ಹಿಂದಿನ ಶತಮಾನಗಳ ಕಲಾವಿದರು, ತಮ್ಮ ಪೇಂಟಿಂಗ್‌ಗಳಿಗೆ ಬೇಕಿರುವ ಬಣ್ಣದ ಕಣಗಳನ್ನು ನಿರ್ಮಿಸಲು ಪಡಬಾರದ ಪಾಡು ಪಟ್ಟಿದ್ದಾರೆ. ಕೆಂಪು ಮಣ್ಣು, ಕಲ್ಲು, ಬೂದಿ, ನಾನಾ ಗಿಡಗಳು, ಹೂವು-ಕಾಯಿ-ಹಣ್ಣುಗಳು, ಪಶು-ಪ್ರಾಣಿಗಳ ಅಂಗಗಳು, ಕಡೆಗೆ ಕ್ರಿಮಿ-ಕೀಟಗಳನ್ನೂ ಅರೆದು ತಮಗೆ ಬೇಕಾದ ಬಣ್ಣದ ಛಾಯೆಯನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ಉದಾಹರಣೆಗೆ, ಕಾಕಿನೀಲ್ ಎಂಬ ಸಣ್ಣ ಕೀಟ. ಇದು, ಬಹು ಮಟ್ಟಿಗೆ, ಪಾಪಾಸು ಕಳ್ಳಿಗಳನ್ನು ಕಾಡುವಂತಹ ಕೀಟ. ಈ ಕೀಟವನ್ನು ಸಂಗ್ರಹಿಸಿ, ಒಣಗಿಸಿ, ಅರೆದು ಅದರಿಂದ ಕೆಂಪು ಬಣ್ಣದ ಕಣಗಳನ್ನು ನಿರ್ಮಿಸುವುದನ್ನು ಸಾವಿರಾರು ವರ್ಷಗಳ ಹಿಂದೆಯೇ ದಕ್ಷಿಣ ಅಮೆರಿಕದ ಮಾಯನ್ನರು ಕಂಡುಕೊಂಡಿದ್ದರು.
ಶೇಷಾದ್ರಿ ಗಂಜೂರು ಬರೆಯುವ ಸರಣಿ

 

ಸುಮಾರು ಮೂರು ದಶಕಗಳ ಹಿಂದೆ, ನಾನು ಅಂದಿನ ಬಿಹಾರ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಆಪ್ತ ಮಿತ್ರನೊಬ್ಬನ ಮದುವೆಗೆಂದು ಮುಂಗೇರ್ ಪಟ್ಟಣದ ಆಸುಪಾಸಿನಲ್ಲಿದ್ದ ಸಣ್ಣದೊಂದು ಹಳ್ಳಿಗೆ ಹೋಗಿದ್ದೆ. ನನ್ನ ಜೊತೆಗೇ, ಇನ್ನೂ ಎಂಟು-ಹತ್ತು ಜನ ಮಿತ್ರರೂ ಇದ್ದರೂ. ನಾವು ಮುಂಗೇರ್ ತಲುಪುವ ವೇಳೆಗೆ ಮುಸ್ಸಂಜೆಯಾಗಿತ್ತು. ಹೀಗಾಗಿ, ನಮಗೆ ಹೆಚ್ಚೇನೂ ಕಾಣದಿದ್ದರೂ, ಗಂಗಾನದಿಯ ತಟದಲ್ಲಿದ್ದ ಆ ಹಳ್ಳಿಯ ಸೌಂದರ್ಯ ಕತ್ತಲೆಯ ಮಸುಕಿನಲ್ಲೂ ಗೋಚರವಾಗುತ್ತಿತ್ತು.

ನನ್ನ ಮಿತ್ರ ತನ್ನ ವಿವಾಹಕ್ಕೆ ಆಹ್ವಾನಿಸಿದ ನಂತರ, ನಾನು ಈ “ಮುಂಗೇರ್” ಎಂಬ ಹೆಸರಿನ ಬಗೆಗೆ ಅವನಲ್ಲಿ ಕುತೂಹಲ ವ್ಯಕ್ತಪಡಿಸಿದ್ದೆ. “ಮ್ಯಾಂಗೋಗಳಿಂದ ಮುಂಗೇರೇ?”, “ಮಂಗಗಳಿಂದ ಮುಂಗೇರೇ?” ಹೀಗೆ ಹಾಸ್ಯದ ವಿಚಾರಗಳೂ ಚರ್ಚೆಗೆ ಬಂದಿದ್ದವು. ಆ ಕಾಲದಲ್ಲಿ, ದೂರದರ್ಶನದಲ್ಲಿ, “ಮುಂಗೇರಿಲಾಲ್ ಕಿ ಹಸೀನ್ ಸಪ್ನೇ” ಎಂಬ ಸೀರಿಯಲ್ ಸಹ ಬಿತ್ತರವಾಗುತ್ತಿತ್ತು. ಇದೂ ಸಹ ಅವನನ್ನು ಹಾಸ್ಯ ಮಾಡಲು, ಮತ್ತು “ಮುಂಗೇರ್” ಬಗೆಗೆ ಕುತೂಹಲಿಸಲು ಕಾರಣವೆನಿಸಿತ್ತು.

ಮದುವೆಯ ಲಗ್ನದ ಮುಹೂರ್ತ, ಮಧ್ಯರಾತ್ರಿಯಲ್ಲೂ ಇಡುತ್ತಾರೆಂಬುದು ಮೊದಲ ಬಾರಿಗೆ ತಿಳಿದದ್ದು ಆ ನನ್ನ ಮಿತ್ರನ ವಿವಾಹದಲ್ಲೇ. ಇದು ನನಗೆ ಕೊಂಚ ಮಟ್ಟಿಗೆ ಆಶ್ಚರ್ಯವೆನಿಸಿದರೂ, ನನ್ನೊಂದಿಗೆ ಬಂದಿದ್ದ ವಿವಿಧ ರಾಜ್ಯಗಳ ಮಿತ್ರರು, ಈ ಪದ್ಧತಿ ತಮ್ಮ ರಾಜ್ಯಗಳಲ್ಲಿ ಸರ್ವೇ ಸಾಮಾನ್ಯವೆಂದರು.

ಆ ಹಳ್ಳಿಯಲ್ಲಿದ್ದ ವಧುವಿನ ಹತ್ತಿರದ ನೆಂಟಸ್ತರ ಮನೆಯಲ್ಲಿ ನಮಗೆ ಇಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು. ಮದುವೆಗೆಂದೇ ಹಾಕಿದ್ದ ಪೆಂಡಾಲಿನಲ್ಲಿ ಊಟ ಮುಗಿಸಿಕೊಂಡು, ನಮಗೆ ಗೊತ್ತು ಮಾಡಿದ್ದ ಜಾಗಕ್ಕೆ ಬರುವ ವೇಳೆಗೆ ರಾತ್ರಿ ಸುಮಾರು ಎಂಟು-ಎಂಟೂವರೆ ಆಗಿತ್ತು. ಮದುವೆಯ ಮುಹೂರ್ತಕ್ಕೆ ಇನ್ನೂ ಮೂರು-ನಾಲ್ಕು ಗಂಟೆಗಳಿದ್ದವು. ಅಲ್ಲಿಯವರೆಗೆ ಏನು ಮಾಡುವುದು?! ನನ್ನ ಮಿತ್ರ (ಮದುವೆಯ ಗಂಡು), ಅದಕ್ಕೂ ಒಂದು ಏರ್ಪಾಡು ಮಾಡಿದ್ದ. ಹಲವು ರೀತಿಯ ಮದ್ಯಗಳು ಮತ್ತು ಇಸ್ಪೀಟು ಕಾರ್ಡುಗಳು ನಮಗಾಗಿ ಕಾದಿದ್ದವು. ಇವೆರಡರಲ್ಲೂ ನನಗೆ ಆಸ್ಥೆ ಇಲ್ಲದ್ದರಿಂದ, ನಾನು ಆ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಭಾಗಿಯಾಗದಿದ್ದರೂ, ನನ್ನ ಮಿತ್ರರೊಂದಿಗಿನ ಹರಟೆಯಲ್ಲಿ ತೊಡಗಿದ್ದೆ. ಮದುವೆಗೆಂದು ಬಂದಿದ್ದ, ನನ್ನ ಮಿತ್ರನ ಇನ್ನೂ ಹಲವು ಬಂಧು ಮಿತ್ರರು ಇದರಲ್ಲಿ ಸೇರಿಕೊಂಡರು.

ಕೆಲ ಸಮಯದ ನಂತರ, ನಮ್ಮನ್ನು ವಿಚಾರಿಸಿಕೊಳ್ಳಲು, ಮದುವೆಯ ಗಂಡು ಬಂದ. ಗುಂಡು ಹಾಕುತ್ತಾ ಇಸ್ಪೀಟು ಆಡುತ್ತಿರುವವರ ಮಧ್ಯೆ ನಾನೊಬ್ಬ ಇವೆರಡೂ ಚಟುವಟಿಕೆಗಳಲ್ಲಿ ಭಾಗವಹಿಸದೇ ಕುಳಿತಿರುವುದು ಅವನಿಗೆ ಬೇಸರವೆನಿಸಿತು. ಅವನು, ತನ್ನ ಚಿಕ್ಕಪ್ಪ ಒಬ್ಬರು ಇರುವರೆಂದೂ, ಅವರೂ ನನ್ನಂತಹವರೇ ಎಂದೂ, ಹತ್ತಿರದ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದ ಅವರೊಂದಿಗೆ ಮಾತನಾಡಿದರೆ, ಮುಂಗೇರ್ ಕುರಿತು ನನ್ನ ಪ್ರಶ್ನೆಗಳಿಗೆ ಉತ್ತರ ದೊರೆಯುವುದೆಂದು ತಿಳಿಸಿ ಅವರನ್ನು ಕರೆದುಕೊಂಡು ಬಂದ. ನಾವಿದ್ದ ಜಾಗದಲ್ಲಿ ಗಲಾಟೆ ಇದ್ದುದ್ದರಿಂದ, ನಾನು ಮತ್ತು ಮದುವೆಯ ಗಂಡಿನ ಆ ಚಿಕ್ಕಪ್ಪ ಹೊರಗೆ ಬಂದು, ಕೊಂಚ ದೂರದಲ್ಲಿದ್ದ ಮನೆಯೊಂದರ ಮುಂದಿದ್ದ ಜಗುಲಿಯ ಮೇಲೆ ಕುಳಿತೆವು. ಅತ್ಯಂತ ಸ್ನೇಹಪರರಾಗಿದ್ದ ಅವರು ನನ್ನೊಂದಿಗೆ ಬಹಳ ಆಪ್ತತೆಯಿಂದ ಮಾತನಾಡಲು ತೊಡಗಿದರು.

