ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳದಲ್ಲಿ ಬಲಿಪ ನಾರಾಯಣ ಭಾಗವತರು ನಾಲ್ಕು ವರುಷಗಳ ತಿರುಗಾಟವನ್ನು ಮಾಡಿದರು. ಮುಂದೆ ತಮ್ಮ ಮೇಳ ತಿರುಗಾಟದ ಕೊನೆಯವರೆಗೂ ಶ್ರೀ ಕಟೀಲು ಮೇಳದಲ್ಲೇ ಇದ್ದರು.  ಹಣಕಾಸಿನ ಮುಗ್ಗಟ್ಟು, ಮೇಳ ನಡೆಸಲು ಎದುರಾದ ಕಷ್ಟಗಳನ್ನು ದಾಟುತ್ತ ಬದುಕು ಸಾಗಿದರೂ, ಭಾಗವತಿಕೆಯೆಂಬ ಪ್ರೀತಿ ಅವರಿಂದ ದೂರಾಗಲಿಲ್ಲ. ಕೃಷ್ಣ ಪ್ರಕಾಶ ಉಳಿತ್ತಾಯ ಬರೆಯುವ ‘ಬಲಿಪ ಮಾರ್ಗ’ ಸರಣಿಯಲ್ಲಿ ಹೊಸ ಬರಹ. 

ಅಜ್ಜ ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತ ಕಿರಿಯ ಬಲಿಪರು ಮೇಳದ ತಿರುಗಾಟವನ್ನು ತಮ್ಮ ಎಳೆಯ ಹದಿನೈದು ವರುಷದಲ್ಲೇ ಆರಂಭಮಾಡಿದರು. ಆರಂಭದ ತಿರುಗಾಟವನ್ನು ಪೆರ್ವೋಡಿ ಸುಬ್ರಾಯ ಭಟ್ ಎಂಬವರ ಯಜಮಾನಿಕೆಯಲ್ಲಿ ನಡೆಯುತ್ತಿದ್ದ ಮುಲ್ಕಿ ಮೇಳದೊಂದಿಗೆ ಆರಂಭ ಮಾಡಿದರು. ಅಜ್ಜ ಬಲಿಪ ನಾರಾಯಣ ಭಾಗವತರ ಶಿಷ್ಯರಾಗಿದ್ದ ಈಶ್ವರಪ್ಪಯ್ಯ ಎಂಬವರು ಪ್ರಧಾನ ಭಾಗವತಿಕೆಗೆ ಇಲ್ಲಿದ್ದವರು ಎಂದು ಬಲಿಪರು ಹೇಳುತ್ತಾರೆ. ಇಲ್ಲಿ ಸಂಗೀತಗಾರನಾಗಿ ಕೇವಲ ಎರಡು ತಿಂಗಳುಗಳ ಕಾಲ ಮಾತ್ರವೇ ತಿರುಗಾಟ ಮಾಡಿದ್ದರು. ಬಲಿಪರು ನೆನಪಿಸಿಕೊಳ್ಳುವಂತೆ ಆಗಿನ ಕಾಲದ ಪ್ರಸಿದ್ಧ ಮದ್ದಳೆಗಾರರಾದ ಚೇವಾರು ರಾಮಕೃಷ್ಣ ಕಮ್ತಿಯವರು (ಪ್ರಧಾನ)  ಮದ್ದಳೆಗಾರರಾಗಿದ್ದರು. ಮುಮ್ಮೇಳದಲ್ಲಿ ವೇಷಧಾರಿಗಳಾಗಿ ಪುತ್ತೂರು ನಾರಾಯಣ ಹೆಗಡೆ,
ಕುಂಬಳೆ ತಿಮ್ಮಪ್ಪು, ಮಾನ್ಯ ತಿಮ್ಮಯ್ಯ , ಅಗಲ್ಪಾಡಿ ಮಾಲಿಂಗ,
ಹೊಸಹಿತ್ಲು ಮಹಾಲಿಂಗ ಭಟ್, ಕುಡಾಣ ಗೋಪಾಲಕೃಷ್ಣ ಭಟ್,
ಲೋಕಯ್ಯ ಗಟ್ಟಿ, ಕೇದಗಡಿ ಗುಡ್ಡಪ್ಪ ಗೌಡ, ಸುರಿಕುಮೇರಿ ಗೋವಿಂದ ಭಟ್ .

