ಸಣ್ಣಸಣ್ಣ ಸಂಭ್ರಮಕ್ಕೂ, ಹಬ್ಬಕ್ಕೂ ಹುಣ್ಣಮೀಗೂ ಕಡ್ಲಿಬ್ಯಾಳೀ ಹೋಳಿಗಿ, ತೊಗರಿ ಬ್ಯಾಳಿ ಹೋಳಿ, ಆ ಕಡಬು ಈ ಕಡುಬು, ಮತ್‌ ಆ ಥರದ್‌ ಹುಗ್ಗಿ, ಇಂಥಾ ಹುಗ್ಗಿ ಅಂತೆಲ್ಲ ಮಾಡೂದ ಮಾಡೂದು. ಸೀ ಇಷ್ಟಾ ಅಂತ ಒಬ್ಬಾಕೇ ಮಾಡಿ ಕುತ್ಕೊಂಡ್‌ ತಿನ್ನೂವಂಥ ಹೆಣಮಗಳು ಅಲ್ಲ ಬಿಡ್ರಿ. ತಾ ಜಗ್ಗ ಕೆಲಸಾ ಮಾಡಿ ಮಂದೀಗೆ ತಿನ್ನಸೂದಂದ್ರ ಸಂಭ್ರಮ ಅಕೀಗೆ. ಹಂಗಂತನ, ನಮ್‌ ಹಳೇಮನ್ಯಾಗಿದ್ದ ನನ್‌ ಕ್ಲಾಸ್‌ ಮೇಟು ಡುಮ್ಮನ ದಿನೇಶಾ, “ಏ, ನಿಮ್‌ ಮಮ್ಮೀನ ನಮ್‌ ಮಮ್ಮೀನ ಎಕ್ಸ್ಚೇಂಜ್‌ ಮಾಡ್ಕೊಳ್ಳೂಣಣ… ಪ್ಲೀಸ್‌.. ನಮ್‌ ಮಮ್ಮೀಗೆ ಅಡಗೀನ ಬರಲ್ಲ..” ಅಂತ ಅವ್ರ ಮಮ್ಮೀ ಮುಂದನ ಅಂದು, ಅವ್ರವ್ವನ ಕಡೇಲಿಂದ ಬಿಸಿಬಿಸಿ ಕಜ್ಜಾಯ ಉಂಡಿದ್ದ…
ರೂಪಶ್ರೀ ಕಲ್ಲಿಗನೂರ್‌ ಬರಹ

 

ಇಷ್ಟು ದಿನಾ ಲಾಕ್‌ ಡೌನು ಮಣ್ಣು ಮಸಿ ಅಂತ್ಹೇಳಿ ತಿಂಗಳಾನುಗಟ್ಟಲೆ ಊರಿಗ್‌ ಹೋಗಾಕಾಗಿರ್ಲಿಲ್ಲಾ. ಆರೇಳು ತಿಂಗಳದ್‌ ಎಲ್ಲಾ ಹಬ್ಬಾ ಹುಣ್ಣಮಿ ನನ್‌ ರೂಮಿನ್ಯಾಗ ಮಾಡ್ಕೊಳ್ಳೂವಂಗಾಗಿತ್ತು. ಹಬ್ಬಾ ಮಾಡೂದಂದ್ರ ಗೊತ್ತಲ್ಲ, ಚೊಲೋ ಚೊಲೋ ಅಡಗೀ ಮಾಡೂದೂ, ತಿನ್ನೂದು. ಅದಕ್ಕೂ ಮೊದಲು, ದೇವ್ರ ಮುಂದೊಂದು ದೀಪಾ ಹಚ್ಚಿ, ಯಾಡ್‌ ಊದ್‌ ಬತ್ತಿ ಬೆಳಗಿ, ಮಾಡಿದ್‌ ಅಡಗಿ ಎಡಿ ಹಿಡ್ಯೂದು, ಆಮ್ಯಾಲ ಮಾಡಿದ್ನೆಲ್ಲ ತೊಳದಿಟ್ಟಂಗ ತಿಂದು ಮುಗಿಸೋದು, ಅಷ್ಟ.

