ಇಲ್ಲಿನ ಬಹುತೇಕ ಲಲಿತ ಪ್ರಬಂಧಗಳು ನಿರೂಪಣೆಯ ಮಾದರಿಯಲ್ಲಿವೆ. ಅವು ವಾಚಾಳಿಯಾಗಿವೆ, ಸರಳವಾಗಿವೆ. ಸಹಜ ನಿಯತ್ತಿನಿಂದ ಕೂಡಿವೆ. ಮುಚ್ಚುಮರೆಯಿಲ್ಲದೆ ಲೇಖಕರ ಹಳವಂಡಗಳನ್ನು ಪೆದ್ದುತನ, ಮುಗ್ಧತೆಯ ಭಾವನೆಯ ಹರವನ್ನು ಇವು ಒಳಗೊಂಡಿವೆ. ಇಲ್ಲಿನ ಪ್ರಬಂಧಗಳಲ್ಲಿನ ಕೆಲವಾರು ವಸ್ತು ವಿಚಾರಗಳನ್ನು ದೈನಂದಿನ ಚಕ್ರದಲ್ಲಿ ನಾವು ಕಂಡಿದ್ದರೂ ವಿಶೇಷ ಗಮನ ಹರಿಸದೆ ಕಡೆಗಣಿಸಿರುತ್ತೇವೆ.
ಸ್ಮಿತಾ ಅಮೃತರಾಜ್‌ ಸಂಪಾಜೆ ಬರೆದ ‘ಒಂದು ವಿಳಾಸದ ಹಿಂದೆ’ ಪ್ರಬಂಧ ಸಂಕಲನ ಕುರಿತು ವಸುಂಧರಾ ಕದಲೂರು ಬರೆದ ಲೇಖನ

 

`ಲಲಿತ ಪ್ರಬಂಧಗಳು ಮಂದಶ್ರುತಿಯ ಭಾವಗೀತೆಗಳು’- ತೀ.ನಂ.ಶ್ರೀ.

ಸ್ನಿಗ್ಧ ಮುಗುಳ್ನಗೆಯನ್ನು ಸದಾ ಹೊತ್ತಂತೆಯೇ ಕಾಣುವ ಗೆಳತಿ ಸ್ಮಿತಾ ಅವರ ಮೂರು ಪುಸ್ತಕಗಳು ಒಟ್ಟಿಗೇ ಮನೆ ಬಾಗಿಲಿಗೆ ಬಂದಾಗ ಅಕ್ಕರೆಯಿಂದ ಬಾಚಿಕೊಂಡು, ಗೆಳತಿಯನ್ನು ಮನೆ ಒಳಗೆ ಕರೆದುಕೊಂಡ ಆಪ್ತ ಭಾವ ನನ್ನ ಮನಸ್ಸಿಗಾಯ್ತು.

ನಗರ ವ್ಯಾಪ್ತಿಯಿಂದ ಹೊರಗುಳಿದಿರುವ, ದಿನಪೂರಾ ಮನೆವಾರ್ತೆಗಳಲಿ ಮುಳುಗಿರುವ ಸಶಕ್ತ ಗೃಹಿಣಿಯೊಬ್ಬರು ತಮ್ಮ ಪ್ರವೃತ್ತಿಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಿರುವುದಕ್ಕೆ ಸ್ಮಿತಾ ಉತ್ತಮ ಉದಾಹರಣೆ.