ಇಲ್ಲಿ ಆಡುತ್ತಿದ್ದುದು ಸಾಮಾನ್ಯವಾಗಿ ಪೌರಾಣಿಕ ಪ್ರಸಂಗಗಳನ್ನೇ. ಕೃಷ್ಣ ಲೀಲೆ ಕಂಸವಧೆ, ಪ್ರಹ್ಲಾದ ಚರಿತ್ರೆ, ಅತಿಕಾಯ ಇಂದ್ರಜಿತು ಮೈರಾವಣ ಕಾಳಗ, ಪಾಂಡವಾಶ್ವಮೇಧ, ವಜ್ರಬಾಹು ಕಾಳಗ, ಮೀನಾಕ್ಷಿ ಕಲ್ಯಾಣ, ಬದ್ರಾಹು ಚರಿತ್ರೆ, ಜಲಂಧರ ಕಾಳಗ, ಅಭಿಮನ್ಯು, ಕರ್ಣಾವಸಾನ ಮತ್ತು ಗದಾಯುದ್ಧ.

ಮುಲ್ಕಿ ಮೇಳ ಬಯಲಾಟದ ಮೇಳವಾಗಿತ್ತು. ಇಡೀ ಆಟಕ್ಕೆ ಹದಿನೈದರಿಂದ ಇಪ್ಪತ್ತು ರೂಪಾಯಿಯ ವೀಳ್ಯ ಸಂಭಾವನೆ. ಬಲಿಪರಿಗೆ ಎರಡಾಣೆ ಮಾತ್ರವೇ. ಬೆಳಗಿನ ಉಪಹಾರ ಒಂದು ಚಾ/ಕಾಫಿ ಮತ್ತು ಒಂದೆರಡು ಇಡ್ಲಿಗೆ ಒಂದಾಣೆ ಬೇಕಾಗುತ್ತಿದ್ದ ಕಾಲವದು. ಹಸಿವಾದಾಗ ಯಾರಾದರೊಬ್ಬ ಕಲಾವಿದರು ಹೋಟೇಲಿಗೆ ಹೋಗುವಾಗ ಅವರ ಹಿಂದಿನಿಂದ ಹೋಗಿ ತಮಗೂ ಉಪಹಾರ ಕೊಡಿಸಲು ಗೋಗರೆಯಬೇಕಾದ ದಯನೀಯ ಸ್ಥಿತಿ ಇತ್ತು. ಆ ಸಮಯದಲ್ಲಿ ಮೇಳದ ಯಜಮಾನರಾದ ಪೆರ್ವೋಡಿ ಸುಬ್ರಾಯ ಭಟ್ಟರ ಪುತ್ರ ರತ್ನಾಕರ ಭಟ್- ಇವರೂ ಚೆಂಡೆ ಮದ್ದಳೆ ನುಡಿಸುತ್ತಿದ್ದರು. ಅವರು ಆಗಾಗ ಬೆಳಗಿನ ಚಾ/ಕಾಪಿ ಕುಡಿಸುತ್ತಿದ್ದರು.  ಆಟದ ಚೌಕಿಯಲ್ಲಿ ರಾತ್ರಿ ಚಹಾ ಅಂತೇನೂ ಇರಲಿಲ್ಲ. ಅದು ಆಗಿನ ಸ್ಥಿತಿ. ಕಲಾವಿದರಿಗೆ ಜೀವನ ಸಾಗುವಿಕೆಯೇ ಮುಖ್ಯವಾಗಿತ್ತು. ಮೇಳ ಅನಿವಾರ್ಯವಾಗಿತ್ತು.

ಆದರೆ ಮೇಳ ಸೇರಿ ಎರಡೇ ತಿಂಗಳಿಗೆ ಮುಲ್ಕಿ ಮೇಳವನ್ನು ತ್ಯಜಿಸಿದ ಬಲಿಪರು ಮನೆಗೆ ಹಿಂದಿರುಗಿದರು.

