ಒಂದು ಎಳವೆಯಿಂದಲೆ ಅವರು ನಡೆಸಿಕೊಂಡು ಬಂದ ಓದು. ಮಾಸ್ತಿ, ಅಡಿಗ, ಹಾಮಾ ನಾಯಕರಂಥವರ ಮುಂದೆ ನಿಂತು ಮಾತನಾಡಬೇಕಿದ್ದರೆ ಅವರನ್ನು ಚೆನ್ನಾಗಿಯೇ ಓದಿರಬೇಕು. ಓದಿರಲೇಬೇಕು. ಚೊಕ್ಕಾಡಿಯವರು ತಮ್ಮ ತಂದೆಯವರಿಂದ ಬಂದ ‘ಮನೆಮನೆಗೆ ಪುಸ್ತಕ ಮಾರಾಟ’ದ ಉಪ ಉದ್ಯೋಗವನ್ನು ನಿಭಾಯಿಸುತ್ತಿದ್ದುದರಿಂದ ಮಾರಾಟಕ್ಕೆಂದು ತರಿಸುತ್ತಿದ್ದ ಪುಸ್ತಕಗಳನ್ನು ಮೊದಲು ತಾವು ಓದಿ ಬಳಿಕ ಮಿಕ್ಕವರಿಗೆ ಓದಿಸುತ್ತಿದ್ದರು ಎಂದರೆ ಅಚ್ಚರಿ ಪಡಬೇಕಿಲ್ಲ. ಹಳ್ಳಿಯಲ್ಲಿ ಕುಳಿತು ಅವರು ಹೇಗೆ ನವ್ಯರೂ ಆದರು? ಎಂದು ಯಾರಾದರೂ ಕೇಳಿದರೆ ಚೊಕ್ಕಾಡಿಯವರು ಒಂದೊಳ್ಳೆಯ ದೃಷ್ಟಾಂತವನ್ನು ನಮ್ಮ ಮುಂದೆ ಎಸೆಯುತ್ತಾರೆ.
ಹಿರಿಯ ಕವಿ ಸುಬ್ರಾಯ ಚೊಕ್ಕಾಡಿಯವರ ಕುರಿತು ಡಾ. ನಾ. ದಾಮೋದರ ಶೆಟ್ಟಿ ಬರಹ

 

ಸುಬ್ರಾಯ ಚೊಕ್ಕಾಡಿಯವರು ಹೇಳಿ ಕೇಳಿ ಹಳ್ಳಿಮೇಷ್ಟ್ರು, ನಗರದ ಸಂಪರ್ಕ ಅಷ್ಟೇನೂ ಇಟ್ಟುಕೊಳ್ಳದ ವ್ಯಕ್ತಿತ್ವ ಅವರದು. ಸುಳ್ಯದ ಚೊಕ್ಕಾಡಿ ಪರಿಸರದಲ್ಲಿ ಕುಳಿತು ಕರ್ನಾಟಕದ ಮೂಲೆ ಮೂಲೆಗೂ ಇವರು ತಲುಪಿದ್ದು ಹೇಗೆ ಎಂಬುದು ಒಂದು ಚೋದಿಗವೆ. ‘ಕಾಲದೊಂದೊಂದೇ ಹನಿ’ ಎಂಬ ಅವರ ಇತ್ತೀಚೆಗಿನ ಅನುಭವ ಕಥನ ಗ್ರಂಥದಲ್ಲಿ ಅದಕ್ಕೆ ಉತ್ತರ ಲಭಿಸುತ್ತದೆ.

ಒಂದು ಎಳವೆಯಿಂದಲೆ ಅವರು ನಡೆಸಿಕೊಂಡು ಬಂದ ಓದು. ಮಾಸ್ತಿ, ಅಡಿಗ, ಹಾಮಾ ನಾಯಕರಂಥವರ ಮುಂದೆ ನಿಂತು ಮಾತನಾಡಬೇಕಿದ್ದರೆ ಅವರನ್ನು ಚೆನ್ನಾಗಿಯೇ ಓದಿರಬೇಕು. ಓದಿರಲೇಬೇಕು. ಚೊಕ್ಕಾಡಿಯವರು ತಮ್ಮ ತಂದೆಯವರಿಂದ ಬಂದ ‘ಮನೆಮನೆಗೆ ಪುಸ್ತಕ ಮಾರಾಟ’ದ ಉಪ ಉದ್ಯೋಗವನ್ನು ನಿಭಾಯಿಸುತ್ತಿದ್ದುದರಿಂದ ಮಾರಾಟಕ್ಕೆಂದು ತರಿಸುತ್ತಿದ್ದ ಪುಸ್ತಕಗಳನ್ನು ಮೊದಲು ತಾವು ಓದಿ ಬಳಿಕ ಮಿಕ್ಕವರಿಗೆ ಓದಿಸುತ್ತಿದ್ದರು ಎಂದರೆ ಅಚ್ಚರಿ ಪಡಬೇಕಿಲ್ಲ. ಹಳ್ಳಿಯಲ್ಲಿ ಕುಳಿತು ಅವರು ಹೇಗೆ ನವ್ಯರೂ ಆದರು? ಎಂದು ಯಾರಾದರೂ ಕೇಳಿದರೆ ಚೊಕ್ಕಾಡಿಯವರು ಒಂದೊಳ್ಳೆಯ ದೃಷ್ಟಾಂತವನ್ನು ನಮ್ಮ ಮುಂದೆ ಎಸೆಯುತ್ತಾರೆ.

