ಎಲ್ಲ ಹಕ್ಕಿಗಳಂತೆಯೇ ನನ್ನ ಕಣ್ಣಿಗೆ ಕಾಣಿಸಿದ ಆ ಹಕ್ಕಿ ವಿಶೇಷವಾದುದು ಎಂದು ನನಗೇನೂ ಗೊತ್ತಿರಲಿಲ್ಲ. ಜೀವನದಲ್ಲಿ ಎಷ್ಟೋ ಬಾರಿ ಹೀಗೆಯೇ ಆಗುತ್ತದೆ. ನಮ್ಮೊಡನೆ ಇರುವ ಯಾವುದೋ ವಿಷಯದ ವಿಶೇಷತೆ, ಇನ್ಯಾರೋ ಹೇಳಿದಾಗಲೇ ಅರಿವಾಗುವುದು. ಹಕ್ಕಿಗಳೋ ಸದಾ ವಿಶೇಷ ಕತೆಗಳನ್ನು ತಿಳಿದಿರುತ್ತವೆ. ಯಾಕೆಂದರೆ ಪ್ರವಾಸ ಎಂಬುದು ಅವುಗಳಿಗೆ ವಿಶೇಷವೇ ಅಲ್ಲ. ಆದರೆ ಮನುಷ್ಯರು ಮಾತ್ರ ಪ್ರವಾಸ ಹೋಗಬೇಕಾದರೆ ಎಷ್ಟೆಲ್ಲ ತಯಾರಿ ಮಾಡಿಕೊಳ್ಳಬೇಕು.
ಮನಸ್ಸನ್ನು ಮುದಗೊಳಿಸುವ ಪ್ರವಾಸಗಳ ಕುರಿತು, ಪ್ರವಾಸಿಗರ ಸ್ವಭಾವದ ಕುರಿತು ಬರೆದಿದ್ದಾರೆ ರೂಪಶ್ರೀ ಕಲ್ಲಿಗನೂರು.

 

ಕಳೆದ ಭಾನುವಾರ ಮನೆಯವರೆಲ್ಲ ಸೇರಿ ತಲಕಾವೇರಿಗೆ ಹೋಗುವ ಯೋಜನೆಯನ್ನು ಹಾಕಿಕೊಂಡಿದ್ದೆವು. ಹಾಗಾಗಿ ಎಂದಿಗಿಂತ ಚೂರು ಬೇಗನೇ ಎದ್ದು ಮನೆಯ ಅಂಗಳ ಗುಡಿಸಲು ಹೊರಗೆ ಬಂದರೆ, ಸುತ್ತಮುತ್ತೆಲ್ಲ ಮಂಜೋ ಮಂಜು. ಪಟಕ್ಕನೇ ಜಿ.ಪಿ. ರಾಜರತ್ನಂ ಬರೆದ “ಮಡಿಕೇರಿ ಮೇಲ್‌ ಮಂಜು” ಹಾಡು ನೆನಪಾಗಿಬಿಡ್ತು. ನೆನ್ನೆಯೆಲ್ಲ ಇಡೀದಿನ ಬಿರುಬಿಸಿಲು ಬಂದು, ‘ಆಯ್ತು ಇನ್ನೇನು ಚಳಿಗಾಲವೂ ಇದ್ದಕ್ಕಿದ್ದಂತೆ ಹೋಗಿಬಿಡತ್ತೆ’ ಅಂತ ಅಂದುಕೊಂಡ ಮಾರನೆಯ ದಿನ, ಸುತ್ತಮುತ್ತಲಿನ ಗಿಡಮರ.. ಅಷ್ಟೇಏಕೆ, ಇಡೀ ಊರನ್ನೇ ತನ್ನೊಡಲಿನಲ್ಲಿ ಬಚ್ಚಿಟ್ಟುಕೊಂಡಂತೆ ಮಂಜು ಸುರಿಯುತ್ತಿರೋದನ್ನ ನೋಡಿ, ಓಹೋ ತಲಕಾವೇರಿಯವರೆಗೂ ಪ್ರಯಾಣ ಮಜವಾಗಿರತ್ತಲ್ಲ ಅಂತ ನೆನೆಸಿಯೇ ಖುಷಿಯಾಯಿತು.

