ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು‌. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ‌ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

ಈ ಹಿಂದೆ ಪ್ರಸಾದ್ ನಾಯ್ಕ್ ಅನುವಾದಿಸಿದ ‘ಸಫಾ’ ಬಗ್ಗೆ ಬರೆದಿದ್ದೆ. ಇದು ಅದಕ್ಕಿಂತ ಮುಂಚೆ ಬಂದ ಕೃತಿ ಹಾಗೂ ಅವರ ಮೊದಲ ಕೃತಿ. ನಿಜ ಹೇಳಬೇಕೆಂದರೆ ಪ್ರಸಾದ್ ಪರಿಚಯವಾಗಿದ್ದೇ ಅಂಗೋಲಾ ಕುರಿತಾದ ಬರಹಗಳ ಮೂಲಕ. ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರವಾಸಕಥನಗಳಿಗೆ ಬರವಿಲ್ಲ. ಅನೇಕ ಉತ್ಕೃಷ್ಟ ಪ್ರವಾಸ ಸಾಹಿತ್ಯ ಕನ್ನಡದಲ್ಲಿ ಬಂದಿದೆ. ಅವುಗಳಲ್ಲಿ ಅಮೆರಿಕಾ ಮತ್ತು ಯುರೋಪ್ ಕುರಿತು ಬಂದ ಪ್ರವಾಸಕಥನಗಳಂತೂ ಲೆಕ್ಕವಿಲ್ಲದಷ್ಟಿವೆ. ಹಾಗಂತ ಅವುಗಳನ್ನು ಬದಿಗೆ ಸರಿಸಬೇಕು ಅಂತ ಅಲ್ಲ. ಕೆಲವು ಬಹಳ ಅಪರೂಪದ ಪ್ರವಾಸ ಕಥನಗಳಿವೆ ( ಈ ಹಿಂದೆ ಇದೇ ಅಂಕಣದಲ್ಲಿ ನಾನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ‘ಅಮೆರಿಕಾದಲ್ಲಿ ಗೊರೂರು’ ಬಗ್ಗೆ ಬರೆದಿದ್ದೆ). ಆದರೆ ಆಫ್ರಿಕಾ ಕುರಿತಾಗಿ ಬಂದ ಪ್ರವಾಸಕಥನ ಅಪರೂಪವೇ. ಈಗಲೂ ನನಗೆ ನೆನಪಾಗುವುದು ಎರಡು ಮಾತ್ರ. ಒಂದು ಕೆಂಡಸಂಪಿಗೆಯಲ್ಲಿ ಪ್ಯಾಪಿಲಾನ್ ಕಾವ್ಯನಾಮದಲ್ಲಿ ಬರೆದ ಮಡಗಾಸ್ಕರ್ ಕುರಿತ ಬರಹಗಳು. ಇನ್ನೊಂದು ‘ಅವಧಿ’ಯಲ್ಲಿ ಅಂಕಣವಾಗಿ ಬಂದ ಅಂಗೋಲಾ ಕುರಿತಾದ ಅಂಕಣ ಬರಹಗಳ ಗುಚ್ಛವಾದ ‘ಹಾಯ್ ಅಂಗೋಲಾ’. ಅದರಲ್ಲಿ ಹಾಯ್ ಅಂಗೋಲಾ ಮಾತ್ರ ಪುಸ್ತಕರೂಪದಲ್ಲಿ ಹೊರಗೆ ಬಂದಿದೆ.

