ಕೈಗೆ ಸೂಜಿ ಚುಚ್ಚಿದ ಅನುಭವವಾಗಿ ನೋವಿನಿಂದ ಚೀರಿ ಕೈ ಬಿಟ್ಟೆ. ಕೀಟವೇನೋ ಹಾರಿ ಹೋಯಿತು. ನನ್ನ ಕೈ ನೋಡಿ ಕೊಂಡೆ, ಸಣ್ಣಗೆ ಉರಿಯುತ್ತಿತ್ತು. ಸೂಜಿ ಹೊಕ್ಕಂತೆ ಭಾಸವಾಗುತ್ತಿತ್ತು. ಕೈಯನ್ನು ನೀವುತ್ತಾ ಅದುಮಿ ಹಿಡಿದು ಶಾಲೆಯವರೆಗೆ ಬಂದೆ. ಶಾಲೆಯಲ್ಲಿ ನೋಡುತ್ತೇನೆ, ಕೈ ಬೆರಳು ಆನೆ ಕಾಲು ರೋಗದವರಂತೆ ಊದಿಕೊಂಡಿದೆ. ಆ ದಿನ ಹಾಗೂ ಹೀಗೂ ಶಾಲೆ ಮುಗಿಸಿ ಮನೆಗೆ ಬಂದು ಅರಿಶಿನ ಹಚ್ಚಿದ ಮೇಲೆ ಊತ ಸ್ವಲ್ಪ ಕಡಿಮೆಯಾಯಿತು. ಆ ಕುಂಬಾರನ ಹುಳುವಿನ ಮೇಲಿನ ಸಿಟ್ಟು ತೀರಿರಲಿಲ್ಲ. ಅವಕಾಶಕ್ಕೆ ಸದಾ ಕಾಯುತ್ತಿದ್ದೆ.
ಮುನವ್ವರ್ ಜೋಗಿಬೆಟ್ಟು
ಬರೆಯುವ ಪರಿಸರದ ಕಥೆಗಳು.

 

ನಮ್ಮ ಮನೆಯ ಪಶ್ಚಿಮ ದಿಕ್ಕಿಗೆ ಒಂದು ಕಿಟಕಿಯಿದೆ. ಟಿ.ವಿ ಮೊಬೈಲ್ ಬಾರದ ದಿನಗಳಲ್ಲಿ ನಮಗೆ ಅದೇ ಮನೋರಂಜನಾ ದೃಶ್ಯ ವಾಹಿನಿಯಾಗಿತ್ತು. ಕಿಟಕಿಯಿಂದ ನೋಡಿದರೆ ಎದುರಿನಲ್ಲಿ ಕಾಣುವ ಹಲಸಿನ ಮರ, ಇನಿತು ದೂರದಲ್ಲಿ ಮಾವಿನ ಮರ, ಅದರ ಹತ್ತಿರದಲ್ಲೇ ತೆಂಗಿನ ಮರ. ಆ ಕಿಟಕಿಯಲ್ಲೇ ನೋಡುತ್ತಾ ಕುಳಿತರೆ ಜೀವ ವೈವಿಧ್ಯತೆಗಳ ದರ್ಶನ ಭಾಗ್ಯ . ಹಲಸಿನ ಹಣ್ಣು ಮಾಗಿದಾಗ ಕುಕ್ಕಿ ತಿನ್ನಲು ಬರುವ ವಿವಿಧ ಹಕ್ಕಿ, ಅಳಿಲು, ಮಂಗ ಪರಿವಾರಗಳು. ಪ್ರಾಣಿಗಳ ನಡುವಿನ ಅನ್ಯೋನ್ಯತೆ, ಗಲಾಟೆ, ಪ್ರೇಮ ಸಲ್ಲಾಪಗಳು ಎಲ್ಲವನ್ನೂ ನೋಡಬಹುದಿತ್ತು.

