ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!’’ ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ ‘ಸೋಜರ’ರು ಅನರ್ಥಗಳನ್ನು ಮಾಡಿದ್ದರೆಂದು ಅವರ ಚಿಕ್ಕಮ್ಮ ಸುದ್ದಿ ಹೇಳಿದ್ದು ನೆನಪಿಗೆ ಬಂತು. ಅವರು ಏನು ಮಾಡುವುದೆಂದು ತಿಳಿಯದೆ ಕಣ್ಣಗಲಿಸಿ ಗಂಡನ ಮುಖವನ್ನು ನೋಡಿ ಕಣ್ಣೀರು ತುಂಬಿ ನಡುನಡುಗಿದರು. ಈ ವಿಹ್ವಲತೆಯನ್ನು ಕಂಡು ಗಂಡನಿಗೆ ಕರುಣೆ ಹುಟ್ಟಿತೆಂದು ತೋರುತ್ತದೆ, ಅವರು “ನೀನು ಬೇಕಾದರೆ ಈ ಮರದ ಮೇಲೆ ಹತ್ತಿ ಕುಳಿತುಕೋ. ನೋಡು, ಅವರೆಂತಹ ದೇವತಾ ಮನುಷ್ಯರೆಂದು!’’ ಎಂದು ಹೇಳಿ ಹೆಂಡತಿಯನ್ನು ಹೆಗಲೇರಿಸಿದರು.
ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವಓಬೀರಾಯನ ಕಾಲದ ಕತೆಗಳುಸರಣಿಯಲ್ಲಿ ಸೇಡಿಯಾಪು ಕೃಷ್ಣ ಭಟ್ಟರು ಬರೆದ ಕತೆ “ನಾಗರ ಬೆತ್ತ”

 

ನಾನಾಗ ಸಣ್ಣ ಹುಡುಗ, ಪ್ರಾಯ ಹನ್ನೊಂದೋ, ಹನ್ನೆರಡೋ; ನಮ್ಮ ಸೋದರತ್ತೆಯ ಮನೆಗೆ ಹೋಗಿದ್ದೆ. ಅವರ ಗಂಡ – ನನ್ನ ಮಾವ – ತಕ್ಕಮಟ್ಟಿನ ಹಣಗಾರ. ಹಣಗಾರಿಕೆಗಿಂತಲೂ ಕಾರಭಾರ ಹೆಚ್ಚು. ಊರ ಗದ್ದೆತೋಟಗಳಲ್ಲದೆ ಒಂದು ಕಾಪಿತೋಟ, ಇನ್ನೊಂದು ಏಲಕ್ಕಿ ಮಲೆ. ಅವರ ವಾಸ ಊರಲ್ಲಿ ಆರು ತಿಂಗಳು, ಗಟ್ಟದಲ್ಲಿ ಆರು ತಿಂಗಳು – ವಿಕ್ರಮಾದಿತ್ಯನ ಹಾಗೆ. ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ, ನನಗೆ ಅವರಲ್ಲಿ ಬಹಳ ಸಲುಗೆ. ಸಲುಗೆ ಎಷ್ಟೆಂದರೆ – ಒಮ್ಮೊಮ್ಮೆ ಅವರು ಕುಳಿತಿದ್ದರೆ ಬಳಿಗೆ ಹೋಗಿ ಒಂದು ಕೈಯನ್ನು ಅವರ ತೊಡೆಗೊತ್ತಿ, ಇನ್ನೊಂದು ಕೈಯಲ್ಲಿ ಅವರ ಕೊಂಬುಮೀಸೆಯನ್ನು ಹುರಿಮಾಡಿ ಸುರುಳುತ್ತಿದ್ದೆ. ಆ ಬಾರಿ ನಾನು ಅವರ ಮನೆಗೆ ಹೋಗಿ ಒಂದೆರಡು ದಿನಗಳಲ್ಲಿಯೇ ಅತ್ತೆ ಮಾವಂದಿರಿಬ್ಬರೂ ಗಟ್ಟಕ್ಕೆ ಹೊರಡಬೇಕಾಗಿತ್ತು. ಬಂದ ಮೂರು ದಿನಗಳಲ್ಲಿಯೇ ಹಿಂತಿರುಗಿ ಹೋಗಬೇಕಾಯಿತಲ್ಲ ಎಂದು ನನಗೆ ಭಾರಿ ಶೂನ್ಯ; ಅವರಿಗೂ ಬೇಸರ. ಆಗ ಮಾವ, “ಕೃಷ್ಣಾ, ನೀನು ಗಟ್ಟಕ್ಕೆ ಬರುತ್ತೀಯೋ?’’ ಎಂದು ಕೇಳಿದರು. ಪಕ್ಕನೆ ನನ್ನ ಮನಸ್ಸಿನಲ್ಲಿ ಕಣ್ಣು ತೆರೆದಂತಾಯಿತು. “ಹುಂ” ಎಂದೆ. “ಅವನ ತಾಯಿ, ಅಜ್ಜ ಎಲ್ಲ ಏನು ಹೇಳುತ್ತಾರೋ?’’ ಎಂದರು ಅತ್ತೆ. (ಬಾಲ್ಯದಲ್ಲಿಯೇ ನಾನು ತಂದೆಯನ್ನು ಕಳೆದುಕೊಂಡು ನಮ್ಮಜ್ಜನ ಮನೆಯಲ್ಲಿದ್ದೆ). “ಛೇ! ನಾವು ಕರೆದುಕೊಂಡು ಹೋದರೆ ಏನೂ ಹೇಳಲಿಕ್ಕಿಲ್ಲ. ಬರಲಿ, ಪಾಪ! ನಾನು ಅವರ ಮನೆಗೆ ಹೇಳಿ ಕಳುಹಿಸುತ್ತೇನೆ” ಎಂದು ಮಾವ ಹೇಳಿದೊಡನೆ, ಅತ್ತೆಯ ಮಾತಿನಿಂದ ಒಸರತೊಡಗಿದ್ದ ಕಣ್ಣೀರು ಸುಖಜಲವಾಗಿ ಕಣ್ಣು ತುಂಬಿತು. ನಕ್ಕು ನಾಚಿಕೊಂಡು ಮುಖ ತಿರುಗಿಸಿ ಕುಣಿಯುತ್ತಾ ಹಾರುತ್ತಾ ತೋಟಕ್ಕೆ ಓಡಿ ಹೋದೆ.

ಅದೇ ದಿನ ರಾತ್ರಿ ಪ್ರಯಾಣ, ಬಿಳಿಯ ಜೋಡೆತ್ತಿನ ದೊಡ್ಡ ಗಾಡಿಯಲ್ಲಿ. ಮರುದಿನ ಹಗಲು ಉಪ್ಪಿನಂಗಡಿಯಲ್ಲಿ ಮಜಲು; ಬೈಗಿನಲ್ಲಿ ಪುನಃ ಪ್ರಯಾಣಾರಂಭ. ಮೂರನೆಯ ದಿನ ಶಿರಾಡಿಯಲ್ಲಿ ಕಳೆಯಿತು. ನಾಲ್ಕನೆಯ ದಿನ ಸಕಲೇಶಪುರದ ಬಳಿಯ ಕಾಪಿತೋಟಕ್ಕೆ ಗಾಡಿ ಮುಟ್ಟಿತು. ಹೋಗಿ ಎರಡು ದಿನ ನಾನು ಮಾವನ ಬಂಗಲೆ ಬಿಟ್ಟು ಹೊರಗೆ ಕಾಲೇ ಇಡಲಿಲ್ಲ. ನಿದ್ದೆ ಮಾಡುವುದೇ ಕೆಲಸ. ಅನಂತರ ಮೆಲ್ಲಗೆ ಕಾಪಿತೋಟದ ಅಂದಚಂದಗಳನ್ನು ನೋಡುತ್ತ ಸುತ್ತಮುತ್ತಲಿನ ಪ್ರಕೃತಿಯ ಪರಿಚಯ ಮಾಡಿಕೊಳ್ಳತೊಡಗಿದೆ. ಗಟ್ಟಕ್ಕೆ ಬಂದುದು ನನಗೆ ಅತ್ಯಂತ ಸಂತೋಷಕರವಾಯಿತೆಂದು ಬೇರೆ ಹೇಳುವುದು ಬೇಡ. ಆ ಹೂಬಿಸಿಲಿನ – ಅಲ್ಲ , ಹೂನೆಳಲಿನ ಕಾಪಿತೋಟ! ತೊಳೆದು ‘ಮಾಲೀಸು’ ಮಾಡಿದ ಹಸುರು ಬಣ್ಣದ ಕುರಿಮಂದೆಯಂತಿದ್ದ ಮುದ್ದು ಮುದ್ದು ಕಾಪಿಗಿಡಗಳು. ಒಂದೆಡೆ ಕಿತ್ತಳೆಯ ರಾಜ್ಯ, ಮತ್ತೊಂದೆಡೆ ಪೇರಳೆಯ ಸಾಮ್ರಾಜ್ಯ! ವಿಚಿತ್ರವಾದ ಕಾಡುಹೂಗಳ, ಕಾಪಿಹೂಗಳ ಕಂಪು. ಕನಸಿನಲ್ಲಿಯೂ ಕಾಣದ ತರತರದ ಹಕ್ಕಿಗಳ ವಿವಿಧ ಮಧುರಧ್ವನಿ. ಅಲ್ಲಲ್ಲಿ ಗಂಭೀರವಾದ ಪ್ರತಿಧ್ವನಿ. ಮಹಾರಾಜನ ತಲೆಯ ಮುತ್ತಿನ ತುರಾಯಿಯಂತೆ, ಸಜೀವವಾದ ಬೆಳ್ಳಿಯ ಕೊಳವಿಯಂತೆ, ಹಾರುವ ಇಳಿಯುವ ಮಲೆನೀರ ನಿರ್ಝರ! ಅದರ ನಾದದ ಜತೆಗೆ ಜೀರುದುಂಬಿಯ ಝೇಂಕಾರ – ಈ ನವೀನ – ಪುರಾತನ ಪ್ರಪಂಚದಲ್ಲಿ ಸದಾ ಹಾರುವ ಬಣ್ಣದ ಚಿಟ್ಟೆಗಳೊಳಗೆ ನಾನೂ ಒಂದು ಆಗಿದ್ದೆ.

ಆ ಸುಂದರ ಸನ್ನಿವೇಶದ ಸುಖಕ್ಕೆ ಸೋದರತ್ತೆಯ ಉಪಚಾರದ ಬೆಂಬಲ. ಗಟ್ಟದ ಜೇನು, ತುಪ್ಪದ ರೊಟ್ಟಿ, ಹಾಲಿನ ಕಾಪಿ, ಕೋಸಿನ ಪಲ್ಯ, ಬಟಾಟೆ ಹುಳಿ, ಏಲಕ್ಕಿ ಹಾಕಿದ ಲಿಂಬೆಹಣ್ಣಿನ ಗಮಗಮಿಸುವ ಉಪ್ಪಿನಕಾಯಿ, ಕೇಸರಿಭಾತು, ಕಿತ್ತಳೆ ಹಣ್ಣು – ಇನ್ನೇನು ಬೇಕು? ಏನು ಬೇಕಾದರೂ ದೊರಕುತ್ತಿತ್ತು. ಆದರೆ ಇದಕ್ಕಿಂತಲೂ ಪ್ರಿಯವಾಗಿತ್ತು ಮಾವನ ಜತೆಯ ಕಾಪಿತೋಟದ ತಿರುಗಾಟ; ಪ್ರತಿದಿನವೂ ತಿರುಗಾಡುತ್ತಿದ್ದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಳು ಕುರಿಗಳೆಡೆಯ ಕುರುಬರಂತೆ ಕಾಣುತ್ತಿದ್ದರು. ನನ್ನ ಮಾವ ದಯಾಳು; ಅವರೊಡನೆ ಪ್ರೀತಿಯಲ್ಲಿ ಮಾತಾಡುತ್ತಿದ್ದರು. ಅವರ ಸುಖದುಃಖಗಳನ್ನು ಆಗಾಗ ಕೇಳುತ್ತಿದ್ದರು. ಅವರೊಡನೆ ನನಗೆ ಹಲವರ ಪರಿಚಯವಾಯಿತು. ಕೆಲವರು ಗೆಳೆಯರೂ ಆದರು. ಒಬ್ಬ ಅರೆಮುದುಕನಂತೂ ನನಗೆ ಅತ್ಯಂತ ಪ್ರಿಯನಾದ. ಅವನ ಹೆಸರು ಲಿಂಗಯ್ಯ. ಅವನು ನಮ್ಮ ಊರಿನ, ಮನೆಯ, ಸುದ್ದಿಯೆಲ್ಲ ಕೇಳುತ್ತಿದ್ದ, ತನ್ನ ಕಥೆ ಹೇಳುತ್ತಿದ್ದ, ಲಿಂಗಯ್ಯ ಬೇಲೂರಿನ ಬಳಿಯ ಒಂದು ಹಳ್ಳಿಯವನಂತೆ. ಅವನಿಗೆ ಮನೆಯಲ್ಲಿ ಯಾರೂ ಇಲ್ಲವಂತೆ. ಅವನ ಹೆಂಡತಿ ಅವನನ್ನು ಬಿಟ್ಟು ಓಡಿಹೋಗಿದ್ದಳಂತೆ. ಅವನು ಎಷ್ಟೋ ತೋಟಗಳಲ್ಲಿ ಕೆಲಸ ಮಾಡಿದ್ದನಂತೆ. ಆದರೆ ನನ್ನ ಮಾವನಂತಹ ‘ದೊರೆ’ ಬೇರೆ ಯಾರೂ ತನಗೆ ದೊರಕಲಿಲ್ಲವೆಂದು ಹೇಳುತ್ತಿದ್ದ.

ಅವನು ತೋಟದಲ್ಲಿ ಕೆಲಸ ಮಾಡುವಾಗ ವಿನೋದದ ಮಾತುಗಳನ್ನು ಆಡುತ್ತಿದ್ದ. ಇದರಿಂದ ಅವನ ಬಳಿಯಲ್ಲಿ ಮಾವನೊಂದಿಗೆ ನಿಂತುಕೊಂಡು, ತೋಟವನ್ನೂ ಕೆಲಸವನ್ನೂ ನೋಡುತ್ತಾ ಇರುವುದೆಂದರೆ ನನಗೊಂದು ಹಬ್ಬವೇ ಆಗಿತ್ತು. ಸಂಜೆ ತನ್ನ ‘ಹಟ್ಟಿಗೆ’ ಬಂದು ಊಟ ತೀರಿಸಿ, ಕಂಬಳಿ ಹಾಸಿ ಗೋಡೆಗೆ ಒರಗಿಕೊಂಡು ಹೊಗೆ ಸೇದುತ್ತಾ ಹಾಡುತ್ತಿದ್ದ. ಅವನ ದನಿ ಬಹಳ ಇನಿದಾಗಿತ್ತು. ಅವನ ಹಾಡೆಂದರೆ ನಮ್ಮೂರ ‘ಪಾರ್ದನೆ’ಯ ಹಾಗೆ. ಅದರಲ್ಲೆಷ್ಟೋ ಹಳೆಯ ಕತೆಗಳು – ದುಃಖಗಳು, ಸಂತೋಷಗಳು, ಪೌರುಷಗಳು, ಪ್ರೀತಿಗಳು – ಎಲ್ಲ ತುಂಬಿದ್ದುವು. ನಾನು ಅವನ ಬಳಿಗೆ ಹೋಗಿ ಕುಳಿತುಕೊಂಡು ಅದನ್ನು ಕೇಳುತ್ತಿದ್ದೆ. ಗಾಳಿ ಚಳಿ ಏರಿದಾಗ, ನನಗೆ ನಿದ್ದೆ ಬರಬಹುದೆಂದಾಗ, ಅವನು ಹಾಡು ನಿಲ್ಲಿಸಿ, “ಚಿಕ್ಕಯ್ಯಾ, ಇನ್ನು ನಾಳೆ ಹೇಳುವ” ಎಂದು ಹೇಳಿ ನನ್ನನ್ನು ಬಂಗಲೆಗೆ ಹೋಗಲು ಹೇಳುತ್ತಿದ್ದ.

ಹೀಗೆ ಸುಮಾರು ಒಂದು ತಿಂಗಳು ಕಳೆಯಿತು. ಒಂದು ದಿನ ನನ್ನ ಮಾವನಿಗೆ ಏಲಕ್ಕಿಮಲೆಗೆ ಹೋಗಬೇಕಾಗಿ ಬಂತು. ಅವರ ಕಾಪಿ ತೋಟದಿಂದ ಅಲ್ಲಿಗೆ ಹದಿನಾರು ಮೈಲು ದೂರವಿತ್ತು. ರಸ್ತೆಯೇನೂ ಇಲ್ಲ; ಕಾಲುದಾರಿ. ಆದುದರಿಂದ, ನಾನು ಅವರೊಂದಿಗೆ ಹೊರಡುವ ಮನಸ್ಸು ಮಾಡಿದರೂ ಅವರಾಗಿ ಬೇಡವೆಂದರು. ಮೂರು ದಿನಗಳಲ್ಲಿ ಹಿಂತಿರುಗಿ ಬರುತ್ತೇನೆಂದರು. ಅವರ ಜತೆಗೆ ಲಿಂಗಯ್ಯನೂ ಅಲ್ಲಿಗೆ ಹೊರಟ. ನನಗೆ ಬಹಳ ಬಿನ್ನಗೆ. ಅವರು ಹೊರಟುಹೋದ ದಿನವಿಡೀ ಬಂಗಲೆಯಲ್ಲಿ ಸುಮ್ಮನೆ ಕುಳಿತು ನೋಡುತ್ತಾ ಇದ್ದೆ. ಸಂಜೆ ಜೋರು ಚಳಿಯಾಯಿತು. ಅತ್ತೆಯೊಡನೆ ಹೇಳಿದೆ. ಮೆಯ್ ಮುಟ್ಟಿ ನೋಡಿ, “ಮೆಯ್ ಕಾಯುತ್ತಿದೆ!’’ ಎಂದರು. ಎರಡು ದಿನ ಬೋಧವಿಲ್ಲದ ಜ್ವರ ಬಂತು. ಅತ್ತೆ ನಿದ್ದೆ ಬಿಟ್ಟು ಚೆನ್ನಾಗಿ ಆರೈಕೆ ಮಾಡಿದರು. ಮದ್ದು ಕುಡಿಸಿದರು. ಮೂರನೆಯ ದಿನ ಬೆವರಿಬಿಟ್ಟಿತು. ನಾಲ್ಕನೆಯ ದಿನ ಮೆಲ್ಲಗೆ ಎದ್ದು ಬಂಗಲೆಯೊಳಗೆ ಅತ್ತಿತ್ತ ತಿರುಗಾಡುವಂತಾಯಿತು. ಸಂಜೆಯಾಗುವಾಗ ಮಾವನೂ ಬಂದರು. ಜ್ವರ ಬಂದು ಆಯಾಸವೆಲ್ಲ ಥಟ್ಟನೆ ಮಾಯವಾಯಿತು. ಅಷ್ಟರಲ್ಲಿ ಲಿಂಗಯ್ಯ ಬಂದು, “ಚಿಕ್ಕಯ್ಯಾ! ನನ್ನದೊಂದು ನೆನಪಿಗೆ. ಇದಕ್ಕೆ ಬೆಳ್ಳಿ ಕಟ್ಟಿಸಿಕೊಳ್ಳಿ” ಎಂದು ಒಂದು ಬಣ್ಣಬಣ್ಣದ ಸೆಳೆಬೆತ್ತವನ್ನು ನನ್ನ ಕೈಯಲ್ಲಿ ಕೊಟ್ಟ. ನನಗಾದ ಸಂತೋಷ ಅಷ್ಟಿಷ್ಟಲ್ಲ. ಅದನ್ನು ಹಿಡಿದುಕೊಂಡ ಮನೆತುಂಬ ಠೀವಿಯಿಂದ ನಡೆದಾಡಿದೆ. ಅದರ ಪ್ರತಿಯೊಂದು ಮಚ್ಚೆ, ಪ್ರತಿಯೊಂದು ಗಂಟು, ಗಿಣ್ಣು – ಎಲ್ಲವನ್ನೂ ನೋಡಿ ನೋಡಿ ತುಲನೆಮಾಡಿ ಮೆಚ್ಚಿ, ಅತ್ತೆಗೆ ತೋರಿಸಿ, ಮಾವಗೆ ಹೇಳಿ, ಬಾರಿಬಾರಿಗೆ ಲಿಂಗಯ್ಯನ ಹೆಸರೆತ್ತಿ, ಅವನ ಬಳಿಗೆ ಹೋಗಿ, ಅದು ಎಲ್ಲಿ ಸಿಕ್ಕಿತು, ಹೇಗೆ ಸಿಕ್ಕಿತು, ಯಾರು ಕಡಿದುದು ಮೊದಲಾದ ಎಲ್ಲಾ ಕಥೆಯನ್ನು ಕೇಳಿ ಕೇಳಿ ತಿಳಿದುಕೊಂಡೆ. ಅದು ನನ್ನ ಮಾವನ ಏಲಕ್ಕಿ ಮಲೆಯಲ್ಲಿಯೇ ಬೆಳೆದ ನಾಗರಬೆತ್ತವೆಂದು ಕೇಳಿ ಮತ್ತಷ್ಟು ಪ್ರೀತಿಗೊಂಡೆ.

ಮತ್ತೆ ನಾಲ್ಕಾರು ದಿನಗಳಲ್ಲಿ ಮಾವನ ಬಂಗಲೆಗೆ ಏಲಕ್ಕಿಯ ಚೀಲಗಳು ಹೊರೆಹೊರೆಯಾಗಿ ಬರತೊಡಗಿದವು. ಆ ಚೀಲಗಳೆಲ್ಲ ನನ್ನ ಮಾವನ ಬಿಳಿಗಾಡಿಯನ್ನೇರಿದುವು. ಅವುಗಳ ಮಾರಾಟಕ್ಕಾಗಿ ಮಾವನೂ ಊರಿಗೆ ಬಂದು ಮಂಗಳೂರಿಗೆ ಹೋಗಬೇಕಾಗಿತ್ತು. ನಾನೂ ಊರಿಗೆ ಹೊರಡುವುದೆಂದಾಯಿತು.

ಹೊರಡುವಾಗ ನನ್ನತ್ತೆ ಮೂರು ಏಲಕ್ಕಿ ಮಾಲೆಗಳನ್ನು ತಂದು, ಒಂದನ್ನು ನನ್ನ ಕೊರಳಿಗೆ ಹಾಕಿ, ಉಳಿದುದನ್ನು ನನ್ನ ಕೈಯಲ್ಲಿ ಕೊಟ್ಟು “ಮನೆಗೆ ಹೋಗಿ ನಿನ್ನಕ್ಕನಿಗೊಂದು ಕೊಡು; ಅಜ್ಜನಿಗೊಂದು ಕೊಡು” ಎಂದು ಹೇಳಿ ಮತ್ತೆ, “ಮಾವ ಮಂಗಳೂರಿನಿಂದ ಬರುವವರಗೆ ನಿನಗೆ ಇಲ್ಲೇ ಇದ್ದುಬಿಡಬಹುದಿತ್ತು” ಎಂದು ಹೇಳುವಾಗ ಅವರ ಕಣ್ಣಲ್ಲಿ ನೀರಿನ ಒಂದು ‘ಪದರು’ ಹೊಳೆಯಿತು. ನನ್ನನ್ನು ಜತೆಯಲ್ಲಿರಿಸಿಕೊಂಡು ಅಷ್ಟು ದಿನ ಇದ್ದು ಈಗ ನಾನೂ ಮಾವನೂ ಇಬ್ಬರೂ ಅಗಲುವಾಗ, ಮಕ್ಕಳಿಲ್ಲದ ನನ್ನ ಅತ್ತೆಗೆ ಬಹಳ ಖೇದವಾಗಿದ್ದಿರಬೇಕು. ಆದರೂ ಇನ್ನೂ ಇಲ್ಲೇ ಇರಿಸಿಕೊಂಡರೆ ನನ್ನ ಅಜ್ಜ, ತಾಯಿ, ಬೇಸರಿಸಬಹುದೆಂದು ಗೊತ್ತಿದ್ದ ಅವರು ಒತ್ತಾಯಿಸಲಿಲ್ಲ. ಮಾವ ಹೊರಡುವುದರಿಂದ ನನಗೂ ಹೊರಡುವ ಮನಸ್ಸೇ ಇತ್ತು. ಆದರೆ ಆ ಕಾಪಿತೋಟದ ಅಂದ, ಲಿಂಗಯ್ಯನ ಗೆಳೆತನ, ಅತ್ತೆಯ ಉಪಚಾರ, ಇವೆಲ್ಲವನ್ನು ಬಿಟ್ಟು ಹೊರಡುವಾಗ ಮನಸ್ಸಿನ ಅರ್ಧಾಂಶ ಅವಿತಿತು.

ಅತ್ತೆಯ ಕೈಗಳಿಂದ ಅಪ್ಪಿಸಿಕೊಂಡು ಹೇಗೋ ಗಾಡಿಯೇರಿದೆ. ಲಿಂಗಯ್ಯ ಗಾಡಿ ಹೊರಡುವಲ್ಲಿ ನಿಂತಿದ್ದ. “ಬೆತ್ತ ಉಂಟಲ್ಲಾ ಚಿಕ್ಕಯ್ಯಾ?’’ ಎಂದ. ಅದನ್ನು ಬಿಡುವುದುಂಟೆ? ಅದು ನನ್ನ ಬಳಿಯಲ್ಲಿಯೇ ಇತ್ತು. “ಇಗೋ! ಇಲ್ಲಿದೆ” ಎಂದು ತೆಗೆದು ತೋರಿಸಿದೆ. ಅವನಿಗೆ ನನ್ನ ಕೃತಜ್ಞತೆಯನ್ನು ಹೇಗೆ ತಿಳಿಸುವುದೆಂದು ತಿಳಿಯದಾದೆ. ಸುಮ್ಮನೆ ಅವನ ಮುಖ ನೋಡುತ್ತ ಕುಳಿತೆ. ನನ್ನ ಕಣ್ಣಲ್ಲಿ ನೀರಿಳಿಯಿತು. ಅವನು ಬಳಿಗೆ ಬಂದು ನನ್ನ ಕಣ್ಣೊರೆಸಿ, “ಹೋಗಿಬನ್ನಿ” ಎಂದ. ಅವನ ಕಣ್ಣಲ್ಲಿಯೂ ನೀರು ತುಂಬಿದ್ದು ನನಗೆ ಕಂಡಿತು. ನಮ್ಮ ಗಾಡಿ ಹೊರಟಿತು.

ಮೂರನೆಯ ದಿನ ಗಾಡಿ ನಮ್ಮ ಮಾವನ ಊರಮನೆಗೆ ಬಂದು ಮುಟ್ಟಿತು. ಮನೆಯಲ್ಲಿ ಎರಡು ದಿನವಿದ್ದು ಮಾವ ಮಂಗಳೂರಿಗೆ ಗಾಡಿ ಕಟ್ಟಿಸಿದರು. ಅಷ್ಟರೊಳಗೆ ನನ್ನ ಬೆತ್ತಕ್ಕೆ ಕಟ್ಟಿಹಾಕಿಸಿಕೊಟ್ಟರು. ದೇವಯ್ಯಾಚಾರಿ ಮೇಲುತುದಿಗೆ ಬೆಳ್ಳಿಯ ಟೊಪ್ಪಿಗೆಯನ್ನೂ ಕೆಳತುದಿಗೆ ಕುಂಭಕೋಣದ ಹಿತ್ತಾಳಿಯ ಮುಚ್ಚುಕಟ್ಟನ್ನೂ ಹಾಕಿದ. ಬೆತ್ತದ ಅಂದ ಇಮ್ಮಡಿಸಿತು. ಒಂದು ಜನದ ಜತೆಕೊಟ್ಟು ಆರು ಮೈಲು ದೂರದ ನಮ್ಮಜ್ಜನ ಮನೆಗೆ ನನ್ನನ್ನು ಕಳುಹಿಸಿದರು. ಹೊರಡುವಾಗ ಗಿಳಿ ಬಣ್ಣದ ಒಂದು ಕಾಶ್ಮೀರದ ಸಕಲಾತಿಯನ್ನು ನನ್ನ ಹೆಗಲಿಗೆ ಹಾಕಿ ಬೆನ್ನು ತಟ್ಟಿ, “ನಿನಗೆ ಹೊದೆಯಲಿಕ್ಕೆ” ಎಂದರು. ನನ್ನ ಮುಖವರಳಿದ್ದು ನನಗೇ ಕಂಡಂತಾಯಿತು; ಕಣ್ಣೀರೂ ಬಂತು. ಹಾಗೆಯೇ ಒಮ್ಮೆ ಅವರ ನಗುಮೊಗವನ್ನು ನೋಡಿ,“ಬರುತ್ತೇನೆ” ಎಂದು ಹೇಳಿ ಬೆತ್ತ ಹಿಡಿದುಕೊಂಡು ನೆಟ್ಟಗೆ ಮನೆಗೆ ಹೊರಟೆ.

ಮನೆಗೆ ಬರುವಾಗ ಎರಡು ಗಳಿಗೆ ಹೊತ್ತು ಉಳಿದಿತ್ತು. ನಾನು ಅಷ್ಟು ದಿನ ಕಳೆದು ಬರುವಾಗ ನನ್ನನ್ನು ಕಂಡು, ತುಂಬಿದ ನಮ್ಮ ಮನೆಯವರೆಲ್ಲರೂ ನಗುನಗುತ್ತ ನನ್ನನ್ನು ಮುತ್ತುವರು, ನನ್ನ ಬೆತ್ತ ಸಕಲಾತಿ ಎಲ್ಲಾ ನೋಡಿ ಮೆಚ್ಚಿ ನಲಿಯುವರು, ಎಂದು ಭಾವಿಸಿದ್ದೆ. ಆದರೆ ಕೆಲವರೆಲ್ಲ ನನ್ನನ್ನೂ ಕಂಡೂ ಕಾಣದಂತೆ ತೊಲಗಿದರು! ಅಂಗಳದ ಮೂಲೆಯಲ್ಲಿದ್ದ ನನ್ನ ಅಕ್ಕ ಮಾತ್ರ “ತಮ್ಮ ಬಂದ!’’ ಎಂದು ನಗುನಗುತ್ತ ಬೊಬ್ಬಿಟ್ಟು ನನ್ನ ಬಳಿಗೆ ಓಡಿಬಂದಳು. ಆಗ ನಾನು “ಇಗೋ ನೋಡು, ಮಾವ ಕೊಟ್ಟ ಸಕಲಾತಿ!’’ ಎಂದು ತೋರಿಸಿದೆ. ಅವಳು “ಆಹಾ! ಚಂದವೇ” ಎಂದು ಹೇಳುತ್ತ ಕೈಯಲ್ಲಿ ತೆಗೆದುಕೊಂಡು ಒಳಗಿದ್ದ ತಾಯಿಗೆ ತೋರಿಸಲು ಕೊಂಡೋಡಿದಳು. ನಾನೂ ಒಳಗೆ ಹೋದೆ. ತಾಯಿನನ್ನನ್ನು ಕಂಡು, “ಏನೋ ಇಷ್ಟು ದಿನ? ಅಜ್ಜ ಸಿಟ್ಟಿನಲ್ಲಿದ್ದಾರೆ!’’ ಎಂದರು. ಅವರ ಕೈಯಲ್ಲಿ ಸಕಲಾತಿ ಇತ್ತು. ಅದನ್ನು ನೋಡಿ ಒಳಗಿಡು ಎಂದು ನನ್ನಕ್ಕನ ಕೈಯಲ್ಲಿ ಹೇಳಿ ಕಣ್ಣೊರೆಸಿಕೊಂಡು “ಅಬ್ಬ ಹೊಗೆಯೇ!’’ ಎನ್ನುತ್ತಾ ನನ್ನ ಜತೆಯಲ್ಲಿ ಬಂದ ಆಳಿಗೆ ಬಾಯಾರಿಕೆ ಕೊಡುವುದಕ್ಕಾಗಿ ಮಜ್ಜಿಗೆ ನೀರು ಮಾಡಲು ಹೋದರು. ಬೇರಾರೂ ನನ್ನನ್ನು ಮಾತಾಡಿಸಲೇ ಇಲ್ಲ!

ನಾನು ಖಿನ್ನತೆಯಿಂದಲೂ ಭೀತಿಯಿಂದಲೂ ಬಾವಿಕಟ್ಟೆಗೆ ಹೋಗಿ ಕಾಲು ತೊಳೆದುಕೊಂಡು ಬಂದು, ತಾಯಿಯ ಹತ್ತಿರ ಕೇಳಿ ಒಂದು ತುಂಡು ಬೆಲ್ಲ ತೆಗೆದುಕೊಂಡು, ನೀರು ಕುಡಿದು ಹೊರಗೆ ಬಂದು ಚಾವಡಿಯ ಒಂದು ಮೂಲೆಯಲ್ಲಿ ಕುಳಿತೆ. ಏಲಕ್ಕಿ ಮಾಲೆಯ ನೆನಪೇ ಹೋಯಿತು. ಅದು ನನ್ನ ಬಟ್ಟೆಯ ಗಂಟಿನಲ್ಲಿಯೇ ಇತ್ತು. ಕೈಯಲ್ಲಿ ಮಾತ್ರ ಬೆತ್ತವಿತ್ತು. ಅದನ್ನು ನೆಲಕ್ಕೆ ಮೆಲ್ಲನೆ ತಟ್ಟುತ್ತಾ ಇದ್ದೆ. ಮನಸ್ಸು ಎಲ್ಲಿತ್ತೋ ನನಗೇ ಗೊತ್ತಿರಲಿಲ್ಲ. ಅಷ್ಟರಲ್ಲಿ ತೋಟಕ್ಕೋ ಎಲ್ಲಿಗೋ ಹೋಗಿದ್ದ ಅಜ್ಜ ಬಂದರು. ಅವರನ್ನು ನೋಡಿ ಫಕ್ಕನೆ ಅಳುಕಿತು. ಚಾವಡಿಯೇರುವಾಗಲೇ ಅವರು ನನ್ನನ್ನು ಕಂಡರು! “ಏನೋ ಬಂದುಬಿಟ್ಟೆ? ಅಲ್ಲಿಂದ ಹೋಗೆಂದು ಕುತ್ತಿಗೆಗೆ ಕೈಹಾಕಿ ದೂಡಿದರೋ?’’ ಎಂದು ಕಣ್ಣುಕೆಂಪು ಮಾಡಿ ಹೇಳಿದರು. ನಾನು ಮೂಲೆಗೆ ಅಂಟಿದೆ. ಹಾಗೆಯೇ ಅವರು ಮೇಲೆ ಬಂದು, ‘ಬಾಜಿರ ಹಲಗೆ’ ಯಲ್ಲಿ ಕುಳಿತು ವೀಳ್ಯ ಹಾಕತೊಡಗಿದರು. ಇಷ್ಟರಲ್ಲಿಯೇ ಮುಗಿದುಹೋಯಿತೆಂದು ಭಾವಿಸಿ ನಾನು ಸ್ವಲ್ಪ ಸಮಾಧಾನಪಟ್ಟುಕೊಂಡು, ಅನ್ಯಮನಸ್ಕನಾಗಿ ತಲೆ ಬಗ್ಗಿಸಿದಲ್ಲಿಂದಲೇ ಬೆತ್ತದ ತುದಿಯಲ್ಲಿ ನೆಲವನ್ನು ಪುನಃ ತಟ್ಟತೊಡಗಿದೆ. ಅಜ್ಜ ನನ್ನ ಕಡೆಗೆ ನೋಡಿದರು!

