“ಅಪ್ಪಣ್ಣ, ಸಣ್ಣಗಿನ ನಿದ್ದೆ ಮುಗಿಸಿ ಸ್ನಾನ ಮಾಡಿ ಚಿನ್ನದ ಚೈನು ಹಾಕಿಕೊಂಡು ತನಗೆ ಒಳಗೆ ಆಗುತ್ತಿರುವ ಪುಳಕವನ್ನೋ ಪುಕ್ಕಲನ್ನೋ ತೋರಿಸದೆ ನೀಟಾಗಿ ಕ್ರಾಪು ಬಾಚಿಕೊಳ್ಳುತ್ತಿದ್ದ. ಭಾಗೀರಥಮ್ಮ ಮುಖ ತೊಳೆದು ಪೌಡರ್ ಹಚ್ಚಿಕೊಳ್ಳುತ್ತಿದ್ದರು. ಸೆಖೆಗೆ ಬೆವರಿದ ಮುಖದಲ್ಲಿ ಅಲ್ಲಲ್ಲಿ ಬೆಳ್ಳಗಿನ ತೇಪೆ ಅಂಟಿಕೊಳ್ಳುತ್ತಿತ್ತು. ಹಣೆಯ ಲಾಲ್ಗಂಧವನ್ನು ಇನ್ನೂ ಉರುಟು ಮಾಡುತ್ತಾ ಮದುಮಗನಂತೆ ಕಾಣುತ್ತಿದ್ದ ಮಗನನ್ನು ನೋಡಿ “ದೇವರಿಗೊಂದು ನಮಸ್ಕಾರ ಮಾಡಿ ಹೊರಡು ಅಪ್ಪು”ಎಂದರು”
ಎಳವೆಯಲ್ಲೇ ತೀರಿಹೋದ ಕೆಂಡಸಂಪಿಗೆ ಬಳಗದ ಪ್ರತಿಭಾವಂತ ಬರಹಗಾರ್ತಿ ನಾಗಶ್ರೀ ಶ್ರೀರಕ್ಷ ಹುಟ್ಟಿದ ದಿನಕ್ಕೆ ಅವರದೊಂದು ಹಳೆಯ ಕಥೆ

ಅಪ್ಪಣ್ಣ ಮೈಮರೆತು ರಂಗಸ್ಥಳದಿಂದ ಕಣ್ಣುಕೀಳದೆ ಆಟ ನೋಡುತ್ತಿದ್ದಾನೆ. “ಉರಗವೇಣಿಯರೆಲ್ಲಾ ಕೇಳಿರಿ, ಸುರನದಿಯೊಳು.. ಈ ದಿನದೊಳ್ ಎರಕದಿ, ಸರಸದಿಂ ಜಲಕೇಳಿ ಕೇಳಿ ಕೇಳಿ ಕೇಳಿಯಾಡುವ ಏಳಿ ಏಳಿ ಏಳಿ ಎನುತಲಿ..“ ಎಂದು ಭಾಗವತರು ಎಳೆದೆಳೆದು ಹಾಡುತ್ತಿದ್ದಾರೆ. ಅಂಬೆ, ಮೆಲ್ಲಗೆ ತನ್ನ ಜಡೆ ನೀವುತ್ತಾ ವಿವಿಧ ಹಸ್ತ ಮುದ್ರೆಯಲ್ಲಿ ಜಲಕ್ರೀಡೆ ತೋರಿಸುತ್ತಾ ಉರಗ ವೇಣಿಯರನ್ನು ಬಡಿದೆಬ್ಬಿಸುತ್ತಿದ್ದಾಳೆ. ಅವಳ ಮೈ ಲಾಸ್ಯವಾಡುತ್ತಿದೆ. ತಲೆಯಲ್ಲಿ ಕೇದಗೆ, ಕೆಳಗೆ ನೀಳ ಜಡೆಮಾಲೆ, ಉಬ್ಬಿದೆದೆಯ ಮೇಲೆ ಮಣಿಮಾಲೆ, ಮುಂದಲೆ, ಲೋಲಾಕು, ಸಣ್ಣ ಸೆರಗಿನ ತುದಿ ಬಾಗಿ ಬೆಂಡಾಗಿ ಅವಳ ನಿತಂಬವನ್ನು ಮೀರಿ ಇಳಿದ ಜಡೆಯ ಕುಚ್ಚು ಎಲ್ಲವೂ ಒಟ್ಟಿಗೆ ಒಂದೇ ಲಯದಲ್ಲಿ ಕುಣಿಯುತ್ತಿದೆ. ಕೈಯಲ್ಲಿ ನೀರನ್ನು ಸೀಳಿ, ಮೀನಿನಂತೆ ಬಳುಕುತ್ತಿದ್ದಾಳೆ. ಜಲಕೇಳಿಯಾಡುವ ಅವಳ ಮುದ್ದು ಮೋರೆಯಲ್ಲಿ ತಿದ್ದಿ ತೀಡಿದ ಹುಬ್ಬು, ಹುಬ್ಬಿಗೆ ತಕ್ಕ ಕುಣಿವ ಕಸ್ತೂರಿ ತಿಲಕವಿದೆ. ಮೂಗಿನಲ್ಲಿ ಹೊಳೆವ ನತ್ತು, ಗಲ್ಲದಲ್ಲಿ ಹೇಳಿ ಮಾಡಿಸಿದಂತೆ ದೃಷ್ಟಿ ಬೊಟ್ಟು, ನಾಚಿಕೆ, ವೈಯ್ಯಾರದಿಂದ ಮಿನುಗುತ್ತಿದೆ. ತತ್ತೋಂಗ ಧಿಗುತಕ ಥೈಕು ಥೈಕು ತರಿಕಿಟ ತತ್ತೋಂಗ ಧಿಗುತಾ ಧೇ… ಮತ್ತೆಮತ್ತೆ ತುಟಿಕಚ್ಚಿ ಕಣ್ಣುಮುಚ್ಚಿ ನಲಿದುಕೊಂಡು ಉರಗವೇಣಿಯರನ್ನು ಕರೆದು ಕರೆದು ನೀರಾಟವಾಡುತ್ತಿದ್ದಾಳೆ. ಆಡುತ್ತಾ ಆಡುತ್ತಾ ತುಂಟಿಯಾಗಿದ್ದಾಳೆ. ಮದ್ದಳೆಯ ಒಂದು ನಡೆಗೆ ಅವಳ ನಡು ನುಲಿಯುತ್ತಿದೆ. ಇನ್ನೊಂದು ನಡೆಗೆ ಹಿಂದೆ ಸವರಿದಂತೆ ಡೊಂಕಾಗುತ್ತಿದೆ.. ಅವಳು ಅಲೆಅಲೆಯಾಗಿ ಕುಣಿಯುತ್ತಿದ್ದಾಳೆ. ಈ ನಡೆ, ನಡು, ಹಾಡು, ಸೌಂದರ್ಯವನ್ನು ಭರಿಸಲಾಗದೆ ಅಪ್ಪಣ್ಣನ ಕಣ್ಣು ತುಂಬಿ, ಅವನು ರಂಗಸ್ಥಳದಿಂದ ಕಾಲುಕಿತ್ತು ಅವಳ ಹಿಂದೆ ಹೋಗುತ್ತಿದ್ದಾನೆ. ಅವಳ ಇರುವನ್ನು ಗೆಜ್ಜೆಯ ದನಿಗಳು ಹೇಳುತ್ತಿವೆ. ಇನ್ನೇನು ಅವಳು ಹಿಂದೆ ನೋಡಬೇಕು, ನೋಡಿ ಏನಾದರೂ ಆಗಬೇಕಿತ್ತು ಎನ್ನುವಾಗ ಅಪ್ಪಣ್ಣ ಬರುತ್ತಿದ್ದ ಬಸ್ಸು ಗಕ್ಕನೆ ನಿಂತಿತು. “ಹತ್ತು ನಿಮಿಷ ಟೈಮ್ ಉಂಟು, ಬೇಗ ಬೇಗ ಹೋಗಿ ಬನ್ನಿ” ಎಂದು. ಕಂಡಕ್ಟರ್ ಜೋರಾಗಿ ಕೂಗುತ್ತಿದ್ದ.

ಅಪ್ಪಣ್ಣ ತೀರ್ಥಹಳ್ಳಿಯಿಂದ ಉಡುಪಿಗೆ ಹೆಣ್ಣು ನೋಡಲು ಹೊರಟಿದ್ದಾನೆ. ಅಮ್ಮ ಹೇಳಿದಂತೆ ಅಪ್ಪಣ್ಣನಿಗೆ, ಮದುವೆ ಯೋಗ ಇರುವುದು ನಿಜವೆನಿಸಿ, ಈಗ ಬಿದ್ದ ಕನಸು ಪೂರ್ತಿ ನೆನಪಿಗೆ ಬಾರದೆ, ಕಾಣಿಸಿದ ಹೆಣ್ಣು, ಸ್ತ್ರೀವೇಷದ ಕಿಟ್ಟಾಚಾರಿಯೋ, ಈಗ ನೋಡಬೇಕಾಗಿರುವ ಕಮಲಾಕ್ಷಿಯೋ ಎಂದು ಗೊತ್ತಾಗದೆ ಮುಖಕ್ಕೆ ನೀರು ಚಿಮುಕಿಸಿ ಚಾ ಕುಡಿಯುತ್ತಿದ್ದ.

ಅಲ್ಲಿ ಅತ್ತಲಾಗೆ ಅಪ್ಪಣ್ಣನ ಊರಾದ ಕಾಟಿಮಂಜೆಯಲ್ಲಿ ದಿನವಿಡೀ ವಟವಟ ಮಾತಾಡುವ ಅವನ ತಾಯಿ ಭಾಗೀರಥಮ್ಮ ಇವತ್ತು ಏನೂ ಮಾತಾಡದೆ ಪೆಟ್ಟಿಗೆಯಲ್ಲಿ ಮಡಚಿಟ್ಟ ಹಳದಿ ಜರಿ ಸೀರೆಯನ್ನು ತೆಗೆದಿಟ್ಟುಕೊಳ್ಳುತ್ತಿದ್ದರು. ಈಗಲಾದರೂ ಮಗನಿಗೆ ಹೆಣ್ಣು ನೋಡಲು ಹೋಗಿ, ಹುಡುಗಿಯ ಮನೆಯಲ್ಲಿ ಕಾಲಮೇಲೆ ಕಾಲುಹಾಕಿ ಗತ್ತಿನಲ್ಲಿ ಉಪ್ಪಿಟ್ಟು ಕೇಸರಿ ಬಾತು ತಿನ್ನುವ ಬೀಗತಿಯ ಬಿಂಕದಲ್ಲಿದ್ದರು. ಅಪ್ಪಣ್ಣನ ತಂದೆ ಗೋಪಾಲಾಚಾರ್ಯರು ರಾಜಕಳೆಯಲ್ಲಿ ಕವಳ ಹಾಕಿ, ತನಗೆ ಏನು ಅನ್ನಿಸುತ್ತಿರಬಹುದೆಂಬ ಸುಳಿವನ್ನು ಯಾರಿಗೂ ನೀಡದೆ ತನ್ನ ಮನೆಯಲ್ಲಿ ತಾನು ಎಂದಿಗೂ ಬೇರೆಯವನೆಂದು ತನಗಾಗಿಯೇ ಕಟ್ಟಿಸಿದ ಮೂಲೆ ಕೋಣೆಯಲ್ಲಿ ನೆತ್ತಿಗೆ ಏರುವ ಧ್ವನಿಯಲ್ಲಿ ರೇಡಿಯೋ ಕೇಳುತ್ತಿದ್ದರು.
ಕೇಳುತ್ತಿರುವಂತೆಯೇ ಅದೇಕೋ ಹೇಳದೆ ಕೇಳದೆ ತನ್ನ ಸೈಕಲು ಎಂಬ ಅಂಬಾರಿಯನ್ನೇರಿ ಪುರ್ರನೆ ಹೊರಟೇ ಹೋಗಿದ್ದರು. ಅವರು ಹೆಣ್ಣಿನ ಮನೆಗೆ ಬರುತ್ತಾರೋ ಇಲ್ಲವೋ ಎಂಬುದೂ ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅಪ್ಪನ ಸೈಕಲು ಹೊರಟದ್ದನ್ನು ನೋಡಿ, ಬೀಜ ಬಿಡಿಸಿದ ಹುಣಸೇಹಣ್ಣನ್ನು ಬಿಸಿಲಲ್ಲಿ ಇಡುತ್ತಿದ್ದ ಅಪ್ಪಣ್ಣನ ತಂಗಿ ಸೌಭಾಗ್ಯಲಕ್ಷ್ಮಿಗೆ ಮಿಣ್ಣಗೆ ನಗುಬರುತ್ತಿತ್ತು. ಅವಳು ಮದುವೆಯಾಗಿ ಎರಡೇ ದಿನಕ್ಕೆ ಸಾಕುಬೇಕಾಗಿ ಗಂಡನ ಜೊತೆ ಇರಲಾರದೆ ತಾಯಿ ಮನೆಯಲ್ಲೇ ಇದ್ದಳು. ಇವತ್ತು ತನ್ನನ್ನು ಕರೆದರೆ ಮಾತ್ರ ಹೋಗುವುದು ಎಂದು ಊಟವನ್ನೂ ಮಾಡದೆ ಮುಖ ಊದಿಸಿಕೊಂಡಿದ್ದಳು. ದೂರದಲ್ಲಿ ಬಿಳಿಯ ಬಿಸಿಲಿಗೆ ಕಾಟಿಮಂಜೆ ಮನೆಯ ಅಂಗಳದಲ್ಲಿ ಕಾಟು ಗುಲಾಬಿ ಹೂಗಳು ಅರಳಿ ಚಂದ ಕಾಣುತ್ತಿತ್ತು.

ಅಪ್ಪಣ್ಣನಿಗೆ ಬಸ್ಸಿನಲ್ಲಿ ಮತ್ತೆ ನಿದ್ದೆ ಬಂದಿರಲಿಲ್ಲ. ಹೊಟ್ಟೆಯಲ್ಲಿ ಏನೋ ತಳಮಳವಾಗುತ್ತಿತ್ತು. ಮನೆಗೆ ಹೋಗದೆ ಸೀದಾ ಮೂಡಬೆಟ್ಟಿನ ಹೆಣ್ಣಿನ ಮನೆಗೆ ಹೋದರೆ ಹೇಗೆ ಎಂದುಕೊಂಡ. ಮುಸುಡಿಯಲ್ಲಿ ತುಂಬಿದ ಧೂಳನ್ನಾದರೂ ತೊಳೆಯುವ ಅಂದುಕೊಂಡು ಮನೆಗೆ ಬರುತ್ತೇನೆ ಹೇಳಿದ್ದ. ಅಪ್ಪಣ್ಣನಿಗೆ ವಯಸ್ಸು ಮೂವತೈದು ದಾಟಿತ್ತು. ಒಂದು ರಾತ್ರಿ ಊಟ ಮಾಡುವಾಗ ಗೋಪಾಲಾಚಾರ್ರು ಅಪ್ಪಣ್ಣನ ಮುಖದ ಮೇಲೆ ಉಗಿದು, “ಸಾಯುವವರೆಗೆ ನನ್ನ ಮನೆಯ ಅನ್ನ ತಿಂದುಕೊಂಡಿರಬೇಡ, ಮರ್ಯಾದೆ ಇದ್ದರೆ ನಾಲ್ಕು ಕಾಸು ಗಳಿಸಿ ಈ ಮನೆಗೆ ಬಾ,” ಎಂದು ರಾಮರಂಪ ಮಾಡಿದ್ದರು. ಬೆಳಗ್ಗೆ ಏಳುವಾಗ ಅಪ್ಪಣ್ಣ ಎಲ್ಲಿಯೂ ಕಾಣದೆ ಘಟ್ಟ ಹತ್ತಿ ತೀರ್ಥಹಳ್ಳಿಗೆ ಹೋಗಿ ಪಕ್ಕದ ಮನೆಯ ಗೋಪು ಮಧ್ಯಸ್ಥರ ಕ್ಯಾಂಟಿನಿಗೆ ಸೇರಿಕೊಂಡಿದ್ದ. ಆಮೇಲೆ ಒಂದು ಬಾರಿಯಷ್ಟೇ ಕಾಟಿಮಂಜೆಗೆ ಬಂದು ಅಮ್ಮನಿಗೊಂದು ಚಿನ್ನದ ಉಂಗುರು ಮಾಡಿಸಿ ತಂದು, ಒಂದು ತೊಟ್ಟು ನೀರೂ ಕುಡಿಯದೆ ಅಲ್ಲಿಂದ ಕಾಲುಕಿತ್ತಿದ್ದ. ಅಪ್ಪಣ್ಣನಿಗೆ ಆರು ತಿಂಗಳ ಸಂಬಳ ಕತ್ತರಿಸಿ ಮಧ್ಯಸ್ಥರೇ ಒಂದು ಉಂಗುರ ಮಾಡಿಸಿಕೊಟ್ಟಿದ್ದರೆಂದು ತಿಳಿದ ಮೇಲೆ ಗೋಪಾಲಾಚಾರ್ರು ಮೆತ್ತಗಾಗಿದ್ದರು. ಕಾಟಿಮಂಜೆಯಲ್ಲಿ ಈ ಸೋಂಬೇರಿಕಟ್ಟೆಯನ್ನು ಸುಧಾರಿಸಿ, ಎಲ್ಲವೂ ಸರಿಹೋಗುವುದಕ್ಕಾದರೂ ಸೊಸೆಯೊಬ್ಬಳು ಸಿಕ್ಕರೆ ಸರಿಹೋದೀತು ಎಂಬುದು ಅವರ ಲೆಕ್ಕಾಚಾರ.

ಒಂದು ಕಾಲದಲ್ಲಿ ಕಡಿದಾಗಿದ್ದ ಕಾಟಿಮಂಜೆಗೆ ನಡೆದು, ಹೊಳೆ ದಾಟಿ ಹೋಗಬೇಕಿತ್ತಂತೆ. ಅಂತದ್ದೊಂದು ಓಬಿರಾಯನ ಕಾಲದಲ್ಲಿ ಅಪ್ಪಣ್ಣನ ಅಮ್ಮ ಭಾಗೀರಥಮ್ಮನಿಗೆ ಸಣ್ಣ ಪ್ರಾಯದಲ್ಲಿ ಮದುವೆಯಾಗಿತ್ತು. “ನಮ್ಮ ಭಾಗೀರ್ಥಿ ಮೈನೆರೆದದ್ದು ಒಂದು ಆಟಿ ತಿಂಗಳು, ಎಂಥಾ ಮಳೆ ಗೊತ್ತುಂಟ, ನಾವು ಜೋರಲ್ಲಿ ದಿಬ್ಬಣ ಕಟ್ಟಿಕೊಂಡು ಕಾಟಿಮಂಜೆಯ ಹೊಳೆ ದಾಟಿ ಮನೆಗೆ ಹೋಗುವಾಗ ನೀರು ಏರಿ ಜನ ಕಂಗಾಲಾಗಿ ಹೋಗಿದ್ರು”, ಎಂದು ಅಪ್ಪಣ್ಣನ ಅಜ್ಜಿ ಹೇಳುತ್ತಿದ್ದರು. ಆಮೇಲೆ ಭಾಗೀರಥಮ್ಮ ಅಮ್ಮನ ಮನೆಗೆ ಅಪರೂಪಕ್ಕೆ ಬರುತ್ತಿದ್ದರು. ಗೋಪಾಲಾಚಾರ್ರು ಬಂದರೆ ಮನೆಯಲ್ಲಿ ಯಾರೂ ಅವರ ಮುಖ ನೋಡಿ ಮಾತಾಡುತ್ತಿರಲಿಲ್ಲ “ಅದೊಂತರ ಪಿರ್ಕಿ, ಹೆಂಡತಿ ಮಕ್ಳನ್ನು ಸಾಕುವುದು ಬಿಟ್ಟು ಊರು ಉದ್ಧಾರ ಮಾಡ್ಲಿಕ್ಕೆ ಹೋಗ್ತದೆ ಬ್ರಾಹ್ಮಣ, ತಮ್ಮನ ಮಕ್ಕಳಿಗೆ ತಂಗೀ ಮಕ್ಕಳಿಗೆ ಮದುವೆ ಸೀಮಂತ ಮಾಡ್ಸ್ಲಿಕ್ಕೇನು ಅಡ್ಡಿಲ್ಲ, ಅಕ್ಕನಿಗೂ ಮಕ್ಕಳಿಗೂ ಕೊನೆಗೆ ಸಿಗುವುದು ಚೊಂಬಷ್ಟೇ”, ಎಂದು ಅಪ್ಪಣ್ಣನ ಮಾವ ಮೂರ್ತಿ ಭಟ್ಟರು ಹೇಳುತ್ತಿದ್ದರು.

ಭಾಗೀರಥಮ್ಮನಿಗೆ ಮದುವೆಯಾದ ಹೊಸತರಲ್ಲಿ ಅಪ್ಪಣ್ಣನ ಮಾವ ಮೂರ್ತಿ ಭಟ್ಟರು ಪ್ರತೀ ಶುಕ್ರವಾರ ಅಕ್ಕನ ಮನೆಗೆ ಹೋಗುತ್ತಿದ್ದರು. ಗೋಪಾಲಾಚಾರ್ಯರ ತಂದೆ ಭೂವರಾಹ ಆಚಾರ್ರು ಭಾರೀ ತಮಾಷಿಯವರು, ದೊಡ್ಡ ಮನಸ್ಸಿನವರು. ಇದ್ದದ್ದು ಆರೇಳು ಕೊಯ್ಲು ಗದ್ದೆಯಷ್ಟೇ. ಮನೆಯಲ್ಲಿ ದಿನಾ ನಡೆಯುವ ಸಮಾರಾಧನೆಗೇನೂ ಕಮ್ಮಿ ಇರಲಿಲ್ಲ. ಗೋಪಾಲಾಚಾರ್ಯರ ತಮ್ಮಂದಿರೂ ತಂಗಿಯಂದಿರೂ ಸೇರಿ ಮನೆಯಲ್ಲಿ ಹತ್ತು ಹದಿನೈದು ಜನರಿದ್ದರು. ಆಗ ಗೋಪಾಲಾಚಾರ್ಯರಿಗೆ ಮಾತ್ರ ಮದುವೆಯಾಗಿತ್ತು. ಮೊಂಡುತನದ ಗೋಪಾಲಾಚಾರ್ಯರನ್ನು ಯಾರಿಗೂ ಅಷ್ಟಾಗಿ ಆಗುತ್ತಿರಲಿಲ್ಲ. ಮನೆಯಲ್ಲಿ ಎಲ್ಲರೂ ಕೂತು ಮಾತಾಡುತ್ತಿದ್ದರೆ ಅವರು ಅಲ್ಲಿಂದ ಕಾಲುಕಿತ್ತು ದೇವಸ್ಥಾನಕ್ಕೆ ಹೋಗಿ ಒಳಗಿನ ಅಂಬೆಲವನ್ನು ನೀರು ಹಾಕಿ ತೊಳೆಯುತ್ತಿದ್ದರಂತೆ. ಇಲ್ಲದಿದ್ದರೆ ಕೆಲಸಕ್ಕೆ ಬರುವ ಮುಟ್ಟಿಯ ಮನೆಯಲ್ಲಿ ಪಟ್ಟಾಂಗ ಹೊಡೆಯುತ್ತಿದ್ದರಂತೆ, “ಬಿಡು ಮಾರಾಯ, ತಲೆಬಿಸಿ ಮಾಡಬೇಡ ಅವನಿಗೆ ಹುಣಸೇ ಹಣ್ಣು ತಿಂದದ್ದು ಜಾಸ್ತಿ ಆಗಿದೆ” ಎಂದು ಭೂವರಾಹ ಆಚಾರ್ಯರು ಮೂಗಿಗೆ ನಶ್ಯ ಏರಿಸುತ್ತಾ ಮೂರ್ತಿ ಭಟ್ಟರಿಗೆ ಹೇಳುತ್ತಿದ್ದರು.