ಒಮ್ಮೆ ಅದೇ ಕಿಟಕಿಯಲ್ಲಿ ನೋಡುತ್ತ ಕುಳಿತಿದ್ದವನಿಗೆ ಮಾವಿನ ಮರದಲ್ಲಿ ವಾಲಿಬಾಲ್ ಚೆಂಡಿನಂತಹದೇನೋ ಕಂಡಂತಾಯಿತು. ಸುತ್ತಲೂ ಹಸಿರೇ ತುಂಬಿದ್ದರಿಂದ ಆ ವಸ್ತು ಎಲ್ಲೋ ಮರೆಯಾಯಿತು. ಮತ್ತೆ ಮತ್ತೆ ನೋಡಿದರೂ ಎಲ್ಲೂ ಕಾಣದಾಯಿತು. ಬಹುಶಃ ಗಾಳಿಯ ರಭಸಕ್ಕೆ ಅಡ್ಡಲಾಗಿದ್ದ ರೆಂಬೆ ಬಾಗಿದ್ದರಿಂದ ಆ ದೃಶ್ಯ ಕಂಡದ್ದಿರಬೇಕು. ನನಗೆ ಕುತೂಹಲ ತಡೆಯಲಾಗದೆ ಸೀದಾ ಮನೆಯ ಹೊರಗೆ ಬಂದೆ. ಮನೆಯ ಹಿತ್ತಲಲ್ಲಿ ಮನೆಯ ಮಾಡಿಗೆ ಬಾಗಿ ಮಲಗಿದ ಸಪೋಟ ಮರ ದಾಟಿ ಮುಂದೆ ಸಾಗಿದೆ. ಹತ್ತಿರದ ಮನೆಯ ಮಾವಿನ ಮರದಲ್ಲಿ ಬಿಳಿ ಬಣ್ಣದ ಚೆಂಡಿನಾಕೃತಿ ಸರಿಯಾಗಿ ಕಂಡಿತು. ಒಂದೇ ನೋಟಕ್ಕೆ ನಾನು ಯಾವುದೋ ದೊಡ್ಡ ಹಕ್ಕಿಯ ಗೂಡೆಂದು ಲೆಕ್ಕ ಹಾಕಿದೆ. ಅಲ್ಲೇ ಹತ್ತಿರದಲ್ಲಿ ಕಸ ಗುಡಿಸುತ್ತಿದ್ದ ಉಮ್ಮನನ್ನು ಕುತೂಹಲದಿಂದ ಕೂಗಿ ಕರೆದು ತೋರಿಸಿದೆ. ಒಮ್ಮೆ ಹತ್ತಿರ ಬಂದು ನೋಡಿದ ಉಮ್ಮ ಹೌಹಾರಿದರು.

“ಕೂಡೊಲು, ಕೂಡೊಲು” ಎಂದು ಚೀರುತ್ತ ಹತ್ತಿರದ ಮನೆಯವರನ್ನು ಕರೆದು ಕಣಜ ಗೂಡು ಕಟ್ಟಿದ್ದ ವಿಚಾರವನ್ನು ಹೇಳಿದರು. ನಾನು ಏನೆಂದು ಕೇಳುವ ಪ್ರಶ್ನೆಗೂ ಕೂಡ ನಿಲ್ಲದೆ ಧರ ಧರನೆ ಬಲವಂತವಾಗಿ ಎಳೆದುಕೊಂಡು ಮನೆಯೊಳಗೆ ಕುಳ್ಳಿರಿಸಿ ಬಾಗಿಲು ಹಾಕಿ ಮತ್ತೆ ಕೆಲಸಕ್ಕೆ ಹಚ್ಚಿಕೊಂಡರು. ನನಗೆ ದಿಗಿಲು. ಆ ಬಳಿಕ ನಾವು ಆ ದಾರಿಯಾಗಿ ಶಾಲೆ ಹೋಗುವುದಕ್ಕೂ ನಿರ್ಬಂಧ ಜಾರಿಯಾಯ್ತು. ಆ ರಾತ್ರಿ ಊಟಕ್ಕೆ ಕುಳಿತಾಗ ಉಮ್ಮ ಕಥೆ ಶುರು ಮಾಡಿದರು. ಆ ಗೂಡು ಕಟ್ಟಿದ್ದು ಒಂದು ಅಪಾಯಕಾರಿ ಕೀಟವೆಂದೂ, ಉಮ್ಮ ಸಣ್ಣದಿರುವಾಗ ಒಮ್ಮೆ ಹೊಲದ ಕೆಲಸಕ್ಕೆ ಬರುತ್ತಿದ್ದ ಐನಾತಿಯೊಬ್ಬ ತಿಳಿಯದೆ ಅದರ ಗೂಡಿಗೆ ಕತ್ತಿ ತಾಗಿಸಿದ್ದನಂತೆ. ಕೆರಳಿದ ಕಣಜಗಳು ಆತನನ್ನು ಕಚ್ಚಲು ಬಂದಾಗ ಯದ್ವಾ ತದ್ವಾ ಸುಮಾರು ದೂರ ಓಡಿ ಕೊನೆಗೆ ದಾರಿ ಕಾಣದೆ ಹತ್ತಿರದಲ್ಲಿದ್ದ ಕೆರೆಗೆ ಹಾರಿದ್ದ. ಆತ ನೀರಿನಲ್ಲಿ ಮುಳುಗಿದಂತೆ ತಲೆಯಲ್ಲಿದ್ದ ಮುಟ್ಟಾಳೆ (ಕಂಗು ಮರದ ಹಾಳೆಯಿಂದ ಮಾಡುವ ವಿಶೇಷ ಟೋಪಿ) ತೇಲತೊಡಗಿತ್ತು. ಕೀಟಗಳು ಎಡೆ ಬಿಡದೆ ಆ ಮುಟ್ಟಾಳೆಯನ್ನೇ ಚುಚ್ಚುತ್ತಿತ್ತಂತೆ. ಆತ ನೀರಿನಿಂದ ಮುಳುಗಿ ದೂರದಲ್ಲಿ ಎದ್ದು ಅಲ್ಲಿಂದ ಪರಾರಿ ಕಿತ್ತನಂತೆ. ಆಗಲೇ ನಮಗೆ ಪರಿಸ್ಥಿತಿಯ ತೀವ್ರತೆ ಅರ್ಥವಾಗಿದ್ದು. ಹೀಗೆ ಇನ್ನೊಮ್ಮೆ ಕಟ್ಟಿ ಹಾಕಿ ಮೇವಿಗೆ ಬಿಟ್ಟ ದನವೊಂದು ಅರಿಯದೆಯೇ ಕಣಜದ ಗೂಡಿಗೆ ತಾಗಿದ್ದು ಮತ್ತು ಅಲ್ಲಿಂದ ಓಡಿ ಹೋಗಲಾಗದ ದನವನ್ನು ಕಣಜಗಳು ಚುಚ್ಚಿ ಕೊಂದು ಹಾಕಿದ ಚರಿತ್ರೆ ಅಮ್ಮ ಹೇಳಿದ್ದರು. ಬಹುಶಃ ನಾನು ಉಮ್ಮನಿಗೆ ಹೇಳದೆ ಪರೀಕ್ಷಿಸಲಿಕ್ಕೋಸ್ಕರ ಕಲ್ಲೋ, ಕೊಲೋ ಎಸೆದಿದ್ದರೆ ಈ ಕಥೆ ಹೇಳಲು ನಾನೂ ಇರುತ್ತಿರಲಿಲ್ಲವೇನೋ.

ಒಂದೆರಡು ದಿನ ಕಳೆದಂತೆ ಸುತ್ತಲಿನ ಎಲ್ಲ ಮಕ್ಕಳ ಮೇಲೆ ತೀವ್ರಾ ನಿಗಾ ಇರಿಸಲಾಗಿತ್ತು. ಎಲ್ಲಿ ಮಕ್ಕಳು ಹೋಗಿ ಕಲ್ಲೆಸೆದು ಕಣಜವನ್ನು ಪ್ರಕ್ಷುಬ್ಧಗೊಳಿಸುತ್ತಾರೋ ಅನ್ನುವ ಭಯ. ಹೆಚ್ಚಿನ ಭಯ ಗಂಡು ಮಕ್ಕಳ ಮೇಲೆ. ಮೂರನೇ ದಿನ ಸಂಜೆ ಪ್ರತಿ ಮನೆಯಿಂದಲೂ ಸ್ವಲ್ಪ ಸೀಮೆ ಎಣ್ಣೆ ಒಟ್ಟುಗೂಡಿಸಲು ಆರಂಭಿಸಿದ್ದರು. ಆ ದಿನ ಸಂಜೆ ಕತ್ತಲಾವರಿಸುತ್ತಿದ್ದಂತೆ, ನಮಗೆಲ್ಲ ಮನೆ ಬಿಟ್ಟು ಹೊರಬಾರದಂತೆ ಕಟ್ಟು ನಿಟ್ಟಿನ ಆಜ್ಞೆ ಮಾಡಿದ್ದರು. ಮುಸುಕಾದಂತೆ ಎರಡು ಬೈಕಿನಲ್ಲಿ ಇಬ್ಬರಂತೆ ನಾಲ್ಕು ಜನ ಹತ್ತಿರದ ಮನೆಗೆ ಬಂದರು. ಅದಾಗಲೇ ತಯಾರಿಸಿದ, ಗೋಣಿ ಚೀಲದಲ್ಲಿ ಮಾಡಿದ ವಸ್ತ್ರಗಳಂತಹ ಹೊದಿಕೆಗಳನ್ನು ನಾಲ್ಕು