ನಮ್‌ ಉತ್ತರ ಕರ್ನಾಟಕದ ಕಡೆ, ಯಾವ ಹಬ್ಬ-ಹುಣ್ಣಮೀನೂ ಹಂಗ ಬಿಡಲ್ಲ. ಎಲ್ಲಾನೂ ಮಾಡೇತೀರೋದು. ಪಿಯೂಸಿ ಮಟಾ ನಾನು ಊರಾಗಿದ್ದ ಸಾಲ್ಯಾಗ ಕಲ್ತಿದ್ದು. ಅಲ್ಲೀಮಟಾ ಈ ಹಬ್ಬದ ಅಡಗಿ ಉಂಡುಂಡು ರೂಡಿಯಾಗಿತ್ತು. ಹಂಗಾಗಿ ಕ್ಯಾಲೆಂಡರಿನ್ಯಾಗ ಕೆಂಪನ ಟಿಕ್ಕಿ ಕಂಡ ದಿನಾ, “ಓ, ನಮ್ಮನ್ಯಾಗ ಇವತ್ತು ಹಬ್ಬ ಇರ್ತೇತಪಾ” ಅಂತ ಮನಸ್ಸಿನ್ಯಾಗ ಅನ್ಸೂದು.

ಸೀ ಅಡಗಿ ಅಂದ್ರ ನಮ್ಮವ್ವಗ ಬಾಳ ಇಷ್ಟ. ಹಂಗಾಗಿ ಸಣ್ಣಸಣ್ಣ ಸಂಭ್ರಮಕ್ಕೂ, ಹಬ್ಬಕ್ಕೂ ಹುಣ್ಣಮೀಗೂ ಕಡ್ಲಿಬ್ಯಾಳೀ ಹೋಳಿಗಿ, ತೊಗರಿ ಬ್ಯಾಳಿ ಹೋಳಿ, ಆ ಕಡಬು ಈ ಕಡುಬು, ಮತ್‌ ಆ ಥರದ್‌ ಹುಗ್ಗಿ, ಇಂಥಾ ಹುಗ್ಗಿ ಅಂತೆಲ್ಲ ಮಾಡೂದ ಮಾಡೂದು. ಸೀ ಇಷ್ಟಾ ಅಂತ ಒಬ್ಬಾಕೇ ಮಾಡಿ ಕುತ್ಕೊಂಡ್‌ ತಿನ್ನೂವಂಥ ಹೆಣಮಗಳು ಅಲ್ಲ ಬಿಡ್ರಿ. ತಾ ಜಗ್ಗ ಕೆಲಸಾ ಮಾಡಿ ಮಂದೀಗೆ ತಿನ್ನಸೂದಂದ್ರ ಸಂಭ್ರಮ ಅಕೀಗೆ. ಹಂಗಂತನ, ನಮ್‌ ಹಳೇಮನ್ಯಾಗಿದ್ದ ನನ್‌ ಕ್ಲಾಸ್‌ ಮೇಟು ಡುಮ್ಮನ ದಿನೇಶಾ, “ಏ, ನಿಮ್‌ ಮಮ್ಮೀನ ನಮ್‌ ಮಮ್ಮೀನ ಎಕ್ಸ್ಚೇಂಜ್‌ ಮಾಡ್ಕೊಳ್ಳೂಣಣ… ಪ್ಲೀಸ್‌.. ನಮ್‌ ಮಮ್ಮೀಗೆ ಅಡಗೀನ ಬರಲ್ಲ..” ಅಂತ ಅವ್ರ ಮಮ್ಮೀ ಮುಂದನ ಅಂದು, ಅವ್ರವ್ವನ ಕಡೇಲಿಂದ ಬಿಸಿಬಿಸಿ ಕಜ್ಜಾಯ ಉಂಡಿದ್ದ… ಆಮ್ಯಾಲೆ ಅವ್ರದ್ದೂ ನಮ್ದೂ ಅವಂದೊಂದ್‌ ಮಾತಿಗೆ, ಮಾತ ಕಟ್‌ ಆಗಿ ಹೋಗಿತ್ತು. ಅಂಥಾ ಅಡಗೀ ಮಾಡೂವಕಿ ಅಕಿ. ಕೇಳ್ತಾನಂತ ಬಾಜೂಮನೀ ಹುಡುಗಂಗಾ ದಿನಾ ಹುಗ್ಗಿ ಮಾಡಿ ತಿನ್ಸಿದ್ರ, ಅವಾ ಆದ್ರೂ ಅವ್ರ ಅವ್ವನ್ನ ಯಾಕ ಬೇಕಂತಾನ!

