ಯಾವುದಕ್ಕೂ ಕಂಡೀಷನ್ ಹಾಕದ ನಮ್ಮ ಸೀನಿಯರ್ಸ್ ಒಂದು ವಿಷಯಕ್ಕೆ ಮಾತ್ರ ನಿರ್ಬಂಧ ಹೇರಿದ್ದರು. ರೂಮಿನ ಹಿಂಗೋಡೆಯಲ್ಲಿ ಒಂದು ಕಿಟಕಿ ಇತ್ತು. ಆ ಕಿಟಕಿ ಹತ್ತಿರ ಮಾತ್ರ ನಮ್ಮನ್ನ ಕೂರಲು ಬಿಡುತ್ತಿರಲಿಲ್ಲ. ಬದಲಿಗೆ ರಂಗಸ್ವಾಮಿ ಮತ್ತು ಕೃಷ್ಣಮೂರ್ತಿ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಬಂದವರೇ ಕಿಟಕಿ ಓಪನ್ ಮಾಡಿಕೊಂಡು ಹಾಜರಿರುತ್ತಿದ್ದರು. ಅವರೇಕೆ ಈ ನಿರ್ಬಂಧ ಹೇರಿದ್ದಾರೆ ಎಂಬುದನ್ನು ನಾವು ಬಹಳ ತಡವಾಗಿ ಪತ್ತೆ ಮಾಡಿದ್ದೆವು.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಬರೆದ ಹಾಸ್ಟೆಲ್ ಜೀವನಾನುಭವದ ಬರಹ  ಇಲ್ಲಿದೆ.

 

ವಿಎಸ್‍ಪಿ ತಂದ ಶಿಸ್ತು

ನಮ್ಮ ಸರ್ಕಾರಿ ಕಾಲೇಜಿನ ತರಗತಿಗಳು ಅಷ್ಟು ಬೇಗ ಅಂದರೆ ಬೆಳಗ್ಗೆ ಏಳು ಮೂವತ್ತಕ್ಕೆ ಶುರುವಾಗುವುದಕ್ಕೂ ಒಂದು ಕಾರಣವಿತ್ತು. ಬೆಳಗಿನ ಅವಧಿಯಲ್ಲಿ ನಾವು ಕೂತಿರುತ್ತಿದ್ದ ಕೊಠಡಿಗಳಲ್ಲೆ ಮಧ್ಯಾಹ್ನದ ಅವಧಿಯಲ್ಲಿ ಹೈಸ್ಕೂಲು ನಡೆಯುತ್ತಿತ್ತು. ಹೆಚ್ಚೆಂದರೆ ಹನ್ನೊಂದು ಮುವತ್ತಕ್ಕೆಲ್ಲ ನಮ್ಮ ತರಗತಿಗಳನ್ನ ಬಿಟ್ಟುಕೊಟ್ಟರೆ ಮಾತ್ರ ಹೈಸ್ಕೂಲಿನವರಿಗೆ ಅನುಕೂಲವಾಗುತ್ತಿತ್ತು. ಆದ್ದರಿಂದ ಹಾಸ್ಟೆಲ್‍ನಿಂದ ಬರುತ್ತಿದ್ದ ನಾವುಗಳು ಏಳು ಗಂಟೆಗೆಲ್ಲ ತಿಂಡಿ ತಿನ್ನುವುದು ಅನಿವಾರ್ಯವಾಗಿತ್ತು.