ಮಂದಿಯೂ ತೊಟ್ಟುಕೊಂಡರು. ತೆಂಗಿನ ಹಡಿಲಿನ ಗರಿಯನ್ನು ಹೊತ್ತಿಸಿ ಸೀಮೆ ಎಣ್ಣೆ ಸುರಿದು ಬೆಂಕಿ ಹಾಕಿದರು. ನಾವೆಲ್ಲ ಅದೇ ಕಿಟಕಿಯಲ್ಲಿ ಗಲಾಟೆ ಮಾಡುತ್ತಾ ಹೊರಗಿನ ವಿದ್ಯಮಾನಗಳನ್ನೇ ಆಶ್ಚರ್ಯದಿಂದ ನೋಡುತ್ತಲಿದ್ದೆವು. ನೋಡನೋಡುತ್ತಿದ್ದಂತೆ ಒಬ್ಬ ಗೋಣಿ ವಸ್ತ್ರ ಹೊದ್ದವನು ಮರ ಹತ್ತತೊಡಗಿದ. ಸಣ್ಣ ಕಿಟಕಿಯಲ್ಲಿ ಸುಮಾರು ಇಪ್ಪತ್ತು ಕಣ್ಣಗಳು ಕುತೂಹಲದಿಂದ ಹೊರಗೆ ನಡೆಯುವುದನ್ನು ವೀಕ್ಷಿಸುತ್ತಿದ್ದವು. ಆತ ಗೂಡಿಗೆ ಹತ್ತಿರವಾದ. ಕೈಲಿದ್ದ ಲೈಟರ್ ಹೊತ್ತಿಸಿ ತಾನು ಹತ್ತುವಾಗ ಕೊಟ್ಟಿದ್ದ ‘ದೊಂದಿ’ ಗೆ ತೋರಿಸಿದ. ಬೆಂಕಿ ರಪ್ಪನೆ ಹತ್ತಿಕೊಂಡಿತ್ತು. ಅದಾಗಲೇ ಕೈಯಲ್ಲಿದ್ದ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲನ್ನು ಗೂಡಿಗೊಮ್ಮೆಗೆ ರಾಚಿದ. ಒಮ್ಮೆಲೆ “ಗೊಂಯ್” ಅನ್ನುವ ಸದ್ದು ಸ್ವಷ್ಟವಾಗಿ ಕೇಳಿಸಿತು. ಅದರ ಬೆನ್ನಿಗೆ ದೊಂದಿಯ ಬೆಂಕಿ ಗೂಡನ್ನು ಆವರಿಸಿತು. ಜಗ್ಗನೆ ಗೂಡು ಹೊತ್ತಿ ಉರಿಯಲಾರಂಭಿಸಿತು. ಮರ ಹತ್ತಿದವನು ರಭಸದಿಂದ ಇಳಿಯತೊಡಗಿದ. ಗೂಡು ಹೊತ್ತಿ ಉರಿದು ಅರ್ಧ ಅರ್ಧವಾಗಿ ನೆಲಕ್ಕೆ ಬಿತ್ತು. ಅಲ್ಲಿಗೂ ಸೀಮೆಎಣ್ಣೆ ಸುರಿದು ಬೆಂಕಿ ಹಾಕಲಾಯಿತು. ಎಲ್ಲರೂ ಪೀಡೆಯೊಂದು ತೊಲಗಿದ ಖುಷಿಯಿಂದ ಅವರವರ ಮನೆಗೆ ಹೊರಟರು.

ಆ ಗೂಡು ಕಟ್ಟಿದ್ದು ಒಂದು ಅಪಾಯಕಾರಿ ಕೀಟವೆಂದೂ, ಉಮ್ಮ ಸಣ್ಣದಿರುವಾಗ ಒಮ್ಮೆ ಹೊಲದ ಕೆಲಸಕ್ಕೆ ಬರುತ್ತಿದ್ದ ಐನಾತಿಯೊಬ್ಬ ತಿಳಿಯದೆ ಅದರ ಗೂಡಿಗೆ ಕತ್ತಿ ತಾಗಿಸಿದ್ದನಂತೆ. ಕೆರಳಿದ ಕಣಜಗಳು ಆತನನ್ನು ಕಚ್ಚಲು ಬಂದಾಗ ಯದ್ವಾ ತದ್ವಾ ಸುಮಾರು ದೂರ ಓಡಿ ಕೊನೆಗೆ ದಾರಿ ಕಾಣದೆ ಹತ್ತಿರದಲ್ಲಿದ್ದ ಕೆರೆಗೆ ಹಾರಿದ್ದ.