“ಅದೆಲ್ಲಿಂದಲೋ ಬೆತ್ತ? ಇಲ್ಲಿ ತಾ!” ಎಂದರು. ನನ್ನ ಎದೆಯೊಳಗಿನ ಡಬಡಬ ನನಗೆ ಸರಿಯಾಗಿ ಕೇಳುತ್ತಿತ್ತು. ಬೆತ್ತವನ್ನು ತಂದು ಅವರ ಕೈಯಲ್ಲಿ ಕೊಟ್ಟೆ. ಅದನ್ನವರು ಅಮೂಲಾಗ್ರವಾಗಿ ನೋಡಿದರು; ಅದರ ಕಟ್ಟಗಳನ್ನು ಮುಟ್ಟಿದರು; ನೆಟ್ಟಗೆ ಹಿಡಿದು, ಅಡ್ಡ ಹಿಡಿದು, ನೋಟ ಹಿಡಿದು ಪರೀಕ್ಷಿಸಿದರು. ಹಿಡಿದು ಅಲುಗಿಸಿದರು. ಕೊನೆಗೆ ನನ್ನ ಕಡೆಗೆ ನೋಡಿ “ಸೋಮಾರಿ! ಮನೆಯಲ್ಲಿ ಕುಳಿತು ಓದಿ ಬರೆದು ಟವಣೆ ಕಲಿತು ಮರ್ಯಾದೆಯಲ್ಲಿ ಎರಡು ಕೂಳು ಸಂಪಾದಿಸುವ ಆಲೋಚನೆ ಬಿಟ್ಟು, ಇನ್ನು ಕೋಲುಬೆತ್ತ ಹಿಡಿದುಕೋ! ಪನ್ನೆ ತಿದ್ದು! ಪೋಲಿಯಾಗಿ ಅಂಕ – ಆಯನ, ಆಟ – ನೋಟ ಎಲ್ಲುಂಟೆಂದು ತಿರುಗಾಡು! ಮತ್ತೆ ಗಟ್ಟ ಹತ್ತಿ ತೋಟದಲ್ಲಿ ಅಡಿಗೆ ಕೆಲಸಕ್ಕೆ ಸೇರು! ನಿನ್ನ ಹಣೆಬರಹ ನೋಡು ನೀ ನೋಡು!’’ ಎಂದು ಹೇಳಿ ಬೆತ್ತದ ಎರಡು ಕೊನೆಗಳಲ್ಲಿಯೂ ಹಿಡಿದು ಬಾಗಿಸಿದರು. ನನ್ನ ಜೀವವೇ ಮುರಿಯುವಂತಾಯಿತು. “ಬೇಡಜ್ಜಾ, ಬೇಡಜ್ಜಾ!’’ ಎಂದೆ. ಅವರು ಕಣ್ಣು ಕೆರಳಿಸಿ ನೋಡಿದರು! ಅಳುತ್ತಾ ಹಿಂದೆ ಸರಿದೆ. ಆದರೆ ಅದು ಸಪುರವಾಗಿ ಸೆಳೆಯಾಗಿದ್ದುದರಿಂದ ಮುರಿಯದೆ ಬಳುಕಿತು. ಕೂಡಲೆ ಅಜ್ಜ ಹಲ್ಲು ಕಚ್ಚಿ ಅದನ್ನು ಇನ್ನೊಂದು ಮೆಯ್ಗೆ ಥಟ್ಟನೆ ಬಗ್ಗಿಸಿದರು, ಅದು ಮುರಿಯಿತು. ನನ್ನ ಲಿಂಗಯ್ಯನ ಪ್ರೀತಿಯ ತಂತು ತುಂಡಾಯಿತು! ಅದರ ಕಟ್ಟಗಳನ್ನವರು ‘ಎಲೆ ಗುದ್ದಾಣ’ದ ಕಲ್ಲಿನಲ್ಲಿ ಗುದ್ದಿ ತೆಗೆದರು; ತಮ್ಮ ಜನಿವಾರದ ಪೆಟ್ಟಿಗೆಯಲ್ಲಿ ಹಾಕಿ ಮೇಲೆ ‘ಉತ್ತರ’ ದಲ್ಲಿಟ್ಟರು. ನನ್ನ ಮುದ್ದು ಬೆತ್ತದ ಮುರುಕುಗಳನ್ನು ಕೊಂಡುಹೋಗಿ, ಅಂಗಳದ ಮೂಲೆಯಲ್ಲಿ ಹೊಗೆದುರಿಯುತ್ತಿದ್ದ ಸುಡುಮಣ್ಣಿನ ರಾಶಿಗೆ ಎಸೆದುಬಿಟ್ಟರು!

ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಳು ಕುರಿಗಳೆಡೆಯ ಕುರುಬರಂತೆ ಕಾಣುತ್ತಿದ್ದರು. ನನ್ನ ಮಾವ ದಯಾಳು; ಅವರೊಡನೆ ಪ್ರೀತಿಯಲ್ಲಿ ಮಾತಾಡುತ್ತಿದ್ದರು. ಅವರ ಸುಖದುಃಖಗಳನ್ನು ಆಗಾಗ ಕೇಳುತ್ತಿದ್ದರು. ಅವರೊಡನೆ ನನಗೆ ಹಲವರ ಪರಿಚಯವಾಯಿತು. ಕೆಲವರು ಗೆಳೆಯರೂ ಆದರು.

ನಾನು ಆ ದಿನ ಊಟ ಮಾಡಲಿಲ್ಲ. ನನ್ನನ್ನು ಊಟಕ್ಕೆಬ್ಬಿಸಲು ತಾಯಿ ಬಂದರು. ನಾನು ಎಚ್ಚರವಿದ್ದರೂ ಏಳಲಿಲ್ಲ. “ನಿನಗೆ ಹಸಿವಿಲ್ಲ” ಎಂದು ಹೇಳಿ ಒಳಗೆ ಹೋದರು. ಅವರೂ ಅಂದು ಊಟ ಮಾಡಿದರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಬೆಳಿಗ್ಗೆ ಎದ್ದು ಮುಖ ತೊಳೆದು ವಿಭೂತಿ ಹಾಕಿ ದೇವರಿಗೆ ನಮಸ್ಕರಿಸಿ, ಭಾಗವತದ ಓಲೆಪುಸ್ತಕವನ್ನು ತೆಗೆದುಕೊಂಡು ಓದುವುದಕ್ಕೆ ಕುಳಿತೆ. ಕಣ್ಣಿನಿಂದ ನೀರು ಇಳಿಯುತ್ತಲೇ ಇದ್ದುದರಿಂದ ಓದಲಾಗಲಿಲ್ಲ. ಪುಸ್ತಕವನ್ನು ಕಟ್ಟಿಟ್ಟೆ. ಎದ್ದು ಬಯಲಿಗೆ ನಡೆದೆ. ನಾಲ್ಕು ಗಳಿಗೆ ಹೊತ್ತಾಗುವಾಗ ಆಯಾಸದಲ್ಲಿ ಏನೂ ಕೂಡದು. ಮನೆಗೆ ಬಂದೆ. ಮಿಂದು ಜಪಮಾಡಿ ಒಳಗೆ ಹೋದೆ. ಎಲೆಯಿಟ್ಟುಕೊಂಡು ಕುಳಿತೆ. ತಾಯಿ ಇಷ್ಟು ಗಂಜಿ ಹಾಕಿದರು. ಮಾತಾಡದೆ ಉಂಡು ಕೈತೊಳೆದು ಬಂದು ತಲೆ ನೋಯುತ್ತದೆ ಎಂದು ಹೇಳಿ, ಒಂದು ಹುಲ್ಲಚಾಪೆಯನ್ನೂ ತಲೆದಿಂಬನ್ನೂ ತೆಗೆದುಕೊಂಡು, ಚಾವಡಿಯ ಮೂಲೆಯಲ್ಲಿ ಗೋಡೆಗೆ ಮೋರೆ ಹಾಕಿ ಮಲಗಿದೆ. ನಿದ್ದೆ ಬರುವಂತಿರಲಿಲ್ಲ.

ಅಜ್ಜ ಆ ದಿನ ಮನೆಯಲ್ಲಿರಲಿಲ್ಲ. ಒಂದು ಪಾಲುಪಂಚಾಯತಿಕೆಯ ನಿಮಿತ್ತ ನನ್ನ ತಾಯಿಯ ಸೋದರಮಾವನ ಮನೆಗೆ ಹೋಗಿದ್ದರು. ಆದುದರಿಂದ ಮಲಗಿದ್ದಲ್ಲಿಂದ ಎಬ್ಬಿಸಿ ಬರೆಯಲು ಕುಳ್ಳಿರಿಸುವವರು ಯಾರೂ ಇರಲಿಲ್ಲ. ನನ್ನ ಮಾವಂದಿರು ನನ್ನ ಗೊಡವೆಗೆ ಬರುವವರೇ ಅಲ್ಲ. ಆದುದರಿಂದ ಸುಮ್ಮನೆ ಮಲಗಿದ್ದೆ.

ನಮ್ಮಜ್ಜನ ಮನೆಯಲ್ಲಿ ತುಂಬ ಜನರಿದ್ದರು. ದೊಡ್ಡ ಕುಟುಂಬ. ಒಬ್ಬರು ಹಣ್ಣು ಮುದುಕಿಯೂ ಇದ್ದರು. ನನ್ನ ಅಜ್ಜನಿಗೆ ಅವರು ದೊಡ್ಡಮ್ಮ. ಎಂದರೆ ತಂದೆಯ ಅಣ್ಣನ ಹೆಂಡತಿ. ಅವರಿಗೆ ಮಕ್ಕಳಿಲ್ಲ, ಬಾಲವಿಧವೆ. ಎಲ್ಲರ ಮೇಲೂ ಅವರಿಗೆ ಕರುಣೆ, ಪ್ರೀತಿ. ಹೆಚ್ಚಿನ ಸಮಯವೆಲ್ಲ ಒಳಗೇ ಇದ್ದುಕೊಂಡು, ಏನೋ ಧ್ಯಾನಿಸುತ್ತ ಕಾಲಕಳೆಯುವರು. ಅವರಿಗೆ ಬಹಳ ದಾಕ್ಷಿಣ್ಯ, ಬಹಳ ಅಂಜಿಕೆ. ನಮ್ಮ ಅಜ್ಜ ಅವರಿಗೆ ಮಗನಾಗಬೇಕಾಗಿದ್ದರೂ ಅವರ ಇದಿರಿನಲ್ಲಿ ನಿಂತು ಮಾತಾಡಲು ಸಹ ಹೆದರುತ್ತಿದ್ದರು. ನಮ್ಮ ಅಜ್ಜನಿಗೆ ಸಿಟ್ಟು ಬಹಳ, ಅವರನ್ನು ಕಂಡೊಡನೆ ಅಲ್ಲಿ ನಿಲ್ಲದೆ ಒಳಗೆ ಹೋಗುತ್ತಿದ್ದರು. ಅಂದು ಅಜ್ಜ ಮನೆಯಲ್ಲಿಲ್ಲದಿದ್ದುದರಿಂದ ಅವರು ಚಾವಡಿಗೆ ಬಂದು, ನಾನು ಮಲಗಿದ್ದುದನ್ನು ನೋಡಿದರು. ನನ್ನ ದುಃಖದ ಕಾರಣ ಅವರಿಗೆ ಗೊತ್ತಿರಲಿಲ್ಲ. ಅವರು ನನ್ನ ಬಳಿಗೆ ಬಂದು ಕುಳಿತು, ಬೆನ್ನು ಸವರಿ ಎದೆಮುಟ್ಟಿ ನೋಡಿ, “ಮಗೂ! ನಿನಗೇನಪ್ಪಾ? ಅತ್ತೆಯ ಮನೆಯಲ್ಲಿ ಊಟಗೀಟ ಸರಿಯಾಗಲಿಲ್ಲವೋ? ಗಟ್ಟಕ್ಕೆ ಹೋಗಿ ಬಂದೆಯಂತೆ. ಅದು ಜ್ವರದ ಊರು. ಏನಾಯಿತು ಮಗೂ?’’ ಎಂದರು. ನಾನು ಉತ್ತರ ಕೊಡಲೇ ಇಲ್ಲ. ಅವರು ಮತ್ತೂ ಮತ್ತೂ ಕೇಳಿದರು. ಅವರ ದನಿ ನನ್ನ ಮನಸ್ಸನ್ನು ಅಲುಗಿಸಿತು. ಕೊನೆಗೆ ಬಿಕ್ಕುತ್ತಾ ಬಿಕ್ಕುತ್ತಾ ನನ್ನ ದುಃಖದ ಕಾರಣವನ್ನು ಹೇಳಿದೆ : ಮುರಿದುಹೋದ ನನ್ನ ಮುದ್ದು ಬೆತ್ತದ ಕತೆಯನ್ನೆಲ್ಲ ಹೇಳಿದೆ.

ದೇವಜ್ಜಿ – ಇದು ನಾವು ಅವರನ್ನು ಕರೆಯುವ ಹೆಸರು; ಅವರ ಹೆಸರು ದೇವಕಿ ಎಂದು – ನನ್ನೊಡನೆ ಕಣ್ಣೀರು ಸುರಿಸುತ್ತಾ ಸುದ್ದಿಯನ್ನೆಲ್ಲ ಕೇಳಿದರು. ಸೆರಗಿನಲ್ಲಿ ಒರಸಿದಷ್ಟು ಅವರ ಕಣ್ಣಲ್ಲಿ ನೀರಿಳಿಯುತ್ತಲೇ ಇತ್ತು. ಕೊನೆಕೊನೆಗೆ ಅವರಿಗೆ ದುಃಖವನ್ನು ತಡೆಯಲಾಗಲಿಲ್ಲ. ಅವರು ಚೆನ್ನಾಗಿ – ಆದರೆ ಮಲ್ಲಗೆ, ಅತ್ತರು. ನಾನು ಅತ್ತೆ. ಇಬ್ಬರೂ ಮುಖವನವ್ನೊರಸಿಕೊಂಡೆವು. ಅಜ್ಜಿ ಸ್ವಲ್ಪ ತಡೆದು, “ಮಗೂ, ಆ ಬೆತ್ತ ಮುರಿದದ್ದು ಒಳ್ಳೆಯದೇ ಆಯಿತಪ್ಪ. ಅದು ಎಲ್ಲಿದ್ದ ನಾಗರಬೆತ್ತವೋ! ನಾಗರ ಬೆತ್ತವೆಂದರೆ ಜೀವಕ್ಕೆ ಸಂಚಕಾರ, ಮಗೂ! ನಿನಗದು ಬೇಡವೇ ಬೇಡ, ಅಳಬೇಡ ಮಗೂ, ಅಳಬೇಡ!’’ ಎಂದು ಹೇಳುತ್ತಾ ಅವರೇ ಗೊಳೋ ಎಂದು ಅತ್ತರು. ಚಾವಡಿಯಲ್ಲಿ ಬೇರಾರೂ ಇರಲಿಲ್ಲ.

ನನಗೊಂದು ಶಂಕೆ ಹುಟ್ಟಿತು. ನಾಗರಬೆತ್ತವು ಜೀವಕ್ಕೆ ಸಂಚಕಾರವಾಗುವುದು ಹೇಗೆ? ಹೋ! ‘ನಾಗ’ ಎಂದರೆ ಹಾವು! ಹಾವಿಗಿರುವಂತೆ ಬೆತ್ತದಲ್ಲಿ ವಿಷವಿದೆಯೇ? ಇರುವ ಹಾಗಿಲ್ಲ. ಇದ್ದರೆ ಲಿಂಗಯ್ಯ ನನಗದನ್ನು ಕೊಡಲಿಕ್ಕಿಲ್ಲ. ಕೊಡಲು ಮಾವ ಬಿಡಲಿಕ್ಕೂ ಇಲ್ಲ. ಹಾಗಾದರೆ ಅದಕ್ಕೆ ಹಾವಿನ ಹೆಸರೇಕೆ? ನಾಗರಹಾವಿನಂತೆ ಬಿಳಿಹಳದಿ ಬಣ್ಣವಿದ್ದು, ಹಾವಿನ ಕೊರಳಲ್ಲಿರುವಂತೆ ಅಲ್ಲಲ್ಲಿ ಮಚ್ಚೆಯಿರುವುದರಿಂದ ನಾಗರಬೆತ್ತವೆಂದು ಹೇಳುವುದಾಗಿರಬೇಕು. ಹಾಗಾದರೆ ಅದು ಅಪಾಯಕರವೆಂದು ದೇವಜ್ಜಿ ಹೇಳಲು ಕಾರಣವೇನು? ತಿಳಿಯಬೇಕಾಯಿತು.

ಸ್ವಲ್ಪ ಹೊತ್ತಿನಲ್ಲಿ ದೇವಜ್ಜಿ ಅಳುವನ್ನು ನಿಲ್ಲಿಸಿ ಕಣ್ಣು ಮೋರೆಯೊರಸಿಕೊಂಡರು. ಮೆಲ್ಲಗೆ ಅಂಗಳಕ್ಕಿಳಿದು ಅತ್ತಿತ್ತ ನೋಡಿ ಬಾವಿಕಟ್ಟೆಗೆ ಹೋಗಿ ಮುಖಕ್ಕೆ ನೀರು ಹಾಕಿ ಸೆರಗಿನಲ್ಲಿ ಒರಸಿಕೊಂಡು ಬಂದು ತಿರುಗಿ ನನ್ನ ಬಳಿಯಲ್ಲಿ ಕುಳಿತರು. ಮಳೆ ಬಂದು ಬಿಟ್ಟ ಬಾನಿನಂತೆ ಅವರ ನಿರಿಮೋರೆ ನಿರ್ಮಲವಾಯಿತು. ಆಗ ನಾನು, “ದೇವಜ್ಜಿ ನಾಗರಬೆತ್ತದಲ್ಲಿ ವಿಷವುಂಟೋ? ಅದರಲ್ಲಿ ಏನು ಅಪಾಯ?’’ ಎಂದು ಕೇಳಿದೆ. ಅವರ ತುಟಿಗಳು ನಡುಗಿದವು, ತಿರುಪಿದವು. ಆದರೂ ಅವರ ಅಳುವನ್ನು ಒತ್ತಿಕೊಂಡು ಬಳಿಯಲ್ಲಿ ಕುಳಿತ ನನ್ನ ತಲೆಯನ್ನು ಸವರುತ್ತ ಹೇಳತೊಡಗಿದರು :

“ಮಗು, ಏನು ಹೇಳಲಿ! ನೀನು ಹಸುಳೆ. ನಿನಗೇನು ಗೊತ್ತು? ನಿನ್ನ ತಾಯಿಗಾದರೆ ನೀವಾದರೂ ಇದ್ದೀರಿ. ನನಗೆ ಯಾರಿದ್ದಾರೆ ಮಗೂ? ನನ್ನ ಭಾಗ್ಯವನ್ನು ಮುಕ್ಕಿ ತಿಂದದ್ದು ಒಂದು ನಾಗರಬೆತ್ತ ಮಗು!’’ ಎಂದು ಹೇಳಿ ‘ಸೂ’ ಎಂದು ನಿಟ್ಟುಸಿರಲ್ಲಿ ನಿಲ್ಲಿಸಿದರು.