ಮುಂಗೇರ್‌ಗೆ ಬಹಳ ಐತಿಹಾಸಿಕ ಮಹತ್ವವಿದೆಯೆಂದೂ, ಖ್ಯಾತ ಕಲಾವಿದ ನಂದಾಲಾಲ್ ಬೋಸ್‌ರ ಜನ್ಮಸ್ಥಾನ ಸಹ ಮುಂಗೇರ್‌ನಲ್ಲೇ ಇರುವುದೆಂದೂ ಹೇಳಿದರು. ಕವಿ ರಬೀಂದ್ರರ ಮಗ, ಹನ್ನೊಂದು ವರ್ಷದ ಬಾಲಕ ಶಮೀಂದ್ರನಾಥನ ಸಾವು ಮುಂಗೇರಿನಲ್ಲಿಯೇ ಆಗಿದ್ದೆಂದೂ, ಮಗನ ಈ ಸಾವಿನ ನೋವು, ರಬೀಂದ್ರರ ಕವನವೊಂದಕ್ಕೆ ಕಾರಣವಾಗಿದ್ದ ವಿಷಯವನ್ನೂ ತಿಳಿಸಿದರು. ಹೀಗೆ, ನಾವು ಮಾತನಾಡುತ್ತಿದ್ದಾಗ, ಕರೆಂಟ್ ಹೋಯಿತು. ನಾವು ಕುಳಿತಿದ್ದ ಜಗುಲಿಯ ಹತ್ತಿರದ ಎಲೆಕ್ಟ್ರಿಕ್ ದೀಪ ಆರಿತು. ಮದುವೆ ಪೆಂಡಾಲಿಗೆ ಜೆನರೇಟರ್ ವ್ಯವಸ್ಥೆ ಮಾಡಿದ್ದರಾದರೂ, ನಾವು ಕುಳಿತಿದ್ದೆಡೆಯಿಂದ ಅದು ದೂರವಿದ್ದದ್ದರಿಂದ ನಾವು ಕತ್ತಲಲ್ಲೇ ಕುಳಿತು ಮಾತನಾಡುತ್ತಿದ್ದೆವು. ಆಕಾಶದಲ್ಲಿ ತಾರಾ ಸಮೂಹ ಮತ್ತು ಸಣ್ಣಗೆ ಕಾಣುತ್ತಿದ್ದ ಚಂದ್ರ, ಲಗ್ನದ ಮುಹೂರ್ತಕ್ಕೆ ಇನ್ನೂ ಸಮಯವಿದೆ ಎಂದು ತೋರುತ್ತಿದ್ದ ರೇಡಿಯಂ ಡಯಲ್ ಇದ್ದ ನಮ್ಮೀರ್ವರ ಕೈಗಡಿಯಾರಗಳು ಇವಷ್ಟೇ ನಮಗೆ ಸ್ಪಷ್ಟವಾಗಿ ಕಾಣಿಸುತ್ತಿದ್ದವು.

ಕತ್ತಲೆನ್ನುವುದು ಕಣ್ಣಿನ ವಿಷಯವಾದರೂ, ಅದಕ್ಕೆ ದೂರದಲ್ಲೇಲ್ಲೋ ಅಗುವ ಸದ್ದನ್ನೂ ಹತ್ತಿರಕ್ಕೆ ತರುವ ಶಕ್ತಿಯಿದೆ. ಆ ರಾತ್ರಿಯ ಕತ್ತಲಲ್ಲಿ, ನನ್ನ ಮಿತ್ರನ ಚಿಕ್ಕಪ್ಪನ ದನಿಯ ಹಿಂದೆ, ದೂರದ ಮದುವೆ ಮಂಟಪದ ಸಂಭ್ರಮದ ಸದ್ದೂ, ಇನ್ನೆಷ್ಟೋ ದೂರದಲ್ಲಿದ್ದ ಗಂಗೆಯ ಹರಿವೂ ಕೇಳಿಸುತ್ತಿದ್ದ ನೆನಪು.

*****

ನಾನು, ಬಿಹಾರದ ಸಣ್ಣ ಹಳ್ಳಿಯೊಂದರ ಕತ್ತಲಲ್ಲಿ, ದೂರದ ನದಿಯ ಹರಿವು, ಆಕಾಶದಲ್ಲಿನ ನಕ್ಷತ್ರಗಳ, ಚಂದ್ರನ ಹೊಳಪನ್ನು ಗಮನಿಸುತ್ತಿದ್ದ ಸಂದರ್ಭಕ್ಕೆ ಸರಿಯಾಗಿ ನೂರು ವರ್ಷದ ಹಿಂದೆ, ಕ್ರಿ.ಶ.೧೮೮೯ರಲ್ಲಿ, ಫ್ರಾನ್ಸಿನ ಸಣ್ಣ ಹಳ್ಳಿಯೊಂದರಲ್ಲಿದ್ದ ಮೆಂಟಲ್ ಅಸೈಲಮ್ ಒಂದರಲ್ಲಿ, ಮಹಾ ಕಲಾವಿದ ವಿನ್ಸೆಂಟ್ ವ್ಯಾನ್ ಗೋನನ್ನು ಸೇರಿಸಲಾಗಿತ್ತು. ತನ್ನ ಜೀವಿತಾವಧಿಯಲ್ಲಿ ನಾನಾ ವಿಧವಾದ ಮನೋ ಕಾಯಿಲೆಗಳಿಂದ ಬಳಲಿದ ವ್ಯಾನ್ ಗೋ ತನ್ನ ಕಿವಿಯನ್ನು ತಾನೇ ಕತ್ತರಿಸಿಕೊಂಡಿದ್ದಲ್ಲದೇ, ಕೊನೆಗೆ ಆತ್ಮಹತ್ಯೆಯನ್ನೂ ಮಾಡಿಕೊಂಡ.

ಆದರೆ, ಅವನು ಈ ಮೆಂಟಲ್ ಅಸೈಲಮ್‌ನಲ್ಲಿ ಇದ್ದಾಗ, ಅವನ ಜೀವನ ಕೊಂಚ ಶಾಂತಿಯುತವಾಗಿತ್ತೆಂದೇ ಹೇಳಬಹುದು. ಇನ್ನುಳಿದ ರೋಗಿಗಳಿಗಿಲ್ಲದ ಸ್ವಾತಂತ್ರ್ಯ ಅವನಿಗೆ ಇತ್ತು. ಅವನ ಚಿತ್ರಕಲೆಗೆ ಬೇಕಿದ್ದ ಎಲ್ಲ ಸೌಲಭ್ಯ ಮತ್ತು ಸಲಕರಣೆಗಳನ್ನು ಅವನಿಗೆ ನೀಡಲಾಗಿತ್ತು. ಮೇಲ್ನೋಟಕ್ಕೆ ಅವನು ಚೇತರಿಸಿಕೊಳ್ಳುತ್ತಿರುವಂತೆ ಕಾಣುತ್ತಿತ್ತು. ಆದರೆ, ವಾಸ್ತವದಲ್ಲಿ ಅವನ ಮಾನಸಿಕ ಸ್ಥಿತಿ ಹದಗೆಟ್ಟಿತ್ತು. ಈ ಸಮಯದಲ್ಲಿ ಅವನು ರಚಿಸಿದ “Starry Night” ಪೇಂಟಿಂಗ್ ಇಂದು ಲೋಕ ವಿಖ್ಯಾತಿ ಪಡೆದಿದೆ.

ಅವನ ಮಾನಸಿಕ ಸ್ಥಿತಿ ಬದಲಾದಂತೆ, ವ್ಯಾನ್ ಗೋ ಬಳಸುವ ಬಣ್ಣಗಳಲ್ಲೂ ಬದಲಾವಣೆಗಳಾಗುವುದನ್ನು ಕಲಾ ವಿಮರ್ಶಕರು ಗಮನಿಸಿದ್ದಾರೆ. ಅವನ ಮಾನಸಿಕ ಖಿನ್ನತೆ ಹೆಚ್ಚಾದಂತೆ, ಕಡು ಗಾಢವಾದ ಬಣ್ಣಗಳ ಬಳಕೆಯೂ ಹೆಚ್ಚುತ್ತದೆ.

ಅವನ “ಸ್ಟಾರಿ ನೈಟ್” ಕಲಾಕೃತಿಯಲ್ಲಿ ಹೆಚ್ಚು ಕಾಣುವುದು ಕಡು ನೀಲ ವರ್ಣ. ಆ ಪೇಂಟಿಂಗ್‌ನಲ್ಲಿ, ಇನ್ನಾವುದೇ ಬಣ್ಣಕ್ಕಿಂತ ಅದರ ಬಳಕೆಯೇ ಹೆಚ್ಚು. ಆ ಚಿತ್ರದಲ್ಲಿನ ಆಕಾಶ ಮಾತ್ರವಲ್ಲ, ಚರ್ಚ್, ಪುಟ್ಟ-ಪುಟ್ಟ ಮನೆಗಳು, ಮರ-ಗಿಡಗಳು, ದೂರದ ದಿಬ್ಬಗಳು ಎಲ್ಲದರ ಮೇಲೂ ನೀಲದ ಛಾಯೆಯಿದೆ. ಆದರೆ, ನಮ್ಮ ಕಣ್ಸೆಳೆಯುವುದು, ಆಕಾಶದಲ್ಲಿನ ಹಳದಿ-ಬಿಳಿ ಮಿಶ್ರಿತ ಚಂದ್ರ ಮತ್ತು ತಾರೆಯರ ಬೆಳಕು. ಅವನ “Starry Night Over the Rhone”, ಎಂಬ ಇನ್ನೊಂದು ಚಿತ್ರದಲ್ಲಿ, ನದಿಯ ನೀರಿನಲ್ಲಿ ಪ್ರತಿಬಿಂಬಿಸುವ ಕಡು ಹಳದಿ ನಮ್ಮನ್ನು ಆ ನದಿಯ ತೀರಕ್ಕೇ ಕರೆದೊಯ್ಯುತ್ತದೆ.

ಇಂದು, ವಿವಿಧ ಬಣ್ಣಗಳ ವಿವಿಧ ಛಾಯೆಗಳು, ಟೂತ್ ಪೇಸ್ಟ್ ಟ್ಯೂಬ್‌ಗಳಂತ ಸಣ್ಣ ಟ್ಯೂಬ್‌ಗಳಲ್ಲಿ ಹತ್ತಿರದ ಅಂಗಡಿಯೊಂದರಲ್ಲಿ ಸಿಗುತ್ತವೆ. ಹೀಗಾಗಿ, ಚಿತ್ರಕಲಾವಿದರು, ಅದಕ್ಕಾಗಿ ಹೆಚ್ಚು ತಡಕಾಡಬೇಕಿಲ್ಲ. ಈ ವಿಷಯದಲ್ಲಿ, ಹೆಚ್ಚೆಂದರೆ, ಅವರು ಕಷ್ಟಪಡಬೇಕಿರುವುದು, ತಮಗೆ ಬೇಕಿರುವ ವರ್ಣ ಛಾಯೆಯನ್ನು ಪಡೆಯಲು ಯಾವ ಯಾವ ಬಣ್ಣಗಳನ್ನು ಮಿಶ್ರಣ ಮಾಡಿಕೊಳ್ಳಬೇಕು ಎಂದು ಅರಿತುಕೊಳ್ಳುವುದಷ್ಟೇ.