ಇಂಥಾ ನಮ್‌ ಅವ್ವಾ, ನಾನೂ ಅಣ್ಣಾ, ಓದಾಕಂತ, ಊರ್‌ ಬಿಟ್ಟು, ಒಬ್ಬರು ಧಾರವಾಡಕ್ಕ, ಮತ್ತೊಬ್ರು ಬೆಂಗಳೂರಿಗೆ ಸೇರಿದ್ಮೇಲೆ ಇಂಥಾ ದಿನದಾಗ ನಮ್ಮನ್ನ ಭಾಳ ಮಿಸ್‌ ಮಾಡ್ಕೊಳ್ಳಾಕಿ. ಪಪ್ಪಾಗ ಸೀ ಅಡಗಿ ಅಷ್ಟಕ್ಕಷ್ಟ. ಖಾರ ಅಂದ್ರ ಪ್ರೀತಿ ಅವ್ರಿಗೆ. ರೊಟ್ಟಿ ಪಲ್ಲೆ ಹಚ್ಚಿದ ತಾಟಿನ್ಯಾಗ, ಎರಡು ಖಾರದ ಮೆಣಸಿನಕಾಯಿ ಇಟಗೊಂಡು ತಿನ್ನೋರು ಅವ್ರು… ಇಬ್ರದ್ದು ಲವ್‌ ಮ್ಯಾರೇಜಂತ… ಹಂಗಿದ್ದಾಗ ಹಿಂತಾವೆಲ್ಲ ನಡೀತಿರ್ತಾವಂತ ನಾವೇನೂ ಅದ್ರ ಬಗ್ಗೆ ತಲೀ ಕೆಡಸಿಕೊಂಡಿಲ್ಲ. ಆದ್ರ ಮೊದಲ ಹೇಳಿದಂಗ, ಅಡಗಿ ಮಾಡಿದ್ಮ್ಯಾಲ ಉಣ್ಣಸಿ, ತಿನ್ನಿಸಿ ಅಭ್ಯಾಸ ಇರೂವಕೀಗೆ ಈಗ, ಸೀ ಮಾಡೂದಾಗ್ಲೀ, ಮಾಡಿದ್ರ ಅದನ್ನ ಖರ್ಚು ಮಾಡೂದಾಗ್ಲಿ ತಲಿಬ್ಯಾನಿ ಕೆಲಸ ಆಗಿತ್ತು. ಅದಕ್ಕ ಅಮಾಸಿ ಹುಣ್ಣಮಿಗೊಂದ್ಸಲಾ ಫೋನ್‌ ಹಚ್ಚಿದ್ದ, “ಅವ್ವೀ… ಊರೀಗೇನಾರ ಬರ್ತೀಯನೂ? ನಾಳೆ ಸೋಮ್ವಾರ ಹುಣ್ಣಮೀಗೆ ಕಡಳೀಬ್ಯಾಳೀ ಹೋಳಗೀ ಮಾಡ್ತೇನಿ. ಮತ್‌ ನಿಂದ್‌ ಫೇವರಿಟ್‌ ಕಟ್ಟಿನ್‌ ಸಾರೂ ಮಾಡ್ತೇನಿ. ಯಾಡ್‌ ದಿನಾ ಬಂದ್ಹೋಗ. ನಿಮ್ಮಪ್ಪಾ ನಾನೂ ಇಬ್ಬರ ಏನಂತ ಮಾಡ್ಕೊಂಡ್‌ ತಿನ್ನೂದು? ನಿಮ್ಮಣ್ಣ ಅಂತೂ ನಿಮ್ಮಪ್ಪಾನಂಗ.. ಸೀ ಅಡಗೀನ ಸೇರಂಗಿಲ್ಲ ಅವಂಗ. ನೀನಾರ ಬಾ ಅಲಾ… ಯಾಡ್‌ ದಿನಾ ರಜಾ ಒಗದು” ಅಂತ ಫೋನ್‌ ಹಚ್ಚಿದ್ಲು.

