ಸ್ಮಿತಾರ ಬರಹಗಳು ಕೆಲವೊಮ್ಮೆ ಅಸಹಾಯಕ ಚಿಟ್ಟೆಯೊಂದರ ಫಡಫಡಿಕೆಯಂತೆ, ಕೆಲವೊಮೆ ನದಿಯ ಜುಳುಹುಳು ನಾದದಂತೆ, ಅಂಗಳದಲ್ಲಿ ಬೇರುಬಿಟ್ಟ ಗಿಡವೊಂದು ಸುಗಂಧ ರೂಪದಲ್ಲಾದರೂ ತನ್ನ ಅಂತಃ ಸತ್ವ ಗಾಳಿಯಲ್ಲಿ ತೇಲಿ ಹೋಗಬೇಕೆಂದು ಹಂಬಲಿಸುವಂತೆ, ಸುಡುಕೆಂಡದಲ್ಲಿ ಅಂತರ್ಗತವಾದ ಕಿಚ್ಚಿನಂತೆ, ಕಿರು ತೊರೆಯೊಂದು ನದಿ ರೂಪದಲ್ಲಿ ಹರಿದು ಸಾಗರ ಸೇರುವೆನೆಂದು ಅಚಲ ವಿಶ್ವಾಸದಲ್ಲಿ ಹರಿಯುವಂತೆ ಒಟ್ಟಂದದಲ್ಲಿ ಹೆಣ್ಣಿನ ಧೀ ಶಕ್ತಿಯ ಸಾಮ್ಯ ರೂಪದಲ್ಲಿ ಇವೆ.
ಸ್ಮಿತಾ ಅಮೃತರಾಜ್‌ ಸಂಪಾಜೆ ಬರೆದ ಲಲಿತ ಪ್ರಬಂಧಗಳ ಸಂಕಲನ ‘ನೆಲದಾಯ ಪರಿಮಳ’ಕ್ಕೆ ಜಯಶ್ರೀ ಬಿ  ಕದ್ರಿ ಬರೆದ ಮುನ್ನುಡಿ

 

ಸ್ಮಿತಾ ಅಮೃತರಾಜ್ ನನ್ನ ಅಕ್ಕರೆಯ ಗೆಳತಿ, ಕವಯತ್ರಿ, ಮಳೆಯ ಹನಿಗಳಷ್ಟೇ ಪರಿಶುದ್ಧವಾಗಿ ಬರೆಯುವ ಸ್ಮಿತಾ ತನ್ನ ದುಗುಡ, ದುಮ್ಮಾನ, ಆಸೆ ಕನವರಿಕೆಗಳ ಅಭಿವೃದ್ಧಿಗೆ ನೆಚ್ಚಿಕೊಂಡದ್ದು ಕವಿತೆಯನ್ನು. ಅದೇ ಸಮಯ ಆಕೆಯ ಸೃಜನಶೀಲತೆ ಬರಹ, ಅದರಲ್ಲೂ ಪ್ರಬಂಧದತ್ತ ವಾಲಿಕೊಂಡಿರುವುದನ್ನು ಗಮನಿಸುತ್ತಲೇ ಬಂದಿದ್ದೇನೆ. ಹಾಗೇ ನೋಡಿದರೆ ಕವಿತೆಯೊಂದು ಹಾಡಾಗುವುದು ಯಾವಾಗ? ಆಲೋಚನೆಯೊಂದು ಶಕ್ತಿಯಾಗಿ, ಬರಹವೊಂದು ಅಭಿವ್ಯಕ್ತಿಯಾಗಿ, ಪ್ರತಿಭಟನೆಯ ಅಸ್ತ್ರವಾಗುವುದು ಯಾವಾಗ? ಬಹುಶಃ ಅದು ಹೆಣ್ಣು ತನ್ನತನದ ಹುಡುಕಾಟದಲ್ಲಿ ಸಶಕ್ತ ಮಾಧ್ಯಮವಾಗಿ ಭಾಷೆಯನ್ನು ಬಳಸಿಕೊಂಡಾಗ ಈ ಭಾಷೆಯ ಪರಿಶುದ್ಧತೆ, ತನ್ನದೇ ಆದ ಮುಗ್ಧ ಸಹಜ ಶೈಲಿಯ ಅಭಿವ್ಯಕ್ತಿ ಸ್ಮಿತಾಗೆ ಸಿದ್ಧಿಸಿದೆ.