ಅಷ್ಟರಲ್ಲಿ ನಮ್ಮನೆಯ ಆಚೆ ಬೀದಿಯ ಕೊನೆಗೆ ಅಂಟಿಕೊಂಡ ಕಾಫಿ ತೋಟದಿಂದ ತೀರಾ ಹೊಸದೂ ಅಲ್ಲದ ಹಾಗೇ ಪರಿಚಿತವೂ ಅಲ್ಲವೆನಿಸುವಂತ ಸದ್ದೊಂದನ್ನು ಕೇಳಿ, ಕಣ್ಣುಗಳು ಸದ್ದಿನ ಮೂಲ ಹುಡುಕಿಕೊಂಡ ಅಲೆಯಲಾರಂಭಿಸಿದವು. ಆಗ ತತ್‌ಕ್ಷಣವೇ ಕಣ್ಣಿಗೆ ಬಿದ್ದದ್ದು ಕೆಂಪು ಜುಟ್ಟಿನ ಕಾಗೆಯನ್ನು ಹೋಲುವಂಥ ಮರಕುಟುಕ ಹಕ್ಕಿ. ಸದ್ಯ ಹದಿನೈದಿಪ್ಪತ್ತು ಹಕ್ಕಿಗಳನ್ನಷ್ಟೇ ಗುರುತಿಸಲು ಕಲಿತಿರುವ ನನಗೆ ಎಲ್ಲೋ ಆಕರ್‌ (Yellow ochre) ಕಪ್ಪು ಬಿಳಿ ಬಣ್ಣ ಹೊಂದಿರುವ ಸಾಮಾನ್ಯವಾದ ಮರಕುಟುಗ ಹಕ್ಕಿಯನ್ನು ಫೋಟೋಗಳಲ್ಲಷ್ಟೇ ನೋಡಿ ಅದರ ಪರಿಚಯವಿದ್ದರೂ, ನೇರವಾಗಿ ಕಂಡರೆ ಅದನ್ನು ಚೆನ್ನಾಗಿ ಗುರುತಿಸಬಲ್ಲೆ. ಆದರೆ ಇದು ಕೊಂಚ ಭಿನ್ನವಾಗಿತ್ತು. ಇದು ನಮ್ಮ ಪ್ರದೇಶದಲ್ಲಿ ತೀರ ಅಪರೂಪವೆನ್ನುವುದು ತಿಳಿಯದೇ, ಸಾಕಷ್ಟು ಹೊತ್ತು, ನಾನೊಬ್ಬಳೇ ಕಸ ಗುಡಿಸುತ್ತಲೇ ಅದರ ಆಟಗಳನ್ನು ನೋಡುತ್ತ ಇದ್ದುಬಿಟ್ಟಿದ್ದೆ.

ಆಮೇಲೆ ನಿದ್ದೆಯಿಂದೆದ್ದು ಬಂದ ವಿಪಿನ್‌ಗೆ, ‘ಅಲ್ಲಿ ನೋಡು ವುಡ್‌ಪೆಕರ್‌ ಎಷ್ಟು ಚೆನ್ನಾಗಿದೆ’ ಅಂತ ತೋರಿಸಿದಾಗಲೇ, ಅಪರೂಪದ ಹಕ್ಕಿಯೊಂದನ್ನ, ಅಂದರೆ white bellied woodpecker ಹಕ್ಕಿಯನ್ನು ನಾನು ‘ಸೈಟ್‌’  ಮಾಡಿದ್ದೇನೆಂದು, ನನ್ನದೊಂದು ಮಹತ್ವದ ‘ಸೈಟ್’ ಎಂದು ತಿಳಿದದ್ದು. ಅದು ಸಾಮಾನ್ಯವಾಗಿ ವಲಸೆ ಹೋಗಲಾರದ ಹಕ್ಕಿ. ಹಾಗಾಗಿ ನಮ್ಮಲ್ಲಿಗೆ ಅದು ಬಂದದ್ದೇ ವಿಪರೀತ ಕುತೂಹಲಕರ ವಿಷಯ.