ಹಿಂಗ ಮೊನ್ನೆ ಹುಣ್ಣಮೀ ಹೋಳಗೀ ತಿನ್ನಾಕಂತ ಬೆಂಗಳೂರಿಂದ ಉತ್ತರ ಕರ್ನಾಟಕದ್‌ ಕಡೆ ಟ್ರಿಪ್‌ ಹಾಕವಾ ಅಂತ ನಮ್ಮವ್ವಾ ಫೋನ್‌ ಮಾಡಿ ಕರ್ದಾಗ ನಂಗೇನೂ ಅಷ್ಟು ಶಾಕ್ ಆಗ್ಲಿಲ್ಲಾ ಬಿಡ್ರಿ. ಯಾಕಂದ್ರ ಹಿಂದೊಮ್ಮೆ ಆಫೀಸ್‌ ಹವರ್ಸ್‌ ನ್ಯಾಗ ಮ್ಯಾಲಿಂದ್‌ ಮ್ಯಾಲೆ ಅವ್ವಾನ ನಂಬರಿಂದ ಫೋನ್‌ ಬರಾಕತ್ತಿದ್ವು. ನಾ ಮೀಟಿಂಗಿನ್ಯಾಗ ಇದ್ದೆ. ಸುಮ್ಮನ ಕತ್ತೀಗೂ ವಯಸ್ಸಾಗೂವಂಗ ಸೀನಿಯಾರಿಟಿ ಮ್ಯಾಲ್‌ ಟೀಮ್‌ ಲೀಡರ್‌ ಆದ ನಮ್‌, ಸೀನಿಯರ್ರು, ಹೊಸ ಪ್ರಾಜೆಕ್ಟಿನ ಹೆಡ್ಡಾಗಿದ್ದ. ಹಿಂದ ಮುಂದ ನೆಟ್ಟಗ ಗೊತ್ತಿಲ್ಲಾ ಏನಿಲ್ಲ. ನೆಟ್ಟಗ ಇಂಗ್ಲಿಷ್‌ ಮಾತಾಡಾಕೂ ಬರಂಗಿಲ್ಲ. ಆದ್ರೂ ಹೆಂಗ್‌ ಸಾಲ್ಯಾಗ, ಇಂಟರ್ವ್ಯೂ ನ್ಯಾಗ ಪಾಸ್‌ ಆಗಿ ಲಕ್ಷ ಲಕ್ಷ ತಿನ್ನಾಕತ್ತಾನಂತ ನಂಗ ಇನ್ನೂ ಗೊತ್ತಾಗಿಲ್ಲ. ಇರ್ಲಿ ಬಿಡ್ರಿ. ಮಂದಿ ಹೆಂಗರ ಇರ್ಲಿ… ನಮಗ್ಯಾಕ! ಮತ್ತ ನಂಗ್‌ ಗೊತ್ತಲ್ಲ ನಮ್ಮವ್ವನ ಕತಿ… ಓಣ್ಯಾಗೇನಾರ ಸೆನ್ಷೇಷನಲ್‌ ಸುದ್ದಿ ಓಡ್ಯಾಡಕತ್ತಿತ್ತಂದ್ರ, ಅದನ್ನ ಹೇಳಾಕಂತನ ಫೋನ್‌ ಮಾಡ್ತಾಳ, ಅದು ರಾತ್ರಿ ಆಗಲೀ, ಹಗಲ ಆಗ್ಲೀ.. ಅದಕ್ಕ ಆಮ್ಯಾಲೆ ಮಾತಾಡಿದ್ರಾತು ಬಿಡು ಅಂತ ಒಂದ್‌ ಕಾಲ್‌ ಬಂದ್‌ ಕೂಡ್ಲೇ ಫೋನ್‌ ನ ಸೈಲೆಂಟ್‌ ಮೋಡಿಗೆ ಹಾಕಿದೆ (ಯಾಕಂದ್ರ ಗೊತ್ತಲ್ಲ… ಒಮ್ಮೆ ಫೋನ್‌ ತಗೋಲಿಲ್ಲಾಂದ್ರ, ಅವರು