ಪ್ರತೀ ಶುಕ್ರವಾರ ರಾತ್ರಿ ಭೂವರಾಹ ಆಚಾರ್ಯರ ಮನೆಯಲ್ಲಿ ತಾಳಮದ್ದಳೆ ನಡೆಯುತ್ತಿತ್ತು. ಮೂರ್ತಿ ಭಟ್ಟರು ಒಂದು ಶುಕ್ರವಾರ ಹೋಗುವುದು ತಪ್ಪಿಸಿದರೆ, “ಎಂಥಾ ಮಾರಾಯ, ಅಕ್ಕನ ಮನೆಯ ದಾರಿ ದೂರ ಆಯ್ತಲ್ಲ, ನೀನಿಲ್ಲದೆ ಶುಕ್ರವಾರದ ಗಮ್ಮತ್ತೇ ಇರೂದಿಲ್ಲ, ಬಾ ಬಾ ವೀಳ್ಯ ಹಾಕು, ಎಂದು ವೀಳ್ಯದೆಲೆಯ ತೊಟ್ಟು ತೆಗೆದು ಎಲೆಯ ಕೊಡಿಯನ್ನು ಕಿವಿಯ ಹತ್ತಿರ ಅಂಟಿಸಿ, “ಏ ಇವ್ಳೇ, ಇನ್ನು ಪಾಯಸಕ್ಕೆ ಹಾಲು ತೆಗೀಬಹುದು, ಅಲೆವೂರಿನಿಂದ ಮೂರ್ತಿ ಬಂದಿದ್ದಾನೆ” ಎನ್ನುತ್ತಿದ್ದರು. ಸಂಜೆಯ ಕಾರ್ಯಕ್ರಮಕ್ಕೆ ಕಾಟಿಮಂಜೆ ದೇವಸ್ಥಾನ ಸಂಘದ ವೆಂಕಟರಮಣ ಭಾಗವತರದ್ದು ಭಾಗವತಿಕೆ. ರಾಂಪುರ ಸೀನನದ್ದು ಮದ್ದಳೆ. ಒಂದಿಬ್ಬರು ಸಂಘದ ಕಲಾವಿದರು ಅರ್ಥ ಹೇಳುತ್ತಿದ್ದರು. ಸುತ್ತಮುತ್ತಲಿನ ಜನರೂ ಅಂಗಳದ ತುದಿಯಲ್ಲಿ ಬಂದು ಸೇರುತ್ತಿದ್ದರು. ಮನೆಯವರಿಗೆಲ್ಲಾ ಕುಳಿತುಕೊಳ್ಳಲು ಚಾಪೆ ಹಾಕುವ ಕೆಲಸ ಅಪ್ಪಣ್ಣನದ್ದು. ಭೂವರಾಹ ಆಚಾರ್ರು ಮುಂದೆ ಕುರ್ಚಿಯಲ್ಲಿ ಎದುರಿಗೆ ಕುಳಿತುಕೊಳ್ಳುತ್ತಿದ್ದರು. ಅಪ್ಪಣ್ಣ ಅಲ್ಲೇ ಅಜ್ಜನ ಬದಿಯಲ್ಲೇ ಇರುತ್ತಿದ್ದ. ಒಂದೊಂದು ಸಲ ಯುದ್ಧದ ಸಂದರ್ಭದಲ್ಲಿ, ಏರು ಪದ ಹಾಡುವಾಗ ಭೂವರಾಹ ಆಚಾರ್ಯರು ಆವೇಶದಲ್ಲಿ ಕುರ್ಚಿ ಬಿಟ್ಟು ಎದ್ದು, ತಲೆಯ ಸೂಡಿ ಬಿಚ್ಚಿ, ಹೆಗಲ ಶಾಲನ್ನು ಸೊಂಟಕ್ಕೆ ಕಟ್ಟಿ, ಕೆಳಗೆ ವೇಸ್ಟಿಯ ಕಚ್ಚೆ ಹಾಕಿಕೊಂಡು, ಅಬ್ಬರದಿಂದ ಥೈ ಥೈ ಥೈ ಥೈ ಎಂದು ಕುಣಿಯುತ್ತಿದ್ದರಂತೆ. ಕೈಯ್ಯಲ್ಲಿ ಕತ್ತಿಯನ್ನು ಝಳಪಿಸುವಂತೆ ಮಾಡುತ್ತಾ ಅಂಡೆತ್ತಿ ಎದೆಯುಬ್ಬಿಸಿ, ಕಣ್ಣು ಗರಗರ ತಿರುಗಿಸಿ ಅಭಿಮನ್ಯುವಿನ ಪ್ರತಾಪ ತೋರಿಸುತ್ತಿದ್ದರು. ಅವರು ಕುಣಿವಾಗ ಮಧ್ಯದಲ್ಲಿ ಭಾಗವತರ ಶ್ರುತಿಯಲ್ಲೇ ಜೋರಾಗಿ ಒಂದು ಲೈನು ಪದ ಹಾಡಿಕೊಂಡು, ಕಾಲು ಸೋಲುವ ತನಕ ಬುಗುರಿಯಂತೆ ತಿರುಗಿ ದಿಗಿಣ ಹಾಕಿ ಮೂರ್ತಿ ಭಟ್ಟರನ್ನೂ ಎಳೆದು ಕುಣಿಸುತ್ತಿದ್ದರಂತೆ. ಅವರ ಕಾಲಿನ ಪೆಟ್ಟಿಗೆ ಚೆಂಡೆಯ ಪೆಟ್ಟೂ ಬೇಡವೆಂದು ಸೀನ ನಿಟ್ಟುಸಿರುಬಿಟ್ಟು ಮದ್ದಳೆ ಬಾರಿಸುತ್ತಿದ್ದನಂತೆ. ಒಮ್ಮೊಮ್ಮೆ ತಿತ್ತಿತ್ತೈ ಕುಣಿದು ಸ್ತ್ರೀವೇಷದ ಶೃಂಗಾರವನ್ನೂ ತೋರಿಸುತ್ತಿದ್ದರು. ಬಿಡ್ತಿಗೆ ಮುಕ್ತಾಯ ಎಲ್ಲಾ ಮುಗಿದ ಮೇಲೆ ವಾಪಾಸು ಬಂದು ಕುರ್ಚಿಯಲ್ಲಿ ಕೂತು ಬೆವರು ಒರೆಸಿಕೊಳ್ಳುತ್ತಿದ್ದರಂತೆ. ಅಲ್ಲೇ ಕೂತು ಇದೆಲ್ಲಾ ನೋಡುತ್ತಿದ್ದ ಸಣ್ಣ ಹುಡುಗ ಅಪ್ಪಣ್ಣನೂ ಅಜ್ಜನ ಹಾಗೆ ಕುಣಿಯಲು ಹೋಗಿ “ಮಂಗ ನೀನೆಂತ ಕುಣಿವುದು, ಕೂತ್ಕೋ ಸುಮ್ನೆ,” ಎಂದು ಎಲ್ಲರಿಂದ ಬೈಸಿಕೊಳ್ಳುತ್ತಿದ್ದ. ಒಮ್ಮೊಮ್ಮೆ ಅಜ್ಜನೂ ಮೊಮ್ಮಗನೂ ಸಂಜೆಯ ಹೊತ್ತು ಅಂಗಳದಲ್ಲಿ ಕುಣಿಯುತ್ತಿದ್ದರು, ಅಪ್ಪಣ್ಣ ಕುಣಿವಾಗ ಹೆಜ್ಜೆ ತಪ್ಪಿದರೆ, “ನೀನು ದೊಂಬರಾಟಕ್ಕೆ ಸಮಾ” ಎಂದು ಚಡ್ಡಿ ಜಾರಿಸಿ, ಏಟು ಕೊಟ್ಟು, ಆಮೇಲೆ ಸಮಾಧಾನ ಮಾಡುತ್ತಾ “ತಾಳ ಗೊತ್ತಿಲ್ಲದಿದ್ದರೆ ಕುಣಿಬಾರ್ದು ಮಗಾ,” ಎಂದು ಅವನ ಕಣ್ಣೊರೆಸುತ್ತಿದ್ದರು. “ಹೀಗೆಲ್ಲಾ ಅಳುವುದಲ್ಲ, ಮೀಸೆ ತೀವಿ ನಾನು ಗಂಡುಮಗ, ಕುಣಿದು ತೋರಿಸುತ್ತೇನೆ ಎನ್ನಬೇಕು” ಎನ್ನುತ್ತಿದ್ದರು.

ಅವರು ತೀರಿಹೋದ ಮೇಲೆ ಗೋಪಾಲಾಚಾರ್ಯರು ಬೇರೆ ಮನೆ ಕಟ್ಟಿಸಿ ಶುಕ್ರವಾರದ ತಾಳಮದ್ದಳೆಯೂ ನಿಂತು ಹೋಗಿ ಮೂರ್ತಿ ಭಟ್ಟರು ಕಾಟಿಮಂಜೆಗೆ ವರ್ಷಕ್ಕೆ ಒಂದು ಸಲ ಭೂವರಾಹ ಆಚಾರ್ಯರ ಶ್ರಾದ್ಧಕ್ಕಷ್ಟೆ ಹೋಗುತ್ತಿದ್ದರು. ಆದರೆ ಅಪ್ಪಣ್ಣನ ಮೇಲೆ ಅವರಿಗೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡಂತ ಪ್ರೀತಿಯೊಂದಿತ್ತು. “ಹುಡುಗ ಎಂಥಾ ಪ್ರಯೋಜನ ಇಲ್ಲ, ಭೂವರಾಹ ಆಚಾರ್ರು ಇದ್ದಿದ್ರೆ ಏನಾದ್ರೂ ಒಂದು ಮಾಡ್ಬೋದಿತ್ತು, ಈ ಬಾವನನ್ನು ಕಟ್ಟಿಕೊಂಡು ಆಗುದು ಹೋಗುದಲ್ಲ, ಬಿಟ್ಟುಬಿಟ್ಟಿದ್ದೇನೆ” ಎನ್ನುತ್ತಿದ್ದರು.

