ಕ್ರಿಕೆಟ್ ನೋಡಿ ಬರುವ ದಾರಿಯಲ್ಲಿ ಶೇನ್ ವಾರ್ನ್, ಅನಿಲ್ ಕುಂಬ್ಳೆ ಚೆಂಡು ತಿರುಗಿಸುವಂತೆ ಟಾರು ರೋಡು ಸೈಡಿಗೆ ಹಾಕಿದ್ದ ಜಲ್ಲಿ ಕಲ್ಲುಗಳನ್ನು ಸ್ಪಿನ್ ಮಾಡಿ ಎಸೆಯುತ್ತ ಊರವರಿಂದ ರಸ್ತೆಯಲ್ಲಿ ಬರುವ ವಾಹನದವರಿಂದ ಬೈಸಿಕೊಳ್ಳುವುದು ರೂಢಿಯಾಗಿತ್ತು. ಟಾರು ಬದಿಯ ಜಲ್ಲಿ ತೆಗೆದು ತೆಗೆದು ಅದು ಸಾಕಷ್ಟು ಬೇಗನೆ ಗುಳಿ ಬೀಳುವುದಕ್ಕೂ ನಾವು ಪರೋಕ್ಷ ಕಾರಣರಾಗಿ ಬಿಡುತ್ತಿದ್ದೆವು. ಆ ದಿನ ಕ್ರಿಕೆಟ್ ನೋಡಿ ಮುಗಿಸಿ ಬರುವ ಹೊತ್ತಿಗೆ ಮನೆಯ ಗೋಡೆಯ ಮೇಲೊಂದು ಹಲ್ಲಿ ಸ್ಲೋ ಮೋಶನ್ನಿನಲ್ಲಿ ಬಾಲವೆತ್ತುತ್ತಿತ್ತು. ನನಗೆ ಕ್ರಿಕೆಟ್ ರೀಪ್ಲೈನಂತೆ ಅದು ತೋರುತ್ತಿತ್ತು.
ಮುನವ್ವರ್ ಜೋಗಿಬೆಟ್ಟು ಬರೆಯುವ ಪರಿಸರ ಕಥನ

 

ಪವಿತ್ರ ಖುರ್ ಆನ್ ನಲ್ಲಿ ಪ್ರವಾದಿ ಇಬ್ರಾಹೀಮರ ಕತೆಯಲ್ಲಿ ಇಬ್ರಾಹೀಮರನ್ನು ಸಹಿಸದ ನಂರೂದ್ ಎಂಬ ದುಷ್ಟ ರಾಜ ಅವರನ್ನು ಅಗ್ನಿಕುಂಡಕ್ಕೆಸೆಯುತ್ತಾನೆ. ಭಯಂಕರ ಅಗ್ನಿ ಜ್ವಾಲೆಯೇಳುತ್ತಿರುತ್ತಿದೆ. ಸ್ವಲ್ಪ ಜೋರಾಗಿ ಉರಿಯಲೆಂದು ಹಲ್ಲಿಗಳು ಬಂದು ಬೆಂಕಿಗೆ ಊದತೊಡಗುತ್ತವೆ ಎಂದು ಮದರಸ ಅಧ್ಯಾಪಕರು ಚರಿತ್ರೆ ಹೇಳುತ್ತಿದ್ದಂತೆ ನಾವು ಚಕಿತರಾಗಿ ಕೇಳಿಸಿಕೊಳ್ಳುತಲಿದ್ದೆವು. ಅಷ್ಟರಲ್ಲೇ “ಯಬೋ, ಹಲ್ಲೀ ಹಲ್ಲೀ..” ಎಂದು ಸಹಪಾಠಿಯೊಬ್ಬ ಜೋರಾಗಿ ಕಿರುಚಿಕೊಳ್ಳತ್ತಾ ಕಿವಿಗೆ ಗಾಳಿ ನುಗ್ಗಿದ ಕರುವಿನಂತೆ ತಕಥೈ ಕುಣಿಯತೊಡಗಿದ. ಹಾಕಿದ ಅಂಗಿಯನ್ನೆಲ್ಲಾ ತೆಗೆದು ಕೊಡವುತ್ತಿದ್ದ. ಅಷ್ಟರಲ್ಲಿ ಅವನ ಮೇಲೆ ಬಿದ್ದ ಹಲ್ಲಿಯು ಎದ್ದೆನೋ ಬಿದ್ದೆನೋ ಎಂದು ಪರಾರಿ ಕಿತ್ತಿತ್ತು. ಅವನ ಅವಸ್ಥೆ ಕಂಡು ನಾವೆಲ್ಲಾ ಬೆಪ್ಪಾಗಿ ನೋಡುತ್ತಿದ್ದೆವು. “ಏನು ಏನಾಯಿತು” ಅಧ್ಯಾಪಕರು ಕೇಳುತ್ತಿದ್ದಂತೆ, “ಆಹಾ ಉರಿತಾ ಇದೆ. ಹಲ್ಲಿ ಮೂತ್ರ ಮಾಡಿದ್ದು” ಅನ್ನುತ್ತಾ ಕೈ ತೋರಿಸಿದ. ಕೈಯಲ್ಲಿ ಆಸಿಡ್ ಬಿದ್ದಂತೆ ಚರ್ಮ ಸಣ್ಣಗೆ ಸುಟ್ಟಿತ್ತು. ಆ ದಿನ ನಿಜವಾಗಿಯೂ ಅವನ ಕೈಗೆ ಬಿದ್ದದ್ದು ಹಲ್ಲಿಯ ಮೂತ್ರವೇ, ಹಲ್ಲಿಯ ಮೂತ್ರದಿಂದ ಚರ್ಮ ಸುಡಲು ಸಾಧ್ಯವೇ, ಎಂಬಿತ್ಯಾದಿ ಪ್ರಶ್ನೆಗಳು ಇಂದಿಗೂ ಉತ್ತರ ನಿಲುಕದೇ ಹಾಗೆಯೇ ಉಳಿದಿವೆ.

