ಇಲ್ಲಿನ ಹೆಚ್ಚಿನ ಕಥೆಗಳು ಮಲೆನಾಡು, ಆಗುಂಬೆ,ತೀರ್ಥಹಳ್ಳಿಯಂತಹ ಗ್ರಾಮಾಂತರ ಪ್ರದೇಶದ ಪರಿಸರದ ಸಂಪೂರ್ಣ ಚಿತ್ರಣವನ್ನು ಓದುಗನಿಗೆ ನೀಡುತ್ತದೆ. ಹೆಣ್ಣು ಹೇಳಿಕೊಳ್ಳದ ಕೆಲವು ಸೂಕ್ಷ್ಮಗಳನ್ನು ಅತಿ ಸೂಕ್ಷ್ಮವಾಗಿ ಕಥೆಯಲ್ಲಿ ಲೇಖಕ ಹರೀಶ್ ದಾಖಲಿಸಿದ್ದಾರೆ. ತಾನು ಹುಟ್ಟಿ ಬೆಳೆದ ಊರು ಮನೆಗಳನ್ನು ಬಿಟ್ಟು, ಇಷ್ಟಕ್ಕೋ, ಅನಿವಾರ್ಯಕ್ಕೋ, ಪಟ್ಟಣ ಸೇರಿಕೊಂಡ ನೂರಾರು ಮನಸ್ಸುಗಳು. ದಾರಿ ಕಾಯುತ್ತ ಹಳ್ಳಿಯಲ್ಲೇ ಉಳಿದ ಹಿರಿ ಜೀವಗಳು. ಇಂತಹ ನಯನಾಜೂಕಿನ ಭಾವಗಳ ಚಿತ್ರಣ ಸೆರೆಹಿಡಿದಿದ್ದಾರೆ.
ಹರೀಶ್‌ ಟಿ.ಜಿ ಬರೆದ ‘ಹುಲಿಕಡ್ಜಿಳ’ ಕಥಾಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

 

‘ಹುಲಿಕಡ್ಜಿಳʼ ಕಥಾ ಸಂಕಲನದಲ್ಲಿ ಒಟ್ಟೂ ಹನ್ನೊಂದು ಕಥೆಗಳಿವೆ. ಅತ್ಯಂತ ಸೂಕ್ಷ್ಮ ಮನಸ್ಸಿನ ಲೇಖಕರಾದ ಹರೀಶ್ ಅವರು, ಮಲೆನಾಡಿನ ಪರಿಸರದಲ್ಲಿ ಬೆಳೆದವರು. ಅಲ್ಲಿನ ಪರಿಸರ ಬದುಕು ಭಾವ ತಲ್ಲಣಗಳು ಸಹಜವಾಗಿಯೇ ಅವರನ್ನು ಕವಿಯಾಗಿ ಲೇಖಕರಾಗಿ ರೂಪಗೊಳಿಸಿದೆ. ಪ್ರಸ್ತುತ ಮೂಡುಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

(ಹರೀಶ್‌ ಟಿ.ಜಿ.)

ಇಲ್ಲಿ ಬರುವ ಪ್ರತಿ ಕಥೆ ಮತ್ತು ಪಾತ್ರಗಳು ಮಲೆನಾಡಿನ ಸುತ್ತಮುತ್ತ, ಅಲ್ಲಿನ ಭಾವಗಳ ಸುತ್ತ, ಪರಿಸರಗಳ ಸುತ್ತ, ನಿತ್ಯ ನಡೆಯುವ ನೂರಾರು ಘಟನೆಗಳ ಸುತ್ತ, ಸುಂದರವಾದ ಕಥೆಗಳನ್ನು ಬಹಳ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಆವತ್ತಿನ ಬದುಕು ಇವತ್ತಿನ ಆಧುನಿಕತೆಯ ಭರಾಟೆಯಲ್ಲಿ ಎಲ್ಲಿಯೂ ಕಳೆದುಹೋಗಬಾರದು ಎನ್ನುವ ಉದ್ದೇಶದಿಂದ ಕಥಾರೂಪದಲ್ಲಿ ಹೀಗೊಂದು ಸಂಗ್ರಹಣೆ ಮಾಡಿದ್ದಾರೆ ಲೇಖಕರು ಅನ್ನಿಸುತ್ತದೆ.