ಮಾರಾಟಕ್ಕೆಂದು ತಂದ ಪುಸ್ತಕದಲ್ಲಿ ಗೋಪಾಲಕೃಷ್ಣ ಅಡಿಗರ ‘ಚೆಂಡೆ ಮದ್ದಳೆ’ಯೂ ಇತ್ತು. ಸ್ವತಃ ಭಾಗವತರೂ ಆಗಿದ್ದ ಚೊಕ್ಕಾಡಿಯವರ ತಂದೆಯವರು ‘ಚೆಂಡೆ ಮದ್ದಳೆ’ ಎಂಬ ಹೆಸರು ಕಂಡಾಗಲೇ ಅದು ಯಕ್ಷಗಾನ ಸಂಬಂಧೀ ಪುಸ್ತಕವೆಂದುಕೊಂಡು ಮಾರಲು ಕೊಟ್ಟರೆ, ಚೊಕ್ಕಾಡಿಯವರು ಅದನ್ನು ಓದಲು ಕುಳಿತರು. ತಂದೆಯವರಿಗೆ ಅದು ನವ್ಯಕವನ ಸಂಕಲನ ಎಂದು ಗೊತ್ತಾಗಿ ಹಿಂದಿರುಗಿಸುವವರಿದ್ದರು. ಆದರೆ ಚೊಕ್ಕಾಡಿಯವರು ಅದನ್ನು ತಮ್ಮ ಭಗವದ್ಗೀತೆ ಮಾಡಿಕೊಂಡರು. ನವ್ಯದ ಪಠನ ಹಾಗೆ ಪ್ರಾರಂಭ.

ಸುಬ್ರಾಯ ಚೊಕ್ಕಾಡಿಯವರು ನಮ್ಮಂಥವರ ಪಾಲಿಗೆ ಸುಚೊ! ಸುಚೊ ಅವರ ‘ಕಾಲದೊಂದೊಂದೇ ಹನಿ’ಯನ್ನು ಅವಲೋಕಿಸುತ್ತಾ ಹೋದಂತೆ ಅವರ ವೈವಿಧ್ಯಮಯ ಮುಖಗಳ ಅನಾವರಣವಾಗುವುದು. ಅವರ ಜನಪ್ರಿಯತೆ ನಮಗೆಲ್ಲ ಸೋಜಿಗವೆ. ‘ಕಾದೊಂದೊಂದೇ ಹನಿ…’ಯ ಬಿಡುಗಡೆಯಂದು ಪ್ರಕಾಶಕಿ ಡಾ. ಆರ್. ಪೂರ್ಣಿಮಾ ಅವರು ಬಿಡುಗಡೆಯ ದಿವಸಕ್ಕೆಂದು ತಂದಿದ್ದ ಪುಸ್ತಕಗಳಷ್ಟೂ ಖರ್ಚಾದದ್ದು ಕಂಡು ‘ಸುಬ್ರಾಯ ಚೊಕ್ಕಾಡಿಯವರಿಗೆ ಇಷ್ಟೊಂದು ಅಭಿಮಾನಿಗಳಿದ್ದಾರೆಯೆ?’ ಎಂದು ಉದ್ಗರಿಸಿದ್ದರು. ಹಳ್ಳಿಹಕ್ಕಿಗೆ ಇಷ್ಟೊಂದು ಜನಪ್ರಿಯತೆ ಹೇಗೆ ಬಂತು? ಎಂಬುದನ್ನು ಒಂಚೂರು ಗಮನಿಸಬೇಕು.

ಮಾರಾಟಕ್ಕೆಂದು ತಂದ ಪುಸ್ತಕದಲ್ಲಿ ಗೋಪಾಲಕೃಷ್ಣ ಅಡಿಗರ ‘ಚೆಂಡೆ ಮದ್ದಳೆ’ಯೂ ಇತ್ತು. ಸ್ವತಃ ಭಾಗವತರೂ ಆಗಿದ್ದ ಚೊಕ್ಕಾಡಿಯವರ ತಂದೆಯವರು ‘ಚೆಂಡೆ ಮದ್ದಳೆ’ ಎಂಬ ಹೆಸರು ಕಂಡಾಗಲೇ ಅದು ಯಕ್ಷಗಾನ ಸಂಬಂಧೀ ಪುಸ್ತಕವೆಂದುಕೊಂಡು ಮಾರಲು ಕೊಟ್ಟರೆ, ಚೊಕ್ಕಾಡಿಯವರು ಅದನ್ನು ಓದಲು ಕುಳಿತರು.