ಭೂಗೋಳ ಶಾಸ್ತ್ರದಲ್ಲಿ ಆಸಕ್ತಿಯುಳ್ಳವರಿಗೆ ಬಿಟ್ಟರೆ ಹೆಚ್ಚಿನ ಜನರಿಗೆ ‘ಅಂಗೋಲಾ’ ಹೆಸರು ಅಪರಿಚಿತವೇ. ಉತ್ತರಕನ್ನಡದ ಜನರಾದರೆ ‘ಅಂಕೋಲ’ವಾ? ಎಂದು ಕೇಳಬಹುದು. ತೇಜಸ್ವಿಯವರ ಮಿಲೇನಿಯಂ ಸರಣಿಯಲ್ಲಿ ಅಂಗೋಲಾದ ವಜ್ರದ ಗಣಿಗಳ ಕುರಿತ ಕೆಲ ಬರಹಗಳ ಬಿಟ್ಟರೆ ಕನ್ನಡದಲ್ಲಿ ಬೇರೆ ಬರಹಗಳನ್ನು ಓದಿನ ನೆನಪಿಲ್ಲ. ಹಾಗೆ ಕನ್ನಡಿಗರು ಅಲ್ಲಿ ಹೋಗುವುದು ಬಹಳ ಅಪರೂಪವೇ. ಒಂದು ವೇಳೆ ಜಗತ್ತಿನ ದೇಶಗಳ ಪಟ್ಟಿ ನೋಡುತ್ತಿದ್ದರೆ ಅಕಾರದಿಂದ ಶುರುವಾಗುವ ಕಾರಣ ಅನುಕ್ರಮಣಿಕೆಯಲ್ಲಿ ಮೊದಲು ಬರುವ ಕಾರಣ ಸ್ವಲ್ಪ ಬೇಗ ಗಮನಕ್ಕೆ ಹೋಗುವ ಸಾಧ್ಯತೆಯೂ ಇದೆ.

(ಪ್ರಸಾದ್ ನಾಯ್ಕ್)

ಆಫ್ರಿಕಾದ ದಕ್ಷಿಣ ಮಧ್ಯ ಭಾಗದ ಪಶ್ಚಿಮ ಕರಾವಳಿಯಲ್ಲಿ ಈ ದೇಶ ಇದೆ. ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಆಫ್ರಿಕಾದ ದೊಡ್ಡ ದೇಶಗಳಲ್ಲಿ ಒಂದು. ಒಂದು ಕಾಲದಲ್ಲಿ ಪೋರ್ಚುಗೀಸರ ವಸಾಹತಾಗಿತ್ತು. ಬ್ರೆಝಿಲ್ಲಿನ ನಂತರ ಅತೀ ದೊಡ್ಡ ಪೋರ್ಚುಗಲ್ ವಸಾಹತಾಗಿದ್ದ ದೇಶವಿದು. ಅದಕ್ಕೇ ಪೋರ್ಚುಗೀಸ್ ಈ ದೇಶದ ಅಧಿಕೃತ ಭಾಷೆ‌. ಆ ಕಾರಣಕ್ಕೆ ಇಂಗ್ಲಿಷಿನ ಉಪಯೋಗ ಕಮ್ಮಿಯೇ. ಹೆಚ್ಚಿನ ಆಫ್ರಿಕಾದ ದೇಶಗಳಿಗೆ ಇರುವ ಎಲ್ಲಾ ಸಮಸ್ಯೆಗಳು ಈ ದೇಶಕ್ಕಿವೆ. ಈ ದೇಶಕ್ಕೆ ಪ್ರಸಾದ್ ಪ್ರವಾಸಿಗರಾಗಿ ಹೋದವರಲ್ಲ. ಕೇಂದ್ರ ಸರಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುವ ಅವರಿಗೆ ಉದ್ಯೋಗನಿಮಿತ್ತ ಅಂಗೋಲಾಗೆ ಹೋಗುವ ಅವಕಾಶ ಸಿಕ್ಕಿತ್ತು. ಅದಕ್ಕೆ ಇದೊಂತರಾ ಪ್ರವಾಸ ಕಥನವೂ ಹೌದು ಅಂಗೋಲಾದಲ್ಲಿ ಅವರ ಜೀವನದ ಅನುಭವ ಕಥನವೂ ಹೌದು.