ಆದರೆ, ಹಿಂದಿನ ಶತಮಾನಗಳ ಕಲಾವಿದರು, ತಮ್ಮ ಪೇಂಟಿಂಗ್‌ಗಳಿಗೆ ಬೇಕಿರುವ ಬಣ್ಣದ ಕಣಗಳನ್ನು ನಿರ್ಮಿಸಲು ಪಡಬಾರದ ಪಾಡು ಪಟ್ಟಿದ್ದಾರೆ. ಕೆಂಪು ಮಣ್ಣು, ಕಲ್ಲು, ಬೂದಿ, ನಾನಾ ಗಿಡಗಳು, ಹೂವು-ಕಾಯಿ-ಹಣ್ಣುಗಳು, ಪಶು-ಪ್ರಾಣಿಗಳ ಅಂಗಗಳು, ಕಡೆಗೆ ಕ್ರಿಮಿ-ಕೀಟಗಳನ್ನೂ ಅರೆದು ತಮಗೆ ಬೇಕಾದ ಬಣ್ಣದ ಛಾಯೆಯನ್ನು ಸೃಷ್ಟಿಸಲು ಯತ್ನಿಸಿದ್ದಾರೆ. ಉದಾಹರಣೆಗೆ, ಕಾಕಿನೀಲ್ ಎಂಬ ಸಣ್ಣ ಕೀಟ. ಇದು, ಬಹು ಮಟ್ಟಿಗೆ, ಪಾಪಾಸು ಕಳ್ಳಿಗಳನ್ನು ಕಾಡುವಂತಹ ಕೀಟ. ಈ ಕೀಟವನ್ನು ಸಂಗ್ರಹಿಸಿ, ಒಣಗಿಸಿ, ಅರೆದು ಅದರಿಂದ ಕೆಂಪು ಬಣ್ಣದ ಕಣಗಳನ್ನು ನಿರ್ಮಿಸುವುದನ್ನು ಸಾವಿರಾರು ವರ್ಷಗಳ ಹಿಂದೆಯೇ ದಕ್ಷಿಣ ಅಮೆರಿಕದ ಮಾಯನ್ನರು ಕಂಡುಕೊಂಡಿದ್ದರು. ಹದಿನೈದನೆಯ ಶತಮಾನದಲ್ಲಿ, ಯೂರೋಪಿಯನ್ನರು, ಅಮೆರಿಕ ಖಂಡಗಳನ್ನು ಕಂಡುಕೊಂಡನಂತರ, ಯೂರೋಪಿನಲ್ಲೂ ಅದರ ಬಳಕೆ ಹೆಚ್ಚಾಯಿತು. ರಾಫೇಲ್, ರೂಬೆನ್, ರೆಂಬ್ರಾಂಟ್‌ನಂತಹ ಎಷ್ಟೋ ಮಂದಿ ಚಿತ್ರ ಕಲಾವಿದರು ಈ ಕಾಕಿನೀಲ್ ಕೆಂಬಣ್ಣವನ್ನು ಉಪಯೋಗಿಸಿದ್ದಾರೆ. (ಇದು ನೈಸರ್ಗಿಕವಾಗಿ ದೊರೆಯುವ ಕೆಂಬಣ್ಣವಾದ್ದರಿಂದ, ಫುಡ್ ಕಲರ್ ಮತ್ತು ಮುಖ್ಯವಾಗಿ ಲಿಪ್‌ಸ್ಟಿಕ್‌ಗಳಲ್ಲಿ ಇಂದೂ ಸಹ ಅದನ್ನು ಬಳಸಲಾಗುತ್ತದೆ).

ಸಿಂಧೂರದ ಕಡು-ಗೆಂಪು ಬಣ್ಣಕ್ಕೆ ಇಂಗ್ಲೀಷಿನಲ್ಲಿ “Vermilion” ಎಂಬ ಪದದ ಬಳಕೆಯಲ್ಲಿದೆ. ಈ Vermilion ಹಿಂದೆ, Kermes vermilio ಎಂಬ worm, ಅರ್ಥಾತ್ ಕ್ರಿಮಿ, ಇದೆ. (ಸಿಂಧೂರ ಅಥವಾ ಕುಂಕುಮಕ್ಕೆ ಈ ಕ್ರಿಮಿಗಳನ್ನು ಬಳಸುವುದಿಲ್ಲ. ಬದಲಿಗೆ, ಅರಿಶಿನ, ಸುಣ್ಣ ಮತ್ತು ಕೆಲವೊಂದು ಖನಿಜಗಳನ್ನು ಅರೆದು ಮಾಡಲಾಗುತ್ತದೆ)

೧೫ನೆಯ ಶತಮಾನದ ನಂತರ ಯೂರೂಪಿನಲ್ಲಿ ವಿಜ್ಞಾನ ಬೆಳೆದಂತೆ, ವಿವಿಧ ರಾಸಾಯನಿಕಗಳನ್ನು ಬೆರೆಸಿ ನಾನಾ ವರ್ಣಗಳನ್ನು ಸೃಷ್ಟಿಸುವುದೂ ಪ್ರಾರಂಭವಾಯಿತು. ಹೀಗೆ ಸೃಷ್ಟಿಸಿದ ಬಣ್ಣಗಳು ಹಲವೊಮ್ಮೆ ವಿಷಕಾರಿಗಳಾಗಿದ್ದವು. ಉದಾಹರಣೆಗೆ, ಆರ್ಸೆನಿಕ್‌ನಂತಹ ಮಹಾ ವಿಷವನ್ನು ಬಳಸಿ ತಯಾರು ಮಾಡಿದ ಹಸಿರು ಬಣ್ಣ. ಇದರ ಹಸಿರಿನ ಸೊಬಗಿಗೆ ಹಲವು ಚಿತ್ರ ಕಲಾವಿದರು ಮಾರು ಹೋಗಿದ್ದಾರೆ. (ಜರ್ಮನ್ ಕಲಾವಿದ ಜಾರ್ಜ್ ಫ್ರೆಡೆರಿಕ್ ಕೆರ್‌ಸ್ಟಿಂಗ್‌ನ “Woman Embroidering” ಪೇಂಟಿಂಗ್ ಗಮನಿಸಿ). ಈ ಬಣ್ಣದ ವಾಲ್ ಪೇಪರುಗಳಿಂದಲೇ, ನೆಪೋಲಿಯನ್‌ನ ಸಾವೂ ಆಗಿರಬಹುದೆಂಬ ಆಭಿಪ್ರಾಯವಿದೆ. ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ, ಈ ಬಣ್ಣದ ಅಪಾಯದ ಅರಿವು ಹೆಚ್ಚಾದಂತೆ, “ಪ್ಯಾರಿಸ್ ಗ್ರೀನ್” ಎಂಬ ಇನ್ನೊಂದು ಹಸಿರು ಬಣ್ಣದ ಬಳಕೆ ಹೆಚ್ಚಾಯಿತು. ಇದರ ಹಸಿರಿನ ಆಕರ್ಷಣೆ ಎಷ್ಟಿತ್ತೆಂದರೆ, ಫ್ರೆಂಚ್ ಸಾಮ್ರಾಜ್ಞೆ ಯೂಜೀನಿ ಈ ಬಣ್ಣದಿಂದ ಡೈ ಮಾಡಿದ ಡ್ರೆಸ್ ಹಾಕಿಕೊಂಡಳು. ಕ್ಲಾಡ್ ಮೋನೆ, ಪಾಲ್ ಸೇಜ಼ಾನ್, ರೆನ್ವಾರಂತಹ ಖ್ಯಾತನಾಮರೂ ಈ ವರ್ಣವನ್ನು ಬಳಸಿದ್ದಾರೆ. (ರೆನ್ವಾನ ಪೇಂಟಿಂಗ್ ಗಮನಿಸಿ). ವಿಷಾದಕರ ವ್ಯಂಗ್ಯದ ವಿಷಯವೆಂದರೆ, ಈ ಬಣ್ಣವೂ ಸಹ ಆರ್ಸೆನಿಕ್ ಬಳಸಿಯೇ ಮಾಡಿದ್ದಾಗಿದ್ದು, ಅತ್ಯಂತ ವಿಷಕಾರಿಯಾಗಿತ್ತು. ಈ ಬಣ್ಣದ ಬಳಕೆಯೇ, ಸೇಜ಼ಾನ್‌ನ ತೀವ್ರ ಅನಾರೋಗ್ಯ ಮತ್ತು ಮೋನೆಯ ಅಂಧತ್ವಕ್ಕೆ ಕಾರಣವಾಗಿರಬಹುದೆಂಬ ಅಭಿಪ್ರಾಯವೂ ಇದೆ. ಇದರ ಅಪಾಯದ ಅರಿವಾದ ನಂತರ, ಚಿತ್ರಕಲೆಗಾಗಿ ಇದರ ಬಳಕೆ ಕಡಿಮೆಯಾಯಿತಾದರೂ, ಕ್ರಿಮಿನಾಶಕವಾಗಿ ಬಳಸುವುದು ಹೆಚ್ಚಾಯಿತು.

“ಬಿಳಿ” ಎಂಬುದು, ನ್ಯೂಟನ್ ತೋರಿಸಿಕೊಟ್ಟಂತೆ, ಎಲ್ಲ ಬಣ್ಣಗಳೂ ಕೂಡಿದಾಗ ಕಾಣುವಂತಹ ಬಣ್ಣ. ಈ ಬಿಳಿ ಬಣ್ಣದ ಕಣಗಳನ್ನು ನಿರ್ಮಿಸಲು, ಹಿಂದಿನ ಕಾಲದ ಕಲಾವಿದರು ಹರ-ಸಾಹಸವನ್ನೇ ಮಾಡಿದ್ದಾರೆ. “Lead White” ಎಂಬ ಬಿಳಿ ಬಣ್ಣದ ಕಣಗಳು ಹಲವು ಶತಮಾನಗಳ ಕಲಾವಿದರಿಗೆ, ಅತ್ಯಂತ ಪ್ರಿಯವಾಗಿತ್ತು. ಅತ್ಯಂತ ವಿಷಕಾರಿಯಾಗಿದ್ದ ಈ ಬಣ್ಣವನ್ನು ನಿರ್ಮಿಸಲು, ಯಾವುದೇ ಕಿಟಕಿಗಳಿರದ ಕೊಠಡಿಯೊಂದರಲ್ಲಿ, ಸೀಸ, ಹಸುವಿನ ಸಗಣಿ, ಕುದುರೆ ಸಗಣಿಗಳನ್ನು ಪದರ-ಪದರಗಳಲ್ಲಿ ಪೇರಿಸಿ, ಅದರ ಮೇಲೆ ವಿನೆಗರ್ ಸುರಿದು, ಹಲವು ತಿಂಗಳುಗಳ ಕಾಲ ಗಾಳಿ-ಬೆಳಕುಗಳು ಒಳ ಹೋಗದಂತೆ ಸೀಲ್ ಮಾಡಲಾಗುತ್ತಿತ್ತು. ಇದು, ರಾಸಾಯನಿಕ ಪ್ರಕ್ರಿಯೆಗಳಿಗೆ ಕಾರಣವಾಗಿ, ಬಿಳಿ ಬಣ್ಣದ 2PbCO3·Pb(OH)2 ಎಂಬ ಸೀಸದ ಸಂಕೀರ್ಣ ಉಪ್ಪೊಂದರ ನಿರ್ಮಾಣವಾಗುತ್ತಿತ್ತು. ಗಬ್ಬಾಗಿ ನಾರುತ್ತಿದ್ದ ಆ ಕೊಠಡಿಯಿಂದ, ಉಪ್ಪಿನ ಈ ಕಣಗಳನ್ನು ಸಂಗ್ರಹಿಸುವುದು ಅತ್ಯಂತ ಅಸಹ್ಯವೂ, ಅಪಾಯಕಾರಿ ಕೆಲಸವೂ ಆಗಿತ್ತು. ಹೀಗಾಗಿ, ಹೆಸರಾಂತ ಚಿತ್ರಕಾರರು, ಇಂತಹ ಕೆಲಸಗಳಿಗೆ ತಮ್ಮ ಅಪ್ರೆಂಟಿಸ್‌ಗಳನ್ನು ಕಳುಹಿಸುತ್ತಿದ್ದರು. ಇದು ವಿಷಪೂರಿತವೆಂದು ಹಲವು ಶತಮಾನಗಳ ಹಿಂದೆಯೇ ಗೊತ್ತಿದ್ದರೂ, ೧೯೭೮ರಲ್ಲಿ, ಅಮೆರಿಕ ಸರ್ಕಾರ ಇದರ ಬಳಕೆಯನ್ನು ನಿಷೇಧಿಸುವವರೆಗೆ, ಚಿತ್ರಕಲಾವಿದರು ಇದನ್ನು ಬಳಸುತ್ತಲೇ ಇದ್ದರು.