ವಿಪಿನ್‌ ಅದನ್ನು ಕಂಡು ಕೇವಲ ಎರಡೇ ಕ್ಷಣವಾಗಿತ್ತು ಅಷ್ಟೆ, ಅಷ್ಟರಲ್ಲಿ ತೋಟದ ನಡುವೆ ನುಸುಳಿಕೊಂಡು ಹಾರಿಹೋಗಿಯೇಬಿಟ್ಟಿತ್ತು. ಸಾಕಷ್ಟು ಹೊತ್ತು ನಾವಿಬ್ಬರವೂ ಅದನ್ನು ಮತ್ತೆ ಕಾಣಲು ಹಂಬಲಿಸಿ ಕಾದುಕುಳಿತರೂ ಅದು ವಾಪಾಸ್ಸು ಬರಲೇಇಲ್ಲ. ವಿಪಿನ್‌ ಅದನ್ನು ಹೆಚ್ಚುಕಾಲ ಕಾಣಲಾಗದೇ ಕೈಕೈ ಹಿಸಿಕಿಕೊಳ್ಳುವಾಗ, ನಾನೇಕೆ ಅದನ್ನ ಸಾಮಾನ್ಯವಾದ ಹಕ್ಕಿ ಅಂತ ಭಾವಿಸಿ ಒಬ್ಬಳೇ ಕೂತು ನೋಡಿದೆ ಅಂತ ಬೇಸರವೂ ಆಯಿತು. ಅದಿನ್ನು ಮತ್ತೆ ಈ ಕಡೆ ಬರುವ ಸಾಧ್ಯತೆಯೇ ಕಡಿಮೆ. ಯಾಕೆಂದರೆ ಅದು ಈ ಜಾಗಕ್ಕೆ ಸೇರಿದ್ದೂ ಅಲ್ಲ, ಮತ್ತೆ ಕಾಣಿಸಿಕೊಳ್ಳುವಂಥ ಹಕ್ಕಿಯ ಪ್ರಬೇಧವೂ ಅಲ್ಲ.

ಹಾಗಾಗಿ ಮೂರ್ನಾಲ್ಕು ದಿನ ಮನೆಯ ಹೊರಗೆ ಬಂದಾಗಲೆಲ್ಲ ಅದನ್ನು ಕಾಣಲು ಕಣ್ಣೂ ಮನಸ್ಸು ಚಡಪಡಿಸಿತು.  ಯಾರಿಗೋ ಬಾಗಿಲ ಬಳಿ ಬಂದು ಬಂದು ಕಾಯುತ್ತೇವಲ್ಲಾ, ಹಾಗೆ. ನಾನೂ ಆ ಹಕ್ಕಿಯನ್ನು ಕಾಯುತ್ತ ಅನೇಕ ಬಾರಿ ಹೊಸ್ತಿಲ ಒಳಹೊರಗೆ ಹೋದೆ.  ಆಮೇಲೆ ಬಹುಶಃ ಹಾದಿ ತಪ್ಪಿ ಈ ಕಡೆ ಬಂದಿದ್ದಿರಬಹುದೆಂದು, ಅದಕ್ಕೆ ತನ್ನದೇ ಮನೆಯ ನಿಜಹಾದಿ ಸಿಕ್ಕಿರಬಹುದು ಎಂದು ಸಮಾಧಾನಿಸಿಕೊಂಡು ಸುಮ್ಮನಾದೆ.