ಈ ನಡುವೆ ಪ್ರಾಯ ಬಂದ ಸೌಭಾಗ್ಯಲಕ್ಷ್ಮಿಗೆ ಮದುವೆ ನಿಶ್ಚಯವಾಗಿತ್ತು. ಮನೆಯಲ್ಲೇ ನಡೆಯುವ ಮದುವೆಗೆ ಚಪ್ಪರ ಏರಿತ್ತು. ಹಿಂದಿನ ದಿನ ಸಂಜೆ ಅಪ್ಪಣ್ಣ ಕುರ್ಚಿ ಹತ್ತಿ ಬಾಗಿಲಿಗೆ ಮಾವಿನ ಎಲೆಯ ತೋರಣ ಕಟ್ಟುತ್ತಿದ್ದ. ಗೋಪಾಲಾಚಾರ್ಯರ ತಂಗಿಯಂದಿರು ತಮ್ಮನ ಹೆಂಡತಿಯರೆಲ್ಲಾ ಕರೆಂಟು ಹೋಗಿ ಸೆಕೆ ತಡೆಯದೆ ಚಪ್ಪರದ ಅಂಗಳದಲ್ಲಿ ಕಾಲು ಚಾಚಿ ಮಾತಾಡುತ್ತಿದ್ದರು. ಅವರ ತಮ್ಮನ ಹೆಂಡತಿಯೊಬ್ಬರು ಮಂದರ್ತಿಯವರು. “ಅಪ್ಪಣ್ಣಂಗೆ ಎಂಥದೋ ಖಾಯಿಲೆಯಂಬ್ರು, ಅದಕ್ಕೆ ಮಾಣಿ ಬೊಂಬಾಯಿ ಬಿಟ್ಟು ಬಂದಿದೆಯೆಂಬ್ರು, ಮುಖ ಎಲ್ಲಾ ದಪ್ಪಗಾಗಿ ನೀರು ಕೂತಂಗೆ ಕಾಣ್ತು, ಅಲ್ಲಿ ಎಂಥಾ ವ್ಯವಹಾರ್ವೋ ಯಾರ್ ಕಾತ್ರು” ಎನ್ನುತ್ತಿದ್ದರು. “ಹೌದೌದು ಎಲ್ಲಾ ಗೊತ್ತುಂಟು ಮಾರಾಯ್ತಿ, ಇವುಗಳ ಸುದ್ದಿಶ್ಲೋಕ ಯಾರಿಗೆ ಬೇಕು, ಅಣ್ಣನ ಮುಖ ನೋಡಿ ಬಂದದ್ದು, ನಾಳೆ ಮಧ್ಯಾಹ್ನ ಊಟ ಮಾಡಿ, ನಾವು ಜಾಗ ಖಾಲಿ ಮಾಡುದೇ, ಏನೋ ಅಣ್ಣ ಆಗಾಗ ತೆಂಗಿನಕಾಯಿ, ಮಾವಿನ ಮಿಡಿ, ಹಲಸಿನ ಹಣ್ಣು ತಂದುಕೊಡುದುಂಟು. ನಂಗೇನೂ ಇವ್ರ ಪುಕುಳಿಯಿಂದ್ಲೇ ಬೆಳಗಾಗ ಬೇಕೂಂತಿಲ್ಲ” ಎಂದು ಆಚಾರ್ಯರ ತಂಗಿ ವಸಂತಿ ಅತ್ತೆ ಹೇಳುತ್ತಿದ್ದರು.

ಅವರು ಹೆಣ್ಣಿನ ಮನೆಗೆ ಬರುತ್ತಾರೋ ಇಲ್ಲವೋ ಎಂಬುದೂ ಅಲ್ಲಿ ಯಾರಿಗೂ ಗೊತ್ತಿರಲಿಲ್ಲ. ಅಪ್ಪನ ಸೈಕಲು ಹೊರಟದ್ದನ್ನು ನೋಡಿ, ಬೀಜ ಬಿಡಿಸಿದ ಹುಣಸೇಹಣ್ಣನ್ನು ಬಿಸಿಲಲ್ಲಿ ಇಡುತ್ತಿದ್ದ ಅಪ್ಪಣ್ಣನ ತಂಗಿ ಸೌಭಾಗ್ಯಲಕ್ಷ್ಮಿಗೆ ಮಿಣ್ಣಗೆ ನಗುಬರುತ್ತಿತ್ತು. ಅವಳು ಮದುವೆಯಾಗಿ ಎರಡೇ ದಿನಕ್ಕೆ ಸಾಕುಬೇಕಾಗಿ ಗಂಡನ ಜೊತೆ ಇರಲಾರದೆ ತಾಯಿ ಮನೆಯಲ್ಲೇ ಇದ್ದಳು.

ಮದುವೆ ಮನೆಯಲ್ಲಿ ಕತ್ತಲಾಗುತ್ತಿತ್ತು. ಗೋಪಾಲಾಚಾರ್ಯರು ಗುಲಾಬಿ ಗಿಡದ ಹತ್ತಿರ ದುಡ್ಡು ಎಣಿಸಿ ಕೊನೆಯ ತಮ್ಮ ವಾಸಣ್ಣನ ಕೈಯ್ಯಲ್ಲಿ ದುಡ್ಡು ಕೊಟ್ಟು, “ದುಡ್ಡಿನ ಪರ್ಸು ನಾಳೆ ನಿನ್ನ ಕೈಯ್ಯಲ್ಲೇ ಇರ್ಬೇಕು, ಒಂದು ನೋಟೂ ಆಚೆ ಈಚೆ ಆಗಬಾರದು ಗೊತ್ತಾಯ್ತಲ್ಲಾ” ಎನ್ನುತ್ತಿದ್ದರು. ಅಡುಗೆ ಮನೆಯ ಕತ್ತಲಲ್ಲಿ ಇದನ್ನೆಲ್ಲಾ ನೋಡುತ್ತಿದ್ದ ಭಾಗೀರಥಮ್ಮ “ಅವನತ್ರ ಎಂಥಾ ಪರ್ಸು ಕೊಡುದು, ಇಲ್ಲಿ ಅಪ್ಪಣ್ಣ ಇಲ್ವಾ ನನ್ನ ಮಗ್ಳ ಮದ್ವೆಗೆ ಅವ್ನದ್ದೆಂತಂತೆ ಅಧಿಕಾರ?” ಎಂದು ವಟವಟ ಹೇಳುತ್ತಾ ಜೋರಾಗಿ ಅಳುವಂತೆ ಕೇಳಿಸುತ್ತಿತ್ತು. ಅಷ್ಟೊತ್ತಿಗೆ ಪಡಸಾಲೆಯ ಬಾಗಿಲು ಮುಚ್ಚಿ, “ಬಿಕನಾಸಿ ನೀನೂ ನಿನ್ನ ಮಕ್ಕಳೂ ಹೊಳೆಗೆ ಹಾರಿ ಯಾಕಾದ್ರು ಸಾಯ್ಬಾರ್ದು,” ಎಂದು ಗೋಪಾಲಾಚಾರ್ಯರ ದಬದಬ ಗುದ್ದು, ಭಾಗೀರಥಮ್ಮನ ಇನ್ನಿಲ್ಲದ ಬೊಬ್ಬೆ ಕೇಳಿಸುತ್ತಿತ್ತು. ಗೋಪಾಲಾಚಾರ್ಯರು ಹೊರಗೆ ಬಂದು ಧಡಾರನೆ ಬಾಗಿಲು ಹಾಕಿ ಬೀಗ ಜಡಿದು ಮುಖ ಧಿಮಿಧಿಮಿ ಮಾಡುತ್ತಾ, ಕವಳ ಹಾಕಿದ ಬಾಯಿಯಲ್ಲಿ ಪಿಚಕ್ಕನ್ನೆ ಉಗಿದು ಒಂದು ರೀತಿ ನಗುತ್ತಾ ಬೀಗವನ್ನು ಸೊಂಟಕ್ಕೆ ಸಿಕ್ಕಿಸಿ ಸೈಕಲ್ ಹತ್ತಿ ಹೊರಟಿದ್ದರು. ನಾಳೆ ಮದುವೆಯಾಗಿ ಹೋಗುವ ಸೌಭಾಗ್ಯಲಕ್ಷ್ಮಿಗೆ ಇಲ್ಲಿಂದ ಗಂಡನ ಮನೆಗೆ ಹೋಗುವುದು ಸುಖವೋ ದುಃಖವೋ ಗೊತ್ತಾಗದೆ ಅಂಗಳದಲ್ಲಿ ಮದರಂಗಿ ಇಡಿಸಿಕೊಳ್ಳುತ್ತಿದ್ದಳು. ಅಪ್ಪಣ್ಣನಿಗೆ ನಾಳೆ ಮದುವೆ ಇರುವುದೂ ಮರೆತು ಆಕಳಿಕೆ ಬರುತ್ತಿತ್ತು. “ಇವರ ಲಡಾಯಿ ಇಲ್ಲದೆ ಈ ಮನೆಯಲ್ಲಿ ಹೇಲುವುದಕ್ಕೂ ಆಗುದಿಲ್ಲ,” ಎಂದು ತನಗೆ ತಾನೆ ಜೋರಾಗಿ ಹೇಳಿಕೊಂಡ. ವಸಂತಿ ಮಾಮಿ, ಮುಖ ಕಿವುಚಿ ಕಣ್ಣೆಲ್ಲೇ “ಎಂತಂದಂತೆ ಇವ್ರದ್ದು” ಎನ್ನುತ್ತಾ, ನೀರು ಕುಡಿದು “ಅತ್ತಿಗೆ ಬಾಯಿ ಮುಚ್ಚಿ ಕೂತ್ರೆ ಆದೀತು, ಎಂಥಾದ್ರು ಮಾಡ್ಕೊಳ್ಳಿ, ಸೆಕೆ ತಡೀತಿಲ್ಲಾ, ಒಂದು ಲೋಟ ಮಜ್ಜಿಗೆ ಕುಡಿದು ಬರ್ತೇನೆ” ಎಂದು ಎದ್ದು ಹೋದರು. ಅಪ್ಪಣ್ಣನ ಅಜ್ಜಿಗೆ ಮುಖವೆಲ್ಲಾ ಕಂದಿ ಹೋಗಿ “ಇವಳ್ಯಾಕೆ ವಟವಟ ಮಾತಾಡುದು, ಆ ಹುಡ್ಗಿಗೊಂದು ಮದ್ವೆ ಆಗ್ಲಿ ಆಮೇಲೆ ಇವಾ ತಮ್ಮನ ಹೆಣದ ಮೇಲಾದ್ರು ಹಣ ಹಾಕ್ಲಿ, ಯಾರಿಗೆ ಬೇಕಿತ್ತು ಇದೆಲ್ಲಾ, ನಾನು, ಸುಮ್ಮನೆ ಬಂದದ್ದು, ನಾಳೆ ಧಾರೆ ಆದ ಕೂಡ್ಲೆ ಒಂದು ಘಳಿಗೆನೂ ಇಲ್ಲಿ ಇರುದಿಲ್ಲ” ಎಂದು ಕಣ್ಣೊರೊಸಿಕೊಂಡಿದ್ದರು.

