ಗಂಭೀರವಾಗಿ ಚರ್ಚಿಸುವವರು ಎದುರಾಗಿದ್ದರೆ ನಾನೂ ಗಂಭೀರವಾಗೇ ಚರ್ಚೆಗೆ ತೊಡಗುತ್ತಿದ್ದೆನೇನೊ. ಆದರೆ ಯಾಕೋ ಅಂಥ ಸಂದರ್ಭಗಳು ನ್ಯಾಷನಲ್ ಕಾಲೇಜಿನಲ್ಲಿದ್ದಾಗ ನಿರ್ಮಾಣ ಆಗಲೇ ಇಲ್ಲ. ನಗುವಿನ ಕಚಗುಳಿಗೆ ನಾನೂ ನಗುತ್ತ ಹಾಯಾಗಿದ್ದ ಕಾಲ ಅದು. ಇದು ಎಂಥ ಎಫೆಕ್ಟ್ ಉಂಟುಮಾಡಿತ್ತು ಅಂದರೆ ಕ್ಲಾಸಲ್ಲಿ ಪಾಠ ಮಾಡುವಾಗ ಸೀರಿಯಸ್ನೆಸ್ ಬಿಟ್ಟು ನಗಿಸುತ್ತ ಅರ್ಥೈಸಬೇಕು, ಉಳಿದಂತೆ ಸೀರಿಯಸ್ ಬರವಣಿಗೆ ಮಾಡಬೇಕು ಅಂದುಕೊಂಡಿದ್ದ ನನ್ನನ್ನ ಪೂರಾ ಬದಲಾವಣೆಗೆ ಗುರಿಪಡಿಸಿತ್ತು.
ಎನ್‌.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

‘ಯಾಕೆ ನಿಮಗೀಗ ಮಾರ್ಕ್ಸ್ ಕಾರ್ಡ್..? ತುರ್ತು ಅಂತ ಬರೆದಿದ್ದೀರಲ್ಲ… ಯಾತಕ್ಕೆ ತುರ್ತು..?’

ನಾನು ಕೊಟ್ಟ ಅರ್ಜಿ ಓದಿ ತಲೆ ಎತ್ತಿ ನಗುತ್ತ ನನ್ನ ಕೇಳಿದ್ದರು ಸಿದ್ಧಲಿಂಗಯ್ಯ ಮೇಷ್ಟ್ರು. ಬೆಂಗಳೂರು ವಿಶ್ವವಿದ್ಯಾಲಯಲ್ಲಿ ಕನ್ನಡ ಎಂ.ಎ ಮಾಡಲು ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಡ್ಮಿಷನ್ ಆಗಿ ಆಗಷ್ಟೇ ಒಂದು ತಿಂಗಳು ಕಳೆದಿತ್ತು. ಅಡ್ಮಿಷನ್ ಟೈಂನಲ್ಲಿ ಪದವಿ ತರಗತಿಯ ಒರಿಜಿನಲ್ ಮಾರ್ಕ್ಸ್ ಕಾರ್ಡ್ ಗಳನ್ನೆಲ್ಲ ಫಾರ್ಮಾಲಿಟಿ ಪ್ರಕಾರ ಸಲ್ಲಿಸಿದ್ದೆ. ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ನವರು ಅವುಗಳನ್ನ ಪರಿಶೀಲಿಸಿ ನನಗೆ ವಾಪಸ್ ಕೊಡುವಷ್ಟರಲ್ಲಿ ಅವು ನನಗೆ ತುರ್ತಾಗಿ ಬೇಕು ಅಂತ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿದ್ದ ಸಿದ್ಧಲಿಂಗಯ್ಯ ಮೇಷ್ಟ್ರಿಗೆ ಅರ್ಜಿ ಕೊಟ್ಟು ಅವರ ಮುಂದೆ ನಿಂತಿದ್ದೆ. ಆಗ ಮೇಷ್ಟ್ರು ನನ್ನನ್ನ ‘ಅಂಥದ್ದೇನು ತುರ್ತು..?ʼ ಎಂದು ಕೇಳಿದ್ದರು.

ಏನು ಹೇಳುವುದು ಅವರಿಗೆ? ನಿಜ ಹೇಳಿದರೆ ಇಕ್ಕಟ್ಟಿಗೆ ಸಿಕ್ಕಿಕೊಳ್ಳಬಹುದು ಅನಿಸಿತ್ತು. ಆ ಸಮಯದಲ್ಲಿ ನನ್ನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಪರಿಸ್ಥಿತಿ ತುಂಬ ಬಿಗಡಾಯಿಸಿತ್ತು. ಅಪ್ಪನಿಗೆ ನಾನು ಎಂ.ಎ ಮಾಡುವುದು- ಅದರಲ್ಲೂ ಕನ್ನಡದಲ್ಲಿ ಎಂ.ಎ ಮಾಡುವುದು ಸುತಾರಾಂ ಇಷ್ಟವಿರಲಿಲ್ಲ. ‘ಏನ್ಮಾಡ್ತೀಯ ಕನ್ನಡದಲ್ಲಿ ಎಂ.ಎ ಮಾಡಿ? ಏನೋ ನಿನಗೆ ಸಾಹಿತ್ಯ ಇಷ್ಟ ಅಂತ ಸುಮ್ಮನೆ ಅಡ್ಮಿಷನ್ ಆಗು. ಐ.ಎ.ಎಸ್ ಕೋಚಿಂಗ್ ಸೆಂಟರ್ ಮುಖ್ಯಸ್ಥರು ಒಬ್ಬರ ಹತ್ರ ಮಾತಾಡಿದ್ದೀನಿ. ಅಡ್ಮಿಷನ್ ಸಿಕ್ಕಿದೆ ಅಲ್ಲಿ. ಆ ಕಡೆ ಗಮನ ಕೊಟ್ಟು ಓದು. ನೋಡ್ಕೊ ನಿನ್ನ ಲೈಫ್ ಹೆಂಗಿರುತ್ತೆ. ಆ ಸೆಂಟರ್ ನವರು ಡಿಗ್ರಿ ಒರಿಜಿನಲ್ ಮಾರ್ಕ್ಸ್ ಕಾರ್ಡ್ಸ್ ಕೇಳಿದ್ದಾರೆ. ಒಂದು ಅರ್ಜಿ ಕೊಟ್ಟು ವಾಪಸ್ ತಗೊ. ಆಮೇಲೆ ಮತ್ತೆ ಕೊಟ್ಟರಾಯ್ತು. ನೀನು ಫಸ್ಟ್ ಇಯರ್ ಎಂ.ಎ ಗೆ ಹೋಗದಿದ್ರೂ ನಡೀತದೆ..’ ಅಂದಿದ್ದರು ಅಪ್ಪ.

ಅವರ ಮಾತನ್ನು ನಾನು ತಿರಸ್ಕರಿಸಲೂ ಆಗದಷ್ಟು ಅವರು ಸಿಟ್ಟುಗೊಂಡಿದ್ದರು. ‘ಇಲ್ಲ ಆಗಲ್ಲ…’ ಅಂತ ಒಂದೇ ಮಾತಲ್ಲಿ ತಿರಸ್ಕರಿಸಿದ್ದರೆ ಮನೆ ವಾತಾವರಣ ಹೇಗೆ ಬದಲಾಗಿ ನಿರ್ವಾತದ ವಾತಾವರಣ ಸೃಷ್ಟಿಯಾಗುತ್ತದೆ ಎಂಬುದರ ಪರಿಚಯ ನನಗೆ ಇತ್ತು.

ಇತ್ತ ಅಪ್ಪನ ಭಯ; ಅತ್ತ ಸಾಹಿತ್ಯದ ಕಡೆಗೆ ನನ್ನಲ್ಲಿ ವಿಪರೀತ ಒಲವು. ಕಿ.ರಂ.ನಾಗರಾಜ್ ಸರ್ ಪಾಠಕ್ಕೆ ಕಿವಿಯಾಗಬೇಕು ಅನ್ನುವ ತುಡಿತ. ಮೊದಲಿಂದಲೂ ಬೇಂದ್ರೆ ಹಾಗೂ ಅಡಿಗರ ಪದ್ಯಗಳ ಬಗೆಗೆ ವಿಪರೀತ ಅಂದರೆ ವಿಪರೀತ ಹುಚ್ಚು ಹತ್ತಿಸಿಕೊಂಡಿದ್ದ ನನಗೆ ಕಿರಂ ಮೇಷ್ಟ್ರು ಬೇಂದ್ರೆ ಬಗ್ಗೆ ಹಾಗೆ ವಿವರಿಸ್ತಾರಂತೆ.. ಹೀಗೆ ವಿವರಿಸ್ತಾರಂತೆ ಅಂತೆಲ್ಲ ಕಥೆ ಕೇಳಿ ಪುಳಕಗೊಂಡಿದ್ದೆ. ಅಪ್ಪನಿಗೆ ಬೇಂದ್ರೆ ಬಗ್ಗೆ ಗೌರವವೇನೋ ಇತ್ತು; ಜೊತೆಗೆ ಸಾಹಿತ್ಯದ ಬಗೆಗೆ ಗೌರವವೂ ಇತ್ತು. ತ.ರಾ.ಸು ಅವರ ಮೆಚ್ಚಿನ ಕಾದಂಬರಿಕಾರರು. ಅವರ ಕಾದಂಬರಿಗಳನ್ನ ಓದುವಾಗ ತಾವು ಅನುಭವಿಸಿದ ರೋಮಾಂಚನದ ಬಗ್ಗೆ ಹೇಳುತ್ತಿದ್ದರು. ಆದರೆ ನಾನು ಕನ್ನಡ ಎಂ.ಎ ಮಾಡ್ತೇನೆ ಅಂದಾಗ ಅವರ ಸಿಟ್ಟು ಧಗಧಗಿಸಿತ್ತು. ‘ಆದ್ರೆ ಡಿ.ಸಿ ಆಗ್ಬೇಕು..’ ಅಂತಿದ್ದರು. ನನಗೋ ಬೇಂದ್ರೆ, ಅಡಿಗರು ಮತ್ತು ಕಿರಂ ಸರ್ ಬಗ್ಗೆ ಧ್ಯಾನ.

ಒಲ್ಲದ ಮನಸ್ಸಿನಲ್ಲಿ ಅರ್ಜಿ ಬರೆದು ಸಿದ್ಧಲಿಂಗಯ್ಯ ಮೇಷ್ಟ್ರಿಗೆ ಕೊಟ್ಟು ಅವರ ಸಹಿ ಪಡೆದು ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ನಲ್ಲಿ ಕೊಟ್ಟರೆ ನನಗೆ ನನ್ನ ಒರಿಜಿನಲ್ ಮಾರ್ಕ್ಸ್ ಕಾರ್ಡುಗಳು ಸಿಗುವ ಅವಕಾಶ ಇತ್ತು.

ಯಾಕೊ ಆ ಹೊತ್ತು ಸಿದ್ಧಲಿಂಗಯ್ಯ ಮೇಷ್ಟ್ರಿಗೆ ಸುಳ್ಳು ಹೇಳಲು ಸುಳ್ಳು ಹೊಳೆಯಲೇ ಇಲ್ಲ. ನಿಜವನ್ನೇ ಹೇಳಿಬಿಟ್ಟೆ. ‘ಸರ್ ಅಪ್ಪನಿಗೆ ನಾನು ಸಾಹಿತ್ಯ ಓದೋದು ಇಷ್ಟ ಇಲ್ಲ. ಅವರಿಗೆ ನಾನು ಐ.ಎ.ಎಸ್ ಮಾಡಬೇಕು ಅಂತ ಇಚ್ಛೆ ಇದೆ. ಒಂದು ಕೋಚಿಂಗ್ ಸೆಂಟರ್ ನಲ್ಲಿ ಅಡ್ಮಿಷನ್ ಸಿಕ್ಕಿದೆ. ನನಗೋ ಬೇಂದ್ರೆ ಮತ್ತು ಅಡಿಗರನ್ನ ಬಿಟ್ಟು ಇರೋಕೆ ಆಗಲ್ಲ. ಅವರು ನನ್ನ ಭಾವಕೋಶದಲ್ಲಿ ಕದಲ್ತಿದ್ದರೆ ಒಂಥರಾ ನೆಮ್ಮದಿ. ಅಲ್ಲಿ ಮತ್ತು ಇಲ್ಲಿ ಎರಡೂ ಕಡೆ ಹೇಗೋ ನಿಭಾಯಿಸ್ತೀನಿ. ದಯವಿಟ್ಟು ಸಹಿ ಹಾಕಿಕೊಡಿ ಸರ್’ ಅಂದಿದ್ದೆ.

