ಮನೆಯಲ್ಲಿ ಇಡೀ ದಿನ ಕೆಲಸಗಳಲ್ಲಿ, ನೂರಾರು ದೈನಂದಿನ ಜೀವನದ ಒತ್ತಡಗಳಲ್ಲಿ ಬಂಧಿಯಾಗಿರುವ ಹೆಣ್ಣುಮಕ್ಕಳು ಹೊರಗೆ ಹೋಗಲು ಇದೊಂದೇ ಸೂಕ್ತ ಸಮಯ ಮತ್ತು ಕಾರಣ. ನದಿ ಅಥವಾ ಕೆರೆದಂಡೆಗಳ ತಂಗಾಳಿ ಹರಿಯುವ ನೀರು ಅವರ ಒತ್ತಡಕ್ಕೆ ಸಾಕಷ್ಟು ಮುಲಾಮು ಕೊಡುತ್ತಿರಬಹುದು. ಗುಂಪಾಗಿ ಹೋಗಿ ಮಾಡುವ ಗಾಸಿಪ್ ಗಳಿಂದಲೋ ಒಂಟಿಯಾಗಿ ಕೂತು ಬಟ್ಟೆ ಒಗೆಯುವಾಗ ತಮ್ಮ ಹತಾಶೆಯನ್ನು ಬಟ್ಟೆಗಳನ್ನು ಬಂಡೆಗಳ ಮೇಲೆ ಕುಕ್ಕುವುದರಿಂದಲೋ ಅವರಲ್ಲಿ ಒಂದು ನಿರಾಳತೆಯನ್ನುಂಟು ಮಾಡಬಹುದು. ಬಹುಷಃ ಇದರ ಸರ್ವೇ ನಡೆಸಿ ನೀವು ಶೌಚಾಲಯವನ್ನು ಏಕೆ ಬಳಸುತ್ತಿಲ್ಲ ಎಂದು ನೇರವಾಗಿ ಕೇಳಿದರೆ ಅವರ ಬಳಿ ಉತ್ತರ ಸಿಗಲಿಕ್ಕಿಲ್ಲ.
ಶ್ರೀಹರ್ಷ ಸಾಲಿಮಠ ಬರೆಯುವ ಅಂಕಣ

 

ಎಷ್ಟೋ ಜನ ನಾನು ಇಂಡಿಯಾ ದೇಶದ ಬಗ್ಗೆ ಅನವಶ್ಯಕ ಟೀಕೆ ಮಾಡುತ್ತೇನೆ ಎಂದು ಆಗಾಗ ಆರೋಪಿಸುವುದುಂಟು. ಆದರೆ ಇಲ್ಲಿಯವರೆಗೆ ನಾನು ರಸ್ತೆಯ ಬಗೆಗಾಗಲಿ ಹಳ್ಳಿಯಲ್ಲಿನ ತಿಪ್ಪೆಯ ಬಗೆಗಾಗಲೀ ಧೂಳಿನ ಬಗೆಗಾಗಲೀ ದೂರಿಲ್ಲ. ದೂರುವಾಗ ನನ್ನ ಮೊದಲ ಗುರಿ ವ್ಯವಸ್ಥೆಯ ಕಡೆಗೆ ಇರುತ್ತದೆ. ಮನುಷ್ಯರನ್ನು ದೂರುವುದಕ್ಕಿಂತ ವ್ಯವಸ್ಥೆಯ ಗಟ್ಟಿತನಕ್ಕೆ ಗಮನ ಕೊಡುವುದು ಹೆಚ್ಚಿನ ಅವಶ್ಯಕತೆ.

