ಸಮಯದಲ್ಲಿ ಸೈನ್ಯದಲ್ಲಿದ್ದವರ ಅಧಿಕಾರದ ದರ್ಪ ಯಾವ ಮಟ್ಟದ್ದೆಂದರೆ ಮಕ್ಕಳು ಅಳಲು ಕೂಡ ಇವರ ಅನುಮತಿ ತೆಗೆದುಕೊಳ್ಳಬೇಕು ಅನ್ನುವ ರೀತಿಯಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ನೇರವಾಗಿ ಕೊಲೊನಿಯಲ್ ಮಬುಚಿಯನ್ನೇ ಎದುರುಹಾಕಿಕೊಂಡಿದ್ದೆ. ಆದೇಶವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆಯಿತ್ತು. ಯಮಾ ಸಾನ್ ಮತ್ತು ನಿರ್ಮಾಪಕ ಮೊರಿಟ ನೊಬ್ಯೊಶಿ ನಿಧಾನವಾಗಿ ದೃಶ್ಯವನ್ನು ಕತ್ತರಿಸಿಬಿಡುವ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವತ್ತಲೇ ವಾಲುತ್ತಿದ್ದರು. ಆದರೆ ಸಂಕಲನದ ಹೊಣೆ ನನ್ನದಾಗಿದ್ದರಿಂದ ದೃಶ್ಯವನ್ನು ಕತ್ತರಿಸಲು ನಾನು ಒಪ್ಪಲಿಲ್ಲ. ಮೊದಲಿಗೆ ಬೆಳಗಿನ ಹೊತ್ತು ಮದ್ಯ ಕುಡಿಯುವುದನ್ನು ನಿಷೇಧಿಸಿದ್ದು ಮೂರ್ಖತನ ಅಂತನ್ನಿಸಿತು.
ಹೇಮಾ
.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಮತ್ತೊಂದು ಅಧ್ಯಾಯ.

 

ನಾನು ಮುಂಗೋಪಿ ಮತ್ತು ಹಠಮಾರಿ. ಈಗಲೂ ನನ್ನಲ್ಲಿ ಈ ನ್ಯೂನ್ಯತೆಗಳಿವೆ. ಸಹಾಯಕ ನಿರ್ದೇಶಕನಾಗಿದ್ದಾಗ ಇದರಿಂದ ಕೆಲವು ಸಮಸ್ಯೆಗಳು ಹುಟ್ಟಿಕೊಂಡಿದ್ದವು. ಒಂದು ಘಟನೆ ನೆನಪಾಗುತ್ತಿದೆ. ಚಿತ್ರವೊಂದರ ಚಿತ್ರೀಕರಣದಲ್ಲಿ ಸಮಯದ ಒತ್ತಡ ಹೆಚ್ಚಾಗಿತ್ತು. ವಾರಕ್ಕೂ ಹೆಚ್ಚು ಕಾಲ ಊಟಕ್ಕೆ ಕೂಡ ಅರ್ಧಗಂಟೆ ಬಿಡುವು ಸಿಕ್ಕಿರಲಿಲ್ಲ. ಕಂಪನಿಯವರು ಕೊಡುತ್ತಿದ್ದ ಊಟದ ಡಬ್ಬಿಗಳನ್ನೇ ನೆಚ್ಚಿಕೊಂಡು ಊಟ ಮಾಡಬೇಕಿತ್ತು. ಅದು ಪರಿಸ್ಥಿತಿಯನ್ನು ಇನ್ನಷ್ಟು ಅಸಹನೀಯವಾಗಿಸಿತ್ತು. ಆ ಊಟದ ಡಬ್ಬಿಗಳಲ್ಲಿ ರೈಸ್ ಬಾಲ್* (*ಒನಿಗರಿ ಎನ್ನುವ ಜಪಾನಿ ಖಾದ್ಯ) ಮತ್ತು ಮೂಲಂಗಿ ಉಪ್ಪಿನಕಾಯಿ ಇರುತ್ತಿತ್ತು.

ವಾರಕ್ಕೂ ಹೆಚ್ಚು ಕಾಲ ಇದನ್ನೇ ತಿನ್ನುವುದು ಅಸಾಧ್ಯವಾಗಿತ್ತು. ತಂಡದವರು ದೂರಲು ಶುರುಮಾಡಿದರು. ಕಂಪನಿಯ ಆಡಳಿತಾಧಿಕಾರಿಗಳ ಹತ್ತಿರ ಹೋಗಿ “ಆ ರೈಸ್ ಬಾಲುಗಳನ್ನು ಕನಿಷ್ಠ ಒಣಗಿಸಿದ ಕಡಲಪಾಚಿಯ ಹಾಳೆಯಲ್ಲಾದರೂ ಸುತ್ತಿಕೊಡಿ” ಎಂದು ಕೇಳಿಕೊಂಡೆ. ಪ್ರೊಡಕ್ಷನ್ ಆಫೀಸಿನವರು ನನ್ನ ಬೇಡಿಕೆಯನ್ನು ಒಪ್ಪಿಕೊಂಡರು. ಹಿಂತಿರುಗಿ ಬಂದು ತಂಡಕ್ಕೆ ನಾಳೆಯಿಂದ ಊಟದ ಡಬ್ಬಿಯಲ್ಲಿ ಬೇರೇನೋ ಊಟ ಬರಲಿದೆ ಎಂದು ಹೇಳಿದೆ. ಅವರು ಗೊಣಗುವುದನ್ನು ನಿಲ್ಲಿಸಿದರು.

ಮಾರನೆಯ ದಿನ ಊಟದ ಡಬ್ಬಿಗಳಲ್ಲಿ ಮತ್ತದೇ ರೈಸ್ ಬಾಲ್ ಮತ್ತು ಮೂಲಂಗಿ ಉಪ್ಪಿನಕಾಯಿ ಇತ್ತು. ಸಿಟ್ಟು ಬಂದು ತಂಡದಲ್ಲಿದ್ದವನೊಬ್ಬ ಅವನ ಊಟದ ಡಬ್ಬಿಯನ್ನು ತೆಗೆದು ನನ್ನತ್ತ ಎಸೆದ. ನನ್ನ ಪಿತ್ತ ನೆತ್ತಿಗೇರಿತು. ಕಷ್ಟಪಟ್ಟು ತಡೆದುಕೊಂಡು ಆ ಡಬ್ಬಿಯನ್ನು ಎತ್ತಿಕೊಂಡು ಪ್ರೊಡಕ್ಷನ್ ಆಫೀಸಿನ ಕಡೆ ಹೋದೆ. ಹೊರಾಂಗಣ ಚಿತ್ರೀಕರಣದ ಸೆಟ್ ನಿಂದ ಸ್ಟುಡಿಯೋಗೆ ಹತ್ತು ನಿಮಿಷದ ದಾರಿ. ನಡೆಯುತ್ತಲೇ ನನಗೆ ನಾನೇ ಹೇಳಿಕೊಳ್ಳುತ್ತಿದ್ದೆ “ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡ, ಸಮಾಧಾನ ಸಮಾಧಾನ..” ಆದರೆ ನಡೆಯುತ್ತಿದ್ದಂತೆ ಸಿಟ್ಟು ಹತೋಟಿ ಮೀರಿ ಪ್ರೊಡಕ್ಷನ್ ಆಫೀಸಿನ ಬಾಗಿಲು ತೆಗೆದೆ ಅಷ್ಟೇ… ಆಫೀಸರನ ಮುಖಕ್ಕೆ ಊಟದ ಡಬ್ಬಿ ಬಡಿದು ಅವನ ಮುಖಕ್ಕೆ ಅನ್ನ ಮೆತ್ತಿಕೊಂಡಿತ್ತು.

ಫುಶಿಮಿಜು ಶೂಗೆ ಸಹಾಯಕ ನಿರ್ದೇಶಕನಾಗಿದ್ದಾಗ ಮತ್ತೊಂದು ಘಟನೆ ನಡೆಯಿತು. ಫುಶಿಮಿಜು ಶೂ ಯಮಾಸಾನ್ ಗೆ ನನಗಿಂತ ಮೊದಲು ಸಹಾಯಕ ನಿರ್ದೇಶಕನಾಗಿದ್ದ. ನಕ್ಷತ್ರಗಳು ತುಂಬಿದ್ದ ರಾತ್ರಿಯನ್ನು ಚಿತ್ರೀಕರಿಸಬೇಕಿತ್ತು. ಸೆಟ್ ನ ಮೇಲೆ ಹತ್ತಿ ನಕ್ಷತ್ರಗಳಂತೆ ಕಾಣಲು ಹೊಳೆಯುವ ಚಮ್ಕಿಗಳನ್ನು ತೂಗಿಬಿಡುತ್ತಿದ್ದೆ. ಆದರೆ ಅದಕ್ಕೆ ಕಟ್ಟಿದ್ದ ದಾರಗಳು ಒಂದಕ್ಕೊಂದು ಸೇರಿಕೊಂಡು ಸುತ್ತಿಕೊಂಡು ಗೋಜಲಾಗುತ್ತಿತ್ತು. ಬಿಡಿಸಿ ಬಿಡಿಸಿ ಸಾಕಾಗಿ ತಾಳ್ಮೆಗೆಟ್ಟಿತ್ತು. ಫುಶಿಮಿಜು ಕೆಳಗೆ ಕ್ಯಾಮರಾ ಪಕ್ಕದಲ್ಲಿ ನಿಂತು ನೋಡುತ್ತಿದ್ದ. ಅವನಿಗೂ ಕಿರಿಕಿರಿಯಾಗಿ “ಬೇಗ ಮಾಡಿಮುಗಿಸಬಾರದಾ?” ಅಂತ ಕೂಗಿದ.

