ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ. ಜೊತೆಗಿಲ್ಲಿ ಬುದ್ಧಿವಾದ ಹೇಳುವ ಇರಾದೆ ಇಲ್ಲದಿರುವುದರಿಂದ ಸನ್ನಿವೇಶಗಳು ಹಾಗೂ ಪಾತ್ರಗಳಿಗೆ ಸಹಜ ನಡಿಗೆಯ ಸೌಭಾಗ್ಯ ದಕ್ಕಿದೆ.
ಮಂಜಯ್ಯ ದೇವರಮನಿ ಕಥಾ ಸಂಕಲನ “ದೇವರ ಹೊಲ”ಕ್ಕೆ ಎಸ್. ಗಂಗಾಧರಯ್ಯ ಬರೆದ ಮುನ್ನುಡಿ

ಬರವಣಿಗೆ ಅನ್ನುವುದು ಒಂದು ವಿಸ್ಮಯ. ಕೈ ಕುದುರುವರೆಗೂ ಮೊದ ಮೊದಲು ಬೇರೆಯವರಿಗಾಗಿ, ಹೆಸರಿಗಾಗಿ ಬರೆಯುತ್ತೇವೆ. ಒಮ್ಮೆ ಈ ಹಂತವನ್ನು ಮೀರಿದ ಮೇಲೆ ನಮ್ಮನ್ನು ನಾವು ಸಂತೈಸಿಕೊಳ್ಳುವ ಸಲುವಾಗಿ, ಲೋಕದ ಒಲವು ಚೆಲುವು, ದುಃಖ ದುಮ್ಮಾನಗಳಿಗೆ ದನಿಯಾಗಬಯಸುವ ಸಲುವಾಗಿ ಬರೆಯುತ್ತೇವೆ. ಹೀಗೆ ಒಮ್ಮೆ ಬರೆಯುವ ಬದುಕಿನ ಲಯಕ್ಕೆ ಬಿದ್ದ ಮೇಲೆ ಬರಬರುತ್ತಾ ಬರವಣಿಗೆ ಎಂಬುದು ಒಂದು ಕಲಾತ್ಮಕ ಅಭಿವ್ಯಕ್ತಿಯಾಗಿಬಿಡುತ್ತದೆ. ಹಂಗಾಗಿ ಅದನ್ನು ಕಲಾತ್ಮಕವಾಗಿ ಕಟ್ಟಬೇಕು ಅನ್ನುವ ಅರಿವಿಗೆ ಒಳಗಾಗುತ್ತೇವೆ. ಏಕೆಂದರೆ ನಾವು ಕಟ್ಟಿ ಕೊಡುವ ಕಥೆ ಓದುಗನೊಳಗೆ ಒಂದು ಚಿತ್ರವಾಗಿ,ಆ ಚಿತ್ರ ಓದುಗ ಸ್ಮೃತಿಯನ್ನು ತಾಕುತ್ತಾ ಬೆಳೆಯುತ್ತಾ ಹೋಗುವಂತಿರಬೇಕು. ಹೀಗೆ ನಿಜವಾದ ಕಥೆಯೊಂದು ಕಾಲಾತೀತವಾಗುತ್ತದೆ.

(ಮಂಜಯ್ಯ ದೇವರಮನಿ)