ಕೂಡ್ಲು ಮೇಳದಲ್ಲಿ ತಿರುಗಾಟ

ಮನೆಗೆ ಬಂದ ಬಲಿಪರಿಗೆ ತಮ್ಮ ಅಜ್ಜನ ಕೃಪೆಯಿಂದ ಅಂದಿನ ಗಜಮೇಳವಾದ ಕೂಡ್ಲು ಮೇಳದಲ್ಲಿ ವ್ಯವಸಾಯ ಮಾಡುವ ಯೋಗವೊದಗಿತು. ಅಂದು ಅಜ್ಜ ಬಲಿಪ ನಾರಾಯಣ ಭಾಗವತರನ್ನು ಕೂಡ್ಲು ಮೇಳಕ್ಕೆ ಕೆಲವು ದಿನಗಳಿಗಾಗಿ ಭಾಗವತಿಕೆಗೆ ಆಹ್ವಾನಿಸಿದ್ದು ಕೂಡ್ಲು ಮೇಳದ ಯಜಮಾನರಾಗಿದ್ದ ಕಾಂದಿಲ ವೆಂಕಟರಾಯರು. ಆಗ ಅಜ್ಜ ಬಲಿಪರು ಮೊಮ್ಮಗ ಬಲಿಪರನ್ನೂ ಜತೆಗೆ ಕರೆದುಕೊಂಡು ಹೋಗಿ ಮೇಳಕ್ಕೆ ಸಂಗೀತಗಾರರಾಗಿ ಸೇರಿಸಿದರು. ಅಂದಿನ ಕೂಡ್ಲು ಮೇಳದಲ್ಲಿ ಆಗಲೇ ಪ್ರಧಾನ ಭಾಗವತಿಕೆಗೆ ಬೊಳಿಂಜೆ ವೆಂಕಪ್ಪ ರೈಗಳು ಇದ್ದರು. ಸಹ ಭಾಗವತರಾಗಿ ವಿದ್ವಾನ್ ದಾಮೋದರ ಮಂಡೆಚ್ಚರೂ ಇದ್ದರು. ಅಂದು ಕೂಡ್ಲು ಮೇಳ ಟೆಂಟಿನ ಮೇಳವಾಗಿತ್ತು-ಬಯಲಾಟ ಮೇಳವಾಗಿರಲಿಲ್ಲ. ಬಲಿಪರ ನೆನಪಿನಂತೆ ಚೆಂಡೆ ಮದ್ದಳೆ ವಾದಕರಾಗಿ ಕಾಸರಗೋಡು ವೆಂಕಟು (ಪ್ರಧಾನ ಮದ್ಲೆಗಾರರಾಗಿ), ಗೋಪಾಲಕೃಷ್ಣ ಕುರೂಪರು (ಸಹ ಮದ್ದಳೆಗಾರರಾಗಿ), ಮುಮ್ಮೇಳ ಕಲಾವಿದರು: ಮಾಣಂಗಾಯ್ ಕೃಷ್ಣ ಭಟ್ಟ, ವೇಣೂರು ವೆಂಕಟರಮಣ ಭಟ್, ಉಪ್ಪಂಗಳ ಅಪ್ಪಯ್ಯ ಮಣಿಯಾಣಿ, ಬಣ್ಣದ ಕುಂಞ ರಾಮ ಮಣಿಯಾಣಿ,
ಮಲ್ಪೆ ಶಂಕರನಾರಾಯಣ ಸಾಮಗರು, ಕುಂಬಳೆ ಸುಂದರ ರಾವ್
ಉದ್ಯಾವರ ಬಸವ (ಸ್ತ್ರೀ ವೇಷಧಾರಿ), ಕಡಬ ಸಾಂತಪ್ಪ
ಕೂಡ್ಲು ಮೇಳದಲ್ಲಿ ಎಲ್ಲಾ ಪೌರಾಣಿಕ ಪ್ರಸಂಗಗಳನ್ನೂ ಮತ್ತು ಆಗೊಮ್ಮೆ ಈಗೊಮ್ಮೆ ಕೋಟಿಚೆನ್ನಯ್ಯ ಪ್ರಸಂಗವನ್ನೂ ಆಡಿಸುತ್ತಿದ್ದರಂತೆ. ಕೂಡ್ಲು ಮೇಳದಲ್ಲಿ ಕೇವಲ ಕೆಲವೇ ತಿಂಗಳುಗಳ ತಿರುಗಾಟ ಮಾಡಿದ ಬಲಿಪರು ಮುಂದೆ ಪ್ರಧಾನ ಭಾಗವತರಾಗಿಯೇ ಮಂಗಳೂರು ಭಗವತಿ ಮೇಳಕ್ಕೆ ಸೇರಿದರು.