ವಿನ್ಸೆಂಟ್ ವ್ಯಾನ್ ಗೋನ ಮನೋವ್ಯಾಧಿಯ ಹಿಂದೆ, ಹಲವಾರು ಕಾರಣಗಳಿರಬಹುದು. ಆಗಾಗ್ಗೆ, ತನ್ನ ಪೇಂಟ್ ಬ್ರಷ್ ನೆಕ್ಕುವ ಅಭ್ಯಾಸ ಹೊಂದಿದ್ದ ಅವನು, ಈ Lead White ಬಣ್ಣವನ್ನೂ ನೆಕ್ಕುತ್ತಿದ್ದ. ಇದು, ಅವನ ಮಾನಸಿಕ ಆರೋಗ್ಯಕ್ಕೆ ಒಳಿತನ್ನಂತೂ ಮಾಡಿರಲಿಕ್ಕಿಲ್ಲ. ಹಲವು ಇತಿಹಾಸಕಾರರು ಹೇಳುವಂತೆ, ಈ ಬಿಳಿ ಬಣ್ಣದ ವಿಷದಿಂದಾಗಿ, ಮೈಕೇಲೆಂಜೆಲೋ, ಗೋಯಾನಂತಹ ಎಷ್ಟೋ ಖ್ಯಾತನಾಮರು ಬಳಲಿದ್ದಾರೆ. (ಕೆಲವೊಂದು ಸೀಸದ ಉಪ್ಪುಗಳಿಗೆ, – ಉದಾಹರಣೆಗೆ, ಸೀಸದ ಅಸಿಟೇಟ್ – ಸಿಹಿಯಾದ ರುಚಿ ಇದೆ. ವಿಷಕಾರಿಯಾದ ವಸ್ತುವೊಂದು ಸಿಹಿಯಾಗಿ ಇರುವುದು ಅತಿ ವಿರಳ. ಆದರೆ, ಸೀಸದ ಉಪ್ಪು ಅಂತಹ ಒಂದು ವಿರಳ ವಿಷ. ಇದರ ಅರಿವು ಇರದಿದ್ದರಿಂದ, ಹಿಂದಿನ ಶತಮಾನಗಳಲ್ಲಿ, ದ್ರಾಕ್ಷಾರಸವನ್ನು ಸಿಹಿಯಾಗಿಸಲು ಸೀಸದ ಅಸಿಟೇಟ್ ಅನ್ನು ಬಳಸುವ ಪದ್ಧತಿ ಚಾಲ್ತಿಯಲ್ಲಿತ್ತು. ಈ ಪದ್ಧತಿಯೇ, ಸುಮಾರು ಸಾವಿರ ವರ್ಷಗಳ ಹಿಂದೆ ಪೋಪ್ ಎರಡನೆಯ ಕ್ಲೆಮೆಂಟೀನ್ ಮತ್ತು ಸುಮಾರು ಇನ್ನೂರು ವರ್ಷಗಳ ಹಿಂದೆ ಖ್ಯಾತ ಸಂಗೀತಕಾರ ಬೀಥೋವನ್ನರ ಸಾವಿಗೆ ಕಾರಣವಾಗಿರಬಹುದೆಂದು ಇಂದಿನ ತಜ್ಞರು ಹೇಳುತ್ತಾರೆ.)

ಕಲಾವಿದರು ಬಳಸಿದ ಬಣ್ಣಗಳೇ ಅವರ ಸಾವಿಗೆ ಕಾರಣವಾಗಿರುವುದು, ಶತಮಾನಗಳ ಹಿಂದಿನ ಓಬೀರಾಯನ ಕತೆಯಲ್ಲ. ಕೆಲ ವರ್ಷಗಳ ಹಿಂದೆ, ಅಮೆರಿಕದ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ಒಂದು ಅಧ್ಯಯನ ನಡೆಸಿ, ೧೯೪೦ ರಿಂದ ೧೯೬೯ರ ವರೆಗೆ ಮರಣ ಹೊಂದಿದ ೧೫೯೮ ಕಲಾವಿದರ ಸಾವುಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿತು. ಆ ಅಧ್ಯಯನ ಹೇಳುವಂತೆ, ಆ ಕಲಾವಿದರು ಬಳಸಿದ ಬಣ್ಣಗಳ ಕಣಗಳು, ರಾಸಾಯನಿಕಗಳು ಹಲವಾರು ತರಹದ ಕ್ಯಾನ್ಸರ್‌ಗಳಿಗೆ ಕಾರಣವಾಗಿದ್ದವು.

ಹೀಗೆ, ಹಲವು ಬಣ್ಣಗಳಿಗೆ, ಹಲವಾರು ಕುತೂಹಲಕರ, ಭೀಕರ, ವಿಷಾದದ ಇತಿಹಾಸಗಳೇ ಇವೆ.

ದೂರದ ನದಿಯ ಹರಿವು, ಆಕಾಶದಲ್ಲಿನ ನಕ್ಷತ್ರಗಳ, ಚಂದ್ರನ ಹೊಳಪನ್ನು ಗಮನಿಸುತ್ತಿದ್ದ ಸಂದರ್ಭಕ್ಕೆ ಸರಿಯಾಗಿ ನೂರು ವರ್ಷದ ಹಿಂದೆ, ಕ್ರಿ.ಶ.೧೮೮೯ರಲ್ಲಿ, ಫ್ರಾನ್ಸಿನ ಸಣ್ಣ ಹಳ್ಳಿಯೊಂದರಲ್ಲಿದ್ದ ಮೆಂಟಲ್ ಅಸೈಲಮ್ ಒಂದರಲ್ಲಿ, ಮಹಾ ಕಲಾವಿದ ವಿನ್ಸೆಂಟ್ ವ್ಯಾನ್ ಗೋನನ್ನು ಸೇರಿಸಲಾಗಿತ್ತು. ತನ್ನ ಜೀವಿತಾವಧಿಯಲ್ಲಿ ನಾನಾ ವಿಧವಾದ ಮನೋ ಕಾಯಿಲೆಗಳಿಂದ ಬಳಲಿದ ವ್ಯಾನ್ ಗೋ ತನ್ನ ಕಿವಿಯನ್ನು ತಾನೇ ಕತ್ತರಿಸಿಕೊಂಡಿದ್ದಲ್ಲದೇ, ಕೊನೆಗೆ ಆತ್ಮಹತ್ಯೆಯನ್ನೂ ಮಾಡಿಕೊಂಡ.

ಬಣ್ಣಗಳಲ್ಲಿ, ಹಳದಿಗೊಂದು ವಿಶಿಷ್ಟ ಸ್ಥಾನವಿದೆ. ಇಡೀ ಜೀವ ಮಂಡಲಕ್ಕೇ ಜೀವ ನೀಡುವ ಸೂರ್ಯನ ಬಣ್ಣ ಹಳದಿ. ಸೂರ್ಯನ ಜೀವ-ಶಕ್ತಿಯ ಕಿರಣಗಳ ಹೊಂಬಣ್ಣವನ್ನು ಶೋಧಿಸಿ ತೆಗೆದು ಅದರ ಸೊಗಸಿನ ಪರಿಮಳ, ಸಿಹಿಯನ್ನು, ನಮ್ಮ ಕಣ್ಣಿಗಷ್ಟೇ ಅಲ್ಲ, ಮೂಗು, ನಾಲಿಗೆಗೂ ದೊರಕಿಸುವ ಮಾವಿನ ಹಣ್ಣಿನ ಬಣ್ಣವೂ ಹಳದಿಯೇ. ತನ್ನ ಶರೀರ ನೀಲವಿದ್ದರೂ, ವಿಷ್ಣು (ಮತ್ತು ಆತನ ಅವತಾರ ರೂಪಿಯಾದ ಕೃಷ್ಣ) ತೊಡುವುದು ಪೀತಾಂಬರವೇ! ಭಾರತೀಯ ಸಾಂಸ್ಕೃತಿಕ ಇತಿಹಾಸ ಮತ್ತು ಪರಂಪರೆಯಲ್ಲಿ ಹಳದಿಗಿರುವ ವೈಶಿಷ್ಟ್ಯದ ಬಗೆಗೆ ಹೆಚ್ಚು ಹೇಳುವ ಅವಶ್ಯಕತೆಯೇ ಇಲ್ಲ.

ಈ ಬಣ್ಣವನ್ನು, ನಮ್ಮ ದೇಶದ ಎಷ್ಟೋ ಕಲಾವಿದರು, ಹಲವು ಶತಮಾನಗಳಿಂದ ಅತ್ಯಂತ ಸುಂದರವಾಗಿ ಬಳಸಿದ್ದಾರೆ. ಈ ಹೊಂಬಣ್ಣ ಮೂಡಿಸುವ ಭಾವದ ಸೆಳೆತ, ಕಣ್ಣನ್ನೂ ಮೀರಿ, ಇತರ ಇಂದ್ರಿಯಗಳನ್ನೂ ದಾಟಿ, ಹೃದಯವನ್ನೇ ತಲುಪತ್ತದೆ. ಉದಾಹರಣೆಗೆ, ಕಲ್ಕತ್ತಾದ “ಸೀತಾರಾಮ್” ಎಂಬ ಕಲಾವಿದ, ಕ್ರಿ.ಶ. ೧೮೧೪ರಲ್ಲಿ ರಚಿಸಿರುವ ಮಾವಿನ ಹಣ್ಣುಗಳ ಚಿತ್ರವನ್ನು ಗಮನಿಸಿ. ಈ ಚಿತ್ರವನ್ನು, ಅಂದಿನ ಬ್ರಿಟಿಷರು ತಮ್ಮ Botany ಅಧ್ಯಯನಕ್ಕೆ ಬಳಸುತ್ತಾರಾದರೂ, ಅದಕ್ಕೆ ಬಾಟನಿಯ ಕ್ಲಿನಿಕಲ್ ಸ್ಟಡಿಯನ್ನು ಮೀರಿ, ತನ್ನನ್ನು ಆಸ್ವಾದಿಸುವಂತೆ ಆಹ್ವಾನಿಸುವ ಗುಣವಿದೆ.

ಸೀತಾರಾಮನ ಸಮಕಾಲೀನನಾದ ಇನ್ನೊಬ್ಬ ಕಲಾವಿದ ರಚಿಸಿರುವ “ರಾಧಿಕೆಯ ಕಾಲ್ಬೆರಳುಗಳಿಗೆ ಬಣ್ಣ ಹಚ್ಚುತ್ತಿರುವ ಕೃಷ್ಣ”ನ ಚಿತ್ರದಲ್ಲಿ ಕಾಣುವ ಕೃಷ್ಣನ ಹಳದಿ ವಸ್ತ್ರ ನಮ್ಮ ಕಣ್ಸೆಳೆಯದಿರಲು ಸಾಧ್ಯವೇ ಇಲ್ಲ.