ಲೋಕದ ಸಂಕಟಗಳಿಗೆ ಮುಖಾಮುಖಿಯಾಗುವ ಲೇಖಕನಿಗೆ ಬಹುಮುಖ್ಯವಾಗಿ ಸಾಮಾಜಿಕ ಜವಾಬ್ದಾರಿ ಅನ್ನುವುದು ಇರಬೇಕಾಗುತ್ತದೆ. ಯಾಕೆಂದರೆ ಅದು ಅವನು ತಾನು ಬದುಕುತ್ತಿರುವ ಲೋಕಕ್ಕೆ ತೀರಿಸಬಹುದಾದ ಋಣ ಕೂಡಾ ಆಗಿರುತ್ತದೆ. ಇಲ್ಲಿನ ಅಸಮಾನತೆ,ಅಸ್ಪೃಶ್ಯತೆ, ಹೆಣ್ಣಿನ ಶೋಷಣೆ,ಜಾತಿ ಧರ್ಮಗಳ ಕೇಡುಗಳು ಕಾಡದೇ ಹೋದರೆ,ಅಂದರೆ ಲೋಕದ ನೋವಿಗೆ ತುಡಿಯಲಾರದ, ಸಮಕಾಲೀನ ಸಮಸ್ಯೆಗಳಿಗೆ ಕಿವಿಕೊಡಲಾಗದ ಲೇಖಕನೊಬ್ಬನ ಬರವಣಿಗೆ ಅಪ್ರಮಾಣೀಕವಾಗಿರುವುದಷ್ಟೇ ಅಲ್ಲ, ಆತ್ಮವಂಚಕವೂ ಆಗಿರುತ್ತದೆ. ಜೀವಪರ ತುಡಿತ ನಿಜವಾದ ಲೇಖಕನೊಬ್ಬನ ನಿಜ ಕಾಳಜಿಯಾಗಿರುತ್ತದೆ.

ಅಂತೆಯೇ ಬಾಲ್ಯವಿಲ್ಲದವನು ಲೇಖಕನಾಗಲಾರ. ಆದರೂ ತುಂಬಾ ನೀರಸ ಚಿತ್ರವನ್ನು ಮಾತ್ರ ಕಟ್ಟಿ ಕೊಡಬಲ್ಲ. ಲೋಕದ ಯಾವುದೇ ದೊಡ್ಡ ಲೇಖಕನ ಬಾಲ್ಯವನ್ನು ನೋಡಿದಾಗ ಈ ಮಾತು ಅರಿವಿಗೆ ಬರುತ್ತದೆ. ಹಂಗಂತ ಕೇವಲ ನೆನಪಿಗೇ ಜೋತು ಬೀಳಲಾಗದು. ಆ ನೆನಪುಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡುತ್ತಾ, ಸಮಕಾಲೀನ ಸಮಸ್ಯೆಗಳೊಂದಿಗೆ ಬೆಸೆಯಬೇಕಾಗುತ್ತದೆ. ಅದು ಓದುಗನೊಳಗೊಂದು ಮಾನವೀಯ ಲೋಕವೊಂದು ಅನುರಣಿಸುತ್ತಾ ಹೋಗುತ್ತದೆ.

ಇಲ್ಲಿನ ಈ ಸಂಕಲನದಲ್ಲಿ ಮಂಜಯ್ಯದೇವರಮನಿಯವರು ಹೀಗೆ ತಾನು ಹುಟ್ಟಿ ಬೆಳೆದ ಹಾಗೂ ತನ್ನೊಳಗೆ ಈಗಲೂ ಬೆಚ್ಚಗೆ ಕೂತಿರುವ ಸ್ನೃತಿಗಳನ್ನು ವಾಸ್ತವದ ಸತ್ಯಗಳೊಂದಿಗೆ ಒರೆ ಹಚ್ಚುತ್ತಾ ಓದುಗನನ್ನು ತಮಾಮ್‌ ತನ್ನ ಹಳ್ಳಿಯ ಬದುಕಿಗೆ ಕರೆದೊಯ್ದು, ಅಲ್ಲಿನ ನೋವು ನಲಿವು, ಕೆರೆ ತೊರೆ, ಬಾವಿ ಬಂಕಗಳನ್ನು ಇಣುಕಾಕುವಂತೆ ಮಾಡಿದ್ದಾರೆ. ಅಂತೆಯೇ ಅಲ್ಲಿನ ಮುಗ್ಧತೆ, ಗೌಡಿಕೆ, ಕಾಮ,ಪ್ರೇಮ,ಸಣ್ಣತನ, ಉದಾರತೆ,ಕ್ರೌರ್ಯಗಳನ್ನುಹಾಗೂ ಒಕ್ಕಲುತನವನ್ನು ಕಣ್ಣಿಗೆ ಕಟ್ಟುವಂತೆ ತೋರಾಕುತ್ತಾರೆ. ಹಂಗಾಗಿ ಇಡೀ ಸಂಕಲನದ ಕಥೆಗಳು ಆತ್ಮಕಥೆಯ ಆತ್ಮದಿಂದ ನಡೆದು ಬಂದಿರುವ ತುಣುಕುಗಳಂತೆ ಭಾಸವಾಗುತ್ತವೆ.

ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ. ಜೊತೆಗಿಲ್ಲಿ ಬುದ್ಧಿವಾದ ಹೇಳುವ ಇರಾದೆ ಇಲ್ಲದಿರುವುದರಿಂದ ಸನ್ನಿವೇಶಗಳು ಹಾಗೂ ಪಾತ್ರಗಳಿಗೆ ಸಹಜ ನಡಿಗೆಯ ಸೌಭಾಗ್ಯ ದಕ್ಕಿದೆ.

ಸಂಕಲನದ ಶೀರ್ಷಿಕೆಯ ಕಥೆʻದೇವರ ಹೊಲʼ ಸಾಂಕೇತಿಕವಾದರೂ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಊರ ಗೌಡ ಶಿವರುದ್ರಯ್ಯನ ಹಿಕ್ಮತ್ತು,ಸಂಗಪ್ಪ ಮತ್ತವನ ಕುಟುಂಬದ ಕಡು ಕಷ್ಟ, ಅದನ್ನೇ ಬಂಡವಾಳ ಮಾಡಿಕೊಳ್ಳಲು ಹವಣಿಸುವ ಗೌಡ,ಇದರೊಂದಿಗೆ ಬೆಸಗೊಳ್ಳುವ ಹಳ್ಳಿಯ ರಾಜಕಾರಣ ಹೀಗೆ ಅನಾವರಣಗೊಳ್ಳುವ ಈ ಕಥೆಯಲ್ಲಿ ಒಂದು ರೀತಿಯಲ್ಲಿ ಸಂಗಪ್ಪನ ಹೆಂಡತಿಯ ಧೈರ್ಯʻಬಗ್ಗುವುದಕ್ಕೂ ಒಂದು ಮಿತಿ ಇದೆ. ಅದು ಮೀರಿದರೆ ಬಗ್ಗಿಸ ಬಂದವನಿಗೆ ಅದೇ ತಿರುಗು ಬಾಣವಾಗುತ್ತದೆʼಅನ್ನುವ ಸಂದೇಶವನ್ನು ಹೇಳುತ್ತದೆ. ಇದರ ಜೊತೆ ಜೊತೆಗೇ ಕಥೆಗಾರ ಕಟ್ಟಿಕೊಡುವ ಕಣ್ಮರೆಯಾಗುತ್ತಿರುವ ಹಳ್ಳಿಗಾಡಿನ ಬದುಕು ಮುದಕೊಡುತ್ತದೆ. ಅಕಸ್ಮಾತ್ತಾಗಿ ಸಾಯುವ ʻದ್ಯಾವ್ರ ಎತ್ತುʼವಿನ ಸಾವನ್ನೇ ಕಾರಣವಾಗಿಸಿಕೊಂಡು ʻದೇವರ ಹೊಲʼವನ್ನು ತನ್ನ ಗುಪ್ತ ಆಸೆಯ ಈಡೇರಿಕೆಗಾಗಿ ಕೊಡಿಸಿದ್ದ ಕಾರಣಕ್ಕೆ ಸಂಗಪ್ಪನ ಹೆಂಡತಿ ಶಾರವ್ವನನ್ನು ಬುಟ್ಟಿಗಾಕಿಕೊಳ್ಳಲು ಯತ್ನಿಸುವ ಗೌಡ ಶಿವರುದ್ರಯ್ಯ, ಅದೇ ಶಾರವ್ವನ ರೋಷಕ್ಕೆ ತುತ್ತಾಗಿ ಚಾಟಿ ಏಟಿನಿಂದ ಅವಳಿಂದಲೇ ಸಾಯುವ ದೃಶ್ಯ ಗೌಡಿಕೆ ಕಾಲದ ಹಳ್ಳಿಗೆ ಕರೆದೊಯ್ಯುವುದಲ್ಲದೆ , ಇಂದಿಗೂ ಉಳ್ಳವರು ಬಡವರ ಹೆಣ್ಣು ಮಕ್ಕಳನ್ನು ಹುರಿದು ಮುಕ್ಕುವುದಕ್ಕೆ ಒಂದು ಪ್ರಾತಿನಿಧಿಕ ಸತ್ಯದಂತೆ ರೂಪುಗೊಂಡಿದೆ.

