ತಿರುವು

ಉಸಿರುಗಟ್ಟಿ ತಾನೇ ಗಾಳಿ
ತುಂಬಿದ ಬಲೂನ್‌ ನಿಂದ
ಕಟ್ಟಿದ್ದ ದಾರ ಕಳಚಿ ಗಾಳಿಯಲ್ಲಿ
ಮತ್ತೆ ಲೀನವಾದಂತಿದೆ.

ಕೂಡಿಟ್ಟರೂ ಕಟ್ಟಿಟ್ಟರೂ ಭವಿಷ್ಯದಲ್ಲಿ ಮಣ್ಣಲ್ಲೇ
ಮಣ್ಣಾಗಿ ಕಳೆದು ಹೋಗುವುದಕ್ಕಾಗಿ
ಯಾಕಿಷ್ಟು ತೊಳಲಾಟ.
ನಡೆದಷ್ಟು ಹಾದಿಯುದ್ದ ತಿರುವುಗಳ ಸಂತೆ
ಆ ತಿರುವುಗಳ ದಾಟಿಯೇ ವಿಳಾಸವಿಲ್ಲದ
ಮನೆಯ ಸೇರಲು ಹವಣಿಸುತ್ತಿರುವಂತಿದೆ!

ನೆರಳು ನಡೆದಂತೆ ನನ್ನನ್ನೇ
ಹಿಂಬಾಲಿಸುತ್ತಿದೆ ನಾನು ಕೊಂಚ
ಸರಿಯಲೆತ್ನಿಸಿದರೂ ಅದು ಸರಿದು ನಿಲ್ಲುತ್ತದೆ!
ನನ್ನನ್ನೇ ಮೀರಿ ಬೆಳೆದು ನಿಂತಿದೆ
ಅದೆಷ್ಟು ಎಚ್ಚರವಹಿಸಿದರೂ
ಅದರಿಂದ ಪಾರಾಗಲಾಗುತ್ತಿಲ್ಲ!

ಕತ್ತಲು ಬೆಳಕು ಮಬ್ಬು ಮಿಂಚು
ಎಲ್ಲವನ್ನು ಕಣ್ಣು ಬೇದವಿಲ್ಲದೆ
ತನ್ನದಂದೇ ಕಣ್ತುಂಬಿಕೊಳ್ಳುತ್ತದೆ.

ಎಚ್ಚರಿಸಲೆಂದೇ ಮತ್ತೆ ಮತ್ತೆ
ಟ್ರಿಣ್ ಟ್ರಿಣ್ ಎಂದು ಬಡಿದುಕೊಳ್ಳುವ
ಅಲಾರಂ ನ ತಲೆಗೆ ಬಾರಿಸಿ
ಮತ್ತೆ ನಿದಿರೆಯನ್ನುಪ್ಪುವ ಮಂಪರಿಗೆ
ನಕ್ಕು ಕಣ್ಣು ರೆಪ್ಪೆಯೊಳಗೆ
ಮುದುಡಿ ಮುಚ್ಚಿಕೊಳ್ಳುತ್ತದೆ.

ಮನದಲ್ಲಿ ತನಗೆ ತಾನೇ
ಎಳೆದುಕೊಂಡ ಗೆರೆಯ ದಾಟಲಾಗದೆ
ಕಣ್ಮುಚ್ಚಿ ಒಲಿಯದ ರಾಗವ ಗುನುಗುತ್ತಾ
ಹಾಡು ಕಟ್ಟುತ್ತಾ, ಭ್ರಮೆಯನ್ನೇ ಸತ್ಯವೆಂದು
ಹುಡುಕಾಡುತ್ತಿರುವಂತಿದೆ!

ನೀರಿನೊಳಗೊಣ ಮೀನಿನ ಹೆಜ್ಜೆಯ
ಗುರುತು ಯಾರು ತಿಳಿದಾರು
ಬಣ್ಣ ಹಚ್ಚಿದ ಹಿಂದಿನ ಮುಖವಾಡದ
ಬಣ್ಣ ಅದ್ಯಾವುದೆಂದು ಬಲ್ಲವರಾರು!

ಸೌಮ್ಯಶ್ರೀ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಆಗಸನಮರ ಗ್ರಾಮದವರು.
ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಚಿನ್ನದ ಪದಕಗಳೊಂದಿಗೆ ಉತ್ತೀರ್ಣರಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇವರ ಕತೆ, ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಸೌಮ್ಯಶ್ರೀಯವರ ಈ ಚೊಚ್ಚಲ ಕಥಾಸಂಕಲನ ೨೦೧೭ರಲ್ಲಿ ಪ್ರಕಟವಾಗಿದೆ.