ಒಂದು ಉದಾಹರಣೆ ಹೇಳುವುದಾದರೆ ಯುರೋಪ್ ಅಮೇರಿಕಾ ಆಸ್ಟ್ರೇಲಿಯಾದ ದೇಶಗಳಲ್ಲಿ ನದಿಗಳ ಬದಿಗಳು ಸ್ವಚ್ಛವಾಗಿರುತ್ತವೆ. ಕೂತು ಮಕ್ಕಳೊಡನೆ ಪಿಕ್ ನಿಕ್ ಮಾಡಬಹುದು. ಸೋಪು ಹಾಕಿ ಒಗೆಯುವುದಾಗಲಿ ಸ್ನಾನ ಮಾಡುವುದಾಗಲಿ ಯಾರೂ ಮಾಡುವುದಿಲ್ಲ. ಇಂಡಿಯಾದ ಹಳ್ಳಿಯ ಕಡೆಗೆ ಹೋದರೆ ಯಾವ ನದಿಯ ಬದಿಯಲ್ಲೂ ಶಾಂತವಾಗಿ ಕೂರಲಾಗುವುದಿಲ್ಲ. ಸಾಲಾಗಿ ಶೌಚಮಾಡಿ ರಾಡಿಯೆಬ್ಬಿಸಿರುತ್ತಾರೆ ಜೊತೆಗೆ ಗಿಡಗಂಟಿಗಳು ಅವರಿಗೆ ಮರೆಯನ್ನೊದಗಿಸುತ್ತವೆ. ಇದನ್ನು ನಾನು ಖಂಡಿತಾ ದೂರುವುದಿಲ್ಲ. ಯಾಕೆಂದರೆ ಇಲ್ಲಿ ಕೆಲವು ಮೂಲಭೂತವಾದ ಸಮಸ್ಯೆಗಳಿವೆ. ನಾನು ಸ್ವತಃ ನೋಡಿದಂತೆ ಬಹುತೇಕ ಹಳ್ಳಿಗಳಲ್ಲಿ ಸರಕಾರ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದೆ. ಬಿಗಿಯಾದ ನಿಯಮಗಳನ್ನೂ ಹೇರಿ ಅವಶ್ಯಕ ಸೌಕರ್ಯಗಳನ್ನೂ ಮಾಡಿಕೊಟ್ಟಿದೆ. ಆದರೂ ಎಲ್ಲಾ ಶೌಚಾಲಯಗಳು ಪಾಳು ಬಿದ್ದಿವೆ. ಶೌಚಾಲಯ ಬಳಸಲು ಹಿಂದೇಟು ಹಾಕುವ ಜನರ ಮನಃಸ್ಥಿತಿಯನ್ನು ನಾನು ಬೈಯುವುದಿಲ್ಲ. ಬೇಕಿದ್ದರೆ ಹಳ್ಳಿಯ ಮನೆಗಳಿಗೆ ವಾಶಿಂಗ್ ಮಶೀನನ್ನು ಮತ್ತು ಅದನ್ನು ಬಳಸಲು ಸತತವಾಗಿ ವಿದ್ಯುತ್ತನ್ನು ಉಚಿತವಾಗಿ ಕೊಟ್ಟರೂ ಸಹ ಕೆರೆ ದಂಡೆಗೆ ನದಿ ದಂಡೆಗೆ ಬಟ್ಟೆ ತೊಳೆಯಲು ಬರುವುದನ್ನು ನಿಲ್ಲಿಸಲಾಗುವುದಿಲ್ಲ.

ಇದಕ್ಕೆ ಒಂದು ಸಾಮಾಜಿಕ ಅಧ್ಯಯನದ ಹಿನ್ನೆಲೆಯನ್ನು ತೆಗೆದುಕೊಳ್ಳಬಹುದು, ಮಲೆಮಹದೇಶ್ವರ ಬೆಟ್ಟದ ಬುಡಕಟ್ಟು ಹಾಡಿಯೊಂದರಿಂದ ಸುಮಾರು ಒಂದು ಕಿಲೋಮೀಟರ್ ದೂರದ ಹಳ್ಳಕ್ಕೆ ಏರು ಇಳಿಜಾರು ಹತ್ತಿಳಿದು ಹೋಗಿ ನೀರು ತರಬೇಕಿತ್ತು. ಮಹಿಳೆಯರ ಕಷ್ಟಕ್ಕೆ ಆಸರೆಯಾಗಬೇಕೆಂದುಕೊಂಡ ಸ್ವಯಂ ಸೇವಾ ಸಂಸ್ಥೆಯೊಂದು ಹಾಡಿಯ ನಡುವೆಯೇ ಒಂದು ಬೋರ್ ವೆಲ್ ಹಾಕಿಸಿಕೊಟ್ಟಿತು. ಇದರಿಂದ ಹಾಡಿಯ ಜೀವನ ಸುಖಮಯವಾಗಬಹುದು ಎಂದುಕೊಂಡಿದ್ದ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರಿಗೆ ವ್ಯತಿರಿಕ್ತ ಅಚ್ಚರಿಯೊಂದು ಕಾದಿತ್ತು! ಕೆಲವೇ ವಾರಗಳಲ್ಲಿ ಸೌಹಾರ್ದದಿಂದಿದ್ದ ಜನರ ನಡುವೆ ಜಗಳಗಳು ಶುರುವಾಗಿ ಕ್ರಮೇಣ ಹೆಚ್ಚತೊಡಗಿದವು. ಕಡೆಗೊಮ್ಮೆ ವಿಪರೀತಕ್ಕೆ ಹೋಗಿ ಬೋರ್ ವೆಲ್ ಅನ್ನೇ ಒಡೆದು ಹಾಕಲಾಯಿತು. ನಂತರ ಸೂಕ್ಷ್ಮವಾಗಿ ಅವಲೋಕಿಸಿದಾಗ ತಿಳಿದುಬಂದಿದ್ದೇನೆಂದರೆ ಆ ಒಂದು ಕಿಲೋಮೀಟರು ಒಟ್ಟಿಗೆ ಎಲ್ಲರೂ ಸೇರಿಕೊಂಡು ನೀರು ತರಲು ನಡೆಯುತ್ತಿದ್ದ ನಡಿಗೆ ಅವರ ವೈಯಕ್ತಿಕ ಸಮಯವಾಗಿತ್ತು (Private Time)! ತಮ್ಮೊಳಗಿನೆ ದುಃಖ ಸಂತೋಷ ದುಗುಡ ದುಮ್ಮಾನಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಲು ಹೇಳಿಕೊಳ್ಳಲು ಹೊರಹಾಕಲೂ ಸೂಕ್ತವಾದ ಸ್ನೇಹವಲಯ ಇದರಿಂದ ನಿರ್ಮಾಣವಾಗುತ್ತಿತ್ತು. ಬೋರ್ ವೆಲ್ ನಿಂದಾಗಿ ಅದು ಅವರಿಗೆ ಸಿಗದೇ ಹೋಗಿ ಪರಸ್ಪರ ಸಿಡುಕಿಗೆ ಕಾರಣವಾಗಿತ್ತು.