ʻನಾಯಿ ಬುಡ್ಡನ ಪವಾಡʼಅನ್ನುವ ಕಥೆ ಪ್ರಜಾಪ್ರಭುತ್ವದ ಆಶಯದಂತೆ ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಬಡವನೊಬ್ಬಗ್ರಾಮ ಪಂಚಾಯಿತಿ ಅಧ್ಯಕ್ಷನಾಗುವುದು, ಅವನು ತನ್ನ ಕೇರಿಯ ಒಳಿತಿಗಾಗಿ ದುಡಿಯುವುದು, ʻಪ್ರಜಾಪ್ರಭುತ್ವ ಇರಬೇಕಾದ್ದು ಹೀಗೇಯೇ,ʼಅನ್ನುವ ಸಂಗತಿಯನ್ನು ತೋರಾಕುತ್ತದೆ. ಇಲ್ಲಿ ನಡೆಯುವ ಹಳ್ಳಿಯ ರಾಜಕಾರಣ ನಾಡಿನ ಯಾವುದೇ ಹಳ್ಳಿಯಲ್ಲೂ ನಡೆಯಬಹುದಾದ್ದದ್ದು. ಹಂಗಾಗಿ ಈ ಕಥೆಗೊಂದು ಸಾರ್ವತ್ರಿಕತೆ ದಕ್ಕಿದೆ.

ʻಮುತ್ತಿನ ರಾಶಿʼಅನ್ನುವ ಕಥೆ ಕೂಡಾ ಹಳ್ಳಿಯ ರಾಜಕಾರಣ ಹಾಗೂ ಅದರ ಪರಿಣಾಮವನ್ನು ಚಂದವಾಗಿ ಚಿತ್ರಿಸುತ್ತದೆ.ಇಲ್ಲಿ ವೈಯಕ್ತಿಕ ದ್ವೇಷದಿಂದಾಗಿ ಗೌರಕ್ಕನ ಜೋಳದ ರಾಶಿಗೆ ಬೆಂಕಿಯಿಕ್ಕಿ ಸರ್ವ ನಾಶ ಮಾಡುವುದು, ಹಳ್ಳಿಗಳಲ್ಲಿ ಇರುವ ಒಳಿತಿನ ಜೊತೆಗಿನ ಕೇಡನ್ನು ಅನಾವರಣಗೊಳಿಸುತ್ತದೆ. ಕಡೆಗೆ ಮಂತ್ರ ಮಾಂಗಲ್ಯದ ಮೂಲಕ ಆದರ್ಶದ ಮದುವೆ ಮಾಡಿಕೊಳ್ಳುವ ಗುರುಬಸವ ಹಾಗೂ ಇಮ್ಲಿ, ಅಂತೆಯೇ ತನ್ನ ಮಗನೇ ಆ ಕೆಲಸ ಮಾಡಿದ್ದಾನೆಂದು ಗೊತ್ತಾದ ಕೂಡಲೇ ಬಸವಣ್ಣೆಪ್ಪ ಸೀದಾ ಗೌರಕ್ಕನ ಮನೆಗೆ ಹೋಗಿ ಅವಳ ಕಷ್ಟಕ್ಕೆ ಆಗುವುದು ಈಗಲೂ ಹಳ್ಳಿಗಳಲ್ಲಿರುವ ಉದಾರತೆ ಹಾಗೂ ಮಾನವೀಯ ತುಡಿತಕ್ಕೆ ಮಾದರಿಯಂತೆ ಗೋಚರಿಸುತ್ತದೆ. ಇದರ ಜೊತೆಗೆ ಹಳ್ಳಿಯೊಂದರ ದಿನಂಪ್ರತಿ ಬದುಕು ತಂತಾನೇ ಅರಳಿಕೊಳ್ಳುವ ಪರಿ ಸೊಗಸಾಗಿದೆ.