ಸೀತಾರಾಮನಿಗೂ ಹಿಂದಿನ, ಹದಿನೆಂಟನೆಯ ಶತಮಾನದ, ಫರೂಕಾಬಾದಿನ ಕಲಾವಿದನೊಬ್ಬ ರಚಿಸಿರುವ, “ರಾಜಕುಮಾರಿ ಮತ್ತು ಆಕೆಯ ಗೆಳತಿಯರು” ಚಿತ್ರವನ್ನು ಗಮನಿಸಿ. ಈ ಚಿತ್ರದಲ್ಲಿ, ಈ ಹಳದಿ ಬಣ್ಣದ ಹಲವು ಛಾಯೆಗಳನ್ನು ಆ ಕಲಾವಿದ ಅತ್ಯಂತ ಮನೋಹರವಾಗಿ ಬಳಸಿದ್ದಾನೆ. ಇನ್ನೂ ಒಂದು ಉದಾಹರಣೆಯೆಂದರೆ, ಹದಿನೇಳನೆಯ ಶತಮಾನದ “ರಾಗಿಣಿ ಸುಹಾವಿ” ಎಂಬ ಚಿತ್ರದಲ್ಲಿ ಎದ್ದು ಕಾಣುವ ಹಳದಿಯ ಹೊಂಬಣ್ಣ. (“ರಾಗಿಣಿ ಸುಹಾವಿ”, ರಾಗ ಮೇಘನ ಪತ್ನಿ. ಈ ಚಿತ್ರ ರಾಗಮಾಲ ಎಂಬ ಚಿತ್ರಸರಣಿಯ ಒಂದು ಚಿತ್ರ. ಈ ಸರಣಿಯ ಇನ್ನೂ ಹಲವಾರು ಚಿತ್ರಗಳಲ್ಲಿ, ಹಳದಿಯ ಹೊಳಪನ್ನು ಕಾಣಬಹುದು)

ಯೂರೋಪಿಯನ್ನರು ಭಾರತಕ್ಕೆ ಹದಿನೈದನೆಯ ಶತಮಾನದಲ್ಲಿ ಬರಲಾರಂಭಿಸಿದ ಮೇಲೆ, ಭಾರತೀಯ ಚಿತ್ರಕಲೆಗಳಲ್ಲಿ ಬಿಂಬಿಸಲಾಗಿರುವ ಈ ಹಳದಿಯ ಹೊಳಪು ಯೂರೋಪಿನ ಕಲಾವಿದರ ಕಣ್ಸೆಳೆಯಿತು. ಆ ಹಳದಿಯ ಸೊಬಗು, ಉಳಿದ ಬಣ್ಣಗಳಂತೆ, ಬಿಸಿಲಿಗೆ ಬಾಡಿ ಸೊರಗುತ್ತಿರಲಿಲ್ಲ. ಈ ಬಣ್ಣವನ್ನು ಭಾರತೀಯರು ಹೇಗೆ ತಯಾರಿಸುತ್ತಿದ್ದರೆಂದು ಯಾರಿಗೂ ತಿಳಿದಿರಲಿಲ್ಲವಾದರೂ, ಅದು ವಿಷಕಾರಿಯಾದ ರಾಸಾಯನಿಕ ವಸ್ತುವಲ್ಲವೆಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ, ಅದರ ಬಗೆಗೆ ಯೂರೋಪಿನಲ್ಲಿ ಅದರ ಆಕರ್ಷಣೆ ಮತ್ತಷ್ಟು ಹೆಚ್ಚಾಯಿತು.

ಯೂರೋಪಿನ ಅತ್ಯಂತ ಹೆಸರಾಂತ ಕಲಾವಿದರೂ ಸೇರಿದಂತೆ, ಹಲವರು, ಭಾರತದಿಂದ ಈ ಬಣ್ಣವನ್ನು ತರಿಸಿಕೊಳ್ಳಲು ಆರಂಭಿಸಿದರು. ಭಾರತದಿಂದ ಆಮದು ಮಾಡಿಕೊಳ್ಳುತ್ತಿದ್ದುದ್ದರಿಂದ ಇದಕ್ಕೆ “ಇಂಡಿಯನ್ ಯೆಲ್ಲೋ” ಎಂಬ ಹೆಸರೂ ಬಂದಿತು.

ವ್ಯಾನ್ ಗೋ ತನ್ನ “ಸ್ಟಾರಿ ನೈಟ್” ಮತ್ತು “ಸ್ಟಾರಿ ನೈಟ್ ಆನ್ ರೋನ್”ಗಳಲ್ಲಿ ಬಳಸಿರುವುದು ಈ “ಇಂಡಿಯನ್ ಯೆಲ್ಲೋ” ಬಣ್ಣದ ಕಣಗಳನ್ನೇ.

ಈ “ಇಂಡಿಯನ್ ಯೆಲ್ಲೋ” ಬಣ್ಣವನ್ನು ಬಳಸಿದವರಲ್ಲಿ, ವ್ಯಾನ್ ಗೋ ಮೊದಲಿಗನೇನಲ್ಲ. ಹದಿನೇಳನೆಯ ಶತಮಾನದಲ್ಲೇ, ಡಚ್ ಕಲಾವಿದ ವರ್ಮೀರ್, ತನ್ನ ಕಲಾಕೃತಿಗಳಲ್ಲಿ “ಇಂಡಿಯನ್ ಯೆಲ್ಲೋ” ಬಳಸಿದ್ದಾನೆ. ಉದಾಹರಣೆಗೆ, ತಕ್ಕಡಿ ಹಿಡಿದಿರುವ ಹೆಂಗಸಿನ ಚಿತ್ರವನ್ನು ಗಮನಿಸಿ. ಈ ಚಿತ್ರದಲ್ಲಿ ಕಿಟಕಿಯ ಕರ್ಟನ್ ನಿಂದ ಹಿಡಿದು ಚಿನ್ನದ ಚೌಕಟ್ಟಿನ ವರೆಗೆ ಹಳದಿಯ ನಾನಾ ಛಾಯೆಗಳನ್ನು ಅವನು ಅತ್ಯಂತ ತಜ್ಞತೆಯಿಂದ ಸೆರೆಹಿಡಿದ್ದಾನೆ.

ಈ ಬಣ್ಣವನ್ನು ತಮ್ಮ ಕಲಾಕೃತಿಗಳಲ್ಲಿ ಅಪಾರವಾಗಿ ಬಳಕೆ ಮಾಡಿದ ಕಲಾವಿದರಲ್ಲಿ, ಬ್ರಿಟಿಷ್ ಕಲಾವಿದ ಜೆ.ಎಮ್.ಡಬ್ಲ್ಯೂ. ಟರ್ನರ್‌ ಸಹ ಒಬ್ಬ. ಆತನ “The Burning of the Houses of Lords and Commons” ಕಲಾಕೃತಿಯಲ್ಲಿ ತೋರುವ ಬೆಂಕಿಯ ಹಳದಿಯ ನಾನಾ ಛಾಯೆಗಳಿಗೆ ಬಣ್ಣ ಒದಗಿಸುವುದು ಈ “ಇಂಡಿಯನ್ ಯೆಲ್ಲೋ” ಕಣಗಳೇ.

ಈ “ಇಂಡಿಯನ್ ಯೆಲ್ಲೋ” ಬಳಕೆ ಹೆಚ್ಚಾದಂತೆ, ಇದರ ಬಗೆಗೆ ಯೂರೋಪಿನಲ್ಲಿ ಕುತೂಹಲವೂ ಹೆಚ್ಚಾಯಿತು. ಈ ಬಣ್ಣವು ಆ ಕಾಲದಲ್ಲಿ, ಯೂರೋಪಿಯನ್ನರಿಗೆ ಹಸಿರು-ಹಳದಿ ಬಣ್ಣದ ಉಂಡೆಯ ರೂಪದಲ್ಲಿ ದೊರಕುತ್ತಿತ್ತು. ಆ ಉಂಡೆಯನ್ನು ಮುರಿದು ಪುಡಿ ಮಾಡಿ ಅದರ ಕಣಗಳನ್ನು ನೀರಿನಲ್ಲೋ ತೈಲದಲ್ಲೋ ಬೆರೆಸಿ ಪೇಂಟ್ ಮಾಡಲು ಬಳಸಿಕೊಳ್ಳಬೇಕಿತ್ತು. ಅದರ ಬಣ್ಣ, ಆಕಾರ ಬಿಟ್ಟರೆ, ಯೂರೋಪಿಯನ್ನರಿಗೆ, ಈ ಪುಡಿಯುಂಡೆಯ ಬಗೆಗೆ ಇನ್ನೇನೂ ತಿಳಿದಿರಲಿಲ್ಲ.

ಭಾರತೀಯರು, ಅದ್ಭುತವಾದ ಈ ಹಳದಿ ಬಣ್ಣವನ್ನು ಹೇಗೆ ತಯಾರಿಸುತ್ತಿರಬಹುದು?! ಈ ಪ್ರಶ್ನೆ ಹಲವಾರು ಯೂರೋಪಿಯನ್ನರನ್ನು ಕಾಡುತ್ತಿತ್ತು. ಕೆಲವರ ಪ್ರಕಾರ, ಈ ಬಣ್ಣ ಸಸ್ಯಜನ್ಯವಾದರೆ, ಇನ್ನೂ ಕೆಲವರು, ಇದು ಒಂಟೆಗಳ ಗಾಲ್ ಬ್ಲಾಡರ್ ಅನ್ನು ಅರೆದು ಮಾಡಿದ್ದು ಎಂದರು!! “ಇಂಡಿಯನ್ ಯೆಲ್ಲೋ” ಬಣ್ಣದ ಉಂಡೆಗೆ ಮೂತ್ರದ ವಾಸನೆ ಇದ್ದುದ್ದರಿಂದ, ಇದನ್ನು ಮೂತ್ರದಿಂದ ಮಾಡಿರಬಹುದೆಂಬ ಸಂದೇಹ ಇನ್ನೂ ಹಲವರಲ್ಲಿ ಇತ್ತು.