ಕವಿತ್ವವನ್ನು ಸಿದ್ಧಿಸಿಕೊಂಡಿರುವ ಸ್ಮಿತಾ, ತಮ್ಮ `ಒಂದು ವಿಳಾಸದ ಹಿಂದೆ’ ಪ್ರಬಂಧ ಸಂಕಲನದಲ್ಲಿ ಕವಿತೆಯ ಲಾಲಿತ್ಯವನ್ನು ಸರಾಗ ಹರಿಯ ಬಿಟ್ಟಿದ್ದಾರೆ. ಒಮ್ಮೊಮ್ಮೆ ಅವರ ಕವಿತೆಗಳು ಹಾಗು ಲಲಿತ ಪ್ರಬಂಧಗಳನ್ನು ಜೊತೆಗಿಟ್ಟು ನೋಡುವಾಗ, ಲಲಿತ ಬರಹಗಳೇ ಸ್ಮಿತಾ ಅವರ ನೈಜ ಶಕ್ತಿ ಎಂದೆನಿಸುತ್ತದೆ. `ಒಂದು ವಿಳಾಸದ ಹಿಂದೆ’ಯ ಲಲಿತ ಬರಹಗಳು ಕವಿತೆಗಳಾಗಿ ಒಳಗಿಳಿಯುತ್ತವೆ.

(ಸ್ಮಿತಾ ಅಮೃತರಾಜ್‌ ಸಂಪಾಜೆ)

`ಒಂದು ವಿಳಾಸದ ಹಿಂದೆ’ ಕೃತಿಯು ಒಟ್ಟು ಮುವತ್ತೊಂದು ಬಿಡಿ ಬರಹಗಳ ಲೇಖನ ಮಾಲೆ. ಇದು ಸ್ಮಿತಾ ಅವರ ಎರಡನೆಯ ಪ್ರಬಂಧ ಸಂಕಲನ. ಈಗಾಗಲೇ ನಾಡಿನ ಹೆಸರಾಂತ ಪತ್ರಿಕೆಗಳು ಹಾಗೂ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರಿಂದ ಅಪಾರ ಮೆಚ್ಚುಗೆ ಪಡೆದ ಈ ಬರಹಗಳು ಬೇಸರ ತರಿಸದಷ್ಟು ಬಾರಿ ಓದಿಕೊಳ್ಳಬಹುದಾದ ನಾವಿನ್ಯ ಗುಣ ಹೊಂದಿವೆ. ಈ ಪುಸ್ತಕದೊಳಗಿನ ಪ್ರಬಂಧಗಳು ಬರಹಗಾರರ ಶೈಲಿ ಹಾಗೂ ನಿರೂಪಣೆಯ ಸೊಗಸಿಗೆ ಸಾಕ್ಷಿಯಾಗಿವೆ.

ಸ್ಮಿತಾ ಕನಸುಗಾರ್ತಿ. ಆಕೆ ವೈದೇಹಿ ಕಂಡ ಅಡುಗೆ ಮನೆಯ ಹುಡುಗಿಯಂತಹ ಅಪ್ಪಟ ದೇಸಿ ಮನಸ್ಸಿನ ಸಹೃದಯಿ. ಲೋಕಜನರಿಗೆ ಸುಲಭಕ್ಕೆ ಅರ್ಥವಾಗದ ವಿಚಾರಗಳ ಮೇಲೆ ಮಾತನಾಡಿದರೆ, ಬರೆದರೆ ಮಾತ್ರ ಅಂತಹವು ಶ್ರೇಷ್ಠ ಸಾಹಿತ್ಯ; ಅಮೋಘ ಬರವಣಿಗೆ ಆಗುತ್ತವೆ ಎನ್ನುವ ಢೋಂಗೀತನದ ಜನರ / ಸಾಹಿತ್ಯದ ನಡುವೆ ಸ್ಮಿತಾರ ಬರಹಗಳಲ್ಲಿನ ವಸ್ತು ವಿಷಯ ಹಾಗೂ ನಿರೂಪಣೆಯಲ್ಲಿನ ಸರಳತೆಗಳು ಓದಿನ ಖುಷಿ ನೀಡುತ್ತವೆ. ಹಾಗೆಯೇ ಸರಳವಾಗಿರುವಂತೆ ಕಂಡರೂ ಕಾಡುವ ಹಲವು ವಿಚಾರಗಳು ಮನಸ್ಸನ್ನು ತಾಕುತ್ತವೆ.