*****

ಹಕ್ಕಿಗಳ ಪ್ರಪಂಚ ಬಹಳ ದೊಡ್ಡದು. ತನ್ನ ತೆಳುವಾದ ರೆಕ್ಕೆಗಳನ್ನು ಪಟಪಟನೆ ಬಡಿಯುತ್ತ ಆಗಸದಲ್ಲಿ ಎಲ್ಲೆಂದರಲ್ಲಿ ಎಷ್ಟು ಮೇಲಕ್ಕಾದರೂ, ಸಾವಿರಾರು ಮೈಲಿ ದೂರಕ್ಕಾದರೂ ಸರಾಗವಾಗಿ ಹಾರುವುದನ್ನು ಕಂಡೇ ಮನುಷ್ಯ ತನ್ನ ಅಭಾಗ್ಯವನ್ನು ನೆನೆದು ಹಲುಬಿ, ವಿಮಾನವನ್ನು ಮಾಡಿದ್ದು ಅನ್ನಿಸತ್ತೆ. ಕೆಲವೊಂದು ಹಕ್ಕಿಗಳು ಸಂತಾನೋತ್ಪತ್ತಿಗಾಗಿ ಅಥವಾ ಆಹಾರಕ್ಕಾಗಿ ಸಾವಿರಾರು ಮೈಲಿ ವಲಸೆ ಬರುತ್ತವೆ. ಅವುಗಳಿಗೆ ವಲಸೆ ಹಕ್ಕಿಗಳೆಂದೇ ಹೆಸರು. ಯಾವುದೋ ದೇಶದ ಹಕ್ಕಿಗಳು ಇನ್ಯಾವುದೋ ದೇಶಕ್ಕೆ ಗುಂಪಿನಲ್ಲಿ ಹಾರಿಬಂದು ಸಂತಾನೋತ್ಪತ್ತಿಯಲ್ಲಿ ತೊಡಗಿ, ತಮ್ಮ ಮರಿಗಳು ಒಂದಷ್ಟು ಬೆಳೆಯುವ ಹಂತದವರೆಗೂ ಆ ಸ್ಥಳದಲ್ಲಿಯೇ ಜೀವನ ಮಾಡಿ ನಂತರ, ಮತ್ತೆ ತಮ್ಮ ದೇಶಗಳಿಗೆ ಸಾವಿರಾರು ಮೈಲಿ ರೆಕ್ಕೆ ಬಡಿದುಕೊಂಡು ಹಾರುತ್ತಾ ಹೊರಟು ಹೋಗುತ್ತವೆ.

ಮತ್ತೆ ಸಂತಾನೋತ್ಪತ್ತಿಗೆ ಆಯ್ದುಕೊಂಡ ಕಾಲದ ಹೊತ್ತಿಗೆ, ತಾವು ಆಯ್ದುಕೊಂಡ ಜಾಗಗಳಿಗೆ ವಲಸೆ ಹೋಗುತ್ತವೆ. ಹೀಗೆ ಅವು ದೇಶ, ಭಾಷೆ, ಬೇಲಿ, ಗಡಿ ಎಲ್ಲವನ್ನೂ ದಾಟಿಕೊಂಡು, ಒಂದೂರಿಂದ ಇನ್ನೊಂದೂರಿಗೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹಾರುವುದನ್ನು ಕಂಡೇ ಮನುಷ್ಯ ತಾನೂ ದೇಶ-ವಿದೇಶಗಳನ್ನು ತಲುಪುವುದಕ್ಕೆ ಮಾರ್ಗಗಳನ್ನು ಕಂಡುಕೊಂಡಿದ್ದು ಅನ್ನಿಸುತ್ತೆ. ಹೌದು ರೆಕ್ಕೆಯೊಂದಿದ್ದರೆ ಎಲ್ಲಿ ಬೇಕಾದರೂ ಹಾರಬಹುದಲ್ಲ? ಮೊದಲೇ ಒಂದುಕಡೆ ನಿಲ್ಲದ ಮನುಷ್ಯನಿಗೆ ಹಕ್ಕಿಯ ಹಾರಾಟದಿಂದಲೇ ಸ್ಫೂರ್ತಿ ಸಿಕ್ಕು, ಸಾಗರಗಳನ್ನು ದಾಟಲು ಉದ್ದೀಪಿಸಿರಬೇಕು.