ದೇವಜ್ಜಿ ನಮ್ಮಜ್ಜನ ದೊಡ್ಡಮ್ಮ. ಪಾಪದ ಮುದುಕಿ. ಅಷ್ಟು ಮುದುಕಿಯಾದರೂ ನಮ್ಮೊಡನೆ ಹುಳಿಸೆಬಿತ್ತು ಅಗಿಯುವ ಗೆಳತಿ; ಹೆಣ್ಣು ಮಕ್ಕಳಿಗೆಲ್ಲ ಹೂಕಟ್ಟಿ ಕೊಡುವ ಪ್ರಿಯಸಖಿ; ನಮ್ಮ ಭಾಮಜ್ಜಿಯಂತೆ (ಎಂದರೆ ನಮ್ಮಜ್ಜನ ಅಕ್ಕ) ಅಲ್ಲಿ ಮೈಲಿಗೆ ಇಲ್ಲಿ ಮುಸುರೆ ಎಂದು ಬೊಬ್ಬಿಡುತ್ತ, ಮಕ್ಕಳನ್ನು ಬೈದು ಬೆದರಿಸುವ ಮಡಿಮರುಳೆಯಲ್ಲ, ಮಕ್ಕಳೊಡನೆ ಒಬ್ಬಿಬ್ಬರ ಮೇಲೆ ಮೋಹವಿಟ್ಟುಕೊಂಡು ಅವರ ಕಡೆಹಿಡಿದು ಬೇರೆ ಮಕ್ಕಳೊಡನೆ ಕಚ್ಚಾಡುವ ಜಗಳಗಂಟಿಯಲ್ಲ. ಅವಳ ಮುಖ ಹಾಗೆ, ಇವಳ ಮೂಗು ಹೀಗೆ, ಇವಳಿಗೆ ಮತ್ಸರ ಹೆಚ್ಚು, ಅವಳಿಗೆ ಕೋಪ ಹೆಚ್ಚು, ಇವಳು ಬರೀ ಹೆಡ್ಡೆ, ಅವಳಾದರೆ ಬುದ್ಧಿವಂತೆ ಎಂದು ಮೊದಲಾಗಿ ಕೆದಕುತ್ತಲೇ ಇರುವ ‘ಕೊಕ್ಕೆ’ಯೂ ಅಲ್ಲ – ಎಂದಿಷ್ಟೇ ಅವರ ಕುರಿತು ಆವರೆಗೆ ನನಗೆ ಗೊತ್ತಿದ್ದುದು. ಅವರ ಎದೆಯೊಳಗಿನ ಮರುಕದ ಅರಿವು ನನಗೆ ಇರಲೇ ಇಲ್ಲ. ನಾಗರಬೆತ್ತವು ನನ್ನೆದೆಯನ್ನು ಕರಗಿಸಿದ್ದು ಮಾತ್ರವಾದರೆ, ಅವರೆದೆಯನ್ನು ಸೀಳಿಯೇ ಹಾಕಿತ್ತು! ಆ ಬಗೆಯನ್ನು ಅವರು ನನಗೆ ಹೀಗೆ ಹೇಳಿದರು –

“ಮಗೂ, ನಿನಗೆ ಗೊತ್ತಿಲ್ಲ. ನನಗೆ ಹಾಗೆಲ್ಲ ಹೇಳುವ ಅಭ್ಯಾಸವೂ ಇಲ್ಲ. ಯಾರ ಹತ್ತಿರ ಹೇಳಿ ಏನು ಮಾಡುವುದು? ಸುಮ್ಮನೆ ಕರಕರೆಯನ್ನು ಕರೆದಂತಾಗುವುದು. ಆದರೆ ಈ ಹೊತ್ತೇನೊ ನಿನ್ನೊಡನೆ ಹೇಳಬೇಕೆಂದು ತೋರುತ್ತದೆ; ಹೇಳಿ ಬಿಡುತ್ತೇನೆ, ಕೇಳು : ನನ್ನಪ್ಪನ ಮನೆ ಈವೂರಲ್ಲಿ ಅಲ್ಲ, ದೂರ. ಇಲ್ಲಿಂದ ಎರಡು ದಿನಗಳ ದಾರಿ, ಗಟ್ಟದ ಬುಡ. ಸಂಪಾಜೆ ಎಂದು ಕೇಳಿದ್ದೀಯಾ? ಅಲ್ಲಿಗೆ ಹತ್ತಿರ. ಈಗ ಅಲ್ಲಿ ಯಾರೆಲ್ಲ ಇದ್ದಾರೋ ನನಗೆ ಗೊತ್ತೇ ಇಲ್ಲ. ಮತ್ತೆ ನನಗೆ ಅಲ್ಲಿಗೆ ಹೋಗಬೇಕೆಂದೂ ತೋರಲೇ ಇಲ್ಲ. ನನ್ನಪ್ಪ ಇರುವಾಗ ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ನೋಡಿ ಹೋಗುತ್ತಿದ್ದರು. ನನ್ನನ್ನು “ಮನೆಗೊಮ್ಮೆ ಬಾ ಮಗಳೇ!’’ ಎಂದು ಕರೆಯುತ್ತಿದ್ದರು. ಆದರೆ “ಆ ದಾರಿಯನ್ನೇ ನೋಡಲು ನನ್ನಿಂದಾಗದು” ಎಂದು ಹೇಳಿ ನಾನು ಬರುವುದಿಲ್ಲವೆನ್ನುತ್ತಿದ್ದೆ. ಇಬ್ಬರೂ ಕಣ್ಣೀರು ಹಾಕುತ್ತಿದ್ದೆವು. ಇಲ್ಲಿಗೆ ಬಂದರೆ ಅವರಿಗೆ ನನ್ನನ್ನು ಬಿಟ್ಟು ಹೊರಡಲು ಕಾಲೇ ಬರುತ್ತಿರಲಿಲ್ಲ. ಆದರೆ “ಎಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಕುಳಿತುಕೊಳ್ಳುವುದು? ನೀವು ಹೋಗಿ” ಎಂದು ನಾನೇ ಅವರನ್ನು ಕಳುಹಿಸುತ್ತಿದ್ದೆ. ಸಂದು ಕಡಿದ ಮೇಲೆ ಸಂಬಂಧಿಕರಾದರೂ ‘ಬೇಕಾದವ’ರಲ್ಲ. ಮತ್ತೆ ಅವರಿಗೆ ಒಂದು ವಾತರೋಗ ಹಿಡಿಯಿತು. ನಡೆಯಲಿಕ್ಕೆ ಕೂಡದು. ಅವರು ಸಾಯುವುದಕ್ಕೆ ಎರಡು ವರ್ಷಗಳ ಮೊದಲೊಮ್ಮ ಗಾಡಿಯಲ್ಲಿ ಬಂದು ಮೂರು ದಿನವಿದ್ದು, “ನಾನಿನ್ನು ಬರುವುದಿಲ್ಲ ಮಗಳೇ!’’ ಎಂದು ಹೇಳಿ ಹೋಗಿದ್ದರು. ಆಗ ನಾನು ಅವರ ಕಾಲು ಹಿಡಿದದ್ದೇ ಕೊನೆಯದು. ಅವರೆಲ್ಲ ಹೋದರು. ನಾನು ಯಾವಾಗ ಹೋಗುವುದೋ!’’ ಎಂದು ಹೇಳಿ ದೇವಜ್ಜಿ ಸೆರಗಿನಲ್ಲಿ ಕಣ್ಣೊರೆಸಿಕೊಂಡರು; ನಾನೂ ಅದರಲ್ಲೇ ಉಜ್ಜಿಕೊಂಡೆ. ಆ ಮೇಲೆ ಅವರು ಮೆಲ್ಲಗೆ ಮುಂದುವರಿಸಿದರು –

“ನನಗೆ ಹುಟ್ಟುವಾಗಲೇ ಅದೃಷ್ಟವಿಲ್ಲ. ನಾನು ಒಂದು ವರ್ಷದ ಮಗುವಾಗಿದ್ದಾಗಲೇ ನನ್ನಮ್ಮ ತೀರಿಹೋದರಂತೆ. ಅವರ ಮೋರೆಯ ನೆನಪಿಟ್ಟುಕೊಳ್ಳುವುದಕ್ಕೂ ನನಗೆ ಹಣೆ ಬರಹವಿರಲಿಲ್ಲ. ನನಗೆ ಒಡಹುಟ್ಟೂ ಇಲ್ಲ; ನಾನೇ ಚೊಚ್ಚಲ ಮಗುವಂತೆ. ನನ್ನಪ್ಪನೇ ನನ್ನನ್ನು ಸಾಕಿದ್ದು. ನನಗೆ ಐದು ವರ್ಷವಾಗುವಾಗ ನನ್ನಪ್ಪ ಬೇರೆ ಮದುವೆಯಾದರು. ಚಿಕ್ಕಮ್ಮನಿಗೆ ಮೇಲೆ ಮೇಲೆ ಹೆರಿಗೆ. ಎಲ್ಲ ಗಂಡು ಮಕ್ಕಳೇ. ನನಗೆ ತಮ್ಮಂದಿರೆಂದರೆ ಬಹುಪ್ರೀತಿ. ಈಗ ಅವರೆಲ್ಲ ಹೇಗಿದ್ದಾರೋ ಎಲ್ಲಿದ್ದಾರೋ ನನಗೆ ಗೊತ್ತಿಲ್ಲ. ಇಲ್ಲಿಗೆ ಅವರು ಬಂದದ್ದಿಲ್ಲ. ನಾನಂತೂ ಹೋದದ್ದೇ ಇಲ್ಲ. ನನ್ನ ಚಿಕ್ಕಮ್ಮನೂ ಒಳ್ಳೆಯ ಹೆಂಗಸು. ನನ್ನಪ್ಪ ತೀರಿಹೋದ ಮರುವರ್ಷವೇ ಅವಳು ತೀರಿ ಹೋದಳೆಂದು, ಅದೇ ವರ್ಷ ಕಾವೇರಿ ಯಾತ್ರೆಗೆ ಹೋಗಿ ಬಂದ ಗುಂಡಿಮನೆ ವೆಂಕಟರಮಣಯ್ಯನವರು ಹೇಳಿದ್ದರು. ಮತ್ತೆ ಅಲ್ಲಿಯ ಸುದ್ದಿಯೇ ಇಲ್ಲ. ಯಾರ ಸುದ್ದಿ ನನಗೆ ಯಾಕೆ?’’

“ನನ್ನ ಮದುವೆಗಾಗಿ ನನ್ನಪ್ಪ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನ್ನದಕ್ಕೆ ಕೂಡಿಬರುವ ಜಾತಕ ಆ ಸೀಮೆಯಲ್ಲಿಯೇ ಸಿಕ್ಕಲಿಲ್ಲವಂತೆ. ಮತ್ತೆ ಅವರು ಹುಡುಕಿ ಈ ಸೀಮೆಗೆ ಬಂದರಂತೆ. ‘ಈ ಮನೆಯವರ’ ಒಬ್ಬರ ಜಾತಕ ಕೂಡಿ ಬಂತಂತೆ. ಎಂಥಾ ಕೂಡಿ ಬಂದದ್ದೋ! ನಿಜವಾಗಿ ಕೂಡಿ ಬಂದರೆ ಹೀಗಾಗಬೇಕೆ? ಪಾಪ, ನನ್ನಪ್ಪನಿಗೆ ಹೊರೆಯೊಂದು ಇಳಿದಂತಾಯಿತು. ನನಗೆ ಹದಿಮೂರು ವರ್ಷ ತುಂಬಿತ್ತು. ಮದುವೆಯಾಗಿ ಮರುದಿಬ್ಬಣ ಬಂದದ್ದು ‘ದೋಲಿ’ಯಲ್ಲಿ. ನನಗೆ ಆ ಪ್ರಾಯದಲ್ಲಿ ಹದಿನಾರು ಹರದಾರಿ ನಡೆಯಲಿಕ್ಕಾಗುವುದಿಲ್ಲವೆಂದು ಅಪ್ಪ ಬಲ್ಲಾಳರ ಮನೆಯಿಂದ ದೊಡ್ಡ ದೋಲಿ ತರಿಸಿದರು. ಆ ಸಮಯದಲ್ಲಿ ಈವೂರಿಗೆ ರಸ್ತೆ ಇದ್ದಿಲ್ಲ. ಆದುದರಿಂದ ಗಾಡಿ ಮಾಡುವಂತಿರಲಿಲ್ಲ. ಚಿಕ್ಕಮ್ಮ ಬರಲಿಲ್ಲ. ಅವಳು ಬಾಣಂತಿ. ಎಲ್ಲರೂ ನಡೆದದ್ದೇ. ನಾನು ‘ಅವರೂ’ ಮಾತ್ರ ದೋಲಿಯಲ್ಲಿ. ಅವರನ್ನು ನಾನು ಸರಿಯಾಗಿ ನೋಡಿದ್ದು ದೋಲಿಯಲ್ಲಿಯೇ. ಅರಸಿನ ಬಿಳಿ ಮೆಯ್ ಬಣ್ಣ; ನುಣುನುಣುಪು ಕೈಬೆರಳು; ಮೋರೆಯಲ್ಲಿ ಯಾವಾಗಲೂ ನಗೆಯೇ. ಉದ್ದ ತಲೆಕೂದಲು; ಜುಟ್ಟು ಕಟ್ಟಿದರೆ ಎರಡು ಕೈತುಂಬ. ಸೂ! ಏನಾದರೇನು! ನನಗೆ ಹಣೆಬರಹ ಬೇಡವೋ?’’ಸ್ವಲ್ಪ ಹೊತ್ತು ದೃಷ್ಟಿಯನ್ನು ತಗ್ಗಿಸಿ ಏನೋ ಧ್ಯಾನಿಸಿ ಅನಂತರ ಮುಂದೆ ಹೇಳಿದರು:

“ಗೃಹಪ್ರವೇಶವಾಗಿ ಅಪ್ಪನ ಮನೆಗೆ ನಾವಿಬ್ಬರೂ ಹೋದ ಮೇಲೆ ‘ಅವರು’ ಅಲ್ಲಿದ್ದುದು ಎರಡೇ ದಿನ. ಇಲ್ಲಿ ಅವರಜ್ಜನ ಶ್ರಾದ್ಧವಿದ್ದುದರಿಂದ ಕೂಡಲೇ ಬರಬೇಕೆಂದು ಮಾವನವರು ಹೇಳಿದ್ದರು. ಹಿರಿಯ ಮಗನಲ್ಲವೋ? ಹಾಗೆ ಅವರು ಬಂದ ಮೇಲೆ ಮತ್ತೆ ಆರು ತಿಂಗಳು ನನ್ನನ್ನು ಕರೆದುಕೊಂಡು ಹೋಗಲು ಇಲ್ಲಿಂದ ಯಾರೂ ಬರಲಿಲ್ಲ. ಸಣ್ಣವಳು, ನಡೆಯಲಿಕ್ಕಾಗಲಿಕ್ಕಿಲ್ಲ ಎಂದಿರಬಹುದು. ನನ್ನತ್ತೆಯವರಿಗೆ ಸೊಸೆಯಂದಿರ ಮೇಲೆ ಅತಿ ಕರುಣೆ. ನನ್ನಪ್ಪನ ಮನೆಯಲ್ಲಿ ನವರಾತ್ರಿ ಭಾರಿ ಗದ್ದಲ, ಒಂಬತ್ತು ದಿನ ಮಹಾಪೂಜೆ. ಎಂಥಾ ಮಂಡಲ! ಎಷ್ಟು ಬಣ್ಣ! ಎಷ್ಟಾರತಿ! ಎಂಥಾ ಮಂತ್ರಘೋಷ! ದಶಮಿ ದಿನ ಸಮಾರಾಧನೆಗೆ ಎಷ್ಟು ಬಗೆ ಪರಮಾನ್ನ! ಎಷ್ಟು ಬಗೆ ಕಜ್ಜಾಯ! ಈ ಪೂಜೆಗೆ ನನ್ನಪ್ಪ ಅಳಿಯನಿಗೆ ಕರೆ ಕಳುಹಿಸಿದರು. ಒಂದು ಕಾಗದ ಕೊಟ್ಟು, ಎರಡಾಳುಗಳನ್ನು ಇಲ್ಲಿಗೆ ಕಳುಹಿಸಿದರು. ಯಾವಾಗ ಬರುವರೆಂದು ನಾನು ಅಲ್ಲಿ ದಾರಿ ನೋಡುತ್ತಲೇ ಇದ್ದೆ. ಐದಾರು ದಿನಗಳಲ್ಲಿ ಬಂದರು. ಅವರು ಬಂದು ಮನೆಮೆಟ್ಟಿಲು ಹತ್ತಿದ್ದು ಈಗಲೂ ನನ್ನ ಕಣ್ಣಿನಲ್ಲಿದೆ. ತಲೆಗೆ ಗದ್ದೆಮಡಿ ಪಟ್ಟೆ ಎಲೆವಸ್ತ್ರ ಹೆಗಲಿಗೆ ನನ್ನಪ್ಪ ಮದುವೆಗೆ ಉಡುಗೊರೆ ಮಾಡಿದ ಐದು ಬೆರಳಗಲದ ಕಂಬಿಯ ದೋತರ. ಉಟ್ಟಿದ್ದು ಮಡಿ ಮಾಡಿಸಿದ ಮಂಗಲಜವುಳಿ. ಕೈಯಲ್ಲೊಂದು ‘ಸುಗಂಧಿ’ ತುಂಡು. ಕಾಲಿಗೆ ಎಣ್ಣೆಮೇಣದ ಬೇಗಡೆ ಹೂವಿನ ಮೆಟ್ಟು. ಸೂ! ಆ ರೂಪಿನಲ್ಲೇ ಬಂದರು, ಆ ರೂಪಿನಲ್ಲೇ ಹೋದರು!