ಮಂಗಳೂರು ಭಗವತಿ ಮೇಳ

ಮಾನ್ಯ ತಿಮ್ಮಪ್ಪನವರ ಯಾಜಮಾನ್ಯದ ಮಂಗಳೂರು ಭಗವತಿ ಮೇಳಕ್ಕೆ ಕಿರಿಯ ಬಲಿಪ ನಾರಾಯಣ ಭಾಗವತರು ಸೇರುವಾಗ ಅವರ ವಯಸ್ಸು ಕೇವಲ ಹದಿನಾರೋ ಹದಿನೇಳೋ ಅಷ್ಟೆ. ಪ್ರಧಾನ ಭಾಗವತನಾದರೂ ಸಂಗೀತಗಾರರಾಗಿಯೂ ಆಟವನ್ನು ನಿರ್ವಹಿಸಬೇಕಿತ್ತು. ಈ ಮೇಳದಲ್ಲಿ ಒಂದು ವರುಷದ ತಿರುಗಾಟವನ್ನು ಬಲಿಪರು ಮಾಡಿದರು. ಇಲ್ಲಿ ಪ್ರಧಾನ ಮದ್ದಳೆಗಾರರಾಗಿ ಬಲಿಪರಿಗೆ ಸಾಥಿಯಾಗಿದ್ದವರು ಕುಂಬಳೆ ನರಸಿಂಹ. ಇವರದು ಎತ್ತರದ ಆಳ್ತನ. ಆದರೆ ಮೃದು ಮನಸ್ಸಿನ ಸಾಧು ಜೀವಿ ಎಂದು ಬಲಿಪರು ನೆನಪಿಸಿಕೊಳ್ಳುತ್ತಾರೆ. ವೇಷಧಾರಿಗಳಾಗಿ ಲೋಕಯ್ಯ ಗಟ್ಟಿ, ಸಂಜೀವ ಚೌಟರು, ಪಡ್ರೆ ಚಂದು ಪಾಟಾಳಿ (ಬಣ್ಣದ ವೇಷಧಾರಿ), ಮುತ್ತಪ್ಪ ರೈ ಇದ್ದರು.

ಮಂಗಳೂರು ಭಗವತಿ ಮೇಳದಲ್ಲಿರುವಾಗಲೇ ಬಲಿಪ ನಾರಾಯಣ ಭಾಗವತರು ತಮ್ಮ ಮೊದಲ ಪ್ರಸಂಗವಾದ “ನಾಗ ಕನ್ನಿಕೆ”  ರಚಿಸಿದ್ದರು. ಈ ಪ್ರಸಂಗವನ್ನು ಬಲಿಪರು ರಂಗಸ್ಥಳದಲ್ಲೇ ಕಥೆಯನ್ನು ನಡೆಯನ್ನು  ಗಮನಿಸುತ್ತ ರಚಿಸಿದರಂತೆ. ಇದು ಪ್ರದರ್ಶನಗೊಂಡದ್ದು ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಸನ್ನೀಧಿಯಲ್ಲಿ. ಅಂದಿನ ಆಟಕ್ಕೆ ಸೇರಿದ ಜನಸ್ತೋಮವನ್ನು ಬೆರಗಿನಿಂದ ವಿವರಿಸುತ್ತಾರೆ . ರಂಗಸ್ಥಳಕ್ಕೆ ಹೋಗಲೇ ಜಾಗವಿರದಷ್ಟು ಜನಸಂದಣಿಯಿಂದ ಆಟ ಪ್ರದರ್ಶಿಸಲ್ಪಟ್ಟಿತ್ತು.  ಒಂದು ವರುಷದ ತಿರುಗಾಟ ನಡೆಸಿದ ಬಲಿಪರು ಮುಂದೆ ಪಡ್ರೆ ಜಠಾಧಾರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ತಮ್ಮ ತಂದೆಯವರೇ ಯಜಮಾನರಾಗಿದ್ದ ಮೇಳಕ್ಕೆ ಸೇರಿದರು.