ಮಾಡೋ ಕೆಲಸಾ ಎಂಥಾದ್ದ ಇರ್ಲಿ, ಅದನ್ನ ಬಿಟ್ಟು ʼಹೇಳ ನಮ್ಮವ್ವಾʼ ಅಂತ ಅನ್ನೂಮಟಾ ಫೋನು ಹೊಡ್ಕೊಳ್ಳೋದು ನಿಲ್ಸಾಂಗಿಲ್ಲ) ಆದ್ರ ಯಾಕೋ ಫೋನು ವಟ್ಟ ಸ್ಟಾಪ್‌ ಆಗವಲ್ದು. ಮ್ಯಾಲಿಂದ್‌ ಮ್ಯಾಲೆ ಫೋನ್‌ ಬರಾಕತ್ತಿದ್ವು. ಬಾಳಂದ್ರ ಮೂರ್ನಾಕ್‌ ಸಲ ಕಾಲ್‌ ಮಾಡ್ತಿದ್ದಕಿ ಅವತ್ತ, ಏನಿಲ್ಲಾಂದ್ರೂ ಬರೋಬ್ಬರಿ ಎಂಟ್ಹತ್‌ ಸಲಾ ಫೋನ್‌ ಹಚ್ಚಿದ್ಲು. ಫೋನು ಸೈಲೆಂಟ್‌ ಮೋಡಿನ್ಯಾಗಿದ್ರೂ, ರಿಂಗ್‌ ಆಗೂಮುಂದ ಬರೋ ಲೈಟಿಗೆ ಆಗಾಗ ಕಣ್ಣು ಹೊಳ್ಳಾಕತ್ತಿದ್ವು. ಎಷ್ಟು ಮಾತಾಡ್ತಾಳಂದ್ರೂ ನಮ್ಮವ್ವ ನಮ್ಮವ್ವನ ಅಲಾ… ಬ್ಯಾರೇದವ್ರ ಅವ್ವಾ ಹೆಂಗಾಗ್ತಾಳ? ಅದಕ್ಕ ಒಮ್ಮೆ ಕಳ್ಳು ಚುರುಕ್‌ ಅಂತು. ಅಲ್ಲದ ಮನ್ಯಾಗ್‌ ಬರೇ ಇಬ್ಬರ ಅದಾರ.. ಏನಾರ ಆತೋ ಏನೋ… ಆಗಿರ್ಬೇಕು ಮತ್ತ.. ಅದಕ್ಕ ಪಾಪ ಅಕೀ ಇಷ್ಟು ಸಲಾ ಕಾಲ್‌ ಮಾಡಾಕತ್ತಾಳ ಅಂತ ಸಂಕಟ ಆಗಿ, ಮ್ಯಾನೇಜರ್‌ ಗೆ, ʼಸರ್‌, ಊರಿಂದ ಅರ್ಜೆಂಟ್‌ ಫೋನ್‌ ಬರ್ತಿದೆ.. ಪ್ಲೀಸ್‌ ಡೋಂಟ್‌ ಮೈಂಡ್‌ʼ ಅಂತ, ಅವರು ಹೂಂ ಅನ್ನಾಕೂ ಕಾಯ್ದ, ಫೋನ್‌ ಎತ್ತಿ ಹಲೋ… ಅನ್ಕೋತ, ಲಾಬಿಗೆ ಓಡಿ ಹೋಗಿದ್ದೆ. ಹಿಂದ ಕಲೀಗ್ಸು, ʼಏನಾಯ್ತು… ಎನೀ ಎಮರ್ಜೆನ್ಸಿ..ʼ ಅಂತೆಲ್ಲ ಕೇಳ್ತಿದ್ದದ್ದು ಕೇಳಿದ್ರೂ, ಅವಸರದಾಗ, ಅವರಿಗೆ ಉತ್ರ ಕೊಡದ ಲಾಬಿ ಕಡೆ ಕಾಲು ಹಾಕಿದ್ದೆ.