ಮರುದಿನ ನಾನು ಆ ದಾರಿಯಾಗಿಯೇ ಶಾಲೆಗೆ ಹೊರಟೆ. ಯಾರೂ ನನ್ನನ್ನು ತಡೆದಿರಲಿಲ್ಲ. ರಾತ್ರಿ ಸುಟ್ಟು ಬಿದ್ದಿದ್ದ ಕಣಜಗಳ ಗೂಡನ್ನು ಸರಿಯಾಗಿ ಪರೀಕ್ಷಿಸಿದೆ. ಅಮೇರಿಕಾ ಜಪಾನಿನ ಮೇಲೆ ಹಾಕಿದ ಅಣುಬಾಂಬಿನ ಕ್ರೌರ್ಯದಂತೆ ಕಂಡು ಬರುತ್ತಿತ್ತು ಆ ಗೂಡಿನ ಸ್ಥಿತಿ. ರೆಕ್ಕೆ ಕಳೆದುಕೊಂಡ, ಅರೆ ಬೆಂದ ಕೀಟಗಳ ಕಳೇಬರಗಳು, ಮೊಟ್ಟೆಗಳು ಸುಟ್ಟು ಕರಕಲಾಗಿ ವಿಚಿತ್ರ ವಾಸನೆ ಬರುತ್ತಿತ್ತು. ನಾನು ಕಣಜಗಳ ಮೇಲ್ಮೈಯನ್ನು ಸ್ಪಷ್ಟವಾಗಿ ಪರೀಕ್ಷಿಸಿದೆ, ಹಳದಿ ಮಿಶ್ರಿತ ಕಂದು ಬಣ್ಣದ ಹುಳಗಳವು. ಸಂಘ ಜೀವಿಯಾದ ಈ ಹುಳಗಳು, ಜೇನಿನಂತೆಯೇ ರಾಣಿಯನ್ನು ಆಧರಿಸಿ ಒಂದು ಕಡೆ ನೆಲೆ ನಿಂತು ಗೂಡು ಕಟ್ಟುತ್ತವೆ. ಗೂಡಿನಲ್ಲಿ ಕೆಲಸಗಾರ, ಸೈನಿಕ, ಮುಂತಾದ ಸ್ಥರಗಳಲ್ಲಿ ಪ್ರತಿಯೊಂದು ಗುಂಪಿಗೂ ಒಂದೊಂದು ಕೆಲಸಗಳಿರುತ್ತದೆ. ಮರದ ತಿರುಳು, ಕೊಳೆತ ಎಲೆಗಳು, ತಾಜ್ಯಗಳನ್ನೆಲ್ಲಾ ಜಗಿದ ಜೊಲ್ಲಿನಿಂದ ಇವುಗಳು ಗೂಡು ಕಟ್ಟುತ್ತವೆ. ವಿಶೇಷವೆಂದರೆ ಇವುಗಳು ಇತರೆ ಕೀಟಗಳಂತೆ ಬಾಯಿಯಿಂದ ಚುಚ್ಚದೆ ಹಿಂದಿನಿಂದ ಚುಚ್ಚಿ ರಾಸಾಯನಿಕವೊಂದನ್ನು ಸ್ರವಿಸುತ್ತದೆ. ಕಚ್ಚಲ್ಪಟ್ಟ ಭಾಗದಲ್ಲಿ ವಿಪರೀತ ಉರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಇವುಗಳ ಜಾತಿಗೆ ಸೇರಿದ ಇನ್ನೊಂದು ಹುಳವೆಂದರೆ ಕುಂಬಾರನ ಹುಳು.

ಇವುಗಳು ಒಂಟಿ ಜೀವಿ. ಸಾಮಾನ್ಯವಾಗಿ ಕಾಣಲು ಒಂದೇ ತೆರನಾದರೂ ಕುಂಬಾರ ಹುಳು ಬಹಳ ವಿಶಿಷ್ಟ. ಜೌಗು ಪ್ರದೇಶದಲ್ಲಿನ ಮಣ್ಣು ಅಥವಾ ಕೆಸರು ಮಣ್ಣನ್ನು ತಂದು ಗೆದ್ದಲಿನಂತೆ ಗೂಡು ಕಟ್ಟುತ್ತದೆ. ಮನೆಯಲ್ಲಿ ಬಹುವಾಗಿ ಕಾಡುವ ಕೀಟಗಳೆಂದರೆ ಇವುಗಳೇ. ಪ್ಲಗ್ ಸಾಕೆಟ್ ನ ಗುಂಡಿಯಲ್ಲಿ ಮಣ್ಣನ್ನು ತಂದು ಗೂಡು ಕಟ್ಟಲಾರಂಭಿಸಿದರೆ ಮತ್ತೆ ಆ ಸಾಕೆಟ್ ಕಥೆ ಮುಗಿದಂತೆಯೇ. ಆದರೂ ಇವೆರಡೂ ಕೀಟಗಳು ರೈತನ ಮಿತ್ರರು. ಗೂಡು ಕಟ್ಟಿಯಾದ ಮೇಲೆ ಅವು ಬೆಳೆ ವಿನಾಶಕ್ಕೆ ಕಾರಣವಾಗುವ ಹುಳುಗಳನ್ನು ಹಿಡಿದು ತಂದು ಗೂಡೊಳಗೆ ತುಂಬುತ್ತವೆ. ನಂತರ ಮೊಟ್ಟೆ ಇಟ್ಟು ಗೂಡನ್ನು ಮುಚ್ಚಿ ಅವು ಮುಂದಿನ ಗೂಡಿನ ಸಿದ್ಧತೆಯಲ್ಲಿರುತ್ತವೆ. ಮೊಟ್ಟೆ ಬಿರಿದು ಹೊರ ಬರುವ ಮರಿಗಳು ಸತ್ತ ಕೀಟಗಳನ್ನು ತಿಂದು ಬದುಕುತ್ತವೆ. ಅವುಗಳೇ ಮುಂದೆ ಲಾರ್ವಾಗಳಾಗಿ ಹೊರ ಬಂದು ಕಣಜದ ಅಥವಾ ಕುಂಬಾರ ಹುಳುಗಳಾಗುತ್ತವೆ.