ಜೂನಿಯರ್ ಕಾಲೇಜಿನಲ್ಲಿ ವಿ.ಎಸ್. ಪರಬ್ರಹ್ಮಾಚಾರಿ ಎಂಬ ಇಂಗ್ಲಿಷ್ ಲೆಕ್ಚರರ್ ಇದ್ದರು. ನೋಡಲು ಸಣ್ಣಗಿದ್ದ ಅವರು ಅದಾಗಲೇ ಐವತ್ತನ್ನ ದಾಟಿದ್ದರು. ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಅವರು, ಇತರರಂತೆ ತಾವಾಯಿತು ತಮ್ಮ ಪಾಡಾಯಿತು ಎಂಬಂತಿರದೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು. ಅವರ ಶಿಸ್ತಿನ ಫಲವಾಗಿ ಎಲ್ಲ ವಿದ್ಯಾರ್ಥಿಗಳು ಏಳು ಮುವತ್ತಕ್ಕೆ ಕಡ್ಡಾಯವಾಗಿ ಹಾಜರಿರಲೇ ಬೇಕಿತ್ತು. ತಡವಾಗಿ ಬರುವವರನ್ನ ಕೋಲು ಹಿಡಿದು ಫೀಲ್ಡ್ ತುಂಬ ಅಟ್ಟಾಡಿಸಿಬಿಡುತ್ತಿದ್ದರು. ಇನ್ನು ತಡವಾಗಿ ಬಂದರೆ ಗೇಟಿನ ಬೀಗ ಹಾಕಿಸಿ ಒಳ ಬಿಡದಂತೆ ಸತಾಯಿಸುತ್ತಿದ್ದರು. ಪೂರ್ವಾಪರವನ್ನೆಲ್ಲ ವಿಚಾರಿಸಿ ಸಕಾರಣವಿದ್ದರೆ ಮಾತ್ರ ಒಳ ಬಿಡುತ್ತಿದ್ದರು. ಶಿಸ್ತಿನ ಸಿಪಾಯಿ ಎಂದು ಹೆಸರಾಗಿದ್ದ ವಿಎಸ್‍ಪಿಯವರನ್ನ ಕಂಡರೆ ಹಾಸ್ಟೆಲ್ ಹುಡುಗರು ಗಡ ಗಡ ನಡುಗುತ್ತಿದ್ದರು.

ಪ್ರತಿ ತರಗತಿಯಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಐವತ್ತರ ಮೇಲಿದ್ದುದರಿಂದ ಹಾಜರಿ ಹಾಕುವುದೇ ಕಾಲುಗಂಟೆ ಮೇಲಾಗುತ್ತಿತ್ತು. ಜಿಲ್ಲೆಯ ಬಹುತೇಕ ಎಲ್ಲಾ ತಾಲ್ಲೂಕುಗಳ ವಿದ್ಯಾರ್ಥಿಗಳು ಇಲ್ಲಿದ್ದರಾದರೂ ಮಧುಗಿರಿ, ಪಾವಗಡ, ಶಿರಾ ಕಡೆಯವರು ಹೆಚ್ಚಾಗಿರುತ್ತಿದ್ದರು. ಅವರ ಹೆಸರುಗಳಾದರೂ ರಾಮಾಂಜಿನೇಯ, ರಂಗಧಾಮಯ್ಯ, ತಿಪ್ಪೆಸ್ವಾಮಿ, ಜುಂಜಪ್ಪ, ಹುಚ್ಚಹನುಮಯ್ಯ, ನರಸಪ್ಪ, ಮುಂತಾದ ಬಗೆಯಲ್ಲಿ ಇದ್ದು, ಡಿ.ವಿ.ಪಿ. ಯ ಇಂಗ್ಲಿಷ್ ಮೀಡಿಯಮ್‍ನಲ್ಲಿ ಓದಿ ಬಂದಿದ್ದ ನನಗೆ ನನ್ನ ಜೊತೆಯಲ್ಲಿ ಓದಿದ ಸಂತೋಷ್, ಯಶ್ವಂತ್, ಹರೀಶ್, ಯೋಗೀಶ್ ಹೆಸರುಗಳು ಆಧುನಿಕವೆನಿಸುತ್ತಿದ್ದವು. ಎತ್ತರ, ಬಣ್ಣ, ಮೈಕಟ್ಟಿನಿಂದಲೂ ಹಸಿವು ಬಡತನ ಹೊದ್ದು ಬಂದಿದ್ದ ನಮ್ಮ ಪಾವಗಡ, ಮಧುಗಿರಿಯ ಸಹಪಾಠಿಗಳು ಜೋರಾಗಿಯೇ ಇದ್ದರು. ಮಾವನ ಮಗ ‘ಭಗತ್‍ಸಿಂಗ್’ ತನ್ನ ವಿಶಿಷ್ಟವಾದ ಹೆಸರಿನಿಂದಾಗಿ ಬೇಗನೆ ಕಾಲೇಜಿನ ಎಲ್ಲರ ಆಕರ್ಷಣೆಗೆ ತುತ್ತಾಗುತ್ತಿದ್ದ.