ʻಅಗಸಿ ಹೆಣʼಒಂದು ದುರಂತ ಕಥೆ. ಹೋರಿ ಹಬ್ಬದಲ್ಲಿ ತನ್ನ ಹೋರಿ ಕಾಳಿಂಗನನ್ನು ಸೋಲಿಸಿದ ಅನ್ನುವ ಕಾರಣಕ್ಕೆ ಕುಸ್ಲೆವ್ವಳ ಮಗ ಕಾಂತನನ್ನು ಕೊಲೆ ಮಾಡಿಸುವ ಪುಟ್ಟಾಲಯ್ಯನ ಕ್ರೌರ್ಯ ಗೌಡಿಕೆಯ ಇತಿಹಾಸ ಗೊತ್ತಿರುವವರಿಗೆ ಹೊಸದು ಅನಿಸದಿದ್ದರೂ ಈಗಿನ ಕಾಲಮಾನದಲ್ಲೂ ಹಲವು ಕಾರಣಕ್ಕೆ ಇಂಥ ಕೊಲೆಗಳಿಗೆ ಹಳ್ಳಿಗಳು ಸಾಕ್ಷಿಯಾಗುತ್ತಿವೆ ಅನ್ನುವುದು ಮತ್ತೊಂದು ದುರಂತ. ಇಂಥ ಕೊಲಗಡುಕತನದ ಜೊತೆಗೇ ಬಿಚ್ಚಿಕೊಳ್ಳುವ ಹೋರಿ ಹಬ್ಬದಚಿತ್ರಣ ಸಾಂಸ್ಕೃತಿಕ ವೈಭವಕ್ಕೆ ಕನ್ನಡಿ ಹಿಡಿದಂತಿದೆ.

ಇಂಥದ್ದೇ ಪರಿಸರದಲ್ಲಿ ನಡೆಯುವ ʻಕಾಡ್ಕೋಣ ಭೂತಲಿಂಗʼಅನ್ನುವ ಕಥೆ ಸಾಂಸಾರಿಕ ಏರುಪೇರುಗಳನ್ನುಹಾಗೂ ಅದರಿಂದಾದ ತಾಪತ್ರಯಗಳನ್ನು ತೋರಾಕುತ್ತದೆ. ಇಬ್ಬರು ಹೆಂಡಿರ ಕಾಟದಲ್ಲಿ ಹೈರಾಣಾಗುವ ಭೂತಲಿಂಗ, ಅವನ ಮಗನೇ ಅವನ ಮೇಲೆ ಟ್ರ್ಯಾಕ್ಟರ್‌ ಹತ್ತಿಸಿ ಕೊಲ್ಲಲೆತ್ನಿಸುವುದು,ಆದರೆ ಭೂತಲಿಂಗ ಸಾಯದೆ ಒಂದು ಕಾಲನ್ನು ಕಳೆದುಕೊಳ್ಳುವ ಸಂಗತಿ ಮೈ ಜುಮ್ಮೆನಿಸುತ್ತದೆ.ಕಥೆಯ ಕೊನೆಯ ವಾಕ್ಯʻಆದರೆ ಬೀಜದ ಕೋಣ ಮಾತ್ರ ಹತ್ತದಾಗಿತ್ತುʼಅನ್ನುವುದು ತುಂಬಾ ಸಾಂಕೇತಿಕವಾಗಿ ಧ್ವನಿಸುತ್ತದೆ.