ಕಾವ್ಯ ಎಂದರೆ ಗದ್ಯವೂ ಆಗಿರಬಹುದು ಎನ್ನುವುದಕ್ಕೆ ಈ ಸಂಕಲನದಲ್ಲಿನ ಲಲಿತ ಬರಹಗಳು ಸಾಕ್ಷಿ ಒದಗಿಸುತ್ತವೆ. ಕಂಡದ್ದನ್ನೆಲ್ಲಾ ಕಾವ್ಯವಾಗಿಸುವುದು ಸ್ಮಿತಾರಂತಹ ಕವಿ ಹೃದಯದವರಿತಗೆ ಮಾತ್ರ ಸಾಧ್ಯ. “ಆ ಹಳ್ಳಿ ಈ ಹಳ್ಳಿ ಎರಡು ಹಳ್ಳಿಗಳ ನಡುವೆ ಆ ನದಿಯೊಂದು ಹಾದು ಹೋಗುತ್ತಿತ್ತು. ಒಂದು ಸೇತುವೆಯೇ ಒಂದು ಪಾಲದ ಮೂಲಕವೋ ಆಚೆ ಬದಿ ಮತ್ತು ಈಚೆ ಬದಿಯ ತಂತುವಾಗಿ ಕಾರ್ಯನಿರ್ವಹಿಸುತ್ತಿತ್ತು.” (ಎದೆಯೊಳಗೊಂದು ನದಿಯ ಹರಿವು)

“ಅವಸರದ ಬದುಕಿನಲ್ಲಿ ಧಾವಂತದ ಓಟದಲ್ಲಿ ಧ್ಯಾನ ನೆಲೆ ನಿಂತಿತೇ?” (ಅರೆಯುವ ಕಲ್ಲಿನ ಮುಂದೆ ಅರಳುವ ಕವಿತೆ)

“ಅದೆಲ್ಲಿತ್ತೋ ಇಷ್ಟು ದಿನ ಗೊತ್ತಿಲ್ಲ. ಯಾವುದೋ ಮಾಯಕದಲ್ಲಿ ಸ್ವರ್ಗದಿಂದ ಧರೆಗಿಳಿದು ಬಂದಂತೆ ಬಣ್ಣ ಬಣ್ಣದ ಅಂಗಿ ತೊಟ್ಟಂತೆ ….” (ಬೆಳಕಿನ ಲಹರಿ) ಇಂತಹ ಹಲವಾರು ಕಾವ್ಯ ಗುಣ ಹೊಂದಿರುವ ಲೇಖನಗಳು ಈ ಸಂಕಲನದಲ್ಲಿವೆ.

ಕಾವ್ಯ ಎಂದರೆ ಗದ್ಯವೂ ಆಗಿರಬಹುದು ಎನ್ನುವುದಕ್ಕೆ ಈ ಸಂಕಲನದಲ್ಲಿನ ಲಲಿತ ಬರಹಗಳು ಸಾಕ್ಷಿ ಒದಗಿಸುತ್ತವೆ. ಕಂಡದ್ದನ್ನೆಲ್ಲಾ ಕಾವ್ಯವಾಗಿಸುವುದು ಸ್ಮಿತಾರಂತಹ ಕವಿ ಹೃದಯದವರಿತಗೆ ಮಾತ್ರ ಸಾಧ್ಯ.