‘ಅವರು’ ನವರಾತ್ರಿ ಪೂಜೆಗೆ ಬಂದವರು ‘ಹಬ್ಬ’ (ದೀಪಾವಳಿ)ದವರೆಗೂ ಅಲ್ಲೇ ಇದ್ದರು. ಮಾವನವರಿಗೆ ನನ್ನಪ್ಪ ಕಾಗದದಲ್ಲಿ ಹಾಗೇ ಬರೆದಿದ್ದರಂತೆ – ನವರಾತ್ರಿಗೆ ‘ಅವರು’ ಬರಬೇಕು, ಹಬ್ಬ ಕಳೆದು ಅಳಿಯನನ್ನೂ ಮಗಳನ್ನೂ ಒಟ್ಟಿಗೆ ಕಳುಹಿಸಿಕೊಡುತ್ತೇನೆಂದು. ಆ ಒಂದು ತಿಂಗಳು ನನ್ನಪ್ಪನ ಮನೆಯಲ್ಲಿ ಎಂದೂ ಇಲ್ಲದಿದ್ದ ಸುಖಸಂತೋಷ. ಒಮ್ಮೊಮ್ಮೆ ಅಪ್ಪನೊಟ್ಟಿಗೆ ‘ಅವರೂ’ ಅತ್ತಿತ್ತ ಬಯಲಲ್ಲೋ, ಗುಡ್ಡದಲ್ಲೋ ತಿರುಗಾಡಲು ಹೋಗುತ್ತಿದ್ದರು. ನಾನೂ ಅವರ ಜತೆಯಲ್ಲಿ ಬರಬೇಕೆಂದು ‘ಅವರ’ ಮನಸ್ಸಿನಲ್ಲಿತ್ತು. ಯಾರಾದರೂ ಹಾಸ್ಯ ಮಾಡಬಹುದೆಂದು ನನಗೆ ಅಂಜಿಕೆ. ಒಂದು ದಿನ ಹೊರಡುವಾಗ ಬಾಯಿಬಿಟ್ಟು ಕರೆದರು. ನಾನು ‘ಊಂಹುಂ’ ಎಂದು ಓಡಿದೆ. ಅವರಿಗೆ ಆಸೆ ತೀರಲಿಲ್ಲ. ಯಾಕೆ ಬಂತೋ ಆ ಆಸೆ! ಮರುದಿನ ಹೇಗೂ ನನ್ನನ್ನು ಒಪ್ಪಿಸಿದರು. ಅಪ್ಪ ಮಧ್ಯಾಹ್ನದ ಊಟಮಾಡಿ ಮಲಗಿದ್ದರು. ನಾವಿಬ್ಬರೇ ಹೊರಟೆವು. ಅಯ್ಯೋ ಮಗು! ನಾನು ಯಾಕೆ ಅಲ್ಲಿಗೆ ಅವರನ್ನು ಕರೆದುಕೊಂಡು ಹೋದೆನೊ!

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ನಾವು ಗದ್ದೆ ಬಯಿಲಿನ ಕೊನೆಗೆ ಹೋದೆವು. ಅದರಿಂದ ಮೇಲೆ ನನ್ನಪ್ಪನ ಸಣ್ಣದೊಂದು ಅಡಿಕೆ ತೋಟ. ಮೇಲೆ ದೊಡ್ಡ ಬೆಟ್ಟ. ಬೆಟ್ಟದ ಬುಡದಲ್ಲಿ ತುಂಬ ಏಲಕ್ಕಿ ಗಿಡ. ನನ್ನಪ್ಪ ಅದನ್ನೆಲ್ಲ ಅವರಿಗೆ ತೋರಿಸಿದ್ದರಂತೆ. ಆದರೆ ಮುಂದೆ ದಾರಿ ಸರಿ ಇಲ್ಲ. ಹೋಗುವುದು ಬೇಡ ಎಂದು ಮರಳಿದ್ದರಂತೆ. ಮೇಲೊಂದು ‘ಶಾಸ್ತಾ’ ವಿನ ಸಣ್ಣ ಗುಡಿಯಿತ್ತು. ಅದು ಇಡೀ ಕಗ್ಗಲ್ಲಿನದೇ, ಮಾಡು ಕೂಡ ಹಾಸುಗಲ್ಲು. ವರ್ಷಕ್ಕೊಮ್ಮೆ ಅಲ್ಲಿ ಆರಾಧನೆ ಮಾಡುವುದಕ್ಕಾಗಿ ಸುಳ್ಯದಿಂದ ತಂತ್ರಿಗಳನ್ನು ನನ್ನಪ್ಪ ಕರೆಯಿಸುತ್ತಿದ್ದರು. ಬೇರೆ ದಿನಗಳಲ್ಲಿ ಅಲ್ಲಿ ಹೋಗುವವರು ಬಹಳ ಕಡಿಮೆ. ಆದರೆ ಅಲ್ಲೊಂದು ನಾಗಸಂಪಿಗೆ ಮರವಿದ್ದುದರಿಂದ ಅದರ ಹೂವಿಗಾಗಿ ನಾನು ಒಮ್ಮೊಮ್ಮೆ ಹೋಗುತ್ತಿದ್ದೆ. ನಾಗಸಂಪಗೆ ಹೂವೆಂದರೆ ನನಗೆ ಜೀವ. ಮಗೂ! ಈಗ ಕೂಡ ಎಲ್ಲಿಯಾದರೂ ಆ ಹೂ ಕಂಡರೆ ತೆಗೆದು ಮೂಸಿಹೋಗುತ್ತದೆ. ನನಗೆ ಹೂವಾಗದೆಂಬ ನೆನಪೇ ಆಗುವುದಿಲ್ಲ. ಮಗು! ಏನು ಮಾಡಲಿ? ನನ್ನ ಹಣೆಬರಹ. ಸೂ! ‘ಹಬ್ಬ’ದ ಸಮಯದಲ್ಲಿ ನಾಗಸಂಪಗೆ ಹೂವಾಗುವುದಿಲ್ಲ. ಆದರೂ ಅಲ್ಲೆಲ್ಲ ನೋಡಬೇಕೆಂದು ‘ಅವರು’ ಹೇಳಿದುದರಿಂದ, ಮೇಲೆ ಕರೆದುಕೊಂಡು ಹೋದೆ. ಅವರಿಗೆ ಅಲ್ಲೆಲ್ಲ ನೋಡಿ ಬಹಳ ಸಂತೋಷವಾಯಿತು. ಅದು ಅಷ್ಟು ಚಂದದ ಸ್ಥಳ. ಒಂದೆಡೆ ಬೆತ್ತದ ‘ಹಿಂಡಿಲಿ’ ನ ಎಡೆಯಿಂದ ತಿಳಿ ನೀರು ಅಡಕೆಯ ಸಿಂಗಾರದಂತೆ ಹಾರಿ ಬರುತ್ತಿತ್ತು. ಅದನ್ನು ನಾವಿಬ್ಬರೂ ಮುಟ್ಟಿ ಮುಟ್ಟಿ ಒಬ್ಬರೊಬ್ಬರ ಮುಖಕ್ಕೆ ಸಿಡಿಸಿಕೊಂಡೆವು. ಬೇಕಾದಷ್ಟು ಮಾತಾಡಿದೆವು. ನಾನು ಅವರೊಡನೆ ಅದಕ್ಕೆ ಮೊದಲು ಅಷ್ಟು ಮಾತಾಡಿದ್ದೇ ಇಲ್ಲ. ಮತ್ತೆಯೂ ಇಲ್ಲ! ಹೂಂ. ಗುಡಿಯ ಹಿಂದೆಲ್ಲ ನಾಗರಬೆತ್ತದ ಬಳಿ ಹೊದರು. ಅಲ್ಲಿಯ ಬೆತ್ತವೆಂದರೆ ಬಹಳ ಹೆಸರಿನದು. ಆದರೆ ‘ಶಾಸ್ತಾವು’ ಕಾರಣಿಕದ್ದು. ಆದುದರಿಂದ ಸಾಧಾರಣದವರೆಲ್ಲ ಅಲ್ಲಿ ಬೆತ್ತ ಕಡಿಯಲು ಹೆದರುತ್ತಿದ್ದರು.

ಮಂತ್ರವಾದಿಗಳು ಬಂದು, ಪ್ರಾರ್ಥನೆ ಮಾಡಿ ಕಡಿಯಬೇಕು. ಅವರಿಗೆ ಇಂಥಾದ್ದರಲ್ಲೆಲ್ಲ ನಂಬಿಕೆಯೇ ಇಲ್ಲ. ಇಲ್ಲಿ ನನ್ನ ಮಾವನವರಿಗೂ ‘ಅವರಿ’ಗೂ ಅಂಥಾ ಸಂಗತಿಯಲ್ಲಿ ಯಾವಾಗಲೂ ತರ್ಕವಂತೆ; ನನ್ನತ್ತೆಯವರಿರುವಾಗ ಹೇಳುತ್ತಿದ್ದರು. ಯಾವಾಗಲೂ ಕುಂಪಿನಿಯವರನ್ನು ಹೊಗಳುವುದು, ಅಯ್ಯೋ! ಮೊದಲು ಗೊತ್ತಿದ್ದರೆ ಹಾಗೆ ಹೊಗಳುತ್ತಿದ್ದರೇ? ಪಾಪ! ತುರುಕರ ಹಾವಳಿಯನ್ನು ನಿಲ್ಲಿಸಿದರೆಂದು ಕುಂಪಿನಿಯವರ ಮೇಲೆ ಭಕ್ತಿ. ಸೂ! ನಾವು ಗುಡಿಯ ಬಾಗಿಲಿಗೆ ಹೋದೆವು. ಅದಕ್ಕೆ ಬಾಗಿಲ ಪಡಿ ಇಲ್ಲ. ಒಳಗೆ ಶಾಸ್ತಾವಿನ ಮೂರ್ತಿ. ಇಣಿಕಿ ನೋಡಿದರು. ಯಾವ ಮಂತ್ರವಾದಿ ಯಾಕೆ ಕಡಿದಿಟ್ಟದ್ದೋ, ಒಂದು ನಾಗರಬೆತ್ತ ಬಿದ್ದಿತ್ತು. ಬೇಡ ಬೇಡ ಎಂದು ಎಷ್ಟು ಹೇಳಿದರೂ ಕೇಳದೆ ಕೈಹಾಕಿ ತೆಗೆದುಬಿಟ್ಟರು! “ನೋಡು, ಎಂಥಾ ಬೆತ್ತ! ಇದನ್ನು ಯಾರು ಬಿಟ್ಟಾರು? ಇದು ಕುಂಪಿನಿ ರಾಜ್ಯ, ಈಗ ಇಲ್ಲಿ ಕಾರಣಿಕವೂ ಇಲ್ಲ, ಏನೂ ಇಲ್ಲ” ಎಂದು ಹೇಳಿ, “ಇಲ್ಲಿಗೆ ಬಂದದ್ದು ಸಾರ್ಥಕವಾಯಿತು. ಇನ್ನು ಹೋಗುವ” ಎಂದು ಹೇಳಿ ಹೊರಟರು. ನಾನು ಹಿಂಬಾಲಿಸಿದೆ, ನನಗೆ ಮನಸ್ಸಿನಲ್ಲಿ ಆಗಲೇ ಒಂದು ‘ಕಳ್ಳ’ ನುಗ್ಗಿತ್ತು. ಆದರೆ ಗಂಡಸರು ನಮ್ಮ ಮಾತು ಕೇಳುತ್ತಾರೋ? ಬರುವಾಗ ನಾನು ಹೆಚ್ಚು ಮಾತಾಡಲಿಲ್ಲ. ಅವರು ಬೆತ್ತದ ಕುರಿತು ಹೇಳುತ್ತಲೇ ಇದ್ದರು. ಅವರು ಹೇಳಿದ್ದಕ್ಕೆ ಹುಂಗುಟ್ಟುತ್ತಾ ಬಂದೆ.

ನನ್ನಪ್ಪ ಜಗಲಿಯಲ್ಲಿ ನಿಂತು ನಾವು ಬರುವುದನ್ನೇ ನೋಡುತ್ತಿದ್ದರು. ಅವರ ಮುಗುಳುನಗೆ ಕಂಡು ನನಗೆ ನಾಚಿಕೆಯಾಯಿತು. ನಾನು ಓಡಿಹೋಗಿ ‘ಕುರುಬಾಗಿಲ’ಲ್ಲಿ ಒಳನುಗ್ಗಿದೆ. ಚಿಕ್ಕಮ್ಮನ ಮೋರೆಯನ್ನು ನೋಡುವ ಧೈರ್ಯವೇ ನನಗಾಗಲಿಲ್ಲ. ನಾನು ಕೈಸಾಲೆಯ ಕತ್ತಲೆ ಮೂಲೆಯಲ್ಲಿ ನಿಂತುಕೊಂಡು ಹೊರಗಿನ ಮಾತನ್ನು ಕೇಳುತ್ತಿದ್ದೆ.

“ಇದೆಲ್ಲಿಂದ ಬೆತ್ತ? ಈಗ ಕಡಿದ ಹಾಗಿಲ್ಲ” ಎಂದರು ನನ್ನಪ್ಪ. “ಶಾಸ್ತಾವಿನ ಬಳಿಯಲ್ಲಿ ಬಿದ್ದಿತ್ತು. ಯಾರೋ ಪುಣ್ಯಾತ್ಮರು ಕಡಿದಿಟ್ಟಿದ್ದರು. ಬಿಡುವುದಕ್ಕೆ ಮನಸ್ಸು ಬರಲಿಲ್ಲ. ತೆಗೆದುಕೊಂಡೆ. ಇದರ ಮಚ್ಚೆ ನೋಡಿ! ಇದರ ಗಂಟುಗಳು ಎಷ್ಟು ಹತ್ತಿರ; ಒಂದಕ್ಕೊಂದು ಎಷ್ಟು ಸಮ! ಇಂಥಾ ಬೆತ್ತವನ್ನೇ ನಮ್ಮ ಪಟೇಲರು ಎಲ್ಲಿಂದಲೋ ಹೋದ ವರ್ಷ ತರಿಸಿದ್ದರು. ಐದು ರೂಪಾಯಿ ಕೊಟ್ಟರಂತೆ. ಅದಕ್ಕಿಂತ ಇದು ಒಂದು ಬಣ್ಣ ಮಿಗಿಲಾದೀತು ಹೊರತು ಕಮ್ಮಿಯಲ್ಲ. ಬೆಳ್ಳಿ ಕಟ್ಟಿಸಿದರೆ ಮುದ್ದುಮುದ್ದಾಗಿ ಕಂಡೀತು. ಒಬ್ಬನಿಗೆ ಒಂದೇ ಹೊಡೆತ ಸಾಕು. ನೋಡಿ ಇದರ ಭಾರ!’’ ಎಂದರು ಅವರು. ನನ್ನಪ್ಪ, “ನಿನಗೆ ಬೆತ್ತ ಬೇಕಾದರೆ ನಾನು ತರಿಸಿಕೊಡುತ್ತಿದ್ದೆ. ಅಲ್ಲಿರುವುದೆಲ್ಲ ಶಾಸ್ತಾವಿನ ಬೆತ್ತ. ತಂತ್ರಿಗಳಿಲ್ಲದೆ ನಾವದನ್ನು ಕಡಿಯುವ ಕಟ್ಟಳೆ ಇಲ್ಲ. ಅಷ್ಟೆ” ಎಂದರು. “ಏನು ಮಾವ? ನಿಮಗೆ ಭ್ರಾಂತೋ? ಕುಂಪನಿಯವರಿಗೆ ಈ ಶಂಕೆಯೆಲ್ಲ ಉಂಟೇ? ನೋಡಿ, ಈಗ ನಮ್ಮೂರಿನಿಂದ ಮಂಗಳೂರಿಗೆ ಮಾರ್ಗ ಕಡಿಸಲು ತೊಡಗಿದ್ದಾರೆ. ಕಳೆದ ತಿಂಗಳಲ್ಲಿ ಏನಾಯಿತು ಗೊತ್ತುಂಟೋ? ನಮ್ಮ ಗ್ರಾಮದ ಭೂತಸ್ಥಾನದ ಬಾಗಿಲಲ್ಲಿ ಒಂದು ಅಶ್ವತ್ಥದ ಕಟ್ಟೆ ಇತ್ತು. ಮರ ಬಹಳ ಮುದಿಯಾಗಿ ಹೋಗಿತ್ತು. ಅದರ ಬುಡದಲ್ಲಿ ಏಳೆಂಟು ನಾಗನ ಕಲ್ಲುಗಳು. ಬಯಲನ್ನು ಸೀಳಿ ರಸ್ತೆ ಬರುವಾಗ ಅದು ಅಡ್ಡ ಬಂತು. ಜನ ಯಾರೂ ಕಡಿಯಲಿಕ್ಕೆ ಒಪ್ಪಲಿಲ್ಲ. ಒಬ್ಬ ಬಿಳಿ ಮೋರೆಯವ ಬಂದ; ಒಬ್ಬ ಜಾತಿಕೆಟ್ಟ ಹೊಲೆಯನ ಕೈಯಲ್ಲಿ ಪೂರಾ ತೆಗೆಯಿಸಿಬಿಟ್ಟ! ಅವನಿಗೇನಾಯಿತು? ಹೊಲೆಯನಿಗೇನಾಯಿತು? ಹೇಳಿ! ಈ ಭ್ರಾಂತೆಲ್ಲ ಇಲ್ಲದಿದ್ದುದರಿಂದಲೇ ಕುಂಪಿನಿಯವರು ರಾಜ್ಯವನ್ನೆಲ್ಲ ಹಿಡಿದಿದ್ದಾರೆ.’’ ಎಂದು ಅವರು ಹೇಳಿದ ಮೇಲೆ ನನ್ನಪ್ಪ ಹೆಚ್ಚೇನೂ ಆ ಕುರಿತು ಮಾತಾಡಲಿಲ್ಲ.
ಅವರಿಗೆ ಬೆತ್ತ ಸಿಕ್ಕಿದ ಸಂತೋಷ ಅಷ್ಟಿಷ್ಟಲ್ಲ. ಆ ದಿನ ಅವರ ತುದಿಗಳನ್ನು ನಯಗೊಳಿಸಿ, ನೋಡಿ ನೋಡಿ ಮೆಚ್ಚುವುದರಲ್ಲಿ ಸಂಜೆಯಾಯಿತು.