ಅಂತೂ ಗೋಪಾಲಾಚಾರ್ಯರು ಮದುವೆಗೆ ಬಂದು ಧಾರೆ ಎರೆದು ಕೊಟ್ಟರು. ವಾಸಣ್ಣ ಪರ್ಸನ್ನು ಕಂಕುಳದಿಂದ ಇಳಿಸದೇ ಅಣ್ಣನ ಹಿಂದೆ ಓಡಾಡಿದ್ದರು. ಸೌಭಾಗ್ಯಲಕ್ಷ್ಮೀ ಗಂಡನ ಒತ್ತಲ್ಲಿ ಕೂತು ಹೊರಡುವಾಗ ಕಣ್ಣಂಚು ಒದ್ದೆಯಾಗಿ, ಬೆವರಿದ ಅವಳ ಹೊಸ ಧಾರೆ ಸೀರೆ, ಮಲ್ಲಿಗೆಯ ಘಮದಲ್ಲಿ ಮದುಮಗಳ ನಶೆಯಲ್ಲಿಯೇ ತೇಲಿಕೊಂಡು ಗಂಡನ ಮನೆಗೆ ಹೋಗಿದ್ದಳು. ಹೋದ ಹಾಗೆಯೇ ಅತ್ತೆ ಹೊಡೆದರೆಂದು, ಗಂಡ ಬರಿಯ ಶಂಭುಲಿಂಗನೆಂದು ಅಲ್ಲಿರಲಾರೆನೆಂದು ಕೋಪದಿಂದ ತುಟಿ ಮುಂದೆ ಮಾಡುತ್ತಾ ಮುಡಿದ ಮಲ್ಲಿಗೆಯಲ್ಲೇ ಕೆನ್ನೆಯ ಅರಶಿನದಲ್ಲೇ ಮಾಮಿಯ ಮನೆಗೆ ವಾಪಾಸು ಬಂದಿದ್ದಳು.

ಇದೆಲ್ಲಾ ಮುಗಿದು ಸೌಭಾಗ್ಯಕ್ಷ್ಮಿಗೆ ಗುಟ್ಟು ತೋಡಿಕೊಳ್ಳಲು ಸುತ್ತ ಸಖಿಯರಿಲ್ಲದೆ, ಚಾವಡಿಯಲ್ಲಿ ದಿನವಿಡೀ ನಿದ್ದೆಹೋಗುತ್ತಿದ್ದಳು. ಅಂಗಳದಲ್ಲಿ ಹಾಗೆಯೇ ಇರುವ ಮದುವೆ ಚಪ್ಪರದಲ್ಲಿ ಕೂತು ಭಾಗೀರಥಮ್ಮ ಒಣಗಿದ ತೋರಣವನ್ನು ನೋಡುತ್ತಿದ್ದರೆ, ಗೋಪಾಲಾಚಾರ್ಯರ ಸೈಕಲ್ ಗಿರ್ರನೆ ತಿರುಗುವುದು ಕಮ್ಮಿಯಾಗಿ ತೆಪ್ಪಗೆ ನಿಂತಿತ್ತು..

ಯಾವುದನ್ನೂ ತಲೆಗೆ ಹಾಕಿಕೊಳ್ಳದ ಅಪ್ಪಣ್ಣ ಜಿಪ್ಪು ತುಂಡಾದ ಬ್ಯಾಗಲ್ಲಿ ಒಂದಷ್ಟು ನೇರಳೆ ಹಣ್ಣು ತುಂಬಿಸಿ ಅಜ್ಜಿ ಮನೆಗೆ ಬಂದಿದ್ದ. ಅವನಿಗೆ ಮಾಡುವುದಕ್ಕೆ ಕೆಲಸವಿರಲಿಲ್ಲ, ಒಂದಷ್ಟು ದಿನ ಅಗ್ರಹಾರವೊಂದರಲ್ಲಿ ಪೂಜೆ ಮಾಡಿದ್ದಾಯಿತು, ಇನೊಂದಿಷ್ಟು ದಿನ ವಾಸು ಮಾಮನ ಜೊತೆ ಅಡುಗೆ ಕೆಲಸಕ್ಕೆ ಹೋಗಿ ಕಾಯಿ ಹೆರೆಯುವುದು, ಮಸಾಲೆ ರುಬ್ಬುವುದಾಯಿತು. ಆಮೇಲೆ ಏನೂ ಮಾಡದೆ ಸ್ತ್ರೀವೇಷದ ಕಿಟ್ಟಾಚಾರಿಯ ಜೊತೆ ಅಲೆಯುವುದೂ ಆಯಿತು.

ಈಗ ಬೇಸಗೆ ರಜೆಯಲ್ಲಿ ಅಜ್ಜಿಮನೆಯಲ್ಲಿ ಮನೆತುಂಬಾ ಮಕ್ಕಳು, ದೊಡ್ಡವರ ನಡುವೆ ಅಪ್ಪಣ್ಣ ಓಡಾಡಿಕೊಂಡಿರುವುದು ಯಾರಿಗೂ ಬೇಡವಾಗಿರಲಿಲ್ಲ. ಒಂದು ದಿನ ಬೆಳಗ್ಗೆ ಎದ್ದು ಯಾರೂ ಹೇಳದೆಯೇ ಹಲಸಿನ ತೊಳೆಗಳನ್ನು ಬೇಯಿಸಿ ಮಸಾಲೆ ಹಾಕಿ ದೊಡ್ಡಕಲ್ಲಲ್ಲಿ ಕಡೆದು ಮಣೆಯಲ್ಲಿ ಒಂದೊಂದೇ ಉಂಡೆಯನ್ನು ಒತ್ತಿ ಅಪ್ಪಣ್ಣ ಹಪ್ಪಳ ಮಾಡುತ್ತಿದ್ದ. ಮಕ್ಕಳೇನಾದರೂ ಸಿಹಿಯಾದ ಹಸಿ ಉಂಡೆಯನ್ನು ತಿನ್ನಲು ಹೋದರೆ, “ಯಾರೂ ತಿನ್ನಬೇಡಿ, ಹೊಟ್ಟೆ ಪರ್ಕಟಿ ಆಗಿ ಜುಲಾಬು ಶುರುವಾಗ್ತದೆ” ಎಂದು ಪಕಪಕನೆ ನಕ್ಕು ಮಕ್ಕಳನ್ನೂ ಹತ್ತಿರ ಬರುವ ಕಾಗೆಗಳನ್ನೂ, ದೂರ ಓಡಿಸಿ ಹಪ್ಪಳ ಒಣಗಿಸುತ್ತಿದ್ದ. ಅಷ್ಟು ಹೊತ್ತಿಗೆ ಸಂಜೆಯಾಗಿ ಹಪ್ಪಳವನ್ನು ತಾನೇ ಒಳಗಿಟ್ಟು ಚಾ ಕುಡಿದು ಅಂಗಳದಲ್ಲಿ ಚಾಕು ಪೀಸಿನಲ್ಲಿ ಚೌಕ ರಂಗಸ್ಥಳ ಬರೆದು ದಿದ್ದಗ, ದಿದ್ದಗ ದಿದ್ದಗ,…ಧೀಂಗಿಣ ಕಿ ಟತಕ ತರಿಕಿಟ ಕಿಟತಕ” ಎಂದು ಹೇಳುತ್ತಾ ಎದೆಯುಬ್ಬಿಸಿ ಕೂದಲು ಕೊಡವಿ, ದೊಡ್ಡ ಹೊಟ್ಟೆ ಅಲ್ಲಾಡಿಸಿ ಕುಣಿಯುತ್ತಿದ್ದ. ಕೆಲವೊಮ್ಮೆ ಸ್ತ್ರೀವೇಷದ ವೈಯ್ಯಾರ ಮಾಡಿ ತೋರಿಸುವಾಗ ಅವನ ಸೊಂಟ, ಹೊಟ್ಟೆಯ ಬೊಜ್ಜುಗಳು ಕುಣಿಯುತ್ತಿದ್ದವು., “ನಿಂದೆಂಥ ಮಾರಾಯ ಸ್ತ್ರೀವೇಷವಾ ಹಾಸ್ಯವಾ ಇದು” ಎಂದು ಮೂರ್ತಿ ಭಟ್ಟರ ಹೆಂಡತಿ ಲೀಲತ್ತೆ ನಕ್ಕು ಕೊಟ್ಟಿಗೆಗೆ ಹಾಲು ಕರೆಯಲು ಹೋಗುತ್ತಿದ್ದರು.

ಅಪ್ಪಣ್ಣನಿಗೆ ಮೀಸೆಯೇ ಮೂಡುತ್ತಿರಲಿಲ್ಲ. ಅಲ್ಲಲ್ಲಿ ಪಿಚಪಿಚ ನಾಲ್ಕು ಕೂದಲು ಯಾಕೆ ಬೇಕೆಂದು ಬೋಳಿಸಿ, “ಈಗ ಹೇಗೆ ಕಿಟ್ಟಚಾರಿಯ ಕಾಣುತ್ತೇನಲ್ಲಾ, ಸ್ತ್ರೀವೇಷ ಮಾಡಿದರೆ ಲಾಯಿಕಾದೀತು” ಎಂದರೆ ಲೀಲತ್ತೆ, “ಇಲ್ಲ ಕೋಲ ಕಟ್ಟುವ ಪಂಬದನ ಹಾಗೆ ಕಾಣುತ್ತೀ” ಎನ್ನುತ್ತಿದ್ದರು.. ಒಮ್ಮೊಮ್ಮೆ ಅವನ ಬಾಯಿಯಿಂದನೋ ಮೈಯಿಂದನೋ ಎಂತಹದ್ದೋ ಕೆಟ್ಟ ವಾಸನೆ ಬರುತ್ತಿತ್ತು. ನಗುವಾಗ ಉದ್ದ ಹಳದಿ ಹಲ್ಲು ತೋರುತ್ತಿತ್ತು., ಬೆಳೆದ ಉಗುರುಗಳಲ್ಲಿ ಮಣ್ಣು ತುಂಬಿ, ದೊಡ್ಡ ಹೊಟ್ಟೆ ಮೇಲೆ ಜೀವವಿಲ್ಲದ ಹಾಗೆ ನೇತುಕೊಂಡಿರುವ ಜನಿವಾರವಿರುತ್ತಿತ್ತು. ಹೀಗೆಲ್ಲಾ ತಾನು ಇರುವೆನೆಂದು ಅರಿವೂ ಇಲ್ಲದ ಅಪ್ಪಣ್ಣ ಅಜ್ಜಿ ಮನೆಗೆ ಬಂದು ತಿಂಗಳಾದರೂ ವಾಪಾಸು ಮನೆಗೆ ಹೋಗಿರಲಿಲ್ಲ. ಹತ್ತಿರದಲ್ಲಿ ಕಿಟ್ಟಾಚಾರಿಯ ಮೇಳದ ಆಟವಿದ್ದರೆ ಬೆಳಗಿಂದಲೇ ಕಿಟ್ಟಾಚಾರಿಯ ಜೊತೆಗೇ ಓಂಗಾರಿಕೊಂಡು ರಂಗಸ್ಥಳ ಕಟ್ಟುವುದು, ಚೌಕಿಯಲ್ಲಿ ವೇಷದ ಆಭರಣ, ಬಟ್ಟೆಗಳನ್ನು ಬಿಡಿಸಿಟ್ಟು, ಅವರೊಡನೆ ಕುಚ್ಚಲಕ್ಕಿ ಗಂಜಿಯೂಟ ಮಾಡಿ, ಮಧ್ಯಾಹ್ನ ನಿದ್ದೆ ಮಾಡಿ, ರಾತ್ರಿ ಆಟ ನೋಡಿ ಬೆಳಗ್ಗೆ ಮನೆಗೆ ಬರುತ್ತಿದ್ದ.