*****

ಮೂತ್ರಕ್ಕೂ ಹಳದಿಗೂ ಇರುವ ನಂಟು ಹೊಸದಲ್ಲ. ಅದರ ಹಳದಿಯ ಸೆಳೆತಕ್ಕೆ ಸಿಕ್ಕಿ, ಹದಿನೇಳು-ಹದಿನೆಂಟನೆಯ ಶತಮಾನದ ಹೆಸರಾಂತ ವಿಜ್ಞಾನಿಗಳು, ಹೊಂಬಣ್ಣದ ಮೂತ್ರದಿಂದ ಚಿನ್ನವನ್ನು ತಯಾರಿಸುವ ಹಲವಾರು -ವ್ಯರ್ಥ- ಪ್ರಯತ್ನಗಳನ್ನು ಮಾಡಿದ್ದಾರೆ. ಕ್ರಿ.ಶ.೧೬೬೯ರ ಒಂದು ರಾತ್ರಿ, ಜರ್ಮನಿಯ ಹ್ಯಾಂಬರ್ಗಿನಲ್ಲಿ ಹೆನ್ನಿಗ್ ಬ್ರಾಂಡ್ ಎನ್ನುವ ವೈದ್ಯನೊಬ್ಬ ಪ್ರಯೋಗವೊಂದರಲ್ಲಿ ತೊಡಗಿದ್ದ. ಸಾವಿರಾರು ಲೀಟರ್ ಮೂತ್ರವನ್ನು ಸಂಗ್ರಹಿಸಿ, ಅದನ್ನು ಹಲವು ದಿನಗಳ ಕಾಲ ಹಾಗೆಯೇ ಬಿಟ್ಟು, ನಂತರ ಅದರ ತೇವಾಂಶ ಬಹು ಮಟ್ಟಿಗೆ ಆವಿಯಾಗುವಂತೆ ಕುದಿಸತೊಡಗಿದ. ತೇವಾಂಶ ಹೊರ ಹೋಗುತ್ತಿರುವಂತೆ ಉಳಿಯುವ ಉಪ್ಪಿನ ಕಣಗಳನ್ನು ಮತ್ತಷ್ಟು ಕಾಯಿಸಿದಾಗ, ಕತ್ತಲಲ್ಲೂ ಹೊಳೆಯುವಂತಹ ಅಪೂರ್ವವಾದ ಹೊಸ ವಸ್ತುವೊಂದು ಅವನಿಗೆ ಸಿಕ್ಕಿತು. ಸ್ಪರ್ಶ ಮಾತ್ರದಿಂದಲೇ, ಯಾವುದೇ ಲೋಹವನ್ನೂ ಚಿನ್ನವಾಗಿಸುವಂತಹ ಸ್ಪರ್ಶಮಣಿ – ಫಿಲಾಸಫರ್ಸ್ ಸ್ಟೋನ್ – ಇದಾಗಿರಬಹುದೇ ಎಂಬ ಸಂದೇಹ ಅವನಿಗೆ ಬಂದಿತು. ಹೀಗಾಗಿ, ಅವನು ಈ ವಸ್ತುವನ್ನು ಹಲವರಿಗೆ ತೋರಿಸಿದನಾದರೂ, ಅದರ ತಯಾರಿಕಾ ವಿಧಾನವನ್ನು ಯಾರಿಗೂ ಹೇಳಲಿಲ್ಲ. ಆ ಅಪೂರ್ವ ವಸ್ತು, ಬೇರೇನೂ ಅಲ್ಲ. ಫಾಸ್ಫರಸ್ (ರಂಜಕ)!

ಬ್ರಾಂಡ್‌ನ ವಿಧಾನದಲ್ಲಿ ಮನೆಯಲ್ಲೇ ರಂಜಕವನ್ನು ತಯಾರಿಸಲೆತ್ನಿಸುವವರಿಗೆ ಒಂದು ಕಿವಿಮಾತು. ಸುಮಾರು ೬೦೦೦ ಲೀಟರ್ ಮೂತ್ರದಿಂದ, ಬ್ರಾಂಡ್‌ಗೆ ಸಿಕ್ಕಿದ್ದು ಕೇವಲ ೧೨೦ ಗ್ರಾಂ ಗಳಷ್ಟು ರಂಜಕ ಮಾತ್ರ. ಸಾಮಾನ್ಯ ಮಾನವರ ಒಂದು ಲೀಟರ್ ಮೂತ್ರದಲ್ಲಿ ಸುಮಾರು ೦.೧ ಗ್ರಾಂ ನಷ್ಟು ರಂಜಕ ಇರುತ್ತದೆ.

ಮೂತ್ರದಿಂದ ಚಿನ್ನವನ್ನು ತಯಾರಿಸುವ ಪ್ರಯತ್ನಗಳು ವ್ಯರ್ಥವಾಗಿದ್ದರೂ, ಮೂತ್ರವನ್ನು ಹಣವಾಗಿಸುವ ಪ್ರಯತ್ನಗಳಂತೂ ಸಫಲತೆ ಕಂಡಿವೆ. ೧೯೪೦ರ ದಶಕದಲ್ಲಿ, ಪಿಯೇರೋ ಡೋನಿನಿ ಎಂಬ ಇಟಾಲಿಯನ್ ವಿಜ್ಞಾನಿಯೊಬ್ಬ ಸ್ತ್ರೀಯರಲ್ಲಿ ಸಂತಾನೋತ್ಪತ್ತಿ ಶಕ್ತಿಯನ್ನು ಹೆಚ್ಚಿಸುವಂತಹ ಔಷಧಗಳನ್ನು ಕಂಡುಹಿಡಿಯುವ ಪ್ರಯತ್ನದಲ್ಲಿದ್ದ. ಮೆನೊಪಾಸ್ ಆಗಿರುವ ಸ್ತ್ರೀಯರ ಮೂತ್ರದಲ್ಲಿನ ಕೆಲವೊಂದು ಹಾರ್ಮೋನುಗಳನ್ನು ಬೇರ್ಪಡಿಸಿ ಅವುಗಳನ್ನು ಸಂತಾನಕ್ಕಾಗಿ ಪ್ರಯತ್ನಿಸುತ್ತಿರುವ ಸ್ತ್ರೀಯರಿಗೆ ನೀಡಿದರೆ, ಅವರಲ್ಲಿ ಸಂತಾನೋತ್ಪತ್ತಿಯ ಶಕ್ತಿ ಹೆಚ್ಚುವುದು ಅವನಿಗೆ ಗೊತ್ತಾಯಿತು. ಅವನ ಈ ಪ್ರಯೋಗಗಳು ಯಶವಾಯಿತಾದರೂ, ಈ ಹಾರ್ಮೋನುಗಳನ್ನು ಔಷಧದ ರೂಪದಲ್ಲಿ ಮಾರುಕಟ್ಟೆಗೆ ತರಬೇಕಿದ್ದರೆ, ಅವನಿಗೆ ಮೆನೊಪಾಸ್ ಆಗಿರುವ ಸ್ತ್ರೀಯರ ಮೂತ್ರದ ನಿರಂತರ ಸರಬರಾಜು ಬೇಕಿತ್ತು. ಅದೂ ಸಹ ಸಾವಿರಾರು ಲೀಟರುಗಳ ಲೆಕ್ಕದಲ್ಲಿ. ಪ್ರತಿದಿನ ಮೆನೊಪಾಸ್ ಸ್ತ್ರೀಯರ ಸಾವಿರಾರು ಲೀಟರ್ ಮೂತ್ರವನ್ನು ಸಂಗ್ರಹಿಸುವುದಾದರೂ ಎಲ್ಲಿಂದ?! (ಸಂತಾನಕ್ಕಾಗಿ ಹಾತೊರೆಯುತ್ತಿರುವ ಒಬ್ಬ ಮಹಿಳೆಗೆ ಈ ಟ್ರೀಟ್‌ಮೆಂಟ್ ಯಶಸ್ವಿಯಾಗಬೇಕಿದ್ದರೆ, ಹತ್ತು ಸ್ತ್ರೀಯರ ಹತ್ತು ದಿನದ ಮೂತ್ರ ಡಾ.ಡೋನಿನಿಗೆ ಬೇಕಿತ್ತು!!)

ಡಾ.ಡೋನಿನಿ ಈ ಚಿಂತೆಯಲ್ಲಿದ್ದಾಗ, ಅವನಿಗೆ ಆಸ್ಟ್ರಿಯಾದ ಡಾಕ್ಟರ್ ಒಬ್ಬನ ಪರಿಚಯವಾಯಿತು. ಎರಡನೇ ಮಹಾಯುದ್ಧ ಆಗಷ್ಟೇ ಮುಗಿದಿದ್ದ ಆ ಕಾಲದಲ್ಲಿ, ಯೂರೋಪಿನ ೬೦ ಲಕ್ಷ ಯೆಹೂದ್ಯರನ್ನು ಹಿಟ್ಲರ್‌ನ ನಾಜ಼ಿಗಳು ಕೊಂದಿದ್ದರು. ಆಸ್ಟ್ರಿಯಾದ ಆ ಡಾಕ್ಟರ್, ಯೆಹೂದ್ಯರ ಸಂತಾನೋತ್ಪತ್ತಿಯನ್ನು ಹೆಚ್ಚಿಸುವುದು ಹೇಗೆಂಬ ಆಲೋಚನೆಯಲ್ಲಿದ್ದ. ಅವನಿಗೊಂದು ಆಲೋಚನೆ ಹೊಳೆಯಿತು. ಕ್ಯಾಥೋಲಿಕ್ ಕಾನ್ವೆಂಟ್‌ಗಳಲ್ಲಿ ಎಷ್ಟೋ ಸಹಸ್ರಾರು ಮಂದಿ ಕ್ರೈಸ್ತ ಸನ್ಯಾಸಿನಿಯರು ಇದ್ದರು. ಇವರಲ್ಲಿ, ಗಮನಾರ್ಹ ಸಂಖ್ಯೆಯಲ್ಲಿ ಮೆನೊಪಾಸ್ ಆಗಿದ್ದ ಸ್ತ್ರೀಯರೂ ಇದ್ದರು. ಇವರ ಮೂತ್ರವನ್ನು ಸಂಗ್ರಹಿಸಿದರೆ ಹೇಗೆ?!

ಈ ಆಲೋಚನೆ ಬಂದ ಕೂಡಲೆ, ಡಾ.ಡೋನಿನಿ, ಇಟಲಿಯ ಸೆರೋನೋ ಎಂಬ ಔಷಧದ ಕಂಪೆನಿಯ ಮೂಲಕ, ಅಂದಿನ ಪೋಪ್ ಹನ್ನೆರಡನೆಯ ಪಯಸ್‌ರನ್ನು ಸಂಪರ್ಕಿಸಿದ. ಅವರು ಸೆರೋನೋ ಕಂಪೆನಿಗೆ ಕ್ರೈಸ್ತ ಸನ್ಯಾಸಿನಿಯರ ಮೂತ್ರವನ್ನು ದಾನಮಾಡಲು ಒಪ್ಪಿಕೊಂಡರು. (ಕ್ಯಾಥೋಲಿಕ್ ಚರ್ಚಿಗೆ ಆ ಕಂಪೆನಿಯಲ್ಲಿ ಕಾಲು ಭಾಗದ ಒಡೆತನವಿದ್ದಿದ್ದು ಕಾಕತಾಳೀಯವೇನೂ ಅಲ್ಲ) ಹೀಗೆ ತಯಾರಿಸಿದ ಸಂತಾನವರ್ಧಕ ಔಷಧವೇ ಪೆರ್ಗೊನಲ್. ಪೆರ್ಗೊನಲ್ ಚಿಕಿತ್ಸೆಯಿಂದ, ತಾಯಿಯಾದವಳು ಇಸ್ರೇಲಿನ ಯೆಹೂದಿ ಮಹಿಳೆ. ಈ ಚಿಕಿತ್ಸೆ ಯಶ ಕಂಡ ನಂತರದಲ್ಲಿ, ಪೆರ್ಗೊನಲ್‌ಗೆ ವಿಶ್ವಾದ್ಯಂತ ಬೇಡಿಕೆ ಏರಿ, ಕ್ರೈಸ್ತ ಸನ್ಯಾಸಿನಿಯರ ಮೂತ್ರ ಸಾಲದಾಯಿತು. ೧೯೮೦ರ ದಶಕದಲ್ಲಿ, ಕೊನೆಗೆ, ಸೆರೋನೋ ಕಂಪೆನಿಯವರು, ಈ ಹಾರ್ಮೋನ್‌ಗಳನ್ನು ತಮ್ಮ ಪ್ರಯೋಗಾಲಯಗಳಲ್ಲೇ ಸೃಷ್ಟಿಸುವ ವಿಧಾನವನ್ನು ಕಂಡುಕೊಂಡರು.