ಹಂಗ್‌ ಅಕೀ ಮಾಡಿದ ಹನ್ನೊಂದನೇ ಕಾಲ್‌ ನ ಅವಸರಾ ಮಾಡಿ, “ಮಮ್ಮೀ… ಏನಾತ.. ಅಷ್ಟು ಸಲಾ ಕಾಲ್‌ ಮಾಡಿದ್ಯಲ್ಲ… ಪಪ್ಪಾ ನೀನೂ ಅರಾಮದೀರಿಲ್ಲೋ…” ಅಂತ ಒಂದ ಉಸುರಿನ್ಯಾಗ ಕೇಳಿದ್ದೆ. ಅದಕ್ಕ ಅಕೀ ಏನನ್ನಬೇಕು.. “ಮತ್ತ, ಒಂದ್ಸಲಕ್ಕ ಕಾಲ್‌ ಮಾಡಿದ್ರ ತಗದು ಮಾತಾಡದ್‌ ಬಿಟ್ಟು ಸುಮ್ನ ಕುಂತ್ರ? ಮಮ್ಮೀ ಕಾಲ್‌ ಬಂದ್ರ ತೊಗೋಳ್ಳಾರದಷ್ಟೂ ಬ್ಯುಸಿ ಅದೀ ನ?” ಅಂತ ಕುಟುಕಿದ್ದಳು. ಅದಕ್ಕ ನಾನು.. “ಬೇ, ಮೀಟಿಂಗಿನ್ಯಾಗ್‌ ಇದ್ನಿಬೇ… ಹೇಳು ಏನಾತಂತ..” ಅಂತ ಮತ್ತ ಅವಸರಾ ಮಾಡಿದ್ದೆ.

ಅದಕ್ಕಕಿ, “ಬಾಜೂ ಮನೀ ಶಾಲ್ನಿ ಮಗಳೂ ದೊಡ್ಡಕ್ಯಾಗ್ಯಾಳಂತಲೇ… ಮೂರ್‌ ದಿನಕ್ಕ ಎಬ್ಬಸ್ತಾರಂತ. ನಾಳೆ ನೀನೂ ಹೊಂಟ್‌ ಬಂದ್ಬಿಡು, ಐತ್ಯಾರ ಆರತಿ ಮಾಡತಾರಂತ… ನಾನು ನಾಳೆ ಸಂಜೀಕನ ಬಜಾರ್ಕ ಹೋಗಿ, ಒಂದ್‌ ಚೀಪ್‌ ಅಂಡ್‌ ಬೆಷ್ಟ್‌ ಸೀರಿ ತಂದ್ಬಿಡ್ತೇನಿ.. ಸಾಕ್‌ ಅಷ್ಟು.. ಅವ್ರೂ ನಿನಗ ಹಂತಾದ ಒಂದ್‌ ಸೀರಿ ಕೊಟ್ಟಿದ್ರು… ನೆನಪೈತೋ ಇಲ್ಲೋ…” ಅಂತ ಬಾಳಾಬಾಳಾ ಸೀರಿಯಸ್ಸಾಗಿ ಅಂದಿದ್ಲು.. ಅಕೀ ಮಾತು ಕೇಳಿ ನೆತ್ತೀ ಮ್ಯಾಗ ತಣ್ಣೀರ್‌ ಹಾಕದಂಗಿತ್ತು ನಂಗ. ಸಿಟ್ಟು.. ಸಿಟ್ಟೂ… ನೆತ್ತಿ ದಾಟಿ ಅದಕ್ಕೂ ಮ್ಯಾಲ್‌ ಹೋಗಿತ್ತು… (ಅದಕ್ಕೂ ಮ್ಯಾಲೆ ಏನೈತವಾ ಅಂತ್‌ ಕೇಳ್ಬ್ಯಾಡ್ರಿ ಮತ್ತ) ಆದ್ರೂ ಸೊಲ್ಪ ಸಮಾಧಾನ ಮಾಡ್ಕೊಂಡು, ಮೆಲ್ಲಗ ಕೇಳಿದ್ನಿ ಅಮ್ಮವ್ವಗ.. “ಮಮ್ಮೀ, ಖರೇನ ಹೇಳು, ಇದನ್ನ ಹೇಳಾಕ್‌ ಅಷ್ಟು ಸಲಾ ಕಾಲ್‌ ಮಾಡಿದ್ಯನ?” ಅಂತ ಕೇಳಿದ್ರ “ಹೂಂ ನ, ಮತ್‌ ಸಂಜೀಕ ವಾಕಿಂಗ್‌ ಹೋಗಿ ಬರೋಗೋಡದ ತಡಾ ಅಕ್ಕೇತಿ. ನೀನು