ಅಷ್ಟಂದದ್ದೇ ಮೊದಲೇ ತಾಳ್ಮೆಗೆಟ್ಟಿದ್ದೆ! ಚಮ್ಕಿಗಳ ಡಬ್ಬದಲ್ಲಿದ್ದ ಬೆಳ್ಳಿಯ ಬಣ್ಣದ ಗಾಜಿನ ಚೆಂಡನ್ನು ತೆಗೆದುಕೊಂಡು ಫುಶಿಮಿಜು ಕಡೆ ಎಸೆದೆ. “ತೊಗೋ ಶೂಟಿಂಗ್ ಸ್ಟಾರ್ ನಿನಗೆ!” ಅಂತ ಕಿರುಚಿದೆ. “ನೀನಿನ್ನೂ ಚಿಕ್ಕಮಗು. ಮುಂಗೋಪಿ ಮಗು” ಎಂದು ಆಮೇಲೆ ಹೇಳಿದ.

ಫುಶಿಮಿಜು ಹೇಳಿದ್ದು ನಿಜ. ಎಪ್ಪತ್ತು ವರ್ಷವಾದರೂ ಇನ್ನೂ ನನ್ನ ಮುಂಗೋಪವನ್ನು ಕಡಿಮೆಮಾಡಿಕೊಳ್ಳಲು ಆಗಿಲ್ಲ. ಈಗಲೂ ಒಮ್ಮೊಮ್ಮೆ ಸರಪಟಾಕಿ ತರಹ ಸಿಡಿದು ಬಿಡುತ್ತೇನೆ. ನಾನೊಂದು ರೀತಿ ಹಾರಿದರೂ ತನ್ನ ಹಿಂದೆ ವಿಕಿರಣವನ್ನು ಸೂಸದ ಉಪಗ್ರಹದಂತೆ. ಹಾಗಾಗಿ ನನ್ನ ಮುಂಗೋಪ ಒಳ್ಳೆಯ ಗುಣ ಅಂತ ನನಗನ್ನಿಸುತ್ತೆ.

ಮತ್ತೊಂದು ಸಾರಿ ತಲೆಯ ಮೇಲೆ ಯಾರೋ ಹೊಡೆದ ಸದ್ದನ್ನು ರೆಕಾರ್ಡ್ ಮಾಡಬೇಕಿತ್ತು. ಏನೇನೋ ವಸ್ತುಗಳಿಂದ ಪ್ರಯತ್ನಿಸಿದರೂ ಮಿಕ್ಸರ್ ಯಾವ ಸದ್ದನ್ನು ಒಪ್ಪಲಿಲ್ಲ. ಕಡೆಗೆ ಸಿಟ್ಟಿನಲ್ಲಿ ಮೈಕೋಫೋನನ್ನೇ ಗುದ್ದಿದೆ. “ಓಕೆ” ಎನ್ನುವ ನೀಲಿ ದೀಪ ಹೊತ್ತಿಕೊಂಡಿತು.

ನನಗೆ ಸುಮ್ಮನೆ ವಾದ ಮಾಡುವುದೆಂದರೆ ಇಷ್ಟವಾಗುವುದಿಲ್ಲ. ವಾದ ಮಾಡುವ ವ್ಯಕ್ತಿಗಳು ಇಷ್ಟವಾಗುವುದಿಲ್ಲ. ಒಬ್ಬ ವಿತಂಡವಾದಿ ಚಿತ್ರಕತೆರಚನಾಕಾರ ತನ್ನ ಚಿತ್ರಕತೆ ಸರಿಯಾಗಿದೆ ಎಂದು ಸಾಬೀತು ಮಾಡಲು ಏನೇನೋ ಕಾರಣಗಳನ್ನು ಹೇಳಲು ಶುರುಮಾಡಿದ. ನನಗೆ ಕಿರಿಕಿರಿಯಾಗಿ ಸಿಟ್ಟುಬಂತು. ತಾರ್ಕಿಕವಾಗಿ ಏನೇ ಹೇಳಿದರೂ ಆ ಚಿತ್ರಕತೆ ನೀರಸವಾಗಿತ್ತು ಅಂದರೆ ನೀರಸವಾಗಿತ್ತು ಅಷ್ಟೇ. ನಾವಿಬ್ಬರೂ ಜಗಳ ಆಡಿದೆವು.

ಒಮ್ಮೆ ಎರಡನೆಯ ಯೂನಿಟ್ ಶೂಟಿಂಗ್ ನ ಉಸ್ತುವಾರಿ ವಹಿಸಿಕೊಂಡಿದ್ದಾಗ ಸಿಕ್ಕಾಪಟ್ಟೆ ಒತ್ತಡದಲ್ಲಿದ್ದೆವು. ಯಾವುದೋ ಒಂದು ಟೇಕ್ ಮುಗಿಸಿ ಸುಸ್ತಾಗಿ ಸುಧಾರಿಸಿಕೊಳ್ಳಲು ಕೂತಿದ್ದೆ. ಛಾಯಾಗ್ರಾಹಕ ನನ್ನ ಬಳಿ ಬಂದು ಮುಂದಿನ ಶಾಟ್ ಗೆ ಕ್ಯಾಮೆರಾ ಎಲ್ಲಿಡಬೇಕೆಂದು ಕೇಳಿದೆ. ನಾನು ಕೂತಿದ್ದ ಸ್ಥಳದ ಹತ್ತಿರದ ಜಾಗದತ್ತ ಬೆರಳು ಮಾಡಿತೋರಿಸಿದೆ. ಈ ಛಾಯಾಗ್ರಾಹ ಮಹಾನ್ ವಿತಂಡವಾದ ಪ್ರಿಯ. ಆ ಜಾಗದಲ್ಲಿ ಕ್ಯಾಮೆರಾ ಏಕಿಡಬೇಕೆಂದು ಸಕಾರಾಣವಾಗಿ ವಿವರಿಸಲು ಹೇಳಿದ. ನನಗೆ ರೇಗಿಹೋಯಿತು (ಹೀಗೆ ಬಹಳ ಸಾರಿ ಆಗಿದೆ. ನನ್ನನ್ನು ಕಷ್ಟಕ್ಕೆ ಕೂಡ ಸಿಲುಕಿಸಿದೆ). ಅದೇ ಜಾಗದಲ್ಲಿ ಕ್ಯಾಮೆರಾ ಇಡು ಯಾಕೆಂದರೆ ನನಗೆ ಸುಸ್ತಾಗಿದೆ. ಇಲ್ಲಿಂದ ಎದ್ದು ಬೇರೆಡೆಗೆ ಹೋಗಲು ಮನಸ್ಸಿಲ್ಲ. ಜಗಳವಾಡಲು ಕಾಯುತ್ತಿದ್ದ ಈ ಛಾಯಾಗ್ರಾಹಕ ಮರುಮಾತಾಡಲಿಲ್ಲ. ನನಗೆಷ್ಟು ಆಶ್ಚರ್ಯವಾಗಿರಬೇಕು ನೀವೇ ಊಹಿಸಿ.

ನನಗೆ ಬಹಳ ಬೇಗ ಸಿಟ್ಟು ಬರುತ್ತಿತ್ತು. ನನ್ನ ಸಹಾಯಕ ನಿರ್ದೇಶಕರ ಪ್ರಕಾರ ನನಗೆ ಸಿಟ್ಟು ಬಂದಾಗ ಮುಖವೆಲ್ಲ ಕೆಂಪಾಗಿ ಮೂಗಿನ ತುದಿ ಕೆಂಪಾಗಿ ಕುದಿಯುತ್ತಿತ್ತಂತೆ. ಅವರ ಪ್ರಕಾರ ವರ್ಣಚಿತ್ರಕ್ಕೆ ಹೇಳಿ ಮಾಡಿಸಿದಂತಹ ಕೋಪದ ಬಣ್ಣವಾಗಿತ್ತಂತೆ. ಸಿಟ್ಟು ಬಂದಾಗ ಎಂದೂ ಕನ್ನಡಿಯಲ್ಲಿ ಮುಖ ನೋಡಿಕೊಂಡಿಲ್ಲ ಹಾಗಾಗಿ ಅವರು ಹೇಳಿದ್ದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಅವರಿಗಿದು ಅಪಾಯದ ಮುನ್ಸೂಚನೆಯಂತಿತ್ತು. ಆದ್ದರಿಂದ ಅವರು ಗಮನಿಸಿದ್ದು ಸುಳ್ಳಾಗಿರಲಿಕ್ಕಿಲ್ಲ.