ಈಗೀಗ ಅಂದರೆ ಒಂದು ಹತ್ತು ವರ್ಷಗಳ ಆಸುಪಾಸಿನಿಂದ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಸತತವಾಗಿ ಏರುತ್ತಲೇ ಹೋಗುತ್ತಿದೆ. ಅದಕ್ಕೆ ಕಾರಣ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವುದು. ಜಾಲತಾಣಗಳಲ್ಲಿ ಸಿಗುವ ಮಾಹಿತಿಗಳು ಅವರ ಪ್ರವಾಸಕ್ಕೆ ಅನೇಕ ಬಾರಿ ಪ್ರೇರಣೆ ಅನ್ನಿಸುತ್ತೆ. ಫೇಸ್‌ಬುಕ್ಕು, ಇನ್ಸ್ಟಾಗ್ರಾಂ ವೇದಿಕೆಗಳಂತೂ ಈಗ ಫೋಟೋ, ವಿಡಿಯೋಗಳಿಂದ ತುಂಬಿ ತುಳುಕುತ್ತಿವೆ. ತಾವು ಹೋದ ಪ್ರತಿ ಜಾಗದಿಂದಲೂ ಐದಾರು ಫೋಟೋ ತೆಗೆದು, ಹಿರಿಹಿರಿಹಿಗ್ಗುತ್ತ ವಿಡಿಯೋ ಮಾಡಿ, ನಿಂತ ಜಾಗದಿಂದಲೇ ಅದನ್ನು ಇನ್ಸ್ಟಾಗ್ರಾಮಿಗೆ ಅಪ್‌ಲೋಡ್‌ ಮಾಡದಿದ್ದರೆ ಯುವಜನತೆಗೆ ಸಮಾಧಾನವೇ ಇರೋದಿಲ್ಲ.

ಪ್ರವಾಸಗಳಿಗೆ ತೆರಳುವವರಲ್ಲಿ ಶೇಕಡಾ ೯೦ರಷ್ಟು ಜನ ಆ ಜಾಗಗಳಲ್ಲಿ ಮನಸ್ಪೂರ್ವಕವಾಗಿ ಇದ್ದು, ಅದನ್ನು ಅನುಭವಿಸಿ, ಅದರ ಹಿನ್ನೆಲೆಯನ್ನು ಅರಿತುಕೊಳ್ಳುವುದಕ್ಕಿಂತ, ತಾವಿಲ್ಲಿ ಹೋಗಿಬಂದಿದ್ದೆವು ಅನ್ನೋ ಸಂದೇಶವನ್ನು ಇಡೀ ಜಗತ್ತಿಗೆ ಹಂಚುವುದರಲ್ಲೇ ಉತ್ಸುಕರಾಗಿರುತ್ತಾರಲ್ಲ ಎಂದು ಅಚ್ಚರಿಗೊಳ್ಳುತ್ತೇನೆ.

ಹಾಗಾಗಿ ಸ್ನೇಹಿತರಿಂದ ಹಿಡಿದು, ಗೊತ್ತಿಲ್ಲದ ಅಲೆಮಾರಿ ಮನಸ್ಸಿನ ಯಾರೋ ಹಾಕುವ ಪೋಸ್ಟುಗಳಿಂದ, ಅವರೆಲ್ಲ ಸುತ್ತಾಡುವ ಪ್ರತಿಯೊಂದು ಜಾಗಗಳ ಬಗೆಗೆ, ಅಲ್ಲಿ ತಲುಪುವ ಮಾರ್ಗದಿಂದ ಹಿಡಿದು, ಉಳಿದುಕೊಳ್ಳಲು, ತಿನ್ನಲು ಹೋಟೆಲ್‌ಗಳ ವಿವರಗಳೆಲ್ಲ ಪೋಸ್ಟುಗಳಲ್ಲೇ ಹಂಚಿಕೊಳ್ಳುವಾಗ, ಪ್ರವಾಸ ಹೋಗಲೇಬೇಕೆಂಬ ಪ್ರೇರಣೆಯಾಗುವುದು ಸಹಜ. ಸುತ್ತಲು ಮನಸ್ಸಿದ್ದು, ಅಕೌಂಟಿನಲ್ಲಿ ಒಂದಷ್ಟು ಹಣವಿರುವ ಯಾವ ಯುವಜನರೂ  ಅಂಥ ಜಾಗಗಳನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ಆಫೀಸುಗಳಲ್ಲಿ ಸಿಕ್ಕುವ ವಾರಾಂತ್ಯದ ರಜ ಅವರ ಓಡಾಟಗಳಿಗೆ ವರದಾನ.