ಅವನು ದೂರದಲ್ಲಿ ಬರುತ್ತಿದ್ದರೆ, ಲೀಲತ್ತೆಗೆ ಕೋಪ ಏರಿ, “ಬಂತು ಎಮ್ಮೆ ತಮ್ಮಣ್ಣನ ಸವಾರಿ, ದುಡಿಯುವುದಕ್ಕೆ ದಾಡಿ, ಅಡ್ಡದಿಡ್ಡ ಮೈಬೆಳೆಸಿಕೊಂಡು ಬೆಳಗ್ಗೆ ಎದ್ದು ಚಾ ಕುಡಿವುದು, ಸ್ನಾನವೂ ಮಾಡದೆ ಆಚೆ ಮನೆಯ ಹೆಂಗಸರ ಜೊತೆ ಪಟ್ಟಾಂಗ ಹೊಡೆಯುವುದು. ಗುಂಡಾಡಿಗುಂಡನ ಹಾಗೆ ತಿರುಗಿದರೆ ಯಾರು ಅನ್ನ ಹಾಕುತ್ತಾರೆ ಈ ಹಡಬೆಗೆ”? ಮನೆಯಿಂದ ಅಪ್ಪನೂ ಓಡಿಸಿರಬೇಕು, ಎಂದು ಸಿಂಬಳವನ್ನು ಸೀಟಿ ಅಪ್ಪಣ್ಣ ಒಣಗಿ ಹಾಕಿದ ಪಂಚೆಗೆ ಸಿಂಬಳ ಮೆತ್ತಿ, ಇನ್ನು ಇದನ್ನು ಒಗೆಯುವುದಕ್ಕೆ ಸಾಬೂನು ಖರ್ಚು ಬೇರೆ ಎನ್ನುತ್ತಿದ್ದಳು. ಇದೆಲ್ಲವನ್ನು ಕ್ಯಾರೇ ಎನ್ನದ ಅಪ್ಪಣ್ಣ ಒಂದು ಸಂಜೆ ತಾನಾಗಿಯೇ ಮನೆಗೆ ಹೋದರೆ, ಅಪ್ಪನ ಕೆಂಡದಂತ ಮಾತುಗಳು ಎದೆಯೊಳಗೆ ಇಳಿದು ತೀರ್ಥಹಳ್ಳಿಗೆ ಗಾಡಿ ಹತ್ತಿದ್ದ.

ಇದೆಲ್ಲಾ ಆಗಿಹೋಗಿ ಸುಮಾರು ಮಳೆಗಾಲ ಕಳೆದಿತ್ತು. ಅಪ್ಪ ಹೇಗೆಹೇಗೆ ಕರೆದರೂ ಮನೆಯತ್ತ ಸುಳಿಯದ ಅಪ್ಪಣ್ಣನಿಗೆ, “ಮೂರ್ತಿ ಮಾವ ಮೂಡಬೆಟ್ಟಿನಲ್ಲಿ ನಿನಗೆ ಹೆಣ್ಣು ನೋಡಿದ್ದಾನೆ, ಅಪ್ಪನಿಗೂ ಖುಷಿ ಉಂಟು, ಅಷ್ಟಕ್ಕಾದರೂ ಬಾ ಮಾರಾಯ” ಎಂದು ಅಮ್ಮ ದಮ್ಮಯ್ಯ ಹಾಕಿದಾಗ ಬಾರದೆ ಇರಲು ಮನಸ್ಸಾಗಲಿಲ್ಲ. ಕೂಡಲೇ ಬಸ್ಸು ಹತ್ತಿ ಹೊರಟು ಈಗ ಎಲ್ಲವೂ ಸರಿಹೋದ ಹಾಗೆ ಕಾಟಿಮಂಜೆಯ ಗದ್ದೆಯ ಉರಿಬಿಸಿಲಲ್ಲಿ ನಡೆಯುತ್ತಿದ್ದ. ಮನೆಗೆ ಬಂದು ಅಪ್ಪನನ್ನು ನೋಡಿ ಊಟ ಮಾಡಿದ ಮೇಲೆ ಹೊಟ್ಟೆಯ ತಳಮಳವೆಲ್ಲಾ ಸದ್ಯಕ್ಕೆ ಸರಿಯಾದ ಹಾಗೆ ಅನ್ನಿಸಿತ್ತು.
ಅಪ್ಪಣ್ಣ, ಸಣ್ಣಗಿನ ನಿದ್ದೆ ಮುಗಿಸಿ ಸ್ನಾನ ಮಾಡಿ ಚಿನ್ನದ ಚೈನು ಹಾಕಿಕೊಂಡು ತನಗೆ ಒಳಗೆ ಆಗುತ್ತಿರುವ ಪುಳಕವನ್ನೋ ಪುಕ್ಕಲನ್ನೋ ತೋರಿಸದೆ ನೀಟಾಗಿ ಕ್ರಾಪು ಬಾಚಿಕೊಳ್ಳುತ್ತಿದ್ದ. ಭಾಗೀರಥಮ್ಮ ಮುಖ ತೊಳೆದು ಪೌಡರ್ ಹಚ್ಚಿಕೊಳ್ಳುತ್ತಿದ್ದರು. ಸೆಖೆಗೆ ಬೆವರಿದ ಮುಖದಲ್ಲಿ ಅಲ್ಲಲ್ಲಿ ಬೆಳ್ಳಗಿನ ತೇಪೆ ಅಂಟಿಕೊಳ್ಳುತ್ತಿತ್ತು. ಹಣೆಯ ಲಾಲ್ಗಂಧವನ್ನು ಇನ್ನೂ ಉರುಟು ಮಾಡುತ್ತಾ ಮದುಮಗನಂತೆ ಕಾಣುತ್ತಿದ್ದ ಮಗನನ್ನು ನೋಡಿ “ದೇವರಿಗೊಂದು ನಮಸ್ಕಾರ ಮಾಡಿ ಹೊರಡು ಅಪ್ಪು” ಎಂದರು. ಸೌಭಾಗ್ಯಲಕ್ಷಿ ಸೀರೆಯುಟ್ಟು ಅಬ್ಬಲಿಗೆ ಮುಡಿಯಲು ಕ್ಲಿಪ್ಪು ಹುಡುಕುತ್ತಿದ್ದಳು. ಗೋಪಾಲಾಚಾರ್ಯರ ಕೋಣೆಯಲ್ಲಿ ರೇಡಿಯೋ ಬಂದಾಗಿತ್ತು. ಚಿಲಕ ಹಾಕುವ ಸದ್ದು ಕೇಳಿ ಭಾಗೀರಥಮ್ಮನಿಗೆ ಸಮಾಧಾನವಾಗಿತ್ತು. ಎಲ್ಲರೂ ಹೊರಟು ಮನೆಗೆ ಬೀಗ ಹಾಕಿ ಒಟ್ಟಿಗೆ ಅಂಗಳಕ್ಕೆ ಇಳಿವಾಗ ಸಂಜೆಯಾಗಿ ಅಂಗಳದ ಗಿಡಗಳು ಇನ್ನೂ ಚಂದ ಕಾಣುತ್ತಿದ್ದವು. “ರಾಹುಕಾಲ ಮುಗೀತು, ಇನ್ನು ಹೊರಡುವ” ಎಂದು ಗೋಪಾಲಾಚಾರ್ಯರು ತನಗೆ ತಾನೇ ಹೇಳುವಂತೆ ಹೇಳಿದ್ದರು.

ಇಲ್ಲಿ ಇತ್ತಲಾಗೆ ಮೂಡುಬೆಟ್ಟಿನ ಹೆಣ್ಣಿನ ಮನೆಯಲ್ಲಿ ಮದುವೆ ಹೆಣ್ಣು ಕಮಲಾಕ್ಷಿ ಪರೋಟ ಮಾಡುವುದಕ್ಕೆ ಶುರುವಿಟ್ಟು, ಇಷ್ಟು ತಡವಾಗಿಯಾದರೂ ಮದುವೆ ಬೇಕೋ ಬೇಡವೋ ಎಂಬ ತಾಕಲಾಟದಲ್ಲಿ ಕಪ್ಪು ಹಾಸುಕಲ್ಲಿನ ಮೇಲೆ ಮೈದಾ ಹಿಟ್ಟು ನಾದುತ್ತಿದ್ದಳು. ಮುಖದಲ್ಲಿ ಕೆಂಪು ಸ್ಟಿಕ್ಕರು ಓರೆಯಾಗಿ ಬೆವರಿಳಿಯುತ್ತಿತ್ತು. ಅವಳ ಸಣ್ಣ ಕಣ್ಣುಗಳು, ಉಬ್ಬಿಕೊಂಡ ಕೆನ್ನೆಗಳ ನಡುವೆ ಕಾಣುವ ಹಲ್ಲುಗಳು ಓರೆಕೋರೆಯಾಗಿದ್ದವು. ಎಷ್ಟೋ ವರ್ಷಗಳಿಂದ ಹೀಗೆಯೇ ಹಿಟ್ಟು ಹದಕ್ಕೆ ಬಂದು, ಎತ್ತಿಕಟ್ಟಿದ ನೈಟಿಯನ್ನು ಇಳಿಸುವಾಗ ಕಮಲಾಕ್ಷಿಯ ಎಣ್ಣೆಪಸೆಯ ಮುಖ ಮತ್ತು ಕಲ್ಲು ಒಂದೇ ತರ ಕಾಣುತ್ತಿತ್ತು. ಆ ಕೋಣೆಯ ಮಂದ ಬೆಳಕಲ್ಲಿ ದಿನಾ ಬೆಳಗ್ಗೆ ಹೀಗೆಯೇ ಇಷ್ಟು ಹೊತ್ತಿಗೆ ಕಮಲಾಕ್ಷಿ ಒಬ್ಬಳೇ ಪರೋಟ ಕಾಯಿಸುತ್ತಿರುತ್ತಾಳೆ. ಅವಳ ಅಪ್ಪ ಪರೋಟ ಭಟ್ಟರು ಒಬ್ಬ ಮಳೆಯಾಳಿ ಅಡುಗೆ ಭಟ್ಟನಲ್ಲಿ ಪರೋಟ ಮಾಡುವುದನ್ನು ಕಲಿತು ಈಗ ಅವರು ತೀರಿಕೊಂಡ ಮೇಲೆ ಕಮಲಾಕ್ಷಿ ಹಿಟ್ಟು ಕಲಸಿ ಕಾಯಿಸಿ ಮೆತ್ತಗಿನ ಗರಿಗರಿ ಪರೋಟ ಮಾಡುತ್ತಿದ್ದಳು.

ಅಪ್ಪ ಹೋಗುತ್ತಿದ್ದ ಲೂನಾದಲ್ಲಿ ಅಷ್ಟೂ ಪರೋಟವನ್ನ್ನು ಕಟ್ಟಿಕೊಂಡು ಊರಿನ ಹೋಟೆಲಿಗೆ ಸಪ್ಲೈ ಮಾಡಿಬಂದು ಪರೋಟ ಹಾಕುತ್ತಿದ್ದ ಖಾಲಿ ಚೀಲವನ್ನು ವಾಪಾಸು ತಂದು ಆ ಕೋಣೆಯ ಮೂಲೆಯಲ್ಲಿ ಸಿಕ್ಕಿಸಿ ಯಾರಲ್ಲಿಯೂ ಮಾತಾಡದೆ ಸ್ನಾನದ ಮನೆಗೆ ನಡೆಯುತ್ತಿದ್ದಳು. ಸ್ನಾನ ಮಾಡುವಾಗ ತನ್ನನ್ನು ಯಾರಾದರೂ ಒಪ್ಪುವಷ್ಟು ಚಂದವಿರುವ ಹಾಗೆ ಕಂಡು, ಪರಿಮಳದ ಸಾಬೂನು ಹಾಕಿ ತೊಳೆದು ತನ್ನನ್ನು ತಾನೇ ಮುಟ್ಟಿಕೊಂಡು ನೋಡಿ ನಾಚುತ್ತಿದ್ದಳು.