ಫುಶಿಮಿಜು ಹೇಳಿದ್ದು ನಿಜ. ಎಪ್ಪತ್ತು ವರ್ಷವಾದರೂ ಇನ್ನೂ ನನ್ನ ಮುಂಗೋಪವನ್ನು ಕಡಿಮೆಮಾಡಿಕೊಳ್ಳಲು ಆಗಿಲ್ಲ. ಈಗಲೂ ಒಮ್ಮೊಮ್ಮೆ ಸರಪಟಾಕಿ ತರಹ ಸಿಡಿದು ಬಿಡುತ್ತೇನೆ. ನಾನೊಂದು ರೀತಿ ಹಾರಿದರೂ ತನ್ನ ಹಿಂದೆ ವಿಕಿರಣವನ್ನು ಸೂಸದ ಉಪಗ್ರಹದಂತೆ. ಹಾಗಾಗಿ ನನ್ನ ಮುಂಗೋಪ ಒಳ್ಳೆಯ ಗುಣ ಅಂತ ನನಗನ್ನಿಸುತ್ತೆ.

ಕುದುರೆ ಹರಾಜಿನಲ್ಲಿ ಕುದುರೆ ಮರಿಯನ್ನು ಮಾರಾಟ ಮಾಡುವುದು ಯಮಾ ಸಾನ್ ರ Horses ಚಿತ್ರದ ಕಡೆಯ ದೃಶ್ಯ. ಚಿತ್ರದ ನಾಯಕಿ ಇನೆ (Ine (Takamine Hideko) ಹರಾಜಿನಲ್ಲಿ ಹಾಕಿರುವ ಅಂಗಡಿಗಳಲ್ಲಿ ಒಂದರಿಂದ ಮದ್ಯದ ದೊಡ್ಡ ಬಾಟಲನ್ನು ಕೊಂಡು ತರಬೇಕು. ಆ ಬಾಟಲಿನೊಂದಿಗೆ ಹರಾಜಿಗೆ ಸೇರಿರುವ ಜನರ ನಡುವೆ ನಡೆದು ಕುದುರೆಯನ್ನು ಕಳುಹಿಸಿಕೊಡುತ್ತಿರುವ ತನ್ನ ಕುಟುಂಬದವರ ಹತ್ತಿರ ಬರಬೇಕು. ಆಗ ತಮ್ಮ ಕುದುರೆಗಳೊಂದಿಗೆ ನಿಂತಿರುವ ರೈತರು ತನ್ನ ಮನೆಯವರಂತೆಯೇ ಕುಡಿದು ಹಾಡುತ್ತಿರುವ ಹಾಡು ಇನೆಳ ಕಿವಿಗೆ ಬೀಳುತ್ತದೆ. ಅವಳು ಸಾಕಿದ ಕುದರೆಯಿಂದ ದೂರವಾಗುತ್ತಿರುವುದನ್ನು ಆ ಹಾಡು ಸೂಚಿಸುತ್ತದೆ. ಅದನ್ನು ಕೇಳಿ ಅವಳಿಗೆ ಬಹಳ ದುಃಖವಾಗುತ್ತದೆ.

Horses ಕುರಿತಾದ ಐಡಿಯಾ ಯಾಮಾ ಸಾನರದ್ದು. ಅವರು ಕುದುರೆ ಹರಾಜನ್ನು ರೇಡಿಯೋದಲ್ಲಿ ಕೇಳುತ್ತಿದ್ದಾಗ ಹರಾಜಿನ ಎಲ್ಲ ಕೂಗಾಟಗಳ ನಡುವೆಯೂ ಅವರಿಗೆ ಬಿಕ್ಕುತ್ತಿರುವ ಹುಡುಗಿಯೊಬ್ಬಳ ಧ್ವನಿ ಕೇಳಿಸಿತು. ಇನೆ – ಅವಳೇ ಈ ಚಿತ್ರದ ನಾಯಕಿ. ಆದ್ದರಿಂದ ಈ ದೃಶ್ಯ ಇಡೀ ಚಿತ್ರದ ಪ್ರಾಣ.

(ಇನೆ (Ine (Takamine Hideko)

ನಮ್ಮ ದುರಾದೃಷ್ಟಕ್ಕೆ ಸೈನ್ಯದ ಅಶ್ವದಳ ವ್ಯವಹಾರಗಳ ಆಡಳಿತ ಕಛೇರಿಯಿಂದ ಇಡೀ ದೃಶ್ಯವನ್ನು ತೆಗೆದುಹಾಕುವಂತೆ ಆದೇಶ ಬಂದಿತು. ಅದು ಯುದ್ಧದ ಸಮಯ (Horses ಬಿಡುಗಡೆಯಾದದ್ದು 1941). ಬೆಳಗಿನ ಹೊತ್ತಲ್ಲಿ ಮದ್ಯ ಸೇವನೆಯನ್ನು ನಿಷೇಧಿಸಲಾಗಿತ್ತು. ನಮ್ಮ ಚಿತ್ರದ ದೃಶ್ಯದಲ್ಲಿ ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಒಪ್ಪಿಗೆ ಪಡೆದ ಮೂಲ ಚಿತ್ರಕತೆಯಲ್ಲಿ ಈ ದೃಶ್ಯವಿತ್ತು. ಅಶ್ವದಳ ಆಡಳಿತ ವಿಭಾಗದಿಂದ ನೇಮಿಸಲಾಗಿದ್ದ ಸೈನ್ಯಾಧಿಕಾರಿ ಚಿತ್ರೀಕರಣದ ವೇಳೆ ಇದ್ದರು (ಕೊಲೊನಿಯಲ್ ಮಬುಚಿ, ಹಠಮಾರಿ ಒರಟು ವ್ಯಕ್ತಿತ್ವದ ವ್ಯಕ್ತಿ). ಈ ದೃಶ್ಯದ ಚಿತ್ರೀಕರಣ ಮಾಡುವುದು ಬಹಳ ಕಷ್ಟಕರವಾಗಿತ್ತು. ನಿಜವಾದ ಹರಾಜು ನಡೆಯುತ್ತಿದ್ದ ಚೌಕದಲ್ಲಿ ಡಾಲಿ ಶಾಟ್ ತೆಗೆಯಬೇಕಿತ್ತು. ಹರಾಜಿಗೆ ಸೇರಿದ್ದ ಗುಂಪಿನ ಸಹಕಾರವನ್ನು ಪಡೆದು ಚಿತ್ರೀಕರಿಸುವುದು ಸುಲಭದ ಮಾತಾಗಿರಲಿಲ್ಲ. ಚೌಕದಲ್ಲಿ ಮಣ್ಣು, ಕೊಚ್ಚೆ ನೀರಿನ ನಡುವೆಯೇ ಓಡಾಡಬೇಕಿತ್ತು. ಇಂತಹ ಗಜಿಬಿಜಿಯ ನಡುವೆಯೇ ಕ್ಯಾಮರಾ ಹಾಗೂ ಡಾಲಿ ಟ್ರ್ಯಾಕ್ ಗಳನ್ನು ಸಂಭಾಳಿಸುತ್ತಾ ಚಿತ್ರೀಕರಣ ಮಾಡಬೇಕಿತ್ತು. ಪವಾಡಸದೃಶ ಅನ್ನುವಂತೆ ಎಲ್ಲವೂ ಅದ್ಭುತವಾಗಿ ನಡೆದು ಅತ್ಯದ್ಭುತವಾದ ಟೇಕ್ ಸಿಕ್ಕಿತ್ತು. ಹೀಗಿದ್ದಾಗ ಅಂತಹ ದೃಶ್ಯವನ್ನು ಕತ್ತರಿಸಿ ಎಂದರೇನರ್ಥ?

ಏನೇ ಆಗಲಿ ದೃಶ್ಯವನ್ನು ತೆಗೆದುಹಾಕುವುದಿಲ್ಲ ಅಂತ ನಿರ್ಧರಿಸಿಬಿಟ್ಟೆ. ಆ ಸಮಯದಲ್ಲಿ ಸೈನ್ಯದಲ್ಲಿದ್ದವರ ಅಧಿಕಾರದ ದರ್ಪ ಯಾವ ಮಟ್ಟದ್ದೆಂದರೆ ಮಕ್ಕಳು ಅಳಲು ಕೂಡ ಇವರ ಅನುಮತಿ ತೆಗೆದುಕೊಳ್ಳಬೇಕು ಅನ್ನುವ ರೀತಿಯಲ್ಲಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ನೇರವಾಗಿ ಕೊಲೊನಿಯಲ್ ಮಬುಚಿಯನ್ನೇ ಎದುರುಹಾಕಿಕೊಂಡಿದ್ದೆ. ಆದೇಶವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆಯಿತ್ತು. ಯಮಾ ಸಾನ್ ಮತ್ತು ನಿರ್ಮಾಪಕ ಮೊರಿಟ ನೊಬ್ಯೊಶಿ ನಿಧಾನವಾಗಿ ದೃಶ್ಯವನ್ನು ಕತ್ತರಿಸಿಬಿಡುವ ಅನಿವಾರ್ಯತೆಯನ್ನು ಒಪ್ಪಿಕೊಳ್ಳುವತ್ತಲೇ ವಾಲುತ್ತಿದ್ದರು. ಆದರೆ ಸಂಕಲನದ ಹೊಣೆ ನನ್ನದಾಗಿದ್ದರಿಂದ ದೃಶ್ಯವನ್ನು ಕತ್ತರಿಸಲು ನಾನು ಒಪ್ಪಲಿಲ್ಲ.