‘ಅಲ್ಲಿ ಅಡ್ಮಿಷನ್ ಆಗ್ಬಿಟ್ರೆ ಇಲ್ಲಿನ ಗತಿ ಏನು..?’ ಮತ್ತೆ ಕೇಳಿದ್ದರು. ‘ಸರ್ ಆಗಾಗ ಬಂದು ಹೋಗ್ತೀನಿ… ನೀವು ಅವಕಾಶ ಕಲ್ಪಿಸಿಕೊಡಬೇಕು…’ ಅಂತ ವಿನಂತಿಸಿಕೊಂಡೆ. ಮೇಷ್ಟ್ರು ತಮಾಷೆಯಾಗಿ ‘ನಮ್ಮಲ್ಲಿ ಬೇಂದ್ರೆ ಮತ್ತು ಅಡಿಗರು ಮಾತ್ರ ಇಲ್ಲ. ಬೇರೆಯವರೂ ಬಂದು ಸೇರ್ಕೊಂಡು ಬಿಟ್ಟಿದ್ದಾರೆ. ಅವರನ್ನೆಲ್ಲ ಹೇಗೆ ಗಮನಿಸ್ಕೋತೀರಿ..?’ ಅಂತ ಕೇಳಿದರು. ‘ಸರ್ ಅವರನ್ನೆಲ್ಲ ನಾನು ನೋಡ್ಕೊತೀನಿ ಸರ್..’ ಅಂದಿದ್ದೆ ರೌಡಿ ತರ.

ಮೇಷ್ಟ್ರು ನಕ್ಕಿದ್ದರು. ನಗುತ್ತಲೇ ತಲೆ ಆಡಿಸುತ್ತ ನನ್ನ ಅರ್ಜಿಯ ಮೇಲೆ ‘ಸೂಕ್ತ ಕ್ರಮಕ್ಕೆ..’ ಅಂತ ಬರೆದು ಸಹಿ ಮಾಡಿ ಕೊಡುತ್ತ ‘ಇಲ್ಲೂ ತೊಂದರೆ ಆಗದಂಗೆ ಮ್ಯಾನೇಜ್ ಮಾಡಿ. ನಿಮ್ಮನ್ನ ಇಲ್ಲೇ ಉಳಿಸಿಕೊಳ್ಳಿ ಅಂತ ನಾನೂ ಬೇಂದ್ರೆ ಮತ್ತು ಅಡಿಗರ ಹತ್ರ ಮಾತಾಡ್ತೀನಿ..’ ಅಂದರು.

ನಾನು ಬೆಚ್ಚಿಬಿದ್ದೆ. ಒಂದು ಕ್ಷಣ ಕನ್ಫ್ಯೂಸ್ ಆಗಿಹೋಯಿತು. ನಾನು ಎಂ.ಎ. ಗೆ ಸೇರಿದ ಕಾಲಕ್ಕೆ ಬೇಂದ್ರೆ ಮತ್ತು ಅಡಿಗರು ಇಬ್ಬರೂ ಭೌತಿಕವಾಗಿ ಇರಲಿಲ್ಲ ಎಂದು ನನಗೆ ಗೊತ್ತಿತ್ತು. ಆದರೂ ಮೇಷ್ಟ್ರು ಫ್ರೆಂಡ್ಲಿ ನೇಚರ್ ಕಂಡು ಖುಷಿಪಟ್ಟೆ. ಒಂದು ಕಿರುನಗೆ ತುಳುಕಿಸಿ ‘ಸರಿ ಸರ್..’ ಅಂತ ಅರ್ಜಿ ತೆಗೆದುಕೊಂಡು ಹೊರಡುವಾಗ ಸಿದ್ಧಲಿಂಗಯ್ಯ ಮೇಷ್ಟ್ರು ‘ಊಟ ಮಾಡಿದ್ರಾ….?’ ಎಂದು ಕೇಳಿದರು. ತಿರುಗಿ ‘ಈಗ ಮಾಡಬೇಕು ಸರ್..’ ಅಂತ ಹೊರಟಿದ್ದೆ. ಮೈಮನ ಅರಳಿಕೊಂಡ ಭಾವ. ‘ಇದು ಲಿಟರೇಚರ್ ಪೀಪಲ್ ಅಂದ್ರೆ… ಐ.ಎ.ಎಸ್ ನಲ್ಲೇನಿದೆ..’ ಅಂದುಕೊಂಡೇ ಹೆಜ್ಜೆ ಕದಲಿಸಿದ್ದೆ.

ಆ ಹೊತ್ತಿಗೆ ಸಿದ್ಧಲಿಂಗಯ್ಯ ಮೇಷ್ಟ್ರು ಬರೆದದ್ದನ್ನೆಲ್ಲ ಓದಿಕೊಂಡಿದ್ದೆ ಕೂಡ. ಅವರ ಪದ್ಯಗಳು ಅವು ರಚನೆಗೊಂಡ ಕಾಲಕ್ಕೆ, ತುಳಿತಕ್ಕೆ ಒಳಗಾಗಿದ್ದ ಸಮುದಾಯದವರಲ್ಲಿ ಕಿಚ್ಚು ಹೊತ್ತಿಸಿ ದೊಡ್ಡ ಆಂದೋಲನಕ್ಕೆ ಕಾರಣವಾಗಿದ್ದದ್ದು ಗೊತ್ತೇ ಇತ್ತು. ನನ್ನನ್ನೂ ಅವರ ಪದ್ಯಗಳು ಕಾಡಿದ್ದವು ನಿಜ; ಆದರೆ ಅವರ ‘ಊರುಕೇರಿ’ ಆತ್ಮಕಥನ ನನ್ನನ್ನ ವಿಪರೀತ ಅಂದರೆ ವಿಪರೀತ ಕಲಕಿ ಕಾಡಿತ್ತು.

ನಾನು ಸಿದ್ಧಲಿಂಗಯ್ಯ ಮೇಷ್ಟ್ರ ಪದ್ಯಗಳನ್ನ ಓದುವ ಹೊತ್ತಿಗೆ ಅವರನ್ನ ಕಂಡಿರಲಿಲ್ಲ. ಹಾಗಾಗಿ ಅವರ ಪದ್ಯಗಳನ್ನ ಓದುತ್ತಿದ್ದ ಹೊತ್ತು ಅವರು ಕೆಂಡದ ಹಾಗೆ ಪ್ರಜ್ವಲಿಸ್ತಲೇ ಇರ್ತಾರೆ ಅನ್ನುವ ಕಲ್ಪನೆ ಬಂದಿತ್ತು. ಆದರೆ ಅಧ್ಯಯನ ಕೇಂದ್ರದಲ್ಲಿ ಮೊದಲ ಬಾರಿ ಕಂಡು ಮಾತಿಗೆ ಇಳಿದಾಗ ಮತ್ತು ಅವರ ತಮಾಷೆಯ ಮಾತುಗಳನ್ನ ಕೇಳಿಸಿಕೊಂಡಾಗ ‘ಇದೇನು ಕೆಂಡವೇನಾದರೂ ತಣ್ಣಗಾಗಿ ಹೋಯಿತಾ..’ ಅನಿಸಿದ್ದು ನಿಜ. ಅವರು ಬೇಂದ್ರೆ ಮತ್ತು ಅಡಿಗರ ಜೊತೆ ಮಾತಾಡ್ತೀನಿ ಅಂದದ್ದು, ಊಟ ಮಾಡಿದ್ರಾ ..ಅಂತ ಕೇಳಿದ್ದು ನನ್ನ ಮನಸ್ಸಿಗೆ ನಾಟಿತ್ತು. ನಾನು ಅವರ ಕಡೆಗೆ ಆಕರ್ಷಿತನಾಗಲು ಆರಂಭಿಸಿದೆ.

ಮೇಷ್ಟ್ರ ಸಹಿ ಕಂಡ ಕೂಡಲೆ ನನಗೆ ಮಾರ್ಕ್ಸ್ ಕಾರ್ಡುಗಳು ಸಿಕ್ಕವು. ಅಪ್ಪನಿಗೆ ಖುಷಿಯಾಯಿತು. ಹೋಗಿ ಅಡ್ಮಿಷನ್ ಆದೆ. ಪಾಠಕ್ಕೂ ಕಿವಿಯಾಗಲು ಆರಂಭಿಸಿದೆ. ಒಂದು ವಾರಕ್ಕೇ ನನಗೆ ಸಾಕುಸಾಕಾಯಿತು. ಪ್ರಿಲಿಂಸ್ ಕ್ಲಿಯರ್ ಆಗಬೇಕಾದರೆ ಜಿ.ಕೆ (ಜನರಲ್ ನಾಲೆಡ್ಜ್) ತುಂಬ ತುಂಬ ಇರಬೇಕು ಎಂದು ಹೆದರಿಸುತ್ತಿದ್ದರು. ಪುಸ್ತಕದಲ್ಲಿರುವ ಆ ಜನರಲ್ ನಾಲೆಡ್ಜ್ ನೆಲ್ಲ ಕೆಡವಿದರೆ ಸುಮಾರು ಮೂಟೆ ಕಟ್ಟುವಷ್ಟು ಆಗುತ್ತಿತ್ತು. ತೀರಾ ದಣಿವಾದಾಗ ನಾನು ಜನರಲ್ ನಾಲೆಡ್ಜ್ ಬಳಸಿ ಕ್ಲಾಸಿಂದ ಎದ್ದು ನಡೆಯುತ್ತಿದ್ದೆ. ಏನೋ ಆರಾಮು ಮತ್ತು ನಿರಾಳ. ಆಮೇಲೆ ಅದೇ ಅಭ್ಯಾಸವಾಗಿ ಹೋಯಿತು. ಒಂದಷ್ಟು ಕಾಲ ಸುತ್ತಾಡಿದೆ. ಅಧ್ಯಯನ ಕೇಂದ್ರದಲ್ಲಿ ಕವಿಗೋಷ್ಠಿ ಅಂತ ಗೊತ್ತಾದಾಗ ಪದ್ಯ ಬರೆದುಕೊಂಡು ಹೋಗಿ ಹಾಜರಾಗುತ್ತಿದ್ದೆ. ಸಿದ್ಧಲಿಂಗಯ್ಯ ಮೇಷ್ಟ್ರು ಅದೇ ನಗುಮುಖದಲ್ಲಿ ‘ಹೇಗಿದೆ ನಿಮ್ಮ ಕೋಚಿಂಗ್? ಅಡಿಗರು ಕನ್ವಿನ್ಸ್ ಆದರು, ಆದರೆ ಬೇಂದ್ರೆ ಸುತಾರಾಂ ಒಪ್ಪಲಿಲ್ಲ..’ ಅಂತ ನಕ್ಕರು. ನಾನೂ ನಕ್ಕು ‘ಸರ್ ಆ ಪರಿ ಜನರಲ್ ನಾಲೆಡ್ಜ್ ತುಂಬಿಸಿಕೊಳ್ಳೋಕೆ ನನಗೆ ಕಷ್ಟ ಆಗ್ತಿದೆ. ನಮಗೆ ಅಷ್ಟೂ ಜನರಲ್ ನಾಲೆಡ್ಜ್ ಇಲ್ಲವಾ..? ತುಂಬ ಇನ್ಸಲ್ಟ್ ಮಾಡ್ತಿದ್ದಾರೆ ಅಲ್ಲಿ..’ ಅಂದಿದ್ದೆ. ‘ಹೌದೌದು ತಿರುಗಿಬೀಳಬೇಳು ಇಲ್ಲಾಂದ್ರೆ ಕಷ್ಟ..’ ಅಂದಿದ್ದರು ಮೇಷ್ಟ್ರು ನಗುತ್ತ.