ನಮ್ಮ ಮದರಸ ಹೆಂಚು ಹಾಕಿಸಿದ್ದ ಹಳೇ ಕಟ್ಟಡ, ಗೋಡೆ ಹಲ್ಲಿಗಳು ಅವ್ಯಾಹತವಾಗಿದ್ದ ದಿನಗಳವು. ಈಗಲೂ ಅಲ್ಲಿ ಹಲ್ಲಿಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಅದರ ಸುತ್ತಲೂ ಹಣೆದ ಸಾವಿರ ಮೂಢನಂಬಿಕೆಗಳು ಕೂಡ… ಹಲ್ಲಿ ಮೈ ಮೇಲೆ ಬಿದ್ದರೆ ಮರಣದ ಲಕ್ಷಣವೆಂಬ ನಂಬಿಕೆ, ಅವು ಬಿದ್ದ ಭಾಗಕ್ಕೆ ಅಪಾಯ ಕಾದಿದೆ ಇತ್ಯಾದಿ, ಪಟ್ಟಿ ಬೆಳೆಯುತ್ತದೆ..

ಹಲ್ಲಿ ಎಂದರೆ, ನಾವು ಕಾಣುವ ಗೋಡೆಹಲ್ಲಿ ಮಾತ್ರವಲ್ಲ. ಅದರಲ್ಲಿ ನೂರಾರು ಪ್ರಭೇಧಗಳಿರುವ ಪ್ರಾಣಿ. ಹಾವುರಾಣಿ, ಓತಿಕ್ಯಾತ, ಉಡ ಇವುಗಳೂ ಹಲ್ಲಿ ಜಾತಿಗೆ ಸೇರಿದಂತವುಗಳು. ಸಾಮಾನ್ಯವಾಗಿ ಇವುಗಳಲ್ಲಿ ವಿಷವಿರುವುದಿಲ್ಲ. ಆದರೂ ಹಾವಿನಂತೆ ಓಡಾಡುವ ಕಾರಣಕ್ಕಾಗಿ ಜನ ಇದನ್ನು ಹೆಚ್ಚಾಗಿ ಅವುಗಳಷ್ಟೇ ಹೆದರುವುದುಂಟು. ಒಮ್ಮೆ ಯಾರೋ ಹುಡುಗರು ‘ಓತಿ ಕೊಂದ್ರೆ ಪೈಸೆ ಸಿಗುವುದಂತೆ’ ಎಂದು ನಮಗೆ ನಂಬಿಸಿ ಬಿಟ್ಟಿದ್ದರು. ಬೇಸಿಗೆ ರಜೆಯಲ್ಲಿ ಬೇರೆ ಎಂಥ ಕೆಲಸವುಂಟು. ಮರ ಪೊದರು ಗುಡ್ಡೆಗಳಲ್ಲಿ ಓತಿ ಹುಡುಕುತ್ತ ಹೊರಟೆವು. ಕೈಯಲ್ಲೊಂದು ಬಡಿಗೆ, ಓತಿ ಹೊಡೆದು ಕೊಲ್ಲುವುದಕ್ಕಾಗಿ… ಮರದ ಮೇಲೆಲ್ಲಾದರೂ ಇದ್ದರೆ ಕಲ್ಲೆಸೆಯುವುದು. ಆಗ ನಮ್ಮ ಕಣ್ಣೆದುರೇ ನಿಂತು ಉಚ್ವಾಸ ನಿಶ್ವಾಸ ಎಳೆದುಕೊಳ್ಳುವ ಓತಿಯನ್ನು ಕಂಡರಾಯಿತು. ಅದು ನಮ್ಮನ್ನು ನೋಡಿ ರಕ್ತ ಕುಡಿಯುವುದೆಂದು ಷರಾ ಬರೆದು ಬಿಡುವುದು. ಮತ್ತೆ ಗುರಿಯಿಟ್ಟು ಕಲ್ಲು ಬೀಸುವುದು ಮಾಡುತ್ತಲೇ ಇದ್ದೆವು.

ಆ ದಿನಗಳಲ್ಲಿ ನಾವು ಕಾಣದ ಬಣ್ಣದ ಓತಿಯುಂಟೇ…! ಕೆಂಪು, ಹಳದಿ, ಕಪ್ಪು ದಾಡಿಯುಳ್ಳದ್ದು, ಸಣಕಲು, ಬಡವ, ವಗೈರೆ… ನಮ್ಮ ಪರಿಸರದ ಕಾಡು ಜಾಲಾಡಿ ಓತಿಕ್ಯಾತದ ಸಾಮೂಹಿಕ ಮಾರಣಹೋಮ ನಡೆಸಿದ್ದೆವು. ಏನಿಲ್ಲವೆಂದರೂ ಒಂದು ವಾರದಲ್ಲಿ ೨೫ರಷ್ಟು ಓತಿಕ್ಯಾತ ಕೊಂದೆವು. ಹಣ ಸಿಗುವ ಯಾವುದೇ ಲಕ್ಷಣ ಕಾಣಲೇ ಇಲ್ಲ. ಮತ್ತೆ ಅದನ್ನೂ ಕೈ ಬಿಟ್ಟೆವು.

ಆ ಸಂಧರ್ಭದಲ್ಲಿ ನಮ್ಮೂರಿಗೆ ಎಲ್ಲಾ ಮನೆಗೆ ಶೌಚಾಲಯ ಬಂದಿರಲಿಲ್ಲ. ಜನರು ಎಲ್ಲೆಂದರಲ್ಲಿ ಬಹಿರ್ದೆಸೆಗೆ ಕುಳಿತುಕೊಳ್ಳುತ್ತಿದ್ದರು. ಯಾರೋ ದಾರಿಯಲ್ಲಿ ಮಾಡಿದ ಕೋಪ ತೀರಿಸಲು ಓತಿಕ್ಯಾತವೊಂದನ್ನು ಕೊಂದು ಹಾಕಿದ್ದೆವು. ಅದಕ್ಕೆ ಓತಿಕ್ಯಾತ ಕೊಂದುಹಾಕಿದರೆ ಅಲ್ಲಿ ಬಹಿರ್ದೆಸೆ ಮಾಡಿದವರ ಕುಂಡೆಯಲ್ಲಿ ಹುಣ್ಣು ಬರುವುದೆಂದು ಯಾರೋ ಹೇಳಿಕೊಟ್ಟಿದ್ದರು. ನಾವೂ ಹಾಗೆಯೇ ಮಾಡಿದೆವು. ಎರಡು ದಿನದ ತರುವಾಯ ಹುಡುಗನೊಬ್ಬ ‘ಕುರು’ ಎಂದು ಶಾಲೆಗೆ ಬಾರದಿದ್ದಾಗ ಹುಡುಗನೇ ದಾರಿಯಲ್ಲಿ ಗಲೀಜು ಮಾಡಿದ್ದಾನೆಂಬ ತೀರ್ಮಾನಕ್ಕೂ ಬಂದಿದ್ದೆವು.