ಮೊದಲಿಗೆ ಬೆಳಗಿನ ಹೊತ್ತು ಮದ್ಯ ಕುಡಿಯುವುದನ್ನು ನಿಷೇಧಿಸಿದ್ದು ಮೂರ್ಖತನ ಅಂತನ್ನಿಸಿತು. ಎರಡನೆಯದು ಅವರು ನಮಗೆ ಚಿತ್ರೀಕರಣಕ್ಕೆ ಅವಕಾಶ ನೀಡಿ ಆಮೇಲೆ ಕತ್ತರಿಸಲು ಹೇಳುತ್ತಿರುವುದಕ್ಕೆ ಕ್ಷಮೆ ಕೇಳಿ ಆಮೇಲೆ ಆ ದೃಶ್ಯವನ್ನು ಕತ್ತರಿಸುವಂತೆ ಮನವಿ ಮಾಡಬೇಕಿತ್ತು. ಬದಲಿಗೆ ಅವರು “ಕತ್ತರಿಸಿ” ಅಂತ ಆದೇಶವನ್ನಷ್ಟೇ ನೀಡಿದ್ದರು. ಹಾಗೆ ಮಾಡುವುದಕ್ಕೆ ನನಗೆ ಸುತಾರಾಂ ಇಷ್ಟವಿರಲಿಲ್ಲ.

ಚಿತ್ರದ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿತ್ತು. ಒಂದು ಇಳಿಸಂಜೆ ಮೊರಿಟ ನನ್ನನ್ನು ಹುಡುಕುತ್ತಾ ಸಂಕಲನದ ಕೊಠಡಿಗೆ ಬಂದರು. ಅವರನ್ನು ನೋಡುತ್ತಿದ್ದ ಹಾಗೆ “ನಾನು ಕತ್ತರಿಸುವುದಿಲ್ಲ” ಎಂದೆ. “ನನಗೆ ಗೊತ್ತು” ಎಂದರು. “ನೀನು ಒಂದು ಸಾರಿ ನಿರ್ಧರಿಸಿದ ಮೇಲೆ ಮುಗಿಯಿತು. ಯಾರು ಏನೇ ಹೇಳಿದರೂ ಅದು ಬದಲಾಗುವುದಿಲ್ಲ. ಆದರೆ ಈ ವಿಷಯವನ್ನು ಹೀಗೆ ಎಳೆದಾಡುತ್ತಿರಲು ಆಗುವುದಿಲ್ಲ. ನನ್ನ ಜೊತೆ ಕೊಲೊನಿಯಲ್ ಮಬೂಚಿ “ಮನೆಗೆ ಬಾ” ಅಂದರು. “ಅಲ್ಲಿಗೆ ಬಂದು ನಾನೇನು ಮಾಡಲಿ?”. “ನಾವು ಈ ದೃಶ್ಯವನ್ನು ತೆಗೆಯುತ್ತೇವೆ ಅಥವ ಇಲ್ಲ ಅನ್ನುವುದನ್ನು ಅವರಿಗೆ ಹೇಳಬೇಕು” “ಆದರೆ ನಿಮಗೆ ಗೊತ್ತು ಕೊಲೊನಿಯಲ್ “ಕತ್ತರಿಸಿ” ಅನ್ನುತ್ತಾರೆ. ನಾನು “ಇಲ್ಲ” ಅನ್ನುತ್ತೇನೆ. ಇಬ್ಬರೂ ಸುಮ್ಮನೆ ಮುಖಮುಖ ನೋಡುತ್ತ ಕೂರಬೇಕು ಅಷ್ಟೇ”. “ಅದೇ ಆಗುವುದಾದರೆ ಆಗಲಿ. ಇನ್ನೇನೂ ಮಾಡಲಾಗುವುದಿಲ್ಲ. ಆದರೆ ನೀನು ಬರಬೇಕು”.