ಎಂ.ಎ. ಮೊದಲನೆ ವರ್ಷ ಸರಿಯಾಗಿ ಕ್ಲಾಸ್ ಗಳನ್ನ ಅಟೆಂಡ್ ಮಾಡದಿದ್ದರೂ ಹೇಗೋ ಓದಿ ಹೆಚ್ಚಿನ ಅಂಕಗಳನ್ನೇ ಗಳಿಸಿದೆ. ಎರಡನೆ ವರ್ಷದ ಆರಂಭದಲ್ಲಿ ಕಿ.ರಂ. ಸರ್ ಒಮ್ಮೆ ನನ್ನ ಮೇಲೆ ವಿಪರೀತ ಸಿಟ್ಟು ಮಾಡಿಕೊಂಡು ಬೈದರು. ಹೀಗೆ ಕಂಡು ಹಾಗೆ ಮಾಯವಾಗ್ತೀರಿ.. ಏನಂದುಕೊಂಡಿದ್ದೀರಿ… ಅಂದಾಗ ನನ್ನಲ್ಲೊಂದು ಮಂದಹಾಸ ಮಿಂಚಿ ಮಾಯವಾಗಿತ್ತು.

ಸರಿ. ಕಿರಂ ಮೇಷ್ಟ್ರು ಸಿಟ್ಟಾಗಿದ್ದಾರೆ, ಒಂದಷ್ಟು ಕಾಲ ಕ್ಲಾಸ್ ಗಳಿಗೆ ಅಟೆಂಡ್ ಅಗೋಣ ಅಂತ ನಿರ್ಧರಿಸಿದೆ. ಹಾಗೆ ಮಾಡಿದಾಗ ಗೆಳೆಯರೆಲ್ಲ ಸೇರಿ ಮೊದಲನೆ ವರ್ಷದ ಆ್ಯಬ್ಸೆನ್ಸ್ ಬಗ್ಗೆ ನನ್ನನ್ನ ಪ್ರಸ್ನಿಸಿದರು. ಐ.ಎ.ಎಸ್ ಇದ್ದೇ ಇತ್ತಲ್ಲ ‘ಸೀ.. ಸಿವಿಲ್ ಸರ್ವಿಸ್ ಪ್ರಿಪರೇಷನ್ಸ್..’ ಎನ್ನುತ್ತ ಅವರಲ್ಲಿ ನನ್ನ ಬಗ್ಗೆ ಒಂದು ಚಿತ್ರ ಕಟ್ಟಿಕೊಳ್ಳಲಿ ಎಂದು ಇಂಗ್ಲಿಷ್ ನಲ್ಲಿ ಮಾತಾಡಲು ಆರಂಭಿಸಿದೆ. ಕೆಲವರು ನನ್ನನ್ನ ವಿಚಿತ್ರವಾಗಿ ನೋಡುತ್ತ ಜಾಗ ಖಾಲಿ ಮಾಡಿದರು. ಇಂಗ್ಲಿಷ್ ಹೇಗೂ ಶುರುಮಾಡಿದ್ದೀನಿ… ಹಾಗೇ ಮೇಂಟೇನ್ ಮಾಡೋಣ ಅಂದುಕೊಂಡು ಮುಂದುವರೆಸಿದೆ. ಕಡೆಗೆ ನನ್ನ ಇಂಗ್ಲಿಷ್ ಎಲ್ಲೆಲ್ಲೊ ತಲುಪಿ ಒಮ್ಮೆ ಗೆಳೆತಿಯೊಬ್ಬಳು ನನ್ನ ಎದುರು ಬಂದು ನಕ್ಕು ಕೈಕುಲುಕಿ ‘ನಂಗೂ ಸಿವಿಲ್ ಸರ್ವಿಸ್ ಬಗ್ಗೆ ಇಂಟ್ರೆಸ್ಟ್ ಇದೆ. ನೀವು ಅಪಿಯರ್ ಆಗ್ತಿದ್ದೀರಂತಲ್ಲ… ಚೂರು ನನಗೂ ಆ ಬಗ್ಗೆ ಇನ್ಫರ್ಮೇಷನ್ ಕೊಡಿ’ ಅಂದರು.

ಯಾಕಾಗಬಾರದು? ಸರಿ ಎಂದು ನನಗೆ ತಿಳಿದದ್ದು, ತಿಳಿಯದೇ ಇದ್ದದ್ದು ಎಲ್ಲದರ ಬಗ್ಗೆ ವಿವರಿಸಲು ಆರಂಭಿಸಿದೆ. ಆಕೆ ಕಿವಿಗೊಡುತ್ತಿದ್ದರು, ನಾನು ಹೇಳುತ್ತಲೇ ಇದ್ದೆ.

ಸಹಜವಾಗಿ ನಾವು ಜೊತೆಯಾಗಿ ಕದಲಲು ಆರಂಭಿಸಿದೆವು. ನಮ್ಮ ಓಡಾಟದ ಬಗ್ಗೆ ಗೆಳೆಯರು ಮಾತಾಡಲು ಆರಂಭಿಸಿದರು. ಇದು ನನಗೆ ಹಿಡಿಸಲಿಲ್ಲ. ಅವರವರ ಜಗತ್ತು ಅವರಿಗೆ. ಈ ಟ್ರೆಸ್ಪಾಸ್ ನನಗೆ ಹಿಡಿಸುತ್ತಿರಲಿಲ್ಲ. ಇನ್ಮುಂದೆ ಅಧ್ಯಯನ ಕೇಂದ್ರದ ಕಡೆ ತಲೆ ಹಾಕಬಾರದು ಅಂತ ನಿರ್ಧರಿಸಿ ಮತ್ತೆ ಸಿದ್ಧಲಿಂಗಯ್ಯ ಮೇಷ್ಟ್ರು ಚೇಂಬರ್ ಗೆ ಹೋದೆ. ಕೂರಲು ಸೂಚಿಸಿ ನಾನು ಗಂಭೀರವಾಗಿರುವುದನ್ನ ಅರಿತು ‘ಅಡಿಗರು ಏನಾದರೂ ಅಂದರಾ? ಯಾಕಿಷ್ಟು ಸೀರಿಯಸ್ಸು..?’ ಎಂದು ತಮಾಷೆ ಮಾಡಿದರು.

ನಾನು ನಮ್ಮ ಓಡಾಟದ ಬಗ್ಗೆ ಹರಡುತ್ತಿರುವ ಮಾತಿನ ಬಗ್ಗೆ ಬೇಸರ ವ್ಯಕ್ತಪಡಿಸಿ ಹೇಳಿದೆ. ಮೇಷ್ಟ್ರು ಏನಾದರೂ ಆ್ಯಕ್ಷನ್ ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಿದ್ದೆ. ಆದರೆ ಅವರು ನನಗೆ ‘ಅದೇ ನೀವು ತಪ್ಪು ಮಾಡ್ತಿರೋದು. ಅದಕ್ಕೇ ಓಡಾಡಬಾರದು ಅನ್ನೋದು. ಕೂತ್ಕೊಂಡಿದಿದ್ರೆ ಇವೆಲ್ಲ ಆಗ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಸ್ಥಾವರ ಸೇಫು. ಜಂಗಮ ಪ್ರಾಬ್ಲಮ್ಯಾಟಿಕ್. ಕ್ಯಾಂಪಸ್ ವಿಶಾಲವಾಗಿದೆ. ಕೂತ್ಕೊಳ್ಳಿ ಇಬ್ಬರೂ..’ ಅಂದರು.

ನಾನು ನಕ್ಕೆ. ಅವರೂ ನಕ್ಕರು. ಇದೆಂಥ ಕೌನ್ಸಿಲಿಂಗ್! ಒಂದೇ ಕ್ಷಣದಲ್ಲಿ ನಾನು ಹಗೂರಾಗಿದ್ದೆ. ಅನಂತರದಲ್ಲಿ ನಾನು ಓಡಾಡಲೂ ಇಲ್ಲ. ಕೂರಲೂ ಇಲ್ಲ. ನನ್ನಷ್ಟಕ್ಕೆ ನಾನು ಮತ್ತೆ ಅಧ್ಯಯನ ಕೇಂದ್ರ ಬಿಟ್ಟು ಅಲೆದಾಟ ಆರಂಭಿಸಿದೆ. ಕಡೆಗೆ ಪರೀಕ್ಷೆ ಕೂಡ ಬರೆದೆ. ಪಾಸೂ ಆದೆ.

ಮುಂದೇನು? ಮೇಷ್ಟ್ರಾಗಬೇಕೆಂಬ ಕನಸಿತ್ತಲ್ಲ, ಆದೆ. ನನ್ನ ಪ್ರೀತಿಯ ನ್ಯಾಷನಲ್ ಕಾಲೇಜಿನಲ್ಲಿ ಪಿಯು ಸ್ಟೂಡೆಂಟ್ಸ್ ಗೆ ಕ್ಲಾಸ್ ತಗೋಬೇಕಿತ್ತು. ನೋಡಿದರೆ ದ್ವಿತೀಯ ಪಿಯುಗೆ ಸಿದ್ಧಲಿಂಗಯ್ಯ ಮೇಷ್ಟ್ರ ‘ಏಕಲವ್ಯ’ ನಾಟಕ ಟೆಕ್ಸ್ಟ್ ಆಗಿತ್ತು. ಮೊದಲ ಪಿಯುಗೆ ಕಿರಂ ಸರ್ ಸರ್ ‘ಕಾಲಜ್ಞಾನಿ ಕನಕ’ ಪಠ್ಯವಾಗಿತ್ತು.

ಇಬ್ಬರೂ ಗೊತ್ತಿರುವ ಮೇಷ್ಟ್ರುಗಳ ಟೆಕ್ಟ್ಸ್ ಗಳೇ ಇಟ್ಟಿದ್ದರಿಂದ ನನ್ನಲ್ಲಿ ಕೊಂಚ ಧೈರ್ಯವಿತ್ತು. ಏನಾದರೂ ತೊಡಕು ಉಂಟಾದರೆ ಖುದ್ದು ಹೋಗಿ ಭೇಟಿ ಮಾಡಿ ಅವರ ಮಾತುಗಳಿಗೆ ಒಂದಿಷ್ಟು ಕಿವಿಯಾಗಿ ಬಂದರೆ ಪಾಠ ಮಾಡುವುದು ಸುಲಭವಾಗುತ್ತದೆ ಅಂದುಕೊಂಡಿದ್ದೆ. ಕಿರಂ ಮೇಷ್ಟ್ರು ಆಗಾಗ ನ್ಯಾಷನಲ್ ಕಾಲೇಜಿನಲ್ಲಿ ಸಿಗುತ್ತಿದ್ದರು. ಆದರೆ ಅವರ ಬಳಿ ಕೇಳಲು ಭಯ. ಅವರು ಯಾವಾಗ ಪ್ರೀತಿ ಕಾಣಿಸುತ್ತಾರೆ ಮತ್ತೆ ಯಾವಾಗ ಬೈಯುತ್ತಾರೆ ಅಂದಾಜಿಸಲೂ ಆಗುತ್ತಿರಲಿಲ್ಲ. ಆದರೆ ಸಿದ್ಧಲಿಂಗಯ್ಯ ಮೇಷ್ಟ್ರು ಫ್ರೀ ಆಗಿರುತ್ತಿದ್ದರೂ ಭೇಟಿಮಾಡಲು ಮಾತ್ರ ಅವರು ಫ್ರೀ ಆಗಿರುತ್ತಿರಲಿಲ್ಲ. ಆದರೆ ಕ್ಲಾಸಸ್ ನಡೆಯಲೇಬೇಕಲ್ಲ.

ನನಗೆ ಆ ಹೊತ್ತು ಮೇಷ್ಟ್ರು ಅಂದರೆ ಡಿ.ಆರ್. ಥರ ಪಾಠ ಮಾಡಬೇಕು ಎಂದು ಕೆಲವರು ತಲೆಗೆ ತುಂಬಿ ನನ್ನಲ್ಲೂ ಒಂದಿಷ್ಟು ಹುರುಪು ತುಂಬಿಸಿಬಿಟ್ಟಿದ್ದರು. ನಾನು ಆ ಹೊತ್ತು ಪಿಯುಸಿ ಮಕ್ಕಳು ಎನ್ನುವುದನ್ನೂ ಮರೆತು ಮತ್ತು ಮೇಷ್ಟ್ರುತನ ಕ್ಲಾಸಲ್ಲಿ ಮಾಗುತ್ತದೆ ಎಂಬುದರ ಅರಿವಿಲ್ಲದೆ ಡಿ.ಆರ್ ಅವರನ್ನ ನೆನೆಸಿಕೊಂಡು ಥೇಟ್ ಬುಕ್ಸ್ ಗುಡ್ಡೆ ಹಾಕಿಕೊಂಡು ಲಾಯರ್ ತರ ಪ್ರಿಪೇರ್ ಆಗಿ ಮಾರ್ಕ್ ಮಾಡಿಕೊಂಡು ಕ್ಲಾಸ್ ಗೆ ಹೋಗಿದ್ದೆ. ಏಕಲವ್ಯನನ್ನ ಸಿದ್ಧಲಿಂಗಯ್ಯನವರು ಕಂಡರಿಸಿರುವ ಬಗೆ ವಿವರಿಸಲಿಕ್ಕೆ ಮೇಲ್ವರ್ಗದವರ ಹಿಪಾಕ್ರಸಿಯನ್ನ ಕನ್ನಡದ ಬೇರೆಬೇರೆ ಬರಹಗಾರರು ಹೇಗೆ ಬಯಲು ಮಾಡಿದ್ದಾರೆ ಎಂದು ಲಾಯರ್ ರೀತಿ ಪುಸ್ತಕಗಳನ್ನ ತೆರೆದು ಓದಿ ಹೇಳಲು ಆರಂಭಿಸಿದೆ. ಸ್ಟೂಡೆಂಟ್ಸ್ ಉಸಿರುಕಟ್ಟಿ ಕೂತಿದ್ದರು. ಕಡೆಗೆ ಕ್ಲಾಸ್ ಬಿಟ್ಟು ತೆರಳುವಾಗ ‘ಇವರಿಗೆಲ್ಲ ನಾನು ಹೇಳಿದ್ದು ಅರ್ಥವಾಯಿತಾ..?’ ಎಂದು ಪ್ರಶ್ನೆ ಹಾಕಿಕೊಂಡೆ. ಇದೇ ಪ್ರಶ್ನೆಯನ್ನ ಕ್ಲಾಸಲ್ಲೂ ಕೇಳಿದೆ. ಎಲ್ಲರೂ ನನ್ನನ್ನೇ ನುಂಗುವಂತೆ ನೋಡುತ್ತಿದ್ದರು. ಹೆಣ್ಣುಮಕ್ಕಳು ನಗಲೊ ಬೇಡವೋ ಎಂದು ನಗುತ್ತಿದ್ದರು. ಥತ್ತೇರಿ ಈ ಕ್ಲಾಸ್ ಸರಿ ಇಲ್ಲ ಅಂದುಕೊಂಡು ನಡೆದಿದ್ದೆ.

ಅವರ ಪದ್ಯಗಳು ಅವು ರಚನೆಗೊಂಡ ಕಾಲಕ್ಕೆ ತುಳಿತಕ್ಕೆ ಒಳಗಾಗಿದ್ದ ಸಮುದಾಯದವರಲ್ಲಿ ಕಿಚ್ಚು ಹೊತ್ತಿಸಿ ದೊಡ್ಡ ಆಂದೋಲನಕ್ಕೆ ಕಾರಣವಾಗಿದ್ದದ್ದು ಗೊತ್ತೇ ಇತ್ತು. ನನ್ನನ್ನೂ ಅವರ ಪದ್ಯಗಳು ಕಾಡಿದ್ದವು ನಿಜ; ಆದರೆ ಅವರ ‘ಊರುಕೇರಿ’ ಆತ್ಮಕಥನ ನನ್ನನ್ನ ವಿಪರೀತ ಅಂದರೆ ವಿಪರೀತ ಕಲಕಿ ಕಾಡಿತ್ತು.

ಇನ್ನು ಹೇಗೆ ಹೇಳೋದು..? ಸಿದ್ಧಲಿಂಗಯ್ಯ ಮೇಷ್ಟ್ರಿಗೆ ಫೋನ್ ಮಾಡಿ ನನ್ನ ಹತಾಶೆ ವಿವರಿಸಿದೆ. ಇಂಥ ಟೈಂಗೆ ಬನ್ನಿ ಮಾತಾಡೋಣ ಅಂದರು. ಹೋದೆ. ಅವರು ಏನಾಯಿತು ಅಂತ ಕೇಳುವ ಮೊದಲೇ ‘ಸರ್ ಇವರಿಗೆ ದಲಿತ ಸಂವೇದನೆ, ಬಂಡಾಯ ಅಂದ್ರೇನು ಅಂತಲೇ ಗೊತ್ತಿಲ್ಲ. ಕಥೆ ಹೇಳಿ ಸರ್ ಅಂತಾವೆ..’ ಅಂತ ಭಾರವಾದ ಉಸಿರು ಹೊರಹಾಕಿದೆ. ‘ಡಿ.ಆರ್. ಥರ ಪಾಠ ಮಾಡಿದ್ರೂ ಕೇಳಿಸಿಕೊಳ್ಳಲ್ಲ ಅಂದರೆ ಇನ್ನೇನು ಮಾಡೋಣ ಹೇಳಿ..’ ಅಂದೆ.

ಅದಕ್ಕೂ ಮೇಷ್ಟ್ರು ‘ಬೇಂದ್ರೆ ಅಡಿಗರ ಜೊತೆಗೆ ಈಗ ಡಿ.ಆರ್. ಅವರನ್ನೂ ಜೊತೆಗೆ ಹಾಕ್ಕೊಡಿದ್ದೀರಿ ಅನ್ನಿ…’ ಅಂತ ನಕ್ಕರು. ‘ಸಮಾಧಾನ ಸಮಾಧಾನ..’ ಅಂತ ನನಗೆ ಕಾಫಿ ತರಿಸಿಕೊಟ್ಟು ಕ್ಲಾಸಲ್ಲಿ ಏನೇನು ಹೇಳಿದ್ರಿ ಎಂದು ಕೇಳಿದರು. ನಾನು ಮತ್ತಷ್ಟು ಹುರುಪಿನಲ್ಲಿ ಹೇಳಿದೆ. ಸರಿಯಾಗೇ ಇದ್ಯಲ್ಲ ಅನ್ನುತ್ತಾರೆ ಅಂದುಕೊಂಡಿದ್ದೆ.

ಸಿದ್ಧಲಿಂಗಯ್ಯ ಮೇಷ್ಟ್ರು ನನ್ನನ್ನೇ ನೋಡುತ್ತ ಸುಮ್ಮನೆ ಕೂತರು. ಮಾತಿಲ್ಲ ಕಥೆ ಇಲ್ಲ. ನಾನು ಆ ಸೈಲೆನ್ಸ್ ಭರಿಸಲಾರದೆ ‘ಸರಿ ಇದೆ ಅಲ್ವ ಸರ್?’ ಅಂದೆ. ಆಮೇಲೆ ಅವರೂ ದೀರ್ಘ ಉಸಿರುಬಿಡುತ್ತ “ನನಗೆ ನಿಮ್ಮ ಕಾಲೇಜಿನ ಮಕ್ಕಳ ಬಗ್ಗೆ ಕನಿಕರ ಹುಟ್ತಿದೆ. ನಾನೂ ಚೂರುಪಾರು ಹೋರಾಟ ಮಾಡಿದ್ದೀನಿ. ಚಳವಳಿಗಳಲ್ಲಿ ಭಾಗಿ ಆಗಿದ್ದೀನಿ. ಅದು ನಿಮಗೂ ಗೊತ್ತಿದೆ. ಇಂಥ ನನಗೇ ನಿಮ್ಮ ಮಾತುಗಳನ್ನ ತಾಳಿಕೊಳ್ಳೋಕೆ ಕಷ್ಟ ಆಗ್ತಿದೆ. ಏಕಲವ್ಯ ಇದ್ದಿದ್ದಿದ್ರೆ ಅವನೂ ಕನ್ಫ್ಯೂಸ್ ಆಗ್ಬಿಟ್ಟಿರೋನು. ”ಹೆಬ್ಬೆರಳು ಕತ್ತರಿಸಿ ಕೊಡೊ ನೋವು ನೋವೇ ಅಲ್ಲ. ಮಹೇಶ್ ಅವರು ಮಾತ್ರ ಮಾತಾಡದೀರ ಇರಲಿ..’ ಅಂದುಬಿಡ್ತಿದ್ದ” ಅಂತ ಕಾಫಿ ಕಪ್ ಮೇಲೆತ್ತಿ ತುಟಿ ತಾಗಿಸಿದರು.

‘ಸರ್ ತಮಾಷೆ ಮಾಡಬೇಡಿ ಸರ್..’ ಅಂದೆ. ‘ಇಲ್ಲ ಸೀರಿಯಸ್ಸಾಗಿ ಹೇಳ್ತಿದ್ದೀನಿ. ಪಾಠ ಮಾಡೋವಾಗ ನಾವು ಯಾವ ಗ್ರೇಡ್ ಗೆ ಪಾಠ ಮಾಡ್ತಿದ್ದೀವಿ ಅಂತ ಮೊದಲು ತಿಳಿದು ಪ್ರಿಪೇರ್ ಆಗಬೇಕು. ಪಿಯುಸಿ ಸ್ಟೂಡೆಂಟ್ಸ್ ಅಂತೀರ. ಅವರ ಫ್ಯಾಮಿಲಿ ಹಿನ್ನೆಲೆ ಏನು? ಎಕನಾಮಿಕ್ ಸ್ಟೇಟಸ್ ಏನು? ಅವರಿಗೆ ದಲಿತ ಸಂವೇದನೆ ಅಂದರೆ ಏನರ್ಥವಾಗುತ್ತೆ ಹೀಗೆ ಹೇಳಿದ್ರೆ? ಹುಡುಗಿ ಕೈ ಶೇಕ್ ಹ್ಯಾಂಡ್ ಮಾಡಿ ಅವಳ ಕೈ ಪದೇಪದೇ ಮುಟ್ಟೋದಕ್ಕೆ ತುಡಿಯೋ ವಯಸ್ಸು ಅದು. ನೀವು ಹೆಬ್ಬೆರಳು ಅಂತ ಲಾಯರ್ ಗಿರಿ ಆರಂಭಿಸಿದ್ರೆ ಅವಕ್ಕೇನು ಅರ್ಥವಾಗಬೇಕು! ಡಿ.ಆರ್ ಥರ ನೀವು ಎಲ್ಲಿ ಸಲ್ಲಬೇಕೊ ಅಲ್ಲಿ ಸಲ್ಲಬೇಕು. ಇಲ್ಲಿ ಈ ಮಕ್ಕಳನ್ನ ಚೂರು ನಗ್ಸಿ ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಿ. ನಗಿಸಬಾರದು ಅಂತಿದ್ರೆ ಬೇಕಾದರೆ ಡಿ.ಆರ್ ಜೊತೆಗೂ ನಾನು ಮಾತಾಡ್ತೀನಿ ’ ಅಂತಂದು ನಕ್ಕಿದ್ದರು.

ಅವತ್ತು ಕೊಂಚ ನಿರಾಶೆ ಆಗಿತ್ತು. ಆದರೆ ಮೇಷ್ಟ್ರು ಹೇಳ್ತಿದ್ದಾರೆ ಅಂದರೆ ಅದರಲ್ಲಿ ಏನೋ ಅರ್ಥ ಇರುತ್ತೆ ಅಂದುಕೊಂಡು ಇಂಪ್ಲಿಮೆಂಟ್ ಮಾಡಿದೆ. ಕ್ಲಾಸಲ್ಲಿ ಸಣ್ಣ ಬದಲಾವಣೆ ಕಾಣಿಸಲು ಆರಂಭಿಸಿತು. ಅರೆರೆ ವರ್ಕ್ಔಟ್ ಆಗ್ತಿದೆ ಅನಿಸಿದ್ದೇ ತಡ ನಗಿಸುತ್ತ ಪಾಠ ಮಾಡಲು ಆರಂಭಿಸಿದೆ. ಬರಬರುತ್ತ ಆಯಾ ಗ್ರೇಡ್ ಗೆ ಹೇಗೆ ತಿಳಿಸಿ ಹೇಳಬೇಕು, ಅವರ ಮಿತಿಗಳೇನು ಅಂತ ಅರ್ಥವಾಗಲು ಆರಂಭವಾಯಿತು. ನಗಿಸುವ ಕೆಲಸದಲ್ಲಿ ಒಂದು ಮಾದಕತೆ ಇದೆ ಎಂದು ನನಗೆ ತಿಳಿದೇ ಇರಲಿಲ್ಲ. ಹಾಗೇ ಅದು ನಮ್ಮ ಕಾಲು ಜಗ್ಗಿ ಸೆಳೆದಿಟ್ಟುಕೊಳ್ಳುವ ಸುಳಿ ಅಂತಲೂ ನನಗೆ ತಿಳಿದಿರಲಿಲ್ಲ. ನಗಿಸುತ್ತ ನಗಿಸುತ್ತಲೇ ನಾನು ಕಾಲೇಜಿನಲ್ಲಿ ತುಂಬ ಜನಪ್ರಿಯ ಮೇಷ್ಟ್ರಾಗಿಬಿಟ್ಟೆ. ಇದೇ ಕಾರಣಕ್ಕೆ ಖುಷಿಯಾಗಿಯೂ ಇದ್ದೆ. ಈ ಎಲ್ಲಕ್ಕೆ ಸಿದ್ಧಲಿಂಗಯ್ಯ ಮೇಷ್ಟ್ರು ಕೊಟ್ಟ ಟಿಪ್ಸ್ ಕಾರಣವಾಗಿತ್ತು. ಕ್ಲಾಸಲ್ಲಿ ಆಗಿರುವ ಬದಲಾವಣೆ ಬಗ್ಗೆ ಮೇಷ್ಟ್ರಿಗೆ ತಿಳಿಸಿದೆ. ಅಗಲೂ ಅವರದು ತಮಾಷೆ. ‘ಹಾಗಾದ್ರೆ ಡಿ.ಆರ್. ಅವರಿಗೇನೂ ಫೋನ್ ಮಾಡೋದು ಬೇಡ ಅನ್ನಿ…’ ಅಂದಿದ್ದರು.

ಗಂಭೀರವಾಗಿ ಚರ್ಚಿಸುವವರು ಎದುರಾಗಿದ್ದರೆ ನಾನೂ ಗಂಭೀರವಾಗೇ ಚರ್ಚೆಗೆ ತೊಡಗುತ್ತಿದ್ದೆನೇನೊ. ಆದರೆ ಯಾಕೋ ಅಂಥ ಸಂದರ್ಭಗಳು ನ್ಯಾಷನಲ್ ಕಾಲೇಜಿನಲ್ಲಿದ್ದಾಗ ನಿರ್ಮಾಣ ಆಗಲೇ ಇಲ್ಲ. ನಗುವಿನ ಕಚಗುಳಿಗೆ ನಾನೂ ನಗುತ್ತ ಹಾಯಾಗಿದ್ದ ಕಾಲ ಅದು. ಇದು ಎಂಥ ಎಫೆಕ್ಟ್ ಉಂಟುಮಾಡಿತ್ತು ಅಂದರೆ ಕ್ಲಾಸಲ್ಲಿ ಪಾಠ ಮಾಡುವಾಗ ಸೀರಿಯಸ್ನೆಸ್ ಬಿಟ್ಟು ನಗಿಸುತ್ತ ಅರ್ಥೈಸಬೇಕು, ಉಳಿದಂತೆ ಸೀರಿಯಸ್ ಬರವಣಿಗೆ ಮಾಡಬೇಕು ಅಂದುಕೊಂಡಿದ್ದ ನನ್ನನ್ನ ಪೂರಾ ಬದಲಾವಣೆಗೆ ಗುರಿಪಡಿಸಿತ್ತು. ಆ ಹೊತ್ತು ಸುಚಿತ್ರ ಕಲಾಕೇಂದ್ರದವರು ಬಿ.ಸಿ (ಬಿ. ಚಂದ್ರಶೇಖರ್) ಅವರ ಸ್ಮರಣಾರ್ಥ ಒಂದು ನಾಟಕ ರಚನಾ ಸ್ಪರ್ಧೆ ಏರ್ಪಡಿಸಿದರು. ಸ್ಪರ್ಧೆ ಅಂದಾಗಷ್ಟೇ ಬರೆಯುವ ಚಾಳಿ ಬೆಳೆಸಿಕೊಂಡಿದ್ದ ನಾನು ಒಂದು ನಾಟಕ ಬರೆದು ಕಳಿಸಿದೆ. ಬರೆಯುವಾಗಲೇ ನಿಬಂಧನೆ ವಿಧಿಸಿಕೊಂಡಿದ್ದೆ. ಕಾಮಿಡಿ ಕ್ಲಾಸಲ್ಲಿ ಸರಿ; ನಾಟಕ ಗಂಭೀರವಾಗಿರಬೇಕು. ಹಾಗೇ ಬರೀಬೇಕು ಅಂದುಕೊಂಡು ಗಂಭೀರವಾಗೇ ಬರೆದೆ. ದೇವರ ಬಗ್ಗೆ, ಆತ ಆಧುನಿಕ ಮನೋಧರ್ಮದವರ ಜೊತೆ ತನ್ನ ರೂಪುರೇಷೆಗಳ ಕುರಿತು ವಾಗ್ವಾದಕ್ಕೆ ಇಳಿಯುವ ಬಗ್ಗೆ ನನ್ನದೇ ಆದ ರೀತಿಯಲ್ಲಿ ಧ್ಯಾನಿಸಿ ಚಿಂತಿಸಿ ಬರೆದೆ. ಅದಕ್ಕೆ ಮೊದಲ ಬಹುಮಾನವೇನೊ ಬಂತು. ತುಂಬ ಗಂಭೀರ ನಾಟಕ ಅಂದುಕೊಂಡಿದ್ದೆ. ಆದರೆ ಅದರಲ್ಲಿ ನನಗೇ ಗೊತ್ತಾಗದಂತೆ ಕ್ಲಾಸ್ ರೂಮಿನ ಕಾಮಿಡಿ ಎಲಿಮೆಂಟ್ಸ್ ಸಟೈರ್ ರೂಪ ಪಡೆದುಕೊಂಡು ರೂಪುತಳೆದಿತ್ತು. ಅದು ರಂಗಕ್ಕೆ ಬಂದಾಗಲೇ ನನಗೆ ಇದು ಕಾಮಿಕಲ್ ಸಟೈರ್ ಆಗಿರುವುದು ತಿಳಿದದ್ದು. ಜೊತೆಗೆ ನಾಟಕಕ್ಕೆ ಪ್ರೇಕ್ಷಕರ ರೆಸ್ಪಾನ್ಸ್, ಚಪ್ಪಾಳೆ ಕೂಡ ನನ್ನನ್ನ ಮುಂದಕ್ಕೆ ಕೊಂಚ ವಿಚಲಿತಗೊಳಿಸಿತು ಅನಿಸುತ್ತದೆ. ಅದೇ ಹೊತ್ತು ಸಿದ್ಧಲಿಂಗಯ್ಯ ಮೇಷ್ಟ್ರಿಗೆ ಫೋನ್ ಮಾಡಿ ‘ಸರ್ ಸೀರಿಯಸ್ ಡ್ರಾಮ ಬರೀಬೇಕು ಅಂತ ಹೊರಟು ಕಡೆಗೆ ಕಾಮಿಡಿ ಆಗೋಗಿದೆ ಸರ್..’ ಅಂದೆ. ‘ಅಂತೂ ಹಲವರನ್ನ ಉಳಿಸ್ತಿದ್ದೀರಿ.. ಸಂತೋಷ..’ ಅಂತ ಮತ್ತೆ ನಕ್ಕರು. ಜೊತೆಗೆ ನನ್ನ ಕಿವಿಯಲ್ಲಿ ರಿಂಗಣಿಸುತ್ತಿದ್ದ ಚಪ್ಪಾಳೆಯ ಸದ್ದೂ ಇದನ್ನೇ ಪರೋಕ್ಷವಾಗಿ ಹೇಳಿದಂತಿತ್ತು. ಆದರೂ ನನಗೊಂದು ಅನುಮಾನ ಹುಟ್ಟಿತ್ತು ಮೇಷ್ಟ್ರು ಬಗ್ಗೆ- ಇವರು ‘ಇಕ್ರಲಾ ವದಿರಲಾ’ ಅಂತ ಹೇಗೆ ಬರೆದರು.. ಆಶ್ಚರ್ಯ ಅನಿಸಿತ್ತು ನನಗೆ. ಕೇಳಿದರೆ ಅದಕ್ಕೂ ತಮಾಷೆ ಮಾಡಿಯಾರು ಅಂದುಕೊಂಡು ಸುಮ್ಮನಾಗಿದ್ದೆ.

ಕ್ಲಾಸಲ್ಲಿ ನಗಿಸುವ ಸರಕು ಖಾಲಿಯಾಗುತ್ತಿದೆ, ಮತ್ತು ಎಲ್ಲ ಕ್ಲಾಸುಗಳಲ್ಲಿ ಹೇಳಿದ ಜೋಕುಗಳನ್ನೇ ಹೇಳುತ್ತಿದ್ದರೆ ಹುಡುಗರು ಫ್ರೀ ಟೈಂನಲ್ಲಿ ಈ ಬಗ್ಗೆ ಕಂಪ್ಯಾರಿಟಿವ್ ಸ್ಟಡಿ ಆರಂಭಿಸಿ ನಗುತ್ತಾರೆ ಅನ್ನುವುದು ತಿಳಿಯಿತು. ಕೊಂಚ ವೆರೈಟಿ ಇರಲಿ ಅಂತ ಮನಸ್ಸು ಯೋಚಿಸಿದಾಗ ನನ್ನ ಕೈಗೆ ಪುಸ್ತಕವಾಗಿ ನಿಲುಕಿದವರು ಬೀಚಿ. ಅವರ ಬೇರೆ ಕೃತಿಗಳು ಬೇಡ, ನನಗೆ ಬೇರೆಬೇರೆ ಸಂಗತಿಗಳ ಬಗ್ಗೆ ಅವರ ಪಂಚ್ ಗಳು ಮಾತ್ರ ಬೇಕಿದ್ದವು. ‘ಉತ್ತರಭೂಪ’ ಪ್ರಶ್ನೋತ್ತರ ಮಾಲಿಕೆಯ ಸಂಗ್ರಹ ಸಿಕ್ಕಿತು. ಓದುತ್ತಾ ಹೋದೆ. ನಗಿಸುವುದರ ಹಿಂದೆ ಮತ್ತೇನೋ ಗಂಭೀರ ದರ್ಶನ ಇದೆ ಅನಿಸಲಿಕ್ಕೆ ಶುರುವಾಯಿತು. ಕ್ಲಾಸಲ್ಲಿ ಗಂಭೀರ ದರ್ಶನದ ಬಗ್ಗೆ ಮಾತಾಡದೆ ನಗಿಸಲಷ್ಟೇ ಬೀಚಿ ಅವರ ಉತ್ತರಗಳನ್ನ ಬಳಿಸಿಕೊಂಡು ಮುಂದೆ ಸಾಗುತ್ತಿದ್ದೆ. ಆದರೆ ಅವರ ಬಹಳಷ್ಟು ಉತ್ತರಗಳು ನನ್ನನ್ನ ಹಾಂಟ್ ಮಾಡುತ್ತಲೇ ಇದ್ದವು.

ಅದೇ ಹೊತ್ತು ಅಂತರಂಗ ತಂಡದಿಂದ ನನಗೆ ಒಂದು ನಾಟಕ ಬರೆದುಕೊಡಲು ಆಫರ್ ಬಂತು. ಈ ಮೊದಲು ಅದೇ ತಂಡಕ್ಕೆ ಕೆ.ಎನ್. ಗಣೇಶಯ್ಯನವರ ಕಥೆ ಆಧರಿಸಿ ‘ಧರ್ಮಸ್ಥಂಭ’ ಎಂಬ ರಂಗರೂಪ ಸಿದ್ಧಗೊಳಿಸಿಕೊಟ್ಟಿದ್ದೆ. ಅದನ್ನ ಜನ ಹೇಗೆ ರಿಸೀವ್ ಮಾಡಿದ್ದರೊ ನನಗೆ ನೆನಪಿಲ್ಲ. ಮತ್ತೆ ನನ್ನಿಂದ ನಾಟಕ ಬರೆಸಲು ಅವರು ಬಯಸಿದ್ದರು. ಅವರೇ ‘ಶಶಾಂಕ್ ರೆಡೆಮ್ಷನ್..’ ಅನ್ನುವ ಸಿನಿಮಾದ ಒಂದು ಸಿಡಿ ಕೊಟ್ಟು ಇದನ್ನ ರಂಗಕ್ಕೆ ಇಳಿಸಿಕೊಡಿ ಅಂದಿದ್ದರು. ನಾನು ಸಿನಿಮಾ ನೋಡಿದೆ. ಚೆನ್ನಾಗೇ ಇತ್ತು. ಆದರೆ ನನ್ನನ್ನ ಬೀಚಿ ಅವರು ತಮ್ಮ ಸಟೈರ್ ನಿಂದ ಕಲಕಲು ಆರಂಭಿಸಿದ್ದರು. ಹಾಗೆ ಬೀಚಿ ಅವರ ಹಾಸ್ಯದ ಟೈಮಿಂಗ್ ಅಂಡ್ ಟೋನಿಂಗ್ ಅರ್ಥವಾಗಲು ಸಿದ್ಧಲಿಂಗಯ್ಯನವರ ಮಾತಿನ ಧಾಟಿ ಮತ್ತು ತಮಾಷೆ ಕಾರಣವಾಗಿದ್ದವು. ಹಾಗಾಗಿ ನನಗೆ ಶಶಾಂಕ್ ರೆಡೆಮ್ಷನ್ ಸಿನಿಮಾವನ್ನ ರಂಗರೂಪಕ್ಕೆ ಇಳಿಸುವ ಬಗ್ಗೆ ಆಸಕ್ತಿ ಹುಟ್ಟಲಿಲ್ಲ. ನನ್ನನ್ನ ಕಲಕುತ್ತಿರುವ ಬೀಚಿ ಅವರ ಪ್ರಶ್ನೋತ್ತರಗಳ ಬಗ್ಗೆಯೇ ಒಂದು ರಂಗರೂಪ ಸಿದ್ಧಪಡಿಸಿಕೊಡ್ತೀನಿ ಅಂದೆ. ನಿರ್ದೇಶಕಿ ಅರ್ಚನಾ ಕೊಂಚ ಅನುಮಾನಿಸಿ ನಂತರ ಸಮ್ಮತಿಸಿದರು. ಅವರಿಗೂ ನನಗೂ ಬೀಚಿ ಅವರ ಪ್ರಶ್ನೋತ್ತರ ರಂಗರೂಪತಳೆಯುವುದರ ಬಗ್ಗೆ ಯಾವುದೇ ಅಂದಾಜು ಇರಲಿಲ್ಲ.

ಆದರೆ ನನ್ನನ್ನು ಆ ಹೊತ್ತು ತೀವ್ರವಾಗಿ ಕಾಡುತ್ತಿದ್ದದ್ದನ್ನ ಪಕ್ಕಕ್ಕೆ ಸರಿಸದಿದ್ದರೆ ಬೇರೆ ಹೊಸದು ನನ್ನನ್ನು ಹೊಕ್ಕುವುದಿಲ್ಲ ಅನಿಸಿದ್ದರಿಂದ ಕಡೆಗೂ ರಂಗರೂಪ ಸಿದ್ಧಮಾಡಿಯೇ ಬಿಟ್ಟೆ. ಸೀರಿಯಸ್ ನಾಟಕ, ನಾಟಕದ ಘನತೆ ಬಗ್ಗೆ ತಮ್ಮತಮ್ಮ ಸೈದ್ಧಾಂತಿಕ ಹಿನ್ನೆಲೆಯಲ್ಲಿ ಯಾರೆಲ್ಲ ಏನೇನು ಮಾತಾಡಿದ್ದರೋ ಅವೆಲ್ಲಕ್ಕೂ ನಾನು ಕಿವಿಯಾಗಿದ್ದೆ. ಮುಂಚೆ ನಾನೂ ಕೂಡ ‘ಅದೇನು ಸುಮ್ಮನೆ ನಗಿಸ್ಕೊಂಡು..’ ಅಂತಲೇ ಮಿಡುಕುತ್ತಿದ್ದೆ. ಆದರೆ ಬದುಕನ್ನ ಹೀಗೂ ದರ್ಶಿಸಬಹುದಲ್ಲ ಎಂದು ನನಗೆ ಸಿದ್ಧಲಿಂಗಯ್ಯ ಮೇಷ್ಟ್ರು, ಕ್ಲಾಸಿನ ಪಾಠಗಳು ಮತ್ತು ಸ್ಟೂಡೆಂಟ್ಸ್ ಮತ್ತು ಕಟ್ಟಕಡೆಗೆ ಬೀಚಿ ಅವರು ಮನವರಿಕೆ ಮಾಡಿಸಿದ್ದರಿಂದ ಎಲ್ಲ ಥಿಯರಿ ಬಿಟ್ಟಾಕಿ ಬರೆದೆ.

ಬರೆದೆ ಅಷ್ಟೇ; ಆದರೆ ತಾಲೀಮು ನಡೆಯುತ್ತಿದೆಯೋ, ನನ್ನ ಆಶಯಕ್ಕೆ ತಕ್ಕಂತೆ ಬರುತ್ತಿದೆಯೋ ಯಾವುದರ ಗೊಡವೆಯೂ ನನಗೆ ಇರಲಿಲ್ಲ. ನಾನಾಯಿತು, ಕ್ಲಾಸಾಯಿತು, ನಗಿಸುವ ಕಾಯಕವಾಯಿತು ಅಂದುಕೊಂಡು ಇದ್ದೆ.

ಕಡೆಗೆ ರಂಗತಾಲೀಮೆಲ್ಲ ಮುಗಿದು ಮೊದಲ ನಾಲ್ಕು ಪ್ರದರ್ಶನಗಳು ರಂಗಶಂಕರದಲ್ಲಿ ನಿಗದಿ ಆದವು. ಸಹಜವಾಗಿ ಮೊದಲ ಪ್ರದರ್ಶನಕ್ಕೆ ನಾನು ಹೋದೆ. ಇನ್ನೂ ಸಾಕಷ್ಟು ಸಮಯ ಇತ್ತು. ರಂಗಶಂಕರದ ಕ್ಯಾಂಟೀನ್ ನಲ್ಲಿ ಒಬ್ಬನೇ ಕೂತು ಕಾಫಿ ಕುಡಿಯುತ್ತ ‘ಈ ನಗುವಿನ ನಾಟಕಕ್ಕೆ ಜನ ಬರ್ತಾರಾ..?’ ಎಂದು ಯೋಚಿಸಿದೆ. ಅರ್ಧ ಆಡಿಟೋರಿಯಂ ತುಂಬಿದ್ರೂ ಸಾಕು.. ಮಾನ ಉಳಿಯುತ್ತೆ. ಅವರು ಸಿನಿಮಾ ಕೊಟ್ಟು ನಾಟಕ ಬರೆದುಕೊಡಿ ಅಂದಿದ್ದರು. ನಾನು ಇದನ್ನ ಮಾಡಿಕೊಟ್ಟಿದ್ದೀನಿ. ಕಲೆಕ್ಷನ್ ಆಗದಿದ್ದರೆ ಅವರಿಗೆ ಮುಖ ಕಾಣಿಸೋದು ಹೇಗೆ ಎಂದು ಕಾಫಿ ಕುಡಿಯುತ್ತ ಯೋಚಿಸುತ್ತಿದ್ದೆ.

ಕೊಂಚ ಹೊತ್ತಿಗೆ ರಂಗಮಂದಿರದ ಮುಂದೆ ‘ಹೌಸ್ ಫುಲ್’ ಎಂಬ ಬೋರ್ಡ್ ಕಾಣಿಸಿತು. ಅರೆರೆ ಪರವಾಗಿಲ್ಲವೆ ಅಂದುಕೊಂಡು ಹೋಗಿ ನಾಟಕ ನೋಡಿದೆ. ನಿರ್ದೇಶಕಿ ಅರ್ಚನಾ ಮೇಡಂ ನಿಜಕ್ಕೂ ಚೆಂದವಾಗಿ ವಿನ್ಯಾಸ ಮಾಡಿ ನಾಟಕ ಕಟ್ಟಿದ್ದರು. ಜನ ಚೆನ್ನಾಗಿ ರಿಸೀವ್ ಮಾಡಿದರು. ಇದೇ ಕಾರಣವಾಗಿ ಮುಂದಿನ ಮೂರು ಷೋಗಳೂ ಹೌಸ್ ಫುಲ್ ಆದವು. ನಾನು ಅಚ್ಚರಿಯಲ್ಲಿ ಇದೇನಾಗುತ್ತಿದೆ ಎಂದು ಗೊಂದಲಗೊಳ್ಳುತ್ತ, ಪಾಠ ಹೇಳುತ್ತ ಕಾಲ ಕಳೆಯುತ್ತಿದ್ದೆ. ನಾಟಕಗಳ ಹೌಸ್ ಫುಲ್ ಪ್ರದರ್ಶನಗಳು ಮುಂದುವರೆದವು. ಜೊತೆಗೆ ಬೀಚಿ ಅವರ ‘ ಉತ್ತರಭೂಪ’ ಪ್ರಶ್ನೋತ್ತರ ಕೃತಿಗಳ ಮಾರಾಟ ಹೆಚ್ಚಳ ಕಂಡಿತು. ಪುಸ್ತಕದ ಅಂಗಡಿಗಳವರು ಈ ಬಗ್ಗೆ ನನಗೆ ಮಾಹಿತಿ ಕೊಟ್ಟರು.

ಅದೇ ಹೊತ್ತು ಅಂತರಂಗ ತಂಡ ಸಿದ್ಧಲಿಂಗಯ್ಯ ಮೇಷ್ಟ್ರನ್ನ ಪ್ರದರ್ಶನಕ್ಕೆ ಆಹ್ವಾನಿಸಿದರು. ಮೇಷ್ಟ್ರು ಬಂದರು. ನನ್ನ ಕಾಣುತ್ತಲೇ ‘ಅರೆರೆ ನೀವು.. ನಿಮ್ದಾ ಈ ನಾಟಕ…’ ಎಂದು ಷೋನಲ್ಲಿ ನನ್ನನ್ನ ತಮ್ಮ ಪಕ್ಕ ಕೂರಿಸಿಕೊಂಡರು. ನನಗೆ ಮುಜುಗರ. ತನ್ನ ಅಪ್ಪ ಎತ್ತಿನಂತೆ ನೊಗ ಹೊತ್ತು ಹೊಲ ಉಳುತ್ತಿದ್ದ ದಿನಗಳಿಂದ ಹೊರಹೊಮ್ಮಿ ಈ ಹೊತ್ತು ಈ ಘಟ್ಟ ತಲುಪಿರುವ ಮೇಷ್ಟ್ರು ಎಲ್ಲಿ..? ನಾನು ಎಲ್ಲಿ.. ಎಂದು ಚಡಪಡಿಸುತ್ತಲೇ ತುಂಬ ಸಂಕೋಚದಲ್ಲಿ ಅವರ ಒತ್ತಾಯಕ್ಕೆ ಅವರ ಪಕ್ಕ ಕೂತೆ. ನಾಟಕ ನಾನು ಮೊದಲೇ ನೋಡಿದ್ದರಿಂದ ನನಗೆ ಅವತ್ತು ಆ ಪ್ರದರ್ಶನ ಅಷ್ಟು ಆಸಕ್ತಿದಾಯಕವಾಗಿರಲಿಲ್ಲ. ಯಾಕೆಂದರೆ ಮೇಷ್ಟ್ರು ಪಕ್ಕದಲ್ಲೇ ಕೂತಿದ್ದರು. ಆದರೆ ಮೇಷ್ಟ್ರು ನಾಟಕ ನೋಡುತ್ತ ಎಂಜಾಯ್ ಮಾಡಿದ ಬಗೆ ನಾನಿನ್ನೂ ಮರೆತಿಲ್ಲ. ಪ್ರತಿ ದೃಶ್ಯ ಮುಗಿದು ಸೆಟ್ಸ್ ಬದಲಾವಣೆ ಸಮಯದಲ್ಲಿ ಅವರು ನನ್ನ ಭುಜ ತಟ್ಟಿ ನಗುತ್ತಿದ್ದರು. ಏನೊ ಒಂದು ಸಂಗತಿ ಮತ್ತು ಮಾತು ಅರ್ಥವಾಗದೇ ಹೋದಾಗ ‘ಏನದು..?’ ಎಂದು ಕೇಳುತ್ತಿದ್ದರು. ಪಕ್ಕ ಕೂತು ಥೇಟ್ ಮಗುವಿನಂತೆಯೇ ನಗುತ್ತಿದ್ದರು.

ಆಮೇಲೆ ಅಂತರಂಗ ತಂಡದವರು ನಾಟಕ ಯಶಸ್ವಿ ಇಪ್ಪತ್ತೈದು ಪ್ರದರ್ಶನ ಪೂರೈಸಿದ್ದರಿಂದ ಹಲವರಿಂದ ಅಭಿಪ್ರಾಯ ದಾಖಲಿಸುವ ಕೆಲಸ ಮಾಡಿದರು.  ಕ್ಯಾಮರಾ ಹಿಡಿದು ಮಾತಾಡಿ ಅಂದರು. ಆಗ ಸಿದ್ಧಲಿಂಗಯ್ಯ ಮೇಷ್ಟ್ರೂ ಕೂಡ ಮೆಚ್ಚುಗೆಯಿಂದ ಮಾತಾಡಿದರು. ಅದು ನನ್ನ ಸ್ಮೃತಿಯಲ್ಲಿ ಅಚ್ಚಳಿಯದೆ ದಾಖಲಾಗಿದೆ.

ನಗಿಸುವ ನನ್ನ ಕಾಯಕಕ್ಕೆ ಬ್ರೇಕ್ ಹಾಕಬೇಕು ಅಂತ ಖುದ್ದು ಭಗವಂತನಿಗೆ ಅನಿಸಿತೋ ಏನೋ. ಸಾಹಿತ್ಯದ ಮತ್ತೊಂದು ಲೋಕ ಇದೆ.. ಅಲ್ಲಿ ನಗು ನೋಡುವ ಎಂದು ಆತ ನಿರ್ಧರಿಸಿದಂತೆ ಇತ್ತು. ಇದರ ಪರಿಣಾಮ ನಾನು ಸಾಹಿತ್ಯದ ಒಂದು ಅತ್ಯುನ್ನತ ಸಂಸ್ಥೆಗೆ ನೇಮಕಗೊಂಡೆ. ಕಾಲೇಜಿನ ಕೆಲಸ ಬಿಡಬೇಕಾಯಿತು. ಆರಂಭದಲ್ಲಿ ಕೊಂಚ ಖುಷಿಯಲ್ಲೇ ಇದ್ದೆ. ಆದರೆ ಅನಂತರ ನಾನು ಆವರೆಗೆ ಅಪ್ಪನನ್ನ ವಿರೋಧಿಸಿ ಒಲವು ಬೆಳಸಿಕೊಂಡಿದ್ದ ಸಾಹಿತ್ಯ ಜಗತ್ತಿನ ವಿರೋಧಾಭಾಸಗಳ ಅನಾವರಣ ಆರಂಭವಾಯಿತು. ಪ್ರತಿ ದಿನ ಒಂದೊಂದು ಅಚ್ಚರಿ. ಒಂದೊಂದು ಆಘಾತ. ಆದರೆ ಇವುಗಳ ನಡುವೆಯೇ ತುಂಬ ಪಾಸಿಟಿವ್ ಆಗಿ ಕೆಲಸ ಮಾಡುತ್ತಿದ್ದಾಗ ನನ್ನನ್ನ ಉತ್ತರ ಭಾರತಕ್ಕೆ ಕಳುಹಿಸಿದರು. ಎಲ್ಲಾದರೇನು ಅಂದುಕೊಳ್ಳುವ ಹಾಗಿರಲಿಲ್ಲ. ಸಾಹಿತ್ಯದ ಕೆಲಸವನ್ನ ಮುನ್ನಡೆಸುವ ಕಾಯಕದಲ್ಲಿ ತೊಡಗಿಕೊಳ್ಳಬೇಕಾದರೆ ಕನಿಷ್ಠ ಸಾಹಿತ್ಯಜ್ಞಾನದ ಪರಿಚಯವಿರಬೇಕಾಗುತ್ತದೆ. ಅಲ್ಲಿ ನೋಡಿದರೆ ಸಾಹಿತ್ಯ ಗೊತ್ತಿದೆ ಎಂದು ಪೋಸು ಕೊಡುವ ಅಥವಾ ನಟಿಸುವ ಕೆಲವರು ಮುಖ್ಯ ಜಾಗದಲ್ಲಿ ಕೂತು ಸಾಹಿತ್ಯವನ್ನೂ, ದರಿದ್ರ ಬ್ಯೂರಾಕ್ರಸಿಗೆ ಒಗ್ಗಿಸಿ ಸೇಡು ತೀರಿಸಿಕೊಳ್ಳುವ ಜಾಗ ಮಾಡಿಕೊಂಡಿದ್ದರು. ಯಾರದೋ ಮೇಲಿನ ಸಿಟ್ಟು ಮತ್ತು ಜಿದ್ದಿಗೆ ನಾನು ಟಾರ್ಗೆಟ್ ಆಗಲು ಆರಂಭಿಸಿದಾಗ ನನಗೆ ಗಾಬರಿ ಆಗಿತ್ತು. ಜೊತೆಗೆ ವಾಕರಿಕೆ ಬರಲು ಆರಂಭಿಸಿತ್ತು. ಆದರೆ ಕೆಲಸ ಕೈ ಚೆಲ್ಲುವುದು ಹೇಗೆ?

ಹಾಗೂ ಹೀಗೂ ವ್ಯಸನದಲ್ಲೇ ಗಾಡಿ ಗುಡುಗುಡಿಸುತ್ತಿರುವಾಗಲೇ ಮೇಷ್ಟ್ರು ಸಿದ್ಧಲಿಂಗಯ್ಯನವರು ನನಗೆ ಫೋನ್ ಮಾಡಿದರು. ಆ ಹೊತ್ತಿಗೆ ನಾನು ಅವರನ್ನ, ಅವರ ನಗುವನ್ನ ಮರೆತು ಸಾಹಿತ್ಯಕ ಬ್ಯುರಾಕ್ರಸಿಯ ವಿರುದ್ಧ ಸೆಣೆಸುವ ಬಗೆ ತಿಳಿಯದೆ ಹೈರಾಣಾಗುತ್ತಿದ್ದೆ.

‘ಮಹೇಶ್ ಅವ್ರು.. ನೀವು ಅಲ್ಲಿರೋದು ಸಂತೋಷ… ಒಂದು ಕೆಲಸವಾಗಬೇಕಲ್ಲ..’ ಅಂದರು ಮೇಷ್ಟ್ರು.

‘ಅಯ್ಯ ಸರ್ ಇದೆಂಥ ಮಾತು.. ಹೇಳಿ ಸರ್.. ಮಾಡಿಕೊಡ್ತೇನೆ..’ ಅಂದಿದ್ದೆ.

ಆ ಹೊತ್ತಿಗೆ ಊರುಕೇರಿ ಭಾಗ 2 ಕೃತಿ ಅನಿಸುತ್ತೆ. ಅಥವಾ ಬೇರೆಯದೊ ನನಗೆ ಸರಿಯಾಗಿ ನೆನಪಿಲ್ಲ. ಅದು ಇಂಗ್ಲಿಷಿಗೋ ಅಥವಾ ಬಂಗಾಲಿಗೋ ಅನುವಾದಗೊಂಡು ಅದರ ಸಂಭಾವನೆ ಅವರಿಗೆ ಸಂದಾಯವಾಗಿರಲಿಲ್ಲ. ‘ಚೂರು ನೋಡಿ ನನಗೆ ಸಂಭಾವನೆ ತಲುಪಿಸ್ತೀರಾ..?’ ಎಂದು ಕೇಳಿದ್ದರು.

ನಾನು ಭರವಸೆ ಕೊಟ್ಟು ಆ ಕೆಲಸಕ್ಕೆ ಮುಂದಾಗಿದ್ದೆ. ಆದರೆ ಇದರಲ್ಲಿ ನಾನು ಇನ್ವಾಲ್ವ್ ಅಗಿದ್ದೇನೆ ಅಂತ ತಿಳಿಯುತ್ತಲೇ ಬೇಕೂಂತಲೇ ವಿಳಂಬ ಮಾಡಲು ಆರಂಭಿಸಿದಾಗ ನಾನೂ ತೀರಾ ನಿರಾಶನಾಗಿಬಿಟ್ಟೆ. ಆ ಹೊತ್ತಿಗಾಗಲೇ ನನಗೆ ಸಾಹಿತ್ಯದ ಜಗತ್ತು ಸಾಕುಸಾಕು ಅನಿಸಿತ್ತು. ನಡೆ ಮತ್ತು ನುಡಿಯಲ್ಲಿ ಎಷ್ಟು ದೊಡ್ಡ ಕಂದರ ಇದೆ ಎಂದು ಗೊತ್ತಾದದ್ದೇ ಆ ಸಂಸ್ಥೆ ಹೊಕ್ಕಾಗ. ಸಾಹಿತ್ಯ ಓದಿಕೊಂಡು ಮತ್ತು ಬರಕೊಂಡು ಇರುವವರನ್ನ ಈ ಪ್ರಶಸ್ತಿಗಳು ಹೇಗೆಲ್ಲಾ ದಿಕ್ಕುತಪ್ಪಿಸುತ್ತವೆ ಮತ್ತು ಸಾಹಿತ್ಯಕ ಬ್ಯುರಾಕ್ರಸಿಯ ಕರಾಳತೆ ದಿನದಿನಕ್ಕೆ ಸ್ಪಷ್ಟವಾಗಲು ಆರಂಭಿಸಿದಾಗ ನನಗೆ ಅಪ್ಪ ತುಂಬ ಹಿಂದೆ ಬಡಕೊಂಡಿದ್ದ ಮಾತುಗಳು ನೆನಪಿಗೆ ಬರಲು ಆರಂಭಿಸಿದವು. ಸಾಹಿತ್ಯ ಮತ್ತು ಮೌಲ್ಯಗಳು ಅಂತೆಲ್ಲ ಮಾತಾಡುವುದು ಬಿಟ್ಟು ಜಗತ್ತು ಇರುವ ಹಾಗೇ ಅದನ್ನ ಗ್ರಹಿಸಿ ನಾನೂ ಅದರಂತೆ ಪಕ್ಕಾ ಬ್ಯೂರಾಕ್ರಟ್ ಆಗಿ ಐ.ಎ.ಎಸ್ ಆಗಿದಿದ್ದರೆ ಚೆಂದ ಇತ್ತು ಅನಿಸಿದ್ದು ಇದೆ.

ಆದರೆ ನನ್ನ ಸ್ಥಿತಿಗತಿ ಮತ್ತು ಅಸಹಾಯಕತೆ ತಿಳಿಯದ ಸಿದ್ಧಲಿಂಗಯ್ಯ ಮೇಷ್ಟ್ರು ಸಾಕಷ್ಟು ಸಲ ಫೋನ್ ಮಾಡಿ ಸಂಭಾವನೆ ಬಗ್ಗೆ ವಿಚಾರಸಿದಾಗೆಲ್ಲ ನಾನು ಮುಜುಗರದಲ್ಲಿ ಕಾರಣ ಕೊಡುತ್ತ ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ಸಾಕು ಸಾಕು ಅನಿಸುವ ಹೊತ್ತಿಗೆ ಅಲ್ಲಿಂದ ನನ್ನ ನಿರ್ಗಮನವೂ ಆಯಿತು.

ಆಮೇಲೆ ನನ್ನ ಜೀವನದಲ್ಲಿ ಶುರುವಾದದ್ದು ಕಠಿಣ ಪರ್ವ. ವರ್ಷಗಳು ಉರುಳುತ್ತಲೇ ಬಂದವು. ಮೇಷ್ಟ್ರು ಸಿದ್ಧಲಿಂಗಯ್ಯನವರು ನನ್ನ ದುಗುಡದ ಪರ್ವದಲ್ಲಿ ಮರೆತೇ ಹೋದರು. ಮೊಬೈಲ್ ನಂಬರ್ ಬದಲಿಸಿದ್ದೆನಾದ್ದರಿಂದ ಯಾರೂ ನನ್ನನ್ನ ಸಂಪರ್ಕಿಸುವ ಸಾಧ್ಯತೆ ಇರಲಿಲ್ಲ. ಆದರೂ ಮೇಷ್ಟ್ರು ಆಗಾಗ ನೆನಪಾಗುತ್ತಿದ್ದರು. ಅವರ ಪದ್ಯ ‘ಇಕ್ರಲಾ ವದಿರಲಾ ಆ ನನ್ಮಕ್ಳು ಚರ್ಮ ಎಬ್ರಲಾ…’ ನೆನಪಾಗುತ್ತಿತ್ತು. ನಾನು ಕೆಲಸ ಮಾಡಿದ ಸಾಹಿತ್ಯ ಸಂಸ್ಥೆ ನೆನೆಸಿಕೊಂಡಾಗ ಅಲ್ಲಿನ ಸೂತ್ರ ಹಿಡಿದಿರುವವರನ್ನ ‘ಇಕ್ರಲಾ ವದಿರಲಾ… ಆ ನನ್ಮಕ್ಳು ಚರ್ಮ ಎಬ್ರಲಾ…’ ಅಂತ ಹಲ್ಲು ಕಚ್ಚುವ ಹಾಗಾಗುತ್ತಿತ್ತು.

ನನಗೆ ಆ ಪದ್ಯದ ತೀವ್ರತೆ ಮತ್ತು ಸ್ವರೂಪ ಅರ್ಥವಾದದ್ದು ಅದೇ ಹೊತ್ತು. ಅಲ್ಲೀವರೆಗೆ ಅವು ಕೇವಲ ಸಾಲುಗಳು. ದಲಿತರ ನೋವಿಗೆ ಪ್ರತಿಯಾಗಿ ಹುಟ್ಟಿದ ಸಾಲುಗಳು ಅಷ್ಟೇ. ಆದರೆ ನನ್ನ ಸಂದರ್ಭದಲ್ಲಿ ಅವೇ ಆಕ್ರೋಶದ ಸಾಲು ಹೊಸ ರೀತಿಯಲ್ಲಿ ಅರ್ಥಕ್ಕೆ ನಿಲುಕಿದ್ದವು.

ಆದರೂ ನನ್ನಲ್ಲಿ ಒಂದು ಪ್ರಶ್ನೆ ಇತ್ತು. ಹೀಗೆಲ್ಲ ಬರೆದ ಸಿದ್ಧಲಿಂಗಯ್ಯ ಮೇಷ್ಟ್ರು ಅದು ಹೇಗೆ ನಗುನಗುತ್ತ ತಮಾಷೆ ಮಾಡುತ್ತ ಇರುತ್ತಾರೆ ಎಂದು ಹಲವು ಸಲ ಕೇಳಿಕೊಳ್ಳುತ್ತಲೇ ಇದ್ದೆ. ಸಾಹಿತ್ಯಕ ಜಗತ್ತು ಹುಟ್ಟಿಸಿದ ಭ್ರಮನಿರಸದ ಶಾಕ್ ನಿಂದ ಹೊರಬರಲು ದ್ವೀಪದ ಹಾಗೆ ಇರಲು ಆರಂಭಿಸಿದ್ದೆ.

ಆದರೆ ನಾಟಕ ನೋಡುವ ಚಾಳಿ ಕಳೆದಿರಲಿಲ್ಲ. ಹೀಗೆ ಒಮ್ಮೆ ರವೀಂದ್ರ ಕಲಾಕ್ಷೇತ್ರಕ್ಕೆ ಹೋದಾಗ ಅದರ ಬಲಭಾಗದ ಆವರಣದಲ್ಲಿ ಏನೋ ಜಾತ್ರೆಯ ವಾತಾವರಣವಿದ್ದಂತೆ ಇತ್ತು. ಏನದು ಅನ್ನುವ ಕುತೂಹಲದಲ್ಲಿ ಹೋಗಿ ನೋಡಿದೆ. ಅಲ್ಲಿ ಕೆಲವು ಪೇಂಟಿಂಗ್ ಆರ್ಟಿಸ್ಟ್ ಗಳು ಚಿತ್ರ ಬಿಡಿಸುತ್ತಿದ್ದರು. ಅದರಲ್ಲಿ ನನ್ನ ಗಮನ ಸೆಳೆದದ್ದು ಒಬ್ಬ ಆರ್ಟಿಸ್ಟ್ ಎದುರು ಸಿದ್ಧಲಿಂಗಯ್ಯ ಮೇಷ್ಟ್ರು ಮುಖವೊಡ್ಡಿ ಕೂತಿದ್ದರು. ಆ ಆರ್ಟಿಸ್ಟ್ ಎಷ್ಟು ನುರಿತವರು ಅಂದರೆ ಸಿದ್ದಲಿಂಗಯ್ಯನವರನ್ನ ಹಾಗೇ ಕುಂಚದಲ್ಲಿ ಬಿಡಿಸುತ್ತಾ ಹೋದರು. ನೋಡನೋಡುತ್ತ ಮೇಷ್ಟ್ರ ಪೇಂಟಿಗ್ ಸಿದ್ಧವಾಯಿತು. ಮೇಷ್ಟ್ರು ಸದ್ಯ ಮುಗಿಯಿತು ಎನ್ನುವ ಭಾವದಲ್ಲಿ ನಿರಾಳವಾಗಿ ಉಸಿರುಬಿಟ್ಟು ಎದ್ದು ಬಂದು ತಮ್ಮ ಚಿತ್ರ ಕಂಡು ಸಂತೋಷಿಸುತ್ತ ತಿರುಗುವಷ್ಟರಲ್ಲಿ ನಾನು ಅವರ ಎದುರು ಪ್ರತ್ಯಕ್ಷ ಆಗಿದ್ದೆ. ಕಂಡದ್ದೇ ‘ಅರೆರೆ.. ಮಹೇಶ್ ಅವರು..’ ಎಂದು ತಾವೂ ಕಾಫಿ ತರಿಸಿಕೊಂಡು ನನಗೂ ಕೊಡಿಸಿದರು. ಈ ಹಿಂದಿನ ನನ್ನ ಅಸಹಾಯಕತೆ ವಿವರಿಸಿ ಅವರಲ್ಲಿ ಕ್ಷಮೆ ಕೇಳಿದೆ. ಅವರು ಬೆನ್ನು ತಟ್ಟಿ ಸಂತೈಸಿ ‘ಅಲ್ಲ ನನಗೆ ಒಂದು ಮಾತು ಹೇಳೋದಲ್ವ ಹೀಗೆಲ್ಲ ಆಗ್ತಿದೆ ಅಂತ..’ ಅಂದರು.

‘ಇಲ್ಲ ಸರ್ ನನಗೆ ಈ ಸಾಹಿತ್ಯಕ ಜಗತ್ತಿನವರ ಸಹವಾಸ ಸಾಕು ಅನಿಸಿತು. ಎಂಥಾ ಹಿಪಾಕ್ರಸಿ ಸರ್ ಇದೆಲ್ಲ…’ ಅಂತಂದೆ ಈ ಹಿಂದೆ ನಾನು ಅನುಭವಿಸಿದ ನೋವು ನೆನೆಯುತ್ತ.

‘ಅಷ್ಟೊಂದು ಹತಾಶರಾಗಬೇಡಿ ಮಹೇಶ್… ಪ್ರಪಂಚ ಹೇಗಿದೆ ಅಂತ ಗೊತ್ತಾಗಿದೆಯಲ್ಲ. ನಾವು ನಗ್ತಲೇ ಇರಬೇಕು. ನಮ್ಮನ್ನೂ ತಮಾಷೆ ಮಾಡಿಕೊಂಡರೆ ಒಂಥರಾ ನೆಮ್ಮದಿ ಮತ್ತು ಬೇರೆಯವರ ದೃಷ್ಟೀಲಿ ಸೇಫ್. ಆದರೆ ಆ ತಮಾಷೆಯಲ್ಲಿ ಅವರೂ ಸೇರಿಕೊಂಡಿರ್ತಾರೆ ನೋಡಿ ಅದು ಮಜಾ. ನಗು ಅಂದರೆ ಕಾಮಿಡಿ ಅಲ್ಲ. ನಿಮ್ಮ ಹುಚ್ಚಾಟಗಳಿಗೆ ನನ್ನ ಪ್ರತಿಭಟನೆ ಅದು.. ಅಂತ ತಿಳಿದು ನಗ್ತಿರಬೇಕು. ನಿಮ್ಮನ್ನ ತುಳಿಯೋಕೆ ಹವಣಿಸ್ತಾರಲ್ಲ ಅವರ ಮುಂದೇನೂ ನಗಬೇಕು. ಆಗ ನೋಡಿ ಮಜ ಹೇಗಿರುತ್ತೆ..’ ಅಂದರು.

ಅಷ್ಟರಲ್ಲಿ ಆ ಪೇಂಟಿಂಗ್ ಆರ್ಟಿಸ್ಟ್ ಮತ್ತೆ ಬಂದು ‘ಸರ್ ಇನ್ನೊಂದು ಚೂರು ಇದೆ. ಅದೇ ಆ್ಯಂಗಲ್ ನಲ್ಲಿ ಕೂತ್ಕೊಳ್ಳಿ ಸರ್.. ಮುಗಿಸಿಬಿಡ್ತೀನಿ..’ ಅಂತ ವಿನಂತಿಸಿಕೊಂಡರು. ಅಷ್ಟರಲ್ಲಿ ಕಾಫಿ ಕುಡಿದು ಮುಗಿಸಿದ್ದ ಮೇಷ್ಟ್ರು ನನ್ನ ಕಡೆ ನೋಡಿ ನಕ್ಕು ‘ಏನಿಲ್ಲ ನನ್ನ ಮುಖದ ಬಣ್ಣ ಮ್ಯಾಚ್ ಆಗ್ತಿದ್ಯ ಇಲ್ವಾ ನೋಡೋಕೆ… ನನಗೆ ಗೊತ್ತು..’ ಅಂತ ಎದ್ದು ಹೋದರು.

ಅನಂತರ ಮೇಷ್ಟ್ರು ಭೇಟಿ ಯಾಕೊ ಸಾಧ್ಯವಾಗಲಿಲ್ಲ. ಆದರೆ ಅವರು ಹೇಳಿದ್ದನ್ನ ಪಾಲಿಸಲು ಆರಂಭಿಸಿದೆ. ಕಾಮಿಡಿ ನಾಟಕ ಬರೆದು ನಗಿಸಿದರೆ ಅದಕ್ಕೆ ಹಲವರು ಕೊಂಕಾಡಲು ಆರಂಭಿಸಿದರು. ಆಡ್ಕಳ್ಳಿ ಪರವಾಗಿಲ್ಲ ಅಂದುಕೊಂಡು ಮತ್ತೆಮತ್ತೆ ಕಾಮಿಡಿ ನಾಟಕಗಳನ್ನೇ ಬರೆಯಲು ಆರಂಭಿಸಿದೆ. ಜೊತೆಗೆ ರಂಗಕ್ಕೂ ತರಲು ಆರಂಭಿಸಿದೆ. ನನ್ನನ್ನ ‘ಬರೀ ಕಾಮಿಡಿ ನಾಟಕ ಬರೀತಾನೆ..’ ಅಂತ ಬ್ರ್ಯಾಂಡ್ ಮಾಡಲು ಆರಂಭಿಸಿದ್ದಾರೆ ಈ ಹೊತ್ತು. ಮಾಡಿಕೊಳ್ಳಲಿ ಎಂದು ನಗುತ್ತಲೇ ಮತ್ತೆ ಕಾಮಿಡಿ ಬರೆಯುತ್ತಲೇ ಇದ್ದೇನೆ.


ಈ ಎಲ್ಲ ಪ್ರೊಗ್ರಸ್ ಹೇಳೋಣ ಅಂದುಕೊಂಡರೆ ಸಿದ್ಧಲಿಂಗಯ್ಯ ಮೇಷ್ಟ್ರು ನಿರ್ಗಮಿಸಿದ್ದಾರೆ. ಎಡಪಂಥ, ಬಲಪಂಥ ಅಂತ ನೋಡದೆ, ರಾಜಕೀಯ ಲಾಲಸೆಗೆ ತಮ್ಮನ್ನು ತೆತ್ತುಕೊಂಡಿದ್ದರಿಂದ ದಲಿತ ಬಂಡಾಯ ಚಳುವಳಿಯ ದಿಕ್ಕೇ ಬದಲಾಗಿ ಕುಂಠಿತವಾಯಿತು ಎಂದು ಕಟುವಾಗಿ ಟೀಕಿಸಿದರೂ ಸಿದ್ಧಲಿಂಗಯ್ಯ ಮೇಷ್ಟ್ರು ಮಾತ್ರ ನಗುನಗುತ್ತಲೇ ಉತ್ತರಿಸುತ್ತಿದ್ದದ್ದು ನನಗೆ ಒಂದು ಪಾಠದಂತೆಯೇ ಇದೆ. ನಗುವಿನಲ್ಲಿ ಏನೋ ಒಂದು ಮ್ಯಾಜಿಕ್ ಇದೆ ನಿಜಕ್ಕೂ…