ಇತ್ತ ಸೈನ್ಸ್  ಹಾಸ್ಟಲ್‍ನ ಹದಿಮೂರನೇ ರೂಮಿನಲ್ಲಿ ನಮ್ಮ ವಾಸ್ತವ್ಯ ಮುಂದುವರೆದಿರುವಾಗಲೆ.. ನಮ್ಮ ಹಾಗೆಯೇ ಮತ್ತೊಂದು ಇನ್‍ಫ್ಲೂಯನ್ಸ್ ಸೀಟು ಬಂದು ಕಾಟಿನ ಮೇಲೆ ಹಾಡುಹಗಲೇ ಮಲಗಿ ಗೊರಕೆ ಹೊಡೆಯುತ್ತಿತ್ತು. ಕರ್ರಗಿದ್ದ ಅದು ಮುಂದಿನ ನಮ್ಮ ಬದುಕಿನೊಳಗೆ ಬೆಸೆದು ಹೋದ ಈಗ ಕೆ.ಇ.ಎಸ್ ಮಾಡಿಕೊಂಡು ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿರುವ ಪ್ರಭಾಕರ್. ಅವರ ತಂದೆ ಸಣ್ಣಹನುಮಯ್ಯ ಬಿ.ಡಿ.ಒ ಆಫೀಸ್‍ನಲ್ಲಿ ಡಿ ಗ್ರೂಪ್ ನೌಕರರಾಗಿದ್ದರಿಂದ ಪ್ರಭಾಕರ್‌ನನ್ನು ಎಮ್.ಜಿ ರೋಡ್‍ನ ವಿವೇಕಾನಂದ ಖಾಸಗಿ ಕಾಲೇಜಿಗೆ ಸೇರಿಸಿದ್ದರು. ಆತನೂ ಸೈನ್ಸ್ , ಆರ್ಟ್ಸ್ ಎಂದು ಪರದಾಡಿ ಕೊನೆಗೆ ಆರ್ಟ್ಸ್  ನಲ್ಲೇ ನೆಲೆ ನಿಂತಿದ್ದ. ರಂಗಸ್ವಾಮಿಯ ತಮ್ಮನಾದ ಶಂಕರ್ ಪಿಯುಸಿ ಹಾಸ್ಟೆಲ್‍ಗೆ ದಾಖಲಾಗಿದ್ದರೂ ಅಲ್ಲಿ ತಂಗುವ ವ್ಯವಸ್ಥೆ ಇರದ ಕಾರಣ ಮಲಗಲು ನಾವಿರುವ ಸೈನ್ಸ್ ಹಾಸ್ಟೆಲ್‍ಗೆ ಬರತೊಡಗಿದನು. ಅಂತೆಯೆ ದೂರದ ಸಂಬಂಧಿಯಾದ ಹೆಸರಳ್ಳಿಸೂರಿ ಕೂಡ ಊಟಕ್ಕೆ ಅಲ್ಲಿಗೆ ಹೋಗಿ, ಮಲಗಲು ಇಲ್ಲಿಗೆ ಬರುತ್ತಿದ್ದನು. ಹೀಗೆ ಕಷ್ಟದಲ್ಲಿರುವವರಿಗೆ ಉದಾರವಾಗಿ ಮರುಗುವ ನಮ್ಮ ಸೀನಿಯರ್ಸ್ ಗಳ  ಸ್ವಭಾವದಿಂದಾಗ ಹದಿಮೂರನೇ ರೂಮಿನ ಸದಸ್ಯರ ಸಂಖ್ಯೆ ಆರಕ್ಕೆ ಏರಿತು ಅದರಲ್ಲೂ ಆರ್ಟ್ಸ್ ನವರಿಂದಲೇ ಕೂಡಿತ್ತು.

