ಈ ಮಂಟಪ ಹದಿನಾರು ಮೂಲೆಗಳುಳ್ಳ ವಿನ್ಯಾಸವನ್ನು ಹೊಂದಿತ್ತು. ಎಲ್ಲ ಮೂಲೆಗಳಲ್ಲೂ ಕುಳಿತುಕೊಳ್ಳಲು ಕಕ್ಷಾಸನ ಎಂದರೆ ಒರಗುಪೀಠಗಳಿರುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಪೀಠಗಳಲ್ಲಿ ಒಂದೊಂದು ಮೂಲೆಯಲ್ಲಿ ಒಬ್ಬೊಬ್ಬ ರಾಜಕುಮಾರಿ ತನ್ನ ಗಂಡನೊಡನೆ ಕುಳಿತುಕೊಳ್ಳುತ್ತಿದ್ದಳು. ನಕ್ಷತ್ರಾಕಾರದ ಈ ಮಂಟಪಕ್ಕೆ ಮೂರು ದಿಕ್ಕುಗಳಿಂದ ಪ್ರವೇಶದ್ವಾರಗಳು. ಒಂದು ದಿಕ್ಕಿನ ಪ್ರವೇಶದ್ವಾರದೆಡೆಯಲ್ಲಿ ರಾಜರಾಣಿಯರಿಗೆ ಆಸನ ವ್ಯವಸ್ಥೆ. ಇಲ್ಲಿ ಕುಳಿತುಕೊಳ್ಳುವ ರಾಜನಿಗೆ ತನ್ನ ಎಲ್ಲ ಹೆಣ್ಣುಮಕ್ಕಳೂ ಅಳಿಯಂದಿರೂ ಸ್ಪಷ್ಟವಾಗಿ ಕಾಣಿಸುವರು. ಅವನ ಪಕ್ಕದಲ್ಲಿ ಕುಳಿತ ರಾಣಿಗೆ ತನ್ನ ಎಲ್ಲ ಹೆಣ್ಣುಮಕ್ಕಳೂ ಕಾಣಿಸುವರು. ಅವರವರ ಪಾರ್ಶ್ವದಲ್ಲಿ ಕುಳಿತ ಅಳಿಯನೊಬ್ಬನೂ ಕಾಣಿಸುವುದಿಲ್ಲ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹನ್ನೊಂದನೆಯ ಕಂತು

 

ಈಗ ನಿಮಗೆ ಹೇಳುತ್ತಿರುವ ಕಥೆ ನೂರಾರು ವರುಷಗಳಷ್ಟು ಹಳೆಯದು. ಈಗಿನ ಮೈಸೂರು ಪ್ರಾಂತ್ಯದ ದಕ್ಷಿಣಕ್ಕೆ ಒಂದು ಚಿಕ್ಕ ರಾಜ್ಯ. ಇದನ್ನಾಳುತ್ತಿದ್ದ ರಾಜರಾಣಿಯರಿಗೆ ಹದಿನಾರು ಜನ ಹೆಣ್ಣುಮಕ್ಕಳು. ಎಲ್ಲ ರಾಜಕುಮಾರಿಯರನ್ನು ಪ್ರೀತಿಯಿಂದ ಬೆಳೆಸಿದ ರಾಜದಂಪತಿ ಎಲ್ಲರಿಗೂ ಮದುವೆಮಾಡಿ ಅವರವರ ಗಂಡಂದಿರ ಮನೆಗಳಿಗೆ ಕಳುಹಿಸಿಕೊಟ್ಟಿದ್ದರು. ಆರು ತಿಂಗಳಿಗೋ ವರುಷಕ್ಕೋ ಒಮ್ಮೆ ತಂದೆತಾಯಿಗೆ ಮಕ್ಕಳನ್ನು ನೋಡಬೇಕೆನಿಸಿದಾಗಲೆಲ್ಲ ಎಲ್ಲ ಹದಿನಾರು ರಾಜಕುಮಾರಿಯರೂ ತಂತಮ್ಮ ಗಂಡಂದಿರ ಜೊತೆಗೆ ತವರುಮನೆಗೆ ಬಂದು ಒಂದೆರಡು ದಿನವಿದ್ದು ಹೋಗಬೇಕು ಅಂತ ರಾಜ ನಿಬಂಧನೆ ವಿಧಿಸಿಬಿಟ್ಟಿದ್ದ. ಅದರಂತೆ ಎಲ್ಲ ಹದಿನಾರು ಹೆಣ್ಣುಮಕ್ಕಳೂ ಗಂಡಂದಿರೊಡನೆ ತವರಿಗೆ ಬಂದು ಸರಸಸಲ್ಲಾಪಗಳಿಂದ ರಾಜರಾಣಿಯರನ್ನು ಸಂತೋಷಪಡಿಸಿ ಅವರವರ ಊರಿನತ್ತ ಹಿಂತಿರುಗುವರು.