ಹಳ್ಳಿಗಳಲ್ಲೂ ಬಹುಷಃ ಇದೇ ಪರಿಸ್ಥಿತಿ. ಮನೆಯಲ್ಲಿ ಇಡೀ ದಿನ ಕೆಲಸಗಳಲ್ಲಿ, ನೂರಾರು ದೈನಂದಿನ ಜೀವನದ ಒತ್ತಡಗಳಲ್ಲಿ ಬಂಧಿಯಾಗಿರುವ ಹೆಣ್ಣುಮಕ್ಕಳು ಹೊರಗೆ ಹೋಗಲು ಇದೊಂದೇ ಸೂಕ್ತ ಸಮಯ ಮತ್ತು ಕಾರಣ. ನದಿ ಅಥವಾ ಕೆರೆದಂಡೆಗಳ ತಂಗಾಳಿ ಹರಿಯುವ ನೀರು ಅವರ ಒತ್ತಡಕ್ಕೆ ಸಾಕಷ್ಟು ಮುಲಾಮು ಕೊಡುತ್ತಿರಬಹುದು. ಗುಂಪಾಗಿ ಹೋಗಿ ಮಾಡುವ ಗಾಸಿಪ್ ಗಳಿಂದಲೋ ಒಂಟಿಯಾಗಿ ಕೂತು ಬಟ್ಟೆ ಒಗೆಯುವಾಗ ತಮ್ಮ ಹತಾಶೆಯನ್ನು ಬಟ್ಟೆಗಳನ್ನು ಬಂಡೆಗಳ ಮೇಲೆ ಕುಕ್ಕುವುದರಿಂದಲೋ ಅವರಲ್ಲಿ ಒಂದು ನಿರಾಳತೆಯನ್ನುಂಟು ಮಾಡಬಹುದು. ಬಹುಷಃ ಇದರ ಸರ್ವೇ ನಡೆಸಿ ನೀವು ಶೌಚಾಲಯವನ್ನು ಏಕೆ ಬಳಸುತ್ತಿಲ್ಲ ಎಂದು ನೇರವಾಗಿ ಕೇಳಿದರೆ ಅವರ ಬಳಿ ಉತ್ತರ ಸಿಗಲಿಕ್ಕಿಲ್ಲ. ಯಾಕೆಂದರೆ ಈ ಕ್ರಿಯೆ ಸಾಮೂಹಿಕವಾಗಿ ಮನದಾಳದಲ್ಲಿ ಸುಪ್ತವಾಗಿ ನಡೆಯುವಂತದ್ದು. ಇದರ ಬಗ್ಗೆ ಒಂದು ಸಾಮಾಜಿಕ ಮಾನಸಿಕ ವ್ಯವಸ್ಥೆಗಳ ಜಾಲಗಳ ಸೂಕ್ಷ್ಮಪದರಗಳ ಅಧ್ಯಯನ ಕೆಲವು ಪಿಎಚ್ಡಿ ಸಂಶೋಧನೆಗಳ ವಿಷಯವಾದೀತು.

ಹೆಣ್ಣುಮಕ್ಕಳು ಈ ಪುರುಷಪ್ರಧಾನ ಅಥವಾ ಪಿತೃಪ್ರಧಾನ ವ್ಯವಸ್ಥೆಯ ಹಿಡಿತದಲ್ಲಿರುವುದರ ವಿಶ್ಲೇಷಣೆಯ ಗೋಜಿಗೆ ಹೋಗದೇ ಅವರು ಮನೆಯಲ್ಲಿ ಶೌಚಾಲಯ ಬಳಸಲಿ ನದಿಗಳ ದಂಡೆಯನ್ನು ಪಿಕ್ ನಿಕ್ ಸ್ಪಾಟ್ ಗಳ ರೀತಿ ಕಾಪಾಡಲಿ ಎಂದು ಬಯಸುವುದು ಮೂರ್ಖತನವಾಗುತ್ತದೆ. ಶೂದ್ರ ಮತ್ತು ಕೆಳವರ್ಗದ ಹೆಣ್ಣುಮಕ್ಕಳಿಗೆ ಈ ಅವಕಾಶವಾದರೂ ಇದೆ ಆದರೆ ಶೌಚಾಲಯದ ಬಳಕೆಗೆ ಕಟ್ಟುಬಿದ್ದ ಮೇಲ್ವರ್ಗದ ಹೆಣ್ಣುಮಕ್ಕಳು ಹಬ್ಬಗಳಿಗೆ ಕಾರ್ಯಕ್ರಮಗಳಿಗೆ ಕಾಯುವುದರ ಹೊರತಾಗಿ ಬೇರೆ ದಾರಿಯಿಲ್ಲ!