ವಿಶೇಷವೆಂದರೆ ಇದು ಲೇಖಕರಿಗೆ ಮೊದಲ ವಿದೇಶ ಪ್ರಯಾಣ. ಜಲಸಂಪನ್ಮೂಲ ಇಲಾಖೆಯಲ್ಲಿ ಇಂಜಿನಿಯರ್ ಆದ ಇವರ ವಾಸ ದೆಹಲಿಯಲ್ಲಿ. ಬೆಂಗಳೂರಿಗೋ ಇಲ್ಲಾ ದಕ್ಷಿಣ ಭಾರತದ ಬೇರೆ ಯಾವುದಾದರೂ ನಗರಕ್ಕೋ ವರ್ಗಾಯಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ದಿಡೀರೆಂದು ಆಫ್ರಿಕಾದ ಅಂಗೋಲಾ ದೇಶಕ್ಕೆ ಹೋಗುವ ಅವಕಾಶ ಬರುತ್ತದೆ. ಹಿಂದು ಮುಂದು ನೋಡದೆ ಒಪ್ಪಿಕೊಳ್ಳುತ್ತಾರೆ. ಅವರಂತ ಓದಿನ ಬರಹದ ಪ್ರೀತಿಯುಳ್ಳವರು ಪ್ರಯಾಣ ಮಾಡಿದಷ್ಟೂ ಅವರಿಗೂ ಹಬ್ಬ ಅವರ ಅನುಭವ ಕಥನ ಓದುವಾಗ ನಮಗೂ ಹಬ್ಬ.

ಚಿಕ್ಕ ಊರುಗಳ ಮಧ್ಯಮ ವರ್ಗದ ಕುಟುಂಬಗಳಿಂದ ಬಂದ ನಮ್ಮಂತವರಿಗೆ ಮೊದಲ ವಿಮಾನ ಪ್ರಯಾಣದಲ್ಲಿ, ಮೊದಲ ವಿದೇಶ ಪ್ರಯಾಣದ ಸಮಯದಲ್ಲಿ ಒಂದು ಮಗುವಿನಂತಹ‌ ಕುತೂಹಲವಿರುತ್ತದೆ. ನಾನು ಗಮನಿಸಿದಂತೆ ನಮ್ಮಂತವರ ಹೆಚ್ಚಿನ ಅನುಭವವೂ ಒಂದೇ ರೀತಿ. ಆದರೆ ಪ್ರಸಾದ್ ಇಲ್ಲಿ ಅಮೆರಿಕಾಗೋ ಯುರೋಪಿಗೋ ಹೋಗದೇ ಆಫ್ರಿಕಾದ ದೇಶಕ್ಕೆ ಹೋಗುತ್ತಿರುವ ಕಾರಣ ಸಹಜವಾಗಿಯೇ ನಾನಾ ಜನರಿಂದ ನಾನಾ ರೀತಿಯ ಭಯಾನಕ ಸಂಗತಿಗಳನ್ನೇ ಕೇಳುತ್ತಾರೆ. ಅದಕ್ಕೆ ಅವರ ಅನುಭವ ಚೂರು ಭಿನ್ನ ಎನ್ನಬಹುದು. ಕುತೂಹಲ, ಸಂತೋಷ ಉತ್ಸಾಹದೊಟ್ಟಿಗೆ ಗಾಬರಿಯ ಪ್ರಮಾಣವೂ ಚೂರು ಜಾಸ್ತಿಯೇ ಇರುತ್ತದೆ. ಅವರ ಮೊದಲ ಅಂತಾರಾಷ್ಟ್ರೀಯ ಪ್ರಯಾಣದ ವರ್ಣನೆ ಮನಸ್ಸಿಗೆ ಮುದ ನೀಡುತ್ತದೆ.