ಅತ್ತೆಯಾದವಳು ಅಳಿಯಂದಿರ ಮುಖನೋಡಬಾರದು ಎನ್ನುವುದೊಂದು ಸಂಪ್ರದಾಯದ ನಿಯಮ. ಈ ರಾಜದಂಪತಿಗಳ ತುಂಬುಕುಟುಂಬದ ಸರಸಸಲ್ಲಾಪಕ್ಕೆ ಇದ್ದ ಪ್ರಮುಖ ಅಡಚಣೆಯೆಂದರೆ ಇದೇ. ಒಬ್ಬರಲ್ಲ, ಇಬ್ಬರಲ್ಲ, ಹದಿನಾರು ಜನ ಅಳಿಯಂದಿರು ಮನೆಗೆ ಬಂದಿರುವಾಗ ಅತ್ತೆಯಾದವಳು ಅವರ ಮುಖ ನೋಡದೆ ಯೋಗಕ್ಷೇಮದ ಮಾತನಾಡಿ ಕಳುಹಿಸುವುದಾದರೂ ಹೇಗೆ? ಈ ಸಮಸ್ಯೆಗೆ ರಾಜ ಪರಿಹಾರವೊಂದನ್ನು ಕಂಡುಕೊಂಡ. ಊರ ದೇವಾಲಯಕ್ಕೆ ಮುಖಮಂಟಪವೊಂದನ್ನು ಕಟ್ಟಿಸಿದ.

ಈ ಮಂಟಪ ಹದಿನಾರು ಮೂಲೆಗಳುಳ್ಳ ವಿನ್ಯಾಸವನ್ನು ಹೊಂದಿತ್ತು. ಎಲ್ಲ ಮೂಲೆಗಳಲ್ಲೂ ಕುಳಿತುಕೊಳ್ಳಲು ಕಕ್ಷಾಸನ ಎಂದರೆ ಒರಗುಪೀಠಗಳಿರುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಪೀಠಗಳಲ್ಲಿ ಒಂದೊಂದು ಮೂಲೆಯಲ್ಲಿ ಒಬ್ಬೊಬ್ಬ ರಾಜಕುಮಾರಿ ತನ್ನ ಗಂಡನೊಡನೆ ಕುಳಿತುಕೊಳ್ಳುತ್ತಿದ್ದಳು. ನಕ್ಷತ್ರಾಕಾರದ ಈ ಮಂಟಪಕ್ಕೆ ಮೂರು ದಿಕ್ಕುಗಳಿಂದ ಪ್ರವೇಶದ್ವಾರಗಳು. ಒಂದು ದಿಕ್ಕಿನ ಪ್ರವೇಶದ್ವಾರದೆಡೆಯಲ್ಲಿ ರಾಜರಾಣಿಯರಿಗೆ ಆಸನ ವ್ಯವಸ್ಥೆ. ಇಲ್ಲಿ ಕುಳಿತುಕೊಳ್ಳುವ ರಾಜನಿಗೆ ತನ್ನ ಎಲ್ಲ ಹೆಣ್ಣುಮಕ್ಕಳೂ ಅಳಿಯಂದಿರೂ ಸ್ಪಷ್ಟವಾಗಿ ಕಾಣಿಸುವರು. ಅವನ ಪಕ್ಕದಲ್ಲಿ ಕುಳಿತ ರಾಣಿಗೆ ತನ್ನ ಎಲ್ಲ ಹೆಣ್ಣುಮಕ್ಕಳೂ ಕಾಣಿಸುವರು. ಅವರವರ ಪಾರ್ಶ್ವದಲ್ಲಿ ಕುಳಿತ ಅಳಿಯನೊಬ್ಬನೂ ಕಾಣಿಸುವುದಿಲ್ಲ.