ಕೌಟುಂಬಿಕ ಚೌಕಟ್ಟಿನಲ್ಲಿಯೇ ಅರಳುವ ಸ್ಮಿತಾರ ಬರಹಗಳು ತಮಗೆ ಅರಿವಿಲ್ಲದೆಯೇ ಈ ನವ್ಯೋತ್ತರ ಕಾಲದ ಸಾಮಾಜಿಕ, ರಾಷ್ಟ್ರೀಯ, ರಾಜಕೀಯ ವಿದ್ಯಮಾನಗಳನ್ನು ರೇಶಿಮೆಯ ಎಳೆಗಳನ್ನು ನೇಯ್ದಂತೆ ಕಾಣಿಸುವುದೊಂದು ವಿಸ್ಮಯ. ಹೆಣ್ಣಿನ ವೈಯಕ್ತಿಕ ಅನುಭವಗಳು ಸಾರ್ವತ್ರಿಕ ನೆಲೆಯಲ್ಲಿ ಅಭಿವ್ಯಕ್ತಿಗೊಳ್ಳುತ್ತ, ತಮ್ಮ ಅಸ್ಮಿತೆಯನ್ನು ಸಂಘರ್ಷವನ್ನು ಪ್ರತಿಭಟನೆಯನ್ನು ದಾಖಲಿಸುವ ಪ್ರಯತ್ನಗಳು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಸ್ವರೂಪಗಳಲ್ಲಿ ನಡೆದಿವೆ. ನಡೆಯಬೇಕು.

(ಸ್ಮಿತಾ ಅಮೃತರಾಜ್‌ ಸಂಪಾಜೆ)

ಸ್ಮಿತಾರ ಬರಹಗಳು ಕೆಲವೊಮ್ಮೆ ಅಸಹಾಯಕ ಚಿಟ್ಟೆಯೊಂದರ ಫಡಫಡಿಕೆಯಂತೆ, ಕೆಲವೊಮೆ ನದಿಯ ಜುಳುಹುಳು ನಾದದಂತೆ, ಅಂಗಳದಲ್ಲಿ ಬೇರುಬಿಟ್ಟ ಗಿಡವೊಂದು ಸುಗಂಧ ರೂಪದಲ್ಲಾದರೂ ತನ್ನ ಅಂತಃ ಸತ್ವ ಗಾಳಿಯಲ್ಲಿ ತೇಲಿ ಹೋಗಬೇಕೆಂದು ಹಂಬಲಿಸುವಂತೆ, ಸುಡುಕೆಂಡದಲ್ಲಿ ಅಂತರ್ಗತವಾದ ಕಿಚ್ಚಿನಂತೆ, ಕಿರು ತೊರೆಯೊಂದು ನದಿ ರೂಪದಲ್ಲಿ ಹರಿದು ಸಾಗರ ಸೇರುವೆನೆಂದು ಅಚಲ ವಿಶ್ವಾಸದಲ್ಲಿ ಹರಿಯುವಂತೆ ಒಟ್ಟಂದದಲ್ಲಿ ಹೆಣ್ಣಿನ ಧೀ ಶಕ್ತಿಯ ಸಾಮ್ಯ ರೂಪದಲ್ಲಿ ಇವೆ.