ಗೋವಿನ ತಳಿಗಳಲ್ಲಿ, ಬ್ರಿಟಿಷ್ ತಳಿಗಳು ಉತ್ತಮವೆಂಬ ಅಭಿಪ್ರಾಯವಿದೆ. ಹೀಗಾಗಿ, ಈ ತಳಿಗಳ ಗೋವುಗಳಿಗೆ ಮಾರುಕಟ್ಟೆಯಲ್ಲಿ ವಿಪರೀತ ಬೆಲೆ ಇದೆ. ಈ ತಳಿಗಳ ಸಂತಾನ ಉತ್ಪತ್ತಿ ಹೆಚ್ಚಿದಷ್ಟೂ, ಅವುಗಳ ಮಾಲೀಕರ ಕಿಸೆಯೂ ದಪ್ಪವಾಗುವುದು ಸಹಜವೇ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ಬ್ರಿಟಿಷ್ ಗೋಪಾಲಕರಿಗೆ ಒಂದು ಆಲೋಚನೆ ಬಂತು, ಈ ತಳಿಗಳ ಗೋವುಗಳ ಬದಲು, ಅವುಗಳ ಭ್ರೂಣಗಳನ್ನೇ ಮಾರಿದರೆ ಹೇಗೆ?! ಈ ಭ್ರೂಣಗಳನ್ನು ಕೊಂಡವರು, ಅವುಗಳನ್ನು ಬೇರೆ ತಳಿಯ ಹಸುಗಳಲ್ಲೂ ಅಳವಡಿಸಿ ಉತ್ಕೃಷ್ಟ ತಳಿಯ ಬ್ರಿಟಿಷ್ ಗೋವುಗಳನ್ನೇ ಪಡೆಯಬಹುದಲ್ಲವೇ?!!

ಈ ಆಲೋಚನೆಯಲ್ಲಿ, ಬ್ರಿಟಿಷ್ ಹಸುಗಳು ತಾಯಿಯರಾಗುವ ಬದಲು, ಭ್ರೂಣ ಸೃಷ್ಟಿಯ ಕಾರ್ಖಾನೆಗಳಾದವು. ಕಾರ್ಖಾನೆಯಾದಮೇಲೆ, ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಆಲೋಚನೆ ಬರದೇ ಇದ್ದೀತೇ?! ಹೀಗಾಗಿ, ಇಟಾಲಿಯನ್ ಕ್ರೈಸ್ತ ಬ್ರಹ್ಮಚಾರಿಣಿ ಸನ್ಯಾಸಿನಿಯರ ಮೂತ್ರದಿಂದ ತೆಗೆಂದ ಹಾರ್ಮೋನುಗಳನ್ನು ಬ್ರಿಟನ್ನಿನ ಗೋವುಗಳಿಗೆ ನೀಡಿ ಗರ್ಭದಾನ ಮಾಡಿಸಿ, ಅವುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭ್ರೂಣಗಳನ್ನು ತೆಗೆಯುವ ಪದ್ಧತಿಯೂ ಜಾರಿಗೆ ಬಂತು.

*****

ಹತ್ತೊಂಬತ್ತನೆಯ ಶತಮಾನದ ವೇಳೆಗೆ, ಭಾರತದ ಹಲವು ಭಾಗಗಳು ಬ್ರಿಟಿಷರ ಕೈವಶವಾಗಿದ್ದವು. ಯೂರೋಪಿನಲ್ಲಿ “ಇಂಡಿಯನ್ ಯೆಲ್ಲೋ” ಕುರಿತು ಕುತೂಹಲ ಹೆಚ್ಚಾದಂತೆ, ಬ್ರಿಟಿಷ್ ರಾಯಲ್ ಸೊಸೈಟಿಯ ಸದಸ್ಯರು, ಈ ಬಣ್ಣದ ಕಣಗಳನ್ನು ನಾನಾ ವಿಧವಾದ ಪ್ರಯೋಗಗಳಿಗೆ ಒಳಪಡಿಸಿ, ಅದರ ರಾಸಾಯನಿಕ ಸಂಯೋಜನೆಯನ್ನು ತಿಳಿಯಲು ಯತ್ನಿಸುವುದೂ ಪ್ರಾರಂಭವಾಯಿತು. ಉದಾಹರಣೆಗೆ, ನವೆಂಬರ್ ೧೮೪೪ರ ರಾಯಲ್ ಸೊಸೈಟಿ ಜರ್ನಲ್‌ನಲ್ಲಿ ಜಾನ್ ಸ್ಟೆನ್‌ಹೌಸ್ ಪಿ.ಎಚ್.ಡಿ. ಎಂಬ ವಿಜ್ಞಾನಿ, ತಾನು ಮಾಡಿದ ಅಧ್ಯಯನದ ವಿವರಗಳನ್ನು (“.೩೯೭೫ ಗ್ರಾಂ ಇಂಡಿಯನ್ ಯೆಲ್ಲೋ ಪುಡಿಯನ್ನು ೨೧೨ ಡಿಗ್ರೀ ಫ್ಯಾರನ್‌ಹೈಟ್‌ನಲ್ಲಿ ಒಣಗಿಸಿ ಸೀಸದ ಕ್ರೋಮೇಟ್‌ನೊಂದಿಗೆ ಸುಟ್ಟಾಗ…” ಇತ್ಯಾದಿ, ಇತ್ಯಾದಿ) ಬರೆದು ಕೊನೆಗೊಂದು ಅಭಿಪ್ರಾಯಕ್ಕೆ ಬರುತ್ತಾನೆ: “[ಇಂಡಿಯನ್ ಯೆಲ್ಲೋ ವಿಷಯದಲ್ಲಿ] ನನ್ನ ಅಂತಿಮ ತೀರ್ಮಾನವೆಂದರೆ, ಇದು ಯಾವುದೋ ಒಂದು ಮರ ಅಥವಾ ಗಿಡದ ರಸ. ಈ ರಸಕ್ಕೆ ಮೆಗ್ನೀಸಿಯಮ್ ಅನ್ನು ಸೇರಿಸಿ ಕುದಿಸಿ ಅದನ್ನು ಈ ರೂಪಕ್ಕೆ ತರಲಾಗಿದೆ”.

ಸರ್ ಜೋಸೆಫ್ ಡಾಲ್ಟನ್ ಹುಕರ್, ಹತ್ತೊಂಬತ್ತನೆಯ ಶತಮಾನದ ಅಪ್ರತಿಮ ಸಸ್ಯಶಾಸ್ತ್ರಜ್ಞರಲ್ಲಿ ಒಬ್ಬ. ಚಾರ್ಲ್ಸ್ ಡಾರ್ವಿನ್‌ನ ಪರಮಾಪ್ತರ ಗುಂಪಿಗೆ ಸೇರಿದ್ದವನು. ಭಾರತದಲ್ಲಿ ಸುತ್ತಾಡಿ, ಭಾರತದ ಸಸ್ಯ ಸಂಪತ್ತಿನ ವೈವಿಧ್ಯಗಳ ಕುರಿತು ಮಹತ್ತರ ಪುಸ್ತಕಗಳನ್ನು ಬರೆದವನು. ವಿಶ್ವವಿಖ್ಯಾತ ಕ್ಯೂ ಗಾರ್ಡನ್‌ನ ನಿರ್ದೇಶಕನೂ ಆಗಿದ್ದವನು.

“ಇಂಡಿಯನ್ ಯೆಲ್ಲೋ” ಎಂಬುದು “ಯಾವುದೋ ಒಂದು ಮರ ಅಥವಾ ಗಿಡದ ರಸ” ಎಂದು ನಿರ್ಧಾರವಾದ ಮೇಲೆ, ಅದು ಯಾವ ಗಿಡ ಎಂಬುದನ್ನು ತಿಳಿಯುವ ಕೆಲಸವನ್ನು ಜೋಸೆಫ್ ಹುಕರ್‌ಗೆ ವಹಿಸಲಾಗುತ್ತದೆ. ಅವನು, ಇದರ ವಿಷಯವನ್ನು ತಿಳಿದು ವರದಿ ಮಾಡುವಂತೆ, ಕಲ್ಕತ್ತದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಟಿ.ಎನ್.ಮುಖರ್ಜಿ ಎನ್ನುವರಿಗೆ ಪತ್ರ ಬರೆಯುತ್ತಾನೆ.

ಟಿ.ಎನ್.ಮುಖರ್ಜಿ, ಈ “ಇಂಡಿಯನ್ ಯೆಲ್ಲೋ” ಬಗೆಗೆ ಕಲ್ಕತ್ತದಲ್ಲಿ ವಿಚಾರಿಸುತ್ತಾರೆ. ಅವರಿಗೆ, ಅದು ಅಂದಿನ ಬೆಂಗಾಲದ [ಇಂದಿನ ಬಿಹಾರದ] ಮುಂಗೇರ್ ಪಟ್ಟಣದಲ್ಲಿ ಮಾತ್ರ ತಯಾರಾಗುತ್ತದೆಂಬ ವಿವರ ದೊರೆಯುತ್ತದೆ. ಯಾವ ಗಿಡ/ಮರದ ರಸದಿಂದ ಅದನ್ನು ತಯಾರು ಮಾಡಲಾಗುತ್ತದೆಂದು ತಿಳಿಯಲು ಅವರು ತಾವೇ ಸ್ವತಃ ಮುಂಗೇರಿಗೆ ಹೋಗುತ್ತಾರೆ. ಅನಂತರ, ತಾವು ಕಂಡದ್ದನ್ನು ೧೮೮೩ರಲ್ಲಿ ಪತ್ರ ಮುಖೇನ ತಿಳಿಸುತ್ತಾರೆ. ಆ ಪತ್ರ, ರಾಯಲ್ ಸೊಸೈಟಿಯ ಆ ವರ್ಷದ ನವೆಂಬರ್ ೨೩ರ ಜರ್ನಲಿನಲ್ಲಿ ಪ್ರಕಟವಾಗುತ್ತದೆ.

ಟಿ.ಎನ್.ಮುಖರ್ಜಿ ತಮ್ಮ ಪತ್ರದಲ್ಲಿ ಬರೆಯುವಂತೆ: “ನಾನು [ಇಂಡಿಯನ್ ಯೆಲ್ಲೋ ಪುಡಿಯ ಕುರಿತಾದ] ಸತ್ಯಾಸತ್ಯತೆಗಳನ್ನು ತಿಳಿಯಲು ಮುಂಗೇರಿಗೆ ಹೋದೆ. ಅಲ್ಲಿಗೆ ಹೋದಾಗ, ಮುಂಗೇರಿನ ಮಿರ್ಜ಼ಾಪುರ ಎಂಬ ಜಾಗದಲ್ಲಿನ ಗೋವಾಳಿಗರು ಮಾತ್ರ ಈ ಪುಡಿಯನ್ನು ತಯಾರಿಸುತ್ತಾರೆಂದು ತಿಳಿಯಿತು. ಈ ಗೋವಾಳಿಗರು, ತಮ್ಮ ದನಗಳಿಗೆ ಕೇವಲ ಮಾವಿನ ಎಲೆ ಮತ್ತು ನೀರನ್ನಷ್ಟೇ ಆಹಾರವಾಗಿ ನೀಡುತ್ತಾರೆಂದು ಗೊತ್ತಾಯಿತು. ಕೇವಲ ಮಾವಿನ ಎಲೆಯನ್ನಷ್ಟೇ ಸೇವಿಸುವ ಈ ದನಗಳು ಎರಡು ವರ್ಷಕ್ಕಿಂತ ಹೆಚ್ಚು ಕಾಲ ಬಾಳುವುದಿಲ್ಲವೆಂದು ಬೇರೆ ಗೋವಾಳಿಗರು ಹೇಳಿದರು. ಆದರೆ, ಮಿರ್ಜ಼ಾಪುರದ ಗೋವಾಳಿಗರು ಹೇಳುವಂತೆ, ಅದು ನಿಜವಲ್ಲ. ನಾನೇ, ಆರು-ಏಳು ವರ್ಷಗಳ ದನಗಳು ಮಾವಿನ ಎಲೆಗಳನ್ನು ತಿನ್ನುತ್ತಿರುವುದನ್ನು ಕಂಡೆ. ಈ ದನಗಳು, ಅತ್ಯಂತ ಅನಾರೋಗ್ಯದಿಂದ ಬಳಲುತ್ತಿರುವಂತೆ ಕಂಡವು. ಅದರ ಬಗೆಗೆ ವಿಚಾರಿಸಿದಾಗ, ಆ ಗೋವಾಳಿಗರು, ತಾವು ಆಗೊಮ್ಮೆ-ಈಗೊಮ್ಮೆ ಆ ದನಗಳ ಆರೋಗ್ಯದ ದೃಷ್ಟಿಯಿಂದ ಹುಲ್ಲನ್ನೂ ನೀಡುವುದಾಗಿ ತಿಳಿಸಿದರು. ಆದರೆ, ದನಗಳು ಹುಲ್ಲುತಿಂದರೆ, [ಇಂಡಿಯನ್ ಯೆಲ್ಲೋ] ಪುಡಿಯ ಹಳದಿಯ ಗುಣಮಟ್ಟ ಕುಸಿಯುವುದೆಂದೂ ವಿವರಿಸಿದರು.