ಸರ್ಕಾರಿ ಕಾಲೇಜು ವಿದ್ಯಾರ್ಥಿಗಳ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಅವರು, ಇತರರಂತೆ ತಾವಾಯಿತು ತಮ್ಮ ಪಾಡಾಯಿತು ಎಂಬಂತಿರದೆ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದರು. ಅವರ ಶಿಸ್ತಿನ ಫಲವಾಗಿ ಎಲ್ಲ ವಿದ್ಯಾರ್ಥಿಗಳು ಏಳು ಮುವತ್ತಕ್ಕೆ ಕಡ್ಡಾಯವಾಗಿ ಹಾಜರಿರಲೇ ಬೇಕಿತ್ತು.

ಪೇಸ್ಟು ಸೋಪಿಗೆ ಪರದಾಡುತ್ತಿದ್ದ ಸೀನಿಯರ್ಸ್

ನಮಗೆ ತಮ್ಮ ರೂಮಿನಲ್ಲಿ ಅವಕಾಶ ಮಾಡಿಕೊಟ್ಟಿದ್ದ ಸೀನಿಯರ್‍ಗಳಾದ ರಂಗಸ್ವಾಮಿ ಮತ್ತು ಕೃಷ್ಣಮೂರ್ತಿಯವರದು ಒಬ್ಬೊಬ್ಬರದು ಒಂದೊಂದು ಕಥೆ. ಇಡೀ ಹಾಸ್ಟೆಲ್‍ನಲ್ಲಿ ಎಲ್ಲರಿಗಿಂತ ಹೈಯಸ್ಟ್ ಬಡತನವನ್ನ ಹೊತ್ತವರಂತೆ ಕಂಡುಬರುತ್ತಿದ್ದ ಇವರು ಬಟ್ಟೆ ಬರೆಗಿರಲಿ ಪುಸ್ತಕ ಪೆನ್ನಿಗೂ ಪರದಾಡುತ್ತಿದ್ದರು. ಆಗಿನ್ನು ಪ್ರಥಮ ಪಿಯುಸಿಗೆ ದಾಖಲಾಗಿದ್ದರಿಂದ ನಮ್ಮ ಮನೆಗಳಲ್ಲಿ ಹೊಸ ಬಟ್ಟೆಗಳನ್ನು ಕೊಡಿಸಿದ್ದರ ಜೊತೆಗೆ ಸೋಪು, ಪೇಸ್ಟು, ಫೇರ್ ಅಂಡ್ ಲವ್ಲಿಗೆಂದು ದುಡ್ಡು ಕೊಡುತ್ತಿದ್ದರು. ಈ ಸೌಲಭ್ಯಗಳಲ್ಲಿ ಭಗತ್ ನನಗಿಂತಲೂ ಮುಂದಿದ್ದು ಮೂರ್ನಾಲ್ಕು ಜೊತೆ ಹೊಸ ಬಟ್ಟೆಯೊಂದಿಗೆ ಹೆಚ್ಚು ಬೆಲೆ ಬಾಳುವ ಲಕ್ಸ್ ಇಂಟರ್ ನ್ಯಾಷಿನಲ್ ಸೋಪನ್ನು ಬಳಸುತ್ತಿದ್ದನು. ಈ ಎಲ್ಲಾ ಭೌತಿಕ ವಸ್ತುಗಳ ಮೇಲೆ ಅಷ್ಟೇ ಖಾಸಗೀತನ ಹೊಂದಿದ್ದ ನಾವು ಬೇರೆ ಯಾರೊಂದಿಗೂ ಶೇರ್ ಮಾಡದಷ್ಟು ಸಣ್ಣತನವನ್ನ ಮೈಗೂಡಿಸಿಕೊಂಡಿದ್ದೆವು. ಮುಖಕ್ಕೆ ಸೋಪಿರಲಿ ಹಲ್ಲಿಗೆ ಪೇಸ್ಟು ಗತಿಯಿಲ್ಲದೆ ಇರುತ್ತಿದ್ದ ಸೀನಿಯರ್ಸ್, ನಮ್ಮಗಳ ಕಣ್ತಪ್ಪಿಸಿ ಕೆಲವೊಮ್ಮೆ ಕಣ್ ಮುಂದೆಯೇ ನಮ್ಮ ಸೋಪುಗಳನ್ನು ಹೊತ್ತೊಯ್ದು ಬಳಸಿ ತಂದಿಡುತ್ತಿದ್ದರು. ಆಗೆಲ್ಲ ಒಳೊಳಗೆ ಕಸಿವಿಸಿಗೊಳ್ಳುತ್ತಿದ್ದ ನಾವು ಹೊರಗಡೆ ತೋರಗೊಡುತ್ತಿರಲಿಲ್ಲ. ಬದಲಿಗೆ ಸೋಪು ಪೇಸ್ಟನ್ನು ಬಚ್ಚಿಟ್ಟು ಹೋಗಲು ರೂಢಿಸಿಕೊಂಡಿದ್ದೆವು. ಕೆಲವೊಮ್ಮೆ ಸೂಟ್‍ಕೇಸ್ನೊಳಗೆ ಇಟ್ಟು ಬೀಗ ಹಾಕಿಕೊಂಡು ಹೋದರೆ, ಇನ್ನೂ ಒಮ್ಮೊಮ್ಮೆ ಶೆಲ್ಪ್ ಮೇಲಿಟ್ಟು ಕಾಣದ ಹಾಗೆ ಅದರ ಮೇಲೆಲ್ಲ ನೀವ್ಸ್ ಪೇಪರ್ ಮುಚ್ಚುತ್ತಿದ್ದೆವು. ನಮ್ಮ ಎಲ್ಲ ಮರ್ಮವರಿತಿದ್ದ ಸೀನಿಯರ್ಸ್ ಹೇಗಾದರೂ ಮಾಡಿ ಪತ್ತೆ ಹಚ್ಚಿ ಬಳಸಿರುತ್ತಿದ್ದರು.

ರಂಗಸ್ವಾಮಿಯ ಬಳಿ ಒಂದೆರೆಡು ಜೊತೆಯಾದರೂ ಹಳೆಯ ಬಟ್ಟೆಗಳಿದ್ದರೆ ಕೃಷ್ಣಮೂರ್ತಿಯ ಬಳಿ ಅದೂ ಇರಲಿಲ್ಲ. ನಮ್ಮ ಬಳಿಯಿದ್ದ ಹೊಸಬಟ್ಟೆಗಳನ್ನು ನೀಟಾಗಿ ಮಡುಚಿ ಸೂಟ್‍ಕೇಸ್‍ನೊಳಗೆ ಇಟ್ಟಿರುತ್ತಿದ್ದೆವು. ಒಂದು ದಿನ ಕಾಲೇಜಿನಿಂದ ಬಂದ ನಮಗೆ ಸೂಟ್‍ಕೇಸ್‍ನೊಳಗೆ ನಮ್ಮ ಹೊಸ ಬಟ್ಟೆಗಳಿಲ್ಲದ್ದು ಗಾಬರಿ ಉಂಟು ಮಾಡಿತು. ಸೂಟ್ ಕೇಸ್ ಬಾಗಿಲು ತೆರೆದಿತ್ತು ಬೇರೆ. ಚಿಂತಾಕ್ರಾಂತರಾಗಿದ್ದ ನಮಗೆ ಮಧ್ಯಾಹ್ನದ ಮೂರು ಗಂಟೆಯ ಸುಮಾರಿಗೆ ರಂಗಸ್ವಾಮಿ-ಕೃಷ್ಣಮೂರ್ತಿ ಜೋಡಿಯ ದರ್ಶನ ಸಿಕ್ಕಿತು. ಸ್ವಲ್ಪ ಸಣ್ಣಗಿದ್ದ ಕೃಷ್ಣಮೂರ್ತಿ ಭಗತ್‍ನ ಹಾಗು ತುಂಬಿದ ಮೈ ಎಂದು ಗೆಳೆಯರಿಂದ ಕರೆಸಿಕೊಳ್ಳುತ್ತಿದ್ದ ರಂಗಸ್ವಾಮಿ ನನ್ನ ಹೊಸ ಪ್ಯಾಂಟು ಶರ್ಟ್ ಧಿರಿಸಿನೊಂದಿಗೆ ರೂಮ್ ಪ್ರವೇಶಿಸಿದರು. ಒಳೊಳಗೆ ಅದೆಷ್ಟು ನೊಂದುಕೊಂಡೆವೋ.. ತೋರಿಕೆಗೂ ಮುಖ ಅರಳಿಸಲಿಲ್ಲ. ಅಸಮಾಧಾನವನ್ನ ಬಾಯಿ ಬಿಟ್ಟು ಹೇಳದ ನಾವು ಮುಂದಿನ ಕೆಲ ವರ್ಷಗಳನ್ನ ಹೀಗೆ ಕಳೆದೆವು. ಕೃಷ್ಣಮೂರ್ತಿಯಂತೂ ಭಗತ್‍ನ ಒಂದು ಪ್ಯಾಂಟನ್ನು ಖಾಯಂ ಮಾಡಿಕೊಂಡಿದ್ದರು.

ನೌಕರರಾಗಿದ್ದ ಪ್ರಭಾಕರನ ಅಪ್ಪ ಓದುತ್ತಿದ್ದ ಮಗನಿಗಾಗಿ ಆಗಿಂದಾಗ್ಗೆ ಹೊಸ ಬಟ್ಟೆಗಳನ್ನ ಕೊಡಿಸುತ್ತಿದ್ದರು. ನಮ್ಮ ಬಟ್ಟೆಗಳು ಹಳೆಯದಾದ ನಂತರ ನಮ್ಮ ಸೀನಿಯರ್ಸ್ ಪ್ರಭನ ರಾಶಿಗೂ ಕೈ ಹಾಕಿದರು. ಆಗಿನಿಂದಲೂ ಸ್ವಲ್ಪ ಸೂಕ್ಷ್ಮತೆಯೆಂಬುದನ್ನು ದೂರವೇ ಇರಿಸಿದ್ದ ಪ್ರಭ, ಒಂದು ದಿನ ಹೊರಗಿನಿಂದ ಬಂದ ರಂಗಸ್ವಾಮಿ ಬಟ್ಟೆ ಬಿಚ್ಚಾಕಿದ ತಕ್ಷಣ ಅದನ್ನು ತೆಗೆದು ಅವರ ಮುಂದೆಯೇ ಗೊಣಗಾಡುತ್ತ ಬಕೆಟ್‍ಗೆ ನೆನೆಹಾಕಿದ. ಕಿರಿಯರಾದ ನಾವು ನಮ್ಮ ಸೀನಿಯರ್ಸ್ಗೆ ಇಷ್ಟೆಲ್ಲ ಅವಮಾನವಾಗುವಂತೆ ನಡೆದುಕೊಳ್ಳುತ್ತಿದ್ದರೂ ಎಂದೂ ಸಹ ಅವರು ನಮ್ಮ ಮೇಲೆ ಬೇಸರಿಸಿಕೊಳ್ಳುತ್ತಿದ್ದುದಾಗಲಿ, ಸಿಟ್ಟಿನಿಂದ ಮಾತಾಡಿದ್ದಾಗಲಿ, ರೂಮ್ ಬಿಟ್ಟು ಹೋಗಿ ಎಂದದ್ದಾಗಲಿ ಇಲ್ಲ. ಬದಲಿಗೆ ಕನ್ನಡಿ ಮುಂದೆ ಮುಖ ನೋಡಿಕೊಳ್ಳುತ್ತ ‘ಅವ್ನ….. , ನಮಿಗೆ ಬಟ್ಟೆ ಮ್ಯಾಚಾಗಲ್ವೊ? ಅಥವ ಬಟ್ಟೆಗೆ ನಾವೆ ಮ್ಯಾಚಾಗಲ್ವೊ? ಒಂದೂ ಬೀಳಲ್ಲ’ ಎಂದು ಬೇಸರಿಸಿಕೊಳ್ಳುತ್ತ ರಂಗಸ್ವಾಮಿ ಮುಖ ಕಿವುಚಿಕೊಳ್ಳುತ್ತಿದ್ದರು.