ಲೇಖಕರು ವಾಸವಾಗಿದ್ದು ಅಂಗೋಲಾದ ರಾಜಧಾನಿಯಾದ ಲುವಾಂಡದಲ್ಲೋ ಅಥವಾ ಇನ್ಯಾವುದೋ ದೊಡ್ಡ ನಗರದಲ್ಲಿಯೋ ಅಲ್ಲ. ಲುವಾಂಡಾದಿಂದ ಮುನ್ನೂರು ಮುನ್ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ವೀಜ್ ಅನ್ನುವ ಚಿಕ್ಕ ಪಟ್ಟಣದಲ್ಲಿ. ವಿಶೇಷವೆಂದರೆ ಪ್ರಸಾದ್ ನೆಲೆನಿಲ್ಲಬೇಕೆಂದು ಬಯಸಿದ್ದು ಕೂಡಾ ಇಂತದೇ ಚಿಕ್ಕ ಊರಿನಲ್ಲೇ ಆಗಿರುತ್ತದೆ. ಒಂದು ದೇಶದ ಸಂಸ್ಕೃತಿ ಅರಿಯಲು ಕಾಸ್ಮೋ ಸಂಸ್ಕೃತಿಯಿರುವ ಮಹಾನಗರಗಳಿಗಿಂತ ಚಿಕ್ಕ ಊರೇ ಉತ್ತಮ. ಅನುಕೂಲತೆಗಳು ಕಮ್ಮಿಯಿದ್ದರೂ ಕೂಡ ಕಲಿಸುವ ಪಾಠ ದೊಡ್ಡದಾಗಿರುತ್ತದೆ.

ಈ ದೇಶಕ್ಕೆ ಪ್ರಸಾದ್ ಪ್ರವಾಸಿಗರಾಗಿ ಹೋದವರಲ್ಲ. ಕೇಂದ್ರ ಸರಕಾರದ ಜಲಸಂಪನ್ಮೂಲ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುವ ಅವರಿಗೆ ಉದ್ಯೋಗನಿಮಿತ್ತ ಅಂಗೋಲಾಗೆ ಹೋಗುವ ಅವಕಾಶ ಸಿಕ್ಕಿತ್ತು. ಅದಕ್ಕೆ ಇದೊಂತರಾ ಪ್ರವಾಸ ಕಥನವೂ ಹೌದು ಅಂಗೋಲಾದಲ್ಲಿ ಅವರ ಜೀವನದ ಅನುಭವ ಕಥನವೂ ಹೌದು.

ಒಂದೊಂದೇ ಅಧ್ಯಾಯ ಸಾಗುತ್ತಿದ್ದಂತೆ ಅವರ ಬರಹದ ಆಳವೂ ಜಾಸ್ತಿಯಾದಂತೆ ಭಾಸವಾಗುತ್ತದೆ. ಮೊದಲು ಅಂಗೋಲಾದ ಜನರ ಸ್ನೇಹಮಯಿ ಸ್ವಭಾವದ ಬಗ್ಗೆ ಹೇಳಿದರೆ, ಆಮೇಲೆ ಅಲ್ಲಿನ ಲಂಚಾವತಾರದ ಬಗ್ಗೆ ಹೇಳಿದ್ದಾರೆ. ಆಮೇಲೆ ಅಲ್ಲಿ ಬಂದ ಚೀನೀಯರ ಬಗ್ಗೆ ಹೀಗೆ ಸಾಗುತ್ತದೆ. ಅಧ್ಯಾಯಗಳು ಸಾಗಿದಂತೆ ನಿರೂಪಣೆಯೂ ಬಿಗಿಯಾಗುತ್ತಾ ಹೋಗುತ್ತದೆ. ನನಗೆ ಈ ಪುಸ್ತಕದಲ್ಲಿ ಇಷ್ಟವಾಗುವ ಇನ್ನೊಂದು ಅಂಶವೇನೆಂದರೆ ಪ್ರತೀ ಅಧ್ಯಾಯವನ್ನು ಗಂಭೀರವಾಗಿ ತೆಗೆದುಕೊಂಡು ಒಂದಷ್ಟು ಸಂಶೋಧನೆ ಮಾಡಿಯೇ ಬರೆದಿದ್ದಾರೆ. ಅದಕ್ಕೆ ಇದು ಮನೋರಂಜನೆಯ ಜೊತೆಗೆ ಒಳ್ಳೆಯ ಮಾಹಿತಿಯನ್ನೂ ನೀಡುತ್ತದೆ.

ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು‌. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ‌ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ. ಅವರ ಶೈಲಿಯ ಕೂದಲಿಗೆ ಕತ್ತರಿಯ ಅವಶ್ಯಕತೆ ಅಷ್ಟಾಗಿ ಬಾರದು. ಬರೀ ಮಶಿನ್ ಸಾಕಾಗುತ್ತದೆ, ಆದರೆ ನಮಗೆ ಅನಿವಾರ್ಯ. ಅದಕ್ಕೇ ಅವರು ಆಧುನಿಕ ಸಲೂನ್ ಹುಡುಕಿಕೊಂಡು ಮುನ್ನೂರು ಕಿಲೋಮೀಟರ್ ದೂರದ ಲುವಾಂಡಾಕ್ಕೆ ಹೋಗಬೇಕಾಗುತ್ತದೆ.

ಹಾಗಂತ ಎಲ್ಲಾ ಅಧ್ಯಾಯಗಳೂ ರಮ್ಯವಾಗಿಲ್ಲ. ಅಲ್ಲಿನ ರಾಜಕೀಯವನ್ನು, ಅಲ್ಲಿನ ವೈದ್ಯಕೀಯ ಅವ್ಯವಸ್ಥೆಯ ಬಗ್ಗೆ ಹೇಳುವಾಗ ಅತ್ಯಂತ ವಸ್ತುನಿಷ್ಟವಾಗಿ ವಿಶ್ಲೇಷಣೆ ಮಾಡುತ್ತಾರೆ. ಅದೇ ರೀತಿ ಡಾ ಜೆರಾಂಡುಬ ಯೊಟೊಬುಂಬೆಟಿ ಅವರಂತಹ ಸೇವಾನಿರತ ದಕ್ಷ ವೈದ್ಯರಂತಹ ಮಾನವೀಯ ಮುಖಗಳ‌ ಮೇಲೂ ಬೆಳಕ ಚೆಲ್ಲುತ್ತಾರೆ.

ಇಲ್ಲಿರುವ ಅಧ್ಯಾಯಗಳಲ್ಲಿ ನನಗೆ ಬಹಳ ಇಷ್ಟವಾದ ಇನ್ನೊಂದು ಅಧ್ಯಾಯವೆಂದರೆ ಅಂಗೋಲಾದ ಮಹಿಳೆಯರ ಬಗೆಗಿನದು. ಅಲ್ಲಿನ ಹೆಚ್ಚಿನ ಗಂಡಸರು ಪೋಲಿಬಿದ್ದು ಮನೆಯ ಹೊಣೆಗಾರಿಕೆ ತೆಗೆದುಕೊಳ್ಳದೆ ಉಂಡಾಡಿಗುಂಡರಾದರೆ ಹೆಂಗಸರು ಕಷ್ಟ ಸಹಿಷ್ಣುಗಳಾಗಿ ಸಂಸಾರವನ್ನು ನಿಭಾಯಿಸುತ್ತಾರೆ. ಅದನ್ನು ನೋಡಿ ಒಕ್ಕೂಟ ಸರಕಾರದ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ, ಸಮಾಜಶಾಸ್ತ್ರದ ಅದರಲ್ಲೂ ಆಫ್ರಿಕಾದ ಮಹಿಳೆಯರ ಬಗ್ಗೆ ಆಳವಾದ ಅಧ್ಯಯನ ಮಾಡಿ ಡಾ. ಗೌರ್ ಅವರು “ಈ ಮಹಿಳೆಯರಿಗಿರುವ ಒಂದು ಪ್ರತಿಶತ ಬದ್ಧತೆಯಾದರೂ ಇಲ್ಲಿನ ಪುರಿಷರಿಗಿದ್ದಿದ್ದರೆ ಅದೆಷ್ಟು ಚನ್ನಾಗಿರುತ್ತಿತ್ತು” ಅಂದಿದ್ದಾರೆ. ಅವರ ಸಹವರ್ತಿಯಾಗಿ ಪ್ರಸಾದ್ ಕೂಡ ಅನೇಕ ಉತ್ತಮ‌ ಅಂಶಗಳ‌ನ್ನು ನಮ್ಮ‌ ಮುಂದಿಡುತ್ತಾರೆ.