ಹಿಂದೆಲ್ಲ ಕುಟುಂಬಗಳು ವರ್ಷಕ್ಕೊಂದು ಪ್ರವಾಸ ಅಥವಾ ಗಳಿಕೆಯಲ್ಲಿ ಒಂದು ಪಾಲನ್ನು ಇಂತಿಷ್ಟು ಅಂತ ಉಳಿಸಿ, ಒಂದಷ್ಟು ಹಣ ಕೂಡಿದ ಮೇಲೆ ತಾವು ಆಸೆ ಪಟ್ಟಿದ್ದ ಪ್ರವಾಸಗಳಿಗೆ ಹೋಗಿ ಬರುತ್ತಿದ್ದರು. ಈಗ ಹಾಗಲ್ಲ… ಎಲ್ಲ ದುಡಿಯುವ ಯುವಜನತೆಯ ಕೈಯಲ್ಲೂ ಸಾಕಷ್ಟು ಹಣ ಬರುತ್ತಿರುವುದರಿಂದ, ಊರೂರು ಏನು ದೇಶದೇಶಗಳನ್ನೇ ತಮಗೆ ಬೇಕನ್ನಿಸಿದಾಗ ಸುಲಭವಾಗಿ ಸುತ್ತಿಬರಲಾರಂಭಿಸಿದ್ದಾರೆ. ಪ್ರಪಂಚ ಪರ್ಯಟನೆ ಈಗ ಅಪರೂಪದ ಸಂಗತಿಯಾಗಿ ಉಳಿದಿಲ್ಲ. ಎಲ್ಲರಿಗೂ ಹಾಗೆ ದೇಶ ವಿದೇಶ ಸುತ್ತುವ ಮೂರ್ನಾಲ್ಕು ಜನರ ಪರಿಚಯವಿರುತ್ತೆ.

ತನ್ನ ತೆಳುವಾದ ರೆಕ್ಕೆಗಳನ್ನು ಪಟಪಟನೆ ಬಡಿಯುತ್ತ ಆಗಸದಲ್ಲಿ ಎಲ್ಲೆಂದರಲ್ಲಿ ಎಷ್ಟು ಮೇಲಕ್ಕಾದರೂ, ಸಾವಿರಾರು ಮೈಲಿ ದೂರಕ್ಕಾದರೂ ಸರಾಗವಾಗಿ ಹಾರುವುದನ್ನು ಕಂಡೇ ಮನುಷ್ಯ ತನ್ನ ಅಭಾಗ್ಯವನ್ನು ನೆನೆದು ಹಲುಬಿ, ವಿಮಾನವನ್ನು ಮಾಡಿದ್ದು ಅನ್ನಿಸತ್ತೆ.

