ಗೋಡೆ..
ನಕ್ಷತ್ರಗಳು ಮಿನುಗುತ್ತವೆ,
ನಗುತ್ತಿವೆಯೋ… ಹೇಳಲಾಗದು..
ತಲೆಯ ಮೇಲಿನ ಛಾವಣಿ ಭದ್ರವಾಗಿದೆ,
ನಕ್ಕರು ಕಣ್ಣು ಕಾಣಲಾಗದು..
ದಿನ ಮುಗಿದ ನಂತರ
ಧಾವಂತಗಳೆಲ್ಲ
ಮುಸುಕೆಳೆಯಹೊರಟಿವೆ..
ನಿರೀಕ್ಷೆಗಳು ಮಾತ್ರ,
ಬೆಳಕಾದೀತೆಂದು ಕಾದು ಕೂತಿವೆ..
ಕರ್ತವ್ಯಪರತೆ ಏನನ್ನೂ
ಮರೆಯಗೊಡುವುದಿಲ್ಲ..
ಯಂತ್ರದಂತೆ ಎಲ್ಲವನ್ನೂ ಮಾಡಿಸುತ್ತದೆ..
ಮಾರ್ಗಶಿರದ ಶುಷ್ಕತೆ
ಮಾತು ಕೃತಿಗಳಲ್ಲಿ
ಧ್ವನಿಸುತ್ತದೆ.
ಗಳಿಸಿಯೂ, ಉಳಿಸಿಯೂ
ಎಲ್ಲ ನಿರರ್ಥ,
ಪ್ರೀತಿ ಬರಡಾದ ಸಂಬಂಧಗಳು
ಕರ್ತವ್ಯ ಲೋಪವಾಗದಂತೆ
ಎಚ್ಚರ ವಹಿಸುತ್ತವೆ.
ಎಲ್ಲ ಮುಗಿದ ಕೊನೆಗೊಂದು
ದೀರ್ಘ ನಿಟ್ಟುಸಿರು,
ಗಳಿಸಲಾರದ್ದಕ್ಕಾಗಿ..
ಅಸಾಮ್ಯ ಸಂಬಂಧಗಳ
ಅಂತರಕಾಯ್ವ ಗೋಡೆಗಳು
ಬಲವಾಗುತ್ತವೆ..
ಅಭಿಮಾನದ ಇಟ್ಟಿಗೆಗಳಿಂದ.
ಸ್ವಪ್ನಾ ಶಶಿಧರ ಭಟ್ಟ ಮೂಲತಃ ತೀರ್ಥಹಳ್ಳಿಯವರು.
ಹಿಂದಿ ಮತ್ತು ಕನ್ನಡ ಸ್ನಾತಕೋತ್ತರ ಪದವೀಧರೆ.
ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದಾರೆ