“ರಸ್ತೆ ಮಧ್ಯೆದಿಂದಲೇ ಹಾರಿ ಹೋಗುವ ರತ್ನಪಕ್ಷಿಗಳ ಜೋಡಿ, ರಸ್ತೆ ಪಕ್ಕದ ಸಣ್ಣಪುಟ್ಟ ನೀರಿನ ಗುಂಡಿಗಳಿಗೆ ಇನ್ನೇನು ತಾಕಿಯೇ ಬಿಡುತ್ತವೆಂಬಂತೆ ಶೋಭಾಯಮಾನವಾಗಿ ಜೋತಾಡುವ ಗೀಜಗನ ಗೂಡುಗಳು, ಇವರೆಲ್ಲರ ನಿಯಂತ್ರಣ ನನ್ನ ಕೈಯಲ್ಲಿ ತಾನೇ ಎಂಬಂತೆ ನೆಲದಿಂದೆದ್ದು ನಿಂತಿರುವ ವಿಸ್ತಾರ ಹುತ್ತಗಳು ಅವುಗಳ ಅಸ್ತಿತ್ವವೇ ವಾತಾವರಣಕ್ಕೊಂದು ಘನಗಾಂಭೀರ್ಯವನ್ನು ಪ್ರಾಪ್ತವಾಗಿಸುತ್ತದೆ. ಹಾವುಗಳೂ ಇರುವುದಕ್ಕೆ ಸಾಕ್ಷಿಯಾಗಿ ಒಮ್ಮೊಮ್ಮೆ ರಸ್ತೆ ಮಧ್ಯೆಯೇ ಪ್ರತ್ಯಕ್ಷವಾಗಿ ಒದಗಿ ಬರುವ ನಾಗರ, ಮಣ್ಣುಮುಕ್ಕ, ಹಸಿರು ಹಾವು, ಕೇರೆ ಹಾವುಗಳೋ, ಅವುಗಳ ಉದ್ದ, ದಪ್ಪ, ಚುರುಕುತನವೋ, ಮುರುಕುತನ, ಆ ಬಳುಕಾಟವೋ…”
ಕಥೆಗಾರ್ತಿ ಸುಧಾ ಚಿದಾನಂದಗೌಡ ಬರಹ.

 

ಹಿನ್ನೀರಿನ ಕಥೆಯೆಂದರೆ ಕಣ್ಣೀರಿನ ಕಥೆಯೆಂದೇ ಪರಿಗಣಿತವಾದರೂ ನಾ ಕಂಡ ಹಿನ್ನೀರಿನ ಚಿತ್ರ ಭಿನ್ನವಾದುದ್ದು ಮತ್ತು ಕಾಲದೊಂದಿಗೆ ನವೀಕರಣಗೊಂಡಿರುವಂಥದ್ದು.

ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯನ್ನು ಹಾದುಹೋಗುವ NH4 ಹೆದ್ದಾರಿ ಹಿಡಿದು ಹೊಸಪೇಟೆಗೆ ಹೋಗುವ ಮಾರ್ಗದಲ್ಲಿ ಹ.ಬೊ.ಹಳ್ಳಿ ದಾಟುತ್ತಿದ್ದಂತೆ ಎಡಪಕ್ಕದಲ್ಲೊಂದು ಹೊರಳು ದಾರಿ- ಅಲ್ಲಿ ತಿರುಗಿಕೊಂಡು ಸೀದ ಹೊರಟು ೧೦. ಕಿ.ಮೀ ದೂರ ಸಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ವಾತಾವರಣ ಬದಲಾದ ಅನುಭವ. ಬಿಸಿಸುಯ್ಯುವ ಗಾಳಿಯಲ್ಲಿ ಮಂದಾನಿಲದ ತಂಪು, ಧೂಳುವಾಸನೆ, ಘಾಟು ಮರೆಸುವ ನೀರಲ್ಲಿ ನೆಂದ ಮಣ್ಣಿನ ವಾಸನೆ.

ರೋಡಿನ ಅಕ್ಕ ಪಕ್ಕ ಸಮೃದ್ಧ ಬೆಳೆ. ಭತ್ತ, ಅಲಸಂದೆ, ಸೂರ್ಯಕಾಂತಿ, ಮಲ್ಲಿಗೆ ಕನಕಾಂಬರದ ಹೂ-ಮೊಗ್ಗು ತುಂಬಿಕೊಂಡ ವರ್ಣರಂಜಿತ ಗಿಡಗಳು, ತರತರದ ತರಕಾರಿ, ನಡುನಡುವೆ ನಳನಳಿಸುವ ದ್ರಾಕ್ಷಿ ತೋಟ, ನೆರಳು ನೆಲ ತುಂಬುವಂತೆ ಬೆಳೆದ ಮಾವು, ಪೇರಲದ ಮರಗಳ ಘಮಲು, ನನ್ನದೇ ದೃಷ್ಟಿಯಾದೀತೋ ಎಂಬಂತೆ ಪುಟ್ಟ ಪುಟ್ಟ ಮರಗಳಿಗೆ ಮೈಭಾರವಾಗುವಂತೆ ಜೋತುಬಿದ್ದು ಸೂರ್ಯನಿಂದ ಸಿಡಿದು ಬಂದ ಸಣ್ಣ ತುಣುಕುಗಳಂತೆ ಹೊಳೆಯುವ ದಾಳಿಂಬೆ ಹಣ್ಣುಗಳು…..

ಇವೆಲ್ಲ ಆಹಾರ ಮನುಷ್ಯ ಮಾತ್ರದವರಿಗೆ ಮೀಸಲೋ ನಮಗೆ ಹಕ್ಕಿಲ್ಲವೋ? ಎಂದು ಸವಾಲೆಸೆಯುವಂತೆ ಮರದಿಂದ ಮರಕ್ಕೆ ಹಣ್ಣಿನ ಬೇಟೆಗಾಗಿ ಛಂಗ ಪುಂಗನೆ ಹಾರುವ ನಾಲ್ಕೈದು ಜಾತಿಯ ಚಿಟ-ಗುಬ್ಬಿಗಳು, ಭತ್ತದ ಗದ್ದೆಯ ನೀರಿನಲ್ಲಿ ಕಾಲೂರುತ್ತಲೇ ಹಾರುತ್ತಾ ಲಂಗರು ಹಾಕಿರುವ ಶುಭ್ರಶ್ವೇತ ಬೆಳ್ಳಕ್ಕಿಗಳು, ನೋಡುಗರ ಅದೃಷ್ಟವಿದ್ದರೆ ಬಣ್ಣದ ಬೆಳ್ಳಕ್ಕಿಗಳೂ ಬಳುಕುತ್ತಾ ರೆಕ್ಕೆಯ ಗರಿಗಳ ಪ್ರದರ್ಶನ ಏರ್ಪಡಿಸುವುದುಂಟು.

ಇದೆಲ್ಲಕ್ಕೆ ಕಿರೀಟದಂತೆ ರಸ್ತೆ ಮಧ್ಯೆದಿಂದಲೇ ಹಾರಿ ಹೋಗುವ ರತ್ನಪಕ್ಷಿಗಳ ಜೋಡಿ, ರಸ್ತೆ ಪಕ್ಕದ ಸಣ್ಣಪುಟ್ಟ ನೀರಿನ ಗುಂಡಿಗಳಿಗೆ ಇನ್ನೇನು ತಾಕಿಯೇ ಬಿಡುತ್ತವೆಂಬಂತೆ ಶೋಭಾಯಮಾನವಾಗಿ ಜೋತಾಡುವ ಗೀಜಗನ ಗೂಡುಗಳು, ಇವರೆಲ್ಲರ ನಿಯಂತ್ರಣ ನನ್ನ ಕೈಯಲ್ಲಿ ತಾನೇ ಎಂಬಂತೆ ನೆಲದಿಂದೆದ್ದು ನಿಂತಿರುವ ವಿಸ್ತಾರ ಹುತ್ತಗಳು ಅವುಗಳ ಅಸ್ತಿತ್ವವೇ ವಾತಾವರಣಕ್ಕೊಂದು ಘನಗಾಂಭೀರ್ಯವನ್ನು ಪ್ರಾಪ್ತವಾಗಿಸುತ್ತದೆ. ಹಾವುಗಳೂ ಇರುವುದಕ್ಕೆ ಸಾಕ್ಷಿಯಾಗಿ ಒಮ್ಮೊಮ್ಮೆ ರಸ್ತೆ ಮಧ್ಯೆಯೇ ಪ್ರತ್ಯಕ್ಷವಾಗಿ ಒದಗಿ ಬರುವ ನಾಗರ, ಮಣ್ಣುಮುಕ್ಕ, ಹಸಿರು ಹಾವು, ಕೇರೆ ಹಾವುಗಳೋ, ಅವುಗಳ ಉದ್ದ, ದಪ್ಪ, ಚುರುಕುತನವೋ, ಮುರುಕುತನ, ಆ ಬಳುಕಾಟವೋ ಅಬ್ಬಬ್ಬಾ ಈ ದೃಶ್ಯಗಳೆಲ್ಲಾ ಕಂಡುಂಡು, ಆಸ್ವಾದಿಸುತ್ತಿರುವಂತೆಯೇ ಈ ತಂಪು ವಾತಾವರಣ ಬಳ್ಳಾರಿ ಜಿಲ್ಲೆಯಲ್ಲೇ ಇದೆಯೇ. ಬಿಸಿಲ ನಾಡಿನಲ್ಲಿ ಈ ಸಮೃದ್ಧಿ ಸಾಧ್ಯವಾಗಿರುವುದು ನಿಜವೇ? ಎಂಬ ಪ್ರಶ್ನೆಗಳ ಅಲೆಯಲ್ಲಿ ತೇಲುತ್ತ ಮುಂದಕ್ಕೆ ಇನ್ನಷ್ಟು ಸಾಗಿ ಹೋದರೆ, ಅರರೆ… ಇದೇನು ಮೃಗಜಲವೇ ರಣಬಿಸಿಲಿನಲ್ಲಿ ನೀರಿನಂತೆ ಭ್ರಮೆ ಹುಟ್ಟಿಸುವ ಮರೀಚಿಕೆಯೇ?

ಛೇ, ಬಿಡ್ತು ಅನ್ನಿ.
ಅದು ನಿಜಕ್ಕೂ ನೀರೇ!
ಬಿಸಿಲಲ್ಲಿ ಫಳಫಳ ಹೊಳೆಯುತ್ತ, ಸುತ್ತಲಿನ ಹಸಿರಿಗೆ ಕಾರಣವಾಗಿರುವ ತಿಳಿನೀಲ ಜಲರಾಶಿಯ ಮೊತ್ತ!
ಅದೇ ತುಂಗಭದ್ರಾ ಅಣೆಕಟ್ಟೆಯ ಸಾವಿರಾರು ಹೆಕ್ಟೇರ್ ವ್ಯಾಪಿಸಿಕೊಂಡಿರುವ ಹಿನ್ನೀರು!
ಅದಕ್ಕಂಟಿಕೊಂಡಿರುವ ಪುನರ್ವಸತಿ ಗ್ರಾಮ ಬಾಚಿಗೊಂಡನಹಳ್ಳಿಯ ಮಡಿಲಿಗೆ ನೌಕರಿಯ ನೆಪದಲ್ಲಿ ನಾನು ಬಂದು ಬಿದ್ದಿರುವುದೂ ಒಂದು ವಿಧಿ ವಿಸ್ಮಯವೇ.
ಅನಿರೀಕ್ಷಿತ, ಆಹ್ಲಾದಕರ ಸುವರ್ಣಾವಕಾಶವೆನ್ನಲೋ? ಈ ಸರ್ಕಾರಿ ಉಪನ್ಯಾಸಕಿ ವೃತ್ತಿಯ ವರವೆನ್ನಲೋ ಅಂತೂ ಎರಡೂವರೆ ವರ್ಷಗಳ ಮಟ್ಟಿಗೆ ಬಾಚಿಗೊಂಡನಹಳ್ಳಿಯ ವಿಶಿಷ್ಟ ಜನಜೀವನವನ್ನು ರೈತ ಸಂಸ್ಕೃತಿಯನ್ನು ಹತ್ತಿರದಿಂದ ನೋಡುವುದು ನನಗೊದಗಿ ಬಂದ ಸದವಕಾಶ. ಕ್ಲಾಸು ಮುಗಿದೊಡನೆ ನಾನು ಶ್ರದ್ಧೆಯಿಂದ ಮಾಡುತ್ತಿದ್ದ ಕೆಲಸವೆಂದರೆ- ಹೊರಗೆ ನಿಂತು ಹಿನ್ನೀರನ್ನು, ಅದರಲ್ಲೇಳುವ ಪುಟ್ಟ ಅಲೆಗಳನ್ನು ದಿಟ್ಟಿಸಿ ನೋಡುವುದು! ಸುಮ್ಮನೆ ನೋಡುತ್ತಲೇ ಇರುವುದು- ಕೊನೆ ಪಿರಿಯಡ್‌ನ ಬೆಲ್ ಮೊಳಗಿ ಬಸ್ ಬರುವವರೆಗೂ ನೋಡಿದ್ದೇ ನೋಡಿದ್ದು! ವರ್ಷವೈಭವ ಬರೆದ ಕುವೆಂಪುರವರು ಹೀಗೇ ಮಲೆನಾಡಿನ ಮಳೆಧಾರೆಯನ್ನು ದಿಟ್ಟಿಸಿ ನೋಡುತ್ತಿದ್ದಿರಬಹುದೇ? ಎನಿಸಿ ಮೈ ಜುಮ್ಮೆಂದುಬಿಟ್ಟಿತ್ತು! ಮಳೆ ಬರುವ ಕಾಲಕ್ಕೆ ಒಳಗ್ಯಾಕ ಕುಂತೇವೋ… ಬೇಂದ್ರೆ ಗೀತೆಯನ್ನು ಗುನುಗಿಕೊಳ್ಳುತ್ತ, ಮಳೆ ನೋಡುತ್ತ… ನೋಡುತ್ತ… ಹಿನ್ನೀರು ಕಾಲೇಜು ಹೊಸ ಕಟ್ಟಡದ ಸ್ವಲ್ಪವೇ ದೂರಕ್ಕೆ ಬಂದೂಬಿಟ್ಟಿತು!

೨೦೦೯ರ ಸೆಪ್ಟೆಂಬರ್ ತಿಂಗಳು ಅದು; ಬಳ್ಳಾರಿ ಜಿಲ್ಲೆ ಅತಿವೃಷ್ಟಿಗೆ ತತ್ತರಿಸಿದ ಸಮಯ. ಹಿನ್ನೀರು ಕಣ್ಣೆದುರೇ ಭೋರ್ಗರೆಯುತ್ತಿತ್ತು. ಹಲವು ಜೀವಗಳನ್ನು, ಹಲವು ಮನೆಗಳನ್ನು ತನ್ನಲ್ಲಿ ಮುಳುಗಿಸಿಕೊಂಡು! ಅದನ್ನು ಶೌರ್ಯವೆನ್ನುವುದೋ, ಕ್ರೌರ್ಯವೆನ್ನುವುದೋ ಅಥವಾ ಎರಡೂ ಬೆರೆತು ಉದ್ಭವಗೊಂಡಿರುವ ಶಕ್ತಿಯ ವಿರಾಟ್ ಸ್ವರೂಪವೆನ್ನುವುದೋ ತಿಳಿಯಲಿಲ್ಲ! ದಿನದಿನಕ್ಕೂ ಗಂಟೆಗಂಟೆಗೂ ಏರುತ್ತಿತ್ತು ನೀರಿನ ಮಟ್ಟ! ಭೋರ್ಗರೆದು, ಪ್ರಳಯತಾಂಡವನ ಜಟೆಯ ರುದ್ರ ಗಂಗೆಯಂತೆ ಸುರಿದ ಮಳೆಗೆ ಪ್ರತಿಯಾಗಿ ಕೆನ್ನೀರು ತುಂಬಿದ ಹಿನ್ನೀರು ಸಮುದ್ರವಾಗಿ ಕಾಲೇಜಿನ ಎದುರಿಗೇ ದಿಗಂತದ ವಿಸ್ತಾರಕ್ಕೆ ಹರಡಿಕೊಂಡು ಥರಥರ ನಡುಕ ಹಾಗೂ ಆಕರ್ಷಣೆ! ಬಸ್‌ಸ್ಟ್ಯಾಂಡ್‌ನಲ್ಲಿ ಕಚ್ಚೆ ಕಟ್ಟಿಕೊಂಡು ಓಡಾಡುತ್ತಿದ್ದ ರೈತಾಪಿ ಮಂದಿಯನ್ನು ಮಾತಿಗೆಳೆದೆ.

‘ಒಂದು ಬೆಳೆ ನಷ್ಟ ಆಯ್ತಲ್ಲ ನಿಮಗೆ?’
“ಹೌದ್ರೀ ಏನ್ಮಾಡಾದು? ನಂ ಕೈಯಾಗೇನೈತಿ? ಡ್ಯಾಂ ಸಲುವಾಗಿ ಭೂಮಿ ಎಷ್ಟೋ ಹೋಗೇ ಬಿಟೈತಿ. ಈಗ ಅರ್ಧ ವರ್ಷ ಅರ್ಧ ಹೊಲ ಹಿನ್ನೀರಿನೊಳಗ ಮುಳುಗಿಬಿಡ್ತೈತಿ. ಇನ್ನೊಂದ್ ಬೆಳಿನಾರ ಸಿಗ್ತೈತಲ್ಲ ಅನ್ನಾದ ನೆಮ್ಮದಿ. ಸಮಾಧಪ್ಪ ನಿಟ್ಟುಸಿರಿಟ್ಟರೆ ಸಿದ್ಧಪ್ಪ ಆಶಾವಾದಿಯಾಗುತ್ತಾನೆ. ನೀರು ನಿಂತು ಹಿಂದೆ ಸರಿತೈತಲ್ರೀ, ಅದು ಚೊಲೋ ಫಲವತ್ತು ಮಣ್ಣು ಇರ್ತೈತ್ರೀ. ಒಳ್ಳೆ ಹಾಲಿನ ಕೆನೆ ಇದ್ದಂಗಿರ್ತೈತ್ರೀ. ಒಂದು ಕಲ್ಲಿರಲ್ಲ. ಒಂದು ಹರಳಿರಲ್ಲ. ನೆಲ್ಲು ಹಗಿ ಹಚ್ಚಿ ಬಿಟ್ವಿ ಅಂದ್ರ ಬರೋಬ್ಬರಿ ಪೀಕು.”
ಈ ಬಗೆಯ ವ್ಯವಸಾಯ ಹೊಸದು ಎನಿಸಿತು. ಬಸವರಾಜಪ್ಪ ಇನ್ನಷ್ಟು ಮಾಹಿತಿ ನೀಡಿದರು.

“ಅಲಸಂದಿ ಬಾಳ ಚೊಲೋ ಬೆಳಿತೈತ್ರಿ. ತರಕಾರಿಯಂತೂ ಹಾಕೇ ಹಾಕ್ತೀವಿ. ಮಸ್ತ್ ನೀರೂ ಒಗೀತೈತಿ ಪಂಪ್‌ಸೆಟ್ಟು. ಹಿಂಗ ವರ್ಷಾ. ಅಭ್ಯಾಸ ಮಾಡ್ಕ್ಯಂಬಿಟ್ಟೀವಿ. ಎಲ್ಲ ಡ್ಯಾಂನಿಂದ.”

ದೂರದಲ್ಲಿ ಹೊಸಪೇಟೆಯೆಡೆಗೆ ಮುಖಮಾಡಿ, ಕಾಣದ ಅಣೆಕಟ್ಟೆಯನ್ನು ತಮ್ಮ ನಿಟ್ಟುಸಿರುಗಳಲ್ಲಿ ಮುಳುಗಿಸುವ ರೈತರು ಸೋಲನ್ನು ಮಾತ್ರ ಒಪ್ಪಿಕೊಂಡಂತೆ ಕಾಣುವುದಿಲ್ಲ. ಅವರ ವಾರ್ಷಿಕ ವೇಳಾಪಟ್ಟಿಯು ಹಿನ್ನೀರಿನ ಏರಿಳಿತಕ್ಕೆ ಅನುಗುಣವಾಗಿ ಹೊಂದಿಕೊಂಡಿದೆ! ಚಾರ್ಲ್ಸ್ ಡಾರ್ವಿನ್‌ನ Survival of the Fittest ಥಿಯರಿಯು ನೆನಪಾಗುತ್ತದೆ. ಹೊಂದಿಕೊಳ್ಳದ ಯಾವ ಜೀವಿಯೂ ಬದುಕುಳಿಯಲಾರದು ಎಂದು ವಿಜ್ಞಾನಿ ಮಹಾಶಯ ಶತಮಾನದ ಹಿಂದೆಯೇ ಹೇಳಿಬಿಟ್ಟಿದ್ದಾನಲ್ಲ!

ಸೊಪ್ಪು ಬೆಳೆಯುವುದರಲ್ಲಿ ನಿಷ್ಣಾತಳಾದ ಅಮೀನಮ್ಮ ಒಂದೇ ಎಕರೆಯಲ್ಲಿ ಒಂದಿಡೀ ವರ್ಷ ಆರಾಮಾಗಿ ಮನೆ ಖರ್ಚು ತೂಗಿಸುತ್ತಾಳೆ. ಹಿನ್ನೀರಿನ ಬಗ್ಗೆ ತಕರಾರೇ ಇಲ್ಲ! ಎಂಟುಗಂಟೆವರಗೆ ತೋಟದಲ್ಲಿ ನೀರು ಕಟ್ಟಿ, ಹತ್ತು ಗಂಟೆಗೆ ಕಾಲೇಜಿಗೆ ಬಂದು ಫಸ್ಟ್ ಬೆಂಚ್‌ನಲ್ಲೇ ಕೂಡುವ ವಿದ್ಯಾರ್ಥಿ ಜಗದೀಶ್ ಹೇಳಿದ್ದು.

“ಈ ಹಿನ್ನೀರಿನ ಏರಿಯಾದೊಳಗೆ ಪಂಪ್‌ಸೆಟ್ ಒಗಿಯೋ ನೀರು ಒಬ್ಬ ಆಳಿಗೆ ಬಗ್ಗುವುದೇ ಇಲ್ಲ ಮಿಸ್. ಈ ನೀರನ್ನು ತಿರುಗಿಸಿಕೊಳ್ಳಲು ಇಬ್ಬಿಬ್ಬರು ನಿಲ್ಲಬೇಕಾಗ್ತದೆ. ಅಂಥಾ ಪರಿ ವಾಟರ್ ಲೆವೆಲ್ ಇರ್ತೈತಿ ಮಿಸ್. ಹಿನ್ನೀರು ಹೊಲ ಮುಳುಗಿಸಿದಾಗ ಪಂಪ್‌ಸೆಟ್ ಅಲ್ಲಿ ಬಿಡೋದೇ ಇಲ್ಲ ಮಿಸ್. ಮಳಿ ಶುರುವಾದ ಕೂಡ್ಲೇ ತಕ್ಕೊಂಬಂದುಬಿಡ್ತೀವಿ. ನೀರು ಸರಿದ ಮೇಲೆ ಮತ್ತೆ ಕನೆಕ್ಷನ್ ಕೊಟ್ಟುಕೊಂತೀವಿ.”

ಅವನ ವಿವರಣೆಯನ್ನು ಬಾಯಿಬಿಟ್ಟುಕೊಂಡು ಕೇಳಿದೆ! ಅಕ್ಟೋಬರ್‌ನಲ್ಲಿ ಅತ್ಯಂತ ಆಹ್ಲಾದಕರ ವಾತಾವರಣ. ಸ್ವಚ್ಛವಾದ ಡಾಂಬರು ರಸ್ತೆಯ ಜಾಡು ಹಿಡಿದು, ಹಿನ್ನೀರಿನ ಕಡೆ ಮುಖಮಾಡಿ ವಾಕ್ ಹೊರಟರೆ. ಯಾವ ಬಣ್ಣದ ಚಿಟ್ಟೆಯ ಫೋಟೋ ತೆಗೆಯಲಿ? ಯಾವುದನ್ನು ಬಿಡಲಿ? ಯಾವ ಪಕ್ಷಿಯ ಇಂಚರ ಕೇಳಿಸಿಕೊಳ್ಳಲಿ? ಅದು ಯಾವ ರಾಗವೆಂದು ಗ್ರಹಿಸಲಿ? ಈ ಹೂವಿನ ಬಣ್ಣದ ಶೋಭೆ ಹೆಚ್ಚೋ? ಆ ಹೂವಿನ ದಳದ ನಯಗಾರಿಕೆ ಹೆಚ್ಚೋ? ಅದೇನು ಈ ಎಲೆಯ ಬಣ್ಣ ಎಷ್ಟು ಹೊಳಪು! ಹೂವಿಗಿಂತ ಚಂದದ ಎಲೆಯ ಒನಪು! ಎಲೆಯ ಚಿಗುರು ಚೆಂದವೋ. ಚಿಗುರಿನ ತುದಿಗಿರುವ ಅರ್ಧ ಅರಳಿರುವ ಮೊಗ್ಗು ಚೆಂದವೊ. ಆಹಾ… ಈ ಗೊಂದಲದಲ್ಲಿ ಯಾವುದನ್ನೂ ಬಿಡಲಾಗದೆ ಕಣ್ಣಿನ ಮೂಲಕ ಮನಸಿನೊಳಗೆ ಇಳಿಸುತ್ತ, ಹಿನ್ನೀರಿನಲ್ಲಿ ದೃಷ್ಟಿ ನೆಟ್ಟು, ಮುಂದೆ ನಡೆದರೆ, ಅಲ್ಲೇ ಎಡಪಕ್ಕದಲ್ಲಿ ಗ್ರಾಮಪಂಚಾಯ್ತಿಯ ಪುಟ್ಟ ಲೈಬ್ರೆರಿ. ಒಂದಷ್ಟು ಸಾವಿರದಷ್ಟಿರಬಹುದಾದ ಪುಸ್ತಕಗಳು.

ಗ್ರಂಥಪಾಲಕ ಬಸವರಾಜಪ್ಪನವರಿಂದ ಕೆಲ ಮ್ಯಾಗಜೈನ್‌ಗಳು, ಪುಸ್ತಕಗಳನ್ನು ಎರವಲು ಪಡೆದು, ಹೊರ ಬರುವಷ್ಟರಲ್ಲಿ ಕೆಲ ವಿದ್ಯಾರ್ಥಿನಿಯರೂ ಜೊತೆಗೂಡುತ್ತಾರೆ. ಸ್ವಲ್ಪ ದೂರದಲ್ಲಿ, ವಿಶಾಲ ಅರಳಿಮರ, ಅದರ ಸುತ್ತಲೂ ಕಲ್ಲು, ಜಲ್ಲಿಗಳ ಕಟ್ಟೆ, ಹತ್ತಲು ಒಂದೆರಡು ಮೆಟ್ಟಿಲು ಈಗ ಒಂದು ಮೆಟ್ಟಿಲು ಹಿನ್ನೀರಿನಲ್ಲಿ ಮುಳುಗಿದೆ. ಹುಷಾರಾಗಿ ಹತ್ತಬೇಕು. ಹತ್ತಿ ಕುಳಿತು ಒದ್ದೆ ಕಾಲುಗಳನ್ನು ಮುದುರಿಕೊಂಡು ತಲೆಯೆತ್ತಿದರೆ ಸಾಗರೋಪಮೆಯಾಗಿ ಹಿನ್ನೀರಿನ ಜಲರಾಶಿ ಎದುರಿಗೇ ಮೊರೆಯುತ್ತಿದೆ!

ಅಲೆಗಳು ಮೆಲ್ಲಗೆ ನಾವು ಕುಳಿತಿರುವ ಅರಳಿ ಮರದ ಕಟ್ಟೆಗೆ ತಾಕಿ, ಹಿಂದೆ ಸರಿಯುತ್ತಿವೆ. ಹಿಂದೆ ತಿರುಗಿ ನೋಡಿದರೆ ಬಾಚಿಗೊಂಡನಹಳ್ಳಿಯ ಮನೆಗಳು, ಬಟ್ಟೆ ಒಗೆಯುತ್ತಿರುವ ಬಾಲೆಯರು. ಪತ್ರಿಕೆಯನ್ನೋ, ಷೇಕ್ಸ್‌ಪಿಯರ್ ಸಾನೆಟ್‌ನ್ನೋ, ಎಲಿಯಟ್‌ನ ಕವನವನ್ನೋ, ಕಾರಂತರ ಕಾದಂಬರಿಯನ್ನೋ, ಮಾರ್ಕ್ಸ್‌ನ ಸಮತಾವಾದದ ಥಿಯರಿಯನ್ನೋ ಹಿಡಿದು ಓದುತ್ತ, ಹಿನ್ನೀರಿನ ಚಲನಶೀಲ ಮಂದ್ರಸ್ಥಾಯಿಯ ಸ್ವರವನ್ನು ಕೇಳಿಸಿಕೊಳ್ಳುತ್ತ ಮರಕ್ಕೆ ಒರಗಿ ಕುಳಿತರೆ, ಸ್ವರ್ಗವೆಂಬುದು ಎಲ್ಲೋ ಕಾಣದೇ ಇರುವ ಲೋಕದಲ್ಲಿದೆ ಎಂದು ನಂಬುವುದಾದರೂ ಹೇಗೆ? ಏಕೆ?

ಸ್ವರ್ಗಕ್ಕೆ ಬಣ್ಣಗಳಿದ್ದರೆ ಅವು ಇಲ್ಲಿಯ ಹಿನ್ನೀರಿನ ನೀಲಛಾಯೆ, ನಡುನಡುವೆ ಕೆಸರಿನ ಬಣ್ಣ, ಸುತ್ತಲಿನ ಹಸಿರು, ಚಿಟ್ಟೆ-ಹಾತೆ-ಹೂ ಎಲೆಗಳ ಬಣ್ಣವನ್ನಲ್ಲದೆ ಮತ್ತೇನನ್ನು ತಾನೆ ಪ್ರತಿಫಲಿಸಲು ಸಾಧ್ಯ? ಸ್ವರ್ಗದಲ್ಲಿ ಶಬ್ದವಿದ್ದರೆ ಈ ಜಲರಾಶಿಯ ಚಲನೆ, ಚಿಲಿಪಿಲಿ ಇಂಚರದಂತಲ್ಲದೆ ಇನ್ನು ಹೇಗಿರಲು ಸಾಧ್ಯ? ಸ್ವರ್ಗದಲ್ಲಿ ಮೌನವೆಂಬುದಿದ್ದರೆ ಇಲ್ಲಿಯ ನಿಶ್ಯಬ್ದವನ್ನಲ್ಲದೆ ಇನ್ನೇನನ್ನು ಹೋಲಲು ಸಾಧ್ಯ? ಒಂದೆರಡು ವಾರಗಳಲ್ಲಿ ಹಿನ್ನೀರು ಮೆಟ್ಟಿಲು ಬಿಟ್ಟು ಕೆಳಗಿಳಿಯಿತು. ಮತ್ತೆರಡು ವಾರಗಳಲ್ಲಿ ನೆಲ ಕಾಣಿಸಿತು. ಅತ್ತ ಎರಡು ವಾರಗಳಲ್ಲಿ ಹಲವು ಎಕರೆಯ ಭೂಮಿಯ ಕಪ್ಪು, ಕೆಂಪು ಮಿಶ್ರಿತ, ನುಣುಪಾದ, ಹೂವಿನಷ್ಟು ಮೃದುವಾದ ಮೆಕ್ಕಲುಮಣ್ಣು ಸೂರ್ಯನ ಬೆಳಕಿಗೆ ಹೊಸ ಹೊಳಪು ತಳೆಯುತ್ತ ಮೆಲ್ಲಗೆ ಒಣಗತೊಡಗಿತು.

ಡಿಸೆಂಬರ್‌ನ ಹೊತ್ತಿಗೆ, ಅಗೋ ಅಗೋ… ನೂರಾರು ಎಕರೆಯ ಫಲವತ್ತಾದ ಭೂಮಿ ಮೈತಳೆದು, ಭೋರಿಟ್ಟು ಮೊರೆಯುತ್ತಿದ್ದ ಹಿನ್ನೀರು ದೂರ ದೂರಕ್ಕೆ ಸಾಗತೊಡಗಿತ್ತು. ಬದಲಾವಣೆಯೇ ಪ್ರಕೃತಿಯ ಧರ್ಮ ಎಂಬುದಕ್ಕೆ ಸಾಕ್ಷಿಯಾಗಿ ಒದಗಿ ನಿಂತು, ನಾನೆಂಬ ನನ್ನನ್ನು ಸೋಜಿಗಕ್ಕೆ ಒಳಗು ಮಾಡಿತ್ತು! ನೋಡು ನೋಡುತ್ತಿದ್ದಂತೆ ಐದಾರು ಟ್ರ್ಯಾಕ್ಟರ್‌ಗಳು, ದೊಡ್ಡ ಚಕ್ರದ ಯಂತ್ರ ಪ್ರತ್ಯಕ್ಷವಾದವು. ವಾರವೊಪ್ಪತ್ತಿನಲ್ಲಿ ಭೂಮಿ ಬಿತ್ತನೆಗೆ ಅಣಿಗೊಂಡುಬಿಟ್ಟಿತ್ತು.

ಈ ಮಧ್ಯೆ ತುದಿಭಾಗದಲಿ ಒಂದು ವಿಶೇಷ ಮಡಿಯನ್ನು ಸಿದ್ಧಮಾಡಿ, ಭತ್ತದ ಬೀಜ ಚೆಲ್ಲಲಾಗಿತ್ತು. ಆ ಕೆಂಪು ಮಣ್ಣಿನ ಹಿನ್ನೆಲೆಯಲ್ಲಿ ಭತ್ತದ ಸಸಿಗಳು ಹಸಿರು ಅಕ್ಕಿಕಾಳಿನಂತೆ ಇಷ್ಟಿಷ್ಟೇ ಮೊಳಕೆಯೊಡೆದು, ಪುಟ್ಟ ಪುಟ್ಟ ಎಳೆ ಸಸಿಗಳು ಜೀವ ತಳೆಯುತ್ತಿದ್ದುದನ್ನು ಪ್ರತಿದಿನ ಗಮನಿಸುವುದೇ ಒಂದು ಧ್ಯಾನ! ಕುಳಿತು, ನಿಂತು, ಬಗ್ಗಿ, ಮೊಣಕಾಲೂರಿ ವಿವಿಧ ಕೋನಗಳಲ್ಲಿ ಆ ಸಸಿಗಳನ್ನು ಧನ್ಯತೆಯಿಂದ ನೋಡನೋಡುತ್ತ ಪ್ರಕೃತಿಯ ಮೋಹಕತೆಗೊಂದು ವ್ಯಾಖ್ಯಾನ ಕೊಡಲಾರದೆ ಮೌನದಲ್ಲಿ ಮುಳುಗಿದೆ.

ಹದಿನೈದು ದಿನಗಳ ನಂತರ ಪಾಕಗೊಂಡ ಗದ್ದೆಯಲ್ಲಿ ಕಚ್ಚೆ ಕಟ್ಟಿಕೊಂಡ ೫೦ಕ್ಕೂ ಹೆಚ್ಚು ಜನ ಹೆಣ್ಣಾಳು-ಗಂಡಾಳುಗಳು ಬೆಳಿಗ್ಗೆಯಿಂದ ಇಳಿ ಮಧ್ಯಾಹ್ನದವರೆಗೆ ಬಗ್ಗಿಸಿದ ಬೆನ್ನು, ಕತ್ತು ಮೇಲೆತ್ತದಂತೆ ನೆಲ್ಲ ಹಗಿ(ಭತ್ತ ನಾಟಿ)ಯನ್ನು ಕೆಸರಿನಲ್ಲಿ ಊರಿದ್ದೂ ಊರಿದ್ದೇ! ನಾನು ನೋಡಿದ್ದೂ ನೋಡಿದ್ದೇ!

ಅನಂತರ ಮೂರ್ನಾಲ್ಕು ತಿಂಗಳುಗಳು ನಾಟಿಗೊಂಡು ಭತ್ತದ ಸಸಿಗಳ ಜೀವೋನ್ಮುಖತೆಯ ದಿನಗಳು. ಕೆಲದಿನಗಳ ಹಿಂದೆ ಹಿನ್ನೀರಿನ ನೀಲಛಾಯೆಯಿದ್ದ ಪ್ರದೇಶ ಈಗ ಹಸಿರಿನಿಂದ ಮುಚ್ಚಿ ಹೋದ ಸಂದರ್ಭ. ಎಲ್ಲೆಲ್ಲಿಂದ ಬಂದವೋ. ಹಕ್ಕಿಗಳ ಸಂಸಾರ. ಚಿಲಿಪಿಲಿಯ ಹೊಸ ನಿನಾದ -ದೃಶ್ಯ ವೈಭವಕ್ಕೆ ಶಬ್ದವೈಭವವನ್ನು ಕಂಪೋಸ್ ಮಾಡಿದಂತೆ! ಪಕ್ಷಿ ತಜ್ಞ ಸಲೀಂ ಅಲಿಯವರ ಪುಸ್ತಕದ ಧೂಳು ಕೊಡವಿ, ಫೋಟೋ ವಿವರಗಳನ್ನು ಹುಡುಕುತ್ತಾ ಪಕ್ಷಿಗಳ ತಳಿ-ಪ್ರಭೇದ ಗುರುತಿಸುವ ಯತ್ನ ನಡೆಸಿದೆ. ಬಯಲುಸೀಮೆಯಲ್ಲಿ ಈ ಜೀವಸಮೃದ್ಧಿ-ವೈವಿಧ್ಯತೆಯನ್ನು ಸೃಷ್ಟಿಸಿದ ಅಣೆಕಟ್ಟೆಗೆ ಶರಣೆನ್ನದೆ ಹೇಗಿರುವುದು?

ಇತಿಹಾಸ ನಿರ್ಮಿಸುವಷ್ಟು ಮಹತ್ವದ್ದಾದ ಹಿನ್ನೀರು ಸೃಷ್ಟಿಯಾದದ್ದು ಕ್ರಿಸ್ತಪೂರ್ವದ ಕಾಲದಲ್ಲಿ. ಮೆಸಪಟೋಮಿಯ ನಾಗರಿಕತೆಯ ಜನರು ಯೂಪ್ರೆಟಿಸ್ ಮತ್ತು ಟೈಗ್ರಿಸ್ ನದಿಗಳ ನೆರೆಹಾವಳಿಯಿಂದಾಗಿ ಬೇಸತ್ತು ಅದನ್ನು ತಡೆಯುವುದಕ್ಕಾಗಿ ಎರಡು ಗುಡ್ಡಗಳ ನಡುವಿನ ಪ್ರದೇಶ ಆರಿಸಿಕೊಂಡು ಅರ್ಧಚಂದ್ರಾಕಾರವಾದ ಬೃಹತ್ ತಡೆಗೋಡೆ ನಿರ್ಮಿಸಿದರು. ಪ್ರಪಂಚದ ಮೊದಲ ಹಿನ್ನೀರನ್ನು ಸಂಗ್ರಹಿಸಿದರು! ಕ್ರಿ.ಪೂ. ೩೦೦೦ದಲ್ಲಿ ಕಟ್ಟಲ್ಪಟ್ಟ ಜಾವಾ ಡ್ಯಾಂ ಜೋರ್ಡಾನ್‌ನಲ್ಲಿದ್ದಿತಾಗಿ ದಾಖಲೆಯಾಗಿದೆ. ವಾಸ್ತು ತಂತ್ರಜ್ಞಾನ ಮುಂದುವರಿಯುತ್ತ ಈಜಿಪ್ಟ್‌ನ ಕೈರೋದಲ್ಲಿ ಕ್ರಿ.ಪೂ. ೨೬೦೦ರಲ್ಲಿ ಸದಾ-ಉಲ್-ಕಫರಾ ಡ್ಯಾಂ ನಿರ್ಮಿಸಲಾಯ್ತು. ಅದೂ ಭದ್ರವಾದದ್ದೇನಾಗಿರಲಿಲ್ಲ. ರೋಮನ್ನರು ಕಾಂಕ್ರೀಟ್ ಕಂಡು ಹಿಡಿದ ನಂತರ ಲೇಕ್ ಹೋಂಸ್ ಡ್ಯಾಂ, ಹರ್ ಬಾಕಾ ಡ್ಯಾಂ, ಸುಬಿಯಾಕೋ ಡ್ಯಾಂಗಳನ್ನು ಕಟ್ಟಲಾದಾಗ ಹಿನ್ನೀರಿನ ಮಹತ್ವ, ಉಪಯುಕ್ತತೆ ಜೊತೆಗೆ ಸೌಂದರ್ಯಗಳು ಒಂದೊಂದಾಗಿ ಬೆಳಕಿಗೆ ಬಂದವು.

ಹಿನ್ನೀರನ್ನು ಕೃಷಿಗೆ ಬಳಸಿಕೊಂಡ ಮೊದಲಿಗರು ಚೀನಾದವರು. ದು-ಜಿ ಯಾಂಗ್-ಯಾನ್ ನೀರಾವರಿ ಪದ್ಧತಿಯೆಂದೇ ಹೆಸರಾದ ಇದು ಕ್ರಿ.ಪೂ. ೨೫೧ರಲ್ಲಿ ಬಳಕೆಯಲ್ಲಿತ್ತು. ಡಚ್ಚರಂತೂ ಹೊಸನಗರಗಳಿಗೆ ಡ್ಯಾಂ ಪದವನ್ನು ಸೇರಿಸಿಕೊಂಡೇ ನಾಮಕರಣ ಮಾಡಿದ್ದರು. ಆಮ್‌ಸ್ಟಲ್ ನದಿಯ ಹಿನ್ನೀರಿನ ಪ್ರದೇಶವನ್ನು ಆಂಸ್ಟರ್‌ಡ್ಯಾಂ, ರೋಟ್ಟೆ ನದಿಯ ಅಣೆಕಟ್ಟು ಪ್ರದೇಶವನ್ನು ರೋಟ್ಟರ್‌ಡ್ಯಾಂ ಎಂದು ಕರೆದಿದ್ದಾರೆ. ಆಂಸ್ಟರ್ ಡ್ಯಾಂನ ೮೦೦ ವರ್ಷ ಹಳೆಯದಾದ ಪ್ರದೇಶವನ್ನು ಈಗಲೂ ಡ್ಯಾಂ ಸರ್ಕಲ್ ಎಂದೇ ಕರೆಯಲಾಗುತ್ತದೆ.

೧೮೩೨ ರಲ್ಲಿ ಫ್ರೆಂಚ್ ವಿಜ್ಞಾನಿ ಬೆನೋಲ್ಟ್ ಫರ್ನಿರಾನ್ ವಾಟರ್ ಟರ್ಬೈನ್‌ಗಳನ್ನು ಕಂಡು ಹಿಡಿದ ನಂತರ ಜಲವಿದ್ಯುತ್ ಯೋಜನೆಗಳು ಆರಂಭಗೊಂಡು ಡ್ಯಾಂ ಇತಿಹಾಸಕ್ಕೆ ಪ್ರಮುಖ ತಿರುವು ದೊರಕಿತು. ಕ್ರಿ.ಶ ೧೯೩೬ರಲ್ಲಿ ಕೊಲರಾಡೋ ನದಿಗೆ ಹೂವರ್‌ಡ್ಯಾಂ ಕಟ್ಟಲ್ಪಟ್ಟು ನೀರಿನ ಶಕ್ತಿ ವಿದ್ಯುತ್ತಾಗಿ ಪರಿವರ್ತನೆಗೊಂಡಿದ್ದೇ ತಡ-ಪ್ರಪಂಚದಾದ್ಯಂತ ಪುಂಖಾನುಪುಂಖವಾಗಿ ಡ್ಯಾಂಗಳು ಎದ್ದು ನಿಂತು, ಕ್ರಮಬದ್ಧವಾದ ಹಿನ್ನೀರನ್ನು ಸೃಷ್ಟಿಸಿದವು. ೧೯೯೭ರ ಸುಮಾರಿಗೆ ೮೦೦.೦೦೦ ಡ್ಯಾಂಗಳು ಪ್ರಪಂಚದಾದ್ಯಂತ ನಿರ್ಮಾಣಗೊಂಡವೆಂದು ದಾಖಲಾಗಿದೆ. ರಚನೆಗನುಗುಣವಾಗಿ ಡ್ಯಾಂಗಳನ್ನು ಟಿಂಬರ್ ಡ್ಯಾಂ, ಆರ್ಕ್ ಗ್ರ್ಯಾವಿಟಿಡ್ಯಾಂ ಎಂಬ್ಯಾಂಕ್‌ಮೆಂಟ್‌ಡ್ಯಾಂ, ಬ್ಯಾರೇಜ್, ಮೇಸಿನರಿಡ್ಯಾಂಗಳೆಂದು ವಿಂಗಡಿಸಬಹುದಾದರೂ ಹಿನ್ನೀರು ಎಂಬ ಜೀವಸಂಭ್ರಮಕ್ಕೆ ಯಾವ ವಿಂಗಡಣೆಯೂ ಅನ್ವಯವಾಗುವುದಿಲ್ಲ. ತಜಕಿಸ್ತಾನದ ನ್ಯೂರೆಕ್ ಡ್ಯಾಂ ೩೦೦ ಮೀ ಎತ್ತರವಾಗಿದ್ದು ಇದೇ ಅತಿ ಎತ್ತರದ ಡ್ಯಾಂ ಎನ್ನಲಾಗಿದೆ. ಆದ್ದರಿಂದ ಇದರ ಹಿನ್ನೀರೇ ಪ್ರಪಂಚದ ವಿಶಾಲ ಹಿನ್ನೀರು ಎನ್ನಬಹುದು.

ಭಾರತದಲ್ಲಿರುವ ಸಾವಿರಕ್ಕೂ ಹೆಚ್ಚು ಬೃಹತ್ ಮತ್ತು ಚಿಕ್ಕ ಅಣೆಕಟ್ಟುಗಳಲ್ಲಿ ತಮಿಳುನಾಡಿನಲ್ಲೇ ಅತಿ ಹೆಚ್ಚಿನ ಅಂದರೆ ೬೦ ಅಣೆಕಟ್ಟುಗಳಿವೆ. ಕರ್ನಾಟಕದ ೮ ಪ್ರಮುಖ ಅಣೆಕಟ್ಟುಗಳಲ್ಲಿ (ಘಟಪ್ರಭಾ, ಕಾವೇರಿಯ ಕೆ.ಆರ್.ಎಸ್, ಕೃಷ್ಣೆಯ ಆಲಮಟ್ಟಿ, ಶರಾವತಿಯ ಲಿಂಗನಮಕ್ಕಿ, ಕಾಳಿಯ ಸೂಪಾ ಮತ್ತು ಕದ್ರಾ, ಹೇಮಾವತಿ, ಹಾರಂಗಿ, ತುಂಗಭದ್ರಾ) ತುಂಗಭದ್ರಾ ಪ್ರಾಜೆಕ್ಟ್ ಪುರಾತನವಾದದ್ದು ಮತ್ತು ವಿಶಾಲ ಹಿನ್ನೀರಿನದ್ದು ಎಂಬ ಹೆಮ್ಮೆ ಬಳ್ಳಾರಿಗರದ್ದು.

ತುಂಗಭದ್ರೆ ಮಳೆಗಾಲದಲ್ಲಿ ರುದ್ರಕಾಳಿಯೇ ಸೈ!! ಇದರ ನಿಯಂತ್ರಣ ಉಪಾಯವಾಗಿದೆ. ಆರ್ಥರ್ ಕಾಟನ್ ಕ್ರಿ.ಶ ೧೮೬೦ರಲ್ಲಿ ತುಂಗಭದ್ರಾ ಪ್ರಾಜೆಕ್ಟ್‌ನ ಬೀಜ ಬಿತ್ತಿದ. ಬಯಲಿನಲ್ಲಿ ಗುಡ್ಡ ಪ್ರದೇಶದಲ್ಲಿ ಹರಿಯುವ ನದಿಯೇ ಅಣೆಕಟ್ಟಿಗೆ ಯೋಗ್ಯವೆಂಬ ಕಾರಣದಿಂದ ಹೊಸಪೇಟೆ ಕಣಿವೆ ಈ ಪ್ರಾಜೆಕ್ಟ್‌ಗೆ ಆಯ್ಕೆಯಾಗಿತ್ತು.

ಮದ್ರಾಸಿನ ಎನ್. ಪರಮೇಶ್ವರನ್ ಪಿಳೈ ೧೯೩೩ರಲ್ಲಿ ಅಂತಿಮಗೊಳಿಸಿದ ತುಂಗಭದ್ರ ಅಣೆಕಟ್ಟು ಬಾಲಗ್ರಹ ಕಾಟದಿಂದ ನರಳಿದ್ದೇ ಹೆಚ್ಚು. ಅಂತೂ ೧೯೪೫ರ ಫೆಬ್ರವರಿ ೨೮ರಂದು ಪ್ರಿನ್ಸ್ ಆಫ್ ಬೇರರ್ (Prince of Berar) ಮತ್ತು ಸರ್ ಆರ್ಥರ್ ಹೋಪರಿಂದ ಹೊಸಪೇಟೆಯಲ್ಲಿ ಅಡಿಗಲ್ಲು ಬಿತ್ತು. ತಾಂತ್ರಿಕ, ರಾಜಕೀಯ ಭಿನ್ನಾಭಿಪ್ರಾಯಗಳಿಂದ ನಿರಂತರ ಕುಂಟಿದ ಪ್ರಾಜೆಕ್ಟ್ ಕೊನೆಗೂ ಬಂದದ್ದು ಸರ್.ಎಂ.ವಿಶ್ವೇಶ್ವರಯ್ಯನವರ ಬಳಿಗೆ. ೧೯೫೩ ರಿಂದ ಆಂಧ್ರ, ಮೈಸೂರು ಮತ್ತು ಮದ್ರಾಸ್‌ಗಳ ಜಂಟಿಯಾಗಿ ಕಾಮಗಾರಿ ಆರಂಭಿಸಿದರೂ ೧೯೫೬ರಲ್ಲಿ ಭಾಷಾವಾರು ರಾಜ್ಯವಿಂಗಡಣೆಯ ನಂತರ ಕರ್ನಾಟಕಕ್ಕೆ ಸೇರಲ್ಪಟ್ಟು, ಎಂ.ಎಸ್.ತಿರುಮಲೆ ಅಯ್ಯಂಗಾರರು ತುಂಗಭದ್ರಾ ಪ್ರಾಜೆಕ್ಟ್‌ನ ಮುಖ್ಯ ಇಂಜಿನಿಯರಾಗಿದ್ದು, ಅಣೆಕಟ್ಟು ಮುಗಿಯುವವರೆಗೂ ಜವಾಬ್ದಾರಿ ವಹಿಸಿಕೊಂಡಿದ್ದರು.

ಪ್ರಪಂಚ ಭೂಪಟದಲ್ಲಿ ೭೮.೨೫ ರ ರೇಖಾಂಶ ಮತ್ತು ೧೫-೯೫ ಅಕ್ಷಾಂಶದಲ್ಲಿ ಬರುವ ಹೊಸಪೇಟೆಯಲ್ಲಿ ಕಟ್ಟಲ್ಪಟ್ಟ ತುಂಗಭದ್ರಾ ಅಣೆಕಟ್ಟೆಯ ಜಲಶೇಖರಣಾ ಸಾಮರ್ಥ್ಯ ೨೩೫ tmc ಯಷ್ಟಿದೆ. ಹೂಳಿನಿಂದಾಗಿ ಈಗ ೩೦ tmc ಸಾಮರ್ಥ್ಯ ಕಡಿಮೆಯಾಗಿದೆ. ನೀರು ಹೊರಬಿಡಲು ೨೭ ಸ್ಟೀಲ್‌ಗೇಟ್ಸ್‌ಗಳಿವೆ. ಈ ನೀರಿನ ೯೪% ರಷ್ಟು ವ್ಯವಸಾಯಕ್ಕೆ, ೨% ನಷ್ಟು ಕುಡಿಯುವ ನೀರಿಗಾಗಿ, ೪% ನಷ್ಟು ಉದ್ದಿಮೆಗಳಿಗಾಗಿ ಬಳಕೆಯಾಗುತ್ತಿದೆ. ಲಾಭ ಪಡೆಯುತ್ತಿರುವ ಮುಖ್ಯ ಭೂಭಾಗಗಳೆಂದರೆ ಕರ್ನಾಟಕದ ಬಳ್ಳಾರಿ, ರಾಯಚೂರು, ಕೊಪ್ಪಳ ಮುಂತಾದವು ಮತ್ತು ಆಂಧ್ರಪ್ರದೇಶದ ಕರ್ನೂಲ್, ಕಡಪ, ಮೆಹಬೂಬ್ ನಗರ ಇತ್ಯಾದಿ. ಹಗರಿಬೊಮ್ಮನಹಳ್ಳಿ ತಾಲೂಕೊಂದರಲ್ಲಿಯೇ ಹಿನ್ನೀರು ಸಾಲಿನ ಹಳ್ಳಿಗಳಾದ ಕಿತ್ನೂರು, ಅಡವಿ ಆನಂದದೇವನಹಳ್ಳಿ, ಅಂಕಸಮುದ್ರ, ತಂಬ್ರಹಳ್ಳಿ, ಕಡ್ಲಬಾಳು, ಬಾಚಿಗೊಂಡನಹಳ್ಳಿಯಲ್ಲಿ ಕೃಷಿಯ ಹಲವು ಮುಖಗಳನ್ನು ಹೊತ್ತು ನಿಂತಿವೆ.

ಕೃಷಿಸಂಬಂಧಿತ ಮೆಷೀನ್‌ಗಳು ಹಿನ್ನೀರ ಬದುಕನ್ನು ಆಧುನಿಕಗೊಳಿಸಿವೆ. ಸಮಯವೂ ಉಳಿತಾಯ. ಮಳೆ ಯಾವಾಗ ಬಂದೀತೋ? ಬೆಳೆ ನಾಶವಾದೀತೋ? ಎಂಬ ಭಯಕ್ಕೆ ಈ ಮಷೀನ್‌ಗಳೇ ಪರಿಹಾರೋಪಾಯಗಳು. ಅಫ್‌ಕೋರ್ಸ್ ಎತ್ತುಗಳು, ಕಣಗಳ ಸೌಂದರ್ಯವಿಲ್ಲ. ಹಿಂದಿನ ಗ್ರಾಮೀಣ ಸೊಗಡಿನ ಸೊಗಸಾದ ದೃಶ್ಯಗಳಿಲ್ಲ. ಅವುಗಳನ್ನು ಬಲಿಕೊಟ್ಟೇ ಹೊಸ ಯಾಂತ್ರೀಕೃತ ಕೃಷಿ ಅಭಿವೃದ್ಧಿಪಡಿಸಿಕೊಳ್ಳಬೇಕಾಗಿದೆ.

ಇಂತಿಪ್ಪ ತುಂಗಭದ್ರಾ ಅಣೆಕಟ್ಟೆಯ ಹಿನ್ನೀರಿಗೆ ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಸಮಸ್ಯೆ ಬಹುದೊಡ್ಡದಾಗಿ ಕಾಡತೊಡಗಿದೆ. ಜನನಿಬಿಡ ಹೊಸಪೇಟೆ ಮತ್ತು ಸುತ್ತಲಿನ ಪ್ರದೇಶದ ದೈನಂದಿನ ತ್ಯಾಜ್ಯ ಮತ್ತು ಚರಂಡಿಗಳು, ಮೈನಿಂಗ್ ಧೂಳು, ಕೈಗಾರಿಕಾ ರಾಸಾಯನಿಕಗಳು, ಹಿನ್ನೀರಿನ ನೈರ್ಮಲ್ಯದ ಕತ್ತು ಹಿಸುಕುತ್ತಿವೆ. ಒಮ್ಮೆಯಂತೂ ಕಪ್ಪನೆಯ ದ್ರಾವಣವೊಂದು ಹಿನ್ನೀರಿನ ಕಾಲುಭಾಗವನ್ನೇ ಆವರಿಸಿ ದಿಗಿಲು ಹುಟ್ಟಿಸಿತ್ತು. ನಂತರ ತಜ್ಞರು ಅದು ಮಲಿನತೆಯೇ ಆದರೂ ಪ್ರಮಾದವೇನಿಲ್ಲ. ಶುದ್ಧೀಕರಿಸಿ ಬಿಡುತ್ತಿದ್ದೇವೆ ಎಂದು ಅಪ್ಪಣೆ ಕೊಡಿಸಿದ ನಂತರ ಜನ ನೀರು ಕುಡಿದು ಧನ್ಯರಾಗಿ ನಿಟ್ಟುಸಿರುಬಿಟ್ಟರು! ಅನೇಕ ಸಲ ಸತ್ತ ಮೀನುರಾಶಿ ಡ್ಯಾಂಗೆ ಬಂದು ಬಡಿಯುತ್ತಿರುತ್ತದೆ. ಏಕೆಂಬುದು ತಿಳಿಯದು. ಮತ್ತೆ ವಿಪರೀತ ನೀರಾವರಿಯಿಂದ ಕೆಲವೆಡೆ ಮಣ್ಣು ಸವೆತ, ಆಮ್ಲೀಯತೆ ಕೂಡ.

“ಹೊಲ ಮನಿ ಹೋದುವಂತ ಇಲ್ಲಿಗೆ ಬಂದೀವ್ರಿ. ನಾನಿನ್ನೂ ಹುಟ್ಟಿದ್ದಿಲ್ಲ. ಆಗಲೇ ೬೦ ವರ್ಷದ ಮ್ಯಾಲಾತು. ಇಲ್ಲೇ ಚೊಲೋ ಹೊಲ, ತೋಟ ಮಾಡಿಕ್ಯಂಡೀವಿ. ಆದ್ರ… ಆ ಹಳೇ ಹಳ್ಳಿ ಹೊಲಗಳಿದಾವಲ್ರೀ… ಅದರಾಗ ನಮ್ಮಜ್ಜಂತೂ, ನಮ್ಮಮ್ಮಂದೂ ಗುದ್ದಿಗೋಳು (ಸಮಾಧಿಗಳು) ಇದ್ದುವಂತ. ಅವೂ ಮುಳುಗಬಾರದು ಅಂತ ನಮ್ಮಪ್ಪ ಬಾರೀ ಪ್ರಯತ್ನ ಮಾಡಿದ್ನಂತ. ಉಳೀಲಿಲ್ಲ…” ಸಮಾದೆಪ್ಪ ಹಿನ್ನೀರು ನೋಡುತ್ತ, ಅಜ್ಜ-ಅಜ್ಜಿಯನ್ನು ಹುಡುಕುತ್ತಿದ್ದಾನೆನಿಸಿ ಗಂಟಲುಬ್ಬಿ ಪ್ರಶ್ನೆಗಳನ್ನು ಸಾಕುಮಾಡಿದೆ. ಅವನ ಕಣ್ಣಿನ ದುಗುಡ, ಹತಾಶೆ ತಳಮಳ ಹುಟ್ಟಿಸುವಂತಿವೆ.

ಈ ಯಾತನೆ, ಅಭದ್ರತೆಗಳನ್ನು ವಿವರಿಸುವ ಶರಾವತಿ ನದಿ ಹಿನ್ನೀರನ್ನು ಕುರಿತ ನಾ.ಡಿಸೋಜಾರ ಮುಳುಗಡೆ ಪ್ರಸಿದ್ಧ ಕಾದಂಬರಿ, ತುಂಗಭದ್ರಾ ಪ್ರಾಜೆಕ್ಟ್‌ನಲ್ಲಿ ಮುಳುಗಡೆಯಾದ ಸಂತ್ರಸ್ತ ಗ್ರಾಮಗಳ ಪುನರ್ವಸತಿಗಾಗಿಯೇ ಮಲ್ಲಾಪುರ ಎಂಬ ತಾಲೂಕು ನಿರ್ಮಾಣಗೊಂಡಿದ್ದುದರ ಬಗ್ಗೆ ದಾಖಲೆಗಳಿವೆ. ದೇಶದಲ್ಲಿ ಆಗತಾನೇ ಸ್ವಾತಂತ್ರ್ಯ ಬಂದು ಆ-ಈ ಸಮಸ್ಯೆಗಳಲ್ಲೇ ಮುಳುಗಿ ಹೋಗಿದ್ದ ನೆಹ್ರೂ ಸರ್ಕಾರ ಮುಳುಗಡೆಗೊಳ್ಳುತ್ತಿರುವ ಹಳ್ಳಿಗಳ ಗ್ರಾಮಸ್ಥರನ್ನು ಕಡೆಗಣ್ಣಿನಿಂದಲೇ ನೋಡಿತು. ಅಣೆಕಟ್ಟೆಯಲ್ಲಿ ನೀರು ನಿಲ್ಲಲಾರಂಭಿಸಿದ ದಿನಗಳು ನಿಜಕ್ಕೂ ಗ್ರಾಮಸ್ಥರ ಪಾಲಿಗೆ ದುರ್ಭರ-ದಯನೀಯ. ಇತ್ತೀಚೆಗೆ ಎಂ.ಪಿ ಪ್ರಕಾಶ್ ಕೂಡ ಮಧ್ಯರಾತ್ರಿ ಮನೆಯೊಳಗೆ ನುಗ್ಗಿದ ಹಿನ್ನೀರಿನಿಂದ ನಿದ್ರೆಯಿಂದೆದ್ದು ಅಜ್ಜಿಯ ಕೈ ಹಿಡಿದು ಆ ಪ್ರದೇಶ ಬಿಟ್ಟು ಹೊರಟು ಬಂದಿದ್ದನ್ನು ನೆನಪಿಸಿಕೊಳ್ಳುತ್ತ `ಹೀಗೆ ಗುಳೆ ಬಂದದ್ದು ನನ್ನ ಪ್ರಜ್ಞೆಯ ಭಾಗವಾಗಿ ಉಳಿದುಹೋಗಿದೆ’ ಎಂದಿರುವುದುಂಟು. ನಾಣ್ಯಾಪುರ ದೇವಸ್ಥಾನದ ಗೋಪುರವಂತೂ ಹಿನ್ನೀರಿನಲ್ಲಿ ಮುಳುಗಿದ ನಂತರವೂ ಸಾಕಷ್ಟು ದಿನಗಳವರೆಗೆ ಕಾಣಿಸುತ್ತಿದ್ದು ಅನೇಕ ದಿನಗಳ ನಂತರ ಮುರಿದು ಬಿತ್ತಂತೆ. ಹೇಳುವವರು ಈಗಲೂ ಕಣ್ಣೀರು ತುಳುಕಿಸುತ್ತಾರೆ.

ಅದೆಲ್ಲ ನಡೆದು ೬೦ ವರ್ಷಗಳ ಮೇಲಾಗಿವೆ. ತಲೆಮಾರು ಬದಲಾಗಿರುವುದರಿಂದ ಜೀವನಶೈಲಿ, ಮನೋಭೂಮಿಕೆಯೂ ಬದಲಾಗಿದೆ. ತಾವು ಹಿಂದೆ ದ್ವೇಷಿಸಿದ, ಹಿನ್ನೀರೇ ನಿಧಾನವಾಗಿ ಬಿಸಿಲ ಭೂಮಿಯನ್ನು ಪಳಗಿಸಲು ಒಳ್ಳೆಯ ಸಾಧನವಾಗಿ ಪರಿಣಮಿಸಿದೆ. ಅಷ್ಟೇ ಅಲ್ಲ- ಹಿನ್ನೀರು ಹಿಂದೆ ಸರಿಯುವ ಸಮಯಕ್ಕೆ ಬೀಜ, ಗೊಬ್ಬರ, ಯಂತ್ರಗಳಿಗಾಗಿ ಹಣ ಎಲ್ಲ ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಂಡಿರಲೇಬೇಕು. ಅನಂತರ ನಾಲ್ಕೈದು ತಿಂಗಳಲ್ಲಿ, ಮಳೆ ಪುನರಾರಂಭಗೊಳ್ಳುವಷ್ಟರಲ್ಲಿ ಆಯಾ ಬೆಳೆಯ ಸುಗ್ಗಿ ಮಾಡಿಕೊಂಡು ಬಿಡಬೇಕು. ಈ ಶಿಸ್ತಿನ ವೇಳಾಪಟ್ಟಿ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುವಂತೆ ಮಾಡಿದೆ. ವಲಸೆಜನ ಈಗ ಪಟ್ಟಣಿಗರಾಗಿ ಹೊಸ ಬದುಕಿನೆಡೆಗೆ ಮುಖ ಮಾಡಿ ಯಶಸ್ವಿಯೂ ಆಗಿದ್ದಾರೆ. ನದಿ ನೀರ ಹಂಚಿಕೆಯ ವಿವಾದಗಳು, ರಾಜಕೀಯ ಗುದ್ದಾಟಗಳು, ಎಲ್ಲವನ್ನು ಮೀರಿದ ಒಂದು ಅಲೌಕಿಕ ಪ್ರಾಕೃತಿಕ ರಮಣೀಯತೆ ಹಿನ್ನೀರಿನಿಂದ ಬಿಸಿಲನಾಡಿಗೆ ಪ್ರಾಪ್ತವಾಗಿದೆ.

ಬದುಕಿನ ವ್ಯಸನಗಳೇನಾದರೂ ಇದ್ದಲ್ಲಿ ಅದಕ್ಕೆ ಈ ಹಿನ್ನೀರಿನ ಪರಿಸರ ಅಪ್ರತಿಮ ಮುಲಾಮು.
ಮಹಾತ್ಮ ಗಾಂಧಿ ಹೇಳಿದಂತೆ ಮರೆವು ಮಾನವನಿಗೆ ದೇವರು ಕೊಟ್ಟ ವರ. ನಿಜ. ಮರೆತಿರುವುದರಿಂದಲೇ ಈ ಸಂತ್ರಸ್ತ ಜನರ ಬದುಕು ಮುಂದುವರಿಯುವುದು ಸಾಧ್ಯವಾಗಿದೆ. ಅಪ್ಪ ಹೇಳುತ್ತಿದ್ದ, ಅಜ್ಜ ನೆನೆಸಿಕೊಳ್ಳುತ್ತಿದ್ದ, ಆ ದಿನಗಳು ಹೊಸ ತಲೆಮಾರಿಗೆ ನೋವಿನ ಇತಿಹಾಸ ಮಾತ್ರವಾಗಿ ಉಳಿದುಕೊಂಡಿದೆ. ಅವರ ಹೊಸ ಭವಿಷ್ಯ ಮತ್ತು ನನ್ನ ವೃತ್ತಿ ಅನುಭವದ ಪ್ರಜ್ಞೆ- ಈ ಹಿನ್ನೀರಿನಿಂದ ಬೇರ್ಪಡಲು ಸಾಧ್ಯವಿಲ್ಲ.