ನನ್ನ ಹಳೆಯ ಸಹೋದ್ಯೋಗಿ ಸ್ನೇಹಿತೆಯೊಬ್ಬರಿದ್ದಾರೆ. ಸುತ್ತಾಟ ಅಂದರೆ ಎಲ್ಲಿಲ್ಲದ ಹುಚ್ಚು. ಸುತ್ತಾಟ ಅಂದರೆ ಕೇವಲ ಊರೂರು ಅಲೆಯೋದಲ್ಲ. ಬೆಟ್ಟ ಗುಡ್ಡಗಳನ್ನು ಹತ್ತಿ ಚಾರಣ ಮಾಡೋದು ಅವರ ಹವ್ಯಾಸ. ಯಾವೊಂದು ವಾರಾಂತ್ಯವನ್ನೂ ಅವರು ಮನೆಯಲ್ಲಿ ಕೂತು ಕಳೆಯುವುದು ನನಗೆ ಗೊತ್ತಿಲ್ಲ. ಆದರೆ ಅದಕ್ಕೆ ತದ್ವಿರುದ್ಧವಾದ ಮನೋಭಾವ ಹೊಂದಿರುವ ಅವರ ಪತಿಗೆ ಹೊರಗೆ ಹೋಗೋದು ಅಂದರೇನೇ ಆಗಿ ಬರೋದಿಲ್ಲ.  ಮನೆಯಲ್ಲೇ ಕೂತು ಆಫೀಸ್‌ ಕೆಲಸ ಮಾಡೋದೇ ಅವರಿಗೆ ಹೆಚ್ಚು ಕಂಫರ್ಟ್‌. ಹಾಗಾಗಿ ಇವರೊಬ್ಬರೇ ಬೇರೆಬೇರೆ ಚಾರಣದ ಗುಂಪುಗಳೊಟ್ಟಿಗೆ, ಸ್ನೇಹಿತರೊಟ್ಟಿಗೆ, ಬೆಟ್ಟ ಗುಡ್ಡ, ಪರ್ವತಗಳನ್ನು ಹತ್ತಿಳಿಯುತ್ತ, ತಮ್ಮ ವಾರಾಂತ್ಯಗಳನ್ನು ಕಳೆಯುತ್ತಿರುತ್ತಾರೆ. ಹಕ್ಕಿ ಹೇಗೆ ತನ್ನಿಷ್ಟಕ್ಕೆ ಸ್ವಚ್ಛಂದವಾಗಿ ಹಾರಾಡುತ್ತದೋ ಆ ಥರದ ಜೀವನವನ್ನು ಅವರು ಆರಿಸಿಕೊಂಡಿರುವುದು ಸೋಜಿಗ ಮತ್ತು ಖುಷಿಯ ಸಂಗತಿ. ಅವರ ಓಡಾಟವನ್ನು ತಡೆಯಲು ಸಾಧ್ಯವಾಗುವುದು ಲಾಕ್‌ಡೌನಿಗೆ ಮಾತ್ರವೇ!

(ವಿಜಯನ್‌ ಮತ್ತು ಮೋಹನಾ ವಿಜಯನ್‌)

ಶ್ರೀ ಬಾಲಾಜಿ ಕಾಫಿ ಹೌಸ್‌ ಎಂಬ ಪುಟ್ಟ ಹೋಟೆಲ್‌ ನಡೆಸುತ್ತಲೇ ಚಹಾ-ಕಾಫಿ ಮಾರಿ ದೇಶವಿದೇಶ ಸುತ್ತಿ ಬಂದಿರುವವರು ವಿಜಯನ್‌ ಮತ್ತು ಮೋಹನಾ ವಿಜಯನ್‌ ಎಂಬ ಹಿರಿಯ ದಂಪತಿಗಳು. ದೇವರ ನಾಡಾದ ಕೇರಳದವರಾದ ಇವರು ಪುಟ್ಟ ಚಹಾದಂಗಡಿಯ ಆದಾಯಲ್ಲಿ ಬಹುತೇಕ ಭಾಗವನ್ನು ಪ್ರವಾಸಕ್ಕಾಗಿಯೇ ಮೀಸಲಿಟ್ಟವರು. ತಮ್ಮ ನಲವತೈದು ವರ್ಷಗಳ ದಾಂಪತ್ಯ ಜೀವನದಲ್ಲಿ ಹದಿನಾರು ವರ್ಷಗಳಿಂದ ಸತತವಾಗಿ ಇಪ್ಪತ್ತಾರು ದೇಶಗಳನ್ನು ಸುತ್ತಿ ಬಂದಿದ್ದರು. ಅರೆರೆ ಅದು ಹೇಗೆ ಸಾಧ್ಯ ಅಂತೀರ… ಮನಸ್ಸಿದ್ದರೆ ಮಾರ್ಗ ಅಂತಾರಲ್ಲ… ಹಾಗೇ. ಮೊದಲಿನಿಂದ ದೇಶವಿದೇಶಗಳನ್ನು ಸುತ್ತುವ ಕನಸು ಕಾಣುತ್ತಿದ್ದ ವಿಜಯನ್‌, ತಮ್ಮ ಆದಾಯವೆಲ್ಲವನ್ನೂ ಕೂಡಿಟ್ಟು, ಅದೂ ಸಾಲದಿದ್ದರೆ ಕೆಲವೊಮ್ಮೆ ಸಾಲ ತೆಗೆದುಕೊಂಡೂ ತಮ್ಮ ಪತ್ನಿ ಮೋಹನಾ ಜೊತೆ ಲೋಕ ಸುತ್ತುತ್ತಾ, ಜಗತ್ತಿನ ಹಲವರನ್ನು ಬೆರಗುಗೊಳಿಸಿದ್ದರು. ಎಷ್ಟೆಲ್ಲ ದುಡಿದೂ ಮತ್ತಷ್ಟು ಹಣ ಕೂಡಿಸಲು ಹೆಣಗಾಡುತ್ತಲೇ ಜೀವನವನ್ನು ಏರುಪೇರು ಮಾಡಿಕೊಳ್ಳುವಂಥ ಜನರಿಗೆ ಜೀವನಪ್ರೀತಿಯೆಂದರೇನು ಎಂದು ತೋರಿಸಿಕೊಟ್ಟವರು. ಎರಡು ತಿಂಗಳ ಹಿಂದಷ್ಟೇ ರಷ್ಯಾ ಪ್ರವಾಸದಿಂದ ಹಿಂದಿರುಗಿ ಬಂದು, ಮುಂದೆ ಜಪಾನ್‌ ದೇಶವನ್ನು ನೋಡಲು ಹಣ ಕೂಡಿಸುವ ಹೊತ್ತಿಗೆ ವಿಜಯನ್‌ ಹೃದಯಾಘಾತದಿಂದ ತೀರಿಕೊಂಡರು.