ಈಗ್ಗೆ ಕರ್ವಾಲೋ ಓದುವಾಗ ಹಾರುವ ಓತಿಯ ಕಥೆ ಓದುತ್ತಿದ್ದಂತೆ ನಾನೂ ರೋಮಾಂಚನಗೊಂಡೆ, ಒಂದೊಮ್ಮೆ ನಾನೂ ಅಂಥದೇ ಹಾರುವ ಓತಿಯನ್ನು ನೋಡಿರಬಹುದೇ. ನೆನಪು ಅಸ್ಪಷ್ಟವಾದರೂ ಒಳಗಿನ ಇಂದ್ರಿಯವೊಂದು “ಖಂಡಿತಾ ನೀನು ನೋಡಿದ್ದೀಯಾ” ಎಂದು ಹೇಳುತ್ತಲೇ ಇತ್ತು. ಮತ್ತು ಅದರ ಫೋಟೋ ನೋಡಿದಂತೆ “ಖಂಡಿತಾ ಹಾರುವ ಓತಿಯನ್ನು ನೋಡಿರುವೆ” ಎನ್ನುವ ತೀರ್ಮಾನಕ್ಕೆ ಬಂದೆ.

ಒಮ್ಮೆ ಅಡುಗೆ ಮನೆಯಲ್ಲಿ ಕೆಲಸ ನಿರತಳಾಗಿದ್ದ ತಂಗಿ ಜೋರಾಗಿ ಬೊಬ್ಬೆ ಹೊಡೆಯಲಾರಂಭಿಸಿದಳು. ಏನಾಯಿತೆಂದು ಕೇಳಿದರೆ “ಹಲ್ಲೀ.. ಹಲ್ಲೀ” ಎಂದಳಷ್ಟೇ. ನೋಡಿದರೆ ಸಣ್ಣ ಹಲ್ಲಿಯೊಂದು ನೆಲದಲ್ಲೇ ಬಿದ್ದು ನಿಶ್ಚಲವಾಗಿತ್ತು. ಸತ್ತು ಹೋಗಿದೆಯೇನೋ ಎಂದು ಪರೀಕ್ಷಿಸುತ್ತಾ ಮೆಲ್ಲನೆ ಮುಟ್ಟಿ ನೋಡಿದೆ. ಚಲನೆಯಿರಲಿಲ್ಲ. ಸಣ್ಣ ಕೈ ಕಾಲುಗಳು, ನವಿರಾದ ಬಿಳಿ ಮೈದೊಗಲು, ಮೈಯೆಲ್ಲಾ ಲೋಳೆ. ಇನ್ನೆರಡು ಬಾರಿ ಮುಟ್ಟಿದಂತೆ ನಿದ್ದೆಯಿಂದೆಚ್ಚರಗೊಂಡಂತೆ ಪೇರಿ ಕಿತ್ತಿತು. ಆ ಹೊತ್ತಿಗೆ ಉಮ್ಮ ಬಂದು ಯಾವುದೋ ಊರಿನ ಕಥೆ ಹೇಳತೊಡಗಿದರು.