ಮರುದಿನ ಬೆಳಗ್ಗೆ ನನ್ನಪ್ಪನನ್ನು ಕರೆದುಕೊಂಡು ಒಂದು ಹರದಾರಿ ದೂರದಲ್ಲಿದ್ದ ರಾಮಾಚಾರಿಯ ಮನೆಗೆ ಹೋಗಿ ಮಧ್ಯಾಹ್ನದೊಳಗೆ ಬೆಳ್ಳಿಯ ಕಟ್ಟ ಹಾಕಿಸಿಕೊಂಡು ಬಂದರು. ಅದು ತತ್ಕಾಲಕ್ಕೆ ಹಾಕಿದ ಕಟ್ಟ. ಇನ್ನೊಂದು ಬಾರಿ ಬಂದಾಗ “ಹುಲಿಮೋರೆ” ಯಿಟ್ಟು ಕಟ್ಟಿಕೊಡಬೇಕೆಂದು ರಾಮಾಚಾರಿಗೆ ಅಪ್ಪನಿಂದ ಹೇಳಿಸಿದರಂತೆ! ಅವನೂ ಒಪ್ಪಿದನಂತೆ. ಅಲ್ಲಿಂದ ಬಂದು ಸ್ನಾನ ಮಾಡುವಾಗ ನನ್ನ ಹತ್ತಿರ ಹಾಗೆಲ್ಲ ಹೇಳಿದರು. ಆದರೆ ಹುಲಿಮೋರೆ…. ಹುಲಿಮೋರೆ….! ಅಯ್ಯೋ! ಮನೆಯ ದಾರಿಯಲ್ಲಿಯೇ ಕಾಣುವಂತಾಯಿತು!’’ ಎಂದು ದೇವಜ್ಜಿ ನಡುಗು ದನಿಯಲ್ಲಿ ನುಡಿದು ಮೋರೆಗೆ ಸೆರಗು ಮುಚ್ಚಿಕೊಂಡರು.

ಸ್ವಲ್ಪ ಹೊತ್ತು ಸುಮ್ಮನಿದ್ದು ಏನೋ ಧ್ಯಾನಿಸಿ, ಮತ್ತೆ ತೊಡಗಿದರು -“ಆ ಮೇಲೆ ಮೂರು ದಿನಗಳಲ್ಲಿ ‘ಹಬ್ಬ’ ಬಂತು. ಚಿಕ್ಕಮ್ಮ ‘ಅವರಿ’ಗೂ ನನಗೂ ಎಣ್ಣೆಯೆರೆದರು; ನನ್ನ ಹೆತ್ತ ತಾಯಂತೆಯೇ ನನ್ನ ಮೆಯ್ಗೆ ಎಣ್ಣೆ ಕಿಟ್ಟಿದರು. ‘ಅವರಿ’ಗೆ ನನ್ನಪ್ಪನೇ ಎಣ್ಣೆ ಹಚ್ಚಿದರು. ಅಳಿಯನೆಂದರೆ ಅವರಿಗೆ ಮಗನ ಹಾಗೆ ಅಷ್ಟು ಪ್ರೀತಿಯಾಗಿ ಹೋಗಿತ್ತು. ಚಿಕ್ಕಮ್ಮ ನಮಗಿಬ್ಬರಿಗೂ ಒಟ್ಟಿಗೆ ನೀರು ಹಾಕಿದರು. ನನ್ನಪ್ಪನ ಮನೆಯ ಬಚ್ಚಲ ಮನೆಯೆಂದರೆ ಸಣ್ಣದಲ್ಲ, ಗುಳಿಯೂ ದೊಡ್ಡದು. ಯಾವಾಗಲೂ ಎರಡು ಹರವಿಗಳಲ್ಲಿ ನೀರು ಕಾಯುತ್ತಲೇ ಇರಬೇಕು. ಭಾರಿ ಸ್ನಾನವಾಯಿತು. ಸಮ್ಮಾನವಾಯಿತು. ಹಬ್ಬದ ಪಾಡ್ಯದ ದಿನ ಉಡುಗೊರೆಯಾಯಿತು. ಸೀರೆ ದೋತರಗಳಲ್ಲದೆ, ನನ್ನ ಕೈಗೆ ಹವಳದ ಕಟ್ಟಿನ ಬಳೆಗಳನ್ನೂ, ಅವರ ಕೈಗೆ ಕೆಂಪು ಕಲ್ಲಿನ ಉಂಗುರವನ್ನೂ ಅಪ್ಪನೇ ತೊಡಿಸಿದರು. ಆದರೆ ಆ ಕೈಯನ್ನು ನೋಡುವ ಭಾಗ್ಯ ನನಗೆ ಮತ್ತೆ ಇದ್ದದ್ದು ಎಷ್ಟು ದಿನ ಮಗು? ಮುಂದೆ ಹೇಳಲು ಕಷ್ಟವಾಗುತ್ತದೆ …. ಗಂಟಲು ಬಿಗಿಯುತ್ತಿದೆ! …… ಆದರೆ ಹೇಳತೊಡಗಿದರೆ ನಿಲ್ಲಿಸಲಿಕ್ಕಾಗುವುದಿಲ್ಲ. ಮಗೂ!’’ ಎಂದು ಕಟ್ಟಿ ಕಟ್ಟಿ ಹೇಳಿ, ಮತ್ತೆ ಬಿಕ್ಕಿ ಬಿಕ್ಕಿ ಅತ್ತರು.

ಮುಂದೆ ದೇವಜ್ಜಿಗೆ ಹೇಳುವುದು ಅತಿ ಕಷ್ಟವಾಯಿತು. ಅವರ ಸ್ಥಿತಿಯನ್ನು ನೋಡಿ ನನಗೂ ಅಂತರಂಗದಲ್ಲಿ ಅತಿ ವೇದನೆಯಾಯಿತು. ಆದರೆ ಅವರಿಗೆ ಕೊನೆಯ ತನಕ ಹೇಳಿ ಮುಗಿಸದೆ ಇರಲು ಸಾಧ್ಯವಾಗುವಂತಿರಲಿಲ್ಲ. ನನಗಾದರೂ ಪೂರ್ಣವಾಗಿ ಕೇಳದೆ ಮನಸ್ಸು ನಿಲ್ಲುವಂತಿರಲಿಲ್ಲ. ಅವರು ತಡೆದು ತಡೆದು ಅತ್ತು ಅತ್ತು ಹೇಗೋ ಹೇಳಿದರು; ನಾನೂ ನನ್ನ ಕಣ್ಣೊರೆಸಿ ಅವರ ಕಣ್ಣೊರೆಸಿ ಅವರ ಮಡಿಲಲ್ಲಿ ತಲೆಯಿಟ್ಟು ಹೇಗೋ ಕೇಳಿದೆ. ಆದುದರಿಂದ ಮುಂದಿನ ಕಥೆಯನ್ನು ಅವರು ಹೇಳಿದ ಸರಣಿಯಲ್ಲಿಯೇ ನಾನಿಂದು ಬರೆಯಲಾರೆ. ಅವರು ಹೇಳಿದುದೆಲ್ಲ ಅಲ್ಲಲ್ಲಿ ತುಂಡುತುಂಡಾಗಿ, ಕೆಲವು ಮಾತುಗಳು ಅಸ್ಫುಟವಾಗಿ, ಕೆಲವೆಲ್ಲ ಕೈಬಾಯಿಯ ಸನ್ನೆಯಾಗಿ ಹೋಗುತ್ತಿತ್ತು. ಅದರ ತಾತ್ಪರ್ಯವನ್ನು ತೆಗೆದು ಇಲ್ಲಿ ಕೊಡುತ್ತೇನೆ. ಆದುದರಿಂದ ಮುಂದಿನ ಕಥಾಭಾಗದಲ್ಲಿ ಆ ನೊಂದೆದೆಯ ‘ಬೇವಿನ’ ಪಾಕವು ಕಾಣದಿದ್ದರೆ ವಾಚಕರು ಮನ್ನಿಸಬೇಕು.

ನಾನು ಆ ದಿನ ಊಟ ಮಾಡಲಿಲ್ಲ. ನನ್ನನ್ನು ಊಟಕ್ಕೆಬ್ಬಿಸಲು ತಾಯಿ ಬಂದರು. ನಾನು ಎಚ್ಚರವಿದ್ದರೂ ಏಳಲಿಲ್ಲ. “ನಿನಗೆ ಹಸಿವಿಲ್ಲ” ಎಂದು ಹೇಳಿ ಒಳಗೆ ಹೋದರು. ಅವರೂ ಅಂದು ಊಟ ಮಾಡಿದರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಬೆಳಿಗ್ಗೆ ಎದ್ದು ಮುಖ ತೊಳೆದು ವಿಭೂತಿ ಹಾಕಿ ದೇವರಿಗೆ ನಮಸ್ಕರಿಸಿ, ಭಾಗವತದ ಓಲೆಪುಸ್ತಕವನ್ನು ತೆಗೆದುಕೊಂಡು ಓದುವುದಕ್ಕೆ ಕುಳಿತೆ. ಕಣ್ಣಿನಿಂದ ನೀರು ಇಳಿಯುತ್ತಲೇ ಇದ್ದುದರಿಂದ ಓದಲಾಗಲಿಲ್ಲ. ಪುಸ್ತಕವನ್ನು ಕಟ್ಟಿಟ್ಟೆ.

ದೀಪಾವಳಿ ಹಬ್ಬ ಕಳೆದು ಎರಡು ದಿನಗಳ ಮೇಲೆ ಆ ದಂಪತಿಗಳು ನಮ್ಮ ಮನೆಗೆ ಹೊರಟರು. ಜತೆಗೆ ಎರಡು ಆಳುಗಳನ್ನು ನಮ್ಮ ದೇವಜ್ಜಿಯ ತಂದೆ ಕಳುಹಿಸಿಕೊಟ್ಟರು. ಗಂಡಹೆಂಡಿರು ಚೆನ್ನಾಗಿ ಸಿಂಗರಿಸಿಕೊಂಡು, ಒಳಗೆ ದೇವರಿಗೆ ನಮಸ್ಕರಿಸಿ ಚಾವಡಿಯಲ್ಲಿ ಬಂದು ನಿಂತರು; ಅವರ ಅಂದವನ್ನು ಕಣ್ಣು ತುಂಬ ನೋಡುತ್ತಿದ್ದ ಹಿರಿಯರ ಕಾಲುಹಿಡಿದು, ಕಿರಿಯರನ್ನು ಮುಟ್ಟಿ ತಟ್ಟಿ, ಮಕ್ಕಳನ್ನು ಎತ್ತಿ ಮುದ್ದಿಸಿ ಅಂಗಳಕ್ಕಿಳಿದರು. ಗಂಡ ಬೆತ್ತ ಹಿಡಿದು ಮುಂದೆ ನಡೆದರು, ಬೆನ್ನಿಗೆ, ಹೊಸ ಸೀರೆಯ ಬಸಬಸದೊಡನೆ ಹೆಂಡತಿ ಬಂದರು. ಎಡೆತಿಂಡಿಗಾಗಿ ಅವಲಕ್ಕಿ, ಕಾಯಿ, ಬೆಲ್ಲ, ಸಕ್ಕರೆ, ಸೀಯಾಳ ಮೊದಲಾದುವನ್ನೆಲ್ಲ ಆಳುಗಳು ಗಂಟುಕಟ್ಟಿ ಹಿಡಿದುಕೊಂಡಿದ್ದರು. ಅಳಿಯನನ್ನೂ ಮಗಳನ್ನೂ ಕೊಟ್ಟು ಕಳುಹುವುದಕ್ಕಾಗಿ ಯಜಮಾನರು ಅರ್ಧ ಹರದಾರಿಯ ತನಕ, ರಾಜ ರಸ್ತೆಗೆ ದಾರಿ ಕೂಡುವವರೆಗೆ, ಮಾತಾಡುತ್ತಾ ಬಂದರು. ದಂಪತಿಗಳು ಅಲ್ಲಿ ಮತ್ತೊಮ್ಮೆ ಅವರ ಕಾಲು ಹಿಡಿದರು. ಅಳಿಯನನ್ನು ತಲೆಮುಟ್ಟಿ ಮಗಳನ್ನು ಮೆಯ್ ಮುಟ್ಟಿ ಅವರು ಹರಸಿ, ನಿಂತರು! ಇವರು ಮುಂದೆ ನಡೆದರು.

ಮೂರು ದಿನದ ಪಯಣ ಹಾಕಿ ಮನೆಗೆ ಮುಟ್ಟುವುದೆಂದು ನಿಶ್ಚಯವಾಗಿತ್ತು. ಅಲ್ಲಲ್ಲಿ ತಂಗುವುದಕ್ಕೆ ಸಂಬಂಧಿಕರ, ಪರಿಚಿತರ, ಉದಾರಬುದ್ಧಿಯ ಶ್ರೀಮಂತರ ಮನೆಗಳಿದ್ದವು. ಮೊದಲನೆಯ ರಾತ್ರಿ ಗುಜ್ಜರಕಾಡು ಸರಳಾಯರ ಮನೆಯಲ್ಲಿ. ಆ ಮನೆಯವರೆಲ್ಲ ಅತಿಥಿಗಳಲ್ಲಿ ಅತ್ಯಂತ ಆದರವುಳ್ಳವರು. ಊಟ ಉಪಚಾರ ಬಹಳ ಚೆನ್ನಾಯಿತು. ಮರುದಿನ ಬೆಳಗ್ಗೆ ಹಾಗೆಯೇ ಹೊರಡಲು ಅವರು ಬಿಡಲಿಲ್ಲ. ಬೇಗ ಊಟ ಮಾಡಿಸಿ ಕಳುಹಿಸಿಕೊಟ್ಟರು. ಎರಡನೆಯ ರಾತ್ರಿ ಪಡುಮಲೆ ಶಂಭಯ್ಯನವರಲ್ಲಿ. ಅಲ್ಲಿಗೆ ರಸ್ತೆ ಬಿಟ್ಟು ಸ್ವಲ್ಪ ದೂರ ಹೋಗಬೇಕು. ಅವರಿಗೂ ದೇವಜ್ಜಿಯ ತಂದೆಯವರಿಗೂ ದೂರದ ನಂಟತನವಿತ್ತು. ಇವರು ಬಂದುದು ಅವರಿಗೆ ಬಹಳ ಸಂತೋಷಕರವಾಯಿತು, ಅತಿ ಪ್ರೀತಿಯಿಂದ ಆದರಿಸಿದರು. ಮಾತ್ರವಲ್ಲ, ಮರುದಿನ ಹೊರಡಲು ಬಿಡಲಿಲ್ಲ, ಔತಣದ ಊಟ ಮಾಡಿಸಿದರು. ಅದರ ಮರುದಿನ ಬೆಳಗ್ಗೆ ಸ್ನಾನ ಊಟ ತೀರಿದ ಮೇಲೆ ಬೀಳ್ಕೊಟ್ಟರು. ಮತ್ತೂ ಒಂದೂವರೆ ದಿನದ ಹಾದಿ ಉಳಿದಿತ್ತು. ಅದೂ ಕೂಡ ಒಳದಾರಿ, ರಸ್ತೆಯಿಲ್ಲ. ಅಂದಿನ ಇರುಳು ಹೇಗೂ ಕಲ್ಲೂರು ಅಪ್ಪಯ್ಯ ಶಾಸ್ತ್ರಿಗಳಲ್ಲಿ ಮುಟ್ಟಿದರು. ಅವರು ಬಡವರು; ಆದರೂ ದಾರಿಗರಿಗೆ ಸಂತೋಷದಿಂದ ಒಂದು ಚೆಂಬು ನೀರು ಕೊಡುವವರು. ರಾತ್ರಿಯ ಸಾರನ್ನದೂಟ ಬಲು ರುಚಿಯಾಗಿತ್ತು. ಶಾಸ್ತ್ರಿಗಳು ಊರಲ್ಲೆಲ್ಲ ಹೆಸರುಗೊಂಡ ವಿದ್ವಾಂಸರು. ಊಟವಾದ ಮೇಲೆ ಶ್ರೀಮದ್ರಾಮಾಯಣ (ಸಂಸ್ಕೃತ ವಾಲ್ಮೀಕಿ ರಾಮಾಯಣ)ದ ಅರಣ್ಯಕಾಂಡದ ಒಂದೆರಡು ಸರ್ಗಗಳನ್ನು ಓದಿ ಅರ್ಥ ಹೇಳಿದರು. ಅದು ಅತ್ಯಂತ ರಸವತ್ತಾಗಿ ಎದೆಕರಗಿಸಿತು. ಅನಂತರ ಒಂದು ನಿದ್ದೆ. ಕೋಳಿ ಕೂಗುವಾಗಲೇ ಎದ್ದು ಹೊರಟರು. ಸುಮಾರು ಹತ್ತು ಗಳಿಗೆ ಹೊತ್ತಿನವರೆಗೆ ಒಂದೇ ಸಮನೆ ನಡೆದರು, ಗುಮ್ಮಪದವಿಗೆ ಬಂದರು. ಗುಮ್ಮಪದವು ದೊಡ್ಡ ಮೈದಾನು. ಉರಿಬಿಸಿಲಲ್ಲಿ ನಡೆಯುವುದು ಕಷ್ಟವಾಯಿತು. ಹೇಗೂ ಸ್ವಲ್ಪ ದೂರ ನಡೆದು ದೊಡ್ಡದೊಂದು ಆಲದ ಮರದ ಬುಡದಲ್ಲಿ ಕುಳಿತರು. ಸುಖವಾಗಿ ಗಾಳಿ ಬೀಸಿತು, ತಂಪಾಯಿತು. ಪಡುಮಲೆಯಿಂದ ಹೊರಡುವಾಗಲೂ ನಾಲ್ಕು ಸೀಯಾಳ ಕೊಟ್ಟಿದ್ದರಂತೆ. ಅವುಗಳೊಳಗೆ ಎರಡು ಉಳಿದಿದ್ದುವು. ಒಂದನ್ನು ಗಂಡಹೆಂಡಿರು ಕುಡಿದರು. ಮತ್ತೊಂದನ್ನು ಆಳುಗಳಿಗೆ ಕೊಟ್ಟರು. ಅವರು ಬೇಡವೆಂದರು; ಆದರೆ ನಮ್ಮ ದೇವಜ್ಜಿಯ ಗಂಡ ಒತ್ತಾಯಿಸಿದ್ದರಿಂದ ಹೇಗೂ ಕುಡಿದರು. ಆಳುಗಳು ವೀಳ್ಯ ಜಗಿಯುತ್ತಾ ಕುಳಿತಿದ್ದರು.