‘ಕೃಷಿಕ ಮಹಿಳೆಯ ಸುಗ್ಗಿ ಸಂಕಟ’

ಈ ಸಂಕಲನದ ಮೊದಲ ಬರಹ. ಸ್ಮಿತಾರ ಒಟ್ಟಂದದ ಬರಹಕ್ಕೆ ರೂಪಕದಂತೆಯೇ ಈ ಸಾಲು ಇದೆ. ಸ್ಮಿತಾರ ಸಾಹಿತ್ಯ ಕೃಷಿ, ಜೀವನದ ಅನುಭವಗಳು ಎರಡರಲ್ಲೂ ಸುಗ್ಗಿಯ ಸಂಭ್ರಮವಿದೆ. ಅಂತೆಯೇ ಹೇಳಿಕೊಳ್ಳಲಾಗದ ಸಂಕಟಗಳೂ ಇವೆ. ಇನ್ನು ಕವಯತ್ರಿಯಾದುದರಿಂದ ಅವರ ಬರಹಗಳಲ್ಲಿ ಚಿತ್ರಕ ಶೈಲಿ, ಕಾವ್ಯಾತ್ಮಕ ನಿರೂಪಣೆ ಇದೆ. ಉದಾಹರಣೆಗೆ ‘ಸಣ್ಣಗೆ ಬಿಸಿಲು ಹಣಕಿ ಹಾಕುತ್ತದೆʼ…

ಒಳಗೊಂದು ಸುಡುವ ನೋವು ಅದು ಅವಳಿಗಷ್ಟೇ ತಾಕುವಂತದ್ದು. ಹೀಗೆ ಒಂದಷ್ಟು ಅವಕಾಶ ಪೂರಕ ವಾತಾವರಣ ಕೊಟ್ಟರೆ ಸಾಕು ನಮ್ಮ ಕೃಷಿಕ ಹೆಣ್ಣು ಮಕ್ಕಳು ಎಲ್ಲ ಕೆಲಸಗಳ ನಡುವೆಯೂ ಬದುಕನ್ನು ಸುಂದರವಾಗಿಸಿಕೊಳ್ಳಬಹುದು ಎನ್ನುವುದು ಇಲ್ಲಿನ ಆಶಯ. ಸ್ಮಿತಾರ ಬರಹಗಳಲ್ಲಿ ಸಣ್ಣಮಟ್ಟಿನ ಗೊಂದಲವನ್ನು ಗಮನಿಸಿದ್ದೇನೆ. ಅದು ಕೃಷಿಕ ಮಹಿಳೆಯ ಜೀವನದ ಬಗ್ಗೆ, ಕೃಷಿಕ ಮಹಿಳೆಯರ ಕಷ್ಟಗಳನ್ನು ಹೇಳಿಕೊಳ್ಳುತ್ತಲೇ ಅವರು ಉದ್ಯೋಗಸ್ಥ ಮಹಿಳೆಯರ ಬಗ್ಗೆಯೂ ಅನುಕಂಪ ತಾಳುತ್ತಾರೆ. ಹಳ್ಳಿ ಮತ್ತು ನಗರದ ಜೀವನ ಶೈಲಿಯನ್ನು ಯಾವುದು ಉತ್ತಮವೆಂಬುದು ಅವರಿಗೆ ಸಂದಿಗ್ಧವಿದ್ದಂತಿದೆ. ನಗರ ಜೀವನ, ಸ್ಪರ್ಧಾತ್ಮಕತೆ, ಒತ್ತಡ ಎಲ್ಲವನ್ನೂ ಒಂದು ರೀತಿಯ ಅಮಾಯಕತೆಯಿಂದ ಪ್ರಶ್ನಿಸುತ್ತಲೇ ಹಳ್ಳಿಯ ನಿಸರ್ಗ ಸಹಜ ಹಸಿರು, ಆಪ್ಯಾಯತೆ, ಸ್ಪರ್ಧೆ ರಹಿತ ಜೀವನ ಶ್ರೇಷ್ಟವೆಂದು ಒಂದು ಕಡೆ ಹೇಳುತ್ತಾರೆ. ಬಹುಶಃ ಇದು ಎಲ್ಲ ಪ್ರತಿಭಾವಂತ ಗ್ರಾಮೀಣ ಮಹಿಳೆಯಗಿರುವ ದ್ವಂದ್ವ.