ಆ ದಿನಗಳಲ್ಲಿ ನಾವು ಕಾಣದ ಬಣ್ಣದ ಓತಿಯುಂಟೇ…! ಕೆಂಪು, ಹಳದಿ, ಕಪ್ಪು ದಾಡಿಯುಳ್ಳದ್ದು, ಸಣಕಲು, ಬಡವ, ವಗೈರೆ… ನಮ್ಮ ಪರಿಸರದ ಕಾಡು ಜಾಲಾಡಿ ಓತಿಕ್ಯಾತದ ಸಾಮೂಹಿಕ ಮಾರಣಹೋಮ ನಡೆಸಿದ್ದೆವು. ಏನಿಲ್ಲವೆಂದರೂ ಒಂದು ವಾರದಲ್ಲಿ ೨೫ರಷ್ಟು ಓತಿಕ್ಯಾತ ಕೊಂದೆವು. ಹಣ ಸಿಗುವ ಯಾವುದೇ ಲಕ್ಷಣ ಕಾಣಲೇ ಇಲ್ಲ. ಮತ್ತೆ ಅದನ್ನೂ ಕೈ ಬಿಟ್ಟೆವು.

ಆ ಊರಲ್ಲೊಂದು ಮದುವೆ ಕಾರ್ಯಕ್ರಮ. ಊಟ ಮಾಡಿದವರಿಗೆ ವಾಂತಿಯಾಗತೊಡಗಿತು. ಯಾರಿಗೂ ಏನೆಂದೇ ಅರ್ಥವಾಗಲಿಲ್ಲ. ಕೊನೆಗೆ ಯಾರೋ ಸಾರು ಪರೀಕ್ಷಿಸಬೇಕಾದರೆ ಹಲ್ಲಿಯೊಂದು ಸತ್ತು ಬಿದ್ದಿತ್ತಂತೆ. ಅದೇ ವಿಷವಾಗಿ ಪರಿಣಮಿಸಿದ್ದು ಎಂಬುವುದು ಉಮ್ಮನ ಅಂಬೋಣ. ಆದರೆ ಗೋಡೆ ಹಲ್ಲಿಗಳು ವಿಷಕಾರಿಗಳಲ್ಲ. ಅವುಗಳ ಚರ್ಮಕ್ಕೆ ಬ್ಯಾಕ್ಟೀರಿಯಾಗಳು ಅಂಟಿಕೊಳ್ಳುವುದಂತೆ. ಬಹುಶಃ ಅದೇ ಆಹಾರದಲ್ಲಿ ಸೇರಿಕೊಂಡರೆ ವಿಷವಾಗಬಹುದೆಂದು ಇತ್ತೀಚೆಗೆಲ್ಲೋ ಓದಿದ ನೆನಪು.

ಆಗ ಭಾರತ – ಆಸ್ಟ್ರೇಲಿಯಾ ಟೆಸ್ಟ್ ನಡೆಯುತ್ತಿತ್ತು. ಕ್ರಿಕೆಟ್ ನೋಡಿ ಬರುವ ದಾರಿಯಲ್ಲಿ ಶೇನ್ ವಾರ್ನ್, ಅನಿಲ್ ಕುಂಬ್ಳೆ ಚೆಂಡು ತಿರುಗಿಸುವಂತೆ ಟಾರು ರೋಡು ಸೈಡಿಗೆ ಹಾಕಿದ್ದ ಜಲ್ಲಿ ಕಲ್ಲುಗಳನ್ನು ಸ್ಪಿನ್ ಮಾಡಿ ಎಸೆಯುತ್ತ ಊರವರಿಂದ ರಸ್ತೆಯಲ್ಲಿ ಬರುವ ವಾಹನದವರಿಂದ ಬೈಸಿಕೊಳ್ಳುವುದು ರೂಢಿಯಾಗಿತ್ತು. ಟಾರು ಬದಿಯ ಜಲ್ಲಿ ತೆಗೆದು ತೆಗೆದು ಅದು ಸಾಕಷ್ಟು ಬೇಗನೆ ಗುಳಿ ಬೀಳುವುದಕ್ಕೂ ನಾವು ಪರೋಕ್ಷ ಕಾರಣರಾಗಿ ಬಿಡುತ್ತಿದ್ದೆವು. ಆ ದಿನ ಕ್ರಿಕೆಟ್ ನೋಡಿ ಮುಗಿಸಿ ಬರುವ ಹೊತ್ತಿಗೆ ಮನೆಯ ಗೋಡೆಯ ಮೇಲೊಂದು ಹಲ್ಲಿ ಸ್ಲೋ ಮೋಶನ್ನಿನಲ್ಲಿ ಬಾಲವೆತ್ತುತ್ತಿತ್ತು. ನನಗೆ ಕ್ರಿಕೆಟ್ ರೀಪ್ಲೈನಂತೆ ಅದು ತೋರುತ್ತಿತ್ತು. ಇತರ ಅಂಗಗಳ ಚಲನೆ ಇಲ್ಲದೆ ಬಾಲ ಮಾತ್ರ ಬಹಳ ಹೊತ್ತು ಗಾಳಿಯಲ್ಲಾಡಿತು. ಒಂದರ್ಧ ನಿಮಿಷದ ತರುವಾಯ ಟಪಕ್ಕನೆ ಹಿಕ್ಕೆಯೊಂದು ಬಿತ್ತು. ಆಗಲೇ ಅರ್ಥವಾಗಿದ್ದು, ಬಹಿರ್ದೆಸೆಗೆಂದು ಹಲ್ಲಿಗಳು ಪಡುವ ಪಾಡು.