ವಿಷಯಗಳು ಇಷ್ಟು ಸೂಕ್ಷ್ಮವಾಗಿರುವಾಗ ಈ ತಳಮಟ್ಟದಿಂದ ಕೆಲಸ ನಡೆಯಬೇಕಿರುವಾಗ ಗಂಡ ಹೆಂಡತಿಗೆ ಹೊಡೆಯುವುದು ದೊಡ್ಡ ವಿಷಯವಲ್ಲ ಬಿಡಿ ಎಂಬ ಮನೋಭಾವವಿರುವಾಗ ಮೆರೈಟಲ್ ರೇಪ್ ನಂತಹ ಗಹನವಾದ ಚರ್ಚೆಗಳು ಮೀಟೂ ಚಳುವಳಿಗಳು ಗಂಡಸರ ನಗೆಪಾಟಲಿಗೀಡಾಗದೇ ಇನ್ನೇನಾಗುತ್ತವೆ? ಮಹಿಳೆಯರಿಗೆ ಇಷ್ಟು ಸೂಕ್ಷ್ಮವಾಗಿ ನೀವು ಯೋಚಿಸಬೇಕು ಅಂತ ಎಷ್ಟೋ ಸಾರಿ ಗಂಡಸರೇ ಹೇಳಿಕೊಡಬೇಕು. ಯಾಕೆಂದರೆ ಅವರೂ ಸಹ ಈ ಎಲ್ಲಾ ಪಿತೃಪ್ರಧಾನ ವ್ಯವಸ್ಥೆ ಸರಿಯಾದದ್ದು ಎಂದೇ ಒಪ್ಪಿಬಿಟ್ಟಿರುತ್ತಾರೆ! ಇದು ಹಳ್ಳಿಗೆ ಸಿಮಿತವಾಗಿ ನಾನು ಹೇಳುತ್ತಿಲ್ಲ. ನಮ್ಮ ಜೊತೆಗೆ ಕೆಲಸ ಮಾಡುವ ವಿದ್ಯಾವಂತ ಕೈತುಂಬಾ ಸಂಬಳ ಪಡೆಯುವ ಆರ್ಥಿಕ ಸ್ವಾವಲಂಬನೆ ಹೊಂದಿರುವ ಹೆಣ್ಣುಮಕ್ಕಳ ಕತೆಯೂ ಇದೇ! ಎಷ್ಟೋ ಸಾರಿ ಮೆರೈಟಲ್ ರೇಪ್ ತಪ್ಪು, ಗಂಡ ತನ್ನ ಹೆಂಡತಿಯನ್ನೂ ಅನುಮತಿ ಇಲ್ಲದೇ ಮುಟ್ಟುವುದು ಸಾಧುವಲ್ಲ ಅಂತ ನಾನು ಹೆಣ್ಣುಮಕ್ಕಳಿಗೆ ತಿಳಿಹೇಳಬೇಕಾದ ಸಂದರ್ಭಗಳು ಬಂದಿವೆ. ಹೆಣ್ಣು ಗಂಡಿಗೆ ಅಷ್ಟೂ ಸ್ವಾತಂತ್ರ್ಯ ಕೊಡದಿದ್ದರೆ ಮದುವೆ ನಿಲ್ಲುವುದು ಹೇಗೆ ಎಂಬುದು ಆ ಹೆಣ್ಣುಮಕ್ಕಳ ಪ್ರಶ್ನೆ!

ಇಂತಹ ಕೆಲವು ವಾದಗಳು ಕೆಲ ಸಂಸಾರಗಳಲ್ಲಿ ವಿಕೋಪಕ್ಕೆ ಹೋಗಿದ್ದೂ ಉಂಟು. ಎರಡು ಮಕ್ಕಳ ತಾಯಿಯಾಗಿದ್ದ ನನ್ನ ಸಹವರ್ತಿಯೊಬ್ಬಳು ಒಂದು ದಿನ ಬುಸುಗುಡುತ್ತಾ ಆಫೀಸಿಗೆ ಬಂದಳು. ಆಕೆಗೆ ಬಡ್ತಿ ಸಿಕ್ಕು ಮ್ಯಾನೇಜರ್ ಆಗುವ ಅವಕಾಶಗಳಿತ್ತು. ಅದಕ್ಕಾಗಿ ಕೆಲವರ ಜೊತೆ ಸ್ಪರ್ಧೆಯೂ ಸಹ ಏರ್ಪಟ್ಟಿತ್ತು. ಅದಕ್ಕಾಗಿ ಆಕೆ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಳು. ನನಗೆ ಈ ದಿನ ಈಕೆ ಬುಸುಗುಡುತ್ತಿದ್ದಕ್ಕೆ ಕಾರಣ ತಿಳಿಯಲಿಲ್ಲ. ನಾನು ಕೇಳುವುದೂ ಸೂಕ್ತವಲ್ಲ ಅಂತ ನಾನೂ ಸುಮ್ಮನಿದ್ದೆ. ಅದಾವುದೋ ಕೆಲಸದ ವಿಷಯವನ್ನು ಮಾತನಾಡುವಾಗ ಧಿಡೀರನೆ ಅಪ್ರಸ್ತುತವಾಗಿ ಕೆಲಸದ ಮಾತು ನಿಲ್ಲಿಸಿ. “ನನಗೆ ಸರ್ಪ್ರೈಸ್ ಕೊಡ್ತಾನಂತೆ ಬ್ಲಡಿ ಬಗ್ಗರ್!” ಅಂದಳು. ನಾನು ತಬ್ಬಿಬ್ಬಾದೆ.
“ನನಗೆ ಅರ್ಥವಾಗಲಿಲ್ಲ” ಅಂದೆ.