ಅವರದ್ದು ಭಾವಗೀತೆಯಂತೆ ರಮ್ಯವೂ ನವ್ಯಕಾವ್ಯದಂತೆ ಕಠಿಣವೂ ಆದ ವ್ಯಕ್ತಿತ್ವ. ಅವರ ಭಾವಗೀತೆಗಳು ಸಿ. ಅಶ್ವತ್ಥರಂಥವರ ಕೈಗೆ ಸಿಕ್ಕಿ ರಾಜ್ಯಮಟ್ಟ ಮೀರಿ ಪ್ರಸಿದ್ಧಿ ಪಡೆದವು. ಸಿನಿಮಾ ಹಾಡುಗಳ ಹಾಗೆ ಮಂದಿಯ ಬಾಯಲ್ಲಿ ಗುನುಗುನಿತವಾದವು. ಮಾಸ್ತಿ, ಜಿ.ಎಸ್.ಎಸ್., ನಿಸಾರ್ ರಂಥವರ ಸೌಹಾರ್ದ್ರ್ಯ ಅವರಿಗೆ ಈ ದಿಸೆಯಲ್ಲಿ ಅಧಿಕೃತತೆ ನೀಡಿತು.

ಸುಚೊ ಕವನಗಳು ನವ್ಯಸಾಹಿತ್ಯದ ಉಚ್ಛ್ರಾಯದಲ್ಲಿ ಬೆಳಕು ಕಾಣತೊಡಗಿ ಆಧುನಿಕ ವಿದ್ವಜ್ಜನರ ಪಾಲಿಗೆ ಅವರು ‘ಗಮನಿಸಬೇಕಾದ ಕವಿ’ ಎನಿಸಿದರು. ಆಗಲೇ ನವ್ಯದ ಅಡಿಗ, ಲಂಕೇಶ, ಅನಂತಮೂರ್ತಿಯಂಥವರ ಗೆಳೆತನ ಒದಗಿಬಂದದ್ದು.

ಹೀಗೆ ಸುಚೊ ಇಲ್ಲೂ ಸಲ್ಲುವ, ಅಲ್ಲೂ ಸಲ್ಲುವ ಕವಿಯಾದರು. ಅವರ ಜನಪ್ರಿಯತೆಗೆ ಬೇರೆ ನಿದರ್ಶನ ಬೇಕಾಗಿಲ್ಲ.

ಹೀಗೆ ಶಾಲೆಯ ಮುಖ್ಯಸ್ಥ, ಮನೆಯ ಮುಖ್ಯಸ್ಥ, ಸಾಹಿತ್ಯ ಸಂಘದ ಮುಖ್ಯಸ್ಥ ಇತ್ಯಾದಿ ಹಲವು ಬಗೆಯ ಪಾತ್ರಗಳನ್ನು ನಿರ್ವಹಿಸಿದ ಅವರ ಪರಿಪೂರ್ಣ ವ್ಯಕ್ತಿತ್ವದ ಚಿತ್ರಣ ಸಿಗುವುದು ‘ಕಾಲದೊಂದೊಂದೇ ಹನಿ…’ ಅನುಭವ ಕಥನ ಗ್ರಂಥದಲ್ಲಿ.

ಸುಚೊ ಅವರ ಈ ಗ್ರಂಥದಲ್ಲಿ ಅವರ ಬಡತನ ಹಾಗೂ ಪರಿಣಾಮದ ಚಿತ್ರಣವಿದೆ, ಅಧ್ಯಾಪಕರಾಗಿದ್ದಾಗಿನ ಸಂದಿಗ್ಧಗಳ ಚಿತ್ರಣವಿದೆ. ಕೌಟುಂಬಿಕ ಕಟ್ಟುಪಾಡುಗಳ ವಿಕೃತಿಯ ಚಿತ್ರಣವಿದೆ ಆದರೆ ಎಲ್ಲಿಯೂ ಗೋಳಿಲ್ಲ, ಉತ್ಪ್ರೇಕ್ಷೆಯಿಲ್ಲ. ಅವರೊಬ್ಬ ವಾಸ್ತವವಾದಿ ಕವಿ. ಹಳ್ಳಿಯಲ್ಲಿ ಕುಳಿತುಕೊಂಡು ವಿಶಾಲ ಕರ್ನಾಟಕದ ಬಯಲನ್ನು ಆಡುಂಬೊಲವನ್ನಾಗಿಸಿ ಎಲ್ಲಿಯೂ ಸಲ್ಲುವವರಾದ ಅವರ ಬದುಕೊಂದು ಕಾವ್ಯವಿಸ್ಮಯ.