ಹೀಗೆ ಅವರು ವಿಶ್ರಮಿಸುತ್ತಿದ್ದಾಗ ದೂರದಲ್ಲಿ ನಾಲ್ಕಾರು ಜನ ಕುದುರೆಸವಾರಿ ಮಾಡುತ್ತಾ ಬರುತ್ತಿರುವುದು ಕಂಡಿತು. ದೇವಜ್ಜಿ ಆವರೆಗೆ ಅಂಥಾದ್ದನ್ನು ನೋಡಿರಲಿಲ್ಲವಂತೆ. ಅವರು ಆಶ್ಚರ್ಯಪಟ್ಟು ಕೈತೋರಿ ಗಂಡನೊಡನೆ ಕೇಳಿದರು. ಆಗ ಆಳುಗಳು ದಿಗಿಲಿನ ದನಿಯಲ್ಲಿ “ಸೋಜರರು! ಸೋಜರರು!’’ ಎಂದರು. ದೇವಜ್ಜಿಗೆ ನಡುಗಿತು. “ನಾವು ಮರದಡ್ಡದಲ್ಲಿ ಅಡಗುವ! ಅವರು ಕಂಡದ್ದನ್ನು ಎಳೆದುಕೊಂಡು ಹೋಗುತ್ತಾರೆ! ಹೋದ ವರ್ಷ ಹಾಲೇರಿಯಲ್ಲಿ ನನ್ನಕ್ಕನ ಮಗಳನ್ನು ನಡುರಸ್ತೆಯಲ್ಲಿಯೇ ಹಿಡಿದೆಳೆದರಂತೆ” ಎಂದು ಒಬ್ಬ ಹೇಳಿದ, ಇನ್ನೊಬ್ಬ “ನನ್ನ ತಮ್ಮನ ಕಿವಿ ಹರಿದು ಒಂಟಿ ತೆಗೆದಿದ್ದಾರೆ! ಓಡಿದರೆ ಅಟ್ಟಿ ಹಿಡಿದು ಕೊಲ್ಲುತ್ತಾರೆ!’’ ಎಂದ. ದೇವಜ್ಜಿಗೆ ಕಂಗಾಲಾಯಿತು. ಆದರೆ ಅವರ ಗಂಡ ನಗಾಡಿದರಂತೆ. “ಏನು ಹೇಡಿಗಳೋ ನೀವು! ಬರೀ ಮೂಢರು! ಸುಮ್ಮನಿರಿ. ಅವರೇನು ಮನುಷ್ಯರಲ್ಲವೇ? ಅವರು ಕುಂಪಿನಿ ಸೋಜರರು! ಹಾಗೆಲ್ಲ ಸುಲಿಗೆ ಮಾಡಲು ಅವರು ಕಾಟಕಾಯಿಯವರಲ್ಲ. ನಮ್ಮೂರ ಸಂತೆಯ ಮೂರು ಕಾಸಿಗೊಂದರ ಅರಸುಗಳ ಕಾಟವನ್ನೆಲ್ಲ ನಿಲ್ಲಿಸಿಬಿಟ್ಟಿದ್ದಾರೆ. ನಮ್ಮೂರಲ್ಲಿ ಈಗ ರಾಮರಾಜ್ಯ! ನೋಡಿ, ಎಲ್ಲೆಲ್ಲಿಗೆ ರಸ್ತೆ ಕಡಿಸುತ್ತಿದ್ದಾರೆ! ಎಂಥಾ ಸಂಕ ಕಟ್ಟಿಸಿದ್ದಾರೆ! ಕಳ್ಳರನ್ನೆಲ್ಲ ಹಿಡಿದು ಜೈಲಿಗೆ ತಳ್ಳುತ್ತಾರೆ. ಅದಕ್ಕಾಗಿ ‘ಪುಲಿಸಿ’ನವರು ಕೆಂಪು ಪಗಡಿ ಇಟ್ಟುಕೊಂಡು ಹಳ್ಳಿ ಹಳ್ಳಿ ತಿರುಗುತ್ತಿದ್ದಾರೆ.

ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!’’ ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ ‘ಸೋಜರ’ರು ಅನರ್ಥಗಳನ್ನು ಮಾಡಿದ್ದರೆಂದು ಅವರ ಚಿಕ್ಕಮ್ಮ ಸುದ್ದಿ ಹೇಳಿದ್ದು ನೆನಪಿಗೆ ಬಂತು. ಅವರು ಏನು ಮಾಡುವುದೆಂದು ತಿಳಿಯದೆ ಕಣ್ಣಗಲಿಸಿ ಗಂಡನ ಮುಖವನ್ನು ನೋಡಿ ಕಣ್ಣೀರು ತುಂಬಿ ನಡುನಡುಗಿದರು. ಈ ವಿಹ್ವಲತೆಯನ್ನು ಕಂಡು ಗಂಡನಿಗೆ ಕರುಣೆ ಹುಟ್ಟಿತೆಂದು ತೋರುತ್ತದೆ, ಅವರು “ನೀನು ಬೇಕಾದರೆ ಈ ಮರದ ಮೇಲೆ ಹತ್ತಿ ಕುಳಿತುಕೋ. ನೋಡು, ಅವರೆಂತಹ ದೇವತಾ ಮನುಷ್ಯರೆಂದು!’’ ಎಂದು ಹೇಳಿ ಹೆಂಡತಿಯನ್ನು ಹೆಗಲೇರಿಸಿದರು. ಮರಹತ್ತಿ ಅಭ್ಯಾಸವಿಲ್ಲದಿದ್ದರೂ ಹುಡುಗಿಯಾಗಿದ್ದ ದೇವಜ್ಜಿ ಕೊಂಬೆಯನ್ನು ಹಿಡಿದು ಥಟ್ಟನೆ ಮೇಲೇರಿ ಕುಳಿತರು. ಗಂಡ ಬೆತ್ತ ಹಿಡಿದುಕೊಂಡು ಹತ್ತು ಮಾರು ಮುಂದೆ ನಡೆದು ದಾರಿಯ ಬಳಿಯಲ್ಲಿ ನೆಟ್ಟಗೆ ನಿಂತುಕೊಂಡರು. ಆಳುಗಳು ಮರದ ಬುಡದಲ್ಲಿಯೇ ಕಣ್ಣು ಕಣ್ಣು ಬಿಡುತ್ತಿದ್ದರು.

“ನಾನು ಮರದಲ್ಲಿ ಕುಳಿತು ಎಲ್ಲಾ ನೋಡುತ್ತಿದ್ದೆ. ಮಗೂ! ಅಯ್ಯೋ, ಅದನ್ನು ನೋಡಿದ ಕಣ್ಣು ಇನ್ನೂ ಮುಚ್ಚಲಿಲ್ಲವಲ್ಲಾ!’’ ಎಂದು ದೇವಜ್ಜಿ ಕೊರಗಿದ ದನಿ ನನ್ನೆದೆಯನ್ನು ಈಗಲೂ ಕೊರೆಯುತ್ತಿದೆ.

‘ಸೋಜರ’ರು ಕುಣಿಯುವ ಕುದುರೆಗಳಲ್ಲಿ ಬರುತ್ತಿದ್ದರು. ಭಾರಿ ದೊಡ್ಡ ಕುದುರೆಗಳು! ಅವರ ‘ಕೊಡೆಟೊಪ್ಪಿ’ ಹಣೆಯರ್ಧವನ್ನು ಮುಚ್ಚಿತ್ತು. ಮೆಯ್ಗೆಲ್ಲ ಕೆಂಪಂಗಿ, ಅಂಗಿಯಲ್ಲಿ ಅಲ್ಲಲ್ಲಿ ಜೋಲಾಡುವ ‘ಚೌರಿ’, ಮುಖ ಕೆಂಪು ಕೆಂಪು. ಕೆಲವರಿಗೆ ಮೀಸೆಯಿಲ್ಲ. ಒಬ್ಬನಿಗೆ ಕೆಂಚು ಮೀಸೆ. ಅವನ ಮೋರೆಯೋ! ಹುಲಿಮೋರೆಯ ಹಾಗಿತ್ತು! ಮರದ ಮೇಲಿದ್ದ ಆ ಎಳೇ ಹುಡುಗಿಗೆ ಮೆಯ್ ಜುಂ ಜುಂ ಎಂದಿತು. ಅವರ ಗಂಡ ನಿಂತಲ್ಲಿಗೆ ಸರಿಯಾಗಿ ಸೋಜರರು ಬಂದರು. ‘ಇವರು’ ಹರ್ಷಗೊಂಡು ತಲೆಬಾಗಿ ಕೈಮುಗಿದರು. ಕೆಂಪು ಮೀಸೆಯ ಸೋಜರನು ಏನೋ ಸನ್ನೆ ಮಾಡಿದ. ಎಲ್ಲ ಕುದುರೆಗಳೂ ನಿಂತವು. ಅವನು ನಗುತ್ತ ಉಳಿದವರಿಗೆ ಏನೋ ಹೇಳಿದ. ಎಲ್ಲರೂ ಸಂತೋಷಪಟ್ಟಂತೆ ಕಂಡಿತು. ಕೂಡಲೇ ಹುಲಿ ಮೋರೆಯವನು ಕೆಳಗಿಳಿದ. ಬಾಯಲ್ಲಿ ಏನೋ ಹೇಳುತ್ತ ‘ಇವರ’ ಬಳಿಗೆ ಬಂದ. ಬೆತ್ತಕ್ಕೆ ಕೈತೋರಿ ‘ಕೊಡು’ ಎಂದು ಸನ್ನೆ ಮಾಡಿ. ‘ಇವರು’ ಊಂ, ಹುಂ ಎಂದು ಹೇಳಿ ಹಿಂದೆ ಸರಿದರು. ಅವನು ಕಣ್ಣು ಕೆರಳಿಸಿಕೊಂಡು ಮುಂದೆ ಬಂದು. ‘ರಶ್ಕಾ!’ ಎಂದು ದಟ್ಟಿಸಿ ಬೆತ್ತಕ್ಕೆ ಕೈ ಹಾಕಿದ! ಇವರು ಕೈ ಬಿಡಲಿಲ್ಲ. “ಇದೆಂಥಾ ನ್ಯಾಯ?’’ ಎಂದು ಹೇಳಿ ಹಿಂದಕ್ಕೆಳೆದರು! ಮರದಲ್ಲಿದ್ದ ದೇವಜ್ಜಿಗೆ ಕೆಳಗೆ ಬೀಳುವಂತಾಯಿತು. ಬೊಬ್ಬೆ ಹೊಡೆಯಲ್ಲಿದ್ದ ಬಾಯಿ ತೆರೆದಲ್ಲಿಯೇ ಕಟ್ಟಿಹೋಯಿತು. ಆ ಸೋಜರನು ಕಾಲೆತ್ತಿ ಇವರ ಹೊಟ್ಟೆಗೆ ಒದೆದನು, ಇವರು ಬಿದ್ದರು. ಬೀಳುವಾಗಲೂ ಬೆತ್ತ ಕೈಯಲ್ಲಿಯೇ ಇತ್ತು. “ಅಯ್ಯೋ, ಕುಂಪಿನಿ ರಾಕ್ಷಸಾ; ಅಯ್ಯೋ! ದೇವ..’’ ಎಂದು ಮುಂದೆ ಹೇಳುವಷ್ಟರೊಳಗೆ, ಅವನು ಕೊರಳೊತ್ತಿ ಹಿಡಿದ. ಕೈಯಿಂದ ಬೆತ್ತ ಸಡಿಲಿತು, ಎಳೆದುಕೊಂಡ. ಅಷ್ಟರಲ್ಲಿ ಅವರು ತಲೆಯೆತ್ತಿದರು. ಕೂಡಲೇ ಅದೇ ನಾಗರಬೆತ್ತದಲ್ಲಿ ಒಂದು ಹೊಡೆದ. ತಲೆಯೊಡೆದು ಹೋಯಿತು! ರಕ್ತ ದಿಳಿ ದಿಳಿ ಎಂದಿಳಿಯಿತು! ದೇವಜ್ಜಿಗೆ ಹಿಡಿದ ಕವಲುಗೊಂಬೆಯಿಂದ ಕೈಬಿಡಲೂ ಚೈತನ್ಯವಿರಲಿಲ್ಲ! ಆ ರಾಕ್ಷಸನು ‘ಹಹ್ಹಾ’ ಎಂದು ನಗಾಡಿ, ಮುಖ ತಿರುಗಿಸಿ ಬೆತ್ತವನ್ನು ನೋಡುತ್ತಾ ‘ರಾಶ್ಕಾ, ರಾಶ್ಕಾ’ ಎಂದು ಒದರುತ್ತಾ ಕುದುರೆಯ ಬಳಿಗೆ ಹೋಗಿ ಏರಿದನು. ಎಲ್ಲರೂ ಪಿಶಾಚಗಳಂತೆ ನಕ್ಕರು, ಕೆಲೆದರು, ಕುದುರೆ ಹಾರಿಸಿಕೊಂಡು ಎತ್ತಲೋ ಹೋದರು.

ಅವರು ಕಣ್ಮರೆಯಾದೊಡನೆ ದೇವಜ್ಜಿ, ತಲೆತಿರುಗಿ ಕೈಬಿಟ್ಟರು, ಮರದ ಅಡ್ಡದಲ್ಲಿ ಅಡಗಿ ನಿಂತಿದ್ದ ಆಳುಗಳಲ್ಲಿ ಒಬ್ಬನು ಕಂಡು ಓಡಿ ಬಂದು, ಕೆಳಗೆ ಬೀಳುವುದಕ್ಕೆ ಮೊದಲೇ ಹಿಡಿದುಕೊಂಡ. ಅಷ್ಟರಲ್ಲಿ ಮತ್ತೊಬ್ಬನೂ ಬಂದ, ಇಬ್ಬರೂ ಕೂಡಿ ಕೆಳಗಿಳಿಸಿದರು. ದೇವಜ್ಜಿಗೆ ಬೋಧ ತಪ್ಪಿ ಹೋಗಿತ್ತು. ಅರ್ಧ ಗಳಿಗೆಯ ಅನಂತರ ಬೋಧ ಬಂತಂತೆ. “ಯಾಕೆ ಬಂತೋ?!’’ ಎಂದು ದೇವಜ್ಜಿ ನನ್ನೊಡನೆ ಹೇಳಿ ಹಂಬಲಿಸಿ ಅತ್ತರು. ಅಲ್ಲಿ ಬಿದ್ದ ದೇಹದ ಬಳಿಗೆ ಹೋಗಿ ನೋಡಿದರು, ಮುಟ್ಟಿದರು. ಏನು ಪ್ರಯೋಜನ? ಎಲ್ಲ ಯಾವಾಗಲೋ ಮುಗಿದುಹೋಗಿತ್ತು. ಆಯಿತು. ಮುಂದೇನು ಮಾಡುವುದು? ಹಿಂದೆ ತಂದೆ ಮನೆಗೆ ಹೋಗಲು ಎರಡೂವರೆ ದಿನಗಳ ದಾರಿ ಇದೆ. ಮಾವನ ಮನೆಗೆ – ಅದು ಮಾವನ ಮನೆಯೇ ಸರಿ. ಗಂಡನ ಮನೆ ಇನ್ನೆಲ್ಲಿ? – ಅರ್ಧದಿನದ ದಾರಿ. ದಾರಿ ತನಗೆ ಗೊತ್ತಿಲ್ಲ. ಆಳುಗಳಿಗೆ ಮೊದಲೆರಡು ಬಾರಿ ನಡೆದು ಬಂದವರಾದುದರಿಂದ, ಗೊತ್ತಿತ್ತು. ಮಾತ್ರವಲ್ಲ. ಯಾವಾಗ ತನ್ನನ್ನು ಈ ಮನೆಗೆ ಮದುವೆಯಾಯಿತೋ, ತಂದೆಯ ಮನೆಗೆ ತಾನು ಹೊರಗೆ. ಆಳುಗಳು ಹಿಡಿದುಕೊಂಡಿದ್ದ ಗಂಟಿನಿಂದ, ಮಾಸಿದ ಸೀರೆಯೊಂದನ್ನು ತೆಗೆದುಟ್ಟರು. ಅವರು ಉಟ್ಟಿದ್ದ ಹದಿನಾರು ಮೊಳದ ಹೊಸ ಸೀರೆಯನ್ನು ಆಳುಗಳು ಆ ದೇಹಕ್ಕೆ ಸುತ್ತಿದರು. ಯಾವುದೋ ಒಂದು ಮರದ ಕೊಂಬೆಯೊಂದನ್ನು ಹೇಗೂ ಕಡಿದು ತಂದು ಅದಕ್ಕೆ ಬಿಗಿಯಲಾಯಿತು. ಆಳುಗಳಿಬ್ಬರೂ ಅದಕ್ಕೆ ಹೆಗಲು ಕೊಟ್ಟರು. ಹೊರಲಾರದ ಗಂಟುಮೂಟೆಗಳನ್ನು ಅಲ್ಲೇ ಬಿಸಾಡಿದರು. ಪತಿಯ ದೇಹವನ್ನು ಹಿಂಬಾಲಿಸಿ ಸತಿ ನಡೆದರು. ಎರಡು ಗಳಿಗೆ ಇರುಳಾಗುವಾಗ ಹೇಗೂ ಮನೆಯಂಗಳದಲ್ಲಿ ಬಂದು ಬಿದ್ದರು.

ಮುಂದಿನ ವೃತ್ತಾಂತವನ್ನು ಹೇಳುವುದೇನು, ಕೇಳುವುದೇನು? ಆ ದಿನ ದೇವಜ್ಜಿ ಹೇಳಲೂ ಇಲ್ಲ, ಹೇಳೆಂದು ನಾನು ಕೇಳಲೂ ಇಲ್ಲ. ಅವರು ಮಾತು ಮುಗಿಸಿ ಧ್ಯಾನಿಸುತ್ತ ಕುಳಿತರು. ನಾನು ಅವರ ಮಡಿಲಲ್ಲಿ ಮೊಗವನ್ನು ಮುಚ್ಚಿಟ್ಟು ಬಹಳ ಹೊತ್ತು ಹಾಗೇ ಮಲಗಿದೆ. ಆದರೆ ಇನ್ನೊಂದು ದಿನ ಹೀಗೇ ಯಾವುದೋ ಒಂದು ಪ್ರಸ್ತಾವದಲ್ಲಿ, ಅವರು ತಮ್ಮ ಅತ್ತೆಯವರನ್ನು ಬಹಳ ಕೊಂಡಾಡಿದರು. ತಮ್ಮ ಹೊಟ್ಟೆಯ ಮಗಳಂತೆಯೇ ಸೊಸೆಯನ್ನವರು ನೋಡಿಕೊಳ್ಳುತ್ತಿದ್ದರಂತೆ. ಯಾರು ಏನೆಂದರೂ ಸೊಸೆಯ ತಲೆಕೂದಲನ್ನು ಉಳಿಸಿಕೊಂಡರಂತೆ. “ಅಷ್ಟಾದರೂ ನನಗೆ ನೋಡಲು ಉಳಿಯಲಿ!’’ ಎಂದು ಮರುಗಿದರಂತೆ. ಯಾವಾಗಲೂ ತಮ್ಮ ಜತೆಯಲ್ಲಿಯೇ ಮಲಗಿಸಿಕೊಂಡು “ನೀನೇ ನನ್ನ ಹಿರಿಯ ಮಗ!’’ ಎಂದು ಹೇಳಿ ಕಣ್ಣೀರು ಹಾಕುತ್ತಿದ್ದರಂತೆ. ಇದನ್ನೆಲ್ಲ ದೇವಜ್ಜಿ ನನ್ನೊಡನೆ ಹೇಳಿ ಆ ದಿನವೂ ಕಣ್ಣೀರು ತುಂಬಿದರು. ನನ್ನ ಕಣ್ಣು ತುಂಬಿ ಬಂತೆಂದು ಬೇರೆ ಹೇಳಬೇಕಾಗಿಲ್ಲ. ದೇವಜ್ಜಿಗೂ ನನಗೂ ಹಾರ್ದಿಕವಾದ ಯಾವುದೋ ಒಂದು ಬಾಂಧವ್ಯ, ನನ್ನ ಮುದ್ದು ಬೆತ್ತ ಮುರಿದ ಮರುದಿನದಿಂದ ನೆಲೆಗೊಂಡು ಹೋಗಿತ್ತು. ಅವರೀಗ ಕಣ್ಮರೆಯಾದರೂ ಅದು ಹಾಗೆಯೇ ಉಳಿದಿದೆ.