ಹೆಚ್ಚಿನ ಭಾಗಗಳನ್ನು ನಾನು ಅಂಕಣದಲ್ಲೇ ಓದಿದ್ದರೂ ಪುಸ್ತಕವಾಗಿ ಓದುವ ಖುಷಿಯೇ ಬೇರೆ. ಈ ಪುಸ್ತಕ ಬಿಡುಗಡೆಯಾದಾಗ ನಾನು ಅಮೆರಿಕಾದಲ್ಲಿದ್ದೆ. ಮನೆಗೆ ಪ್ರತಿ ತರಿಸಿಕೊಂಡಾಗ ಮನೆಯವರು ಓದಿ ಮನಸಾರೆ ಮೆಚ್ಚಿದ್ದರು. ಪುಸ್ತಕದ ಪ್ರತಿ ಅಧ್ಯಾಯವೂ ಬಹಳ ಉತ್ತಮವಾಗಿದೆ ಮತ್ತು ಬೇರೆ ಬೇರೆ ವಿಷಯಗಳ‌ ಕಡೆ ಬೆಳಕು ಚೆಲ್ಲುತ್ತದೆ. ಇದು ಇವರ ಮೊದಲ ಪುಸ್ತಕವೇ ಎಂದ ಹೇಳಿದಾಗ “ಹೌದೇ..” ಎಂದು ಆಶ್ಚರ್ಯಪಡುವಷ್ಟು ಚನ್ನಾಗಿದೆ. ಈ ಪುಸ್ತಕಕ್ಕೆ ಅನೇಕ ಪ್ರಶಸ್ತಿಗಳು ಬಂದಿವೆ, ಪ್ರಸಾದ್‌ಗೆ ಇದು ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ. ಮತ್ತೆ ಈ ಪುಸ್ತಕದ ಬಗ್ಗೆ ಬಂದಿರುವ ಎಲ್ಲಾ ಒಳ್ಳೆ ಮಾತುಗಳಿಗೂ ಈ ಪುಸ್ತಕ ನೂರಕ್ಕೆ ನೂರರಷ್ಟು ಅರ್ಹವಾಗಿದೆ. ಹೆಚ್ಚಿನವರು ಇಷ್ಟಪಟ್ಟು ಓದುವಂತಹ ಸರಳವಾದ ಮತ್ತು ಸುಲಲಿತವಾದ ಭಾಷೆಯಲ್ಲಿದೆ. ನನಗಂತೂ ಕೊನೆಯಲ್ಲಿ ಇವರು ಇಷ್ಟು ಬೇಗ ಭಾರತಕ್ಕೆ ಹಿಂದಿರುಗಿ ಬರಬಾರದಿತ್ತು, ಇನ್ನಷ್ಟು ಕಾಲ ಅಲ್ಲಿ ವಾಸವಾಗಿದ್ದು ಅಂಗೋಲದ ಕುರಿತು ಇನ್ನೂ ಹೆಚ್ಚಿನ ಕೊಡುತ್ತಿರಬೇಕು ಎಂದು ಅನ್ನಿಸಿತು. ಇದು ಖಂಡಿತ ನಿಮ್ಮನ್ನು ನಿರಾಸೆಗೊಳಿಸದು. ದಯವಿಟ್ಟು ಕೊಂಡು ಓದಿ.