ಕಿಟಕಿಯಾಚೆ ನೋಡುವಂತಿರಲಿಲ್ಲ

ಯಾವುದಕ್ಕೂ ಕಂಡೀಷನ್ ಹಾಕದ ನಮ್ಮ ಸೀನಿಯರ್ಸ್ ಒಂದು ವಿಷಯಕ್ಕೆ ಮಾತ್ರ ನಿರ್ಬಂಧ ಹೇರಿದ್ದರು. ರೂಮಿನ ಹಿಂಗೋಡೆಯಲ್ಲಿ ಒಂದು ಕಿಟಕಿ ಇತ್ತು. ಆ ಕಿಟಕಿ ಹತ್ತಿರ ಮಾತ್ರ ನಮ್ಮನ್ನ ಕೂರಲು ಬಿಡುತ್ತಿರಲಿಲ್ಲ. ಬದಲಿಗೆ ರಂಗಸ್ವಾಮಿ ಮತ್ತು ಕೃಷ್ಣಮೂರ್ತಿ ಮಧ್ಯಾಹ್ನ ಕಾಲೇಜು ಮುಗಿಸಿಕೊಂಡು ಬಂದವರೇ ಕಿಟಕಿ ಓಪನ್ ಮಾಡಿಕೊಂಡು ಹಾಜರಿರುತ್ತಿದ್ದರು. ಇವರೊಟ್ಟಿಗೆ ಅಕ್ಕಪಕ್ಕದ ರೂಮಿನವರೂ ಜಮಾಯಿಸಿ ಕಿಟಕಿ ಆಚೆಗೆ ಸದಾ ದೃಷ್ಟಿ ನೆಟ್ಟಿರುತ್ತಿದ್ದರು. ಬಹಳ ದಿನಗಳ ಹೊರಗೆ ಗುಟ್ಟಾಗೆ ಉಳಿದಿದ್ದ ಈ ಕಿಟಕಿ ಮರ್ಮ ರಟ್ಟಾದದ್ದು ಮಾತ್ರ ತುಂಬ ತಡವಾಗಿಯೇ. ಅದೂ ನಮ್ಮಗಳ ಸೀನಿಯರ್ಸ್ ಅಂತಿಮ ವರ್ಷ ಮುಗಿಸಿ ನಾವು ಆ ರೂಮಿಗೆ ಸೀನಿಯರ್ಸ್ ಆದಾಗಲೆ.