ಇಲ್ಲಿನ ಬರಹಗಳನ್ನು ಓದುತ್ತಾ ಹೋದಂತೆ ಕೆಲವಾರು ವಿಚಾರಗಳು ನಮ್ಮದೇ ಅನುಭವ ಆಗಿರುವಂತೆ ಆಪ್ತವಾಗಿವೆ. ವಸ್ತು-ವಿಷಯ-ಹರವುಗಳು ಮನೆಯಿಂದ ಶುರುವಾಗಿ ಮನದೊಳಗಿಳಿದು ಜಗತ್ತನ್ನು ಸುತ್ತುವರಿಯುತ್ತವೆ. ಕೆಲವು ಪ್ರಬಂಧಗಳು ಒಬ್ಬ ಆತ್ಮಸಖಿಯ ಆಲಾಪದಂತಿವೆ. ಮಾತುಗಾತಿ ಗೆಳತಿಯೊಬ್ಬಳ ಅಕ್ಕರೆಯ ಹರಟೆಯಂತೆ ಇವೆ. ಬದುಕು-ಭಾವನೆ-ಬವಣೆಗಳ ಜೊತೆ ಜೊತೆಗೆ ಮೆಲ್ಲನೆ ಮಲ್ಲಿಗೆ ಪರಿಮಳ ಪಸರಿಸುವಂತೆ ಇಲ್ಲಿನ ಲೇಖನಗಳು ಕನ್ನಡ ಲಲಿತ ಪ್ರಬಂಧ ಮಾಲಿಕೆಯೊಳಗೆ ಕಂಪು ಬೀರುತ್ತಾ ಅರಳಿ ನಿಂತಿವೆ.

“ಈ ಬರಹಗಳು ಮಧ್ಯಮ ವರ್ಗದ ದಿವಾನಖಾನೆಯ ಬರಹಗಳಿಂದಾಚೆ ಹೋಗದಿರುವುದು ಈ ಪ್ರಬಂಧಗಳ ಮಿತಿ. ಮಲೆನಾಡಿನ ಬದುಕಿಗೆ ಅಗಾಧ ಸೂಕ್ಷ್ಮ ವೈವಿಧ್ಯವನ್ನು ಕಡು ವಾಸ್ತವಗಳನ್ನು ತಳ ಮಟ್ಟದಲ್ಲಿ ಗ್ರಹಿಸುವಂತಾದರೆ, ಸ್ಮಿತಾ ಅಮೃತರಾಜ್ ಅವರಿಂದ ಮುಂದಿನ ಬರಹಗಳಲ್ಲಿ ಇನ್ನೂ ಹೆಚ್ಚಿನ ದಟ್ಟ ಅನುಭವಗಳ ಬರಹಗಳನ್ನು ನಾವು ನಿರೀಕ್ಷಿಸಬಹುದು” ಎಂದು ಮುನ್ನುಡಿಯಲ್ಲಿ ಶ್ರೀ ಪ್ರಸಾದ್ ರಕ್ಷಿದಿ ಅವರು ಹೇಳಿರುವುದು ಉಚಿತವಾಗಿದೆ.

ಇಲ್ಲಿನ ಬಹುತೇಕ ಲಲಿತ ಪ್ರಬಂಧಗಳು ನಿರೂಪಣೆಯ ಮಾದರಿಯಲ್ಲಿವೆ. ಅವು ವಾಚಾಳಿಯಾಗಿವೆ, ಸರಳವಾಗಿವೆ. ಸಹಜ ನಿಯತ್ತಿನಿಂದ ಕೂಡಿವೆ. ಮುಚ್ಚುಮರೆಯಿಲ್ಲದೆ ಲೇಖಕರ ಹಳವಂಡಗಳನ್ನು ಪೆದ್ದುತನ, ಮುಗ್ಧತೆಯ ಭಾವನೆಯ ಹರವನ್ನು ಇವು ಒಳಗೊಂಡಿವೆ. ಇಲ್ಲಿನ ಪ್ರಬಂಧಗಳಲ್ಲಿನ ಕೆಲವಾರು ವಸ್ತು ವಿಚಾರಗಳನ್ನು ದೈನಂದಿನ ಚಕ್ರದಲ್ಲಿ ನಾವು ಕಂಡಿದ್ದರೂ ವಿಶೇಷ ಗಮನ ಹರಿಸದೆ ಕಡೆಗಣಿಸಿರುತ್ತೇವೆ. ಅಂತಹ ವಸ್ತು ವಿಚಾರಗಳನ್ನು ಲೇಖಕಿ ವಿಶೇಷವಾಗಿ ಗುರುತಿಸಿ ಬರೆದಿರುವುದನ್ನು ಓದಿದಾಗ `ಅರೆ! ಇದನ್ನು ಹೀಗೆಲ್ಲಾ ನೋಡಬಹುದಿತ್ತೇ?!’ ಎಂಬ ಜಿಜ್ಞಾಸೆ ಮೂಡುತ್ತದೆ. ಅದುಮಿಟ್ಟ ಅಸಹನೆ, ಒಂಟಿತನ, ಅಸಹಾಯಕ ಸ್ಥಿತಿ ಇವೆಲ್ಲವನ್ನು ಹೊರತರಲು ಬರಹವನ್ನೇ ಮುಂಬಾಗಿಲಾಗಿಸಿ ಕೊಂಡಿರುವ ಲೇಖಕಿ, ಕನ್ನಡ ನೆಲದ ಲಕ್ಷಾಂತರ ಹೆಂಗೆಳೆಯರ ಸಾಂಕೇತಿಕ ಪ್ರತಿನಿಧಿಯಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗದು.