ಸ್ಮಿತಾರ ಬರಹಗಳಲ್ಲಿನ ಅಪ್ಪಟ ಪ್ರಾಮಾಣಿಕತೆ, ಅದರ ನವಿರಾದ ನಲ್ಮೆಯ ಯೋಚನೆಗಳು ಅವರ ವ್ಯಕ್ತಿತ್ವದ ಭಾಗವೇ ಆಗಿದೆ. ‘ಬಾವಿಕಟ್ಟೆಯ ಬಳಿಯ ಕತೆಗಳು’ ಲೇಖನದಲ್ಲಿನ ‘ನೀರಿಗೂ ಅದೆಷ್ಟು ಸಂವೇದನೆ’ ಒಂದು ಸ್ಪರ್ಶಕ್ಕೆ ಅದೆಷ್ಟು ಪುಳಕ ತನ್ನನ್ನೇಲ್ಲೋ ಕೊಂಡೊಯ್ಯುತ್ತಾರೆ ಎನ್ನುವ ಕಾತರ ಈ ರೀತಿಯ ಮುಗ್ಧವಾದ, ಪರಿಧಿಯನ್ನು ದಾಟಲು ಹಂಬಲಿಸುವ ಹೆಣ್ಣಿನ ಅಂತರಾಳವೇ ಇಲ್ಲಿ ಧ್ವನಿಸುವ ಸಾಲುಗಳು.

ಹೆಣ್ಣಿನ ವೈಯಕ್ತಿಕ ಅನುಭವಗಳು ಸಾರ್ವತ್ರಿಕ ನೆಲೆಯಲ್ಲಿ ಅಭಿವ್ಯಕ್ತಿಗೊಳ್ಳುತ್ತ, ತಮ್ಮ ಅಸ್ಮಿತೆಯನ್ನು ಸಂಘರ್ಷವನ್ನು ಪ್ರತಿಭಟನೆಯನ್ನು ದಾಖಲಿಸುವ ಪ್ರಯತ್ನಗಳು ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಸ್ವರೂಪಗಳಲ್ಲಿ ನಡೆದಿವೆ. ನಡೆಯಬೇಕು.