ಇದು ಹೇಗೆ ಸಾಧ್ಯ ಎನ್ನುವಿರಾ? ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮಕ್ಕೆ ಬನ್ನಿ.ಇಲ್ಲಿ ಹೊಯ್ಸಳ ಕಾಲದ ಲಕ್ಷ್ಮೀಕಾಂತ ದೇವಾಲಯವಿದೆ. ಈ ದೇಗುಲದ ಮುಖಮಂಟಪದ ಕಥೆಯನ್ನೇ ನಾನು ನಿಮಗೆ ಹೇಳುತ್ತಿದ್ದೇನೆ. ಹೆಡತಲೆಯ ದೇಗುಲದ ಅರ್ಚಕರಾದ ಶ್ರೀ ನಾರಾಯಣ್ ರವರು ಈ ಮಂಟಪದ ವಿನ್ಯಾಸಕೌಶಲವನ್ನು ಇನ್ನಷ್ಟು ಸ್ವಾರಸ್ಯಕರವಾಗಿ, ಅಷ್ಟೇ ಏಕೆ, ಅತ್ತೆಯ ಜಾಗದಲ್ಲೋ ಅಳಿಯನ ಜಾಗದಲ್ಲೋ ನಿಮ್ಮನ್ನು ಕೂರಿಸಿ ಪ್ರಾಯೋಗಿಕವಾಗಿಯೂ ಬಣ್ಣಿಸುತ್ತಾರೆ. ಈ ಮಂಟಪದ ಬೆಡಗಿಗೆ ನೀವೂ ಬೆರಗಾಗುತ್ತೀರಿ.

ಈ ಹದಿನಾರು ಮುಖದ ಸೊಗಸಾದ ಮಂಟಪವನ್ನು ಕಟ್ಟಿಸಿದವನು ಭೀಮಣ್ಣನಾಯಕನೆಂಬ ಸಾಮಂತರಾಜ. ಹದಿನಾರುಮುಖದ ಚಾವಡಿಯೆಂದೇ ಪ್ರಸಿದ್ಧವಾದ ಈ ಮಂಟಪದಲ್ಲಿ ಹದಿಮೂರು ಭುವನೇಶ್ವರಿಗಳಿದ್ದು ಕಲಾತ್ಮಕ ವಿನ್ಯಾಸದಿಂದ ಗಮನಸೆಳೆಯುತ್ತವೆ.

ನಂಜನಗೂಡಿನಿಂದ ಹದಿನಾಲ್ಕು ಕಿಮೀ ದೂರದಲ್ಲಿರುವ ಹೆಡತಲೆ ಗ್ರಾಮದಲ್ಲಿರುವ ಲಕ್ಷ್ಮೀಕಾಂತ ದೇಗುಲ ತ್ರಿಕೂಟಾಚಲವಾಗಿದೆ. ಹದಿಮೂರನೆಯ ಶತಮಾನದ ಪ್ರಸಿದ್ಧ ಹೊಯ್ಸಳ ಅರಸನಾಗಿದ್ದ ಮೂರನೆಯ ವೀರಬಲ್ಲಾಳನು ಅಧಿಕಾರಕ್ಕೆ ಬಂದ ಪ್ರಾರಂಭದಲ್ಲಿ (1292) ನಿರ್ಮಿತವಾದ ಗುಡಿಯಿದು.