ಮನೆವಾರ್ತೆಗಷ್ಟೆ ಅಲ್ಲ, ಸುತ್ತಲಿನ ಪರಿಸರದ ಸಣ್ಣಪುಟ್ಟ ಬದಲಾವಣೆಗೂ ಸಹ ಸ್ಪಂದಿಸುವ ಲೇಖಕಿ ಲೋಕದ ಅಸಾಮಾನ್ಯ ಆಗುಹೋಗುಗಳ ವೈಜ್ಞಾನಿಕ ಅರಿವನ್ನು ತಮಗೆ ಗೊತ್ತಿಲ್ಲದೇ ಪ್ರಸ್ತುತಪಡಿಸುವ ಸೋಜಿಗ ಇಲ್ಲಿನ ಬರಹಗಳಲ್ಲಿ ಅಡಗಿವೆ.

“ಇಲ್ಲಿ ಈಗ ಆಗೊಮ್ಮೆ ಈಗೊಮ್ಮೆ ಮೆಲ್ಲನೆ ಹನಿಯುವ ಮಳೆಯೂ ಕೂಡ ಕಡಿಮೆಯಾಗುತ್ತಾ ಬಂದಿದೆ. ಈ ಸಲ ಮಳೆಗಾಲದಲ್ಲಿಡೀ ಎಲ್ಲೀ ಹುಡುಕಿದರೂ ಒಂದೇ ಒಂದು ಮುಸುಕು ಹೊದ್ದು ಮಲಗಿದ ಕಂಬಳಿ ಹುಳ ಕಾಣಲೇ ಇಲ್ಲ….. ಗದ್ದೆ ಬಯಲಿನಲ್ಲಿ ಪೈರಿನಂತೆ ಎದ್ದ ಕಾಂಕ್ರಿಟ್ ಕಟ್ಟಡಗಳ ನಡುವೆ ತೆನೆಗೆ ಹಾಲು ಕುಡಿಸಲು ಹೋದ ದುಂಬಿಗಳು ಎಲ್ಲೋ ಹಾದಿ ತಪ್ಪಿ ನಾಪತ್ತೆಯಾಗಿವೆಯಾ…?” (ಬೆಳಕಿನ ಲಹರಿ) `ಜೇಡನ ಜತೆಗೂಡಿ ಒಂದು ಸುತ್ತ’ ಲೇಖನದಲ್ಲಿ ಇಂಥದ್ದೇ ವಿಚಾರಗಳಿವೆ.