ಸಂದೀಪಾ ಮತ್ತು ಚೇತನ್‌ ಎನ್ನುವ ಜೋಡಿಯಂತೂ, ತಮ್ಮ ಕೆಲಸಗಳನ್ನು ತೊರೆದು, ಇದ್ದ ಮನೆಯನ್ನೇ ಮಾರಿ, ಜಗತ್ತನ್ನು ಸುತ್ತುತ್ತಿರುವ ಕತೆ ಇನ್ನೂ ದೊಡ್ಡದು. ಹೀಗೆ ಸಾಲವನ್ನು ಮಾಡಿಕೊಂಡು, ಇದ್ದ ಮನೆಯನ್ನೂ ಮಾರಿ ಸುತ್ತಾಡಬೇಕಾದರೆ ಈ ಸುತ್ತಾಟದ ಬಗೆಗೆ ಮನುಷ್ಯನಿಗೆ ಅದೆಂಥ ಸೆಳೆತವಿರಬೇಕು? ಇದ್ದ ಮನೆಯನ್ನು ಬಿಟ್ಟು ಎಷ್ಟೆಲ್ಲ ಸುತ್ತಿದರೂ, ವಾಪಾಸ್ಸು ಮನೆಯ ಹಾದಿಗೇ ನಮ್ಮ ಮನಸ್ಸು ಎಳೆಯುತ್ತದೆನ್ನುವುದು ಎಷ್ಟು ಸತ್ಯವೋ, ಎಷ್ಟೇ ಪ್ರೀತಿಯಿಂದ ಮನೆ ಕಟ್ಟಿದರೂ ಸುತ್ತಲು ಮನಸ್ಸಿರುವ ಜನಗಳನ್ನು ಮನೆಯಲ್ಲಿ ಕಟ್ಟಿ ಹಾಕಲು ಸಾಧ್ಯವಿಲ್ಲದಿರುವುದೂ ಅಷ್ಟೇ ನಿಜ.

ಮನಸ್ಸು ರೆಕ್ಕೆ ಬಿಚ್ಚಿ ಹಾರಲು ಕಾದು ಕುಳಿದ ಹಕ್ಕಿ… ತನ್ನ ಸಮಯ ಬರಲು ಕಾಯುತ್ತಿರುತ್ತದೆ ಅಷ್ಟೇ.