ಹಕ್ಕಿ ಮತ್ತು ಹುಡುಗ

 

 

 

 

 

ಧೋ ಧೋ ಸುರಿದ ಅಕಾಲ ಮಳೆ
ನುಣ್ಣಗೆ ತೊಳೆದ ಬೆಳಗು
ಕೂಗುತ್ತಿದೆ ಹೆಸರಿಲ್ಲದ ಹಕ್ಕಿ

ಫಳ ಫಳಿಸುವ ಹಣ್ಣು ಹೂವು ಹಸಿರು
ಬೀದಿ ಬದಿ ವ್ಯಾಪಾರ ಬಲು ಜೋರು
ಬಣ್ಣ ಬಣ್ಣದ ಸೀರೆ ಚೆಂದ ಚೆಂದದ ಉಡಿಗೆ
ಸರ್ರ ಭರ್ರನೆ ಹರಿವ ಬೈಕು ಕಾರು

ತಳಿರ ತೋರಣ, ಊರಗಲ ರಂಗೋಲಿ
ಅರಿಶಿಣ ಕುಂಕುಮ ಊದುಬತ್ತಿಯ ಘಮ
ಮಿಠಾಯಿ ಅಂಗಡಿಯಲ್ಲಿ ಗಿಜಿಗಿಜಿ ಜನ
ಬೀದಿ ತುಂಬೆಲ್ಲ ಗೌಜು ಗಮ್ಮತ್ತು.

ಬೀದಿಯಾಬದಿಯ ಕೊಳೆಗೇರಿಯೊಳಗೊ
ಹೊಳೆಯಾಗಿದೆ ನುಗ್ಗಿ ಗಟಾರದ ನೀರು
ತೇಲಿದೆ ಪಾತ್ರೆ ಪರಡಿ, ಮುರಿದು ಬಿದ್ದ ಸೂರು

ಬೋರಲು ಬಿದ್ದ ಸಿಂಟೆಕ್ಸ್ ಟ್ಯಾಂಕ್ ಹತ್ತಿ
ಕೂಸಿನೊಂದಿಗೆ ಕೂತ ಹಸಿಬಾಣಂತಿ
ಹತ್ತಲಾಗದೆ ಅಳುವ ಬೆತ್ತಲೆ ಹುಡುಗನ
ಕುಂಡೆಗೆ ಬಾರಿಸಿ ಬೀದಿಗಟ್ಟಿದ್ದಾನೆ
ಅಪ್ಪನೊ ಚಿಕ್ಕಪ್ಪನೊ
ಕೈಗೊಂದು ತಟ್ಟೆ ಕೊಟ್ಟು

ಹೋಳಿಗೆಮನೆಯಿಂದ ಬೀಸಿ ಬೀಸಿ ಬರುವ
ವಾಸನೆಗೆ ಕಣ್ಣರಳಿಸಿದ ಹುಡುಗ-
ನ ಸಂತೈಸಿದೆ ಹೆಸರಿಲ್ಲದ ಹಕ್ಕಿ
ಕೂಗಿ ಕೂಗಿ.

ಇಂದು ಉಗಾದಿ

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)