ಸ್ಮಿತಾರ ಇತ್ತೀಚಿನ ಬರಹಗಳಲ್ಲಿನ ವೈಚಾರಿಕತೆ ಅವರಲ್ಲಿನ ಕವಯತ್ರಿ ಪ್ರಬುದ್ಧರಾಗುತ್ತಿರುವ ಸೂಚನೆ. ಹೆಣ್ಣು ಭ್ರೂಣ ಹತ್ಯೆ, ಲಿಂಗ ತಾರತಮ್ಯ ಕೌಟುಂಬಿಕ ದೌರ್ಜನ್ಯ, ಗೃಹಿಣಿಯರ ಆರ್ಥಿಕತೆ, ಮಕ್ಕಳನ್ನು ಬೆಳೆಸುವ ವಿಧಾನ ಹೀಗೆ ಹತ್ತು ಹಲವು ವಿಚಾರಗಳತ್ತ ಅವರು ಗಮನ ಸೆಳೆಯುತ್ತಾರೆ. ಬಾಲ್ಯದ ನೆನಪುಗಳ ಮಾತುಕತೆಗಳಲ್ಲಿ ಹುಟ್ಟಿಕೊಳ್ಳುವ ಕತೆಗಳು ಹೀಗೆ ಅವರ ಬರಹಗಳಲ್ಲಿ ಕಥನ ಶೈಲಿಯೂ ಇದೆ. ಬಾಲ್ಯದ ಅಡುಗೆ ಆಟದ ಬಗ್ಗೆ ಹೇಳುತ್ತ ‘ಅಡುಗೆ ಮನೆಯ ನಮ್ಮ ಒಂದೊಂದೇ ಆಟಗಳು, ಮುಗಿಯದ ಕೆಲಸಗಳಾಗಿ ಸದ್ದಿಲ್ಲದೇ ಆವರಿಸಿ ಅದರಿಂದ ಹೊರಬರಲಾಗದೆ ಚಡಪಡಿಸುವಾಗೆಲ್ಲ ಅವತ್ತು ಗೋಗರೆದು ಕಾಡಿಬೇಡಿ ಅಡುಗೆ ಮಾಡಿದ್ದು ನಾವೇನಾ! ಅಂತಾ ಅಚ್ಚರಿ ಹುಟ್ಟುವುದರಲ್ಲಿ ಸಂಶಯವಿಲ್ಲ. ಈ ರೀತಿಯ ತಣ್ಣಗಿನ ವಿಷಾದದ ಸಾಲುಗಳು. ಸ್ಮಿತಾರ ಅನುಭವಗಳು ವೈಯಕ್ತಿಕವಷ್ಟೇ ಆಗಿ ಉಳಿಯದೆ ಸಾರ್ವತ್ರಿಕವಾಗುತ್ತವೆ. ಉದಾಹರಣೆಗೆ ಉದ್ಯೋಗಸ್ಥ ಮಹಿಳೆಯರನ್ನು ಸೇರಿಸಿ ಹೆಣ್ಣುಮಕ್ಕಳು ‘ಅಡುಗೆ ಮನೆಯ ಕಿಟಕಿ’ಯಿಂದಲೇ ಜಗತ್ತನ್ನು ನೋಡಬೇಕಾಗುತ್ತಿರುವುದು ಸತ್ಯ. ಹದವಾಗಿ ಬೆಳೆದ ಮಿಡಿ ಮಾವಿನಕಾಯಿಗಳನ್ನು ತೊಟ್ಟು ಮುರಿದು ಉಪ್ಪಿನಕಾಯಿ ಹಾಕುವ ಹದ, ತಾಳ್ಮೆ, ತಪನೆ, ಧ್ಯಾನ ನಮ್ಮ ಗೃಹಿಣಿಯರಲ್ಲಿದೆ. ಶಿಕ್ಷಣ, ತಲೆಮಾರಿನ ಅಂತರ, ಅಮ್ಮಂದಿರ ಆತಂಕಗಳು ಹೀಗೆ ಆನೇಕ ವಿಷಯಗಳು ಇಲ್ಲಿ ಚರ್ಚಿತವಾಗಿದ್ದು ಹೆಚ್ಚಿನಷ್ಟು ಅಂಕಣ ಸ್ವರೂಪದ ಬರಹಗಳು. ಕೆಲವೊಮ್ಮೆ ವಿಷಯಾಂತರವಾದಂತ ಭಾಸವಾದರೂ ಅವುಗಳಲ್ಲಿನ ಕಳಕಳಿ ನೈಜವಾದುದೇ ಆಗಿವೆ. ‘ತುಸು ಎಚ್ಚರ ತಪ್ಪಿದರೂ ಬೆಳಕು ಹೇಗೆ ಬೆಂಕಿಯಾಗಬಲ್ಲದು?ʼ ಈ ರೀತಿಯ ಅರಿವಿನ ಹೊಳಹುಗಳೂ ಇಲ್ಲಿವೆ.