ಬಸ್‌ ಬುಕ್‌ ಮಾಡ್ಕೋಬೇಕಲ್ಲ ಮತ್ತ. ಒಂದ ದಿನಕ್ಕ ಸೀಟು ಸಿಗ್ತಾವ ಇಲ್ಲ… ಮತ್ತ ನಾ ಪಾರ್ಕಿನ್‌ ದಾರ್ಯಾಗ ನಮ್‌ ಹಳೇ ದೋಸ್ತಗೋಳ್ದು ಮನೀ ಅದಾವ… ಒಬ್ಬೊಬ್ಬರ ಮನ್ಯಾಗೂ, ಮಾತು, ಚಾ, ಚೂಡಾ ಅಂತ್‌ ಅನ್ನೂದ್ರಾಗ ರಾತ್ರಿ ಬಾಳಾ ತಡಾ ಆಗ್ಬಿಡ್ತೇತಿ. ಮತ್‌ ನಿಂಗ್‌ ಹೇಳೂ ವಿಷಯಾನ ಮರತ್ರೂ ಮರತ್ನಿ. ಮತ್ತ ಸಂಜೀಮ್ಯಾಲ ನೀ ಆಫೀಸ್‌ ಬಿಡೂ ಟೈಮಲ್ಲ… ಅದಕ್ಕ ಈಗ ಹಚ್ಚಿದ್ನಿ” ಅಂತ ತಣ್ಣಗ ಅಂದಳು. ಈಗಂತೂ ಅಕೀ ಮಾತ್‌ ಕೇಳಿ ಇನ್ನಷ್ಟು ಸಿಟ್ಟು ಬಂದಿತ್ತು ನಂಗ, ಅದ್ರಾಗೂ, ಅಕೀ ಅಷ್ಟು ಸಲಾ ಕಾಲ್‌ ಮಾಡಿದ್ದಕ್ಕ ಮಮ್ಮೀ ಪಪ್ಪಾಗ ಏನಾರ ಆಗೇತೇನೋ ಅಂತ ಅಂಜಿ ಹೋದ್ನಿ, ಇಂಥಾ ವಿಷ್ಯಾ ಹೇಳಾಕ ಇಷ್ಟು ಕಾಳ್‌ ಮಾಡ್ತಾರನೂ ಅಂತ ಜಬರಿಸಿದ್ರ, ಅಕೀ ಏನೂ ಜಾಸ್ತಿ ತಲಿಕೆಡ್ಕೊಳ್ಳದ, “ಹೊಗ ಹುಚ್ಚೀ… ನಾವಿಬ್ರೂ ಗುಂಡ್ಕಲ್‌ ಇದ್ದಂಗದೇವಿ. ಇವತ್ತ ಹೇಳ್ತೇನಿ ಕೇಳು. ನಿಂದೂ, ನಿಮ್ಮಣ್ಣಂದೂ ಮದುವ್ಯಾಗಿ, ಮಕ್ಕಳಾಗಿ, ಆ ಮಕ್ಕಳ ಲಗ್ನಕ್ಕ ನಾನ ಸೋಬಾನೆ ಹಾಡೂಮಟಾ ನಾ ಅಂತೂ ಜಾಗಾ ಬಿಡೂವಕಿ ಅಲ್ಲ” ಅಂತ ಗುಟುರು ಹಾಕಿದ್ಲು. ಅಕೀ ಡೈಲಾಗೀಗೆ ನಗಬೇಕ ಅಳಬೇಕ ಅಂತ್‌ ವಟ್ಟ ತಿಳೀದ “ಆತ್‌ ನಮ್ಮವ್ವಾ, ಹಂಗ ಮಾಡೂವಂತಿ, ಮೊದಲ ಫೋನ್‌ ಇಡು, ಜೀವಾ ಬಿಟ್ಟು, ಮೀಟಿಂಗಿಂದ ಹೊರಗ್‌ ಬಂದು ಫೋನ್‌ ಹಚ್ಚಿದ್ನಿ ನಿಂಗ. ಟೀಮ್‌ ಮೇಟ್ಸು ಕಾಯ್ತಿರ್ತಾರ. ಬಾಯ್…” ಅಂತ ಹೇಳಿ ಫೋನ್‌ ಇಟ್ಟಮ್ಯಾಲ ಹೋದ್‌ ಜೀವಾ ವಾಪಸ್‌ ಬಂದಂಗಾದ್ರೂ, ಈಗ ಮೀಟಿಂಗ್‌ ರೂಮಿಗೆ ಹೋಗಿ, ಕಾರಣ ಏನಂಥ ಹೇಳೂದಪಾ ಅಂತ ತಲ್ಯಾಗ ಹುಳಾ ಹುಟ್ಟಾಕ್‌ ಚಾಲೂ ಆಗಿದ್ವು.