ಬಹುಶಃ ನೀರಿನಂಶ ದೇಹದಲ್ಲಿ ಕಮ್ಮಿಯಿರುವುದರಿಂದಲೇ ಅವುಗಳ ವಿಸರ್ಜನೆ ಅಷ್ಟು ತ್ರಾಸದಾಯಕವಿರಬಹುದು. ಒಮ್ಮೆ ಯಾವುದೋ ಹಳೆಯ ಮರದ ತುಂಡು ಸರಿಸುವಾಗ ನಾಲ್ಕೈದು ಸಣ್ಣ ಗಾತ್ರದ ಮೊಟ್ಟೆಗಳು ಸಿಕ್ಕಿದ್ದವು. ಕಡಲೆಕಾಳಿಗಿಂತ ಸಣ್ಣವು. ಕುತೂಹಲಕ್ಕಾಗಿ ಆ ಬಿಳಿ ಮೊಟ್ಟೆಯೊಂದುನ್ನು ಕೋಲಿನಿಂದ ಅಮುಕಿದೆ. ಮೊಟ್ಟೆ ಒಡೆದು ಲೋಳೆ ತುಂಬಿದ ಬಿಳಿಯ ಹಲ್ಲಿ ಭ್ರೂಣ ಹೊರ ಬಿತ್ತು. ಅವು ಉರುಟಾಗಿ ನಿಶ್ಚಲವಿದ್ದಂತೆ ತೋರಿತು. ಸ್ವಲ್ಪ ಬಿಡಿಸುವುದರೊಳಗಾಗಿ ಜೀವ ಪಡೆದುಕೊಂಡಿತು. ನನಗಂತೂ ಮೊಟ್ಟೆಯಿಂದ ಮರಿಯನ್ನು ಹೊರ ಹಾಕಿದ್ದಕ್ಕೆ ಖುಷಿಯೋ ಖುಷಿ.

ಹಾವುರಾಣಿಗಳೂ ಇದೇ ಥರ. ಗೋಡೆ ಹಲ್ಲಿಗಳು ಗೋಡೆಯಲ್ಲಿನ ಕೀಟಗಳನ್ನು ಹಿಡಿದು ತಿಂದರೆ ಹಾವು ರಾಣಿಗಳು ಪೊದೆಯ ಬದಿಯಲ್ಲಿನ ಹುಳ ಹುಪ್ಪಟೆಗಳನ್ನು ತಿಂದು ಬದುಕುವಂತವುಗಳು. ಓತಿಕ್ಯಾತ ಮರಗಳ ಸಂದು ಗೊಂದುಗಳಲ್ಲಿನ ಸಣ್ಣ ಹಾತೆಗಳನ್ನು ತಿಂದು ಬದುಕುತ್ತದೆ. ಜಗತ್ತಿನಲ್ಲಿ ಐದು ಸಾವಿರದಷ್ಟು ಹಲ್ಲಿ ಪ್ರಬೇಧಗಳಿದ್ದರೂ ವಿಷಕಾರಿ ಮಾತ್ರ ಎರಡೇ ಪ್ರಭೇಧ. ಉಡ ಕೂಡಾ ಹಲ್ಲಿ ಪ್ರಭೇಧದಿಂದ ಹೊರತಲ್ಲ.