ಹಸಿವಾದಾಗ ಯಾರಾದರೊಬ್ಬ ಕಲಾವಿದರು ಹೋಟೇಲಿಗೆ ಹೋದಾಗ ಅವರ ಹಿಂದಿನಿಂದ ಹೋಗಿ ತಮಗೂ ಉಪಹಾರ ಕೊಡಿಸಲು ಗೋಗರೆಯಬೇಕಾದ ದಯನೀಯ ಸ್ಥಿತಿ ಇತ್ತೆಂದು ಹೇಳುತ್ತಾರೆ ಬಲಿಪರು. ಆ ಸಮಯದಲ್ಲಿ ಮೇಳದ ಯಜಮಾನರಾದ ಪೆರ್ವೋಡಿ ಸುಬ್ರಾಯ ಭಟ್ಟರ ಪುತ್ರ ರತ್ನಾಕರ ಭಟ್- ಇವರೂ ಚೆಂಡೆ ಮದ್ದಳೆ ನುಡಿಸುತ್ತಿದ್ದರು.

ಪಡ್ರೆ ಜಠಾಧಾರಿ ಮೇಳ

ಇಲ್ಲಿ ಕಿರಿಯ ಬಲಿಪ ನಾರಾಯಣ ಭಾಗವತರು ತಮ್ಮ ತಂದೆ ಬಲಿಪ ಮಾಧವ ಭಟ್ ಇವರ ಯಜಮಾನಿಕೆಯಲ್ಲಿ ಮೂರು ವರುಷದ ತಿರುಗಾಟವನ್ನು ಮಾಡಿದರು. ಅವರು ಪ್ರಧಾನ ಭಾಗವತರಾಗಿ,  ಪುತ್ತಿಗೆ ತಿಮ್ಮಪ್ಪ ರೈಯವರು ಸಹ ಭಾಗವತರಾಗಿ ಮೇಳಕ್ಕಿದ್ದರು. ಚೆಂಡೆ ಮದ್ದಳೆವಾದನಕ್ಕೆ ಇರುವೈಲಿನ ಪಾಚಪ್ಪ ಶೆಟ್ಟರು ಮತ್ತು ಓರ್ವ ಹೆಬ್ಬಾರ್ (ಅವರ ಪೂರ್ಣ ಹೆಸರು ಬಲಿಪರಿಗೆ ನೆನಪಿಗೆ ಬರುತ್ತಿರಲಿಲ್ಲ) ಇದ್ದರಂತೆ. ಬಲಿಪರ ನೆನಪಿನಂತೆ ಪಾತ್ರಧಾರಿಗಳಾಗಿ ಇದ್ದವರು:  ಪಡ್ರೆ ಚಂದ ಪಾಟಾಳಿ, ಕುಂಬಳೆ ಶ್ರೀಧರ,ಕುಂಬಳೆ ಕೃಷ್ಣ, ಕೆ.ವಿ.ನಾರಾಯಣ ಶೆಟ್ಟಿ, ಮುತ್ತಪ್ಪ ರೈ, ಪಡ್ರೆ, ಶಿವರಾಮ ಹಾಸ್ಯಗಾರ, ಕುಂಬಳೆ ರಾಮಚಂದ್ರ, ಮದವೂರು ಗಣಪತಿರಾವ್ ಮುಂತಾದವರಿದ್ದರು. ಇದು ಟೆಂಟಿನ ಮೇಳವಾಗಿದ್ದು ಎಲ್ಲಾ ಪೌರಾಣಿಕ ಪ್ರಸಂಗಗಳನ್ನು ಆಡಿ ತೋರಿಸುತ್ತಿದ್ದರು.  ಆದರೆ ದುರದೃಷ್ಟವಶಾತ್ ಮೇಳ ನಡೆಸಲು ಆರ್ಥಿಕ ತೊಡಕು ಎದುರಾಯಿತು. ಕೊನೆಗೆ ಮೂವತ್ತು ಮುಡಿ ಅಕ್ಕಿ ಬೆಳೆಯುವ ಮತ್ತು ಸಾವಿರ ತೆಂಗಿನ ಮರವಿದ್ದ ಆಸ್ತಿಯನ್ನು ಮಾರಿ, ತಂದೆಯವರು ಆರ್ಥಿಕ ಸಂಕಷ್ಟವನ್ನು ದಾಟಿದರು ಎಂದು ಬಲಿಪರು ನೆನಪಿಸಿಕೊಳ್ಳುತ್ತಾರೆ.