ಇಂಥಾಕಿ ನಮ್ಮವ್ವಾ… ಅಡಗೀ ಮಾಡೂದಂದ್ರ ಜೀವಾ ಬಿಡ್ತಾಳ. ಅಂಥಾಕೀಗೆ ನಾನೂ ಅಣ್ಣಾ ಓದಾಕಂತ ಷಹರಕ್ಕ ಬಂದು, ಇಲ್ಲೇ ಕೆಲಸದ ಮ್ಯಾಲೆ ನಿಂತಾಗಿಂದ ಹಬ್ಬ ಬಂದ್ರ ಹಳವಂಡ ಮಾಡ್ಕೋತಾಳ. ನಾಕ್‌ ವರ್ಷದ ಹಿಂದ ಅಪ್ಪಾ ಊರಾಂದ ಹೊಸಾ ಲೇಔಟಿನ್ಯಾಗ ಮನೀ ಕಟ್ಸಿದಾ. ಅಲ್ಲೇ ಮಂದಿ ಬಾಳ ಸ್ಟೇಟಸ್‌ ಮಾಡೂವವ್ರಂತ. ಆಜೂಬಾಜೂದವ್ರನ್ನ ಹಚ್ಕೊಂಡು ಮಾತಾಡಿ ಅಭ್ಯಾಸ ಇರೂವಾಕೀಗೆ, ಎಲ್ಲಾರ್ಗೂ ಬರೇ ಹಾಯ್‌ ಬಾಯ್‌ ಹೇಳೂದಂದ್ರ, ಖರೇನ ಆಗಿಬರಂಗಿಲ್ಲ. ಹಂಗಂತ ಯಾರ ಮ್ಯಾಲೂ ಬಿದ್ದು ಮಾತಾಡ್ಸೋ ಜಾತಿಯಕೀನೂ ಅಕಿ ಅಲ್ಲಾ. ಸೊಕ್ಕು ತೋರ್ಸೋ ಮಂದೀಮುಂದ, ತನಗೆಷ್ಟ್‌ ಐತಿ ತೋರ್ಸೇಬಿಡ್ತೇನಿ ಅಂತ ಅನ್ನೂವಾಕಿ. ಹಂಗಾಗಿ ಬ್ಯಾಸರಾದಾಗ, ಅಪ್ಪಾನ ಜೊತಿ ಜಗಳಾ ಮಾಡ್ಕೋತ ಇರ್ತಾಳಂತ. ಮತ್‌ ಅದು ಅಕೀಗೆ ಹೊಸಾ ಹಾಬಿ ಅಂತ.

ಅದಕ್ಕನ, ತಿಂಗಳಗಟ್ಟಲೇ ಊರಿಗೆ ಹೋಗಾಕಾಗಿರ್ಲಿಲ್ಲಲ, ಈ ಹುಣ್ಣಮೀ ನೆಪಾ ಇಟಗೊಂಡಾದ್ರೂ ಮನೀಗೆ ಬಾ ಅಂತ ಫೋನ್‌ ಹಚ್ಚಿದ್ಲು. ನಂಗೂ ನಾ ಮಾಡಿದ್‌ ಅಡಗಿ ತಿಂದೂ ಬ್ಯಾಸರಾಗಿತ್ತು. ಯಾಕ್‌ ಆಗವಲ್ದಾಕ ಅಂತ ಸೋಮವಾರಕ್ಕ ಆಫೀಸಿಗೆ ರಜಾ ಒಗದು, ಅಕೀ ಫೋನ್‌ ಮಾಡಿ ಇಟ್ಟ ಹತ್ತು ನಿಮಿಷದಾಗ ಬಸ್‌ ಬುಕ್‌ ಮಾಡಿಬಿಟ್ಟೆ!

ವಿ.ಸೂ: ಇನ್ನೊಮ್ಮೆ ಬಂದಾಗ, ಮತ್ತೊಂದ್‌ ಸುದ್ದಿ ಹೇಳ್ತೇನಿ ನಿಮಗ! ನಮ್ಮವ್ವಾ ಹೇಳೂವಂಥಾದಲ್ಲ ಮತ್ತ… ಖರೇನ!!