(ಈ ಕತೆಯನ್ನು ಬಳಸಿಕೊಳ್ಳಲು ಅನುಮತಿ ನೀಡಿದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಿಗೆ ಕೃತಜ್ಞತೆಗಳು)
ಟಿಪ್ಪಣಿ:
ದಕ್ಷಿಣ ಕನ್ನಡದ ಶ್ರೇಷ್ಠ ಪಂಡಿತ, ಛಂದೋವಿದ, ಚಿಂತಕ, ಕವಿ, ಕತೆಗಾರ ಸೇಡಿಯಾಪು ಕೃಷ್ಣ ಭಟ್ಟರು (1902 – 1996) ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಮಂಗಳೂರಿನ ಸಂತ ಅಲಾಶಿಯಸ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಒಟ್ಟು 16 ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಅವರ ಒಂದೇ ಒಂದು ಕಥಾಸಂಕಲನ ‘ಪಳಮೆಗಳು’ 1947 ರಲ್ಲಿ ಪ್ರಕಟವಾಯಿತು. ಅದರಲ್ಲಿರುವ ಒಂದು ಕತೆ ‘ನಾಗರಬೆತ್ತ.’ ಅವರ ‘ನಾಗರಬೆತ್ತ’ ಕನ್ನಡದ ಕ್ಲಾಸಿಕ್ ಕತೆಗಳಲ್ಲಿ ಒಂದು.
ಬ್ರಿಟಿಷರ ನ್ಯಾಯಪರತೆ, ಕಾನೂನು ಸುವ್ಯವಸ್ಥೆ, ಆಡಳಿತದ ಶಿಸ್ತು, ಗುಣೈಕ ದೃಷ್ಟಿ ಇತ್ಯಾದಿ ಸದ್ಗುಣಗಳ ಕೀರ್ತನೆಯೇ ನಮ್ಮ ಜನರಲ್ಲಿ ಹೆಚ್ಚಾಗಿತ್ತು. ಸೇಡಿಯಾಪು ಕೃಷ್ಣ ಭಟ್ಟರು ಉದ್ದೇಶಪೂರ್ವಕವಾಗಿ ಬ್ರಿಟಿಷರ ಕ್ರೌರ್ಯವನ್ನು ಮತ್ತು ದರ್ಪವನ್ನು ತೋರಿಸಲು ‘ನಾಗರಬೆತ್ತ’ ಕತೆಯನ್ನು ಬರೆದರು.
ನಾಗರಬೆತ್ತ ಕತೆಯಲ್ಲಿ ಚಿತ್ರಿತವಾದ ಸಂದರ್ಭ: ಬ್ರಿಟಿಷರು ಜಿಲ್ಲೆಯ ಕೃಷಿ ವ್ಯವಸ್ಥೆ ಮತ್ತು ಭೂಕಂದಾಯವನ್ನು ಸಂಗ್ರಹಿಸುವುದೇ ತಮ್ಮ ಪರಮಗುರಿ ಎಂದು ಆಡಳಿತವನ್ನು ನಡೆಸಿದರು. ಅವರ ಆಡಳಿತ ಯಂತ್ರವೇ ತೆರಿಗೆ ಸಂಗ್ರಹಕ್ಕಾಗಿ ದುಡಿಯುತ್ತಿತ್ತು. ಆನುಷಂಗಿಕವಾಗಿ ನ್ಯಾಯಾಂಗ, ಪೋಲೀಸ್ ವ್ಯವಸ್ಥೆ, ಶಿಕ್ಷಣ, ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳ ವೃದ್ಧಿ ಮುಂತಾದವುಗಳಿಗೆ ಅವರು ಅಗತ್ಯವಿದ್ದಷ್ಟು (ಅಷ್ಟೇ) ಗಮನವನ್ನು ಕೊಡುತ್ತಿದ್ದರು.. ಬಾಸೆಲ್ ಮಿಷನ್ ಮತ್ತು ರೋಮನ್ ಕೆಥೋಲಿಕರ ಮುತುವರ್ಜಿಯಿಂದ ಇಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿ ಬೆಳೆಯಿತು ಹೊರತು ಸರಕಾರದ ಶ್ರಮ ಅದರಲ್ಲಿ ಕಡಿಮೆಯೇ. ಕೃಷಿಯನ್ನು ಹೊರತು ಪಡಿಸಿದ ಇತರ ಉದ್ದಿಮೆಗಳಿಗೆ ಕೂಡಾ ಸರಕಾರ ಗಮನಕೊಟ್ಟದ್ದಿಲ್ಲ. ಬಾಸೆಲ್ ಮಿಷನ್ ಮತ್ತು ಖಾಸಗಿ ವ್ಯಕ್ತಿಗಳ ಸಾಧನೆಯಿಂದ ಇಲ್ಲಿ ಉದ್ಯಮಗಳು ನಿಧಾನವಾಗಿ ಬೆಳೆದವು.
ಬ್ರಿಟಿಷರ ಕಾಲದಲ್ಲಿ ಕೃಷಿಯೇ ಪ್ರಧಾನವಾಗಿತ್ತು. ಈ ಕ್ಷೇತ್ರ ಬಹಳ ಸಮೃದ್ಧವಾಗಿದ್ದರೂ ಇದರಲ್ಲಿ ದುಡಿಯುತ್ತಿದ್ದವರು ಬಡವರು ಹಾಗೂ ಅನಕ್ಷರಸ್ಥರಾಗಿಯೇ ಉಳಿಯುತ್ತಿದ್ದರು.
ಸರಕಾರದ ಭಯ : ಒಟ್ಟಿನಲ್ಲಿ ಬ್ರಿಟಿಷರ ಆಡಳಿತ ವ್ಯವಸ್ಥೆ, ನ್ಯಾಯಾಂಗಗಳು ತಪ್ಪಿತಸ್ಥರನ್ನು ಬಹಳ ಕಠಿಣವಾಗಿ ಶಿಕ್ಷಿಸುತ್ತಿದ್ದುದರಿಂದ ‘ಸರಕಾರದ ಭಯ ಸರ್ವರಿಗೂ’ ಇತ್ತು. ಜನರಿಗೆ ನೆಮ್ಮದಿಯಿಂದ ಬದುಕಬಹುದಾದ ಭದ್ರತೆಯನ್ನು ಸರಕಾರ ನೀಡುತ್ತಿತ್ತು. ಜನರ ಆರ್ಥಿಕ ಪರಿಸ್ಥಿತಿ ಬಹಳ ಕಡಿಮೆ ಮಟ್ಟದಲ್ಲಿದ್ದರೂ ಜನರಿಗೆ ಅದಕ್ಕೆ ಕಾರಣ ಪರಕೀಯ ಸರಕಾರ ಎಂದು ಗೊತ್ತಾಗುವ ಸಾಧ್ಯತೆ ಇರಲಿಲ್ಲ.
ಬ್ರಿಟಿಷರ ಆಡಳಿತದ ಬಗ್ಗೆ 1900 ರ ಕಾಲಘಟ್ಟದ (ಅಂದರೆ ಆಧುನಿಕ ಕನ್ನಡ ಸಾಹಿತ್ಯದ ಪ್ರಾರಂಭಕಾಲದ) ದಕ್ಷಿಣ ಕನ್ನಡದ ಪ್ರಜ್ಞಾವಂತರಲ್ಲಿ ಯಾವ ಅಭಿಪ್ರಾಯವಿತ್ತು ಎನ್ನುವುದನ್ನು ಎರಡು ಅಭಿಪ್ರಾಯಗಳು ಕ್ರೋಢೀಕರಿಸುತ್ತವೆ. ಒಂದು – ಗಾಂಧೀವಾದಿಯೂ, ಸ್ವಾತಂತ್ರ್ಯ ಹೋರಾಟಗಾರರೂ, ತುಳುವಿನ ಆದ್ಯ ಸಾಹಿತಿಯೂ ಆದ ಎನ್. ಎ. ಶೀನಪ್ಪ ಹೆಗ್ಡೆಯವರು ತಮ್ಮ ‘ದಕ್ಷಿಣ ಕನ್ನಡ ಜಿಲ್ಲೆಯ ಚರಿತ್ರೆ’ಯಲ್ಲಿ ಹೀಗೆ ಬರೆದಿದ್ದಾರೆ : “ ಶಾ. ಶ. 1759 ರಲ್ಲಿ (ಅಂದರೆ ಕ್ರಿ. ಶ. 1837 ರಲ್ಲಿ) ಕೊಡಗಿನ ಕಲ್ಯಾಣಪ್ಪನೆಂಬವನು ಕೆಲವು ಸೈನ್ಯಗಳ ಸಮೇತ ಪುತ್ತೂರನ್ನು ಕೊಳ್ಳೆಹೊಡೆದು, ಮಂಗಳೂರಿಗೆ ಬಂದು ಜೈಲನ್ನು ಮುರಿದನು. ಆಗ ಕರಣಿಕ ದೇವಪ್ಪನವರು ಮಾಡಿದ ಸಾಹಸವು ಚಿರಸ್ಮರಣೀಯವಾದದ್ದು. ಅಲ್ಲದೆ ಕಲ್ಯಾಣಪ್ಪನನ್ನು ಹಿಡಿದು ದೇಹದಂಡನೆ ಶಿಕ್ಷೆಯನ್ನು ವಿಧಿಸಿದರು…….. ಬ್ರಿಟಿಷರ ಆಳ್ವಿಕೆಯಲ್ಲಿ ಪ್ರಜೆಗಳಿಗಾಗಿರುವ ಆನಂದವೂ, ಸುಖವೂ, ನ್ಯಾಯದಕ್ಷತೆಯೂ ಇನ್ಯಾವ ಯುಗದಲ್ಲಿಯೂ ಇರಲಿಲ್ಲವೆಂದು ಇತಿಹಾಸಗಳಿಂದ ತಿಳಿಯಬಹುದು.”
ಶೀನಪ್ಪ ಹೆಗ್ಡೆಯವರು ಕ್ಷೇತ್ರ ಕಾರ್ಯ ಮಾಡಿ, ಈ ಕೃತಿಯನ್ನು ಬರೆದು, 1915 ರಲ್ಲಿ ಪ್ರಕಟಿಸಿದ್ದರು. ಆ ಕಾಲದಲ್ಲಿ, ಅಂದರೆ ನವೋದಯದ ಮೊದಲ ಘಟ್ಟದಲ್ಲಿ ಬ್ರಿಟಿಷರ ಬಗ್ಗೆ ಜನಸಾಮಾನ್ಯರಲ್ಲಿ ಮಾತ್ರವಲ್ಲದೆ ಪ್ರಜ್ಞಾವಂತರಲ್ಲಿಯೂ ಎಂತಹ ಅಭಿಮಾನವಿತ್ತು ಎನ್ನುವುದು ಮೇಲಿನ ವಾಕ್ಯಗಳಿಂದ ತಿಳಿಯುತ್ತದೆ. ನವೋದಯದ ಗದ್ಯ ಸಾಹಿತಿಗಳು ವಸಾಹತುಶಾಹಿಯ ಪ್ರಶಂಸೆ ಮಾಡಿರುವುದು ಜನಸಮುದಾಯದ ಅಭಿಪ್ರಾಯದ ಪ್ರತಿಫಲನವಷ್ಟೇ ಆಗಿದೆ. (ಇಲ್ಲಿ ಗಮನಿಸಬೇಕಾದ ಒಂದು ಮಾಹಿತಿಯೆಂದರೆ ಹೆಗ್ಡೆಯವರು ಬ್ರಿಟಿಷರಿಗೆ ಯಾವುದೇ ಕಾರಣಕ್ಕೆ ತಲೆಬಾಗುವಂತಹವರಾಗಿರಲಿಲ್ಲ. ಹಾಗಾಗಿ ಬ್ರಿಟಿಷರಿಗೆ ಹೆದರಿ ಅವರು ಈ ಮಾತುಗಳನ್ನು ಬರೆದಿರಬೇಕೆಂದು ಊಹಿಸಲೂ ಸಾಧ್ಯವಿಲ್ಲ. ಅವರು ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡು ಎರಡು ಬಾರಿ ಜೈಲಿನಲ್ಲಿದ್ದರು. ಒಮ್ಮೆ ಅವರ ತಲೆಗೆ ಬಿದ್ದ ಪೋಲೀಸರ ಲಾಠಿ ಏಟಿನಿಂದ ಅವರ ತಲೆಯಲ್ಲಿ ಶಾಶ್ವತವಾಗಿ ಕುಳಿಬಿದ್ದಿತ್ತು. ಇದು ಬ್ರಿಟಿಷರು ತಮಗೆ ಮಾಡಿದ ಶಾಶ್ವತ ಸನ್ಮಾನವೆಂದು ಅವರು ಹೇಳುತ್ತಿದ್ದರು.)
ಎರಡು – ಸೇಡಿಯಾಪು ಕೃಷ್ಣ ಭಟ್ಟರು ತಮ್ಮ ‘ನಾಗರಬೆತ್ತ’ ಕತೆಯಲ್ಲಿ ಪಾತ್ರವೊಂದರ ಮೂಲಕ ಹೇಳಿಸಿರುವ ಅಂದಿನ ಜನಸಾಮಾನ್ಯರ ಅಭಿಪ್ರಾಯ ಹೀಗಿದೆ: “ಅವರು ಕುಂಪಿನಿ ‘ಸೋಜರ’ರು! ಹಾಗೆಲ್ಲ ಸುಲಿಗೆ ಮಾಡಲು ಅವರು ಕಾಟಕಾಯಿಯವರಲ್ಲ. ನಮ್ಮೂರ ಸಂತೆಯ ಮೂರು ಕಾಸಿಗೊಂದರ ಅರಸುಗಳ ಕಾಟವನ್ನೆಲ್ಲ ನಿಲ್ಲಿಸಿಬಿಟ್ಟಿದ್ದಾರೆ. ನಮ್ಮೂರಲ್ಲಿ ಈಗ ರಾಮರಾಜ್ಯ ! ನೋಡಿ, ಎಲ್ಲೆಲ್ಲಿಗೆ ರಸ್ತೆ ಕಡಿಸುತ್ತಿದ್ದಾರೆ ! ಎಂಥಾ ಸಂಕ ಕಟ್ಟಿಸಿದ್ದಾರೆ! ಕಳ್ಳರನ್ನೆಲ್ಲ ಹಿಡಿದು ಜೈಲಿಗೆ ತಳ್ಳುತ್ತಾರೆ. ಅದಕ್ಕಾಗಿ ‘ಪುಲಿಸಿ’ನವರು ಕೆಂಪು ಪಗಡಿ ಇಟ್ಟುಕೊಂಡು ಹಳ್ಳಿ ಹಳ್ಳಿ ತಿರುಗುತ್ತಿದ್ದಾರೆ. ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು ! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!” ಎನ್ನುತ್ತಾನೆ. (ಇದು ಬ್ರಿಟಿಷ್ ಆಡಳಿತದ ಬಗ್ಗೆ ಜನಸಾಮಾನ್ಯರಲ್ಲಿದ್ದ ಭಾವನೆಯನ್ನು ಕ್ರೋಢೀಕರಿಸುವ ಮಾತು. ಸೇಡಿಯಾಪು ಕೃಷ್ಣ ಭಟ್ಟರು ಇದನ್ನು ಸಮರ್ಥಿಸುವುದಿಲ್ಲ, ಮಾತ್ರವಲ್ಲ ಈ ಮಾತು ಸತ್ಯವಲ್ಲ ಎಂದು ಸಾಧಿಸಲು ‘ನಾಗರಬೆತ್ತ’ ಕತೆಯನ್ನು ಬರೆದಿದ್ದಾರೆ). ಕತೆಯ ಕೊನೆಯಲ್ಲಿ, “ಅಯ್ಯೋ, ಕುಂಪಿನಿ ರಾಕ್ಷಸಾ; ಅಯ್ಯೋ! ದೇವ..’’ ಎಂದು ಅವನು ಆರ್ತನಾದ ಮಾಡುವುದು ಮುಖವಾಡದ ಅನಾವರಣದಂತೆ ಕಾಣುತ್ತದೆ.
ಬ್ರಿಟಿಷರ ವರ್ತನೆಯನ್ನು ಖಂಡಿಸುವ ಕತೆ ಕಾದಂಬರಿಗಳಲ್ಲಿ ಅವರ ದೌಷ್ಟ್ಯ ವೈಯಕ್ತಿಕ ಸ್ವರೂಪದ್ದೆಂದು ಕಾಣುವುದರಿಂದ (ಮತ್ತು ಜನ ಅದನ್ನು ಹಾಗೆಯೇ ಗ್ರಹಿಸಿರಬಹುದಾದ್ದರಿಂದ) ವಸಾಹತುಶಾಹಿಗೆ ಪ್ರತಿರೋಧ ಜನಸಮುದಾಯದ ವಾಣಿಯಾಗಿ ಸಾಹಿತ್ಯದಲ್ಲಿ ಮೂಡಿಬರಲಿಲ್ಲ ಎನ್ನುವುದೇ ಇಲ್ಲಿ ಗಮನಿಸಬೇಕಾದ ಸಂಗತಿ.