ಹಣದಾಸೆಯಿಂದ [ಇಂಡಿಯನ್ ಯೆಲ್ಲೋ] ಪುಡಿಯನ್ನು ತಯಾರಿಸಲೆಂದು ದನಗಳಿಗೆ ಈ ರೀತಿ ಹಿಂಸೆ ನೀಡುವ ಗೋವಾಳಿಗರ ಬಗೆಗೆ ಅವರ ಜಾತಿಯವರಲ್ಲೇ, ಕೆಟ್ಟ ಅಭಿಪ್ರಾಯವಿದೆ. ಹೀಗಾಗಿ, ಮಿರ್ಜ಼ಾಪುರದಲ್ಲೂ ಕೆಲವೇ ಮಂದಿ ಗೋವಾಳಿಗರು ಈ ಪುಡಿಯನ್ನು ತಯಾರಿಸುವ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಮಿರ್ಜ಼ಾಪುರವನ್ನು ಬಿಟ್ಟರೆ, ನನಗೆ ತಿಳಿದಂತೆ, ದೇಶದ ಇನ್ನಾವ ಭಾಗದಲ್ಲೂ ಈ ಪುಡಿಯ ಉತ್ಪಾದನೆ ನಡೆಯುತ್ತಿಲ್ಲ.

ಮಾವಿನ ಎಲೆಗಳನ್ನಷ್ಟೇ ಆಹಾರವಾಗಿಸಿರುವ ದನಗಳ ಗಂಜಲವನ್ನು ಮಣ್ಣಿನ ಮಡಿಕೆಗಳಲ್ಲಿ ಸಂಗ್ರಹಿಸಲಾಗುತ್ತದೆ. ಈ ದನಗಳು ಅತ್ಯಂತ ಅನಾರೋಗ್ಯಕರವಾಗಿದ್ದು, ಗಂಜಲ ಹೊಯ್ಯಲು ಅನುವಾಗುವಂತೆ ಅವುಗಳ ಮೂತ್ರಾಂಗವನ್ನು ಕೈಯಿಂದ ಹೊಸೆಯಲಾಗುತ್ತದೆ. ದನಗಳಿಗೆ ಇದು ಅಭ್ಯಾಸವಾಗಿ, ಈ ರೀತಿ ಹೊಸೆಯದಿದ್ದರೆ, ಅವು ಗಂಜಲವನ್ನು ಹೊರಹಾಕುವುದೇ ನಿಂತಂತಿದೆ.

ಹೀಗೆ ದಿನವಿಡೀ ಮಡಿಕೆಗಳಲ್ಲಿ ಸಂಗ್ರಹಿಸಿದ ಗಂಜಲವನ್ನು ಸಂಜೆಯ ವೇಳೆಗೆ ಕುದಿಸಲಾಗುತ್ತದೆ. ಕುದ್ದು ಗಟ್ಟಿಯಾದ ದ್ರಾವಣವನ್ನು ಒಂದು ತೆಳು ಬಟ್ಟೆಯಲ್ಲಿ ಶೋಧಿಸಲಾಗುತ್ತದೆ. ಹೀಗೆ ಶೋಧಿಸಿದಾಗ ಬಟ್ಟೆಯಲ್ಲಿ ಉಳಿದ ಕಣಗಳನ್ನು ಉಂಡೆಗಟ್ಟಿ, ಇದ್ದಲಿನ ಕೆಂಡದ ಮೇಲೆ ಸುಟ್ಟು ತೇವಾಂಶವನ್ನು ತೆಗೆಯಲಾಗುತ್ತದೆ. ಇದೇ [ಇಂಡಿಯನ್ ಯೆಲ್ಲೋ] ಪುಡಿ.”

ಟಿ.ಎನ್.ಮುಖರ್ಜಿ ಹೇಳುವಂತೆ, ಗೋವಾಳಿಗರು ಹೀಗೆ ಉತ್ಪಾದಿಸುವ ಪುಡಿಯನ್ನು, ಮಾರವಾಡಿ ವರ್ತಕರು ಒಂದು ಪೌಂಡಿಗೆ ಒಂದು ರೂಪಾಯಿ ದರದಲ್ಲಿ ಕೊಂಡು, ಕಲ್ಕತ್ತಾ ಮತ್ತು ಪಟ್ನಾಗಳ ಮೂಲಕ ದೇಶ-ವಿದೇಶಗಳಿಗೆ ರಫ್ತು ಮಾಡುತ್ತಿದ್ದರಂತೆ.

ಕಳೆದ ಕೆಲ ವರ್ಷಗಳಲ್ಲಿ, ಯೂರೋಪ್ ಮತ್ತು ಅಮೆರಿಕದ ಹಲವು ವಿಜ್ಞಾನಿಗಳು, “ಇಂಡಿಯನ್ ಯೆಲ್ಲೋ” ಪುಡಿಯನ್ನು ಹಲವಾರು ಪ್ರಯೋಗಗಳಿಗೆ ಒಳಪಡಿಸಿ, ಅದರಲ್ಲಿ ಗೋಮೂತ್ರ ಮತ್ತು ಮಾವಿನ ಎಲೆಗಳ ಅಂಶವಿರುವುದನ್ನು ಸ್ಪಷ್ಟ ಪಡಿಸಿ ಟಿ.ಎನ್.ಮುಖರ್ಜಿಯವರ ಪತ್ರವನ್ನು ನೂರೈವತ್ತು ವರ್ಷಗಳ ನಂತರ ಮತ್ತಷ್ಟು ಪುಷ್ಠೀಕರಿಸಿದ್ದಾರೆ.

ಇಪ್ಪತ್ತನೆಯ ಶತಮಾನದ ಆರಂಭದ ವೇಳೆಗೆ, “ಇಂಡಿಯನ್ ಯೆಲ್ಲೋ” ಬಣ್ಣದ ಅಂತ್ಯ ಆಯಿತು. ೧೯೦೮ರಲ್ಲಿ, ದನಗಳಿಗೆ ಕೇವಲ ಮಾವಿನ ಎಲೆಯನ್ನಷ್ಟೇ ಉಣ್ಣಿಸುವ ಅಮಾನವೀಯತೆಯನ್ನು ಬ್ರಿಟಿಷ್ ಅಧಿಕಾರಿಗಳು ನಿಷೇಧಿಸಿದರೆಂಬ ಮಾತು ಇದೆಯಾದರೂ, ಅದಕ್ಕೆ ಸೂಕ್ತ ಪುರಾವೆಗಳು ಇದ್ದಂತಿಲ್ಲ.

*****

“ಇಂಡಿಯನ್ ಯೆಲ್ಲೋ”ದ ಇತಿಹಾಸವನ್ನು ತಿಳಿದ ನಂತರ, ನಾನು ಪೇಂಟಿಂಗ್‌ಗಳನ್ನು ನೋಡುವ ಮನಸ್ಥಿತಿಯಲ್ಲಿ ಬದಲಾಗಿದೆ. ಹಳದಿ ಬಣ್ಣವನ್ನು ನೋಡುವಾಗ, ಅದರಲ್ಲೂ, ಪಹಾಡಿ, ರಾಜಾಸ್ಥಾನಿ, ಪೇಂಟಿಂಗುಗಳಲ್ಲಿ, ಗೋಪಾಲನೆಂದೇ ಕರೆಸಿಕೊಳ್ಳುವ ಕೃಷ್ಣನ ಪೀತಾಂಬರದ ಹಳದಿಯನ್ನು ಗಮನಿಸಿದಾಗ, ಮೂರು ದಶಕಗಳ ಹಿಂದೆ ನಾನು ಕಳೆದ ಆ ಮುಂಗೇರಿನ ರಾತ್ರಿ, ನೂರೈವತ್ತು ವರ್ಷಗಳ ಹಿಂದೆ ಟಿ.ಎನ್.ಮುಖರ್ಜಿ ಕಂಡಿರಬಹುದಾದ ಮುಂಗೇರಿನ ಆ ಹಸುಗಳು ನೆನಪಿಗೆ ಬರುತ್ತವೆ.


ನೆನಪುಗಳು, ಕವಿ ರಬೀಂದ್ರರು ಹೇಳುವಂತೆ, “ನನ್ನ ಮನಃಪಟಲದ ಮೇಲೆ ಚಿತ್ರಗಳನ್ನು ರಚಿಸುವವರು ಯಾರೆಂದು ನನಗೆ ತಿಳಿಯದು; ಅದರೆ ಒಂದಂತೂ ದಿಟ, ಅವನು ಚಿತ್ರಗಳನ್ನು ರಚಿಸುತ್ತಲೇ ಇದ್ದಾನೆ. ಆಗುತ್ತಿರುವ ಪ್ರತಿಯೊಂದನ್ನೂ ಯಥಾವತ್ತಾಗಿ ಚಿತ್ರಿಸಲು ಅವನು ಕುಂಚ ಹಿಡಿದಿದ್ದಾನೆ. ತನ್ನ ರುಚಿಗೆ ಬೇಕಾದ್ದನ್ನು ಹಿಡಿದು ಉಳಿದುದನ್ನು ಬಿಡುತ್ತಾನೆ. ಹಲವು ದೊಡ್ಡ ವಿಷಯಗಳನ್ನು ಸಣ್ಣದಾಗಿಸಿ, ಸಣ್ಣವುಗಳನ್ನು ದೊಡ್ಡದು ಮಾಡುತ್ತಾನೆ. ಯಾವುದೇ ಪರಿವೆ ಇಲ್ಲದೆ, ಮುನ್ನೆಲೆಯಲ್ಲಿರುವುದನ್ನು ಹಿನ್ನೆಲೆಗೂ, ಹಿನ್ನೆಲೆಯಲ್ಲಿರುವುದನ್ನು ಮುನ್ನೆಲೆಯಲ್ಲೂ ಅವನು ಚಿತ್ರಿಸಬಲ್ಲ. ಒಟ್ಟಿನಲ್ಲಿ, ಅವನು ಚಿತ್ರ ರಚಿಸುತ್ತಿದ್ದಾನೆ, ಇತಿಹಾಸ ಬರೆಯುತ್ತಿಲ್ಲ.”