ಒಮ್ಮೆ ನಾನು ಶಾಲೆಯ ದಾರಿಯಲ್ಲಿ ಹೋಗುತ್ತಿರುವಾಗ ಕುಂಬಾರನ ಕೀಟವೊಂದು ಗೂಂಯೆಂದು ಸುತ್ತುತ್ತಿತ್ತು. ನಾಲ್ಕೈದು ಬಾರಿ ಸುತ್ತಿದಾಗ, ಅಭ್ಯಾಸ ಬಲದಂತೆ ಕೈಯನ್ನು ಗಾಳಿಯಲ್ಲಿ ಆಡಿಸಿ ಒಮ್ಮೆಲೆ ಹಿಡಿದು ನೆಲಕ್ಕೆ ಅಪ್ಪಳಿಸಲು ಹೊರಟೆ. ದುರಾದೃಷ್ಟಕ್ಕೆ ನಾನು ಕೈ ಬೀಸುವುದು ಕೀಟ ಹಾರಿ ನನ್ನ ಕೈಯೊಳಗೆ ಹೊಗುವುದೂ ಸರಿ ಹೋಯಿತು. ಹಿಡಿದು ನೆಲಕ್ಕಪ್ಪಳಿಸುವ ಸಣ್ಣ ಸಮಯವೂ ನನಗುಳಿದಿರಲಿಲ್ಲ; ಅಷ್ಟರಲ್ಲಿ ಕೈಗೆ ಸೂಜಿ ಚುಚ್ಚಿದ ಅನುಭವವಾಗಿ ನೋವಿನಿಂದ ಚೀರಿ ಕೈ ಬಿಟ್ಟೆ. ಕೀಟವೇನೋ ಹಾರಿ ಹೋಯಿತು. ನನ್ನ ಕೈ ನೋಡಿ ಕೊಂಡೆ, ಸಣ್ಣಗೆ ಉರಿಯುತ್ತಿತ್ತು. ಸೂಜಿ ಹೊಕ್ಕಂತೆ ಭಾಸವಾಗುತ್ತಿತ್ತು. ಕೈಯನ್ನು ನೀವುತ್ತಾ ಅದುಮಿ ಹಿಡಿದು ಶಾಲೆಯವರೆಗೆ ಬಂದೆ. ಶಾಲೆಯಲ್ಲಿ ನೋಡುತ್ತೇನೆ, ಕೈ ಬೆರಳು ಆನೆ ಕಾಲು ರೋಗದವರಂತೆ ಊದಿಕೊಂಡಿದೆ. ಆ ದಿನ ಹಾಗೂ ಹೀಗೂ ಶಾಲೆ ಮುಗಿಸಿ ಮನೆಗೆ ಬಂದು ಅರಿಶಿನ ಹಚ್ಚಿದ ಮೇಲೆ ಊತ ಸ್ವಲ್ಪ ಕಡಿಮೆಯಾಯಿತು. ಆ ಕುಂಬಾರನ ಹುಳುವಿನ ಮೇಲಿನ ಸಿಟ್ಟು ತೀರಿರಲಿಲ್ಲ. ಅವಕಾಶಕ್ಕೆ ಸದಾ ಕಾಯುತ್ತಿದ್ದೆ.

ಹಾಗಿರಲು ಒಮ್ಮೆ ಮಸೀದಿ ಅಂಗಳದಲ್ಲಿದ್ದ ಹಲಸಿನ ಮರದಡಿಯಲ್ಲಿ ಸ್ವಚ್ಚತಾ ಕಾರ್ಯದ ನಿಮಿತ್ತ ಎಲೆ ಹೆಕ್ಕುತ್ತಿದ್ದಾಗಲೇ ‘ಝೂಂಯ್’ ಎಂಬ ಶಬ್ದ ಕೇಳಿ ಬಂತು. ನನ್ನ ಕಿವಿ ನೆಟ್ಟಗಾಯ್ತು. ನಾನು ಕುಂಬಾರ ಹುಳವೆಂದು ಭಾವಿಸಿ, ಅದರ ಶಬ್ದ ಹಿಂಬಾಲಿಸಿ ಹೊರಟೆ. ಬಡಗಿಯ ನುಣುಪು ಯಂತ್ರದಂತೆ ಕರ್ಕಶವಾಗಿತ್ತು ಆ ಸದ್ದು. ಹತ್ತಿರದ ಕಟ್ಟಡಕ್ಕೆ ಹಾಕಿದ ಮರದ ಪಕ್ಕಾಸಿನಿಂದ ‘ಭೂಂಯ್’ ಸದ್ದಿನೊಂದಿಗೆ ಒಂದೇ ಸಮನೆ ಮಣ್ಣು ಮಿಶ್ರಿತ ಮರದ ಹುಡಿ ಉದುರುತ್ತಿತ್ತು. ನಾನು ಕುಂಬಾರ ಹುಳುವಿನ ಕೆಲಸವೆಂದು ಪರಿಭಾವಿಸಿ ಹುಡಿ ಬೀಳುತ್ತಿದ್ದ ಹುತ್ತಕ್ಕೆ ಸಣ್ಣ ಕೋಲನ್ನು ಚುಚ್ಚಿದೆ. ಒಮ್ಮೆ ಗೂಂಯ್ಗುಗುಡುವ ಸದ್ದು ನಿಂತಿತಾದರೂ ಮತ್ತೆ ಶುರುವಿಟ್ಟಿತು.