(ಎಸ್. ಗಂಗಾಧರಯ್ಯ)

ಇಂಥ ಕ್ರೌರ್ಯದ ಕೊಪ್ಪೆಯಾಗಿರುವ ಹಳ್ಳಿಗಳಲ್ಲಿ ಮಾನವೀಯತೆಗೇನೂ ಕಡಿಮೆಯಿಲ್ಲಅನ್ನುವುದು ʻಲೆಕ್ಕ ಪುಸ್ತಕʼಅನ್ನುವ ಕಥೆಯಲ್ಲಿ ನಿರೂಪಿತವಾಗಿದೆ. ಊರಿಗೆ ಊರೇ ಬರಗಾಲದ ಬೇಗೆಯಲ್ಲಿ ಬೇಯುತ್ತಿರುವಂಥ ಹೊತ್ತಲ್ಲಿ ತಾನು ಕೂಡಿಟ್ಟ ಕಾಸನ್ನು ಬ್ಯಾಂಕಿನಿಂದ ಬಿಡಿಸಿ ಅದರಿಂದ ತಾನು ಇಟ್ಟುಕೊಂಡಿದ್ದ ಅಂಗಡಿಗೆ ಧಿನಸಿಗಳನ್ನು ತಂದು, ಅದನ್ನು ಸಾಲವಾಗಿ ಕೊಟ್ಟು ತನ್ನೂರಿನ ಹಸಿವನ್ನು ಇಂಗಿಸಲು ಯತ್ನಿಸುವ ಜಗದಣ್ಣ ಹಾಗೂ ತನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ಇಟ್ಟುಕೊಂಡಿದ್ದ ಔಷಧಿಯನ್ನು ಜಗದಣ್ಣನಿಗಾಗಿ ಕೊಟ್ಟು ತಾನು ಸಾಯುವ ಗಂಗಜ್ಜಿ ಅಪರೂಪದ ಪಾತ್ರಗಳುಅನಿಸುತ್ತವೆ.

ಅಣ್ಣ ತಮ್ಮಂದಿರ ವೈಷಮ್ಯದ ಸುತ್ತಾ ನಡೆಯುವ ʻಕಪಲಿ ಬಾನಿʼ,ಭಜನೆ ಭಕ್ತಿಯ ಲೋಕವನ್ನು ಅನಾವರಣಗೊಳಿಸುವ ʻಸುದ್ದಿಗಾರ ಕೆಂಪಣ್ಣʼ,ಹಳ್ಳಿ ಹೆಂಗಸಿನ ಬದುಕಿನ ಕಾರ್ಪಣ್ಯವನ್ನೂ ಹಾಗೂ ಗಂಡನ ಬೇಜವಾಬ್ದಾರಿತನದಿಂದಾಗಿ ಇಡೀ ಕುಟುಂಬವೇ ಕಷ್ಟದಲ್ಲಿ ಮುಳುಗಿರುವʻಕೂಗುʼ,ತೋಟದ ಕಾವಲುಗಾರನೊಬ್ಬನ ಸಾವನ್ನು ಸಂಭ್ರಮಿಸುವ ಪಡ್ಡೆ ಹುಡುಗರ ವಿಕ್ಷಿಪ್ತ ಲೋಕದ ʻಹುಳಿ ಮಾವುʼ,ಮುಂತಾದ ಕಥೆಗಳು ಓದುಗರನ್ನು ಒಂದು ಆಪ್ತ ವಲಯಕ್ಕೆ ಸೆಳೆದುಕೊಂಡು,ತಾವು ಕಂಡುಂಡ ಸಂಗತಿಗಳೇನೋ ಅನ್ನುವಷ್ಟರ ಮಟ್ಟಿಗೆ ಒಳಗಿಳಿದು ಆಲೋಚನೆಗೆ ಹಚ್ಚುತ್ತವೆ.