ಇನ್ನು ಹೆಣ್ಣು ಮನಸಿನ ನೋವುಗಳು ಅನುಭವಗಳಾದ ಅದರಲ್ಲೂ ಸಾಧಕಿಯರ ಕಷ್ಟಗಳಾದ ‘ಒಳಗಿದ್ದರೆ ಮೂದಲಿಕೆ, ಹೊರಗೆ ಕಾಲಿಟ್ಟರ ನಿಂದನೆ’ ಈ ರೀತಿಯ ಗಕ್ಕನೆ ಹಿಡಿದು ನಿಲ್ಲಿಸುವ ಸಾಲುಗಳು, ನೋವಿನ ಕ್ಷಣಗಳೂ ಇಲ್ಲಿವೆ. ಸ್ಮಿತಾರ ಬರಹವೆಂದರೆ ಹಾಗೇ ಹೂವೊಂದು ಸಹಜವಾಗಿ ದಳ ಅರಳಿಸಿದಂತೆ. ಬಾನುಲಿಯನ್ನು ಕೇಳುತ್ತಲೇ ತಾನು ಕವಯತ್ರಿಯಾದ ಬಗ್ಗೆ, ತಮ್ಮ ಸಾಹಿತ್ಯ ಪ್ರೀತಿ, ದುಂಬಿ, ಬೆಟ್ಟ, ಜೇನ್ನೊಣ, ಗುಡುಗು, ಮಳೆ, ಮೆದುಮಣ್ಣು ಬಿರು ಬಿಸಿಲು ಹೀಗೆ ಜೀವನದ ಹಾಡು ಪಾಡುಗಳನ್ನು ಬರೆಯುತ್ತಾರೆ. ಇಚ್ಛಾಶಕ್ತಿಯಿದ್ದರೆ ಈ ಬದುಕಿನಲ್ಲಿ ಅಸಾಧ್ಯವಾದುದು ಯಾವುದು? ಎನ್ನುವ ಆಶಾವಾದದ ನಿಲುವೂ ಅವರಿಗಿದೆ.

( ಜಯಶ್ರೀ ಬಿ  ಕದ್ರಿ)

ಸ್ಮಿತಾರ ಬರಹಗಳಲ್ಲಿ ಪ್ರಮುಖವಾಗಿರುವುದು ಸೃಜನಶೀಲ ಅಭಿವ್ಯಕ್ತಿಯ, ಅಂತೆಯೇ ಬರಹ, ಬರಹಗಾರರ ಬಗ್ಗೆ ಕಾಳಜಿ. ಅವರೇ ಹೇಳಿದಂತೆ ‘ಮಣ್ಣ ಕಂಪನು ಅರಸುತ್ತ’ ‘ಹಸಿಮಣ್ಣ ಕರುಣೆ’ಯ ಹನಿ ಪ್ರೀತಿಯನ್ನು ಒಳಗಿಳಿಸಿಕೊಳ್ಳುತ್ತ ಮಳೆ ಹನಿಯ ಗೆರೆಗಳ ಮೇಲೆ ಬರೆದ ಕವಿತೆಗಳಂತಹ ಚಿಟ್ಟೆಯ ಕೋಮಲತೆಯ ಹಲವಾರು ಸಾಲುಗಳು ಇಲ್ಲಿವೆ. ಸ್ಮಿತಾರ ಬರಹಗಳೆಂದರೆ ತಣ್ಣನೆ ಉರಿಯುವ ಹಣತೆಯ ಹಾಗೆ. ‘ಕರುಣಾಳು ಬಾ ಬೆಳಕೆ’ ಲೇಖನದಲ್ಲಿ ಬರೆಯುವ ಈ ಸಾಲುಗಲನ್ನು ನೋಡಿ: ‘ಹಣತೆ ಉರಿಯುತ್ತಿದೆ, ಜಗತ್ತನ್ನೆಲ್ಲಾ ಬೆಳಗಿ ಬಿಡುವೆನೆಂಬ ಅತೀವ ಹಂಬಲದಲ್ಲಿ’ ಈ ರೀತಿಯ ಆರ್ದ್ರವಾದ ಸಾಲುಗಳು. ‘ಬೆಳಗಿನ ರಂಗವಲ್ಲಿ’ ಬಿಡಿಸುವ, ಚಿಟ್ಟೆಯ ರೆಕ್ಕೆಯಲ್ಲಿ ಕುಳಿತು ಗುನುಗುವ ಸೊಗಸೇ ಬೇರೆ. ಈ ಎಲ್ಲ ಬರಹಗಳೂ ಒಂದಕ್ಕಿಂತ ಒಂದು ಭಿನ್ನ ಚೆಲುವಿನವು.