ಉಮ್ಮ ಸಣ್ಣವರಿದ್ದಾಗ ಈಚಲಮರದಿಂದ ಕಳ್ಳು ಇಳಿಸುವವರೊಬ್ಬರಿದ್ದರಂತೆ. ಒಮ್ಮೆ ಈಚಲು ಮರದ ಪೊಟರೆಯಲ್ಲಿ ಮೊಟ್ಟೆ ಇಡುತ್ತಿದ್ದ ಉಡವೊಂದನ್ನು ಕಂಡು ಹಿಡಿದು ಅದರ ಮೊಟ್ಟೆಯೊಂದಿಗೆ ಅದನ್ನೂ ಹಿಡಿದು ಮನೆಗೆ ಕೊಂಡೊಯ್ದಿದ್ದರಂತೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಮೊಟ್ಟೆಗಳಿತ್ತಂತೆ. ಉಡಗಳು ಬಹಳ ಬಲಿಷ್ಠ. ಹಿಂದೆ ಕೋಟೆ ಹತ್ತಲು ಅವುಗಳಿಗೆ ಹಗ್ಗ ಕಟ್ಟಿ ಅದಕ್ಕೆ ಭಾರ ಹಾಕುತ್ತಾ ಹತ್ತುತ್ತಿದ್ದರಂತೆ. ಒಮ್ಮೆ ನಮ್ಮ ದೂರದ ಸಂಬಂಧಿಕರೋರ್ವರು ಉಡವನ್ನು ಹಿಡಿಯುವುದಕ್ಕಾಗಿ ತೆಂಗಿನ ಮರ ಹತ್ತಿದ್ದರು. ಹೇಗೆ ಪ್ರಯತ್ನ ಪಟ್ಟು ಎಳೆದರು ಸಿಗದಿದ್ದಾಗ ಅದರ ಬೆರಳನ್ನು ಕತ್ತಿಯಿಂದ ಸೀಳಿ ಹಿಡಿದುಕೊಳ್ಳಲಾಗದಿರುವಂತೆ ಮಾಡಿ ಮೇಲಿನಿಂದ ಕೆಳಗಿಳಿಸಿದ್ದರು.

ಉಡಗಳಿಗೆ ಮೊಟ್ಟೆ ಕದಿಯುವ ಚಾಳಿ ಜಾಸ್ತಿ. ಹಾವು, ಹಕ್ಕಿಗಳ ಮೊಟ್ಟೆ ಎಲ್ಲಾದರೂ ಹುಡುಕಿ ಕುಡಿಯುವುದು ಮಾಡುತ್ತಲೇ ಇರುತ್ತದೆ. ಉಡಗಳ ಮೊಟ್ಟೆ ತಿನ್ನುವುದಕ್ಕೆ ಬಹಳ ರುಚಿಕರವಂತೆ. ಆದರೆ ಅದನ್ನು ಬೇಯಿಸುವಾಗ ಸಿಪ್ಪೆಯನ್ನು ಒಡೆಯದಿದ್ದರೆ ಒಳಗೆ ಬೇಯದು. ಇದು ಹೇಗೆ ತಿಳಿಯಿತೆಂದರೆ ಒಮ್ಮೆ ಯಾರೋ ಮನೆಗೆ ಉಡದ ಮೊಟ್ಟೆ ಕಳುಹಿಸಿದ್ದರು. ಬುತ್ತಿ ತೆರೆದು ನೋಡಿದರೆ ಮೂರು ಮೊಟ್ಟೆಗಳು. ಅದರ ಸಿಪ್ಪೆ ಪ್ಲಾಸ್ಟಿಕ್ ನಷ್ಟು ಗಟ್ಟಿ, ನಮಗೆ ಅದನ್ನು ಒಡೆಯಲು ಆಗದೆ, ಅರ್ದಂಬರ್ಧ ಬೆಂದ ಮೊಟ್ಟೆಯ ಪದಾರ್ಥ ತಿನ್ನಲೂ ಆಗದೆ ಹಾಗೆಯೇ ಎಸೆದಿದ್ದೆವು.