ಮುಖ್ಯ ಗರ್ಭಗುಡಿಯಲ್ಲಿ ಲಕ್ಷ್ಮೀಕಾಂತನಾದ ವಿಷ್ಣುವಿನ ಮೂರ್ತಿಯಿದೆ. ಎಡಭಾಗದ ಕೋಷ್ಠದಲ್ಲಿ ವೇಣುಗೋಪಾಲನ ವಿಗ್ರಹವಿದ್ದರೆ, ಬಲಭಾಗದ ಗುಡಿಯಲ್ಲಿ ಲಕ್ಷ್ಮೀನರಸಿಂಹಸ್ವಾಮಿಯನ್ನು ಕಾಣಬಹುದು. ವೇಣುಗೋಪಾಲನು ಕೊಳಲೂದುತ್ತ ತ್ರಿಭಂಗಿಯಲ್ಲಿ ನಿಂತಿದ್ದಾನೆ. ಇಕ್ಕೆಲಗಳಲ್ಲಿ ದೇವಿಯರಿದ್ದಾರೆ. ಕಾಲ ಬಳಿ ಕೊರಳೆತ್ತಿ ವೇಣುಗಾನವನ್ನು ಆಲಿಸುವ ಗೋವುಗಳು. ವಿಗ್ರಹದ ತಳಭಾಗದಲ್ಲಿ ಮಂಡಿಯೂರಿ ಕುಳಿತ ಗರುಡನನ್ನು ಚಿತ್ರಿಸಿದೆ.

ಸೌಮ್ಯ ರೂಪದ ನರಸಿಂಹನ ತೊಡೆಯ ಮೇಲೆ ಲಕ್ಷ್ಮೀದೇವಿ ಕುಳಿತಿದ್ದಾಳೆ. ಪ್ರಧಾನ ಗರ್ಭಗುಡಿಯಲ್ಲಿರುವ ಲಕ್ಷ್ಮೀಕಾಂತ ಮೂರ್ತಿಯು ಬಲ ಮೇಲುಗೈಯಲ್ಲಿ ಪದ್ಮವನ್ನೂ ಎಡಮೇಲುಗೈಯಲ್ಲಿ ಗದೆಯನ್ನೂ ಧರಿಸಿದ್ದು ಮುಂದಿನ ಕೈಗಳಲ್ಲಿ ಚಕ್ರ ಶಂಖಗಳನ್ನು ಧರಿಸಿರುತ್ತಾನೆ. ಅರೆಮುಚ್ಚಿದ ನೇತ್ರಗಳೂ ಮಂದಹಾಸವೂ ವಿಗ್ರಹಕ್ಕೆ ಅಪೂರ್ವ ಶೋಭೆಯನ್ನು ಕಲ್ಪಿಸಿವೆ. ಇವೆಲ್ಲ ಮೂರ್ತಿಗಳು ಹೊಯ್ಸಳಕಾಲದ ಅನುಪಮ ಶಿಲ್ಪಸೌಂದರ್ಯಕ್ಕೆ ಮಾದರಿಗಳಾಗಿವೆ. ನಡುಮಂಟಪದಲ್ಲಿ ಪುರಾತನಕಾಲದ ಕೇಶವನ ಶಿಲ್ಪವೊಂದಲ್ಲದೆ, ಇತ್ತೀಚೆಗೆ ಕೆತ್ತಲಾದ ಆಂಡಾಳ್ ದೇವಿಯ ಸುಂದರವಾದ ವಿಗ್ರಹವೊಂದಿದೆ.

ಧರ್ಮಸ್ಥಳದ ಶ್ರೀ ಮಂಜುನಾಥ ಧರ್ಮೋತ್ಥಾನ ಟ್ರಸ್ಟ್ ನವರು ಖಾಸಗಿ ಕಂಪೆನಿಯೊಂದರ ಸಹಯೋಗದೊಡನೆ ಹೆಡತಲೆಯ ಪುರಾತನದೇಗುಲದ ಜೀರ್ಣೋದ್ಧಾರವನ್ನು ಕೈಗೊಂಡು ಮೂಲರೂಪಕ್ಕೆ ಚ್ಯುತಿಬಾರದಂತೆ ಸಂರಕ್ಷಿಸಿರುವುದು ಪ್ರಶಂಸಾರ್ಹವಾಗಿದೆ. ಇಲ್ಲಿಗೆ ಬರುವವರು ಸನಿಹದ ಹೆಮ್ಮರಗಾಲ, ತಗಡೂರು ಮೊದಲಾದ ಸ್ಥಳಗಳಿಗೂ ಭೇಟಿನೀಡಿ ಅಲ್ಲಿನ ದೇವಾಲಯಗಳನ್ನು ನೋಡಿಕೊಂಡು ಬರಬಹುದಾಗಿದೆ.