ದುರಾದೃಷ್ಟಕ್ಕೆ ನಾನು ಕೈ ಬೀಸುವುದು ಕೀಟ ಹಾರಿ ನನ್ನ ಕೈಯೊಳಗೆ ಹೊಗುವುದೂ ಸರಿ ಹೋಯಿತು. ಹಿಡಿದು ನೆಲಕ್ಕಪ್ಪಳಿಸುವ ಸಣ್ಣ ಸಮಯವೂ ನನಗುಳಿದಿರಲಿಲ್ಲ; ಅಷ್ಟರಲ್ಲಿ ಕೈಗೆ ಸೂಜಿ ಚುಚ್ಚಿದ ಅನುಭವವಾಗಿ ನೋವಿನಿಂದ ಚೀರಿ ಕೈ ಬಿಟ್ಟೆ. ಕೀಟವೇನೋ ಹಾರಿ ಹೋಯಿತು. ನನ್ನ ಕೈ ನೋಡಿ ಕೊಂಡೆ, ಸಣ್ಣಗೆ ಉರಿಯುತ್ತಿತ್ತು.

ಹೇಗೂ ಸತ್ತೇ ಹೋಗುತ್ತದೆಯಲ್ಲ ಎಂದು ಕೊಂಡು ಇನ್ನಷ್ಟು ತುರುಕಿದೆ. ಸ್ವಲ್ಪ ಹೊತ್ತಿನಲ್ಲೆ ಹತ್ತಿರದಲ್ಲೇ ಇದ್ದ ಸಣ್ಣ ರಂಧ್ರದಿಂದ ಜೀರುಂಡೆಯೊಂದು ರೊಯ್ಯನೆ ಹಾರಿತು. ನನಗೆ ಆಶ್ಚರ್ಯ! ಅಷ್ಟರಲ್ಲೇ ನಾನು ಜೀರುಂಡೆ ಕಿತಾಪತಿಯನ್ನು ಅರ್ಥೈಸಿಕೊಂಡೆ. ಅದು ಮರವನ್ನು ಕೊರೆದು ಹಾಕಿ ಹಲವು ಸಂಪರ್ಕ ರಂಧ್ರಗಳನ್ನು ನಿರ್ಮಿಸಿಯಾಗಿತ್ತು. ಆ ಬಳಿಕ ಎಷ್ಟೋ ಸಲ ಅವುಗಳನ್ನು ಬೆಳಕಿನ ಸುತ್ತ ಹಾರುವುದು ನೋಡಿದ್ದೆ. ಹಠಾತ್ತನೆ ಬೀಳುವುದು, ಕಾಲಿಗೆ ಸಿಕ್ಕಿ ಅಪ್ಪಚ್ಚಿ ಯಾಗುವುದನ್ನೂ ನೋಡಿದ್ದೆ. ಅವು ಬೆಳಕಿನ ಸುತ್ತ ಹಾರುವುದಕ್ಕೂ ಕಾರಣವುಂಟು. ಬೆಳಕಿನಿಂದ ಸ್ರವಿಸುವ ಯಾವುದೋ ವಿಶಿಷ್ಟ ರಸಾಯನಿಕವು ಅವುಗಳ ಲೈಂಗಿಕ ಆಕರ್ಷಣೆಗೆ ಹೋಲುತ್ತದೆ ಎಂಬುವುದು ವಿಜ್ಞಾನಿಗಳ ಅಂಬೋಣ. ಇವುಗಳ ಗಂಡು ಜೀರುಂಡೆಗಳಿಗೆ ಕೊಂಬುಗಳಿರುತ್ತವೆ. ಸ್ವಷ್ಟವಾಗಿ ನೋಡಿದರೆ ಪುಟ್ಟ ಆನೆಯಂತಯೇ ಭಾಸವಾಗುತ್ತದೆ. ನೆಲದಲ್ಲಿ ಹರಿಯುವಾಗ ಅವುಗಳ ಮೇಲೆ ಚಪ್ಪಲಿಯಿಟ್ಟರೂ ಅವುಗಳ ಭಾರವನ್ನು ತಡೆದುಕೊಂಡು ಚಪ್ಪಲಿಯನ್ನು ಎತ್ತಿಕೊಂಡು ಹೋಗುವಷ್ಟು ಶಕ್ತಿಶಾಲಿ ಇವು. ಇವುಗಳು ಮೊಟ್ಟೆ ಇಡುವುದು ಕೊಳೆತ ಎಲೆಗಳಲ್ಲಿ ಮತ್ತು ಸೆಗಣಿಯ ರಾಶಿಯಲ್ಲಿ.