ನಾನಂದುಕೊಂಡಂತೆ ಕೊಲೊನಿಯಲ್ ಮಬೂಚಿ ಮತ್ತು ನಾನು ಒಬ್ಬರನ್ನೊಬ್ಬರು ಸುಮ್ಮನೆ ನೋಡುತ್ತಾ ಕುಳಿತೆವು. ಅಲ್ಲಿಗೆ ಹೋಗುತ್ತಿದ್ದಂತೆ ಮೊರಿಟಾ “ಕುರೊಸೊವ ಯಾವುದೇ ಪರಿಸ್ಥಿತಿಯಲ್ಲೂ ಆ ದೃಶ್ಯವನ್ನು ತೆಗೆಯುವುದಿಲ್ಲ ಅನ್ನುತ್ತಿದ್ದಾನೆ. ಯಾವುದೇ ರೀತಿಯ ಅರ್ಥಹೀನ ಕೆಲಸಗಳನ್ನು ಆತ ಮಾಡುವುದಿಲ್ಲ. ಇನ್ನು ಈ ವಿಷಯ ನಿಮ್ಮಿಬ್ಬರಿಗೆ ಬಿಟ್ಟಿದ್ದು” ಇಷ್ಟು ಹೇಳಿ ಆತ ಕೊಲೊನಿಯಲ್ ಹೆಂಡತಿ ತಂದಿಟ್ಟಿದ್ದ ಮದ್ಯವನ್ನು ಕುಡಿಯಲು ಶುರುಮಾಡಿದರು. ಆತ ಹೆಚ್ಚೇನು ಮಾತಾಡಲಿಲ್ಲ. ನನ್ನ ನಿಲುವನ್ನು ಸ್ಪಷ್ಟಪಡಿಸಿದ ಮೇಲೆ ನಾನು ಕೂಡ ಬೇರೇನೂ ಮಾತಾಡಲಿಲ್ಲ. ಮೌನವಾಗಿ ನನ್ನ ಲೋಟವನ್ನು ನೋಡುತ್ತಾ ಕುಡಿಯುತ್ತಿದ್ದೆ. ಕೊಲೊನಿಯಲ್ ಅವರ ಹೆಂಡತಿ ಮದ್ಯ ಖಾಲಿಯಾಗುತ್ತಿದ್ದಂತೆ ಸಮಯಕ್ಕೆ ಸರಿಯಾಗಿ ಮತ್ತೆ ಮತ್ತೆ ಅದನ್ನು ಪೂರೈಸುತ್ತಿದ್ದರು. ಆಕೆ ಮೂವರನ್ನು ನೋಡಿ ಚಿಂತಾಕ್ರಾಂತರಾಗಿದ್ದರು.

ಎಷ್ಟು ಹೊತ್ತು ಹೀಗೆ ಮೌನವಾಗಿ ಕುಡಿಯುತ್ತಾ ಕುಳಿತಿದ್ದೆವೋ ಗೊತ್ತಿಲ್ಲ. ಆದರೆ ಅವರ ಮನೆಯಲ್ಲಿದ್ದ ಮದ್ಯವೆಲ್ಲ ಖಾಲಿಯಾಗಿತ್ತು. ಶ್ರೀಮತಿ ಮಬೂಚಿ ಮತ್ತೆ ಮದ್ಯವನ್ನು ಕಾಯಿಸಿ ತರಲೆಂದು ಖಾಲಿಯಾಗಿದ್ದ ಬಾಟಲಿಗಳನ್ನು ತೆಗೆದುಕೊಂಡು ಹೋದರು. ಬಹಳ ಹೊತ್ತು ಹೀಗೆ ಕೂತಿದ್ದೆವು ಅಂತ ಕಾಣುತ್ತೆ. ಇದ್ದಕ್ಕಿದ್ದಂತೆ ಕೊಲೊನಿಯಲ್ ಮಬೂಚಿ ತಮ್ಮ ಮುಂದಿದ್ದ ಟ್ರೇ ಇಂದ ಪಕ್ಕ ಸರಿದು ನೆಲದ ಮೇಲೆ ಎರಡೂ ಕೈಗಳನ್ನೂರಿ ನನ್ನ ಮುಂದೆ ಬಾಗಿ “ಐ ಯಾಮ್ ಸಾರಿ. ದಯವಿಟ್ಟು ಆ ದೃಶ್ಯ ಕತ್ತರಿಸಿ” ಎಂದರು. “ಸರಿ” ಎಂದೆ. ಅಷ್ಟೇ ಮುಗಿಯಿತು. ಆ ಕ್ಷಣದ ನಂತರ ನಮ್ಮ ಕುಡಿತ ಖುಷಿಯಿಂದ ರಂಗೇರಿತು. ಮೊರಿಟ ಮತ್ತು ನಾನು ಅಲ್ಲಿಂದ ಹೊರಡುವಷ್ಟರಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದಿದ್ದ.