ಕಮಲಾಕ್ಷಿಯ ಅಮ್ಮ ರತ್ನಕ್ಕನಿಗೆ ಮಗಳಿಗೆ ಮದುವೆಯಾಗಿ ಮನೆಗೊಬ್ಬ ಅಳಿಯ ಬರುವ ಸಂಭ್ರಮ, ಆದರೂ ಇವಳು ಮದುವೆಯಾಗಿ ಹೋದರೆ ಪೋಲಿ ಬಿದ್ದು ಹೋಗಿರುವ ಮಗ ಸುಬ್ರಹ್ಮಣ್ಯನನ್ನು ಕಟ್ಟಿಕೊಂಡು ಏನು ದುಡಿಯುವುದು ಅನ್ನಿಸಿ, ಮಗಳು ಹೋಗುವುದೂ ಬೇಸರವಾಗಿ ಗಂಟಲು ಕಟ್ಟುತ್ತಿತ್ತು. ರತ್ನಕ್ಕ ಉಪ್ಪಿಟ್ಟಿಗೆ ವಗ್ಗರಣೆ ಮಾಡುತ್ತಾ, “ಮೈಸೂರು, ಪಾಕು ಉಂಟು, ಇನ್ನು ಉಪ್ಪಿಟ್ಟು ಬಾಳೆ ಹಣ್ಣು, ಮಿಕ್ಸ್ಛರ್ ಹಾಕಿದರೆ ಪ್ಲೇಟು ತುಂಬುತ್ತದೆ, ಹಾಲಿಗೆ ನೀರು ಕಮ್ಮಿ ಹಾಕಿದ್ದೇನೆ, ಚಾ ಮಾಡುದಾದ್ರೆ ಹಾಲು ನೀರಾದ್ರೂ ಸುಧಾರಿಸಬಹುದು, ಕಾಪಿ ಕೇಳಿದರೆ ಬೇಕೆಂದು ದಪ್ಪ ಹಾಲು ಇಟ್ಟಿದ್ದೇನೆ. ಸಾಕಲ್ಲ” ಎಂದರು. ಅವಳು ಹ್ಮೂಂ ಎಂದಳಷ್ಟೆ.

ಕಮಲಾಕ್ಷಿ ತನ್ನ ಕಪ್ಪು ಮೈಬಣ್ಣಕ್ಕೆ ಮೆರೂನು ಬಣ್ಣದ ಮೈತುಂಬಾ ಜರಿಯಿರುವ ಸೀರೆ, ಅದೇ ಬಣ್ಣದ ರವಿಕೆ, ತೆಗೆದಿಟ್ಟು, ಮುಡಿಯುವುದಕ್ಕೆಂದು ಮಲ್ಲಿಗೆಯನ್ನು ತಮ್ಮ ಸುಬ್ರಹ್ಮಣ್ಯನಿಗೆ ಹೇಳಿ ತರಿಸಿ, ಸ್ವಲ್ಪ ನೀರು ಚಿಮುಕಿಸುತ್ತಿದ್ದಳು. ಅಮ್ಮನ ಹಳೆಯ ಚಿನ್ನದ ಅವಲಕ್ಕಿ ಸರ, ಬೆಂಡೋಲೆ, ಬಳೆಯನ್ನು ನೊರೆಕಾಯಿಯಲ್ಲಿ ತೊಳೆಯುತ್ತಾ “ನಿನ್ನದೊಂದು ಬೈರೂಪ” ಎಂದು ಅಮ್ಮ ಆಗಾಗ ಹೇಳುತ್ತಿದ್ದರೂ ಅವಳಿಗೆ ತಾನು ಸುಂದರಿ ಎನಿಸಿ ಮಾಸಿಹೋದ ಚಿನ್ನದ ಸರ ಹೊಳೆಯುವುದನ್ನು ನೋಡುತ್ತಿದ್ದಳು.

ಇಂತಿಪ್ಪ ಸಮಯದಲ್ಲಿ ಅಲ್ಲಿ ಕಾಟಿಮಂಜೆಯಲ್ಲಿ ಭಾಗೀರಥಮ್ಮನವರು ರಾಹುಕಾಲ ಮುಗಿಸಿ ಮನೆಯಿಂದ ಹೊರಟು ವಾಸಣ್ಣನ ಹಳೆಯ ಲಟಾರಿ ಕಾರಿನಲ್ಲಿ ಕಮಲಾಕ್ಷಿಯ ಮನೆಯ ಮುಂದೆ ಇಳಿಯುತ್ತಿದ್ದರು. ಬಾಗಿಲಲ್ಲಿ ನಿಂತಿದ್ದ ಕಮಲಾಕ್ಷಿಯ ಚಿಕ್ಕಪ್ಪ “ಹಾಂ ಕಾರು ಬಂತು” ಎಂದು ಹೇಳಿದ್ದು ಕೇಳಿಸಿ ಕಮಲಾಕ್ಷಿಗೆ ತಂಡಾಸು ಬಂದ ಹಾಗನಿಸಿತು. ಇನ್ನು ತಂಡಾಸಿಗೆ ಹೋದರೆ ಚಿಕ್ಕಪ್ಪನ ಮಗಳು ಶಾಂತ ಚಂದಕ್ಕೆ ಸೀರೆ ಉಡಿಸಿ ಅಲಂಕಾರ ಮಾಡಿರುವುದು ಎಲ್ಲಿ ಹಾಳಾಗುತ್ತದೆಂದು ಅನ್ನಿಸಿ, ಕನ್ನಡಿಯ ಮುಂದೆ ಎಡಕ್ಕೊಮ್ಮೆ ಬಲಕ್ಕೊಮ್ಮೆ ತಿರುಗಿ, ಮುಡಿದ ಹೂವನ್ನು ಮೆಲ್ಲಗೆ ಸವರಿ ಸೀರೆಯ ನೆರಿಗೆ ಸರಿ ಮಾಡಿಕೊಂಡಳು.

ಮನೆಯೊಳಗೆ ಬರುತ್ತಿದ್ದಂತೆ ಅಪ್ಪಣ್ಣನಿಗೂ ಎದೆ ಪುಕಪುಕವಾಗುತ್ತಿತ್ತು. ಬಿಳಿ ಬಣ್ಣದ ಜುಬ್ಬ ಹಾಕಿದ್ದ ಅಪ್ಪಣ್ಣ, ಚೂರುಪಾರು ಗಡ್ಡ ಮೀಸೆ ಬೋಳಿಸಿ ಒಂದು ಲೆಕ್ಕಕ್ಕೆ ಚಂದ ಕಾಣುತ್ತಿದ್ದ. ಕಮಲಾಕ್ಷಿಯ ಚಿಕ್ಕಮ್ಮ ತಿಂಡಿ ತಟ್ಟೆ ತಂದರು. ಚಿಕ್ಕಪ್ಪ, ಗೋಪಾಲಾಚಾರ್ಯರಲ್ಲಿ “ರಾಯರೇ ನಿಮ್ಮ ಮೂಲ ಎಲ್ಲಿಯಾಯಿತು” ಎಂದು ಮಾತು ಶುರುಮಾಡುತ್ತಾ, ಮಾತಾಡಿ ಮಾತಾಡಿ ಕೊನೆಗೆ ನೋಡಿದರೆ ಗೋಪಾಲಮಾಮನ ತಂದೆ ಭೂವರಾಹ ಆಚಾರ್ಯರ ಸಣ್ಣಕ್ಕನ ಗಂಡನಿಗೆ ಕಮಲಾಕ್ಷಿಯ ಚಿಕ್ಕಮ್ಮ ಹೇಗೋ ದೂರದ ಸಂಬಂಧಿ ಎಂದು ತಿಳಿದು ಬಂತು. ಚಿಕ್ಕಮ್ಮನಿಗೆ ಒಂದು ರೀತಿ ಸಂತೋಷವಾಗಿ ಭಾವೀ ಬೀಗರಿಗೆ ಎರಡೆರಡು ಬಾರಿ ಮೈಸೂರು ಪಾಕು ವಿಚಾರಣೆಯಾಗುತ್ತಿತ್ತು. ಅಷ್ಟರಲ್ಲಿ ಕಾಪಿ ತರುತ್ತಿದ್ದ ಕಮಲಾಕ್ಷಿಯನ್ನು ಅಪ್ಪಣ್ಣ ಮೊದಲನೇ ಬಾರಿ ನೋಡಿದ್ದ. ಅವನಿಗೆ ಮುಖವೆಲ್ಲಾ ಕಪ್ಪಿಟ್ಟಂತಾಯಿತು.

ನೆಲದಲ್ಲಿ ಹಾಸಿದ ಜಮಖಾನದ ಮೇಲೆ ಚಿಕ್ಕಪ್ಪನ ಮಗಳು ಶಾಂತ ಕಮಲಾಕ್ಷಿ ಪಕ್ಕ ಕೂತಿದ್ದಳು. ರತ್ನಕ್ಕ ಅಡುಗೆ ಮನೆಯ ಬಾಗಿಲ ಬಳಿ ನಿಂತು ಗಂಡ ಇದ್ದಿದ್ದರೆ… ಎಂದು ಭಾವೀ ಬೀಗರನ್ನು ನೋಡುತ್ತಿದ್ದರು. ಕಮಲಾಕ್ಷಿ ಅಪ್ಪಣ್ಣನನ್ನು ನೋಡಿ, ಮುಖದಲ್ಲಿ ಕಳೆ ಏರಿ ಅಯ್ಯೋ ಆಗಲೇ ತಂಡಾಸಿಗೆ ಹೋಗಿಬರಬೇಕಿತ್ತು ಅನಿಸಿ ಅವಳಿಗೆ ಇರಿಸುಮುರಿಸಾಗುತ್ತಿತ್ತು.

ಸೌಭಾಗ್ಯಲಕ್ಷ್ಮಿ ತಿಂಡಿತಟ್ಟೆ ಖಾಲಿ ಮಾಡಿ ಅಮ್ಮನನ್ನು ನೋಡಿ ಮಿಣ್ಣಗೆ ನಕ್ಕು ನೀರು ಕುಡಿಯುತ್ತಿದ್ದಳು. ಗೋಪಾಲಾಚಾರ್ಯರು ತಿಂದು ಮುಗಿಸಿ ಕವಳ ಹಾಕುತ್ತಾ “ಬೇಕಾದರೆ ನಮ್ಮ ಕಾಟಿಮಂಜೆಯ ದೇವಸ್ಥಾನದಲ್ಲೇ ಮದುವೆ ಮಾಡುವಾ, ಜಾಸ್ತಿ ಏನು ಖರ್ಚಿಲ್ಲ, ವ್ಯವಸ್ಥೆ ಎಲ್ಲಾ ನಾನೇ ಮಾಡಿಸಿ ಕೊಡ್ತೇನೆ” ಎಂದರೆ ಯಾವುದಕ್ಕೂ ಹುಡುಗ ಹುಡುಗಿ ಮಾತಾಡಿಕೊಳ್ಳಲಿ ಎಂದು ಚಿಕ್ಕಪ್ಪ ಅವರಿಬ್ಬರನ್ನು ಮನೆಯ ಬದಿಯ ತೋಟಕ್ಕೆ ಕಳುಹಿಸಿದರು.