ಅವರು ಕೆಲವು ವರುಷ ಮುಲ್ಕಿ, ಕುಂಡಾವು, ಕೂಡ್ಲು ಹೀಗೆ ಮೇಳ ಬದಲಾಯಿಸುತ್ತಿದ್ದರು. ಕೆಲವು ವರುಷ ಯಾವುದೇ ಮೇಳಕ್ಕೆ ಬಲಿಪರು ಹೋಗಲಿಲ್ಲ. ಆ ಸಮಯದಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಕಡತೋಕ ಮಂಜುನಾಥ ಭಾಗವತರು ಅವರನ್ನು ಕರೆಸುತ್ತಿದ್ದರು. ಕಡತೋಕ ಮಂಜುನಾಥ ಭಾಗವತರು ತುಂಬಾ ಆತ್ಮೀಯರಾಗಿದ್ದರು.  ಬಜ್ಪೆಯ ಬಳಿ ಕಡತೋಕರಿಗೆ ‘ಪಾರ್ತಿಸುಬ್ಬ’ ಕವಿಯ ನೆನಪಿನಲ್ಲಿ ಸನ್ಮಾನವಾದಾಗ ತಾನು ಅಲ್ಲಿಗೆ ತೆರಳಿ ,  ಅವರಿಗೆ ತಾನೂ ರೂಪಾಯಿ ಐನೂರರ ಜತೆ ಗೌರವ ಕೊಟ್ಟ ಘಟನೆಯನ್ನು ನೆನಪಿಸುತ್ತಾರೆ. ಆದರೆ ಕಡತೋಕರು ತಮ್ಮ ಪತ್ರಿಕೆಯಲ್ಲಿ ಈ ಘಟನೆಯನ್ನು ನೆನಪಿಸಿಕೊಂಡು ಐನೂರರ ಮೌಲ್ಯವನ್ನು ಎರಡು ಸಾವಿರವೆಂದು ಉಲ್ಲೇಖಿಸಿದ್ದರು.  ಕಡತೋಕ ಮತ್ತು ಬಲಿಪರಿಗಿದ್ದ ಮಿತ್ರತ್ವ ಮತ್ತು ಅಂತಃಕರಣದಲ್ಲಿನ ಪ್ರೀತಿ ವಿಶ್ವಾಸ ದೊಡ್ಡದು.  ಅಲ್ಲಿಂದ ಮುಂದೆ ಕುಂಡಾವು ಮೇಳಕ್ಕೆ ಬಲಿಪರು ಸೇರಿದರು.

(ಯುವಕರಾಗಿದ್ದಾಗ ಬಲಿಪರು ಭಾಗವತರಾಗಿ)

ಕುಂಡಾವು ಮೇಳ

ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳದಲ್ಲಿ ಬಲಿಪ ನಾರಾಯಣ ಭಾಗವತರು ನಾಲ್ಕು ವರುಷಗಳ ತಿರುಗಾಟವನ್ನು ಮಾಡಿದರು. ಇಲ್ಲಿ ಮದ್ದಳೆಗಾರರಾಗಿ ಬಲಿಪರಿಗೆ ಸಹವರ್ತಿಗಳಾಗಿದ್ದವರು ಕೊಂಡಕ್ಕೊಳಿ ರಾಮಕೃಷ್ಣ ಪದಾರ್ತಿ ಮತ್ತು ಪಟ್ಲ ಮಹಾಬಲ ಶೆಟ್ಟಿ (ಪ್ರಸ್ತುತ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ ಶೆಟ್ಟಿ ಇವರ ತಂದೆ). ಮುಮ್ಮೇಳದಲ್ಲಿ ಮಲ್ಪೆ ರಾಮದಾಸ ಸಾಮಗ, ಕಡಂದೇಲು ಪುರುಷೋತ್ತಮ ಭಟ್ ಕರ್ವೋಳು ದೇರಣ್ಣ ಶೆಟ್ಟಿ, ಸೂರಿಕುಮೇರಿ ಗೋವಿಂದ ಭಟ್, ಅರುವ ಕೊರಗಪ್ಪ ಶೆಟ್ಟಿ, ದಯಾನಂದ ರೈ ಮುಂತಾದವರು. ಸಾಮಾನ್ಯವಾಗಿ ಪೌರಾಣಿಕ ಪ್ರಸಂಗಗಳೇ ಇಲ್ಲಿ ಆಡಲ್ಪಡುತ್ತಿತ್ತು.

