತ್ವ ಶಕ್ತಿ, ವಿದ್ಯುತ್ ಶಕ್ತಿ, ಕಾಂತ ಶಕ್ತಿ, ಪ್ರಬಲ ಪರಮಾಣು ಶಕ್ತಿ ಮತ್ತು ದುರ್ಬಲ ಪರಮಾಣು ಶಕ್ತಿ ಹೀಗೆ ಎಲ್ಲಾ ಶಕ್ತಿಗಳನ್ನು ಒಂದು ಮೂಲ ಶಕ್ತಿಯ ಅವತಾರವಾಗಿ ಕಾಣಬಹುದೆಂಬ ಕುರಾನಿನ ಹುಡುಕಾಟವೇ ತನ್ನದೂ, ಆದರೆ, ವಿಜ್ಞಾನದ ಮೂಲಕ ನಡೆಯುವ ಹುಡುಕಾಟ ಎಂದೂ, ಅಲ್ ಖ್ವಾರಿಜ್ಮಿ ಬಾನು ಮೂಸಾ ಮತ್ತವನ ಸೋದರರ, ಉಮರ್ ಖಯ್ಯಾಮ್-ರ ಪರಂಪರೆಯ ವೈಜ್ಞಾನಿಕ ಚಿಂತನೆಯ ಸಂಸ್ಕೃತಿಯೇ ನಿಜವಾದ ಇಸ್ಲಾಮಿನ ಸಂಸ್ಕೃತಿ ಎಂದು ನಂಬಿದವರು ಅಬ್ದುಸ್ ಸಲಾಮ್ ಅವರು.

ಅಂತೆಯೇ ತಮ್ಮ ಸಾವಿನ ನಂತರ ಅವರು ವಿಶ್ರಾಂತಿಯಿಂದ ಪವಡಿಸಬಯಸುವುದು ತಮ್ಮ ಹುಟ್ಟೂರಾದ ಪಾಕಿಸ್ತಾನದ ಝಾಂಗ್ ಹಳ್ಳಿಯಲ್ಲಿಯೇ ಹೊರತು ಬದುಕಿನ ಬಹುತೇಕ ಕರ್ಮಭೂಮಿಯಾಗಿದ್ದ ಯುರೋಪ್ ಅಥವಾ ಅಮೇರಿಕದಲ್ಲಿ ಅಲ್ಲ.

ಇಂಥ ಹತ್ತು ಹಲವು ಸೂಕ್ಷ್ಮ ಪದರುಗಳನ್ನು ನಾಟಕ ಎಳ್ಳಷ್ಟೂ ಚ್ಯುತಿಯಾಗದಂತೆ, ಸೃಜನಶೀಲ ಬಗೆಯಲ್ಲಿ ಮಲ್ಟಿಮೀಡಿಯ ಪರದೆಯ ಮೂಲಕ ಸಂದರ್ಭಕ್ಕೆ ಸರಿಯಾದ ಚಿತ್ರಗಳನ್ನು, ದಾಖಲೆಗಳನ್ನು ಪ್ರದರ್ಶಿಸುತ್ತಾ ಸಮರ್ಥವಾಗಿ ನಿರೂಪಿಸಿತು. ಸಲಾಂ ಅವರನ್ನು ವಿಚಾರಣೆಗೆ ಒಳಪಡಿಸುವ ‘ಆತ್ಮ’ವಾಗಿ ನಟ ಜನಾರ್ದನ್ ಸಿ. ಎಸ್. ಸಮರ್ಪಕವಾಗಿ ಅಭಿನಯಿಸಿದರೂ, ಅವರನ್ನು ಮಂಕಾಗಿಸುವುದು ಸಲಾಂ ಪಾತ್ರದ ಯತೀಶ್ ಕೊಳ್ಳೇಗಾಲ ಅವರ ಅದ್ಭುತ ಪ್ರತಿಭೆ. ದೇಹಭಾಷೆ ಮತ್ತು ಧ್ವನಿಯ ಏರಿಳಿತಗಳ ಮೂಲಕ ಸಲಾಂ ಅವರ ಹತಾಶೆ, ನೋವುಗಳನ್ನು ಅಭಿವ್ಯಕ್ತಿಸುವಲ್ಲಿ ಯತೀಶ್ ಗೆಲ್ಲುತ್ತಾರೆ.

ಸಾಯಿ ಶಿವ್ ಅವರ ಹಿನ್ನೆಲೆಯ ಸಂಗೀತ ಧ್ವನಿ ಮುದ್ರಿತವಾಗಿದ್ದರೂ ನಾಟಕದ ಅನುಭವವನ್ನು ಹೆಚ್ಚಿಸುವಂತಿದೆ. ಪ್ರಸಾಧನದ ಮೂಲಕ ಮಂಜುನಾಥ ಕಾಚಕ್ಕಿ, ವಸ್ತ್ರ ವಿನ್ಯಾಸದ ಮೂಲಕ ರಜನಿ ಜೆ, ಸ್ವತಃ ಅಬ್ದುಸ್‌ ಸಲಾಮ್ ಅವರನ್ನು ಪ್ರೇಕ್ಷಕರೆದುರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಜು ಅವರ ರಂಗ ಸಜ್ಜಿಕೆ ಮಿನಿಮಲಿಸ್ಟ್ ಆಗಿದ್ದು ಇದನ್ನು ಮಧುಸೂದನ್ ತಮ್ಮ ಬೆಳಕಿನ ಕೌಶಲ್ಯದಿಂದ ಪರಿಣಾಮಕಾರಿಯಾಗುವಂತೆ ನಿರ್ವಹಿಸಿದ್ದಾರೆ. ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟಿನ ಡಾ. ಮನೋಹರ್ ಅವರು ಮತ್ತು ನಿರ್ದೇಶಕರಾಗಿ ಯತೀಶ್ ಅವರು ಈ ಎಲ್ಲವೂ ಒಂದು ಸೂತ್ರದಲ್ಲಿ ನಡೆಯುವಂತೆ ನೋಡಿಕೊಂಡಿದ್ದಾರೆ.

ಧರ್ಮಾಂಧತೆಯ ಈ ದಿನಗಳಲ್ಲಿ, ಯುವ ಸಮುದಾಯವೂ ಸೇರಿದಂತೆ ಎಲ್ಲರೂ ನೋಡಬೇಕಾದ ಈ ನಾಟಕ ಪ್ರದರ್ಶನ, ಆಧುನಿಕ ವಿಜ್ಞಾನವನ್ನು, ವಿಜ್ಞಾನಿಯ ಬದುಕಿನ ತೊಳಲಾಟಗಳನ್ನು, ಐತಿಹಾಸಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಸಂದರ್ಭದ ಸಮೇತ ವಿವರಿಸಬಲ್ಲ ಸಾಮರ್ಥ್ಯ ಕನ್ನಡ ಭಾಷೆಗೆ ಮತ್ತು ರಂಗ ಮಾಧ್ಯಮಕ್ಕೆ ಇದೆ ಎಂಬುದನ್ನು ಸಾಬೀತು ಮಾಡುತ್ತದೆ.