ವಿದ್ಯಾವಂತ ಕೈತುಂಬಾ ಸಂಬಳ ಪಡೆಯುವ ಆರ್ಥಿಕ ಸ್ವಾವಲಂಬನೆ ಹೊಂದಿರುವ ಹೆಣ್ಣುಮಕ್ಕಳ ಕತೆಯೂ ಇದೇ! ಎಷ್ಟೋ ಸಾರಿ ಮೆರೈಟಲ್ ರೇಪ್ ತಪ್ಪು, ಗಂಡ ತನ್ನ ಹೆಂಡತಿಯನ್ನೂ ಅನುಮತಿ ಇಲ್ಲದೇ ಮುಟ್ಟುವುದು ಸಾಧುವಲ್ಲ ಅಂತ ನಾನು ಹೆಣ್ಣುಮಕ್ಕಳಿಗೆ ತಿಳಿಹೇಳಬೇಕಾದ ಸಂದರ್ಭಗಳು ಬಂದಿವೆ.

“ನನ್ನ ಗಂಡ ನನಗೆ ಮತ್ತೆ ನನ್ನ ಮಕ್ಕಳಿಗೆ ಸರ್ಪ್ರೈಸ್ ಕೊಡ್ತಾನಂತೆ. ನಿನ್ನೆ ಇದ್ದಕ್ಕಿದ್ದಂತೆ ಬಂದು “ನಾಳೆ ಎಲ್ಲಾ ಅಜ್ಜ ಅಜ್ಜಿ ನೋಡೋಕೆ ಹೋಗೋಣ. ಟಿಕೆಟ್ ಬುಕ್ ಮಾಡಿದ್ದೇನೆ ಹೇಗೆ ಸರ್ಪ್ರೈಸ್?” ಅಂದ. ನನಗೆ ಸಿಟ್ಟು ಬಂದೋಯ್ತು. ಈ ಸರ್ಪ್ರೈಸ್ ಗೆ ನನ್ನನ್ನು ಕೇಳಬೇಕು ಅನ್ನಿಸಲಿಲ್ಲವಾ? ನನ್ನನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅನ್ನಿಸಲಿಲ್ಲವಾ. ಇವನು ನಿರ್ಧಾರ ಮಾಡಿದ ಅಂತ ನಾನು ಹೋಗಬೇಕು. ಅದನ್ನ ಸರ್ ಪ್ರೈಸ್ ಅಂದುಕೊಂಡು ಖುಷಿ ಪಡಬೇಕು. ಬೆಳಿಗ್ಗೆ ಎದ್ದು ಮಕ್ಕಳನ್ನು ರೆಡಿ ಮಾಡಿಸುವುದು, ತಿಂಡಿ, ಕಾಫಿ, ಆಮೇಲೆ ಪ್ರಯಾಣದ ಚಾಕರಿ ಎಲ್ಲ ನನ್ನ ತಲೆ ಮೇಲೆಯೇ ಬೀಳುವುದು. ನಡುನಡುವೆ ಮಕ್ಕಳ ಜೊತೆ ಕೂತು ನಿಮ್ಮಮ್ಮ ರೆಡಿಯಾಗುವುದು ಯಾವಾಗಲೂ ಲೇಟು ಅಂತ ಜೋಕ್ ಮಾಡುವುದು. ಇದೆಲ್ಲ ಹಾಳಾಗಿ ಹೋಗಲಿ ನನಗೆ ಆಫೀಸಲ್ಲಿ ಕೆಲಸ ಇದೆ. ಊರಿಗೆ ಹೋಗಲು ಆಗುವುದಿಲ್ಲ. ಕೆಲಸ ಮುಗಿಸದಿದ್ದರೆ ನನ್ನ ಭಡ್ತಿಗೆ ಅಡ್ಡಿಯಾಗುವ ಸಾಧ್ಯತೆಯೂ ಉಂಟು. ನನಗೂ ಮ್ಯಾನೇಜರ್ ಆಗಬೇಕು ಅಂತ ಆಸೆಯಿದೆ. ಇಷ್ಟು ವರ್ಷ ಇವನಿಗೆ ಇವನ ಮಕ್ಕಳಿಗೋಸ್ಕರ ತೇಯ್ದುಕೊಂಡು ಬಂದು ಈಗ ಏನನ್ನಾದರೂ ನನಗಾಗಿ ನನ್ನ ಆತ್ಮತೃಪ್ತಿಗಾಗಿ ಸಾಧಿಸಬೇಕು ಅಂದುಕೊಂಡಿದ್ದಾಗ ಸರ್ಪ್ರೈಸ್ ಕೊಡ್ತಾನಂತೆ ಸರ್ಪ್ರೈಸ್. ಸಕ್ಕರ್!. ನನಗೆ ಆಗಲ್ಲ ಅಂತ ಅಂದಿದ್ದಕ್ಕೆ ನಿನಗೆ ನಮ್ಮ ತಂದೆ ತಾಯಿಯ ಬಗ್ಗೆ ಗೌರವ ಇಲ್ಲ, ನಿನಗೆ ಸ್ವಾತಂತ್ರ ಕೊಟ್ಟಿದ್ದೇ ತಪ್ಪಾಯಿತು, ಅಂತೆಲ್ಲಾ ಅಂತಾನೆ.. ” ಅಂತ ರೇಗಾಡಿದಳು.