ನೆನಪುಗಳನ್ನು ಕೆದಕಿ ಕೂರುವ ಸ್ಮಿತಾ ಪ್ರಬಂಧಗಳಲ್ಲಿ ಹಲವು ಮುದಗೊಳಿಸುವ ಘಟನೆಗಳು, ಮುಜುಗರದ ಪ್ರಸಂಗಗಳು, ಪೇಚಿಗೆ ಸಿಲುಕಿದ ಸಂದರ್ಭಗಳನ್ನು ಮುಚ್ಚುಮರೆ ಇಲ್ಲದೆ ಪ್ರಸ್ತುತ ಪಡಿಸುತ್ತಲೇ ಓದುಗರ ಮನಗೆದ್ದು ಬಿಡುತ್ತಾರೆ. “ಕಾಲೇಜು ಓದಲು ದೂರದ ಊರಿನಲ್ಲಿ ಹಾಸ್ಟೆಲ್ ಸೇರಿದ ನನ್ನ ಮಗಳು, ಹಾಸ್ಟೆಲ್‌ಗೆ ಹೋಗುವಾಗ ಪುಸ್ತಕಕ್ಕಿಂತ ಹೆಚ್ಚಾಗಿ ಎಲ್ಲಾ ಆಲ್ಬಂಗಳನ್ನು ಕೊಂಡೊಯ್ದಿದ್ದಾಳೆ … ಓದೋದಿಕ್ಕೆ ಇಲ್ಲವಾ! ಫೋಟೋ ನೋಡಿಕೊಂಡೇ ಕಾಲ ಕಳೆಯೋದಾ ಅಂತ ಗದರಿದರೆ, ನೆನಪಾಗುವಾಗ ನಿಮ್ಮನ್ನೆಲ್ಲಾ ನೋಡಲು ಬೇಕಲ್ಲಾ…… ಅಂತ ರಾಗ ಕೊಯ್ಯತ್ತಾಳೆ. ಒಂದೊಮ್ಮೆ ನಾನೂ ಇದೆ ಕೆಲಸ ಮಾಡಿರುವೆನಲ್ಲವೇ?’ (ಭಾವ ಚಿತ್ರಗಳ ಭಾವನಾ ಲೋಕದಲ್ಲಿ)

ಒಟ್ಟಾರೆಯಾಗಿ, ಕನ್ನಡದ ಲಲಿತ ಪ್ರಬಂಧಗಳ ರಾಶಿ ರಾಶಿ ಸಾಹಿತ್ಯ ಬರಹಗಳ ನಡುವಲ್ಲಿ ಗಟ್ಟಿ ನೆಲೆನಿಂತ ಕೆಲವೇ ಕೆಲವು ಲಲಿತ ಬರಹಗಾರರ ಸಾಲಿನಲ್ಲಿ ಸ್ಮಿತಾ ಬರಹಗಳು ನಿಲ್ಲುವ ಪೈಪೋಟಿ ತೋರುತ್ತವೆ ಎಂದರೆ ಸುಮ್ಮನೆ ಹೊಗಳಿಕೆಯಾಗಲಾರದು. ಆದರೂ ಸ್ಮಿತಾ ತಮ್ಮ ಬರಹಗಳಲ್ಲಿ ಸ್ವಾನುಭವ, ಸ್ವಭಾವ ತೀವ್ರತೆಯನ್ನು ಕಡಿಮೆಗೊಳಿಸಿಕೊಂಡು, ಲೋಕ ವಾಸ್ತವಕ್ಕೆ ಸ್ಪಂದಿಸಿ ಬರೆದರೆ ಮತ್ತಷ್ಟು ಉತ್ತಮ ಪ್ರಬಂಧ ಕನ್ನಡ ಸಾಹಿತ್ಯ ಲೋಕಕ್ಕೆ ಕಾಣಿಕೆಯಾಗಿ ದೊರೆಯುತ್ತವೆ.

 

(ಕೃತಿ: ಒಂದು ವಿಳಾಸದ ಹಿಂದೆ (ಪ್ರಬಂಧ ಸಂಕಲನ), ಲೇಖಕರು: ಸ್ಮಿತಾ ಅಮೃತರಾಜ್‌ ಸಂಪಾಜೆ, ಪ್ರಕಾಶಕರು: ಭಾವ ಸಿಂಚನಾ ಪ್ರಕಾಶನ, ಬೆಲೆ: 180/)