‘ಈ ಜಿನುಗು ಮಳೆ ತೊನೆಯುವ ಹಸಿರು ನಡುವೆ ಹೊಳೆತು ಅರಳುವ ಕವಿತೆ ಬರೆದಷ್ಟು ಮುಗಿಯುವುದಿಲ್ಲ ಮಳೆಯ ಆಲಾಪ…’‘ಹಿತ್ತಲೆಂಬ ಧ್ಯಾನ’ ಪ್ರಬಂಧದಲ್ಲಿನ ಸಾಲು. ನಮ್ಮ ಹೆಣ್ಣು ಮಕ್ಕಳ ಬದುಕು ಕೂಡ ಹಿತ್ತಲಿನಲ್ಲಿ ಹರಡಿಕೊಂಡ ಸುಗಂಧದಂತೆ ಭಾಸವಾಗುತ್ತದೆ. ಸಂಜೆಯ ಹೊತ್ತಿಗೆ ಮೊಗ್ಗು ಮಾಲೆ ಕಟ್ಟಿ ಅಲ್ಲೆ ಚಪ್ಪರದ ಮೇಲೆ ಇಬ್ಬನಿ ಬೀಳಲು ಬಿಟ್ಟರೆ ಮಾರನೇ ದಿನ ಹೂಗಳು ದಂಡೆಯಲ್ಲಿ ಒತ್ತಾಗಿ ಹದವಾಗಿ ಅರಳಿ ನಗುತ್ತಿದ್ದವು.” ಈ ಸಾಲಿನ ಹಾಗೆಯೇ ಸ್ಮಿತಾರ ಬರಹಗಳು ಸುಂದರ, ಸೌಮ್ಯ. ಅವರ ಬರಹಗಳಲ್ಲಿ ಅಂತರ್ಗಾಮಿಯಾಗಿ ಹರಿಯುವ ವೈಚಾರಕತೆ ಇನ್ನಷ್ಟು ಪ್ರಕಾಶಿಸಬೇಕಿದೆ.

ಹೆಣ್ಣು ಜೀವಗಳು ಸಮುದಾಯಕ್ಕೆ ತೆರೆದುಕೊಳ್ಳಲು, ವಿಕಾಸಗೊಳ್ಳಲು ಈಗಲೂ ಹತ್ತು ಹಲವು ಕಟ್ಟುಪಾಡುಗಳು ಇರುವ ಈ ಕಾಲ ಘಟ್ಟದಲ್ಲಿ ಅಕ್ಷರ ಸ್ವಾತಂತ್ರ್ಯವಾದರೂ ಇದ್ದಲ್ಲಿ ಅವಳ ವ್ಯಕ್ತಿತ್ವ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಸ್ಮಿತಾರ ಬರಹಗಳು ಒಂದು ವಿಶಿಷ್ಟ ಪ್ರಯತ್ನ ಬೊಗಸೆಯಲ್ಲಿನ ತಿಳಿ ಜಲದಂತಹ ಅವರ ಬರಹಗಳು, ಕವಿತೆಗಳು ಇನ್ನಷ್ಟು ಸೊಗಯಿಸಲಿ, ಸಾಹಿತ್ಯ ಕ್ಷೇತ್ರದಲ್ಲಿ ಅವರ ಬರಹಗಳ ನವಿರು ಸುಗಂಧ ಪಸರಿಸಲಿ ಎಂದು ಹಾರೈಕೆ.

(ಕೃತಿ: ನೆಲದಾಯ ಪರಿಮಳ(ಪ್ರಬಂಧಗಳ ಸಂಕಲನ), ಲೇಖಕರು: ಸ್ಮಿತಾ ಅಮೃತರಾಜ್‌ ಸಂಪಾಜೆ, ಪ್ರಕಾಶಕರು: ನಿವೇದಿತಾ ಪ್ರಕಾಶನ, ಬೆಲೆ: 180/-)