ನಾನು ಸುಮ್ಮನಿದ್ದೆ. ನಾನಾದರೂ ಈ ವಿಷಯದಲ್ಲಿ ಹೇಗೆ ಮಾತಾಡಬಲ್ಲೆ? ಮಹಾಮಳ್ಳನಂತೆ ಆಕೆಯ ಹತಾಷೆಗೆ ಕಿವಿಯಾಗಿ ಕೂತಿದ್ದೆನಷ್ಟೇ!

“ಆ ಬಡ್ಡಿಮಗ ನನ್ನ ಎಷ್ಟು ಸಾರಿ ರೇಪ್ ಮಾಡಿದ್ದಾನೆ ಗೊತ್ತಾ? ನಿನ್ನ ಜೊತೆ ಮೆರೈಟಲ್ ರೇಪ್ ಬಗ್ಗೆ ಚರ್ಚಿಸದೇ ಹೋಗಿದ್ದರೆ ನನಗೆ ಗೊತ್ತಾಗುತ್ತಲೇ ಇರಲಿಲ್ಲ!”

ಈಗ ನಿಜವಾಗಿಯೂ ನನಗೆ ದಿಗಿಲಾಗತೊಡಗಿತು. ಆಕೆಯ ಸಂಸಾರದಲ್ಲಿ ಒಡಕು ಮೂಡಲು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಕಾರಣವಾದೆನೇ ಅಂತ. ಆಗ ತಾನೆ ಮಹಿಳಾವಾದ, ವ್ಯಕ್ತಿಸ್ವಾತಂತ್ರ್ಯ, ಮನುಷ್ಯ ಅಸ್ತಿತ್ವಗಳ ಹಿನ್ನೆಲೆ ಮುನ್ನೆಲೆಗಳನ್ನು ಕಲಿಯತೊಡಗಿದ್ದ ನನ್ನ ಜ್ಞಾನಪ್ರದರ್ಶನದ ತೆವಲು ಹೀಗೆ ತಿರುವು ತೆಗೆದುಕೊಳ್ಳಬಹುದು ಅಂತ ನಾನು ಎಣಿಸಿರಲಿಲ್ಲ. ಆದರೆ ಈಗ ಆ ಸಂದರ್ಭವನ್ನು ಹಿಂತಿರುಗಿ ನೋಡಿದಾಗ ಗಂಡನ ಸೇವೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದ ಹೆಣ್ಣುಮಗಳು ದೈಹಿಕ ಅತಿಕ್ರಮಣದ ಬಗ್ಗೆ ಮಾತನಾಡಲಾದರೂ ಅನುವಾಯಿತಲ್ಲ ಅಂತ ಸಂತಸವೆನಿಸುತ್ತದೆ. ಇದರಲ್ಲಿ ನನ್ನ ಬಗ್ಗೆ ಹೆಮ್ಮೆ ಪಡುವಂಥದ್ದೇನೂ ಇಲ್ಲ. ಆಗ ನಡೆದದ್ದು ಕೆಲಸಕ್ಕೆ ಬಾರದ ಒಣ ಚರ್ಚೆಯಷ್ಟೇ.! ಆಕೆ ಅದನ್ನು ಅಷ್ಟು ಆಳಕ್ಕೆ ಯೋಚಿಸುತ್ತಾಳೆ ಅಂತ ನಾನು ಅಂದುಕೊಂಡಿರಲಿಲ್ಲ.

ಸಲ್ಪ ಹೊತ್ತು ಕಳೆದ ಮೇಲೆ ಆಕೆಯೇ ಬಂದು “ನನ್ನ ಮಕ್ಕಳಿಗೆ ನಿರಾಶೆ ಆಗುತ್ತದಲ್ಲವಾ? ನಾನು ಹೋಗೋದೆ ಒಳ್ಳೆಯದಲ್ಲವಾ? ನನ್ನ ಗಂಡನಿಗೂ ಪಾಪ ಬೇಜಾರು ಮಾಡಿದೆ” ಅಂತ ಕೊರಗಿದಳು. ಈ ಬಾರಿಯೂ ನನ್ನ ಬಳಿ ಮಾತುಗಳಿರಲಿಲ್ಲ. “ಯೂ ಆರ್ ದ ಬೆಸ್ಟ್ ಜಡ್ಜ್” ಅಂತ ಪ್ಯಾಲಿ ನಗೆ ನಕ್ಕೆ ಅಷ್ಟೇ! ಆಗ ಸಂಸಾರ ಮತ್ತು ಮಹಿಳೆಯ ಘನತೆ ಇವೆರಡರಲ್ಲಿ ಯಾವುದು ಹೆಚ್ಚಿನ ತೂಕ ಎಂದು ನನಗೆ ತಾಳೆ ಹಾಕಲು ಸಾಧ್ಯವಾಗಿರಲಿಲ್ಲ. ಈಗಾಗಿದ್ದರೆ “ನಿನ್ನ ಗಂಡನೂ ಸಹ ಇದೇ ರೀತಿ ಯೋಚಿಸುತ್ತಾನೆಯೇ?” ಅಂತ ಕೇಳಿಬಿಡುತ್ತಿದ್ದೆ.