“ಹುಲಿಕಡ್ಜಿಳ “ಬಡತದ ನೋವು ಸಂಕಟ ಸಿರಿತದ ಪಾರುಪತ್ಯ, ಜೊತೆಗೆ ಹೆಣ್ಣು ಹೆತ್ತವರ ಸಂಕಟವನ್ನು ಹೇಳುತ್ತದೆ.
ಲಲಿತ ಹೇಳುವ ಕೊನೆಯ ಮಾತು “ಆತಲ್ಲ ಎಲ್ಲ ಸುಟ್ಟೋಗಿರಬಹುದು” ಎನ್ನುವ ಮಾತಿನಲ್ಲೇ ಇಡೀ ಕಥೆ ಹುದುಗಿದೆ ಅನ್ನಿಸುತ್ತದೆ.

“ಬೇಗೆ” ಏಕ ಭಾವದ ಗುಚ್ಛ ಒಬ್ಬರಿಗೊಬ್ಬರು ಸಂಕಟ ಹೇಳಿಕೊಂಡು ಹಗುರಾಗುವ ಸ್ನೇಹ ಒಂದು ನಿರ್ಲಿಪ್ತತೆಗೆ ದೂಡುತ್ತದೆ. “ತವರು” ನಿರಂತರ ಪ್ರೀತಿಯನ್ನು ಮೊಗೆದು ಕೊಟ್ಟರೆ, “ಗೊಂಬೆ” ಪಟ್ಟಣದ ಕೈಗೊಂಬೆಯಾದ ಜನರ ಭಾವಗಳನ್ನು ಬಿಚ್ಚಿಡುತ್ತದೆ.

ಇಲ್ಲಿನ ಹೆಚ್ಚಿನ ಕಥೆಗಳು ಮಲೆನಾಡು, ಆಗುಂಬೆ, ತೀರ್ಥಹಳ್ಳಿಯಂತಹ ಗ್ರಾಮಾಂತರ ಪ್ರದೇಶದ ಪರಿಸರದ ಸಂಪೂರ್ಣ ಚಿತ್ರಣವನ್ನು ಓದುಗನಿಗೆ ನೀಡುತ್ತದೆ. ಹೆಣ್ಣು ಹೇಳಿಕೊಳ್ಳದ ಕೆಲವು ಸೂಕ್ಷ್ಮಗಳನ್ನು ಅತಿ ಸೂಕ್ಷ್ಮವಾಗಿ ಕಥೆಯಲ್ಲಿ ಲೇಖಕ ಹರೀಶ್ ದಾಖಲಿಸಿದ್ದಾರೆ.

ತಾನು ಹುಟ್ಟಿ ಬೆಳೆದ ಊರು ಮನೆಗಳನ್ನು ಬಿಟ್ಟು, ಇಷ್ಟಕ್ಕೋ, ಅನಿವಾರ್ಯಕ್ಕೋ, ಪಟ್ಟಣ ಸೇರಿಕೊಂಡ ನೂರಾರು ಮನಸ್ಸುಗಳು. ದಾರಿ ಕಾಯುತ್ತ ಹಳ್ಳಿಯಲ್ಲೇ ಉಳಿದ ಹಿರಿ ಜೀವಗಳು. ಇಂತಹ ನಯನಾಜೂಕಿನ ಭಾವಗಳ ಚಿತ್ರಣ ಸೆರೆಹಿಡಿದಿದ್ದಾರೆ.

ಹಳ್ಳಿ ಎಂದಾಗ ಮೊದಲು ನೆನಪಾಗುವುದು ಕೃಷಿ. ಕೃಷಿಯ ಕಷ್ಟದ ಚಿತ್ರಣ ಕೂಡ ಇಲ್ಲಿ ದಾಖಲಾಗಿದೆ. ಒಟ್ಟಿನಲ್ಲಿ ಇದು ಬದುಕಿನ ಒಟ್ಟೂ ವಿಷಯಾಧಾರಿತ ಕಥೆಗಳ ಗುಚ್ಛ ಎನ್ನಬಹುದು. ಸಕಲ ಭಾವದ ಏರಿಳಿತಗಳು ಇಲ್ಲಿ ಕಥೆ ಹೇಳುತ್ತವೆ.


(ಕೃತಿ: ಹುಲಿಕಡ್ಜಿಳ, ಲೇಖಕರು: ಹರೀಶ್ ಟಿ.ಜಿ, ಪ್ರಕಾಶಕರು: ನೇಕಾರ ಪ್ರಕಾಶನ, ಸೊರಬ, ಬೆಲೆ :140/-)