ಮೊದಲೆರಡು ಕೀಟಗಳಂತೆ ಇವು ಯಾವತ್ತೂ ರೈತನ ಮಿತ್ರ ಅಲ್ಲ ಶತ್ರು. ಒಮ್ಮೆ ನಮ್ಮ ಹತ್ತಿರದ ತೆಂಗೊಂದು ಸತ್ತು ಹೋದಾಗ, ಉಮ್ಮ ಜೀರುಂಡೆಗಳಿಗೆ ಬೈಯ್ಯುವುದು ಅಸ್ಪಷ್ಟವಾಗಿ ಕೇಳಿಕೊಂಡಿದ್ದೆ. ಆಗ ಏನೂ ಅರ್ಥವಾಗಿರಲಿಲ್ಲ, ಮುಂದೆ ಜೀರುಂಡೆಗಳ ಕುರಿತು ತಿಳಿದಾಗ ಉಮ್ಮ ಬೈಯ್ದದ್ದು ಯಾಕೆಂದು ಗೊತ್ತಾಯಿತು. ರೈತನಿಗೆ ಕಂಟಕವಾದ ಇವುಗಳು ತೆಂಗನ್ನು ರಂಧ್ರಮಾಡಿ ತೆಂಗಿನ ತಿರುಳನ್ನೇ ಕಬಳಿಸಿ ಮರವನ್ನು ಸಾಯುವಂತೆ ಮಾಡುತ್ತದೆ. ಬಾಳೆ ಸಸ್ಯ ವನ್ನೂ ಇದೇ ಥರ ಕೊರೆದು ಅವುಗಳಲ್ಲಿ ಮೊಟ್ಟೆ ಇಟ್ಟು ಮರಿಮಾಡುತ್ತವಂತೆ. ಅಂತೂ ನಾವು ಪ್ರಕೃತಿಯಲ್ಲಿ ಯಾವ ಪ್ರಾಣಿಯನ್ನೋ, ಕೀಟವನ್ನೋ ಅಪಾಯಕಾರಿಯಾಗಿ ಕಾಣುತ್ತೇವೆಯೋ ಅವುಗಳಿಂದಲೂ ಪ್ರಕೃತಿಗೆ ಯಾವಯಾವ ರೀತಿಯಲ್ಲೋ ಅವಶ್ಯಕತೆ ಇರಬಹುದು. ಪರಾಗಸ್ಪರ್ಶ ಕ್ರಿಯೆಗಳಿಗೆ ಇಂತಹ ಕೀಟಗಳೇ ಮಹತ್ತರ ಪಾತ್ರವಹಿಸುತ್ತವೆ.

ಈಗೀಗ ಕುಂಬಾರನ ಹುಳು ಕಾಣ ಸಿಗುವುದೇ ಅಪರೂಪ. ಹೊಸ ತಂತ್ರಜ್ಞಾನದ ಬಳಕೆಯಿಂದ ಪ್ಲಗ್ ಗಳಲ್ಲಿ ಅವು ಕೂರುತ್ತಿಲ್ಲ. ಮನುಷ್ಯನಿಂದ ದೂರವುಳಿದು ಬದುಕಲು ಹೊರಟಂತಿವೆ ಅವು. ಗಿಡಗಳು ಹಣ್ಣುಗಳೇ ಕೊಡುತ್ತಿಲ್ಲವೆಂದು ನಾವು ನರ್ಸರಿಗಳನ್ನು ದೂರುತ್ತಿದ್ದೇವೆ. ಫಲವಿಲ್ಲವೆಂದು ಕಡಿದು ಹಾಕುತ್ತಿದ್ದೇವೆ. ಒಟ್ಟಿನಲ್ಲಿ ನಮ್ಮೊಳಗಿನ ಸಸ್ಯ ನೈಸರ್ಗಿಕ ಗರ್ಭ ತಜ್ಞರನ್ನೇ ನಾವು ಮರೆತಿದ್ದೇವೆ.