ಕಳೆದ ಬಾರಿ ಇಂಡಿಯಾಕ್ಕೆ ಹೋದಾಗ ಹೀಗೇ ಒಂದು ಪ್ರವಾಸಕ್ಕೆ ಹೋದಾಗ ಸುಮಾರು ಮೂವತ್ತು ಹುಡುಗರು ನಾಲ್ಕೈದು ಹುಡುಗಿಯರಿದ್ದ ಇಡಿಯಾದ ಗುಂಪಿನೆದುರಿನಲ್ಲಿ ಹುಡುಗಿಯೊಬ್ಬಳು “ನನಗೆ ಇವತ್ತು ಪಿರಿಯಡ್ಸ್ ಇದೆ, ಹಾಗಾಗಿ ಸಲ್ಪ ಹೊಟ್ಟೆನೋವು. ಜಾಸ್ತಿ ಓಡಾಡೋಕೆ ಆಗಲ್ಲ. ಸುಸ್ತು ಆಗಬಹುದು.” ಅಂತ ಹಿಂಜರಿಕೆಯಿಲ್ಲದೇ ಹೇಳಿದಳು. ಈ ಒಬ್ಬ ಹುಡುಗಿ ಇಷ್ಟು ನಿರ್ಭಿಡೆಯಾಗಿದ್ದಳೆಂದ ಮಾತ್ರಕ್ಕೆ ಇಡಿ ಹೆಣ್ಣುಕುಲ ಉದ್ಧಾರವಾಯಿತು ಎಂದು ಹೇಳುವ ಮೂರ್ಖತನಕ್ಕೆ ನಾನು ಕೈಹಾಕುವುದಿಲ್ಲ. ಆಕೆಗೆ ಆ ಗೆಳೆಯರ ಗುಂಪು ಕೊಟ್ಟಿದ್ದ ಹದುಳವಲಯವನ್ನು ಇಡಿ ಸಮಾಜ ಪ್ರತಿ ಹೆಣ್ಣುಮಗಳಿಗೂ ಹಾಕಿಕೊಡಬೇಕು. ಹಾಗೂ ನಮ್ಮ ಜೊತೆಗಿದ್ದ ಹೆಣ್ಣುಮಗಳು ಬೆಳೆಸಿಕೊಂಡ ನಿರ್ಬಿಢೆಯನ್ನು ಎಲ್ಲ ಹೆಣ್ಣುಮಕ್ಕಳೂ ಬೆಳೆಸಿಕೊಳ್ಳಬೇಕು. ಇದು ಸಮಾನಾಂತರವಾಗಿ ನಡೆಯಬೇಕಾದ ಕೆಲಸ. ಈ ಘಟನೆಯಾಗಿ ಒಂದೇ ವಾರದ ನಂತರ ಬೆಳಗಿನ ಹೊತ್ತು ಸರಕಾರಿ ಕಛೇರಿಯೊಂದರಲ್ಲಿ ಯಾವುದೋ ಕೆಲಸಕ್ಕಾಗಿ ಕುಳಿತಿದ್ದಾಗ ಅಧಿಕಾರಿಣಿಯೊಬ್ಬಳ ತಲೆಗೂದಲು ಹಸಿಯಾಗಿದ್ದುದನ್ನು ಕಂಡು “ಇವತ್ತು ತಲೆಗೆ ನೀರು ಬಿದ್ದಿದೆ” ಅಂತ ಕೆಲ ಗಂಡಸುಗಳು ಮುಸಿಮುಸಿ ನಕ್ಕರು!

ಮತ್ತೊಮ್ಮೆ ಮುಂದುವರಿದ ಸಮಾಜಕ್ಕೆ ತಾಳೆ ಹಾಕಿ ನೋಡುವುದಾದರೆ ಸಿಡ್ನಿಯಲ್ಲಿ ಇವೆಲ್ಲ ಮಾತುಕತೆಗಳು ಬಹಳ ಸುಲಭ. ನನ್ನ ಸಹವರ್ತಿಯೊಬ್ಬಳು ತನ್ನ ತಿಂಗಳ ಹಸುಗೂಸನ್ನು ಆಫೀಸಿಗೆ ಕರೆದುಕೊಂಡು ಬಂದಿದ್ದಳು. ಮಗುವನ್ನು ಮುದ್ದುಮಾಡಿದ ಹಿರಿಯ ಮ್ಯಾನೇಜರ್ “ನಿನಗೆ ಎದೆ ಹಾಲು ಸರಿಯಾಗಿ ಬಿದ್ದಿದೆಯೇ?” ಅಂತ ಕೇಳಿದ. ಆಕೆ ಕೆಲ ವಿವರಗಳನ್ನು ತಿಳಿಸಿದಳು. ಇಂತಿಂತಹ ಔಷಧಿಗಳ ಅಡ್ಡಪರಿಣಾಮದಿಂದಾಗಿ ಇಂತಿಂತಹ ತೊಂದರೆಯಾಗುತ್ತದೆ. ನನ್ನ ಹೆಂಡತಿಗೆ ಈ ರೀತಿಯ ತೊಂದರೆಯಾಗಿತ್ತು. ಅಂತೆಲ್ಲ ಹೇಳಿ ಇಬ್ಬರು ತಮ್ಮ ತಮ್ಮ ಹೆರಿಗೆ ಅನುಭವಗಳನ್ನು ಹಂಚಿಕೊಂಡರು. ಆಕೆ ತನ್ನ ಅಂಗಕ್ಕೆ ಹೊಲಿಗೆ ಬಿದ್ದದ್ದು, ಆತ ತನ್ನ ಹೆಂಡತಿ ಹೆರಿಗೆ ನೋವಿನ ಸಮಯದಲ್ಲಿ ಎದುರಿಸಿದ ತೊಂದರೆಗಳು ಮಗುವನ್ನು ಹೊರನೂಕಲು ಹೆಂಡತಿಗೆ ಪ್ರೇರೇಪಿಸಲು ಕೈಗೊಂಡ ಮಾರ್ಗಗಳು ಇತ್ಯಾದಿಗಳನ್ನು ನಮ್ಮ ಅನೇಕರೆದುರಿಗೆ ಚರ್ಚಿಸಿದರು. ಈ ಎಲ್ಲಾ ಚರ್ಚೆ ನಾನು ಹಿಂದಿನ ದಿನ ಏನು ಅಡುಗೆ ಮಾಡಿದೆ ಏನು ಊಟ ಮಾಡಿದೆ ಎಂಬ ಚರ್ಚೆಯಷ್ಟೇ ಸಹಜವಾಗಿತ್ತು.