ಮಾತುಕತೆಯೆಲ್ಲಾ ಮುಗಿಸಿ ಎಲ್ಲರ ಮನಸ್ಸಲ್ಲಿ ಅಳುಕೊಂದು ಇರುವಾಗಲೇ ಮೂಡುಬೆಟ್ಟಿನ ಕಮಲಾಕ್ಷಿಗೂ ಕಾಟಿಮಂಜೆಯ ಅಪ್ಪಣ್ಣನಿಗೂ ಕಲ್ಯಾಣಯೋಗ ಕೂಡಿಬಂದು, ಒಂದು ಸಂಲಗ್ನದಲ್ಲಿ ಅಪ್ಪಣ್ಣ ಕಮಲಾಕ್ಷಿಯರ ಪರಿಣಯ ಪ್ರಸಂಗವು ಮುಗಿದು ಹೋಗಿತ್ತು.

ಕಾಟಿಮಂಜೆಯಲ್ಲಿ ಮದುಮಗಳು ಕಮಲಾಕ್ಷಿ ಪಡಸಾಲೆಯಲ್ಲಿ ಅಪ್ಪಣ್ಣನ ತೊಡೆಯ ಮೇಲೆ ಕುಳಿತು ಆರತಕ್ಷತೆ ಮುಗಿಸಿ ಮನೆ ತುಂಬಾ ಓಡಾಡಿಕೊಂಡಿದ್ದಳು. ಸಂಜೆಯ ಹೊತ್ತು ಗೋಪಾಲಾಚಾರ್ಯರು ಸೊಸೆಯ ಜೊತೆ ಗದ್ದೆಯಲ್ಲಿ ನಡೆದುಕೊಂಡು, “ನೋಡು ಮಗಾ, ಅವನೊಂದು ಗೋಸುಂಬೆ, ಅವನ ಜೀವನ ಹೀಗೆ ಹೋಯಿತು. ನಿಂಗೆ ದುಡಿದು ತಿನ್ನುವುದು ಅಂದ್ರೆ ಏನೂಂತ ಗೊತ್ತುಂಟು, ನಿನ್ನ ಹೆಸರಲ್ಲಿ ಒಂದಷ್ಟು ದುಡ್ಡು ಇಡ್ತೇನೆ, ಯಾರಿಗೆ ಹೇಳ್ಳಿಕೆ ಹೋಗ್ಬೇಡ, ಅವನಿಗೂ ಹೇಳ್ಬೇಡ” ಎಂದು ಹೇಳಬಾರದ ಹೊತ್ತಲ್ಲಿ ಹೇಳುತ್ತಿದ್ದರೆ, ಅಡುಗೆ ಮನೆಯಲ್ಲಿ ಸೌಭಾಗ್ಯಲಕ್ಷ್ಮಿ ಅಮ್ಮನೊಡನೆ, “ದೇವರೇ ಅವಳ ಊಟಕ್ಕೆ ದಿನಕ್ಕೆ ಒಂದು ಸೇರು ಅಕ್ಕಿ ಬೇಕು, ಅದು ಹೇಗೆ ಹೊಟ್ಟೆ ತುಂಬಿಸುತ್ತಾನೋ ಇವನು, ಅವಳ ಅವತಾರವೋ ಅವಳ ಜೀವವೋ ಥೇಟು ಸ್ತ್ರೀವೇಷದ ಹಾಗೆ ಇದ್ದಾಳೆ” ಎನ್ನುತ್ತಾ ಮದುವೆಯ ಲಾಡು ತಿನ್ನುತ್ತಿದ್ದಳು. ಅಪ್ಪಣ್ಣ ಅಲ್ಲಿಯೇ ನಿಂತು ಕೇಳಿಸಿಕೊಂಡಿದ್ದ.

ಮಾವನೂ ಸೊಸೆಯೂ ವಾಪಾಸು ಗದ್ದೆ ದಾಟಿ ಬರುವಾಗ, ಅಪ್ಪಣ್ಣ ಅಂಗಳದ ಗುಲಾಬಿ ಗಿಡದ ಹೂಗಳ ಮೇಲೆ ಕೈಯ್ಯಾಡಿಸುತ್ತಾ “ಹತ್ತಿರದಲ್ಲಿ ಮೇಳವಿದ್ದರೆ ಹೇಳು ಬರುತ್ತೇನೆ, ಕಿಟ್ಟ”, ಎಂದು ಕಿಟ್ಟಾಚಾರಿಗೆ ಫೋನು ಮಾಡುತ್ತಿದ್ದ. “ಇಂದು ರಾತ್ರಿಯೇ ಪುರುಸೊತ್ತಿದ್ದರೆ ಬಾ ಮಾರಾಯ ಇಲ್ಲೇ ಹತ್ತಿರ ಮಂಜೊಟ್ಟಲ್ಲಿ ಆಟ ಉಂಟು” ಎಂದು ಕಿಟ್ಟಾಚಾರಿ ಹೇಳುವಾಗ ಅವನಿಗೆ ಇವತ್ತು ರಾತ್ರಿಯ ಆಟ ಹೇಗಿರಬಹುದು ಅನ್ನಿಸುತ್ತಿತ್ತು.

ಕಾಟಿಮಂಜೆಯ ಅವಸ್ಥೆಯನ್ನು ನೋಡಿ ಇನ್ನು ತಾನು ಏನೆಲ್ಲಾ ಆಟ ನೋಡಬೇಕೋ ಎಂದು ಕಮಲಾಕ್ಷಿ ಕೋಣೆಯಲ್ಲಿ ಬಟ್ಟೆ ಬದಲಿಸಲು ಹೋದಳು. ಮಾವನ ಮಾತುಗಳು ಕಿವಿಯಲ್ಲಿ ಸಣ್ಣಗೆ ಕೇಳಿಸುತ್ತಿತ್ತು. ಅಪ್ಪಣ್ಣ ಉಚ್ಚಿ ಹೊಯ್ಯಲು ಹೋಗಿರುವುದನ್ನು ನೋಡಿ ಸೀರೆ ಬಿಚ್ಚಿ ನೈಟಿ ಹಾಕುವಾಗ ಹಿಂದಿನಿಂದ ಬಂದ ಅಪ್ಪಣ್ಣ ಅವಳನ್ನು ತಬ್ಬಿ ಅವಳ ಸೊಂಟ ಹಿಡಿದುಕೊಂಡ. ಅವಳು ಮುಡಿದ ಮಲ್ಲಿಗೆ ಹೂಗಳು ಅಲ್ಲಲ್ಲಿ ಉದುರಿ ಬೆನ್ನಲ್ಲಿ ಅಂಟಿಕೊಂಡಿದ್ದವು. ಅವನಿಗೆ ಕಿಟ್ಟಾಚಾರಿಯ ತಲೆಯ ಕೇದಗೆಯ ನೆನಪಾಗಿ, ಕೇದಗೆ ಎಲ್ಲಿ ಎಂದನು, ಎಂಥಾ ಕೇದಗೆ ಎಂದು ಗೊತ್ತಾಗದೆ ಕಮಲಾಕ್ಷಿ ಹಾಗೇ ನಿಂತಿದ್ದಳು. ಅಪ್ಪಣ್ಣನಿಗೆ ಕಾಲು ನಡುಗುತ್ತಿತ್ತು. ಏದುಸಿರುಬರುವಂತಾಗಿ, ಮೈಯ್ಯೆಲ್ಲಾ ಒಣಗಿ ಖಾಲಿಯಾದಂತಾಯಿತು. “ಚಿಲಕ ಹಾಕಿ ಮಲಗಿರು, ಈಗ ಬರುತ್ತೇನೆ” ಎಂದು ಅವಳಿಗೆ ಹೇಳಿ ಆಗಲೇ ಹೊರಟುಬಿಟ್ಟ.

ಕಮಲಾಕ್ಷಿಗೆ ಮರುಕ್ಷಣಕ್ಕೇ ಎಲ್ಲವೂ ತಣ್ಣಗಾಗಿ, ಅಪ್ಪಣ್ಣ ಮಾತಾಡಿದ್ದು ಅರ್ಥವಾಗದೆ ಎಲ್ಲಿ ಹೋದನೆಂದು ತಿಳಿಯದೇ ಸುಮಾರು ಹೊತ್ತು ಮಗ್ಗುಲು ಬದಲಿಸುತ್ತಾ ಮಲಗಿ, ಆಕಳಿಕೆ ಬರುತ್ತಿತ್ತು. ನಾಳೆ ಬೆಳಗ್ಗೆ ತಿಂಡಿಗೆ ಪರೋಟ ಮಾಡಬೇಕು ಅಂದುಕೊಂಡು ನಿದ್ದೆಹೋಗಲು ಒದ್ದಾಡುತ್ತಿದ್ದಳು.


ಅಪ್ಪಣ್ಣ ಕಿಟ್ಟಾಚಾರಿಗೆ ಫೋನು ಮಾಡಿ ಈಗ ಬರುತ್ತಿದ್ದೇನೆ ಎಂದು ಹೊರಟ. ಅವನು ಹೋಗುವ ಹೊತ್ತಿಗೆ ದೂರದಿಂದಲೇ ಪದ ಕೇಳುತ್ತಿತ್ತು.
ಭಾಗವತರು ಶ್ರುತಿ ಮಾಡಿ “ಬಂದಳಾಗ ಮೋಹಿನಿ ಆನಂದದಿಂದಲೀ, ಬಲುಚಂದದೀ, ರತಿಯಂದದೀ.. ಬಂದಳಾಗ ಮೋಹಿನಿ ಆನಂದದೀ.. ಸುಂದರ ರೂಪದೀ…, ಮಂದಗಮನದಿ…. ಅಂದುಗೆಗಳು… ಅವಳಂದುಗೆಗಳು ಜಣಜಣ ಎನ್ನಲು…. ಬಂದಳಾಗ ಮೋಹಿನಿ… ಎಂದು ಕೇಳಿಸುತ್ತಿತ್ತು. ತತ್ತತತ್ತತ್ತಾಂ ತತ್ತತ್ತಾಂ ತತ್ತತ್ತಾಂ ತ್ರಿವುಡೆ ತಾಳಕ್ಕೆ ಎಂದಿಗಿಂತಲೂ ಸುಂದರವಾಗಿ ಕಿಟ್ಟಾಚಾರಿಯ ಮೋಹಿನಿಯ ರೂಪ ಕುಣಿವುದು ಅಲ್ಲಿಂದಲೇ ಕಾಣುತ್ತಿತ್ತು. ರಂಗಸ್ಥಳದ ಹತ್ತಿರ ಬಂದಾಗ ಕಿಟ್ಟಾಚಾರಿ ಪಚ್ಚೆ ಸೀರೆಗೆ ಕೆಂಪು ರವಕೆ ಡಾಬು, ಓಲೆ ಮುಂದಲೆಗಳನ್ನು ಎಂದಿನಂತೆಯೇ ಹಾಕಿ, ತಲೆಯ ಕೇದಗೆಯ ಮೇಲೆ ಮಿರಿಮಿರಿ ಮಿರುಗುವ ಶಾಲನ್ನು ಇಳಿಬಿಟ್ಟು ರತಿಯ ಹಾಗೆ ಕಾಣುತ್ತಿದ್ದ.