ಕಟೀಲು ಮೇಳ

ಮುಂದೆ ತಮ್ಮ ಮೇಳ ತಿರುಗಾಟದ ಕೊನೆಯವರೆಗೂ ಶ್ರೀ ಕಟೀಲು ಮೇಳದಲ್ಲೇ ಇದ್ದರು. ಕಲ್ಲಾಡಿ ಕೊರಗ ಶೆಟ್ಟರು ಮತ್ತು ಕಲ್ಲಾಡಿ ವಿಠಲ ಶೆಟ್ಟಿಯವರ ಯಜಮಾನಿಕೆಯಲ್ಲಿ ತಮ್ಮ ಬಾಳಿನ ಹೆಚ್ಚಿನ ತಿರುಗಾಟವನ್ನು ನಡೆಸಿದರು. ಸರಿಸುಮಾರು ತಮ್ಮ ಮಗ ಶಿವಶಂಕರ ಬಲಿಪರು ಹುಟ್ಟಿದ ವರ್ಷ ತಾವು ಕಟೀಲು ಮೇಳ ಸೇರಿದು ಎಂದು  ನೆನಪಿಸಿಕೊಳ್ಳುತ್ತಾರೆ.

ಅಲ್ಲಿ ಅವರಿಗೆ ಮದ್ಲೆಗಾರರಾಗಿದ್ದವರು ನೆಡ್ಲೆ ನರಸಿಂಹ ಭಟ್ಟರು ಮತ್ತು ಪೆರುವಾಯಿ ನಾರಾಯಣ ಭಟ್ಟರು. ಮುಂದೆ ಪೆರುವಾಯಿ ನಾರಾಯಣ ಭಟ್ಟರು ಪೆರುವಾಯಿ ಕೃಷ್ಣ ಭಟ್ಟರೂ ಇದ್ದರೆಂದು ನೆನಪಿಸಿಕೊಳ್ಳುತ್ತಾರೆ. ವೇಷಧಾರಿಗಳಾಗಿ ಬಣ್ಣದ ಕುಟ್ಯಪ್ಪು, ಕುಂಞ ಕಣ್ಣ ಮಣಿಯಾಣಿ, ಸುಬ್ಬ, ಕೇದಗಡಿ ಗುಡ್ಡಪ್ಪ ಗೌಡ, ಕದ್ರಿ ವಿಷ್ಣು, ಕಡಂದೇಲು ಪುರುಷೋತ್ತಮ ಭಟ್ ಇವರೆಲ್ಲ ಇದ್ದರೆನ್ನುತ್ತಾರೆ. ತಮ್ಮ ಎಪ್ಪತ್ತೇಳನೆಯ ವಯಸ್ಸಿನವರೆಗೆ ಕಲಾಮಾತೆಯ ಕೃಪೆಯಿಂದ ವ್ಯವಸಾಯ ಮಾಡಿದೆ ಎಂದು ನಿಟ್ಟುಸಿರಿಡುತ್ತಾರೆ. ಕಲ್ಲಾಡಿ ಕೊರಗ ಶೆಟ್ಟರನ್ನೂ ಮತ್ತು ಕಲ್ಲಾಡಿ ವಿಠಲ ಶೆಟ್ಟರನ್ನು ಗೌರವದಿಂದ ನೆನಪಿಸಿಕೊಳ್ಳುತ್ತಾರೆ ಬಲಿಪರು. ಇರಾ ದೇವಸ್ಥಾನದಲ್ಲಿ ಕಲ್ಲಾಡಿ ವಿಠಲ ಶೆಟ್ಟರು ಸನ್ಮಾನ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ.