ಫ್ರಾನ್ಸ್ ತತ್ವಶಾಸ್ತ್ರಜ್ಞ ಆಗಸ್ಟ್ ಕೋಮ್ಟೆ ಹೇಳುವಂತೆ ಸಮಾಜವು ಥಿಯಾಲಾಜಿಕಲ್ (ವೇದಾಂತ) ದರ್ಜೆಯಿಂದ ಮೆಟಾಫಿಸಿಕಲ್ (ಅಧ್ಯಾತ್ಮಿಕ) ದರ್ಜೆಗೆ ಮತ್ತು ಅಲ್ಲಿಂದ ವೈಚಾರಿಕ ಹಂತಕ್ಕೆ ಪದೋನ್ನತಿ ಹೊಂದುತ್ತಾ ಹೋಗುತ್ತದಂತೆ. ಆದರೆ ಅತ್ಯಂತ ಹಳೆಯ ಮತ್ತು ವಿಶಾಲವಾದ ಸಾಂಸ್ಕೃತಿಕ ವಿಕಾಸವನ್ನು ಕಂಡಿರುವ ಸಮಾಜಗಳಲ್ಲಿ ಈ ಮೂರೂ ಸಹ ಒಟ್ಟಿಗೇ ಇರುವ ಸಾಧ್ಯತೆಗಳಿವೆ. ಉತ್ತಮ ಉದಾಹರಣೆಯೆಂದರೆ ಮಂತ್ರ ಕಟ್ಟಿ ತಾಯತ ಕಟ್ಟುವ ಗೂಡಂಗಡಿಗಳೂ , ಅದರ ಪಕ್ಕದಲ್ಲೇ ದೇವಸ್ಥಾನಗಳೂ ಮತ್ತು ಅದೇ ಬೀದಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಬೆಂಗಳೂರಿನಂತಹ ಮೆಟ್ರೊಪಾಲಿಟನ್ ನಗರಗಳಲ್ಲೂ ಕಂಡುಬರುವುದು. ಇದು ಮಹಿಳಾವಾದಕ್ಕೂ ಅನ್ವಯಿಸಬಹುದು. ಮಹಿಳೆಯರು ಸಿಗರೇಟ್ ಸೇದುವುದು ಮಹಿಳಾ ಸ್ವಾತಂತ್ರ್ಯ ಹೌದೋ ಅಲ್ಲವೋ ಎಂಬ ಅರೆಬೆಂದ ಚರ್ಚೆ ಎಡಬಲಗಳಲ್ಲಿ ಇಂಡಿಯಾದಂತಹ ದೇಶಗಳಲ್ಲಿ ನಡೆಯುತ್ತಿರುವಾಗಲೇ ಮುಂದುವರಿದ ರಾಷ್ಟ್ರಗಳು Radical feminism, Liberal feminism ನ ಹೊಸ ಕವಲುಗಳಲ್ಲಿ ತೊಡಗಿಕೊಂಡು ಸಲಿಂಗಿಗಳ ಹಕ್ಕುಗಳನ್ನು ಕಾಪಾಡುವುದು ಹೇಗೆ ಎಂಬುದರ ಕಡೆ ಹೆಜ್ಜೆಯಿಡುತ್ತಿವೆ. ಹಾಗಂತ ಮಹಿಳೆಯರು ಈ ದೇಶಗಳಲ್ಲಿ ಸರ್ವ ಸ್ವಾತಂತ್ರ್ಯ ಅನುಭವಿಸಿ ಮುಕ್ತರಾಗಿದ್ದಾರೆ ಅಂತ ಅಲ್ಲ. ಆದರೆ ಕನಿಷ್ಟ ಪಕ್ಷ ಮುಂದುವರಿದ ಚರ್ಚೆಗೆ ಅವಕಾಶ ಹುಟ್ಟುಹಾಕಲಾಗಿದೆ.