ಕಿಟಕಿ ಓಪನ್ ಮಾಡಿಕೊಂಡು ಹಕ್ಕಿಗೆ ಕಾಳಾಕುವಂತೆ ನಿಶ್ಯಬ್ದವಾಗಿ ಕಾದಿರುತ್ತಿದ್ದ ರಹಸ್ಯವೇನೆಂದರೆ… ನಮ್ಮ ಹಾಸ್ಟೆಲ್ ಹೇಳಿ ಕೇಳಿ ಎಮ್.ಜಿ ರೋಡ್‍ಗೆ ಹೊಂದಿಕೊಂಡಿತ್ತು. ಮಹಾತ್ಮ ಗಾಂಧಿ ರಸ್ತೆ ಎಂದರೆ ಕೇಳಬೇಕೆ ಅದು ದೇಶದ ಎಲ್ಲೆಡೆಯೂ ಸೌಂದರ್ಯಕ್ಕೆ ಫೇಮಸ್. ಥರಾವರಿ ಜನ ಅಲ್ಲಿ ಶಾಪಿಂಗಾಗಿ ಎಡೆತಾಕುತ್ತಿದ್ದರು. ನಮ್ಮ ಹಾಸ್ಟೆಲ್‍ನ ಹಿಂಭಾಗದಲ್ಲಿ ಖಾಲಿ ಸೈಟಿತ್ತು. ನಮ್ಮ ರೂಮಿನ ಕಿಟಕಿಯ ಹಿಂಭಾಗದಲ್ಲಿ ಕಾಣುತ್ತಿದ್ದ ಖಾಲಿ ಸೈಟಿಗೆ ಹೊಂದಿಕೊಂಡಂತೆ ಶಾಪಿಂಗ್ ಮಹಲುಗಳು ಇದ್ದು, ಅಂಗಡಿಗಳ ಹಿಂಭಾಗ ಸರಾಗವಾಗಿ ನಮಗೆ ಕಾಣುತ್ತಿತ್ತು. ಆ ಹಿಂಭಾಗಕ್ಕೆ ಮುಂಭಾಗಕ್ಕಿಂತಲೂ ಹೆಚ್ಚಿನ ಮಹತ್ವವಿತ್ತು. ಏಕೆಂದರೆ ಎಮ್.ಜಿ ರೋಡ್‍ನ ಒತ್ತೊತ್ತಾದ ಅಂಗಡಿ ಸಾಲುಗಳ ಮಧ್ಯೆ ಒಂದೇ ಒಂದು ಸಂದು ಮಾತ್ರವಿತ್ತು. ಆ ಸಂದುವಿನಿಂದ ಒಳ ಬಂದರೆ ನಮ್ಮ ಹಾಸ್ಟೆಲ್ ಹಿಂಭಾಗದಲ್ಲಿದ್ದ ಖಾಲಿ ಸೈಟು ಸಿಗುತ್ತಿತ್ತು. ಎಮ್.ಜಿ ರೋಡ್‍ನಲ್ಲಿ ಖಾಲಿ ಸೈಟಿಗೆ ಜನ ಯಾಕೆ ಬರುತ್ತಾರೆಂದು ಲಘುವಾಗಿ ತಿಳಿಯುವಂತಿಲ್ಲ. ಜಲಬಾಧೆ ತಾಳಲಾರದ ಜನ ಇಂಥದ್ದಕ್ಕಾಗಿಯೇ ಹುಡುಕುತ್ತಿರುತ್ತಾರೆ. ಅಲ್ಲಿ ಬರುತ್ತಿದ್ದವರು ಬಹುತೇಕ ಗಂಡಸರೇ ಆಗಿದ್ದರೂ ಆಗೊಮ್ಮೆ ಈಗೊಮ್ಮೆ ಶೃಂಗಾರಗೊಂಡಿರುವ ಹೆಂಗಸರೂ ನುಸಿಳಿಬಿಡುತ್ತಿದ್ದರು. ಈ ಭಾಗ್ಯ ಹದಿಮೂರನೆ ರೂಮಿಗೆ ಬಿಟ್ಟರೆ ಬೇರೆಯವರಿಗೆ ಇರಲಿಲ್ಲ. ಅದಕ್ಕಾಗಿ ನಮ್ಮ ಸೀನಿಯರ್ಸ್ ಜಾಗಕಟ್ಟಿಕೊಂಡಿರುತ್ತಿದ್ದರು ಮತ್ತು ಕಿರಿಯರನ್ನ ಬಿಟ್ಟುಕೊಳ್ಳುತ್ತಿರಲಿಲ್ಲ.