ಸೌಕೂರು ಮೇಳ

ಈ ಜತೆಗೆ ತಮ್ಮ ತಿರುಗಾಟವನ್ನು ಸೌಕೂರು ಮೇಳದಲ್ಲೂ ನಡೆಸಿದ್ದುದರ ಬಗ್ಗೆ ಬಲಿಪರು ನೆನಪಿಸಿಕೊಳ್ಳುತ್ತಾರೆ. ಬಡಗು ತಿಟ್ಟಿನ ಮೇಳವಾದ ಸೌಕೂರು ಮೇಳದಲ್ಲಿ ತೆಂಕಿನ ಕೆಲವು ವೇಷಗಳಿದ್ದುದರಿಂದ ಅಲ್ಲಿಯೂ ತಮ್ಮ ತಿರುಗಾಟವನ್ನು ಅಲ್ಪ ಸಮಯ ಮಾಡಿದ್ದರು. ಅಲ್ಲಿ ಅವರಿಗೆ ಜತೆ ಭಾಗವತಿಕೆಗೆ ಪುತ್ತಿಗೆ ತಿಮ್ಮಪ್ಪ ರೈಗಳೂ ಇದ್ದರು.

ಸೌಕೂರು ಮೇಳದಲ್ಲಿ ತಮ್ಮ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರೂ ಕೂಡ ಎರಡು ವರುಷಗಳ ಮೇಳ ವ್ಯವಸಾಯ ಮಾಡಿದ್ದರೆಂಬುದನ್ನು ಬೆಂಗಳೂರು ಆಕಾಶವಾಣಿಯವರು ಬಹುಹಿಂದೆ ಸಂದರ್ಶಿಸಿದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಜ್ಜ ಬಲಿಪರೇ ಹೇಳುವಂತೆ ಬಡಗು ತಿಟ್ಟಿನ ಆಗಿನ ಕಾಲದ ಘನ ಕಲಾವಿದರೊಡನೆ ತಿರುಗಾಟ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಬೆಂಗಳೂರು ಆಕಾಶವಾಣಿ ನಡೆಸಿದ ಕೆ.ಹೆಚ್.ರಂಗನಾಥ್ ಅವರು ಸಂದರ್ಶಿಸಿದ ಈ ಸಂದರ್ಶನ ಯಕ್ಷಗಾನದ ಕುರಿತಾಗಿ ಬಂದ ಅತ್ಯಮೂಲ್ಯ ಸಂದರ್ಶನ. ಇಲ್ಲಿ ಬಲಿಪರು ಭಾಗವತಿಕೆಯ ಕೆಲವಾರು ಮರ್ಮಗಳು, ಪಾರ್ತಿಸುಬ್ಬ ಮಹಾಕವಿಯ ಯಕ್ಷಗಾನ ಪ್ರಸಂಗಗಳ ಹಾಡನ್ನು ಹಲವು ತಾಳಗಳಲ್ಲಿ ಹಾಡುವ ಬಗ್ಗೆ ಹೇಳಿದ್ದಾರೆ. ಇಲ್ಲಿ ಅವರು ಹಾಡಿದ ಹಾಡನ್ನು ಕೇಳಿದಾಗ ( “ ನೀನೆ ಕಲಿಹನುಮ ನಮ್ಮವರೊಳು ನೀನೆ ಕಲಿಹನುಮ……) ಇದನ್ನು ರೂಪಕ, ತ್ರಿವುಡೆ, ಅಷ್ಟ ಮತ್ತು ಪ್ರಾಯಶಃ ಝಂಪೆತಾಳದಲ್ಲಿ ಹಾಡಿ ತೋರಿಸಿದ್ದಾರೆ. ಈ ಹಾಡಲ್ಲಿ ಅವರ ಸಂಗೀತ ಜ್ಞಾನದ  ದರ್ಶನವಾಗುತ್ತದೆ. ಕಂದ ರಚನೆಗಳ ಗಾಯನಕ್ಕೆ ಇರಬೇಕಾದ ಗತಿಯನ್ನೂ ಹಾಡಿ ತೋರಿಸಿದ್ದಂತೂ ಈಗಿನ ಕಾಲಕ್ಕೆ ಅಗತ್ಯವಾಗಿ ಬೇಕಾದ ಸಂಗತಿ.