ಹಲ್ಲಿಗಳು ಲೊಚಗುಟ್ಟಿದರೆ ಶಕುನವೆಂಬ ಪ್ರತೀತಿಯಿದೆ. ನನಗೆ ಈಗೀನವರೆಗೆ ಆ ಶಬ್ದ ಕೇಳಿಸಿಕೊಂಡಿರಲಿಲ್ಲ. ಮೊನ್ನೆ ಮೊನ್ನೆ ಸಂಜೆ ಹೊತ್ತು ಮನೆಯಲ್ಲಿ ಕುಳಿತು ಗೋಡೆ ನೋಡುತ್ತಿದ್ದವನಿಗೆ ಕ್ಷೀಣ ವಿಸಿಲಿನ ಸದ್ದೇನೋ ಕೇಳಿಸಿಕೊಂಡಂತಾಯಿತು. ಅಷ್ಟರಲ್ಲೇ ನನಗೆ ಕುತೂಹಲ ಶುರುವಾಯಿತು. “ಈ ಸದ್ದು ಬಹಳ ಅಪರೂಪವಲ್ವೇ” ಅನ್ನುತ್ತಾ ಟೇಬಲ್ ನ ಅಡಿಗೆಲ್ಲಾ ಒಮ್ಮೆ ಕಣ್ಣು ಹಾಯಿಸಿದೆ. ಎಲ್ಲಿ ಏನೂ ಕಾಣಲಿಲ್ಲ, ನಾನು ಹುಡುಕುವುದು ನಿಲ್ಲಿಸಲೂ ಇಲ್ಲ. ಅಷ್ಟೊತ್ತಿಗೆ ಕರೆಂಟು ಟ್ಯೂಬಿನ ಬಳಿ ಸಣ್ಣ ಕೀಟವೊಂದು ರೆಕ್ಕೆ ಬಡಿಯುವುದು ಕೇಳಿತು. ನೋಡಿದರೆ ಹಲ್ಲಿಯೊಂದು ಕೀಟವನ್ನ ಹಿಡಿದು ಹಾಕಿ ಸ್ವಾಹ ಮಾಡುವುದರಲ್ಲಿತ್ತು. ಹಾಗೂ ಹೀಗೂ ಲೊಚಗುಟ್ಟುವುದು ಕೇಳಿಸಿಕೊಂಡೆನೆಲ್ಲಾ ಎಂಬ ಖುಷಿ ನನಗೆ. ಅದು ಹೊಟ್ಟೆಗಿಳಿಸಿಕೊಳ್ಳುವ ದೃಶ್ಯ ನೋಡಿ ಕಣ್ತುಂಬಿಕೊಂಡೆ. ಆದರೆ ಶುಭ ಸುದ್ದಿ ಏನು ಬರಲಿಲ್ಲವಲ್ಲ ಎಂದು ನಾನೂ ಸುಮ್ಮನೇ ಮನಸ್ಸಿನಲ್ಲಂದುಕೊಂಡೆ.

ಅವತ್ತೇನೂ ಹೇಳುವಂತಹ ಶುಭವೇನೂ ಬರಲಿಲ್ಲ. ಬೆಳಗ್ಗೆ ಸೂರ್ಯ ಸಣ್ಣಗೆ ಪಡಸಾಲೆಗೆ ಚಿನ್ನದ ಕೋಲು ಬೆಳಕು ತಂದು ಸುರುವಿದ್ದ. ಬಾಗಿಲ ಚಿಲಕ ತೆರೆದು ಹೊರ ಬಂದೆ. ಹಲ್ಲಿ ಲೊಚಗುಟ್ಟಿದ್ದು ಶುಭವಾಯಿತೋ, ಅಶುಭವಾಯಿತೋ, ಬಾಗಿಲ ಬದಿಯಲ್ಲಿ ಹೊಟ್ಟೆ ಮೇಲಾದ ಹಲ್ಲಿಯ ಶವವೊಂದನ್ನು ಹೊತ್ತು ಕೊಂಡುಇರುವೆಗಳು ಮೆರವಣಿಗೆ ಹೊರಟಿದ್ದವು.