ಮತ್ತೊಂದು ಮುಖ್ಯ ಸಂಗತಿ ಅಂದರೆ, ಕಥೆಗಳಲ್ಲಿ ಬರುವ ಪಾತ್ರಗಳ ಹೆಸರುಗಳು ಒಂದು ರೀತಿಯಲ್ಲಿ ಆ ಪಾತ್ರಗಳ ಒಟ್ಟು ಚಲವ ವಲನ ಹಾಗೂ ಅವುಗಳ ಮನಸ್ಥಿತಿಗೆ ಪೂರಕಾವಾಗಿವೆ. ಅಂತೆಯೇ ಭಾಷೆ ಹಾಗೂ ನಿರೂಪಣೆಗಳು ಕಥೆಗಳ ಒಟ್ಟು ಬಂಧಕ್ಕೆ ಹಾಗೂ ಅವುಗಳ ಸಾಪಲ್ಯತೆಗೆ ಪೂರಕವಾಗಿ ಒದಗಿ ಬಂದಿವೆ. ಮಂಜಯ್ಯನವರು ಶಿಷ್ಟ ಭಾಷೆಯ ಹಂಗಿಗೆ ಬೀಳದೆ ತನ್ನ ನಾಲಿಗೆ ಮೇಲೆ ನುಡಿಯುವ ಪದಗಳನ್ನೇ ಇಲ್ಲಿ ನುಡಿಸಿರುವುದು ಕಥನ ಕಲೆಯ ಸೊಗಸನ್ನು ಹೆಚ್ಚಿಸಿದೆ. ಹೀಗೆ ಇಲ್ಲಿನ ಎಲ್ಲ ಕಥೆಗಳು ಒಟ್ಟಾರೆಯಾಗಿ ಹಳ್ಳಿಯ ಮನದ ಅಂಗಳದಲ್ಲೇ ಜರುಗುತ್ತಾ, ಕಥೆಗಳ ಬಿಡಿಬಿಡಿ ಶೀರ್ಷಿಕೆಗಳನ್ನು ತೆಗೆದಾಕಿ ಓದಿದರೆ,ಒಂದು ಕಾದಂಬರಿಯಂತೆ ಕಾಣುತ್ತಾ ಗಮನ ಸೆಳೆಯುತ್ತವೆ. ಆದರೂ ಮಂಜಯ್ಯನವರ ಮುಂದಿನ ಬರವಣಿಗೆಗಾಗಿ, ಮತ್ತಷ್ಟು ಕೌಶಲ್ಯಭರಿತ ಕಲಾತ್ಮಕ ಲೋಕ ಅರಳುವ ಪರಿಗಾಗಿ ನಿಸ್ಸಂಶಯವಾಗಿ ಕಾಯಬಹುದು ಅನ್ನುವ ನಂಬಿಕೆ ನನ್ನದು. ಯಾಕೆಂದರೆ ಮಂಜಯ್ಯನವರು ಮೊದಲ ಸಂಕಲನವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ಬರೆಯುವ ಬದುಕಿನಲ್ಲಿ ʻತೃಪ್ತಿʼಗೊಂಡ ಲೇಖಕ ಅಥವಾ ತನ್ನ ಬರವಣಿಗೆಯ ಬಗ್ಗೆಯೇ ಅತಿಯಾದ ಮೋಹ ಇಟ್ಟುಕೊಂಡ ಲೇಖಕ ತನಗೆ ಅರಿವಿಲ್ಲದಂತೆಯೇ ತನ್ನೊಳಗಿನ ಲೇಖಕನನ್ನು ತಾನೇ ಕೈಯ್ಯಾರೆ ಸಾಯಾಕಿರುತ್ತಾನೆ.

(ಕೃತಿ: ದೇವರ ಹೊಲ(ಕಥಾ ಸಂಕಲನ), ಲೇಖಕರು: ಮಂಜಯ್ಯ ದೇವರಮನಿ, ಪ್ರಕಾಶಕರು: ಸುದೀಕ್ಷ ಸಾಹಿತ್ಯ ಪ್ರಕಾಶನ, ಬೆಲೆ: 150/-)